ಯಮಾ ಸಾನರಿಂದ ಸಂಕಲನ ಕುರಿತು ಬೆಟ್ಟದಷ್ಟು ವಿಷಯಗಳನ್ನು ಕಲಿತೆ. ಆದರೆ ಒಂದು ಮುಖ್ಯವಾದ ಸತ್ಯವೆಂದರೆ ಸಂಕಲನ ಮಾಡುವಾಗ ನಿಮ್ಮದೇ ಕೃತಿಯನ್ನು ನೀವು ವಸ್ತುನಿಷ್ಠವಾಗಿ ನೋಡಬೇಕು. ಕಷ್ಟಪಟ್ಟು ತೆಗೆದ ತಮ್ಮದೇ ಸಿನೆಮಾವನ್ನು ಯಮಾ ಸಾನ್ ನಿರ್ದಾಕ್ಷಿಣ್ಯವಾಗಿ ಕತ್ತರಿಸಿಬಿಡುತ್ತಿದ್ದರು. ಅವರು ಸಂಕಲನದ ಕೋಣೆಯೊಳಗೆ ಖುಷಿಯಾಗಿ ಬಂದು “ಕುರೊಸೊವ ನಿನ್ನೆ ರಾತ್ರಿ ಯೋಚಿಸಿದೆ ಈ ದೃಶ್ಯವನ್ನು ನಾವು ಕತ್ತರಿಸಿಬಿಡೋಣ” ಅಥವ “ಕುರೊಸೊವ ನಿನ್ನೆ ರಾತ್ರಿ ಯೋಚಿಸಿದೆ ನೀನು ಈ ದೃಶ್ಯಗಳನ್ನು ಕತ್ತರಿಸು” ಎಂದು ಹೇಳುತ್ತಿದ್ದರು. “ನಾವಿದನ್ನು ಕತ್ತರಿಸಬಹುದು!”, “ನೀನಿದನ್ನು ಕತ್ತರಿಸು!”, “ಕತ್ತರಿಸು!” ಯಮಾಸಾನ್ ಸಂಕಲನದ ಕೊಠಡಿಯಲ್ಲಿ ಕಠೋರ ಕೊಲೆಗಾರರಾಗಿದ್ದರು.
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವನ ಆತ್ಮಕತೆಯ ಮತ್ತೊಂದು ಅಧ್ಯಾಯ.

 

ಯಮಾ ಸಾನರೊಂದಿಗೆ ಕೆಲಸ ಮಾಡುತ್ತಿದ್ದಾಗ ಕೆಲಸ ಮುಗಿದ ಮೇಲೆ ದಿನದ ಕೊನೆಗೆ ಇಬ್ಬರೂ ಒಟ್ಟಿಗೆ ಕುಡಿಯುತ್ತಿದ್ದೆವು. ಸಾಮಾನ್ಯವಾಗಿ ಅವರು ರಾತ್ರಿಯೂಟಕ್ಕೆ ತಮ್ಮ ಮನೆಗೆ ಕರೆಯುತ್ತಿದ್ದರು. ಒಂದು ಸಿನೆಮಾ ಮುಗಿಯುತ್ತಿದ್ದ ಹಾಗೆ ಮತ್ತೊಂದನ್ನು ಆರಂಭಿಸುವ ಒತ್ತಡ ಸದಾ ಅವರ ಮೇಲಿರುತ್ತಿತ್ತು. ಆ ಕುರಿತ ಮಾತುಕತೆಗಳಿಗೆ ಅವರು ನನ್ನನ್ನು ಸೇರಿಸಿಕೊಳ್ಳುತ್ತಿದ್ದರು. ಒಮ್ಮೆ ನನಗಿನ್ನೂ ಚೆನ್ನಾಗಿ ನೆನಪಿದೆ Tojuros Love ಎನ್ನುವ ಸಿನೆಮಾ ನಮ್ಮೆಲ್ಲರ ಪ್ರಯತ್ನದ ಹೊರತಾಗಿಯೂ ಒಳ್ಳೆಯ ವಿಮರ್ಶೆಯನ್ನು ಪಡೆಯಲಿಲ್ಲ. ಬೇಸರದಲ್ಲಿ ಯಮಾ ಸಾನ್ ಮತ್ತು ನಾನು ಬೆಳಿಗ್ಗೆಯೇ ಕುಡಿಯಲು ಕೂತಿದ್ದೆವು. ಕಹಿಯಾದ ಭಾವನೆಯೊಂದಿಗೆ ಅವರೊಂದಿಗೆ ಆ ಬೆಳಗ್ಗೆ ಸೂರ್ಯನ ಬೆಳಕಲ್ಲಿ ಯೊಕೊಹಾಮಾ (Yokohama ) ಬಾರಿನಲ್ಲಿ ಕೂತು ಬಂದರಿನಲ್ಲಿದ್ದ ಹಡುಗುಗಳನ್ನು ನೋಡುತ್ತಾ ಮೌನವಾಗಿ ಕುಡಿಯುತ್ತಾ ಕೂತಿದ್ದನ್ನು ಎಂದೂ ಮರೆಯಲು ಸಾಧ್ಯವಿಲ್ಲ.

ಯಮಾ ಸಾನರೊಂದಿಗೆ ಹಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಮೇಲೆ ಅವರು ನನಗೆ ಚಿತ್ರಕತೆಗಳನ್ನು ಬರೆಯುವ ಅವಕಾಶ ಕೊಟ್ಟರು. ಯಮಾ ಸಾನ್ ಸ್ವತಃ ಅತ್ಯುತ್ತಮ ಚಿತ್ರಕತೆ ರಚನಾಕಾರರಾಗಿದ್ದರು. ಒಮ್ಮೆ ಯಾವುದೋ ಜಾರುಗಳಿಗೆಯಲ್ಲಿ ತನಿಗುಚಿ ಸೇನ್ಕುಚಿ (Taniguchi Senkichi) ನೇರವಾಗಿ ಯಮಾ ಸಾನರಿಗೆ “ನೀವು ಅತ್ಯತ್ತಮ ಚಿತ್ರಕತೆ ರಚನೆಕಾರ ಆದರೆ ಒಳ್ಳೆಯ ನಿರ್ದೇಶಕನಲ್ಲ” ಅಂತ ಹೇಳಿದ್ದರು. ಆದರೆ ಯಮಾಸಾನ್ ಅತ್ಯುತ್ತಮ ಚಿತ್ರಕತೆ ರಚನೆಕಾರ ಎನ್ನುವುದರಲ್ಲಿ ಎರಡುಮಾತಿಲ್ಲ. ನನ್ನ ಚಿತ್ರಕತೆಗಳನ್ನು ಆತ ತಿದ್ದಿ ಹೇಳುತ್ತಿದ್ದ ನಿಖರ ವಿಮರ್ಶಾತ್ಮಕ ಮಾತುಗಳ ಆಧಾರದ ಮೇಲೆ ಅವರ ಬರವಣಿಗೆಯ ಸಾಮರ್ಥ್ಯವನ್ನು ಸಮರ್ಥಿಸಿಕೊಳ್ಳಬಲ್ಲೆ. ಯಾರು ಬೇಕಾದರೂ ಟೀಕಿಸಬಹುದು. ಆದರೆ ತಮ್ಮ ಟೀಕೆಗೆ ಸೂಕ್ತ ಆಧಾರಗಳನ್ನು ನೀಡಿ ಉತ್ತಮಗೊಳಿಸಿಕೊಳ್ಳಲು ಸಾಧ್ಯವಾಗುವಂತಹ ರಚನಾತ್ಮಕ ಸಲಹೆಗಳನ್ನು ನೀಡಲು ಸಾಮಾನ್ಯ ಪ್ರತಿಭಾವಂತರಿಗೆ ಸಾಧ್ಯವಿಲ್ಲ.


