ಗಜಾನನ ಪದ್ಮಾರ್ಕ೦ ಗಜಾನನಮಹರ್ನಿಶಮ್
ಅನೇಕದ೦ತ೦ ಭಕ್ತಾನಾ೦ ಏಕದ೦ತ೦ ಉಪಾಸ್ಮಹೇ

ವಾಸು ಎದೆಯುಬ್ಬಿಸಿ, ಉಸಿರುಕಟ್ಟಿ ಸಂಸ್ಕೃತಪಾಠಶಾಲೆಯಲ್ಲಿ ಗಣೇಶಸ್ತುತಿ ಹೇಳುತ್ತಿದ್ದ. ತಕ್ಷಣ ತುಂಡರಿಸಿದ್ದ, ಕೇಶವಶರ್ಮ.

‘ವಾಸು, ಇದು ವಿಘ್ನೇಶ್ವರನ ಸ್ತುತಿ. ಒಳ್ಳೇ ‘ಏರಲೀ, ಏರಲೀ ಕನ್ನಡದ ಬಾವುಟಾ’ ಅನ್ನುವ ದೇಶಭಕ್ತಿ ಗೀತೆ ಹಾಡುವಹಾಗೆ ಎದೆಯುಬ್ಬಿಸಿ  ಹೇಳೋದಲ್ಲ. ಮತ್ತೆ ಎಷ್ಟು ಸರ್ತಿ ಹೇಳಿದೀ, ನಿನಗೆ, ಪದಗಳನ್ನು ಸರಿಯಾದ ಕಡೆ ಬಿಡಿಸಿದರೆ ಮಾತ್ರ ಸಂಸ್ಕೃತ ಭಾಷೆಗೆ ಅರ್ಥ ಬರೋದು. ಅದು ಅನೇಕದಂತಂ ಅಲ್ಲ, ಅನೇಕದಂ ತಂ. ಈ ಶ್ಲೋಕದಲ್ಲಿನ ವಿರೋಧಾಭಾಸವನ್ನು ನೋಡಿ… …’ ಎಂದು ಆಕ್ಷೇಪಣೆಯ ಧ್ವನಿಯಲ್ಲಿ ಕೊಂಚ ಗದರಿಕೊಂಡಿದ್ದ. ಮುಂದಿನದನ್ನು ಕೇಳಿಸಿಕೊಳ್ಳಲಿಲ್ಲ.

ಕೂತು ಬರೆದ, ವಾಸು. ಒಂದು ಖಾಲಿ ಕಾಗದದ ಮೇಲೆ, ಬೆಳ್ಳಂಬೆಳಗ್ಗೆ ಗಣೇಶಸ್ತುತಿಯ ವ್ಯಾಖ್ಯಾನದ ನಡುವೆ.

‘ಓ.. ಸುದೇಷ್ಣಾ..

ಎಂಥ ಹೆಸರದು.. ವಿರಾಟನ ಹೆಂಡತಿಯದ್ದಲ್ಲವೇ? ಕೀಚಕನ ಸಹೋದರಿಯದ್ದಲ್ಲವೇ ಇದು. ನಿನಗೆಂತಕ್ಕೇ ಇಂಥ ಹೆಸರು? ಆ ಕ್ರೂರಿಯ ಸಂಬಂಧಿ ಹೇಗೆ ನೀನಾಗುವೆ? ಕೊಡಚಾದ್ರಿಯ ಬುಡದಲ್ಲೆಲ್ಲೋ ಇದ್ದ ನೀನು ಈಗ ಬಂದು ಈ ಬಯಲು ಸೀಮೆಯ ಭಣಭಣ ಎನ್ನುವ ಈ ಊರಿನಲ್ಲಿ, ಇರುವ ಒಂದೇ ಕೋಟೆಬೆಟ್ಟದ ಪಕ್ಕದಲ್ಲಿ, ಈ ಸೂಳೆಕೆರೆಯ ಮಗ್ಗುಲ ಈ ಕೊಂಪೆಗೆ ಏಕೆ ಬಂದೆಯೇ? ನನ್ನ ಹೃದಯಕ್ಕೆ ಹೀಗೆ ಹೇಳದೇ ಕೇಳದೇ ಲಗ್ಗೆ ಹಾಕಿದೆಯಲ್ಲ? ಈ ಪಡವಲಪಟ್ಟಣದ ಕಾಡು, ಈ ಮಾಯಗೊಂಡನ ಹಳ್ಳಿಯ ರಸ್ತೆ, ಕುರಿಮರಿಯ ಸಿಗಿಸಿಕೊಳ್ಳುವ ಬಡಗೊಡಮ್ಮ, ಬೀದಿಯ ಸರ್ಕಲ್ಲಿನಲ್ಲಿ ವ್ಹ್ಹ್ಹ್ಹಿರಭದ್ರನು.. ಭಲಾರೆ.. ಎನ್ನುತ್ತಾ ಪೇಪೇಪೇಪೇ ಎನ್ನುವ ವಾಲಗಕ್ಕೆ ಮುಖಕ್ಕೆ ಬೂದಿ ಬಡಿದುಕೊಂಡು ಕುಣಿಯುವ ಮಾಪಿಳ್ಳೆ, ಇವುಗಳ ಮಧ್ಯೆ ನನ್ನಪಾಡಿಗೆ ನಾನು ಕಳೆದುಹೋಗಿದ್ದೆ, ಚಕ್ರಕೊಳದ ಬಾವಿಯಲ್ಲಿ ತಣಿದಿದ್ದೆ, ಸೌಮ್ಯಕೇಶವನ ದೇವಸ್ಥಾನದ ಗರುಡಗಂಬದ ಕಟ್ಟೆಯ ಮೇಲೆ ವರ್ಷತಡುಕಿನಂದು ಮೇಲೇರುವ ದೀಪದ ಕೆಳಗೆ ಚೆಲ್ಲುವ ಎಳ್ಳೆಣ್ಣೆಯ ರಾಡಿಯನ್ನು ನೋಡುತ್ತಾ  ನಂಪಾಡಿಗೆ ನಾ ಇರಲು ನೀನು ಎಲ್ಲಿಂದ ಬಂದೆ, ನನ್ನನ್ನು ನನ್ನೊಳಗಿಂದಲೇ ಕದಲಿಸಲು, ಈ ಕರಿಯ ಸೌಮ್ಯಕೇಶವನನ್ನು ಅರಳಿಸಲು.’

ವಾಸು ಕನಸಂತೆ ಬರೆದಿದ್ದ, ಬರೆದಂತೆ ಕನಸಿದ್ದ.

ವಾಸುವಿಗೆ ಈ ತರಹದ ಕನಸುಗಳು ಬೀಳಲಿಕ್ಕೆ ಶುರುವಾದದ್ದು ನಾಗಮಂಗಲದಲ್ಲಿ ಸಂಸ್ಕೃತ ಪಾಠಶಾಲೆ ಶುರುವಾದ ನಂತರ. ಸಂಸ್ಕೃತ ಪಾಠಶಾಲೆಗೆ ಹೊಸ ಮಾಸ್ತರಾಗಿ ಪ್ಯಾಂಟು ಶರಟು ಹಾಕುವ ಕೇಶವಶರ್ಮ ಕೊಡಚಾದ್ರಿಯ ತಪ್ಪಲಿನ ನಗರವೋ, ಎಂತದೋ ಕಟ್ಟೆ ಎನ್ನುವ ಊರೋ ಎಂದು ಹೇಳಿಕೊಂಡು ಬಂದಾಗ  ಮತ್ತು ಆತನ  ತಂಗಿ ಸುದೇಷ್ಣಾ ವಾಸುವಿನ ಜತೆಗೇ ಮೊದಲನೇ ಪಿಯುಸಿಗೆ ಭರ್ತಿಯಾದಾಗ. ಕೇಶವಶರ್ಮ ಬಂದಮೇಲೆ ಇದ್ದಕ್ಕಿದ್ದಂತೇ ನಾಗಮಂಗಲದಲ್ಲಿ ಸಂಸ್ಕೃತದ ಸಂಸ್ಕೃತಿಗೇ ಕಳೆಬಂದಿತ್ತು. ಸಂಸ್ಕೃತ ಕಲಿಸುವವರು ಸಂಸ್ಕೃತ ‘ಪಂಡಿತ’ರು ಅನ್ನುವ ಮೂಲಭೂತ ಕಲ್ಪನೆಯನ್ನೇ ಸುಳ್ಳು ಮಾಡಿದ್ದ, ಆತ. ಕೇಶವಶರ್ಮನನ್ನು ನೋಡಿದರೆ ಈತ ಕೊಡಚಾದ್ರಿಯ ಬುಡದಿಂದ ಬಂದವನು ಎಂದು ಹೇಳುವ ಯಾವ ಕುರುಹೂ ಇರಲಿಲ್ಲ. ನೀಟಾಗಿ ಪ್ಯಾಂಟು, ಶರಟು ಹಾಕಿಕೊಂಡು, ಒಪ್ಪವಾಗಿ ಕ್ರಾಪು ಬಾಚಿಕೊಂಡು ಭುಜಕ್ಕೆ ಒಂದು ದೊಗಳೆ ಚೀಲವನ್ನೂ ಮತ್ತು ಅಗಲವಾದ ಕನ್ನಡಕವನ್ನೂ ಹಾಕಿಕೊಂಡು, ಒಂದು ಬಾಟಾ ಚಪ್ಪಲಿಯನ್ನು ಹಾಕಿಕೊಂಡು ಬೀದಿಯಲ್ಲಿ ಠಾಕುಠೀಕಾಗಿ ಓಡಾಡುತ್ತಿದ್ದರೆ ಎಲ್ಲರೂ ಕರ್ಣಾಟಕ ಬ್ಯಾಂಕಿನ ಹೊಸಾ ಮಂಗಳೂರು ಮಂದಿ ಎಂದುಕೊಂಡಿದ್ದರು.

