ಯಮಾಸಾನ್ ಎಂದೂ ಕೋಪಗೊಳ್ಳುತ್ತಿರಲಿಲ್ಲ. ಸಿಕ್ಕಾಪಟ್ಟೆ ಸಿಟ್ಟು ಬಂದಿದ್ದರೂ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಅವರಿಗದು ಸಾಧ್ಯವಿರಲಿಲ್ಲ. ಅವರಿಗೆ ಕೋಪ ಬಂದಿದೆ ಎಂದು ಜನರಿಗೆ ನಾನರ್ಥಮಾಡಿಸುತ್ತಿದ್ದೆ. ಬೇರೆ ಸ್ಟುಡಿಯೋಗಳಿಂದ ಕೆಲಸಕ್ಕೆ ತೆಗೆದುಕೊಂಡಿದ್ದ ಹಲವು ಸ್ಟಾರ್ ಗಳು ಸ್ವ ಕೇಂದ್ರಿತರು ಹಾಗೂ ಅತಿಯಾದ ಆತ್ಮಪ್ರಶಂಸಕರಾಗಿದ್ದರು. ಯಾವಾಗಲೂ ಸೆಟ್ ಗೆ ತಡವಾಗಿ ಬರುತ್ತಿದ್ದರು. ಇದೇ ವರ್ತನೆ ಬಹಳ ದಿನಗಳವರೆಗೆ ಮುಂದುವರೆಯಿತು. ಯಮಾಸಾನ್ ಎಂದೂ ಕೋಪಗೊಳ್ಳುತ್ತಿರಲಿಲ್ಲ ಆದರೆ ತಂಡಕ್ಕೆ ರೋಸಿಹೋಗಿ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು. ಹೀಗೆ ಆದರೆ ಕೆಲಸ ಹಾಳಾಗುತ್ತಿತ್ತು. ಏನಾದರೂ ಮಾಡಲೇಬೇಕಿತ್ತು.
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವ ಆತ್ಮಕತೆಯ ಮತ್ತೊಂದು ಅಧ್ಯಾಯ.

 

1974ರ ಆಗಸ್ಟ್ ನಲ್ಲಿ ನನ್ನ ಗುರು ಯಮಾ ಸಾನ್ – ಯಮಾಮೊಟೊ ಕಜಿರೊ (Yamamoto Kajiro) ಹಾಸಿಗೆ ಹಿಡಿದಿದ್ದಾರೆ, ಚೇತರಿಸಿಕೊಳ್ಳುವುದು ಕಷ್ಟ ಎನ್ನುವ ವಿಷಯ ತಿಳಿಯಿತು. ನನ್ನ ಚಿತ್ರ ಡೆರ್ಸು ಉಜಲ (Dersu Uzala)ದ ಶೂಟಿಂಗಿಗೆ ಸೋವಿಯಟ್ ಯೂನಿಯನ್ ಗೆ ತೆರಳಬೇಕಿತ್ತು. ಶೂಟಿಂಗ್ ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಗೊತ್ತಿತ್ತು. ಆ ಸಮಯದಲ್ಲಿ ಯಮಾ ಸಾನ್ ಗೆ ಏನಾದರೂ ಆದಲ್ಲಿ ನಾನು ಜಪಾನಿಗೆ ಬರುವುದು ಸಾಧ್ಯವಿರಲಿಲ್ಲ. ಈ ಆತಂಕದಿಂದಲೇ ಅವರನ್ನು ನೋಡಲು ಅವರ ಮನೆಗೆ ಹೋದೆ.

ಅವರ ಮನೆ ಟೊಕಿಯೊದ ಸೆಯ್ಜೊದ (Seijo ) ಉತ್ತರ ಭಾಗದಲ್ಲಿದ್ದ ಬೆಟ್ಟದ ಮೇಲಿತ್ತು. ಬಾಗಿಲಿನಿಂದ ಗೇಟಿನವರೆಗೆ ಸಿಮೆಂಟು ಹಾಕಿದ್ದ ಇಳಿಜಾರಿನ ಹಾದಿಯಿತ್ತು. ಈ ಹಾದಿಯ ನಡುವಲ್ಲಿ ಯಮಾ ಸಾನ್ ರ ಹೆಂಡತಿ ಹೂ ಗಿಡಗಳನ್ನು ನೆಟ್ಟಿದ್ದರು. ಆ ದುಃಖದ ಮನಸ್ಥಿತಿಯಲ್ಲೂ ಆ ಹೂಗಳ ಬಣ್ಣ ಗಾಢವಾಗಿದೆ ಅನ್ನಿಸಿತು.

(ಯಮಾ ಸಾನ್ – ಯಮಾಮೊಟೊ ಕಜಿರೊ (Yamamoto Kajiro)

ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಯಮಾ ಸಾನ್ ಬಹಳ ಬಡಕಲಾಗಿಬಿಟ್ಟಿದ್ದರು. ಅವರ ದೊಡ್ಡ ಮೂಗು ಇನ್ನೂ ದೊಡ್ಡದಾಗಿ ಕಾಣುತ್ತಿತ್ತು. ಆ ಸಂದರ್ಭಗಳಲ್ಲಿನ ಮಾಮೂಲಿ ಮಾತುಗಳಂತೆ ಅವರ ಅನಾರೋಗ್ಯ ನೋಡಿ ಬೇಸರವಾಯಿತು, ಬೇಗ ಹುಷಾರಾಗಿ ಎಂದು ಹೇಳಿದೆ. ಅವರು ವಿನಯದಿಂದ ಸಣ್ಣ ದನಿಯಲ್ಲಿ “ನಿನ್ನ ಒತ್ತಡದ ಕೆಲಸಗಳ ನಡುವೆಯೂ ನೋಡಲು ಬಂದಿದ್ದಕ್ಕೆ ಧನ್ಯವಾದಗಳು” ಅಂದರು. ಅದರೊಂದಿಗೆ “ರಷ್ಯನ್ ಸಹಾಯಕ ನಿರ್ದೇಶಕ ಹೇಗಿದ್ದಾನೆ?” ಅಂತ ಕೇಳಿದರು. “ಅವನು ಒಳ್ಳೆಯ ವ್ಯಕ್ತಿ. ನಾನು ಹೇಳಿದ್ದನ್ನೆಲ್ಲ ಬರೆದುಕೊಳ್ಳುತ್ತಾನೆ” ಅಂದೆ. ಅವರು ನಗುತ್ತಾ “ಹೇಳಿದ್ದಷ್ಟನ್ನೇ ಬರೆದುಕೊಳ್ಳುತ್ತಾ ಬೇರೆನೂ ಮಾಡದ ಸಹಾಯಕ ನಿರ್ದೇಶಕ ಒಳ್ಳೆಯವನಲ್ಲ” ಅಂದರು. ಈ ಸಮಯದಲ್ಲಿ ಹೀಗೆ ಹೇಳಿ ಅವರ ಚಿಂತೆಗೆ ಕಾರಣವಾದೆನಾ ಅನ್ನಿಸಿ “ಪರವಾಗಿಲ್ಲ ಅವನು ಒಳ್ಳೆಯ ಮನುಷ್ಯ. ತನ್ನ ಕೆಲಸವನ್ನು ಚೆನ್ನಾಗಿ ಮಾಡುತ್ತಾನೆ” ಅಂತ ಒಂಚೂರು ಸುಳ್ಳು ಹೇಳಿದೆ. “ಹೌದಾ ಹಾಗಾದರೆ ಸರಿ” ಅಂತ ಯಮಾ ಸಾನ್ ಸುಕಿಯಾಕಿ (sukiyaki – ಜಪಾನಿ ಖಾದ್ಯ) ಕುರಿತು ಮಾತಾಡಲು ಶುರುಮಾಡಿದರು.