ಯಮಾ ಸಾನರ ಮಾರ್ಗದರ್ಶನದಲ್ಲಿ ಫುಜಿಮೊರಿ ನಾರಿಯೋಶಿಯ (Fujimori Nariyoshi) Mizuno ]urozaemon ಕತೆಯನ್ನು ಆಧರಿಸಿ ನನ್ನ ಮೊದಲ ಚಿತ್ರಕತೆಯನ್ನು ಬರೆದಿದ್ದೆ. ಮೂಲದ ದೃಶ್ಯವೊಂದರಲ್ಲಿ ನಾಯಕ ತನ್ನ ಗುಂಪಿನವರಿಗೆ ಎಡೊ (Edo) ಮಹಲಿನ ಮುಂದಿನ ಫಲಕದಲ್ಲಿ ಬರೆದಿದ್ದ ಶಾಸನವನ್ನು ಕುರಿತು ಹೇಳುತ್ತಾನೆ. ಮೂಲವನ್ನು ಅನುಸರಿಸಿ ಅದನ್ನು ಹೋಲುವಂತೆ ನಾಯಕ ತನ್ನ ಗೆಳೆಯರಿಗೆ ತಾನು ನೋಡಿದ್ದನ್ನು ಹೇಳುತ್ತಾನೆ ಎಂದು ಬರೆದಿದ್ದೆ. ಯಮಾ ಸಾನ್ ಅದನ್ನು ಓದಿ ಕಾದಂಬರಿಯಾದರೆ ಈ ದೃಶ್ಯ ಹೊಂದುತ್ತದೆ ಆದರೆ ಚಿತ್ರಕತೆಯಲ್ಲಿ ಈ ದೃಶ್ಯ ಬಹಳ ಪೇಲವವಾಗಿರುತ್ತದೆ ಅಂತ ಹೇಳಿದರು. ಬರೆದಿದ್ದರಲ್ಲಿ ಏನನ್ನೋ ಹೊಡೆದು ಹಾಕಿ ನನಗೆ ತೋರಿಸಿದರು. ನಾಯಕ ತನ್ನ ಗೆಳೆಯರಿಗೆ ವಿಷಯ ತಿಳಿಸುವಂತಹ ನೀರಸ ಕ್ರಿಯೆಗೆ ಬದಲಾಗಿ ಯಮಾ ಸಾನ್ ಅವನು ಆ ಫಲಕವನ್ನೇ ತನ್ನ ಭುಜದ ಮೇಲೆ ಹೊತ್ತು ತಂದು ಗೆಳೆಯರ ಮುಂದಿಟ್ಟು “ನೋಡಿ ಇಲ್ಲಿ!” ಎನ್ನುತ್ತಾನೆ ಎಂದು ಬದಲಾಯಿಸಿದ್ದರು. ನಾನು ಮೂಕವಿಸ್ಮಿತನಾಗಿಬಿಟ್ಟೆ.

ಆ ಕ್ಷಣದಿಂದ ಸಾಹಿತ್ಯವನ್ನು ನೋಡುವ ನನ್ನ ಕ್ರಮ ಬದಲಾಯಿತು. ಪ್ರಜ್ಞಾಪೂರ್ವಕವಾಗಿ ಈ ಬದಲಾವಣೆಯನ್ನು ಮಾಡಿಕೊಂಡೆ. ಎಚ್ಚರಿಕೆಯಿಂದ ಓದುತ್ತಾ ಲೇಖಕ ಏನನ್ನು ಹೇಗೆ ಹೇಳಲು ಪ್ರಯತ್ನಿಸುತ್ತಿದ್ದಾನೆ ಎಂದು ನನ್ನನ್ನೇ ಪ್ರಶ್ನಿಸಿಕೊಳ್ಳುತ್ತಿದ್ದೆ. ಓದುತ್ತಿರುವಾಗ ಯೋಚಿಸುತ್ತಿದ್ದೆ. ಭಾವನಾತ್ಮಕವಾಗಿ ನನ್ನನ್ನು ತಟ್ಟಿದ ಭಾಗಗಳನ್ನು ಇಲ್ಲವೇ ಮುಖ್ಯವೆನಿಸಿದ ಭಾಗಗಳನ್ನು ಗುರುತು ಮಾಡಿಕೊಳ್ಳುತ್ತಿದ್ದೆ. ಈ ಹೊಸ ರೀತಿಯಲ್ಲಿ ಓದಲಾರಂಭಿಸಿದಾಗ ಹಿಂದೆ ಓದಿದ್ದೆಲ್ಲ ಕೇವಲ ಮೇಲು ಮೇಲಿನ ಓದಾಗಿತ್ತು ಎನ್ನುವುದು ಅರಿವಾಯಿತು.

ಸಾಹಿತ್ಯ ಮಾತ್ರವಲ್ಲ ಎಲ್ಲ ಕಲೆಗಳು ವ್ಯಕ್ತಿ ಪ್ರಬುದ್ಧನಾಗುತ್ತಾ ಸಾಗಿದಂತೆ ಹೆಚ್ಚು ಆಳವಾಗಿ ಅರಿವಾಗಲಾರಂಭಿಸುತ್ತದೆ. ಇದು ಸಹಜ ಆದರೆ ಆ ಸಮಯದಲ್ಲಿ ನನ್ನ ಪಾಲಿಗಿದು ಕ್ರಾಂತಿಯೆನಿಸಿತ್ತು. ಇದಕ್ಕೆ ಕಾರಣರಾದದ್ದು ಯಮಾ ಸಾನ್. ನನ್ನ ಕಣ್ಣೆದುರೇ ಅವರು ನನ್ನ ಚಿತ್ರಕತೆಗಳನ್ನು ಓದುತ್ತಿದ್ದಂತೆ ಅಲ್ಲಲ್ಲೇ ತಿದ್ದುತ್ತಿದ್ದರು. ಅವರ ಸಾಮರ್ಥ್ಯವನ್ನು ನೋಡಿ ಅಚ್ಚರಿಯಾಗುತ್ತಿತ್ತು. ಅವರ ಸ್ಪೂರ್ತಿಯಿಂದಲೇ ನನ್ನನ್ನೇ ಹೊಸದಾಗಿ ರೂಪಿಸಿಕೊಂಡೆ. ಜೊತೆಗೆ ಸೃಷ್ಟಿಕ್ರಿಯೆಯ ರಹಸ್ಯಗಳನ್ನು ಅರಿಯಲಾರಂಭಿಸಿದೆ.

ಯಮಾ ಸಾನ್ ಹೇಳುತ್ತಿದ್ದರು : “ಚಿತ್ರ ನಿರ್ದೇಶಕನಾಗಬೇಕೆಂದರೆ ಮೊದಲು ಚಿತ್ರಕತೆಗಳನ್ನು ಬರಿ”. ನನಗೂ ಅದು ಸರಿಯೆನಿಸಿತು. ಸಂಪೂರ್ಣವಾಗಿ ಚಿತ್ರಕತೆ ಬರೆಯಲು ತೊಡಗಿಸಿಕೊಂಡೆ. ಸಹಾಯಕ ನಿರ್ದೇಶನದ ಕೆಲಸ ಮಾಡುವವರಿಗೆ ಸಮಯ ಸಿಕ್ಕುವುದಿಲ್ಲ ಎಂದು ದೂರುವವರು ಹೇಡಿಗಳು. ಬಹುಶಃ ದಿನವೊಂದಕ್ಕೆ ನೀವು ಒಂದೇ ಪುಟ ಬರೆಯಲು ಸಾಧ್ಯವಾಗಬಹುದು. ಅದನ್ನೇ ಬರೆಯುತ್ತಾ ಹೋದಲ್ಲಿ ವರ್ಷದ ಕೊನೆಯ ಹೊತ್ತಿಗೆ ೩೬೫ ಪುಟಗಳ ಚಿತ್ರಕತೆ ನಿಮ್ಮ ಬಳಿ ಸಿದ್ಧವಾಗಿರುತ್ತದೆ. ದಿನಕ್ಕೆ ಒಂದು ಪುಟ ಅನ್ನೋ ರೀತಿಯಲ್ಲೇ ನಾನು ಬರವಣಿಗೆ ಆರಂಭಿಸಿದೆ. ರಾತ್ರಿ ಹೊತ್ತು ಏನೂ ಮಾಡಲಾಗುತ್ತಿರಲಿಲ್ಲ. ಮುಂಜಾನೆಯವರೆಗೆ ಕೆಲಸ ಮಾಡಲೇಬೇಕಿತ್ತು. ಮಲಗುವ ಹೊತ್ತಲ್ಲಿ ಹಾಸಿಗೆಯೊಳಗೆ ನುಸುಳುವ ಮುನ್ನ ಎರಡರಿಂದ ಮೂರು ಪುಟ ಬರೆದು ಮಲಗುತ್ತಿದ್ದೆ. ವಿಚಿತ್ರವಾದರೂ ಸತ್ಯವೇನೆಂದರೆ ಬರೆಯಲು ಮನಸ್ಸು ಮಾಡಿ ಕೂತ ತಕ್ಷಣ ನಾನಂದುಕೊಂಡದ್ದಕ್ಕಿಂತ ಸುಲಭವಾಗಿ ಬರೆದುಬಿಡುತ್ತಿದ್ದೆ. ಇದೇ ರೀತಿ ಕೆಲವು ಚಿತ್ರಕತೆಗಳನ್ನು ಬರೆದೆ.

