ನಾನು ಹೊಸಬ. ರಂಗರಾಜನ್ ಪಳಗಿದವರು. ಹೇಗೋ ರೇಟಿಂಗ್ ಹೆಚ್ಚಿಸಬೇಕೆಂದು ನನಗಿದ್ದ ಉತ್ಸಾಹಕ್ಕೆ ವಾಸ್ತವದ ಆಯಾಮವನ್ನು ನೀಡಿ ಭೂಮಿಗೆ ಇಳಿಸಿದರು. ‘ವೇಣೂ, ಪರಿಸ್ಥಿತಿಯನ್ನು ಅರ್ಥಮಾಡಿಕೊ. ನಮಗೆ ಅನುಕೂಲವಾದದ್ದನ್ನು ಸಾಧಿಸಬೇಕೆನ್ನುವುದು ಸರಿಯೇ. ಆದರೆ ಹೇಳಿಕೆಯಲ್ಲಿ ವಿಶ್ವಸಾರ್ಹತೆ ಕುಂಠಿತವಾಗುವಂತಹ ಅತ್ಯುತ್ಸಾಹ ತೋರಿಸಕೂಡದು. ಈ ಸಂಸ್ಥೆಯ ಜೊತೆ ನಾವು ಮುಂದೆಯೂ ತುಂಬಾ ಕೆಲಸ ಮಾಡಬೇಕು. ಯಾವುದೇ ಪರಿಸ್ಥಿತಿಯಲ್ಲಿ ನಾವು ಅವರ ಗೌರವ ವಿಶ್ವಾಸಗಳನ್ನು ಕಳೆದುಕೊಳ್ಳಬಾರದು’ ಅಂದರು.
ಎಂ.ಎಸ್. ಶ್ರೀರಾಮ್‌ ಅನುವಾದಿಸಿದ ವೈ.ವಿ. ರೆಡ್ಡಿಯವರ ಆತ್ಮಕಥನದ ಆಯ್ದ ಭಾಗದ ನಾಲ್ಕನೆಯ ಕಂತು

 

ಎನ್.ಟಿ.ಆರ್. ಬಹುವಾಗಿ ವಿರೋಧಿಸುತ್ತಿದ್ದ ಇಂದಿರಾ ಗಾಂಧಿಯವರು ಅಕ್ಟೋಬರ್ 31 1984ರಂದು ತಮ್ಮ ಅಂಗರಕ್ಷಕರಿಂದಲೇ ಹತ್ಯೆಗೀಡಾದರು. ಅವರ ಮಗ ರಾಜೀವ್ ಪ್ರಧಾನಿಯಾದರು. 1989ರಲ್ಲಿ ವಿಧಾನಸಭಾ ಚುನಾವಣೆ ನಡೆಯಿತು. ಅನುಭವರಹಿತರಾದ ರಾಜೀವ್ ಗಾಂಧಿಯವನ್ನು ಸೋಲಿಸುವ ನಂಬಿಕೆ ಎನ್.ಟಿ.ಆರ್.ಗಿತ್ತು. ಆದರೆ ಡಿಸೆಂಬರ್ 1989ರ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ತೆಲುಗುದೇಶಂ ಸೋತಿತ್ತು. ಜನಪ್ರಿಯ ನಾಯಕ ಎನ್.ಟಿ.ಆರ್, ಅವರ ನೀತಿಗಳನ್ನು, ತಿಕ್ಕಲುತನವನ್ನು, ಆಡಳಿತ ಶೈಲಿಯನ್ನು ಜನ ತಿರಸ್ಕರಿಸಿದ್ದರು. ಈ ರೀತಿಯ ವ್ಯಕ್ತಿತ್ವವನ್ನು ಜನರು ಅತಿಯಾಗಿ ಇಷ್ಟಪಡುತ್ತಾರೆಂಬ ನಂಬಿಕೆಯ ಮೇಲೆ ಎನ್.ಟಿ.ಆರ್. ತಮ್ಮ ರಾಜಕಾರಣವನ್ನು ಕಟ್ಟಿಕೊಂಡಿದ್ದರು. ಜನರೇ ತಿರಸ್ಕರಿಸಿದ್ದು ಅವರಮೇಲೆ ಬಿದ್ದ ದೊಡ್ಡ ಪೆಟ್ಟಾಗಿತ್ತು.

1989ರಲ್ಲಿ ಕೇಂದ್ರ ಆರ್ಥಿಕ ಕಾರ್ಯದರ್ಶಿ ಗೋಪಿ ಅರೋರ ತಮ್ಮ ಇಲಾಖೆಯ ಜಂಟಿ ಕಾರ್ಯದರ್ಶಿ ಹುದ್ದೆ ವಹಿಸಿಕೊಳ್ಳಲು ಕರೆದರು. ಆಗ ಭಾರತ ಸರ್ಕಾರವು ವಿದೇಶಿ ಅನುದಾನಕ್ಕಾಗಿ ಪ್ರಯತ್ನಿಸುತ್ತಿತ್ತು. ಐಎಂಎಫ್ ಮತ್ತು ವಿಶ್ವಬ್ಯಾಂಕಿನ ವ್ಯವಹಾರದಲ್ಲಿ ನನಗೆ ಇದ್ದ ಅನುಭವ ಕೆಲಸಕ್ಕೆ ಬರುತ್ತೆಂದು ಅವರು ಭಾವಿಸಿದ್ದರು. ಹೋಗಬೇಕೋ ಬೇಡವೋ ಎಂದು ಯೋಚಿಸಿದೆ. ಚೆನ್ನಾರೆಡ್ಡಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಹೊಸದಾಗಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿಯನ್ನು ಅಭಿನಂದಿಸುವುದು ಸಂಪ್ರದಾಯ. ಹಾಗೇ ಮಾಡಬೇಕೆಂದುಕೊಂಡೆ. ಅವರ ಕಾರ್ಯಾಲಯದಿಂದ ಧನಾತ್ಮಕ ಸಂಕೇತಗಳೇನೂ ಸಿಗಲಿಲ್ಲ. ಹೊಸ ಸರಕಾರಕ್ಕೆ ನನ್ನ ಸೇವೆಯ ಅಗತ್ಯವಿಲ್ಲ ಅನ್ನಿಸಿತು. ಹೀಗಾಗಿ ಕೇಂದ್ರೀಯ ಸೇವೆಯತ್ತ ವಾಲಿದೆ.

ದೆಹಲಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ನೇಮಿಸಿದ ಆದೇಶ ಬಂತು. ಸೇರುವ ವೇಳೆಗೆ ಆರ್ಥಿಕ ಇಲಾಖೆಯಿಂದ ಗೋಪಿ ಸಾಬ್ ಹೊರಟು, ಬಿಮಲ್ ಜಲಾನ್ ಬಂದಿದ್ದರು. ಎಲ್ಲ ಔಪಚಾರಿಕತೆಗಳು ಮುಗಿದು ನನ್ನನ್ನು ನೋಟು-ನಾಣ್ಯ ವಿಭಾಗದ ಜಂಟಿ ಕಾರ್ಯದರ್ಶಿಯಾಗಿ ನೇಮಿಸಿದರು. ಫಂಡ್-ಬ್ಯಾಂಕಿನ ಕೆಲಸ ನೋಡುತ್ತಿದ್ದವರ ಸೇವಾವಧಿಯನ್ನು ಮೂರು ತಿಂಗಳಿಗೆ ವಿಸ್ತರಿಸಿದ್ದರು. ಫಂಡ್-ಬ್ಯಾಂಕ್ ವಿಭಾಗದೆದುರು ನೋಟು ನಾಣ್ಯಗಳದ್ದು ಪುಟ್ಟ ಕೆಲಸ. ವಿಶ್ವಬ್ಯಾಂಕಿನಲ್ಲಿ ಕೆಲಸಮಾಡುವಾಗ ಕೆಲವರ ಗೆಳೆತನ ಬೆಳೆದಿತ್ತು. ಅವರಲ್ಲಿ ಆಗ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಬಿಮಲ್ ಜಲಾನ್ ಕೂಡಾ ಒಬ್ಬರು. ನಾವು ಹಲವೆಡೆಗೆ ಜೊತೆಗೂಡಿ ಪ್ರಯಾಣ ಮಾಡಿದ್ದೆವು. ಒಳ್ಳೆಯ ಸ್ನೇಹಿತರಾಗಿದ್ದೆವು. ಈಗ ಅವರೇ ಆರ್ಥಿಕ ವಿಭಾಗದ ಕಾರ್ಯದರ್ಶಿಯಾಗಿ ನನ್ನ ಮೇಲಧಿಕಾರಿಯಾಗಿದ್ದರು.

ರೂಪಾಯಿ-ನಾಣ್ಯಗಳ ನಡುವೆ

‘ಕರನ್ಸಿ ಆಂಡ್ ಕಾಯಿನ್ಸ್’ ಕೆಲಸ ಕಷ್ಟದ್ದಲ್ಲ. ಸಂಕೀರ್ಣವಾದುದೂ ಅಲ್ಲ. ಆ ವಿಭಾಗದ ಬಗ್ಗೆ ಆಸಕ್ತಿಯಿರುವವರು ಕಡಿಮೆ. ಆರ್.ಬಿ.ಐ. ಜೊತೆ ಚರ್ಚಿಸಿ, ಯಾವ ಮೌಲ್ಯದ ಎಷ್ಟು ನೋಟುಗಳನ್ನು ಮುದ್ರಿಸಬೇಕು, ಎಷ್ಟು ನಾಣ್ಯಗಳನ್ನು ಟಂಕಿಸಬೇಕು ತಿಳಿದುಕೊಳ್ಳುವುದು. ಅವುಗಳ ಗುಣಮಟ್ಟ, ಭದ್ರತೆಯಲ್ಲಿ ರಾಜಿಯಾಗದಂತೆ ನೋಡಿಕೊಳ್ಳುವುದು ಮುಖ್ಯ ಕೆಲಸ. ನೋಟುಗಳನ್ನು ಆರ್.ಬಿ.ಐ. ಬಿಡುಗಡೆ ಮಾಡುತ್ತದೆ. ನಾಣ್ಯಗಳನ್ನು ಸರ್ಕಾರ ಟಂಕಿಸುತ್ತದೆ. ಎರಡನ್ನೂ ಆರ್.ಬಿ.ಐ. ಬ್ಯಾಂಕಿಂಗ್ ಜಾಲದ ಮೂಲಕ ವಿತರಿಸುತ್ತದೆ. ಹೈದರಾಬಾದ್, ಕಲ್ಕತ್ತಾ, ಮುಂಬಯಿ, ನೋಯ್ಡಾದ ಟಂಕಸಾಲೆಗಳಲ್ಲಿ ನಾಣ್ಯಗಳನ್ನು ಟಂಕಿಸುತ್ತೇವೆ. ಇದು ಸರ್ಕಾರದ ಜವಾಬ್ದಾರಿ. ನೋಟುಗಳನ್ನು ನಾಶಿಕ್‌ನ ಸರಕಾರಿ ಮುದ್ರಣಾಲಯದಲ್ಲಿ ಮುದ್ರಿಸುತ್ತಾರೆ. ಅದಕ್ಕೆ ಬೇಕಾದ ಕಾಗದ ಹೋಷಂಗಾಬಾದಿನಲ್ಲಿ ತಯಾರಾಗುತ್ತದೆ. ಆಗಿನ ಸಮಯಕ್ಕೆ ನಾಶಿಕ್ ಮುದ್ರಣಾಲಯವೇ ಎಲ್ಲ ರಾಜ್ಯಗಳಿಗೂ ಕೇಂದ್ರಕ್ಕೂ ಸೆಕ್ಯೂರಿಟಿ ಕಾಗದವನ್ನೂ ಪೂರೈಕೆ ಮಾಡುತ್ತಿತ್ತು. ಈ ಎಲ್ಲಕ್ಕೂ ಆಡಳಿತ ಮಂಡಳಿಯಾಗಿರುವುದೇ ನಮ್ಮ ವಿಭಾಗದ ಕೆಲಸ. ಕಚ್ಚಾಮಾಲನ್ನು ಖರೀದಿಸುವುದು, ಉದ್ಯೋಗಿಗಳನ್ನು ನೇಮಿಸುವುದು ಎಲ್ಲವೂ ಸರ್ಕಾರದ ನಿಯಮದಂತೆ ನಡೆಯುತ್ತದೆ. ಕರನ್ಸಿ ಅಂಡ್ ಕಾಯಿನ್ಸ್ ವಿಭಾಗದಲ್ಲಿ ಮೂರೇ ತಿಂಗಳು ಕೆಲಸಮಾಡಿದ್ದರೂ ನನಗೆ ಅದರಲ್ಲಿರುವ ಸಮಸ್ಯೆಗಳೂ ಅರ್ಥವಾದುವು.

