ಒಂದು ಸಲ ಕವಿತಾ ಲಂಕೇಶ್ ಮತ್ತು ಗೌರಿ ಲಂಕೇಶ್ ಮನೆಗೆ ಬರುತ್ತೇವೆಂದು ತಿಳಿಸಿದರು. ಕಿರಗೂರಿನ ಗಯ್ಯಾಳಿಗಳು ಸಿನೆಮಾ ಮಾಡುವುದರ ಬಗ್ಗೆ ಮಾತಾಡಬೇಕೆಂದು. ಅವತ್ತು ನನ್ನ ಮಹಾರಾಜ ಮಿಕ್ಸಿ, ಕೆಲಸ ಮಾಡುತ್ತಿದ್ದಾಗ ಕರ್ಕಶ ಸದ್ದಿನೊಂದಿಗೆ ಗಕ್ಕನೆ ನಿಂತು ಹೋಯಿತು. ಮಹಡಿ ಮೇಲಿದ್ದ ಇವರಿಗೆ ಆ ಕರ್ಕಶ ಸದ್ದಿನಿಂದಲೇ ಗೊತ್ತಾಗಿತ್ತು ಎಲ್ಲ.  ಸರಿರಾತ್ರಿ ಹನ್ನೆರಡೂವರೆ ಗಂಟೆಗೆ ಕೆಳಗೆ ಬಂದು ಮಿಕ್ಸಿಯನ್ನು ಬಿಚ್ಚಿ ನೋಡಿದ್ದಾರೆ. ಬಳಿಕ  ಎಮರಿ ಪೇಪರ್ ನಲ್ಲಿ ತಿಕ್ಕಿ ಕ್ಲೀನ್ ಮಾಡಿ ಹಾಕಿದ್ರು.. ಅವರಿಗೆ ನನ್ನ ಮೇಲೆ ಪ್ರೀತಿ ಎನ್ನುವುದಕ್ಕಿಂತ ಯಂತ್ರದ ಬಗ್ಗೆ ಕುತೂಹಲ.
ರಾಜೇಶ್ವರಿ ತೇಜಸ್ವಿ ಬರೆಯುವ ಮೂಡಿಗೆರೆ ಹ್ಯಾಂಡ್ ಪೋಸ್ಟ್. 

 

ಯಾರೋ ಇಬ್ಬರು ನಮ್ಮ ಕಾರ್‌ಶೆಡ್ಡಿನಲ್ಲಿ ಏನನ್ನೋ ನೋಡ ಬಯಸುವಂತೆ ಹುಡುಕಾಡುತ್ತಿದ್ದರು. ಯಾರಿವರು? ನನ್ನ ಅನುಮತಿ ಇಲ್ಲದೆ ಹೀಗೆ ತಿರುಗಾಡುತ್ತಿರುವರು ಎಂದುಕೊಂಡೆ. ಅಷ್ಟರಲ್ಲಿ ಆ ಮಹಿಳೆ ಬಂದರು ಮನೆಗೆ.

ಇವರಿಬ್ಬರು ಮೊಟ್ಟಮೊದಲಿಗೆ ತೇಜಸ್ವಿಯನ್ನು ಓದಿಕೊಂಡಿದ್ದೇ ಅಣ್ಣನ ನೆನಪಿನಲ್ಲಂತೆ. ಆನಂತರ ಇವರ ಎಲ್ಲ ಪುಸ್ತಕ ಓದಿದವರು. ಇವರಿಬ್ಬರೂ ನನಗೆ ಥ್ಯಾಂಕ್ಸ್ ಹೇಳಿದರು. ಶಿವಮೊಗ್ಗೆಯಲ್ಲಿ ಆಕೆಯ ಮಾವ ಸ್ಕೂಟರ್ ಇಟ್ಟುಕೊಂಡಿದ್ದಾರಂತೆ. ಅದರ ಬಗ್ಗೆ ತುಂಬ ಪ್ರೀತಿ ಅವರಿಗೆ. ಅಗೌರವ ಇವರಿಗೆ. ಮನೆ ಪಕ್ಕ ಕರಿ ಎಣ್ಣೆ ಬಿದ್ದು ಗಲೀಜು ಎಬ್ಬಿಸುತ್ತದೆಂದು. ಆದರೆ ಅಣ್ಣನ ನೆನಪು ಓದಿದ ನಂತರ ಸರಿಯಾದ ಸ್ಥಾನಮಾನ ಕೊಟ್ಟಿರುವರಂತೆ. ಈಗ ಸ್ಕೂಟರಿನ ಬಗ್ಗೆ ಹೆಮ್ಮೆ. ಮಾವನಿಗೆ ಸಮಾಧಾನ.

ನಾನು ಚಿಕ್ಕಂದಿನಲ್ಲಿ ನನ್ನ ಅಣ್ಣ ಯಂತ್ರಗಳನ್ನು ಮಿಲಿ ಮಿಲಿ ಮಾಡೋದನ್ನು ನೋಡಿದ್ದೆ. ಅದರ ಬಗ್ಗೆ ನನ್ನ ಗಮನ ಅಷ್ಟಕಷ್ಟೆ. ಗಂಡಸರು ಹಾಗೆ, ಹೆಂಗಸರು ಹೀಗೆ ಎಂದು ಕೊಳ್ಳುತ್ತಿದ್ದೆ. ತೇಜಸ್ವಿಗೆ ಯಂತ್ರಗಳ ಬಗ್ಗೆ ಇಷ್ಟೊಂದು ಆಸಕ್ತಿಯಿರುವುದನ್ನು ನೋಡಿ ನನಗೆ ಆಶ್ಚರ್ಯ! ಸಾಹಿತಿಗಳು, ಸಂಗೀತಾಸಕ್ತರು, ದೊಡ್ಡಮನುಷ್ಯರು ಇವರು ಇಷ್ಟೊಂದು ವಿಶಿಷ್ಟ ಇದು ಹೇಗೆ?

೧೯೬೫ರಲ್ಲಿ ಇವರು ಕಾಡು ಕೊಂಡು ಚಿತ್ರಕೂಟ ತೋಟ ಮಾಡಿದಾಗ ಮನೆಗೆ ನೀರಿನ ವ್ಯವಸ್ಥೆ ಮಾಡಬೇಕಿತ್ತು. ನೀರಿನ ಆಸರೆ ಇದ್ದದ್ದು ಸುಮಾರು ಸಾವಿರ ಅಡಿಗೂ ಮಿಗಿಲಾದ ದೂರದಲ್ಲಿ. ಹೊಂಡದಲ್ಲಿ ಹರಿಯುತ್ತಿದ್ದ ಒಂದು ಝರಿ ಮಾತ್ರ. ಮನೆಗೆ ನೀರನ್ನು ಮುಟ್ಟಿಸಲು ವಿದ್ಯುಚ್ಛಕ್ತಿಯಾಗಲಿ, ಎಂಜಿನ್ ಪಂಪಿನಿಂದಾಗಲಿ ನೀರು ಹರಿಸುವ ಸಾಹಸಕ್ಕೆ ಕೈಹಾಕಲಿಲ್ಲ. ಬದಲಿಗೆ ಹೈಡ್ರಾಂ ಟೆಕ್ನಾಲಜಿಯನ್ನು ಉಪಯೋಗಿಸಿಕೊಂಡರು. ಹೈಡ್ರಾಲಿಕ್ ರಾಮ್ ಅಥವಾ ಹೈಡ್ರಾಂ ಎನ್ನುವುದು ಎಲೆಕ್ಟ್ರಿಕ್ ಅಥವಾ ಎಂಜಿನ್ ಶಕ್ತಿ ಬಳಸದೆ (ಹೊರಗಡೆಯೇ ತಿರುಗುಶಕ್ತಿ ಇಲ್ಲದೆ) ನೀರು ಎತ್ತಿಕೊಡುವ ಸಾಧನ. ರಾಮ್ ಅಂದರೆ ಒತ್ತಡದಲ್ಲಿ ಹೊಡೆಯುವುದು ಎಂದು ಅರ್ಥೈಸಬಹುದು. ಈ ಸಾಧನವು ಯಾವ ನಿರ್ವಹಣಾ ಚಾರ್ಜೂ ಕೇಳದೆ (ಅಂದರೆ ವಿದ್ಯುಚ್ಚಕ್ತಿ, ಪೆಟ್ರೋಲ್, ಡೀಸಲ್ ಚಾರ್ಜು) ಕೇಳದೆ ನಿರಂತರವಾಗಿ ಗುಲಾಮನಂತೆ ಮಾತಾಡದೆ ಕೆಲಸಮಾಡುತ್ತದೆ.

೧೯೬೬ರಲ್ಲಿ ನಮ್ಮ ಮದುವೆಯ ಸಮಯದಲ್ಲಿ ದಿನ ಬಳಕೆಗೆ ನೀರಿನ ಅಗತ್ಯ ಹೆಚ್ಚಾಗಿದ್ದುದರಿಂದ ಹೈಡ್ರಾಂ ಹತ್ತಿರದ ಅಣೆಕಟ್ಟೆಯ ಹತ್ತಿರ ಇವರ ಸ್ಕೂಟರ್ ನಿಲ್ಲಿಸಿ ಅದರ ಹಿಂದಿನ ಚಕ್ರಕ್ಕೇ ಬೆಲ್ಟ್ ಅಳವಡಿಸಿದ ಒಂದು ಸಣ್ಣ ಪಂಪ್ ಮುಖಾಂತರವೇ, ಅಳವಡಿಸಿದ ೧೨೦೦ಅಡಿ ಜಿ.ಐ. ಪೈಪ್ ಮುಖಾಂತರ ಮನೆ ನೀರಿನ ದೊಡ್ಡ ಟ್ಯಾಂಕ್‌ಗೆ ನೀರು ತುಂಬಿಸಿದ್ದರು. ಅಣ್ಣ(ಕುವೆಂಪು)ರಿಗೆ ಇದೆಲ್ಲ ಅಚ್ಚರಿ! ಸ್ಥಳಾವಕಾಶವಿಲ್ಲದಿರುವುದರಿಂದ ಹಾಗೂ ತುಂಬಾ ಟೆಕ್ನಿಕಲ್ ಆಗಿರುವುದರಿಂದ ಓದುಗನ ಆಸಕ್ತಿ ಬಗ್ಗೆ ಹೇಗೋ ಎನ್ನಿಸಿ, ಇಲ್ಲಿ ಹೈಡ್ರಾಂ ಬಗ್ಗೆ ವಿವರವಾಗಿ ಬರೆಯುತ್ತಿಲ್ಲ.

ಇವರ ಗೆಳೆಯ ಎನ್.ಡಿ.ಸುಂದರೇಶ್‌ರ ಮದುವೆ ಮಾತುಕತೆಯಾಗಬೇಕಿತ್ತು. ಇವರು ಶೋಭಾ ರವರನ್ನು ಪ್ರೀತಿಸಿದ್ದರು. ಇವರಿಬ್ಬರೂ ಡಿಗ್ರಿ ಪೂರೈಸಿದ ನಂತರ ಮನೆಯವರು ಇವರ ಮದುವೆಗೆ ತುಸು ಸಮಸ್ಯೆ ಒಡ್ಡಿದರು. ಟಸ್‌ಪುಸ್ ಮಾತು. ಬೇರೆ ವಿರೋಧವೇನಿಲ್ಲ. ಆ ಸಮಯದಲ್ಲಿ ಶಾಮಣ್ಣ ಶ್ರೀದೇವಿ ನಮ್ಮ ತೋಟಕ್ಕೆ ಬಂದಿದ್ದರು. ಎರಡನೇ ವರ್ಲ್ಡ್ ವಾರ್‌ನಲ್ಲಿ ಉಪಯೋಗಿಸಿದ ಹಳೇ ಜೀಪು ಆಗ ನಮ್ಮ ವಾಹನ. ಅದರಲ್ಲಿ ನಾವು ನಾಲ್ಕು ಮಂದಿ ಹೊರಟೆವು. ಶಿವಮೊಗ್ಗೆಗೆ(ಈ ಸುಂದರೇಶ್ ಜಮೀನು ಕೊಂಡು ಅಶೋಕನಗರ, ಭದ್ರಾವತಿಯಲ್ಲಿ ಸೆಟ್ಲ್ ಆದರು. ಮುಂದೆ ಇವರೇ ರೈತ ಮುಖಂಡರಾದವರು.)

ನಲವತ್ತು ಮೈಲಿ ಹೋಗಿ ಚಿಕ್ಕಮಗಳೂರು ತಲುಪುವಷ್ಟರಲ್ಲಿ ಜೀಪು ಕೆಟ್ಟಿತು. ಜೀಪು ಕೊಂಡ ಹೊಸತು. ಇನ್ನೂ ರಿಪೇರಿ ಮಾಡಲು ಇವರು ಕೈ ಹಾಕಿರಲಿಲ್ಲ. ಗ್ಯಾರೇಜಿಗೆ ಬಿಟ್ಟರು. ಅರ್ಜೆಂಟ್ ರಿಪೇರಿ ಆಗಬೇಕಿರುವುದನ್ನೂ ಹೇಳಿಕೊಂಡರು. ಗ್ಯಾರೇಜಿನವ ಬಾನೆಟ್ ಎತ್ತಿ ನೋಡಿದ. ಏನೇನೋ ತಿಣುಕಿದರೂ ಸ್ಟಾರ್ಟ್ ಆಗುತ್ತಿಲ್ಲ. ಇವರೂ ಕೈ ಹಾಕಿದರು. ಗಡಿಬಿಡಿ, ಶಾಮಣ್ಣ ಅತ್ಲಾಗೆ ನೋಡ್ತಾರೆ, ಇತ್ಲಾಗೆ ನೋಡ್ತಾರೆ. ಇವರಿಬ್ಬರಿಲ್ಲದೆ ಮದುವೆ ಬಗ್ಗೆ ಏನು ನಿರ್ಧಾರವಾಗುತ್ತೋ ಎಂಬ ಒತ್ತಡ ಬೇರೆ. ನಾನು ಶ್ರೀದೇವಿ ಕಣ್‌ಕಣ್ ಬಿಡೋದು. ಇಡೀ ದಿನ ಹೀಗೇ ಕಳೆಯಿತು. ಅಲ್ಲೇ ಗ್ಯಾರೇಜಿನ ಹತ್ತಿರದಲ್ಲೇ ಹೊಟೇಲೊಂದರಲ್ಲಿ ರೂಮು ಹಿಡಿದೆವು. ಸಿಕ್ಕಿದ್ದು ಒಂದೇ ಸಣ್ಣ ರೂಮು. ಅದರಲ್ಲೇ ನಾಲ್ವರೂ ಅಡಕಿಕೊಂಡು ಮಲಗಿದೆವು. ಬೆಳಿಗ್ಗೆ ಹೇಗೋ ಜೀಪು ಸ್ಟಾರ್ಟ್ ಮಾಡಿದ ಗ್ಯಾರೇಜಿನವ. ಅಲ್ಲಿಂದ ತರೀಕೆರೆ ತಲುಪಿವ ಹೊತ್ತಿಗೆ ಜೀಪು ಮತ್ತೆ ನಿಂತೇ ಹೊಯ್ತು. ನಾವು ಶಿವಮೊಗ್ಗ ಬಸ್ಸು ಹಿಡಿದೆವು. ಇವರು ಮಾತ್ರ ಜೀಪಿನಲ್ಲೇ. ಶಿವಮೊಗ್ಗೆಯಿಂದ ಮೆಕ್ಯಾನಿಕ್ ಹೋದ. ರಿಪೇರಿ ಮಾಡಿಕೊಂಡು ಜೀಪು ತಂದರು. ಕಳ್ಳ ಬಡ್ಡೀ ಮಗ ಚಿಕ್ಕಮಗಳೂರಿನವನಿಗೆ ಏನೂ ಗೊತ್ತಿಲ್ಲದೆ ಸತಾಯಿಸಿದನೆಂದು ಬೈದುಕೊಂಡರು ತೇಜಸ್ವಿ. ಇಗ್ನಿಶನ್ ಟೈಮಿಂಗ್ ತೊಂದರೆಯಿಂದ ಇದೆಲ್ಲ ಪಜೀತಿ ಆಯ್ತಂತೆ.

