ಹೊಸಾ ಸೋಬಾನ

ಹಾದಿಗಳು ಹಲವಿದ್ದುವು
ಉರಿದೆ ಮೆರೆದೆ
ಮುಂದುವರೆದೂ ಹರಿದೆ
ಹಾದಿಗಳು ಕೆಲವಾದುವು
ಪರವಾಯಿಲ್ಲ ಕೊಂಚ
ನಿಧಾನಿಸಿದರೂ
ಚಂದವೆನಿಸಿದ ಹೆದ್ದಾರೀಲಿ
ಕಣ್ಮುಚ್ಚಿ ಸಾಗಿದೆ
ಮತ್ತೂ ಮುಂದೆ
ಹಾದಿ ಎರಡೇ
ಅಥವಾ ಕವಲೊಡೆದವೇ…?
ಯಾರಿಗೊತ್ತು
ಹಣೆಯಲ್ಲಿ ಹಣೆಬರಹ
ಅಳಿಸಿ ಬರೆದ ದಮ್ಮಿತ್ತೊ
ಅಹಮ್ಮಿತ್ತೊ
ಆವೊಂದು ದಾರಿಯಲಿ
ಮುಂದುವರೆದದ್ಯಾಕೇಂತ ಗೊತ್ತಿಲ್ಲ ಇಂದಿಗೂ
ಬಂತೊಂದು ನಿಲುವು
ಮುಂದೆಲ್ಲ ಮಂಜು
ಬಿಳೀ ಮೋಡಗಳು
ಹಾದಿ ಕಾಣುತ್ತಿಲ್ಲ
ಇದಕಿರಬಹುದೇ
ರೇಶಿಮೆ ಹುಳು
ಸುತ್ತಿ ತನ್ನ ಸುತ್ತ
ತನ್ನದೇ ನಿಯಮಗಳ
ದಾರದ ಗೂಡು
ಬಂಧಿಯಾಗೋದು
ರೆಕ್ಕೆ ಹುಟ್ಟಿಸಿಕೊಳ್ಳೋದು
ಕತ್ತಲಲ್ಲಿ ಕಣ್ಮುಚ್ಚಿ …. ಒಂದಿನ
ಗೂಡ ಕೊರೆದು
ನಭಕ್ಕೆ ಹಾರಿ
ಹಾದಿಗಳತ್ಯವಿರದ
ವಿಸ್ತಾರವನ್ನ ಬಳಸೋದು