ಮುದ್ರಣಾಲಯಗಳಲ್ಲಿ ಕಾರ್ಮಿಕ ಸಂಘಗಳ ಪಟ್ಟು ಜೋರಾಗಿತ್ತು. ಮುದ್ರಿಸುವ ಅವಶ್ಯಕತೆಯಿಲ್ಲದಿದ್ದರೂ ಬೋನಸ್ಸಿಗೆಂದು ಕಾರ್ಮಿಕರು ಮುದ್ರಣವನ್ನು ನಿಲ್ಲಿಸುತ್ತಿರಲಿಲ್ಲ! ಇದು ಈಗ ಹದ್ದುಬಸ್ತಿನಲ್ಲಿದೆ. ಮುದ್ರಣಕ್ಕೆ ಬೇಕಾದ ಕಾಗದ, ಶಾಯಿ, ನಾಣ್ಯಕ್ಕೆ ಬೇಕಾದ ಲೋಹದ ಆಮದು ಮತ್ತು ಸರಬರಾಜುಗಳಲ್ಲಿ ಕೆಲವರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ಅಂದಾಜು ಸರಿಯಾಗೇ ಇದ್ದರೂ, ಎಷ್ಟೋಬಾರಿ ನಾಣ್ಯಗಳು ಅವಶ್ಯಕತೆಗಿಂತ ಹೆಚ್ಚೇ ಇರುತ್ತಿತ್ತು. ಹಲವು ಬಾರಿ ಬರವೂ ಉಂಟಾಗುತ್ತಿತ್ತು. ಆ ಸಮಯಕ್ಕೆ ಆರ್.ಬಿ.ಐ. ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿ ಹೊಸತಾಗಿ ಎರಡು ಮುದ್ರಣಾಲಯಗಳನ್ನು ನಿರ್ಮಿಸಲು ಯೋಚಿಸಿತು. ಅದರ ಚರ್ಚೆಗಳಲ್ಲಿ ನಾನಿದ್ದೆ. ನೋಟು ಮತ್ತು ನಾಣ್ಯಗಳನ್ನು ತಯಾರಿಸುವ ಯಂತ್ರಗಳನ್ನು ಜರ್ಮನಿ ಹಾಗೂ ಜಪಾನುಗಳು ಸರಬರಾಜು ಮಾಡುತ್ತವೆ. ಆ ಸರಬರಾಜುದಾರರ ನಡುವೆ ವಿಪರೀತ ಪೈಪೋಟಿಯಿರುತ್ತದೆ. ಈ ಕೆಲಸಕ್ಕಾಗಿ ಆಗಾಗ ನಾನು ಆರ್.ಬಿ.ಐ.ಗೆ ಹೋಗುತ್ತಿದ್ದೆ.

ಹೊಸ ವಿಭಾಗಕ್ಕೆ

ಇಲ್ಲಿ ಸೇರಿದಾಗಲೇ ಜಲಾನ್ ‘ಇದು ತಾತ್ಕಾಲಿಕ’ ಎನ್ನುವ ಸೂಚನೆ ಕೊಟ್ಟಿದ್ದರು. ಕೇಂದ್ರ ಆರ್ಥಿಕ ವಿಭಾಗದಲ್ಲಿ ನಾನಿರಬೇಕೆಂದು ಆತ ಅಂದುಕೊಂಡಿದ್ದರು. ಆದರೆ ಆರ್ಥಿಕ ವಿಭಾಗದಲ್ಲಿ ಕೆಲಸ ಗಿಟ್ಟಿಸುವುದು ಸುಲಭವಲ್ಲ. ಅಲ್ಲಿ ರಾಜಕೀಯ ಒತ್ತಡವೂ ಸೇರಿದಂತೆ ಇತರ ಸಮೀಕರಣಗಳಿರುತ್ತವೆ. ಆದರೆ ನೋಟು-ನಾಣ್ಯದ ಇಲಾಖೆಯಲ್ಲಿ ಇದೇನೂ ಇಲ್ಲವಾದ್ದರಿಂದ ಜಲಾನ್ ಮೊದಲಿಗೆ ಇಲ್ಲಿಗೆ ಕಳುಹಿಸಿದ್ದರು.

(ಪ್ರಣಬ್‌ ಮುಖರ್ಜಿ)

ಕೆಲ ವಾರಗಳ ನಂತರ ಆರ್ಥಿಕ ವಿಭಾಗದಲ್ಲಿ ಎರಡು ಹುದ್ದೆಗಳು ಖಾಲಿಯಾಗುತ್ತಿವೆ, ಇಷ್ಟದ ಹುದ್ದೆಗೆ ನೇಮಿಸುವುದಾಗಿ ಜಲಾನ್ ಹೇಳಿದರು. ಒಂದು – ಬ್ಯಾಲೆನ್ಸ್ ಆಫ್ ಪೇಮೆಂಟ್ಸ್ (ಬಿಓಪಿ) (ವಿನಿಮಯದ ಸ್ವೀಕೃತಿ ಮತ್ತು ಪಾವತಿಗಳ ಸಮತೋಲನ) ಮತ್ತು ಎಕ್ಸ್‌ಟರ್ನಲ್ ಕಮರ್ಶಿಯಲ್ ಬಾರೋಯಿಂಗ್ಸ್ (ಇಸಿಬಿ) ವಿದೇಶಿ ವಾಣಿಜ್ಯ ಋಣದ ಇಲಾಖೆ. ಎರಡನೆಯದು – ಬ್ಯಾಂಕಿಂಗ್ ವಿಭಾಗದಲ್ಲಿ ಆರ್ಥಿಕ ಸಂಸ್ಥೆಗಳಾದ ಐಡಿಬಿಐ ಮತ್ತು ಐಸಿಐಸಿಐಗಳನ್ನು ಸಂಭಾಳಿಸುವ ಕೆಲಸ. ಇದು ತುಂಬಾ ಪ್ರಬಲವಾದ ಇಲಾಖೆ. ಆದರೂ ಬಿಒಪಿ – ಇಸಿಬಿ ಇಲಾಖೆಯಲ್ಲಿ ಕೆಲಸಮಾಡುತ್ತೇನೆಂದೆ. ‘ಇಸಿಬಿಯ ಕೆಲಸವೆಂದರೆ ವಿದೇಶ ಯಾತ್ರೆಗಳಿರುತ್ತವೆ. ನಿಮಗೆ ಮಧುಮೇಹವಿದೆ. ಆಗಬಹುದೇ’ ಅಂತ ಕೇಳಿದರು. ‘ಪರವಾಗಿಲ್ಲ ನೋಡಿಕೊಳ್ಳುತ್ತೇನೆಂದೆ, ಹೆಚ್ಚಾಗಿ ಬಿಓಪಿ ಮೇಲೆ ಗಮನವಿಡುತ್ತೇನೆಂದೂ ಹೇಳಿದೆ. ಅದು ಅಕರ್ಷಣೆಯ ವಿಭಾಗವಲ್ಲ. ಅಷ್ಟೇ ಅಲ್ಲ, ಆಗ ನಾವು ಬಿಓಪಿ ವಿಷಯದಲ್ಲಿ ಬಿಕ್ಕಟ್ಟಿಗೆ ಒಳಗಾಗುತ್ತಿರುವ ಲಕ್ಷಣಗಳಿದ್ದುವು. ಹಾಗಿದ್ದಾಗ ಅದರಲ್ಲಿ ಸೇರುವುದು ಒಳ್ಳೆಯ ನಿರ್ಧಾರವೇನೂ ಅಲ್ಲ. ಅಲ್ಲಿ ಆರ್ಥಿಕ ವಿಭಾಗ, ಆರ್.ಬಿ.ಐ.ಗಳ ಜೊತೆ ಸಮನ್ವಯದ ಕೆಲಸ ಸವಾಲಾಗಬಹುದಿತ್ತು. ನನಗೆ ಆ ಸವಾಲು ಸ್ವೀಕರಿಸಬೇಕು ಅನ್ನಿಸಿತು..

ಆಗ ಕೈಗೊಂಡ ಆ ತೀರ್ಮಾನ ನನ್ನ ವೈಯಕ್ತಿಕ ಮತ್ತು ವೃತ್ತಿಜೀವನಕ್ಕೊಂದು ತಿರುವನ್ನು ಕೊಟ್ಟಿತು. ಕೇಂದ್ರ ಸರ್ಕಾರದ ವ್ಯವಹಾರದಲ್ಲಿ ಆರ್ಥಿಕ ವಿಭಾಗ ಮುಖ್ಯವಾದದ್ದು. ಇದರಲ್ಲಿ ಮೂರು ವಿಭಾಗಗಳು. ತೆರಿಗೆ, ವ್ಯಯ ಮತ್ತು ಹಣಕಾಸಿನ ವಿಚಾರಗಳು. ಪ್ರತಿ ವಿಭಾಗಕ್ಕೂ ಒಬ್ಬ ಕಾರ್ಯದರ್ಶಿ. ಕೆಲಸದಲ್ಲಿ ಎಲ್ಲರಿಗಿಂತ ಹಿರಿಯರಾದವರನ್ನು ವಿತ್ತ ಕಾರ್ಯದರ್ಶಿಯನ್ನಾಗಿ ನೇಮಿಸುತ್ತಾರೆ. ಆರ್ಥಿಕ ವಿಭಾಗದಲ್ಲಿ ಅನೇಕ ಉಪ ವಿಭಾಗಗಳಿವೆ. ಬಿಓಪಿ-ಇಸಿಬಿ ಒಂದು ಉಪ ವಿಭಾಗ – ಅದರಲ್ಲಿ ಎರಡು ಡೆಸ್ಕುಗಳು. ಬಿಓಪಿ, ಕಷ್ಟದ ವಿಷಯ. ಅದರ ಮೇಲೆ ನನ್ನ ಪಟ್ಟು ಸಾಧಿಸಬೇಕೆಂದು ಆರ್.ಬಿ.ಐ ನಲ್ಲಿ ಒಂದು ವಾರ ಇದ್ದು ಅಲ್ಲಿನ ಕೈಪಿಡಿಗಳನ್ನೆಲ್ಲಾ ಓದಿದೆ. ಹಿರಿಯ ಅಧಿಕಾರಿಗಳ ಜೊತೆ ಮಾತಾಡಿದೆ. ಆರ್ಥಿಕ ವಿಭಾಗದ ಅಧಿಕಾರಿಗಳು ಆರ್.ಬಿ.ಐ.ಗೆ ಭೇಟಿ ನೀಡುವುದು ಅಪರೂಪ. ಕಲಿಯಲಂತೂ ಯಾರೂ ಯಾವತ್ತೂ ಹೋಗಿರಲಾರರು! ಆರ್.ಬಿ.ಐ. ಅಧಿಕಾರಿಗಳನ್ನು ಅವರಿರುವಲ್ಲೇ ಭೇಟಿ ಮಾಡುವುದು ಅದಕ್ಕಿಂತ ಅಪರೂಪದ ವಿಷಯ. ಹೀಗಾಗಿ ನನ್ನ ವರಸೆ ಅವರಿಗೆ ಸೋಜಿಗದ್ದಾಗಿತ್ತು. ಆದರೆ ಅಲ್ಲಿಗೆ ಹೋಗಿ ಅವರೊಡನೆ ಮಾತಾಡಿದ್ದರಿಂದ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ವಿಷಯಗಳು ತಿಳಿದವು. ಅವರ ಜೊತೆ ಸ್ನೇಹವೂ ಬೆಳೆಯಿತು. ಆಮೇಲೆ ಏನಾದರೂ ಪ್ರಶ್ನೆಯಿದ್ದರೆ ಕರೆ ಮಾಡುತ್ತಿದ್ದೆ!

ವಿನಿಮಯ ಮತ್ತು ಪಾವತಿಯ ಸಮತೋಲನದ ವಿಷಯದಲ್ಲಿ ಎರಡು ಉಪ ವಿಚಾರಗಳಿವೆ. ಚಾಲ್ತಿ ಖಾತೆ ಮತ್ತು ಹೂಡಿಕೆ ಖಾತೆ. ನಗದಿನಲ್ಲಿ ಮತ್ತು ಸೇವೆಗಳ ಮೂಲಕ ನಾವು ಮಾಡುವ ಆಮದು-ರಫ್ತಿನ ವ್ಯವಹಾರಗಳು, ವಿದೇಶದಲ್ಲಿರುವ ಭಾರತೀಯರು ಕಳಿಸುವ ದುಡ್ಡು – ಇವುಗಳು ಚಾಲ್ತಿಖಾತೆಗೆ ಬರುತ್ತವೆ. ಚಾಲ್ತಿ ಖಾತೆಯಲ್ಲಿ ಸಮನ್ವಯವಿದ್ದರೆ, ಆಮದಿಗೆ ಪಾವತಿಸಬೇಕಾದಷ್ಟು ವಿನಿಮಯವನ್ನು ನಾವು ರಫ್ತಿನಿಂದ ಸಂಪಾದಿಸುತ್ತಿದ್ದೇವೆ ಎಂದರ್ಥ. ಆದರೆ ರಫ್ತಿಗಿಂತಲೂ ವಿದೇಶದಲ್ಲಿ ನೆಲೆಸಿರುವ ನಮ್ಮವರು ತಮ್ಮ ಕುಟುಂಬಗಳಿಗೆ ಕಳಹಿಸುತ್ತಿದ್ದ ವಿನಿಮಯವೇ ನಮ್ಮನ್ನು ಕಾಪಾಡುತ್ತಿತ್ತು. ತಾಂತ್ರಿಕವಾಗಿ ಇದನ್ನು ಸೇವೆಯ ರಫ್ತೆಂದು ಪರಿಗಣಿಸುತ್ತೇವೆ. ಆಗಿನ ಕಾಲಕ್ಕೆ ವಿನಿಮಯ ಹೆಚ್ಚಾಗಿ ಕುವೈತ್ ಮತ್ತು ದುಬಾಯಿಗಳಿಂದ ಬರುತ್ತಿತ್ತು. ಅಮೆರಿಕದಿಂದ ಕಡಿಮೆ. ರಫ್ತು ಹೆಚ್ಚಾಗಿದ್ದರೆ ಚಾಲ್ತಿ ಖಾತೆಯಲ್ಲಿ ಉಳಿಕೆಯಿರುತ್ತದೆ. ಆಮದು ಹೆಚ್ಚಾದರೆ ಚಾಲ್ತಿ ಖಾತೆ ಖೋತಾದಲ್ಲಿರುತ್ತದೆ. ಹೂಡಿಕೆ ಖಾತೆಯೆಂದರೆ ನಮ್ಮ ಸಾಲ, ಷೇರು ಬಂಡವಾಳದ ಹೂಡಿಕೆ, ವಿದೇಶದಿಂದ ಬಂದ ಹೂಡಿಕೆಗಳು, ವಿದೇಶದಲ್ಲಿ ನೆಲೆಸಿರುವವರ ಠೇವಣಿಗಳು ಮತ್ತು ನಮ್ಮವರು ಇತರ ರಾಷ್ಟ್ರಗಳೊಂದಿಗೆ ಮಾಡುವ ವ್ಯಾಪಾರ.

ಚಾಲ್ತಿ ಖಾತೆಯ ಖೋತಾ ಇದ್ದಾಗ ಅದನ್ನು ಆ ವರ್ಷದ ಹೂಡಿಕೆ ಖಾತೆಗೆ ಬಂದ ಹಣದಿಂದ ಸರಿದೂಗಿಸಬೇಕು. ಇಲ್ಲವೇ ಆರ್.ಬಿ.ಐ.ನಲ್ಲಿರುವ ವಿದೇಶಿ ವಿನಿಮಯದ ಸಂಗ್ರಹದಿಂದ ಕೊಡಬೇಕು. ಚಾಲ್ತಿ ಖಾತೆಯಲ್ಲಿ ಉಳಿಕೆಯಿದ್ದಾಗ ಆ ಮೊತ್ತವನ್ನು ನಮ್ಮ ವಿದೇಶಿ ವಿನಿಮಯದ ಸಂಗ್ರಹವನ್ನು ಬೆಳೆಸಿಕೊಳ್ಳಲು ಉಪಯೋಗಿಸುತ್ತೇವೆ. ನಮ್ಮ ಹಣಕಾಸಿನ ವ್ಯವಹಾರಗಳು ಮತ್ತು ಸಂಸ್ಥೆಗಳು ತೊಂದರೆಯಿಲ್ಲದೇ ನಡೆಯಬೇಕೆಂದರೆ ವಿನಿಮಯದ ಸಂಗ್ರಹ ಕನಿಷ್ಠ ಮೊತ್ತದಲ್ಲಾದರೂ ಇರಬೇಕು. ಈ ವಿಭಾಗದ ಮುಖ್ಯ ಕೆಲಸ – ಒಂದು ವರ್ಷದ ಅವಧಿಯ ಪಾವತಿಯ ಸಮತೋಲನದ ಪರಿಸ್ಥಿತಿ ಹೇಗಿರಬಹುದೆಂದು ಅಂದಾಜು ಮಾಡುವುದು. ಕಾಲಕಾಲಕ್ಕೆ ಆಗುತ್ತಿರುವ ಬದಲಾವಣೆಯನ್ನು ಪರಿಗಣಿಸಿ ಬಿಓಪಿ ಸರಿಯಾಗಿರುವಂತೆ ಯೋಜನೆಗಳನ್ನು ರೂಪಿಸುವುದು. ಆರ್.ಬಿ.ಐ. ವಿನಿಮಯವನ್ನು ಸಂಗ್ರಹಿಸಿಡುತ್ತಿರುವುದಕ್ಕೆ ಅಂದಾಜು ಪತ್ರವನ್ನು ನಮ್ಮ ವಿಭಾಗವೇ ಮಾಡುತ್ತಿತ್ತು. ಆ ಕಾಲದಲ್ಲಿ ಆಮದು ಮಾಡಲು ಸಂಸ್ಥೆಗಳ ಬಳಿ ಅನುಮತಿ ಪತ್ರವಿರಬೇಕಿತ್ತು. ಒಂದು ಮಟ್ಟಕ್ಕಿಂತ ಹೆಚ್ಚಿನ ವಿನಿಮಯ ವೆಚ್ಚ ಮಾಡಲು ಅನುಮತಿ ಕಡ್ಡಾಯವಾಗಿತ್ತು. ಈಗ ಎಲ್ಲವೂ ಬದಲಾಗಿದೆ.

ವಿನಿಮಯದ ದರ ಎಷ್ಟಿರಬೇಕು, ದಾಸ್ತಾನೆಷ್ಟಿದೆ ಎನ್ನುವ ವಿವರಗಳು ದಿನವೂ ಕೆಲವೇ ಉನ್ನತಾಧಿಕಾರಿಗಳಿಗೆ ತಿಳಿಯುತ್ತದೆ. ಇದು ಮಹತ್ವದ ಗುಪ್ತ ವಿಷಯ. ಹಣಕಾಸಿನ ದೃಷ್ಟಿಯಿಂದ ಇದರ ತೀರ್ಮಾನವನ್ನು ವಿತ್ತ ಕಾರ್ಯದರ್ಶಿ, ಮುಖ್ಯ ಆರ್ಥಿಕ ಸಲಹೆಗಾರರು, ಮತ್ತು ಆರ್.ಬಿ.ಐ.ನ ಉಪ ಗವರ್ನರ್ ಕೈಗೊಳ್ಳುತ್ತಾರೆ. ಅವರಿಗೆ ಮಾಹಿತಿಯನ್ನೊದಗಿಸುವುದು, ತೀರ್ಮಾನಗಳನ್ನು ಕಾರ್ಯರೂಪಕ್ಕಿಳಿಸುವುದು ನಮ್ಮ ಕೆಲಸ.

ಖಾಸಗಿ ಅಥವಾ ಸರ್ಕಾರಿ ಸಂಸ್ಥೆಗಳು ಹೊರಗಿನಿಂದ ಯಾವುದೇ ಸಾಲವನ್ನು ಪಡೆಯಬೇಕಾದರೆ ಇಸಿಬಿ ವಿಭಾಗದ ಅನುಮತಿಯನ್ನು ಪಡೆಯಬೇಕು. ಪ್ರತಿ ಸಂಸ್ಥೆ ಪಡೆದ ಸಾಲಕ್ಕೆ ಬಡ್ಡಿ ಎಷ್ಟು, ಯಾವ ಕಾಲಪರಿಮಿತಿಯಲ್ಲಿ ಮರುಪಾವತಿಯಾಗುತ್ತದೆ, ಒಟ್ಟಾರೆ ನಮ್ಮ ಮೇಲೆ ಈ ವ್ಯವಹಾರ ಎಷ್ಟು ಭಾರವನ್ನು ಹೇರುತ್ತದೆ, ಈ ಎಲ್ಲವೂ ತಿಳಿಯಬೇಕಾದ್ದೇ. ಇದರಿಂದ ಆ ವಿಭಾಗಕ್ಕೆ ಒಟ್ಟಾರೆ ಎಷ್ಟು ದುಡ್ಡು ಬಂದು-ಹೋಗುತ್ತಿದೆ ಎಂದು ತಿಳಿಯುತ್ತಿತ್ತು. ಹೀಗೆ ಬಿಓಪಿಯ ಸಮತೋಲನವನ್ನು ಕಾಪಾಡಬೇಕಿತ್ತು.

