ರಿಲ್ಕೆ ಹಲವು ಬಾರಿ ರಷ್ಯಾದಲ್ಲಿ ತಂಗಿದ್ದವನು. ವಿಶೇಷವಾಗಿ ದೋಸ್ಟೊಯೆವ್ಸ್ಕಿಯ ಕಾದಂಬರಿಗಳ ಪರಿಚಯವಾದುದು ಅವನ ಸಾಹಿತ್ಯಕ ಬೆಳವಣಿಗೆಯಲ್ಲಿ ಪ್ರಬಲವಾದ ಅಂಶ. ಅವನ ಬರಹಗಳು ಗಾಢವಾಗಲು ಇದು ನೆರವಾಯಿತು. ಈ ಪ್ರಭಾವವಿಲ್ಲದೆ ರಿಲ್ಕೆಯ ಸೃಷ್ಟಿಗಳು ಅನಗತ್ಯವಾದ ಭವ್ಯ ಸೌಂದರ್ಯದಲ್ಲಿ ಕೊನೆಗೊಂಡಿರಬಹುದಿತ್ತು. ವಿಶಾಲವಾಗಿ ಹೇಳುವುದಾದರೆ, ರಷ್ಯಾದ ಕಲೆ ಮತ್ತು ಸಾಹಿತ್ಯವು ನೈತಿಕ ಪ್ರಚೋದನೆಯಿಂದ ಹುಟ್ಟಿಕೊಂಡಿದೆ ಮತ್ತು ಅದು ಅವುಗಳ ಉದ್ದೇಶದ ಶಕ್ತಿ ಮತ್ತು ರೈಸಾನ್ ಡಿ’ಎಟರ್ ಅಥವಾ ವಸ್ತುವಿನ ಇರುವಿಕೆಯ ಗುರಿ ಎಂದು ವಿವರಿಸಬಹುದು. ಇಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಕಲೆ ಮತ್ತು ಸಾಹಿತ್ಯಕ್ಕೆ ವಿರುದ್ಧವಾಗಿ ಸಾಮಾಜಿಕ-ರಾಜಕೀಯ ಸುಧಾರಣೆಯತ್ತ ಒಲವು ಸ್ಪಷ್ಟವಾಗಿವೆ.
ಆರ್. ವಿಜಯರಾಘವನ್ ಲೇಖನ

 

ಪ್ರತಿ ಯುಗದ ಅತಿ ದೊಡ ಸಮಸ್ಯೆ ಎಂದರೆ ಅದರ ಸಂಪೂರ್ಣ ಕಲಾತ್ಮಕ ಅಭಿವ್ಯಕ್ತಿಯನ್ನು ಕಂಡುಕೊಳ್ಳುವುದು ಹೇಗೆ ಎನ್ನುವುದು. ಈ ಸಮಸ್ಯೆಯ ಮುಂದೆ ಇತರ ಎಲ್ಲವು ಎರಡನೆಯ ಅಥವಾ ನಂತರದ ಪ್ರಾಮುಖ್ಯತೆಯನ್ನು ಹೊಂದುತ್ತವೆ. ಇತಿಹಾಸವು ಭೌತಿಕ ಮಾರ್ಗವನ್ನು ವ್ಯಾಖ್ಯಾನಿಸಿ ನಿರ್ದೇಶಿಸುತ್ತದೆ. ವಿಜ್ಞಾನವು ಅದರ ಗುರಿಗಳ ಸಾಧನೆಗೆ ಸಹಕರಿಸುತ್ತದೆ. ಆದರೆ ಕಲೆ ಮಾತ್ರ ಅದರ ಕಾಲಮಾನಕ್ಕೆ ಅದರದೇ ಆಧ್ಯಾತ್ಮಿಕ ಪರಿಭಾಷೆಯನ್ನು, ಅಂತಿಮ ಮತ್ತು ಶಾಶ್ವತ ಅಭಿವ್ಯಕ್ತಿಯನ್ನು ನೀಡುತ್ತದೆ.