ರಾಣಿ ಮತ್ತು ಒಡಲ ಹಾಡು

-1-

ರಾಣಿ ಮತ್ತು ರಮೇಶ
ಅಪ್ಪಟ ಹೃದಯಶೀಲರು
ಮತ್ತು ಭಯಂಕರ
ಬಚ್ಚಲು ಹಾಡುಗಾರ್ರು
ಹುಟ್ಟಿದ ಆರೇಳು ವರ್ಷಗಳಾಚೆ
ಎಂದು ಜನರಿಗೆ ಬಿಟ್ಕೊಟ್ಟಿಲ್ಲ ಅವರು
ತಮ್ಮೊಳಗಿನ ಹಂಸಧ್ವನಿಯ ಗುಟ್ಟು
ಹೀಗೆ ದಿನಗಳೆಂದೊಂದಿಷ್ಟು
ವಸಂತಗಳಾಚೆ ಬೆಳೆದು ಸಜ್ಜನರಾದ್ರು
ಏಕಾಂತದಲ್ಲಾಗೀಗ ಭೂತಾಕಾರದ
ಕ್ವಶ್ಚನ್ನು ಎದ್ದು ಸತಾಯಿಸ್ತಿತ್ತು
ಮದ್ವೆ ಬೇಕೋ ಬ್ಯಾಡ್ವೊ
ಬಗೆಹರೀದೇ ತಗ ನೆಕ್ಷ್ಟು…
ಆಗೇಬಿಟ್ರೆ ಅರೇಂಜೋ
ಲವ್ವೊ
ಹಂದರದಲ್ಲೇ ಎಲ್ಲ ಮಿಕ್ಸಾಗಿ ಆಯ್ತೊಂದು
ಅಂತೂ ಒಂದು ಮದುವೆ
ಮಗು ಬೇಕೋ ಬ್ಯಾಟ್ವೊ
ಬೇಕೇ ಬೇಕೋ
ಈಗ ಬ್ಯಾಡ್ವೊ
ಅಂದಾಜಾಗೋದ್ರೊಳ್ಗೆ
ಅದೂ ಒಂದಾಯ್ತು
ಯಾಕೋ ಮುದ್ದು ಗಿಣಿಯಂಥ ಮಗಳಿಗೆ
ಮಾತಾಡುವ ಇಂಟ್ರಸ್ಟೇ ಕಡಿಮೆ
ಅಜ್ಜಅಜ್ಜಿ ಹರಕೆ ಹೊತ್ತು
ಹೊರಟರು ತೀರ್ಥಯಾತ್ರೆಗೆ
ರಾಣಿ ರಮೇಶರ ಹೊಂದಾಣಿಕೆ ಜಾಸ್ತೀನೇ ಇತ್ತಲ್ಲ
ಅಡ್ಜಸ್ಟ್ ಮೆಂಟು
ಜಾಸ್ತಿಯಾದ್ರೊಂದು ಕಷ್ಟ ನೋಡಿ
ಮಾತೇ ಕಡಿಮೆಯಾಗಿಬಿಡಬಹ್ದು
ಪಕ್ಕದ ಗೋಡೆಗಳು
ಮಾತಾಡಿಕೊಂಡ್ವು ಸಂಜೇ
ವಾಕಿಂಗಿನ ಸಮಯದಲಿ

-2-

ಹಾಡಿಲ್ಲ ಅವರ ಬಚ್ಚಲಿಂದ
ಈಗೊಂದ್ಮೂರು ವರ್ಷಗಳಿಂದ
ಶೇಡಿಯಂತೂ ಮೊದಲೇ ಹೋಗಿದೆ ಹಾರಿ
ಸಿಟಿ ಗಾಳಿಯಬ್ಬರ
ಹಳ್ಳಿಯೂರ ಕದತಟ್ಟಿ
ಸದಾ ಚೊಕ್ಕ ಮುಂಬಾಗಿಲು
ಇಂಥಾ ಪರಿಯ ಸಾದಾ ಸಂಸಾರದೊಳ ಬಂದ
ಪುಚ್ಚ ಗಿಳಿಯಂಥ ಮಗಳಿಗೆ
ಹಾಡು ಬೇಕೇ ಬೇಕು
ಮೂರೊತ್ತೂ
ರಮೇಶ ಮಾತಾದ ಈಗ
ಅಪ್ಪ-ಅಮ್ಮನೆದುರು
ಆಲ್ ಮೊಸ್ಟು ಮೌಸಿಯೇ ಆದವ
ನನ ಲೈಫು ಮುಗಿದೇಹೋಯ್ತು
ಬರೀ ಬಾತ್ ರೂಮು ಸಿಂಗರ್ರಾಗಿ
ನೀ ದೋಡ್ಡ ಸ್ಟಾರಾಗಿ ನಮ್ಮನೆ
ಟೀವೀಲಿ ಬಾ ಮಗಾ…!

