ಸಚಿನ್ ಟೆಂಡೂಲ್ಕರ್ ಅವರು ಮುಂದೆ ಬರಲು ಅವರ ಕೋಚ್ ರಮಾಕಾಂತ ಅಚ್ರೇಕರ್ ಎಂದು ಎಲ್ಲರಿಗೂ ಗೊತ್ತು. ಮುಖ್ಯವಾಗಿ ಟೆಂಡೂಲ್ಕರ್ ಅವರೇ ಇದನ್ನು ಕೃತಜ್ಞತೆಯಿಂದ ಆಗಾಗ್ಗೆ ಜ್ಞಾಪಿಸಿಕೊಂಡು ಎಲ್ಲರ ಮುಂದೆ ಅವರ ಕೊಡುಗೆಯನ್ನು ಸಾರ್ವಜನಿಕವಾಗಿ ಸ್ಮರಿಸಿದ್ದಾರೆ. ಎಷ್ಟೋ ಕಡೆ ಆಟಗಾರನು ಮುಂದೆ ಮುಂದೆ ಬಂದು, ಹೆಸರುವಾಸಿಯಾದಂತೆ ಗುರು-ಶಿಷ್ಯರ ಬಾಂಧವ್ಯ ಕಡಿಮೆಯಾಗಿ ಎಷ್ಟೋಸಲ ಅದು ಮಾಸಿ ಹೋಗುವ ಸಂದರ್ಭಗಳು ಬರುತ್ತದೆ. ಆದರೆ ಒಂದು ಜ್ಞಾಪಕದಲ್ಲಿರಬೇಕು. ಗುರುವಿನ ಅನುಗ್ರಹವಿಲ್ಲದಿದ್ದರೆ ಮುಂದೆ ಬರಲು ಸಾಧ್ಯವಿಲ್ಲ.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಹೊಸ ಬರಹ ನಿಮ್ಮ ಓದಿಗೆ

ಜಿಆರ್‌ವಿ ಜೊತೆಗೆ ರಾಜ್ಯ ಮತ್ತು ರಾಷ್ಟ್ರಕ್ಕೆ ಜಿ.ಆರ್. ವಿಶ್ವನಾಥ್ (ಜಿಆರ್‌ವಿ) ಅವರ ಕ್ರಿಕೆಟ್ ಆಟದಿಂದ ರಾಜ್ಯಕ್ಕೆ ಮತ್ತು ದೇಶಕ್ಕೆ ಕೊಟ್ಟ ಕೊಡುಗೆ ಪ್ರಪಂಚಕ್ಕೇ ಗೊತ್ತಿದೆ. ಅವರ ಆಟ, ಆಟದ ಶೈಲಿ, ಅವರಿಗಿದ್ದ ಮನೋವೈಶಾಲ್ಯತೆ, ಉದಾರ ಭಾವನೆ ಎಲ್ಲರಿಗೂ ಪರಿಚಯವಿದೆ. ಅವರ ಆಟದ ಮತ್ತು ಅವರ ವ್ಯಕ್ತಿತ್ವದ ಬಗ್ಗೆ ಹಾಡಿ ಹೊಗಳಿದವರೇ ಹೆಚ್ಚು. ಅವರನ್ನು ಅನುಸರಿಸಿ ಆಡಲು ಹೋದವರು ಇನ್ನೂ ಹೆಚ್ಚು. ದೇಶ, ವಿದೇಶದಲ್ಲಿ ಖ್ಯಾತಿ ಹೊಂದಿದ ಜಿಆರ್‌ವಿಗೂ ಒಬ್ಬರು ಕೋಚ್ ಇದ್ದರು. ಅವರ ಕೊಡುಗೆಯ ಬಗ್ಗೆ ಇಂದು ನೋಡೋಣ.

ಜಿ ಆರ್ ವಿ ತರಹ, ಅದೇ ಹೆಸರಿನ, ರಾಜ್ಯದಲ್ಲಿ ಕ್ರಿಕೆಟ್ಟಿಗೆ ಸೇವೆ ಸಲ್ಲಿಸಿದ ಕ್ರಿಕೆಟ್ ಆಟಗಾರರಲ್ಲಿ ಮೂರು ವಿಶ್ವನಾಥರು ಇದ್ದಾರೆ! ಇಂದು ಅವರ ಕೊಡುಗೆಯ ಬಗ್ಗೆಯೂ ನೋಡೋಣ.

ಕ್ರಿಕೆಟ್ ಆಟಗಾರರು ಚೆನ್ನಾಗಿ ಆಡಿ, ರನ್ ಹೊಡೆದು ಅಥವ ಬೋಲಿಂಗ್‌ನಲ್ಲಿ ವಿಕೆಟ್ ಬೀಳಿಸಿ ಹೆಸರು ಗಳಿಸಿದವರು ಹಲವರು. ಇದರ ಜೊತೆಗೆ ಆಟಗಾರರಿಗೆ ಆಟವನ್ನು ಕಲಿಸಿ, ಅವರ ಬೆನ್ನು ತಟ್ಟಿ, ಹುರಿದುಂಬಿಸಿ ಅವರ ಏಳಿಗೆಗೆ ಶ್ರಮಿಸುವ ದ್ರೋಣಾಚಾರ್ಯರು ಕೆಲವರು. ಈಗೀಗ್ಗೆ ಇವರ ಶ್ರದ್ಧಾಪೂರ್ವ ಮತ್ತು ತಾಳ್ಮೆಯುಳ್ಳ ಅನಂತ ಸೇವೆಯನ್ನು ಗುರುತಿಸಿ ಅದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಾರಿತೋಷಕಗಳನ್ನು ಘೋಷಿಸಿದೆ.

