ಕೊನೆಗೂ ಯಾಕೆ ಈ ನಾಟಕವನ್ನು ಮಾಡಬೇಕು, ಯಾಕೆ ಈ ನಾಟಕವನ್ನು ನೋಡಬೇಕು ಎನ್ನುವುದು ಪ್ರತಿಯೊಬ್ಬ ಕಲಾವಿದನ, ಪ್ರೇಕ್ಷಕನ ಮೂಲಭೂತ ಪ್ರಶ್ನೆ. ಇಲ್ಲಿ ಇದು ಚಿತ್ರಾಂಗದಾ ಮತ್ತು ಅರ್ಜುನನ ಕತೆಯಾದರೂ ಅದರ ನೆಪದಲ್ಲಿ ನಡೆಯುವುದು ಗಂಡು ಹೆಣ್ಣು ಮತ್ತು ಅವರಿಬ್ಬರ ಸಂಬಂಧದ ಸಂಕೀರ್ಣತೆಯ ಬಗ್ಗೆ. ಹೆಣ್ಣಾದರೂ ಗಂಡಿನಂತೆ ವನದಲ್ಲಿರುವ ಚಿತ್ರಾಂಗದೆ ಅರ್ಜುನನನ್ನು ನೋಡಿದ್ದೆ ಮತ್ತೆ ‘ಹೆಣ್ತನ’ ಕ್ಕೆ ಹಾತೊರೆಯುತ್ತಾಳೆ. ಅವಳೊಳಗಿನ ಹೆಣ್ಣನ್ನು ನೋಡಿದ ಅರ್ಜುನ ತನ್ನ ಬ್ರಹ್ಮಚರ್ಯದ ನಿಯಮವನ್ನು ಮುರಿಯುತ್ತಾನೆ. ಗಂಡಿನೊಳಗಣ ಹೆಣ್ಣು ಹೆಣ್ಣಿನೊಳಗಣ ಗಂಡಿನ ಪಲ್ಲಟ ನಾಟಕದುದ್ದಕ್ಕೂ ಇದೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿಯಲ್ಲಿ ‘ಚಿತ್ರಾಂಗದಾ’ ನಾಟಕದ ಕುರಿತ ಬರಹ
‘ಚಿತ್ರಾಂಗದಾ’ ಕುವೆಂಪು ಅವರ ಖಂಡಕಾವ್ಯ. ಮಹಾಭಾರತದ ಲ್ಲಿ ಅರ್ಜುನನು ಯತಿಯ ವೇಷದಲ್ಲಿ ದೇಶವನ್ನು ಸಂಚರಿಸುವಾಗ ಮಣಿಪುರದ ಚಿತ್ರಾಂಗದೆಯನ್ನು ಸಂಧಿಸುತ್ತಾನೆ. ಅವರ ಮಧ್ಯೆ ಪ್ರೇಮ ಮೊಳೆಯುತ್ತದೆ. ಅವರಿಬ್ಬರ ಪ್ರೇಮದ ಸಂಕೇತವಾಗಿ ಚಿತ್ರಾಂಗದೆಯಿಂದ ಉಂಗುರವನ್ನು ಪಡೆದ ಅರ್ಜುನ ಆರು ತಿಂಗಳು ಕಳೆದು ಬರುವುದಾಗಿ ಹೇಳಿ ಹೋಗುತ್ತಾನೆ. ಚಿತ್ರಾಂಗದೆ ಗರ್ಭಿಣಿಯಾಗಿ ಏಕಾಂಗಿಯಾಗಿ ಮಗ ಬಬ್ರುವಾಹನನನ್ನು ಬೆಳೆಸುತ್ತಾಳೆ. ನಂತರ ರಣರಂಗದಲ್ಲಿ ಅರ್ಜುನ ಬಬ್ರುವಾಹನ ಭೇಟಿಯಾಗುತ್ತಾರೆ. ಇದು ಎಲ್ಲರಿಗೂ ತಿಳಿದಿರುವ ಕತೆ. ರಬೀಂದ್ರನಾಥ ಟ್ಯಾಗೋರರ ಕಾವ್ಯ ‘ಚಿತ್ರಾʼ ಇದಕ್ಕೆ ಪ್ರೇರಣೆಯಾಗಿದೆ ಮತ್ತು ಕುವೆಂಪು ರವರು ‘ರಾಮಾಯಣ ದರ್ಶನಂʼ ಕಾವ್ಯ ಬರೆಯುವುದಕ್ಕೆ ಪೂರ್ವತಯಾರಿಯಾಗಿ ‘ಚಿತ್ರಾಂಗದಾʼ ಕಾವ್ಯವನ್ನು ಬರೆದರು ಎಂದು ಹೇಳಲಾಗುತ್ತದೆ.

