ಬದುಕಿನ ರಮ್ಯತೆ ಭಗ್ನಗೊಳಿಸಿದ ನಿನಗೆ ಕೃತಜ್ಞತೆಗಳು
ಮಲ್ಲಿಗೆ ಮನಕೆ ಕೊಳ್ಳಿಯಿರಿಸಿದ ನಿನಗೆ ಕೃತಜ್ಞತೆಗಳು

ಜಗದ ಚೆಲುವಿಗೆ ಬೀಗಿ ಬಿಳಿಯದೆಲ್ಲ ಹಾಲೆಂದುಕೊಂಡೆ
ನೊರೆಯ ಹಾಲಿಗೂ ಹುಳಿಹಿಂಡಿದ ನಿನಗೆ ಕೃತಜ್ಞತೆಗಳು

ಋತುವಿನ ಸಹಜಗುಣ ತಿಳಿಯದೆ ಸುಮ್ಮನೆ ದೂರಿದೆನಲ್ಲ
ಉಸುರಿಗೂ ಕೆಂಡದ ಲೇಪನೀಡಿದ ನಿನಗೆ ಕೃತಜ್ಞತೆಗಳು

ಇರುಳ ನಿದಿರೆಯನು ದೂರವಿರಿಸಿ ನಕ್ಷತ್ರವೆಣಿಸುತ ಕುಳಿತೆ
ಸವಿಗನಸ ನೆಮ್ಮದಿಗೂ ಕನ್ನವಿರಿಸಿದ ನಿನಗೆ ಕೃತಜ್ಞತೆಗಳು

ಮಾಸಿದ ಮುಖದಲೂ ಚೆಲುವು ಮೂಡಿಸುವ ಹುಂಬತನ
ನನ್ನೊಳಗಿನ ಕಾರಂಜಿ ನಗೆನುಂಗಿದ ನಿನಗೆ ಕೃತಜ್ಞತೆಗಳು

ಊಹಿಸಲಾಗದ ತಿರುವಿನ ಹಾದಿಯ ಚಮತ್ಕಾರ ಅದು
ಶ್ರಾವಣ ಸೋನೆಗೂ ನೋವುಣ್ಣಿಸಿದ ನಿನಗೆ ಕೃತಜ್ಞತೆಗಳು

ಬಿಡದ ವ್ಯಾಮೋಹವೆ ಕೊನೆಗೆ ಮುಳುವಾಯಿತಲ್ಲ `ಗಿರಿ’
ಇತಿಹಾಸದ ದುರಂತಕಥೆ ನೆನಪಿಸಿದ ನಿನಗೆ ಕೃತಜ್ಞತೆಗಳು