ಸಚಿನ್ ಟೆಂಡೂಲ್ಕರ್ ಅವರು ಮುಂದೆ ಬರಲು ಅವರ ಕೋಚ್ ರಮಾಕಾಂತ ಅಚ್ರೇಕರ್ ಎಂದು ಎಲ್ಲರಿಗೂ ಗೊತ್ತು. ಮುಖ್ಯವಾಗಿ ಟೆಂಡೂಲ್ಕರ್ ಅವರೇ ಇದನ್ನು ಕೃತಜ್ಞತೆಯಿಂದ ಆಗಾಗ್ಗೆ ಜ್ಞಾಪಿಸಿಕೊಂಡು ಎಲ್ಲರ ಮುಂದೆ ಅವರ ಕೊಡುಗೆಯನ್ನು ಸಾರ್ವಜನಿಕವಾಗಿ ಸ್ಮರಿಸಿದ್ದಾರೆ. ಇದು ಬಹಳ ಮುಖ್ಯ. ಎಷ್ಟೋ ಕಡೆ ಆಟಗಾರನು ಮುಂದೆ ಮುಂದೆ ಬಂದು, ಹೆಸರುವಾಸಿಯಾದಂತೆ ಗುರು-ಶಿಷ್ಯರ ಬಾಂಧವ್ಯ ಕಡಿಮೆಯಾಗಿ ಎಷ್ಟೋಸಲ ಅದು ಮಾಸಿ ಹೋಗುವ ಸಂದರ್ಭಗಳು ಬರುತ್ತದೆ. ಆದರೆ ಒಂದು ಜ್ಞಾಪಕದಲ್ಲಿರಬೇಕು. ಗುರುವಿನ ಅನುಗ್ರಹವಿಲ್ಲದಿದ್ದರೆ ಮುಂದೆ ಬರಲು ಸಾಧ್ಯವಿಲ್ಲ. ಎರಡನೇಯದು ಮುಂದೆ ಕಷ್ಟ ಬಂದಾಗ, ಆಟದಲ್ಲಿ ಸಂಕಷ್ಟಗಳು ಎದುರಾದರೆ ಮತ್ತೆ ಗುರುವೇ ತಿರುಮಂತ್ರವನ್ನು ಹೇಳಿಕೊಡಲು ಮುಂದೆ ಬರುತ್ತಾರೆ. ಅಂತಹ ಒಬ್ಬ ಗುರು ಪಿ.ಎಸ್. ವಿಶ್ವನಾಥ್.

(ಪಿ. ಎಸ್. ವಿಶ್ವನಾಥ್)

ಪಿ. ಎಸ್. ವಿಶ್ವನಾಥ್ (ಪಿಎಸ್‌ವಿ) 1948-49ರಲ್ಲಿ ಮೊದಲ ಬಾರಿ ಮೈಸೂರು ರಾಜ್ಯವನ್ನು ಪ್ರತಿನಿಧಿಸಿದರು. ಅವರು ರಣಜಿ ಟ್ರೋಫಿ ಮ್ಯಾಚುಗಳು ಒಟ್ಟು 9 ಬಾರಿ ಆಡಿ, 408 ರನ್ ಹೊಡೆದರು. ಅವರ ಅತ್ಯುತ್ತಮ ಸ್ಕೋರ್ 114 ಆಗಿತ್ತು. ವಿಶ್ವನಾಥ್ ರಣಜಿ ಟ್ರೋಫಿ ಪಂದ್ಯಗಳಲ್ಲಿ ಅಂಪೈರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ಕೆ ಎಸ್ ಸಿ ಎ ದ ಉಪಾಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದಾರೆ.

ಅವರ ಅತ್ಯುತ್ತಮ ಕೊಡುಗೆಯೆಂದರೆ ಅವರು ಕೋಚ್ ಆಗಿ ಅನೇಕ ಯುವ ಕ್ರಿಕೆಟ್ ಆಟಗಾರರಿಗೆ ಕ್ರಿಕೆಟ್ ಆಡುವುದನ್ನು ಕಲಿಸಿ, ಅವರಲ್ಲಿದ್ದ ನ್ಯೂನತೆಗಳನ್ನು ನಿವಾರಿಸಿ, ಜೊತೆಗೆ ಒಳ್ಳೆಯ ನಾಗರೀಕರಾಗುವುದಕ್ಕೆ ತಕ್ಕ ಬುನಾದಿಯನ್ನು ಹಾಕಿದರು. ಜಿ. ಆರ್. ವಿಶ್ವನಾಥ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಬ್ರಿಜೇಷ್ ಪಟೇಲ್, ಸುನಿಲ್ ಜೋಶಿ ಮತ್ತು ಇತರರಿಗೆ ಕೋಚ್ ಆಗಿ ಅವರಿಗೆ ಕ್ರಿಕೆಟ್ ಕಲಿಸಿ, ತಿದ್ದಿ, ಪಳಗಿಸಿ ಅವರೆಲ್ಲರೂ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಕಾರಣರಾದ ದ್ರೋಣಾಚಾರ್ಯ ಪಿಎಸ್‌ವಿ.

ಪಿಎಸ್‌ವಿ ಆಟದಿಂದ ನಿವೃತ್ತಿಯಾದ ಬಳಿಕ ಕ್ರಿಕೆಟ್ ಕೋಚ್ ಆಗಲು ತೀರ್ಮಾನಿಸಿ ಅದಕ್ಕೆ ಬೇಕಾದ ಅವಶ್ಯಕತೆಯನ್ನು ಪಡೆಯಲು ನಿರ್ಧರಿಸಿದರು. ಅವರು ಇಂಗ್ಲೆಂಡಿನ ಸುಪ್ರಸಿದ್ಧ ‘ಆಲ್ಫ್ ಗೋವರ್ ಕ್ರಿಕೆಟೆ ಸ್ಕೂಲ್’ನಲ್ಲಿ ಭರ್ತಿಯಾಗಿ ಕೋಚ್ ಆಗುವುದಕ್ಕೆ ತರಪೇತಿ ಪಡೆದರು. ಅಲ್ಲಿಂದ ಬಂದ ಮೇಲೆ ಅವರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ ಕೋಚ್ ಆಗಿ ಸೇರಿದರು. ಕರ್ನಾಟಕ ಸ್ಪೋರ್ಟ್ಸ್‌ ಕೌನ್ಸಿಲ್ ಸೇರಿ ಕರ್ನಾಟಕದ ಪಟುಗಳಿಗೆ ಕ್ರಿಕೆಟ್ ಕಲಿಸಿದರು. ಸ್ಪಾರ್ಟನ್ ಟೀಮಿಗೆ ಆಡುತ್ತಿದ್ದ ಜಿ. ಆರ್. ವಿಶ್ವನಾಥ್ ಅವರಿಗೆ ಪಿ.ಎಸ್ ವಿಶ್ವನಾಥ್ ನಡೆಸುತ್ತಿದ್ದ ರಾಜ್ಯದ ಸ್ಪೋರ್ಟರ್ಸ್‌ ಕೌನ್ಸಿಲ್‌ನ ಶಿಬಿರದಲ್ಲಿ ತರಪೇತಿ ಶುರುವಾಯಿತು. ಲೇಟ್ ಕಟ್ ಮತ್ತು ಸ್ಕ್ವಯರ್ ಕಟ್ಟನ್ನು ಆಗಲೇ ಚೆನ್ನಾಗಿ ಆಡುತ್ತಿದ್ದ ಜಿಆರ್‌ವಿಗೆ ಅದನ್ನು ಇನ್ನೂ ಹೊಳಪಿಗೆ ತರಲು ಪಿಎಸ್‌ವಿ ಶ್ರಮಿಸಿದರು.