(ಡಾ. ಶ್ವೇತಾ ಮಡಪ್ಪಾಡಿ)
ಚಿತ್ರಾಂಗದೆ ಕಾವ್ಯವನ್ನು ದಿಗ್ವಿಜಯ ಹೆಗ್ಗೋಡು ಅವರ ನಿರ್ದೇಶನದಲ್ಲಿ ಧ್ವನಿ ಫ಼ೌಂಡೇಶನ್‌ನ ಡಾ. ಶ್ವೇತಾ ಮಡಪ್ಪಾಡಿಯವರು ಸಮರ್ಥವಾಗಿ ರಂಗಕ್ಕೆ ತಂದಿದ್ದಾರೆ. ಇದು ಏಕ ವ್ಯಕ್ತಿ ರಂಗಪ್ರಸ್ತುತಿ. ಹಲವು ಪಾತ್ರಗಳನ್ನು ಒಬ್ಬರೇ ನಿರ್ವಹಿಸಿ, ರಂಗದ ಮೇಲೆಯೇ ಪ್ರೇಕ್ಷಕರ ಎದುರಿನಲ್ಲೇ ಬೇರೆ ಬೇರೆ ಪಾತ್ರವಾಗುವುದು ಬಹಳ ಸವಾಲಿನ ಕೆಲಸ. ಆದರೆ ಅದನ್ನು ಸಾಧಿಸಿ ತೋರಿಸಿದ್ದಾರೆ. ಕುವೆಂಪು, ಷೇಕ್ಸ್‌ಪಿಯರ್‌ರಂತಹ ಕವಿಗಳ ನಾಟಕವನ್ನೋ ಕಾವ್ಯವನ್ನೋ ಆಯ್ಕೆ ಮಾಡಿಕೊಂಡಾಗ ಅದು ಒಂದರ್ಥದಲ್ಲಿ ನಟನಿಗೆ ಸುಲಭ. ಕಾವ್ಯದ ಲಯ ಹಿಡಿದು ಅದನ್ನು ಸರಿಯಾದ ಉಚ್ಚಾರಣೆ ಮತ್ತು ನಿಲುಗಡೆಯೊಂದಿಗೆ ಹೇಳಿದರೂ ಆ ಭಾವ ಪ್ರೇಕ್ಷಕರನ್ನು ತಟ್ಟುತ್ತದೆ. ಆದರೆ ನಟನ ಕೆಲಸ ಕಾವ್ಯವನ್ನು ಮಾತ್ರ ತಲುಪಿಸುವುದಲ್ಲವಾದ್ದರಿಂದ ಅದರ ಸಾಧ್ಯತೆಯನ್ನು ನಟಿಯಾಗಿ ಹಿಗ್ಗಿಸಿಕೊಳ್ಳುವ ಎಲ್ಲಾ ದಾರಿಗಳೂ ಇವೆ. ಗಂಡು ಹೆಣ್ಣಿನ ಸಂಕೀರ್ಣ ಸಂಬಂಧ, ಯತಿ ಅರ್ಜುನ, ಗಂಡುಡುಗೆಯ ಚಿತ್ರಾಂಗದೆ ಮತ್ತೆ ಹೆಣ್ಣಿನಂತೆ ಅಲಂಕರಿಸಿಕೊಂಡು ಬರುವಾಗಿನ ಸ್ಥಳಗಳಲ್ಲಿ ನಟನೆಗೆ ಬಹಳ ಅವಕಾಶವಿತ್ತು. ಮುಂದಿನ ಪ್ರಯೋಗಗಳಲ್ಲಿ ಇದನ್ನು ಕಾಣಬಹುದೇನೋ!