ಕೇಶವಶರ್ಮ ಊರಿಗೆ ಬರುವವರೆಗೆ ದೇವಸ್ಥಾನದ ಪ್ರಾಂಗಣದಲ್ಲಿ ನಾಲ್ಕು ಹುಡುಗರು ‘ಅಮರಾ, ನಿರ್ಜರಾ ದೇವಾ’ ಎಂತಲೋ, ‘ರಾಮ: ರಾಮೌ, ರಾಮಾಃ’ ಎಂದೋ ರಾಗವಾಗಿ ಬೆಳಿಗ್ಗೆ, ಸಂಜೆ ಉರುಹೊಡೆಯುವುದನ್ನೇ ಸಂಸ್ಕೃತ ಎಂದು ಊರಿನವರು ತಿಳಿದಿದ್ದರು. ಸುಮಾರು ಇಪ್ಪತ್ತು ವರ್ಷದಿಂದ ಅಲ್ಲಿಯವರೆಗೆ ಹಾಗೇ ಕಲಿಸುತ್ತಿದ್ದ ರಂಗಾಭಟ್ಟರ ಹಳೇ ಶೈಲಿ ಕೇಶವಶರ್ಮ ಬಂದಮೇಲೆ ಪೂರಾ ಬದಲಾಗಿತ್ತು.

ಮೊದಲಿಗೆ, ಸಂಸ್ಕೃತ ಕಲಿಸುವ ಮಾಸ್ತರು ಇನ್ನೂ ಮದುವೆಯಾಗದೇ ಅಷ್ಟು ಚಿಕ್ಕವರಾಗಿರಬಹುದು ಎಂದು ನಾಗಮಂಗಲದವರಿಗೆ ಗೊತ್ತಾದದ್ದೇ ಹೊಸ ವಿಷಯ. ಸಂಸ್ಕೃತವನ್ನು ಬ್ರಾಹ್ಮಣರಲ್ಲದವರೂ ಕಲಿಯಬಹುದೆಂದು ಗೊತ್ತಾದದ್ದೂ ಊರಿಗೆ ಕೇಶವಶರ್ಮ ಬಂದಮೇಲೆಯೇ. ಸ್ವತಃ  ಕೇಶವಶರ್ಮ ತಾನು ಬ್ರಾಹ್ಮಣನೆಂದು ಹೇಳಿಕೊಂಡರೂ ಹತ್ತಿರವೇ ಇದ್ದ ಚುಂಚನಗಿರಿಯ ಕಾಲಭೈರವೇಶ್ವರ ಸಂಸ್ಕೃತ ಪಾಠಶಾಲೆಯ ‘ಇತರೇ’ ಮಾಸ್ತರರುಗಳನ್ನೂ ನಾಗಮಂಗಲಕ್ಕೆ ಆಗಾಗ್ಗೆ ಕರೆಸುತ್ತಿದ್ದ. ಎಲ್ಲರೂ ಮೈಸೂರಿನ ಪಾಠಶಾಲೆಯಲ್ಲಿ ಒಟ್ಟಿಗೆ ಓದಿದವರಂತೆ. ಇವರಲ್ಲಿ ಕೆಲವರು ಹೋತದಗಡ್ಡವನ್ನು ಬಿಟ್ಟಿದ್ದವರಾಗಿದ್ದವರಾದರೆ, ಇನ್ನೂ ಕೆಲವರು ಶರಟನ್ನು ಇನ್‌ಸರ್ಟ್ ಮಾಡಿ ರಾಜಾರೋಷವಾಗಿ ನಾಗಮಂಗಲದ ಬ್ರಾಹ್ಮಣರ ಬೀದಿಗಳಲ್ಲಿ ಸಿಗರೇಟನ್ನು ಸೇದುತ್ತಾ ಕೇಶವಶರ್ಮನ ಮನೆಗೆ ಬಂದುಹೋಗಿ ಮಾಡುತ್ತಿದ್ದರು. ಇವರುಗಳ್ಯಾರೂ ಜನಿವಾರ ಹಾಕುವುದಿಲ್ಲ ಎನ್ನುವುದನ್ನು ವಾಸು ಎದುರುಮನೆಯಿಂದ ಕಣ್ಣಾರೆಕಂಡಿದ್ದ.

ವಾಸುವಿಗೆ ಇನ್ನೂ ಆಶ್ಚರ್ಯವಾದದ್ದೆಂದರೆ, ನಾಗಮಂಗಲದ ಜವಳೀ ಅಂಗಡಿಯ ದಸ್ತಗೀರ ಸಾಹೇಬರ ಮಗಳು ಪರ್ವೀನ್ ಸಂಸ್ಕೃತ ಕಲಿಯಲು ಪ್ರಥಮಾ ಕ್ಲಾಸಿಗೆ ನೋಂದಾಯಿಸಿದ್ದು. ‘ಜೀಯಾತ್ ಗೀರ್ವಾಣವಾಣೀ’ ಎಂದು ಎಂಥದೋ ದೀಕ್ಷೆ ಕೊಡಿಸುವ ರೀತಿಯಲ್ಲಿ ಪಾಠಶಾಲೆಯ ಮುಂದೆ ಎಲ್ಲರ ಮುಂದೆ ಪರ್ವೀನಳಿಂದ ಹೇಳಿಸಿದ ಮೇಲೆ, ರಂಜಾನಿನ ಉಪವಾಸದ ದಿನಗಳಲ್ಲೂ ಪರ್ವೀನ್ ಬೆಳಿಗ್ಗೆ ತಲೆಯಮೇಲೆ ತನ್ನ ದುಪ್ಪಟ್ಟ ಹೊದ್ದು ಅಲ್ಲಾ ಹೋ ಅಕ್ಬರ್‌ಗೆ ತಲೆಯಾನಿಸಿ ಇಲ್ಲಿಗೆ ಬಂದು ‘ಕೇಯೂರಾಣಿ ನ ಭೂಷಯಂತಿ ಪುರುಷಂ’ ಹೇಳುತ್ತಿದ್ದಳು. ಅವಳ ನಾಲಿಗೆಗೆ ಯಾವ ಸಂಸ್ಕೃತವೂ ತೊಡಕಾಗಲೇ ಇಲ್ಲ. ಸಂಸ್ಕೃತದ ಕ್ಲಾಸುಗಳು ಕೇಶವಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಗುತ್ತಿದ್ದುದರಿಂದ ಈ ರೀತಿ ಬೇರೆ ಜಾತಿಯವರು ಬರಬಹುದೇ ಎನ್ನುವ ತಾತ್ವಿಕ ಜಿಜ್ಞಾಸೆಗಳು ದೇವಸ್ಥಾನದ ಕಮಿಟಿಯ ಮೀಟಿಂಗುಗಳಲ್ಲಿ ನಡೆದವು. ಆದರೆ, ಈ ಸಂಸ್ಕೃತ ಪಾಠಶಾಲೆ ಸರಕಾರದ ಅನುದಾನಿತ ಪಾಠಶಾಲೆಯಾದ್ದರಿಂದ, ಸರಕಾರದಿಂದ ದೇವಸ್ಥಾನದ ಈ ಖಾಲಿರೂಮುಗಳು ಬಾಡಿಗೆಯನ್ನು ಪಡೆದುಕೊಳ್ಳುತ್ತಿದ್ದರಿಂದ ಇನ್ನೂ ಹೆಚ್ಚಾಗಿ ದಸ್ತಗೀರ ಸಾಹೇಬರು ಮುನಿಸಿಪಾಲಿಟಿಯ ಮೆಂಬರಾದ್ದರಿಂದ ಯಾರೂ ಹೆಚ್ಚಾಗಿ ಇದರಬಗ್ಗೆ ಮಾತಾಡಲೂ ಹೋಗಿರಲಿಲ್ಲ.

