ಅಡ್ವಾನ್ಸ್ ಕೊಟ್ಟೋದ ಸಾಬರು ಕೆಲವೊಮ್ಮೆ ರೇಟ್ ಬಿದ್ದೋಗಿದೆ ಎಂದು ಮರದಿಂದ ಹಣ್ಣು ಉದುರಿ ಹೋಗುತ್ತಿದ್ದರೂ ಬರುತ್ತಿರಲಿಲ್ಲ. ಅಪ್ಪ ಇನ್ನೂರೊ ಮುನ್ನೂರೊ ಅಡ್ವಾನ್ಸ್‌ಗೆ ಕಟಿಬಿದ್ದು ಉದುರುವ ಹಣ್ಣುಗಳನ್ನು ನೋಡಿಕೊಂಡು ಇನ್ನೊಬ್ಬರಿಗೂ ಕೊಡದೆ ಲಾಸ್ ಮಾಡಿಕೊಂಡದ್ದೂ ಇದೆ. ಸಾಬರು ಮರಗಳಿಗೆ ಕೊಟ್ಟೋದ ಅಡ್ವಾನ್ಸ್‌ ಹಣದಲ್ಲಿ ಅಪ್ಪ ಪ್ರತಿ ವರ್ಷ ನಮಗೆ ಬರೆಯುವ ನೋಟ್ ಬುಕ್ಕು ಕೊಡಿಸುತ್ತಿತ್ತು, ಪೂರ್ತಿ ಹಣ ಕೊಟ್ಟ ಮೇಲೆ ಅಕ್ಕಂದಿರಿಗೆ ಮತ್ತು ನಮಗೆ ಯೂನಿಫಾರ್ಮ್‌ ಕೊಡಿಸುತ್ತಿತ್ತು. ‘ನಮ್ಮುಡುಗರ ವಿದ್ಯಾಭ್ಯಾಸ ಮಾಡುಸ್ತಿರದು ಈ ಮರಗಳೆ’ ಎಂದು ಅಪ್ಪ ಹಲವರ ಹತ್ತಿರ ಹೇಳಿಕೊಳ್ಳುತ್ತಿದ್ದನ್ನ ಕೇಳಿಸಿಕೊಂಡಿದ್ದೇನೆ.
‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಅನುಭವ ಕಥನದ ಹನ್ನೊಂದನೆಯ ಕಂತು.

ಸರ್ಕಲ್‌ನಲ್ಲಿರುವ ಗೋಪಾಲಶೆಟ್ಟಿ ಅಂಗಡಿಗೆ ಕರೆದುಕೊಂಡು ಹೋಗಿ ಎಲ್ಲಾ ಅಂಗಿಗಳಿಗೂ ಮ್ಯಾಚ್ ಆಗುವಂತೆ ಕಪ್ಪು ಬಣ್ಣದ ಒಂದು ಪ್ಯಾಂಟ್ ಪೀಸ್ ಹಾಗು ಪಟ್ಟೆ ಪಟ್ಟೆಯ ಒಂದು ಸ್ಲಾಗ್ ಪೀಸ್ ಕೊಡಿಸಿತು. ತಕ್ಷಣದ ಪರಿಹಾರವಾಗಿ ನೀಲಿ ಗೆರೆಯ ಒಂದು ರೆಡಿಮೇಡ್ ಶರ್ಟ್ ಕೊಡಿಸಿತು. ಜೇಪಿಗೂ ಒಂದುಜೊತೆ ಕೊಡಿಸಿ ಬಟ್ಟೆಯನ್ನು ಹತ್ತಿರದ ಟೈಲರ್ ಹತ್ತಿರ ಹೊಲಿಯಲು ಹಾಕಲು ಹೇಳಿ ಅದರ ಕೂಲಿ ಎಂದು ರೂ ನೂರನ್ನ ಕೊಟ್ಟು ಹೋಯಿತು. ಆದಿನದ ನನ್ನ ಸಂಭ್ರಮ ಹೇಳತೀರದು. ಮನಸ್ಸೆಲ್ಲ ಉಲ್ಲಾಸದಿಂದ ಕುಣಿದಾಡುತ್ತಿತ್ತು. ಸಂಜೆಯೇ ಸರ್ಕಾರಿ ನೌಕರರ ಬಿಲ್ಡಿಂಗ್ ಸಮೀಪವಿದ್ದ ಎಸ್‌ಎಲ್‌ಎನ್‌ ಟೈಲರ್‍ಗೆ ಹೋಗಿ ಹೊಲಿಯಲು ಹಾಕಿ ಬಂದೆ. ಆತ ಹೇಳಿದ ಟೈಮಿಗೆ ಸರಿಯಾಗಿ ಕೊಡದೆ ಒಂದೆರೆಡು ದಿನ ಅಲೆಸಿ ತಡವಾಗಿ ಕೊಟ್ಟ. ಹೊಸ ಬಟ್ಟೆ ಧರಿಸುವ ಆ ದಿನಗಳಲ್ಲಂತೂ ನಾನು ಸ್ಕೂಲಿಗೋಗುವ ಸಂಭ್ರಮ ಇನ್ನೂ ಹೆಚ್ಚಿತ್ತು.

