ಮನೆಯಲ್ಲಿ ಬಹಳ ತುಂಟನಾಗಿದ್ದ ನನ್ನ ಕಾಟಕ್ಕೆ ನಮ್ಮಜ್ಜಿ ಇವನ್ನ ‘ಇಸ್ಕೂಲಿಗೆ ‘ಸೇರುಸ್ಬೇಕು ಮನೇಗಿದ್ರೆ ಯಾವಾಗಲೂ ಜಗಳ ಮಾಡ್ತಿರ್ತಾನೆ” ಎಂದು ದೂರು ಹೇಳುತ್ತಿದ್ದಳು. ನಮ್ಮಪ್ಪ ”ಆರು” ವರ್ಷದವರೆಗೂ ಇಸ್ಕೂಲಿಗೆ ಸೇರುಸ್ಕಮಲ್ಲ ಸುಮ್ನೆ ಯಾಕ್ ಬಡ್ಕೋಮ್ತೀಯ” ಎಂದು ಆಗಾಗ ಅಜ್ಜಿಯನ್ನೆ ಗದರಿಸುತ್ತಿದ್ದ. ಇವನ ವಾರಗೆಯವರೆಲ್ಲಾ ಇಸ್ಕೂಲಿಗೆ ಹೋಗ್ತಾರೆ ಇವನ ಕಾಟ ನಮ್ಗೆ ತಡೆಯೋಕಾಗಲ್ಲ ಎಂದು ಮನೆಯವರೆಲ್ಲರೂ ಹೇಳಿದಾಗ ಅಪ್ಪನಿಗೆ ಇದೆ ಸರಿ ಅನ್ನಿಸಿ ಇಸ್ಕೂಲಿಗೆ ಸೇರ್ಸೆಬಿಡೋಣ ಎಂದು ಶಾಲೆಗೆ ಕರೆದುಕೊಂಡು ಹೋಗೆಬಿಟ್ರು. ನನಗೊ ಒಳಗೆ ಢವ ಢವ…
ಮಾರುತಿ ಗೋಪಿಕುಂಟೆ ಬರೆಯುವ ಹೊಸ ಸರಣಿ “ಬಾಲ್ಯದೊಂದಿಗೆ ಪಿಸುಮಾತು” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗಲಿದೆ

ನನ್ನ ಬಾಲ್ಯದ ನೆನಪುಗಳು ನನ್ನನ್ನು ಆಗಾಗ ಎಚ್ಚರಿಸುತ್ತವೆ ಮೈದಡವಿ, ನನ್ನಲ್ಲಿ ಹೊಸ ಚೈತನ್ಯವನ್ನು ತರುತ್ತವೆ. ನನ್ನ ನೆನಪಿನ ಹರವು ದೊಡ್ಡದು. ನಾನು ಹುಟ್ಟಿದ ಊರು ಬಯಲು ಸೀಮೆಯ ಒಂದು ಚಿಕ್ಕ ಹಳ್ಳಿ. ಇಲ್ಲಿ ಎತ್ತ ನೋಡಿದರೂ ಬಯಲು… ಬಯಲು.. ಹಸಿವಿನ ಹಾಹಾಕಾರದ್ದೆ ಇಲ್ಲಿ ಮೇಲುಗೈ, ಇಲ್ಲಿ ಕೂಲಿ ಮಾಡಿದರಷ್ಟೆ ಕಾಳು, ಕಾಳು ತಂದರಷ್ಟೆ ಕೂಳು, ಕೂಳು ತಿಂದರಷ್ಟೆ ಬಾಳು ಬದುಕು. ಇಂತಹುದೆ ನೆನಪು ನನ್ನ ಬಾಲ್ಯದಲ್ಲಿ ಮರೆಯಲಾಗದಂತಹದು.

