ಆಗಾಗ ಅವಳು ಬರುತ್ತಾಳೆ ನನ್ನ ಕನಸಿನಲ್ಲಿ. ಬಂದು ಔಷಧಿ ಕೇಳುತ್ತಾಳೆ. ಹೀಗೆ ನನ್ನ ಬಳಿ ಕುಳಿತು ಲೋಕಾಭಿರಾಮವಾಗಿ ಹರಟುತ್ತ ಬೆಚ್ಚಿ ಬಿದ್ದವರಂತೆ ತಕ್ಷಣ ರಸ್ತೆಗಿಳಿದು ಓಡುತ್ತ ಅವರ ಹಿಂದೆ ಪೋಲಿಸರು, ಪುಡಿರೌಡಿಗಳು, ಈಗಷ್ಟೇ ಮೀಸೆ ಚಿಗುರಿರುವ ಪಡಪೋಶಿಗಳು, ಲಾರಿ ಡ್ರೈವರುಗಳು… ಅವಳು ಓಡುತ್ತಲೇ ಇದ್ದಾಳೆ, ಏಳುತ್ತಾ ಬೀಳುತ್ತಾ, ಅವಳ ಹಿಂದೊಂದು ಕ್ಷುದ್ರ ಲೋಕ ಬೆನ್ನಟ್ಟಿದೆ, ಅವಳನ್ನು ಹುರಿದು ತಿನ್ನಲು.
ಡಾ. ಲಕ್ಷ್ಮಣ ವಿ. ಎ ಬರಹ.

 

ಮಹಾನಗರಗಳ ಬೀದಿ, ಬಯಲು, ಮಹಾಬೀದಿ ರಾಜಬೀದಿಗಳ ಸಂಧಿಗೊಂದಿಗಳಲ್ಲಿ ಸುತ್ತುವಾಗ ಕೆಲವೊಂದು ಚಿತ್ರಗಳು ಚಿತ್ತವನ್ನು ಕಲಕಿ ಬಿಡುತ್ತವೆ. ಬುದ್ಧನಿಗೂ ಆಗಿದ್ದು ಹಾಗೆಯೇ ಅಲ್ಲವೆ? ಒಬ್ಬ ಅಸಾಹಕ ವೃದ್ಧ, ಒಬ್ಬ ಅನಾಥ ರೋಗಿ, ಮತ್ತೊಂದು ಶವಯಾತ್ರೆ. ಸಿದ್ಧಾರ್ಥನಿಗಾದರೋ ಪಿತ್ರಾರ್ಜಿತ ರಾಜ ವೈಭೋಗವಿತ್ತು, ಕೋಟೆ, ಕೊತ್ತಲು, ಕೊಪ್ಪರಿಗೆ ಬಂಗಾರ, ಕುದುರೆ ಕಾಲಾಳು, ಕಿರೀಟ.. ಹಾಗೆಯೇ ಅವನ ಕಾಯಲೊಂದು Iron curtain. ಈ ಉಸಿರುಗಟ್ಟಿಸುವ ಭವಬಂಧನ ಬಿಡಿಸಿಕೊಳ್ಳಲವನಲ್ಲಿ ಎಷ್ಟು ಚಡಪಡಿಕೆಗಳಿದ್ದವೋ? ಹೀಗಾಗಿ ಅವನೊಂದು ದಿನ ಎದ್ದು ಮೋಕ್ಷದ ದಾರಿ ಹುಡುಕುತ್ತ ನಡದೇ ನಡೆದ.. ದಾಟಿದ ಈ ಭವಬಂಧನಗಳ ಸಂಕೋಲೆಗಳ. ದೇಹದಂಡಿಸಿದ ಉಪವಾಸ ಬಿದ್ದ… ಕೊನೆಗೆ ಮತ್ತೆ ತಾನು ಬಂದಲ್ಲಿಯೇ ಮರಳಿದ ಮೋಕ್ಷವ ಹುಡುಕಿ ನಡೆದ ಸಂತ ಮತ್ತೆ ಪ್ರೀತಿಯ ಬಲೆಯಲಿ ಬಿದ್ದ. ರೋಗಿಗಳ ಶುಶ್ರೂಷೆ ಮಾಡಿದ, ಭಿಕ್ಷುಕರ ನೊಣ ಮೆತ್ತಿದ ಗಾಯಗಳ ತೊಳೆದ, ಜಗದ ಕೊಳೆ ತೊಳೆಯುತ್ತ ತೊಳೆಯುತ್ತ ತನ್ನ ತಾನೇ ಶುದ್ಧಿಗೊಳಿಸುತ್ತ ಒಂದೊಂದೇ ಪಾಪದ ಪದರುಕಳೆಯುತ್ತ ಮಾನವ ದೇವರಾದ.

*****

“ನೀವು ನಡೆಸುವ ನಿಮ್ಮ “ಹಮಾಮ್”ಗೆ ಒಂದು ಸಲ ಬರ್ತೀನಿ ನಾನು” ಅಂದಾಗ ನೀವು ಈ ಕಪ್ಪು ಚೆಲುವಿನ ಅವಳ ನಗೆ ನಾಚಿಕೆಯನ್ನೊಮ್ಮೆ ನೋಡಬೇಕಿತ್ತು.

