”ಸಹಪಾಠಿಗಳು ಹೇಳಿಕೊಂಡ ಯಾವ ವೃತ್ತಿಯು ನಮ್ಮ ತಂದೆಯದಾಗಿರಲಿಲ್ಲ. ಈ ಕಡೆ ಬೇಸಾಯಗಾರ ಎನ್ನಲು ಇದ್ದ ಮುಕ್ಕಾಲು ಎಕರೆಗೆ ಅದು ಪೂರ್ಣ ಪ್ರಮಾಣದ್ದಾಗಿರಲಿಲ್ಲ. ಹಾಗಿದ್ದರೆ ನಮ್ಮ ತಂದೆಯ ವೃತ್ತಿ ಏನು? ಮಾಡಲು ಇಷ್ಟೆಲ್ಲ ವೃತ್ತಿಗಳಿವೆ ಎಂದು ಗೊತ್ತಾಗಿದ್ದೇ ಆ ದಿನದ ತರಗತಿಯಲ್ಲಿ. ಹಾಗಿದ್ದರೆ ಈ ಯಾವ ವೃತ್ತಿಯನ್ನು ಮಾಡದ ನಮ್ಮ ತಂದೆಯ ವೃತ್ತಿ ಏನಿತ್ತು? ಇಷ್ಟೆಲ್ಲ ವೃತ್ತಿಗಳಿದ್ದರು ಯಾಕೆ ಯಾವುದನ್ನು ಮಾಡಲಿಲ್ಲ ಎಂದು ಆಗ ಯೋಚಿಸಿದ್ದೆ.ವಿಧ್ಯಾಬ್ಯಾಸವಿಲ್ಲದ ಅವರಿಂದ ಆ ಎಲ್ಲ ವೃತ್ತಿಗಳನ್ನು ನಿರೀಕ್ಷಿಸುವುದು ತಪ್ಪಾಗಿತ್ತು”
ನಟಿ ಅಕ್ಷತಾ ಪಾಂಡವಪುರ ಬರೆದ ದಿನಚರಿಯ ಎರಡನೆಯ ಕಂತು.

 

ಆಗ ತಾನೇ ಪತ್ರಿಕೋದ್ಯಮದ ಪದವಿಗೆಂದು ಮೈಸೂರಿನಲ್ಲಿದ್ದೆ. ನಮ್ಮ ತಂದೆ ನಮ್ಮನ್ನಗಲಿ ಎರಡು ತಿಂಗಳಷ್ಟೇ ಆಗಿತ್ತು. ಆಗ ಹೆಚ್ಚು ಕಮ್ಮಿ ಒಂದು ತಿಂಗಳುಗಳ ಕಾಲ ಪರಿಚಯದ ತರಗತಿ ನಡೆಯುತ್ತಿತ್ತು, ಎಲ್ಲರು ಇಂಗ್ಲಿಷ್ ನಲ್ಲಿಯೇ ತಮ್ಮ ತಮ್ಮ ಪರಿಚಯ ಮಾಡಿಕೊಡುತ್ತಿದ್ದರು. ಆಗ ತಾನೆ ಪಾಂಡವಪುರದಲ್ಲಿ ವ್ಯಾಸಂಗ ಮುಗಿಸಿ ಹೋಗಿದ್ದ ನಾನು ಅಷ್ಟು ಇಂಗ್ಲಿಷ್ ಮಾತಾಡಲು ಹೇಗೆ ಸಾಧ್ಯ ಹೇಳಿ. ಆದ್ರೂ ದಭಾಯಿಸಿ ಮಾತಾಡುತ್ತಿದ್ದೆ. ಒಂದು ತರಗತಿಯಲ್ಲಿ ಮಾತ್ರ ನನಗೆ ಎಲ್ಲಿಲ್ಲದ ಅಳು; ಕಾರಣ ತಮ್ಮ ತಮ್ಮ ಪರಿಚಯದ ಜೊತೆ ಪೋಷಕರ ಪರಿಚಯವೂ ನಡೆದಿತ್ತು. ತಂದೆಯನ್ನು ಕಳೆದುಕೊಂಡು ಆಗ ತಾನೇ ಎರಡು ತಿಂಗಳಾಗಿದ್ದ ಕಾರಣ ಅಷ್ಟು ಅಳು ಬಂದಿರಬಹುದು ಅಂತ ನೀವು ಅಂದುಕೊಳ್ಳಬಹುದು. ಹೌದು ಆಗ ನಾನು ಕೂಡಾ ಹಾಗೆ ಅಂದುಕೊಂಡಿದ್ದೆ ಆದರೆ ತಂದೆಯ ಬಗೆಗೆ ಹೇಳಲಾಗದೆ  ನಾನು ನೊಂದಿದ್ದೆ… ತಂದೆಯ ಹೆಸರು, ವಯಸ್ಸು, ಊರು, ವ್ಯಾಸಂಗ, ವೃತ್ತಿ…. ಇತ್ಯಾದಿ ಇತ್ಯಾದಿಗಳ ನಡುವೆ ನನಗೆ ಕಾಡಿದ್ದು ಮಾತ್ರ ತಂದೆಯ ವೃತ್ತಿ.