ಕಲೆಯ ಪ್ರಕ್ರಿಯೆಯು ಒಂದು ಕಡೆ ಐಂದ್ರಿಯಿಕವಾಗಿದೆ. ಈ ಪರಿಕಲ್ಪನೆಯು ತನಗೆ ಆಧಾರವಾಗಿ ಇಂದ್ರಿಯಗಳ ಉತ್ಕೃಷ್ಟ ಸಂಯೋಜನೆಯನ್ನು ಹೊಂದಿದೆ. ಮತ್ತೊಂದೆಡೆ ಇದು ತೀವ್ರವಾಗಿ ವೈಜ್ಞಾನಿಕವಾಗಿದೆ. ಸೃಷ್ಟಿಯ ಕಲಾತ್ಮಕ ಮೌಲ್ಯವು ಕರಕುಶಲತೆ, ಬಳಸುವ ಉಪಕರಣದ ಮೇಲರಿವು ಮತ್ತು ತಂತ್ರ – ಇವನ್ನು ಅವಲಂಬಿಸಿರುತ್ತದೆ. ಕಲೆಯು ತನ್ನ ಏಕೈಕ ಹಾಗೂ ಶ್ರೇಷ್ಠ ದ್ರವ್ಯಾಶಯವಾದ ಪ್ರಕೃತಿಯಂತೆ, ಹಿಂದಿನ ಮತ್ತು ಮುಂದಿನ ಎಲ್ಲ ಕಾಲದಲ್ಲೂ ನಿರ್ಮೂಲನೆ ಮತ್ತು ಉಳಿಕೆಯ ಆಯ್ಕೆಗಾಗಿ ಎಂದೆಂದಿಗೂ ಶ್ರಮಿಸುತ್ತಿರುತ್ತದೆ. ಇದು ತನ್ನ ಕಾನೂನುಗಳನ್ನು ಕಾರ್ಯಕ್ಕೆ ಅನ್ವಯಿಸುವಲ್ಲಿ ಕಠೋರವೂ, ನಿಷ್ಕರುಣಿಯೂ ಆಗಿದೆ. ಅಲ್ಲದೆ ತನ್ನದೇ ಆಗಿರದ ಉದ್ದೇಶಗಳಿಗೆ ಶ್ರಮಿಸುವಂತೆ ಮಾಡುವ ಮನವಿಗಳಿಗೆ ಪ್ರಜ್ಞಾಪೂರ್ವಕವಾಗಿ ಕಿವುಡಾಗಿದೆ. ಇದರ ಉದ್ದೇಶವು ಜೀವನದ ಸಂಕೇತವಾಗಿದೆ. ಅದರ ಗರ್ಭದಲ್ಲಿ ವಿಶಾಲವಾದ ಸಾಧನೆಯ ಮೌನ, ಪ್ರಶಾಂತತೆ, ಅಂತಿಮ ಮತ್ತು ದುಸ್ತರ ಏಕಾಂತ ಆಳುತ್ತಲಿವೆ. ಇದು ಮಾನವನಿಂದ ರಚಿಸಲಾದ ಎಲ್ಲ ಶ್ರೇಷ್ಠ ವಸ್ತುಗಳ ಮೌಲ್ಯ ನಿಷ್ಕರ್ಷೆಯ ಅಂತಿಮ ಮಾನದಂಡವಾಗಿದೆ. ಕಾವ್ಯವನ್ನು ಕುರಿತು ಮಾತನಾಡುವುದು ಎಂದರೆ ಜೀವನವನ್ನು ಅಳೆಯುವ ಅತ್ಯಂತ ಜಟಿಲವಾದ, ಸೂಕ್ಷ್ಮ ಮತ್ತು ನಿಖರವಾದ ಸಾಧನವನ್ನು ಬಳಸುವುದೇ ಆಗಿದೆ.

ಕಾವ್ಯವು ವಾಸ್ತವದ ರಸರೂಪವಾಗಿದೆ. ಅದು ಧ್ವನಿ, ರೂಪ ಮತ್ತು ಬಣ್ಣಗಳಿಗೆ ತೀವ್ರವಾಗಿ ಸ್ಪಂದಿಸುವ ಸೂಕ್ಷ್ಮ ಗ್ರಹಿಕೆಗೆ ಒಳಪಟ್ಟಿದೆಯಲ್ಲದೆ ಬದುಕಿನ ವಿದ್ಯಮಾನಗಳಿಗೆ ಮೌಖಿಕ ಸಂಕೇತಗಳನ್ನು ರೂಪಿಸುವ ಶಕ್ತಿಯನ್ನು ಪಡೆದ ಪ್ರತಿಕ್ರಿಯೆಯಾಗಿದೆ. ಕವಿಯು ಚಿತ್ರದಲ್ಲಿ ಮತ್ತು ಮನೋಭಾವದಲ್ಲಿ ಅಶಾಶ್ವತ ಮೌಲ್ಯಗಳಾಗಿ ಹೊರಹೊಮ್ಮುವವನ್ನು ಎಂತೋ ಅಂತೆಯೇ ಅಲ್ಪಕಾಲಿಕವಾಗಿ ಕಾಣುವದನ್ನು ಕೂಡ ಶಾಶ್ವತವೆಂಬಂತೆ ರೂಪಿಸುತ್ತಾನೆ. ಸೃಷ್ಟಿಯ ಈ ಕ್ರಿಯೆಯಲ್ಲಿ ಅವನು ಅನಂತತೆಗೆ ಪೂರಕವಾಗಿ ದುಡಿಯುತ್ತಾನೆ.

ಕಾವ್ಯ, ವಿಶೇಷವಾಗಿ ಭಾವಗೀತಾತ್ಮಕ ಕಾವ್ಯಗಳನ್ನು ಸರ್ವೋಚ್ಚ ಕಲೆಯನ್ನಾಗಿ ಅಂಗೀಕರಿಸಬೇಕು. ಇದು ಇತರ ಕಲೆಗಳಾದ ಸಂಗೀತ, ಕಲಾಸ್ಥಿತಿಸ್ಥಾಪಕತೆ – ಎಲಾಸ್ಟಿಸಿಟಿ ಆಫ್ ಆರ್ಟ್- ಮತ್ತು ಚಿತ್ರಾತ್ಮಕತೆಯ ಸಂಗಮದತ್ತ ಚಲಿಸುತ್ತದೆ.

