ಈ ಎಲ್ಲ ಯುವಕವಿಗಳು ಬಂಡಾಯದ ಕುದಿಯನ್ನು ಆರಗೊಡದೆ ಕಲಾತ್ಮಕ ತೋಡುಗಾಲುವೆಗಳನ್ನು ನಿರ್ಮಿಸಿಕೊಂಡವರು ಎಂದೆ, ಹೌದು. ಅದರಲ್ಲಿ ಒಬ್ಬೊಬ್ಬರದೂ ಒಂದೊಂದು ಬಗೆ. ಹಾಗಾಗಿಯೇ ಕನ್ನಡಕ್ಕಿದು ಕೇಡುಗಾಲವಲ್ಲ, ಊರ್ಜಿತಕಾಲ. ನಾನಿಲ್ಲಿ ಅರೋಲಿಯವರು ಕಟ್ಟಿಕೊಂಡಿರುವ ಮಾರ್ಗದ ಬಗ್ಗೆ ಹೇಳುವೆ. ಅದು ದೇಸೀ ಪರದೇಸೀಗಳ ಕಸಿ ಮಾಡಿಕೊಂಡ ಮಾರ್ಗ.
ರಮೇಶ ಅರೋಲಿ ಬರೆದ ‘ಬಿಡು ಸಾಕು ಈ ಕೇಡುಗಾಲಕ್ಕಿಷ್ಟುʼ ಕವನ ಸಂಕಲನಕ್ಕೆ ಲಲಿತಾ ಸಿದ್ಧಬಸವಯ್ಯ ಬರೆದ ಮುನ್ನುಡಿ

 

ಕನ್ನಡದ ಬಂಡಾಯಕ್ಕೆ ಬಹುಬಾಯಿಗಳು. ಮಲಗಿದ್ದ ಕೆರೆಯ ಏರಿಯೊಡೆದು ಸರುಹೊತ್ತಿನಲ್ಲಿ ನೀರು ಧಢ್ಢನೆ ಬಯಲಿಗೆ ನುಗ್ಗುವಂತೆ, ಅದುಮಿದ್ದ ಅದೆಷ್ಟು ಒಳಗುದಿಗಳು ಅದೆಷ್ಟು ಬಾಯಿಗಳಾಗಿ ಹೊರಬಿದ್ದುವೋ? ಹೂತಿದ್ದ ಬಿರೆಹುಯ್ದ ಸುಣ್ಣದಹಾಲಿನ ಪೀಪಾಯಿಯೊಂದರ ಬಿರಟೆಯೊಡೆಯಿತು ಈ ಬಂಡಾಯ; ಆಗ ಹೊರಬಿದ್ದ ಕಾವನ್ನು ಕೆಂಡಗಣ್ಣಪ್ಪನಿಗಾದರೂ ಸೈರಿಸಲಾಯಿತೋ? ಸುಮಾರು ಐವತ್ತು ವರ್ಷಗಳು ಮೊರೆದ ಬಿರೆ ಈಗ ರವಷ್ಟು ಕಡಿಮೆಯಾಗಿದೆ. ಕಡಿಮೆಯಾದದ್ದು ನುಗ್ಗುವ ಬಿರೆ, ಒಳಗಿನ ಕುದಿಯಲ್ಲ. ಆ ಕುದಿಯು ಹೊರವುಕ್ಕಲು ಇನ್ನೊಂದು ಬಗೆಯನ್ನು ಶೋಧಿಸಿಕೊಳ್ಳುತ್ತಿದೆ. ಆ ಶೋಧನೆಯ ಅನೇಕ ರೂಪಗಳನ್ನು ನಾವೀಗ ಫೇಸ್ ಬುಕ್ಕಿನ ವಾಲುಗಳಲ್ಲಿ, ವಾಟ್ಸಾಪುಗಳ ಪೋಸ್ಟುಗಳಲಿ ಕಾಣುತ್ತಿದ್ದೇವೆ. ನಾವೇನೂ ಅದಕ್ಕಾಗಿ ಬಹು ಸೂಕ್ಷ್ಮವಾಗಿ ಗಮನಿಸಬೇಕಿಲ್ಲ, ಅದು ತನ್ನ ರೂಪಾಂತರವನ್ನು ಕವನೇತ್ಯಾದಿ ಬರಹಗಳಲ್ಲಿ ಸ್ಪಷ್ಟವಾಗಿಯೇ ಒಡೆದು ತೋರಿಸುತ್ತಿದೆ. ಹಾಗೆ ಒಳಗಿನ ಕುದಿಗೆ ಹೊಸರೂಪದ ಹೊರತೋಡು ಕಟ್ಟಿಕೊಂಡ ಕವಿ ರಮೇಶಅರೋಲಿ. ಅವರು ಸ್ವಹರಿಯನ್ನು ಗುರುತಿಸಿಕೊಂಡಿದ್ದರೆ, ಅದಕ್ಕೊದಗಬಲ್ಲ ತೋಡು ನಿರ್ಮಿಸಿಕೊಂಡಿದ್ದಾರೆ, ಗೆದ್ದಿದ್ದಾರೆ. ಅಲ್ಲಿ ತೋರುಗಾಣಿಕೆಯಿಲ್ಲ, ಹುಸಿಅನುಭಾವದ ಒಣಹುಲ್ಲ ಬೆದರು ಬೊಂಬೆಯಿಲ್ಲ.