ಹಿಂದಿನ ದಿನಗಳಲ್ಲಿ ಸಿಗುತ್ತಿದ್ದಷ್ಟೇ ರುಚಿಯಾದ ಸುಕಿಯಾಕಿ ಸಿಗುವ ಹೋಟಲಿನ ಕುರಿತು ಹೇಳಿದರು. ಒಮ್ಮೆ ಅಲ್ಲಿ ಹೋಗಿ ಅದರ ರುಚಿ ನೋಡು ಎಂದು ಅಲ್ಲಿಯ ವಿಳಾಸ ತಿಳಿಸಿದರು. ಆಮೇಲೆ ಮೊದಲು ನಾವುಗಳು ಒಟ್ಟಾಗಿ ರುಚಿಕಟ್ಟಾದ ತಿಂಡಿ ತಿನ್ನಲೆಂದು ಹೋಗುತ್ತಿದ್ದ ಹೋಟಲ್ಲುಗಳ ಕುರಿತು ಮಾತಾಡಿದರು. ತನಗೀಗ ಮೊದಲಿನಂತೆ ತಿನ್ನಲು ಸಾಧ್ಯವಿಲ್ಲ ಎಂದರು. ಆದರೂ ಅವರು ಅವುಗಳ ಕುರಿತು ಅಷ್ಟು ಉತ್ಸಾಹದಿಂದ ಮಾತಾಡುತ್ತಿರುವುದನ್ನು ನೋಡಿ ಆಶ್ಚರ್ಯವಾಯಿತು. ಬಹುಶಃ ಅವರು ರಷ್ಯಾಕ್ಕೆ ಹೊರಟಿದ್ದ ನನ್ನನ್ನು ಹಗುರಾದ ಮಾತುಗಳ ನೆನಪಿನ ಬುತ್ತಿಯೊಂದಿಗೆ ಕಳಿಸಲು ಇಷ್ಟಪಟ್ಟಿದ್ದರು.

ಮಾಸ್ಕೋದಲ್ಲಿದ್ದಾಗ ಯಮಾ ಸಾನ್ ಸಾವಿನ ಸುದ್ದಿ ಬಂತು. ಯಮಾ ಸಾನ್ ಕುರಿತು ಅವರ ಮರಣಶಯ್ಯೆಯಿಂದ ಬರೆಯಲಾರಂಭಿಸಿದ್ದು ವಿಚಿತ್ರ ಅನ್ನಿಸಬಹುದು. ಆದರೆ ಅದಕ್ಕೊಂದು ಕಾರಣವಿದೆ. ಆತನಿಗೆ ತನ್ನ ಬದುಕಿನ ಕೊನೆಯ ಗಳಿಗೆಯಲ್ಲಿದ್ದಾಗಲೂ ಸಹಾಯಕ ನಿರ್ದೇಶಕರ ಕುರಿತ ಕಾಳಜಿಯೇ ಮುಖ್ಯವಾಗಿತ್ತು ಎನ್ನುವುದನ್ನು ತೋರಿಸುವುದು ಇದರ ಹಿಂದಿನ ಉದ್ದೇಶ.

ಬೇರಾವುದೇ ನಿರ್ದೇಶಕ ತನ್ನ ಸಹಾಯಕ ನಿರ್ದೇಶಕರ ಕುರಿತು ಅಷ್ಟು ಗಮನ ಹರಿಸುತ್ತಾನೆ ಎಂದು ನಾನು ನಂಬುವುದಿಲ್ಲ. ಸಿನಿಮಾ ಕೆಲಸ ಶುರುಮಾಡುವಾಗ ನಿರ್ದೇಶಕ ಮೊದಲು ಮಾಡುವ ಕೆಲಸ ತನ್ನ ತಂಡವನ್ನು ಆಯ್ಕೆ ಮಾಡಿಕೊಳ್ಳುವುದು. ಯಮಾ ಸಾನ್ ಮೊದಲು ಯೋಚಿಸುತ್ತಿದ್ದದ್ದು ಯಾರನ್ನು ಸಹಾಯಕ ನಿರ್ದೇಶಕರಾಗಿ ಆಯ್ಕೆ ಮಾಡಲಿ ಎಂದು. ಎಲ್ಲ ವಿಷಯಗಳಲ್ಲೂ ಹೇಗೆ ಬೇಕಾದರೂ ಹೊಂದಿಕೊಳ್ಳುತ್ತಿದ್ದ, ಮುಕ್ತ ಮನಸ್ಸಿನ, ಆರಾಮಾಗಿ ಜೊತೆ ನಡೆಯಬಲ್ಲಂತ ವ್ಯಕ್ತಿ ಈ ವಿಷಯದಲ್ಲಿ ಮಾತ್ರ ಬಹಳ ಎಚ್ಚರಿಕೆ ವಹಿಸುತ್ತಿದ್ದ. ಯಾರಾದರೂ ಹೊಸಬರಿಗೆ ಸಹಾಯಕ ನಿರ್ದೇಶಕರಾಗಿ ಬಡ್ತಿ ಸಿಕ್ಕಿದ್ದರೆ ಆ ವ್ಯಕ್ತಿಯ ಸ್ವಭಾವ ಎಂತಹದ್ದು, ಆತನ ಮನೋಧರ್ಮ ಎಂತಹದ್ದು ಎಲ್ಲವನ್ನೂ ಕೂಲಂಕುಷವಾಗಿ ಅವರಿಗೆ ತೃಪ್ತಿಯಾಗುವವರೆಗೆ ತನಿಖೆ ಮಾಡುತ್ತಿದ್ದರು.

ಒಮ್ಮೆ ಆಯ್ಕೆ ಮಾಡಿಕೊಂಡ ಮೇಲೆ ಮುಗಿಯಿತು. ಸಹಾಯಕ ನಿರ್ದೇಶಕರಲ್ಲಿ ಹಿರಿಯರು, ಕಿರಿಯರು ಎಂದು ಭೇದವೆಣಿಸುತ್ತಿರಲಿಲ್ಲ. ಎಲ್ಲರ ಅಭಿಪ್ರಾಯವನ್ನು ಕೇಳುತ್ತಿದ್ದರು. ಈ ರೀತಿಯ ಮುಕ್ತ ಹಾಗೂ ನೇರಮಾತಾಡುವ ಸ್ವಾತಂತ್ರ್ಯವಿದ್ದ ಸಂಬಂಧಗಳು ಯಮಾಮೊಟೊ ತಂಡದ ಹೆಗ್ಗುರುತುಗಳಾಗಿದ್ದವು. ನಾನು ಈ ತಂಡದೊಂದಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಚಿತ್ರಗಳು ಹಾಸ್ಯನಟ ಎನೆಮೊಟೊ ಕೆನ್ಚಿ ಅಭಿನಯಿಸಿದ್ದ Chakkiri Kinta (Chakkiri Kinta, 1937), Senman choja (The Millionaire,1936), Bikkuri jinsei (Life Is a Surprise, 1938), Otto no teiso (A Husband’s Chastity, 1937), Tojuro no koi (Tojuros Love, 1938), Tsuzurikata kyoshitsu (Composition Class, 1938) and Uma (Horses,1941).

ಇದರ ನಡುವೆಯೇ ಮೂರನೇ ಸಹಾಯಕ ನಿರ್ದೇಶಕನಿಂದ ಮುಖ್ಯ ಸಹಾಯಕ ನಿರ್ದೇಶಕನಾಗಿ ಬಡ್ತಿ ಹೊಂದಿದ್ದೆ. ಎರಡನೆಯ ಯೂನಿಟ್ ಚಿತ್ರೀಕರಣ, ಸಂಕಲನ ಮತ್ತು ಡಬ್ಬಿಂಗ್ ಮಾಡಬೇಕಿತ್ತು. ಈ ಹಂತವನ್ನು ತಲುಪಲು ನಾಲ್ಕು ವರ್ಷಗಳಾಯಿತು. ಆದರೆ ಈ ಹಂತ ತಲುಪಿದಾಗ ಕಡಿದಾದ ಬೆಟ್ಟವನ್ನು ಒಂದೇ ಉಸಿರಿನಲ್ಲಿ ಹಾರುತ್ತ ಜಿಗಿಯುತ್ತಾ ಹತ್ತಿಬಿಟ್ಟೆ ಅನ್ನಿಸಿತು. ಯಮಾಮೊಟೊ ಗುಂಪಿನಲ್ಲಿ ಪ್ರತಿದಿನವು ಸಂತೋಷದಿಂದ ಕೂಡಿರುತ್ತಿತ್ತು. ನನ್ನ ಮನಸ್ಸಿಗೆ ತೋಚಿದ್ದನ್ನು ಮುಕ್ತವಾಗಿ ಮಾತಾಡಬಹುದಿತ್ತು. ಮಾಡಲು ಬೇಕಾದಷ್ಟು ಕೆಲಸವಿತ್ತು. ನನ್ನ ಕೆಲಸವನ್ನು ಉತ್ಸಾಹದಿಂದ ಮಾಡುತ್ತಿದ್ದೆ.

