‘ನನಗೆ ನನ್ನ ಅಪ್ಪ ಯಾರು ಅಂತ ಗೊತ್ತಿಲ್ಲ, ನನ್ನ ಅಮ್ಮನಿಗೆ ತನಗೆ ಎಷ್ಟು ಜನ ಮಕ್ಕಳು ಎಂದು ಗೊತ್ತಿಲ್ಲ, ನನ್ನ ಜೀವನದಲ್ಲಿ ಏನೂ ಚೆನ್ನಾಗಿಲ್ಲ, ಆದರೆ ಸಂಗೀತ ನುಡಿಸುವಷ್ಟು ಕಾಲ ನನಗೆ ನಾನೂ ಒಬ್ಬ ಮನುಷ್ಯಳು ಅನ್ನಿಸುತ್ತದೆ, ನನ್ನ ಮೇಲೆ ನನಗೆ ಗೌರವ ಬರುತ್ತದೆ, ನಾನು ಇದನ್ನು ಕಲಿಯಬೇಕು!’ ಎಂದು ಅವಳು ಅಬ್ಬರಿಸುತ್ತಾಳೆ. ಅದು ಅವರೆಲ್ಲರನ್ನೂ ರೇಖೆಯ ಒಂದೇ ಕಡೆಗೆ ಸೇರಿಸುತ್ತದೆ.
ಲೇಖಕಿ ಸಂಧ್ಯಾರಾಣಿ ಬರೆಯುವ ಲೋಕ ಸಿನೆಮಾ ಟಾಕೀಸಿನಲ್ಲಿ ಬ್ರೆಜಿಲ್ ದೇಶದ ಚಿತ್ರ ‘ದ ವಯೋಲಿನ್ ಟೀಚರ್.’

 

1988 ರ ಸುಮಾರಿಗೆ ಕೆ ಬಾಲಚಂದರ್ ‘ರುದ್ರವೀಣ’ ಎನ್ನುವ ಒಂದು ತೆಲುಗು ಚಿತ್ರವನ್ನು ನಿರ್ದೇಶಿಸಿದ್ದರು. ಕಮರ್ಷಿಯಲ್ ಆಗಿ ಹೆಸರು ಗಳಿಸದೆ ಇದ್ದರೂ ಸಹ, ಚಿತ್ರ ತನ್ನ ಜೀವಪರ ಗುಣಗಳಿಂದ ಗಮನ ಸೆಳೆದಿತ್ತು. ಶ್ರೀಶ್ರೀಯವರ ‘ನೇನು ಸೈತ’ ಎನ್ನುವ ಹಾಡನ್ನು ಸಹ ಇದರಲ್ಲಿ ಬಳಸಿಕೊಳ್ಳಲಾಗಿತ್ತೆಂದು ನೆನಪು. ಇದರಲ್ಲಿ ಇನ್ನೊಂದು ಹಾಡನ್ನು ಸಿರಿವೆನ್ನಲ ಸೀತಾರಾಮಶಾಸ್ತ್ರಿ ಬರೆದಿದ್ದರು. ‘ತರಲಿರಾದ ತನೆ ವಸಂತಂ, ತನ ದರಿಕಿ ರಾನಿ ವನಾಲಕೋಸಂ’ – ‘ತನ್ನ ಬಳಿಗೆ ಬರಲಾಗದ ವನಗಳಿಗಾಗಿ ವಸಂತ ತಾನೇ ನಡೆದು ಬರುವುದಿಲ್ಲವೆ’ ಎನ್ನುವ ಹಾಡಿನ ಮುಂದಿನ ಸಾಲುಗಳು ಇನ್ನೂ ಇಷ್ಟವಾಗುತ್ತವೆ.

‘ಹುಣ್ಣಿಮೆಯ ಬೆಳಕು ಕೆಲವರಿಗೆ ಮಾತ್ರ ದಕ್ಕುತ್ತದೆಯೆ? ಅಡವಿಯನ್ನೂ ಬೆಳಗುವುದಿಲ್ಲವೆ?’, ಹೀಗೇ ಸಾಗುವ ಹಾಡು, ‘ಪ್ರಜಾಧನಂ ಕಾನೀ ಕಲಾವಿಲಾಸಂ, ಏ ಪ್ರಯೋಜನಂ ಲೇನಿ ವೃಥಾ ವಿಕಾಸಂ’ – ‘ಎಲ್ಲಾ ಜನರಿಗೂ ದಕ್ಕದ ಯಾವುದೇ ಕಲಾವಿಲಾಸ, ಪ್ರಯೋಜನವೇ ಇಲ್ಲದ ವಿಕಾಸದಂತೆ’ ಎಂದು ಮುಂದುವರಿಯುತ್ತದೆ. ಕಲೆ ನಿರ್ವಾತದಲ್ಲಿ ಘಟಿಸಬಹುದು ಆದರೆ ಸಾರ್ಥಕವೆನಿಸುವುದಿಲ್ಲ, ಜನಗಳ ಬಳಿಗೆ ಹೋಗುವುದರಿಂದಲೇ ಕಲೆಗೆ ಆತ್ಮ ದಕ್ಕುತ್ತದೆ ಎನ್ನುವುದನ್ನು ಆ ಚಿತ್ರ ಬಲವಾಗಿ ಪ್ರತಿಪಾದಿಸುತ್ತದೆ. 2015 ರಲ್ಲಿ ಬಿಡುಗಡೆಯಾದ ‘ದ ವಯೋಲಿನ್ ಟೀಚರ್’ ಚಿತ್ರ ನೋಡುವಾಗ ನನ್ನ ಪ್ರಜ್ಞೆಯಲ್ಲಿದ್ದದ್ದು ಅದೇ ಹಾಡಿನ ಸಾಲುಗಳು.