ಆರಂಭದ ಕನ್ನಡ ಬಂಡಾಯ ಬರಹಗಾರರಿಗೆ ತಾವೊಬ್ಬ ಶ್ರೇಷ್ಠ ಬರಹಗಾರನೆಂದೆನಿಸಿಕೊಳ್ಳುವ ಆಕಾಂಕ್ಷೆಗಿಂತ, ತಾವು ಹೇಳಬೇಕಾದುದನ್ನು ಸತ್ತಂತಿದ್ದ ಒಂದು ತಲೆಮಾರಿಗೆ ಕೇಳಿಸುವಂತೆ ಹೇಳಬೇಕಾಗಿದ್ದುದೇ ಮುಖ್ಯವಾಗಿತ್ತು. ಕೇಳಿಸುವ ಮೊದಲು ಎಚ್ಚರಿಸಬೇಕಲ್ಲ, ಅದಕ್ಕಾಗಿ ಅರಚಿಯೋ, ಕಿರುಚಿಯೋ, ಒದ್ದೊ, ಬಿದ್ದೋ ಮೊದಲು ಮಲಗಿದ್ದವರನ್ನು ಏಳಿಸುವುದು ಅಂದಿನ ಜರೂರು. ಅದು ಬಹುಮಟ್ಟಿಗೆ ಯಶಸ್ವಿಯಾಗಿದೆ. ಇಂದಿನವರ ಮುಂದೆ ಇರುವ ಜರೂರೆಂದರೆ ಅರಚದೆಯು ಕಿರುಚದೆಯು, ಮುಟ್ಟಿ ನೋಡಿಕೊಳ್ಳುವಂತೆ, ಬಹುಕಾಲ ಬಾಳುವಂತಹ ಸಾಹಿತ್ಯ ನಿರ್ಮಿತಿಗಳನ್ನು ಕಟ್ಟುವುದಾಗಿದೆ. ಆ ನಿರ್ಮಿತಿಗಳು ತಮ್ಮ ಭಾಷಾ ಸೌಂದರ್ಯದಲ್ಲೋ, ಮೈಯ್ಯಿನ ಅಲಂಕಾರಗಳಲ್ಲೋ ತಾವೇ ರತಗೊಂಡು ತಾವು ಮುಂದಿನ ತಲೆಮಾರಿಗೆ ಸಾಗಿಸಬೇಕಾದ ಬಂಡಾಯದ ಕುದಿಯನ್ನು ಬೂದಿಮಾಡದಂತೆಯೂ ಕಾವಲು ಕಾಯಬೇಕು.

(ರಮೇಶ ಅರೋಲಿ)