ಅಕ್ಕ ನೋಡಲು ಬಂದಾಗ

ಇದೇ ಹೊತ್ತಲ್ಲಿ ತುಮಕೂರಿನಲ್ಲಿ ನಡೆಯುತ್ತಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲ ಹಂತದ ಚಿತ್ರಕಲಾ ಸ್ಪರ್ಧೆಗೆ ಡಿವಿಪಿ ಶಾಲೆಯಿಂದ ನನ್ನನ್ನ ಆಯ್ಕೆಮಾಡಿ ಕರೆದುಕೊಂಡು ಹೋದರು. ಭರತನಾಟ್ಯ, ಸಂಗೀತ ಮುಂತಾದ ಸ್ಪರ್ಧೆಗಳೂ ಸಹ ಇದ್ದವು. ಅವುಗಳ ಸ್ಪರ್ಧೆಗೆಂದು ನಮ್ಮ ಶಾಲೆಯಿಂದ ಓದಿನಲ್ಲೂ ಮುಂದಿದ್ದ ಕೆಲ ವಿದ್ಯಾರ್ಥಿನಿಯರನ್ನ ಕರೆದುಕೊಂಡು ಬಂದಿದ್ದರು. ಅವರಲ್ಲಿ ಬಹುತೇಕರು ಬ್ರಾಹ್ಮಣರಾಗಿದ್ದರು. ಆ ಸ್ಪರ್ಧೆಯಲ್ಲಿ ನಾನು ಬರೆದ ‘ಕುಡಿತದ ಕೆಡಕುಗಳು’ ಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿತು. ನಮ್ಮ ಶಾಲೆಯ ಇನ್ಯಾರಿಗೂ ಬಹುಮಾನ ಬಂದಂತಿರಲಿಲ್ಲ! ಈ ಸ್ಪರ್ಧೆ ನನಗೆ ಶಾಲೆಯಲ್ಲಿ ಉತ್ತಮ ಗೌರವ ತಂದು ಕೊಟ್ಟಿತು. ಬೆಳಗಿನ ಪ್ರೇಯರ್‌ನಲ್ಲಿ ಎಲ್ಲರೆದುರಿಗೆ ಕರೆದು ಪ್ರಶಸ್ತಿ ಪತ್ರ ಕೊಟ್ಟಾಗ ಬಾರಿ ಚಪ್ಪಾಳೆ ಬಿದ್ದಿತ್ತು. ಆ ವರ್ಷದ ಮಟ್ಟಿಗೆ ಎಲ್ಲೆ ಚಿತ್ರಕಲಾ ಸ್ಪರ್ಧೆಗಳು ನಡೆದರೂ ಬಹುಮಾನ ಪಡೆಯುವವನು ನಾನೇ ಆಗಿರುತ್ತಿದ್ದೆ. ಈ ನೆಪದಲ್ಲಿ ಒಂದೆರಡು ಗೋಡೇಗಡಿಯಾರಗಳು ನನ್ನ ಪಾಲಾಗಿದ್ದವು. ಈ ನಡುವೆ ನಮ್ಮ ಶಾಲೆಯ ತರಾವರಿ ಬಣ್ಣದ ಹುಡುಗಿಯರೂ ಸಹ ನನ್ನನ್ನ ಮಾತಾಡಿಸಲು ಬರುತ್ತಿದ್ದರು.