ಸಹಪಾಠಿಗಳು ಹೇಳಿಕೊಂಡ ಯಾವ ವೃತ್ತಿಯು ನಮ್ಮ ತಂದೆಯದಾಗಿರಲಿಲ್ಲ. ಈ ಕಡೆ ಬೇಸಾಯಗಾರ ಎನ್ನಲು ಇದ್ದ ಮುಕ್ಕಾಲು ಎಕರೆಗೆ ಅದು ಪೂರ್ಣ ಪ್ರಮಾಣದ್ದಾಗಿರಲಿಲ್ಲ. ಹಾಗಿದ್ದರೆ ನಮ್ಮ ತಂದೆಯ ವೃತ್ತಿ ಏನು? ಮಾಡಲು ಇಷ್ಟೆಲ್ಲ ವೃತ್ತಿಗಳಿವೆ ಎಂದು ಗೊತ್ತಾಗಿದ್ದೇ ಆ ದಿನದ ತರಗತಿಯಲ್ಲಿ. ಹಾಗಿದ್ದರೆ ಈ ಯಾವ ವೃತ್ತಿಯನ್ನು ಮಾಡದ ನಮ್ಮ ತಂದೆಯ ವೃತ್ತಿ ಏನಿತ್ತು? ಇಷ್ಟೆಲ್ಲ ವೃತ್ತಿಗಳಿದ್ದರು ಯಾಕೆ ಯಾವುದನ್ನು ಮಾಡಲಿಲ್ಲ ಎಂದು ಆಗ ಯೋಚಿಸಿದ್ದೆ. ಆದರೂ ಆ ವೃತ್ತಿಗೆಲ್ಲ ಒಂದು ವಿದ್ಯಾಭ್ಯಾಸ ಬೇಡವೇ? ಹೌದು ವಿಧ್ಯಾಬ್ಯಾಸವಿಲ್ಲದ ಅವರಿಂದ ಆ ಎಲ್ಲ ವೃತ್ತಿಗಳನ್ನು ನಿರೀಕ್ಷಿಸುವುದು ತಪ್ಪಾಗಿತ್ತು. ಆದರೆ ಕಾಲ ಕ್ರಮೇಣ ನಾನು ಅವರ ಮಗಳಾಗಿ ಹುಟ್ಟಿದ್ದೇ ತಪ್ಪ ಅನ್ನೋ ಎಷ್ಟೋ ದ್ವಂದ್ವ ಪ್ರಶ್ನೆಗಳು ನನ್ನನ್ನು ಮುಂದೆ ಇನ್ನಷ್ಟು ಕಾಡುತ್ತಾ ಹೋದವು.

ನಮ್ಮ ತಂದೆಗೆ ಕ್ಯಾಲೆಂಡರ್ ಇರಲಿಲ್ಲ. ಹೀಗಾಗಿ ಅವರು ಸಮಯಕ್ಕನುಸಾರವಾಗಿ ಮಲಗಿದ್ದು ತಿಂದದ್ದು ಕೂಡ ನಾ ನೋಡಿಲ್ಲ. ನನಗು ಕ್ಯಾಲೆಂಡರ್ ನ ಅವಶ್ಯಕತೆ ಇಲ್ಲ. ನಾನೊಬ್ಬಳು ನಟಿ; ಏಳಲು ಅಥವಾ ಮಲಗೋಕೆ ಹೀಗೆ ಅಂತ ಸಿದ್ಧ ಸಮಯದ ರೂಢಿಯಿರೋಲ್ಲ. ಹಾಗೆ ಊಟ ಆಟ ವ್ಯಾಯಾಮ ಕೂಡ. ಈ ದಿನ ಇಲ್ಲಿ ಇದ್ರೆ ಮೊತ್ತೊಂದು ದಿನ ಮತ್ತೆಲ್ಲೋ ಇರ್ತೀನಿ. ಹಾಗಾಗಿ ನನಗೆ ಕ್ಯಾಲೆಂಡರ್ ಉಪಯೋಗಕ್ಕೆ ಬರಲ್ಲ ಬಿಡಿ. ಹಾಗಿದ್ರೆ ನಮ್ಮ ತಂದೆ ಏನು ನಟನೆ? ನನ್ನ ಹಾಗೆಯೇ ಇದ್ದರೆ? ನಾನು ಕ್ಯಾಲೆಂಡರ್ ಬಗ್ಗೆ ಮಾತನಾಡಲು? ಗೊತ್ತಿಲ್ಲ.