ಇಲ್ಲಿಂದ ಮುಂದೇ ಇವರೇ ಇಡೀ ಇಂಜಿನ್ ಡೌನ್ ಮಾಡುತ್ತಿದ್ದರು. ಜೀಪಿನ ಕೆಳಗೆ ಅಡ್ಡಡ್ಡ ಮಲಗಿಕೊಂಡು ರಿಪೇರಿ ಮಾಡುತ್ತಿದ್ದರು. ಕೈಮೈಯೆಲ್ಲಾ ಮಸಿಮಯವಾಗುತ್ತಿತ್ತು. ಆಗಿನ ಇವರ ಡ್ರೆಸ್ ಬಗ್ಗೆ ಓದಿಕೊಂಡರೆ ಚೆನ್ನ. ನಮ್ಮ ಮನೆಯಲ್ಲಿ ನನಗೊಬ್ಬಳು ಸಹಾಯಕಿ ಅನೇಕ ವರ್ಷಗಳಿಂದ ಇರುವಳು. ದೇವಕಿಯೆಂದು. ಬಹಳ ಶುಭ್ರವಾಗಿ ಬಟ್ಟೆ ಒಗೆಯುವಳು. ಎಷ್ಟು ಶುಭ್ರವೆಂದರೆ ನಮ್ಮ ಮಕ್ಕಳ ಚೂಡಿದಾರದಲ್ಲಿನ ಹೂಗಳು ಮಾಯ. ಇವರ ಅಂಗಿಗಳ ಗುಂಡಿಗಳೇ ಮಾಯ. ಹಾಗೆ ಜಪ್ಪುತ್ತಾಳೆ. ಇದೆಲ್ಲ ಇವರಿಗೆ ರೇಜಿಗೆ.

ಜೀಪ್ ರಿಪೇರಿ ಮಾಡುವಾಗಂತ ನಿಕ್ಕರ್‌ ಅನ್ನು ಇವರೇ ಸಿದ್ಧಪಡಿಸಿಕೊಂಡಿದ್ದರು. ಇವರು ಜೀನ್ಸ್ ಟ್ರೌಸರ್ಗೆ ಮೋಹಿತರಾಗುವ ಮುಂಚೆ ವೆಲ್‌ವೆಟ್ ಕಾಡ್ರಾ ಟ್ರೌಸರ್ ಹಾಕುತ್ತಿದ್ದರು. ಈ ಟ್ರೌಸರ್‌ಗಳನ್ನು ಸಯ್ಯಾಜಿ ರಾವ್ ಸರ್ಕಲ್, ಮೈಸೂರಿನ ಹತ್ತಿರದ ದರ್ಜಿ ಕೈಲಿ ಹೊಲೆಸಿಕೊಳ್ಳುತ್ತಿದ್ದರು. ದರ್ಜಿಗಳ ಸಹವಾಸವೆಂದರೆ ರೇಜಿಗೆ. ಅವರುಗಳು ಹೊಲೆದು ಕೊಡುವುದು ಒಪ್ಪಿಗೆಯಾಗುತ್ತಲೇ ಇರಲಿಲ್ಲ. ಎಲ್ಲೋ ಬಿಗಿ, ಎಲ್ಲೋ ಸಡಿಲ. ಅದಕ್ಕೆ ತಕ್ಕ ಹಾಗೆ ಮೈ ಆಡಿಸುವುದು, ಭುಜ ಕುಣಿಸುವುದು ಅಭ್ಯಾಸವಾಗುತ್ತೆನ್ನುವುದು ಇವರ ಮತ. ಇದು ಹೌದೂ ಸಹ. ಎರಡೆರಡು ಸಲ ಅಲ್‌ಟ್ರೇಷನ್ಗೆಂದು ದರ್ಜಿ ಅಂಗಡಿಗೆ ತಿರುಗುವುದು ಇನ್ನೂ ಬೇಸರ. ಒಮ್ಮೆ ದರ್ಜಿಗೆ ನೀನು ಮೆಟ್ಟು ಹೊಲಿಯಲಿಕ್ಕೇ ಲಾಯಕ್ಕೆಂದು ಬೈದು ಬಟ್ಟೆ ಹಿಂತೆಗೆದುಕೊಳ್ಳದೆ ಬಂದಿದ್ದರು. (ಇವರದ್ದು ದೊಡ್ಡ ಸೈಜು ಬೇರೆ) ಮುಂದೆ ಸರಿ ಅಳತೆಯ ರೆಡಿಮೇಡ್ ಜೀನ್ಸ್ ಸಿಕ್ಕಿತು. ಒಳ್ಳೆ ಅಂಗಿಗಳೂ ದೊರೆತವು. ಎಲ್ಲೋ ಇರುವ ಈ ದರ್ಜಿ ಹೇಗೆ ಇಷ್ಟು ಪರ್ಫಕ್ಟ್ ಆಗಿ ಹೊಲೆಯುವನೆಂದು ಸೋಜಿಗಪಡುತ್ತಿದ್ದರು. ವೆಲ್‌ವೆಟ್ ಕಾಡ್ರಾ ಟ್ರೌಸರ್‌ಗಳು ನವೆದಂತೆನಿಸಿದಾಗ ನಿಕ್ಕರ್ ಅಳತೆಗೆ ಕತ್ತರಿಸುತ್ತಿದ್ದರು. ನನ್ನ ಸಹಾಯಕಿಯ ಒಗೆತದಿಂದ ಗುಂಡಿ, ಹೊಲಿಗೆ ಮಾಯವಾಗುತ್ತಿತ್ತು. ನಾನು ಸರಿ ಮಾಡಿಡುತ್ತಿದ್ದೆ. ಮತ್ತೂ ಹೋಗುತ್ತಿದ್ದವು. ಇದಕ್ಕೆ ಇವರು ಒಂದುಪಾಯ ಮಾಡಿದರು. ಮೀನಿನ ಗಾಳಕ್ಕೆ ಬಳಸುತ್ತಿದ್ದ ತೆಳ್ಳನೆ ನೈಲಾನ್ ದಾರದಲ್ಲಿ ಗುಂಡಿಗಳನ್ನು ಹೊಲೆದು, ಕತ್ತರಿಸಿದ ಭಾಗವನ್ನು ಅದೇ ದಾರದಲ್ಲಿ ಹೆಮ್ಮಿಂಗ್ ಮಾಡುತ್ತಿದ್ದರು. ಹೊಲಿಗೆ ಸ್ವಲ್ಪ ಒರಟೊರಟಾಗಿರುತ್ತಿತ್ತು. ಇನ್ನೂ ಒಂಚೂರು ಮುಂದೆ ಹೋಗಿ ಹೇಗೂ ರಿಪೇರಿಗೆ ತಾನೆ ನಿಕ್ಕರ್ ಒಗೆಯಲಿಕ್ಕೇ ಹಾಕುತ್ತಿರಲಿಲ್ಲ. ಪ್ರೊಫೆಷನಲ್ ಮೆಕ್ಯಾನಿಕ್ಸ್‌ಗಳಂತೆ ನಿಕ್ಕರ್ ಎಣ್ಣೆ ಹಿಡಿದಂತೆನ್ನಿಸಿದಾಗ ಬಚ್ಚಲ ಒಲೆಗೆ ಹಾಕುತ್ತಿದ್ದರು.