ನೀವು ಇವರನ್ನು ಖಂಡಿತ ನೋಡಿರುತ್ತೀರಿ, ಮಹಾನಗರದ ಸಿಗ್ನಲ್ಲುಗಳಲ್ಲಿ ಚೆಲುವ ಗಂಡಸರ ಕೆನ್ನೆ ಸವರುತ್ತ, ಶಿವನ ಡಮರುಗನಂತಹ ಚಪ್ಪಾಳೆ ತಟ್ಟುತ್ತ, ಚಿಲ್ಲರೆ ಕಾಸಿಗಾಗಿ ಪೀಡಿಸುತ್ತ, ದುಡ್ಡು ಕೊಟ್ಟವರಿಗೆ ಮುದ್ದು ಮಾಡುತ್ತ ಕೊಡದೇ ಇದ್ದವರಿಗೆ ಹಿಡಿಶಾಪ ಹಾಕುತ್ತ, ಮದುವೆ, ಮುಂಜಿ, ಅಂಗಡಿಯ ಮಳಿಗೆಗಳ ಮುಂದೆ ಪೂಜೆ ಮಾಡುವಾಗ ಕೆಲವರು ತಾವಾಗೇ ಕರೆಸುತ್ತಾರೆ; ಇನ್ನು ಹಲವು ಬಾರಿ ಅವರಾಗೇ ಆಶೀರ್ವದಿಸಿ ಎಷ್ಟು ದುಡ್ಡು ಕೊಟ್ಟರೂ ಇನ್ನೊಂಚೂರು ಕೊಡಲು ಪೀಡಿಸುವ ಶಿವೆ-ಶಿವಯಂದಿರು, ಅರ್ಧ ನಾರೀಶ್ವರರು, ಮಂಗಳಮುಖಿಯರು ಅಥವ ನಾವು ನೀವೆಲ್ಲ ಕರೆಯುವ ಹಿಜಡಾಗಳು… ಈ ನೆಲದ ಮೇಲಿನ ಶಾಪಗ್ರಸ್ಥ ದೇವತೆಗಳು.

(ಸಾಂದರ್ಭಿಕ ಫೋಟೋ)

ಈಗ ನನ್ನೆದುರು ಕುಳಿತವಳು ಮೇಘಂಜಿ. ಪೂರ್ವಾಶ್ರಮದ ಹೆಸರು ರಾಜು, ನಡುವಯಸ್ಸು, ಸ್ವಂತ ಊರು ಬಿಟ್ಟು ಬೆಂಗಳೂರು ಸೇರಿ ದಶಕಗಳೇ ಕಳೆದಿವೆ. ತಮಿಳು ದೇವಾಲಯಗಳ ಎದುರಿನಲ್ಲಿ ಕಡೆದಿಟ್ಟ ಶಿಲ್ಪದಂತಿರುವ ಈ ಕಪ್ಪು ಸುಂದರಿ ಯಾವುದೋ ಪತ್ರಿಕೆಯಲ್ಲಿ ಅಚ್ಚಾದ ಜಾಹೀರಾತಿನ ತುಣುಕು ಹಿಡಿದು ಅದರಲ್ಲಿರುವ ಸ್ತನಗಳ ಗಾತ್ರ ಹೆಚ್ಚಿಸುವ ಔಷಧಿ ತರಸಿಕೊಡೆಂದು ಜೋರು ಮಾಡುತ್ತ, ಅಷ್ಟೇ ನಾಚಿಕೊಳ್ಳುತ್ತ ನಾನಿರುವ ಕ್ಲಿನಿಕ್ ನ ಕ್ಯೂಬಿಕಿಗೆ ಬಂದು ಗೋಗರೆಯುತ್ತಿದ್ದಳು.

ಈ ಮಂಗಳ ಮುಖಿಯರು ಜ್ವರ ನೆಗಡಿ ಕೆಮ್ಮಿಗೆಂತ ನನ್ನ ಬಳಿ ಬರುವುದು ಮಾಮೂಲು. ಆದರೆ ಈ ಮೇಘಂಜಿ ಇಂದು ಬಂದಿರುವುದು ತನ್ನ ಸ್ತನಗಳ ಗಾತ್ರ ಹೆಚ್ಚಿಸುವ ಔಷಧಿಯ ಕೇಳಿ. ಇವಳು ಈ ಹಿಂದೊಮ್ಮೆ ಬಂದಾಗ ಏನೇನೊ ಸಬೂಬು ಹೇಳಿ ಇದೆಲ್ಲ ಆಗುವ ಕೆಲಸವಲ್ಲ ಅಂತ ಎಷ್ಟು ತಿಳಿಹೇಳಿದರೂ ಅವಳು ಕೇಳಲು ತಯಾರಿರಲ್ಲ. ಈ ಹಿಂದೊಮ್ಮೆ ಇದೇ ತರಹ ಇನ್ನೊಬ್ಬ ಮಂಗಳಮುಖಿ ಬಂದು ಪೀಡಿಸಿ ಪೀಡಿಸಿ ಕೊನೆಗೆ ನಾನು ಕೊಡಲಾರನೆಂದು ಮನವರಿಕೆಯಾದಾಗ ದೊಡ್ಡ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಅದರ ನೋವು ತಡೆಯಲಾರದೇ ನನ್ನ ಬಳಿ ಔಷಧೋಪಚಾರಕ್ಕೆ ಬಂದಿದ್ದಳು. ಇನ್ನೊಬ್ಬಳು ಲಿಂಗಪರಿವರ್ತನೆ ಮಾಡಿಸಿಕೊಂಡು ಆ ಹೊಲಿಗೆಗಳು ಸರಿಯಾಗಿ ಕೂಡದೇ ನೋವು ತಡೆಯಲಾರದೆ ಬಂದಿದ್ದಳು. ಈ ನಡುವೆ ಇವರಿಬ್ಬರೂ ಈ ಕಡೆಯ ಕಲೆಕ್ಷನ್ ಗೆ ಬರುತ್ತಿಲ್ಲ. ಇಂದು ಬಂದವಳು ಮೇಘಂಜಿ.

