ಅರೆ ನಿದ್ರೆಯಲಿ ಕಂಡ ಕನಸು

ಅರೆ ನಿದ್ರೆಯ ನೀನೊಂದು ಪತ್ತೆ ಹಚ್ಚದ, ನಿಗೂಢ ಸುಧೀರ್ಘ ಏಕಾಂತದ ಹೊಸ ಖಂಡದಂತೆ
ನಿನ್ನಯ ಕಾಲುಗಳು ಪರ್ವತದ ಶ್ರೇಣಿಗಳಂತೆ
ಸುತ್ತುವರೆದಿರುವ ಕಣಿವೆಗಳು ಗಿರಿ ಕಂದರದಂತೆ

ನಿನ್ನಯ ಆ ದೊಡ್ಡ ಕಣ್ಣುಗಳ ಹಿಂದೆ
ನಿನ್ನ ಪ್ರದೇಶದ ಮುಗ್ದತೆಯ ಜನರು ಮಲಗಿದ್ದಾರೆ
ಸಮುದ್ರವು ನೀರಿನ ಅಲೆ, ಉಬ್ಬರಗಳೊಂದಿಗೆ ಜೀವಂತ ಉಸಿರಾಡುತ್ತಿದೆ
ಸಂಜೆಯಾಯಿತೆಂದರೆ ಸಾಕು ಮರುಭೂಮಿಯ ಮೈ ಮೇಲೆಲ್ಲಾ ತಣ್ಣನೆಯ ಹೂ ಬಟ್ಟೆ ಹೊದಿಸಲಾಗುತ್ತದೆ.

ನಿನ್ನ ಬಾಯಿಯೊಂದು ಜ್ವಾಲಾಮುಖಿಯ ಹಾಗೆ
ಯಾವಾಗ ಕೆರಳುವಿಯೋ ಸರಳವಾಗಿ ತಿಳಿಯುವುದಿಲ್ಲ
ಸುತ್ತಲೂ ಬೆಳೆದ ಪರಿಮಳಯುಕ್ತ ಮರಗಳೆಲ್ಲವೂ ಬೆಂಕಿಯಚ್ಚಿಕೊಂಡು ಸುಟ್ಟುಕೊಳ್ಳುವಾಗ ನಿಶ್ಚೇತನವಾದ ನೀನು ಬೇಕಂತಲೇ ಕನಿಕರಗೊಳ್ಳುತ್ತೀ, ದುಃಖಿಸುತ್ತಿ
ಇದನ್ನೂ ಬಿಟ್ಟು ಮತ್ತೆನನ್ನೂ ಮಾಡಲಾರೆ.

ಏ ಅರೆ ನಿದ್ರೆಯೇ ಸಾಕು ಮಾಡಿನ್ನು, ಎಚ್ಚರವಾಗು
ಬೇರೆಡೆ ಪ್ರಯಾಣ ಬೆಳೆಸಬೇಕಾಗಿದೆ
ಸಾಗುವ ದಾರಿಯಲ್ಲಿ ಹೂ ಮುತ್ತಿನ ರಾಶಿ ರಾಶಿ ಸೌಂದರ್ಯ ಕಾಣಬೇಕಿದೆ
ಆ ಅಚ್ಚರಿ ಭರಿತ ಕನಸಿನಿಂದ ನನ್ನನ್ನು ಬಿಡುಗಡೆಗೊಳಿಸು
ಜೊತೆಯಾಗಲು ಆ ಬಾಂಧಳದ ಚಂದ್ರನನ್ನು ಕಳಿಸಿಕೊಡುತ್ತೇನೆ
ಈಗ ವಾಸ್ತವದಲ್ಲಿ ಬಾಲ ಮುದುರಿಸಿಕೊಂಡು ಅತ್ತಿಂದಿತ್ತ ತಿರುಗಾಡುವ ನಾನೊಂದು ಮೂಕ ಪ್ರಾಣಿಯಷ್ಟೆ.