ಬಿಓಪಿ-ಇಸಿಬಿ ವಿಭಾಗಕ್ಕೆ ಸೇರಿದ ಕೆಲದಿನಗಳಲ್ಲೇ ಭಾರತದ ಶ್ರೇಯಾಂಕದ (ರೇಟಿಂಗ್) ವಿಷಯ ಚರ್ಚೆಗೆ ಬಂತು. ಅಂತರರಾಷ್ಟ್ರೀಯ ರೇಟಿಂಗ್ ಸಂಸ್ಥೆ ಸ್ಟಾಂಡರ್ಡ್ ಅಂಡ್ ಪೂರ್ (ಎಸ್ ಅಂಡ್ ಪಿ) ವಿವಿಧ ಆರ್ಥವ್ಯವಸ್ಥೆಗಳನ್ನು ವಿಶ್ಲೇಷಿಸಿ ಶ್ರೇಣೀಕರಿಸಿ ಅದನ್ನು ರೇಟಿಂಗ್ ಹೆಸರಿನಲ್ಲಿ ಪ್ರಕಟಿಸುತ್ತದೆ. ಈ ರೇಟಿಂಗ್ ಚೆನ್ನಾಗಿದ್ದರೆ ಹೂಡಿಕೆದಾರರು ಬಂಡವಾಳ ಹೂಡಲು, ಋಣದಾತರು ಸಾಲ ನೀಡಲು ಮುಂದಾಗುತ್ತಾರೆ. ಬಡ್ಡಿ ದರವನ್ನು ನಿಗದಿ ಮಾಡುವಲ್ಲಿಯೂ ರೇಟಿಂಗ್‌ ಮಹತ್ವದ ಪಾತ್ರವಹಿಸುತ್ತದೆ. ಆ ಸಮಯಕ್ಕೆ ನಮ್ಮ ಪರಿಸ್ಥಿತಿಯನ್ನು ತುಲನಾತ್ಮಕವಾಗಿ ನೋಡಿದ ಎಸ್ ಅಂಡ್ ಪಿ, ನಮ್ಮನ್ನು ಒಂದು ಶ್ರೇಣಿಯಲ್ಲಿರಿಸಿ ನಮ್ಮ ಸರ್ಕಾರಕ್ಕೂ ಆರ್.ಬಿ.ಐಗೂ ತಿಳಿಸಿ, ವರದಿಯನ್ನು ಪ್ರಕಟಿಸುವ ಮುನ್ನ ನಮ್ಮ ಅಭಿಪ್ರಾಯ ಮತ್ತು ವಾದಗಳೇನಾದರೂ ಇದ್ದರೆ ಮಂಡಿಸಲು ಅವಕಾಶ ಕೊಟ್ಟಿತು. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದುಕೊಂಡೆವು.

ಅದಕ್ಕಾಗಿ ಆರ್.ಬಿ.ಐ. ಉಪ ಗವರ್ನರ್ ರಂಗರಾಜನ್ ಜೊತೆಗೆ ನ್ಯೂಯಾರ್ಕ್‌ಗೆ ಹೋದೆ. ಅಲ್ಲಿ ನಮ್ಮ ವಾದವನ್ನು ಮಂಡಿಸುವುದಕ್ಕೆಂದು ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡಿದೆ. ನ್ಯೂಯಾರ್ಕ್ ಸೇರಿದ ನಂತರ ನಾವು ಹೇಳಬೇಕಾದದ್ದನ್ನು ಮತ್ತೊಮ್ಮೆ ನೋಡಿಕೊಂಡೆವು. ಎಸ್ ಅಂಡ್ ಪಿ ಕಡಿಮೆ ರೇಟಿಂಗಿಗೆ ಪ್ರಧಾನ ಕಾರಣ – ಆಗ ನಮ್ಮಲ್ಲಿದ್ದ ರಾಜಕೀಯ ಅಸ್ಥಿರತೆಯಾಗಿತ್ತು. ಪ್ರಧಾನಿ ವಿಪಿ ಸಿಂಗ್ ಸರ್ಕಾರ ಉಳಿಯುತ್ತದೋ ಉರುಳುತ್ತದೋ ನಿಖರವಾಗಿ ತಿಳಿಯದಂತಿತ್ತು. ನಮ್ಮಲ್ಲಿ ರಾಜಕೀಯ ಬದಲಾವಣೆಗಳು ಸರಳವಾಗಿ ಆಗುತ್ತದೆ, ಮಿಕ್ಕ ದೇಶಗಳ ಉದಾಹರಣೆಗಳನ್ನು ಪರಿಗಣಿಸುವುದು ಸಮರ್ಪಕವಲ್ಲ. ರಾಜಕೀಯದಿಂದ ಆರ್ಥಿಕ ಪರಿಸ್ಥಿತಿಗೆ ಧಕ್ಕೆಯಾಗುವುದಿಲ್ಲವೆಂದು ನಾವು ವಾದಿಸಿದೆವು.

ನಾನು ಹೊಸಬ. ರಂಗರಾಜನ್ ಪಳಗಿದವರು. ಹೇಗೋ ರೇಟಿಂಗ್ ಹೆಚ್ಚಿಸಬೇಕೆಂದು ನನಗಿದ್ದ ಉತ್ಸಾಹಕ್ಕೆ ವಾಸ್ತವದ ಆಯಾಮವನ್ನು ನೀಡಿ ಭೂಮಿಗೆ ಇಳಿಸಿದರು. ‘ವೇಣೂ, ಪರಿಸ್ಥಿತಿಯನ್ನು ಅರ್ಥಮಾಡಿಕೊ. ನಮಗೆ ಅನುಕೂಲವಾದದ್ದನ್ನು ಸಾಧಿಸಬೇಕೆನ್ನುವುದು ಸರಿಯೇ. ಆದರೆ ಹೇಳಿಕೆಯಲ್ಲಿ ವಿಶ್ವಸಾರ್ಹತೆ ಕುಂಠಿತವಾಗುವಂತಹ ಅತ್ಯುತ್ಸಾಹ ತೋರಿಸಕೂಡದು. ಈ ಸಂಸ್ಥೆಯ ಜೊತೆ ನಾವು ಮುಂದೆಯೂ ತುಂಬಾ ಕೆಲಸ ಮಾಡಬೇಕು. ಯಾವುದೇ ಪರಿಸ್ಥಿತಿಯಲ್ಲಿ ನಾವು ಅವರ ಗೌರವ ವಿಶ್ವಾಸಗಳನ್ನು ಕಳೆದುಕೊಳ್ಳಬಾರದು’ ಅಂದರು.

‘ಫಲಿತಕ್ಕಾಗಿ ಶ್ರಮಿಸು, ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳಬೇಡ’ ಈ ಮಾತು ನನ್ನ ಮಟ್ಟಿಗೆ ಮೂಲಮಂತ್ರವಾಯಿತು. ರಂಗರಾಜನ್ ಸಂಸ್ಥೆಯ ಜೊತೆ ಮಾತಾಡಿದರು. ನಮ್ಮ ಹೇಳಿಕೆಯನ್ನು ಕೇಳಿ ಮೊದಲು ಕೊಟ್ಟ ರೇಟಿಂಗ್ ಅನ್ನೇ ಉಳಿಸಿದರು. ಈ ರೇಟಿಂಗ್ ಬಂದ ಕೆಲ ಸಮಯ ನಾವು ವಿನಿಮಯ ಪಾವತಿಯ ಬಿಕ್ಕಟ್ಟಿಗೊಳಗಾದೆವು. ರಂಗರಾಜನ್ ಹೇಳಿದ್ದು ಅಕ್ಷರಶಃ ಸತ್ಯವೆಂದು ಗೊತ್ತಾಯಿತು.

ಪಾವತಿಯ ಕಷ್ಟಕ್ಕೆ ಕಾರಣಗಳು…

ನಮ್ಮ ವಿನಿಮಯ ಪಾವತಿಯ ಬಿಕ್ಕಟ್ಟು ಯಾಕಾಯಿತು? ನಮ್ಮ ಅರ್ಥವ್ಯವಸ್ಥೆಯ ಮೇಲೆ ಒತ್ತಡ ಯಾವಾಗ, ಏಕೆ ಉಂಟಾಯಿತು? ಈ ಬಿಕ್ಕಟ್ಟಿನ ಮೂಲವಿದ್ದದ್ದು 1980ರಲ್ಲಿ ನಾವು ಅನುಸರಿಸಿದ ಅರ್ಥಿಕ ಮಾದರಿಯಲ್ಲಿತ್ತು! 1982-84ರ ನಡುವೆ ವಿತ್ತಮಂತ್ರಿ ಪ್ರಣಬ್ ಮುಖರ್ಜಿ ಮೂರು ಆಯವ್ಯಯ ಪತ್ರಗಳನ್ನು ಮಂಡಿಸಿದರು. ಆಗ ಅರ್ಥವ್ಯವಸ್ಥೆ ನಾಗಾಲೋಟದಿಂದ ಓಡುತ್ತಿತ್ತು. ಆದರೆ ವ್ಯಯಕ್ಕೆ ತಕ್ಕಷ್ಟು ನಿಧಿಗಳಿರಲಿಲ್ಲ. ತೆರಿಗೆಯ ವಸೂಲಿ ಬೆಳೆಯಲಿಲ್ಲ. 1985ರಲ್ಲಿ ವಿಪಿ ಸಿಂಗ್ ಪ್ರಕಟಿಸಿದ ಆಯವ್ಯಯ ಪತ್ರದಲ್ಲಿ ತೆರಿಗೆ ಕಡಿಮೆಯಾಯಿತು. ವಿದೇಶಿ ವಸ್ತುಗಳನ್ನು ಭಾರತಕ್ಕೆ ಆಮದು ಮಾಡುವ ನಿಯಮಗಳು ಸಡಿಲವಾಗಿ ಆಮದು ಬೆಳೆಯಿತು. 1987 ಜನವರಿಯಲ್ಲಿ ರಾಜೀವ್ ಗಾಂಧಿ ಹೊಸ ಆರ್ಥಿಕ ನೀತಿಯನ್ನು ಪ್ರಕಟಿಸಿದರು. ಅದರಿಂದ ಆರ್ಥಿಕ ಬೆಳವಣಿಗೆ ಆಯಿತು. ಆದರೊಂದಿಗೇ ಆಯವ್ಯಯದ ಖೋತಾ ಬೆಳೆದು ಸಾಲದ ಹೊರೆ ಹೆಚ್ಚಾಯಿತು. ಹೆಚ್ಚಿದ ಆಮದಿಗೆ ತಕ್ಕಂತೆ ರಫ್ತು ಬೆಳೆಯಲಿಲ್ಲ. ಒಟ್ಟಾರೆ 80ರಲ್ಲಿ ಅನುಸರಿಸಿದ ಉದಾರೀಕರಣದಿಂದಾಗಿ ಪ್ರಗತಿಯೇನೋ ಚೆನ್ನಾಗಿ ಆಗಿತ್ತು. ಆದರೆ ಆ ಪ್ರಗತಿ ಸಾಲದ ಹೊರೆಯನ್ನೂ ಹೇರಿತ್ತು. ನೋಡಲು ನಾವು ಆರೋಗ್ಯಕರವಾಗಿ ಕಂಡರೂ ಒಳಗೆ ಹುಳುಕಿತ್ತು.

ನಮ್ಮ ಅರ್ಥವ್ಯವಸ್ಥೆ ಬಲಹೀನವಾಗಿರುವಾಗಲೇ ಸೋವಿಯತ್ ರಷ್ಯಾ (ಯುಎಸ್ಎಸ್ಆರ್) ಛಿದ್ರವಾಯಿತು. ಅದರ ಫಲವಾಗಿ ನಮಗೆ ರಷ್ಯಾದ ಜೊತೆಗಿದ್ದ ರೂಪಾಯಿ ವ್ಯಾಪಾರದ ಒಪ್ಪಂದ ಮುರಿಯಿತು. 1990 ಆಗಸ್ಟ್ ತಿಂಗಳಲ್ಲಿ ಕೊಲ್ಲಿ ಯುದ್ಧ ಪ್ರಾರಂಭವಾಯಿತು. ತೈಲದ ಬೆಲೆ ಗಗನಕ್ಕೇರಿತು. ಆ ವರ್ಷದ ಮೊದಲಾರು ತಿಂಗಳಲ್ಲಿ ತಿಂಗಳಿಗೆ 287 ಮಿಲಿಯ ಡಾಲರುಗಳ ಪಾವತಿ ಮಾಡಿದರೆ, ಮಿಕ್ಕಾರು ತಿಂಗಳುಗಳಲ್ಲಿ 671 ಮಿಲಿಯ ಡಾಲರುಗಳ ಪಾವತಿ ಮಾಡಬೇಕಿತ್ತು. ಸುಮಾರು ಮೂರು ಪಟ್ಟು ಹೆಚ್ಚು ಭಾರ ನಮ್ಮ ಮೇಲೆ ಬಿತ್ತು. ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗಿಗಳಾಗಿದ್ದ ನಮ್ಮವರು ಕಳುಹಿಸುತ್ತಿದ್ದ ಒಳಪಾವತಿಯೂ ನಿಂತಿತು. ವಿದೇಶದಲ್ಲಿರುವ ಭಾರತೀಯರು ತಮ್ಮ ಠೇವಣಿಗಳನ್ನು ಹಿಂದೆಗೆದುಕೊಂಡರು. ಸೆಪ್ಟೆಂಬರ್ ನಂತರ ಪಾವತಿಯ ಸಮತೋಲನದಲ್ಲಿ ತೀವ್ರ ಖೋತಾ ಕಾಣಿಸಿತು.