ನಮ್ಮ ವಿಮರ್ಶಕರು ದಯಮಾಡಿ ಈ ಯುವಬರಹಗಾರರ ಈ ಇಬ್ಬಂದಿಯನ್ನು ಗಮನಿಸಬೇಕೆಂದು ಬೇಡಿಕೊಳ್ಳುವೆ. ವಾಸ್ತವದಲ್ಲಿ ಬಂಡಾಯವನ್ನು ಕಲಾತ್ಮಕವಾಗಿ ಹೇಳುವುದು ಇಬ್ಬರು ಜಟ್ಟಿಗಳನ್ನು ಏಕಕಾಲದಲ್ಲಿ ಅಖಾಡದೊಳಗೆ ಆಹ್ವಾನಿಸಿಕೊಂಡಂತೆ. ಇದು ಪ್ರಯಾಸ. ಈ ಬರಹಗಳನ್ನು ಕನ್ನಡದ “ಮುಂದುವರೆದ ಬಂಡಾಯ ಚಳುವಳಿ” ಎಂದೇ ಸಾಹಿತ್ಯ ವಿಮರ್ಶಕರು ಗುರುತಿಸಬೇಕೆಂಬುದು ನನ್ನ ಮನವಿ, ಆಗ್ರಹ. ಬಂಡಾಯಕ್ಕೆ ಸಾವಿಲ್ಲ, 2001 ರ ನಂತರದ ಕನ್ನಡಕಾವ್ಯದ ಬಿರುಸಿನ ಬೆಳವಣಿಗೆ ನಿಸ್ಸಂಶಯವಾಗಿ ಮಹಿಳೆಯರದ್ದು ಮತ್ತು ಈ ನವ ಬಂಡಾಯಗಾರ ಕವಿಗಳದ್ದು. ಚಳುವಳಿಗಳೇ ಇಲ್ಲ ಎನ್ನುವವರು ಇದನ್ನು ಗಮನಿಸಬೇಕು. ಬೀದಿಗೆ ಬಿದ್ದದ್ದು ಚಳುವಳಿ, ನಿಜ. ಬೀದಿಗೆ ಬರದೆ ಬೀದಿಗೆ ಬಂದಷ್ಟೇ ಪರಿಣಾಮವನ್ನು ಒಂದು ಸಾಹಿತ್ಯ ಬೆಳವಣಿಗೆ ಮಾಡಬಹುದಾದರೆ ಅದನ್ನು ನೀವು ಚಳುವಳಿಯೆಂದೇಕೆ ಗುರುತಿಸಬಾರದು? ಮಹಿಳಾ ಸಾಹಿತ್ಯ ಚಳುವಳಿ ಎಂದು ಹೆಸರಿಸಲಾರದೆ ಹೋದಂತೆ ಈ “ಮುಂದುವರೆದ ಬಂಡಾಯ ಚಳುವಳಿ”ಯನ್ನು ಹೆಸರಿಸದಂತೆ ಮಾಡತಕ್ಕುದ್ದಲ್ಲ. ದಯವಿಟ್ಟು ಈ ಮಾತನ್ನು ಗಮನಿಸಿ, ಗುರುತಿಸಿ, ಕನ್ನಡ ಸಾಹಿತ್ಯ ಚರಿತ್ರಕಾರರೇ!

ಈ ಮುಂದುವರೆದ ಬಂಡಾಯ ಕಾವ್ಯ ಚಳುವಳಿಯಲ್ಲಿ ನನಗೆ ಮುಖ್ಯವಾಗಿ ಕಾಣಿಸುತ್ತಿರುವವರು, ಅರೋಲಿ, ಚಲಂ, ಕಾರ್ಪೆಂಟರ್, ರಾಜೇಂದ್ರ, ಪ್ರವರ, ಗೊರವರ, ಮಹದೇವ, ಭುವನಾ, ವಿಲ್ಸನ್, ಮುಆದ್, ಶಂಕರ್, ಮುಂತಾದವರು. ನಿರ್ಭಿಡೆಯಾಗಿ ಬರೆಯುತ್ತಿರುವ ಇಂತಹ ನೂರಾರು ಯುವಕ ಯುವತಿಯರನ್ನು ಫೇಸ್ಬುಕ್ ಬರಹ, ಬ್ಲಾಗ್ ಬರಹ, ವಾಟ್ಸಾಪ್ ಬರಹ, ಸ್ವರತೀ ಬರಹ, ಅವಸರದ ಬರಹ, ಆ ಬರಹ ಈ ಬರಹವೆನ್ನದೆ “ಹೊಸ ಬಂಡಾಯ ಚಳುವಳಿಯ” ಮಾರ್ಗಕರ್ತರೆಂದೇ ಗುರುತಿಸಲು ಸಕಾಲವಿದು. ಎಲ್ಲಾ ಪತ್ರಿಕೆಗಳೂ ಹೊದ್ದು ಮಲಗಿದಾಗ ಈ ಯುವ ಬರಹಗಾರರು ತಂತಮ್ಮ ವೇದಿಕೆಗಳನ್ನು ತಾವೇ ಕಲ್ಪಿಸಿಕೊಂಡು ಪ್ರಕಟಿಸುವುದರಲ್ಲಿ ನನಗೇನೂ ಅಸಹಜವಾದದ್ದು ಕಾಣುತ್ತಿಲ್ಲ. ನಿಜ, ಇಲ್ಲಿ ಅರೆ ಬಲಿತದ್ದೂ ಮೆರೆಯುತ್ತದೆ. ಹಾಗೆ ಅರೆ ಬಲಿತದ್ದೂ ಮೆರೆಯದ ಕಾಲಘಟ್ಟ ಕನ್ನಡ ಸಾಹಿತ್ಯದಲ್ಲಿ ಯಾವುದಿತ್ತು ಹೇಳಿ?

