• ಹೌದು, ನಿನಗೆ ಮರುಳಾಗಿದ್ದೇನೆ. ಈಗಲೂ. ನನ್ನೊಳಗೆ ಇಷ್ಟು ತೀವ್ರವಾದ ದೇಹಭಾವವನ್ನು ಯಾರೂ ಮೂಡಿಸಿಲ್ಲ. ನಿನ್ನ ಸಂಬಂಧ ಕತ್ತರಿಸಿಕೊಂಡೆ. ಯಾಕೆಗೊತ್ತಾ. ಸುಮ್ಮನೆ ಹೀಗೆಬಂದು ಹಾಗೆ ಹೋಗುವ ಭ್ರಮೆ, ಮರುಳು ನನಗಿಷ್ಟವಿಲ್ಲ. ನನ್ನ ಮನಸ್ಸು ಒಪ್ಪಿಸುವ ಮೊದಲು ನನ್ನ ಆಲೋಚನೆಗಳನ್ನು ಒಪ್ಪಿಸಬೇಕು, ಭಾವವನ್ನು ಒಪ್ಪಿಸಬೇಕು, ನನ್ನ ಮನಸ್ಸು, ನನ್ನ ಕನಸುಗಳನ್ನು ಒಪ್ಪಿಸಬೇಕು.
    ಪ್ರೊಫೆಸರ್ ಓ.ಎಲ್. ನಾಗಭೂಷಣ ಸ್ವಾಮಿಯವರು ಅನುವಾದಿಸಿದ ಸಿಲ್ವಿಯಾ ಪ್ಲಾತ್ ದಿನಚರಿ ಬರಹಗಳ ಆರನೆಯ ಕಂತು.

 

21.
ಮೆತ್ತಗಿರುವ ದಪ್ಪ ಕುಶನ್ನಿನ ಆರಾಮ ಕುರ್ಚಿಯಲ್ಲಿ ಕೂತಿದ್ದೇನೆ. ಹೊರಗೆ ಜೀರುಂಡೆ ಸದ್ದು. ಇದು ಲೈಬ್ರರಿ. ನನ್ನ ಪ್ರಿಯವಾದ ರೂಮು. ನೆಲಕ್ಕೆ ಮಧ್ಯಕಾಲೀನ ಮೊಸಾಯಿಕ್ ಚೌಕ ಕಲ್ಲುಗಳನ್ನು ಕೂರಿಸಿದ್ದಾರೆ. ಆ ಕಲ್ಲುಗಳಿಗೆ ಹಳೆಯ ಪುಸ್ತಕಗಳ ಬೈಂಡಿಂಗಿನ ಬಣ್ಣ ಇದೆ—ತುಕ್ಕಿನ ಬಣ್ಣ, ತಾಮ್ರದ ಬಣ್ಣ, ಕಿತ್ತಳೆ ಸಿಪ್ಪೆಯ, ಮೆಣಸು ಕಂದಿನ, ಮರೂನ್ ಬಣ್ಣಗಳಿವೆ. ಅಲ್ಲಲ್ಲಿ ಚರ್ಮ ಕಿತ್ತು ಬರುತ್ತಿರುವ ಕುರ್ಚಿಗಳಿವೆ. ಕಿತ್ತ ಚರ್ಮದ ಕಿಂಡಿಯಲ್ಲಿ ಒಳಗಿನ ತಮಾಷೆಯಾಗಿ ಕಾಣುವ ಪಿಂಕು ವಿನ್ಯಾಸಗಳಿವೆ. ಮಳೆಗಾಲದ ದಿನಗಳನ್ನು ಹಾಯಾಗಿ ಕಳೆಯುವುದಕ್ಕೆ ಬೇಕಾದ ಪುಸ್ತಕಗಳೆಲ್ಲ ಈ ಶೆಲ್ಫುಗಳಲ್ಲಿವೆ. ನೂರಾರು ಬೆರಳುಗಳು ಗೆಳೆತನದ ಸ್ಪರ್ಶದೊಡನೆ ಆಡಿರುವ ಪುಟಗಳು…

ಇಲ್ಲಿ ಕೂತಿರುತ್ತ, ನನ್ನಷ್ಟಕ್ಕೇ ನಗುತ್ತ ಇರುವಾಗ ತುಂಡು ತುಂಡು ಯೋಚನೆ ಬರುತ್ತವೆ: ‘ಹೆಂಗಸು ಅಂದರೆ ಉದ್ರೇಕದ ಯಂತ್ರ. ಕೂದಲ ಬುಡದಿಂದ ಉಗುರ ತುದಿಯವರೆ ಲೋಕವನ್ನು ಅಣಕಿಸುವವಳು.’