ಜನಪ್ರಿಯ ನಾಯಕ ಎನ್.ಟಿ.ಆರ್, ಅವರ ನೀತಿಗಳನ್ನು, ತಿಕ್ಕಲುತನವನ್ನು, ಆಡಳಿತ ಶೈಲಿಯನ್ನು ಜನ ತಿರಸ್ಕರಿಸಿದ್ದರು. ಈ ರೀತಿಯ ವ್ಯಕ್ತಿತ್ವವನ್ನು ಜನರು ಅತಿಯಾಗಿ ಇಷ್ಟಪಡುತ್ತಾರೆಂಬ ನಂಬಿಕೆಯ ಮೇಲೆ ಎನ್.ಟಿ.ಆರ್. ತಮ್ಮ ರಾಜಕಾರಣವನ್ನು ಕಟ್ಟಿಕೊಂಡಿದ್ದರು.

ಬಿಓಪಿಯ ತೀವ್ರವಾಗಿ ಹದಗೆಟ್ಟು ತುರ್ತು ಸ್ಥಿತಿ ಉಂಟಾದರೆ ಐಎಂಎಫ್‌ನಿಂದ ವಿನಿಮಯವನ್ನು ಬಳಸಿಕೊಳ್ಳುವ ಅವಕಾಶವಿದೆ. ಅದನ್ನೂ ಉಪಯೋಗಿಸಿದೆವು. ಅದೂ ತಳಮುಟ್ಟಿತು. ಆ ವೇಳೆಗೆ ಇಂಧನ ಮತ್ತಿತರ ಆಮದಿಗೆ ಎಸ್.ಬಿ.ಐ. ಮತ್ತಿತರ ಸಂಸ್ಥೆಗಳು ಅಲ್ಪಕಾಲಿಕ ಸಾಲ ಪಡೆಯಲು ಪ್ರಾರಂಭಿಸಿದವು. ಅದನ್ನು ತೀರಿಸಲು ದುಡ್ಡಿಲ್ಲದೇ ಮತ್ತೆ ಮತ್ತೆ ಸಾಲ ತೆಗೆದುಕೊಳ್ಳುವ ಪರಿಸ್ಥಿತಿಯಾಗಿ ಸಾಲದ ಮೇಲೆಯೇ ನಮ್ಮ ಆಮದು ನಡೆದಿತ್ತು. ವಿದೇಶದಲ್ಲಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಬಿಲಿಯನ್ ಗಟ್ಟಲೆ ಡಾಲರುಗಳನ್ನು ಠೇವಣಿಯಾಗಿಟ್ಟಿರುತ್ತಿದ್ದರು. ಆ ಠೇವಣಿಯಿದೆ ಎನ್ನುವುದು ಆರ್.ಬಿ.ಐ.ನ ಮತ್ತು ಆರ್ಥಿಕ ಶಾಖೆಯ ಕಾರ್ಯದರ್ಶಿ ಸ್ಥಾಯಿಯ ಅತ್ಯುನ್ನತಾಧಿಕಾರಿಗಳಿಗೆ ಮಾತ್ರ ಗೊತ್ತು! ಹೀಗೆ ಠೇವಣಿಯಾಗಿಟ್ಟ ಧನವನ್ನು ಬಳಸಿಕೊಳ್ಳಬೇಕೆಂದು ಸರ್ಕಾರ ತೀರ್ಮಾನಿಸಿತು. ಆ ಠೇವಣಿಗಳೂ ಕರಗಿದಾಗ ಸಾರ್ವಜನಿಕ ಕ್ಷೇತ್ರದ ಉದ್ಯಮಗಳಿಗೆ ವಿದೇಶಿ ವಿನಿಮಯದ ಸಾಲವನ್ನು ಪಡೆಯಲು ಸರ್ಕಾರ ಪ್ರೋತ್ಸಾಹಿಸಿತು. ಕೆಲವು ಸಂಸ್ಥೆಗಳಿಗೆ ವಿನಿಮಯ ದರದ ಏರುಪೇರಿಗೆ ಖಾತರಿಯನ್ನೂ ಆರ್.ಬಿ.ಐ ನೀಡಿತು. ಆದರೆ ವಿದೇಶಿ ಬ್ಯಾಂಕುಗಳು ನಮ್ಮ ಬ್ಯಾಂಕುಗಳಿಗೆ ಸಾಲ ನೀಡಲು ತಯಾರಿರಲಿಲ್ಲ. ಪ್ರತಿದಿನ ‘ಕೈಯಿಂದ ಬಾಯಿಗೆ’ ಅನ್ನುವ ಸ್ಥಿತಿಗೆ ಬಂತು. ದಿನಕಳೆದು ಸಂಜೆಗೆ ಚಿಂತೆಯಿಂದ ಬೆವರಿಳಿಯುತ್ತಿತ್ತು. ಅದು ನಮ್ಮ ವಿನಿಮಯದ ದಾಸ್ತಾನು, ಬೇಡಿಕೆಯನ್ನು ಆರ್.ಬಿ.ಐ.ಗೆ ತಿಳಿಸುವ ಸಮಯ.

ಆಗ ಸ್ಥಳೀಯ ಬ್ಯಾಂಕುಗಳು ಮಾಡಿದ್ದ ಅಲ್ಪಾವಧಿ ವಿದೇಶಿ ಸಾಲದ ವಿಚಾರ ಬಿಒಪಿ ವಿಭಾಗಕ್ಕೆ ಗೊತ್ತಿರಲಿಲ್ಲ. ಅದನ್ನು ಆರ್.ಬಿ.ಐ. ನೋಡಿಕೊಳ್ಳುತ್ತಿತ್ತು. ಆಮದು – ರಫ್ತುಗಳ ಮೌಲ್ಯ, ಪಾವತಿಯ ಖೋತಾದ ಬಗ್ಗೆ, ವ್ಯಾಪಾರ ಅಂಕಿಅಂಶಗಳ ಪ್ರಧಾನ ನಿರ್ದೇಶಕರು ಕೊಟ್ಟ ಮಾಹಿತಿ ಮತ್ತು ಆರ್.ಬಿ.ಐ ಮಾಹಿತಿ ಭಿನ್ನವಾಗಿತ್ತು. ನಿಜಕ್ಕೂ ನಮ್ಮಲ್ಲಿ ಎಷ್ಟು ವಿದೇಶಿ ವಿನಿಮಯ ಲಭ್ಯವಿದೆ ಎಷ್ಟು ಸಾಲವಿದೆ ಯಾರಿಗೂ ಗೊತ್ತಿರಲಿಲ್ಲ. ಇರುವ ಮಾಹಿತಿಯಲ್ಲಿ ಯಾವುದನ್ನು ನಂಬಬೇಕೋ, ಗೊತ್ತಿಲ್ಲ. ಅಂದಿಗೆ ನಮ್ಮಲ್ಲಿದ್ದ ಚಿನ್ನದ ಸಂಗ್ರಹಕ್ಕೆ ಇದ್ದದ್ದು ಮಾರುಕಟ್ಟೆಯ ಬೆಲೆಯ ಶೇಕಡಾ ನಲವತ್ತರ ಮೌಲ್ಯ. 1990ರಲ್ಲಿ ಒಂದು ಸುಗ್ರೀವಾಜ್ಞೆ ಹೊರಡಿಸಿ ಅದಕ್ಕೆ ಮಾರುಕಟ್ಟೆ ದರದ ಮೌಲ್ಯಮಾಪನ ಮಾಡಿದದ್ದರಿಂದ, ಸರ್ಕಾರದ ಸುಪರ್ದಿನಲ್ಲಿದ್ದ 521 ಮಿಲಿಯನ್ ಡಾಲರಿನ ಮೌಲ್ಯದ ಚಿನ್ನದ ದಾಸ್ತಾನು ಅಕ್ಟೋಬರಿಗೆ 3,678 ಮಿಲಿಯನ್ ಡಾಲರಿನ ಮೌಲ್ಯದ್ದಾಯಿತು! ಆರ್.ಬಿ.ಐನ ವಿನಿಮಯ ಮೌಲ್ಯ 3,514 ಮಿಲಿಯ ಡಾಲರುಗಳಿಂದ 6,212 ಮಿಲಿಯ ಡಾಲರುಗಳಿಗೆ ಏರಿತು. ನಮ್ಮಲ್ಲಿದ್ದ ವಿನಿಮಯ ಸಂಗ್ರಹ ಆರ್ಥಿಕ ಶಾಖೆಯ ಕೆಲ ಉನ್ನತಾಧಿಕಾರಿಗಳಿಗೆ, ಮತ್ತು ಆರ್.ಬಿ.ಐಗೆ ಗೊತ್ತಿದ್ದು ಬರಲಿರುವ ಬಿಕ್ಕಟ್ಟಿನ ಬಗ್ಗೆ ಸೂಚನೆಯಿತ್ತು. ಹೊರಗೆ ಯಾರಿಗೂ ಗೊತ್ತಿರಲಿಲ್ಲ. ಮಹಾ ಜನತೆಗಂತೂ ಗೊತ್ತೇ ಇರಲಿಲ್ಲ.

