ಮಧ್ವ ಸಿದ್ಧಾಂತದ ಬಗ್ಗೆ ಕುವೆಂಪು ಅವರಿಗಿದ್ದ ಅಸಹನೆಯನ್ನು- ಮನುಷ್ಯರಾದರೆ ಸಾಕು- ಅರ್ಥ ಮಾಡಿಕೊಳ್ಳಬಹುದು. ಮಧ್ವ ಸಿದ್ಧಾಂತದ ನಿತ್ಯ ಮುಕ್ತ, ನಿತ್ಯ ಸಂಸಾರಿ, ನಿತ್ಯ ನಾರಕಿ- ಈ ದೃಷ್ಟಿಕೋನ ಈ ಜಗತ್ತು, ಮನುಷ್ಯ ಬದಲಾಗುವುದಿಲ್ಲ ಎಲ್ಲವೂ ನಿತ್ಯ ಅಂದರೆ ಶಾಶ್ವತ ಎಂದು ಸಮಾಜವನ್ನು ಜಡಗೊಳಿಸಿ ಚಲನರಹಿತ ಮಾಡಿ ನರಕವನ್ನೇ- ತಾರತಮ್ಯವನ್ನೇ ಸಿದ್ಧಾಂತಗೊಳಿಸಿಬಿಟ್ಟಿದೆ.

ಇಂಥ ಕಡೆ ವಿಶ್ವೇಶ್ವರ ತೀರ್ಥರು ಹುಟ್ಟಿದ್ದಾರೆ. ಈ ಸಿದ್ಧಾಂತದ ಮಠಕ್ಕೆ ಶ್ರೀಗಳಾಗಿದ್ದಾರೆ. ಆದರೆ ಚಲನೆಯನ್ನು ಬಯಸುವಂತೆ ಕಾಣುತ್ತಾರೆ. ಹಾಗಾಗಿ, ತನ್ನ ಸಿದ್ಧಾಂತದ ಚೌಕಟ್ಟನ್ನು ಮೀರಲು- ಇವರು ಒದ್ದಾಡುತ್ತಿರುವಂತೆ ಕಾಣಿಸುತ್ತಿದೆ. ಈ ಒದ್ದಾಟ ಬಲೆಗೆ ಸಿಕ್ಕಿಕೊಂಡು ಕೈಕಾಲು ಬಡಿಯುತ್ತಿರುವ ಒಂದು ಗುಬ್ಬಚ್ಚಿಯ ಒದ್ದಾಟದಂತಿದೆ. ಇದನ್ನು ನೋಡಿದಾಗ ಇವರು ಅಲ್ಲಿರಬೇಕಾದವರಲ್ಲ, ನಮ್ಮ ಜೊತೆ ಇರಬೇಕಾದವರು ಅಂತ ಒಂದೊಂದು ಸಲ ಅನ್ನಿಸುತ್ತದೆ.

ಆದರೆ ಇವರ ಒದ್ದಾಟವು ಆಳವಾದ ಧಾರ್ಮಿಕತೆಯಿಂದ ಬಂದುದೇ? ಅಂತರಂಗದ್ದೇ? ಎಂದು ಪ್ರಶ್ನಿಸಿಕೊಂಡಾಗ- ಧೈರ್ಯವಾಗಿ ಹೌದು ಎಂದು ಹೇಳಲು ಕಷ್ಟವಾಗುತ್ತದೆ. “ಕೀಳಿಂಗಲ್ಲದೆ ಹಯನು ಕರೆಯದು” ಎಂದರೆ, ತಾನು ತನ್ನ ಅಹಂ ಅನ್ನು ಅಲ್ಪವಾಗಿಸದೆ ಮೋಕ್ಷವಿಲ್ಲ- ಎಂಬ ತುಡಿತದಿಂದಾಗಿ ಅಹಂ ಅಲ್ಪವಿರುವ ಮೇಲರಿಮೆ ಇಲ್ಲದ ತಳ ಸಮುದಾಯವನ್ನು ಶ್ರೇಷ್ಠವೆಂದು ಭಾವಿಸಿದ ವಚನಕಾರರ ನಡೆ ಕಂಡಾಗ, ಶ್ರೀಪೇಜಾವರರ ಪಾದಯಾತ್ರೆ  ಧಾರ್ಮಿಕವಲ್ಲವೇನೋ ಧರ್ಮರಾಜಕಾರಣವಿರಬೇಕು ಎಂಬ ಅನುಮಾನ ಹುಟ್ಟಿಸುತ್ತದೆ. “ತಮ್ಮ ಮಠಕ್ಕೆ ಉತ್ತರಾಧಿಕಾರಿಯಾಗಿ ಕುರುಬರನ್ನಾದರೂ ಮಾಡುತ್ತೀರಾ” ಎಂದು ಕೇಳಿದರೆ, “ಬ್ರಾಹ್ಮಣರನ್ನು ಮಾತ್ರ ಕೇಳುತ್ತೀರಿ? ಕ್ರಿಶ್ಚಿಯನ್ನರನ್ನು ಕೇಳುತ್ತೀರಾ? ಲಾಮಾ ಮಾಡು ಎಂದು ಬೌದ್ಧರನ್ನು ಕೇಳುತ್ತೀರಾ?” ಎಂದು ಪೇಜಾವರರು ಸಹನೆ ಕಳೆದುಕೊಳ್ಳುತ್ತಾರೆ.