ನನಗೆ ಚೆನ್ನಾಗಿ ನೆನಪಿದೆ ನನಗಾಗ ಐದು ವರ್ಷವಿರಬೇಕು. ನನ್ನ ಮನೆಯು ನನ್ನ ತಾತ ಕಟ್ಟಿಸಿದ ಹಳೆಯ ಯಂಟೆಯ ಮನೆ. ಅದನ್ನು ಹದಿನಾರು ಗೂಟದ ಮನೆಯೆಂದೆ ಕರೆಯುತ್ತಾರೆ. ಬಹುತೇಕ ಆ ಕಾಲದ ಮನೆಗಳನ್ನು ಇದೇ ರೀತಿ ಕಟ್ಟುತ್ತಿದ್ದರು. ಅದಕ್ಕೆ ಯಾವ ವಾಸ್ತವು ಇರುತ್ತಿರಲಿಲ್ಲ ಬದುಕುವುದಷ್ಟೆ ವಾಸ್ತವ. ಇಂತಹ ಮನೆಗಳಲ್ಲಿ ಕುಟುಂಬದ ಸದಸ್ಯರ ಜೊತೆಗೆ ಆತ ಸಾಕುವ ಪ್ರಾಣಿಗಳಿಗೂ ಆ ಮನೆಯಲ್ಲಿಯೇ ವಾಸ. ಇಂತಹ ‘ಜಂತೆಮನೆ’ ಎಂದು ಕರೆಯುವುದು ವಾಡಿಕೆ ಗರಗಸದಿಂದಲೇ ಕೊಯ್ದ ಮರದ ತುಂಡುಗಳನ್ನು ಅಡ್ಡಡ್ಡಲಾಗಿ ಜೋಡಿಸಿ ಅದಕ್ಕೆ ಸಣ್ಣ ಪುಟ್ಟ ಕಟ್ಟಿಗೆಯನ್ನು ಹೊಂದಿಸಿ, ಅದರ ಮೇಲೆ ನೀರಿಳಿಯದ ಹಾಗೆ ‘ಕರ್ಲು ‘ಮಣ್ಣನ್ನು ಹಾಕಿ ಮೇಲ್ಛಾವಣಿಯನ್ನು ಮುಚ್ಚಿ ಗಾಳಿ ಬೆಳಕಿಗಾಗಿ ‘ಗವಾಕ್ಷಿ’ಯನ್ನು ತೆರೆಯುತ್ತಿದ್ದರು. ಇಂತಹ ಮನೆಗಳಲ್ಲಿ ಅಡುಗೆಮನೆಯ ಮುಂದೆ ‘ಪಡಸಾಲೆ’ ಗೆಂದೆ ಒಂದಿಷ್ಟು ಜಾಗ ಬಿಟ್ಟಿರುತ್ತಿದ್ದರು. ನಂತರದ ಭಾಗ ‘ದನದಕೊಟ್ಟಿಗೆ’ಗೆ ಮೀಸಲು. ಹೊರಭಾಗದ ಗೋಡೆಗಳಿಗೆ ಕಲ್ಲಿನ ಒಂದು ವರಸೆ ಕಟ್ಟಿ ಒಳಭಾಗಕ್ಕೆ ಯಂಟೆಯ ಇಟ್ಟಿಗೆ ಇಟ್ಟು ಮನೆ ನಿರ್ಮಾಣ ಮಾಡುತ್ತಿದ್ದರು. ಅದರಲ್ಲಿ ನನ್ನಜ್ಜನು ಬದುಕಿದ್ದ, ನಮ್ಮಪ್ಪನು ಬದುಕಿದ, ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಸಣ್ಣ ಪುಟ್ಟ ರಿಪೇರಿ ಬಿಟ್ಟರೆ ಆ ಮನೆ ಹಾಗೆಯೇ ಇದೆ.