ಒಮ್ಮೆ ಚಿತ್ರಕಲೆ ಕಲಿಸಿಕೊಡಲು ಬರುತ್ತಿದ್ದ ವಾಣಿ ಚಿತ್ರಕಲಾ ಕಾಲೇಜಿನ ಪ್ರಶಿಕ್ಷಣಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಮ್ಮ ಶಾಲೆಯಲ್ಲಿ ಏರ್ಪಟ್ಟಿತ್ತು. ನಾನು ಹೀಗೆಲ್ಲ ಬಹುಮಾನ ಪಡೆದದ್ದಕ್ಕಾಗಿ ಅನಿಸಿಕೆ ವ್ಯಕ್ತಪಡಿಸಬೇಕೆಂದು ತುಂಬಿದ ಸಭೆಯಲ್ಲಿ ಚಿತ್ರಕಲೆಯ ರವಿಶಂಕರ್ ಸರ್ ನನ್ನನ್ನು ವೇದಿಕೆಗೆ ಆಹ್ವಾನಿಸಿದರು. ನಾನೂ ಅದೇ ಧೈರ್ಯದಲ್ಲೆ ಹೋದೆ. ಆದರೆ ಒಂದೆರೆಡು ಮಾತು ಹೊರಬರುವ ಮುನ್ನವೆ ನನ್ನ ಎರಡೂ ಕಾಲುಗಳು ಗಡಗಡನೆ ನಡುಗತೊಡಗಿದವು. ಎಷ್ಟು ಪ್ರಯತ್ನಿಸಿದರೂ ಕಾಲುಗಳು ನಡುಗುವುದ ನಿಲ್ಲಿಸಲಿಲ್ಲ. ಬಾಯಿಂದ ಮಾತು ಹೊರಡದಾಯಿತು. ನಾನು ಅಲ್ಲಿ ನಿಂತಷ್ಟು ಕಾಲ ನೆರೆದಿದ್ದ ಸಭಿಕರಿಗೆ ಬಿಟ್ಟಿ ಮನರಂಜನೆಯಂತೂ ಸಿಕ್ಕಿತ್ತು. ಕೊನೆಗೆ ವೇದಿಕೆಯಲ್ಲಿದ್ದವರೇ ಕೂತ್ಕ ಹೋಗಪ್ಪ ಎಂದರು. ಪಣಾರನೆ ನೆಗೆದು ಬಂದು ಹುಡುಗರ ಮಧ್ಯೆ ಸೇರಿಕೊಂಡೆ.

ಅಪ್ಪ ಸೋಮಾರದ ಸಂತೆಗೆಂದು ಚಿ.ನಾ.ಹಳ್ಳಿಗೆ ಬರುತ್ತಿತ್ತು. ಹಾಗೆ ಬಂದಾಗ ಮಕ್ಕಳನ್ನು ಕಂಡು ಮಾತಾಡಿಸಿಕೊಂಡು ಹೋಗಲೆಂದು ಸ್ಕೂಲ್ ಹತ್ತಿರ ಬರುತ್ತಿತ್ತು. ಇಸ್ತ್ರಿ ಗೆರೆಗಳು ಅಳಿಸಿರದಂತ ಪ್ಯಾಂಟ್ ಶರ್ಟ್‌ಗಳನ್ನು ತೊಟ್ಟು ಇನ್‌ಷರ್ಟ್‌ ಮಾಡಿಕೊಂಡು ಟೂ ವೀಲರ್‌ಗಳಲ್ಲಿ ತಮ್ಮ ಮಕ್ಕಳನ್ನು ವಿಚಾರಿಸಿಕೊಳ್ಳಲು ಬರುತ್ತಿದ್ದ ಅಫೀಷಿಯಲ್ ಅಪ್ಪಂದಿರು, ಅಂಥವರ ಮಕ್ಕಳನ್ನು ಸ್ನೇಹಿತರನ್ನಾಗಿ ಪಡೆಯುವಂತೆ ಮಾಡಿದ್ದ ಅಪ್ಪ ಮಾಸಲು ಅಂಗಿ ತೊಟ್ಟು ಲುಂಗಿಯಲ್ಲಿ ಬರುತ್ತಿದ್ದುದನ್ನು ಕಂಡು ನಾನು ಬೇಸರಗೊಳ್ಳುತ್ತಿದ್ದೆ. ಅಪ್ಪನನ್ನು ದೂರದಲ್ಲೇ ಕಂಡ ತಕ್ಷಣವೇ ಬರಬರನೆ ಹೋಗಿ ಸೇರಿಕೊಳ್ಳುತ್ತಿದ್ದೆ.