ಒಂದು ಸಲ ಕವಿತಾ ಲಂಕೇಶ್ ಮತ್ತು ಗೌರಿ ಲಂಕೇಶ್ ಮನೆಗೆ ಬರುತ್ತೇವೆಂದು ತಿಳಿಸಿದರು. ಕಿರಗೂರಿನ ಗಯ್ಯಾಳಿಗಳು ಸಿನೆಮಾ ಮಾಡುವುದರ ಬಗ್ಗೆ ಮಾತಾಡಬೇಕೆಂದು. ಅವತ್ತು ನನ್ನ ಮಹಾರಾಜ ಮಿಕ್ಸಿ, ಕೆಲಸ ಮಾಡುತ್ತಿದ್ದಾಗ ಕರ್ಕಶ ಸದ್ದಿನೊಂದಿಗೆ ಗಕ್ಕನೆ ನಿಂತು ಹೋಯಿತು. ಮಹಡಿ ಮೇಲೆ ಕಂಪ್ಯೂಟರಿನ ಮುಂದೆ ಕೂತು ಕೆಲಸ ಮಾಡುತ್ತಿದ್ದ ಇವರಿಗೆ ಆ ಕರ್ಕಶ ಸದ್ದಿನಿಂದಲೇ ಗೊತ್ತಾಗಿತ್ತು ಎಲ್ಲ. ಮಲಗಲು ಇವರು ಕೆಳಗೆ ಬಂದಾಗ ಸರಿರಾತ್ರಿ ಹನ್ನೆರಡೂವರೆ ಗಂಟೆ. ಆಗ ಮಿಕ್ಸಿಯನ್ನು ಬಿಚ್ಚಿ ನೋಡಿದ್ದಾರೆ. ಮೋಟಾರಿನಲ್ಲಿ ತೊಂದರೆ ಇರಬಹುದೆಂದು. ಕಾರ್ಬನ್ ಬ್ರಷ್‌ನಲ್ಲಿ ದೂಳು ಕೂತಿತ್ತಂತೆ. ಎಮರಿ ಪೇಪರ್(ಉಪ್ಪು ಕಾಗದ)ದಲ್ಲಿ ತಿಕ್ಕಿ ಕ್ಲೀನ್ ಮಾಡಿ ಹಾಕಿದ್ರು. ಕಾಂಟಾಕ್ಟ್ ಸರಿಯಾಗುವಂತೆ ಮಾಡಬೇಕಿತ್ತು. ಜೋಡಿಸಲು ನನ್ನ ಸಹಾಯ ತಗೊಂಡರು. ನನಗೆ ನಾಳೆಯ ವಿಶೇಷ ಅಡುಗೆಗೆ ತೊಂದರೆಯಾಗಬಾರದೆಂದು ಈ ಪರಿ ಕೆಲಸ ಇವರದು. (ಪ್ರಿಯ ಓದುಗ ಮಹಾಶಯರೆ, ಇವರಿಗೆ ಹೆಂಡತಿ ಮೇಲೆ ಪ್ರೀತಿ ಕಾಳಜಿ ಹೀಗೆ ವ್ಯಕ್ತವೇ ಎಂದು ಪ್ರತಿಕ್ರಿಯಿಸಬೇಡಿ. ಇಲ್ಲಿ ಇವರು ಯಂತ್ರಕ್ಕೆ ಪ್ರತಿಕ್ರಿಯಿಸುತ್ತಿದುದ್ದನ್ನು ಗಮನಿಸಿ)

ಕಾರಿನಲ್ಲಿ ಕೇರಳದ ಕಣ್ಣೂರಿಗೆ ಮಕ್ಕಳೊಟ್ಟಿಗೆ ಹೊರಟೆವು. ಅಪರೂಪದ ಗಿಡಗಳ, ಬೀಜಗಳ ಕಲೆಕ್ಷನ್‌ಗಾಗಿ. ಅಲ್ಲಿನ ವಿಶ್ವವಿದ್ಯಾಲಯದ ತೋಟಗಾರಿಕೆ ನೊಡೋಣೆಂದು, ಜೊತೆಯಲ್ಲಿ ಪ್ಲ್ಯಾಂಟ್ ಪೆಥಾಲಜಿಸ್ಟ್‌ರಾದ ಡಾ.ಚಂದ್ರಶೇಖರ್ ಮತ್ತು ಗೆಳೆಯ ರೀತು ಸ್ಕೂಟರಿನಲ್ಲಿ ಬಂದಿದ್ದರು. ಅವರ ಸಂಸಾರ ಕಾರಿನಲ್ಲಿ ನಮ್ಮೊಟ್ಟಿಗೆ. ಒಂದು ದೊಡ್ಡ ಎತ್ತರದ ಮರದ ಬೀಜ ಥೇಟ್ ಬೆಕ್ಕಿನ ಬಾಲದಂತೆಯೇ ನನ್ನ ಅದೃಷ್ಟಕ್ಕೆ ಸಿಕ್ಕಿ ವಿಸ್ಮಯವಾಯಿತು. ವಾಪಾಸು ಬರುವಾಗ ಮಟಮಟ ಮಧ್ಯಾಹ್ನ. ರಣರಣ ಬಿಸಿಲು, ಊರಾಚೆ, ದಾರಿ ಮಧ್ಯೆ ಕಾರು ನಿಂತಿತು. ನಾನು ನಿರ್ಯೋಚನೆಯಿಂದಿದ್ದೆ. ಇವರು ರಿಪೇರಿ ಮಾಡುವರೆಂಬ ಧೈರ್ಯ. ಉಳಿದವರಿಗೆ ಕಳವಳ. ಇವರು ಕಾರಿನಿಂದಿಳಿದು ಬಾನೆಟ್ಟು ತೆಗೆದರು. ಒಂದು ಕಡೆಯಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದರು. ಪೆಟ್ರೋಲ್ ಕಸ ಬಂದಿರಬಹುದೆಂಬ ಅನುಮಾನ ಇತ್ತು. ಅದು ಸರಿಯಾಗೇ ಫ್ಲೋ ಆಗುತ್ತಿತ್ತು. ಪಾಯಿಂಟ್ ಸೆಟ್ ಬಿಚ್ಚಿಕೊಂಡರು. ಅದನ್ನು ಉಜ್ಜಿ ಕ್ಲೀನ್ ಮಾಡಿ ಗ್ಯಾಪ್ ಅಡ್ಜಸ್ಟಮೆಂಟ್ ಮಾಡಿ ಹಾಕಿದರು. ಕೂಡಲೆ ಸ್ಟಾರ್ಟ್ ಆಯ್ತು. ಇವರು ಯಂತ್ರದ ಕಾರ್ಯ ವಿಧಾನದ ಮೂಲ ತತ್ವಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ಯಂತ್ರ ರಿಪೇರಿ ಮಾಡಬೇಕಾದರೆ ಯಂತ್ರ ವೈದ್ಯರಾಗಬೇಕೆನ್ನುತ್ತಿದ್ದರು.