ಈ ಎಲ್ಲ ಯುವಕವಿಗಳು ಬಂಡಾಯದ ಕುದಿಯನ್ನು ಆರಗೊಡದೆ ಕಲಾತ್ಮಕ ತೋಡುಗಾಲುವೆಗಳನ್ನು ನಿರ್ಮಿಸಿಕೊಂಡವರು ಎಂದೆ, ಹೌದು. ಅದರಲ್ಲಿ ಒಬ್ಬೊಬ್ಬರದೂ ಒಂದೊಂದು ಬಗೆ. ಹಾಗಾಗಿಯೇ ಕನ್ನಡಕ್ಕಿದು ಕೇಡುಗಾಲವಲ್ಲ, ಊರ್ಜಿತಕಾಲ. ನಾನಿಲ್ಲಿ ಅರೋಲಿಯವರು ಕಟ್ಟಿಕೊಂಡಿರುವ ಮಾರ್ಗದ ಬಗ್ಗೆ ಹೇಳುವೆ. ಅದು ದೇಸೀ ಪರದೇಸೀಗಳ ಕಸಿ ಮಾಡಿಕೊಂಡ ಮಾರ್ಗ. ಕನ್ನಡ ಮತ್ತು ತೆಲುಗಿನ ಜನಪದದ ಸಶಕ್ತ ರೆಂಬೆಯೊಂದನ್ನು ಕಡಿದುಕೊಂಡು ತಂದು ಆಧುನಿಕ ತಲ್ಲಣಗಳನ್ನು, ಸಂಕಟಗಳನ್ನು, ಧಾವಂತಗಳನ್ನು ಅದಕ್ಕೆ ಕಸಿ ಮಾಡಿ ಬೆಳೆದ ದೇಸೀ ಮಿಶ್ರ ತಳಿಯೇ ಅವರ ಕಾವ್ಯಮಾರ್ಗ. ಇಂತಹ ಕಸಿ ಈ ಹಿಂದೆಯೂ ನಮ್ಮಲ್ಲಿ ವಿಪುಲವಾಗಿ ಆಗಿದೆ. ಆದರೆ ಅರೋಲಿಯವರು ಮಾಡಿರುವುದು ಸುಣ್ಣದ ಕುದಿಯನ್ನು ಅರಳೀಮರದ ಕೊಂಬೆಗೆ ಬೆಸೆದಂತಹ ಕಸಿ. ಅದು ವಿರೋಧಾಭಾಸವನ್ನೇ ಕಕ್ಕುವಂಥದ್ದು. ಅದು ಸಾಲು ಸಾಲಲ್ಲೂ ಒಡೆದು ಕಾಣಿಸಬಹುದಾದ ಎಲ್ಲಾ ಸಾಧ್ಯತೆಗಳನ್ನೂ ಕವಿ ನಿವಾರಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಅವರ ಪ್ರತಿಭೆ, ಅನುಭವಕ್ಕೆ ಬದ್ಧತೆ ಮತ್ತು ತೆಲುಗು. ತೆಲುಗಿನ ಕ್ರಾಂತಿಗೀತೆಗಳ ದಟ್ಟ ಪ್ರಭಾವ ಅವರ ಅನೇಕ ಕವನಗಳನ್ನು ಸೊಗಸಾದ ಗೇಯಲಯಕ್ಕೆ ತಿರುಗಿಸಿವೆ. ಐವತ್ತು ಕವನಗಳ ‘ಬಿಡು ಸಾಕು, ಈ ಕೇಡುಗಾಲಕ್ಕಿಷ್ಟು’ ಎಂಬ ಈ ಅಪ್ರಕಟಿತ ಸಂಕಲನದ ಎಪ್ಪತ್ತು ಭಾಗದಷ್ಟು ಕವನಗಳು ತಮಟೆಯ ರವವೊಂದನ್ನೇ ಮಗ್ಗುಲಿಗಿಟ್ಟುಕೊಂಡು ಏರಿದ ದನಿಯಲ್ಲಿ ಹಾಡಬಹುದಾದುವು. ನೀವು ಓದುವಾಗಲೇ ಅವನ್ನೂ ಹಾಡಿಯೂ ಅನುಭವಿಸುವಿರಿ.

ಆರಂಭದ ಕನ್ನಡ ಬಂಡಾಯ ಬರಹಗಾರರಿಗೆ ತಾವೊಬ್ಬ ಶ್ರೇಷ್ಠ ಬರಹಗಾರನೆಂದೆನಿಸಿಕೊಳ್ಳುವ ಆಕಾಂಕ್ಷೆಗಿಂತ, ತಾವು ಹೇಳಬೇಕಾದುದನ್ನು ಸತ್ತಂತಿದ್ದ ಒಂದು ತಲೆಮಾರಿಗೆ ಕೇಳಿಸುವಂತೆ ಹೇಳಬೇಕಾಗಿದ್ದುದೇ ಮುಖ್ಯವಾಗಿತ್ತು.