ಶೈಲಿ
ಇದನ್ನು ಕುವೆಂಪು ಕತೆ, ಕಾದಂಬರಿಯಾಗಿ ಮಾಡದೇ ಖಂಡಕಾವ್ಯವಾಗಿ ಬರೆದಿದ್ದಾರೆ. ಅದನ್ನು ರಂಗಕ್ಕೆ ತರುವಾಗ ಸಿದ್ಧ ಮಾದರಿಯ ಶೈಲಿಗೆ ಅಳವಡಿಸಲು ಸಾಧ್ಯವಿಲ್ಲ. ಅದಕ್ಕೆಂದೇ ಹೊಸ ವಿನ್ಯಾಸ ರೂಪಿಸಿಕೊಳ್ಳಬೇಕಾಗುತ್ತದೆ. ಹೀಗೆ ಕಾವ್ಯಕ್ಕೆ ಬೇಕಾದ ಹೊಸ ರಂಗಭಾಷೆಯನ್ನೇ ದಿಗ್ವಿಜಯ ಹೆಗ್ಗೋಡು ಅವರು ಈ ಪ್ರಯೋಗದ ಅನ್ವೇಷಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಈ ಪ್ರಯೋಗಕ್ಕೆ ‘ಭಾವಾಭಿನಯʼ ಎಂದು ಕರೆದಿದ್ದಾರೆ. ನಾಟಕ, ಕಥಾ ನಿರೂಪಣೆ, ವಾಚನ, ಪಠಣ, ಹಾಡು, ನೃತ್ಯ, ಸಮರಕಲೆ ಎಲ್ಲವೂ ಮಿಳಿತಗೊಂಡ ಹೊಸ ಮಾದರಿಯನ್ನೇ ಪ್ರೆಕ್ಷಕರಿಗೆ ಕಟ್ಟಿಕೊಟ್ಟಿದ್ದಾರೆ. ಆದರೆ ಅದು ಎಲ್ಲೂ ಕೇವಲ ಶುದ್ಧ ಶಾಸ್ತ್ರೀಯ ನೃತ್ಯ, ಹಲವು ರಂಗಭೂಮಿ ಪ್ರಕಾರಗಳನ್ನು ಈ ಪ್ರಯೋಗದಲ್ಲಿ ಬಳಸಿಕೊಂಡಿದ್ದರೂ ಎಲ್ಲಿಯೂ ಆ ಪ್ರಕಾರವನ್ನು ಯಥಾವತ್ ರಂಗಕ್ಕೆ ತರದೆ, ಎಲ್ಲಾ ಪ್ರಕಾರಗಳನ್ನು ಈ ಪ್ರಯೋಗದ ವಿನ್ಯಾಸಕ್ಕೆ ತಕ್ಕಂತೆ ಬಾಗಿಸಿಕೊಂಡಿದ್ದಾರೆ.
ವಿನ್ಯಾಸ
ಚಿತ್ರಾಂಗದೆ ಕಾವ್ಯವು ಮಣಿಪುರದ ಕಾಡಿನಲ್ಲಿ ನಡೆಯುವುದರಿಂದ ಸೂಚ್ಯವಾಗಿ ಕಾಡಿನ ವಿನ್ಯಾಸದ ರಂಗಸಜ್ಜಿಕೆ ಮಾಡಿದ್ದಾರೆ. ಮತ್ತು ಚಿತ್ರಾಂಗದೆ, ಅರ್ಜುನ, ಬಬ್ರುವಾಹನ, ಮನ್ಮಥ, ಕಾಳಿ ಎಲ್ಲ ಪಾತ್ರಗಳೂ ಕೆಲವೇ ಕೆಲವು ಕಾಸ್ಟ್ಯೂಂನ ಮಾರ್ಪಾಡುಗಳು ಈ ರಂಗಸಜ್ಜಿಕೆಯ ಹಿಂದೆಯೇ ಕ್ಷಣಗಳಲ್ಲಿ ನಡೆಯುತ್ತದೆ. ಇಡೀ ನಾಟಕಕ್ಕೆ ಬೇಕಾದ ವಾತಾವರಣವನ್ನು ನಿರ್ಮಿಸಿದೆ. ಜಪಾನ್‌ನ ‘ನೋ’ ಪ್ರಕಾರದ ಸರಳ ರಂಗಸಜ್ಜಿಕೆಯನ್ನು ಇದು ನೆನಪಿಸುತ್ತದೆ.
ವಸ್ತ್ರವಿನ್ಯಾಸ
ಒಬ್ಬಳೇ ನಟಿ ರಂಗದ ಮೇಲೆ ಹಲವು ಪಾತ್ರವಾಗುವುದು ಸವಾಲಿನ ಕೆಲಸ. ವಸ್ತ್ರವಿನ್ಯಾಸದಲ್ಲಿ ಸಣ್ಣ ಸಣ್ಣ ಬದಲಾವಣೆ ಮಾಡುವ ಮೂಲಕ ನಿರ್ದೇಶಕರು ಸುಲಭಾವಾಗಿ ಬಗೆ ಹರಿಸಿಕೊಂಡಿದ್ದಾರೆ. ಶಾಲುಗಳನ್ನು ಬೇರೆ ಬೇರೆ ರೀತಿಯಲ್ಲಿ ಹಾಕಿಕೊಳ್ಳುವ ರೀತಿಯಲ್ಲೇ ಪ್ರೇಕ್ಷಕರೆದುರಿಗೇ ಪಾತ್ರ ಬದಲಾಗುತ್ತದೆ.