ಯುರೋಪಿನ ಅತ್ಯಂತ ಸಮಕಾಲೀನ ಕವಿಗಳು, ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಮನೋಧರ್ಮಕ್ಕೆ ಅನುಗುಣವಾಗಿ, ನಮ್ಮ ಕಾಲದ ಆಧ್ಯಾತ್ಮಿಕತೆಯ ಸಾರ, ಅದರ ಭಯ ಮತ್ತು ವೈಫಲ್ಯಗಳು, ಅದರ ಭರವಸೆಗಳು ಮತ್ತು ಉನ್ನತ ಸಾಧನೆಗಳನ್ನು ತಮ್ಮ ಕೃತಿಯಲ್ಲಿ ಪ್ರತಿಬಿಂಬಿಸಿದ್ದಾರೆ. ಮಾಟರ್ಲಿಂಕ್ -Maeterlinck-, ತನ್ನ ಎಲ್ಲವನ್ನೂ ಪರಿತ್ಯಜಿಸುವ ಮನಸ್ಥಿತಿ ಮತ್ತು ಮಂದ ಸಂಜೆಬೆಳಕಿನ ವ್ಯೂಹದ ಒಳಗೆ ಸರಿದು ಸ್ವಯಂ ನಿವೃತ್ತಿಯಾಗುವುದರೊಂದಿಗೆ ಅವನ ನೆರಳಿನ ಆಕೃತಿಗಳು ಶಬ್ದವಿಲ್ಲದೆ ವಿಧಿಯ ಹೊರೆಯ ಮಬ್ಬನ್ನು ಹೊತ್ತ ಫ್ಯಾಂಟಮ್‌ ಗಳಂತೆ ಚಲಿಸುತ್ತವೆ.

ಜರ್ಮನ್ ಕವಿ ಮತ್ತು ಬೈಬಲ್‌ ನ ಆರಾಧಕ ಡಿಹ್ಮೆಲ್ (Richard Fedor Leopold Dehmel 18 November 1863 – 8 February 1920) ಒಬ್ಬ ಕಠೋರ ನೇಮಿ ಹಾಗೂ ದೈವಾರಾಧಕ. ಭೌತಿಕ ಮತ್ತು ಅನುಭವವೇದ್ಯವಾದ ವಿಚಾರಗಳ ಕುರಿತಂತೆ ಸರ್ವಸ್ವವೂ ದೇವನದೆಂದು ನಂಬಿದವನು. ಭೌತಿಕ ಮತ್ತು ಇತರ ವಸ್ತುಗಳ ಸೌಂದರ್ಯದ ಬಗೆಗಿನ ಅಮಿತ ಉತ್ಸಾಹಿ. ಈ ಸಾಲಿನ ಇನ್ನೊಬ್ಬ ವೆರ್ಹರೆನ್, (ಆಲ್ಫ್ರೆಡ್ ವರ್ಹರೆನ್, ಬೆಲ್ಜಿಯಂನ ವರ್ಣಚಿತ್ರಕಾರ. ಅವರ ಭಾವಚಿತ್ರಗಳು, ಒಳಾಂಗಣ ದೃಶ್ಯಗಳು, ವಾಸ್ತುಶಿಲ್ಪಗಳ ವರ್ಣದ ಛಾಯಾಚಿತ್ರಗಳು ಮತ್ತು ಬದುಕಿನ ಸ್ತಬ್ದ ಚಿತ್ರಗಳು ಬಹಳ ಹೆಸರುವಾಸಿಯಾಗಿವೆ. ಅವರು ಬೆಲ್ಜಿಯನ್ ರಿಯಲಿಸಂನ ಎರಡನೇ ಅಲೆಯಲ್ಲಿ ಭಾಗವಹಿಸಿದರು, ಬಳಿಕ ಇಂಪ್ರೆಷನಿಸಂನಿಂದ ಪ್ರಭಾವಿತರಾದರು.) ಹೊಸ ಚೈತನ್ಯದ ದಾರ್ಶನಿಕ. ಅವರು ಹೊಲಗಳಲ್ಲಿ ಗೇಯುವ ಕೆಲಸಗಾರರನ್ನು ಮತ್ತು ಕಾರ್ಖಾನೆಗಳಲ್ಲಿ ದುಡಿವ ಕಾರ್ಮಿಕರನ್ನು ನಮ್ಮ ಕಾಲದ ವೀರತನದ ಪ್ರತೀಕದಂತೆ ನೋಡುತ್ತಾರೆ. ಆದರೆ ಅವರ ಆತ್ಮದ ಅವಿಚ್ಛಿನ್ನ ಸಂಗಾತಿಯಾದ ಭಾವಗೀತಾತ್ಮಕ ಮನಸ್ಥಿತಿಯ ಹೊರತಾಗಿ ಅವರು ಕಾರ್ಮಿಕರೇ ನಾಯಕರಾದ ಮಹಾಕಾವ್ಯವೊಂದನ್ನು ಬರೆದಿರಬಹುದಿತ್ತು