“ನಾನು ಕ್ರಿಶ್ಚಿಯನ್, ನಾನು ಬೌದ್ಧ, ನಾನು ಯಾಕೆ ಮಠಾಧಿಪತಿಯಾಗಬಾರದು?” ಎಂದು ಆ ಧರ್ಮಗಳಲ್ಲಿರುವ ಯಾರೇ ಪ್ರಶ್ನಿಸಬಹುದು. ಇದಕ್ಕೆ ಆ ಧರ್ಮಗಳಲ್ಲಿ ಅವಕಾಶ ಇದೆ. ಕೆಲವು ಕಡೆ ಸಾಧ್ಯವೂ ಆಗಿದೆ. ಹಿಂದೂ ಎಂದುಕೊಂಡಿರುವ ಜಾತಿಧರ್ಮದಲ್ಲಿ ಇದು ಸಾಧ್ಯವೇ? ಹೊರಗೆ ನಿಂತಿರುವ ಕನಕದಾಸನ ಕುರುಬರು ನಿಮ್ಮ ಸಮಾಜಕ್ಕೆ ಸೇರಿಲ್ಲವೇ? ಅವರ ಧರ್ಮವೇ ಬೇರೆಯೇ? ಅಥವಾ ಪ್ರತಿ ಜಾತಿಯೂ ಒಂದೊಂದು ಧರ್ಮವೇ?

ಹಾಗಾದರೆ ಧರ್ಮ ಎಂದರೇನು? ಜಾತಿಗಳ ಮೇಲು-ಕೀಳು ನಿಷಿದ್ಧಗಳ ಕಟ್ಟಳೆಗಳೇ ಇಲ್ಲಿ ಧರ್ಮವಾಗಿದೆ. ಅದಕ್ಕೇ ಪೇಜಾವರರನ್ನು ತಿರುಪತಿಯಲ್ಲಿ ಪೂಜೆಗೆ ಬಿಡುವುದಿಲ್ಲ ಎಂದರೆ -ನಾವೆಂಥ ಕ್ಷುದ್ರಜೀವಿಗಳು ಎಂದು ನಮಗನಿಸುವುದಿಲ್ಲ. ಈ ನಮ್ಮ ಮಠ, ದೇವಸ್ಥಾನ, ಪೂಜಾಸ್ಥಳಗಳಾದರೂ ಅಂಧಃತಮಸ್ಸಿನಿಂದ ಹೊರಬರಲು  ಇನ್ನೆಷ್ಟ್ಟು ವರ್ಷಗಳು ಕಾಯಬೇಕು? “ನಿನ್ನನ್ನು ನನ್ನ ಮಠದ ಉತ್ತರಾಧಿಕಾರಿಯನ್ನಾಗಿ ಮಾಡುತ್ತೇನೆ, ಮತಾಂತರ ಆಗಬೇಡ” ಎನ್ನಲು ಬಾಯಿಬಾರದ ಮಠಾಧಿಪತಿ “ಮತಾಂತರ ಆಗಬಾರದು” ಎಂದು ನೈತಿಕತೆ ಕಾಡದೆ ಹೇಳಿದರೂ ಅದರೊಳಗಿನ ನಿರ್ಲಜ್ಜತೆ ನಮಗೆ ಕಾಣಿಸುವುದಿಲ್ಲ. “ನೀನು ಹೊರಗಿರುವುದೇ ನಮ್ಮ ಸಂಪ್ರದಾಯ” ಎನ್ನುವುದರ ಕ್ರೌರ್ಯವೂ ನಮಗೆ ತಟ್ಟುವುದಿಲ್ಲ.

