1.
ಅರಳುವ ಪ್ರೀತಿಗೆ ಕೆಂಡದ ಹಾಸಿಗೆ
ಬದುಕು ನಿತ್ಯ ನಿಗಿ ನಿಗಿಸುತ್ತಿದೆ

2.
ಯಾರು ತೊಳೆದರೂ ಹೊಳೆಯುವ ಕಿವಿಗಳು
ಕೇಳಿಸಿಕೊಳ್ಳುತ್ತವಷ್ಟೆ; ಸ್ವಂತ ಆಲೋಚಿಸಲಾರವು

3.
ನೆನಪುಗಳ ಹರವಿ ಕೂತಿದ್ದೆ ಜೋರು ಮಳೆ ಬಂತು
ತೋಯಿಸಿಕೊಂಡ ತಪ್ಪಿಗೀಗ ನಿರುದ್ಯೋಗಿ ನಾನು

4.
ಲಿಂಗವೇ ಮೆಚ್ಚಿ ಹೌದೌದು ಎನ್ನುವ ಜೋರು ಮಳೆಯಲ್ಲಿ
ಭಾಷಣ ವ್ಯಸನದ ಗಾಳಿಮಾತು ಮಳೆ ಕೆಡಿಸಿತು

5.
ನೀನು ಬೀಸಿದ ಸುಳ್ಳಿನ ಖಡ್ಗದ ಝಳಪಿಗೆ ಆಜನ್ಮ ಋಣಿ ನಾನು
ಎಷ್ಟೊಂದು ಸತ್ಯಗಳು ಅಡಗಿ ಕೂತಿದ್ದವು ಕತ್ತಲ ಬಾಳಿನೊಳಗೆ

6.
ಎಷ್ಟು ಭಾರದಿಂದ ಹೆಜ್ಜೆಗಳ ಕಿತ್ತಿಡಬೇಕು ನೋಡಿಲ್ಲಿ
ಅಂಗಾತ ಹಾಸಿ‌ ಮಲಗಿರುವಾಗ ನಿನ್ನ ನೆನಪುಗಳು ಅಂಗಳದಲ್ಲಿ

7.
ತೋಟದ ಎಲ್ಲ ಗಿಡಗಳಿಗೂ ನೀನು ನೀರುಣಿಸಿರಬಹುದು
ಎಲ್ಲ ಗಿಡಗಳೂ ಹಣ್ಣು ಕೊಡಬೇಕೆಂಬ ನಿಯಮ ಇಲ್ಲವಲ್ಲ

8.
ನೀನು ದುಃಖಿಸಿದಾಗಲೆಲ್ಲ ನಾನು ನಂಬುತ್ತಲೆ ಹೋದೆ
ಕಿಸಕ್ಕನೆ ನಕ್ಕುಬಿಟ್ಟೆ ನೋಡು ನಂಬಿಕೆಯೆ ಕುಸಿದು ಹೋಯಿತು

9.
ಸೋಲಬೇಕಾದ ಸಮಯದಲ್ಲಿ ಸೋಲದಿದ್ದರೆ
ಗೆಲ್ಲಬೇಕಾದ ಸಮಯದಲ್ಲಿ ಗೆಲ್ಲಲಾಗುವುದಿಲ್ಲ

10.
ತರ್ಕದ ಬುದ್ಧಿಗೆ ಸೌಂದರ್ಯ ಆಸ್ವಾದಿಸುವ ಗುಣ ಕಡಿಮೆ
ಭಾವುಕತೆಗೆ ವಿವೇಕವೆಂಬುದು ಮರುಭೂಮಿಯ ಮರೀಚಿಕೆ

11.
ಕೊಡಬಾರದು ಕಾವು ಬೆಂದಷ್ಟು ಭಾವ
ಸೀದೀತು ತಳ ಒಳ ಉಳಿದೀತು ನೋವ

12.
ಯಾವುದನ್ನು ಕಲಿಯಲು ನಾವು ಸಿದ್ಧರಿಲ್ಲವೊ
ಅದನ್ನು ಕಲಿಸಲೆಂದೇ ಬದುಕು ಸಿದ್ಧವಿರುತ್ತದೆ

13.
ತಪ್ಪುಗಳು ನಿಜವಾಗಿಯೂ ಸಣ್ಣವೆ ಆಗಿರುತ್ತವೆ
ತಿದ್ದಿಕೊಳ್ಳದೇ ಬಿಟ್ಟಿದ್ದರಿಂದ ದೊಡ್ಡವಾಗುತ್ತವಷ್ಟೆ

14.
ಬಾಗುವುದ ಕಲಿಯಬೇಕು ಪ್ರೀತಿಸಲು ಕಲಿತ ಮೇಲೆ
ಬಾಗುವಂತೆ ವೃಕ್ಷಗಳು ಫಲ‌ ಕೊಡಲು ಕಲಿತ ಮೇಲೆ

15.
ಸಂಬಂಧಗಳಲ್ಲಿ ಸೋಲುವುದೆಂದರೆ ಗೆಲ್ಲುವುದು ಎಂದರ್ಥ
ಒಬ್ಬರೇ ನಿರಂತರ ಸೋತರೆ ಸಂಬಂಧವೇ ಸೋತುಬಿಡಬಹುದು

(ಇಲ್ಲಸ್ಟ್ರೇಷನ್‌ ಕಲೆ: ರೂಪಶ್ರೀ)