ಆ ಮನೆಗೆ ಇದ್ದದ್ದು ಒಂದೆ ದೊಡ್ಡದಾದ ಬಾಗಿಲು ಅದಕ್ಕೆ ತಕ್ಕಂತೆ ‘ಹೊಸ್ತಿಲು ‘ಆ ಹೊಸ್ತಿಲು ನನ್ನ ಬಾಲ್ಯಕ್ಕೊಂದು ಮಧುರ ನೆನಪು. ಅಪ್ಪ ಅಮ್ಮ ದಿನಾಲು ಕೂಲಿ ಮಾಡಲು ಹೋಗುತ್ತಿದ್ದರು. ಮನೆತುಂಬ ಬಡತನದ್ದೆ ಸದ್ದು. ಹಾಗಾಗಿ ಇದು ಅನಿವಾರ್ಯವೂ ಆಗಿತ್ತು. ಬೆಳಿಗ್ಗೆ ನಮಗೆ ಒಂದಿಷ್ಟು ಊಟವನ್ನು ಉಣಿಸಿ ಇಬ್ಬರೂ ಕೂಲಿಗೆ ಹೋಗುತ್ತಿದ್ದರು. ನಾನು ನನ್ನ ತಮ್ಮ ಇಬ್ಬರೆ ಮನೆಯಲ್ಲಿರಬೇಕಾಗಿತ್ತು, ಜೊತೆಗೆ ವಯಸ್ಸಾಗಿದ್ದ ಅಜ್ಜಿ ನಮ್ಮನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಳು. ಅಕ್ಕಂದಿರು ಶಾಲೆಗೆ ಹೋಗಿರುತ್ತಿದ್ದರು. ಉಣ್ಣಲು ಕೊರತೆ ಎಂದಮೇಲೆ ಉಡಲು ಕೊರತೆಯೆ? ಅರೆಬರೆ ಬಟ್ಟೆ ನಮ್ಮ ದೇಹವನ್ನು ಮುಚ್ಚಿ ಮರ್ಯಾದೆಯನ್ನು ಕಾಪಾಡುತ್ತಿತ್ತು. ನಾನು ನನ್ನ ತಮ್ಮ ಇಬ್ಬರೆ ಆಟವಾಡಿಕೊಂಡಿರುತ್ತಿದ್ದೆವು. ನಮ್ಮನ್ನು ನೋಡಿಕೊಳ್ಳುವುದರಲ್ಲಿಯೆ ಅಜ್ಜಿ ಬಸವಳಿದು ಇನ್ನಷ್ಟು ಅಜ್ಜಿಯಾದಳು.

ಆ ದಿನದ ನೆನಪು ಮರೆಯಲಾಗದ್ದು. ಅಮ್ಮ ಮನೆಯಲ್ಲಿ ಮೈ ಹುಷಾರಿಲ್ಲ ಎಂದು ಮನೆಯಲ್ಲಿಯೇ ಉಳಿದುಕೊಂಡಿದ್ದಳು. ಅಪ್ಪ ಎಂದಿನಂತೆ ಕೂಲಿಗೆ ಊರಿನ ಗೌಡನ ಹೊಲದಲ್ಲಿ ‘ಹೊಗೆಸೊಪ್ಪು’ ಕೀಳಲೆಂದು ಹೋಗಿದ್ದರು. ಆ ದಿನ ವ್ಯಾಪಾರಕ್ಕೆ ಬಂದಿದ್ದಾರೆ ಎಂಬ ಕಾರಣಕ್ಕೆ ನೀರು ಬಿಟ್ಟು ನೆನೆಹಾಕಿದ ಹೊಗೆಸೊಪ್ಪನ್ನೆಲ್ಲಾ ಕೀಳಬೇಕೆಂದು ಕತ್ತಲಾದರೂ ಬಿಡದೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂದೆ ಅಮ್ಮ ತಿಳಿದಿದ್ದಳು. ನಮಗೆ ಬೆಳಿಗ್ಗೆಯೆ ಅನ್ನ ತಿನಿಸಿದ್ದಳು. ಅಮ್ಮ ಊಟ ಮಾಡಿದಳೊ ತಿಳಿಯದು. ಬಾಲ್ಯವೆ ಅಂಥದ್ದು. ಹೊಟ್ಟೆಗೆ ಬಿದ್ದಮೇಲೆ ಕುಣಿದಾಡುವುದಷ್ಟೆ. ಯಾವ ಕಲ್ಮಶವೂ ಇಲ್ಲದ ಒಳಿತು ಕೆಡುಕು ಯಾವುದೂ ತಿಳಿಯದ ನಿರ್ಮಲ ಮನಸ್ಸಲ್ಲವೆ ಬಾಲ್ಯದ್ದು. ಮಧ್ಯಾಹ್ನಕ್ಕೆ ಊಟವೂ ಇಲ್ಲದೆ ಒಂದಿಷ್ಟು ಟೀ ಮಾಡಿಕೊಟ್ಟು ಹಸಿವನ್ನು ಮರೆಸಿದ್ದಳು ಅಮ್ಮ. ಆದರೆ ರಾತ್ರಿಯಾದರೂ ಅಪ್ಪನು ಬರಲಿಲ್ಲವಾದ್ದರಿಂದ ನಮಗೆ ರಾತ್ರಿ ಊಟವೂ ಸಿಗಲಿಲ್ಲ. ನಾವು ಊಟಕ್ಕಾಗಿ ಅಪ್ಪನ ಇದಿರು ನೋಡುತ್ತಿದ್ದೆವು. ಅದು ಬಾಗಿಲ ಹೊಸ್ತಿಲ ಮೇಲೆ ಕುಳಿತು. ನನ್ನ ಜೊತೆಗೆ ನನ್ನ ತಮ್ಮನೂ ಕುಳಿತಿರುತ್ತಿದ್ದ. ಒಮ್ಮೆ ಅಪ್ಪ ಬಂದರೆ ಸಾಕು ಎಂದು ದಾರಿಯನ್ನು ನೋಡುತ್ತಿದ್ದೆವು. ನಂತರ ಹೊಸ್ತಿಲೆ ನಮ್ಮಿಬ್ಬರಿಗೆ ಆಟವಾಡಲು ಬಸ್ಸು ಆಗುತ್ತಿತ್ತು. ಅದರ ಮೇಲೆ ಕುಳಿತು ಒಮ್ಮೆ ನಾನು ಬಸ್ಸು ಬಿಡುವುದು ಒಮ್ಮೆ ತಮ್ಮ ಬಸ್ಸು ಬಿಡುವುದು. ಹೀಗೆ ನಡೆಯುತ್ತಿತ್ತು. ಆಟದಲ್ಲಿ ಮುಳುಗಿದ್ದಾಗ ನಮಗೆ ಯಾವ ಹಸಿವೂ ಕಾಣಿಸುತ್ತಿರಲಿಲ್ಲ. ನಮಗಷ್ಟೆ ಅಲ್ಲಾ, ಎಲ್ಲರ ಬಾಲ್ಯದಲ್ಲೂ ಹೀಗೆಯೆ ಆಗುತ್ತದೆ. ನಮ್ಮ ಜಾಗರೂಕತೆಗೆ ಅಜ್ಜಿ ಯಾವಾಗಲೂ ಇರುತ್ತಿದ್ದಳು.

ನಾನು ನನ್ನ ತಮ್ಮ ಇಬ್ಬರೆ ಮನೆಯಲ್ಲಿರಬೇಕಾಗಿತ್ತು, ಜೊತೆಗೆ ವಯಸ್ಸಾಗಿದ್ದ ಅಜ್ಜಿ ನಮ್ಮನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಳು. ಅಕ್ಕಂದಿರು ಶಾಲೆಗೆ ಹೋಗಿರುತ್ತಿದ್ದರು. ಉಣ್ಣಲು ಕೊರತೆ ಎಂದಮೇಲೆ ಉಡಲು ಕೊರತೆಯೆ? ಅರೆಬರೆ ಬಟ್ಟೆ ನಮ್ಮ ದೇಹವನ್ನು ಮುಚ್ಚಿ ಮರ್ಯಾದೆಯನ್ನು ಕಾಪಾಡುತ್ತಿತ್ತು.

ಇವತ್ತು ಅಮ್ಮನೆ ಮನೆಯಲ್ಲಿದ್ದದ್ದು ನಮಗೂ ಖುಷಿಯಾಗಿತ್ತು. ಹಸಿವಿನ ಅರಿವು ಉಂಟಾಗಿ ಅಮ್ಮನನ್ನೆ ಕೇಳಿದೆವು.. ಅಪ್ಪ ಇನ್ನು ಯಾಕೆ ಬರಲಿಲ್ಲವೆಂದು ಪೀಡಿಸಿದೆವು, ಕಾಡಿಸಿದೆವು, ಗೋಳಾಡಿಸಿದೆವು. ಅಮ್ಮನು ಒಳಗೊಳಗೆ ತಳಮಳಗೊಂಡಳು, ನೊಂದಳು ಎಂಬುದು ನಮಗ್ಹೇಗೆ ತಿಳಿಯಬೇಕು? ಅದಕ್ಕೇ ಬಾಲ್ಯವೆ ಚಂದ ಎನಿಸುವುದು. ಪ್ರತಿಯೊಬ್ಬರಿಗೂ ಬಾಲ್ಯ ಮತ್ತೊಮ್ಮೆ ಮರುಕಳಿಸಬಾರದೆ ಎನಿಸುವುದು ಸತ್ಯವೂ ಹೌದು. ಈ ಜಂಜಾಟದ ಬದುಕಿನಲ್ಲಿ ಬಾಲ್ಯವೆ ಮಧುರ ಅಲ್ಲವೆ. ಇದೆಲ್ಲವೂ ನಮಗೀಗ ತಿಳಿಯುತ್ತದೆ. ಆದರೆ ಅಂದು ಇದ್ಯಾವುದು ತಿಳಿಯದೆ ಹಸಿವಾದಾಗ ಅನ್ನವನ್ನಷ್ಟೆ ಕೇಳುವ ಖುಷಿಯಾದಾಗ ಬಾಯಿತುಂಬ ನಗುವ ಬಾಲ್ಯಕ್ಕೇನು ಗೊತ್ತು ಅಮ್ಮನ ಸಂಕಟ. ರಾತ್ರಿಯಾಗುತ್ತಿದ್ದಂತೆ ಹಸಿವಿನ ಸಂಕಟವೂ ಜಾಸ್ತಿಯಾಯಿತು. ಮೊದಮೊದಲು ಅಮ್ಮನ ಗದರುವಿಕೆಗೆ ಸುಮ್ಮನಾಗಿ ಆಟದಲ್ಲಿ ಮುಳುಗುತ್ತಿದ್ದ ನಾವು ಹಸಿವು ಜಾಸ್ತಿಯಾಗುತ್ತಿದ್ದಂತೆ ಅಳುವುದಕ್ಕೆ ಪ್ರಾರಂಭ ಮಾಡಿದೆವು. ಅಮ್ಮನ ಸಂಕಟವೂ ಜಾಸ್ತಿಯಾಗಿ ಅಪ್ಪ ಬರದೆ ಇರುವ ಕಾರಣವೂ ತಿಳಿಯದೆ, ಆ ಸಂಕಟದ ಜೊತೆಗೆ ನಮ್ಮ ಹಸಿವಿನ ಸಂಕಟವೂ ಸೇರಿ ಇದೆ ಚಡಪಡಿಕೆಯಲ್ಲಿ ಕೋಪವು ಬಂದು ನಮಗೊಂದೆರಡು ”ಏಟು” ಬಿದ್ದವು. ಮೊದಲೆ ಹಸಿದಿದ್ದ ನಾವು ಇನ್ನೂ ಜೋರಾಗಿ ಅಳುವುದಕ್ಕೆ ಶುರು ಮಾಡಿದೆವು. ಅಮ್ಮನ ಕಣ್ಣಲ್ಲಿಯೂ ನೀರ ಹನಿಗಳು ಜಿನುಗಲಾರಂಭಿಸಿದವು.

ನಾವು ಅತ್ತು – ಅತ್ತು ಸುಮ್ಮನಾದೆವು. ಆದರೆ ಹಸಿವು ಸುಮ್ಮನಿರಬೇಕಲ್ಲ. ಬಾಗಿಲ ಹೊಸ್ತಿಲು ಮೇಲೆಯೆ ಕುಳಿತು ಮೂಗು ಮತ್ತು ಕಣ್ಣುಗಳನ್ನು ವರೆಸಿಕೊಳ್ಳುತ್ತ ಕುಳಿತೆವು. ಆಗಾಗ ಬರುತ್ತಿದ್ದ ದುಃಖದ ಬಿಕ್ಕಳಿಕೆಯೂ ಹಸಿವನ್ನು ಮರೆಸಲಿಲ್ಲ. ಖಾಲಿ ಹೊಟ್ಟೆಯಲ್ಲಿ ಅಪ್ಪನ ದಾರಿಯನ್ನೆ ನೋಡುತ್ತ ಕುಳಿತೆವು. ಅಪ್ಪನ ದಾರಿಯೂ ಕತ್ತಲಾಯಿತು. ಉದರದೊಳಗಿನ ಹಸಿವು ಬೆತ್ತಲಾಗಿ ಕುಣಿಯುತ್ತಿತ್ತು. ಅಪ್ಪ ಬರಲೇ ಇಲ್ಲ. ಹೀಗೆ ಸಮಯ ಕಳೆಯುತ್ತಿರುವಾಗಲೆ ಗೌಡನ ಮನೆಯ ಆಳು ‘ಊಟದ ಬುತ್ತಿ’ ತಂದನು. ಆತ ಇನ್ನು ಬರುವಾಗಲೆ ನಮ್ಮ ಕಣ್ಣುಗಳು ಅರಳಿದವು. ಸಾಮಾನ್ಯವಾಗಿ ಅಪ್ಪ ಅಮ್ಮ ಇಬ್ಬರೂ ಕೂಲಿಗೆ ಹೋದವರು ರಾತ್ರಿಯ ಊಟವನ್ನು ಮನೆಗೆ ತರುತ್ತಿದ್ದರು. ಅದಕ್ಕಾಗಿಯೇ ನಾವು ಹೊಸ್ತಿಲ ಮೇಲೆಯೆ ಕುಳಿತು ಕಾಯುತ್ತಿದ್ದದ್ದು ಅನ್ನವ ಉಣ್ಣುವ ತವಕಕ್ಕೆ ಮನಸ್ಸು ಹಾತೊರೆಯುತ್ತಿದ್ದದ್ದು. ಮಕ್ಕಳ ಹಸಿವನ್ನು ತಿಳಿದ ಅಮ್ಮ ಊಟವನ್ನೇನೊ ಬಡಿಸಿದಳು. ಅಪ್ಪನ ಬಗ್ಗೆ ತಿಳಿಯಲಿಲ್ಲ ಎಂದುಕೊಳ್ಳುವಾಗಲೇ ‘ಬುತ್ತಿಕೊಟ್ಟವನುʼ “ಇನ್ನೊಂದಿಷ್ಟು ಕೆಲಸವಿತ್ತು ಇವರಪ್ಪ ಆಮೇಲೆ ಬರ್ತಾರೆ” ಎಂದು ಹೇಳಿಹೋಗಿದ್ದ. ಹಾಗಾಗಿ ನಾವೆಲ್ಲರೂ ನಿರಾಳವಾಗಿ ಊಟ ಮಾಡಿದೆವು. ಆದರೆ ಅಮ್ಮನ ಮುಖದ ಮೇಲಿನ ಆತಂಕದ ಗೆರೆಗಳು ಮನೆ ಮಾಡಿದ್ದವು.

ನಂತರ ತಿಳಿದದ್ದೇನೆಂದರೆ ಎಂದಿನಂತೆ ಕೆಲಸಕ್ಕೆ ಹೋದ ಅಪ್ಪ ಹೊಲದಲ್ಲಿ ಕೆಲಸ ಮಾಡುವಾಗ ಆ ಹೊಗೆಸೊಪ್ಪಿನ ವಾಸನೆಗೆ ಮೂರ್ಛೆಹೋಗಿದ್ದಾನೆ. ಅಲ್ಲಿದ್ದವರೆಲ್ಲಾ ಗಾಬರಿಯಾಗಿ ನೀರು ಚುಮುಕಿಸಿ ಎಚ್ಚರ ಗೊಳಿಸಿದ್ದಾರೆ. ಸ್ವಲ್ಪ ಸುಧಾರಿಸಿಕೊಂಡ ಮೇಲೆ ಕೆಲಸ ಮಾಡಬಹುದೆಂದು ನಂತರ ಕೆಲಸಕ್ಕೆ ಕೈ ಹಾಕಿದ್ದಾರೆ. ಮತ್ತೊಮ್ಮೆ ಆ ಹೊಗೆಸೊಪ್ಪಿನ ವಾಸನೆಗೆ ಹೊಟ್ಟೆಯೆಲ್ಲಾ ತೊಳಸಿದಂತಾಗಿ ವಿಶ್ರಾಂತಿಗಾಗಿ ಮರದಡಿ ಕುಳಿತುಕೊಂಡಿದ್ದಾರೆ. ಗೌಡನು ಇನ್ನೇನು ನೀನು ಕೆಲಸ ಮಾಡುವುದು ಬೇಡ ಎಂದರೂ ಅಪ್ಪ ಸುಧಾರಿಸಿಕೊಂಡ ಕೆಲಸ ಮಾಡಿದ್ದಾನೆ. ವಾಪಸ್ ಹೋದರೆ ಈ ದಿನದ ಊಟವೂ ಮಕ್ಕಳಿಗೆ ದೊರೆಯುವುದಿಲ್ಲ ಎಂಬ ಆತಂಕ ಆತನನ್ನು ಕಾಡಿರಬೇಕು. ಸುಧಾರಿಸಿಕೊಂಡೆ ತನ್ನ ಪಾಲಿನ ಕೆಲಸವನ್ನು ಮಾಡಿ ಮುಗಿಸಿದ್ದ. ಸಮಯವಾಗುತ್ತೆ ಅನ್ನೊ ಕಾರಣಕ್ಕೆ ಗೌಡನ ಆಳು ಊಟದ ಬುತ್ತಿಯನ್ನು ತಂದಿದ್ದನು. ಇದೆಲ್ಲವನ್ನು ರಾತ್ರಿ ತಡವಾಗಿ ಬಂದ ಅಪ್ಪ ಅಮ್ಮನ ಹತ್ತಿರ ಹೇಳಿದ್ದರೆಂದು ಅಮ್ಮ ನಂತರದ ದಿನಗಳಲ್ಲಿ ಹೇಳಿದ್ದಳು. ನನ್ನ ಬಾಲ್ಯದ ಬಹುತೇಕ ದಿನಗಳು ಹೀಗೆಯೆ ಮನೆಯ ಒಳಗೆ ಕಳೆದಿದ್ದವು.