‘ನಮ್ಮ ಆಟವನ್ನು ಮೆಚ್ಚಿದರೆ ಪಿಎಸ್‌ವಿ ಅದನ್ನು ಬೇರೆಯವರ ಹತ್ತಿರ ಹೇಳುತ್ತಿದ್ದರೇ ಹೊರತು ನಮ್ಮ ಮುಂದೆ ಎಂದೂ ಹೇಳಿಲ್ಲ! ನಾವು ಆಟದ ಜೊತೆಗೆ ಒಳ್ಳೆ ನಾಗರೀಕರಾಗಿ ಬೆಳೆಯುವುದಕ್ಕೆ ಅವರು ಬಹಳ ಸಹಾಯ ಮಾಡಿದ್ದಾರೆ. ಯಾವುದನ್ನೂ ಅವರು ಶಿಸ್ತಿನಿಂದ ಕಲಿಸಿದರೂ ಅವರು ಅಂತಃಕರಣದಲ್ಲಿ ದಯಾಳುವಾಗಿದ್ದರು. ಮಾತನಾಡುವಾಗ, ಪಾಠ ಹೇಳಿಕೊಡುವಾಗ ಆಟದ ಜೊತೆ ಮುಂದೆ ನಾವು ಹೇಗೆ ನಡೆದುಕೊಳ್ಳಬೇಕು ಎಂಬುದನ್ನೂ ತಿಳಿಸುತ್ತಿದ್ದರು. ಅದು ನಮ್ಮ ಇಡೀ ಜೀವನ ಯಾತ್ರೆಗೆ ಬೆನ್ನೆಲುಬಾಗಿ ನಿಂತಿದೆ. ಅದನ್ನು ಮರೆಯುವ ಹಾಗೇ ಇಲ್ಲ’ ಎಂದು ಅವರನ್ನು ಸ್ಮರಿಸುತ್ತಾರೆ, ಜಿಆರ್‌ವಿ.

ರಾಹುಲ್ ದ್ರಾವಿಡ್‌ಗೂ ವಿಶ್ವನಾಥ್ ಕೋಚ್ ಆಗಿದ್ದು ಮುಂದೆ ದ್ರಾವಿಡ್ ಅವರಿಗೆ ಕೆಕಿ ತಾರಾಪುರ್ ಕೋಚ್ ಆಗಲು ಕಾರಣಕರ್ತರಾದರು.

‘ರಾಷ್ಟ್ರೀಯ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ ( ಎನ್ ಎಸ್ ಐ) ಅವರು ಕೋಚ್ ಆಗಿದ್ದಾಗ ನಮಗೆಲ್ಲಾ ಕ್ರಿಕೆಟ್‌ನ ಅ, ಆ, ಇ, ಈ ಯನ್ನು ಕಲಿಸಿದವರು ಪಿ.ಎಸ್ ವಿಶ್ವನಾಥ್. ಅವರಿಂದ ನಾವು ಬಹಳ ಕಲಿತೆವು. ಅವರ ಇನ್ನೊಂದು ಬಹಳ ಮುಖ್ಯವಾದ ಕೊಡುಗೆ ಎಂದರೆ ತಾಲ್ಲೂಕು ಮತ್ತು ಹಳ್ಳಿಗಳಲ್ಲಿ ಕ್ಯಾಂಪ್‌ಗಳನ್ನು ಮಾಡಿ ಅಲ್ಲಿನ ಪ್ರತಿಭೆಯನ್ನು ಹುಡುಕುತ್ತಿದ್ದರು. ಅದರಲ್ಲಿ ಸಿಕ್ಕ ರತ್ನವೇ ಮುಂದೆ ಕರ್ನಾಟಕಕ್ಕೆ ಆಡಿದ ಯೆರೆ ಗೌಡ್ ಎಂದು ಹೇಳುತ್ತಾರೆ ಕೆ ಎಸ್ ಸಿ ಎ ನ ಮಾಜಿ ಗೌರವ ಕಾರ್ಯದರ್ಶಿ ಹಾಗೂ ಐಪಿಎಲ್ 2022ನ ಅಧ್ಯಕ್ಷ ಬ್ರಿಜೇಷ್ ಪಟೇಲ್.

1978ರಲ್ಲಿ ವಿಶ್ವನಾಥ್ ರಾಜ್ಯದ ಪ್ರಾದೇಶಿಕ ನಿರ್ದೇಶಕರಾಗಿ ತರಪೇತಿಗೆ ಬಂದ ರಾಜ್ಯದ ಹುಡುಗಿಯರಿಗೆ ಸ್ಪಿನ್ ಬೋಲಿಂಗ್ ಮಾಡುವುದು ಹೇಗೆಂದು ಕೋಚ್ ಮಾಡಿದರು.

ಆಗಸ್ಟ್ 2011ರಲ್ಲಿ ಪಿ.ಎಸ್. ವಿಶ್ವನಾಥ್ ಅವರ ನಿರಂತರ ಸೇವೆಗೆ, ಮೊದಲು ರಣಜಿ ಟ್ರೋಫಿ ಆಟಗಾರನಾಗಿ, ಮತ್ತೆ ಅಂಪೈರಾಗಿ ಕೊನೆಗೆ ಕೋಚ್ ಆಗಿ ಅಮೋಘ ಸೇವೆ ಸಲ್ಲಿಸಿದ್ದಕ್ಕಾಗಿ ಅವರಿಗೆ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ಅವರಿಗೆ ರೂ. 1 ಲಕ್ಷ ಕೊಟ್ಟು ಸನ್ಮಾನಿಸಿದರು. ಅವರು ಮಾರ್ಚ್‌ 4, 2023ರಂದು ತಮ್ಮ 96ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ಕಾಲವಾದರು.