ಒತ್ತಡವು ಬಿಕ್ಕಟ್ಟಾಯಿತು

ಆರ್ಥಿಕ ಕಷ್ಟಗಳಾಗಿದ್ದರೆ – ಹೊರಗಿನವರು ನಮ್ಮನ್ನು ಕಾಪಾಡುತ್ತಿದ್ದರು. ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಬಲ ರಾಜಕೀಯ ನಾಯಕತ್ವ ಇದ್ದಿದ್ದರೆ ಪರಿಸ್ಥಿತಿ ಕೈಮೀರುತ್ತಿರಲಿಲ್ಲ. 1989 ಡಿಸೆಂಬರಿನಲ್ಲಿ ಪ್ರಧಾನಮಂತ್ರಿಯಾದ ವಿ.ಪಿ.ಸಿಂಗ್‌ಗೆ ರಾಜಕೀಯ ಬೆಂಬಲವಿರಲಿಲ್ಲ. ಶಿಕ್ಷಣ ಕ್ಷೇತ್ರದಲ್ಲೂ ಉದ್ಯೋಗದಲ್ಲೂ ಮೀಸಲಾತಿಯನ್ನು ಪ್ರತಿಪಾದಿಸಿ ಮಂಡಲ್ ಆಯೋಗದ ವರದಿ ಜಾರಿಯ ಘೋಷಣೆ ಮಾಡಿದ್ದರ ವಿರುದ್ಧವಾಗಿ ದೇಶಾದ್ಯಂತ ಭುಗಿಲೆದ್ದ ಚಳವಳಿಯಿಂದ ಸುತ್ತಲೂ ಹಿಂಸೆಯ ವಾತಾವರಣವಿತ್ತು. ಸಿಂಗ್ ರಾಜೀನಾಮೆಗೆ ವಿರೋಧ ಪಕ್ಷಗಳು ಆಗ್ರಹಿಸುತ್ತಿದ್ದುವು. 1990ರ ನವಂಬರಿನಲ್ಲಿ ಸಿಂಗ್ ರಾಜೀನಾಮೆ ಕೊಟ್ಟಾಗ ಚಂದ್ರಶೇಖರ್ ಪ್ರಧಾನಿಯಾಗಲು ರಾಜೀವ್ ಗಾಂಧಿ ಹೊರಗಿನಿಂದ ಬೆಂಬಲ ನೀಡಿದರು. 1991ರ ಫೆಬ್ರವರಿಯಲ್ಲಿ ತಮ್ಮ ಬೆಂಬಲವನ್ನು ಹಿಂದೆಗೆದುಕೊಂಡಾಗ ಚಂದ್ರಶೇಖರ್ ಸರ್ಕಾರ ಉಸ್ತುವಾರಿ ಸರ್ಕಾರವಾಯಿತು. ಚುನಾವಣೆಗಳು ಬಂದವು, ಮೇ 21 ರಂದು ರಾಜೀವ್ ಹತ್ಯೆಗೊಳಗಾದರು. ಚುನಾವಣಾ ಫಲಿತಾಂಶ ಏನಾಗುತ್ತದೋ ತಿಳಿಯದಾಗಿತ್ತು. 1984ರಿಂದ ನಮ್ಮ ಪ್ರಗತಿ ಚುರುಕಾಗಿದ್ದರೂ ಅದರಲ್ಲಿ ಹುಳುಕಿತ್ತು. 1989ರ ವೇಳೆಗೆ ಈ ಹುಳುಕಿನ ಕಾರಣವಾಗಿ ಆರ್ಥಿಕ ನೀತಿಯ ಸುಧಾರಣೆ ಅತ್ಯವಶ್ಯಕವೆಂದು ಅಧಿಕಾರವರ್ಗಕ್ಕೆ ತಿಳಿದಿತ್ತು. ಅದಕ್ಕೆ ಐಎಂಎಫ್ ಸಹಾಯವೂ ಅತ್ಯವಶ್ಯಕವಾಗಿತ್ತು. ಕೆಲವರು ಸುಧಾರಣೆ ಬೇಕಿಲ್ಲವೆಂದೂ ಐಎಂಎಫ್ ಬಳಿಗೆ ಹೋಗುವ ಅವಶ್ಯಕತೆಯಿಲ್ಲವೆಂದೂ ವಾದಿಸಿದ್ದರು.

ಅಸ್ಥಿರತೆಯಿಂದಾಗಿ ಸುಧಾರಣೆಗೆ ರಾಜಕೀಯ ನಾಯಕರು ಕೈಹಾಕಲಿಲ್ಲ. ಪೂರ್ಣ ಬಹುಮತವಿಲ್ಲದ್ದರಿಂದ ಹಿಂದೇಟು ಹಾಕಿರಬಹುದು. ಈ ಪರಿಸ್ಥಿತಿಯಲ್ಲಿ ಆರ್ಥಿಕ ಮುಗ್ಗಟ್ಟನ್ನು ತಡೆವ ಜವಾಬ್ದಾರಿ ಆರ್.ಬಿ.ಐ, ಮತ್ತು ಹಣಕಾಸು ವಿಭಾಗದ ಅಧಿಕಾರಿಗಳ ಮೇಲೆ ಬಿತ್ತು. ಬಿಕ್ಕಟ್ಟಿನ ವಾತಾವರಣ ಹೆಚ್ಚಾದಷ್ಟೂ ಉನ್ನತಾಧಿಕಾರಿಗಳ ಆತಂಕವೂ ಹೆಚ್ಚಿ ಯಾವ ಕ್ಷಣಕ್ಕಾದರೂ ಸ್ಫೋಟಗೊಳ್ಳಬಹುದಿತ್ತು. ಕ್ಷಣವೊಂದು ಯುಗವಾಗಿ ಕಳೆದಿತ್ತು. ಕೆಲವು ಅತ್ಯವಶ್ಯಕ ಸುಧಾರಣೆಗಳನ್ನು ಪ್ರಸ್ತಾಪಿಸಬೇಕೆಂದು ಕೇಂದ್ರ ಮಂತ್ರಿಮಂಡಲದ ಜೊತೆ ಚರ್ಚಿಸಿ ಜಲಾನ್ ಹತಾಶೆಗೊಂಡರು.

ಆರ್ಥಿಕ ವಿಭಾಗದ ವಿಭಾಗಾಧಿಕಾರಿಯಿಂದ ಕಾರ್ಯದರ್ಶಿಯವರೆಗೆ ಎಲ್ಲರೂ ಈ ಪರಿಸ್ಥಿತಿಯಿಂದ ದೇಶ ಪಾರಾಗಬೇಕೆಂದು ಹಗಲೂ-ರಾತ್ರಿ ದುಡಿಯುತ್ತಿದ್ದರು. ಹೇಗಾದರೂ ದೇಶದ ಗೌರವ ಕಾಪಾಡಬೇಕೆಂಬ ಹಟ ಎಲ್ಲರಿಗೂ ಇತ್ತು. ಆಗಿನ ಪರಿಸ್ಥಿತಿಯನ್ನು ನಿವಾರಿಸಲು ಕ್ರಮಗಳನ್ನು ಕೈಗೊಳ್ಳದಿದ್ದರೆ, ಪರಿಣಾಮಗಳನ್ನು ಈಗಲೂ ಊಹಿಸುವುದಕ್ಕಾಗುತ್ತಿಲ್ಲ. ಊಹಿಸಿ: ದೇಶದಲ್ಲಿ ಇಂಧನವಿಲ್ಲ, ಸಾರಿಗೆ, ಬ್ಯಾಂಕಿಂಗ್ ವ್ಯವಸ್ಥೆಗಳು ಸ್ಥಗಿತವಾಗಿವೆ, ಆಮದು ರಫ್ತುಗಳಿಲ್ಲ. ಇದೇ ಮೈಜುಮ್ಮೆನ್ನಿಸಲು ಸಾಕು. ಆ ಪರಿಸ್ಥಿತಿ ಬರಬಾರದೆಂದು ಅಧಿಕಾರಿಗಳು ತಮ್ಮೆಲ್ಲ ಶಕ್ತಿಯನ್ನು ಧಾರೆಯೆರೆದದ್ದರಿಂದ ಬಿಕ್ಕಟ್ಟಿನ ಬಗ್ಗೆ ಜನಸಾಮಾನ್ಯರಿಗೆ ಗೊತ್ತಾಗಲಿಲ್ಲ.
ಬಿಕ್ಕಟ್ಟನ್ನು ದೂರಮಾಡಲು ಕೈಲಾದಷ್ಟು ಪ್ರಯತ್ನ ಮಾಡಿದೆವು. ಅತ್ಯವಶ್ಯಕವಾದ ವಸ್ತುಗಳನ್ನು ಬಿಟ್ಟು ಮಿಕ್ಕ ಆಮದಿನ ಮೇಲೆ ಭಾರೀ ತೆರಿಗೆಯನ್ನು ಹೇರಿದೆವು.

ಮುಕ್ತ ಆಮದಿನ ಪಟ್ಟಿಯಿಂದ ಎಲ್ಲಾ ವಸ್ತುಗಳನ್ನು ತೊಲಗಿಸಿದೆವು. ಅತ್ಯಶ್ಯಕವಾದ ಆಮದಿಗೂ ಆಯಾ ಇಲಾಖೆಗಳು ಕಾರಣ ನೀಡಿ ಅನುಮತಿ ಪಡೆಯಬೇಕಿತ್ತು. ಇಂಧನವನ್ನು ಜಾಗರೂಕತೆಯಿಂದ ಬಳಸಬೇಕೆನ್ನುವ ಉದ್ದೇಶದಿಂದ ಅದರ ಮೇಲೆ ಅಧಿಕ ತೆರಿಗೆ ಹೇರಿದೆವು. ಆದರೆ ಈ ಕ್ರಮಗಳನ್ನು ತಾತ್ಕಾಲಿಕವಾಗಷ್ಟೇ ಕೈಗೊಳ್ಳಬಹುದು. ಆಮದು ಕಷ್ಟವಾದರೆ ಬೆಲೆಗಳು ಗಗನಮುಖಿಯಾಗುತ್ತದೆ. ರಫ್ತು ಕಡಿಮೆಯಾಗಿ, ಆತ್ಮವಿಶ್ವಾಸ ಕುಗ್ಗುತ್ತದೆ. ಪರಿಸ್ಥಿತಿ ಎಷ್ಟರ ಮಟ್ಟಿಗೆ ಕುಸಿಯಿತೆಂದರೆ ಐಎಂಎಫ್ ಸಹಾಯವಿಲ್ಲದೇ ನಾವು ಈ ಸುಳಿಯಿಂದ ಹೊರಬರಲು ಸಾಧ್ಯವಿಲ್ಲವೆಂದು ಎಲ್ಲರಿಗೂ ಅರ್ಥವಾಯಿತು. ಈ ಸ್ಥಿತಿಯಲ್ಲಿ ಸರ್ಕಾರ ಐಎಂಎಫ್ ಜೊತೆ ಚರ್ಚೆ ಪ್ರಾರಂಭಿಸಿತು.

ಬಂಗಾರಮ್ಮ

ನಮ್ಮ ಕೈಲಾದ ಕ್ರಮಗಳನ್ನು ಕೈಗೊಂಡೆವು. ಬಿಕ್ಕಟ್ಟು ಮುಂದುವರೆದಿತ್ತು. ಚಿನ್ನಕ್ಕೆ ದೇಶವಿದೇಶಗಳಲ್ಲಿ ವಿನಿಮಯವಾಗುವ ಗುಣವಿರುವುದರಿಂದ ಅದರ ಮೊರೆಹೋಗವುದೇ ನಮಗೆ ಕಂಡ ದಾರಿ. ಹಾಗೆಯೇ ಆರ್.ಬಿ.ಐ. ಬಳಿಯಿರುವ ಚಿನ್ನ ಮತ್ತು ವಿನಿಮಯ ಎರಡೂ ನಮ್ಮ ನಿಕ್ಷೇಪನಿಧಿಗಳು. ನಿಕ್ಷೇಪ ನಿಧಿ ಎಂದರೆ ಅವಶ್ಯಕತೆ ಬಿದ್ದಾಗ ಅದು ಉಪಯೋಗಕ್ಕೆ ಬರುತ್ತದೆನ್ನುವುದು. ದುಡ್ಡಿನ ರೂಪದಲ್ಲಿ ವಿನಿಮಯವಿಲ್ಲದ ಕಾಲಕ್ಕೆ ಚಿನ್ನವನ್ನು ಉಪಯೋಗಿಸದೇ ಬೇರೆ ಮಾರ್ಗವಿರಲಿಲ್ಲ. ಸರ್ಕಾರದ ಬಳಿಯಿರುವ ಚಿನ್ನದ ದಾಸ್ತಾನಿನಲ್ಲಿ 20 ಟನ್ನುಗಳು ಮತ್ತು ಆರ್.ಬಿ.ಐನ ದಾಸ್ತಾನಿನಿಂದ 47 ಟನ್ನುಗಳನ್ನು ಬಳಸಬೇಕೆಂದು ತೀರ್ಮಾನ ಮಾಡಿದೆವು.