ವಯೊಲಿನ್ ತನ್ನ ದೇಹದ ಒಂದು ಭಾಗವೇನೋ ಎನ್ನುವಂತೆ ಪಳಗಿಸಿಕೊಂಡಿದ್ದ ನಾಯಕ ಲಾರ್ಟೆ ಅದರ ಸಾಧನೆಯನ್ನು ಮುಂದುವರೆಸಲು ಒಂದು ಕಲಾಶಾಲೆಯಲ್ಲಿ ಆಡಿಶನ್ ನೀಡಲು ಹೋದಾಗ, ಇದ್ದಕ್ಕಿದ್ದಂತೆ ಕೈ ಬೆವರುತ್ತದೆ, ಪ್ರಪಂಚ ಸ್ತಬ್ಧವಾಗುತ್ತದೆ, ಅವನು ಅಂದು ವಯೊಲಿನ್ ನುಡಿಸಲಾಗುವುದೇ ಇಲ್ಲ. ಹಾಗೆ ಸೋತ ಆತ ತನ್ನ ಆತ್ಮವಿಶ್ವಾಸ ಮತ್ತು ಕಲೆ ಎರಡನ್ನೂ ಹೇಗೆ ಜನಗಳ ನಡುವೆ ಹೋಗಿ ಮತ್ತೆ ಪಡೆದುಕೊಳ್ಳುತ್ತಾನೆ ಎನ್ನುವುದು ಚಿತ್ರದ ವಸ್ತು.

ಅವನು ಜನಗಳ ನಡುವೆ ಹೋಗುವ ಸ್ಥಳ ಸೌ ಪಾಲೋ, ಬ್ರೆಜಿಲ್ ನ ಕುಖ್ಯಾತ ಸ್ಲಂ. ಟೀಚರ್ ಒಬ್ಬ ಹೀಗೆ ಸ್ಲಂ ಗೆ ಬಂದು, ಅಲ್ಲಿನ ಮಕ್ಕಳಿಗೆ ಪಾಠ ಹೇಳಿ, ಆ ಮೂಲಕ ನಾಯಕನಾಗುವ ಹಲವಾರು ಚಿತ್ರಗಳನ್ನು ನಾವು ನೋಡಿದ್ದೇವೆ. ಆದರೆ ಈ ಚಿತ್ರದ ವೈಶಿಷ್ಟ್ಯತೆ ಏನು ಎಂದರೆ ಈ ಚಿತ್ರವನ್ನು ಸ್ಲಂ ಒಂದರಲ್ಲಿ ಚಿತ್ರಿಸಲಾಗಿದೆ ಮತ್ತು ಚಿತ್ರೀಕರಣದಲ್ಲಿ ಅಲ್ಲಿನವರೇ ಪಾಲ್ಗೊಂಡಿದ್ದಾರೆ. ಹಾಗಾಗಿ ಇಲ್ಲಿನ ಸ್ಲಂಗೆ ಯಾವುದೇ ‘ಅಲಂಕಾರಿಕ’ ಗುಣಲಕ್ಷಣಗಳಿಲ್ಲ.

ಅಲ್ಲಿನ ಜನರ ಕೂರುವಿಕೆ, ನಡೆಯುವಿಕೆ, ಇರುವಿಕೆಯಲ್ಲಿ ಯಾವುದೇ ತೋರಿಕೆಯ ಚಲನವಲನಗಳಿಲ್ಲ. ಇದು ಎದ್ದು ಕಾಣುವಂತೆ ತೋರುವುದು ಒಂದು ದೃಶ್ಯದಲ್ಲಿ. ಸ್ಲಂನ ಇಬ್ಬರು ಹುಡುಗರು ಗಾಡಿಯಲ್ಲಿ ಹೋಗುವಾಗ ತಾವು ಹೇಳಿದೊಡನೆ ಗಾಡಿ ನಿಲ್ಲಿಸಲಿಲ್ಲ ಎನ್ನುವ ಒಂದೇ ‘ಅನುಮಾನ’ದ ಮೇಲೆ ಪೋಲೀಸರು ಆ ಹದಿವಯಸ್ಸಿನ ಹುಡುಗರ ಮೇಲೆ ಗುಂಡು ಹಾರಿಸುತ್ತಾರೆ. ವಯೋಲಿನ್ ನುಡಿಸುವ ಕೈಬೆರಳುಗಳಲ್ಲಿ ಮಾಂತ್ರಿಕತೆ ಹೊಂದಿದ್ದ ಆ ಹುಡುಗ ಸ್ಯಾಮ್ಯುಎಲ್ ಸಾಯುತ್ತಾನೆ.

