ಬೇಸಿಗೆಯ ಹಗಲೆಂದು ಬಣ್ಣಿಸಲೇ ನಿನ್ನ?

ಬೇಸಿಗೆಯ ಹಗಲೆಂದು ಬಣ್ಣಿಸಲೇ ನಿನ್ನ?
ಅದಕಿಂತ ನಿನ್ನ ಸೊಬಗಿನ ಹದ ಅಚಲ:
ಬಿಸಿಗಾಳಿ ನರಳಿಸುವದು ಸವಿ ಹೂಗಳ
ಕರಗುವದು ಬೇಸಿಗೆಯ ಕಾಲ ಬೇಗ:
ಸುಡುಸುಡುವ ಬಿಸಿಲಿನ ಝಳ ಆಗಾಗ
ಇಲ್ಲವೋ, ನೆರಳೆಳೆವ ಮೋಡಗಳ ರಾಗ
ಹೊಳೆವ ಸಿರಿ ಮಸುಕಾಗುವುದೊಮ್ಮೊಮ್ಮೆ,
ಅದರದೃಷ್ಟ, ಪ್ರಕೃತಿಯ ನಿಯಮದಂತೆ.
ಮಸುಕಾಗದು ನಿನ್ನ ಸೊಬಗಿನ ಬೇಸಗೆ
ಮುಪ್ಪುತಾಗದು ನಿನ್ನ ಯೌವನದ ಬಿಸಿಗೆ
ಸಾವು ಸೆಳೆಯದು ನಿನ್ನ ಅದರರಮನೆಗೆ,
ಬೆಳೆದುಳಿವೆ ನೀನೀ ಅಳಿಯದ ಸಾಲುಗಳಲಿ:
ಬದುಕು ಬಯಸುವ ಜನರಿರುವರೆಗೂ ಜಗದಲಿ
ಇರುವುದೀ ಕವಿತೆ, ನಿನ್ನ ಹೆಸರ ಉಳಿಸುತಲಿ!

ಪ್ರೀತಿಯೆಂಬ ಸತ್ಯ

ತಾ ನುಡಿವುದೆಲ್ಲ ಸತ್ಯವೆನಲು ನಲ್ಲೆ
ನಂಬುವೆ, ತಿಳಿದರೂ ಅದರಡಿಯ ನಿಜ
ಜಗದ ನಾಲಿಗೆಯಾಳವ ಅರಿಯದ
ತರುಣ ನಾನೆಂದು ತಿಳಿಯಲಿ ಬಿಡಿ!
ಆ ಸಿಹಿ ಕಲ್ಪನೆಯ ಜಂಭದ ನಲಿವಲಿ
ನೆನೆವೆ ನಾ ಯೌವನದ ನಿನ್ನೆಗಳ ನಿಧಿ,
ಮನದನ್ನೆಯ ಸವಿಮಾತುಗಳ ನಮಿಸುತಲಿ:
ಸತ್ಯವ ಬಚ್ಚಿಟ್ಟರೂ ನಾವಿಬ್ಬರೂ ಇಲ್ಲಿ,
ಹೇಳಿಲ್ಲ ಅವಳೆಲ್ಲೂ ಸುಳ್ಳಲ್ಲವೆಂದು
ನಾನೂ ನಂಬಿಲ್ಲ ನಾ ತರುಣನೆಂದು.
ಪ್ರೀತಿಯೆಂಬುದು ನಂಬಿದಂತೆ ಕಾಣುವ ಬಳ್ಳಿ
ಬೆಳೆದಷ್ಟೂ ಬಲವದಕೆ ಒಲವಿನ ಹುಸಿಗಳಲಿ
ನನಗವಳು, ಅವಳಿಗೆ ನಾ ಪ್ರೇಮದ ಹೊದಿಕೆ
ಕೊರತೆಗಳು ಕರಗಿವೆ ಹೊಗಳಿಕೆಯ ಹದಕೆ!

 

ಮುರಳಿ ಹತ್ವಾರ್ ಹಾರ್ಮೋನು- ವೈದ್ಯ (ಎಂಡೋಕ್ರಿನಾಲಜಿಸ್ಟ್)ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೆಲಸ ಮತ್ತು ವಾಸ ಲಂಡನ್ನಿನಲ್ಲಿ.
ಕನ್ನಡದಲ್ಲಿ ಬರೆಯುವುದು ಜೊತೆಗೆ ಕ್ಯಾಮೆರಾ ಕಣ್ಣಿನಲ್ಲಿ ಸುತ್ತಲ ಜಗತ್ತನ್ನು ನೋಡುವುದು ಇವರ ಹವ್ಯಾಸ.