ವಾಸು ಇದ್ದದ್ದು ಸುದೇಷ್ಣಾ ಇದ್ದ ಮನೆಯಿಂದ ಐದುಮನೆ ಆಚೆಗೆ. ಅಲ್ಲಿ ಹಾಗೆಯೇ ಮುಂದೆ ಹೋಗಿ ಕೆರೆಬೀದಿಯ ಕಡೆ ಬಲಕ್ಕೆ ತಿರುಗಿದರೆ ಒಂದು ದೊಡ್ಡ ಸೀತಾಫಲ ಮರ ಕಾಣುತ್ತಿತ್ತು. ಆ ಮರವಿದ್ದುದರಿಂದಲೋ ಏನೋ ಆ ಓಣಿಗೆ ಸೀತಾಫಲ ಓಣಿ ಎಂದೇ ಹೆಸರು. ಆ ಓಣಿಯಲ್ಲಿ ರಾಮಪ್ರಿಯ ಜೋಯಿಸರ ಮನೆಯಲ್ಲಿ ವಾಸುವಿನ ಅಕ್ಕ ಮತ್ತು ವಾಸು ಇಬ್ಬರೇ ಬಾಡಿಗೆಗಿದ್ದರು. ರಾಮಪ್ರಿಯ ಜೋಯಿಸರು ಹೆಂಡತಿ ಸತ್ತ ಮೇಲೆ ತಾವು ಮನೆಯ ಒಂದೆರಡು ರೂಮುಗಳನ್ನು ಬಾಡಿಗೆಗೆ ಕೊಡಬೇಕೆಂದು ನಿರ್ಧರಿಸಿದಾಗ ಈ ಅಕ್ಕ ತಮ್ಮಂದಿರಿಗೆ ನಿರಾತಂಕವಾಗಿ ಬಾಡಿಗೆಗೆ ಮನೆ ಕೊಡಬಹುದೆಂದು ಏನೂ ಯೋಚನೆಮಾಡದೆ ಮನೆ ಬಾಡಿಗೆಗೆ ಕೊಟ್ಟಿದ್ದರು. ಅಮ್ಮ ಅಪ್ಪ ಇಬ್ಬರನ್ನೂ ಊರಲ್ಲಿ ಬಿಟ್ಟು ನಾಗಮಂಗಲದ ಹೆಣ್ಣುಮಕ್ಕಳ ಹೈಸ್ಕೂಲಿನಲ್ಲಿ ವ್ಯಾಯಾಮ ಶಿಕ್ಷಕಿಯಾಗಿದ್ದ ಉಮಾ ವಾಸುವಿನ ಅಕ್ಕ. ಇಪ್ಪತ್ತೆಂಟರ ಸುಮಾರಿನವಳು. ‘ಬರೇ ಹುಡುಗಿಯರಿಗೆ ಲೇಜಿಯಮ್ಸ್, ಡಂಬೆಲ್ಸ್ ಹೇಳಿಕೊಡುತ್ತಾ ಅಥವಾ ಫೋರ್ ಥ್ರೀ ನೆಕ್ಸ್ಟ್ ಚೇಂಜ್ ಹೇಳುತ್ತಲೇ ನಿನ್ನ ಆಯಸ್ಸು ಕಳೆದುಬಿಡುತ್ತೀಯೇ ಹುಡುಗಿ’ ಎಂದು ರಾಮಪ್ರಿಯ ಜೋಯಿಸರು ಹಲುಬಿಕೊಳ್ಳುತ್ತಿದ್ದರು. ಅವಳಿಗೊಂದು ಮದುವೆ ಮಾಡಿಬಿಡಬೇಕೆಂದು ತಮಗೆ ಗುರುತಿದ್ದವರ ಬಳಿಯಲ್ಲೆಲ್ಲಾ ಉಮಾಳ ಬಗ್ಗೆ ಹೇಳಿಕೊಂಡು ಬಂದಿದ್ದರು. ಆದರೆ, ಈಕೆ ಒಂದು ಅಗಲವಾದ ಸ್ಟಿಕರ್ ಕುಂಕುಮವನ್ನಿಟ್ಟು, ತೆಳ್ಳಗಾಗುತ್ತಿದ್ದ ಮುಂದಲೆಯನ್ನು ಮುಚ್ಚಿವಂತೆ ಕೂದಲನ್ನು ಬಾಚಿ ಹಿಂದಿಂದ ತುರುಬುಕಟ್ಟಿ, ಮುಖಕ್ಕೆ ತೆಳ್ಳಗಿನ ಟಾಲ್ಕಮ್ ಪೌಡರ್ರು ಮತ್ತು ಒದ್ದೊದ್ದೆಯಾದ ಕುಬುಸದ ಕಂಕುಳು ಕಾಣಿಸಿಕೊಳ್ಳುತ್ತಾ, ಬಾಯಲ್ಲೊಂದು ಲೋಹದ ಸೀಟಿಯನ್ನು ಸಿಕ್ಕಿಸಿ ಊದುತ್ತಾ ಗಾಂಧಿಭವನದ ಪಕ್ಕದಲ್ಲಿದ್ದ ಆವರಣದಲ್ಲಿ ಹುಡುಗಿಯರಿಗೆ ಖೋ ಖೋ ಆಡಿಸುತ್ತಿದ್ದಳು. ಬೆಳಿಗ್ಗೆ ಒಂಭತ್ತೂವರೆಗೆ ಗಾಂಧಿಭವನದ ಮುಂದೆ ವಾಕಿಂಗ್ ಹೋದರೆ, ಇತ್ತ ಸಂಸ್ಕೃತ ಪಾಠಶಾಲೆಯಿಂದ ಕೇಳುವ ‘ವಜ್ರಾದಪಿ ಕಠೋರಾಣಿ’ಗೆ ಹಿಮ್ಮೇಳವಾಗಿ ಹುಡುಗಿಯರ ಲೇಜಿಮ್ಸ್‌ಗಳ ಝಣಝಣ ಮತ್ತು ಉಮಾ ಟೀಚರಿನ ಸೀಟಿಯ ಸದ್ದು ಒಂದು ಹೊಸ ಲಯವನ್ನು ನಾಗಮಂಗಲದ ಜನಕ್ಕೆ ಕೊಡುತ್ತಿತ್ತು. ಕೇಳಿದವರು, ನೋಡಿದವರು ಹಾಗೆಯೇ ತಮ್ಮ ನಡುಗೆಯ ವೇಗವನ್ನು ನಿಧಾನಿಸುತ್ತಿದ್ದರು.  ಕಾಟನ್ ಸೀರೆ ಉಟ್ಟು, ಒಂದು ಬಿಳೀ ಕ್ಯಾನ್‌ವಾಸ್ ಶೂ ಹಾಕಿಕೊಂಡು ಹುಡುಗಿಯರನ್ನು ಬಯಲಲ್ಲಿ ಡ್ರಿಲ್ ಮಾಡಿಸುವುದು, ಮನೆಗೆ ಬಂದು ಸೌಂದರ್ಯಲಹರಿ ಓದುವುದನ್ನು ಬಿಟ್ಟರೆ ಬೇರೆ ಏನೂ ಮಾಡದೇ ಇರುವ ಅಕ್ಕ, ಶಾಪಗ್ರಸ್ತ ದೇವತೆಯ ಹಾಗೆ ವಾಸುವಿಗೆ ಕಾಣುತ್ತಿದ್ದಳು.

ವಾಸು ಪಿಯುಸಿಯ ಸಿಲಬಸ್ಸಾದ ಕಂಡೆಂಸರಿನ ಸರ್ಕ್ಯುಟು, ಓಮ್ಸ ಲಾ ಇತ್ಯಾದಿಗಳನ್ನು ಉರುಹೊಡೆದು ಸುದೇಷ್ಣಾಳನ್ನು ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಿದ್ದ. ‘ಲಾ ಆಫ್ ಟ್ರಿಯಾಂಗಲ್ ಆಫ್ ಫೋರ್ಸಸ್’ ಅನ್ನು ರಾಮಚಂದ್ರರಾಯರ ಫಿಸಿಕ್ಸ್ ಪುಸ್ತಕದಲ್ಲಿ ಕೊಟ್ಟಂದಿಕ್ಕಿಂತಲೂ ಹೆಚ್ಚಾಗಿ ಊರಿಗೆ ಊರೇ ಕೇಳುವಂತೆ ತನ್ನ ಮನೆಯ ಜಗುಲಿಯ ಮುಂದೆ ಕೂತು ಓದುತ್ತಿದ್ದ. ಕೊಡಚಾದ್ರಿಯ ಶಿಖರಗಳನ್ನು ಎಣಿಸಿಕೊಂಡು ಕನ್ನಡಶಾಲೆಗೆ ಹೋಗಿದ್ದ, ಕಾರಂತರ ಕಾದಂಬರಿಗಳನ್ನು ಮಾತ್ರ ಓದಿದ್ದ ಸುದೇಷ್ಣಾಳಿಗೆ ಅದ್ಯಾವ ಮಾಯದಲ್ಲಿ ಸೈನ್ಸ್ ತೆಗೆದುಕೊಂಡು ಇಂಜಿನಿಯರಿಂಗಿಗೆ ಹೋಗಬೇಕಂತ ಅನಿಸುತ್ತೋ ಅಥವಾ ಕೇಶವ ಶರ್ಮ ಬಲವಂತ ಮಾಡಿದ್ದನೋ, ಸಂಸ್ಕೃತ ಶಾಲೆಯ ನೋಂದಾವಣೆಯ ಜತೆಗೂ ನಾಗಮಂಗಲದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿಯೂ ಸುದೇಷ್ಣಾಳ ನೋಂದಾವಣಿ ಪಿಸಿಎಂಬಿಯಲ್ಲಿ ಆಗೇಹೋಗಿತ್ತು. ವಾಸು ಈ ಬಾರಿ ಬೆಳಗ್ಗಿಂದ ಸಂಜೆಯವರೆಗೆ ಟ್ಯೂಷನ್ನಿದ್ದಾಗ್ಯೂ ಸಂಸ್ಕೃತ ಕ್ಲಾಸಿನ ಕಾವ್ಯ ಪರೀಕ್ಷೆಗೆ ಕಟ್ಟಿದ. ಇಷ್ಟರ ನಡುವೆ ಹೊಸದಾಗಿ ಉಪನಯನವಾಗಿದ್ದರಿಂದ ತನ್ನ ಸೈಕಲ್ ಮೇಲೆ ಒಂದು ಮುಂಡುಪಂಚೆಯನ್ನು ಉಟ್ಟುಕೊಂಡು ಸೀತಾಫಲದ ಮರದಾಟಿ ಮೂಲೆ ನಾಗೇಶಶಾಸ್ತ್ರಿಯ ಮನೆಗೆ ಸಂಧ್ಯಾವಂದನೆಗೆ ಕಲಿಯಲು ಹೋಗುವ ಮುನ್ನ ತನ್ನೆದೆಯ ಮೇಲಿದ್ದ ಮೂರೇ ಮೂರು ಕೂದಲನ್ನು ಮುಚ್ಚಿಕೊಳ್ಳಲು ವ್ಯರ್ಥಪ್ರಯತ್ನ ಮಾಡುತ್ತಿದ್ದ. ಸುದೇಷ್ಣಾಳ ಮನೆಯ ಮುಂದೆ ಹೋದಾಗ ಆಕೆ ಕಿಸಕ್ಕನೆ ನಕ್ಕಾಗ ತನ್ನ ಎದೆಯ ಮೇಲಿನ ಆ ಮೂರು ಕೂದಲಿಗೆ ಥ್ಯಾಂಕ್ಸ್ ಹೇಳುತ್ತಿದ್ದ.