ಒಮ್ಮೆ ನನಗೆ ವಿಪರೀತ ಚಳಿ ಜ್ವರ. ಕತ್ತು ಮೇಲೆತ್ತಲಾರದಂಥ ತಲೆನೋವು ಬಂದು ಸ್ಕೂಲಿಗೋಗದೆ ಹಾಸ್ಟೆಲ್ ಟ್ರಂಕಿನ ಸಂದಿಯಲ್ಲಿ ಮುದುಡಿದ್ದೆ. ಡಿಗ್ರಿ ಓದಲು ಕಾಲೇಜಿಗೆ ಬರುತ್ತಿದ್ದ ಕೋಮಲಕ್ಕನಿಗೆ ಹೇಗೊ ನನ್ನ ಅನಾರೋಗ್ಯದ ವಿಷಯ ತಿಳಿದು ವಿಚಾರಿಸಿಕೊಂಡು ಹೋಗಲು ಹಾಸ್ಟೆಲ್ ಹತ್ತಿರ ಬಂದಿತ್ತು. ತೀವ್ರ ನಿಶ್ಯಕ್ತನಾಗಿ ಮಲಗಿದ್ದ ನಾನು ಕಣ್ ಬಿಟ್ಟು ನೋಡಿದಾಗ ಅಲ್ಲಿ ಅಕ್ಕ ಮಾತ್ರವಿರದೆ ಅಕ್ಕನ ಗೆಳತಿಯರೂ ಇದ್ದರು. ಓದಿನಲ್ಲಿ ಎಲ್ಲರಿಗಿಂತ ಮುಂದಿದ್ದ ಅಕ್ಕನಿಗೆ ಟೌನಿನ ಶ್ರೀಮಂತ ಹುಡುಗಿಯರ ಸ್ನೇಹವೂ ಸಿಕ್ಕಿತ್ತು. ಅವರ ಡ್ರೆಸ್, ಮೇಕಪ್, ಘಮ ಘಮ ಅದನ್ನು ಸಾರಿ ಹೇಳುತ್ತಿತ್ತು. ಅವರೆಲ್ಲರೂ ನನ್ನನ್ನು ನೋಡಲು ಬಂದಾಗ ನಾನು ಮಾಸಲು ಬೆಡ್ ಶೀಟ್ ಹೊದ್ದು ರೋಗ ಪೀಡಿತನಾಗಿ ಬಿದ್ದಿದ್ದೆ. ಅಕ್ಕ ಬಂದದ್ದೆ ಸುಡುತ್ತಿದ್ದ ಮೈ ಮುಟ್ಟಿ ಇಲ್ಲಿದ್ದರೆ ಜ್ವರ ಬಿಡುವುದಿಲ್ಲ ಊರಿಗೋಗೋಣ ಬಾ ಎಂದು ಬಟ್ಟೆ ಪ್ಯಾಕ್ ಮಾಡಲು ಟ್ರಂಕ್‌ನ ಮುಚ್ಚಳ ತೆರೆಯಿತು. ಟ್ರಂಕಿನೊಳಗೆ ಮಾಸಿರುವ ಬಟ್ಟೆಗಳು, ಅದರ ಪಕ್ಕದಲ್ಲೆ ಪುಸ್ತಕದ ಲೈನು, ಅದರ ಮೇಲೆ ಡಬ್ಬಿಯಿಂದ ಚೆಲ್ಲಿರುವ ಅರಳೆಣ್ಣೆ, ಅರ್ಧಂಬರ್ದ ಸವೆದಿರುವ ಸೋಪು ಇವೆಲ್ಲವುಗಳಿಂದ ಒಮ್ಮೆಲೆ ರಾಚಿದ ಗಬ್ ವಾಸನೆ… ಇದನ್ನೆಲ್ಲ ನೋಡಿ ಅಕ್ಕನ ಸ್ನೇಹಿತರಿಗೆ ಹೇಗೆನಿಸಿರಬೇಕೊ? ಅಕಸ್ಮಾತ್ ಬೇಸರವಾಗಿದ್ದರೂ ಬೆನ್ನಿಗೆ ಬಿದ್ದವನಲ್ಲವೇ ತೋರಗೊಡದೆ ಒಂದು ಬ್ಯಾಗಿಗೆ ಬಟ್ಟೆಗಳನ್ನು ತುಂಬಿಕೊಂಡು, ನನ್ನನ್ನೂ ಹಿಡಿದುಕೊಂಡು ಊರ ದಾರಿ ಹಿಡಿಯಿತು.