ಆದ್ರೆ ಹೌದು ನನ್ನ ತಂದೆ ಒಬ್ಬ ಕಲಾವಿದ ಆದರೆ ಬೆಳಕಿಗೆ ಬರಲಿಲ್ಲ. ಉತ್ತಮ ಮಾತುಗಾರ, ಹಾಸ್ಯಗಾರ; ಆದರೆ ಹೆಚ್ಚು ಮಂದಿ ಅವರ ಮಾತು ಕೇಳಲಿಲ್ಲ. ಅಷ್ಟೇ ಅಲ್ಲ ಅವರೊಬ್ಬ ಒಳ್ಳೆಯ ಆಟಗಾರ ಕೂಡ ಹೌದು. ಆದ್ರೆ ಪೈಪೋಟಿಗೆ ಯಾರು ಬರ್ತಾ ಇರ್ಲಿಲ್ಲ. ಅಪ್ಪ ಗುಣವಂತನಾಗಿದ್ದನಾದ್ರೂ ಬುದ್ದಿವಂತನಲ್ಲ. ಬೇಸಾಯದ ಕುಟುಂಬದಿಂದ ಬಂದಿದ್ದವನಾದರೂ ಅದರಲ್ಲೂ ಅವನಿಗೆ ಆಸಕ್ತಿ ಇರಲಿಲ್ಲ. ಬಡತನವಿದ್ದರೂ ಕಾಲಕ್ರಮೇಣ ದುಡಿಯುವ ಛಲವನ್ನೇ ಕಳೆದುಕೊಂಡ ಅಪ್ಪ ಅಣ್ಣಂದಿರಿಗೆ ಒಬ್ಬ ನಿಷ್ಠಾವಂತ ತಮ್ಮನಾಗಿದ್ದ. ನನ್ನಮ್ಮನಿಗೆ ಪ್ರೀತಿಯ ಗಂಡನಾಗದಿದ್ದರೂ ಮಕ್ಕಳಿಗೆ ಮಾತ್ರ ಪ್ರೀತಿಯ ಅಪ್ಪನಾಗಿದ್ದ. ಆದರೆ ಈಗ ಏನಾದ? ಏನೂ ಆಗಲೇ ಇಲ್ಲವಲ್ಲ? ಎಂಬುದೇ ನನ್ನ ಮತ್ತು ಮನೆಯವರ ಆರೋಪ.

ಆರೋಪ ಕೇಳಿಸಿಕೊಳ್ಳಲು ಇಂದು ಅಪ್ಪನೇ ಇಲ್ಲದಿರುವ ಹೊತ್ತಿನಲ್ಲೂ ಆರೋಪದ ಸುರಿಮಳೆ ಮಾತ್ರ ಸುರಿಯುತ್ತಲೇ ಇರುತ್ತದೆ. ಆಸ್ತಿ ಅಂತಸ್ತಿನ ವಿಷಯದಲ್ಲಿ ಅಮ್ಮ ಆರೋಪಗಳನ್ನು ಮಾಡುವಾಗ ಅಯ್ಯೋ ಅಪ್ಪ ಇಷ್ಟನ್ನಾದ್ರೂ ಯಾಕೆ ಉಳಿಸಿದೆ ಅಂತ ನಾವು ಆರೋಪ ಮಾಡ್ತೀವಿ. ಅಂದಹಾಗೆ ನನ್ನ ತಂದೆ ಆಸ್ತಿ ಅಂತ ಮಾಡಿದ್ದು ಕಡಿಮೆ. ನನ್ನ ಮಕ್ಕಳೇ ಆಸ್ತಿ ಅಂತ ಹೇಳುತ್ತಿದ್ದ ಒಬ್ಬ ಪಲಾಯನವಾದಿಯಾದ ಆತ ತಾತ ಮಾಡಿದ್ದ ಆಸ್ತಿಯನ್ನು ಕಳೆದಿದ್ದೆ ಹೆಚ್ಚು. ಅದೇ ಕಾರಣ ಈ ಎಲ್ಲ ಆರೋಪಗಳ ಮೂಲ. ಈಗಲೂ ನಾನು ಯಾರ ಮಗಳು ಅನ್ನುವ ವಿಷಯ ಬಂದಾಗ ಏಕ್ದಂ ತಂದೆಯ ಹೆಸರು ಹೇಳಿದರೆ ಯಾರಿಗೂ ಗೊತ್ತಾಗಲ್ಲ. ವೃತ್ತಿಯೊಂದಿಗೆ ತಾತನ ಹೆಸರು ಸೇರಿಸಿ ಹೇಳಿದರೆ ಮಾತ್ರ ನನ್ನ ಅಸ್ಮಿತೆ. ಅದು ಹೇಗೆಂದರೆ…

ಪ್ರಶ್ನೆ: ಯಾರ ಮಗಳವ್ವ ನೀನು?
ನನ್ನುತ್ತರ: ಮೊನ್ನಣ್ಣನ ಮಗ್ಳು
ಪ್ರಶ್ನೆ: ಯಾವ್ ಮೊನ್ನಣ್ಣ?
ನನ್ನುತ್ತರ: ಅದೇ ಸೀಮೆಣ್ಣೆ ಸಟ್ಟಪ್ಪೋರ…..
ಪ್ರಶ್ನೆ: ಓಹ್ ಹೂo ಕಣoತ್ತ ಹೇಳು
ನನ್ನುತ್ತರ: ಹೂo ಅದೇ ಹಾರೋಹಳ್ಳಿ ಸೀಮೆಣ್ಣೆ ಸಟ್ಟಪ್ಪೋರ ಮೊನ್ನಣ್ಣನ ಹಿರಿ ಮಗ್ಳು…