ಸುದೇಷ್ಣಾಳ  ಯಾವಾಗಲೂ ಒಂದು ರೀತಿ ವಿಚಿತ್ರವಾದ ಉಡುಗೆಯನ್ನು ತೊಟ್ಟಿರುತ್ತಿದ್ದಳು. ಅದರ ಹೆಸರು ಕಟ್‌ಮ್ಯಾಕ್ಸಿಯಂತೆ. ಅವರ ಊರಕಡೆ ಇದು ತುಂಬಾ ಜನಪ್ರಿಯವಾದ ಉಡುಗೆಯಂತೆ. ಆದರೆ, ನಾಗಮಂಗಲದವರಿಗೆ ಇದೊಂದು ಹೊಸಾ ಫ್ಯಾಷನ್. ಕಟ್‌ಮ್ಯಾಕ್ಸಿಯೆಂದರೆ, ಇತ್ತಕಡೆ ಉದ್ದಲಂಗವೂ ಅಲ್ಲ, ಇತ್ತಕಡೆ ಮ್ಯಾಕ್ಸಿಯೂ ಅಲ್ಲ. ಉದ್ದಲಂಗದತರವೇ ಇದ್ದರೂ ನೆರಿಗೆಯಿಲ್ಲದೇ ನೇರವಾಗಿ ಮುಂಡುಪಂಚೆಯ ಸೊಂಟಕ್ಕೆ ಹುಕ್ಸ್ ಹಾಕಿದಹಾಗೆ ಕಾಣುತ್ತಿತ್ತು. ಗಾಢವಾದ ಬಣ್ಣಗಳ, ಚಿರತೆಮೈ, ನವಿಲುಗರಿಯ ಡಿಸೈನುಗಳು ಯಾವ ನೆರಿಗೆ ಮಡಿಕೆಗಳಿಲ್ಲದೆ ಸುದೇಷ್ಣಾ ಓಡಾಡಿದಷ್ಟೂ ತಾವೂ ಹರಿದಾಡುತ್ತಿದ್ದವು. ಅದರ ಮೇಲೆ, ಹಾಕುತ್ತಿದ್ದ ಬ್ಲೌಸು ಹೆಣ್ಣುಮಕ್ಕಳ ಸ್ಕೂಲ್ಲಿನ ಯೂನಿಫಾರ್ಮಿನ ಅಂಗಿಯ ತರವೇ ಇದ್ದು, ಕೊಂಚ ಕೈಮೇಲೆತ್ತಿದಾಗ ಮೇಲೆ ಸರಿದು ಒಂದಿಂಚು ಬತ್ತಲು ಬೆನ್ನು ಕಂಡರೂ, ಈಕೆ ಇತರೇ ಹುಡುಗಿಯರ ತರಹ ಭುಜದಿಂದ ಕಾಲತನಕ ಇಳಿಯುವ ಪೆಟ್ಟಿಕೋಟು  ಹಾಕಿಲ್ಲ. ಹುಕ್ಸ್‌ನಿಂದ ಮೇಲೆ ಒಂದಿಷ್ಟು ಜಾಗ ಖಾಲಿಯಿದೆ ಎಂಬ ಕಲ್ಪನೆಯಿಂದಲೇ ವಾಸು ಪುಳಕಿತನಾಗುತ್ತಿದ್ದ. ಕೊಡಚಾದ್ರಿಯ ಬುಡದ ಯಾವ ಊರಿನಲ್ಲಿಯೂ ಹುಡುಗಿಯರು ಹೀಗೆ ಡ್ರೆಸ್ ಮಾಡುವುದಿಲ್ಲ ಎಂದು ತನ್ನ ಸ್ನೇಹಿತರ ಹತ್ತಿರ ಬೆಟ್ ಕಟ್ಟಿದ್ದ.

ಒಂದು ದಿನ ವಾಸು ವೆಂಕಟೇಶ್ವರ ಟಾಕೀಸಿನಲ್ಲಿ ಮಧ್ಯಾಹ್ನ ಮ್ಯಾಟಿನಿ ಸಿನೆಮಾ ನೋಡಲು ಹೋಗಿದ್ದ. ಇವನ ಹಿಂದೆ ಸಾಲಿನಲ್ಲಿ ಯೋಗಾನರಸಿಂಹ ಸ್ವಾಮಿಯ ದೇವಸ್ಥಾನದ ಅರ್ಚಕರಾದ ಗರುಡಯ್ಯಂಗಾರರೂ ಬಂದಿದ್ದರು. ಗರುಡಯ್ಯಂಗಾರರಿಗೆ ದೇವರ ಪೂಜೆ ಬಿಟ್ಟರೆ ಇದ್ದದ್ದು ಸಿನೆಮಾ ಹುಚ್ಚು. ದೇವಸ್ಥಾನದ ಪ್ರಾಕಾರದಲ್ಲಿದ್ದ ಒಣಗಿದ ಮರ ಹೇಗೆ ವರ್ಷವರ್ಷ ಬೆಳೆಯುತ್ತಿದೆಯೆಂದೂ ಪುರಾವೆ ಸಹಿತ ಹೇಳುತ್ತಿದ್ದಷ್ಟೇ ಆಸ್ಥೆಯಿಂದ ಎಂಥ ಸಿನೆಮಾ ನೋಡಲಿ ಅದರಿಂದ ಕಲಿಯಬಹುದಾದ ನೀತಿ ಬಹಳ ಇದೆ ಎಂದೂ ದೇವಸ್ಥಾನಕ್ಕೆ ಬಂದವರಿಗೆಲ್ಲಾ ಅವರು ಉದಾಹರಣೆ ಸಮೇತ ಅವರು ವಿವರಿಸುತ್ತಿದ್ದರು. ಪ್ರತಿಯೊಬ್ಬರಿಗೂ ತೀರ್ಥ, ಪ್ರಸಾದ ಕೊಟ್ಟಾದ ಮೇಲೆ ‘ವೆಂಕಟೇಶ್ವರಕ್ಕೆ ಹೋಗಿದ್ದರಾ’ ಎಂತಲೇ ಮಾತಿಗೆಳೆಯುತ್ತಿದ್ದರು. ಅವರ ಈ ಸಿನೆಮಾ ನೀತಿ ಪಾಠಗಳು ಬಹಳ ರಸವತ್ತಾಗಿರುವುದರಿಂದ ಊರವರೆಲ್ಲರೂ ಅವರನ್ನು ಯಾವುದೇ ಹೊಸಾ ಸಿನೆಮಾ ಬಂದರೂ ‘ಗರುಡಯ್ಯಂಗಾರರೇ ಹ್ಯಾಗಿತ್ತು ಸಿನೆಮಾ’ ಎಂದು ಬೇಕಂತಲೇ ಮೇಲೆ ಬಿದ್ದು ಕೇಳುತ್ತಿದ್ದರು. ‘ಅಯ್ಯೋ, ಹೋಗ್ರೋ ಮುಂಡೇವಾ. ನಿಮ್ಗೆ ಅರ್ಥ ಆಗದೇ ಇರೋದು ಏನಿರುತ್ತೆ. ಆದರೂ ನೀವು ಕೇಳ್ತಿದೀರಿ ಅಂತ ಹೇಳ್ತೀನಿ, ನಾನು. ಈಗ ಆ ಬೂತಯ್ಯನ ಸಿನೆಮಾ ತಗೊಳ್ಳಿ ಅಲ್ಲಿ ಏನು ಹೇಳ್ತಾನಪ್ಪಾ ಅಂದ್ರೆ, ದ್ವೇಷಾ ಸಾಧಿಸಿದ್ರೆ, ಉಪ್ಪಿನಕಾಯಿ ಸಮೇತ ಎಲ್ಲಾ ನಾಶವಾಗಿಹೋಗುತ್ತೆ’ ಎಂತಲೋ, ಅಥವಾ ಡೈಮಂಡ್ ರಾಕೆಟ್ ನೋಡಿದ ನಂತರ ‘ನಂ ರಾಜಕುಮಾರ ನೋಡ್ರೋ, ಓದಿದ್ದು ಮೂರನೇ ಕ್ಲಾಸಾದರೂ ಇಂಗ್ಲಿಶ್‌ನಲ್ಲಿ ಹಾಡು ಹೇಳ್ತಾನೆ. ಆ ನಿಜವಾದ ಜೇಮ್ಸ್ ಬಾಂಡಿಗೂ ಹಾಡು ಹೇಳಕ್ಕೆ ಬರುತ್ತಾ’ ಎಂದು ಕೇಳಿ ಸುಮ್ಮನಾಗಿಸುತ್ತಿದ್ದರು.