‘ಪ್ರಸಾದು ಹುಷಾರು’ ಎಕ್ಸಾಮು..

ಪರೀಕ್ಷೆಗಳು ಹತ್ತಿರಾಗತೊಡಗಿದವು. ನಾನಂತೂ ತುಂಬ ಶ್ರದ್ಧೆ ವಹಿಸಿ ಓದತೊಡಗಿದೆ. ನನ್ನ ಶ್ರದ್ಧೆಯ ಹಿಂದೆ ಫೇಲ್ ಆಗುವ ಭೀತಿ ಇತ್ತು. ಈ ರೀತಿಯ ಓದಿನ ಫಲವಾಗಿ ಕೆಲವೊಮ್ಮೆ ತರಗತಿಯ ಮುಂಚೂಣಿ ವಿದ್ಯಾರ್ಥಿಗಳಿಗಿಂತ ಮುಂಚಿತವಾಗಿಯೇ ಲೆಕ್ಕ ಮಾಡಿ ತೋರಿಸಿಬಿಡುತ್ತಿದ್ದೆ. ಆಗ ಗಣಿತದ ಮೇಷ್ಟ್ರು ಮತ್ತು ಹುಡುಗರು ಆಶ್ಚರ್ಯದಿಂದ ನೋಡುತ್ತಿದ್ದರು. ಹತ್ತನೆ ತರಗತಿಯ ಪಬ್ಲಿಕ್ ಪರೀಕ್ಷೆಗೆ ಕೇವಲ ಹದಿನೈದು ದಿನ ಮಾತ್ರವೇ ಬಾಕಿ ಇತ್ತು. ಅಷ್ಟೊತ್ತಿಗಾಗಲೆ ಉಳಿದ ತರಗತಿ ಹುಡುಗರ ಪರೀಕ್ಷೆಗಳು ಮುಗಿದು ಅವರು ಹಾಸ್ಟೆಲ್ ತೊರೆದು ಊರು ಸೇರಿದ್ದರು. ಹತ್ತನೆ ತರಗತಿಯ ಆರೇಳು ವಿದ್ಯಾರ್ಥಿಗಳು ಮಾತ್ರ ಹಾಸ್ಟೆಲ್‌ನಲ್ಲಿದ್ದೆವು. ಅಂದು ಯುಗಾದಿ ಹಬ್ಬವಿದ್ದ ಕಾರಣ ಒಂದೆರೆಡುದಿನ ಊರಿಗೋಗಿ ಬರುವುದಾಗಿ ಹೇಳಿ ಸಹಪಾಠಿ ಹುಡುಗರೂ ಹೋದರು. ಸದಾ ನನ್ನೊಂದಿಗಿರುತ್ತಿದ್ದ ಪುಟ್ರಾಜನೂ ಹೊರಟು ನಿಂತ. ಭಟ್ಟರುಗಳು ಇವನೂ ಹೊರಟರೆ ಸಾಮೂಹಿಕವಾಗಿ ಹಾಸ್ಟೆಲ್‌ಗೆ ರಜೆ ಮಾಡಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ ನಾನು ಹಾಸ್ಟೆಲ್‌ನಲ್ಲೆ ಇದ್ದು ಓದಿಕೊಳ್ಳಲು ತೀರ್ಮಾನಿಸಿದ್ದೆ. ಅಂದಿನ ರಾತ್ರಿ ಊಟದಲ್ಲಿ ನಾನೊಬ್ಬನೆ ಇದ್ದೆ. ಭಟ್ಟ ರಂಗಸ್ವಾಮಣ್ಣ ಊಟ ಬಡಿಸಿ ಹೋಗುವಾಗ ‘ಪ್ರಸಾದು ಹುಷಾರು ಕಣಪ್ಪ ಒಬ್ನೆ ಇದಿಯ, ಮೊದ್ಲೆ ದೆವ್ವ ಪವ್ವ ಅಂತ ಹೇಳ್ತಿರ್ತರೆ’ ಎಂದು ಹೇಳಿ ಹೋದ.