ಮನೆಯಲ್ಲಿ ಬಹಳ ತುಂಟನಾಗಿದ್ದ ನನ್ನ ಕಾಟಕ್ಕೆ ನಮ್ಮಜ್ಜಿ ಇವನ್ನ ‘ಇಸ್ಕೂಲಿಗೆ ‘ಸೇರುಸ್ಬೇಕು ಮನೇಗಿದ್ರೆ ಯಾವಾಗಲೂ ಜಗಳ ಮಾಡ್ತಿರ್ತಾನೆ” ಎಂದು ದೂರು ಹೇಳುತ್ತಿದ್ದಳು. ನಮ್ಮಪ್ಪ ”ಆರು” ವರ್ಷದವರೆಗೂ ಇಸ್ಕೂಲಿಗೆ ಸೇರುಸ್ಕಮಲ್ಲ ಸುಮ್ನೆ ಯಾಕ್ ಬಡ್ಕೋಮ್ತೀಯ” ಎಂದು ಆಗಾಗ ಅಜ್ಜಿಯನ್ನೆ ಗದರಿಸುತ್ತಿದ್ದ. ಇವನ ವಾರಗೆಯವರೆಲ್ಲಾ ಇಸ್ಕೂಲಿಗೆ ಹೋಗ್ತಾರೆ ಇವನ ಕಾಟ ನಮ್ಗೆ ತಡೆಯೋಕಾಗಲ್ಲ ಎಂದು ಮನೆಯವರೆಲ್ಲರೂ ಹೇಳಿದಾಗ ಅಪ್ಪನಿಗೆ ಇದೆ ಸರಿ ಅನ್ನಿಸಿ ಇಸ್ಕೂಲಿಗೆ ಸೇರ್ಸೆಬಿಡೋಣ ಎಂದು ಶಾಲೆಗೆ ಕರೆದುಕೊಂಡು ಹೋಗೆಬಿಟ್ರು. ನನಗೊ ಒಳಗೆ ಢವ ಢವ… ಶಾಲೆಯ ಒಳಗೆ ಕಾಲಿಟ್ಟೆವು. ಈಗಾಗಲೆ ಸೇರುವುದಕ್ಕೆ ಬಂದವರನ್ನು ಒಬ್ಬೊಬ್ಬರನ್ನೇ ಕರೆದು ಬಲಗೈಯಿಂದ ತಲೆ ಮೇಲಾಸಿ ಕಿವಿಯನ್ನು ಅಂಗೈಯಿಂದ ಮುಟ್ಟಬೇಕು ಹಾಗೆ ಮಾಡಿದರೆ ಒಂದನೆ ತರಗತಿಗೆ ಅರ್ಹ ಎಂದೆ ಭಾವಿಸುತ್ತಿದ್ದರು. ಕೆಲವರಿಗೆ ಸ್ವಲ್ಪ ತಾಗುತ್ತಿತ್ತು ಕೆಲವರಿಗೆ ಪೂರ್ತಿ ಸಿಗುತ್ತಿತ್ತು ಹೆಚ್ಚು ಕಡಿಮೆ ವಯಸ್ಸು ಆರರ ಆಸುಪಾಸು ಇರುತ್ತಿತ್ತು. ಅವರಿಗೂ ಒಂದನೆ ತರಗತಿಗೆ ಮಕ್ಕಳು ಬೇಕಾಗಿತ್ತು, ಮನೆಗೂ ಮಕ್ಕಳ ಕಾಟ ತಪ್ಪಬೇಕಾಗಿತ್ತು. ಹಾಗಾಗಿ ಅಂದು ಅಂತೂ ಶಿಕ್ಷಣವೆಂಬ ಪ್ರಪಂಚದ ಪ್ರವೇಶ ಪಡೆದದ್ದಾಯಿತು.