ಒಂದು ಪುಸ್ತಿಕೆಯಲ್ಲಿ ಇಷ್ಟು ಗೇಯಗೀತೆಗಳಿರುವುದು ಅಪರೂಪ, ಬೇಂದ್ರೆಯವರನ್ನು ಹೊರತು ಪಡಿಸಿ. ಧಾರವಾಡ ಮಣ್ಣಿನ ದೇಸೀ ಕಸುವುಳ್ಳ ಆ ಅಮೋಘ ಕನ್ನಡವು ಜೀವಿತ ಪೂರ್ತಿ ಬೇಂದ್ರೆಯೆಂಬ ಕೋಗಿಲೆಯನ್ನು ನೆನಪಲ್ಲಿಟ್ಟುಕೊಂಡಿರುತ್ತದೆ, ಆಭಾರಪೂರ್ವಕವಾಗಿ! ರಾಯಚೂರಿನ ಅರೋಲಿ ಅಷ್ಟೇ ಕಸುವುಳ್ಳ ರಾಯಚೂರ ಇನ್ನೊಂದು ಕನ್ನಡವನ್ನೇಕೆ ಕೈ ಬಿಟ್ಟರು? ನಾನು ಜನರನ್ನು ಮುಟ್ಟುವುದು ಆ ಯಾಸೆಯಲ್ಲಿ ಕಷ್ಟವೆಂದೋ? ರಾಯಚೂರ ಯಾಸೆಯನ್ನು ಅವರು ಬಳಸಲೆಂಬುದು ನನ್ನ ಆಶಯ. ಹಾಗೆ ಮಾಡಿದ್ದುದಾದರೆ ಆ ಕನ್ನಡವು ನಿಮ್ಮನ್ನು ಸದಾ ನೆನೆಸುತ್ತದೆ ಅರೋಲಿಯವರೆ. ಹಳೆ ಮೈಸೂರಿಗರ ಕನ್ನಡವು ತನ್ನ ಪ್ರಾದೇಶಿಕತೆಯನ್ನು ನೀಗಿಕೊಂಡಿದೆ. ಅರದಲ್ಲುಜ್ಜಿಸಿಕೊಂಡು ಓರೆಕೋರೆ ಕಳಕೊಂಡ ‘ಪೇಪರ್’ ಭಾಷೆಯಾಗಿ ಕೂತಿದೆ. ಇನ್ನೂ ಆ ಸ್ಥಿತಿಗಿಳಿಯದಿರುವ ಅನೇಕ ಕನ್ನಡಗಳನ್ನು ಯುವಕರೇ ಉಳಿಸಬೇಕು, ಉಳಿಸುತ್ತಾರೆ. ನನಗೆ ಭರವಸೆಯಿದೆ ಕನ್ನಡದ ಯುವಸಮೂಹದ ಮೇಲೆ, ಅರೋಲಿಯವರನ್ನೂ ಒಳಗೊಂಡು.

ಅರೋಲಿಯವರ ಗೇಯಗೀತೆಗಳ ಮುಖ್ಯವಸ್ತು ವಿಷಾದ. ನೀವು ಇದೇ ಕಾರಣವಾಗಿ ಅವುಗಳನ್ನು ಹಾಡುತ್ತಾಡುತ್ತ ಸಂಗೀತದ ಮಜ ಸಂಪೂರ್ಣವಾಗಿ ಅನುಭವಿಸಲಾರಿರಿ. ಕವಿಗೆ ಅದು ಗೊತ್ತಿದೆ, ಓದುಗನಿಗೆ ಹಾಡುಗನಿಗೆ, ಕೇಳುಗನಿಗೆ ಲಯದ ಕಿಕ್ ಕೊಡಲಲ್ಲ ನಾನು ಬರೆಯುವುದೆಂಬುದನ್ನು ಪ್ರತಿ ಸಾಲಲ್ಲೂ ಅವರು ಸಾಬೀತುಮಾಡಿ ಎಚ್ಚರಿಸುತ್ತಾರೆ. ನೆರಳಂತ ಕುಂತಾರ ನೇರಿಳೆ ಬಾಸಿಂಗದ ಅವರ ಗಿಣಿರಾಮ ಅಜ್ಜಿಕಥೆಗಳ ರಮ್ಯಕಥಾನಕಗಳ ಪ್ರೇಮವಾಹಕನಲ್ಲ. ಹೆಜ್ಜೆಹೆಜ್ಜೆಗೂ ದುರಂತ ವಾಸ್ತವವೊಂದನ್ನು ನಿಮಗೆ ನೆನೆಪು ಮಾಡುವ ಸಂಜಯ ಅವನು. ಅವನನ್ನು ಪಕ್ಕಕ್ಕಿಟ್ಟು ಲಯದ ಕಿಕ್ ಅನುಭವಿಸಲು ಸಾಧ್ಯವಿಲ್ಲ ಓದುಗನಿಗೂ , ಕೇಳುಗನಿಗೂ.

(ಲಲಿತಾ ಸಿದ್ಧಬಸವಯ್ಯ)

ಅವರ ಕಾಗೆರಾಮ, ಅವರ ಗುಬ್ಬಿ, ಅವರ ಕುಮ್ಮಟಿ, ಅವರ ಭಳಾರೇ, ಅವರ ಓಲೆ, ಅವರ ಉಯ್ಯಾಲೆ, ಅವರ ಶಂಭುಲಿಂಗ, ತೋಟಮಾಲಿ, ಮಾಯಿಯರು, ಪ್ರೇಯಸಿಯರು, ಶಿಲಾಬಾಲೆಯರು ಯಾರೂ ಯಾರೂ ನಿಮ್ಮನ್ನು ರಂಜಿಸಲು, ನಿಮ್ಮ ಶ್ರೀ ಕರ್ಣಗಳಿಗೆ ಕಾವ್ಯಾಮೃತ ಧಾರೆ ಹೊಯ್ಯಲು ಇಲ್ಲಿ ನಿಂತಿಲ್ಲ. ಅವರೆಲ್ಲರೂ ತಾವುಂಡ, ಉಣ್ಣುತ್ತಲೇ ಇರುವ ಹಳೇ ನೋವೊಂದನ್ನು ಹೊಸ ಸಂಗತಿಗಳೊಂದಿಗೆ ನಿಮ್ಮ ಆತ್ಮಕ್ಕೆ ದಾಟಿಸಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಶೋಷಣೆಯಿಂದ ಬಿಡುಗಡೆಗೊಂಡೆವೆಂಬ ಕಿಂಚಿತ್ ಸುಖ ಅನುಭವಿಸುವಾಗಲೇ ಭಾರತದ ದಲಿತ ಸಮೂಹದ ಮುಂದೆ ಆಧುನಿಕವು ತಂದೊಡ್ಡಿರುವ ಹೊಸ ಅಸ್ಪೃಶ್ಯತೆ ದೆವ್ವವಾಗಿ ನಿಂತಿದೆ. ಅದು ಸವರ್ಣೀಯರ ಅಸಹನೆ, ಪ್ರಭುತ್ವದ ಕುಜಾಣತನ, ಮುಂದುವರೆದ ದಲಿತರ ಕುಯುಕ್ತಿ ಈ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಆಯೆಲ್ಲವನ್ನೂ ಅರೋಲಿಯವರ ಮೇಲ್ಕಂಡ ಲಯಪ್ರತಿಮೆಗಳು ಪ್ರಶ್ನಿಸುತ್ತಿವೆ. ಈ ಅರಿವು ಓದುಗನಿಗೆ ಇರದ ಹೊರತು ಇಲ್ಲಿನ ಕವನಗಳು ಅವುಗಳ ಉದ್ದೇಶ ಸಾಧಿಸಲಾರವು, ಕೇವಲ ಲಯಬದ್ಧ ಹಾಡುಗಳಾಗಿ ಬಿಡುವುವು. ಮತ್ತೊಮ್ಮೆ ಕಿರುಚಿಕೊಳ್ಳುವ ಅನಿವಾರ್ಯತೆಗೆ ಕವಿಯನ್ನು ತಳ್ಳಿಬಿಡುವುವು. ಹಾಗಾಗಲಾರದೆಂಬ , ಆಗಕೂಡದೆಂಬ ನಿರೀಕ್ಷೆ ನನ್ನದು. ಹೊಸ ಓದಿಗೆ ಓದುಗರು ತಯ್ಯಾರಾಗಲೇ ಬೇಕಾದ ಕಾಲಘಟ್ಟವಿದು. ತಾಂತ್ರಿಕ ಕೈ ಚಳಕಗಳನ್ನು ಮಾತ್ರ ಬದಲಾಯಿಸಿಕೊಂಡು ಹಳೆಯ ವಸ್ತುಗಳನ್ನೇ ನಿಮ್ಮ ಮುಂದಿಡುವ ಅದದೇ ಸಾಹಿತ್ಯವನ್ನು ಎಷ್ಟು ದಿನ ಓದುತ್ತೀರಿ?

ಈ ಜನಪದ ಗೇಯ ಲಯದ ಹೊರತಾದ ಕವನಗಳೂ ಇಲ್ಲಿವೆ. ಅರೋಲಿ ಅವುಗಳಲ್ಲೂ ಯಶಸ್ವಿಯಾಗಿದ್ದಾರೆ. ಈ ಸಂಕಲನಕ್ಕೆ ಹೆಸರು ದಾನ ಮಾಡಿರುವ ಕೇಡುಗಾಲಕ್ಕಿಷ್ಟು , ನೀವು ಕುಣಿದಾಡುವಂಥಹ ಪ್ರತಿಮೆಗಳುಳ್ಳ ಇರುವೆ, ಕಾಮ್ರೆಡ್, ಬೆಂಗಳೂರನ್ನು ಸುಖಾಸುಮ್ಮನೆ ಬಯ್ಯುವ ಬೀಳಬಾರದ ಕನಸು ಇವು ಅದಕ್ಕೆ ಉದಾಹರಣೆ.