P.C.L. ಈ ಸಮಯದಲ್ಲಿ ಬೇರೆ ಕಂಪನಿಗಳ ನಿರ್ದೇಶಕರನ್ನು, ನಟರನ್ನು ನೇಮಿಸಿಕೊಂಡು ದೊಡ್ಡಮಟ್ಟದಲ್ಲಿ ಬೆಳೆಯುತ್ತಿತ್ತು. ಮಾರುಕಟ್ಟೆಯಲ್ಲಿದ್ದ ಇತರ ಸ್ಟುಡಿಯೋಗಳ ಜೊತೆಯಲ್ಲಿ ಸ್ಪರ್ಧಿಸುವ ಸಲುವಾಗಿ ಪ್ರತಿ ಸಿನಿಮಾವನ್ನು ತನ್ನೆಲ್ಲ ಶಕ್ತಿ ಬಳಸಿ ನಿರ್ಮಿಸುತ್ತಿತ್ತು. ಪರಿಸ್ಥಿತಿ ಬಹಳ ಕಠಿಣವಾಗಿತ್ತು. ಯಾವ ಕೆಲಸವೇ ಆದರೂ ಸಾಮಾನ್ಯ ಕೆಲಸವಾಗಿರಲಿಲ್ಲ. ಇದು ತರಬೇತಿಗೆ ಅತ್ಯಗತ್ಯ ಅಂತ ಹೇಳುತ್ತಿಲ್ಲ. ಆದರೆ ಒಂದಂತೂ ನಿಜ: ರಾತ್ರಿ ನೆಮ್ಮದಿಯಾಗಿ ನಿದ್ದೆ ಮಾಡಲು ಸಮಯವೇ ಸಿಗುತ್ತಿರಲಿಲ್ಲ.

ಆ ದಿನಗಳಲ್ಲಿ ಯಾವುದೇ ಚಿತ್ರತಂಡದ ಬಹುದೊಡ್ಡ ಬಯಕೆ ನಿದ್ದೆ. ತಂಡದ ಬೇರೆ ಸದಸ್ಯರಿಗೆ ರಾತ್ರಿ ಸ್ವಲ್ಪ ಸಮಯವಾದರೂ ವಿಶ್ರಾಂತಿ ಸಿಗುತ್ತಿತ್ತು. ನಾವು ಸಹಾಯಕ ನಿರ್ದೇಶಕರು ಮಾರನೆಯ ದಿನದ ದೃಶ್ಯಗಳಿಗೆ ತಯಾರಿ ಮಾಡಬೇಕಿತ್ತು. ನಮಗೆ ವಿಶ್ರಾಂತಿ ಎನ್ನುವುದೇ ಇರಲಿಲ್ಲ. ಒಂದು ಆಲೋಚನೆ ನನಗೆ ಯಾವಾಗಲೂ ಬರುತ್ತಿತ್ತು. ಒಂದು ದೊಡ್ಡ ಕೋಣೆಯಲ್ಲಿ ಇಡೀ ಕೋಣೆ ತುಂಬ ಹಾಸಿಗೆ ಹಾಸಿದ್ದಂತೆ ಕಲ್ಪಿಸಿಕೊಳ್ಳುತ್ತಿದ್ದೆ. ಹಾಸಿಗೆ ಮಧ್ಯಕ್ಕೆ ಜಿಗಿದು ಅಲ್ಲಿ ಮಲಗಬೇಕೆನ್ನುವ ಇಚ್ಛೆ ತೀವ್ರವಾಗಿ ಕಾಡುತ್ತಿತ್ತು. ಆದರೆ ಇಂತಹ ಪರಿಸ್ಥಿತಿಯಲ್ಲೂ ಕಣ್ಣಿಗೆ ಎಂಜಲು ಉಜ್ಜಿಕೊಂಡು ಸ್ವಲ್ಪ ಕಾಣುವಂತೆ ಮಾಡಿಕೊಂಡು ಕೆಲಸ ಮಾಡುತ್ತಿದ್ದೆವು. ನಮ್ಮ ಶಕ್ತಿಯ ಕೊನೆಯ ಹನಿಯನ್ನು ಹಾಕಿ ಸಿನಿಮಾ ಉತ್ತಮವಾಗಿಸಲು ಯತ್ನಿಸುತ್ತಿದ್ದೆವು.

ಈ ರೀತಿಯ ಕೆಲಸ ಮಾಡಿದ್ದಕ್ಕೆ ಒಂದು ಉದಾಹರಣೆ ಹೊಂಡಾನ “ಮೊಕ್ಯುಮೆ ನೊ ಕಾಮಿ” “Mokume no kami” (Honda “Keeper of the Grain”). ಹೊಂಡಾ ಇನೊಶಿರೊ (Honda Inoshiro) ಗೊಡ್ಜಿಲಾ (Godzilla)ದ ನಿರ್ದೇಶಕ. ಆತ 1980ರಲ್ಲಿ ನನ್ನೊಂದಿಗೆ ನನ್ನ Kagemusha ಚಿತ್ರದಲ್ಲಿ ಕೆಲಸಮಾಡಿದ್ದ. ಆತ ಎರಡನೆಯ ಸಹಾಯಕ ನಿರ್ದೇಶಕನಾಗಿದ್ದ. ಸೆಟ್ ವಿನ್ಯಾಸ ಮಾಡುವವರಿಗೆ ಕೆಲಸ ಜಾಸ್ತಿ ಇದ್ದಾಗ ಈತ ಸಹಾಯ ಮಾಡುತ್ತಿದ್ದ. ಆತ ನಕಲಿ ಕಂಬಗಳು ಅಸಲಿ ಮರದ ಕಂಬಗಳಂತೆ ಕಾಣಬೇಕೆಂದು ಅವುಗಳಿಗೆ ಮರದ ದಿಮ್ಮಿಗಳಲ್ಲಿ ಇರುತ್ತದಲ್ಲ ಗೆರೆಗಳು ಅವುಗಳನ್ನು ಹೋಲುವಂತಹ ಗೆರೆಗಳನ್ನು ನಕಲಿ ಕಂಬಗಳಲ್ಲಿ ಚಿತ್ರಿಸುತ್ತಿದ್ದ. ಆದ್ದರಿಂದಲೇ ಅವನನ್ನು “ಮರದಣ್ಣ” ಎಂದು ಕರೆಯುತ್ತಿದ್ದರು. ಆತನ ಈ ಕೆಲಸದ ಹಿಂದಿನ ಉದ್ದೇಶ ಯಮಾಸಾನರ ಕೆಲಸವನ್ನು ಮತ್ತಷ್ಟು ಉತ್ತಮವಾಗಿ ಕಾಣುವಂತೆ ಮಾಡುವುದಾಗಿತ್ತು. ಬಹುಶಃ ತನ್ನ ಬಗ್ಗೆ ಯಮಾಸಾನರಿಗಿದ್ದ ನಂಬಿಕೆಯನ್ನು ಉಳಿಸಿಕೊಳ್ಳಬೇಕೆಂದೇ ಆತ ಹೆಚ್ಚಿನ ಶ್ರಮವಹಿಸಿ ಕೆಲಸಮಾಡುತ್ತಿದ್ದ. ಈ ರೀತಿಯ ಮನೋಭಾವ ನಮ್ಮಲ್ಲಿ ಬರಲು ಕಾರಣ ಯಮಾಸಾನ್ ನಮ್ಮಲ್ಲಿಟ್ಟಿದ್ದ ನಂಬಿಕೆ. ಈ ಮನೋಭಾವ ನಮ್ಮೆಲ್ಲ ಕೆಲಸಗಳಲ್ಲೂ ಪ್ರತಿಫಲಿಸುತ್ತಿತ್ತು.