 ನೆನಪು ಮರೆಯುವುದು ಅಸಾಧ್ಯ ಬಿಡು

ನಿನ್ನ ಮನೆಯ ಕೋಣೆಯ ಕಿಟಕಿಯಿಂದ ಮತ್ತೊಮ್ಮೆ ಕುತೂಹಲಭರಿತನಾಗಿ ಹೊರ ನೋಡುತ್ತೇನೆ
ಪ್ರಪಂಚವೆಲ್ಲ ವಿಚಿತ್ರವಾಗಿ ಕಾಣುತ್ತಿದೆ
ಭೂಮಿ ಚೂರು ತನ್ನಷ್ಟಕ್ಕೆ ತಾನು ವೃದ್ಧಿಸಿಕೊಂಡು ದೊಡ್ಡದಾಗಿರಬೇಕು
ಇಲ್ಲವಾದಲ್ಲಿ ಹೊಸ ನಕ್ಷತ್ರಗಳು ಹುಟ್ಟಿರಬೇಕು.

ಭಾವೋನ್ಮತ್ತ ಅಲೆಗಳು ನನ್ನ ಪಾದದೊಟ್ಟಿಗೆ ಕಚಗುಳಿಯಿಟ್ಟು ಮುದ್ದಾಡುತ್ತವೆ
ಕೆಲವು ಹೊಸತನದ್ದು, ಇನ್ನು ಗೊತ್ತಿರದದ್ದು ಕಾಣಸಿಗುವುದಿಲ್ಲ.
ಸೂರ್ಯಾಸ್ತದ ಅಸ್ತಮಯ ಪಿಸುಮಾತುಗಳು ನನ್ನ ಕಿವಿಯಲ್ಲಿಯೂ ಕೂಡ ಕೇಳುತ್ತವೆ.
ಆ ನಿನ್ನ ಅಂಗಸೌಷ್ಟವದಿಂದ, ಕಂಪು ವಾಸನೆ ಬೀರುವ ಪರಿಮಳದಿಂದ ಗಿಜಿಗುಡುವ ಪ್ರದೇಶದಲ್ಲಿಯೂ ಸುಲಭವಾಗಿ ಗುರುತಿಸಬಲ್ಲೆ.

ನೀನು ಕೂಡ ನಿನ್ನ ಗೆಳತಿಯರೆಲ್ಲರ ಜೊತೆ ಸೇರಿ ಪ್ರೌಢಾವಸ್ಥೆಯ ತಲುಪಿ ದೊಡ್ಡವಳಾಗಿರುವೆ.
ಕರಾವಳಿ ತೀರದ ಬಂಡೆಗಲ್ಲುಗಳ ಮೇಲೆ ದಟ್ಟ ಮಂಜು ಬಿದ್ದ ಹಾಗೆ ನಿನ್ನ ನೆನಪು.
ಒಮ್ಮೊಮ್ಮೆ ಮಧ್ಯಾಹ್ನದ ಹೊತ್ತಿನಲ್ಲಿ ಕಳೆಗುಂದಿದ ಬಣ್ಣದ ಹಾಗೆ ಕಾಣುವೆ.

ಹೇ ಪ್ರಿಯೆ, ನನ್ನಯ ಈ ಸೋತ ಕಣ್ಣುಗಳಿಂದ
ನಿನ್ನ ನೆನಪುಗಳನ್ನು ಒರೆಸುವುದು ಅಸಾಧ್ಯ ಬಿಡು.
ನನ್ನಯ ದುಃಖದ ಸಪ್ಪೆ ಬಾಯ ರುಚಿಗೆ ನೀನೊಂದು ಹಳೆಯ ನುರಿತ ಮಾಂಸದ ತುಣುಕಷ್ಟೆ.

 

ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬುದ್ದಿನ್ನಿ ಬೀರು ದೇವರಮನಿ ಸದ್ಯ ಬೆಂಗಳೂರು ನಿವಾಸಿ.
ಖಾಸಗಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಓದುವುದು ಮತ್ತು ಕವಿತೆ ಬರೆಯುವುದು ಇವರ ಹವ್ಯಾಸ.