ನಾನು ಕಾರ್ ಡ್ರೈವ್ ಮಾಡುವುದು ಕಲಿತ ಹೊಸತರಲ್ಲಿ ನನ್ನ ತಪ್ಪುಗಳನ್ನು ತಿದ್ದುವಾಗ(ಸ್ವಲ್ಪ ಬೈಗಳದ ಜೊತೆಗೆ) ಆಯಾ ಭಾಗಗಳು ನನ್ನ ತಪ್ಪಿನಿಂದ ವೇರ್ ಔಟ್ ಆಗುವುದನ್ನೂ ತಿಳಿಸಿಕೊಡುತ್ತಿದ್ದರು. ಅಷ್ಟು ಪರಿಪೂರ್ಣತೆ ಅವರಲ್ಲಿತ್ತು. ಇವರು ಒಳ್ಳೆಯ ಚಾಲಕರೂ ಕೂಡ. ಒಂದೇ ಒಂದು ಆಕ್ಸಿಡೆಂಟ್ ಮಾಡಿರಲಿಲ್ಲ. ಅಷ್ಟೇ ಅಲ್ಲ, ಡ್ರೈವ್ ಮಾಡ್ತ ಮಾಡ್ತಾನೆ ಪುಟ್ಟ ಪುಟ್ಟ ಬಟೇರ ಮರಿಗಳು ಸಣ್ಣ ಪೊದರಿನಲ್ಲಿ ಮರೆಯಾಗಿ ಕಣ್ತಪ್ಪಿಸುವುದು ಇವರ ಕಣ್ಣಿಗೆ ಬೀಳುತ್ತಿತ್ತು. ಕೂಡಲೆ ರಿವರ್ಸ್ ಗೇರಿಗೆ ಹಾಕುತ್ತಿದ್ದರು. ಆ ಬಟೇರಗಳನ್ನು ನೋಡಿದ ಬಳಿಕವೇ ಮುಂದೆ ಸಾಗುತ್ತಿದ್ದುದು. ಇನ್ನೊಂದು ಸಲ, ನಾವು ಮಕ್ಕಳೊಟ್ಟಿಗೆ ದಾಂಡೇಲಿಗೆ ಹೋಗಿದ್ದೆವು. ಡ್ರೈವ್ ಮಾಡ್ತಾನೆ ದೊಡ್ಡಮರದ ತುಟ್ಟ ತುದಿಯಲ್ಲಿದ್ದ ಬಣ್ಣಬಣ್ಣದ ಹಾರ್ನ್‌ಬಿಲ್(ದೊಡ್ಡ ಮಂಗಾಟೆ ಹಕ್ಕಿ) ಗುರುತಿಸಿದರು. ಕಾರು ನಿಲ್ಲಿಸಿ ನಮಗೆಲ್ಲ ತೋರಿಸಿದರು. ಅಂತಹ ಚುರುಕು ಕಣ್ಣು! ಅಂತಹ ಜೀವನಾಸಕ್ತಿ! ಇಂತಹ ಲೆಕ್ಕವಿಲ್ಲದಷ್ಟು ಇವರಲ್ಲಿ.

ದಿ ಒಡೆಸ್ಸಾ ಫೈಲ್ ಬೈ ಫೆಡ್ರಿಕ್ ಫೊರ್ಸಿತ್ ಪುಸ್ತಕವನ್ನು ಇವರು ಓದಿದ್ದರು. ಸಿನೆಮಾವನ್ನೂ ನೋಡಿದ್ದರು. ಇದರಲ್ಲಿ ಒಬ್ಬ ಹುಡುಗನನ್ನು ಕೊಲ್ಲಲು ನಾಜಿ ಕಡೆಯವರು ಆದೇಶ ಕೊಟ್ಟಿರುತ್ತಾರೆ. ಅದಕ್ಕಾಗಿ ಅವನ ಕಾರಿನಲ್ಲಿ ಬಾಂಬ್ ಇಟ್ಟು, ಸರ್ಕ್ಯೂಟ್ ಪೂರ್ಣಗೊಂಡು ಅದು ಸಿಡಿಯಲು ಎರಡು ಕಾಂಟ್ಯಾಕ್ಟ್‌ಗಳನ್ನು ಕಾರಿನ ಶಾಕ್‌ಅಬ್‌ಸಾರ್ಬರ್ ಕಾಯಿಲ್ ಸ್ಪ್ರಿಂಗ್‌ಗಳ ಮಧ್ಯೆ ಇಟ್ಟಿರುತ್ತಾರೆ. ಕಾಂಟ್ಯಾಕ್ಟ್ ಬರದೆ ಬಾಂಬು ಸಿಡಿಯುವುದಿಲ್ಲ. ಅದು ಇಂಗ್ಲಿಷ್ ಕಾರು ಆಗಿತ್ತು. ಅದಕ್ಕೆ ಸಾಫ್ಟ್ ಸ್ಪ್ರಿಂಗ್ ಹಾಕಿರುತ್ತಾರೆ. ಆದರೂ ದಾರಿ ಮಧ್ಯೆ ಅಡ್ಡ ಬಿದ್ದ ಮರವನ್ನು ದಾಟಿಸುವಾಗ ಜಂಪ್ ಆಗಿ ಬಾಂಬ್ ಸಿಡಿಯುತ್ತೆ. ತೇಜಸ್ವಿ ಇದನ್ನೆಲ್ಲ ಕೂಲಂಕುಷವಾಗಿ ಗಮನಿಸುತ್ತಿದ್ದರು. ಇವರು ಹೇಳುತ್ತಿದ್ದುದು, ಕನ್ನಡದ ಬರಹಗಾರರು ಈ ರೀತಿಯಾಗಿ ವಿವರವಾಗಿ ತಿಳಿದು ಬರೆದರೆ ಒಳ್ಳೆಯದೆನ್ನುತ್ತಿದ್ದರು.