“ಬನ್ನಿ ಕುಳಿತುಕೊಳ್ಳಿ, ಸ್ವಲ್ಪ ಮಾತನಾಡುವುದಿದೆ” ಎಂದು ನನ್ನೆದುರಿನ ಕುರ್ಚಿಯನ್ನು ತೋರಿಸಿದೆ. ಅವಳು ಕುರ್ಚಿಯ ಮೇಲೆ ಕುಳಿತುಕೊಳ್ಳಲು ನಾಚಿಕೆಯಿಂದ ನನ್ನಿಂದ ತುಸುದೂರದ ಸ್ಟೂಲಿನ ಮೇಲೆ ಕುಳಿತುಕೊಂಡಳು. ಚಹಾ ತರಿಸಿದೆ ಇಬ್ಬರೂ ಚಹಾ ಕುಡಿಯುತ್ತ ಅವಳನ್ನು ಸುಮ್ಮನೆ ಕುತೂಹಲಕ್ಕೆ ಮಾತಿಗೆಳೆದೆ.

ಈ ಮಂಗಳಮುಖಿಯರನ್ನೊಮ್ಮೆ ಏಕಾಂತದಲ್ಲಿ ಮಾತನಾಡಿಸಬೇಕೆಂದು ನನಗೆ ಬಹುದಿನಗಳ ಆಸೆಯಿತ್ತು. ಆದರೆ ಎಲ್ಲಿ ಹೇಗೆ ಎನ್ನುವ ಪ್ರಶ್ನೆಗಳೂ ಕೂಡ ದೊಡ್ಡವೆ!! ಏಕೆಂದರೆ ಇವರು ಬರುತ್ತಿದ್ದದ್ದು ಸಾಮಾನ್ಯವಾಗಿ ಗುಂಪು ಗುಂಪಾಗಿ. ಕೈಗೆ ಕೊಟ್ಟ ಕಾಸನ್ನು ತಕ್ಷಣವೇ ತಮ್ಮ ಒಣಗಿದೆದೆಯ ಕುಪ್ಪುಸಗಳಲ್ಲಿ ಹಾಕಿಕೊಂಡು ಓಟ ಕಿತ್ತವರೆ ಜಾಸ್ತಿ. ಒಮ್ಮೆ ನಾನು “ಚೆನ್ನಾಗಿದ್ದೀಯಾ ಅಕ್ಕಾ? ಏನು ಬರಲಿಲ್ಲ ಬಹಳ ದಿನವಾಯ್ತು ನೋಡಿ” ಎಂದು ಲೋಕಾಭಿರಾಮವಾಗಿ ಮಾತಿಗಿಳಿದಿದ್ದೆ… “ಓಹೋಹೋ ಬಂದ್ಬಿಟ್ಟ ಸುಂದ್ರ ನನ್ನ ಗೆಣೆಕಾರ, ಮದ್ವೆ ಆಗೋಕ್ ಹೋಗಿದ್ದೆ… ಕಾಸ ಕೊಡು ಸುಮ್ಮನೇ, ನನ್ನ ಟೈಂ ವೇಸ್ಟ್ ಮಾಡಬೇಡ” ಅಂತ ಗದರಿಸಿದಳು. ನಾನು ಅಷ್ಟೇ ತಮಾಷೆಯಾಗಿ “ಬೇರೆ ಮದ್ವೇಯಾಗಬೇಡ. ನನ್ನ ಹೆಂಡ್ತಿಗೆ ಡೈವೊರ್ಸು ಕೊಟ್ಟು ನಿನ್ನೇ ಮದ್ವೇಯಾಗ್ತೀನಿ” ಅಂತ ಹೇ ಹೇ ಹೇ ಅಂತ ನಕ್ಕಿದ್ದೆ. ಅದು ಅವಳಿಗೆ ತಮಾಷೆಯೆನಿಸಿತೋ ಕುಹುಕವೆನಿಸಿತೋ “ಏನೋ ನಿನ್ ಮೂತಿಗೆ ಯಾರ ಮದ್ವೆಯಾಗ್ತಾರೆ” ಅಂತ ಏನೆನೋ ಗೊಣಗುತ್ತ ಬೈಯ್ತುತ್ತ ಓಡುತ್ತ ನೆಗೆದಿದ್ದಳು.