ಇದೇ ಸಮಯದಲ್ಲಿ ನಾನು ಬರೆದ ಮುಗಿಸಿದ ಚಿತ್ರಕತೆಗಳಲ್ಲೊಂದು ವಾಸ್ತುಶಿಲ್ಪಿ ಬ್ರೂನೊ ಟೌಟ್ ನ ಜೀವನವನ್ನಾಧರಿಸಿ ಬರೆದ ದರುಮದೆರ ನೊ ದೊಯಿತ್ಸುಜನ್ (Darumadera no doitsujin – A German at Daruma Temple) ಎನ್ನುವ ಕತೆ. ನಂತರ ಯಮಾ ಸಾನರ ಶಿಫಾರಸ್ಸಿನಿಂದಾಗಿ ಸಿನೆಮಾ ಪತ್ರಿಕೆ ಈಗಾ ಹೈರೊನ್ (Eiga hyoron)ನಲ್ಲಿ ಪ್ರಕಟವಾಯಿತು. ಆಗೊಂದು ಕೆಟ್ಟ ಘಟನೆ ಘಟಿಸಿತು. ಯಮಾ ಸಾನ್ ಆ ಪತ್ರಿಕೆಯ ವಿಮರ್ಶಕನಿಗೆ ಮುಂದಿನ ಸಂಚಿಕೆಯಲ್ಲಿ ಪ್ರಕಟಿಸುವರು ಎನ್ನುವ ಭರವಸೆಯಿಂದ ಈ ಕತೆಯ ಇದ್ದ ಒಂದೇ ಪ್ರತಿಯನ್ನು ಕೊಟ್ಟುಬಂದರು. ಆ ವಿಮರ್ಶಕ ಕುಡಿಯಲು ಹೋದವನು ರೈಲಿನಲ್ಲಿ ಆ ಪ್ರತಿಯನ್ನು ಬಿಟ್ಟು ಬಂದಿದ್ದ. ಸಕಾರಣವಾಗಿಯೇ ಯಮಾ ಸಾನರಿಗೆ ಸಿಟ್ಟು ಬಂದು ಈ ವರ್ತನೆಯನ್ನು ಖಂಡಿಸಿ ಪತ್ರಿಕೆಯಲ್ಲಿ ಕಳೆದ ಪ್ರತಿ ಯಾರಿಗಾದರೂ ಸಿಕ್ಕಿದ್ದಲ್ಲಿ ಹಿಂತಿರುಗಿಸಲು ಜಾಹಿರಾತು ನೀಡಿ ಎಂದು ಒತ್ತಾಯಿಸಿದರು. ಆದರೆ ಆ ರೀತಿಯ ಯಾವುದೇ ಜಾಹಿರಾತು ಪ್ರಕಟವಾಗಲಿಲ್ಲ. ನನ್ನನ್ನು ಗುರುತಿಸಿಕೊಳ್ಳಲು ಸಿಕ್ಕ ಈ ಅವಕಾಶವನ್ನು ಬಿಡಲು ನನಗಿಷ್ಟವಿರಲಿಲ್ಲ. ಆದ್ದರಿಂದ ಪುನಃ ಚಿತ್ರಕತೆಯನ್ನು ಬರೆಯಲು ಕೂತೆ. ಮೂರು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೂತು ಮೂಲಪ್ರತಿಯಲ್ಲಿ ಏನಿತ್ತೋ ಅದನ್ನು ನೆನಪಿಸಿಕೊಂಡು ಬರೆದುಮುಗಿಸಿದೆ. ಮುಗಿಸಿದ ನಂತರ ಆ ಪತ್ರಿಕೆ ಮುದ್ರಣವಾಗುತ್ತಿದ್ದಲ್ಲಿಗೆ ಹೋಗಿ ನನ್ನ ಮೂಲಪ್ರತಿಯನ್ನು ಕಳೆದುಹಾಕಿದ ವ್ಯಕ್ತಿಯನ್ನು ಭೇಟಿ ಮಾಡಿದೆ. ಆದರೆ ಆ ವ್ಯಕ್ತಿ ಕ್ಷಮೆ ಕೇಳುವುದಕ್ಕೆ ಬದಲಾಗಿ “ನಾವಿದನ್ನು ಪ್ರಕಟಿಸುತ್ತಿರುವುದಕ್ಕೆ ನೀನು ನಮಗೆ ಕೃತಜ್ಞನಾಗಿರಬೇಕು” ಎನ್ನುವ ಮುಖಭಾವವನ್ನು ಪ್ರದರ್ಶಿಸಿದ. ನನ್ನ ಸಮಾಧಾನಕ್ಕೆ ಬಹುಶಃ ಈ ವ್ಯಕ್ತಿಗೆ ಈ ಭಾವ ಬಿಟ್ಟರೆ ಬೇರೇನೂ ವ್ಯಕ್ತಪಡಿಸಲು ತಿಳಿದಿಲ್ಲ ಎಂದುಕೊಂಡೆ. ಆದರೆ ವಾಸ್ತವವಾಗಿ ನನ್ನ ರಕ್ತ ಕುದಿಯುತ್ತಿತ್ತು. ಇಂದಿಗೂ ಆ ವಿಮರ್ಶಕನನ್ನು ನೆನಪಿಸಿಕೊಂಡಾಗ ಹೇಸಿಗೆ ಅನ್ನಿಸುತ್ತದೆ.

ಒಂದು ಮಟ್ಟಕ್ಕೆ ಚಿತ್ರಕತೆ ಬರೆಯುವುದರಲ್ಲಿ ಪರಿಣಿತಿ ಸಾಧಿಸಿದ ಮೇಲೆ ಯಮಾ ಸಾನ್ ಸಂಕಲನ ಮಾಡುವುದನ್ನು ಕಲಿಯಲು ಹೇಳಿದರು. ನಿಮಗೆ ಸಂಕಲನ ಮಾಡಲು ಬರದಿದ್ದಲ್ಲಿ ನೀವು ಚಿತ್ರ ನಿರ್ದೇಶಕರಾಗಲು ಸಾಧ್ಯವಿಲ್ಲ ಎನ್ನುವುದು ನನಗೆ ಮೊದಲೇ ತಿಳಿದಿತ್ತು. ಸಿನೆಮಾ ಸಂಕಲನ ಎನ್ನುವುದು ಚಿತ್ರಕ್ಕೆ ಅಂತಿಮ ರೂಪವನ್ನು ನೀಡುವಂತಹದ್ದು. ಅದಕ್ಕಿಂತ ಹೆಚ್ಚಾಗಿ ಅದು ಸಿನೆಮಾಗೆ ಜೀವವನ್ನು ತುಂಬುವಂತಹದ್ದು. ಇದನ್ನು ಮೊದಲೇ ಅರಿತಿದ್ದೆನಾದ್ದರಿಂದ ಯಮಾ ಸಾನ್ ಹೇಳುವುದಕ್ಕೂ ಮೊದಲೇ ಸಂಕಲನದ ಕೊಠಡಿಯಲ್ಲಿ ಸಮಯ ಕಳೆಯಲಾರಂಭಿಸಿದ್ದೆ. ಅಥವ ಸಂಕಲನದ ಕೊಠಡಿಯಲ್ಲಿ ದೊಂಬಿಯೆಬ್ಬಿಸಿ ಹಾನಿ ಮಾಡುತ್ತಿದ್ದೆ. ಯಮಾ ಸಾನರ ಸಂಕಲನ ಮಾಡದೇ ಇದ್ದ ಚಿತ್ರಿಕೆಗಳನ್ನು ತೆಗೆದುಕೊಂಡು ಅವುಗಳನ್ನು ಕತ್ತರಿಸಿ ಜೋಡಿಸುತ್ತಿದ್ದೆ. ಸಂಕಲನಕಾರನಿಗೆ ಗೊತ್ತಾದಾಗ ಆತ ಸಿಟ್ಟಿನಲ್ಲಿ ಕಿಡಿಕಾರಿದ್ದ.

ಯಮಾ ಸಾನ್ ಸ್ವತಃ ಬಹಳ ಒಳ್ಳೆಯ ಸಂಕಲನಕಾರರಾಗಿದ್ದರು. ತಮ್ಮ ಸಿನೆಮಾಗಳ ಸಂಕಲನ ಸ್ವತಃ ತಾವೇ ಅತಿ ವೇಗವಾಗಿ ಮಾಡಿಬಿಡುತ್ತಿದ್ದರು. ಹಾಗಾಗಿ ಸಂಕಲನಕಾರರು ಅವರು ಮಾಡುವುದನ್ನು ನೋಡುತ್ತಾ ಅವರು ಹೇಳಿದ ಜಾಗದಲ್ಲಿ ಜೋಡಿಸಬೇಕಿತ್ತು ಅಷ್ಟೇ. ಆದರೆ ಅವರ ಸಹಾಯಕ ನಿರ್ದೇಶಕರು ತಮ್ಮ ಕೆಲಸದಲ್ಲಿ ಮೂಗುತೂರಿಸಿದ್ದನ್ನು ಸಹಿಸಲು ಸಾಧ್ಯವಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಆತ ಬಹಳ ನಾಜೂಕಿನ ಮನುಷ್ಯ. ಆತ ಹುಷಾರಾಗಿ ಹಾಳಾದ ಫ್ರೇಂಗಳನ್ನೆಲ್ಲ ತೆಗೆದು ಅವುಗಳನ್ನು ಸ್ವಚ್ಛಮಾಡಿ ತನ್ನ ಡ್ರಾಯರ್ ನಲ್ಲಿ ಇಟ್ಟಿರುತ್ತಿದ್ದರು. ನಾನು ಅವುಗಳನ್ನೆಲ್ಲ ಎತ್ತಿಕೊಂಡು ಬೇಕಾದಂತೆ ಕತ್ತರಿಸಿ ಸುತ್ತ ಹರಡಿಕೊಂಡು ಕೂತಿರುವುದನ್ನು ನೋಡುವುದು ಆತನಿಗೆ ಸಹಿಸಲು ಸಾಧ್ಯವಿರಲಿಲ್ಲ. ಆತ ಲೆಕ್ಕವಿರದಷ್ಟು ಸಾರಿ ನನ್ನ ಮೇಲೆ ಸಿಟ್ಟಾಗಿ ಕೂಗಾಡಿದ್ದರು. ನಾನೆಂತಹ ಅಸೂಕ್ಷ್ಮ ಮನುಷ್ಯ ಅನ್ನಿಸಬಹುದು ಆದರೆ ನಾನಾತನನ್ನು ನಿರ್ಲಕ್ಷಿಸಿ ನನ್ನ ಪಾಡಿಗೆ ಕತ್ತರಿಸುವುದು ಜೋಡಿಸುವುದು ಮಾಡುತ್ತಿದ್ದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ.