ನನ್ನ ತಂದೆ ಒಬ್ಬ ಕಲಾವಿದ ಆದರೆ ಬೆಳಕಿಗೆ ಬರಲಿಲ್ಲ. ಉತ್ತಮ ಮಾತುಗಾರ, ಹಾಸ್ಯಗಾರ; ಆದರೆ ಹೆಚ್ಚು ಮಂದಿ ಅವರ ಮಾತು ಕೇಳಲಿಲ್ಲ. ಅಷ್ಟೇ ಅಲ್ಲ ಅವರೊಬ್ಬ ಒಳ್ಳೆಯ ಆಟಗಾರ ಕೂಡ ಹೌದು. ಆದ್ರೆ ಪೈಪೋಟಿಗೆ ಯಾರು ಬರ್ತಾ ಇರ್ಲಿಲ್ಲ. ಅಪ್ಪ ಗುಣವಂತನಾಗಿದ್ದನಾದ್ರೂ ಬುದ್ದಿವಂತನಲ್ಲ. ಬೇಸಾಯದ ಕುಟುಂಬದಿಂದ ಬಂದಿದ್ದವನಾದರೂ ಅದರಲ್ಲೂ ಅವನಿಗೆ ಆಸಕ್ತಿ ಇರಲಿಲ್ಲ.

ಊರಲ್ಲಿ ತಾತನ ಹೆಸರು ಹೇಳಿ ನನ್ನ ಪರಿಚಯ ಮಾಡಿಕೊಳ್ಳಬೇಕಲ್ಲ ಅಂತ ಆಗೆಲ್ಲ ಬೇಸರ ಆಗ್ತಾ ಇರಲಿಲ್ಲ. ಬದಲಿಗೆ ಹೆಮ್ಮೆ ಅನ್ನಿಸುತ್ತಾ ಇತ್ತು. ಆದರೆ ಆಗ ನನಗೇನು ಗೊತ್ತಿತ್ತು ಹೇಳಿ? ಮುಂದೆ ಊರೂರು ಸುತ್ತುತ್ತೀನಿ, ರಾಜ್ಯದಿಂದ ರಾಜ್ಯ, ದೇಶ ಅಂತೆಲ್ಲ ಹೋಗ್ತೀನಿ ಅಂತ. ಸದ್ಯ ನನ್ನ ವಿವರ ವಿಳಾಸಕ್ಕೆ ಇಷ್ಟು ಸಾಕು ಅಂತ ಇದ್ದೆ. ಹಾಗಾಗಿ “ನಾನು ಹಾರೋಹಳ್ಳಿ ಸೀಮೆಣ್ಣೆ ಸಟ್ಟಪ್ಪೋರ ಮೊನ್ನಣ್ಣನ ಹಿರಿ ಮಗ್ಳು” ಅನ್ನೋದು ಒಂಥರಾ ಬಾಯಿ ಪಾಠ ಆಗ್ಬಿಟ್ಟಿತು. ನಾನು ಆಗ್ಲೇ ಹೇಳಿದೆನಲ್ಲ. ನನ್ನ ತಂದೆ ಮಕ್ಕಳನ್ನೇ ಆಸ್ತಿ ಅಂದುಕೊಂಡಿದ್ದರು ಅಂತ. ಅದು ಕೇವಲ ಆ ಕ್ಷಣದ ವ್ಯಕ್ತ ಅಭಿಪ್ರಾಯವಾಗಿರಲಿಲ್ಲ. ನನ್ನ ಕ್ರೀಡೆ ವ್ಯಾಸಂಗಕ್ಕೆ ಮಾದರಿಯಾಗಿದ್ದರು. ನನ್ನ ದೈನಂದಿನ ಕ್ಯಾಲೆಂಡರನ್ನು ಆಗ ಅವರೇ ತೀರ್ಮಾನಿಸುತ್ತಿದ್ದರೆ ಹೆಚ್ಚುಕಮ್ಮಿ ಅದನ್ನು ಅವರೂ ಅನುಸರಿಸುತ್ತಿದ್ದರು. ನಾನು ಎಷ್ಟೊತ್ತಿಗೆ ಏಳಬೇಕು? ಏನು ಮತ್ತು ಎಷ್ಟು ತಿನ್ನಬೇಕು? ಅಂತೆಲ್ಲ ಅವರೇ ತೀರ್ಮಾನಿಸುತ್ತಿದ್ದರು; ಅದಕ್ಕೆ ಕಾರಣ ಕ್ರೀಡೆ.