ಯಮಾಸಾನರ ನಂಬಿಕೆಯಿಂದಲೇ ಕೆಲಸದ ಕಡೆಗಿನ ಶ್ರದ್ಧೆ ಹೆಚ್ಚಿಸಿಕೊಂಡವರಲ್ಲಿ ನಾನೂ ಒಬ್ಬ. ಮುಖ್ಯಸಹಾಯಕ ನಿರ್ದೇಶಕನಾಗಿ ಬಡ್ತಿ ಹೊಂದಿದಾಗ ನನ್ನ ಸ್ವಭಾವದಲ್ಲಿಯೇ ಇದ್ದ ಮೊಂಡುತನದೊಂದಿಗೆ ಈ ಶ್ರದ್ಧೆಯ ಹಠವೂ ಸೇರಿಕೊಂಡು ಕೆಲಸದ ಕಡೆಗೊಂದು ಅದ್ಭುತವಾದ ಜಿಗುಟು ಪ್ರವೃತ್ತಿಯನ್ನು ತಂದಿತು. Chushingura ಎನ್ನುವ ಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದ ಘಟನೆಯೊಂದು ನೆನಪಿದೆ. ಊಳಿಗಮಾನ್ಯ ಪ್ರತಿಕಾರದ ಕತೆಯನ್ನು ಹೊಂದಿದ್ದ ಈ ಚಿತ್ರ ಎರಡು ಭಾಗಗಳಲ್ಲಿ ಚಿತ್ರೀಕರಣಗೊಂಡಿತು. ಮೊದಲನೆಯದನ್ನು ತಕಿಜಾವ ಎಸುಕೆ (Takizawa Eisuke) ನಿರ್ದೇಶಿಸಿದರೆ ಎರಡನೆಯ ಭಾಗವನ್ನು ಯಮಾಸಾನ್ ನಿರ್ದೇಶಿಸಿದ್ದರು. ಕಡೆಯ ದಿನದ ಚಿತ್ರೀಕರಣವನ್ನು ಮುಗಿಸಲೇಬೇಕಿತ್ತು. ಇಲ್ಲವಾದಲ್ಲಿ ನಿಗದಿಯಾದ ದಿನಾಂಕದಂದು ಚಿತ್ರ ಬಿಡುಗಡೆ ಮಾಡಲು ಸಾಧ್ಯವಿರಲಿಲ್ಲ. ಆದರೆ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣ ಮುಗಿದಿರಲಿಲ್ಲ.

ಯಮಾಸಾನ್ ಮತ್ತು ಕಂಪನಿಯ ನಿರ್ವಾಹಕರು ಚಿತ್ರೀಕರಣ ಮುಗಿಯುವ ಆಸೆಯನ್ನೇ ಬಿಟ್ಟುಬಿಟ್ಟಿದ್ದರು. ಆದರೆ ನನ್ನಲ್ಲಿನ್ನೂ ಭರವಸೆ ಇತ್ತು. ಹೊರಾಂಗಣದ ಸೆಟ್ ಗೆ ಹೋದೆ. ಮುಂದಿನ ಹಾಗೂ ಹಿಂದಿನ ಗೇಟು ಮತ್ತು ಉದ್ಯಾನವನಗಳು ಪೂರ್ಣಗೊಂಡಿತ್ತು. ಆದರೆ ದೃಶ್ಯಕ್ಕೆ ಅವಶ್ಯವಿದ್ದ ಹಿಮ ಮಾತ್ರ ಎಲ್ಲೂ ಕಾಣಿಸುತ್ತಿರಲಿಲ್ಲ. ಬಕೆಟೊಂದರಲ್ಲಿ ಉಪ್ಪನ್ನು ತುಂಬಿಕೊಂಡು ಮತ್ತೊಂದು ಗೇಟಿನ ಕಡೆಯಿಂದ ಮೇಲೆ ಹತ್ತಿ ತಾರಸಿಯನ್ನು ಹಿಮಾಚ್ಛಾದಿತವಾದಂತೆ ಕಾಣುವಂತೆ ಮಾಡಲು ಶುರುಮಾಡಿದೆ.

ಮಾಸ್ಕೋದಲ್ಲಿದ್ದಾಗ ಯಮಾ ಸಾನ್ ಸಾವಿನ ಸುದ್ದಿ ಬಂತು. ಯಮಾ ಸಾನ್ ಕುರಿತು ಅವರ ಮರಣಶಯ್ಯೆಯಿಂದ ಬರೆಯಲಾರಂಭಿಸಿದ್ದು ವಿಚಿತ್ರ ಅನ್ನಿಸಬಹುದು. ಆದರೆ ಅದಕ್ಕೊಂದು ಕಾರಣವಿದೆ. ಆತನಿಗೆ ತನ್ನ ಬದುಕಿನ ಕೊನೆಯ ಗಳಿಗೆಯಲ್ಲಿದ್ದಾಗಲೂ ಸಹಾಯಕ ನಿರ್ದೇಶಕರ ಕುರಿತ ಕಾಳಜಿಯೇ ಮುಖ್ಯವಾಗಿತ್ತು ಎನ್ನುವುದನ್ನು ತೋರಿಸುವುದು ಇದರ ಹಿಂದಿನ ಉದ್ದೇಶ.

ಮುಖ್ಯಕಲಾನಿರ್ದೇಶಕ ಇನಾಗಾಕಿ (Inagaki) ಕಿರಿಕಿರಿಯ ವ್ಯಕ್ತಿ. ನನ್ನತ್ತ ನೋಡಿ “ಏನು ಮಾಡುತ್ತಿದ್ದೀಯಾ?” ಅಂತ ಕೇಳಿದ. ಉಪ್ಪನ್ನು ತಾರಸಿಯ ಮೇಲೆ ಚೆಲ್ಲುತ್ತಲೇ “ಏನು ಮಾಡುತ್ತಿದ್ದೀನಿ? ನಲವತ್ತೇಳು ಮಂದಿ ನಿಷ್ಟಾವಂತರು ತಮ್ಮ ಪ್ರತಿಕಾರವನ್ನು ತೀರಿಸಿಕೊಂಡ ದಿನ ಹಿಮಪಾತವಾಗಿತ್ತು. ಹಿಮವಿಲ್ಲದೆ ನಾವು ಕೆಲಸ ಮಾಡಲು ಸಾಧ್ಯವಿಲ್ಲ” ಎಂದೆ. ಇನಾಗಾಕಿ ನನ್ನನ್ನೇ ನೋಡುತ್ತಾ ನಿಂತಿದ್ದವನು ಏನನ್ನೋ ಗೊಣಗುತ್ತಾ ಪರಿಕರಗಳಿದ್ದ ಕೋಣೆಗೆ ಹೋದ. ಕಲಾನಿರ್ದೇಶನ ತಂಡದ ಕೆಲಸಗಾರರೊಂದಿಗೆ ಹಿಂತಿರುಗಿ ಬಂದು “ಹಿಮ! ನನಗಿಲ್ಲಿ ಹಿಮ ಕೊಡಿ!” ಎಂದು ಸಿಟ್ಟಿನಲ್ಲಿ ಚೀರುತ್ತಿದ್ದ.

ತಾರಸಿಯ ಮೇಲಿಂದ ಇಳಿದು ಬಂದು ಯಮಾಮೊಟೊ ಗುಂಪಿನ ಕಾಯುವಕೋಣೆಗೆ ಹೋದೆ. ಯಮಾಸಾನ್ ಅಲ್ಲೇ ಇದ್ದ ಕುರ್ಚಿಯಲ್ಲಿ ಕೂತು ನಿದ್ದೆಮಾಡಿದ್ದರು. ಅವರನ್ನು ಎಬ್ಬಿಸಿದೆ. “ತುರ್ತುನಿರ್ಗಮನದ ಗೇಟಿನ ಹತ್ತಿರ ಹಿಮ ತುಂಬಿದೆ. ದಯವಿಟ್ಟು ನೀವು ಅಲ್ಲಿ ಚಿತ್ರೀಕರಣ ಆರಂಭಿಸಿ. ನೀವು ಅಲ್ಲಿ ಮುಗಿಸುವ ವೇಳೆಗೆ ಮುಂದಿನ ಗೇಟಿನ ಹತ್ತಿರ ಹಿಮವನ್ನು ತುಂಬಿರುತ್ತೇನೆ. ಆ ಭಾಗದಲ್ಲಿನ ದೃಶ್ಯವನ್ನು ಚಿತ್ರೀಕರಿಸಿ. ಹಿಂದಿನ ಗೇಟಿನ ಹತ್ತಿರದ ಚಿತ್ರೀಕರಣ ಮುಗಿಸುವ ವೇಳೆಗೆ ಉದ್ಯಾನದಲ್ಲಿ ಹಿಮ ತುಂಬಿಸಿರುತ್ತೇನೆ. ನೀವಲ್ಲಿ ಚಿತ್ರೀಕರಣ ಮಾಡಬಹುದು. ಆಮೇಲೆ…” ಯಮಾಸಾನ್ ಕಣ್ಣುಜ್ಜುತ್ತಾ ನಿದ್ದೆಯ ಮಂಪರಿನಲ್ಲೇ ತಲೆಯಾಡಿಸಿದರು. ನಿಧಾನವಾಗಿ ಆತ ಎದ್ದ ರೀತಿಯಲ್ಲೇ ಆತನ ಬಳಲಿಕೆ ಕಾಣುತ್ತಿತ್ತು.