ಇಡೀ ಸ್ಲಂ ಜನ ಎದ್ದು ನಿಂತು ಪ್ರತಿಭಟಿಸುತ್ತಾರೆ, ಪೋಲೀಸರಿಗೆ ತಮ್ಮ ನೆಲ ಬಿಟ್ಟು ಜಾಗದಿಂದ ತೊಲಗಲು ಹೇಳುತ್ತಾರೆ. ಅವರ ಕಣ್ಣುಗಳಲ್ಲಿ ನಿಗಿನಿಗಿ ಕೆಂಡ ಉರಿಯುತ್ತಿರುತ್ತದೆ. ತಮ್ಮ ಮೇಲೆ ಕಾಲದಿಂದ ಅಧಿಕಾರ ವ್ಯವಸ್ಥೆ ತೋರಿದ ದರ್ಪ, ಮಾಡಿದ ಅಪಮಾನ, ತೋರಿಸಿದ ದೌರ್ಜನ್ಯ ಎಲ್ಲದಕ್ಕೂ ಅವರು ಅಂದು ಕಾಲೂರಿ ನಿಂತು ಲೆಕ್ಕ ಕೇಳುತ್ತಿರುತ್ತಾರೆ. ಅದೊಂದು ದೃಶ್ಯವನ್ನು ಮತ್ತೆ ಮತ್ತೆ ನೋಡಬೇಕು. ಅಲ್ಲಿ ಅವರ್ಯಾರೂ ಬಹುಶಃ ನಟಿಸಿಯೇ ಇಲ್ಲ, ಆ ಪ್ರತಿಭಟನೆ ಕ್ಯಾಮೆರಾಗಾಗಿಯೂ ಅಲ್ಲ, ಅದು ಅವರೆಲ್ಲರ ಆಳದಲ್ಲೂ ಒತ್ತಿಟ್ಟ ಕುದಿ, ಜ್ವಾಲಾಮುಖಿಯಂತೆ ಚಿಮ್ಮಿಬರುತ್ತದೆ.

ವಯೊಲಿನ್ ತನ್ನ ದೇಹದ ಒಂದು ಭಾಗವೇನೋ ಎನ್ನುವಂತೆ ಪಳಗಿಸಿಕೊಂಡಿದ್ದ ನಾಯಕ ಲಾರ್ಟೆ ಅದರ ಸಾಧನೆಯನ್ನು ಮುಂದುವರೆಸಲು ಒಂದು ಕಲಾಶಾಲೆಯಲ್ಲಿ ಆಡಿಶನ್ ನೀಡಲು ಹೋದಾಗ, ಇದ್ದಕ್ಕಿದ್ದಂತೆ ಕೈ ಬೆವರುತ್ತದೆ, ಪ್ರಪಂಚ ಸ್ತಬ್ಧವಾಗುತ್ತದೆ, ಅವನು ಅಂದು ವಯೊಲಿನ್ ನುಡಿಸಲಾಗುವುದೇ ಇಲ್ಲ.

ಚಿತ್ರದ ಕಥೆಯನ್ನು ಮುಂದುವರೆಸುವುದಾದರೆ, ಆಡಿಶನ್ ನಲ್ಲಿ ಸೋತ ಲಾರ್ಟೆಗೆ ತಂದೆಯ ಫೋನ್ ಬರುತ್ತದೆ. ಚಿತ್ರದಲ್ಲಿ ಆತ ಸಂಪರ್ಕದಲ್ಲಿರುವುದು ತಂದೆಯೊಡನೆ ಮಾತ್ರ, ತಾಯಿಯ ಮಾತು ಬರುತ್ತದೆಯಾದರೂ ಅಮ್ಮನೊಡನೆ ಅವನು ಎಂದೂ ಮಾತನಾಡುವುದಿಲ್ಲ. ಅಪ್ಪನಿಗೆ ಅವನು ತನ್ನ ಸೋಲನ್ನು ಹೇಳಿಕೊಳ್ಳುವುದಿಲ್ಲ. ಹತಾಶನಾಗಿದ್ದಾನೆ, ಮನೆ ಬಾಡಿಗೆ ಕಟ್ಟಿಲ್ಲ, ಬರಿಗೈ. ಗೆಳೆಯನೊಬ್ಬ ಸ್ಲಂನಲ್ಲಿ ಮಕ್ಕಳಿಗೆ ವಯೋಲಿನ್ ಕಲಿಸುವ ಕೆಲಸ ಖಾಲಿ ಇರುವುದಾಗಿ ಹೇಳುತ್ತಾನೆ. ಮೊದಲು ನಿರಾಕರಿಸಿದರೂ ಅನಿವಾರ್ಯವಾಗಿ ಈತ ಅದಕ್ಕೊಪ್ಪಿ ಅಲ್ಲಿಗೆ ಹೋಗುತ್ತಾನೆ. ತನ್ನ ಪ್ರಪಂಚದಿಂದ ಅವನು ಸ್ಲಂಗೆ ಹೋಗುವ ಪಯಣವನ್ನು ಕ್ಯಾಮೆರಾ ದೀರ್ಘಸಮಯ ತೆಗೆದುಕೊಂಡು ಚಿತ್ರಿಸುತ್ತದೆ.

