ರಾಜ ಪ್ರಭುತ್ವ. ನಿರಂಕುಶ ಸರ್ವಾಧಿಕಾರ, ಸೈನಿಕ ಆಡಳಿತ, ಕಮ್ಯೂನಿಸಮ್ ಸಿದ್ಧಾಂತಾಧರಿತ ಸೋಶಿಯಲಿಸಮ್ ಮುಂತಾದ ಸತ್ತೆಗಳ ಸಾವು ಸೋಲುಗಳ ನಂತರ, ಮನುಕುಲಕ್ಕೆ ದಕ್ಕಿದ ‘ಸ್ವಯಂ ಆಡಳಿತ’ ಅಥವಾ ಪ್ರಜಾಪ್ರಭುತ್ವ, ಆಡಳಿತ ವಿಧಾನದ ವಿಕಾಸದ ಕೊನೆಯ ಹಂತ ಎನ್ನಬಹುದು. ಮನುಷ್ಯನ ಬದುಕಿನಲ್ಲಿ ಸ್ವಾತಂತ್ರ್ಯಕ್ಕಿಂತ ಸವಿಯಾದುದು ಬೇರೊಂದಿಲ್ಲ. ಪ್ರೇಮವೇ ಅತ್ಯಂತ ಸವಿಯಾದುದು ಎಂದು ನಮಗೆ ಅನಿಸುವುದೇನೋ ನಿಜ. ಆದರೆ ಪ್ರೇಮಕ್ಕೆ ಸ್ವಾತಂತ್ರ್ಯ ಬೇಕೇ ಬೇಕು. ಪ್ರೇಮ ಅತ್ಯಂತ ಶ್ರೇಷ್ಠ ಮಾನವೀಯ ಗುಣವಾದರೂ ಅದು ಉಳಿಯಲು ಬೆಳೆಯಲು ಸಾಧ್ಯ ಅದಕ್ಕೆ ಸ್ವಾತಂತ್ರ್ಯ ಇದ್ದರೆ ಮಾತ್ರ. ಆದ್ದರಿಂದಲೇ ಸ್ವಾತಂತ್ರ್ಯ ಪ್ರೇಮಕ್ಕಿಂತ ದೊಡ್ಡದು ಎಂದು ತಿಳಿಯಬೇಕಾಗುತ್ತದೆ. ಮನುಷ್ಯ ಸಹಜವಾದ ಪ್ರೇಮಕ್ಕೆ ‘ಬುಡಕಟ್ಟು ನಾಯಕಾಧಿಪತ್ಯ’ದಿಂದ ತೊಡಗಿ ಸೊಶಿಯಲಿಸಮ್ ತನಕ ಮುಕ್ತ ಅವಕಾಶ ಇರಲಿಲ್ಲ ಎನ್ನುವುದಕ್ಕೆ ಇತಿಹಾಸದಲ್ಲಿ ಅಸಂಖ್ಯ ಸಾಕ್ಷಿಗಳು ಸಿಗುತ್ತವೆ. ಮನುಕುಲ ಬಿಡುಗಡೆಯ ಉಸಿರುಬಿಟ್ಟದ್ದು ಪ್ರಜಾಪ್ರಭುತ್ವ ನೆಲೆನಿಂತಾಗಲೇ. ಈ ಬಿಡುಗಡೆ ಇಡೀ ಲೋಕದ ಜನರಿಗೆ ಇನ್ನೂ ದೊರೆತಿಲ್ಲ ಎನ್ನುವುದು ಇವತ್ತಿನ ಜಗತ್ತಿನ ದುಃಖ ಎನ್ನುವುದಕ್ಕೆ ನಮ್ಮ ನೆರೆಯ ದೇಶಗಳೇ ಸಾಕ್ಷಿಯಾಗಿವೆ. ಆದರೆ ಇನ್ನು ಈ ಜಗತ್ತು ಕೊನೆಯಾಗುವ ತನಕ ನಮ್ಮದು ನಿರಾತಂಕ ಪ್ರಜಾಪ್ರಭುತ್ವ ಎಂಬ ಸಮಾಧಾನದ ಮರವೆಯಲ್ಲಿ ನಾವು ನಿರಾಳವಾಗಿ ಉಸಿರಾಡುತ್ತಾ ಇರಬಹುದೆ? ನಿರಂತರ ಚಲನಶೀಲವಾದ ಜಗತ್ತಿನಲ್ಲಿ ‘ಇದು ಶಾಶ್ವತ ಸ್ಥಾವರ’ ಎಂದು