ಕಡೆಗೆ ಆ ಸಂಕಲನಕಾರ ಸುಮ್ಮನಾಗಿಬಿಟ್ಟ. ಇನ್ನು ಹೇಳುವುದು ಸಾಧ್ಯವಿಲ್ಲ ಅಂತ ಸಾಕಾಗಿ ಸುಮ್ಮನಾದನೋ ಅಥವ ಹೇಗಿತ್ತೋ ಹಾಗೆ ಮರಳಿ ಜೋಡಿಸುತ್ತಾನೆ ಎನ್ನುವ ನಂಬಿಕೆ ಬಂತೋ ಗೊತ್ತಿಲ್ಲ. ಒಟ್ಟಿನಲ್ಲಿ ಕಡೆಗೆ ಸಂಕಲನದ ಕೊಠಡಿಯಲ್ಲಿ ಆತನ ವಸ್ತುಗಳನ್ನು ಮುಟ್ಟಲು ಅನುಮತಿ ಕೊಟ್ಟ. ಆಮೇಲೆ ಇದೇ ವ್ಯಕ್ತಿ ಸಾಯುವವರೆಗೂ ನನ್ನೆಲ್ಲ ಸಿನೆಮಾಗಳಿಗೆ ಮುಖ್ಯ ಸಂಕಲನಕಾರನಾಗಿ ಕೆಲಸ ಮಾಡಿದ್ದ.

ಯಮಾ ಸಾನರಿಂದ ಸಂಕಲನ ಕುರಿತು ಬೆಟ್ಟದಷ್ಟು ವಿಷಯಗಳನ್ನು ಕಲಿತೆ. ಆದರೆ ಒಂದು ಮುಖ್ಯವಾದ ಸತ್ಯವೆಂದರೆ ಸಂಕಲನ ಮಾಡುವಾಗ ನಿಮ್ಮದೇ ಕೃತಿಯನ್ನು ನೀವು ವಸ್ತುನಿಷ್ಠವಾಗಿ ನೋಡಬೇಕು. ಕಷ್ಟಪಟ್ಟು ತೆಗೆದ ತಮ್ಮದೇ ಸಿನೆಮಾವನ್ನು ಯಮಾ ಸಾನ್ ನಿರ್ದಾಕ್ಷಿಣ್ಯವಾಗಿ ಕತ್ತರಿಸಿಬಿಡುತ್ತಿದ್ದರು. ಅವರು ಸಂಕಲನದ ಕೋಣೆಯೊಳಗೆ ಖುಷಿಯಾಗಿ ಬಂದು “ಕುರೊಸೊವ ನಿನ್ನೆ ರಾತ್ರಿ ಯೋಚಿಸಿದೆ ಈ ದೃಶ್ಯವನ್ನು ನಾವು ಕತ್ತರಿಸಿಬಿಡೋಣ” ಅಥವ “ಕುರೊಸೊವ ನಿನ್ನೆ ರಾತ್ರಿ ಯೋಚಿಸಿದೆ ನೀನು ಈ ದೃಶ್ಯಗಳನ್ನು ಕತ್ತರಿಸು” ಎಂದು ಹೇಳುತ್ತಿದ್ದರು. “ನಾವಿದನ್ನು ಕತ್ತರಿಸಬಹುದು!”, “ನೀನಿದನ್ನು ಕತ್ತರಿಸು!”, “ಕತ್ತರಿಸು!” ಯಮಾಸಾನ್ ಸಂಕಲನದ ಕೊಠಡಿಯಲ್ಲಿ ಕಠೋರ ಕೊಲೆಗಾರರಾಗಿದ್ದರು. ಒಮ್ಮೆ ನಾವಿಷ್ಟೊಂದು ಕತ್ತರಿಸುವುದಾದರೆ ಇದನ್ನೆಲ್ಲ ಯಾಕೆ ಚಿತ್ರೀಕರಿಸಬೇಕಿತ್ತು? ಅಂತ ಅನ್ನಿಸಿತ್ತು. ಆ ಸಿನೆಮಾವನ್ನು ಚಿತ್ರೀಕರಿಸಲು ನಾನು ಸಹ ಕಷ್ಟಪಟ್ಟಿದ್ದೆ. ನನ್ನದೇ ಕೃತಿಯನ್ನು ಆ ರೀತಿ ಕತ್ತರಿಸಿ ಎಸೆಯುವುದು ನನಗೆ ಕಷ್ಟವಾಗಿತ್ತು.

ಆದರೆ ನಿರ್ದೇಶಕ, ಸಹಾಯಕ ನಿರ್ದೇಶಕ, ಕ್ಯಾಮರಾಮೆನ್ ಅಥವ ಬೆಳಕಿನ ತಂತ್ರಜ್ಞರು ಸಿನೆಮಾಕ್ಕಾಗಿ ಎಷ್ಟು ಕಷ್ಟಪಟ್ಟಿದ್ದಾರೆ ಎನ್ನುವುದನ್ನು ಪ್ರೇಕ್ಷಕರು ಎಂದೂ ನೋಡುವುದಿಲ್ಲ. ಅವರಿಗೆ ತೋರಿಸಬೇಕಾದದ್ದು ಒಂದಿಷ್ಟೂ ಹೆಚ್ಚಿಲ್ಲದ ಪರಿಪೂರ್ಣ ಚಿತ್ರ. ನೀವು ಶೂಟಿಂಗ್ ಮಾಡುವಾಗ ನಿಮಗೆ ಅಗತ್ಯ ಎನಿಸಿದ್ದನ್ನೇ ಚಿತ್ರೀಕರಿಸುತ್ತೀರಿ. ಆದರೆ ಚಿತ್ರೀಕರಿಸಿದ ನಂತರವೇ ಅದರ ಅನಗತ್ಯವೆಂದು ನಿಮಗೆ ಅರ್ಥವಾಗುತ್ತದೆ. ನಿಮಗೆ ಅನಗತ್ಯವಾದದ್ದು ಅನಗತ್ಯ ಅಷ್ಟೇ. ಆದರೆ ಕೆಲಸಕ್ಕಾಗಿ ವಹಿಸಿದ ಶ್ರಮವನ್ನಾಧರಿಸಿಯೇ ಅವುಗಳ ಮೌಲ್ಯವನ್ನು ಅಳೆಯುವುದು ಮನುಷ್ಯರ ಸ್ವಭಾವ. ಸಂಕಲನಕ್ಕೆ ಇದು ಅಪಾಯಕಾರಿಯಾಗುವಂತಹ ಮನೋಭಾವ. ಸಿನೆಮಾವನ್ನು ಆರ್ಟ್ ಆಫ್ ಟೈಂ (ಸಮಯದ ಕಲೆ) ಎನ್ನುತ್ತಾರೆ. ಆದರೆ ಸಮಯವನ್ನು ಯಾವುದೇ ಉದ್ದೇಶವಿಲ್ಲದೆ ಬಳಸಿದಲ್ಲಿ ಅದು ವ್ಯರ್ಥವಾಗಿ ಕಳೆದ ಸಮಯವಾಗುತ್ತದೆ. ಸಂಕಲನ ಕುರಿತು ಯಮಾ ಸಾನರು ಮಾಡಿದ ಪಾಠಗಳಲ್ಲಿ ಇದು ಬಹುದೊಡ್ಡ ಪಾಠ.

