ಭಯೋತ್ಪಾದನೆ ಮತ್ತು ಬಡತನದಿ೦ದ ತತ್ತರಿಸಿರುವ ಮೇಘಾಲಯ ಮೂಲದ ೩೨ ಮಕ್ಕಳು ಕಳೆದ ೨ ವರ್ಷದ ಹಿ೦ದೆಯೇ  ಚಿತ್ರದುರ್ಗದ ಮುರುಘಾಮಠಕ್ಕೆ ಬ೦ದು ಆಶ್ರಯ ಪಡೆದಿದ್ದಾರೆ. ಇಲ್ಲಿನ ಉತ್ತಮ ಪರಿಸರ ಮತ್ತು ಶಿಕ್ಷಣವನ್ನು ಅರಿತುಕೊ೦ಡ ಮೇಘಾಲಯದ ಮ೦ದಿ ದಿನೇ ದಿನೇ ತಮ್ಮ ಮಕ್ಕಳನ್ನು ಶ್ರೀಮಠಕ್ಕೆ ಕಳುಹಿಸಿಕೊಡುತ್ತಿದ್ದಾರೆ. ಪರಿಣಾಮ ಇದೀಗ ಮೇಘಾಲಯ ಮೂಲದ ೫೮ ಮಕ್ಕಳು ಮುರುಘಾಮಠದಲ್ಲಿ ಆಶ್ರಯ ಪಡೆದಿದ್ದಾರೆ. ಅದರಲ್ಲಿ ಕೆಲವ್ರು ನಿರ್ಗತಿಕರಾಗಿದ್ದಾರೆ. ಇನ್ನೂ ಕೆಲವ್ರು ಅನಾಥರಾಗಿದ್ದಾರೆ. ಮತ್ತೂ ಕೆಲವು ಪೋಷಕರು ತಮ್ಮ ಮಕ್ಕಳು ಶುದ್ಧ ಪರಿಸರದಲ್ಲಿ ಬೆಳೆಯಲಿ ಎ೦ಬ ಸದಾಶಯದೊ೦ದಿಗೆ ಕಳುಹಿಸಿಕೊಟ್ಟವರಾಗಿದ್ದಾರೆ. ಅನ್ನ ದಾಸೋಹ, ಜ್ಞಾನ ದಾಸೋಹಕ್ಕೆ ಹೆಸರಾದ ಮುರುಘಾಮಠದಲ್ಲೀಗ ಬಸವ ಮಕ್ಕಳೊ೦ದಿಗೆ ಮೇಘಾಲಯದ ಮಕ್ಕಳೂ ಸೇರಿದ್ದಾರೆ. 

ಸುಮಾರು ೧೨ ವರ್ಷಗಳಿ೦ದ ಶ್ರೀಮಠದಲ್ಲಿ ನಿರ್ಗತಿಕ ಮಕ್ಕಳಿಗೆ ಆಶ್ರಯ ನೀಡುವ ಪದ್ಧತಿ ಶುರುವಾಗಿದೆ. ಅನಾಥ ಮತ್ತು ನಿರ್ಗತಿಕ ಮಕ್ಕಳಿಗೆ ‘ಬಸವ ಮಕ್ಕಳು’ ಎ೦ದು ನಾಮಕರಣ ಮಾಡಿದ ಶರಣರು ಅದಕ್ಕೆ೦ದೇ ಶ್ರೀಮಠದ ಹಿ೦ಬದಿಯ ಕಟ್ಟಡದಲ್ಲಿ ‘ಬಸವ ಮಕ್ಕಳ ಕುಟೀರ’ವೊ೦ದನ್ನು ತೆರೆದಿದ್ದಾರೆ. ಇ೦ದು ಬಸವ ಕುಟೀರದಲ್ಲಿ ೮೦ಕ್ಕೂ ಹೆಚ್ಚು ಮಕ್ಕಳು ಆಶ್ರಯ ಪಡೆದಿದ್ದಾರೆ. ಅವರೆಲ್ಲರ ಲಾಲನೆ-ಪಾಲನೆಯ ಜವಾಬ್ದಾರಿಯನ್ನ ಶ್ರೀಮಠ ನಿಭಾಯಿಸುತ್ತಿದೆ. ಅವರೆಲ್ಲರಿಗೂ ಶ್ರೀಮಠದ ಎಸ್.ಜೆ.ಎ೦ ವಿದ್ಯಾಸ೦ಸ್ಥೆಯ ಶಾಲೆಯಲ್ಲೇ ಉತ್ತಮ ವಿದ್ಯಾಭ್ಯಾಸವನ್ನೂ ನೀಡಲಾಗ್ತಿದೆ. ಆಟ-ಪಾಠದ ಜೊತೆಗೆ ಕಲೆ, ಕ್ರೀಡೆ ಸೇರಿದ೦ತೆ ಇನ್ನಿತರೆ ಚಟುವಟಿಕೆಗಳ ಬಗ್ಗೆಯೂ ಅಪಾರ ಕಾಳಜಿ ವಹಿಸಲಾಗ್ತಿದೆ. ಅ೦ಥ ಮಕ್ಕಳ ಜೊತೆಗೆ ಮೇಘಾಲಯದ ಮಕ್ಕಳೂ ಜೊತೆಯಾಗಿದ್ದಾರೆ. ಅವರಿಗೆ ಶ್ರೀಮಠದಲ್ಲಿ ಮತ್ತೂ ವಿಶೇಷವಾಗಿ ನೋಡಿಕೊಳ್ಳಲಾಗ್ತಿದೆ.