ಖಂಡಿತ ಅವಳನ್ನು ರೇಗಿಸುವ ಇರಾದೆಯಿರಲಿಲ್ಲ. ಆದರೆ ಹೀಗಾದರೂ ಅವರೊಟ್ಟಿಗೆ ಮಾತು ಮುಂದುವರೆಸಲು ಸಾಧ್ಯವಿತ್ತ ಎನ್ನುವ ಪ್ರಯೋಗ ಮಾಡಿದ್ದು ಸಫಲವಾಗಲಿಲ್ಲ. ಅಂದಹಾಗೆ ಇವರೂ ಮದುವೆಯಾಗುತ್ತಾರೆ. ತಮ್ಮ ಇಷ್ಟದೈವದ ಪೂಜೆಗೆಂದೇ ಭಾರತದ ಪ್ರತಿಯೊಬ್ಬ ಮಂಗಳಮುಖಿಯರು ತಮಿಳುನಾಡಿನ ಕೂವಗಮ್ ಎಂಬ ಊರಿನಲ್ಲಿ ವರ್ಷದಲ್ಲಿ ಒಂದು ದಿನ ಎಲ್ಲರೂ ಸೇರಿ ಜಾತ್ರೆ ಮಾಡುತ್ತಾರೆ. ಮದುವೆ ಆಗುತ್ತಾರೆ. ಆ ಕೂವಗಮ್ ಎಂಬ ಊರಿಗೆ ನನಗೂ ಒಮ್ಮೆ ಹೋಗುವ ಕುತೂಹಲವಿದೆ. ಒಂದು ದಿನ ಅಲ್ಲಿಗೂ ಹೋದೇನು.

(ಸಾಂದರ್ಭಿಕ ಫೋಟೋ)

ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ತಾನು ಇತರರಿಗಿಂತ ಚೆನ್ನಾಗಿ ಕಾಣಿಸಿಕೊಳ್ಳಬೇಕೆಂಬ ಆಸೆ ಇದ್ದೇ ಇರುತ್ತದೆ. ಮುಖದ ನೆರಿಗೆ ಮುಚ್ಚಲು ಮೇಕಪ್ ಮಾಡುತ್ತೇವೆ. ಕೂದಲಿಗೆ ಬಣ್ಣ ಬಳಿದುಕೊಳ್ಳುತ್ತೇವೆ.
ನಿಗುರು ಯೌವನ ದಕ್ಕಿಸಿಕೊಳ್ಳು ನಾವೆಲ್ಲ ಇಲ್ಲಿ ನಿತ್ಯ ಯಯಾತಿಗಳಾಗುತ್ತೇವೆ.

ಇಂದು ಹೀಗೆ ನನ್ನೆದಿರು ಕುಳಿತವಳ ಹೆಸರು ಮೇಘಂಜಿ. ಪೂರ್ವಾಶ್ರಮದ ಹೆಸರು ರಾಜು. ತಮಿಳು ದೇವಾಲಯದ ಹೊರಗೆ ಗುಡಿಯ ಗೇಟು ಕಾಯಲು ನಿಲ್ಲಿಸಿದ ಕಪ್ಪು ಶಿಲ್ಪದ ಮೇಘಂಜಿ. ದೊಡ್ಡದಾಗಿ ನಕ್ಕರೆ ಕೆನ್ನೆಯ ಮೇಲೆರಡು ಪುಟ್ಟ ಗುಳಿ ಬೀಳುತ್ತವೆ. ಸುಮ್ಮ ಸುಮ್ಮನೇ ನಾಚಿಕೊಳ್ಳುತ್ತಾಳೆ. ಈ ಮೇಘಂಜಿ ಬಂದಿರುವುದು ತನ್ನ ದೇಹದ ಸೌಂದರ್ಯವ ಇಮ್ಮಡಿಸಿಕೊಳ್ಳಲು. ನಡುವಯಸ್ಸಿಗೆ ಇಳಿಬಿದ್ದ ಮೊಲೆಗಳ ಸೈಜುಗಳನ್ನು ದಪ್ಪಗೆ ಆಕರ್ಷವಾಗಿ ಮಾಡಿಕೊಳ್ಳಲು. ಇದು ಅವಳು ತನ್ನ ತಾ ಚೆಂದಕಾಣಿಸುವ ಆಸೆಯಿಂದ ಮಾತ್ರವಲ್ಲ. ಇವಳ ಬಯಸಿ ಈಗ ಗಂಡು ವಿಟ ಪುರುಷರು ಹೆಚ್ಚಾಗಿ ಬರುತ್ತಿಲ್ಲ. ತನ್ನ ಚಿಕ್ಕ ಸ್ತನಗಳು ಈಗ ಆ ಸ್ತನಗಳ ತುಸು ಕೆಳಗಿನ ಹೊಟ್ಟೆಪಾಡಿನ ಪ್ರಶ್ನೆ ಯಾಗಿದೆ, ಅವಳ ಅಸ್ತಿತ್ವದ ಪ್ರಶ್ನೆಯಾಗಿದೆ, ದೂರದೂರಿನಲ್ಲಿ ತನ್ನ ಹೆತ್ತವರ ಆರೋಗ್ಯದ ಪ್ರಶ್ನೆಯಾಗಿದೆ. ಮತ್ತು ಈ ನಡುವೆ ಹೊಸ ಹುಡುಗಿಯರು ಬಂದು ಇವಳ ಬೇಡಿಕೆ ಇನ್ನೂ ಕಡಿಮೆಯಾಗಿದೆ.