ಸಿನೆಮಾ ನಿರ್ಮಾಣ ತಂತ್ರಗಳ ಕುರಿತು ಕೈಪಿಡಿ ಬರೆಯುವುದು ನನ್ನ ಉದ್ದೇಶವಲ್ಲ. ಹಾಗಾಗಿ ಇದನ್ನು ಇಲ್ಲಿಗೆ ನಿಲ್ಲಿಸುತ್ತೇನೆ. ಆದರೆ ಯಮಾ ಸಾನ್ ಮತ್ತು ಸಂಕಲನವನ್ನು ಒಳಗೊಂಡ ಮತ್ತೊಂದು ಘಟನೆಯನ್ನು ಹೇಳಲು ಇಚ್ಛಿಸುತ್ತೇನೆ. ಇದು ನಡೆದದ್ದು ಉಮಾ (Uma (Horses) ಎನ್ನುವ ಸಿನೆಮಾದ ಸಂಕಲನದ ಹೊತ್ತಲ್ಲಿ. ಈ ಚಿತ್ರಕ್ಕೆ ನಾನು ಸಹಚಿತ್ರಕತಾ ರಚನಕಾರನಾಗಿದ್ದೆ. ಯಮಾ ಸಾನ್ ಇಡೀ ಚಿತ್ರದ ಸಂಕಲನದ ಹೊಣೆಯನ್ನು ನನಗೆ ವಹಿಸಿದ್ದರು. ಕತೆಯಲ್ಲಿ ಒಂದು ಕಡೆ ಕುದುರೆಯ ಮರಿಯನ್ನು ಮಾರಿಬಿಟ್ಟಿರುತ್ತಾರೆ. ಅದರ ಅಮ್ಮ ತನ್ನ ಮಗುವನ್ನು ಹುಡುಕುತ್ತಿರುತ್ತಾಳೆ. ಹುಚ್ಚು ಹಿಡಿದವಳಂತೆ ಆಕೆ ಲಾಯದ ಬಾಗಿಲನ್ನು ಒದೆಯುತ್ತಾಳೆ. ಬೇಲಿಯ ಕೆಳಗೆ ನುಸುಳಲು ಯತ್ನಿಸುತ್ತಾಳೆ. ಈ ದೃಶ್ಯದಲ್ಲಿ ಆಕೆಯ ಮುಖಭಾವಗಳು, ಕ್ರಿಯೆಗಳು ಎದ್ದುಕಾಣುವಂತೆ ನಾಟಕೀಯವಾಗಿ ಸಂಕಲನ ಮಾಡಿದ್ದೆ.

ಆದರೆ ಸಂಕಲನ ಮಾಡಿದ ದೃಶ್ಯವನ್ನು ಪ್ರೊಜೆಕ್ಟರ್ ನಲ್ಲಿ ಹಾಕಿ ನೋಡುವಾಗ ಯಾವ ಭಾವ ಕಾಣಬೇಕಿತ್ತೊ ಅದು ಕಾಣುತ್ತಿರಲಿಲ್ಲ. ತಾಯಿ ಕುದುರೆಯ ದುಃಖ, ಹೆದರಿಕೆ ಪರದೆಯ ಮೇಲೆ ಕಾಣುತ್ತಲೇ ಇರಲಿಲ್ಲ. ಆ ಚಿತ್ರದ ಸಂಕಲನವನ್ನು ಎಷ್ಟು ಬಾರಿ ಮಾಡಿದೆನೋ ಅಷ್ಟು ಬಾರಿಯೂ ಯಮಾ ಸಾನ್ ಪಕ್ಕದಲ್ಲಿ ಕೂತು ನೋಡಿದ್ದರು. ಆದರೆ ಒಂದು ಮಾತು ಕೂಡ ಹೇಳಲಿಲ್ಲ. “ಓಹ್! ಗುಡ್” ಎಂದು ಅವರು ಹೇಳದಿದ್ದರೆ ಅದು ಚೆನ್ನಾಗಿಲ್ಲ ಎಂದರ್ಥ ಅಂತ ನನಗೆ ಗೊತ್ತಿತ್ತು. ಎಷ್ಟೇ ಸಾರಿ ಮಾಡಿದರೂ ಅದು ಸರಿಹೋಗಲಿಲ್ಲ. ಕಡೆಗೆ ರೋಸಿಹೋಗಿ ಅವರನ್ನೇ ಸಲಹೆ ನೀಡುವಂತೆ ಕೇಳಿಕೊಂಡೆ. “ಕುರೊಸೊವ ಈ ದೃಶ್ಯ ನಾಟಕೀಯವಾದದ್ದಲ್ಲ. ಅದೊಂದು ಆಳವಾದ ವಿಷಾದ” ಎಂದರು. ಆಳವಾದ ವಿಷಾದ “ವಸ್ತುಗಳು ಕಳೆದುಹೋಗುವ ಅರಿವಿನಿಂದ ಹುಟ್ಟುವ ವಿಷಾದ” ಅಂದರೆ ಅರಳಿದ ಚೆರ್ರಿ ಹೂಗಳು ಬಾಡಿ ಉದುರಿಹೋಗುತ್ತವೆ ಎನ್ನುವ ವಿಷಾದ ಅವುಗಳನ್ನು ನೋಡನೋಡುತ್ತಲೇ ಮನಸ್ಸನ್ನು ಆವರಿಸುತ್ತದೆಯಲ್ಲ ಆ ಬಗೆಯದು. ಈ ಪ್ರಾಚೀನ ಕಾವ್ಯ ಪದಪುಂಜವನ್ನು ಕೇಳುತ್ತಿದ್ದಂತೆ ಕನಸಿನಿಂದ ಎದ್ದವನಂತೆ ಜ್ಞಾನೋದಯವಾಯಿತು. “ಅರ್ಥವಾಯಿತು!” ಎಂದು ಉದ್ಗರಿಸಿ ಆ ದೃಶ್ಯದ ಮರುಸಂಕಲನ ಮಾಡಲು ಹೊರಟೆ.

ನನ್ನ ಕಣ್ಣೆದುರೇ ಅವರು ನನ್ನ ಚಿತ್ರಕತೆಗಳನ್ನು ಓದುತ್ತಿದ್ದಂತೆ ಅಲ್ಲಲ್ಲೇ ತಿದ್ದುತ್ತಿದ್ದರು. ಅವರ ಸಾಮರ್ಥ್ಯವನ್ನು ನೋಡಿ ಅಚ್ಚರಿಯಾಗುತ್ತಿತ್ತು. ಅವರ ಸ್ಪೂರ್ತಿಯಿಂದಲೇ ನನ್ನನ್ನೇ ಹೊಸದಾಗಿ ರೂಪಿಸಿಕೊಂಡೆ. ಜೊತೆಗೆ ಸೃಷ್ಟಿಕ್ರಿಯೆಯ ರಹಸ್ಯಗಳನ್ನು ಅರಿಯಲಾರಂಭಿಸಿದೆ.

ಲಾಂಗ್ ಶಾಟ್ ಗಳನ್ನು ಒಂದರಹಿಂದೊಂದು ಜೋಡಿಸಿದೆ. ಚಂದಿರನ ಬೆಳಕಲ್ಲಿ ಓಡುತ್ತಿರುವ ಕುದುರೆ, ಗಾಳಿಯಲ್ಲಿ ಹಾರುತ್ತಿರುವ ಅದರ ಕೂದಲು, ಬಾಲ ಒಂದು ರೀತಿಯಲ್ಲಿ ಕುದುರೆಯ ಛಾಯಾರೇಖಾಚಿತ್ರದಂತಿತ್ತು. ಈ ಚಿತ್ರವೇ ಸಾಕಾಯಿತು. ಯಾವುದೇ ಧ್ವನಿಯನ್ನು ಹಾಕದೆಯೂ ತಾಯಿ ಕುದುರೆಯ ನೋವಿನ ದನಿ, ದುಃಖ ತುಂಬಿದ ಮರಗಳ ಗಾಳಿಯ ನಾದವನ್ನು ಕೇಳಬಹುದಿತ್ತು.

ನೀವು ಸಿನೆಮಾ ನಿರ್ದೇಶಕರಾಗಬೇಕಿದ್ದಲ್ಲಿ ಸೆಟ್ ನಲ್ಲಿ ನಟರಿಗೆ ನಿರ್ದೇಶನ ನೀಡುವುದನ್ನು ಕಲಿತಿರಬೇಕು ಎನ್ನುವುದು ತಿಳಿದ ವಿಷಯ. ಚಿತ್ರಕತೆಯನ್ನು ನಿರ್ದೇಶಕ ಬಿಗಿಗೊಳಿಸಿ ಚಿತ್ರದಲ್ಲಿ ಅದು ಗಟ್ಟಿಯಾಗಿ ನಿಲ್ಲುವಂತೆ ಮಾಡಬೇಕು. ಅದು ಸಾಧ್ಯವಾಗಿಸಲು ಕ್ಯಾಮರಾ, ಲೈಟ್ಸ್, ಟೇಪ್ ರೆಕಾರ್ಡರ್, ಕಲಾನಿರ್ದೇಶನ, ವಸ್ತ್ರವಿನ್ಯಾಸ, ಕಲಾಪರಿಕರಗಳು, ಪ್ರಸಾದನ ಇವುಗಳನ್ನು ಮಾಡುವ ಜನರಿಗೂ ಸೂಕ್ತ ನಿರ್ದೇಶನ ಕೊಡಬೇಕು. ಪರದೆಯ ಮೇಲೆ ತನಗೆ ಬೇಕಾದಂತಹ ನಟನೆಯನ್ನು ನೀಡುವಂತೆ ನಟರಿಗೂ ತರಬೇತಿ ನೀಡಬೇಕು.