ಆ ದಿನ ಶುಭ್ರ ನೀಲಾಕಾಶವಿದ್ದ ಪ್ರಕಾಶಮಾನವಾದ ದಿನ. ಲಾರ್ಡ್ ಕಿರಾನ ಮಹಲಿನ ಮೇಲಿನ ರಾತ್ರಿಯ ದಾಳಿಯನ್ನು ಚಿತ್ರೀಕರಿಸಲು ರೆಡ್ ಫಿಲ್ಟರ್ ಬಳಸಿದೆವು. ಬಿಳಿ ಹಿಮದ ಹಿನ್ನಲೆಯಲ್ಲಿ ಕಪ್ಪು ಆಕಾಶ ಅದ್ಭುತವಾಗಿ ಮೂಡಿಬಂದಿತು. ಉದ್ಯಾನದ ದೃಶ್ಯಗಳಿಗೆ ಬರುವ ಹೊತ್ತಿಗೆ ನಿಜಕ್ಕೂ ರಾತ್ರಿಯಾಗಿತ್ತು. ಮಧ್ಯರಾತ್ರಿಯ ವೇಳೆಗೆ ಚಿತ್ರೀಕರಣ ಮುಗಿಯಿತು. ಚಿತ್ರೀಕರಣ ಮುಗಿಸಿದ ನೆನಪಿಗೆ ನಾವೆಲ್ಲ ಫೋಟೊ ತೆಗೆಸಿಕೊಳ್ಳುವ ಹೊತ್ತಿಗೆ ಸ್ಟುಡಿಯೋದ ಮುಖ್ಯಸ್ಥರು ಬಂದರು. ಊಟಕ್ಕೆ ಹೆಚ್ಚಿನದನೇನನ್ನೂ ಸಿದ್ಧಪಡಿಸಲಾಗಲಿಲ್ಲ ಎಲ್ಲರೂ ದಯವಿಟ್ಟು ಊಟದ ಹಾಲಿಗೆ ಬನ್ನಿ ಎಂದು ಕರೆದರು.

ಊಟದ ಕೋಣೆಗೆ ಬಂದಾಗ ಟೇಬಲಿನ ಮೇಲೆ ಸೇಕ್ (ಅಕ್ಕಿಯಿಂದ ತಯಾರಿಸಿದ ಮದ್ಯ) ಮತ್ತು ಮೀನನ್ನು ಇರಿಸಿದ್ದರು. ಕಂಪನಿಯ ನಿರ್ವಾಹಕರ ಎದುರಿಗೆ ಗೌರವಸೂಚಕವಾಗಿ ನಮಗೆಲ್ಲರಿಗೂ ಆಸನ ವ್ಯವಸ್ಥೆ ಮಾಡಿದ್ದರು. ಸಿಕ್ಕಾಪಟ್ಟೆ ಸುಸ್ತಾಗಿದ್ದರಿಂದ ಯಾರಿಗೂ ಏನನ್ನೂ ತಿನ್ನಲಾಗಲಿಲ್ಲ. ನಿದ್ದೆಯೊಂದೆ ಆಗ ನಮಗೆಲ್ಲ ಬೇಕಾಗಿದ್ದದ್ದು. ಪ್ರೊಡಕ್ಷನ್ ಶೆಡ್ಯೂಲನ್ನು ಸಮಯಕ್ಕೆ ಸರಿಯಾಗಿ ಮುಗಿಸಿಕೊಟ್ಟದ್ದಕ್ಕೆ ನಿರ್ವಾಹಕರೆಲ್ಲ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿ ಭಾಷಣವನ್ನು ಮಾಡಿದರು. ಎಲ್ಲರೂ ಎಚ್ಚರದಲ್ಲಿರುವವರಂತೆ ತಲೆದೂಗಿಸುತ್ತಾ ಮಾತುಗಳನ್ನು ಕೇಳಿಸಿಕೊಂಡರು. ಭಾಷಣಗಳು ಮುಗಿಯುತ್ತಿದ್ದಂತೆ ಮೊದಲು ಬೆಳಕಿನ ತಂತ್ರಜ್ಞರು ಎದ್ದುನಿಂತು ಬಾಗಿ ಗೌರವಸಲ್ಲಿಸಿ ಒಂದೂ ಮಾತಾಡದೆ ಎದ್ದುಹೋದರು. ನಂತರ ಕ್ಯಾಮೆರ ತಂಡ, ಸೌಂಡ್ ರೆಕಾರ್ಡಿಂಗ್ ತಂಡ ಹೀಗೆ ಪ್ರತಿ ತಂಡದವರು ಗೌರವ ಸೂಚಿಸಿ ಒಂದು ಮಾತೂ ಆಡದೆ ಹೋಗಿಬಿಟ್ಟರು. ಇದು ನಿರ್ವಾಹಕರ ಮೇಲೆ ಪರಿಣಾಮ ಬೀರಿರಬೇಕು. ನನ್ನ ಮೇಲಂತೂ ಈ ವರ್ತನೆ ಪರಿಣಾಮ ಬೀರಿತು.

ಯಮಾಸಾನ್ ಎಂದೂ ಕೋಪಗೊಳ್ಳುತ್ತಿರಲಿಲ್ಲ. ಸಿಕ್ಕಾಪಟ್ಟೆ ಸಿಟ್ಟು ಬಂದಿದ್ದರೂ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಅವರಿಗದು ಸಾಧ್ಯವಿರಲಿಲ್ಲ. ಅವರಿಗೆ ಕೋಪ ಬಂದಿದೆ ಎಂದು ಜನರಿಗೆ ನಾನರ್ಥಮಾಡಿಸುತ್ತಿದ್ದೆ. ಬೇರೆ ಸ್ಟುಡಿಯೋಗಳಿಂದ ಕೆಲಸಕ್ಕೆ ತೆಗೆದುಕೊಂಡಿದ್ದ ಹಲವು ಸ್ಟಾರ್ ಗಳು ಸ್ವ ಕೇಂದ್ರಿತರು ಹಾಗೂ ಅತಿಯಾದ ಆತ್ಮಪ್ರಶಂಸಕರಾಗಿದ್ದರು. ಯಾವಾಗಲೂ ಸೆಟ್ ಗೆ ತಡವಾಗಿ ಬರುತ್ತಿದ್ದರು. ಇದೇ ವರ್ತನೆ ಬಹಳ ದಿನಗಳವರೆಗೆ ಮುಂದುವರೆಯಿತು. ಯಮಾಸಾನ್ ಎಂದೂ ಕೋಪಗೊಳ್ಳುತ್ತಿರಲಿಲ್ಲ ಆದರೆ ತಂಡಕ್ಕೆ ರೋಸಿಹೋಗಿ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು. ಹೀಗೆ ಆದರೆ ಕೆಲಸ ಹಾಳಾಗುತ್ತಿತ್ತು. ಏನಾದರೂ ಮಾಡಲೇಬೇಕಿತ್ತು.