ಯಕ್ಷಗಾನದ ತೆಂಕುತಿಟ್ಟಿನ ಕಿರೀಟ, ಯಕ್ಷಗಾನದ ಪರದೆ, ಛಾವ್ ಪ್ರಕಾರದ ಕಿರೀಟ, ಮಣಿಪುರದ ವಿನ್ಯಾಸವನ್ನು ಹೋಲುವ ಜಾಕೆಟ್ ಎಲ್ಲವನ್ನೂ ಪ್ರಯೋಗಕ್ಕೆ ಬೇಕಾದ ಹಾಗೆ ಬಳಸಿಕೊಂಡಿದ್ದಾರೆ.

ಸಂಗೀತ
ಈ ನಾಟಕದಲ್ಲಿ ಸಂಗೀತ ಹೆಚ್ಚಾಗಿದ್ದರೂ ಇದನ್ನು ಒಂದು ಸಂಗೀತಮಯ ನಾಟಕ (ಮ್ಯೂಸಿಕಲ್) ಎನ್ನಲಾಗುವುದಿಲ್ಲ. ಪಾತ್ರ ಬದಲಾವಣೆಗೆ ಸಂಗೀತವನ್ನು ಬಳಸಿಕೊಂಡಿದ್ದಾರೆ. ಪ್ರೇಕ್ಷಕನ ಮನೋರಂಗಭೂಮಿಯಲ್ಲಿ ನಾಟಕ ಹೊಕ್ಕಂತೆ ಸಂಗೀತ ಯಾವುದು, ಸಂಭಾಷಣೆ ಯಾವುದು, ನೃತ್ಯ ಯಾವುದು ಎನ್ನುವುದು ಅರಿವಿಗೆ ಬಾರದಷ್ಟು ಒಂದರೊಳಗೊಂದು ಮಿಳಿತವಾಗಿ ಹದವಾದ ರಸಾನುಭೂತಿಯನ್ನು ಪ್ರೇಕ್ಷಕರಿಗೆ ನೀಡುತ್ತದೆ.
ಚಿತ್ರಾಂಗದಾ ಯಾಕೆ?
ಕೊನೆಗೂ ಯಾಕೆ ಈ ನಾಟಕವನ್ನು ಮಾಡಬೇಕು, ಯಾಕೆ ಈ ನಾಟಕವನ್ನು ನೋಡಬೇಕು ಎನ್ನುವುದು ಪ್ರತಿಯೊಬ್ಬ ಕಲಾವಿದನ, ಪ್ರೇಕ್ಷಕನ ಮೂಲಭೂತ ಪ್ರಶ್ನೆ. ಇಲ್ಲಿ ಇದು ಚಿತ್ರಾಂಗದಾ ಮತ್ತು ಅರ್ಜುನನ ಕತೆಯಾದರೂ ಅದರ ನೆಪದಲ್ಲಿ ನಡೆಯುವುದು ಗಂಡು ಹೆಣ್ಣು ಮತ್ತು ಅವರಿಬ್ಬರ ಸಂಬಂಧದ ಸಂಕೀರ್ಣತೆಯ ಬಗ್ಗೆ. ಹೆಣ್ಣಾದರೂ ಗಂಡಿನಂತೆ ವನದಲ್ಲಿರುವ ಚಿತ್ರಾಂಗದೆ ಅರ್ಜುನನನ್ನು ನೋಡಿದ್ದೆ ಮತ್ತೆ ‘ಹೆಣ್ತನ’ ಕ್ಕೆ ಹಾತೊರೆಯುತ್ತಾಳೆ. ಅವಳೊಳಗಿನ ಹೆಣ್ಣನ್ನು ನೋಡಿದ ಅರ್ಜುನ ತನ್ನ ಬ್ರಹ್ಮಚರ್ಯದ ನಿಯಮವನ್ನು ಮುರಿಯುತ್ತಾನೆ. ಬಬ್ರುವಾಹನನನ್ನು ಅರ್ಜುನ ‘ನಿನ್ನ ಹೆಸರು ಗಂಡಿನದೋ ಹೆಣ್ಣಿನದೋ’ ಎಂದು ಕೇಳುತ್ತಾನೆ. ಗಂಡಿನೊಳಗಣ ಹೆಣ್ಣು ಹೆಣ್ಣಿನೊಳಗಣ ಗಂಡಿನ ಪಲ್ಲಟ ನಾಟಕದುದ್ದಕ್ಕೂ ಇದೆ.