ಸರ್ಕಾರದ ಚಿನ್ನದ ಮಾಪನಕ್ಕೆ ವಿತ್ತಮಂತ್ರಿ ಯಶವಂತ ಸಿನ್ಹಾ, ಆರ್.ಬಿ.ಐ ಗವರ್ನರ್ ವೆಂಕಿಟರಮಣನ್ ಪ್ರಸ್ತಾಪವನ್ನು ತಯಾರಿಸಿದರು. ಚಂದ್ರಶೇಖರ್ ಪ್ರಧಾನಿಯಾಗಿದ್ದಾಗಲೇ ಇದಕ್ಕೆ ಅನುಮತಿ ಸಿಕ್ಕಿತ್ತು. ಮೊದಲು ಸರ್ಕಾರದ ಬಳಿಯಿದ್ದ ಚಿನ್ನವನ್ನು ಎಸ್.ಬಿ.ಐ.ಗೆ ಒಪ್ಪಿಸುವಂತೆ ಆರ್.ಬಿ.ಐ ಗವರ್ನರ್ ಪ್ರತಿಪಾದಿಸಿದರು. ಅದನ್ನು ಕ್ಯಾಬಿನೆಟ್ ಮತ್ತು ಕಾನೂನು ವಿಭಾಗ ಅನುಮೋದಿಸಬೇಕು. ಈಗಿರುವ ಬಿಕ್ಕಟ್ಟಿನಿಂದ ಪಾರಾಗುವುದಕ್ಕೆ ಎಸ್.ಬಿ.ಐ ಚಿನ್ನವನ್ನು ಅಡ ಇಡಬೇಕಿತ್ತಷ್ಟೇ. 1991 ಏಪ್ರಿಲ್ ನಲ್ಲಿ ಯೂನಿಯನ್ ಬ್ಯಾಂಕ್ ಆಫ್ ಸ್ವಿಟ್ಜರ್ಲ್ಯಾಂಡಿನ ಜೊತೆ ಆದ ಒಪ್ಪಂದದ ಪ್ರಕಾರ ಎಸ್.ಬಿ.ಐ ಚಿನ್ನವನ್ನು ಅಡವಿಟ್ಟು 200 ಮಿಲಿಯನ್ ಡಾಲರುಗಳನ್ನು ತಂದಿತು.

ಆರ್.ಬಿ.ಐ ಬಳಿಯಿದ್ದ ಚಿನ್ನವನ್ನೂ ಅಡವಿಡಬೇಕಾದ ಪರಿಸ್ಥಿತಿಯಿತ್ತು. ಚಿನ್ನವನ್ನು ಅಡವಿಡಲು ಮಂತ್ರಿಮಂಡಲದ ತೀರ್ಮಾನದ ಟಿಪ್ಪಣಿಯನ್ನು ತಯಾರಿಸಬೇಕೆಂದು ಅಂದಿನ ವಿತ್ತಮಂತ್ರಿ ಯಶವಂತ ಸಿನ್ಹಾ ಮತ್ತು ಕಾರ್ಯದರ್ಶಿ ಶುಕ್ಲಾ ಆದೇಶವನ್ನಿತ್ತರು. ಆ ವಿಷಯ ಕುಟುಂಬದವರಿಗೂ ಗೊತ್ತಾಗಬಾರೆದೆಂದು ಹೇಳಿದರು. ನನ್ನ ಕೋಣೆಯಲ್ಲಿ ಕೂತು ಬಿ.ಎಲ್.ಮಾಥುರ್ ಜೊತೆ ಅದಕ್ಕೊಂದು ರೂಪ ಕೊಡುವಾಗ ಅನೇಕ ಅಡಚಣೆಗಳಾದುವು. ಆರ್.ಬಿ.ಐನ ಕುಲಕರ್ಣಿ ಜೊತೆ ವಿಚಾರವಿನಿಮಯ ಮಾಡಿಕೊಳ್ಳುತ್ತಲೇ ಸಮಸ್ಯೆಯನ್ನು ಬಿಡಿಸಿಕೊಳ್ಳುತ್ತಾ ಮುಂದೆ ಸಾಗಿದೆವು. ಸಾಮಾನ್ಯವಾಗಿ ಚಿನ್ನವನ್ನು ಅಡ ಇಟ್ಟರೆ ಅದನ್ನು ಸಾಗಿಸಬೇಕಾದ ಅವಶ್ಯಕತೆಯಿರುವುದಿಲ್ಲ. ಆ ವ್ಯವಹಾರವೆಲ್ಲಾ ಕಾಗದದ ಮೇಲೇ ಆಗುತ್ತದೆ. ಆದರೆ ಅಂದು ಐಎಂಎಫ್ ನಮಗೆ ಧನಸಹಾಯ ಮಾಡಬೇಕಾದರೆ ಚಿನ್ನವನ್ನು ದೇಶದಿಂದ ಹೊರಕ್ಕೆ ಒಯ್ಯಬೇಕೆನ್ನುವ ಷರತ್ತು ಹೇರಿತು. ಐಎಂಎಫ್ ಸಹಾಯವಿದ್ದರೆ ಮಾತ್ರ ಇತರ ಅಂತರರಾಷ್ಟ್ರೀಯ ಸಂಸ್ಥೆಗಳು ನಮ್ಮನ್ನು ನಂಬುತ್ತವೆ.

1991ರ ಮೇ 30ಕ್ಕೆ ಮಗಳು ಕವಿತಾಳ ಮದುವೆ ಹೈದರಾಬಾದಿನಲ್ಲಿ ನಡೆಯುವುದೆಂದು ಮೊದಲೇ ಇತ್ಯರ್ಥವಾಗಿತ್ತು. ಮದುವೆಗೆಂದು ಮೇ 13ರಿಂದ ಜೂನ್ 7 ರ ವರೆಗೆ ನನಗೆ ರಜೆ ಬೇಕೆಂದು ಶುಕ್ಲಾರನ್ನು ಕೇಳಿದೆ.

‘ಅಭಿನಂದನೆಗಳು ವೇಣೂ, ನೀವು ರಜೆ ಕೇಳುವುದು ಸರಿಯೇ. ಆದರೆ ಈಗಿರುವ ಪರಿಸ್ಥಿತಿಯಲ್ಲಿ ನೀವು ದೆಹಲಿಯಲ್ಲಿರದಿದ್ದರೆ ಕಷ್ಟ’ ಅಂದರು. ‘ನೀವು ಮದುವೆಯನ್ನು ದೆಹಲಿಯಲ್ಲೇ ಮಾಡಿಬಿಡಿ’ ಅಂದರು.

‘ನಿಮಗೆ ಯಾವಾಗ ಬೇಕಿದ್ದರೂ ಸಂಪರ್ಕಿಸಿ. ನಿಮ್ಮ ಸೇವೆಯಲ್ಲಿರುತ್ತೇನೆ’ ಅಂತಂದು ರಜೆ ಗಿಟ್ಟಿಸಿಕೊಂಡೆ. ತೀವ್ರ ಒತ್ತಡದಲ್ಲಿದ್ದುದರಿಂದ ಮದುವೆಯ ಜವಾಬ್ದಾರಿಯನ್ನು ನಮ್ಮ ಅತ್ತೆ ಮಾವ ತಮ್ಮ ಹೆಗಲಿಗೆ ಹಾಕಿಕೊಂಡರು. ಹೈದರಾಬಾದಿಗೆ ಬರುವ ವೇಳೆಗೆ ಮದುವೆಯ ಕೆಲಸಗಳನ್ನು ಬಹಳ ಮಟ್ಟಿಗೆ ಅವರೇ ಚೆನ್ನಾಗಿ ನಿರ್ವಹಿಸಿದ್ದರು. ಈ ನಡುವೆ ಒಂದು ಸಂಜೆ ‘ನಾಳೆ ಬೆಳಗಿನ ವಿಮಾನದಲ್ಲಿ ದೆಹಲಿಗೆ ಬರಬೇಕು’ ಅಂತ ಶುಕ್ಲಾ ಸಾಹೇಬರ ಫೋನು!

‘ಈಗಿಂದೀಗ್ಗೆ ಟಿಕೆಟ್ಟುಗಳು.’ ಅಂತ ಯೋಚಿಸುತ್ತಿದ್ದಾಗ ಆತ ಹೇಳಿದರು, ‘ಎಲ್ಲಾ ಏರ್ಪಾಟೂ ಆಗಿದೆ. ನೀವು ಹೊರಡಿ!’
ದೆಹಲಿ ತಲುಪಿದಾಗ ಗೊತ್ತಾಯಿತು – ಐಎಂಎಫ್ ಷರತ್ತುಗಳಿಗನುಸಾರವಾಗಿ ನಮ್ಮ ಚಿನ್ನವನ್ನು ಗಡಿ ದಾಟಿಸಿ ಲಂಡನ್ನಿನ ಬ್ಯಾಂಕುಗಳಲ್ಲಿ ಕಾಪಿಡಲು ಏರ್ಪಾಟು ಮಾಡಬೇಕಿತ್ತು! ಚಿನ್ನ ನಮ್ಮ ಮೈಮೇಲಿದ್ದರೇನೇ ನಾವು ಪ್ರಯಾಣದಲ್ಲಿ ಭಯಪಡುತ್ತೇವೆ. ಈಗ ಟನ್ನುಗಟ್ಟಲೇ ಚಿನ್ನವನ್ನು ಬೇರೊಂದು ಜಾಗಕ್ಕೆ ಒಯ್ಯಬೇಕಾದರೆ ಅದು ಮಕ್ಕಳಾಟವಲ್ಲ. ಆರ್.ಬಿ.ಐನಿಂದ ಚಿನ್ನವನ್ನು ಒಂದು ಟ್ರಕ್ಕಿಗೇರಿಸಿ ಗುಟ್ಟಾಗಿ ನಡುರಾತ್ರಿಯಲ್ಲಿ ಮುಂಬಯಿ ವಿಮಾನಾಶ್ರಯಕ್ಕೆ ತಲುಪಿಸಬೇಕಿತ್ತು. ಭಾರೀ ಭದ್ರತೆಯ ನಡುವೆ ಟ್ರಕ್ಕು ಹೊರಟಿತು. ದಾರಿಯಲ್ಲಿ ಅದರ ಟೈರು ಪಂಚರಾಯಿತು!

ಟೈರು ಪಂಚರಾಗಿ ವಾಹನ ನಿಲ್ಲುವುದು ಹೊಸದೇನೂ ಅಲ್ಲ. ಅದನ್ನು ಜನ ಗಮನಿಸುವುದೂ ಇಲ್ಲ. ಆದರೆ ದೊಡ್ಡ ಶಬ್ದದೊಂದಿಗೆ ಟ್ರಕ್ಕು ನಿಂತಿತು. ಹಿಂದೆ-ಮುಂದೆ ಹೋಗುತ್ತಿದ್ದ ಭದ್ರತಾ ದಳಗಳು ಜಾಗರೂಕರಾಗಿ, ತಮ್ಮ ವಾಹನಗಳಿಂದ ಇಳಿದು ಟ್ರಕ್ಕಿನ ಸುತ್ತಲೂ ತುಪಾಕಿಗಳನ್ನು ಹಿಡಿದು ನಿಂತರು! ಮುಂಬೈಯಲ್ಲಿ ನಡುರಾತ್ರೆಯಾದರೂ ರಸ್ತೆಯ ಮೇಲೆ ಜನಸಂಚಾರವಿದ್ದೇ ಇರುತ್ತದೆ. ಈ ದೃಶ್ಯ ಕೆಲವರಿಗೆ ಆಸಕ್ತಿಹುಟ್ಟಿಸಿತು! ಟ್ರಕ್ಕಿನಲ್ಲಿ ಏನಿದೆ, ಅಲ್ಲೇನು ನಡೀತಿದೆ? ಟೈರು ಬದಲಾಯಿಸಿದ ಮೇಲೆ ಟ್ರಕ್ಕು ವಿಮಾನಾಶ್ರಯ ಸೇರಿತು. ಚಿನ್ನವನ್ನು ಅನ್ ಲೋಡ್ ಮಾಡಿ ಪ್ರತ್ಯೇಕ ವಿಮಾನಕ್ಕೆ ಏರಿಸುತ್ತಿದ್ದಾಗ ಅಲ್ಲಿದ್ದ ಕಿಡಿಗೇಡಿಗಳ್ಯಾರೋ ಫೋಟೋ ತೆಗೆದರು! ಅದರಿಂದ ವಿಷಯ ಬಯಲಾಯಿತು.