ಈಗ ಪೇಜಾವರ ಶ್ರೀಗಳು ದಲಿತರಿಗೆ ವೈಷ್ಣವ ದೀಕ್ಷೆ ಕೊಡಲು ಹೊರಟಿದ್ದಾರೆ. ಈಗಾಗಲೇ ವೈಷ್ಣವ ದೀಕ್ಷೆ ಪಡೆದ ಅನೇಕ ದಲಿತ ದಾಸ ಒಕ್ಕಲುಗಳು ಇವೆ. ಶಂಖ-ಜಾಗಟೆಯನ್ನು ಪ್ರತ್ಯೇಕವಾಗಿ ಮಡಿಯಾಗಿ ಇಟ್ಟುಕೊಂಡು, ಆ ಇಟ್ಟಿರುವ ಜಾಗಕ್ಕೆ ಉಳಿದವರಿಗೆ ಪ್ರವೇಶ ಕೊಡದೆ, ದಾಸ ಒಕ್ಕಲುಗಳಲ್ಲೇ ಮದುವೆಗೆ ಹೆಣ್ಣು ಗಂಡು ಹುಡುಕುತ್ತಿವೆ. ಇದು ಭೇದವನ್ನು ಹೆಚ್ಚಿಸಿರುವುದೇ ಹೊರತು ಐಕ್ಯತೆಯನ್ನಲ್ಲ. ಪೇಜಾವರ ಶ್ರೀಗಳ ಪಾದಯಾತ್ರೆಯಿಂದ ದಲಿತರಲ್ಲಿ ಇನ್ನಷ್ಟು ದಾಸರು ಹೆಚ್ಚಾಗಬಹುದು. ಶಂಖಜಾಗಟೆ ಬಾರಿಸಬಹುದು!  ಎಷ್ಟೇ ಶಂಖ ಜಾಗಟೆ ಬಾರಿಸಿದರೂ ಅವರ ಅಸ್ಪೃಶ್ಯ ಸ್ಥಿತಿಯಿಂದ ಚಲನೆ ಕಾಣದು, ಯಾಕೆಂದರೆ ವೈಷ್ಣವ ದೀಕ್ಷೆ ಎಂದರೆ ಸೇವಕತನದ ದಾಸ ದೀಕ್ಷೆ.

ಹೀಗಿರುವಾಗ ಶ್ರೀ ಪೇಜಾವರರು ವೈಷ್ಣವದೀಕ್ಷೆಯನ್ನು ಪುನರ್ ಪರಶೀಲಿಸುವುದು ಒಳಿತೇನೋ. ಬದಲಾಗಿ ದ್ವಿಜರಿಗೆ ತ್ರಿಜ ದೀಕ್ಷೆ ಕೊಡುವುದು ನಮ್ಮ ಸಮಾಜದ ಆರೋಗ್ಯ ಐಕ್ಯತೆ ಸಮತೋಲನಕ್ಕೆ ಅಗತ್ಯವೇನೋ ಅನ್ನಿಸುತ್ತದೆ. ಹಾಲಿ ದ್ವಿಜ ದೀಕ್ಷೆಯು ಬುದ್ಧಿ ಕೇಂದ್ರಿತವಾಗಿದೆ. ದ್ವಿಜ ದೀಕ್ಷೆಯ ಗಾಯತ್ರೀ ಮಂತ್ರದಲ್ಲಿ, ಬುದ್ಧಿ ಪ್ರಚೋದನೆಯಾಗಲಿ ಎಂಬ ಆಶಯವಿದೆ. ಬುದ್ಧಿಯಿಂದ ಒಡಕು ವಂಚನೆ ಮೇಲರಿಮೆ ಕೀಳರಿಮೆ ಇತ್ಯಾದಿಗಳು ಹೆಚ್ಚಲೂಬಹುದು. ಭಾರತದ ಸಮಾಜಕ್ಕೆ ಇಂದು ತುರ್ತಾಗಿ ಬೇಕಾಗಿರುವುದು- ಕರುಳು ಅಂದರೆ ಅಂತಃಕರಣ ಅಂದರೆ ಬಂಧುತ್ವ- ಇದರ ಪ್ರಚೋದನೆಗಾಗಿ, ಅಂದರೆ ಕಾರುಣ್ಯದ ಪ್ರಚೋದನೆಯಾಗಲಿ ಎಂಬ ಆಶಯದ ನವ ದೀಕ್ಷೆಯನ್ನು ನೀಡಿ ಎಂದು ಅವರಲ್ಲಿ ಪ್ರಾರ್ಥಿಸುವೆ. ನನ್ನ ಈ ಪ್ರಾರ್ಥನೆಯನ್ನು ಉದ್ಧಟತನವೆಂದು ಅವರು ಭಾವಿಸದಿರಲಿ. (ಈ ತ್ರಿಜ ದೀಕ್ಷೆಯ ಪರಿಕಲ್ಪನೆಯನ್ನು ಯು.ಆರ್. ಅನಂತಮೂರ್ತಿಯವರು ಏನಾರೂ ಕೇಳಿಸಿಕೊಂಡರೆ ಈ ತ್ರಿಜತ್ವ ದೀಕ್ಷೆಯನ್ನು ನೀನೇ ನನಗೆ ಕೊಡಯ್ಯಾ ಎಂದು ಕೇಳೇ ಕೇಳುತ್ತಾರೆಂಬ ಗ್ಯಾರಂಟಿ ನನಗಿದೆ!)