ಕೊನೆಯಲ್ಲಿ ಎರಡು ಕವನಗಳನ್ನಿಲ್ಲಿ ಪ್ರತ್ಯೇಕವಾಗಿ ಹೇಳುವೆ. ಅವು ನಾನು ಮೇಲೆ ಹೇಳಿದ ವಿವರಣೆಗಳೊಳಗೆ ಸೇರದಂಥ ಕವನಗಳು. ಒಂದು ಪಂಜರದೊಳಗೆ ಅಂಜಿದ ಕಂದ. ಇದನ್ನು ಕನ್ನಡದ ಪ್ರಾಥಮಿಕ ಶಾಲೆಯ ಪಠ್ಯದಲ್ಲಿ ಸೇರಿಸಲೇಬೇಕು. ಇಸಮ್ಮುಗಳ ಹೆಗಲ ಭಾರ, ವಿಷಾದದ ಕಾಲಿನ ಭಾರಗಳಿಲ್ಲದೆ ಮಗುವೊಂದಕ್ಕೆ ಸ್ಕೂಲಿನ ಶಿಕ್ಷಕರೊಬ್ಬರು ಕುಣಿಯುತ್ತ ಹೇಳಿಕೊಡಬಹುದಾದ ಹಾಡಿದು. ಇನ್ನೊಂದು ನುಡಿದೊಂದ ಪದದಲ್ಲಿ ನನ್ನೂರಿದೆ. ಇದು ಕನ್ನಡವನ್ನೂ ಕನ್ನಡನಾಡನ್ನೂ ವರ್ಣಿಸುವ ಕವನ. ಹಳೆ ಮೈಸೂರಿನ ಎಲ್ಲೋ ಒಂದುಕಡೆ ಕಾಣಬಹುದಾದ ಶ್ರೀಗಂಧ, ಕಾವೇರಮ್ಮ, ಚಿನ್ನ, ಶಂಕರರು, ಮಧ್ವರು, ಕದಂಬರು ,ಚಾಲುಕ್ಯರು ಇತ್ಯಾದಿಗಳನ್ನೇ ಕನ್ನಡದ ಅಸ್ಮಿತೆಯಾಗಿ ಎಷ್ಟು ದಿನ ಹಾಡೀರಿ? ಅದು ಅಖಿಲ ಕರ್ನಾಟಕದ ಸುಖವನ್ನು ದುಃಖವನ್ನೂ ಒಳಗೊಳ್ಳುತ್ತಿಲ್ಲ. ಎಷ್ಟು ಕನ್ನಡಂಗಳಿವೆಯೋ ಅಷ್ಟೂ ಕನ್ನಡ ಅಸ್ಮಿತೆಗಳಿವೆ. ಅಷ್ಟೂ ಹಾಡಾಗಿ ಬರಬೇಕು. ಇಲ್ಲಿ ಅರೋಲಿ ಹೇಳುವ ಬೆಂಡೆ ಬದನೆಯ ಗೊಜ್ಜು ನವಣೆ ನುಚ್ಚೂ ನಮ್ಮದೇ ! ಸವದತ್ತಿ ಚಂದ್ರಗುತ್ತಿ, ದುರುಗ ಮುರುಗಿ, ಕಲ್ಲಾನೆ ನವಾಝ, ಸಾಕವ್ವ ಗಂಗಜ್ಜಿ ಮೂಕಜ್ಜಿ ಎಲ್ಲರೂ ನಮ್ಮವರೇ, ಅವರೆಲ್ಲರೂ ಕನ್ನಡದ ಹಾಡಲ್ಲಿ ಕೋದಲ್ಪಡದೆ ಅದು ಹೇಗೆ ಕನ್ನಡದ ಹಾಡು ಪೂರ್ಣಗೊಳ್ಳುತ್ತದೆ?

ಅರೋಲಿಯೆಂಬ ಕನ್ನಡದ ಹೊಸ ದೇಸೀ ಕಾವ್ಯ ಭರವಸೆಗೆ ಧನ್ಯವಾದಗಳನ್ನು ಹೇಳುತ್ತ, ಶುಭ ಕೋರುತ್ತೇನೆ. ಅರೋಲಿಯವರು ಈಗಾಗಲೇ ಚೆನ್ನಾಗಿ ಗುರುತಿಸಲ್ಪಟ್ಟ ಕವಿ, ಅವರ ಮುನ್ನಿನ ಕೃತಿಗಳ ಮೂಲಕ ತಮ್ಮದೇ ಓದುಗ ವಲಯವನ್ನು ಹೊಂದಿದ್ದಾರೆ. ನನ್ನ ಈ ಮಾತುಗಳು ಆ ವಲಯವನ್ನು ಹಿಗ್ಗಿಸಬಹುದಾದರೆ ನನಗೆ ಖುಷಿ.

