ಸ್ಯಾಲಿಂಜರ್ ಬರೆದ ಕಾದಂಬರಿ ‘ಕ್ಯಾಚರ್ ಇನ್ ದ ರೈ’ಯ 64 ಮಿಲಿಯನ್ ಪ್ರತಿಗಳು ಮಾರಾಟವಾಗಿವೆ. ಪ್ರತಿವರ್ಷ 2,50,000 ಜನ ಈ ಕಾದಂಬರಿಯನ್ನು ಕೊಳ್ಳುತ್ತಾರೆ. ಅತ್ಯಂತ ಹೆಚ್ಚ ಜನ ಓದಬಯಸುವ ಮತ್ತು ಅತ್ಯಂತ ಹೆಚ್ಚು ಜನ ನಿಷೇಧಿಸಬಯಸುವ ಅಮೇರಿಕನ್ ಕಾದಂಬರಿ ಇದಾಗಿದೆ. ಹಲವಾರು ಸಮೀಕ್ಷೆಗಳ ಪ್ರಕಾರ ಇದು ಇಂಗ್ಲಿಷ್ ಭಾಷೆಯ ಶ್ರೇಷ್ಠ ಕಾದಂಬರಿಗಳಲ್ಲಿ ಒಂದಾಗಿದೆ.

ಈ ಎಲ್ಲಾ ಮಾಹಿತಿಯನ್ನು ಓದುತ್ತಾ ಹೋದ ಹಾಗೆ ಸ್ಯಾಲಿಂಜರ್ ನಮ್ಮ ಕಾಲದ ಅತ್ಯಂತ ಯಶಸ್ವಿ ಬರಹಗಾರ ಹಾಗೂ ಸಂತೃಪ್ತ ವ್ಯಕ್ತಿಯಾಗಿದ್ದಿರಬಹುದು ಎನ್ನಿಸಬಹುದು. ಆದರೆ, ವಾಸ್ತವವಾಗಿ ಅತ್ಯಂತ ವಿಕ್ಷಿಪ್ತ, ಅತೃಪ್ತ ವ್ಯಕ್ತಿಯಾಗಿದ್ದ. ಅಮೇರಿಕಾದಲ್ಲಿ ಪ್ರಭಾವೀ ಕೃತಿಯೊಂದು ತರಬಹುದಾದ ಜನಪ್ರಿಯತೆ ಹಾಗೂ ಕುತೂಹಲದಿಂದ ಪಾರಾಗಲು ತನ್ನ ಇಡೀ ಜೀವಮಾನವನ್ನೇ ಅವನಂತೆ ಕಳೆದ ಇನ್ನೊಂದು ಉದಾಹರಣೆ ಇರಲಿಕ್ಕಿಲ್ಲ. ‘ಅನಾಮಧೇಯತೆ ಏಕಾಂಗಿತನ’ ಇವೆರಡನ್ನೂ ಬರಹಗಾರನಿಗೆ ಕೊನೇಪಕ್ಷವಾಗಿ ಸಾಲವಾಗಿ ಕೊಡಬೇಕೆಂದು ನಂಬಿದ್ದ.

ಅವನಿಗೆ ಅವುಗಳನ್ನು ಪಡೆಯುವುದಕ್ಕಾಗಿ ಬಹುದೊಡ್ಡ ವೆಚ್ಚವನ್ನು ತೆರಬೇಕಾಯಿತು. ಮೊನ್ನೆ ಜನವರಿ 27ರಂದು ತೊಂಭತ್ತೆಂಟನೆಯ ವಯಸ್ಸಿನಲ್ಲಿ ತೀರಿಹೋದ ಸ್ಯಾಲಿಂಜರ್ ಹೆಚ್ಚುಕಡಿಮೆ 30 ವರ್ಷಗಳನ್ನು ಜನರ ಕಣ್ಣಿಂದ ದೂರವಿರುವ ಪ್ರಯತ್ನದಲ್ಲಿಯೇ ಕಳೆದ. ದುರ್ದೈವವೆಂದರೆ ಇಷ್ಟು ಕಠೋರವಾದ ಪ್ರಯತ್ನದಿಂದ ಏಕಾಂಗಿಯಾಗಿದ್ದ ಸ್ಯಾಲಿಂಜರ್ ಮಹತ್ವಪೂರ್ಣವಾದದ್ದನ್ನು ಈ ವರ್ಷಗಳಲ್ಲಿ ಬರೆದ ಹಾಗೆ ಕಾಣುವುದಿಲ್ಲ. ಈಗ ಅವನ ಸಾವಿನ ನಂತರ ಅವನು ಬರೆದಿರಬಹುದಾದ ಕೃತಿಗಳ ಹಸ್ತಪ್ರತಿಗಳು ಸಿಕ್ಕರೆ ಅವನ ಬದುಕು, ಉಗ್ರ ವ್ರತವೊಂದರ ಪಾಲನೆಯಾಗಿ ಕಾಣುತ್ತದೆ. ಇಲ್ಲದಿದ್ದರೆ ವಿಕ್ಷಿಪ್ತ ವ್ಯಕ್ತಿಯೊಬ್ಬ ತನ್ನ ಪ್ರತಿಭೆ ಹಾಗೂ ಕ್ರಿಯಾಶೀಲತೆಗಳನ್ನು ಕಳೆದುಕೊಂಡು ಅವನ ಜೊತೆ ಸಂಬಂಧವಿಟ್ಟುಕೊಂಡ ಹೆಚ್ಚುಕಡಿಮೆ ಎಲ್ಲರಿಗೂ ನೋವು ಕೊಟ್ಟು ಏನನ್ನು ಸಾಧಿಸದೇ ಹೋದದ್ದರ ಕತೆಯಾಗಬಹುದು.