ಇಂತಹ ಸಂದರ್ಭಗಳಲ್ಲಿ ಯಮಾಸಾನ್ ಇಡೀ ತಂಡವನ್ನು ಒಟ್ಟಿಗೆ ಕರೆದು ಪರಿಸ್ಥಿತಿ ಹೀಗೆ ಮುಂದುವರೆದರೆ ಏನಾಗುತ್ತದೆ ಎಂದು ವಿವರಿಸಿದರು. ಮತ್ತೆ ಆ ಸ್ಟಾರ್ ನಟರು ಸೆಟ್ ಗೆ ತಡವಾಗಿ ಬಂದಾಗ ಯಮಾಸಾನ್ “ಇವತ್ತಿನ ಶೂಟಿಂಗ್ ಮುಗೀತು! ಪ್ಯಾಕ್ ಅಪ್” ಎಂದು ಗುಡುಗುತ್ತಿದ್ದರು. ಎಲ್ಲರೂ ಹೊರಟು ಬಿಡುತ್ತಿದ್ದರು. ಆ ಸ್ಟಾರ್ ನಟರು ಮತ್ತವರ ಸಹಾಯಕ ಇಬ್ಬರೇ ಸೆಟ್ ನಲ್ಲಿ ಉಳಿಯುತ್ತಿದ್ದದ್ದು. ಅವರಿಬ್ಬರೂ ಆ ನಂತರ ಯಮಾಮೊಟೊ ಗುಂಪಿನ ಕಾಯುವಕೋಣೆಗೆ ಬಂದೇ ಬರುವರೆಂದು ನಮಗೆ ಗೊತ್ತಿತ್ತು. ಹಾಗಾಗಿ ಯಮಾಸಾನರಿಗೆ ಎಷ್ಟು ಸಾಧ್ಯವೋ ಅಷ್ಟು ಸಿಟ್ಟಿನ ಮುಖ ಮಾಡಿಕೊಳ್ಳಿ ಎಂದು ಹೇಳಿದೆ. ನಾವಂದುಕೊಂಡಂತೆ ಅವರಿಬ್ಬರೂ ಕೋಣೆಗೆ ಬಂದು “ಇವತ್ತು ಶೂಟಿಂಗ್ ನಾನು ತಡವಾಗಿ ಬಂದದ್ದಕ್ಕೆ ರದ್ದಾಯಿತೇ?” ಅಂತ ಕೇಳುತ್ತಿದ್ದರು. “ಇರಬಹುದು” ಅಂತ ಹೇಳಿ ಯಮಾಸಾನರತ್ತ ನೋಡುತ್ತಿದ್ದೆ. ಅವರು ಸಂದಿಗ್ಧದಲ್ಲಿದ್ದವರಂತೆ ಏನೋ ಹೇಳಲು ಹಿಂಜರಿಯುತ್ತಿರುವವರಂತೆ ನಿಂತಿರುತ್ತಿದ್ದರು. “ನಾವು ಶೂಟಿಂಗ್ ಶೆಡ್ಯೂಲ್ ಮಾಡುವುದು ನೀವು ತಡವಾಗಿ ಬರಲಿ ಎಂದಲ್ಲ” ಎಂದು ಚುರುಕು ಮುಟ್ಟಿಸುತ್ತಿದ್ದೆ. ಆ ದಿನದ ನಂತರ ಆ ಸ್ಟಾರ್ ನಟರು ಸರಿಯಾದ ಸಮಯಕ್ಕೆ ಬರುತ್ತಿದ್ದರು.

(ತನಿಗುಚಿ ಸೇನ್ಕಿಚಿಗೆ (Taniguchi Senkichi)

ಯಮಾಸಾನ್ ಸಹಾಯಕ ನಿರ್ದೇಶಕರ ಮೇಲೆ ಕೋಪಗೊಂಡದ್ದನ್ನು ನೋಡೇ ಇಲ್ಲ. ಒಮ್ಮೆ ದೃಶ್ಯವೊಂದಕ್ಕೆ ಇಬ್ಬರು ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬರಿಗೆ ಬರಹೇಳಲು ಮರೆತುಬಿಟ್ಟಿದ್ದೆವು. ನಾನು ತಕ್ಷಣ ಮುಖ್ಯಸಹಾಯಕ ನಿರ್ದೇಶಕರಾಗಿದ್ದ ತನಿಗುಚಿ ಸೇನ್ಕಿಚಿಗೆ (Taniguchi Senkichi) ವಿಷಯವನ್ನು ತಿಳಿಸಿದೆ. (ಈತ ನಂತರ ನಿರ್ದೇಶಕನಾದಾಗ ನನ್ನ ಚಿತ್ರಕತೆಗಳ ನಿರ್ದೇಶನ ಮಾಡಿದ್ದ Ginrei no hate (To the End of the Silver Mountains, 1947), Jakoman to Tetsu (Jakoman and Tetsu, 1949) and Akatsuki no dasso (Escape at Dawn, 1950). “ಸೆನ್ ಚಾನ್” ಕ್ಷಣಮಾತ್ರವೂ ತಡಮಾಡದೆ ಯಮಾಸಾನರ ಹತ್ತಿರ ಹೋಗಿ “ಯಮಾ ಸಾನ್ ಇಂದು X ನಟ ಬರುತ್ತಿಲ್ಲ” ಅಂತ ಪರಿಸ್ಥಿತಿಯನ್ನು ವಿವರಿಸಿದ. ಯಮಾ ಸಾನ್ ಆಶ್ಚರ್ಯದಿಂದ ಅವನನ್ನೇ ದೃಷ್ಟಿಸಿ ನೋಡಿ ಯಾಕೆ ಅಂತ ಕೇಳಿದರು.” ನಮಗೆ ಅವರನ್ನು ಕರೆಯಲು ಮರೆತುಹೋಯಿತು” ಅಂತ ಅದು ಯಮಾಸಾನರೇ ತಪ್ಪು ಅನ್ನೋ ಹಾಗೇ ಜೋರಾಗಿ ಹೇಳಿದ. ಇದು ಸೆನ್ ಚಾನ್ ನ ವಿಶೇಷತೆ. ಇಡೀ ಪಿ ಸಿ ಎಲ್ ನಲ್ಲಿ ಯಾರಿಗೂ ಅವನ ಈ ಶೈಲಿಯನ್ನು ಅನುಕರಿಸಲು ಸಾಧ್ಯವಿಲ್ಲ. ಯಮಾಸಾನ್ ಸ್ವಲ್ಪ ಕೂಡ ಸಿಟ್ಟು ಮಾಡಿಕೊಳ್ಳದೆ “ಸರಿ ನಂಗೆ ಅರ್ಥವಾಗುತ್ತೆ” ಅಂತ ಹೇಳಿದರು. ಬಂದಿದ್ದ ನಟನನ್ನೇ ಇಟ್ಟುಕೊಂಡು ದೃಶ್ಯವನ್ನು ಚಿತ್ರೀಕರಿಸಿದರು. ಆ ನಟನಿಗೆ ಕ್ಯಾಮರಾಗೆ ಬೆನ್ನು ತಿರುಗಿಸಿ ನಡೆಯುವಾಗ ಹಿಂತಿರುಗಿ ನೋಡುತ್ತಾ “ಏಯ್ ಏನು ಮಾಡ್ತಿದಿಯಾ? ಬೇಗ ಬೇಗ!” ಅಂತ ಹೇಳಲು ಸೂಚನೆ ನೀಡಿದರು.

ಚಿತ್ರ ಪೂರ್ತಿಯಾದ ನಂತರ ಯಮಾಸಾನ್ ನನ್ನನ್ನು ಮತ್ತು ಸೆನ್ ಚಾನ್ ನನ್ನು ಕುಡಿಯಲು ಶಿಬುಯಾಗೆ ಕರೆದುಕೊಂಡು ಹೋಗಿದ್ದರು. ಅಲ್ಲಿನ ಚಿತ್ರಮಂದಿರವೊಂದರಲ್ಲಿ ನಮ್ಮ ಚಿತ್ರ ಪ್ರದರ್ಶನಗೊಳ್ಳುತ್ತಿತ್ತು. ಯಮಾಸಾನ್ ತಕ್ಷಣ “ನಾವು ಹೋಗಿ ನೋಡೋಣವೆ?” ಅಂತ ಕೇಳಿದರು. ನಾವು ಒಳಹೊಕ್ಕು ಕೂತೆವು. ಮತ್ತೊಬ್ಬ ನಟನಿಲ್ಲದೆ ಚಿತ್ರಿಸಿದ್ದ ದೃಶ್ಯ ಬಂತು. ಆ ನಟ ಹಿಂತಿರುಗಿ ನೋಡುತ್ತಾ “ಏಯ್ ಏನು ಮಾಡ್ತಿದಿಯಾ? ಬೇಗ ಬೇಗ!” ಅಂದಾಗ ಯಮಾಸಾನ್ ನಮ್ಮ ಕಡೆ ತಿರುಗಿ “ಆ ಇನ್ನೊಬ್ಬ ವ್ಯಕ್ತಿ ಅಲ್ಲೇನು ಮಾಡ್ತಿದಾನೆ ಅಂತ ನಿಮಗನ್ನಿಸುತ್ತೆ? ಅವನೇನು ಅಲ್ಲಿ ಸಗಣಿ ಹೊರಲು ಹೋಗಿದಾನಾ?” ಅಂತ ಕೇಳಿದರು. ಸೇನ್ ಚಾನ್ ಮತ್ತು ನಾನು ಆ ಕತ್ತಲೆಯ ಚಿತ್ರಮಂದಿರದಲ್ಲಿ ಎದ್ದು ಅವರೆದುರು ತಲೆಬಗ್ಗಿಸಿ “ದಯವಿಟ್ಟು ನಮ್ಮನ್ನು ಕ್ಷಮಿಸಿ” ಎಂದೆವು. ಅಲ್ಲಿದ್ದ ಪ್ರೇಕ್ಷಕರು ಈ ಇಬ್ಬರು ವ್ಯಕ್ತಿಗಳು ಹೀಗೇಕೆ ಮಾಡುತ್ತಿದ್ದಾರೆ ಎಂದು ಆಶ್ಚರ್ಯದಿಂದ ತಿರುಗಿನೋಡಿದರು.