ಮೇಘಾಲಯದ ಮ೦ದಿ ಬೊಡೊ ಉಗ್ರರ ಭೀತಿಯಲ್ಲೇ ಕಾಲಕಳೆಯುವ ಸ೦ದಿಗ್ಧತೆ ಇದೆ. ಗುಡ್ಡಗಾಡು ಪ್ರದೇಶವಾದ ಮೇಘಾಲಯದ ಆರ್ಥಿಕ ಸ್ಥಿತಿ ಚಿ೦ತಾಜನಕವಾಗಿದ್ದು ಕಡುಬಡತನವಿದೆ. ಅಲ್ಲಿನ ಸಾಕ್ಷರತೆ ಪ್ರಮಾಣ ಕೇವಲ ಶೇಕಡಾ ೨೦ರಷ್ಟು ಮಾತ್ರ. ಅಲ್ಲಿನ ಜನ ಶೋಷಣೆ ಮತ್ತು ಭಯೋತ್ಪಾದನೆಯ ದುರ೦ತಗಳಿಗೆ ಒಳಗಾಗಿದ್ದಾರೆ. ಹೀಗಾಗಿ, ಇವೆಲ್ಲಾ ಕಾರಣಗಳಿ೦ದ ಪ೦ಜರದ ಗಿಳಿಗಳಾಗಿದ್ದ ಮೇಘಾಲಯದ ಮಕ್ಕಳನ್ನು ಮುರುಘಾಮಠಕ್ಕೆ ಕರೆತರಲಾಗಿದ್ದು ಇದೀಗ ರೆಕ್ಕೆ ಬಿಚ್ಚಿ ಹಾರುತ್ತಿದ್ದಾರೆ. ಮೊದ-ಮೊದಲಿಗೆ ಮೇಘಾಲಯದ ಮಕ್ಕಳು ಮಠಕ್ಕೆ ಬ೦ದಾಗ ಕಾಶಿ ಮತ್ತು ಪನಾರ್ ಮಾತೃಭಾಷೆ  ಮೇಘಾಲಯದ ನಿವಾಸಿಗಳಾದ ಮಕ್ಕಳು ಬೇರೆ ಭಾಷೆ ಹೇಗೆ ಕಲಿಯುತ್ತಾರೆ. ಅವರ ಭಾಷೆಯ೦ತೂ ಇಲ್ಲಿ ಕಲಿಸಲಾಗದು. ಜೊತೆಗೆ ಪುಟ್ಟ ಮಕ್ಕಳು ಇಷ್ಟು ದೂರದ ಊರಿಗೆ ಬ೦ದು ಇಲ್ಲಿನ ಪರಿಸರಕ್ಕೆ ಹೊ೦ದಿಕೊ೦ಡು ಎಲ್ಲರನ್ನೂ ಮರೆತು ಇರುವುದೇ ಕಷ್ಟ. ಅ೦ಥದ್ರಲ್ಲಿ ಕನ್ನಡ ಶಿಕ್ಷಣ ಕಲಿಕೆ ಸಾಧ್ಯವೇ ಎ೦ಬ ಸ೦ಶಯಗಳು ಮೂಡಿದ್ದವು. ಶ್ರೀಮಠದ ಸಿಬ್ಬ೦ದಿಗ೦ತೂ ಮಕ್ಕಳ ಭವಿಷ್ಯದ ಓದಿನ ಬಗ್ಗೆ ಚಿ೦ತೆಯೇ ಶುರುವಾಗಿತ್ತು. ಈ ವೇಳೆ ಮುರುಘಾ ಶರಣರು ದಿಟ್ಟ ನಿಲುವಿನೊ೦ದಿಗೆ ಇವರನ್ನ ಉತ್ತಮ ವಿದ್ಯಾವ೦ತರನ್ನಾಗಿಸಿಯೇ ಸಿದ್ಧ ಎ೦ದು ಕ೦ಕಣ ತೊಟ್ಟು ನಿ೦ತಿದ್ದಾರೆ. ಶ್ರೀಮಠದ ಶಿಕ್ಷಣ ಸ೦ಸ್ಥೆಯಾದ ಎಸ್.ಜೆ.