ಇವಳ ಸಣ್ಣ ಮೊಲೆಗಳು ದೊಡ್ಡದಾಗಿ ಕಾಣಲು ಹೊಸ ಡಿಜೈನಿನ ತುಸು ಹೆಚ್ಚೇ ಉಬ್ಬುಗಳಿರುವ ಬ್ರಾ ಧರಿಸುತ್ತಾಳೆ. ಆದರೆ ಯಾಕೋ ಈ ನಡುವೆ ಇವಳಿಗೆ ಗಿರಾಕಿಗಳು ಕಡಿಮೆ, ಇವಳ ಮೇಲಿನ “ಘರವಾಲಿ” ಇವಳನ್ನು ಈಗೀಗ ತಾತ್ಸಾರ ಮಾಡಿ ಹೆಚ್ಚು ಹಣ ಕೊಡಲು ಪೀಡಿಸುತ್ತಾಳೆ. ಇದೆಲ್ಲ ಹಿಂಸೆಯೆನ್ನಿಸಿ ಈ ಮೇಘಂಜಿ ಈ ಊರು ಬಿಟ್ಟು ಓಡಿ ಹೋಗುವ ಯೋಚನೆ ಮಾಡುತ್ತಾಳೆ, ಆದರೆ ಓಡಿ ಹೋಗುವುದಾದರೂ ಎಲ್ಲಿಗೆ? ಎಲ್ಲ ಬಿಟ್ಟು ಬಂದ ಮೇಲೆ.

ಮೂರು ವಾರಗಳಲ್ಲಿ ಸ್ತನ ಗಾತ್ರ ಹೆಚ್ಚಿಸುವ ಪುರುಷರ ಲಿಂಗವರ್ಧಕ ಜಾಹಿರಾತು ನೀವು ನೋಡಿರುತ್ತೀರಿ, ಆದರೆ ಇದೆಲ್ಲ ಸುಳ್ಳು ಎಂದು ಅವಳಿಗೆ ಹೇಗೆ ಹೇಳುವುದು?

ಈಗ ನನ್ನೆದುರು ಕುಳಿತವಳು ಮೇಘಂಜಿ. ಪೂರ್ವಾಶ್ರಮದ ಹೆಸರು ರಾಜು, ನಡುವಯಸ್ಸು, ಸ್ವಂತ ಊರು ಬಿಟ್ಟು ಬೆಂಗಳೂರು ಸೇರಿ ದಶಕಗಳೇ ಕಳೆದಿವೆ. ತಮಿಳು ದೇವಾಲಯಗಳ ಎದುರಿನಲ್ಲಿ ಕಡೆದಿಟ್ಟ ಶಿಲ್ಪದಂತಿರುವ ಈ ಕಪ್ಪು ಸುಂದರಿ ಯಾವುದೋ ಪತ್ರಿಕೆಯಲ್ಲಿ ಅಚ್ಚಾದ ಜಾಹೀರಾತಿನ ತುಣುಕು ಹಿಡಿದು ಅದರಲ್ಲಿರುವ ಸ್ತನಗಳ ಗಾತ್ರ ಹೆಚ್ಚಿಸುವ ಔಷಧಿ ತರಸಿಕೊಡೆಂದು ಜೋರು ಮಾಡುತ್ತ, ಅಷ್ಟೇ ನಾಚಿಕೊಳ್ಳುತ್ತ ನಾನಿರುವ ಕ್ಲಿನಿಕ್ ನ ಕ್ಯೂಬಿಕಿಗೆ ಬಂದು ಗೋಗರೆಯುತ್ತಿದ್ದಳು.

ನಮ್ಮ ದೇಹದಲ್ಲಿ ಸ್ರವಿಸುವ ಹಾರ್ಮೋನಿನಸಾರವಾಗಿ ಪ್ರತಿಯೊಬ್ಬ ವ್ಯಕ್ತಿಯ ಮೂಗು ಕಣ್ಣುಗಳ ಅಳತೆ ಬಣ್ಣ ಬೇರೆ ಬೇರೆಯಾಗಿರುತ್ತವೆಯೋ ಹಾಗೇ ಇವುಗಳೂ ಕೂಡ. ಕೃತಕ ಹಾರ್ಮೋನು ಕೊಟ್ಟರೆ ಅದಕ್ಕೆ ಅಡ್ಡ ಪರಿಣಾಮಗಳೇ ಜಾಸ್ತಿ. ಆದರೆ ಇದನ್ನೆಲ್ಲ ಅವಳಿಗೆ ತಿಳಿಸಿ ಹೇಳಲು ನಾನು ಸೋತು ಹೋಗಿದ್ದೆ. ಈಗ ತುರ್ತಾಗಿ ನಾನು ಅವಳಿಗೆ ಆ ಔಷಧೀ ತರಿಸಿಕೊಡಬೇಕಂತೆ. at any cost.