ನಮಗೆ ನಟರಿಗೆ ನಿರ್ದೇಶನ ನೀಡುವ ಅನುಭವ ಸಿಕ್ಕಲೆಂದು ಯಮಾ ಸಾನ್ ಸಾಮಾನ್ಯವಾಗಿ ಸಹಾಯಕ ನಿರ್ದೇಶಕರಿಗೆ ಎರಡನೇ ಯೂನಿಟ್ ಶೂಟಿಂಗ್ ಮಾಡುವ ಜವಾಬ್ದಾರಿಯನ್ನು ನೀಡುತ್ತಿದ್ದರು. ಕೆಲವೊಮ್ಮೆ ಯಾವುದಾದರೊಂದು ದೃಶ್ಯವನ್ನು ಒಂದು ಹಂತದವರೆಗೆ ಚಿತ್ರೀಕರಿಸಿ ಉಳಿದದ್ದನ್ನು ನಮಗೆ ಚಿತ್ರೀಕರಿಸಲು ಹೇಳಿ ಮನೆಗೆ ಹೋಗುತ್ತಿದ್ದರು. ನಿಮ್ಮ ಸಹಾಯಕ ನಿರ್ದೇಶಕರ ಬಗ್ಗೆ ಅಪಾರ ನಂಬಿಕೆ ಇಲ್ಲದಿದ್ದಲ್ಲಿ ನೀವು ಆ ರೀತಿ ಮಾಡಲು ಸಾಧ್ಯವಿಲ್ಲ. ಸಹಾಯಕ ನಿರ್ದೇಶಕರಾದ ನಮ್ಮ ದೃಷ್ಟಿಯಲ್ಲಿ ಅದೊಂದು ಬಹುದೊಡ್ಡ ಜವಾಬ್ದಾರಿಯಾಗಿತ್ತು. ಆ ಸಂದರ್ಭಗಳನ್ನು ನಾವು ಸರಿಯಾಗಿ ನಿಭಾಯಿಸದಿದ್ದಲ್ಲಿ ಕೇವಲ ಯಮಾ ಸಾನರ ನಂಬಿಕೆಯನ್ನು ಮಾತ್ರವಲ್ಲ ಇಡೀ ತಂಡದ ನಂಬಿಕೆಯನ್ನೇ ಕಳೆದುಕೊಳ್ಳುತ್ತಿದ್ದೆವು. ಯಮಾ ಸಾನರಿಗೆ ನಮ್ಮ ಪರಿಸ್ಥಿತಿಯ ಅರಿವಿತ್ತು. ಮುಖದಲ್ಲೊಂದು ಹುಸಿನಗೆಯನ್ನು ಹೊತ್ತು ಎಲ್ಲೋ ಕುಡಿಯುತ್ತಾ ಕೂತಿರುತ್ತಿದ್ದರು ಎನ್ನುವುದು ಖಾತ್ರಿಯಾಗಿ ಗೊತ್ತಿತ್ತು. ಆದರೆ ಶಾಲೆಯಲ್ಲಿನ ಅನಿರೀಕ್ಷಿತ ಪರೀಕ್ಷೆಗಳಂತೆ ಈ ಅನುಭವಗಳು ನಮಗೆ ನಮ್ಮ ನಿರ್ದೇಶನದ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಅತ್ಯುತ್ತಮ ಅವಕಾಶಗಳನ್ನು ಒದಗಿಸಿತು.

Horses ನಿರ್ದೇಶನ ಮಾಡುವಾಗ ಯಮಾ ಸಾನ್ ಲೊಕೇಶನ್ ಸೆಟ್ ಗಳಿಗೆ ಬರುತ್ತಿದ್ದರು. ಆದರೆ ಅಲ್ಲಿ ಒಂದು ರಾತ್ರಿಯಿದ್ದು “ನೋಡಿಕೋ” ಎಂದು ಹೇಳಿ ಟೊಕಿಯೊಗೆ ಮರಳಿ ಹೋಗಿಬಿಡುತ್ತಿದ್ದರು. ನಿರ್ದೇಶಕನಾಗುವುದಕ್ಕೂ ಮೊದಲು ಈ ರೀತಿಯಲ್ಲಿ ತಂಡವನ್ನು ನಿಭಾಯಿಸಲು, ನಟರಿಗೆ ನಿರ್ದೇಶನ ನೀಡುವ ತರಬೇತಿಯನ್ನು ಪಡೆದೆ.

ಯಮಾ ಸಾನ್ ನಟರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಓಜು ಯಾಸುಜಿರೊ (Ozu Yasujiro ) ಮತ್ತು ಮಿಜೊಗುಚಿ ಕೆಂಜಿ (Mizoguchi Kenji) ಅವರ ರೀತಿಯಲ್ಲಿ ಕಟ್ಟುನಿಟ್ಟಿನ ನಿರ್ದೇಶಕರಾಗಿರಲಿಲ್ಲ, ಬದಲಿಗೆ ನಟರೊಂದಿಗೆ ಬಹಳ ಜಾಣತನದಿಂದ ವರ್ತಿಸುತ್ತಿದ್ದರು. “ನೀವು ನಿರ್ದೇಶಕರಾಗಿ ನಟರನ್ನು ನಿಮಗೇನು ಬೇಕೋ ಅದನ್ನೇ ಮಾಡುವಂತೆ ಬಲವಂತ ಮಾಡಿದರೆ ಅವರು ನೀವು ಕೇಳಿದ್ದರಲ್ಲಿ ಅರ್ಧದಷ್ಟನ್ನು ಮಾತ್ರ ಮಾಡುವರು. ಅವರು ಯಾವ ದಿಕ್ಕಿನಲ್ಲಿ ಹೋಗಬಯಸುತ್ತಾರೋ ಅದೇ ದಿಕ್ಕಿನಲ್ಲಿ ಹೋಗಲು ಬಿಟ್ಟು ಅವರೇನು ಮಾಡಲು ಬಯಸುತ್ತಾರೋ ಅದನ್ನೇ ಎರಡುಪಟ್ಟು ಹೆಚ್ಚಾಗಿ ಮಾಡುವಂತೆ ಮಾಡಿ” ಎಂದು ಹೇಳುತ್ತಿದ್ದರು. ಇದರ ಪರಿಣಾಮವಾಗಿ ಯಮಾ ಸಾನರ ಚಿತ್ರಗಳ ನಟರು ಒತ್ತಡವಿಲ್ಲದೆ ತಮ್ಮ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಇದಕ್ಕೆ ಉತ್ತಮ ಉದಾಹರಣೆ ಹಾಸ್ಯನಟ ಎನೊಕೆನ್ (Enoken). ಯಮಾ ಸಾನರ ಚಿತ್ರಗಳಲ್ಲಿ ಆತನ ಪ್ರತಿಭೆಯ ವಿಶೇಷ ಸಾಮರ್ಥ್ಯ ತನ್ನೆಲ್ಲ ಬಣ್ಣಗಳೊಂದಿಗೆ ಅನಾವರಣಗೊಂಡಿದೆ.