ಎರಡೂ ಪ್ರಪಂಚಗಳಿಗಿರುವ ದೂರವನ್ನು ಚಿತ್ರ ಕಟ್ಟಿಕೊಡುವ ಬಗೆ ಹಾಗೆ. ಅದೊಂದು ಎನ್ ಜಿ ಓ ನಡೆಸುತ್ತಿರುವ ಶಾಲೆ. ಅದೇ ಸ್ಲಂ ನ ಎಂಟು ಹತ್ತು ಮಕ್ಕಳು. ಅವರಲ್ಲಿ ಕೆಲವರಿಗೆ ವಯೊಲಿನ್ ಹಿಡಿಯಲೂ ಸಹ ಬಾರದು. ಇವನಿಗೆ ಅದನ್ನು ಕಂಡರೆ ಅಸಹನೆ, ಛೆ, ಇವರಿಗೆ ನಾನು ಕಲಿಸಬೇಕೆ ಎನ್ನುವ ಸಿಟ್ಟು. ಅಲ್ಲೊಬ್ಬಳು ಪುಟ್ಟ ಹುಡುಗಿ ಮೂಲೆಯಲ್ಲಿ ಕೂತು, ತೂಕಡಿಸುತ್ತಿರುತ್ತಾಳೆ, ‘ನಿದ್ದೆಗೆ ತೊಂದರೆಯಾಗುತ್ತಿದೆಯೇ’ ಎಂದು ಕೊಂಕುನುಡಿ ನುಡಿವ ಇವನಿಗೆ, ಇನ್ನೊಬ್ಬ ಹುಡುಗ ‘ಅವಳು ಬಸುರಿ’ ಎನ್ನುತ್ತಾನೆ. ಲಾರ್ಟೆ ಬೆಚ್ಚಿ ನೋಡುತ್ತಾನೆ. ಆ ಒಂದು ದೃಶ್ಯದಲ್ಲಿ ನಿರ್ದೇಶಕ ಏನೆಲ್ಲಾ ಹೇಳಿಬಿಡುತ್ತಾನೆ. ಇಂಥಾದ್ದೇ ಇನ್ನೊಂದು ಸಂಭಾಷಣೆ : ಅಲ್ಲಿನ ಹುಡುಗರಲ್ಲಿ ಅತ್ಯಂತ ಮನೋಹರವಾಗಿ ವಯೊಲಿನ್ ನುಡಿಸುವ ಸ್ಯಾಮ್ಯುಎಲ್, ಈ ಟೀಚರ್ ನನ್ನು ಕೇಳುವುದು ಒಂದೇ ಮಾತು, ‘ನೀವು ಅಭ್ಯಾಸ ಮಾಡುವಾಗ ನಿಮ್ಮಪ್ಪ ಬೈಯುತ್ತಿರಲಿಲ್ಲವೆ?’, ಲಾರ್ಟೆ ಮಾತಿಲ್ಲದೆ ನಿಂತು ಬಿಡುತ್ತಾನೆ. ಹೀಗೆ, ಮಾತು ನಿಂತ ಮೇಲೂ ಮನಸ್ಸಿನಲ್ಲಿ ಸಂಭಾಷಣೆ ಮುಂದುವರೆಯುತ್ತಲೇ ಇರುತ್ತದೆ…