 ಅತಿಥಿಗಳು ಮತ್ತು ಹಠಯೋಗ

ತೇಜಸ್ವಿ ಇದ್ದಾಗ ನಮ್ಮ ಮನೆಗೆ ಮಂದಿ ಬರುವವರು ಬಹಳವಿದ್ದರು. (ಈಗಲೂ ಬರುವರು) ಬಸ್ಸಿನಲ್ಲಿ ಶೈಕ್ಷಣಿಕ ಪ್ರವಾಸಕ್ಕಾಗಿ ಈ ಕಡೆಗೆ ಬಂದು ಹೋಗುವವರು ಮೂಡಿಗೆರೆ ಹ್ಯಾಂಡ್ ಪೋಸ್ಟು ತೇಜಸ್ವಿ ಮನೆಗೆ ಬರಲೇಬೇಕು, ಹೋಗಲೇಬೇಕೆಂದು ಹಠಕ್ಕೆ ಬಿದ್ದಂತೆ ಬಂದು ಇವರನ್ನು ಮಾತಾಡಿಸಿಕೊಂಡು ಹೋಗುತ್ತಿದ್ದರು. ದೂರದೂರಿನಿಂದ ಜಾಣ ಜಾಣೆಯರು ಬಂದು ವಿದ್ಯಾರ್ಥಿಗಳಾಗಿ ಇವರ ಸುತ್ತ ಕೂತು ಪ್ರಶ್ನೆಗಳನ್ನು ಹಾಕಿ ಉತ್ತರ ಪಡೆದು ಧನ್ಯರಾಗಿ ಹೋಗುತ್ತಿದ್ದರು. ಅದೆಷ್ಟು ಚೆನ್ನಾಗಿ ವಿಚಾರ ವಿನಿಮಯವಾಗುತ್ತಿತ್ತು ಛೆ! ಅವನ್ನು ರೆಕಾರ್ಡು ಮಾಡಿಕೊಳ್ಳಲಿಲ್ಲವೆ, ಪರಿತಪಿಸುವಂತಾಗುತ್ತಿದೆ ಈಗ. ಇವರೊಂದಿಗಿನ ಮಾತು ಬರೀ ಸಾಹಿತ್ಯಕ್ಕೇ ಮಾತ್ರ ಮೀಸಲಾಗಿರುತ್ತಿರಲಿಲ್ಲ.

ದೂರದ ಗುಲ್ಬರ್ಗಾದಿಂದ ವೃದ್ಧ ರೈತರ ಗುಂಪೊಂದು ಬಂದು ಇವರಲ್ಲಿ ಕೃಷಿ ಬಗ್ಗೆ, ಬೇಸಾಯದ ಬಗ್ಗೆ ಚರ್ಚೆ ಮಾಡಿದ್ದರು. ಅವರ ಕಷ್ಟ, ನಷ್ಟ, ಅನುಭವಗಳನ್ನು ಇವರಲ್ಲಿ ನಿವೇದಿಸಿಕೊಂಡಿದ್ದರು. ಬೇಸಾಯವನ್ನು ಹೇಗೆ ಸುಧಾರಿಸಿಕೊಳ್ಳಬೇಕೆಂದು ಕೇಳಿದ್ದರು. ಪಾಪ! ವೃದ್ಧರು, ಅನುಭವದಿಂದ ಮಾಗಿದವರು. ಇವರು ನಿರ್ಗಮಿಸಿದಾಗ ಎರಡೆರಡು ಸಲ ಫೋನು ಮಾಡಿಕೊಂಡು `ಅಮ್ಮಾರೆ, ನಿಮ್ಮ ಹಿಂದೆ ನಾವಿದ್ದೇವೆ. ನಮಗೆ ನಿಮ್ಮದೇ ಚಿಂತಿ ಆಗತೈತಿ ಎಂದು ಹೇಳಿದರೆಲ್ಲ. ನನಗೆ ಕಣ್ಣೀರಿಡುವಂತಾಗುತ್ತೆ`. ಅಂದು ಅವರು ಬಿಸಿಲಲ್ಲಿ ಬಂದಾಗ ದಣಿವಾಗಿದ್ದರು. ಆಗ ನಾನು ಕೊಟ್ಟ ಮಜ್ಜಿಗೆ ನೀರು, ನಿಂಬೆ ಪಾನಕವನ್ನೂ ಫೋನಿನಲ್ಲಿಯೂ ನೆನೆಯುವರೆಂದರೆ, ಧನ್ಯಾತ್ಮರುಗಳು ಅವರು! ರೈತರು!

ಕಳೆದ ವರ್ಷ ಮಾರ್ಚ್ ಮಧ್ಯದಲ್ಲಿ ಒಂದು ನಾಲ್ಕು ಜನ ಮಂಗಳೂರಿನ ಕಡೆಯವರು ಬಂದಿದ್ದರು. ಇವರೆಲ್ಲ ಮನಶಾಸ್ತ್ರಜ್ಞರು. ಸೈಕ್ಯಾಟ್ರಿಸ್ಟರು. ಇವರೊಟ್ಟಿಗೆ ಮಾತಾಡುವುದೇ ಆಶ್ಚರ್ಯವೆಂಬಂತೆ, ಪುಣ್ಯವೆಂಬಂತೆ ಮಾತಾಡುತ್ತಿದ್ದರು. ಜೊತೆಯಲ್ಲಿ ನಿಂತು ಫೋಟೋ ತೆಗೆಸಿಕೊಂಡರು. ಸಾರ್ ಹತ್ತೊಂಬತ್ತು ವರ್ಷದವರೆಂಬಂತೆ ಕಾಣುವರೆನ್ನುತ್ತ ಇಪ್ಪತ್ತೈದು ವರ್ಷ ಹತ್ತಿರದ ತರುಣಿ ಲಕ್ಚರರ್ ಒಬ್ಬರು ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಂಡರು. ಆಮೇಲೆ ಅವರೆಲ್ಲ ಒಟ್ಟಿಗೇ ಕೇಳಿದರು ನಿಮಗೆ ವಯಸ್ಸೆಷ್ಟಾಯಿತು ಸಾರ್? `ವರ್ಷಗಳಿಗೇನ್ರೀ ಉರುಳುತ್ತಿರುತ್ತೆ. ನನಗೆ ಅದು ಮುಖ್ಯವೇ ಅಲ್ಲ. ನಮ್ಮ ಬದುಕು ಅರ್ಥಪೂರ್ಣವಾಗಿರಬೇಕು. ಅದು ಮುಖ್ಯ. ನನಗನ್ನಿಸುತ್ತೆ ನಾನು ಬಾಳ ಹಿಂದೆ ಹುಟ್ಟಿಕೊಂಡು ಬಿಟ್ಟಿದ್ದೇನೆ. ಇನ್ನೂ ನಿಖರವಾಗಿ ಬೇಕಾದರೆ ಇವಳನ್ನು ಕೇಳಿ ಇವಳು ಹೇಳುತ್ತಾಳೆಂದರು`. ಇದು ಇವರ ಧಾಟಿ ಮತ್ತು ಧೋರಣೆ.