ಅತ್ಯಂತ ಪ್ರಸಿದ್ಧ ಬರಹಗಾರರು ತಮ್ಮ ಖಾಸಗಿ ಬದುಕನ್ನು ಬದುಕುವುದು ಸಾಧ್ಯವಿರುವ ಭಾರತಕ್ಕೆ ಹೋಲಿಸಿದರೆ ಅಮೇರಿಕಾ ಎನ್ನುವ ಮಾರುಕಟ್ಟೆ ಮಾಧ್ಯಮಗಳ ಆಕರ್ಷಕ ಆದರೆ, ಅಮಾನವೀಯ ಜಗತ್ತಿನಲ್ಲಿ ಬದುಕುವ ಯಶಸ್ವಿ ಬರಹಗಾರರ ಬದುಕು ಸಾಕ್ಷಾತ್ ನರಕವೆ. ತಮ್ಮ ಸಭ್ಯಸ್ತ ‘ನಾರ್ಮಲ್’ ಮುಖವಾಡವನ್ನು ಯಾವ ಕಾರಣಕ್ಕೂ ಬಿಟ್ಟುಕೊಡದ ನಮ್ಮ ಬರಹಗಾರರು ಅಪ್ರಮಾಣಿಕ ಅದೃಷ್ಟಶಾಲಿಗಳು. ಅತ್ಯಂತ ಖಾಸಗಿಯಾಗಿ ಇರಲು ಏನೆಲ್ಲಾ ಮಾಡಿದ ಸ್ಯಾಲಿಂಜರ್ ನ ಬಗ್ಗೆ ಗೊತ್ತಿರಬೇಡವಾಗಿದ್ದೆಲ್ಲವೂ ನಮಗೆ ಗೊತ್ತಿರುವುದು ಅಮೇರಿಕಾದಲ್ಲಿ ಮಾತ್ರ ಆಗಬಹುದಾದ ದುರಂತವನ್ನು ಅವನ ಅಸಫಲ ಮದುವೆಗಳು, ತನ್ನ ಹೆಂಡತಿಯನ್ನು ತನ್ನಂತೆ ಏಕಾಂಗಿಯಾಗಿಸಿ ಅವನು ಹಿಂಸಿಸಿದ್ದು, ಹದಿನೆಂಟು ವರ್ಷದ ಯುವ ಬರಹಗಾರ್ತಿಯ ಜೊತೆಗೆ ಅವನ ಒಂದು ವರ್ಷದ ಸಂಬಂಧ ಇವುಗಳು ಈಗ ಎಲ್ಲರಿಗೂ ಗೊತ್ತು. ಆ ಬರಹಗಾರ್ತಿ ವರ್ಷಗಳ ನಂತರ ಸ್ಯಾಲಿಂಜರ್ ಬರೆದಿದ್ದ ಪತ್ರಗಳನ್ನು ದುಡ್ಡಿಗಾಗಿ ಹರಾಜು ಮಾಡಿದಳು. ಅವನ ಜೊತೆಗಿನ ತನ್ನ ನೆನಪುಗಳನ್ನು ಬರೆದು ಪ್ರಕಟಿಸಿದಳು. ಅವನ ಮಗಳು ತನ್ನ ನೆನಪುಗಳಲ್ಲಿ ತನ್ನ ತಾಯಿ ಮಗುವಾಗಿದ್ದ ತನ್ನನ್ನು ಕೊಲ್ಲಬೇಕೆಂದು ಉದ್ದೇಶಿಸಿದ್ದಳು ಎಂದು ಬರೆದಳು. ಬಹುಶಃ ಸ್ಯಾಲಿಂಜರ್ ತನ್ನ ಇಡೀ ಜೀವನವನ್ನು ಟಿವಿ ಕ್ಯಾಮರಾದ ಎದುರಿಗೆ ಸಾರ್ಷಜನಿಕವಾಗಿ ಕಳೆದಿದ್ದರೂ ಅವನ ಖಾಸಗಿ ಜೀವನದ ಇಂಥ ಕರಾಳ ಸತ್ಯಗಳು ಗೊತ್ತಾಗುತ್ತಿರಲಿಲ್ಲವೇನೋ? ಕೊನೆಗೂ ಸ್ಯಾಲಿಂಜರ್ನ ಜೀವನ ಒಬ್ಬ ‘ಸೆಲೆಬ್ರಿಟಿ’ಯ ಜೀವನದಂತೆ ಮಾರುಕಟ್ಟೆಯ ವಸ್ತುವಾಗಿಬಿಟ್ಟಿತು.