ಲಾರ್ಟೆ ಜಗತ್ತಿನಲ್ಲಿ ಸದಾ ಸಂಗೀತದ್ದೇ ಚರ್ಚೆ, ಅಲ್ಲಿನವರ ಪ್ರತಿಕ್ಷಣದ ತುಡಿತ ಸಂಗೀತಕ್ಕೆ ಇನ್ನೊಂದು ಹೆಜ್ಜೆ ಹತ್ತಿರಾಗುವುದು, ಮತ್ತಷ್ಟು ಉತ್ತಮವಾಗುವುದರ ಕಡೆಗೆ ಅವರ ಅನುದಿನದ ಪಯಣ. ಆದರೆ ಇಲ್ಲಿ, ಸರಿಯಾಗಿ ಶೃತಿ ಹಿಡಿಯುವುದಿರಲಿ, ವಯೋಲಿನ್ ಅನ್ನು ಯಾವ ಕೈಯ್ಯಲ್ಲಿ ಹಿಡಿಯಬೇಕು ಎನ್ನುವುದೂ ಗೊತ್ತಿಲ್ಲದ ಹುಡುಗ ಹುಡುಗಿಯರು. ದಿನದ ಮುಕ್ಕಾಲುಪಾಲು ಸಮಯವನ್ನು ಲಾರ್ಟೆ ಅಭ್ಯಾಸದಲ್ಲಿ ಕಳೆದರೆ, ಇಲ್ಲಿ ಯಾವಾಗೆಂದರೆ ಆಗ, ಅಭ್ಯಾಸ ನಿಲ್ಲಿಸಿ, ಪಕ್ಕದ ಅಂಗಡಿಗೆ ಹೋಗಿ ತಿಂಡಿ ಕೊಂಡು ತಿನ್ನುವ ಅಶಿಸ್ತು. ತನ್ನ ಕ್ಲಾಸ್ ನಡೆಸಲು ಸರಿಯಾದ ಜಾಗ ಸಹ ಇಲ್ಲದೆ, ಬಯಲಿನಲ್ಲಿ ಕಲಿಸಬೇಕಾದ ಅನಿವಾರ್ಯತೆ. ಇವನಿಗೆ ರೋಸಿ ಹೋಗುತ್ತದೆ, ಮೊದಲೇ ಅರೆಮನಸ್ಸಿನ ಕೆಲಸ. ಮುಖ್ಯಸ್ಥೆಯ ಬಳಿ ಹೋಗಿ ತನಗಾಗದು ಎಂದು ಹೇಳಿಬಿಡುತ್ತಾನೆ. ಆದರೆ ಆ ಮುಖ್ಯಸ್ಥೆಗೋ ಹೇಗಾದರೂ ಇಲ್ಲಿನ ಮಕ್ಕಳ ಅಶಿಸ್ತಿನ ಬದುಕಿನೊಳಗೆ ಒಂದಿಷ್ಟು ರಾಗಗಳನ್ನು ತುಂಬುವ ಹಂಬಲ. ಇವನ ಕೈಲಿ ಸ್ವಲ್ಪ ಅಡ್ವಾನ್ಸ್ ಹಣ ಇಡುತ್ತಾಳೆ, ಅವನು ಕಲಿಸಲು ಒಂದು ಕೊಠಡಿಯ ವ್ಯವಸ್ಥೆ ಆಗಿದೆ ಎಂದು ಹೇಳುತ್ತಾಳೆ. ಕೈಯ್ಯಲ್ಲಿ ಹಣಹಿಡಿದು ನಿಂತ ಇವನು ನಮ್ಮೆಲ್ಲರ ಅನೇಕಾನೇಕ ಸಂಘರ್ಷಗಳಿಗೆ, ಹೊಂದಾಣಿಕೆಗಳಿಗೆ ಕನ್ನಡಿ ಆಗುತ್ತಾನೆ. ಮರುದಿನ ಕೆಲಸಕ್ಕೆ ಬರುತ್ತಾನೆ. ಒಮ್ಮೆ ಇವನನ್ನು ಅಲ್ಲಿನ ಮಾಫಿಯಾ ಹೆದರಿಸಿ ಬಂದೂಕಿನ ಕೊಳವೆಯನ್ನು ಎದೆಗಿಟ್ಟು ವಯೋಲಿನ್ ನುಡಿಸು ಎಂದಾಗ, ಅವನಿಗೆ ಹೃದಯ ಬಾಯಿಗೆ ಬರುತ್ತದೆ. ಐನ್ ಸಮಯದಲ್ಲೇ ಕೈಕೊಡುವ ಅವನ ಸಂಗೀತದ ಬಗ್ಗೆ ಅವನಿಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ ಅಂದು ಅವನು ವಯೊಲಿನ್ ನುಡಿಸೇಬಿಡುತ್ತಾನೆ, ಎಷ್ಟು ಚೆನ್ನಾಗಿ ನುಡಿಸುತ್ತಾನೆ ಎಂದರೆ, ಅದೇ ರಾತ್ರಿಯಿಂದ ಅವನು ಸ್ಲಂ ಸ್ಟಾರ್ ಆಗಿಬಿಡುತ್ತಾನೆ.

ಒಮ್ಮೆ ಲಾರ್ಟೆ ಸಂಗೀತದ ಸ್ವರಗಳಿರುವ ಹಾಳೆಗಳನ್ನು ಎಲ್ಲರಿಗೂ ಹಂಚಿ, ಈಗ ಇದರ ಪ್ರಕಾರ ನುಡಿಸುವುದನ್ನು ಕಲಿಯುವ ಎಂದಾಗ ಎಲ್ಲರೂ ಅವನ ಮುಖ ನೋಡುತ್ತಾ ಕುಳಿತುಕೊಳ್ಳುತ್ತಾರೆ. ಏನು ಎಂದರೆ ಅದುವರೆವಿಗೂ ಅವರಿಗೆ ಯಾರೂ ಸಂಗೀತದ ನೋಟ್ ಗಳ ಬಗ್ಗೆ ಹೇಳಿಯೂ ಇರುವುದಿಲ್ಲ! ಚಿತ್ರದಲ್ಲಿ ಮೊದಲು ಎರಡು ಬಗೆಯ ಸಮೀಕರಣಗಳಿರುತ್ತವೆ. ಮೊದಲನೆಯದು ಶಿಕ್ಷಕನಿಗೆ ಅಲ್ಲಿನ ಮಕ್ಕಳ ಬಗೆಗೆ ಇರುವ ಉದಾಸೀನ. ಎರಡನೆಯದು ಅದನ್ನು ಅರಿತ ಮಕ್ಕಳು ತಮ್ಮದೇ ರೀತಿಯಲ್ಲಿ ಅದರ ಜೊತೆ ಹೋರಾಡುತ್ತಾರೆ. ವರ್ಣಿಯನಾದ ಅವನನ್ನು ‘ಒಬಾಮಾ ಜೂನಿಯರ್’ ಎಂದು ಕರೆಯುತ್ತಿರುತ್ತಾರೆ. ಅದು ಅವನ ಮನೋಭಾವ ಮತ್ತು ಅವನ ದೇಹದ ಬಣ್ಣ ಎರಡರ ಬಗೆಗೂ ಛೇಡಿಸುವ ಅವರ ಅಸ್ತ್ರ. ಇವರೇನು ಕಲಿತಾರು ಎನ್ನುವ ನಾಯಕನ ಉಪೇಕ್ಷೆ, ಇವನು ಮೇಲರಿಮೆಗಿಷ್ಟು ಎಂದು ಬೈದುಕೊಳ್ಳುವ ಆ ವಿದ್ಯಾರ್ಥಿಗಳ ನಡುವಿನ ಮಂಜಿನ ಗೋಡೆ ಕರಗಲು ಕ್ಲಾಸ್ ನಲ್ಲಿ ಇದ್ದಕ್ಕಿದ್ದಂತೆ ಸಿಡಿಯುವ ಒಬ್ಬ ತರಲೆ ಹುಡುಗಿಯ ಸ್ಫೋಟ ಕಾರಣವಾಗುತ್ತದೆ.

