ಬೆಂಕಿ ಇಟ್ಟವರಾರು?

ಬಿರು ಬಿಸಿಲ ಧಗೆಗೆ
ಒಣಗಿದೆಲೆ ಕೋಲು
ಉರಿದುರಿದು ಉದುರಿ
ಹಸಿರುಸಿರ ನೆಲವೆಲ್ಲಾ
ಕರಟಿದ ಮೂಳೆ, ಬೂದಿ!
ಚಿಗುರ ಕಂಪಿನ ಧರೆಗೆ
ಸುಡುವ ಬೆಂಕಿ ಇಟ್ಟವರಾರು?

ಕೊರೆಕೊರೆವ ನೀರ ಗಡ್ಡೆ
ಬಿಸಿಯುಸಿರ ಹಬೆ ತಾಗಿ
ಸರಿಸರಿದು ಸರ್ರನೆ ಹರಿಯೆ
ನಡುಗಿರುವ ನೆಲವೆಲ್ಲಾ
ತೇಲುವ ಮಾಂಸಗಳ ಗಾಡಿ!
ಚಳಿಯ ಜಲದ ಹೊರೆಗೆ
ಸುಡುವ ಗಾಳಿಯ ಬಿಟ್ಟವರಾರು?

ಜನಜನರ ಅಡಿಗಡಿಗೆ
ಗಡಿಯ ಗೋರಿಯ ತೋಡಿ
ಅಣು-ಅಣುವಿಗೂ ಕಿಡಿ ಹತ್ತಿ
ನಡೆಯುತಿಹ ನೆಲವೆಲ್ಲಾ
ಕುದಿಕುದಿವ ನೆತ್ತರ ರಾಡಿ!
ಸವಿಸವಿಯ ಮನದ ಮನೆಗೆ
ಸುಡುವ ಕಿಚ್ಚು ಇಟ್ಟವರಾರು?

ತಾನು, ತನ್ನಗಳ ತಾರಸಿಯ
ಬೆಳೆಬೆಳೆವ ಗರಿಮೆಯ ಗರ್ವದೆ
ತನ್ನಿಳೆಯ ಚಿತೆಯ ಕಟ್ಟುತಿಹ
ಭಸ್ಮಾಸುರರ ನೆಲವೆಲ್ಲಾ
ಉರಿಯ-ಚಳಿಯ ಗಾದಿ!
ಉಸಿರ ಅರಿಗಳ ತಲೆಯ
ಸುಡುವ ಕೈಯ ಇಡುವರಾರು?

ಮುರಳಿ ಹತ್ವಾರ್ ಹಾರ್ಮೋನು- ವೈದ್ಯ (ಎಂಡೋಕ್ರಿನಾಲಜಿಸ್ಟ್)ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೆಲಸ ಮತ್ತು ವಾಸ ಲಂಡನ್ನಿನಲ್ಲಿ.
ಕನ್ನಡದಲ್ಲಿ ಬರೆಯುವುದು ಜೊತೆಗೆ ಕ್ಯಾಮೆರಾ ಕಣ್ಣಿನಲ್ಲಿ ಸುತ್ತಲ ಜಗತ್ತನ್ನು ನೋಡುವುದು ಇವರ ಹವ್ಯಾಸ.