*****

(ಕೆ.ಎಸ್. ವಿಶ್ವನಾಥ್)

ನಮ್ಮ ಎರಡನೇ ಆಟಗಾರರಾಗಿ, ತಮ್ಮ ಟೀಮಿನ ನಾಯಕನಾಗಿ ಮುಂದೆ ಬರುವ ಆಟಗಾರರಿಗೆ ಮಾರ್ಗದರ್ಶಕನಾಗಿ ದಾರಿ ತೋರಿದ ವ್ಯಕ್ತಿ ಕೆ.ಎಸ್. ವಿಶ್ವನಾಥ್. (‘ಕೆಎಸ್‌ವಿ’) 1947ರಲ್ಲಿ ಒಂದೈದಾರು 15-16 ವರ್ಷದ ಯುವಕರು ಒಟ್ಟುಗೂಡಿ ಅವರ ಕ್ರಿಕೆಟ್ ಆಭಿಲಾಷೆಯ ಮೊದಲ ಹಂತವಾಗಿ ‘ಸಿಟಿ ಕ್ರಿಕೆಟರ್ಸ್‌’ ಎನ್ನುವ ಕ್ರಿಕೆಟ್ ಕ್ಲಬ್ಬನ್ನು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಶುರುಮಾಡಿದರು. ಹೇಳಿಕೊಳ್ಳಲು ಹುರುಪಿತ್ತೇ ವಿನಹ ಬೇರೆ ಏನೂ ಇರಲಿಲ್ಲ ಎನ್ನುತ್ತಾರೆ ಟೀಮಿನ ಸದಸ್ಯ ಬಾದಾಮಿ ಆನಂದರಾವ್. ಕೆ.ಎಸ್. ವಿಶ್ವನಾಥ್, ಬಿ.ಪಿ. ಅನಂತ ಕೃಷ್ಣ, ಶ್ರೀಚಂದ್ರ ಆರ್ಯ, ಮಂಜುನಾಥ್, ನರಸಿಂಹಸ್ವಾಮಿ ಮತ್ತು ಆನಂದರಾವ್ ಎಲ್ಲರೂ ಸೇರಿ ಸಿಟಿ ಕ್ರಿಕೆಟರ್ಸ್‌ ಕ್ಲಬ್ಬನ್ನು ಕಲೆಹಾಕಿದರು. ಬೆಂಗಳೂರು ಟ್ರಾನ್ಸ್‌ಪೋರ್ಟ ಕಂಪನಿಯ ಅಕೌಂಟ್ಸ್ ಆಫೀಸರ್ ಆಗಿದ್ದ ಜೀವೋತ್ತಮರಾವ್ ಕ್ರಿಕೆಟ್ ಕಿಟ್ ಮತ್ತು ವಿಶೇಷ ಚಾಪೆಯಿಂದ ಹಣೆದಿರುವ ಮ್ಯಾಟಿಂಗ್ ಅನ್ನು ದಾನಮಾಡಿದರು. ಮಾಸ್ಟರ್ ಹಿರಣ್ಣಯ್ಯ ಅವರ ನಾಟಕ ‘ಧರ್ಮರತ್ನಾಕರ’ ನಾಟಕವನ್ನು ಆಡಿಸಿ ಅದರಿಂದ ಬಂದ ಹಣದಿಂದ ಬಾಲ್, ವಿಕೆಟ್ ಕೀಪರ್‌ಗೆ ಬೇಕಾದ ಗ್ಲೌಸ್ ಇತರ ಸಾಮಾನುಗಳನ್ನು ಕೊಂಡು ಒಕ್ಕಲಿಗರ ಸಂಘ, ಕೀಮ್ಸ್‌ ಮೆಡಿಕಲ್ ಕಾಲೇಜಿನ ಹತ್ತಿರದ ಮೈದಾನದಲ್ಲಿ ಅಭ್ಯಾಸ ಶುರುಮಾಡಿದರು. ಹಣದ ಕೊರತೆಯಿದ್ದ ಕಾರಣ ಎಲ್ಲವೂ ಸೆಕೆಂಡ್ ಹ್ಯಾಂಡ್‌ನಲ್ಲಿ ಕೊಂಡರೂ ಅಭ್ಯಾಸ ಬಿರುಸಿನಿಂದ ಶುರುವಾಯಿತು. 1951ರಲ್ಲಿ ಸಿಟಿ ಕ್ರಿಕೆಟರ್ಸ್‌ ಎಮ್ ಎಸ್ ಸಿ ಎ ಗೆ ಮೆಂಬರ್ ಆಗಿ ಸೇರಿತು. 1954ರಲ್ಲಿ ಅನಂತಕೃಷ್ಣ ಅವರ ನಾಯಕತ್ವದಲ್ಲಿ ಸಿಟಿ ಕ್ರಿಕೆಟರ್ಸ್‌ ನಸ್ಸೂರ್ ಮೆಮೊರಿಯಲ್ ಚಾಂಪಿಯನ್ಸ್ ಆದರು. 1955ರಿಂದ ಕ್ಲಬ್ ನ್ಯಾಷನಲ್ ಕಾಲೇಜಿನ ಸಿಟಿ ಹಾಕಿ ಕ್ಲಬ್ ಪಕ್ಕದಲ್ಲಿ ಅಭ್ಯಾಸ ಶುರುಮಾಡಿತು.

ಕೆ.ಎಸ್. ವಿಶ್ವನಾಥ್ ರಾಜ್ಯದ ರಣಜಿ ಟ್ರೋಫಿ ಆಡುವ ಟೀಮಿನ ಸದಸ್ಯರಾಗಿದ್ದರು. ಅವರು 10 ಫಸ್ಟ್ ಕ್ಲಾಸ್ ಪಂದ್ಯದಲ್ಲಿ ಅಡಿ 34.23 ಸರಾಸರಿಯಲ್ಲಿ ಒಟ್ಟು 445 ರನ್ ಗಳಿಸಿದರು. ಅವರ ಅತ್ಯುತ್ತಮ ಸ್ಕೋರ್ ಅಜೇಯರಾಗಿ ಹೊಡೆದ 131ರನ್. 16 ಇನ್ನಿಂಗ್ಸ್‌ನಲ್ಲಿ 3 ಬಾರಿ ನಾಟ್ ಔಟ್ ಆಗಿದ್ದರು. ಅವರು 1955-56 ರಿಂದ 1961-62 ವರೆಗೆ ರಾಜ್ಯಕ್ಕೆ ಕ್ರಿಕೆಟ್ ಆಡಿದರು.