ಆ ವರ್ಷದ ಮಟ್ಟಿಗೆ ಎಲ್ಲೆ ಚಿತ್ರಕಲಾ ಸ್ಪರ್ಧೆಗಳು ನಡೆದರೂ ಬಹುಮಾನ ಪಡೆಯುವವನು ನಾನೇ ಆಗಿರುತ್ತಿದ್ದೆ. ಈ ನೆಪದಲ್ಲಿ ಒಂದೆರಡು ಗೋಡೇಗಡಿಯಾರಗಳು ನನ್ನ ಪಾಲಾಗಿದ್ದವು. ಈ ನಡುವೆ ನಮ್ಮ ಶಾಲೆಯ ತರಾವರಿ ಬಣ್ಣದ ಹುಡುಗಿಯರೂ ಸಹ ನನ್ನನ್ನ ಮಾತಾಡಿಸಲು ಬರುತ್ತಿದ್ದರು.

ರಾತ್ರಿ ಹತ್ತು ಗಂಟೆವರೆಗೂ ಏನೂ ಅನಿಸಲಿಲ್ಲ. ಟ್ರಂಕ್ ಹಿಂದೆ ಕೂತು ಓದಿಕೊಳ್ಳುತ್ತಿದ್ದೆ. ಹನ್ನೊಂದರ ಸುಮಾರಿಗೆ ರೀಸಸ್ ಮಾಡಲು ಹೊರಗಡೆ ಬಂದೆ. ಗವ್‌ಗತ್ತಲು! ದಿನಾ ಲೈಟ್ ಹಾಕಿರುತ್ತಿದ್ದ ಉಳಿದ ಕೊಠಡಿಗಳಲ್ಲಿ ಇಂದು ಕತ್ತಲು ತುಂಬಿತ್ತು. ಕಾಂಪೌಂಡ್ ಒಳಗಿದ್ದ ಮರಗಳು ಕಪ್ಪಟ್ಟೆ ಕರ್ರಗೆ ನಿಂತಿದ್ದವು. ನಿಧಾನಕ್ಕೆ ಭಯ ಆವರಿಸತೊಡಗಿತು. ಭಟ್ಟ ಹೇಳಿ ಹೋದದ್ದರ ಕಡೆಗೇ ಮನಸ್ಸು ಕೇಂದ್ರಿತವಾಗುತ್ತಿತ್ತು. ಅದರ ಜೊತೆಗೆ ನಮ್ಮ ಹುಡುಗರು ಆಗಿಂದಾಗ್ಗೆ ಮಾತಾಡುತ್ತಿದ್ದ ಹಾಸ್ಟೆಲ್ ಸುತ್ತಮುತ್ತಲ ಗಾಳಿ ದೆವ್ವದ ಕತೆಗಳು ಜೀವಪಡೆದುಕೊಂಡವು. ಎದೆ ಕೈಕಾಲು ನಡುಗತೊಡಗಿತು. ಅವಸರದಿಂದೋಗಿ ಕೊಠಡಿ ಸೇರಿಕೊಂಡೆ. ಟ್ರಂಕ್ ಹತ್ತಿರ ಕೂತು ಓದಲು ಪ್ರಯತ್ನಿಸಿದೆ. ಹಾಳೆಗಳ ಮೇಲೂ ಅದೆ ಬರಹ. ಮುಚ್ಚಿಟ್ಟು ಹಾಸಿಕೊಂಡೆ. ಬೆಡ್ ಶೀಟ್ ಹೊದ್ದು ಮಲಗಿದೆ. ಅದೇ ಚಿಂತೆಯಲ್ಲಿದ್ದ ನನಗೆ ಯಾವಾಗ ನಿದ್ದೆ ಹತ್ತಿತೊ ಗೊತ್ತಿಲ್ಲ. ಅಂತೂ ಬೆಳಗ್ಗೆ ಎದ್ದೆ. ಊರಿಗೆ ಹೋಗಬೇಕೆನಿಸಿದರೂ ಹೋಗಲಿಕ್ಕಾಗುತ್ತಿರಲಿಲ್ಲ. ಅಪ್ಪ ಅಮ್ಮ ಮಗ ದೊಡ್ಡವನಾಗಿದ್ದಾನೆಂದು ಭಾವಿಸಿದಂತಿತ್ತು. ದೊಡ್ಡ ಕಟ್ಟಡದ ಹಾಸ್ಟೆಲ್‌ನಲ್ಲಿ ಮೂರು ರಾತ್ರಿ ಹೀಗೆ ಒಬ್ಬನೆ ಕಳೆದೆ.