ನಂಬಿಕೊಂಡು ನೆಚ್ಚಿಕೊಂಡು ಇರಬಹುದೆ? ಇದನ್ನು ಉಳಿಸಿಕೊಳ್ಳಲು ಎಚ್ಚರ ಎನ್ನುವುದಿರಬೇಡವೆ? ಈ ಸುಂದರವಾದ ಪ್ರಜಾಪ್ರಭುತ್ವಕ್ಕೆ ಯಾರಿಂದಲೂ ಯಾವುದರಿಂದಲೂ ಧಕ್ಕೆ ಉಂಟಾಗದೆ? ಮನುಷ್ಯ ದೇವರನ್ನು ಹುಡುಕಿಕೊಂಡು ಹೋಗುವುದು ಅವನೊಳಗೆ ಸೈತಾನ ಇರುವುದರಿಂದಲೇ; ಹಾಗೆಯೇ ನಮ್ಮ ಸ್ವಾತಂತ್ರ್ಯವನ್ನು ನಾವು ಆಗಾಗ ನೆನಪಿಸಿಕೊಳ್ಳುವ ಅಗತ್ಯ ಇರುವುದು ಇದನ್ನು ಕಿತ್ತುಕೊಳ್ಳುವ ಅಥವಾ ನಾಶ ಮಾಡುವ ದುಷ್ಟಶಕ್ತಿ ಎಲ್ಲಾದರೂ ಇರಬಹುದು ಎನ್ನುವ ಸಂದೇಹದಿಂದಲೇ. ಬಹಳ ಸಲ ಸಂದೇಹಗಳು ಸತ್ಯವಾಗಿಬಿಡುತ್ತವೆ! ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯ ಮುಂತಾದ ಹಲವಾರು ದೇಶಗಳು ನಮಗಿರುವಂಥ ಗಡಿ ಬಾಧೆ ಇಲ್ಲದ ಭಾಗ್ಯವಂತರು. ನಮ್ಮದು ಸದಾ ಎಚ್ಚರದಿಂದ ಇರಬೇಕಾದ ಪರಿಸ್ಥಿತಿ.

ಆಂಗ್ಲ ಆಡಳಿತ ಕೊನೆಗೊಂಡು, ರಾಜೇಂದ್ರಪ್ರಸಾದರ ಅಧ್ಯಕ್ಷತೆಯಲ್ಲಿ ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ಸಾಂವಿಧಾನಿಕವಾಗಿ ಅಸ್ತಿತ್ವಕ್ಕೆ ಬಂದ ೧೯೫೦ ಜನವರಿ ೨೬ನ್ನು ‘ಗಣರಾಜ್ಯ ದಿನ’ ಅಥವಾ ರಿಪಬ್ಲಿಕ್ ಡೇ ಎಂಬುದಾಗಿ ಗುರುತಿಸಲಾಗುತ್ತದೆ ಎಂಬುದನ್ನು ಇವತ್ತು ಯಾರಾದರೂ ನೆನಪಿಸಿಕೊಳ್ಳುತ್ತಾರೆಯೆ ಎನ್ನುವುದು ಒಂದು ಪ್ರಶ್ನೆ. ಅದಕ್ಕಿಂತ ಮುಖ್ಯವಾದ ಪ್ರಶ್ನೆ ನೆನಪಿಸಿಕೊಳ್ಳುವುದು ಹೇಗೆ ಎಂದು. ಈ ದಿನವನ್ನು ಈ ದೇಶದ ಪ್ರಜೆಗಳ ನೆನಪಿಗೆ ತರುವ ಕೆಲಸವನ್ನು ಹಿಂದೆ ರೇಡಿಯೋ ಮಾಡುತ್ತಿತ್ತು, ಈಗ ಅದಕ್ಕಿಂತ ದೊಡ್ಡದಾಗಿ ಟೀವೀ ಮಾಡುತ್ತಿದೆ. ಸ್ವಲ್ಪ ಮಟ್ಟಿಗೆ ಪತ್ರಿಕೆಗಳು ಕೂಡ ಮಾಡುತ್ತವೆ. ಶಾಲೆ ಕಾಲೇಜುಗಳ ಪೈಕಿ ಎಲ್ಲೋ ಕೆಲವು ಏನೋ ಕಾರ್ಯಕ್ರಮಗಳ ಮೂಲಕ ನೆನಪಿಗೆ ತಂದುಕೊಳ್ಳುತ್ತಿರಬಹುದು. ‘ಆಂಗ್ಲ’ ಮಾಧ್ಯಮ ಶಿಕ್ಷಣಕ್ಕೆ ಎಷ್ಟರ ಮಟ್ಟಿಗೆ ‘ಗಣರಾಜ್ಯ ದಿನ’ದ ನೆನಪು ಆಗಬಹುದು ಎನ್ನುವುದು ಗೊತ್ತಾಗುತ್ತಾ ಇಲ್ಲ. ಒಟ್ಟಿನಲ್ಲಿ ‘ಗಣರಾಜ್ಯ ಜನ್ಮ ದಿನ’ ದೇಶದಲ್ಲಿ ಐದೋ ಹತ್ತೋ ಪರ್ಸೆಂಟ್ ಜನರಿಗಿಂತ ಹೆಚ್ಚು ಜನರ ಗಮನಕ್ಕೆ ಬರದೇನೇ ಕಳೆದು ಹೋಗುತ್ತದೆ. ಇವತ್ತು ಎಲ್ಲರಿಗೂ ತಂತಮ್ಮ ಜನ್ಮದಿನ ಎಷ್ಟು ಮುಖ್ಯವಾಗಿಬಿಟ್ಟಿದೆ! ೧೬೦೦ರಿಂದ ೧೯೪೭ರ ತನಕ ಯಾರಿಗೂ ತಮ್ಮ ಜನ್ಮದಿನ ಇಷ್ಟು ಮುಖ್ಯವಾಗಿ ಇರಲಿಲ್ಲ. ನಮಗೋಸ್ಕರ ನಮ್ಮ ಲಕ್ಷೋಪಲಕ್ಷ ಹಿರಿಯರನ್ನು ಜನ್ಮದಿನದ ಬದಲು ಸಾವಿನ ದಿನಗಳೇ ಅರಸಿಕೊಂಡು ಬಂದವು ಎನ್ನುವುದನ್ನು ನಾವು ಇವತ್ತು ನೆನಪಿಸಿಕೊಳ್ಳಬೇಕು.

ಗಣರಾಜ್ಯ ದಿನವನ್ನು ಹೇಗೆ ನೆನಪಿಸಿಕೊಳ್ಳಬೇಕು ಅಥವಾ ಹೇಗೆ ಆಚರಿಸಬೇಕು ಎಂದು ಕೇಳಿದರೆ ಬಹುಶಃ ಯಾರ ಬಳಿಯೂ ಉತ್ತರವಿರಲಾರದು. ಇವತ್ತು ಗಣರಾಜ್ಯದಿನವೆಂದರೆ, ಟೀವಿಯಿದ್ದು ನೋಡುವ ಮನಸ್ಸು ಇರುವವರಿಗೆ, ದೆಹಲಿಯ ರೈಸಿನಾ ಹಿಲ್ ಪಕ್ಕದಿಂದ ಹೊರಟು ರಾಷ್ಟ್ರಪತಿಭವನದ ಮುಂದಿನಿಂದ ಸಾಗಿ ರಾಜ್‌ಪಥ್‌ನಲ್ಲಿ ಚಲಿಸಿ ಇಂಡಿಯಾ ಗೇಟ್ ದಾಟಿ ಕೆಂಪು ಕೋಟೆಯ ವರೆಗೆ ಸಾಗುವ ಒಂದು ವೈಭವಪೂರ್ಣ ಪರೇಡ್. ಇದರಲ್ಲಿ ನಮ್ಮ ಸೈನ್ಯ ಶಕ್ತಿ ಮತ್ತು ಸಾಂಸ್ಕೃತಿಕ ಅನನ್ಯತೆ-ಅನೇಕತೆಯನ್ನು ತೋರಿಸಲಾಗುತ್ತದೆ. ಟೀವಿ ಕಾರ್ಯಕ್ರಮ ಮುಗಿದಾಗ ಅಥವಾ ಕರೆಂಟು ಹೋದಾಗ ಗಣರಾಜ್ಯ ದಿನ ಮುಗಿಯಿತು!