ಆಮೇಲೆ, ಮಹಡಿಯ ಮೇಲೆ ಮಲಗಿರುವ ಮುದ್ದುಮಕ್ಕಳನ್ನು ನೆನೆದಾಗ ಅನಿಸುತ್ತದೆ: ‘ಮನೆಯಲ್ಲಿದ್ದುಕೊಂಡು, ಗಂಡನ ಜೊತೆ ಬದುಕುತ್ತಾ ಮಕ್ಕಳ ತಳಿ ಬೆಳೆಸುವುದು ಸುಖವಲ್ಲವೇ…’.

ಲಿಝ್ ನೆನಪಾದಳು. ಗಾಳಿಯಲ್ಲಿ ಚದುರಿದ ಬೂದಿಯಂತ ಬಿಳಿಯ ಬಣ್ಣದ ಮುಖದವಳು, ಕೆಂಪನೆ ತುಂಬು ತುಟಿಯವಳು, ಆ ತುಟಿಗೆಲ್ಲ ಸಿಗರೇಟಿನ ಕಲೆ ಮೆತ್ತಿಕೊಂಡವಳು, ಬಿಗಿಯಾದ ಕಪ್ಪು ಜೆರ್ಸಿಯ ಹಿಂದೆ ಬಿಗಿಕಟ್ಟಾದ ತುಂಬು ಮೊಲೆ ಅಡಗಿಸಿಕೊಂಡವಳು ಹೇಳಿದ್ದಳು—‘ಗಂಡಸಿಗೆ ನೀನೆಷ್ಟು ಸುಖ ಕೊಡತೀಯ, ಇವತ್ತಲ್ಲ, ಮುಂದೆ ಒಂದು ದಿನ. ಯೋಚನೆ ಮಾಡಿ ನೋಡು.;

ಯೋಚನೆ ಮಾಡತೇನೆ. ಅದೇನೋ ಸರಿ. ಯೋಚನೆಯ ಪುಟ ತಿರುಗಿಸಿ ಮನಸ್ಸಿನಲ್ಲೆ ಇದನ್ನು ಕಂಡಾಗ, ಬೇಸ್‌ ಬಾಲ್ ಆಟ ನೋಡುತ್ತ ಅಥವಾ ಟಿವಿ ನೋಡುತ್ತ, ಅಥವಾ ಹುಡುಗರು ಹೇಳಿದ ಕೊಳಕು ಜೋಕು ಕೇಳಿ ಮೈ ಮರೆತು ನಗುತ್ತ ಇರುವಾಗ, ಹಸಿರು ಬಣ್ಣದ, ಹೊನ್ನಿನ ಬಣ್ಣದ ಬೀರ್ ಕ್ಯಾನುಗಳು ಆ್ಯಶ್ ಟ್ರೇಗಳು ಮತ್ತೆ ಮನಸಿನಲ್ಲಿ ಯೋಚನೆಯ ಸುಳಿಗಳು ಸುತ್ತುತ್ತವೆ. ಇಲ್ಲೇ ಕೂತು ಯೋಚನೆಗಳ ಪ್ರವಾಹದಲ್ಲಿ ಈಜುತ್ತ, ಮುಳುಗುತ್ತ ಬಯಕೆ ಹಂಬಲಗಳು ಹೊಟ್ಟೆಯನ್ನು ತೊಳಸುತ್ತವೆ.