ಕೆಲವು ವರ್ಷಗಳ ಹಿಂದಿನವರೆಗೂ, ತುಲನಾತ್ಮಕವಾಗಿ ‌ಯೂರೋಪ್‌ ಖಂಡದ ಸಣ್ಣ ಸಮುದಾಯ ಮಾತ್ರ ತಿಳಿದಿದ್ದ ಆದರೆ ತನ್ನ ದೇಶದ ಗಡಿಯನ್ನು ಮೀರಿ ಯುರೋಪಿನ ಅತ್ಯಂತ ಸುಪ್ರಸಿದ್ಧ ನವ್ಯ ಕವಿಗಳ ಸಾಲಿನಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿರುವ ರೈನರ್ ಮಾರಿಯಾ ರಿಲ್ಕೆಯ ವ್ಯಕ್ತಿತ್ವವು ಇಂದಿಗೂ ಹಾಗೇ ಇದೆ. ಅವರ ಬೆನ್ನ ಹಿಂದಿನ ತೆರೆಯ ಎದುರು ಕಟ್ಟಿದ ಬದುಕಿನ ಚಿತ್ರವು ತುಂಬಾ ವೈವಿಧ್ಯಮಯವಾಗಿದೆ. ಅವರ ಜೀವನದ ಮೇಲಿನ ಪ್ರಭಾವಗಳು ಹಲವು. ಅವರ ಕೃತಿಯ ಅಧ್ಯಯನವು ಎಷ್ಟೇ ಅಲ್ಪ ಪ್ರಮಾಣವಾಗಿದ್ದರೂ, ಈ ಕವಿಯ ಮೂಲಧಾತುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಕಾರಣ ಅವುಗಳ ಮೂಲಕವೇ ಈ ಕವಿ ದೊಡ್ಡ ಮಾಸ್ಟರ್ ಆಗಿ ಪ್ರಬುದ್ಧತೆಯನ್ನು ಪಡೆದಿದ್ದು.

ಪ್ರೇಗ್, 1875 ರಲ್ಲಿ ರಿಲ್ಕೆ ಹುಟ್ಟಿದ ನಗರ. ಮಧ್ಯಯುಗದ ಆರಂಭದಲ್ಲಿ ಕಟ್ಟಿದ್ದ ಅದರ ಅಮಂಗಳ ಅರಮನೆಗಳು, ಭವನಗಳು ಸದ್ಯ ಮುರಿದುಬೀಳುತ್ತಿದ್ದವು. ಆದರೂ ಆ ನಗರ ತಲೆಮಾರುಗಳಿಂದ ಕತ್ತಿಗಳನ್ನು ಹಿಡಿದಿದ್ದ, ಅನೇಕ ಜನಾಂಗಗಳ ಗಾಯಗಳ ರಕ್ತದಿಂದ ಕಲೆ ಕಟ್ಟಿದ ಪ್ರಬಲ ಕೈಗಳ ಬೆದರಿಕೆಯೊಡ್ಡುವ ಬೆರಳುಗಳಂತೆನಮ್ಮ ಕಾಲಕ್ಕೂ ಸಾಗಿಬಂದಿವೆ. ಬೂದುಬಣ್ಣದ ಹಳೆಯ ಅವಶೇಷಗಳ ಮಧ್ಯೆ ಹೊಂಬಣ್ಣದ ಹೆಣ್ಣುಮಕ್ಕಳು ಆಟವಾಡುತ್ತಿದ್ದಾರೆ ಅಥವಾ ಬೋಹೀಮಿಯದ ರಾಜಧಾನಿ ಹೊಂದಿರುವ ಹಸಿರು ತಂಪಾದ ಹೂದೋಟಗಳು ಮತ್ತು ಸದಾ ಸುರಿವ ನೆರಳಿನ ಉದ್ಯಾನವನಗಳಲ್ಲಿ ಕಳೆದು ಹೋಗಿದ್ದಾರೆ. ವಿಡಂಬನೆ ಮತ್ತು ಸೌಂದರ್ಯಬೆರೆತ ಈ ಪ್ರೇಗ್ ನಗರ ಚಿಕ್ಕ ಹುಡುಗನ ಮೇಲೆ ತನ್ನ ಮೊದಲ ಪ್ರಭಾವವನ್ನು ಬೀರಿತು.

ಪ್ರತಿಯೊಬ್ಬ ಕಲಾವಿದನ ಜೀವನದಲ್ಲಿ ಅವನ ಸುತ್ತಮುತ್ತಲಿನ ಪ್ರಪಂಚದ ಸಂಪೂರ್ಣ ಅಸ್ತಿತ್ವವೇ ಒಂದುಗೂಡಿ ಅವನ ಆಲೋಚನೆಯಲ್ಲಿ ಕಳೆದುಹೋಗುವ ಒಂದು ಅವಧಿ ಇರುತ್ತದೆ. ಅದು ಆಲೋಚನೆಯನ್ನು ಕಾರ್ಯದಲ್ಲಿ ತೊಡಗಿಸಲು ಕಷ್ಟವಾಗಿ, ಆಲೋಚನೆಯೇ ಹಿಂಸಾತ್ಮಕವಾಗಿ ಯಾವುದೋ ಬಿಡುಗಡೆಯ ಸಮಯಕ್ಕಾಗಿ ಕಾಯುತ್ತಿರುವಂತೆಯೂ, ಒತ್ತಾಯಿಸುವಂತೆಯೂ ತೋರಿ ಬರುವಾಗ ಹೀಗಾಗುವುದುಂಟು. ಇದು ಅವನ ಕನಸಿನ ಸಮಯ. ಇದು ವಸಂತಕಾಲದ ಆರಂಭದ ದಿನಗಳ ಹಾಗೆ. ಮಂಗಳಕರವಾದ ಕನಸು, ಮೊದಲ ಗಾಳಿ, ಮಳೆ ಮತ್ತು ಬೆಳಕು ಹೊಲಗಳ ಹಣ್ಣುಗಳನ್ನು ಮುಟ್ಟಿದಾಗ, ಇಡೀ ಪ್ರಕೃತಿಯ ಮೇಲೆ ಉದ್ವಿಗ್ನ ಮ್ಲಾನ ಮೌನ ಕವಿದಿದೆ. ಇದರಲ್ಲಿ ಬಿರುಗಾಳಿಗಳ ಬಲವನ್ನು ಬೇಸಿಗೆಯ ಸೂರ್ಯನ ಹೊಳಪನ್ನು ಹಿಡಿದು ಹಾಸಿ ಸುತ್ತಿಡಲಾಗಿದೆ. ಇದು ಅವನ ಆಳವಾದ ಕನಸಿನ ಸಮಯ. ಈ ಕನಸಿನ ಮೇಲೆ ಮತ್ತು ಅದರ ಕಾಯುವಿಕೆಯ ಮೇಲೆ ಅವನ ಜೀವನದ ಒಟ್ಟು ಕೆಲಸದ ಅಂತಿಮ ಸಾಕ್ಷಾತ್ಕಾರವು ಅವಲಂಬಿಸಿರುತ್ತದೆ.