ಆರ್.ಬಿ.ಐ.ನ ಚಿನ್ನ ಬ್ಯಾಂಕ್ ಆಫ್ ಇಂಗ್ಲೆಂಡ್ ಗೆ ಸುರಕ್ಷಿತವಾಗಿ ಸೇರಿದ ನಂತರ ನಮಗೆ 407 ಮಿಲಿಯನ್ ಡಾಲರುಗಳ ಸಾಲ ಸಿಕ್ಕಿತು. ಚಿನ್ನ ಅಡ ಇಡುವ ಪರಿಸ್ಥಿತಿ ತಲುಪಿದ್ದೇವೆ ಎಂದು ಜನಸಾಮಾನ್ಯರಿಗೆ ಗೊತ್ತಾದದ್ದೂ ಒಳ್ಳೆಯದೇ ಆಯಿತೆನ್ನಿ. ಅವರೂ ನಮ್ಮ ಆರ್ಥಿಕ ಸುಧಾರಣಾ ಕಾರ್ಯಕ್ಕೆ ಬೆಂಬಲವನ್ನು ನೀಡಿದರು. ತಮ್ಮ ಮೇಲೆ ಭಾರ ಬಿದ್ದರೂ ದೀರ್ಘಕಾಲದಲ್ಲಿ ಒಳ್ಳೆಯದಾಗುತ್ತದೆನ್ನುವ ನಂಬಿಕೆಯಿಂದಲೇ ನಮ್ಮ ಆರ್ಥಿಕ ವಲಯದ ಸುಧಾರಣೆಯಾಯಿತು.ನಮ್ಮ ಬಳಿಯಿದ್ದ ಚಿನ್ನದ ಗುಣಮಟ್ಟ ಒಂದೇ ರೀತಿಯಿರಲಿಲ್ಲ. ಅಡ ಇಟ್ಟಿದ್ದ ಚಿನ್ನ ವಾಪಸ್ಸಾದಾಗ ಅದು ಒಂದೇ ಗುಣಮಟ್ಟಕ್ಕೆ ಇಳಿದಿತ್ತು. ಬಿಕ್ಕಟ್ಟಿನಿಂದ ನಾವು ಹೊರಬಿದ್ದಾಕ್ಷಣ ಸರ್ಕಾರ ಆ ಚಿನ್ನವನ್ನು ಆರ್.ಬಿ.ಐಗೆ ಮಾರಾಟ ಮಾಡಿ, ಅದು ಆರ್.ಬಿ.ಐನ ನಿಕ್ಷೇಪ ನಿಧಿಯ ಭಾಗವಾಯಿತು.

ಬಿಕ್ಕಟ್ಟಿನ ಕಾಲಕ್ಕೆ ನಮ್ಮನ್ನು ಕಾಪಾಡಿದ್ದು ಚಿನ್ನವೇ. ಪಿವಿ ನರಸಿಂಹರಾವು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿ ಅರ್ಥವ್ಯವಸ್ಥೆಯನ್ನು ಹದ್ದುಬಸ್ತಿಗೆ ತರುವವರೆಗೂ ಅತ್ಯವಶ್ಯಕ ವ್ಯವಹಾರಕ್ಕೆ ಇದು ಉಪಯೋಗಕ್ಕೆ ಬಂತು. ಒಂದು ಸ್ಥಿರ ಸರ್ಕಾರ ಬಂತೆಂಬುದು ಮನದಟ್ಟಾದಾಗ ಐಎಂಎಫ್, ವಿಶ್ವಬ್ಯಾಂಕು, ಏಷಿಯಾ ಅಭಿವೃದ್ಧಿ ಬ್ಯಾಂಕು (ಎಡಿಬಿ) ಎಲ್ಲರೂ ಆರ್ಥಿಕ ಸಹಾಯ ಮಾಡಿದರು. ನಾವು ಬಿಕ್ಕಟ್ಟಿನಿಂದ ಹೊರಬಿದ್ದೆವು. ಆಗ ಪಿವಿ ಸರ್ಕಾರ ಆರಂಭಿಸಿದ ಆರ್ಥಿಕ ಸುಧಾರಣೆಯಿಂದಾಗಿ ನಾವು ನಮ್ಮ ಕಾಲಮೇಲೆ ನಿಂತೆವು. ಆ ಸುಧಾರಣೆ ಆರ್ಥಿಕ ಚರಿತ್ರೆಯಲ್ಲಿ ಒಂದು ಹೊಸ ಪರ್ವಕ್ಕೆ ನಾಂದಿಯಾಯಿತು. ಆರ್ಥಿಕ ಬಲಹೀನತೆಯನ್ನು ದೂರವಾಗಿಸಿ ಶಕ್ತಿಶಾಲಿ ದೇಶವಾಗುವುದಕ್ಕೆ ಅವಶ್ಯವಾದ ಆತ್ಮವಿಶ್ವಾಸ ನಮಗೆ ಬಂತು. ಈ ಬದಲಾವಣೆಗೆ ರಾಜಕೀಯ ವಾತಾವರಣ ಒದಗಿಸಿಕೊಟ್ಟ ಘನತೆ ಪ್ರಧಾನಮಂತ್ರಿ ಪಿವಿ ನರಸಿಂಹಾರಾವು ಅವರಿಗೇ ಸಲ್ಲುತ್ತದೆ!

(ಪಿವಿ ನರಸಿಂಹಾರಾವು)

ಕಷ್ಟ ನಿವಾರಿಸಿದ ಪ್ರಮುಖರು

ಆರ್ಥಿಕ ವ್ಯವಹಾರಗಳ ವಿಭಾಗದಲ್ಲಿ 1990ರ ಏಪ್ರಿಲ್‌ನಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇರಿ, ಮೇ 1993ರ ವರೆಗೆ ಅಲ್ಲೇ ಇದ್ದೆ. ಮೂರು ವರ್ಷಗಳಲ್ಲಿ ಮೂವರು ಪ್ರಧಾನಿಗಳು ಬಂದರು, ಮೂವರು ವಿತ್ತಮಂತ್ರಿಗಳಾದರು, ಮೂರು ವಿತ್ತ ಕಾರ್ಯದರ್ಶಿಗಳು ಹಾಗೆಯೇ ಮುಖ್ಯ ಆರ್ಥಿಕ ಸಲಹೆಗಾರರೂ ಬದಲಾದರು. ಅಷ್ಟು ಜನ ಬದಲಾದರೂ, ನಾನು ಸ್ಥಿರವಾಗಿದ್ದು ಕೆಲವು ತೀರ್ಮಾನಗಳಲ್ಲಿ ಪ್ರಮುಖಪಾತ್ರವನ್ನು ವಹಿಸಿ, ಆರ್ಥಿಕ ಇಲಾಖೆಯಲ್ಲಿ ಆದ ಮುಖ್ಯ ಚರ್ಚೆಗಳಲ್ಲಿ ಭಾಗವಹಿಸಿದ್ದೆ. ಸಂದರ್ಭಕ್ಕನುಸಾರವಾಗಿ ಕೊಟ್ಟ ಸಲಹೆ, ವಿಶ್ಲೇಷಣೆ ವಿಭಿನ್ನ ಸಾಧ್ಯತೆಗಳ ಪರಿಶೀಲನೆಗಳನ್ನು ಉಪಯೋಗಿಸಿ, ಸರಿಯಾದ ನಿರ್ಧಾರವನ್ನು ಕೈಗೊಂಡು ಅವುಗಳನ್ನು ಜಾರಿಮಾಡಿದೆವು, ಈ ಎಲ್ಲದಕ್ಕೂ ವಿಶ್ಲೇಷಣೆ ಮುಖ್ಯ. ಪ್ರಮುಖ ಸ್ಥಾನದಲ್ಲಿರುತ್ತಿದ್ದ ಮಂತ್ರಿಗಳು ಮತ್ತು ಕಾರ್ಯದರ್ಶಿಗಳು ಬದಲಾದರೂ ನಾನು ಅಲ್ಲೇ ಇದ್ದೆ ಎಂಬುದು ಎಲ್ಲರಿಗೂ ಗೊತ್ತಿತ್ತು.

ಹಾಗೆಯೇ, ಆರ್ಥಿಕ ವಿಷಯಗಳಲ್ಲಿ ನನ್ನ ಪರಿಣತಿಯ ಬಗೆಗಿದ್ದ ನಂಬಿಕೆಯಿಂದಾಗಿ ನನ್ನ ಅಭಿಪ್ರಾಯಕ್ಕೆ ಬೆಲೆಕೊಡುತ್ತಿದ್ದರು. ಕಷ್ಟಕಾಲಕ್ಕೆ ಅತ್ಯುತ್ತಮ ನಾಯಕತ್ವವನ್ನು ಗವರ್ನರ್ ವೆಂಕಿಟರಮಣನ್ ತೋರಿದ್ದರು. ಸಂದರ್ಭಕ್ಕೆ ತಕ್ಕ ಬುದ್ಧಿಮತ್ತೆಯನ್ನು ಉಪಯೋಗಿಸಿ ರಂಗರಾಜನ್ ಕೆಲಸ ಮಾಡಿದ್ದರು. ಬಿಕ್ಕಟ್ಟು ತಳಮುಟ್ಟಿದಾಗ ಅದಕ್ಕೊಂದು ಗತಿ ಕಾಣಿಸಿ ಸುಧಾರಣೆಯ ಹಳಿಯಮೇಲೆ ಓಡುವಂತೆ ಯಶವಂತ ಸಿನ್ಹಾ ಮಾಡಿದರು. ಇವರೆಲ್ಲಾ ಇದ್ದದ್ದು ದೇಶದ ಅದೃಷ್ಟವೆಂದೇ ಹೇಳಬೇಕು.

ಬಿಕ್ಕಟ್ಟಿಗೆ ಆರ್ಥಿಕ–ರಾಜಕೀಯ ಕಾರಣಗಳಿದ್ದುವು. ಅದರಿಂದ ಹೊರಬಿದ್ದು ಪ್ರಗತಿ ಸಾಧಿಸಲು ಸುಧಾರಣೆಯಾಗಬೇಕಿತ್ತು. ಅದನ್ನು ರೂಪಿಸಲು ಮನಮೋಹನ ಸಿಂಗ್ ನಾಯಕತ್ವದಲ್ಲಿ ತಜ್ಞರಿದ್ದರು. ಈ ಸುಧಾರಣೆಯನ್ನು ಜಾರಿಮಾಡಲು ರಾಜಕೀಯ ಬೆಂಬಲ, ಧೈರ್ಯ ಹಾಗೂ ಮುಂದಾಲೋಚನೆಯನ್ನು ಪಿವಿ ತೋರಿದರು. ಅಷ್ಚೊಂದು ಆತ್ಮವಿಶ್ವಾಸ ತೋರಿದ ಪಿವಿ ಚರಿತ್ರೆಯಲ್ಲಿ ಉತ್ತಮ ಪ್ರಧಾನಿಯಾಗಿ ನಿಲ್ಲುತ್ತಾರೆ! ಅವರ ದೃಷ್ಟಿಕೋನಕ್ಕೆ ತಕ್ಕ ಸುಧಾರಣೆಯನ್ನು ರೂಪಿಸಿದ ಸಾರಥಿಯಾಗಿ ಮನಮೋಹನ ಸಿಂಗ್ ನಿಲ್ಲುತ್ತಾರೆ.