ನನ್ನನ್ನು ಒಬ್ಬ ಕ್ರೀಡಾಪಟುವೆಂಬ ಪಟ್ಟದ ಮೂಲಕ ಆಸ್ತಿಯನ್ನಾಗಿ ಮಾಡಬೇಕೆಂಬುದು ನನ್ನ ತಂದೆಯ ನಿಸ್ವಾರ್ಥ ಮನೋಭಾವವಾಗಿತ್ತು. ಇದು ಕಾಲ ಕ್ರಮೇಣ ನನ್ನ ಆಟೋಟಗಳನ್ನು ಮೆಚ್ಚಿದವರು ನನ್ನ ಹೆಸರಿನ ಜೊತೆ ನನ್ನ ತಂದೆಯನ್ನು ಗುರುತಿಸಲು ಶುರು ಮಾಡಿದರು. ಒಂದು ಕಡೆ ತಾತನ ಹೆಸರಿನ ಜೊತೆಯಲ್ಲಾದರೆ ಮತ್ತೊಂದೆಡೆ ನನ್ನ ಹೆಸರಿನ ಜೊತೆ. ಆದ್ರೂ ಇದು ನನ್ನ ತಂದೆಗೆ ಬೇಸರದ ಸಂಗತಿಯಾಗದೆ ಹೆಮ್ಮೆಯದಾಗಿತ್ತು. ಆದ್ರೆ ನನ್ನ ತಂದೆಗೆ ಅಸ್ಮಿತೆ ಯಾವುದು? ಏನೇ ಇರಲಿ ಈಗ ಈ ಎಲ್ಲ ವಿಷಯಗಳು ಮತ್ತೆ ಮತ್ತೆ ನೆನಪಿಗೆ ಬಂದು ಬರೆಯಲು ಕಾರಣವಾಗಿದ್ದು ಮಾತ್ರ ಬಹಳಷ್ಟು ಘಟನೆಗಳು. ಇಂದಿಗೂ ಎಲ್ಲರ ಮನಸ್ಸಿನ್ನಲ್ಲಿ ಒಂದು ಕ್ಷಣವಾದರು ಬಂದು ಹೋಗುವ ಭಾವನೆ. “ಛೇ ನಾನು ಅವರ ಮಗಳಾಗಿದ್ದಿದ್ರೆ. ಛೆ ನನ್ನ ತಂದೆ ಅದಾಗಿದ್ದಿದ್ದರೆ” ಅನ್ನೋ ಯೋಚನೆ. ಇಂತಹ ಯೋಚನೆಗಳಿಗೆ ಕಾರಣಗಳನ್ನು ಒಂದಷ್ಟು ಅನುಭವಗಳ ಜೊತೆ ವಿವರಿಸುತ್ತೀನಿ ಕೇಳಿ.

ಸುತ್ತಲಿನ ಜನ ‘ನೋಡ ನೋಡುತ್ತಲೆ ಎಷ್ಟು ಬೇಗ ಬೆಳೆದುಬಿಟ್ಟಳು’ ಅಂತ ಹೇಳುವಾಗೆಲ್ಲ, ಈ ಹಿಂದೆ ಹೇಗಿದ್ದೆ? ಈಗ ಹೇಗಾಗಿದ್ದೀನಿ? ಅಂತ ಮತ್ತೆಮತ್ತೆ ನೆನಪುಗಳ ಲೋಕದಲ್ಲಿ ಹಿಂದಕ್ಕೆ ತೇಲಿ ಹೋಗಿ ನನ್ನನ್ನು ನೋಡಿಕೊಂಡು “ಈ ಹೊತ್ತಿಗೆ ಎಷ್ಟೆಲ್ಲ ಬದಲಾಗಿದ್ದೀನಲ್ಲ?” ಅಂತ ನನಗೇ ಅನ್ನಿಸುತ್ತಿತ್ತು. ಆಗ ಹೇಗಿದ್ದೆ ನಾನು ಅಂತ ಯೋಚಿಸುತ್ತಿದ್ದಂತೆಯೇ, ಯೋಚನೆಯ ಜೊತೆಗೇ ಅಪ್ಪನೂ ನನ್ನ ಕಣ್ಣ ಮುಂದೆ ಹಾದು ಹೋಗುವಂತಾಗುತ್ತಿತ್ತು. ಒಳ್ಳೆಯದೋ ಅಥವಾ ಕೆಟ್ಟದ್ದೋ; ಮಕ್ಕಳು ಎರಡರಲ್ಲಿ ಯಾವ ಹಾದಿಯಲ್ಲಿದ್ದರೂ ಅದಕ್ಕೆ ಪೋಷಕರೇ ಕಾರಣವೆಂಬ ಮಾತುಗಳನ್ನ ಕೇಳಿದ್ದೇನೆ. ಆದ್ರೆ ಅದು ಹೇಗೆ ಸಾಧ್ಯ ಅಂತ ನನ್ನ ಸುತ್ತಲಿನ ಒಂದಷ್ಟು ಜನರ ಉದಾಹರಣೆಯನ್ನಿಟ್ಟುಕೊಂಡು ವಾದಕ್ಕೆ ಇಳಿದುಬಿಡುತ್ತಿದ್ದೆ. ನನ್ನ ವಾದದ ಜೊತೆಗೆ ನನ್ನದೇ ಆದ ಮತ್ತೊಂದು ವಾದ ಡಿಕ್ಕಿ ಹೊಡೆದು ಹೌದು ಎಂದು ಒಪ್ಪಿಸಿಬಿಡುತ್ತಿತ್ತು. ಅದು ನಿಜ ಅಂತಲೂ ಕಾಲಕ್ರಮೇಣ ತುಳಿಯುತ್ತಾ ಹೋದಂತೆ ನೆನಪು ಇಂದು ನಮ್ಮ ಜೊತೆಯಲ್ಲಿ ಇಲ್ಲದದ್ದನ್ನು ಇರದವರನ್ನು ಜೊತೆ ಜೊತೆಯಲ್ಲಿಯೇ ಪಯಣಿಸುವಂತೆ ಮಾಡಿಬಿಡುತ್ತಿತ್ತ. ಏನೇ ಆಗಲಿ ಈಗ ನನಗೆ ಯಾರ ಮಗಳವ್ವ ನೀನು? ನಿಮ್ಮಪ್ಪ ಏನು ಮಾಡರು? ಅಂತ ಕೇಳಿದಾಗ. ಅಪ್ಪ ಈಗಿಲ್ಲ ಅಂತ ನಾನು ಭಾವುಕಳಾದ್ರೆ ಅವರ ಮುಂದಿನ ಭಾವ ಅಯ್ಯೋ ಅನ್ನುತ್ತಲೇ ನನ್ನನ್ನು ತಿರಸ್ಕರಿಸಿಬಿಡುತ್ತಿತ್ತು.