ಮಾರ್ಚ್‌ 1960ರಲ್ಲಿ ರಣಜಿ ಫೈನಲ್ಸ್‌ನಲ್ಲಿ ಮೈಸೂರು ಬೊಂಬಾಯಿ ಟೀಮಿನ ವಿರುದ್ಧ ಆಡಿ ಸೋತರು. ಆ ಪಂದ್ಯದಲ್ಲಿ ಕೆ ಎಸ್ ವಿಯ 51 ರನ್ ತಂಡಕ್ಕೇ ಅಧಿಕ ಸ್ಕೋರ್ ಆಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ 10 ರನ್‌ಗೆ ಔಟಾದರು. ಬಿರುಸಿನ ಹೊಡೆತಕ್ಕೆ ಹೆಸರುವಾಸಿಯಾಗಿದ್ದ ಕೆಎಸ್‌ವಿ ಆಂಧ್ರದ ವಿರುದ್ಧ ಕೇವಲ 90 ನಿಮಿಷದಲ್ಲಿ 131 ಹೊಡೆದರು. ಪ್ರಖ್ಯಾತ ಬೋಲರ್ ಕಸ್ತೂರಿರಂಗನ್ ಇವರ ಜೊತೆಯಾಡಿ 41 ರನ್ ಹೊಡೆದರು.

ಹಾಗೆಯೇ ರಣಜಿ ಸೆಮಿ-ಫೈನಲ್ಸ್‌ನಲ್ಲಿ ಬಿಹಾರದ ವಿರುದ್ಧ ವಿಶ್ವನಾಥ್ 75 ನಿಮಿಷದಲ್ಲಿ 85 ರನ್ ಹೊಡೆದರು.

ಪ್ರಖ್ಯಾತ ಆಫ್ ಸ್ಪಿನರ್ ಇಎಸ್ ಪ್ರಸನ್ನ ಅವರ ಕ್ರಿಕೆಟ್ ಪ್ರವಾಸ ಸಿಟಿ ಕ್ರಿಕೆಟರ್ಸ್‌ ಕ್ಲಬ್ಬಿನಿಂದ ಶುರುವಾಯಿತು. ಇಲ್ಲಿ ಅಭ್ಯಾಸ ಮಾಡಿ, ರಾಜ್ಯಕ್ಕೆ ಮತ್ತು ದಕ್ಷಿಣವಲಯಕ್ಕೆ ಆಡಿ 1960-61ರಲ್ಲಿ ಕರ್ನಾಟಕದಿಂದ ಭಾರತಕ್ಕೆ ಟೆಸ್ಟ್ ಆಡಿದ ಪ್ರಪಥಮ ಕ್ರಿಕೆಟ್ ಆಟಗಾರರಾದರು. 1964ರಲ್ಲಿ ಬಿ.ಎಸ್. ಚಂದ್ರಶೇಖರ್ ಸಿಟಿಕ್ರಿಕೆಟರ್ಸ್‌ ಸೇರಿ ಭಾರತಕ್ಕೆ ಕರ್ನಾಟದಿಂದ ಆಡಿದ ಎರಡನೇ ಕ್ರಿಕೆಟರ್ ಆದರು. ಆ ಸಮಯದಲ್ಲಿ ಕೆ ಎಸ್ ವಿಶ್ವನಾಥ್ ಸಿಟಿ ಕ್ರಿಕೆಟರ್ಸ್‌ನ ನಾಯಕರಾಗಿದ್ದರು.

ಕರ್ನಾಟಕಕ್ಕೆ ಮತ್ತು ಭಾರತಕ್ಕೆ ಸ್ಪಿನ್ನರ್‌ ಆಗಿ ಒಟ್ಟಿಗೆ ಆಡಿದ ಪ್ರಸನ್ನ ಮತ್ತು ಚಂದ್ರಶೇಖರ್ ಒಟ್ಟಿಗೆ ಸಿಟಿ ಕ್ರಿಕೆಟರ್ಸ್‌ ‘ನೆಟ್ಸ್’ ನಲ್ಲಿ ನ್ಯಾಷನಲ್ ಕಾಲೇಜಿನ ಮಹಿಳಾ ಸೇವಾ ಸಮಾಜದ ಪಕ್ಕದಲ್ಲಿ ಅಭ್ಯಾಸ ಮಾಡುತ್ತಿದ್ದರು. ಈಗ ಅಲ್ಲಿ ರಾಜ್ಯದ ಸ್ವಿಮಿಂಗ್ ಪೂಲ್ ಬಂದಿದೆ. ಬಹುಷಃ ಭಾರತದಲ್ಲಿ ಅಥವ ಹೊರನಾಡೇ ಆಗಿರಲಿ, ಇಬ್ಬರು ಅವರ ಕ್ಲಬ್ಬಿಗೆ ಪಕ್ಕ ಪಕ್ಕದಲ್ಲೇ ಪ್ರಾಕ್ಟಿಸ್ ಮಾಡುತ್ತಾ ದೇಶ ವಿದೇಶಗಳಿಗೆ ಹೋಗಿ ಆಡಿ ಕೀರ್ತಿ ತಂದ ಮೊದಲನೇಯವರು ಎಂದು ತೋರುತ್ತೆ. ಇವರಿಬ್ಬರಿಗೂ ಬೆನ್ನುತಟ್ಟಿ ಹುರುಪು ತುಂಬಿ ಮುಂದೆ ಬರುವುದಕ್ಕೆ ಬಹಳ ಮಟ್ಟಿಗೆ ಕಾರಣರಾದರು ಕೆ ಎಸ್ ವಿ.