ಯಾವುದೋ ಊರಿನಿಂದ ಒಬ್ಬ ಪಿ.ಯು.ಸಿ. ಹುಡುಗ ಬಂದ. `ಅಮ್ಮ, ತೇಜಸ್ವಿ ಸರ್ ಒಂದು ನಕ್ಷತ್ರವಿದ್ದಂತೆ. ನಕ್ಷತ್ರವನ್ನು ನೋಡಿ ಸಮಾಧಾನ ಮಾಡಿಕೊಳ್ಳಿ` ಎಂದು ಸಂತೈಸಿದನು. ಪ್ರತಿ ದಿನ ನೆನಪಾಗುವನು ಈ ಹುಡುಗ. ಹೀಗೆ ಬರುವವರು. ಹೋಗುವವರು. ನಿರಂತರ ನಿರುತ್ತರಕ್ಕೆ.

ಹಠಯೋಗ

ಇವರಿಗೆ ಬೇಗ ಕೋಪ ಬರುತ್ತಂತೆ ಎನ್ನುವರು ಹಲವರು. ಬಹಳ ಅಂದರೆ ಬಹಳ ಒಂದೈವತ್ತು ವರ್ಷದ ಹಿಂದೆ ನನಗೆ ಒಂದು ಕಾಗದ ಪೂರ್ತಿ ಬೈದೇ ಬರೆದಿದ್ದರು ಇವರು. ಆದರೂ ಆಗಲೂ ಅದು ಕೋಪ ಅಂತನ್ನಿಸಲಿಲ್ಲ ನನಗೆ.

ಮೊನ್ನೆ ಮೊನ್ನೆ ಮಗಳು ಈಶಾನ್ಯೆಗೆ ಒಂದು ಇ-ಮೈಲ್ ಬಂದಿತ್ತಂತೆ. ನಿಮ್ಮ ತಂದೆ ಕೈಯಲ್ಲಿ ಅತಿ ಹೆಚ್ಚು ಬೈಸಿಕೊಂಡವರು ಯಾರಾದರೂ ನಿಮಗೆ ಗೊತ್ತೆ? ಒಂದು ಸ್ವಲ್ಪ ಬೇಜಾರು ನೋವಿನಿಂದಲೇ ಇದನ್ನು ನನಗೆ ಹೇಳಿದಳು ಫೋನಿನಲ್ಲಿ.

ಹೀಗೊಂದು ಘಟನೆ. ನಮ್ಮ ಮನೆ ಅಂಗಳದಲ್ಲಿ ಒಂದು ಕರಿಬೇವಿನ ಮರ ಇದೆ. ಇದರ ಪಕ್ಕಕ್ಕೇ ಒಂದು ಕೆಂಡಸಂಪಿಗೆ ಮರ ಇದೆ. ನಾನೇ ನೆಟ್ಟು ಬೆಳಸಿದ್ದು. ಈ ಮರದ ತುಂಬ ಹೂ ಬಿಡುತ್ತೆ. ಆಮೇಲೆ ಕಾಯಾಗಿ, ಕಾಯಿಸಿಡಿದು, ಕೆಂಡದಂತ ಕೆಂಪು ಬೀಜ ಕಾಣಕ್ಕಾದಾಗ, ಬೀಜ ತಿನ್ನಕ್ಕೆ ನಾನಾ ಬಗೆಯ ಹಕ್ಕಿಗಳು ಮುಗಿ ಬೀಳ್ತವೆ. ಪಿಕಳಾರ, ಮಂಗಾಟೆ ಹಕ್ಕಿ, ಗಿಣಿ, ಕಾಗೆ, ಮಲಬಾರ್ ಟ್ರೋಜನ್ ಇತ್ಯಾದಿ ಪಕ್ಷಿಗಳು. ಈ ಹಕ್ಕಿಗಳು ಬರೋದನ್ನು ನೋಡಿ ಇವರೂ ಒಂದು ಸಲ ಬೀಜ ನೆಕ್ಕಿ ನೋಡಿದರು. ಕಹೀ ಅಂದರೆ ಕಹೀ ಅಂತೆ. ಇವರ ಕಹಿ ಮುಖ ನೋಡಕ್ಕಾಗಲಿಲ್ಲ.

ಒಂದು ಸಂಜೆ ಅಲ್ಲೇ ಪಕ್ಕದ ಸಿಟ್‌ಔಟ್ನಲ್ಲಿ ನಾವಿಬ್ಬರೂ ಕೂತಿದ್ದೆವು. ಹತ್ತಿರದ ಕೆರೆ ಮಧ್ಯೆ ಬಂಡೆಮೇಲೆ ಎರಡು ದೊಡ್ಡ ಕಳ್ಳ ಆಮೆಗಳು ಸಂಜೆ ಬಿಸಿಲಿಗೆ ಮೈಯೊಡ್ಡಿದ್ದವು. ಅಲ್ಲಿಗೇ ಎರಡು ನೀರು ಕೊಕ್ಕರೆ ಹಾರಿ ಬಂದು ಕೂತವು. ಮನೆ ಪಕ್ಕ ಒಂದು ಕೆರೆ, ಆ ಕೆರೆ ಮಧ್ಯೆ ಇಂಥ ಜೀವಿಗಳ ಇರುವಿಕೆ. ಇಂಥ ಪರಿಸರ ಯಾರನ್ನಾದರೂ ಆಕರ್ಷಿಸುತ್ತೆ. ನಮ್ಮ ಗಮನವೆಲ್ಲ ಅತ್ತಲೆ. ಆದರೆ ಚಿಟುಕಿ ಹಾಕಿ ಕಣ್ಣು ಮಿಟುಕಿಸಿ ಸೆಳೆಯಿತು ಬೇರೆಡೆಗೆ ನಮ್ಮ ಗಮನವನ್ನು. ಒಂದು ಚೂರು ದೊಡ್ಡ ಗಾತ್ರದ ಹಕ್ಕಿ ಸಂಪಿಗೆ ಮರಕ್ಕೆ ವಕ್ಕರಿಸಿತ್ತು. ಕೆಂಡದ ಉಂಡೆಯಂತಹ ಕೆಂಪು ಹಕ್ಕಿ. ಕೊರಳೆಲ್ಲ ಕಡುನೀಲಿ, ತಿಳಿ ಹಳದಿ ಅಂಚು ಅದಕ್ಕೆ. ಪುಕ್ಕ ಚೂರು ಉದ್ದ. ಎಂತಹ ಸೊಬಗು! ಇದೇ ಮಲಬಾರ್ ಟ್ರೋಜನ್ ಹಕ್ಕಿ. ಒಂದು ಎಲೆ ಅದರ ಕಣ್ಣಿಗೆ ಅಡ್ಡ. ಹಕ್ಕಿ ಕೂತೇ ಇದೆ. ಬೀಜಕ್ಕೆ ಕೊಕ್ಕು ತಾಗಿಸಲೇ ಇಲ್ಲ. ಕೊಕ್ಕನ್ನು ಚೂಪಾಗಿ ಮಾಡಿಕೊಂಡಿದೆ. ಇದೆಂತಹ ಸೊಂಬೇರಿ ಹಕ್ಕಿ. ಅಂದುಕೊಂಡು ನನ್ನ ಕೈ ಪೊಸಿಷನ್ ಬದಲಿಸಿದೆ. ಹಕ್ಕಿ ಹಾರೇ ಹೋಯಿತು. ನಿನ್ನಿಂದ ಸುಖ ಇಲ್ಲ ಮಾರಾಯ್ತಿ ಎಂದರು ಇವರು. ಬೆಳಕು ಮಬ್ಬಾಗಕ್ಕಾಗಿತ್ತು. ಸೂರ್ಯ ರಂಗು ಚೆಲ್ಲುತ್ತ ಮನೆ ಕಡೆ ಹೊರಟಿದ್ದ.

