ಎಡಹೊತ್ತು
ಬಯ್ಯುತ್ತ, ಗೊಣಗುತ್ತ
ವಾರಕ್ಕೊಮ್ಮೆ ಗುಡಿಸುತ್ತಾಳೆ
ಇವಳು
ಮೆತ್ತಿಯ ಮೇಲೆ
ಕಾಗದದ ಚೂರು, ಅಡಿಕೆ ಪುಡಿ,
ಎಲೆ ಚೊಟ್ಟು ಎಲ್ಲ
ನನ್ನ ಮಂಚದ ಕೆಳಗೆ
ಪೈಪ್ನ್ನು ಹಿಡಿದು
ಮೇಲೆ ಬಂದ ಅಮೃತ ಬಳ್ಳಿ
ವಯರಿನಲ್ಲಿ ಹರಿದಾಡಿದ
ಅದರ ಎಲೆಗಳು
ಇಣುಕಿ ನೋಡುತ್ತಿವೆ ನಮ್ಮನ್ನು
ಇವಳಿಗೆ ಮೈಯೆಲ್ಲ ಉರಿ
ಎಲ್ಲೆಲ್ಲೂ ಈ ಸುಟ್ ಬಳ್ಳಿ ಎಂದು!
ನಂತರ ಒರೆಸುತ್ತಾಳೆ ನೆಲವನ್ನು
ನನ್ನನ್ನೂ
ಅದು ಹೊಳೆಯುತ್ತದೆ
ಕಸವಾಗುತ್ತೇನೆ ನಾನು
ಕಿಡಕಿಗಳನ್ನು ತೆರೆದು
ಗಾಳಿಯಾಡಿಸುತ್ತಾಳೆ
ಹೊಸ ಗಾಳಿ
ಕಾಯುತ್ತಾ ನಿಂತಿದ್ದಂತೆ
ಒಳ ಬರುತ್ತದೆ
ಹಳೆಯ ವಾಸನೆಯಂತೆ
ನಾವಿದ್ದೇವೆ
ಹೊರಗೆ
ಮಳೆಯಲ್ಲಿ ಒದ್ದೆಯಾಗುತ್ತ
ಬಿಸಿಲಿನಲ್ಲಿ ಒಣಗುತ್ತಿರುವ
ದಿನ
ಒಂದು ನೀರವ ಮೌನ
ಈ ಎಡಹೊತ್ತಿನಲ್ಲಿ
ಎಲ್ಲೋ ಕೂಗುವ ಹಕ್ಕಿ
ದನಿಯನ್ನು ಹೆಕ್ಕುವುದು ಕಷ್ಟ.
ಚಿಟ್ಟೆ
ಅವಳ ಕೋಮಲ
ಪಾದದ ಮೇಲೆ
ಚಿಟ್ಟೆ ಬಂದು
ಕೂತಿದೆ
ಎಲೆಯಿರದ ಮರ
ಎಂದುಕೊಂಡಿರಬೇಕು
ಕಾಲನ್ನು!
ಮೇಲೆ ನೋಡಿದರೆ
ಇಳಿದಿರುವ ರೆಂಬೆ
ಕೈಗಳು
ಪುಟ್ಟ ಪರ್ವತಗಳ
ಆಚೆ
ಅರಳಿರುವ ಹೂ,
ಹೂವಿನಲ್ಲಿ ಹೂ
ಕಣ್ಣು!
ಸಂಪಿಗೆ, ಕನ್ನಡಿ, ತೊಂಡೆ….
ಮತ್ತೂ
ಮೇಲೆ
ನೀಟಾಗಿ ಕತ್ತರಿಸಿದ
ಕತ್ತಲು
ಕೂದಲು
ಹೀಗೆ, ನೋಡು
ನೋಡುತ್ತಿರುವಾಗಲೇ
ಅವಳು
ಚಿಟ್ಟೆ
ಹಾರಿಹೋದವು
ಆಕಾಶದಲ್ಲಿ ಕರಗಿ.
ಕತ್ತಲೆಯಲ್ಲಿ ಕನಸುಗಳು
ನೊರೆನೊರೆಯಾಗಿ ರಾತ್ರಿ
ದಡವ ಬಡಿಯುತ್ತಿದೆ
ಮೆತ್ತಿದ ಮಣ್ಣು ಧೂಳು
ಇಳಿದ ಮಳೆಯಲ್ಲಿ
ಹೊಳೆಯ ಸೇರಿವೆ
ಮೋಡ ಗುಡುಗು
ಮಿಂಚು
ಹೊಂಚುಹಾಕಿದೆ
ಸಿಡಿಲು ಬಿದ್ದಿದೆ
ಎಂಬ ಸುದ್ದಿ
ಹರಿವ ಹೊಳೆ
ಬೀಳುವ ಮಳೆ
ಬೆಳೆವ ಮರಕ್ಕೆ
ಬೇಲಿ ಇಲ್ಲ…..
ಇಲ್ಲ ಇಲ್ಲ ಇಲ್ಲ
ಇಲ್ಲಿ ಎಲ್ಲ.
(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)
ಕವಿಗಳು, ಲೇಖಕರು ಮತ್ತು ಸಿರಸಿಯ ಎಂ ಎಂ ಕಾಲೇಜಿನಲ್ಲಿ ಉಪನ್ಯಾಸಕರು.