‘ನಮ್ಮ ಆಟವನ್ನು ಮೆಚ್ಚಿದರೆ ಪಿಎಸ್‌ವಿ ಅದನ್ನು ಬೇರೆಯವರ ಹತ್ತಿರ ಹೇಳುತ್ತಿದ್ದರೇ ಹೊರತು ನಮ್ಮ ಮುಂದೆ ಎಂದೂ ಹೇಳಿಲ್ಲ! ನಾವು ಆಟದ ಜೊತೆಗೆ ಒಳ್ಳೆ ನಾಗರೀಕರಾಗಿ ಬೆಳೆಯುವುದಕ್ಕೆ ಅವರು ಬಹಳ ಸಹಾಯ ಮಾಡಿದ್ದಾರೆ. ಯಾವುದನ್ನೂ ಅವರು ಶಿಸ್ತಿನಿಂದ ಕಲಿಸಿದರೂ ಅವರು ಅಂತಃಕರಣದಲ್ಲಿ ದಯಾಳುವಾಗಿದ್ದರು. ಮಾತನಾಡುವಾಗ, ಪಾಠ ಹೇಳಿಕೊಡುವಾಗ ಆಟದ ಜೊತೆ ಮುಂದೆ ನಾವು ಹೇಗೆ ನಡೆದುಕೊಳ್ಳಬೇಕು ಎಂಬುದನ್ನೂ ತಿಳಿಸುತ್ತಿದ್ದರು.

ಕೆ ಎಸ್ ವಿ ಕ್ರಿಕೆಟ್‌ಗೆ ವಿದಾಯ ಹೇಳಿದಾಗ ಕೆ ಎಸ್ ಸಿ ಎ ತಂದ ಸೂವನೀರ್‌ನಲ್ಲಿ (ನೆನಪಿನ ಅಂಗಳ)ದಲ್ಲಿ ಪ್ರಸನ್ನ ಹೇಳುತ್ತಾರೆ: “ಕೆ ಎಸ್ ವಿಶ್ವನಾಥ್ ನನ್ನನ್ನು ಸಿಟಿ ಕ್ರಿಕೆಟರ್ಸ್‌ ಸೇರುವ ಮುಂಚೆ ನಾನು ಸೇರಲು ಅರ್ಹನೇ ಎಂದು ಇಂಟರ್ವ್ಯೂ ಮಾಡಿದ್ದರು. ಅಲ್ಲಿಂದ ನನಗೆ ಮುಂದೆ ದಾರಿ ತೋರಿಸಿ ನನ್ನ ಏಳಿಗೆಗೆ ಶ್ರಮಪಟ್ಟರು ವಿಶ್ವನಾಥ್. ದೊಡ್ಡವರು ಚಿಕ್ಕವರು ಅನ್ನುವ ತಾರತಮ್ಯವಿಲ್ಲದೆ ಎಲ್ಲರ ಜೊತೆ ನಗುನಗುತ್ತಾ ಸ್ನೇಹಭಾವವನ್ನು ತೋರಿಸುತ್ತಾರೆ.” “ನಾನು ಮೊದಲನೇ ಸಲ ವೆಸ್ಟ್ ಇಂಡೀಸ್‌ಗೆ ಹೋದಾಗ ನನ್ನ ಟೀಮಿನವರೆಲ್ಲರೂ ನನಗೆ ಬಹಳ ಸಹಾಯ ಮಾಡಿದರು. ನಾನು ಅವರಿಂದ ಕಲಿತಿದ್ದು ಬಹಳ’ ಎಂದು ಸ್ಮರಿಸುತ್ತಾರೆ ಪ್ರಸನ್ನ.

ಬಿ.ಎಸ್. ಚಂದ್ರಶೇಖರ್ ಕ್ಲಬ್ಬಿಗೆ ಸೇರಿದಾಗ ಕೆ ಎಸ್ ವಿ ಕರ್ನಾಟಕದ ಸೀನಿಯರ್ ಕ್ರಿಕೆಟರ್ ಆಗಿದ್ದರು. ಸಿಟಿ ಕ್ರಿಕೆಟರ್ಸ್‌ ಸೇರಿದ ವರ್ಷವೇ ರಾಕೆಟ್ ತರಹ ಅವರ ಅಟ ಮೇಲಿಂದ ಮೇಲಕ್ಕೆ ಹಾರಿತು. ಅದನ್ನು ಜ್ಞಾಪಿಸಿಕೊಂಡು ಕೆ ಎಸ್ ವಿ ಯ ಸೂವನಿಯರ್‌ನಲ್ಲಿ ಹೀಗೆ ಬರೆಯುತ್ತಾರೆ ಚಂದ್ರಶೇಖರ್: “ನನ್ನ ಏಳಿಗೆಗೆ ಬಹಳ ಮಟ್ಟಿಗೆ ಕೆ ಎಸ್ ವಿಶ್ವನಾಥ್ ಕಾರಣಕರ್ತರು. ಎಷ್ಟು ಬೇಗ ನಾನು ಒಂದು ಟೀಮ್‌ನಿಂದ, ರಾಜ್ಯಕ್ಕೆ, ದೇಶಕ್ಕೆ ಮತ್ತು ಅಂತರರಾಷ್ಟ್ರಕ್ಕೆ ಆಡುವ ಆಟಗಾರನಾದೆ. ದಿಗ್ಭ್ರಮೆ ಆಗುವಹಾಗೆ ನನ್ನ ಆಟದ ಓಟ ಸಾಗಿತ್ತು. ಇದೆಲ್ಲದರ ಮಧ್ಯೆ ವಿಶ್ವನಾಥ್ ನನಗೆ ಹಿರಿಯ ಸಹೋದರನಾಗಿ ಮಾರ್ಗದರ್ಶಕನಾಗಿದ್ದರು. ನನಗೆ ಸಲಹೆಗಳು ನೀಡುತ್ತಾ ಯಾವುದನ್ನೂ ಅತಿರೇಕಕ್ಕೆ ಹೋಗದ ಹಾಗೆ ನನ್ನನ್ನು ನೋಡಿಕೊಂಡರು. ಇದನ್ನು ನಾನು ಮರೆಯುವ ಹಾಗೇ ಇಲ್ಲ.”

ಒಂದು ಸನ್ನಿವೇಶಲ್ಲಿ ರಾಜ್ಯದ ಸೆಲೆಕ್ಷನ್ ಕಮಿಟಿಯ ಅಧ್ಯಕ್ಷರಾಗಿದ್ದ ಡಾ: ತಿಮ್ಮಪ್ಪಯ್ಯ ಅವರಿಗೆ ಕೆ ಎಸ್ ವಿ ಚಂದ್ರಶೇಖರ್ ಅವರ ಬಗ್ಗೆ ಹೀಗೆ ಹೇಳಿದರು: ‘ಈತ ಬಹಳ ಬೇಗ ದೇಶಕ್ಕೆ ಆಡಬಹದು. ಅದಾಗ ಬೇಕೆಂದರೆ ನೀವು ಅವನನ್ನು ಅದಷ್ಟು ಬೇಗ ರಾಜ್ಯದ ರಣಜಿ ಟ್ರೋಫಿಗೆ ಆಡಿಸಬೇಕು!’