ಹತ್ತನೆ ತರಗತಿ ಪರೀಕ್ಷೆ ಬರೆದಾದ ನಂತರ ಫಸ್ಟ್ ಕ್ಲಾಸ್ ಬರದಿದ್ದರೂ ಫೇಲ್ ಆಗುವಷ್ಟು ಕಳಪೆಯಂತೂ ಅಲ್ಲ ಎಂದು ಒಂದು ಮಟ್ಟದ ಆತ್ಮವಿಶ್ವಾಸ ಅಂತೂ ಇತ್ತು. ರಜೆಗೆ ಬಂದು ಊರು ಸೇರಿಕೊಂಡೆ. ಫಲಿತಾಂಶ ಕುರಿತು ಮನೆಯವರ ನಿರೀಕ್ಷೆ ದೊಡ್ಡದಿತ್ತು. ‘ಚಿಕ್ಕವಯಸ್ಸಿನಲ್ಲೆ ಊರು ಬಿಟ್ಟು ಟೌನಿಗೋಗವ್ರೆ, ಅದೇನ್ ಕಿಸ್ದೌರೆ ಅನ್ನೋದು ರಿಜಲ್ಟ್ ಬರ್ಲಿ ಗೊತ್ತಾಗುತ್ತೆ’ ಎಂದು ಊರಿನವರೂ ಕಾಯುತ್ತಿದ್ದರು.

ಓದಿನ ಕರ್ಚು ಭರಿಸುತ್ತಿದ್ದ ಮಾವಿನ ಮರಗಳು

ಆಗ ಬೇಸಿಗೆ ರಜೆ ಬಹಳ ದೀರ್ಘವಾಗಿರುತ್ತಿತ್ತು. ಪ್ರೌಢಾವಸ್ಥೆಯನ್ನು ಮೀರುತ್ತಿದ್ದ ಹಂತವಾದ್ದರಿಂದ ಮನೆಯಲ್ಲಿನ ಕಷ್ಟ ಕಾರ್ಪಣ್ಯಗಳು ಅರಿವಿಗೆ ಬರತೊಡಗಿದ್ದವು. ಅಪ್ಪನ ಹೆಸರಿಗೆ ಮೂರು ಮಾವಿನ ಮರಗಳಿದ್ದವು. ಈಗಲೂ ಇವೆ. ಒಂದು ಸೇಂಧೂರ ಎರಡು ನೀಲಾಮ್ ಮರಗಳು. ಯುಗಾದಿಗೆ ಎಲೆ ಚಿಗಿತು ಹೂವು ಹೀಚಾಗಿ ಏಪ್ರಿಲ್ ಮೇ ತಿಂಗಳಷ್ಟರಲ್ಲಿ ಕಾಯಿ ಬಲಿಯುತ್ತಿದ್ದವು. ವ್ಯಾಪಾರಕ್ಕೆ ಬಂದ ಹಲವು ಸಾಬರನ್ನ ವಾಪಾಸ್ ಕಳಿಸುತ್ತಿದ್ದ ಅಪ್ಪ ತಾನು ನಂಬಿದ್ದ ರೇಟ್ ಬಂದಾಗಲೇ ಬಿಡುತಿದ್ದುದು. ಹೊರಗಿನ ವಿದ್ಯಮಾನ ಅಷ್ಟಾಗಿ ತಿಳಿಯದಿದ್ದರೂ ಅದು ಹೇಗೊ ತನ್ನ ಮೂರು ಮರಕ್ಕೂ ಇಷ್ಟು ಎಂದು ರೇಟ್ ಫಿಕ್ಸ್ ಮಾಡಿಕೊಂಡು ಉಂಡೆ ಲೆಕ್ಕದಲ್ಲಿ ಮರವನ್ನ ಕೊಡುತ್ತಿತ್ತು. ಅಡ್ವಾನ್ಸ್ ಕೊಟ್ಟೋದ ಸಾಬರು ಕೆಲವೊಮ್ಮೆ ರೇಟ್ ಬಿದ್ದೋಗಿದೆ ಎಂದು ಮರದಿಂದ ಹಣ್ಣು ಉದುರಿ ಹೋಗುತ್ತಿದ್ದರೂ ಬರುತ್ತಿರಲಿಲ್ಲ. ಅಪ್ಪ ಇನ್ನೂರೊ ಮುನ್ನೂರೊ ಅಡ್ವಾನ್ಸ್‌ಗೆ ಕಟಿಬಿದ್ದು ಉದುರುವ ಹಣ್ಣುಗಳನ್ನು ನೋಡಿಕೊಂಡು ಇನ್ನೊಬ್ಬರಿಗೂ ಕೊಡದೆ ಲಾಸ್ ಮಾಡಿಕೊಂಡದ್ದೂ ಇದೆ. ಸಾಬರು ಮರಗಳಿಗೆ ಕೊಟ್ಟೋದ ಅಡ್ವಾನ್ಸ್‌ ಹಣದಲ್ಲಿ ಅಪ್ಪ ಪ್ರತಿ ವರ್ಷ ನಮಗೆ ಎಕ್ಸರೈಸ್‌ಜು ಬುಕ್ಕು ಕೊಡಿಸುತ್ತಿತ್ತು, ಪೂರ್ತಿ ಹಣ ಕೊಟ್ಟ ಮೇಲೆ ಅಕ್ಕಂದಿರಿಗೆ ಮತ್ತು ನಮಗೆ ಯೂನಿಫಾರ್ಮ್‌ ಕೊಡಿಸುತ್ತಿತ್ತು. ‘ನಮ್ಮುಡುಗರ ವಿದ್ಯಾಭ್ಯಾಸ ಮಾಡುಸ್ತಿರದು ಈ ಮರಗಳೆ’ ಎಂದು ಅಪ್ಪ ಹಲವರ ಹತ್ತಿರ ಹೇಳಿಕೊಳ್ಳುತ್ತಿದ್ದನ್ನ ಕೇಳಿಸಿಕೊಂಡಿದ್ದೇನೆ.


ಐದು ಜನ ಮಕ್ಕಳ ಹೊಟ್ಟೆ ಬಟ್ಟೆಗೆ ಅಪ್ಪ ಪಡುತ್ತಿರುವ ಪಾಡುಗಳು ಅಮಾಸೆಯತ್ತ ಹೊರಟ ಚಂದ್ರಮನಂತೆ ಇಂಚಿಂಚೆ ಆವರಿಸಿಕೊಳ್ಳತೊಡಗಿದವು. ಏನಾದರೂ ಮಾಡಿ ನನ್ನ ಕಾಲ ಮೇಲೆ ನಾನು ನಿಂತುಕೊಳ್ಳಬೇಕು, ಕೊನೆ ಪಕ್ಷ ನಮ್ಮ ಓದಿನ ಖರ್ಚನ್ನಾದರು ಭರಿಸಿಕೊಂಡು ಅಪ್ಪನಿಗೆ ಹೊರೆಯಾಗುವುದನ್ನ ತಪ್ಪಿಸಬೇಕೆನಿಸತೊಡಗಿತು. ಹತ್ತನೇ ತರಗತಿ ಪರೀಕ್ಷೆ ಬರೆದಿದ್ದ ನಾನು, ರಿಜಲ್ಟ್ ಬಂದು ಕಾಲೇಜಿಗೆ ಹೋಗುವಷ್ಟರಲ್ಲಿ ನನ್ನ ಬಟ್ಟೆ ಪುಸ್ತಕಕ್ಕಾದರೂ ಸಂಪಾದಿಸಬೇಕೆಂಬ ಬಯಕೆಯನ್ನ ಹೊಂದಿ ಅಪ್ಪ-ಅಮ್ಮನ ಬಳಿ ಹೇಳಿದೆ. ಅಪ್ಪ ಅಮ್ಮ ಮನಸಲ್ಲಿ ನೊಂದುಕೊಂಡರೋ ಅಥವ ಗಂಡು ಮಗ ದುಡಿಯುವ ಕಡೆ ಯೋಚಿಸುತ್ತಿದ್ದಾನೆಂದು ಹೆಮ್ಮೆ ಪಟ್ಟರೊ ತಿಳಿಯದು. ಅಂತೂ ಅವರು ಒಪ್ಪಿಕೊಂಡದ್ದರ ಫಲಿತವಾಗಿ ನಾನು ಒಂದು ದಿನ ದುಡಿಯಲು ತುಮಕೂರಿಗೆ ಹೋಗಲು ತೀರ್ಮಾನಿಸಿದೆ.