“ಗಂಡನ ಮನೆಗೋಗುವ ಮೊದ್ಲೇ
ಸಾಧನೆ ಮಾಡವಾ..!’
ಅಡುಗೆ ಮನೆಯಿಂದ್ಲೇ ತಿವಿದಳು ರಾಣಿ

-3-

ಹಾಡು ಹರಿದವು
ಆಷಾಢದ ಮಳೆಯಂತೆ
ಗಿಣಿಮುದ್ದಿಗಾಗಿ
ಹುಯ್ಯೊ ಹುಯ್ಯೊ ಮಳೆರಾಯಾ
ತಿಂಡಿಬೇಕೆ ನಾಯಿಮರಿ
ಓಡಿಬಂದ್ವು ತೋಳ ಕುರಿ
ಮರಳಿಬಂತು ಹುಲಿಗವಿಗ್ಹೋದ
ಗೋವು ಪುಣ್ಯಕೋಟಿ

ಗಿಣಿಯ ಅಪ್ಪ ಕಣ್ಮುಚ್ಚಿ ಹಾಡೇ
ಹಾಡಿದ ರಾತ್ರಿ ಒಂದರ ತಂಕ
ಯಾತ್ರೆಗೋದ ಅಪ್ಪ-ಅಮ್ಮನೆನಸುತ್ತ ಆಗೀಗೆ
ಕುಡಿನೋಟ ಬೀರುತ್ತ ರಾಣಿಯೆಡೆಗೆ
ಯಪ್ಪಾ ಗಿಣಿಯಪ್ಪಾ
ನೀ ಬಾತ್ ರೂಂನಲ್ಲಿ ಹಾಡಿದ್ದಕ್ಕೆ
ಉಳೀತಪ್ಪ ಬಚಾವಾಯ್ತಪ್ಪಾ
ಇಡೀ ಲೋಕ
ಸೊಟ್ಟಗಂದಳು ರಾಣಿ
ನಿಂದೆಂತ ಸೆಪರೇಟು
ಇದೆಯ ಟ್ಯಾಲೆಂಟು?
ನಿನ ದಾಸರ ಪದಕ್ಕೆ ವಿರಕ್ತಿ ಹುಟ್ಟಿ
ನಾನೂ ಸಂಸಾರ ಬಿಟ್ಟು ಆದೇನು ಸಂನ್ಯಾಸಿ

ಬದಲಾಯ್ತಲ್ಲ ರಮೇಶನ ಶೃತಿ
ಕಿರ್ಕಿರಿಯಾಗಿ ಗಿಣಿಗೆ
ಫಟ್ಟನೇ ಪೆಟ್ಟಿಟ್ಟು ಅಪ್ಪನ ಮೊಗಕೆ
ಅಂತು ಹಾಡು, ಹಾಡು ಅಪ್ಪಾ-!

ಧನ್ಯವಾದ ಅಪ್ಪ
ಇಗ, ಅದೇ
ಮಗಳು ಮಾತಾದಳು
ಮಾತಾಡಿದಳು
ನನ್ನ ಹಾಡಿಗೆ!

ಎಂತ ಇವನು
ಅಲ್ಲಲ್ಲ ಅದು ನೀ ಸುಮ್ಮನಾಗಿದ್ದಕ್ಕೆ!
ಎಂತ ಇವಳು
ಶುರುವಾಯ್ತೊಂದು ಹೊಸರಾಗ
ಜುಗಲಬಂದಿ
ಧನ್ಯವಾಯಿತು ಅಮಾವಾಸ್ಯೆಯ ತಡರಾತ್ರಿ
ಇವರ ಕಣ್ಣಲ್ಲಿಳಿದ ಚಂದ್ರಬಿಂಬ ಕಂಡು.

ಡಾ. ರಶ್ಮಿ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕಬ್ಬಗಾರದವರು
ಮಾನವ ಶಾಸ್ತ್ರಜ್ಞರು, ಆಪ್ತಸಮಾಲೋಚಕರು ಹಾಗೂ ಸಂಶೋಧಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ
“ಬುಡಕಟ್ಟು ಜನಾಂಗದ ಮನೋವೈಜ್ಞಾನಿಕ ಪರಂಪರೆ”ಯ ಕುರಿತು ಪಿ.ಎಚ್‌.ಡಿ ಮಾಡಿದ್ದಾರೆ.
ಲೆಕ್ಕಕ್ಕೆ ಸಿಗದವರು ಇವರ ಪ್ರಕಟಿತ ಕವನ ಸಂಕಲನ