ಸಂಪ್ರದಾಯ ಮುರಿದರೆ ಅನಾಹುತವೆನ್ನುವ ಇಂಜೆಕ್ಷನ್ನನ್ನು ನನ್ನ ಪ್ರಜ್ಞೆಗೇ ಚುಚ್ಚಿಬಿಟ್ಟಿದ್ದಾರೆ. ಬೇಲಿಯಂಚಿಗೆ ಒರಗಿ ನಿಲ್ಲಬಹುದು ಅಷ್ಟೆ, ಹಾಗೆ ಒರಗಿ ನಿಂತು ಹುಡುಗರ ಬಗ್ಗೆ ಹೊಟ್ಟೆಯಕಿಚ್ಚು ಅನುಭವಿಸಬಹುದು—ತಮ್ಮಲ್ಲಿರುವ ಕಾಮದ ಆಸೆಯನ್ನು ಎಷ್ಟು ಮುಕ್ತವಾಗಿ ಹೇಳಿಕೊಳ್ಳುತ್ತಾರೆ ಹುಡುಗರು, ಯಾರೂ ಅವರನ್ನು ತಪ್ಪು ತಿಳಿಯರು, ಹಾಗಂದುಕೊಳ್ಳುತ್ತ ಹುಡುಗರ ಮೇಲೆ ದ್ವೇಷ ಹುಟ್ಟುತ್ತದೆ. ನಾನು ಮಾತ್ರ ಕಿಚಿಪಿಚಿ ಆಸೆಯನ್ನು ಹೊತ್ತುಕೊಂಡು, ಸದಾ ಅತೃಪ್ತಳಾಗಿ ಒಂದು ಡೇಟಿನಿಂದ ಇನ್ನೊಂದು ಡೇಟಿಗೆ ಕಾಲೆಳೆದುಕೊಂಡು ಸಾಗಬೇಕು, ಥೂ, ದರಿದ್ರ…

22.
ಹೌದು, ನಿನಗೆ ಮರುಳಾಗಿದ್ದೇನೆ. ಈಗಲೂ. ನನ್ನೊಳಗೆ ಇಷ್ಟು ತೀವ್ರವಾದ ದೇಹಭಾವವನ್ನು ಯಾರೂ ಮೂಡಿಸಿಲ್ಲ. ನಿನ್ನ ಸಂಬಂಧ ಕತ್ತರಿಸಿಕೊಂಡೆ. ಯಾಕೆಗೊತ್ತಾ. ಸುಮ್ಮನೆ ಹೀಗೆಬಂದು ಹಾಗೆ ಹೋಗುವ ಭ್ರಮೆ, ಮರುಳು ನನಗಿಷ್ಟವಿಲ್ಲ. ನನ್ನ ಮನಸ್ಸು ಒಪ್ಪಿಸುವ ಮೊದಲು ನನ್ನ ಆಲೋಚನೆಗಳನ್ನು ಒಪ್ಪಿಸಬೇಕು, ಭಾವವನ್ನು ಒಪ್ಪಿಸಬೇಕು, ನನ್ನ ಮನಸ್ಸು, ನನ್ನ ಕನಸುಗಳನ್ನು ಒಪ್ಪಿಸಬೇಕು. ನನ್ನಲ್ಲಿರುವ ಇವು ಯಾವುವೂ ನಿನ್ನಲ್ಲಿರಲಿಲ್ಲ.

ಓ. ಎಲ್, 23.
ಜೊತೆಗಾರನನ್ನು ಹುಡುಕಿಕೊಳ್ಳುವ ಈ ಆಟದಲ್ಲಿ ಎಷ್ಟು ನೋವಿದೆ, ಎಂಥ ಪರೀಕ್ಷೆ ಇದೆ, ಎಂಥ ಹತಾಶೆ ಇದೆ. ಇದು ಆಟವೆನ್ನುವುದೇ ಮರೆತು ಹೋಗುತ್ತದೆ. ಕಣ್ಣಲ್ಲಿ ನೀರು ತುಂಬಿಕೊಂಡು ಮುಖ ತಿರುಗಿಸಬೇಕಾಗುತ್ತದೆ.

24.
ಯೋಚನೆಗಳಿರದಿದ್ದರೆ, ಕಾಮದ ಇಂದ್ರಿಯವಿರದಿದ್ದರೆ ಸುಖವಾಗಿರುತಿದ್ದೆ. ಭಾವನೆಗಳ ಬಯಲ ಬೇಲಿಯ ಅಂಚಿನಲ್ಲಿ ನಿಂತು ಹೀಗೆ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿರಲಿಲ್ಲ.