ನನ್ನನ್ನು ಒಬ್ಬ ಕ್ರೀಡಾಪಟುವೆಂಬ ಪಟ್ಟದ ಮೂಲಕ ಆಸ್ತಿಯನ್ನಾಗಿ ಮಾಡಬೇಕೆಂಬುದು ನನ್ನ ತಂದೆಯ ನಿಸ್ವಾರ್ಥ ಮನೋಭಾವವಾಗಿತ್ತು. ಇದು ಕಾಲ ಕ್ರಮೇಣ ನನ್ನ ಆಟೋಟಗಳನ್ನು ಮೆಚ್ಚಿದವರು ನನ್ನ ಹೆಸರಿನ ಜೊತೆ ನನ್ನ ತಂದೆಯನ್ನು ಗುರುತಿಸಲು ಶುರು ಮಾಡಿದರು. ಒಂದು ಕಡೆ ತಾತನ ಹೆಸರಿನ ಜೊತೆಯಲ್ಲಾದರೆ ಮತ್ತೊಂದೆಡೆ ನನ್ನ ಹೆಸರಿನ ಜೊತೆ. ಆದ್ರೂ ಇದು ನನ್ನ ತಂದೆಗೆ ಬೇಸರದ ಸಂಗತಿಯಾಗದೆ ಹೆಮ್ಮೆಯದಾಗಿತ್ತು. ಆದ್ರೆ ನನ್ನ ತಂದೆಗೆ ಅಸ್ಮಿತೆ ಯಾವುದು?

ಜೀವನದ ಪರದಾಟದಲ್ಲಿ ನಮ್ಮ ಪ್ರತಿಭೆಯ ಜೊತೆ ಜೊತೆಯಲ್ಲಿ ಅವಶ್ಯಕತೆ ಇಲ್ಲದ್ದಿದ್ದರು ಒಂದಿಷ್ಟು ವೈಯಕ್ತಿಕ ಮಾಹಿತಿ ಕೂಡ ಬೇಕಾಗಿರುತ್ತೆ. ಅದರಲ್ಲಿ ನಾವು ಯಾರ ಮಕ್ಕಳು ಅನ್ನುವುದೂ ಕೂಡ… “ಅಪ್ಪ ಹಾಕಿದ ಆಲದ ಮರ ಅಂತ ನೇಣು ಹಾಕಿಕೊಳ್ಳೋಕೆ ಆಗುತ್ತಾ” ಅನ್ನೋ ಮಾತು ನನಗೆ ಆಗಾಗ ನಗು ತರಿಸುತ್ತಿತ್ತು. ಉದಾಹರಣೆಗೆ ನನ್ನ ಎಷ್ಟೋ ಜನ ಸ್ನೇಹಿತರು, ಸಹಪಾಠಿಗಳು.