ಯಮಾ ಸಾನ್ ನಟರೊಂದಿಗೆ ಬಹಳ ಸೌಜನ್ಯದಿಂದ ವರ್ತಿಸುತ್ತಿದ್ದರು. ಗುಂಪಿನಲ್ಲಿ ನಡೆದುಹೋಗುವ ಪಾತ್ರ ಮಾಡುವವರು ಅಥವ ನಡೆದು ಹೋಗುವವರ ಮಧ್ಯೆ ಪಾತ್ರ ಮಾಡುವ ಎಕ್ಸ್ಟ್ರಾ ನಟರ ಹೆಸರುಗಳು ನನಗೆ ನೆನಪಿರುತ್ತಿರಲಿಲ್ಲ. ಅವರು ಹಾಕಿಕೊಂಡಿದ್ದ ಬಟ್ಟೆಗಳ ಬಣ್ಣದ ಆಧಾರದ ಮೇಲೆ ಅವರನ್ನು ಕರೆಯುತ್ತಿದ್ದೆ – “ಅಲ್ಲಿ ಕೆಂಪುಬಣ್ಣದ ಬಟ್ಟೆ ಹಾಕಿಕೊಂಡಿರುವವರು …” ಅಥವ “ಎಕ್ಸ್ಕ್ಯೂಸ್ ಮಿಸ್ಟರ್ ಆ ನೀಲಿ ಬಣ್ಣದ ಬಟ್ಟೆ…”. “ಕುರೊಸೊವ ಆ ರೀತಿ ಮಾತಾಡಿಸಬಾರದು. ಎಲ್ಲರಿಗೂ ಒಂದು ಹೆಸರಿರುತ್ತದೆ” ಅಂತ ಯಮಾ ಸಾನ್ ನನಗೆ ಬೈಯುತ್ತಿದ್ದರು. ನನಗದು ಗೊತ್ತಿತ್ತು, ಆದರೆ ಅವರ ಹೆಸರುಗಳನ್ನು ತಿಳಿದುಕೊಳ್ಳುವಷ್ಟು ಬಿಡುವು ಇರುತ್ತಿರಲಿಲ್ಲ. ಆದರೆ ಯಮಾ ಸಾನ್ ಯಾವುದೇ ಎಕ್ಸ್ಟ್ರಾ ನಟನಿಗೆ ಸೂಚನೆ ನೀಡಬೇಕಿದ್ದಲ್ಲಿ ಆತನ ಹೆಸರು ತಿಳಿದುಕೊಂಡು ಬರಲು ನನಗೆ ಹೇಳುತ್ತಿದ್ದರು. ಆತನ ಹೆಸರನ್ನು ತಿಳಿದುಕೊಂಡು ಬಂದು ಅವರಿಗೆ ಹೇಳಿದ ನಂತರ “ಮಿಸ್ಟರ್… …… ದಯವಿಟ್ಟು ಎರಡು ಅಥವ ಮೂರು ಹೆಜ್ಜೆ ನಿಮ್ಮ ಎಡಕ್ಕೆ ಸರಿಯುವಿರಾ?” ಎನ್ನುತ್ತಿದ್ದರು. ಆ ಅನಾಮಿಕ ಎಕ್ಸ್ಟ್ರಾ ನಟ ಸಹಜವಾಗಿಯೇ ಈ ಬಗೆಯ ವೈಯುಕ್ತಿಕ ಸೂಚನೆ ಕೇಳಿ ರೋಮಾಂಚಿತನಾಗಿಬಿಡುತ್ತಿದ್ದ. ಯಮಾ ಸಾನರ ಈ ತಂತ್ರ ಫಲಿಸುತ್ತಿತ್ತು. ಜನರಿಂದ ಅತ್ಯುತ್ತಮವಾದದ್ದನ್ನು ಪಡೆಯುವುದು ಹೇಗೆ ಎನ್ನುವುದು ಅವರಿಗೆ ಚೆನ್ನಾಗಿ ತಿಳಿದಿತ್ತು.

ಇದರ ಹೊರತಾಗಿ ಯಮಾ ಸಾನರಿಂದ ನಟರ ಕುರಿತು ಮೂರು ಮುಖ್ಯ ವಿಷಯಗಳನ್ನು ಕಲಿತೆ. ಮೊದಲನೆಯದು ಜನರಿಗೆ ತಮ್ಮ ಬಗ್ಗೆ ತಿಳಿದಿರುವುದಿಲ್ಲ. ಅವರಿಗೆ ತಮ್ಮದೇ ಮಾತು ಮತ್ತು ಚಲನವಲನದ ಅಭ್ಯಾಸಗಳನ್ನು ವಸ್ತುನಿಷ್ಠವಾಗಿ ನೋಡಲು ಸಾಧ್ಯವಿಲ್ಲ. ಎರಡನೆಯದು ಯಾವುದಾದರೂ ಚಲನೆಯನ್ನು ಪ್ರಜ್ಞಾಪೂರ್ವಕವಾಗಿ ಮಾಡಿದಲ್ಲಿ ಅದು ಪ್ರಜ್ಞಾಪೂರ್ವಕವಾಗಿ ಮಾತ್ರ ಇರುತ್ತದೆಯೇ ಹೊರತು ಪರದೆಯ ಮೇಲೆ ಸಹಜವಾಗಿ ಕಾಣುವುದಿಲ್ಲ. ಮೂರನೆಯದು ನೀವು ನಟರಿಗೆ ಅವರೇನು ಮಾಡಬೇಕೆಂದು ಹೇಳುವಾಗ ಹಾಗೇಕೆ ಮಾಡಬೇಕೆಂಬುದನ್ನು ಅರ್ಥಮಾಡಿಸಬೇಕು. ಅಂದರೆ ಆ ಪಾತ್ರದ ಆಂತರಿಕ ಉದ್ದೇಶಗಳು ಮತ್ತು ಆ ಕ್ರಿಯೆಯ ಪ್ರಸ್ತುತತೆಯನ್ನು ಅರ್ಥಮಾಡಿಸಬೇಕು.

(ಎನೊಕೆನ್ (Enoken)

ಎಷ್ಟೇ ಬರೆದಿಟ್ಟುಕೊಳ್ಳಬೇಕೆಂದುಕೊಂಡರೂ ಯಮಾ ಸಾನರಿಂದ ಕಲಿತಿದ್ದನ್ನು ಸಂಪೂರ್ಣವಾಗಿ ಬರೆದಿಡಲು ಸಾಧ್ಯವಾಗಿಲ್ಲ. ಕಡೆಯದಾಗಿ ಚಲನಚಿತ್ರದ ಧ್ವನಿವಿನ್ಯಾಸ ಕುರಿತು ಅವರು ಕಲಿಸಿದ್ದನ್ನು ಹೇಳುವುದರೊಂದಿಗೆ ಇದನ್ನು ಮುಗಿಸುತ್ತೇನೆ. ಅವರು ಸ್ವತಃ ಸಹಜ/ಸ್ವಾಭಾವಿಕ ಧ್ವನಿಗಳು ಮತ್ತು ಸಂಗೀತವನ್ನು ಸೂಕ್ಷ್ಮವಾಗಿ ಯುಕ್ತಾಯುಕ್ತ ವಿವೇಚನೆಯೊಂದಿಗೆ ಬಳಸುತ್ತಿದ್ದರು. ಆದ್ದರಿಂದಲೇ ಚಲನಚಿತ್ರದ ಕಡೆಯ ಹಂತವಾದ ಡಬ್ಬಿಂಗ್ – ರಿರೇಕಾರ್ಡಿಂಗ್ ಕುರಿತು ಅವರಲ್ಲಿ ಹೆದರಿಕೆ ಇರುತ್ತಿತ್ತು. ದೃಶ್ಯ ಮತ್ತು ಧ್ವನಿಯ ಸೂಕ್ತ ಸಂಯೋಜನೆಯು ಸಿನೆಮಾದ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುವುದು ನನ್ನ ಥಿಯರಿ. ಯಮಾ ಸಾನರೊಂದಿಗಿನ ಡಬ್ಬಿಂಗ್ ಕೆಲಸದ ಅನುಭವದಲ್ಲಿ ಈ ಥಿಯರಿ ಹುಟ್ಟಿಕೊಂಡಿತು.

ಸಹಾಯಕ ನಿರ್ದೇಶಕರಿಗೆ ಡಬ್ಬಿಂಗ್ ಕೆಲಸ ನಿಜಕ್ಕೂ ಪ್ರಯಾಸದ್ದಾಗಿತ್ತು. ಶೂಟಿಂಗ್ ಮುಗಿದಿರುತ್ತಿತ್ತು. ನಮಗೆಲ್ಲ ಸುಸ್ತಾಗಿರುತ್ತಿತ್ತು. ಆದರೆ ಚಿತ್ರದ ಬಿಡುಗಡೆಯ ದಿನಾಂಕ ನೆತ್ತಿಯ ಮೇಲೆ ಕತ್ತಿಯಂತೆ ತೂಗುತ್ತಿತ್ತು. ಸಾಮಾನ್ಯವಾಗಿ ನಮಗೆ ಬಿಡುವೇ ಸಿಗುತ್ತಿರಲಿಲ್ಲವಾದ್ದರಿಂದ ನಿದ್ರೆಯಿಲ್ಲದ ರಾತ್ರಿಗಳು ಇನ್ನಷ್ಟು ಮುಂದುವರೆಯುತ್ತಿದ್ದವು. ಧ್ವನಿಗೆ ಸಂಬಂಧಿಸಿದ ಕೆಲಸ ಹೆಚ್ಚು ಸೂಕ್ಷ್ಮತೆ, ಕುಶಲತೆಯನ್ನು ಬೇಡುವಂತಹದ್ದು. ಆ ಕೆಲಸವನ್ನು ಮುಗಿಸುವ ಹೊತ್ತಿಗೆ ಸೋತುಸುಣ್ಣವಾಗಿಬಿಡುತ್ತಿದ್ದೆವು.