‘ನನಗೆ ನನ್ನ ಅಪ್ಪ ಯಾರು ಅಂತ ಗೊತ್ತಿಲ್ಲ, ನನ್ನ ಅಮ್ಮನಿಗೆ ತನಗೆ ಎಷ್ಟು ಜನ ಮಕ್ಕಳು ಎಂದು ಗೊತ್ತಿಲ್ಲ, ನನ್ನ ಜೀವನದಲ್ಲಿ ಏನೂ ಚೆನ್ನಾಗಿಲ್ಲ, ಆದರೆ ಸಂಗೀತ ನುಡಿಸುವಷ್ಟು ಕಾಲ ನನಗೆ ನಾನೂ ಒಬ್ಬ ಮನುಷ್ಯಳು ಅನ್ನಿಸುತ್ತದೆ, ನನ್ನ ಮೇಲೆ ನನಗೆ ಗೌರವ ಬರುತ್ತದೆ, ನಾನು ಇದನ್ನು ಕಲಿಯಬೇಕು!’ ಎಂದು ಅವಳು ಅಬ್ಬರಿಸುತ್ತಾಳೆ. ಅದು ಅವರೆಲ್ಲರನ್ನೂ ರೇಖೆಯ ಒಂದೇ ಕಡೆಗೆ ಸೇರಿಸುತ್ತದೆ. ಅದೇ ಸಮಯಕ್ಕೆ ಸ್ಯಾಮ್ಯುಎಲ್, ಕೆಲಸಕ್ಕೆ ಸೇರಿ ಮನೆಗೆ ನಾಲ್ಕು ಕಾಸು ಸಂಪಾದಿಸು ಎನ್ನುವ ಅಪ್ಪನ ಮಾತನ್ನು ಮೀರಿ ಸಂಗೀತ ಕಲಿಯುವ ಹಂಬಲದಿಂದ ಗೆಳೆಯನೊಟ್ಟಿಗೆ ಬಂದಿರುತ್ತಾನೆ.

ಅಲ್ಲೊಬ್ಬಳು ಪುಟ್ಟ ಹುಡುಗಿ ಮೂಲೆಯಲ್ಲಿ ಕೂತು, ತೂಕಡಿಸುತ್ತಿರುತ್ತಾಳೆ, ‘ನಿದ್ದೆಗೆ ತೊಂದರೆಯಾಗುತ್ತಿದೆಯೇ’ ಎಂದು ಕೊಂಕುನುಡಿ ನುಡಿವ ಇವನಿಗೆ, ಇನ್ನೊಬ್ಬ ಹುಡುಗ ‘ಅವಳು ಬಸುರಿ’ ಎನ್ನುತ್ತಾನೆ. ಲಾರ್ಟೆ ಬೆಚ್ಚಿ ನೋಡುತ್ತಾನೆ. ಆ ಒಂದು ದೃಶ್ಯದಲ್ಲಿ ನಿರ್ದೇಶಕ ಏನೆಲ್ಲಾ ಹೇಳಿಬಿಡುತ್ತಾನೆ.