ಅದು ನನ್ನನ್ನು ನಾ ಅರಿಯುವ ಆ ಮೂಲಕ ಜಗತ್ತಿನ ಆಗು – ಹೋಗುಗಳನ್ನು ತಿಳಿಯುವ ಇನ್ನಷ್ಟು ನನ್ನ ಬುದ್ದಿಗೆ ಸಾಣೆ ಹಿಡಿಯುವ ಅಕ್ಷರದ ಪ್ರಪಂಚಕ್ಕೆ ನಾನೊಬ್ಬ ಸದಸ್ಯನೂ ಆಗಿದ್ದೆ. ಅದರ ಜೊತೆಗೆ ಸರ್ಕಾರದ ಉಚಿತ ಬಟ್ಟೆಯ ನಮಗೆ ಸಿಕ್ಕು ಇನ್ನಿಲ್ಲದ ಖುಷಿಯಿಂದ ಮನೆಗೆ ಬಂದರೂ ಶಾಲೆಗೆ ಹೋಗ್ಬೇಕಲ್ಲ ಎಂಬ ಚಿಂತೆಯೂ ಇತ್ತು. ಪ್ರತಿ ಬಾಲ್ಯವೂ ಹೀಗೆ ಅನಿಸುತ್ತದೆ ಕೂಡ. ಮನೆಗೆ ಬಂದ ಮೇಲೆ ಅಜ್ಜಿ ಮಾತ್ರ ನಗುತ್ತಿದ್ದಳು. ಅವಳಿಗೂ ನಮ್ಮ ಚಾಕರಿ ಮಾಡಿ ಮಾಡಿ ಸಾಕಾಗಿರಬೇಕು. ಅಥವಾ ಮೊಮ್ಮಗ ಚೆನ್ನಾಗಿ ಓದಿ ಒಳ್ಳೆಯ ಮನುಷ್ಯನಾಗಲಿ ಅವನ ಬದುಕು ಹಸನಾಗಲಿ ಎಂಬ ಹಾರೈಕೆಯೂ ಜೊತೆಗಿರಬೇಕು. ಅಂತೂ ಒಂದನೆ ತರಗತಿಗೆ ದಾಖಲಾಗಿದ್ದಾಯಿತು. “ಶಾಲೆಯೆ ದೇವಾಲಯ ಕೈ ಮುಗಿದು ಒಳಗೆ ಬಾ..” ಎಂಬಂತೆ ಸ್ವಾಗತಕ್ಕೆ ತಲೆದೂಗುತ್ತ, ಹೊಸ್ತಿಲ ದಾಟಿ ಹೋಗುವಾಗೆಲ್ಲಾ ಅದರ ಮೇಲೆ ಕುಳಿತು ಅನ್ನಕ್ಕಾಗಿ ಕಾಯುತ್ತಿದ್ದದ್ದು ನೆನಪಾದಾಗಲೆಲ್ಲಾ ಹೊಸ್ತಿಲಿಗೂ ದುಃಖವಾಗಿರಬಹುದ ಗೊತ್ತಿಲ್ಲ. ಶಾಲೆಯೆಂಬ ಬೆರಗು, ಉತ್ಸಾಹ ಚಿಂತೆ ಎಲ್ಲವೂ ಎದೆಯಂಗಳದಲ್ಲಿ ಗರಿಬಿಚ್ಚಿ ಕುಣಿಯುತ್ತಿದ್ದವು. ಶಾಲೆಯ ಮೊದಲ ದಿನ ಹೇಗಿತ್ತು ನಂತರದ ದಿನಗಳು ಹೇಗೆಲ್ಲಾ ಬದಲಾದವು ಅವೆಲ್ಲವೂ ಇನ್ನೊಂದು ರೋಚಕ ಕಥೆ.

(ಮುಂದುವರೆಯುವುದು)