ಜಿಮ್ನಾಷಿಯಂನ ಯುವ ಪದವೀಧರ ರಿಲ್ಕೆ ಕುಟುಂಬದ ನೇಮಗಳಿಗೆ ಅನುಸಾರವಾಗಿ ಸೇನಾಧಿಕಾರಿಯ ವೃತ್ತಿಜೀವನವನ್ನು ಪ್ರವೇಶಿಸಬೇಕಿತ್ತು. ಅವನ ಕುಟುಂಬ ಹಳೆಯ ಗಣ್ಯ ಕುಟುಂಬ. ಇದು ಅದರ ವಂಶಾವಳಿಯನ್ನು ಕ್ಯಾರಿಂಥಿಯನ್ ಸಂತತಿಯವರೆಗೆ ಗುರುತಿಸುತ್ತದೆ. ಆದಾಗ್ಯೂ, ಮಿಲಿಟರಿ ಅಕಾಡೆಮಿಯಲ್ಲಿ ಬಹಳ ಕಡಿಮೆ ದಿನಗಳ ಹಾಜರಾತಿಯ ನಂತರ ಅವನ ಒಲವು ಬಹಳ ನಿರ್ಣಾಯಕವಾಗಿ ಜೀವನದ ಲಲಿತಕಲೆಗಳ ದಿಕ್ಕಿನಲ್ಲಿ, ತತ್ವಶಾಸ್ತ್ರದ, ಕಲೆಯ ಇತಿಹಾಸದ ಅಧ್ಯಯನಕ್ಕೆ ತನ್ನನ್ನು ತೊಡಗಿಸಿಕೊಳ್ಳಲು ಸೂಚಿಸಿತು. ಅವನು ಅಕಾಡೆಮಿಯನ್ನು ಬಿಟ್ಟುಹೋದ.

ರಿಲ್ಕೆಯ ಮೊದಲ ಸಣ್ಣ ಪುಸ್ತಕ ಮೂಲತಃ “ಲಾರೆನ್‌ ಹೋಫರ್” ಎಂಬ ಶೀರ್ಷಿಕೆಯಡಿಯಲ್ಲಿ 1895 ರಲ್ಲಿ ಪ್ರಕಟವಾಯಿತು. (ಅದರ ಆವೃತ್ತಿಗಳು ಎರ್ಸ್ಟೆಸೆಡಿಚ್ಟೆ ಎಂಬ ಕಡಿಮೆ ವಿವರಣಾತ್ಮಕ ಹೆಸರಿನಲ್ಲಿ ಇತ್ತೀಚಿಗೆ ಪ್ರಕಟವಾಗಿವೆ.) ಆ ಸಂಕಲನದ ಕವನಗಳಲ್ಲಿನ ಕೊರತೆಯ ನಡುವೆಯೂ ಓದುಗರು ಪ್ರಸ್ತುತಿಯಲ್ಲಿನ ಪ್ಲಾಸ್ಟಿಸಿಟಿಯನ್ನು– ಒಗ್ಗುವಿಕೆಯನ್ನು- ಒಮ್ಮೆಗೇ ಅರಿತುಕೊಳ್ಳುತ್ತಾರೆ. ಇಲ್ಲಿ ಮಾತನಾಡುತ್ತಿರುವವನು ತನ್ನ ಬಾಲ್ಯದ ಕನಸಿನ ಕುರಿತು ದೀರ್ಘಕಾಲ ಪ್ರೀತಿಯಿಂದ ಚಿಂತನೆ ಮಾಡಿದ್ದಾನೆ. ಶೀರ್ಷಿಕೆಯು ಸೂಚಿಸುವಂತೆ ಈ ಕವನಗಳು ಅವನ ಹುಟ್ಟೂರು ಪ್ರೇಗ್ ನಗರದ ಆತ್ಮ ಲಾರೆಸ್‌ ಗೆ ಸಮರ್ಪಣೆಯಾಗಿವೆ. ಪ್ರೇಗ್ ಮತ್ತು ಸುತ್ತಮುತ್ತಲಿನ ಪ್ರದೇಶ ಇವುಗಳಲ್ಲಿ ಪ್ರತಿಯೊಂದೂ ಈ ಕವನಗಳಲ್ಲಿ ಪುನರಾವರ್ತನೆಗೊಳ್ಳುವ ವಿಷಯಗಳಾಗಿವೆ. ಹುಲ್ಲುಗಾವಲುಗಳು, ಹೆಣ್ಣು, ಕತ್ತಲೆಯಲ್ಲಿ ಕಂಡ ಸಂಜೆ ನದಿ, ರಾತ್ರಿಯಲ್ಲಿ ಬೂದು ಮಂಜಿನ ತೆರೆಯಂತೆ ನಿಂತಿರುವ ಕ್ಯಾಥೆಡ್ರಲ್‌ ನ ಗೋಪುರ -ಇವನ್ನು ಅತ್ಯಾಶ್ಚರ್ಯದಿಂದ ನೋಡಲಾಗುತ್ತದೆ.