ಸೋಜಿಗವೆಂದರೆ ಅವರು ಹೇಳಿದ್ದ ಹಾಗೇ ಆಯಿತು. ರಣಜಿ ಆಡುತ್ತಲೇ ಭಾರತಕ್ಕೆ ಬೊಂಬಾಯಿ ಟೆಸ್ಟ್‌ನಲ್ಲಿ ಇಂಗ್ಲೆಂಡಿನ ವಿರುದ್ಧ ಆಡಲು ಚಂದ್ರಶೇಖರ್‌ಗೆ ಕರೆ ಬಂತು! ಅಲ್ಲಿಂದ ಮುಂದೆ ಏನಾಯಿತೆಂದು ಪ್ರಪಂಚಕ್ಕೇ ಗೊತ್ತಿದೆ.

ಒಂದೇ ಕ್ಲಬ್ಬಿನಿಂದ ರಾಜ್ಯಕ್ಕೆ ಮತ್ತು ದೇಶಕ್ಕೆ ಕೊಟ್ಟ ಅಪೂರ್ವ ಕೊಡುಗೆ ಕೊಟ್ಟ ಸಿಟಿ ಕ್ರಿಕೆಟರ್ಸ್‌ಗೆ ಸೇರುತ್ತೆ. ಇಎಎಸ್ ಪ್ರಸನ್ನ ಮತ್ತು ಬಿ ಎಸ್ ಚಂದ್ರಶೇಕರ್ ಸಿಟಿ ಕ್ಲಬ್‌ಗೆ ಸೇರಿ ಒಡನಾಡಿಗಳಾಗಿ ವಿಕೆಟ್‌ನ ಎರಡು ಕಡೆಯಿಂದ ಭಾರತಕ್ಕೆ ಬೋಲ್ ಮಾಡಿದ ಅಪೂರ್ವ ಸ್ಪಿನ್ನರ್‌ಗಳು. ಒಂದೇ ರಾಜ್ಯಕ್ಕೆ / ಒಂದೇ ಕೌಂಟಿಗೆ 1956ರಲ್ಲಿ ಜಿಮ್ ಲೇಕರ್ ಮತ್ತು ಟೋನಿ ಲಾಕ್ ಬೋಲ್ ಮಾಡಿ 1956ರಲ್ಲಿ ಆಸ್ಟ್ರೇಲಿಯ ವಿರುದ್ಧ ಇಬ್ಬರೂ ಎರಡು ಕಡೆಯಿಂದ ಬೋಲ್ ಮಾಡಿ ಇಂಗ್ಲೆಂಡಿಗೆ ಮಹತ್ತರವಾದ ವಿಜಯವನ್ನು ಗಳಿಸಿಕೊಟ್ಟರು.

ಆದರೆ ಒಂದೇ ಕ್ಲಬ್‌ನಿಂದ ಬೋಲರ್ ಆಗಿ ಬಂದ ಪ್ರಸನ್ನ ಮತ್ತು ಚಂದ್ರಶೇಖರ್ ಅವರ ರಾಜ್ಯಕ್ಕೆ ಮತ್ತು ದೇಶಕ್ಕೆ ಒಟ್ಟಿಗೆ ಬೋಲಿಂಗ್ ಮಾಡಿದ್ದು ಸಿಟಿಕ್ರಿಕೆಟರ್ಸ್‌ಗೆ ಬಂದ ದೊಡ್ಡ ಕೀರ್ತಿ. ಇದು ಬೇರೆ ಎಲ್ಲಿಯೂ ಆಗಿಲ್ಲ ಎಂದು ನಮ್ಮ ಭಾವನೆ. ವೃತ್ತಿಯಲ್ಲಿ ಉಪಧ್ಯಾಯರಾದ ವಿಶ್ವನಾಥ್ ಅಧ್ಯಾಪಕರಾಗಿ ಝಾಂಬಿಯಾದಲ್ಲಿ 11 ವರ್ಷ ಕೆಲಸ ಮಾಡಿ ಮತ್ತೆ ತಾಯ್ನಾಡಿಗೆ ಹಿಂದುರಿಗಿದರು.

ವಿಶ್ವನಾಥ್ ಬೆಂಗಳೂರಿನ ಶಂಕರಮಠದ ಹತ್ತಿರವಿರುವ ಶಂಕರಾಪಾರ್ಕ್‌ನಲ್ಲಿ ಅವರ ಪತ್ನಿ, ಮಕ್ಕಳು, ಮೊಮ್ಮಕ್ಕಳೊಂದಿಗೆ ವಾಸವಾಗಿದ್ದಾರೆ. ಅವರಿಗೆ ಈಗ 88 ವರ್ಷಗಳಾಗಿದೆ. ಈಗಲೂ ಕ್ರಿಕೆಟ್‌ನ ಆಗುಹೋಗುಗಳನ್ನು ನಿತ್ಯವೂ ಅನುಸರಿಸುತ್ತಾರೆ.

*****

(ಸದಾನಂದ ವಿಶ್ವನಾಥ್)