ಅವರು ಅಂದು ಆ ಸಿನೆಮಾಕ್ಕಿದ್ದಿದ್ದ ಜನಜಂಗಳಿಯನ್ನು ನೋಡಿ ವಾಸುವಿಗೆ ಮೆಲ್ಲಗೆ ‘ಮಗೂ’ ಎಂದರು. ವಾಸು ಹಿಂದೆ ತಿರುಗಿದಾಗ, ಎರಡು ಮುಷ್ಟಿಯಲ್ಲಿಯೂ ಚಿಲ್ಲರೆಯನ್ನು ಹಿಡಿದು ಅವನಿಗೆ ಕೊಟ್ಟು ‘ನನಗೊಂದು ಟಿಕೀಟು ತಾ’ ಎಂದರು. ಈ ಚಿಲ್ಲರೆ ನಾಣ್ಯಗಳನ್ನು ನೋಡಿದ ತಕ್ಷಣ ಅದು ಎಲ್ಲಿಂದ ಬಂದಿತೆಂದು ಊಹಿಸುವುದಕ್ಕೆ ವಾಸುವಿಗೆ ಬಹಳ ಸಮಯ ಬೇಕಾಗಲಿಲ್ಲ. ವಾಸು ಇವರ ಸಿನೆಮಾ ಹುಚ್ಚು ನೋಡಿ ಮನಸ್ಸಿನೊಳಗೇ ನಗುತ್ತಾ ಚಿಲ್ಲರೆ ಇಸಕೊಳ್ಳಲು ಕೈಯೊಡ್ಡಿದ. ಕೈ ತಪ್ಪಿ ಅಷ್ಟೂ ಚಿಲ್ಲರೆ ನೆಲದ ಮೇಲೆ ಬಿತ್ತು. ಆರಿಸಿಕೊಳ್ಳಲೆಂದು ವಾಸು ಬಗ್ಗಿದಾಗ ಯುಗಾಂತರಗಳಿಂದ ಪರಿಚಯವಿದೆಯೇನೋ ಅನ್ನಿಸುವ ಕಟ್‌ಮ್ಯಾಕ್ಸಿಯ ಕೆಳಗಿನ ಪಾದ ಕಣ್ಣಿಗೆ ಬಿತ್ತು. ಉಂಗುಷ್ಠದ ಉಗುರು ಕಮಾನಿನಂತೆ ಕತ್ತರಿಸಿದ್ದು, ಯಾವ ಬಣ್ಣವೂ ಇಲ್ಲದೆ ಸಪಾಟಾಗಿತ್ತು. ಉಗುರಿನ ಕೆಳಗೆ ಕಾಣುವ ದೃಷ್ಟಿಬೊಟ್ಟಂತಿದ್ದ ಒಂಚೂರು ಕಪ್ಪುಕೊಳೆಯ ಗೀಟು ಬಿಟ್ಟರೆ ಎಲ್ಲ ಕಾಲ್ಬೆರಳುಗಳೂ ಸುಂದರ. ಚಪ್ಪಲಿಯಿಲ್ಲದ ಬರೇ ಪಾದವನ್ನು ಅಂದು ವಾಸು ಮೊದಲ ಬಾರಿಗೆ ತೀರ ಹತ್ತಿರದಿಂದ ಕಂಡ. ಈಗತಾನೆ ಎಂತದೋ ಶುಭಕಾರ್ಯ ಮುಗಿಸಿದ್ದ ಕುರುಹೋ ಎಂಬಂತೆ ಹಿಮ್ಮಡಿಗೆ ಮದರಂಗಿ, ಉಂಗುಷ್ಠಕ್ಕಿಂತ ಕೊಂಚೇಕೊಂಚ ಉದ್ದವಾದ ಮಧ್ಯದ ಬೆರಳು, ಮುಂಗಾಲ ಮೇಲೆ ಮುದುಡಿ ಹಿಡಕೊಂಡಿರೋ ಕಟ್‌ಮ್ಯಾಕ್ಸಿ, ಕಾಲಿನ ಬದಿಯ ಮೂಳೆಯ ಮೇಲೆ ಕೊಂಚ ಉಬ್ಬಿದ್ದ ಕಪ್ಪಾದ ತರಿತರಿಯ ಡುಬ್ಬ, ಒಮ್ಮೆ ಮುಟ್ಟೋಣವೆನ್ನಿಸಿತು. ಇದೇ ವೆಂಕಟೇಶ್ವರ ಟಾಕೀಸಿನಲ್ಲಿ ನೋಡಿದ ಎಷ್ಟೋ ಸಿನೆಮಾದಲ್ಲಿ ನಾಯಕರು ಮಾಡಿದ ತರ, ಆದರೆ ಧೈರ್ಯ ಬರಲಿಲ್ಲ. ಧೈರ್ಯ ತೆಗೆದುಕೊಂಡು ನಡುಗುವ ಕೈಬೆರಳಿನಿಂದ ಪಾದವನ್ನು ಮುಟ್ಟಲು ಹೋದಾಗ… …

ಪಕ್ಕದಲ್ಲಿದ್ದ ಇನ್ನೊಂದು ಜತೆ ಪಾದಗಳ ಟ್ರಾಟ್ ಚಪ್ಪಲಿ ಪಟಪಟ ಸಪ್ಪಳ ಮಾಡಿತು. ಅಲ್ಲಿ ಇಲ್ಲಿ ನಾಲ್ಕು ಪಾದಗಳು ತಿರುಗಾಡಿದ್ದಷ್ಟೇ, ಸುದೇಷ್ಣಾ ಬಗ್ಗಿದಳು. ತಾನೂ ಹೆಕ್ಕಿದಳು, ನಾಲ್ಕಾಣೆ, ಹತ್ತುಪೈಸ, ಎಂಟಾಣೆ.. ಇಪ್ಪತ್ತು ಪೈಸ.. ಹೌದು, ಇಪ್ಪತ್ತು ಪೈಸ. ಗಾಂಧಿತಾತ ಸ್ವಸ್ಥ ಕೂತು ನಗುತ್ತಿದ್ದ ಹಿತ್ತಾಳೆ ನಾಣ್ಯ.. ಎಲ್ಲವನ್ನೂ ಹೆಕ್ಕಿದಳು. ಕೈಗೆ ಕೊಟ್ಟಾಗ ನಕ್ಕಳಾ.. ಗೊತ್ತಾಗಲಿಲ್ಲ.

‘ಥ್ಯಾಂಕ್ಸ್ ರೀ..’

‘ಮೆನ್ಶನ್ ನಾಟ್..’

ಅಂದೇ ವಾಸು ಅದೇ ವೆಂಕಟೇಶ್ವರ ಟಾಕೀಸಿನಲ್ಲಿ ‘ಮಲ್ಲಿಗೆ ಸಂಪಿಗೆ’ ಟಿಕೀಟನ್ನು ಗರುಡಯ್ಯಂಗಾರರಿಗೆ ಬೊಗಸೆಯಲ್ಲಿರಿಸುತ್ತಾ ಎರಡೂ ಕೈ ಹಿಡಿದು ಪ್ರತಿಜ್ಞೆ ಮಾಡಿದ್ದ. ತಾನು ಕಾಲುಂಗುರ ಹಾಕಿದರೆ, ಆ ಉದ್ದದ ಮಧ್ಯದ ಬೆರಳಿಗೇ ಹಾಕುವುದು, ಎಂದು.

ಗರುಡಯ್ಯಂಗಾರರು ಎಲ್ಲಾ ಅರ್ಥವಾದಹಾಗೆ ನಕ್ಕರು.

ಸಂಸ್ಕೃತ ಪಾಠಶಾಲೆಯಲ್ಲಿ ಅಂದು ಎಲ್ಲಾ ಬೇರೆ ಶಾಲೆಗಳಲ್ಲಿರುವಂತೆ ವಾರ್ಷಿಕೋತ್ಸವ. ವಾರ್ಷಿಕೋತ್ಸವಕ್ಕೆ ಭಾಸನ ‘ಕರ್ಣಭಾರಮ್’ ನಾಟಕ ಮಾಡಿಸಬೇಕೆಂದು ನಿರ್ಧರಿಸಿಯಾಗಿತ್ತು. ವಾಸುವಿಗೆ, ಶಲ್ಯರಾಜನ ಪಾತ್ರ. ನಾಟಕದಲ್ಲಿ ಶಲ್ಯರಾಜ ಕರ್ಣನನ್ನು ಒಂದೇಸಮನೆ ಹೀಯಾಳಿಸುವುದು, ಯುದ್ಧದಲ್ಲಿ ನೀನು ಖಂಡಿತಾ ಸೋತೇಹೋಗುತ್ತೀಯ, ಸುಮ್ಮನೇ ಯಾಕೆ ಯುದ್ಧ ಮಾಡುತ್ತೀಯ ಎಂದು ಇನ್ನಿಲ್ಲದ ಹಾಗೆ ತೇಜೋವಧೆ ಮಾಡುವ ಪಾತ್ರ. ಕನ್ನಡ ಟೀಚರ್ ಮಗ ಪ್ರಶಾಂತನದು ಕರ್ಣನ ಪಾತ್ರ. ವಾಸುವಿನ ಪಾತ್ರಕ್ಕೆ ಅದೇಕೋ ಗೊತ್ತಿ ಒಂದಿಷ್ಟು ಹಾಸ್ಯರಸವಿರಬೇಕೆಂದು ಕೇಶವಶರ್ಮ ನಿರ್ಧರಿಸಿದ್ದ. ಒಂದು ಹಂತದಲ್ಲಿ ನಾಲ್ಕೈದು ಬಾರಿ ‘ತತಸ್ತತಃ’ ಎಂದು ಸಂಭಾಷಣೆ ಹೇಳುವ ಸಂದರ್ಭದಲ್ಲಿ ಕಣ್ಣು ಕತ್ತನ್ನು ಕೊಕ್ಕರೆಯ ಹಾಗೆ ಮುಂದೆ ಹಿಂದೆ ಉಳುಕಾಡಿಸಬೇಕೆಂದು ಹೇಳಿದ್ದ. ಸಂಭಾಷಣೆಯೆಲ್ಲವೂ ಸಂಸ್ಕೃತದಲ್ಲಿಯೇ ಇರುವುದರಿಂದ ಬಂದ ಜನಕ್ಕೆ ಕೊಂಚವೂ ನಾಟಕ ಅರ್ಥವಾಗುವುದಿಲ್ಲ, ಇಂಥ ಅಂಗಚೇಷ್ಟೆಗಳಿದ್ದರೆ ನಾಟಕಕ್ಕೆ ಕೊಂಚವಾದರೂ ಕಳೆಕಟ್ಟುವುದೆಂದು ಕೇಶವಶರ್ಮನ ವಾದ. ಹೇಗೆ ಯೋಚಿಸಿದರೂ ವಾಸುವಿಗೆ ಕರ್ಣನ ಮತ್ತು ಶಲ್ಯರಾಜನ ನಡುವಿನ ಸಂಭಾಷಣೆಯಲ್ಲಿ ಹಾಸ್ಯ ನುಸುಳಿಬರಬಹುದು ಅದೂ ಯುದ್ಧದ ಮಧ್ಯದಲ್ಲಿ ಎಂದನಿಸಿರಲಿಲ್ಲ. ಆದರೆ, ಈ ನಾಟಕವನ್ನು ಆಡಲೇಬೇಕಾಗಿ ಬಂದಿದ್ದರಿಂದ ಕಣ್ಣು, ಕುತ್ತಿಗೆಯನ್ನು ಹಿಂದೆ ಮುಂದೆ ತಿರುಗಿಸಿ ಸುಸ್ತುಹೊಡೆದಿದ್ದ.

ಏಕಾಂಕ ನಾಟಕವಾದರೂ ಕೇಶವಶರ್ಮ ನಾಟಕವನ್ನು ಅದ್ದೂರಿಯಾಗಿಯೇ ಮಾಡಬೇಕೆಂದು ಹತ್ತಿರದ ಕಾಳಮುದ್ದನದೊಡ್ಡಿಯಿಂದ ಸ್ಟೇಜು ಮತ್ತು ಹಿಂದಣ ಯುದ್ಧದ ಸೀನಿದ್ದ ಬಣ್ಣಬಣ್ಣದ ಸೀನರಿಯನ್ನು ತರಿಸಿದ್ದ. ಜತೆಗೆ, ದೇವನಾಗರಿ ಲಿಪಿಯಲ್ಲಿ ಮತ್ತು ಕನ್ನಡದಲ್ಲಿ ‘ಜೀಯಾತ್ ಗೀರ್ವಾಣವಾಣೀ’ ಎಂದು ಬರೆಸಿದ್ದ, ಕೂಡ. ಮೇಕಪ್‌ಗೆಂದು ಊರಿನ ಕಲಾರಂಗದ ಮೇಕಪ್‌ಮ್ಯಾನ್ ಪಾಂಡುರಂಗ ಬಂದು ಮೇಕಪ್ ಮಾಡುವುದು ಎಂದು ನಿರ್ಧಾರವಾಗಿತ್ತು. ಕಲಾರಂಗದ ಪಾಂಡುರಂಗನ ಮೇಕಪ್ ಎಂದರೆ, ಮುಂದೆ ಕೂತವರಿಗೆಲ್ಲಾ ಹೆಣ್ಣುಗಂಡೆಂಬ ಬೇಧವಿಲ್ಲದೇ ಎಲ್ಲರಿಗೂ ಒಂದಷ್ಟು ರೋಸ್ ಮತ್ತು ದಟ್ಟವಾದ ಲಿಪ್‌ಸ್ಟಿಕ್ಕನ್ನು ಹಚ್ಚಿ, ಕೆನ್ನೆಯ ಮೇಲೆ ಕೂದಲಿರುವ ಮಚ್ಚೆ, ಕಣ್ಣಿಗೆ ಎದ್ದುಕಾಣುವ ಕಾಡಿಗೆ, ಪೊದೆಮೀಸೆ, ಜಟೆ ಮತ್ತು ದಾರದಿಂದ ಇಳಿದಾಡುವ ನರೆತಗಡ್ಡ ಇವುಗಳ ಮೇಲೆ ಪಾತ್ರಗಳಿಗೆ ರೂಪುಕೊಡುತ್ತಿದ್ದ. ನಾಟಕದ ನಂತರ ಮೇಕಪ್ ತೆಗೆಯಬೇಕೆಂದರೆ ಅದು ದೊಡ್ಡ ರಗಳೆ. ಚೆನ್ನಾಗಿ ಕೊಬ್ಬರಿ ಎಣ್ಣೆ ಹಚ್ಚಿ ಮೂರುಮೂರು ಬಾರಿ ಉಜ್ಜಿದರೂ ಹೋಗದೇ ರಾಡಿಯಾಗಿ ಮೂರ್ಮೂರು ದಿನ ಮೇಕಪ್‌ನಲ್ಲಿಯೇ ಜನಗಳು ಊರಿಡೀ ಓಡಾಡುವುದನ್ನು ಕೇಳಿ ನೋಡಿ ವಾಸು ಹುಷಾರಾಗಿದ್ದ.

ಸುದೇಷ್ಣಾ ತಾನು ಊರಲ್ಲಿ ಯಕ್ಷಗಾನಕ್ಕೆ ಮೇಕಪ್ ಮಾಡಿ ಗೊತ್ತಿರುವುದರಿಂದ ತಾನೂ ಮೇಕಪ್‌ಗೆ ಸಹಾಯಮಾಡಬಲ್ಲೆ ಎಂದು ಹೇಳಿದ್ದನ್ನು ಕೇಳಿ ವಾಸು ಮತ್ತೊಮ್ಮೆ ಪುಳಕಿತನಾಗಿದ್ದ. ಅಂದು ವಾರ್ಷಿಕೋತ್ಸವಕ್ಕೆ ಅಕ್ಕನೂ ಬಂದಿದ್ದಳು. ಮೊದಲ ಬಾರಿಗೆ ಸುದೇಷ್ಣಾ ಸೀರೆ ಉಟ್ಟಿದ್ದನ್ನು ವಾಸು ನೋಡಿದ್ದ. ಗಾಢವಾದ ನೇರಿಳೆ ಬಣ್ಣದ ಸೀರೆಯ ಮೇಲೆ ನೆಲ್ಲಿಕಾಯಿ ಬಣ್ಣದ ಹೂವುಗಳು. ಅದಕ್ಕೊಪ್ಪುವ ಒಂದು ಲೂಸುಲೂಸಾದ ಬ್ಲೌಸು. ಮಧ್ಯೆ ಅಕ್ಕ ಒಂದೆರಡು ಬಾರಿ ಸುದೇಷ್ಣಾಳನ್ನು ಒಳಗೆ ಕರೆದು ಸೀರೆಯ ನೆರಿಗೆಯನ್ನು ಸರಿಮಾಡಿ ನೆರಿಗೆಗೆ ಮತ್ತು ಸೆರಗಿಗೆ ಒಂದು ಪಿನ್ ಹಾಕಿದ್ದನ್ನು ವಾಸು ಕಳ್ಳಗಣ್ಣಿನಿಂದ ನೋಡಿದ್ದ. ನೆರಿಗೆಗಳನ್ನು ದೊಡ್ದ ಹೆಂಗಸಂತೆ ಸೊಂಟಕ್ಕೆ ಸಿಗಿಸಿ, ಸ್ಟೇಜು ಕಟ್ಟುವುದು, ಪರದೆ ಇಳಿಯುತ್ತದೆಯೋ ಇಲ್ಲವೋ ಎಂದು  ನೋಡುವುದು, ನಾಟಕದ ಸ್ಟೇಜಿನ ಮೇಲೆ ರಂಗೋಲಿ ಹಾಕುವುದು, ಒಂದು ಮೂಲೆಯಲ್ಲಿ ದೊಡ್ಡ ದೀಪದ ಕಂಬವನ್ನು ಸರಿಯಾಗಿ ಇಡುವುದು-ಹೀಗೆ ಹಲವು ಹತ್ತು ಕೆಲಸಗಳಲ್ಲಿ ಸುದೇಷ್ಣಾ ತನ್ನನ್ನು ತೊಡಗಿಸಿಕೊಂಡಿದ್ದಳು.