ಅರ್ಜುನ ಮತ್ತು ಬಬ್ರುವಾಹನರ ಕಾಳಗದ ಮಧ್ಯೆ ಚಿತ್ರಾಂಗದೆ ಬಂದು ಅವರಿಬ್ಬರಿಗೂ ಸಂಧಿ ಮಾಡಿಸುತ್ತಾಳೆ. ಈ ಸಂದರ್ಭದಲ್ಲಿ ಪಾತ್ರಧಾರಿ ಬಾಗಿಲನ್ನು ಒಡೆದು ದೊಡ್ಡದಾದ ಬಿಳಿ ಬಾವುಟವನ್ನು ಪ್ರೇಕ್ಷಕರೆದುರಿಗೆ
‘ಎತ್ತ ನೋಡಿದರತ್ತ ನಾಶಮೇ ನಗುತಿಹುದು
ಕಾಳೆಗದ ನೆಲಗಳೆನೆ ಭಿತ್ತರದ ಮಸಣಗಳ್’ ಎಂದು ಹೇಳಿದಾಗ ಈ ಜಗತ್ತಿನಲ್ಲಿ ಈಗ ನಡೆಯುತ್ತಿರುವ ಹಿಂಸೆ, ನೋವು, ಯುದ್ಧೋನ್ಮಾದ ಕಣ್ಮುಂದೆ ಬರದಿರಲಾರದು. ರಂಗದ ಮೇಲೆ ಬಿಳಿ ಬಾವುಟ ಹಿಡಿದ ಚಿತ್ರಾಂಗದೆಯು ಇಲ್ಲಿ ವಿಶ್ವದ ಒಳಿತಿಗಾಗಿ ಹಾತೊರೆಯುವ ತಾಯಿಯಂತೆ ಕಾಣುತ್ತಳೆ. ಲೌಕಿಕವಾದ ಪ್ರೇಮವನ್ನು ಮೀರಿ ವಿಶ್ವಪ್ರೇಮದ ಅನುಭೂತಿಯನ್ನು ಈ ಪ್ರಯೋಗ ನೀಡುತ್ತದೆ. ಆದ್ದರಿಂದ ಚಿತ್ರಾಂಗದೆ ಅಸ್ತಂಗತಳಾದ ಮೇಲೂ ಹೊಸ ಭರವಸೆಯ ಬೆಳಕಿನಲ್ಲಿ (ಇಲ್ಲಿ ಬೆಳಕಿನ ಮೂಲಕವೇ ಭರವಸೆ ಸೂಚಿಸಿದ್ದಾರೆ) ನಾಟಕ ಮುಗಿಯುತ್ತದೆ.

ಚಿತ್ರಾ ವೆಂಕಟರಾಜು, ಚಾಮರಾಜನಗರದವರು. ನಟಿ. ಕಳೆದ ೧೮ ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ರಂಗಶಿಕ್ಷಣ ದ ಶಿಕ್ಷಕಿಯಾಗಿಕೆಲಸ ನಿರ್ವಹಿಸುತ್ತಿದ್ದಾರೆ. ನೀನಾಸಮ್ ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಚಾಮರಾಜನಗರದ ‘ಶಾಂತಲಾ ಕಲಾವಿದರುʼ ತಂಡದಲ್ಲಿ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಕಲಾಶಿಕ್ಷಣ, ಸಾಹಿತ್ಯ, ಸಂಗೀತ, ನೃತ್ಯ, ಸಿನೆಮಾದಲ್ಲಿ ಆಸಕ್ತಿ. ಇವರು ಅಭಿನಯಿಸಿದ ಅಮೃತಾ ಪ್ರೀತಂ ಅವರ ಬದುಕನ್ನು ಆಧರಿಸಿದ ಏಕವ್ಯಕ್ತಿ ರಂಗಪ್ರಯೋಗ “ಮೈ ತೆನ್ನು ಫಿರ್ ಮಿಲಾಂಗಿ” ಹಲವಾರು ಪ್ರದರ್ಶನಗಳನ್ನು ಕಂಡಿದೆ.