ಎಲ್ಲಾ ಕಾವ್ಯಾತ್ಮಕ ಕಲ್ಪನೆಯ ಅತ್ಯುತ್ತಮ ಒರತೆಯೆಂದರೆ ಧಾರ್ಮಿಕ ಋತನಿಷ್ಠೆ. ಇದೆಲ್ಲದರ ಮುಖಾಂತರ ಕಾವ್ಯದ ಒಂದು ಧ್ವನಿ ಮೂಡುತ್ತದೆ. ಅದು ಈ ರೀತಿ ಜಗತ್ತನ್ನು ದೃಶ್ಯೀಕರಿಸಲು ಅಗತ್ಯವಾದ ಸಮಸ್ತ ವಸ್ತುಗಳ ಸಂಗೀತದಲ್ಲಿ ಮುಳುಗುವಂತೆ ಮಾಡಲು ಶಕ್ತಿಕೊಟ್ಟದ್ದಕ್ಕೆ ಭಗವಂತನಿಗೆ ಸಲ್ಲಿಸುವ ಕೃತಜ್ಞತೆ. ಇದು ಕೇಳಿ ಬರುವುದು ಸೊಗಸಾದ ಪಕ್ಕವಾದ್ಯದ ತರಂಗದಂತೆ. “ಹೊರಗೆ ನಾನು ಒಳಗೆ ಎಂದು ಭಾವಿಸುವ ಎಲ್ಲವೂ ಇವೆ, ನನ್ನಲ್ಲಿ ಎಲ್ಲವೂ ಅಪಾರ, ಅಸೀಮ.”

ಪಟ್ಟಣ ಮತ್ತು ಭೂದೃಶ್ಯದ ಈ ಚಿತ್ರಗಳು ಎಂದಿಗೂ ಕವಿಯೊಂದಿಗಿನ ತಮ್ಮ ವೈಯಕ್ತಿಕ ಸಂಬಂಧದಿಂದ ಬೇರ್ಪಟ್ಟಿಲ್ಲ. ಅವನು ಕೂಡ ಅವುಗಳ ಮೇಲೆ ತನ್ನ ಅವಲಂಬನೆಯನ್ನು ಖಚಿತವಾಗಿ ಅನುಭವಿಸಿದ್ದಾನೆ. ಮಗುವೊಂದು ಬಾಲ್ಯದಲ್ಲಿ ಹೂವು ಮತ್ತು ನಕ್ಷತ್ರಗಳನ್ನು ತನ್ನವು ಎಂಬಂತೆ, ತನ್ನ ವೈಯಕ್ತಿಕ ಆಸ್ತಿ ಎಂಬಂತೆ ವೀಕ್ಷಿಸುತ್ತದೆ. ಇದೂ ಹಾಗೆಯೇ. ಅವನು ಪ್ರವರ್ಧಮಾನಕ್ಕೆ ಬಂದು ಖಾಸಗಿತನವಿಲ್ಲದ,-impersonal- ಕಲೆಯಲ್ಲಿ ವಸ್ತುನಿಷ್ಠತೆಯನ್ನು ಸಾಧಿಸಿ ಮೇಲಿನ ಸ್ತರಗಳಿಗೇರುವವರೆಗೂ ಇದು ಅವನದೇ ಆಗಿತ್ತು.

ಈ ಆರಂಭಿಕ ಕವಿತೆಗಳನ್ನು ಹದಿಹರೆಯದ ರಚನೆಗಳಿಂದ ಪ್ರತ್ಯೇಕಿಸುವುದು ಪ್ರಸ್ತುತಿಯಲ್ಲಿನ ಸಂಯಮ, ಅಭಿವ್ಯಕ್ತಿಯಲ್ಲಿ ಭಾಷಾಬಳಕೆಯ ಸಂಯಮ, ನಿರೂಪಣೆಯ ತೀವ್ರತೆ ಮತ್ತು ವಸ್ತುಗಳ ಒಳಗಿನ ದನಿಯನ್ನು ಆಲಿಸುವ ಗುಣ. ಇವೇ ಈ ಕವಿಯನ್ನು ಮಾನವಕುಲದ ದಾರ್ಶನಿಕ ಎಂದು ನಿರೂಪಿಸುತ್ತದೆ.