ಈ ಮಲಬಾರ್ ಟ್ರೋಜನ್ ಹಕ್ಕಿ ಮಲೆನಾಡಿನ ಹಕ್ಕಿ. ಆದರೆ ಕಾಣಸಿಗುವುದು ಬಲು ಅಪರೂಪ. ಯಾವಾಗಲೋ ಒಂದೊಂದು ಸಲ ಕಾಣಸಿಗುತ್ತೆ. ಮರುದಿನ ಸಂಪಿಗೆ ಬೀಜ ತಿನ್ನಲು ಈ ಹಕ್ಕಿ ಬಂದೇ ಬರುತ್ತೆಂದು ಖಾತರಿಯಾಗಿತ್ತು ತೇಜಸ್ವಿಗೆ. ಕರಿಬೇವು ಮರದ ಬುಡದಲ್ಲಿ ಹೈಡ್ನು ಸ್ಥಾಪಿಸಿಕೊಂಡರು. ಕ್ಯಾಮರಾ ಮತ್ತು ಕೂರಲು ಸ್ಟೂಲ್ನೊಂದಿಗೆ ಮರೆಯೊಳಗೆ ಮರೆಯಾದರು. ಹಕ್ಕಿಗಾಗಿ ಕಾದು ಕೂತರು. ಇವರು ಹೀಗೆ ಮರೆಯಲ್ಲಿ ಕೂತಾಗ ನಮ್ಮ ತೋಟದ ಕೆಲಸಗಾರರು ಅಲ್ಲಿ ಹತ್ತಿರದಲ್ಲಿ ಯಾರೂ ಸುಳಿದಾಡುವಂತೆಯೇ ಇರಲಿಲ್ಲ. ಕಟ್ಟಪ್ಪಣೆ, ನನಗೂ ಅದು ಅನ್ವಯ. ನಾನು ಚೂರು ಉತ್ಸಾಹದಲ್ಲಿ ಒಳಗಿನಿಂದಲೇ ಬಗ್ಗಿಬಗ್ಗಿ ನೋಡೋದು ಮಾಡ್ತಿದ್ದೆ. ಒಂದ್ಸಲ ಎಲ್ಲ ಮರೆತು, ಪೆದ್ದು ಪೆದ್ದಾಗಿ ಬಂತಾ? ಕೇಳಿದೆ. ನಿನ್ನ ತಲೆ ಎಂದರು. ಇನ್ನೂ ಬಂದಿಲ್ಲಂತ ಗೊತ್ತಾಯ್ತಲ್ಲ, ಮನೆ ಒಳಗಿನ ಕೆಲಸಕ್ಕೆ ಹೋದೆ.

ಬೆಳಿಗ್ಗೆ ಕಳೆಯುತ್ತಿದೆ. ಇವರು ತಿಂಡಿಗೂ ಬಂದಿಲ್ಲ. ಒಂದು ಸಲ ಹೀಗೆ ಕೂತರೆಂದರೆ ಕಾಲ, ಹೆಸರು, ಕುಲ, ಗೋತ್ರ ಎಲ್ಲ ಮರತಂತೆಯೇ ಇವರು. ಇದೊಂದು ಹಠಯೋಗವೇ ಸೈ. ಹಕ್ಕಿ ಫೊಟೋ ತೆಗೆಯೋವರೆಗೂ ಕಾಯೊದೇ ಸೈ. ಹಕ್ಕಿ ಬಂದಿರಬಹುದೇನೋ ಅಂದುಕೊಂಡೇ ನಾನು ಕೆಲಸ ಮಾಡಿಕೊಳ್ಳುತ್ತಿದ್ದೆ. ಹಕ್ಕಿ ಬಂದರೂ ಅದರ ಭಾವನೆಗಳ ಫೋಟೋ ತೆಗೆಯಕ್ಕೆ ಸಿಗಬೇಕಲ್ಲ. ಒಂದು ಮರದ ಕೊಂಬೆ ಮೇಲೆ ಕೂತಿರುವ ಬಣ್ಣ ಬಣ್ಣ ರೆಕ್ಕೆ ಪುಕ್ಕ ಕಾಣುವ ಹಾಗೆ ಚಿತ್ರ ತೆಗೆಯಬಹುದು. ಆದರೆ ಅದರ ಭಾವನೆಯನ್ನು ಸೆರೆ ಹಿಡಿಯುವುದು ಕಷ್ಟದ ಕೆಲಸ. ಅದಕ್ಕಾಗಿ ಕಾಯಬೇಕು. ಏಕಾಗ್ರತೆ ಬೇಕು. ತಾಳ್ಮೆ ಬೇಕು. ಮುಖ್ಯವಾಗಿ ಹಕ್ಕಿ ಬಗ್ಗೆ ತಿಳಿದಿರಬೇಕು. ಇದಕ್ಕಾಗಿ ಇವರು ಜೀವನ ಪೂರ್ತಿ ಮುಡಿಪಾಗಿಟ್ಟವರು.

ನನ್ನ ಅಡುಗೆ ಕೆಲಸ ಪೂರೈಸಿತು. ಒಗ್ಗರಣೆಗೆ ಕರಿಬೇವಿನ ಸೊಪ್ಪು ಬೇಕಿತ್ತು. ಎಲ್ಲ ಮರೆತು, ಮರದಿಂದ ಕಿತ್ತು ತರಲು ನೆಟ್ಟಗೆ ಹೋದೆ. ಮರಕ್ಕೆ ಕೈ ಹಾಕಿದೆ. `ಜ್ಞಾನವಿಲ್ಲದ ಹೆಂಗಸು. ನಿನಗೇನಾಗಿದೆಯೆ ಇವತ್ತು`. ಮರೆಯೊಳಗಿಂದ ಅಬ್ಬರಿಸಿದರು. ಬೆಚ್ಚಿಬಿದ್ದೆ ನಾನು. ಅಲ್ಲೆಲ್ಲೋ ಕೆಂಪು ಹಕ್ಕಿ ಸರಿದಾಡಿದಂತಾಯಿತು. ಪೆಚ್ಚಾದೆ. ನನ್ನಿಂದ ಇಂತಹ ಅಚಾತುರ್ಯವಾಯಿತೆ. ಅಲ್ಲೆ ನಿಂತೆ. ಮರೆಯೊಳಗಿಂದ ಹೊರಬಂದರು ಇವರು. ಬೆನ್ನು ನೆಟ್ಟಗೆ ಮಾಡಕಾಗ್ತಿಲ್ಲ ಇವರಿಗೆ. ಕಾಲೂ ಬಗ್ಗಿದೆ. ಒಂದು ವಾರ ಇದೇ ಸ್ಟೈಲ್ನಲ್ಲಿ ಇದ್ದರು ನೋವು ಅನುಭವಿಸುತ್ತ. ಸಂಕಟವಾಯಿತು ನನಗೆ. ಅಡ್ಡ ಬಂದೆನೆಲ್ಲ ಅಂದುಕೊಂಡೆ. ಹಕ್ಕಿ ಹಾರಿ ಹೋಯಿತೇ. ದುಃಖವಾಯಿತು.