ಯಮಾ ಸಾನ್ ಇಂತಹ ವ್ಯಕ್ತಿ. ನಾವು ಶೂಟ್ ಮಾಡಿ ತಂದಿರುವ ದೃಶ್ಯಗಳು/ಚಿತ್ರಿಕೆಗಳು ಅವರಿಗೆ ಇಷ್ಟವಾಗದಿದ್ದರೂ ಅದನ್ನು ಉಳಿಸಿಕೊಳ್ಳುತ್ತಿದ್ದರು. ಚಿತ್ರ ಬಿಡುಗಡೆಯಾದ ನಂತರ ನಮ್ಮನ್ನು ಚಿತ್ರ ನೋಡಲು ಕರೆದುಕೊಂಡು ಹೋಗುತ್ತಿದ್ದರು. ನಾವು ಚಿತ್ರೀಕರಿಸಿರುವುದನ್ನು ತೋರಿಸಿ “ಇದನ್ನು ಮತ್ತೊಂದು ರೀತಿ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಅಲ್ಲವೆ?” ಅಂತ ಕೇಳಿ ತಾಳ್ಮೆಯಿಂದ ಕಾರಣಸಹಿತವಾಗಿ ವಿವರಿಸುತ್ತಿದ್ದರು. ತನ್ನ ಸಹಾಯಕ ನಿರ್ದೇಶಕರಿಗೆ ತರಬೇತಿ ಕೊಡುವ ಸಲುವಾಗಿ ಆತ ತನ್ನ ಚಿತ್ರಗಳನ್ನೇ ಬಿಟ್ಟುಕೊಟ್ಟುಬಿಡುತ್ತಿದ್ದರು ಅಂತ ನನಗನ್ನಿಸುತ್ತದೆ.

ಹೀಗಿದ್ದು ಯಮಾಸಾನ್ ಪತ್ರಿಕೆಯೊಂದರಲ್ಲಿ ಒಮ್ಮೆ “ನಾನು ಕುರೊಸೊವಾಗೆ ಕಲಿಸಿದ್ದು ಕುಡಿಯುವುದನ್ನು ಮಾತ್ರ” ಎಂದು ಹೇಳಿದ್ದರು. ಇಷ್ಟೊಂದು ನಿಸ್ವಾರ್ಥವಾಗಿ ಮತ್ತೊಬ್ಬರಿಗೆ ತನ್ನ ಕೃತಜ್ಞತೆಗಳನ್ನು ಸಲ್ಲಿಸಲು ಹೇಗೆ ಸಾಧ್ಯ? ಸಿನೆಮಾಗಳ ಬಗ್ಗೆ, ನಿರ್ದೇಶಕನ ಕೆಲಸಗಳ ಬಗ್ಗೆ ಯಮಾಸಾನರಿಂದ ಬಹಳಷ್ಟನ್ನು ಕಲಿತೆ. ಅವೆಲ್ಲವನ್ನೂ ಇಲ್ಲಿ ವಿವರಿಸಲು ಸಾಧ್ಯವಿಲ್ಲ. ನಿಸ್ಸಂಶಯವಾಗಿ ಆತ ಅತ್ಯುತ್ತಮ ಗುರು. ಇದಕ್ಕೆ ಸಾಕ್ಷಿಯೆಂದರೆ ಆತನ “ಅನುಯಾಯಿಗಳ” (ಯಮಾಸಾನರಿಗೆ ಇಷ್ಟವಿಲ್ಲದ ಪದ) ಚಿತ್ರಗಳು ಆತನ ಚಿತ್ರಗಳನ್ನು ಹೋಲುವುದಿಲ್ಲ. ಆತ ಎಂದೂ ತನ್ನ ಸಹಾಯಕ ನಿರ್ದೇಶಕರನ್ನು ನಿಯಂತ್ರಿಸುತ್ತಿರಲಿಲ್ಲ ಬದಲಿಗೆ ಅವರ ವೈಯುಕ್ತಿಕ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸುತ್ತಿದ್ದರು. ಇದನ್ನು ಅವರು ತಾನು “ಗುರು” ಅನ್ನುವ ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ಮಾಡುತ್ತಿದ್ದರು.

ಇಂತಹ ಅದ್ಭುತ ವ್ಯಕ್ತಿ ಯಮಾಸಾನರೊಂದಿಗೆ ದಿಗಿಲು ಹುಟ್ಟಿಸಿದ ಕ್ಷಣಗಳು ಇವೆ. ಒಮ್ಮೆ ಎಡೋ ಯುಗ (Edo-period)ಕ್ಕೆ ಸಂಬಂಧಿಸಿದ ಚಿತ್ರವೊಂದರ ಹೊರಾಂಗಣ ಸೆಟ್ ಚಿತ್ರೀಕರಣದಲ್ಲಿ ನಡೆದ ಘಟನೆಯೊಂದು ನೆನಪಿದೆ. ವ್ಯಾಪಾರಿಯ ಮನೆ ಮುಂದೆ ಏನು ಬರೆದಿತ್ತು ಎನ್ನುವುದು ನೆನಪಿಲ್ಲ ಆದರೆ ಏನೋ ಬರೆದಿದ್ದರು ಅನ್ನುವುದು ನೆನಪಿದೆ. ಒಬ್ಬ ನಟ ಆ ಬೋರ್ಡಿನಲ್ಲಿ ಏನು ಬರೆದಿದೆ ಅಂತ ಕೇಳಿದ. ಅಲ್ಲೇನು ಬರೆದಿದ್ದರೋ ಅದನ್ನು ಓದಲು ಬರುತ್ತಿರಲಿಲ್ಲ. ಅವರು ಯಾವ ರೀತಿಯ ಸಾಮಾನು ಮಾರುತ್ತಾರೆ ಎನ್ನುವುದು ನನಗೆ ತಿಳಿದಿರಲಿಲ್ಲ. ಹಾಗಾಗಿ ಬಹುಶಃ ಔಷಧಿಗಳಿರಬಹುದೆಂದು ಊಹಿಸಿ ಅದನ್ನೇ ಆ ನಟನಿಗೆ ಹೇಳಿದೆ. ತಕ್ಷಣ ಯಮಾಸಾನ್ ಸಿಟ್ಟಿನಿಂದ “ಕುರೊಸೊವ!” ಅಂತ ಚೀರಿದರು. ಎಂದೂ ಆ ರೀತಿಯ ಧ್ವನಿಯಲ್ಲಿ ಮಾತಾಡದ ಅವರತ್ತ ಆಶ್ಚರ್ಯದಿಂದ ನೋಡಿದೆ. ಅವರು ಅಷ್ಟು ಸಿಟ್ಟು ಮಾಡಿಕೊಂಡಿದ್ದನ್ನು ಎಂದೂ ನೋಡಿರಲಿಲ್ಲ. ಅದೇ ಸಿಟ್ಟಿನ ಧ್ವನಿಯಲ್ಲಿ “ಅದು ಬಟ್ಟೆಗೆ ಸಂಬಂಧಿಸಿದ ವಸ್ತುಗಳು. ಬೇಜವಾಬ್ದಾರಿಯಿಂದ ಏನೇನೋ ಹೇಳಬೇಡ. ನಿನಗೆ ಗೊತ್ತಿಲ್ಲದಿದ್ದರೆ ಗೊತ್ತಿಲ್ಲ ಅಂತ ಹೇಳು” ಅಂತ ಸಿಡುಕಿದರು. ಏನೂ ಹೇಳಲು ತೋಚಲಿಲ್ಲ. ಆ ಮಾತುಗಳು ನನ್ನೊಂದಿಗೆ ಉಳಿದುಬಿಟ್ಟವು. ಇಂದಿಗೂ ಆ ಮಾತುಗಳನ್ನು ಮರೆಯಲು ಸಾಧ್ಯವಾಗಿಲ್ಲ.