ಯುಗಾದಿ, ದೀಪಾವಳಿ, ಈದ್, ಈಸ್ಟರ್ ಮುಂತಾದ ಹಲವಾರು ಹಬ್ಬಗಳನ್ನು ಹೇಗೆ ಆಚರಿಸಬೇಕು ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೆ ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯ ದಿನ ಎಂಬ ಎರಡು ರಾಷ್ಟ್ರೀಯ ಹಬ್ಬದ ದಿನ ಧ್ವಜದ ಕಂಬಕ್ಕೆ ರಾಷ್ಟ್ರ ಧ್ವಜವನ್ನು ಏರಿಸಿ ಸೆಲ್ಯೂಟ್ ಹೊಡೆದರೆ ಹಬ್ಬದ ಆಚರಣೆ ಮಗಿಯಿತು. ಶಿಕ್ಷಣ ಸಂಸ್ಥೆಗಳು ಸೇರಿದಂತೆ ಇತರೆಲ್ಲ ಸಂಸ್ಥೆಗಳು ಅವರವರ ಭಾವಕ್ಕೆ ಅವರವರ ಅರಿವಿಗೆ ತಕ್ಕಂತೆ ಆಚರಿಸಿಕೊಳ್ಳಲಿ, ಆದರೆ ಅದರಿಂದ ಹೊರಗೆ, ಈ ಎರಡು ದಿನಗಳನ್ನು ವಿಶೇಷವಾದ ರೀತಿಯಲ್ಲಿ ಆಚರಿಸಬೇಕಾದ್ದು ಒಂದು ರಾಷ್ಟ್ರೀಯ ಅಗತ್ಯ. ರಾಜ್ಯಶಾಸ್ತ್ರ, ರಾಜಕೀಯ ವಿಜ್ಞಾನವನ್ನು ಕಾಲೇಜುಗಳಲ್ಲಿ, ವಿಶ್ವ ವಿದ್ಯಾಲಯಗಳಲ್ಲಿ ಎಲ್ಲೋ ಕೆಲವರು ಓದುತ್ತಿರಬಹುದು. ಆದರೆ ಸರಕಾರದ ಆಡಳಿತದ ರೀತಿ ನೀತಿಯ ಕುರಿತಾಗಿ ಹೆಚ್ಚಿನ ವಿದ್ಯಾವಂತರು ಸೇರಿದಂತೆ ನಮ್ಮ ಜನರು ಬಹು ಮಟ್ಟಿಗೆ ಅಜ್ಞಾನಿಗಳು.

ಈಗಲೂ ನಮ್ಮ ದೇಶದ ಪ್ರಜೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿರುವುದು ಅವಿದ್ಯಾವಂತರೇ. ಆದರೆ ಅನಕ್ಷರಸ್ಥರಿಗೆ ಮತ್ತು ಅವಿದ್ಯಾವಂತರಿಗೆ ಕೂಡ ಆಡಳಿತೆಯ ಕುರಿತಾದ ಅರಿವಿನ ಅಗತ್ಯ ಇದೆ. ಅವರು ಕೂಡ ತಮ್ಮ ಹಕ್ಕುಗಳು, ಬಾಧ್ಯತೆಗಳ ಬಗ್ಗೆ ತಿಳಿಯಬೇಕು. ಆಡಳಿತೆಯ ಬಗ್ಗೆ, ಹೇಗೆ ತಮ್ಮ ಅಜ್ಞಾನ ಮತ್ತು ನಿಷ್ಕ್ರಿಯತೆ ಭ್ರಷ್ಟಾಚರಕ್ಕೆ ಅನುಕೂಲಕರವಾಗುತ್ತದೆ ಎನ್ನುವ ಬಗ್ಗೆ, ಅವರಲ್ಲಿ ಅರಿವು ಮತ್ತು ಎಚ್ಚರ ಮೂಡಿಸಬೇಕು. ಯಾಕೆ ಸೇತುವೆಗಳು, ಕಟ್ಟಡಗಳು ಕಟ್ಟುತ್ತಿರುವಾಗಲೇ ಮುರಿದು ಬೀಳುತ್ತವೆ. ವರ್ತಮಾನದ ಸರಕಾರಿ ಬಂಗಲೆಗಳು ಹೇಗೆ ನಮ್ಮ ಕಣ್ಣೆದುರೇ ಭೂತ ಬಂಗಲೆಗಳಾಗುತ್ತವೆ ಎಂದು ವಿಚಾರಿಸುವ ಗುಣ ಜನರಲ್ಲಿ ಉಂಟಾಗಬೇಕು. ಆಡಳಿತೆಯ ಎಲ್ಲಾ ಮೆಟ್ಟಿಲುಗಳಲ್ಲಿಯೂ ವ್ಯಾಪಕವಾಗಿರುವ ಭ್ರಷ್ಟಾಚಾರಕ್ಕೆ ನಮ್ಮ ವಿದ್ಯಾವಂತರ ನಿಷ್ಕ್ರಿಯತೆ ಮತ್ತು ಔದಾಸೀನ್ಯವೇ ಕಾರಣ. ಅವಿದ್ಯಾವಂತರು ಈ ವಿಚಾರದಲ್ಲಿ ಲೀಡರ್ಸ್ ಆಗಲಾರರು. ಆದರೆ ಸನ್ಮಾರ್ಗಿಗಳಾದ ಲೀಡರನ್ನು ಅವರು ಅನುಸರಿಸಬಲ್ಲರು ಮತ್ತು ನ್ಯಾಯವಾದ ವಿಧಾನ ಯಾವುದು ಎಂದು ಅವರು ಅರ್ಥ ಮಾಡಿಕೊಳ್ಳಬಲ್ಲರು ಎನ್ನುವುದನ್ನು ಲೀಡರುಗಳು ಅರ್ಥ ಮಾಡಿಕೊಂಡರೆ ಸಾಕು.