ನಾಗರೀಕ ಪ್ರಪಂಚದಲ್ಲಿ, ಸಿದ್ಧಪಡಿಸಿದ ರಸ್ತೆಗಳಲ್ಲಿ ನಡೆಯುವ, ‘ಮಾದರಿ’ ಕುಟುಂಬಗಳಲ್ಲಿ ಬದುಕುವವರ ಎಣಿಕೆಗೂ ಸಿಕ್ಕದಂತೆ ಅಲ್ಲಿನ ಹುಡುಗರ ಬದುಕಿನ ಸಂಕೀರ್ಣತೆ ಇರುತ್ತದೆ. ಅವರ ಬದುಕಿನ ತಲ್ಲಣಗಳನ್ನು, ಪರಿಸ್ಥಿತಿ ಅವರನ್ನು ದೂಡುವ ಅನಿವಾರ್ಯತೆಗಳನ್ನು ನಾವು ಊಹಿಸಲೂ ಸಾಧ್ಯವಿಲ್ಲ. ಅಲ್ಲಿನ ಹುಡುಗರಿಗೆ ‘ಅಪರಾಧ’ ಬಹಳಷ್ಟು ಸಲ ಆಯ್ಕೆ ಅಲ್ಲ, ಇರುವಿಕೆಯ ಅನಿವಾರ್ಯ. ಅಲ್ಲಿನ ಕೆಲವು ಹುಡುಗರು ಹೀಗೆ ಒಂದು ಕ್ರೆಡಿಟ್ ಕಾರ್ಡ್ ಸ್ಕ್ಯಾಮ್ ನಲ್ಲಿ ಸಿಕ್ಕಿಹಾಕಿಕೊಂಡಿರುತ್ತಾರೆ. ಸ್ಯಾಮ್ಯುಎಲ್ ಅದರಲ್ಲಿ ಸೇರಿರುವುದಿಲ್ಲ, ಆದರೆ ಅವನಿಗೆ ಆಶ್ರಯ ಕೊಟ್ಟಿರುವ ಹುಡುಗ ಅವನ ಗೆಳೆಯ ಅಲ್ಲಿ ಒಂದು ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿರುತ್ತಾನೆ. ಒಮ್ಮೆ ಅಲ್ಲಿನ ಮಾಫಿಯಾ ನಾಯಕ ಈ ವಯೊಲಿನ್ ಟೀಚರ್ ನನ್ನು ಕರೆದು, ತನ್ನ ಮಗಳ ಹುಟ್ಟುಹಬ್ಬಕ್ಕೆ ಸಂಗೀತ ನುಡಿಸ್ಬೇಕು ಎಂದು ಆಹ್ವಾನಿಸುತ್ತಾನೆ. ವಿಧಿಯಿಲ್ಲದೆ ಒಪ್ಪುವ ವಯೊಲಿನ್ ಟೀಚರ್ ತನ್ನ ಶಿಷ್ಯರ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಡಲು ಕೇಳುತ್ತಾನೆ. ಅದಕ್ಕೆ ಒಂದು ವ್ಯವಸ್ಥೆಯೂ ಆಗುತ್ತದೆ. ಆದರೆ ಅದೇ ದಿನ ಸಾಮ್ಯುಎಲ್ ಮತ್ತು ಅವನ ಗೆಳೆಯ ಹಿಂದಿರುವಾಗ ಪೋಲಿಸ್ ಶೂಟ್ ಔಟ್ ನಡೆದು, ಸ್ಯಾಮ್ಯುಎಲ್ ಸಾಯುತ್ತಾನೆ.

ಆ ಸಾವು ಅನೇಕ ಸಮೀಕರಣಗಳನ್ನು ಬದಲಾಯಿಸಿಬಿಡುತ್ತದೆ. ಅಲ್ಲಿನ ಮಕ್ಕಳಿಗೆ ಈಗ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳುವ ಅಗತ್ಯ ಬರುತ್ತದೆ. ‘ಹೊರಗೆಲ್ಲೋ ಒಂದು ಮೃಗ ಕಾದು ಕುಳಿತಿದೆ ಅನ್ನಿಸುತ್ತದೆ, ಆದರೆ ಸಂಗೀತ ಪ್ರಾರಂಭವಾದ ಕ್ಷಣ ಎಲ್ಲವೂ ಸರಿಯಾಗಿದೆ ಅನ್ನಿಸಿಬಿಡುತ್ತದೆ’ ಎಂದು ಪಾತ್ರವೊಂದು ಹೇಳುತ್ತದೆ. ಸ್ಯಾಮ್ಯುಎಲ್ ಹೆಸರಿನಲ್ಲಿ ಅವರೆಲ್ಲರೂ ಒಂದು ಸಂಗೀತ ತಂಡ ಕಟ್ಟಲು ಹೊರಡುತ್ತಾರೆ. ಆ ಕ್ಷಣಕ್ಕೆ ಬದುಕುತ್ತಿದ್ದ, ಅದಕ್ಕೆ ಬೇಕಾದ ಯಾವುದೇ ಕೆಲಸ ಮಾಡುತ್ತಿದ್ದ ಅವರ ಬದುಕಿನಲ್ಲಿ ಈಗ ಒಂದು ಘನ ಉದ್ದೇಶ ಬಂದಿದೆ. ಆದರೆ ಅದೇ ಸಮಯಕ್ಕೆ ಲಾರ್ಟೆಗೆ ಸಂಗೀತಶಾಲೆಯಲ್ಲಿ ಅಡ್ಮಿಶನ್ ಸಿಕ್ಕಿದೆ, ಅವನಿಗೆ ಈ ಕೆಲಸ ಬಿಡಬೇಕಾಗಿದೆ. ಆ ಹುಡುಗರು ಕನಲಿ ಹೋಗುತ್ತಾರೆ. ‘ಎಲ್ಲರ ಹಾಗೆ ನೀನೂ ನಮ್ಮನ್ನು ನಡುದಾರಿಯಲ್ಲಿ ಬಿಟ್ಟುಹೋಗುವ ಸ್ವಾರ್ಥಿ’ ಎಂದು ಹಂಗಿಸುತ್ತಾರೆ. ಕೆಲಸ ಬಿಟ್ಟುಹೋದ ಲಾರ್ಟೆಗೆ ಸಂಬಂಧಗಳನ್ನು ಬಿಡಲಾಗುವುದಿಲ್ಲ, ವಾಪಸ್ಸಾಗುತ್ತಾನೆ, ಅವರ ಜೊತೆಗೆ ನಿಲ್ಲುತ್ತಾನೆ. ಸಂಪಾದನೆಯ ಹಾದಿ ಆಗಲಿ ಎಂದು ಶುರುವಾದ ಪಯಣದ ಕಡೆಯಲ್ಲಿ ಒಬ್ಬ ಸಂಗೀತಗಾರನಿಗೆ ಅವನಿಗೆ ಬೇಕಾದ ಸಂಗೀತ ಶಾಲೆಯಲ್ಲಿ ದಾಖಲಾತಿ ಸಿಕ್ಕಿರುತ್ತದೆ, ಅಪರಾಧಗಳ ಆಡೊಂಬಲವಾದ ಸ್ಥಳದಲ್ಲಿ ಬಾಲಾಪರಾಧಿಗಳು ಮತ್ತು ಪುಟ್ಟವಯಸ್ಸಿನ ತಾಯಿಯರ ಒಂದು ಆರ್ಕೇಸ್ಟ್ರಾ ತಂಡ ಸಿದ್ಧವಾಗಿರುತ್ತದೆ.