ಸಂಪ್ರದಾಯ ಮುರಿದರೆ ಅನಾಹುತವೆನ್ನುವ ಇಂಜೆಕ್ಷನ್ನನ್ನು ನನ್ನ ಪ್ರಜ್ಞೆಗೇ ಚುಚ್ಚಿಬಿಟ್ಟಿದ್ದಾರೆ. ಬೇಲಿಯಂಚಿಗೆ ಒರಗಿ ನಿಲ್ಲಬಹುದು ಅಷ್ಟೆ, ಹಾಗೆ ಒರಗಿ ನಿಂತು ಹುಡುಗರ ಬಗ್ಗೆ ಹೊಟ್ಟೆಯಕಿಚ್ಚು ಅನುಭವಿಸಬಹುದು

25.
B. ಮನೆಗೆ ಬರುತ್ತಾನೆ, ಪೂರಾ ನನ್ನವನು. ನನಗೂ ಸ್ವಲ್ಪ ನೆಮ್ಮದಿ. ನಮಗೆಲ್ಲ ರಕ್ಷಣೆಯ ಅಗತ್ಯ ಎಷ್ಟೊಂದಿದೆ! ನಮ್ಮ ಆತ್ಮ ಒರಗಿ ಸುಧಾರಿಸಿಕೊಳ್ಳುವುದಕ್ಕೆ ಇನ್ನೊಂದು ಆತ್ಮ ಬೇಕು, ನಮ್ಮನ್ನು ಬೆಚ್ಚಗಿಡುವುದಕ್ಕೆ ಇನ್ನೊಂದು ಮೈಯಿ ಬೇಕು. ನಂಬಿಕೆ ವಿಶ್ವಾಸ ಹಂಚಿಕೊಳ್ಳಬೇಕು. ನನಗೆ ಅಂಥವರು ಬೇಕು. ನನ್ನನ್ನೇ ಸುರಿಯುವುದಕ್ಕೆ ತಕ್ಕಂಥವರು. ಗಂಡಸು ಬೇಕು. ಸ್ಪಷ್ಟವಾಗಿರುವ ಸಂಗತಿ ಇದು—ಅಂಥ ಗಂಡು ನನಗೆ ಇನ್ನೂ ಸಿಕ್ಕಿಲ್ಲ.

26.
ಒಂದಷ್ಟು ಕಾಲ ಕಳೆದಮೇಲೆ ಮದುವೆ, ಮಕ್ಕಳು ಅನ್ನುವ ವಿಚಾರಕ್ಕೆ ಹೊಂದಿಕೊಂಡುಬಿಡುತ್ತೇನೋ ಏನೋ. ಇಂದ್ರಿಯಗಳ ಕಾವಳದಲ್ಲಿ ನನ್ನ ನಾನು ವ್ಯಕ್ತಪಡಿಸಿಕೊಳ್ಳುವ ಆಸೆಯನ್ನು ಮದುವೆ, ಮಕ್ಕಳು ನುಂಗಿಹಾಕದಿದ್ದರೆ ಸರಿ. ಮದುವೆಯೂ ಒಂದು ಥರದ ವ್ಯಕ್ತಪಡಿಸಿಕೊಳ್ಳುವ ಕೆಲಸವೇ. ಆದರೆ, ನನ್ನ ಕಲೆ, ನನ್ನ ಬರವಣಿಗೆ ಅನ್ನುವುದು ಮದುವೆಯಾದ ತಕ್ಷಣವೇ ಒಣಗಿ ಹೋಗುವ ಬರಿಯ ಕಾಮದಾಸೆಯನ್ನು ಉದಾತ್ತಗೊಳಿಸುವ ಕೆಲಸವಲ್ಲ. ನನಗೆ ಅವನು ಸಿಗಬೇಕು ಅಷ್ಟೇ. ಜಾಣ, ವಿವೇಕಿ. ಆದರೂ ಅಯಸ್ಕಾಂತದ ಹಾಗೆ ಸೆಳೆಯುವ ಮೈಯವನು, ಚಂದವಾಗಿ ಇರುವವನು. ಇಂಥದನ್ನೆಲ್ಲ ಅರ್ಪಿಸುವುದಕ್ಕೆ ನಾನು ಸಿದ್ಧಳಾಗಿರುವಾಗ ಅಂಥ ಗಂಡು ಬೇಕು ಅನ್ನುವ ನಿರೀಕ್ಷೆ ನಾನು ಯಾಕೆ ಇಟ್ಟುಕೊಳ್ಳಬಾರದು?