ಯಮಾಸಾನ್ ಬಹಳ ಒಳ್ಳೆಯ ಮಾತುಗಾರರಾಗಿದ್ದರು. ಜೊತೆಯಲ್ಲಿ ಕುಡಿಯುತ್ತಾ ಹಲವು ವಿಷಯಗಳನ್ನು ಅವರಿಂದ ಕಲಿತೆ. ಆತ ವಿಭಿನ್ನ ಆಸಕ್ತಿಗಳನ್ನು ಹೊಂದಿದ್ದ ವ್ಯಕ್ತಿ. ಅದರಲ್ಲೂ ಊಟದ ಬಗ್ಗೆ ಬಹಳ ಒಳ್ಳೆಯ ಜ್ಞಾನವಿತ್ತು. ಅವರನ್ನು ನಿಜಕ್ಕೂ ಬಹಳ ಒಳ್ಳೆಯ ಊಟದ ಅಭಿರುಚಿ ಇದ್ದ ವ್ಯಕ್ತಿ ಎಂದು ಕರೆಯಬಹುದಿತ್ತು. ಅಂತರಾಷ್ಟ್ರೀಯ ಖಾದ್ಯಗಳ ಬಗ್ಗೆ ಅವರಿಂದ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡೆ. “ಒಳ್ಳೆಯ ಮತ್ತು ಕೆಟ್ಟ ರುಚಿಯ ನಡುವೆ ವ್ಯತ್ಯಾಸ ತಿಳಿಯಲಾಗದವರು ಮನುಷ್ಯ ಜನಾಂಗಕ್ಕೆ ಸೇರಿದವರು ಎಂದು ಹೇಳಿಕೊಳ್ಳುವುದಕ್ಕೆ ನಾಲಾಯಕ್ಕು” ಎನ್ನುವುದು ಅವರ ಪ್ರಿಯ ಸಿದ್ಧಾಂತವಾಗಿತ್ತು. ಅವರಿಗೆ ತಿನ್ನುವುದು ಬಹಳ ಪ್ರಿಯವಾದ ಸಂಗತಿಯಾದ್ದರಿಂದ ಈ ಕ್ಷೇತ್ರದಲ್ಲಿ ನಾನೊಂದಿಷ್ಟು ಅಧ್ಯಯನ ಮಾಡಿದೆ.

ಅವರಿಗೆ ಪುರಾತನ ವಸ್ತುಗಳ ಅದರಲ್ಲೂ ಹಳೆಯ ಕಾಲದ ಪಾತ್ರೆಗಳ ಬಗ್ಗೆ ಕೂಡ ಒಳ್ಳೆಯ ತಿಳಿವಳಿಕೆ ಇತ್ತು. ಜಾನಪದ ಕಲೆಯನ್ನು ಬಹಳ ಇಷ್ಟಪಡುತ್ತಿದ್ದರು. ಅವರಿಂದಲೇ ಈ ವಿಷಯಗಳ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದು. ಆಮೇಲೆ ನನ್ನೊಳಗಿನ ಚಿತ್ರಕಲಾವಿದನಿಂದಾಗಿ ಇವುಗಳ ಬಗ್ಗೆ ಯಮಾಸಾನರಿಗಿಂತಲೂ ಹೆಚ್ಚು ಆಳವಾಗಿ ಅಭ್ಯಸಿಸಿದೆ.

(ಸುಕಿಯಾಕಿ(sukiyaki)

ಹೊರಾಂಗಣ ಚಿತ್ರೀಕರಣಕ್ಕೆ ಹೋಗಬೇಕಾದಾಗ ದಾರಿಯಲ್ಲಿ ಸಮಯವನ್ನು ಕಳೆಯಲೆಂದೇ ರೈಲಿನಲ್ಲಿ ಯಮಾಸಾನ್ ಯಾವಾಗಲೂ ತಮ್ಮ ಸಹಾಯಕ ನಿರ್ದೇಶಕರಿಗೊಂದು ಆಟವನ್ನು ಆಡಿಸುತ್ತಿದ್ದರು. ಒಂದು ಸರಳ ವಸ್ತುವನ್ನು ಆಯ್ಕೆ ಮಾಡಿಕೊಂಡು ನಾವೆಲ್ಲ ಆ ಕುರಿತು ಸಣ್ಣಕತೆಯೊಂದನ್ನು ಬರೆಯಬೇಕಿತ್ತು. ಇದು ಚಿತ್ರಕತೆ ಮತ್ತು ನಿರ್ದೇಶನವನ್ನು ಅಭ್ಯಸಿಸಲು ಬಹಳ ಒಳ್ಳೆಯ ವಿಧಾನವಾಗಿದ್ದರ ಜೊತೆಯಲ್ಲಿ ಬಹಳ ಆಸಕ್ತಿಕರ ಆಟವಾಗಿತ್ತು. ಉದಾಹರಣೆಗೆ ಯಮಾಸಾನ್ ಬರೆದ ಕತೆ “ಶಾಖ” : ಸುಕಿಯಾಕಿ(sukiyaki) ರೆಸ್ಟೋರೆಂಟಿನ ಎರಡನೆಯ ಮಹಡಿಯಲ್ಲಿ ನಡೆದ ಘಟನೆ. ಬೇಸಿಗೆಯ ಸುಡುಮಧ್ಯಾಹ್ನದ ಸೂರ್ಯನ ಶಾಖ ಮುಚ್ಚಿದ್ದ ಕಿಟಕಿ ಹಾಗೂ ಶೋಜಿ (shoji) ಪರದೆಗಳ ಮೂಲಕ ಒಳಗೆ ನುಗ್ಗುತ್ತಿತ್ತು. ಆ ಸಣ್ಣ ಕೋಣೆಯಲ್ಲಿ ವ್ಯಕ್ತಿಯೊಬ್ಬ ಮೈಯಿಂದ ಸುರಿಯುತ್ತಿದ್ದ ಬೆವರನ್ನು ಒರೆಸುವ ಕಡೆ ಕೂಡ ಗಮನನೀಡದೆ ತನ್ನೆಲ್ಲ ಶಕ್ತಿಯನ್ನು ಬಳಸಿ ಅಲ್ಲಿನ ಪರಿಚಾರಿಕೆಯನ್ನು ಸೆಳೆಯಲು ಪ್ರಯತ್ನಿಸುತ್ತಿದ್ದ. ಅದೇ ಸಮಯದಲ್ಲಿ ಸುಕಿಯಾಕಿ (sukiyaki) ಕುದಿಯಲಾರಂಭಿಸಿತು. ಸುರ್ ಎನ್ನುವ ಸದ್ದಿನೊಂದಿಗೆ ಇಡೀ ಕೋಣೆಯಲ್ಲಿ ಹಂದಿಯ ವಾಸನೆ ತುಂಬಿಕೊಂಡಿತು.

ಈ ಸಣ್ಣ ಕತೆ ತನ್ನ ವಸ್ತುವಿನ ಬಗ್ಗೆ ವಿವರವಾಗಿ ಏನನ್ನೂ ಹೇಳುವುದಿಲ್ಲ. ಬೆವರುತ್ತಿರುವ ಆ ವ್ಯಕ್ತಿಯ ಚಿತ್ರ ನಿಮ್ಮ ಕಣ್ಣಮುಂದೆ ನಿಲ್ಲುತ್ತದೆ. ಎಲ್ಲ ಸಹಾಯಕ ನಿರ್ದೇಶಕರು ಒಟ್ಟಿಗೆ ತಮ್ಮ ಟೊಪ್ಪಿಗೆಯನ್ನು ತೆಗೆದು ಯಮಾಸಾನರಿಗೆ ಗೌರವ ಸಲ್ಲಿಸಿದ್ದರು.