ಚಿತ್ರದ ಮೂಲ ಹೆಸರು, ‘ಹೆಲಿಯೋಪೊಲಿಸ್’ – ಅದು ಸೌ ಪೌಲೊ ದ ಒಂದು ಕುಖ್ಯಾತ ಸ್ಲಂ ನ ಹೆಸರು. ನಿಜ ಹೇಳಬೇಕೆಂದರೆ ಅದೇ ಹೆಸರು ಈ ಚಿತ್ರಕ್ಕೆ ಹೆಚ್ಚು ಒಗ್ಗುತ್ತದೆ, ಇದು ಒಬ್ಬ ವಯೊಲಿನ್ ಟೀಚರ್ ನ ಕಥೆ ಮಾತ್ರವಲ್ಲ, ಆ ಸ್ಲಂ ನ ಎಲ್ಲರ ಕಥೆ. ಅತ್ಯಂತ ಸುಲಭವಾಗಿ ಮೆಲೋಡ್ರಾಮ ಅಥವಾ ಒಂದು ಪ್ರೇಮಕಥೆ ಆಗಬಹುದಾಗಿದ್ದ ಚಿತ್ರವನ್ನು ನಿರ್ದೇಶಕ ಸೆರ್ಜಿಯೋ ಮಕಾಡೋ ಸ್ಲಂನ ಕಥೆ ಕಟ್ಟುವುದಕ್ಕೆ ಮಾತ್ರ ಬಳಸುವುದರಲ್ಲಿ ಸಂಯಮ ತೋರಿದ್ದಾರೆ. ಇಲ್ಲಿ ಲಾರ್ಟೆಯ ಪಾತ್ರವನ್ನು ಸಮತೋಲದಿಂದ ಕಟ್ಟಲಾಗಿದೆ, ಆತನನ್ನು ಸೂಪರ್ ಹೀರೋ ಮಾಡಲು ಹೋಗಿಲ್ಲದೆ ಇರುವುದು ಚಿತ್ರವನ್ನು ಅತ್ಯಂತ ಸಹಜವಾಗಿಸುತ್ತದೆ.

ಆ ಸ್ಲಂ ನಲ್ಲಿರುವ ‘ಬಕಾರಲಿ ಇನ್ಸ್ಟಿಟ್ಯೂಟ್’ ಈ ಕಥೆಗೆ ಪ್ರೇರಣೆ ಎಂದು ಹೇಳಲಾಗುತ್ತದೆ. ಪ್ರತಿ ವರ್ಷ ಸುಮಾರು ೩೦೦೦ ಮಕ್ಕಳು ಅಲ್ಲಿ ಸಂಗೀತ ಕಲಿಯುತ್ತಾರೆ. ಭಾರತೀಯ ಸಂಜಾತ ಜುಬೇನ್ ಮೆಹ್ತಾ ಅಲ್ಲಿ ಸಂಗೀತ ನಿರ್ದೇಶಕರು. ಯಾವುದೇ ಅಲಂಕಾರಿಕ ಪರಿಕರಗಳನ್ನು ಬಳಸದೆ, ಆದರೆ ಆ ಕಾರಣಕ್ಕೆ ಎಲ್ಲಿಯೂ ಹೊಂದಾಣಿಕೆ ಮಾಡದೆ, ಕಲಾತ್ಮಕತೆಯ ಚೌಕಟ್ಟಿನಲ್ಲಿ ಹೇಗೆ ಇಂತಹ ಒಂದು ಚಿತ್ರವನ್ನು ಕಟ್ಟಬಹುದು ಎಂದು ಅರ್ಥಮಾಡಿಕೊಳ್ಳಲು ಈ ಚಿತ್ರ ನೋಡಬೇಕು.