ಸದಾನಂದ ವಿಶ್ವನಾಥ್ (‘ಸವಿ’) ಇಂಡಿಯನ್ ಕ್ರಿಕೆಟ್‌ನಲ್ಲಿ ರಾಕೆಟ್‌ನ ಹಾಗೆ ಬಂದರು. ಸೈಯದ್ ಕಿರ್ಮಾನಿ ನಂತರ ಭಾರತದ ವಿಕೆಟ್ ಕೀಪರ್ ಯಾರು ಅನ್ನುವ ಪ್ರಶ್ನೆಗೆ ಸಹಜವಾಗಿ ಉತ್ತರವಾಗಿ ಬಂದ ಸದಾನಂದ 1985 ರಲ್ಲಿ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ನಡೆದ “ಬೆನ್ಸನ್ ಮತ್ತು ಹೆಡ್ಜಸ್ ವರ್ಲ್ಡ್‌ ಚಾಂಪಿಯನ್ಷಿಪ್ ಆಫ್ ಕ್ರಿಕೆಟ್” ನಲ್ಲಿ ಬಹಳ ಚೆನ್ನಾಗಿ ವಿಕೆಟ್ ಕೀಪಿಂಗ್ ಮಾಡಿ, ಭಾರತ ಒಂದು ಪಂದ್ಯವೂ ಸೋಲದೆ ಕೊನೆಗೆ ಫೈನಲ್ಸ್‌ನಲ್ಲಿ ಪಾಕಿಸ್ಥಾನದ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟವನ್ನು ಪಡೆಯಿತು. ಪ್ರಸನ್ನ ಮ್ಯಾನೇಜರ್ ಆಗಿ, ಸುನಿಲ್ ಗವಾಸ್ಕರ್ ನಾಯಕತ್ವದಲ್ಲಿ ಟ್ರೋಫಿ ಗೆದ್ದ ಭಾರತ ತನ್ನ 1983 ರಲ್ಲಿ ಗೆದ್ದ ವರ್ಲ್ಡ್‌ ಕಪ್ ಏನೂ ಅನಿರೀಕ್ಷಿತವಲ್ಲವೆಂದು ಸಾಬೀತು ಮಾಡಿತು. ಗವಾಸ್ಕರ್, “ಈ ಪಂದ್ಯಗಳಲ್ಲಿ ಒಂದೂ ಸಲ ಸೋಲದೆ, ಎಲ್ಲಾ ಟೀಮ್‌ಗಳನ್ನು ಔಟ್ ಮಾಡಿ ಗೆದ್ದಿರುವ ಕಾರಣ ಅನೇಕ. ಅದರಲ್ಲಿ ಮುಖ್ಯವಾದ ಪಾತ್ರ ಸದಾನಂದ ವಿಶ್ವನಾಥ್ ಅವರ ವಿಕೆಟ್ ಕೀಪಿಂಗ್ ಬಹುಮಟ್ಟಿಗೆ ಕಾರಣ” ಎಂದು ಹೊಗಳಿದರು.

ತನ್ನ ಕೇವಲ ಮೂರನೇ ಟೆಸ್ಟ್‌ನಲ್ಲಿ ಶ್ರೀಲಂಕೆಯ ವಿರುದ್ಧ 6 ವಿಕೆಟ್‌ಗಳನ್ನು ಕಬಳಿಸಿದ ವಿಶ್ವನಾಥ್ ಭಾರತದ ವಿಕೆಟ್ ಕೀಪಿಂಗ್ ದಾಖಲೆಯನ್ನು ಸರಿಸಮಾನ ಮಾಡಿದರು. ಅವರ ಫಸ್ಟ್ ಕ್ಲಾಸ್ ಮ್ಯಾಚುಗಳಲ್ಲಿ ಕೇವಲ 74 ಮ್ಯಾಚ್‌ಗಳಲ್ಲಿ 179 ವಿಕೆಟ್‌ಗಳನ್ನು ಕಬಳಿಸಿ, ಒಂದು ಶತಕ ಮತ್ತು 23 ಅರ್ಧಶತಕಗಳನ್ನು ಬಾರಿಸಿದ ವಿಶ್ವನಾಥ್‌ರ ಕ್ರಿಕೆಟ್ ವೃತ್ತಿ ಇನ್ನೂ ಯಾಕೆ ಬೆಳೆಯಲಿಲ್ಲ ಎಂಬುದು ದೊಡ್ಡ ಜಿಗ್ಞಾಸೆಯಾಗಿ ಉಳಿದಿದೆ. ವೈಯುಕ್ತಿಕವಾಗಿ ಅವರ ಪೋಷಕರ ದಿಢೀರ್ ಮೃತ್ಯು ಅವರ ಮೇಲೆ ಅತೀವ ಪ್ರಭಾವ ಉಂಟುಮಾಡಿ ಅವರು ಆಟದ ಹುರುಪನ್ನು ಕಳೆದುಕೊಂಡಿರಲು ಸಾಧ್ಯ.

ಕ್ರಿಕೆಟ್‌ ಆಂಗಳಕ್ಕೆ ಮಿಂಚಿನ ಹಾಗೆ ಬಂದ ಸದಾನಂದ ವಿಶ್ವನಾಥ್ ಈಗ ಝೋನಲ್ ಮ್ಯಾಚ್‌ಗಳಿಗೆ ಅಂಪೈರ್ ಆಗಿದ್ದಾರೆ ಹಾಗೂ ಬಾಲಕರಿಗೆ ಕೋಚಿಂಗನ್ನೂ ಮಾಡುತ್ತಾರೆ.

ಕೊನೆಯ ಮಾತು: ಬೆಂಗಳೂರಿನ ಸಿಟಿ ಕ್ರಿಕೆಟರ್ಸ್‌ ಕ್ಲಬ್‌ಗೆ ಪ್ರಸನ್ನ ಮತ್ತು ಚಂದ್ರಶೇಖರ್ ಜೊತೆಗೆ ಅಭ್ಯಾಸ ಮಾಡಿ, ಜೊತೆ ಜೊತೆಗೆ ಕರ್ನಾಟಕ ರಾಜ್ಯ ಮತ್ತು ಭಾರತ ದೇಶವನ್ನು ಪ್ರತಿನಿಧಿಸಿದರು. ಹೀಗೆ ಒಂದೇ ಕ್ಲಬ್‌ನ ಸದಸ್ಯರಾಗಿ, ರಾಜ್ಯಕ್ಕೂ ಮತ್ತು ದೇಶಕ್ಕೂ ಆಡಿ ಕೀರ್ತಿ ತಂದ ಮಹಾನ್ ಆಟಗಾರರು. ಇದೊಂದು ಅಪೂರ್ವ ದಾಖಲೆ. ಇವರಿಬ್ಬರನ್ನು ಬಿಟ್ಟರೆ, ಇಲ್ಲಿಯವರೆಗೆ ಬೇರೆ ಯಾವ ಕ್ಲಬ್ಬಲ್ಲೂ, ದೇಶ, ವಿದೇಶಗಳು ಸೇರಿಸಿ, ಒಟ್ಟಿಗೆ ಆಡಿದ ದಾಖಲೆ ಇನ್ನೆಲ್ಲಿಂದಲೂ ವರದಿಯಾಗಿಲ್ಲ. ಇದರ ಕೀರ್ತಿ ಸಿಟಿ ಕ್ರಿಕೆಟರ್ಸ್‌ ಕ್ಲಬ್‌ಗೆ ಸೇರುತ್ತೆ.