ಮತ್ತೊಂದೆಡೆ ಡಬ್ಬಿಂಗ್ ಖುಷಿ ನೀಡುವ ಕೆಲಸವಾಗಿತ್ತು. ಸಾಮಾನ್ಯವಾಗಿ ಸ್ವಾಭಾವಿಕ ಧ್ವನಿಗಳನ್ನು ಶೂಟಿಂಗ್ ಸಮಯದಲ್ಲೇ ರೆಕಾರ್ಡ್ ಮಾಡಿರುತ್ತಿದ್ದೆವು. ಕೆಲವೊಮ್ಮೆ ಆ ಧ್ವನಿಗಳ ಜೊತೆಗೆ ಬೇರೆ ರೀತಿಯ ಧ್ವನಿಗಳನ್ನು ಸೇರಿಸಿದಾಗ ಅದೊಂದು ಅನಿರೀಕ್ಷಿತ ಅನುಭವವನ್ನು ತಂದುಕೊಡುತ್ತಿತ್ತು. ಆದ್ದರಿಂದ ಡಬ್ಬಿಂಗ್ ಪ್ರಕ್ರಿಯೆಯಲ್ಲೊಂದು ಆಕರ್ಷಣೆ ಹಾಗೂ ಸಂತೋಷವಿತ್ತು. ಬಳಸಿರುವ ಧ್ವನಿಯಿಂದಾಗಿಯೇ ದೃಶ್ಯವೊಂದು ವೀಕ್ಷಕರನ್ನು ಹಲವು ರೀತಿಯಲ್ಲಿ ತಟ್ಟುತ್ತಿತ್ತು. ನಿರ್ದೇಶಕರೇ ಇವುಗಳನ್ನು ನಿರ್ಧರಿಸುತ್ತಿದ್ದರು. ಅಪರೂಪಕ್ಕೆ ಸಹಾಯಕ ನಿರ್ದೇಶಕರಿಗೆ ಈ ಅವಕಾಶ ಸಿಗುತ್ತಿತ್ತು. ಹಲವು ಬಾರಿ ಫಲಿತಾಂಶವನ್ನು ನೋಡಿ ನಮಗೆ ಆಶ್ಚರ್ಯವಾಗುತ್ತಿತ್ತು. ನಮಗೆ ಅಚ್ಚರಿಯುಂಟುಮಾಡುವುದೆಂದರೆ ಯಮಾ ಸಾನರಿಗೆ ಬಹಳ ಖುಷಿ. ಹಾಗಾಗಿ ಅವರು ತಾನೇನು ಮಾಡುತ್ತಿದ್ದೇನೆ ಎಂದು ನಮಗೆ ಹೇಳುತ್ತಿರಲಿಲ್ಲ. ನಂತರ ಸಂಗೀತ ಮತ್ತು ಧ್ವನಿಗಳ ಅದ್ಭುತ ಸಂಯೋಜನೆಯೊಂದಿಗೆ ನಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡಿಬಿಡುತ್ತಿದ್ದರು. ಧ್ವನಿಯು ದೃಶ್ಯದ ಪರಿಣಾಮವನ್ನು ಸಂಪೂರ್ಣವಾಗಿ ಬೇರೆ ಮಾಡಿಬಿಡುತ್ತಿತ್ತು. ಇಂತಹ ಅದ್ಭುತ ರೋಮಾಂಚನದ ಕ್ಷಣಗಳಲ್ಲಿ ನಮ್ಮ ನೋವು ಆಯಾಸಗಳೆಲ್ಲ ಮರೆತುಹೋಗುತ್ತಿದ್ದವು.

ಆಗಷ್ಟೇ ಜಪಾನಿನಲ್ಲಿ ಟಾಕಿ ಚಿತ್ರಗಳ ಯುಗ ಆರಂಭವಾಗಿತ್ತು. ಹೆಚ್ಚಿನ ನಿರ್ದೇಶಕರು ದೃಶ್ಯ ಮತ್ತು ಧ್ವನಿ ಪರಸ್ಪರ ಪೂರಕ ಸಂಬಂಧ ಹೊಂದಿರುವ ಕುರಿತು ಆಳವಾಗಿ ಚಿಂತಿಸಿದ್ದರು ಎನ್ನುವ ನಂಬಿಕೆ ನನಗಿಲ್ಲ. ಯಮಾ ಸಾನ್ ತಮಗೆ ತಿಳಿದಿದ್ದನ್ನು ನನಗೆ ಕಲಿಸಬೇಕೆಂದಿದ್ದರು ಅನ್ನಿಸುತ್ತದೆ. ಏಕೆಂದರೆ ಅವರು Tojuro’s Love ಚಿತ್ರಕ್ಕೆ ನನ್ನಿಂದಲೇ ಡಬ್ಬಿಂಗ್ ಮಾಡಿಸಿದರು.

ಖಾಸಗಿ ಪ್ರದರ್ಶನ ಕೋಣೆಯಲ್ಲಿ ನಾನು ಮಾಡಿದ್ದ ಕೆಲಸವನ್ನು ನೋಡಿದ ಮೇಲೆ ಅದನ್ನು ಮತ್ತೆ ಮಾಡುವಂತೆ ಹೇಳಿದರು. ಅದನ್ನು ಕೇಳಿ ದಿಗ್ಭ್ರಾಂತನಾದೆ. ಎಲ್ಲರೆದುರು ಅವಮಾನವಾದಂತಾಯಿತು. ಮತ್ತೆ ಅದನ್ನು ಹೊಸದಾಗಿ ಮಾಡಬೇಕೆಂದರೆ ಸಿಕ್ಕಾಪಟ್ಟೆ ಸಮಯ ಹಾಗೂ ಶ್ರಮ ಹಾಕಬೇಕಿತ್ತು. ಡಬ್ಬಿಂಗ್ ನಲ್ಲಿ ನನಗೆ ಸಹಾಯ ಮಾಡಿದವರ ಎದುರು ತಲೆತಗ್ಗಿಸುವಂತಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲಿ ತಪ್ಪಾಗಿದೆ ಏನನ್ನು ಸರಿಮಾಡಬೇಕು ಎಂದೇ ನನಗರ್ಥವಾಗಲಿಲ್ಲ. ಪ್ರತಿಯೊಂದು ರೀಲನ್ನು ಮತ್ತೆ ಮತ್ತೆ ಎಲ್ಲಿ ತಪ್ಪಾಗಿರಬಹುದು ಎಂದು ಹುಡುಕಿದೆ. ಕಡೆಗೂ ತಪ್ಪಾಗಿದ್ದು ಎಲ್ಲಿ ಎನ್ನುವುದು ಗೊತ್ತಾಯಿತು. ಅದನ್ನೆಲ್ಲ ಪುನಃ ಡಬ್ಬಿಂಗ್ ಮಾಡಿ ಯಮಾ ಸಾನರಿಗೆ ತೋರಿಸಿದೆ. ಸ್ಕ್ರೀನಿಂಗ್ ಮುಗಿದ ಮೇಲೆ ಅವರು “ಓಕೆ” ಎಂದರು. ಆ ಕ್ಷಣ ಅವರ ಮೇಲೆ ಅಸಾಧ್ಯ ಸಿಟ್ಟು ಬಂತು. “ನಾನೇ ಎಲ್ಲ ಮಾಡಬೇಕು. ಆಮೇಲೆ ಅವರ ಮನಸ್ಸಿಗೆ ಬಂದಿದ್ದನ್ನ ಹೇಳುತ್ತಾರೆ” ಅಂತಂದುಕೊಂಡೆ. ಆ ಭಾವ ಕ್ಷಣಮಾತ್ರದಲ್ಲಿ ಮಾಸಿಹೋಯಿತು.

Tojuro’s Love ಚಿತ್ರ ಪೂರ್ತಿಯಾದ ಸಂಭ್ರಮದ ಪಾರ್ಟಿಯಲ್ಲಿ ಶ್ರೀಮತಿ ಯಮಾಮೊಟೊ ನನ್ನ ಬಳಿ ಬಂದು “ನನ್ನ ಗಂಡನಿಗೆ ಬಹಳ ಖುಷಿಯಾಗಿದೆ. ಕುರೊಸೊವ ಚಿತ್ರಕತೆ ಬರೆಯಬಲ್ಲ, ನಿರ್ದೇಶನ ಮಾಡಬಲ್ಲ, ಸಂಕಲನ ಮಾಡಬಲ್ಲ ಮತ್ತೀಗ ಡಬ್ಬಿಂಗ್ ಸಹ ಮಾಡಬಲ್ಲ. ಅವನು ನಿರ್ದೇಶಕನಾಗಬಲ್ಲ” ಅಂತ ಹೇಳಿದರು. ನನ್ನ ಕಣ್ತುಂಬಿ ಬಂತು. ಯಮಾ ಸಾನ್ ಅದ್ಭುತ ಮೇಷ್ಟ್ರು. ಯಮಾ ಸಾನ್ ನಿಮಗೆ ಮಾತು ಕೊಡುತ್ತೇನೆ ನಾನು ಇನ್ನಷ್ಟು ಹೆಚ್ಚು ಪ್ರಯತ್ನಪಡುತ್ತೇನೆ. ಇದು ಯಮಾ ಸಾನರ ನೆನಪಿನಲ್ಲಿ ನಾನಾಡಿದ ಮಾತುಗಳು.