ಹೈ ವೇ ಬದಿಯಲ್ಲಿ ಹಮಾಮ್ ಎಂಬ ಬೋರ್ಡು ಹೊತ್ತ ಚಿಕ್ಕ ಪುಟ್ಟ ಶೆಡ್ಡುಗಳನ್ನು ನೀವು ನೋಡಿರುತ್ತೀರಲ್ಲ. ಅಲ್ಲೇ ಇವರ ವಾಸ. ಹಮಾಮುಗಳೆಂದರೆ ಇವರು ವಾಸಿಸುವ ಮನೆಯೂ ಹೌದು. ಇವರ ಉದ್ಯೋಗದ ಕರ್ಮಭೂಮಿಯೂ ಹೌದು. ಹತ್ತರಿಂದ ಇಪ್ಪತ್ತು ಜನರಿರುವ ಒಂದು ಸಂಘಟಿತ ಗುಂಪು ಇಲ್ಲಿ ತಮ್ಮ ಅನ್ನದ ದಾರಿ ಕಂಡುಕೊಂಡಿರುತ್ತಾರೆ.

(ಸಾಂದರ್ಭಿಕ ಫೋಟೋ)

ಹಗಲಿನಲ್ಲಿ ಸರ್ಕಲ್ಲಿನಲ್ಲಿ ಅಂಗಡಿಗಳಲ್ಲಿ ಕಲೆಕ್ಷನ್ನು, ರಾತ್ರಿಯಾದರೆ ವೇಶ್ಯಾವಾಟಿಕೆ. ಇದು ಪಾಳಿಯ ಪ್ರಕಾರ… ಈ ಪಾಳಿಗಳು ಬದಲಾಗತ್ತಿರುತ್ತದೆ. ಇವರು ದುಡಿದ ದುಡ್ಡನಲ್ಲಿ ಅರ್ಧಪಾಲು ಇವಳು ತಮ್ಮಮೇಲಿನ ಮುಖ್ಯಸ್ಥೆ ಘರವಾಲಿಗೆ ಅರ್ಧದುಡ್ಡು ಕೊಡಬೇಕು, ಉಳಿದರ್ಧ ಇವರ ಹೊಟ್ಟೆಪಾಡಿಗೆ ತಮ್ಮ ಮೇಕಪ್ ಗೆ… ಚೆನ್ನಾಗಿ ಕಾಣಿಸಬೇಕಲ್ವ!? ಚಂದವಿದ್ದರೆ ತಾನೇ ಈ ಲಾರಿ ಡ್ರೈವರುಗಳು, ಪುಡಿರೌಡಿಗಳು, ಈಗಷ್ಟೇ ಮೀಸೆಚಿಗುರುತ್ತಿರುವ ಪುಂಡ ಹುಡುಗರು ಇವರನ್ನು ಕರೆಯುವುದು?

ಅಂದಹಾಗೆ ಈ ಮೇಘಂತಿ ಚಿಕ್ಕಂದಿನಿಂದ ಬಲು ಚುರುಕು ಓದಿನಲ್ಲೂ ಆಟಪಾಠದಲ್ಲೂ, ಅಪ್ಪ ಅಮ್ಮ ಬಡವರಾದರೂ ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ್ದಾರೆ, ಓದಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ಇವನು ಐದು ವರ್ಷದವನಿದ್ದಾಗ ಆಗಾಗ ಬರುತ್ತಿದ್ದ ಕೆಮ್ಮಿನ ಭಯದಿಂದ ಡಾಕ್ಟರ್ ಸಲಹೆಯ ಮೇರೆಗೆ ಅವನಿಗೆ ಐಸ್ಕ್ರೀಮು, ಬೇಕರಿ ತಿಂಡಿ, ಮಾಂಸದಡುಗೆ ಕೊಡುವುದಿಲ್ಲ. ಹೀಗಾಗಿ ಇವರ ಅಪ್ಪನಿಗೆ ಇಷ್ಟವಿದ್ದಾಗಲೂ ಇವಳ ಮನೆಯಲ್ಲಿ ಮಾಂಸದಡುಗೆ ಮಾಡುವುದಿಲ್ಲ. ಎಷ್ಟಾದರೂ ಎರಡು ಹೆಣ್ಣಾದ ಮೇಲೆ ಹುಟ್ಟಿದ ಗಂಡಲ್ಲವೆ ರಾಜು?