ಎರಡನೇ ಕವನ ಸಂಕಲನ ಎರಡು ವರ್ಷಗಳ ನಂತರ ಹೊರಬಂತು. ಇದು ಮೊದಲ ಸಂಪುಟ ಟ್ರಾಮ್‌ ಜೆಕ್ರಾಂಟ್ ದಂತೆ ಬೋಹೀಮಿಯನ್ ಜಾನಪದ-ಗೀತೆಗಳ ಸೌಮ್ಯ ವಿಷಣ್ಣತೆಯನ್ನು ನೆನಪಿಸುವ ಸಂಗೀತದಿಂದ ತುಂಬಿದೆ. ದೂರದ ಪ್ರಕ್ಷುಬ್ಧ ಸಮುದ್ರದ ಅಲೆಗಳು ನಿಧಾನವಾಗಿಯೇ ದಡವನ್ನು ತಾಕುವಂತೆ ಅವರ ಕಾವ್ಯದ ಸೌಮ್ಯ ಲಯಗಳಲ್ಲಿ ಅನಾಗರಿಕ ಕುಲದ ಶಕ್ತಿಯನ್ನು ನಿಷ್ಕ್ರಿಯೆಗೆ ದೂಡಲಾಗುತ್ತದೆ.

ಟ್ರಾಮ್‌ ಜೆಕ್ರಾಂಟ್ (Traumgekrdnt) ಅಂದರೆ ಸ್ವಪ್ನೋದ್ಯಾನ. ಈ ಉದ್ಯಾನದ ವಸ್ತುವಿಷಯಗಳನ್ನು, ಪ್ರೇಗ್ ನಗರದ ವರ್ಣನೆಯನ್ನು ಅದರ ಸುತ್ತಲಿನ ಆಗಿನ ಪರಿಸರವನ್ನು ಮೀರಿ ವಿಸ್ತರಿಸಲಾಗಿದೆ. ಸುಂದರವಾದ ಕವನಗಳಲ್ಲಿ ಕೆಲವು ನಿಧಾನವಾಗಿ ಅರಳುತ್ತಿರುವ ಮೇ ಮತ್ತು ಜೂನ್ ತಿಂಗಳ ಹಿಮದಲ್ಲಿ ಕರಗಿ ಮರೆಯಾದಂಥ ಹಳ್ಳಿಗಳ ಹಗುರವಾದ ಚಿತ್ರಗಳು. ಅಲ್ಲಿ ಕೇಳುವುದು ಹುಡುಗ ಅಥವಾ ಹುಡುಗಿಯು ಏಕಾಕಿ ಹಾಡಿಕೊಳ್ಳುವ ಮೃದುವಾದ ಮಧುರಧ್ವನಿ.

ಈ ಮೊದಲ ಎರಡು ಸಂಕಲನಗಳಲ್ಲಿ ಕವಿ ಮಾತನ್ನು ಚಿತ್ರಿಸುವಲ್ಲಿ ತೃಪ್ತಿ ಹೊಂದಿದ್ದಾರೆ. ಪದಗಳಲ್ಲಿ ಅನುಭವದ ವರ್ಣರಂಜಿತ ಚಿತ್ರಗಳಿವೆ, ಪದಗಳು ಸುತ್ತಮುತ್ತಲಿನ ಪ್ರಪಂಚ ಹೊಮ್ಮಿಸುವ ಸೊನೊರಸ್ ಅಂದರೆ ಗಟ್ಟಿ ಧ್ವನಿ ತರಂಗಗಳ ಸೌಂದರ್ಯದಿಂದ ತುಂಬಿವೆ. ಈ ಅವಧಿಯಿಂದ ಬಂದುದು ಈವೆನಿಂಗ್ ಎಂಬ ಸಣ್ಣ ಕವಿತೆ. ಇದನ್ನು ಓದುವಾಗ ಜಪಾನಿ ವರ್ಣಚಿತ್ರಕಾರನೊಬ್ಬಲ್ಲಿನ ದೃಶ್ಯವನ್ನು ಚಿತ್ರಿಸಿದ್ದಾರೆಂದು ತೋರುತ್ತದೆ. ಅದರ ವಿನ್ಯಾಸ ಸ್ಪಷ್ಟ ಮತ್ತು ವರ್ಣಮಯ. ಅದರ ಬಾಹ್ಯರೇಖೆಗಳು ಅಮೂಲ್ಯ ಮತ್ತು ನಿಖರವಾಗಿವೆ.

ಮುಂದಿನ ಮೂರು ವರ್ಷಗಳಲ್ಲಿ ಹೊರಬಂದ ಅಡ್ವೆಂಟ್ ಮತ್ತು ಮೀರ್ ಜುರ್ಫಿಯರ್ ಎರಡೂ ಸಂಕಲನಗಳ ಪ್ರಕಟಣೆಯೊಂದಿಗೆ ಪ್ರಶ್ನಿಸುವ ಒಂದು ಹಂತ ಪ್ರಾರಂಭವಾಗುತ್ತದೆ. ಮಂದ ಬಯಕೆಯೊಂದು ಆಂತರ್ಯದಲ್ಲಿ ಕಲಕಲು ಪ್ರಾರಂಭಿಸುತ್ತದೆ. ಹೊರಗಿನ ವಿಶಾಲ ಜಗತ್ತಿನಲ್ಲಿ “ಜೀವನದ ಒಳಕ್ಕೆ ಆಳವಾಗಿ, ಕಾಲವನ್ನು ಮೀರಿ ಇಳಿಯಬೇಕೆನ್ನುವುದು ಆ ಬಯಕೆ.”