ಭಾರತವು ಏನೇನೋ ಹುಟ್ಟುಹಾಕಿದೆ. ಹುಟ್ಟಿಸುವುದರಲ್ಲಿ ನಾವು ನಿಸ್ಸೀಮರು.  ಈಗ ಒಂದು ಹೊಸ ಹುಟ್ಟಿಗಾಗಿ ಪೇಜಾವರ ಶ್ರೀಗಳ ಮುಂದೆ ಸಲಹೆಯೊಂದನ್ನಿಡುವೆ… ನಮ್ಮದು ಜನ್ಮಾಂತರಗಳನ್ನು ನಂಬುವ ದೇಶ. ಈ ಜನ್ಮದ ತರ್ಕಕ್ಕೆ- ಕಳೆದ ಜನ್ಮದಲ್ಲಿ ಅಸ್ಪೃಶ್ಯತೆ ಆಚರಿಸಿದವರೇ ಈ ಜನ್ಮದಲ್ಲಿ ಅದನ್ನು ಅನುಭವಿಸಲು ಅಸ್ಪೃಶ್ಯರಾಗಿ ಹುಟ್ಟಿದ್ದಾರೆ. ಈ ಜನ್ಮದಲ್ಲಿ ಅಸ್ಪೃಶ್ಯತೆ ಆಚರಿಸುವವರು ಮುಂದಿನ ಜನ್ಮದಲ್ಲಿ ಅಸ್ಪೃಶ್ಯರಾಗಿ ಹುಟ್ಟುವರು. -ಜನ್ಮ ನಿಜವಿದ್ದರೆ ಆ ಜನ್ಮಾಂತರದ ಕರ್ಮಫಲವನ್ನು ಉಣ್ಣಬೇಕಾದ್ದೂ ನಿಜವಿರಬಹುದಲ್ಲವೇ. ಏನೇನೋ ಹುಟ್ಟು ಹಾಕುವವರು ಇದನ್ನೂ ಯಾಕೆ ಹುಟ್ಟು ಹಾಕಬಾರದು?! ಯಾಕೆ ಮಠಾಧೀಶರುಗಳು ಇದನ್ನು ಪ್ರಚಾರ ಮಾಡಬಾರದು? ತಾರತಮ್ಯಕ್ಕಾಗಿ ತರ್ಕಿಸಿ ಸಾಯುವ ಭಾರತದ ಮನಸ್ಸು ಐಕ್ಯತೆಗಾಗಿ ಯಾಕೆ ತರ್ಕಿಸಬಾರದು?

ಸುಸ್ತಾಗುತ್ತಿದೆ. ಯಾಕೋ ಮುಗಿಯುತ್ತಿಲ್ಲ. ಪ್ರೀತಿ-ಸಮಾನತೆಯ ಆಸೆ ಇಟ್ಟುಕೊಂಡು ಇತಿಹಾಸಕಾಲದಿಂದಲೂ ಜೀವಿಸುತ್ತಿದ್ದೇವೆ. ಪೇಜಾವರಶ್ರೀಗಳ ಪಾದಯಾತ್ರೆಯಿಂದಾಗಿ ಕೆಲವರಾದರೂ ಎಳೆಯ ದ್ವಿಜರು ತ್ರಿಜರಾಗಿ ತ್ರಿಜತ್ವ ಪಡೆದು ತಮ್ಮದಲ್ಲದ ಜಾತಿಯಲ್ಲಿ ಮದುವೆಯಾಗಿ ಹೊಸ ಮನುಷ್ಯ ಸಂತಾನ ಹುಟ್ಟಲು ಶ್ರೀ ಪೇಜಾವರರ ಈ ಪಾದಯಾತ್ರೆ ಪ್ರಚೋದನೆಯನ್ನು ಉಂಟು ಮಾಡಲಿ ಎಂದು ಕನಸು ಕಾಣುವೆ. ನನ್ನ ಕನಸು ನನಸಾಗಲಿ.

(ಲೇಖಕರು ಮೈಸೂರಿನ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣಾ ಕೇಂದ್ರದಲ್ಲಿ ಮಾಡಿದ ಭಾಷಣದ ಆಯ್ದ ಭಾಗ)

(ಲೇಖಕರ ಬಯಕೆಯಂತೆ ‘ಅನಾಮಿಕ’ ಪ್ರತಿಕ್ರಿಯೆಗಳಿಗೆ ಕಡಿವಾಣ ಹಾಕಲಾಗಿದೆ)