ಕನಿಷ್ಟ ಈ ಎರಡು ದಿನಗಳಾದರೂ ‘ಜನಶಿಕ್ಷಣ ದಿನ’ಗಳಾಗಿ ರಾಷ್ಟ್ರೀಯ ಮಟ್ಟದ ಹಬ್ಬದ ದಿನಗಳಾಗಬೇಕು. ಪ್ರತಿ ವರ್ಷ ದೆಹಲಿಯಲ್ಲಿ ನಡೆಯುವ ಅದೇ ರಿಪಬ್ಲಿಕ್ ಡೇ ಪರೇಡನ್ನು ಸೋಫದಲ್ಲಿ ಒರಗಿ ಕುಳಿತು ಟೀವಿಯಲ್ಲಿ ನೋಡುವ ಮೂಲಕ ತಿಳಿದುಕೊಳ್ಳುವುದು ಏನೂ ಇಲ್ಲ. ಆ ವೀಕ್ಷಣೆ ಮುಖ್ಯವಲ್ಲ. ಅದನ್ನು ನೋಡುವವರ ಸಂಖ್ಯೆ ಕೂಡ ನಗಣ್ಯ. ಅದರ ಹಿಂದಿನ ದಿನ ರಾಷ್ಟ್ರಾಧ್ಯಕ್ಷರ ರೇಡಿಯೋ ಅಥವಾ ಟೀವಿ ಭಾಷಣವನ್ನು ಆಲಿಸುವವರ, ಆ ಕುರಿತು ಚರ್ಚಿಸುವವರ ಸಂಖ್ಯೆ ಇನ್ನೂ ಚಿಕ್ಕದು. ಪ್ರಜಾತಂತ್ರ ಬೇಡದಿರುವ ದೇಶಗಳ ದುರದೃಷ್ಟ ಏನು ಎಂದು ನಮಗೆ ಗೊತ್ತೇ ಇದೆ. ಅಮೆರಿಕ ಇಂಗ್ಲೆಂಡಿಗೆ ಹೋಲಿಸಿದರೆ ನಮ್ಮ ಪ್ರಜಾಪ್ರಭುತ್ವ ಇನ್ನೂ ಬಾಲ್ಯದಲ್ಲೇ ಇದೆ. ಅಲ್ಲಿ ಸಾಂವಿಧಾನಿಕ ಹಕ್ಕುಗಳಿಗಾಗಿ ಬಹಳ ಹೋರಾಟ ನಡೆದಿತ್ತು. ನಮ್ಮಲ್ಲಿ ಅಂಥ ಹೋರಾಟ ನಡೆಯಲಿಲ್ಲ. ಸ್ವಾತಂತ್ರ್ಯದ ಜೊತೆಗೇ ನಮಗೆ ಸಾಂವಿಧಾನಿಕ ಹಕ್ಕುಗಳು ಸಿಕ್ಕಿಬಿಟ್ಟವು. ಹಾಗಾಗಿ ಸಂವಿಧಾನದಲ್ಲಿ ಏನಿದೆ, ನಮ್ಮ ಹಕ್ಕುಗಳು, ಬಾಧ್ಯತೆಗಳು ಏನು ಎಂದು ಗೊತ್ತಿರುವವರೇ ಇಲ್ಲ! ಸಂವಿಧಾನವನ್ನು ಪಾಠ ಮಾಡುವ ಶಿಕ್ಷಕರ ಹೊರತು ಇತರ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಸಂವಿಧಾನವನ್ನು ನೋಡಿ ಕೂಡ ತಿಳಿಯದು. ಸಂವಿಧಾನವನ್ನು ಓದಿದ ಶಾಸಕರು ಎಷ್ಟು ಮಂದಿಯಿರಬಹುದು?

ಭಾರತದ ಎಲ್ಲಾ ಭಾಷೆಗಳಲ್ಲಿಯೂ ಭಾರತದ ಸಂವಿಧಾನ ಓದಲು ಸಿಗಬೇಕು; ಸಿಗುತ್ತಿದೆಯೆ? ನಮ್ಮ ರಾಜಕಾರಣಿಗಳು, ಶಾಸಕರು ಏನು ಎಂಥದು ಅಂತ ಗೊತ್ತಿಲ್ಲದೆ ಭಾಷಣ ಮಾಡುವುದರಲ್ಲಿ ನಿಸ್ಸೀಮರು. ಶಾಸಕ ಸಂವಿಧಾನವನ್ನು ಕಂಡಿರದಿದ್ದರೂ ನ್ಯಾಯವಾದಿಗಳು ಮತ್ತು ಶಿಕ್ಷಕರ ನೆರವಿನಿಂದ ಜನಶಿಕ್ಷಣ ಸೆಮಿನಾರುಗಳನ್ನು ನಡೆಸಬಹುದು. ಪ್ರತಿಯೊಬ್ಬ ಶಾಸಕನೂ ಈಯೆರಡು ದಿನ ತನ್ನ ಮತದಾರ ಕ್ಷೇತ್ರದಲ್ಲಿದ್ದು ಜನ ಶಿಕ್ಷಣಕ್ಕಾಗಿ ಸ್ಥಳೀಯ ಆಡಳಿತ ಸಂಸ್ಥೆಗಳಡಿಯಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು, ಜನರನ್ನು ಮತ್ತು ಖಾಸಗಿ ಸಂಸ್ಥೆಗಳನ್ನು ಸಂಘಟಿಸಬಹುದು. ನಮ್ಮ ಮತದಾರರು, ಪ್ರಜ್ಞಾವಂತ, ಜವಾಬ್ದಾರಿಯುತ ಪೌರರಾಗಬೇಕು ಎನ್ನುವ ಅರಿವು ಶಾಸಕರಿಗಿರಬೇಕು. ಪ್ರಜೆಗಳಿಗೆ ತಮ್ಮ ಬಾಧ್ಯತೆಗಳ ಕುರಿತಾದ ಪ್ರಜ್ಞೆಗಿಂತ ಹಕ್ಕುಗಳ ಕುರಿತಾದ ಅರಿವು ಬೇಗನೆ ಬರುತ್ತದೆ. ಆದರೆ ಸಾಂವಿಧಾನಿಕವಾಗಿ ಲಭ್ಯವಿರುವ ಹಕ್ಕುಗಳ ವಿಚಾರ ಸಹ ಬಹಳ ಮಂದಿಗೆ ಗೊತ್ತಿಲ್ಲ. ತನಗೆ ಅಗತ್ಯವಿರುವ ಸೇವೆಯನ್ನು, ಬೇಕಾದ ಮಾಹಿತಿಯನ್ನು ಕೇಳಿ ಪಡೆಯುವ ಹಕ್ಕು, ಸಿಗದಿದ್ದರೆ ನ್ಯಾಯವಾದ ರೀತಿಯಲ್ಲಿ ಡಿಮಾಂಡ್ ಮಾಡುವ ಅಥವಾ ಪ್ರತಿಭಟಿಸುವ ಹಕ್ಕು ಪ್ರಜೆಗಳಿಗಿದೆ ಎನ್ನುವುದು ಅವರಿಗೆ ತಿಳಿಯಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಗಣರಾಜ್ಯ ದಿನ ಎನ್ನುವುದು ಜನಸಾಮಾನ್ಯರಲ್ಲಿ ಎಷ್ಟು ಕಾಲ ಬೆಳೆದು ಬಂದಿರುವ ಭಯ ಮತ್ತು ಅಜ್ಞಾನವನ್ನು ತೊಲಗಿಸಿ, ಜವಾಬ್ದಾರಿಯುತ ಮತದಾರರಾಗಿ ಉತ್ತಮ ಆಡಳಿತೆಯನ್ನು ಪಡೆಯುವುದು ಹೇಗೆ ಎಂದು ತಿಳಿಸುವ ದಿನವಾಗಬೇಕು. ಅದು ಹಬ್ಬದ ರೂಪದಲ್ಲಿದ್ದರೂ ಅಡ್ಡಿಯಿಲ್ಲ.