ಅರ್ಜಿದಾರರು

ಮೊದಲು ಹೇಳಿ—ಎಂಥವರು ನೀವು
ಕಣ್ಣು ಗಾಜಿನದ್ದಾ? ಹಲ್ಲು ಕಟ್ಟಿಸಿಕೊಂಡದ್ದಾ? ನಡೆಯುವುದಕ್ಕೆ
ಊರುಗೋಲು ಬೇಕಾ? ಮೊಳಕಾಲು ಆಪರೇಶನ್ನಾಗಿದೆಯಾ?
ಹಾರ್ಟು? ರಬ್ಬರಿನ ತುಂಬಿದೆದೆ?

ಇರಬೇಕಾದದ್ದು ಏನೋ ಇಲ್ಲ
ಎಂದು ತೋರುವ ಹೊಲಿಗೆ ಹಾಕಿದ ಗುರುತು ಇದೆಯಾ?
ಇಲ್ಲ! ಇಲ್ಲವಾ? ಹಾಗಿದ್ದರೆ ನಿಮಗೇನು ಕೊಡೋಣ? ಹೇಗೆ ಕೊಡೋಣ?

ಅಳಬೇಡಿ, ಅಳಬೇಡಿ.
ಎಲ್ಲಿ ನಿಮ್ಮ ಕೈ ತೆರೆಯಿರಿ.
ಖಾಲೀ? ಖಾಲಿ. ಇಗೋ ಇಲ್ಲೊಂದು ಕೈ ಇದೆ.

ನಿಮ್ಮ ಖಾಲಿ ಕೈಯನ್ನು ತುಂಬುತ್ತದೆ ಇದು.
ನಿಮಗೆ ಟೀ ತರುತ್ತದೆ, ನಿಮ್ಮ ತಲೆ ನೋವು ಒರೆಸಿಹಾಕುತ್ತದೆ,
ಮದುವೆಯಾಗುತ್ತೀರಾ ಇದನ್ನು?
ಗ್ಯಾರಂಟಿ ಇದೆ, ಖಂಡಿತ

ಕಣ್ಣು ರೆಪ್ಪೆ ಬಲವಾಗಿ ಒತ್ತಿ ಮುಚ್ಚುವುದು
ದುಃಖವನ್ನು ಕರಗಿಸಿಬಿಡುವುದು.
ಉಪ್ಪು ಬಳಸಿ ಹೊಸ ಹೊಸ ಸರಕು ದಿನವೂ ತಯಾರಿಸುತ್ತೇವೆ.
ಈ ಸೂಟು ಹೇಗೆ—

ಗಂಭೀರ ಕಪ್ಪು, ಸ್ವಲ್ಪ ಬಿಗಿ,
ಆದರೂ ಸರಿಯಾಗಿ ಕೂರತ್ತೆ. ಮದುವೆಯಾಗುತ್ತೀರಾ ಇದನ್ನ?
ನೆನೆಯಲ್ಲ, ಮುರಿಯಲ್ಲ, ಬೆಂಕಿ, ಬಾಂಬು ಬಿದ್ದರೂ ಜಗ್ಗಲ್ಲ.
ನನ್ನ ಮಾತು ನಂಬಿ. ನಿಮ್ಮ ಕಾಲವಾದ ನಂತರ ಇದರಲ್ಲೇ ಮಲಗಿಸಿ ಸಮಾಧಿಮಾಡುತ್ತಾರೆ.

ನಿಮ್ಮ ತಲೆ, ದಯವಿಟ್ಟು ಕ್ಷಮಿಸಿ, ಖಾಲಿಯಾಗಿದೆ.
ಅದಕ್ಕೂ ಪರಿಹಾರವಿದೆ.
‘ಬಾ, ಸ್ವೀಟೀ, ಹೊರಕ್ಕೆ ಬಾ.’
ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನೂ?

ಈಗ ಬತ್ತಲು ಹಾಳೆಯ ಹಾಗೆ,
ಇನ್ನಿಪ್ಪತ್ತೈದು ವರ್ಷಕ್ಕೆ ಬೆಳ್ಳಿ,
ಐವತ್ತಕ್ಕೆ ಚಿನ್ನ. ಜೀವಂತ ಬೊಂಬೆ.