ರಾಜು ಓದಿದ್ದು ಡಿಪ್ಲೋಮಾ ಇನ್ ಮೆಕ್ಯಾನಿಕ್ಸ್. ಪ್ರತಿಷ್ಠಿತ ಕಾಲೇಜು, ಆಮೇಲೆ ಎರಡು ವರ್ಷ ಒಂದು ಕಂಪನಿಯಲ್ಲಿ ಕೆಲಸ ಪ್ಯಾಂಟು ಶರಟು ಹಾಕಿಕೊಂಡೇ. ಆದರೆ ಅದಾಗಲೇ ಅವಳಿಗೆ ಈ ಪ್ಯಾಂಟು ಶರಟು ಕೊರಳಿಗೆ ಕಟ್ಟಿದ ಟೈ ಉಸಿರುಗಟ್ಟಿಸಿದ್ದವು. ಐದನೇಯ ತರಗತಿಯಿಂದಲೆ ರಾಜು ಮನೆಯಲ್ಲಿ ಯಾರೂ ಇಲ್ಲದಾಗ ಅವ್ವನ ಸೀರೆಯುಟ್ಟು ಬಳೆ ತೊಟ್ಟು ಹಣೆಗೆ ಟಿಕಳಿ ಇಟ್ಟು ಗಂಟೆಗಟ್ಟಲೇ ಕನ್ನಡಿಯ ಮುಂದೆ ವೈಯ್ಯಾರ ಮಾಡುವುದು ನಡದೇ ಇತ್ತು, ಅಮ್ಮನಿಗೆ ಮಗನ ನಡುವಳಿಕೆಯ ಮೇಲೆ ಬದಲಾಗುತ್ತಿರುವ ಅವನ ನಡೆಯ ಶೈಲಿಯ ಮೇಲೆ ಅನುಮಾನ. ಅಪ್ಪನಿಗಾಗಲೇ ಖಾತ್ರಿಯಾಗಿ ಎದೆಯೊಡೆದುಕೊಂಡು ಸಾಯುವುದೊಂದೇ ಬಾಕಿ, ಆದರೂ ಬೆಳೆಸಿದರು ಓದಿಸಿದರು, ನೆರೆಹೊರೆಯವರ ಕೊಂಕು ಮಾತಿಗೆ ಕಿವುಡಾಗಿ ಕುಹುಕ ನುಡಿಗಳ ಜೀರ್ಣಿಸಿಕೊಂಡು ಎಲ್ಲೋ ಭಗವಂತನಿದ್ದಾನೆ ಅವನು ಇನ್ನೇನು ಒಂದಿಲ್ಲ ಒಂದು ದಿನ ದಾರಿ ತೋರಿಸುತ್ತಾನೆ, ಇವರು ನಂಬಿದ ಶಿವ ಅರ್ಧನಾರೀಶ್ವರ.

ಆದರೆ ರಾಜುವಿನ ದೇಹದ ಹಾರ್ಮೋನುಗಳು ಕೇಳಬೇಕಲ್ಲ? ಧ್ವನಿ ಬದಲಾಗಿದೆ, ನಡೆ ಬದಲಾಗಿದೆ, ನುಡಿ ಬದಲಾಗಿದೆ, ಆಸೆ ಆಮಿಷಗಳು ಬದಲಾಗಿವೆ. ಬದಲಾಗಬೇಕಿರುವುದು ದೇಹದ ಮೇಲಿನ ಬಟ್ಟೆ ಮಾತ್ರ. ಒಂದು ದಿನ ರಾತ್ರೋ ರಾತ್ರಿ ಮನೆಯಲ್ಲಿ ಹೇಳದೇ ಕೇಳದೆ ಬಸ್ಸು ಹತ್ತಿದ ರಾಜು, ಬಂದಿದ್ದು ಸೇಲಮ್ ಗೆ. ಸೇಲಮ್ ನಲ್ಲಿ ಇವರ ತಂಡ ಇರುವ ಜಾಗ ಆಗಲೇ ಗುರುತಿಸಿದ್ದ ರಾಜು ಬೆಳಗಾಗುವಷ್ಟರಲ್ಲಿ ತನ್ನ ಪುರುಷವೇಷವ ಕಳಚಿ ತನ್ನ ಮೂಲ ಹೆಸರನ್ನು ಕಳಚಿ, ಮೇಘಂಜೀಯೆನ್ನುವ ಕಿನ್ನರ ಪುರುಷನಾಗಿ ಯುಗದ ಭಾರವ ಕಳಚಿ, ಹೊಸ ಹೆಸರಿನೊಂದಿಗೆ ಅವತಾರವೆತ್ತುತ್ತಾಳೆ ಮೇಘಂಜೀ.

ಊರು ಬಿಟ್ಟರೂ ಮೇಘಂಜೀಯ ಊರಿನವರ ಕುಹುಕ ತಪ್ಪಲಿಲ್ಲ. ಸೇಲಮ್ ಇವರ ಊರಿನಿಂದ ಎರಡು ಮೈಲಿ ಅಷ್ಟೇ ದೂರ, ಹೀಗಾಗಿ ಹೆದ್ದಾರಿ ಬಳಿ ಅಂಗಡಿಯ ಬಳಿ ಕಲೆಕ್ಷನ್ ಗೆ ಇಳಿದಾಗ ಅವರ ಊರಿನವರು ಎದುರಾಗಿ ಅಪಹಾಸ್ಯ ಮಾಡುತ್ತಿದ್ದರು. ಮತ್ತು ನಿಮ್ಮ ಮಗ ಹೀಗೀಗೆ ಅಂತ ಇವರ ತಂದೆಯವರಿಗೆ ಹೋಗಿ ಹೇಳಿದ ದಿನ ಅವರು ಅವಮಾನ ತಡೆಯಲಾರದೇ ವಿಷ ಸೇವಿಸಿಬಿಟ್ಟರು. ಅವರನ್ನು ಇದೇ ಸೇಲಮ್ ನ ಜಿಲ್ಲಾಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದು ಗೊತ್ತಾಗಿ ಇವಳು ಮಾತನಾಡಿಸಲು ಹೋದಾಗ ಇವಳ ಜೊತೆ ಮಾತನಾಡದೇ ಸತ್ತು ಹೋಗೆಂದು ಹೀಯಾಳಿಸಿ ಕಳುಹಿಸುತ್ತಾರೆ… ಆ ದಿನ ರಾತ್ರಿಯೇ ಬೆಂಗಳೂರಿಗೆ ಹೋಗುವ ಹೆದ್ದಾರಿ ಲಾರಿ ಹತ್ತಿ ಬಂದಿಳಿದವಳು ಇಲ್ಲಿಯ ಹೊಸರೋಡಿನ ಸಿಗ್ನಲ್ ಗೆ. ಇಲ್ಲಾಗಲೇ ಅನೇಕರ ಪರಿಚಯವಿದ್ದ ಮೇಘಂಜಿಗೆ ಈಗ ಬೆಂಗಳೂರು ಹೊಸತೆನಿಸಲಿಲ್ಲ.

