ಗೊತ್ತು ನನಗೆ

ಉದುರುವ ಎಲೆಗಳ ಲೆಕ್ಕ ಗಾಳಿ ಇಟ್ಟುಕೊಳ್ಳುವುದೆ?
ಬೀಸುವುದಷ್ಟೇ ಗೊತ್ತು ಗಾಳಿಗೆ
ಬದುಕ ಲೆಕ್ಕಾಚಾರಗಳಲ್ಲಿ ನನ್ನನ್ನು ಕಟ್ಟದಿರು
ತಪ್ಪಿಸಿಕೊಳ್ಳುವುದು ಗೊತ್ತು ನನಗೆ.

ನಡೆಯುವ ದಾರಿಯ ಮೇಲೆಯೇ
ಒಲವಾಗಿದೆ ಈಗ
ಮನೆಯ ನೆನಪಾಗುವುದಾದರೆ
ಹಿಂದಿರುಗಿಬಿಡು.

ಮೊರೆಯುವ ಅಲೆಗಳ ಕೋಲಾಹಲ ತೀರಕ್ಕೆ ತಾಕುವುದೆ?
ನೋಡುವುದಷ್ಟೇ ಗೊತ್ತು ತೀರಕ್ಕೆ
ಇಲ್ಲದ ದ್ವಂದ್ವಗಳಲ್ಲಿ ನನ್ನನ್ನು ಸಿಲುಕಿಸದಿರು
ಕಲ್ಲಾಗಿರಲು ಗೊತ್ತು ನನಗೆ.

ಬದುಕ ಆಳದಲ್ಲಿ ಮುಳುಗುವ
ಹುಚ್ಚು ಅತಿಯಾಗಿದೆ
ತೇಲುವ ಆಸೆಯಿನ್ನೂ ಇದ್ದರೆ
ಮರೆತುಬಿಡು.

ಸುಡುವ ರೆಕ್ಕೆಗಳ ನೆನಪು ದೀಪಕ್ಕೆ ಕಾಡುವುದೆ?
ಉರಿಯುವುದಷ್ಟೇ ಗೊತ್ತು ದೀಪಕ್ಕೆ
ನೆನಪ ಬಾಣಗಳಲ್ಲಿ ನನ್ನನ್ನು ಇರಿಯದಿರು
ಮರೆತುಬಿಡುವುದೂ ಗೊತ್ತು ನನಗೆ.

ಪ್ರೇಮದಲ್ಲಿ ಉರಿದುಹೋಗುವ
ಖಯಾಲಿ ಶುರುವಾಗಿದೆ
ಬದುಕು ದೊಡ್ಡದು ಅನ್ನಿಸಿದರೆ
ಹೊರಟುಬಿಡು.