ಮೇಕಪ್ ಸಮಯ ಬಂದಾಗ ಒಂದು ರೌಂಡ್ ಮೇಕಪ್ಪನ್ನು ಪಾಂಡುರಂಗ ಹಚ್ಚಿದ್ದ. ಎಲ್ಲರೂ ಪಾಂಡುರಂಗನಿಗೆ ಮುಖಕೊಟ್ಟು ಕೂತಿದ್ದರು. ಆ ಕೆನ್ನೆಗೆ ಹಚ್ಚುವ ರೋಸಿನ ಮಿಶ್ರಣ ಹೆಚ್ಚುಕಮ್ಮಿಯಾಯಿತೋ ಗೊತ್ತಿಲ್ಲ, ವಾಸುವಿನ ಕಣ್ಣ್ಣು ಕೆಂಪಾಯಿತು. ಭಗ ಭಗ ಉರಿತಡೆಯಲಾರದೇ ವಾಸು ಕಣ್ಣು ಮುಚ್ಚಿಕೊಂಡ. ಪಾಂಡುರಂಗ ತನ್ನ ದೊಡ್ಡದನಿಯಿಂದ ‘ಈ ರೋಸನ್ನು ಮುಖಕ್ಕೆ ಹಚ್ಚಬೇಕಾದರೆ, ಕೊನೆಯ ಮೂರುಬೆರಳುಗಳನ್ನು ಬಳಸಬೇಕು. ಕೊಂಚವೇ ಅದ್ದಿ, ಒಂದು ಬೊಟ್ಟನ್ನು ಕೆನ್ನೆಯ ಉಬ್ಬಿದ ಮೂಳೆಯ ಎರಡೂ ಕಡೆ ಇಟ್ಟು ನಿಧಾನವಾಗಿ ಎಲ್ಲಕಡೆ ಅದನ್ನು ಒಂದೇ ಲಯದಲ್ಲಿ ಸವರುತ್ತಾ ಹೋಗಬೇಕು.’ ಎಂದು ಹೇಳುತ್ತಿದ್ದ. ಆತ ಯಾರನ್ನು ಕುರಿತು ಹೇಳುತ್ತಿದ್ದನೋ ವಾಸುವಿಗೆ ಗೊತ್ತಾಗಲಿಲ್ಲ. ವಾಸು, ಕಣ್ಣು ಮುಚ್ಚಿ ಕೂತಿದ್ದ.

ಇದ್ದಕ್ಕಿದ್ದಂತೇ ಮುಖದ ಮೇಲೆ ಮೃದುವಾದ ಬೆರಳುಗಳು ಓಡಾಡಿದವು. ಪಾಂಡುರಂಗ ಹೇಳಿದ ಹಾಗೆ ಬಲಕೆನ್ನೆಯ ಮೂಳೆಯ ಮೇಲೆ, ಮೊದಲು ಒಂದು ಬೆರಳು ಸ್ಥಾಪಿತವಾಗಿ, ನಂತರ ಅದರ ಆ ಬಣ್ಣದ ಎಸಳುಗಳು ಲಯಬದ್ಧವಾಗಿ ಇಡೀ ಮುಖದ ಮೇಲೆ ಹರಿದಾಡತೊಡಗಿದವು. ಮುಖಕ್ಕೆ ಹಿತವಾಗುವ ಹಾಗೆ ಮೆಲ್ಲಗೆ ಒಂದೇ ಗತಿಯಲ್ಲಿ ಬೆರಳುಗಳು ತುಡಿಯಾಡಿದವು. ವಾಸುವಿಗೆ ಏನು ಮಾಡಿದರೂ ಕಣ್ಣು ಬಿಡಲಾಗಲೇ ಇಲ್ಲ. ಕಣ್ಣುರಿ ಇಲ್ಲ ಎಂದುಕೊಂಡು ಕಣ್ಣು ಬಿಡಲು ಪ್ರಯತ್ನ ಮಾಡಿದರೂ ಏನು ಮಾಡಿದರೂ ಕಣ್ಣು ಬಿಡಲಾಗಲೇ ಇಲ್ಲ. ಬೆರಳಿನ ಮೃದು, ಅದು ತನ್ನ ಮುಖದ ಮೇಲೆ ಓಡಾಡುವ ಗತಿ ಮತ್ತು ಮುಂದೆ ಕೂತಿರುವ ವ್ಯಕ್ತಿಯ ಉಸಿರಿನ ಬಿಸುಪಿನಿಂದ ಅದು ಸುದೇಷ್ಣಾಳೇ ಇರಬಹುದೆಂದು ನಂಬಿದ್ದ. ಆಗ ವಾಸುವಿನ ತುಟಿಗೆ ಒಂದು ಬ್ರಶ್ಶು ತಗುಲಿತು. ಅದೇ ಸಂಜ್ಞೆಯೇನೋ ಎಂಬಂತೆ ವಾಸು ಬಾಯಿ ಬಿಡಬೇಕೋ ಇಲ್ಲವೋ ಗೊತ್ತಿಲ್ಲದೆ ಬಾಯನ್ನು ನಿಧಾನವಾಗಿ ಅಗಲಿಸಿದ. ಬ್ರಶ್ಶು ಕೂಡ ಬೆರಳಷ್ಟೇ ಮೃದುವಾಗಿ ತುಟಿಯಮೇಲೆ ಹರಿದಾಡಿತು. ಬ್ರಶ್ಶು ತುಟಿಯಮೇಲೆ ಹರಿದಾಡಬೇಕಾದರೆ, ತುಟಿಗೆ ಬಣ್ಣ ಹಚ್ಚುವ ಮುಂಗೈಯ ಒಳ ಅಂಚು ವಾಸುವಿನ ಗಲ್ಲಕ್ಕೆ ಆನಿಸಿ ಆಧಾರಕ್ಕೇನೋ ಎಂಬಂತೆ ಒತ್ತಿತ್ತು.

ವಾಸು ಬೆವೆತಿದ್ದ. ಆ ಬಣ್ಣದ ಬಿಗಿತ, ಸಣ್ಣ ರೂಮು, ಕುತ್ತಿಗೆಗೆ ಕಟ್ಟಿದ್ದ ಕರ್ಚೀಫು ಎಲ್ಲ ಸೇರಿ ವಾಸುವನ್ನು ನೆನೆಸಿದ್ದವು.

ಇದ್ದಕ್ಕಿದ್ದಹಾಗೆ ಒಂದು ಬೆರಳು ವಾಸುವಿನ ತುಟಿಯನ್ನು ತಗುಲಿತು, ಮೆಲ್ಲಗೆ ತುಟಿಯ ಕೆಳಗಿನ ಗಲ್ಲವನ್ನು ಮೆಲುವಾಗಿ ಒರೆಸಿತು.  ವಾಸುವಿನ ತುಟಿಯ ಬಣ್ಣ ಗಲ್ಲಕ್ಕೆ ಇಳಿದಿತ್ತಾ ಗೊತ್ತಿಲ್ಲ. ತುಟಿ ಒಣಗಿತ್ತಾ ಏನೂ ಗೊತ್ತಾಗಲಿಲ್ಲ. ನಂತರ ತುಟಿಯನ್ನೂ ನಿಧಾನವಾಗಿ ಆ ಬೆರಳು ಒರೆಸಿತು. ನಂತರ ಆದದ್ದು ವಾಸು ಖಂಡಿತಾ ಮರೆಯಲಾರ. ಒಂದು ಒದ್ದೆಬೆರಳು… ತೀರ ಒದ್ದೆಯಾದ ಬೆರಳು ಅವನ ತುಟಿಯನ್ನು ನಿಧಾನವಾಗಿ ಒರೆಸಿತು.