ನೀವು ಕಣ್ಣಿಟ್ಟು ತೋರಿದ ಕೆಲಸ ಮಾಡತ್ತೆ,
ಅಡುಗೆ ಮಾಡತ್ತೆ, ಬಟ್ಟೆ ಹೊಲಿಯತ್ತೆ,
ಮತಾಡತ್ತೆ, ಮಾತು ಮಾತು,
ಕೆಲಸ ಮಾಡತ್ತೆ ತಪ್ಪಿಲ್ಲದೆ

ಕುಂದಿಲ್ಲ, ಕೊರತೆಯಿಲ್ಲ.
ನೀವು ತೂತಾದರೆ ಇದು ಪೌಲ್ಟೀಸು
ನೀವು ಕಣ್ಣಾದರೆ ಇದು ಬಿಂಬ
ಅಯ್ಯಾ ಹುಡುಗಾ, ಕೊನೆಯ ಅವಕಾಶ, ಮದುವೆಯಾಗುತ್ತೀಯಾ

ಮದುವೆಯಾಗು, ಮದುವೆಯಾಗು, ಆಗು, ಆಗು, ಆಗು.

(ದಿ ಅಪ್ಲಿಕೆಂಟ್ ಎಂಬ ಕವಿತೆಯನ್ನು ಸಿಲ್ವಿಯಾ ಪ್ಲಾತ್ ಬರೆದದ್ದು 1062ರಲ್ಲಿ, ಆಕೆ ಸಾಯುವ ಒಂದು ವರ್ಷ ಮೊದಲು. ಈ ಕವಿತೆಯಲ್ಲಿ ಓದುಗರೇ ‘ಅರ್ಜಿದಾರ’ನ ಸ್ಥಾನದಲ್ಲಿರುತ್ತಾರೆ. ಪ್ರಶ್ನೆಗಳನ್ನು ಕೇಳುತ್ತಿರುವ ವ್ಯಕ್ತಿ ಕೆಲವೊಮ್ಮೆ ಗಂಡಸರನ್ನು, ಕೆಲವೊಮ್ಮೆ ಹೆಂಗಸರನ್ನು ಉದ್ದೇಶಿಸಿ ಕೇಳಿದ ಹಾಗಿದೆ. ಪ್ರಶ್ನೆ ಕೇಳುವಾತ ಸೇಲ್ಸ್ ಮ್ಯಾನ್ ಥರ ಮಾತಾಡುತ್ತಾನೆ ಅನಿಸುತ್ತದೆ. ಈ ಕವಿತೆಯದ್ದು ಕರಾಳ ಹಾಸ್ಯ. ವಾಣಿಜ್ಯ ಪ್ರಧಾನವಾದ ಸಮಾಜದಲ್ಲಿ ಮದುವೆಯೂ ಮಾರಾಟದ ಸರಕು ಅನ್ನುವ ಧ್ವನಿ ಈ ಕವಿತೆಯಲ್ಲಿದೆ.)

The Applicant

First, are you our sort of a person?
Do you wear
A glass eye, false teeth or a crutch,
A brace or a hook,
Rubber breasts or a rubber crotch,

Stitches to show something’s missing? No, no? Then
How can we give you a thing?
Stop crying.
Open your hand.
Empty? Empty. Here is a hand

To fill it and willing
To bring teacups and roll away headaches
And do whatever you tell it.
Will you marry it?
It is guaranteed

To thumb shut your eyes at the end
And dissolve of sorrow.
We make new stock from the salt.
I notice you are stark naked.
How about this suit——

Black and stiff, but not a bad fit.
Will you marry it?
It is waterproof, shatterproof, proof
Against fire and bombs through the roof.
Believe me, they’ll bury you in it.

Now your head, excuse me, is empty.
I have the ticket for that.
Come here, sweetie, out of the closet.
Well, what do you think of that?
Naked as paper to start

But in twenty-five years she’ll be silver,
In fifty, gold.
A living doll, everywhere you look.
It can sew, it can cook,
It can talk, talk, talk.

It works, there is nothing wrong with it.
You have a hole, it’s a poultice.
You have an eye, it’s an image.
My boy, it’s your last resort.
Will you marry it, marry it, marry it.