ಎಂದಾದರು ಒಂದು ದಿನ…

ಅಲುಗದ ನನ್ನ ಕಣ್ಣರೆಪ್ಪೆಯ ಮೇಲೆ
ನೊಣಗಳು ವಿಶ್ರಾಂತಿಸಿದ ದಿನ
ಓಣಿ ಲೈಟಿನ ಕಂಬಗಳೆಲ್ಲ
ಬಿದ್ದ ಮಳೆ ಸದ್ದಿಗೆ ನೆಲಕ್ಕೆ ಒರಗಿ
ತಂತಿ ಮೇಲೆ ಕುಂತ ಕಾಗೆ ನಿನ್ನತ್ತ ತಿರುಗಿ
ಅಂಗಳದಲ್ಲಿ ರೆಕ್ಕೆ ಕಳಚಿಟ್ಟ ಇರುವೆ
ಪುತಪುತನೆ ಸಾಲುಗಟ್ಟಿ ಪಕ್ಕದ ಮನೆ ಚಿಮಣಿಗೆ
ಗುಳೆ ನಡೆದ ದಿನ
ಕಾಲ್ನಡಿಗೆಯಲಿ ಹೊರಡುವುದೆಂದರೆ
ಅವಮಾನ ಅಂದುಕೊಳ್ಳದಿರಲು ಕಲಿಸು ಮಕ್ಕಳಿಗೆ
ಕಾಲ ದಯಪಾಲಿಸದ ಕರುಣೆಗಾಗಿ
ಬರಿಗಾಲಲ್ಲಿ ಎಂದೂ ಕಾಯದಿರಲು ಕಲಿಸವರಿಗೆ

ಅಲೆದಲೆದು ಹೊಲ ಒಡ್ಡು ಕಾಡುಮುಳ್ಳಿಗೆ
ಇಲ್ಲಾ ಪಟ್ಟಣದ ಕಾಂಪೋಡಿನ ಕಬ್ಬಿಣದ ಬೇಲಿಗೆ
ತರುಚಿ ನೆತ್ತರು ಜಿನುಗಿದ ಆ ಡುಬ್ಬದ ಚರ್ಮದಿ
ಅವರಿಗೆ ಮೆಟ್ಟು ಮಾಡಿಕೊಟ್ಟವರ ಋಣ
ಶೋರೂಮು ಸೇರಿದ ಗುಟ್ಟು ತಿಳಿಸು
ಹಾಗೆ ನೀರೆಂಬುದು ಬಾಟಲಿಯಲಿ ಹುಟ್ಟಿದ
ಸರಕು ಅಲ್ಲ ಎಂಬುದನು

ನೆಲ ಅಗಿದು ಬೀಜ ಹೂಳಿದರೆ
ಚಿಗುರೊಡೆಯಲು ಬೇಕಾಗುವಷ್ಟು ದಾನವನ್ನು
ಹುಂಡಿಯಲಿ ಹೂತಿಟ್ಟ ಚುಕ್ಕಿ ಅಂಗಳಕೆಸೆದರೆ
ಆಕಾಶ ತಲುಪಲು ಬೇಕಾಗುವಷ್ಟು ನಿಧಾನವನು
ಪ್ರೇಮಿಸಲು ಪಡೆಯಬೇಕಾದ ಒಂಟಿತನವನು
ಸಂಪಾದಿಸಲು ಅಥವಾ ಕರಗುವ ನೆರಳನು
ಬೊಗಸೆಗೆ ಪಡೆಯುವುದನು ಕಲಿಸು

ತಿಳಿಸು ಅವರಿಗೆ ಇದನ್ನೂ
ಇಲ್ಲಿ ಇರುವೆ ರುಂಡಗಳನು
ಅರ್ಪಿಸಿಕೊಳ್ಳಬಹುದಾದ ದೇವನೊಬ್ಬ ಹುಟ್ಟಿದ್ದೆ ಆದರೆ
ನೇಗಿಲು, ಎತ್ತಿನಬಂಡಿ, ಟೈರುಗಾಲಿ
ದಾರಿ ತುಳಿಯುವ ಮುನ್ನ
ಕಣ್ಣಲ್ಲಿ ಮಣ್ಣೆರೆಚಿದ ಗಾಳಿ, ಕುಣಿದು ಕುಣಿಯಾದವರ
ಮತ್ತು ಕುಣಿಗಳ ಮೇಲಾದ ದಾಳಿ
ಅವನ ವಂಶಜರ ಪಿತೂರಿಯೆಂದು
ನಾವದರ ಪರಿಣಾಮವೆಂಬುದನು ಎಂದಾದರು ಒಂದು ದಿನ!