ಅಪ್ಪ ಡಾಕ್ಟರ್ ಆದ್ರೆ ಮಕ್ಕಳು ಕೂಡ, ಅಪ್ಪ ನಟನಾದರೆ ಅವರ ಮಕ್ಕಳು ಕೂಡ ನಟರು, ಹೀಗೆ ಒಂದೇ ಎರಡೇ; ಆ ರೀತಿಯಲ್ಲಿ ಮೇಲೆ ಬಂದವರ ಬಗ್ಗೆ ಅಸಡ್ಡೆ ಜೊತೆಗೆ ಅವರ ಜೊತೆ ಅಷ್ಟು ಬೇಗ ಬೆರಿಯುವುದು ನನ್ನಿಂದಾಗುವುದಿಲ್ಲ. ಇದು ನನ್ನದೇ ಸಮಸ್ಯೆ. ನನ್ನಪ್ಪನೂ ಒಳ್ಳೆಯ ಕೆಲಸದಲ್ಲಿದ್ದಿದ್ದರೆ ನನ್ನ ಭವಿಷತ್ತಿನ ಹಾದಿಯೂ ಸುಲಭದ್ದಾಗಿರುತ್ತಿತ್ತಲ್ಲ ಎನ್ನುವ ಹತಾಶ ಭಾವ ಅಷ್ಟೇ. ಈ ಎಲ್ಲ ಯೋಚನೆಗಳು ಆಗಾಗ ಬಂದು ಹೋಗುತ್ತಲೇ ಇರುತ್ತವೆ. ತಂದೆಯ ಹೆಸರಿನಲ್ಲಿ ತಂದೆಯ ನಂತರ ಮೇಲೆ ಬಂದವರು ಮೈಕ್ ಮುಂದೆ ಚೆನ್ನಾಗಿ ಮಾತನಾಡುತ್ತಿದ್ದ ನನ್ನನ್ನು ಮುಂದಿನ ಕಾರ್ಯಕ್ರಮಗಳಿಗೆ ನನ್ನನ್ನು ಮತ್ತೆ ಕರೆಯಲೇ ಇಲ್ಲ. ಅಪ್ಪನ ಬೆಂಬಲದಿಂದ ವೇದಿಕೆ ಏರಿದವರು, ವೇದಿಕೆಯ ಮೇಲೆ ನಾನೇ ಕಾಣ್ತಿನಿ ಅನ್ನೋ ಮಾತು ಕೇಳಿ ವೇದಿಕೆಯ ಮೇಲೆಯೇ ನನ್ನ ಮನಸಿಗೆ ನೋವಾಗುವಂತೆ ಮಾಡುತ್ತಿದ್ದರು. ಹಲವು ಶ್ರೀಮಂತ ಜನರು, ಶ್ರೀಮಂತ ಸ್ನೇಹಿತರೊಂದಿಗಿನ ನನ್ನ ಸಹವಾಸವನ್ನು ಬಿಡುವಂತೆ ಮಾಡಿದರು. ತನ್ನ ತಂದೆಯ ಪ್ರತಿಭೆಯನ್ನೇ ಬಂಡವಾಳವಾಗಿಟ್ಟುಕೊಂಡವರು ಪ್ರತಿಭೆಯನ್ನೇ ಸುಳ್ಳು ಎಂದು ಹೇಳ ಹೊರಟದ್ದಲ್ಲದೇ, ನನಗೆ ಸಂದ ಗೌರವ ಪುರಸ್ಕಾರಗಳನ್ನು ಅನಧಿಕೃತ ಎಂದೆಲ್ಲ ಮಾತಾಡಿಕೊಂಡರು. ಹೀಗೆ ಪಟ್ಟಿ ಇನ್ನಿಲ್ಲದಂತೆ ಬೆಳಿಯುತ್ತದೆ ಹೇಳುತ್ತ ಹೋದರೆ. ನನ್ನ ತಂದೆ ಇಲ್ಲ ಅನ್ನುವುದಕ್ಕಿಂತ ಹೆಚ್ಚಾಗಿ, ನನ್ನ ತಂದೆ ಏನು ಸಾಧಿಸಲೇ ಇಲ್ಲವಲ್ಲ ಅನ್ನೋ ಯೋಚನೆ ಹೋದಲ್ಲಿ ಬಂದಲ್ಲಿ ಕಾಡುವಂತೆ ಮಾಡಿದ್ದು ಈ ಎಲ್ಲ ಘಟನೆಗಳು.

ಅಪ್ಪ ಡಾಕ್ಟರ್ ಆದ್ರೆ ಮಕ್ಕಳು ಕೂಡ, ಅಪ್ಪ ನಟನಾದರೆ ಅವರ ಮಕ್ಕಳು ಕೂಡ ನಟರು, ಹೀಗೆ ಒಂದೇ ಎರಡೇ; ಆ ರೀತಿಯಲ್ಲಿ ಮೇಲೆ ಬಂದವರ ಬಗ್ಗೆ ಅಸಡ್ಡೆ ಜೊತೆಗೆ ಅವರ ಜೊತೆ ಅಷ್ಟು ಬೇಗ ಬೆರಿಯುವುದು ನನ್ನಿಂದಾಗುವುದಿಲ್ಲ. ಇದು ನನ್ನದೇ ಸಮಸ್ಯೆ. ನನ್ನಪ್ಪನೂ ಒಳ್ಳೆಯ ಕೆಲಸದಲ್ಲಿದ್ದಿದ್ದರೆ ನನ್ನ ಭವಿಷತ್ತಿನ ಹಾದಿಯೂ ಸುಲಭದ್ದಾಗಿರುತ್ತಿತ್ತಲ್ಲ ಎನ್ನುವ ಹತಾಶ ಭಾವ ಅಷ್ಟೇ.