ವಾಸು ದ್ರವಿಸಿಹೋದ. ತನ್ನ ತುಟಿಗೆ ಹಚ್ಚಿದ ಆ ಬೆರಳ ತೇವ ಏನಿರಬಹುದು? ಕೊಬ್ಬರಿಎಣ್ಣೆ, ಕೊಂಚ ನೀರು ಅಥವಾ ಆ ಹೊಲಸು ಪಾಂಡುರಂಗ ಮಾಡುವ ಹಾಗೆ ಒಂಚೂರು ಎಂಜಲು? ಪಾಂಡುರಂಗನಿಗೆ ಅದೊಂದು ಕೆಟ್ಟ ಅಭ್ಯಾಸವಿತ್ತು. ಮೇಕಪ್‌ನಲ್ಲಿ ನೀರಿನಂಶ ಕಮ್ಮಿಯಗಿದ್ದರೆ ಹತ್ತಿರ ನೀರು ಸಿಕ್ಕಿಲ್ಲದಿದ್ದರೆ. ತನ್ನದೇ ಕಿರುಬೆರಳನ್ನು ನಾಲಿಗೆಗೆ ಹಚ್ಚಿ ಅದನ್ನೇ ನೀರಾಗಿ ಉಪಯೋಗಿಸುತ್ತಿದ್ದ.

ವಾಸುವಿಗೆ ಈಗ ಕಣ್ಣು ಬಿಡಲೇಬೇಕಾಯಿತು. ಮುಂದೆ ಕೂತದ್ದು ಪಾಂಡುರಂಗನಲ್ಲವೆಂದು ಅವನಿಗೆ ಗೊತ್ತಾಗಬೇಕಾಗಿದ್ದು ಈಗ ಅನಿವಾರ್ಯವಾಗಿತ್ತು.  ಕಷ್ಟಪಟ್ಟು ಕಣ್ಣುಬಿಡುವ ಹೊತ್ತಿಗೆ ವಾಸುವಿನ ಮೇಕಪ್ ಮುಗಿದಿತ್ತು.

ಎದುರುಗಡೆ, ಕೇಶವಶರ್ಮ ಮತ್ತು ಅಕ್ಕ ಉಮಾ ನಗುತ್ತಾ ಕೈಹಿಡಕೊಂಡು ಸೈಡ್‌ವಿಂಗಿಗೆ ಹೋದದ್ದು ನೋಡಿದ.

ನೋಡನೋಡತ್ತಿದ್ದಂತೆಯೇ ಕೆಲವೇದಿನಗಳಲ್ಲಿ ಅಕ್ಕ ಮತ್ತು ಕೇಶವಶರ್ಮನ ಮದುವೆಯ ನಿಶ್ಚಿತಾರ್ಥ ಆಗೇಹೋಯಿತು. ಊರಿನಿಂದ ಅಪ್ಪ, ಅಮ್ಮ ಬಂದು ತಾವೇ ಈ ಕಾರ್ಯವನ್ನುನಾಗಮಂಗಲದಲ್ಲಿಯೇ ಮಾಡಿಹೋಗಿದ್ದರು.

ವಾಸುವಿಗೆ ಅಕ್ಕನ ಇಂಥ ಒಂದು ಸಂಬಂಧದ ಬಗ್ಗೆ ಕಲ್ಪನೆ ಕೂಡ ಇರಲಿಲ್ಲ. ತಾವು ಬಾಡಿಗೆಗಿದ್ದ ರಾಮಪ್ರಿಯ ಜೋಯಿಸರು ಏನೋ ಮಾಡಿದ್ದಾರೆ ಎಂದೂ ಅನ್ನಿಸಿತ್ತು.

ಅಕ್ಕನೇ ಒಂದು ದಿನ ಹೇಳಿದ್ದಳು.. ಒಂದು ದಿನ ತಾನು ಹುಡುಗಿಯರಿಗೆ ಖೋಖೋ ಕಲಿಸುತ್ತಿರಬೇಕಾದರೆ, ಮೇಷ್ಟರು ಬಂದಿದ್ದು, ಮಾತಾಡಿಸಿದ್ದು.. ಅಮ್ಮ ಅಪ್ಪನ್ನ ಅವರೇ ಒಪ್ಪಿಸಿದ್ದು..

ಅಕ್ಕ ಮತ್ತು ಕೇಶವಶರ್ಮ ಇಬ್ಬರೂ ಹಕ್ಕಿಗಳ ತರ ನಾಗಮಂಗಲದ ಬೀದಿಗಳಲ್ಲಿ ಓಡಾಡತೊಡಗಿದರು. ಕೇಶವಶರ್ಮ ಯಾವ ಮುಲಾಜೂ ಇಲ್ಲದೇ ಎಲ್ಲರ ಮುಂದೆ ಸಂಜೆ ಉಮಾಳನ್ನು ವಾಕಿಂಗ್ ಕರಕೊಂಡು ಹೋಗುತ್ತಿದ್ದ. ಒಂದೆರಡು ಬಾರಿ ವೆಂಕಟೇಶ್ವರಕ್ಕೆ ಸಿನೆಮಾಕ್ಕೂ ಕರಕೊಂಡು ಹೋಗಿದ್ದ.

ಕೇಶವಶರ್ಮ ಯಾವರೀತಿಯೂ ಕೆಟ್ಟಮನುಷ್ಯನಾಗಿರಲಿಲ್ಲ. ಮೂವತ್ತೆರಡರ ಕೇಶವಶರ್ಮನಿಗೆ ಇಪ್ಪತ್ತೆಂಟರ ಉಮ ಹೇಳಿಮಾಡಿಸಿದ ಹೆಣ್ಣು. ವರಸಾಮ್ಯವೂ ಸರಿಯಾಗಿಯೇ ಇದೆ ಎಂದು ಊರವರೆಲ್ಲಾ ಹೇಳುತ್ತಿದ್ದಾರೆ. ಗಾಂಧಿಭವನದ ಮುಂದೆ ದೇವನಾಗರೀ ಲಿಪಿಯನ್ನೂ, ಖೊಖೋ ಆಟವನ್ನೂ ಕಲಿಯುವ ಹುಡುಗಹುಡುಗಿಯರಿಗೆ ಆದರ್ಶವಾಗುವಂತೆ ಈ  ಮಾಸ್ತರುಗಳು ಒಬ್ಬರನ್ನೊಬ್ಬರು ಬೇರೆ ಯಾರಿಗೂ ಗೊತ್ತಾಗದೇ ಇಷ್ಟಪಟ್ಟು ಮದುವೆಯನ್ನೂ ಆಗುತ್ತಿದ್ದರು.

ಎಷ್ಟೇ ಯೋಚಿಸಿದರೂ ಇದು ಸರಿ ಎಂದು ವಾಸುವಿಗೆ ಅನಿಸಲಿಲ್ಲ. ತಪ್ಪೂ ಎಂದೂ ಅನಿಸಲಿಲ್ಲ. ಸುದೇಷ್ಣಾಳನ್ನು ಮಾತಾಡಿಸಲು ಪ್ರಯತ್ನವನ್ನು ಮಾಡಿದ. ಆದರೆ, ಆಕೆ ಕೈಗೇ ಸಿಗಲಿಲ್ಲ.

ವಾಸು ಸೀದಾ ಯೋಗಾನರಸಿಂಹಸ್ವಾಮಿಯ ದೇವಸ್ಥಾನಕ್ಕೆ ಹೋದ. ಅಲ್ಲಿನ ಗರುಡಯ್ಯಂಗಾರ್ರಿಗೆ ‘ಒಂದು ಅರ್ಚನೆ ಮಾಡಿ’ ಅಂದ. ಗರುಡಯ್ಯಂಗಾರ್ರು ನಗುತ್ತಾ ಅರ್ಚನೆ ಮಾಡಿದರು. ದೇವರ ಬಲಗಡೆಯಿಂದ ಹೂವನ್ನು ಬೀಳಿಸಿ ಅದನ್ನು ವಾಸುವಿಗೆ ಕೊಟ್ಟರು.

ದೇವಸ್ಥಾನದ ಕಲ್ಲ ಹೊಸ್ತಿಲಿನ ಮೇಲೆ ವಾಸು ಕೂರುವ ಶಾಸ್ತ್ರ ಮಾಡುತ್ತಿದ್ದಾಗ ಅಯ್ಯಂಗಾರರು ಬಂದು ತಲೆಮೇಲೆ ಕೈಯಾಡಿಸಿ ‘ಮಗೂ, ನಾನೂ ಬೇಕಾದಷ್ಟು ಕನಸಿದ್ದೇನೆ. ಎಲ್ಲ ಕನಸುಗಳೂ ನಿಜವಾಗುವುದಿಲ್ಲ. ಆದರೆ, ಆ ಕನಸುಗಳು ನನಗೆ ಬಿದ್ದವಲ್ಲಾ ಅನ್ನುವುದೇ ನನಗೆ ಖುಷಿಕೊಡುವ ಕೆಲಸ. ಯಾಕೆಂದರೆ, ಎಲ್ಲರಿಗೂ ಕನಸುಗಳು ಬೀಳುವುದಿಲ್ಲ’ ಎಂದರು.

ಗರುಡಯ್ಯಂಗಾರರು ಆಗಾಗ್ಗೆ ಇಂಗ್ಲೀಷ್ ಸಿನೆಮಾವನ್ನೂ ನೋಡುತ್ತಾರೆ ಅನಿಸಿತು ವಾಸುವಿಗೆ.