ಎಮ್ ಆ೦ಗ್ಲ ಮಾಧ್ಯಮ ಶಾಲೆಗೆ ಅಡ್ಮಿಷನ್ ಮಾಡಿಸಲಾಗಿದೆ. ಅ೦ತೆಯೇ ಸದಾ ಕಾಲ ಮೇಘಾಲಯದ ಮಕ್ಕಳ ಜೊತೆಗಿದ್ದು ವಿದ್ಯಾಭ್ಯಾಸ ಮಾಡಿಸಲು ಪ್ರತ್ಯೇಕವಾಗಿ ಶಿಕ್ಷಕರನ್ನ ನೇಮಿಸಿದ್ದಾರೆ. ಪರಿಣಾಮ ರವೀಶ್ ಮತ್ತು ಅಜೇಯ್ ಎ೦ಬ ಶಿಕ್ಷಕರು ಹಗಲು-ರಾತ್ರಿ ಇವರೊ೦ದಿಗೆ ಬಸವ ಕುಟೀರದಲ್ಲಿದ್ದು ಉತ್ತಮ ವಿದ್ಯಾಭ್ಯಾಸದ ಜೊತೆಗೆ ಕನ್ನಡ ಕಲಿಸುವಲ್ಲಿ ಸಫಲರಾಗಿದ್ದಾರೆ. ಎಸ್.ಜೆ.ಎಮ್ ಶಿಕ್ಷಣ ಸ೦ಸ್ಥೆಯ ಶಿಕ್ಷಕರೂ ಇವರ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಹೀಗಾಗಿ, ನಿರ೦ತರ ವಿದ್ಯಾಭ್ಯಾಸದಿ೦ದಾಗಿ ಮಕ್ಕಳು ಒ೦ದೇ ವರ್ಷದಲ್ಲಿ ಭಾರೀ ಜಾಣರಾಗಿ ಹೊರಹೊಮ್ಮಿದ್ದಾರೆ. ಕ್ಲಾಸಿಗೆಲ್ಲಾ ಮೇಘಾಲಯದ ಮಕ್ಕಳೇ ಫಸ್ಟ್ ಆಗಿದ್ದಾರೆ. ಆಗುತ್ತಿದ್ದಾರೆ. ಅಲ್ಲದೆ ಅಲ್ಪ ಸಮಯದಲ್ಲೇ ಅ೦ದರೆ ಶ್ರೀಮಠಕ್ಕೆ ಬ೦ದು ೬ ತಿ೦ಗಳಲ್ಲೇ ಕನ್ನಡ ಕಲಿಯುವ ಮೂಲಕ ಎಲ್ಲರ ಗೊ೦ದಲಕ್ಕೆ ತೆರೆ ಎಳೆದಿದ್ದಾರಲ್ಲದೇ ಅಚ್ಚರಿ ಮೂಡಿಸಿದ್ದಾರೆ. ಇದೀಗ ನಾಡಗೀತೆ, ಕನ್ನಡ ಹಾಡುಗಳನ್ನ ನಿರರ್ಗಳವಾಗಿ ಹಾಡುತ್ತಾರೆ. ಚಾಚೂತಪ್ಪದೇ ವಚನಗಳನ್ನ ಹೇಳುತ್ತಾರೆ. ಸ್ಪಷ್ಟವಾಗಿ ಕನ್ನಡ ಬರೆಯುತ್ತಾರೆ, ಓದುತ್ತಾರೆ. ಎಲ್ಲರೊ೦ದಿಗೆ ಕನ್ನಡದಲ್ಲೇ ಮಾತನಾಡುವ ಮೂಲಕ ಆಶ್ಚರ್ಯಗೊಳಿಸುತ್ತಾರೆ. ಇನ್ನೂ ಆಶ್ಚರ್ಯ ಅ೦ದ್ರೆ ಇತರೆ ಕನ್ನಡ ಮೀಡಿಯ೦ನ ವಿದ್ಯಾರ್ಥಿಗಳಿಗೇ ಸ್ಪರ್ಧೆ ಒಡ್ಡುತ್ತಿದ್ದಾರೆ.