ಈ ಒಂದೇ ಕಾರಣಕ್ಕೆ ಆದ ಅವಮಾನಗಳ ಜೊತೆ ಜೊತೆಯಲ್ಲಿಯೆ ಅಧಿಕರು ತಂದೆಯ ಹೆಸರಿನಲ್ಲಿ ಸಂಪಾದಿಸಿರುವ, ಸಂಪಾದಿಸಲಿಚ್ಚಿಸಿರುವ ಗೌರವ, ಅವಕಾಶ, ಅಧಿಕಾರ, ಪುರಸ್ಕಾರ, ಜನಪ್ರಿಯತೆ, ಆಸ್ತಿ-ಅಂತಸ್ತುಗಳನ್ನು ಕಂಡರೆ ಅನುಕಂಪದ ನಗೆ ನನ್ನ ಮುಖದ ಮೇಲೆ ತನ್ನಿಂದ ತಾನಾಗೇ ಮೂಡುತ್ತದೆ. ನನ್ನ ತಂದೆಯು ಅವರುಗಳ ತಂದೆಯ ಜಾಗದಲ್ಲಿದ್ದಿದ್ದರೆ ಬಹುಷಃ ನಾನು ಅವರಗಳ ಹಾಗೆ ಇರುತ್ತಿದ್ದೆನೋ ಏನೋ ಎಂದುಕೊಳ್ಳುತ್ತಾ ಸುಮ್ಮನಾಗಿಬಿಡುತ್ತೇನೆ. ಈಗಲೂ ನನ್ನ ತಂದೆಯ ಕೆಲವೊಂದು ಗುಣಗಳು ನನ್ನಲ್ಲಿವೆ ಎಂದು ನನ್ನ ತಾಯಿ ಸೇರಿದಂತೆ ನನ್ನ ತಂದೆಯನ್ನು ಕಂಡವರು ಅವಾಗವಾಗ “ಸೇಮ್ ಅಪ್ಪನ ಬುದ್ದಿನೇ” ಅಂತ ಹೇಳುತ್ತಿರುತ್ತಾರೆ. ಮನೆಯಲ್ಲಿ ಹೆಚ್ಚು ಇರದಿರುವುದು, ಊರೂರು ಸುತ್ತುವುದು, ನಗಿಸುವುದು, ದುಡ್ಡು ಕಳೆಯುವುದು, ಮನೆಗೆ ಮಾರಿ ಊರಿಗೆ ಉಪಕಾರಿ ಅನ್ನೋ ವಿಷಯಗಳ ಕುರಿತು ಬೈಸಿಕೊಳ್ಳುವಾಗೆಲ್ಲ ಒಂದು ಕಡೆ ಹೆಮ್ಮೆ. ಜೊತೆಗೆ ಇದು ನನ್ನ ಗುಣವಲ್ಲ ನೀವು ಹೇಳಿದ ಹಾಗೆ ಅಪ್ಪನದ್ದು ಎಂದು ಬಚಾವಾಗುತ್ತೇನೆ.

‘ಆದ್ರೂ ನೀನು ಯಾರ ಮಗಳು?’ ಅನ್ನೋ ಸಾಮಾನ್ಯ ಪ್ರಶ್ನೆ ಹಿಂದೆ ಎಷ್ಟೆಷ್ಟೋ ನಡೆದುಹೋದ ಮತ್ತು ಈಗಲೂ ನಡೆಯುತ್ತಿರುವ ಎಷ್ಟೋ ಹೇಳಲಾರದ ವಿಷಯಗಳಿರುತ್ತದೆ ಅಲ್ವಾ?? ಆದ್ರೂ ನನಗೆ ಹೇಳಬೇಕು ಅನ್ನಿಸಿದ್ದು ನನ್ನ ಬಾಲ್ಯದ ಆಪ್ತ ಗೆಳತಿ ನನ್ನ ಪರಿಸ್ಥಿತಿ ಕಂಡಾಗಲೆಲ್ಲ ಹೇಳೋ ಆ ಒಂದು ಮಾತು “ಆದ್ರೂ ನಿನಗಿರುವ ಟ್ಯಾಲೆಂಟ್ ಗೆ ನಿನ್ನ ಹಿನ್ನೆಲೆ ಚನ್ನಾಗಿದ್ದಿದ್ರೆ ನೀನು ಎಲ್ಲೋ ಇರ್ತಿದ್ದೆ” ಅನ್ನೋ ಅವಳ ಮಾತು ನನ್ನೊಳಗೆ ಸದಾ ಮಾರ್ಧನಿಸುತ್ತಲೇ ಇರುತ್ತದೆ.

(ಮುಂದುವರಿಯುವುದು)
ಅಕ್ಷತಾ ದಿನಚರಿಯ ಮೊದಲ ಕಂತಿಗೆ ಇಲ್ಲಿ ಕ್ಲಿಕ್ ಮಾಡಿ