ಅಮೇರಿಕದ ಶ್ರೇಷ್ಠ ಬರಹಗಾರ ಹಾಗೂ ಬರಹಗಾರರ ಗುರುವಾದ ಹೆನ್ರಿ ಜೇಮ್ಸ್ ಬರಹಗಾರರಿಗೆ ನೀಡಿದ ಉಪದೇಶವೆಂದರೆ cultivate loneliness. ಲಂಕೇಶ್ ಹೇಳುತ್ತಿದ್ದಂತೆ ಸಾರ್ವಜನಿಕನಾಗುತ್ತ ಹೋದಂತೆ ಬರಹಗಾರ ಪೊಳ್ಳಾಗುವುದು ಜಾಸ್ತಿ. ಆದರೆ, ಖಾಸಗಿತನವನ್ನು ಇಷ್ಟು ಉಗ್ರವಾಗಿ ಹುಡುಕಿಕೊಂಡು ಹೋದ ಸ್ಯಾಲಿಂಜರ್ ಬದುಕು ಏಕಾಂಗಿಯಾಗಿದ್ದರೂ ಖಾಸಗಿಯಾಗಿ ಉಳಿಯಲಿಲ್ಲ. 1951ರಲ್ಲಿ ಪ್ರಕಟವಾದ ‘ಕ್ಯಾಚರ್ ಇನ್ ದ ರೈ’ ಮತ್ತು ಹಲವು ಅಪರೂಪದ ಕೃತಿಗಳನ್ನು ಬಿಟ್ಟರೆ ಸ್ಯಾಲಿಂಜರ್ ಮಹತ್ವದ್ದನ್ನು ಏನೂ ಬರೆದಂತೆ ತೋರುವುದಿಲ್ಲ. ಅವನು ಬಿಟ್ಟು ಹೋಗಿರಬಹುದಾದ ಹಸ್ತಪ್ರತಿಗಳಲ್ಲಿ ಅದ್ಭುತವಾದ ಕೃತಿಯೊಂದಿರಬಹುದೆ? ಅಥವಾ ಕಾಮೂ ಬರೆದ ಕತೆಯೊಂದರಲ್ಲಿ ಆಗುವ ಹಾಗೆ ಅದ್ಭುತ ಚಿತ್ರ ರಚಿಸುತ್ತಿದ್ದೇನೆಂದು ಅಟ್ಟದ ಮೇಲೆ ಹೋಗಿ ಒಬ್ಬಂಟಿಯಾಗಿರುತ್ತಿದ್ದ ಕಲೆಗಾರ ಕೊನೆಗೆ ಖಾಲಿ ಕ್ಯಾನ್ವಾಸ್ ಅನ್ನು ಬಿಟ್ಟುಹೋದ ಹಾಗೆ ಆಗಬಹುದೆ? ಯಾವುದೂ ಖಾಸಗಿಯಾಗಿರಬಾರದು ಎಂದು ಪಟತೊಟ್ಟ ಟಾಲ್ಸ್ಟಾಯ್ ಅವನು ಹೇಳಿದ್ದ ಎಲ್ಲವನ್ನೂ ಬರೆದುಕೊಳ್ಳುತ್ತಿದ್ದ ಶಿಷ್ಯರಿಂದ ಪಟ್ಟ ಪಾಡು ಯಾರಿಗೂ ಬೇಡ. ಖಾಸಗೀತನ, ಸಾರ್ವಜನಿಕತೆ ಯಾವುದರಿಂದಲೂ ಬರಹಕ್ಕೆ ಪ್ರಯೋಜನವಿಲ್ಲವೆಂದು ತೋರುತ್ತದೆ. ಬರಹಗಾರನ ಸ್ವಂತ ಜೀವನದ ಖಾಸಗಿ ನರಕಗಳನ್ನು ಹಾಗೇ ಬಿಡುವುದು ಒಳ್ಳೆಯದು ಎನ್ನುವುದಕ್ಕೆ ಸ್ಯಾಲಿಂಜರ್ ಒಂದು ಉದಾಹರಣೆ.