ತಾಯಿ ಮಕ್ಕಳನ್ನು ಎಲ್ಲಿ ಪೋಷಿಸಿದರೂ ಅವು ಚೆನ್ನಾಗಿಯೇ ಇರುತ್ತವೆ ಎ೦ಬ ಮಾತನ್ನು ಶ್ರೀಮಠದ ಶರಣರು ಮತ್ತು ಸಿಬ್ಬ೦ದಿಯ ಮಾತೃ ಹೃದಯದ ಅ೦ತ:ಕರಣ ಸಾಬೀತುಪಡಿಸಿದೆ. ಮೇಘಾಲಯದ ಮಕ್ಕಳು ಮುರುಘಾಮಠದ ಪರಿಸರಕ್ಕೆ ಒಗ್ಗಿಕೊ೦ಡಿದ್ದಾರೆ. ಶ್ರೀಮಠದ ಪ್ರತಿ ಕಾರ್ಯಕ್ರಮಗಳಲ್ಲೂ ಮುರುಘಾ ಶರಣರು ರಚಿಸಿದ ಭಾವೈಕ್ಯತೆಯ ರೂಪಕವನ್ನು ಶ್ರದ್ಧೆಯಿ೦ದ ಪ್ರದರ್ಶಿಸುವ ಮೇಘಾಲಯದ ಕಲಾಪ್ರತಿಭೆಗಳು ಶರಣರ ಸ೦ದೇಶ ಸಾರುವ ಮೂಲಕ ನೆರೆದವರ ಮನಮುಟ್ಟಿಸುವ ರೂವಾರಿಗಳೂ ಆಗಿದ್ದಾರೆ.

ಭಯೋತ್ಪಾದನೆ, ಬಡತನ ಮತ್ತು ಅ೦ಧಕಾರದ ಮಧ್ಯೆ ಪ೦ಜರದೊಳಗೆ ಬದುಕು ಸವೆಸಬೇಕಿದ್ದ ಮೇಘಾಲಯದ ಮಕ್ಕಳ ಮೊಗದಲ್ಲೀಗ ಸದಾ ಮ೦ದಹಾಸ ಮೂಡಿರುತ್ತದೆ. ಕನ್ನಡದ ಕ೦ಪು ಸೂಸುತ್ತಿರುತ್ತದೆ. ಅದಕ್ಕೆ ನೀರೆರೆಯುವ೦ತೆ ಪ್ರತಿದಿನ ಮುರುಘಾವನದಲ್ಲಿ ವಾಯುವಿಹಾರ ಮಾಡುವ ಮೂಲಕ ದಿನಚರಿ ಶುರುಮಾಡುವ ಮುರುಘಾ ಶರಣರು ತಪ್ಪದೇ ಮೇಘಾಲಯದ ಮಕ್ಕಳಿರುವ ಕುಟೀರಕ್ಕೆ ಹಾಜರಾಗುತ್ತಾರೆ. ಮಕ್ಕಳೊ೦ದಿಗೆ ಬೆರೆತು ಮಕ್ಕಳಾಗಿ ನಲಿಯುತ್ತಾರೆ. ಮಕ್ಕಳು ಅಪ್ಪಟ ಕನ್ನಡದಲ್ಲೇ ಶರಣರೊ೦ದಿಗೆ ಮಾತನಾಡುತ್ತಾರೆ. ಇನ್ನು ಓದಿ ಮು೦ದೆ ನೀವೇನಾಗ್ತೀರಿ ಅ೦ತ ಕೇಳಿದ್ರೆ ಕಲ್ದಿರ್ ಸಿ೦ಗ್ ಅನ್ನೋ ಬಾಲಕನ೦ತೂ ದೊಡ್ಡ ಪೊಲೀಸ್ ಆಫಿಸರ್ ಆಗ್ತೀನಿ. ನಮ್ಮ ಮೇಘಾಲಯಕ್ಕೆ ಹೋಗಿ ಎಲ್ಲರಿಗೂ ಹೆಲ್ಪ್ ಮಾಡ್ತೀನಿ ಅ೦ತ ಅಚ್ಚ ಕನ್ನಡದಲ್ಲೇ ಉತ್ತರಿಸುತ್ತಾನೆ. ಮತ್ತೋರ್ವ ಬಾಲಕ ಒ೦ಟಿಪಲ೦ಗ್ ನಾನು ಶಿಕ್ಷಕನಾಗ್ತೀನಿ. ನಮ್ಮೂರಿಗೆ ಹೋದ ಬಳಿಕ ಎಲ್ಲರಿಗೂ ಉತ್ತಮ ಶಿಕ್ಷಣ ನೀಡ್ತೀನಿ ಅ೦ತ ಉತ್ತರಿಸುತ್ತಾನೆ.