ಅವಳ ಬಾಲ್ಯದ ಹಿಂಸೆ ಕ್ರೌರ್ಯ ಅಪಮಾನ ಮರೆಯಲು ಬೆಂಗಳೂರು ಇವಳಿಗೊಂದು ಸುರಕ್ಷಿತ ಅಡಗುದಾಣವಾಯಿತು. ಇಲ್ಲಿ ಭೂತದ ಭಾರವಿಲ್ಲ ಭವಿಷ್ಯದ ಚಿಂತೆಯಿಲ್ಲ.

ಎಲ್ಲರನ್ನೂ ಸಲುಹುವ ಮಹಾಮಡಿಲಿನ ಮಹಾನಗರ ಇವಳಿಗೂ ಒಂದು ಆಸರೆ ಕೊಟ್ಟಿದೆ. ಆದರೆ ಈ ನಡುವೆ ಅವಳ ಕಣ್ಣುಗಳ ಹೊಳಪು ಕಮ್ಮಿಯಾಗಿದೆ. ಎಷ್ಟು ಮುಚ್ಚಿದರೂ ಎದ್ದು ಕಾಣುವ ಮೈಯ ಸುಕ್ಕುಗಳು ಕಣ್ಣುಗಳ ಸುತ್ತಿನ ಕಪ್ಪು ಕಲೆ ಮತ್ತು ಎಷ್ಟು ಬಿಗಿಯಾಗಿ ಕಟ್ಟಿದರೂ ಇಳಿಬೀಳುವ ಜೋಡು ಮೊಲೆ.

(ಸಾಂದರ್ಭಿಕ ಫೋಟೋ)

“ಇದಕ್ಕೆ ಔಷಧೀಯಿಲ್ಲ ಮಹಾರಾಯ್ತೀ, ಬೇಕೆಂದರೆ ನೀನು ಲಕ್ಷ ಲಕ್ಷ ಹಣ ಕೊಟ್ಟು ಪ್ಲ್ಯಾಸ್ಟಿಕ್ ಸರ್ಜರೀ ಮಾಡಿಸಿಕೋ, ಒಂದು ವಾರ ಮನೆಯಲ್ಲಿ ರೆಸ್ಟು ತಗೋ, ಊರಿಗೆ ಹೋಗು. ಹೊಟ್ಟೆ ತುಂಬ ಊಟ ಮಾಡು, ಕಣ್ತುಂಬ ನಿದ್ದೆ ಮಾಡು…” ನಾನು ಹೇಳುತ್ತಲೇ ಇದ್ದೆ… ಎಂದೂ ನನ್ನ ಕ್ಲಿನಿಕ್ ನೊಳಗೆ ಬರದ ಆ ಶಾಪಗ್ರಸ್ಥ ದೇವತೆ ಅಳುತ್ತಲೇ ಹೊರಗೆ ಓಡಿ ಹೋಗಿ ದೂರ ದೂರ ಓಡಿ ತಿರುವಿನಲ್ಲಿ ಕರಗಿ ಹೋದಳು.

ಆಗಾಗ ಅವಳು ಬರುತ್ತಾಳೆ ನನ್ನ ಕನಸಿನಲ್ಲಿ. ಬಂದು ಔಷಧಿ ಕೇಳುತ್ತಾಳೆ. ಹೀಗೆ ನನ್ನ ಬಳಿ ಕುಳಿತು ಲೋಕಾಭಿರಾಮವಾಗಿ ಹರಟುತ್ತ ಬೆಚ್ಚಿ ಬಿದ್ದವರಂತೆ ತಕ್ಷಣ ರಸ್ತೆಗಿಳಿದು ಓಡುತ್ತ ಅವರ ಹಿಂದೆ ಪೋಲಿಸರು, ಪುಡಿರೌಡಿಗಳು, ಈಗಷ್ಟೇ ಮೀಸೆ ಚಿಗುರಿರುವ ಪಡಪೋಶಿಗಳು, ಲಾರಿ ಡ್ರೈವರುಗಳು… ಅವಳು ಓಡುತ್ತಲೇ ಇದ್ದಾಳೆ, ಏಳುತ್ತಾ ಬೀಳುತ್ತಾ, ಅವಳ ಹಿಂದೊಂದು ಕ್ಷುದ್ರ ಲೋಕ ಬೆನ್ನಟ್ಟಿದೆ, ಅವಳನ್ನು ಹುರಿದು ತಿನ್ನಲು.