ಆರಂಭಿಕ ಕವಿತೆಗಳ ಲಕ್ಷಣ ಹೇಗಿದೆಯೆಂದರೆ ಜೀವನದ ಪ್ರಕ್ಷುಬ್ಧತೆಯಿಂದ ದೂರವಿರುವ ಪ್ರವೃತ್ತಿಯಿಂದ ಅವನ್ನು ನಿರೂಪಿಸಲಾಗಿದೆ. ಆದರೆ ವಾಸ್ತವವಾಗಿ ನಿಜವಾದ ಕಾಂಕ್ರೀಟ್ ಪ್ರಪಂಚವು ಅಸ್ತಿತ್ವದಲ್ಲಿರುವಂತೆ ತೋರುತ್ತಿಲ್ಲ ಎನ್ನುವುದು ನಂತರದ ಈ ಎರಡು ಸಂಪುಟಗಳಲ್ಲಿ ಕಾಣುವುದು ಗಮನಾರ್ಹವಾಗಿದೆ. ಕವಿ ಜೀವನದತ್ತ ಮುನ್ನಡೆಯುವುದಕ್ಕೆ ಅದರ ಕೆಲವು ಶ್ರೇಷ್ಠ ಚಿಹ್ನೆಗಳನ್ನು ಸಮೀಪಿಸಲು ಮತ್ತು ಕಂಡರಿಸಲು ಮೊದಲಿಟ್ಟಿದ್ದಾನೆ.

ರಿಲ್ಕೆಯ ಸಂಪೂರ್ಣ ಕೃತಿಗಳುದ್ದಕ್ಕೂ, ಅಂದರೆ ಅವನ ಕಾವ್ಯಗಳಲ್ಲಿ ಬರುವ ಚಿತ್ರಕಲೆ ಮತ್ತು ಶಿಲ್ಪಕಲೆಯ ಕುರಿತ ವ್ಯಾಖ್ಯಾನಗಳಲ್ಲಿ, ಅವನ ಕಲೆಯ ರಚನೆಯಲ್ಲಿ ಮೂಲಾಧಾರಗಳನ್ನು ರೂಪಿಸುವ ಎರಡು ಅಂಶಗಳಿವೆ. ಒಂದು ಹಂತದ ಸತ್ಯದೊಂದಿಗೆ ಹೇಳಿರುವಂತೆ ನೀತ್ಸೆ ಮುಖ್ಯವಾಗಿ ಸಂಗೀತಗಾರನಾಗಿದ್ದು, ಅವನ ತತ್ತ್ವಶಾಸ್ತ್ರವು ಸಂಗೀತದ ಮಜಲುಗಳ ಆಧಾರವನ್ನು ಹೊಂದಿತ್ತು. ಅವನ ಪ್ರತಿಭೆ ಕಲಾತ್ಮಕ ಶಕ್ತಿಯ ಸಂಗೀತದ ಗುಣದಿಂದ ಅದರ ಅಂತಿಮ ಅಂಶಗಳನ್ನು ಪಡೆದುಕೊಂಡಿದೆ. ಅದನ್ನು ರಿಲ್ಕೆಯ ಕುರಿತೂ ಅಷ್ಟೇ ಸಮಾನ ಪ್ರಮಾಣದ ಸತ್ಯದೊಂದಿಗೆ ಹೀಗೆ ಹೇಳಬಹುದು: ರಿಲ್ಕೆ ಮುಖ್ಯವಾಗಿ ವರ್ಣಚಿತ್ರಕಾರ ಮತ್ತು ಶಿಲ್ಪಿ. ಅವನ ಕಾವ್ಯವು ಚಿತ್ರಾತ್ಮಕ ಮತ್ತು ಸ್ಥಿತಿಸ್ಥಾಪಕ ನೆಲೆಯ ಕಲೆಗಳ ಮೂಲತತ್ವಗಳ ಮೇಲೆ ನಿಂತಿದೆ.

ಈ ಸಂಪುಟಗಳ ಪ್ರಕಟಣೆಯ ಸಮಯದವರೆಗೆ ರಿಲ್ಕೆಯ ಕವಿತೆಗಳು ಒಂದು ಬಗೆಯ ನಿಶ್ಶಬ್ದವನ್ನು ಹೊಂದಿದ್ದವು. ಅದು ಚಿತ್ರ ನಿರೂಪಿಸುವ ನೇರವಾದ, ಮುರಿಯದ, ಆದರೆ ಸೂಕ್ಷ್ಮವಾದ ಸಾಲುಗಳಲ್ಲಿ. ಬಹುತೇಕ ಮಿಡಿಯದ ಲಯದಲ್ಲಿ, ಅವನು ಚಿತ್ರಿಸುವ ಕೋಮಲವಾದ ಒಂದು ಅಚಂಚಲತೆ. ಇಳಿವ ಸಂಜೆ ಅಥವಾ ರಾತ್ರಿ, ಬೆಳಕು ತೀವ್ರವಾಗುತ್ತಿರುವ ಮುಂಜಾನೆ ಋತುಗಳ ಬದಲಾವಣೆ, ನಿಧಾನವಾಗಿ ಬೆಳಕು ಕತ್ತಲೆಯಾಗಿ ಬದಲಾಗುವುದು… ಸಂಕ್ಷಿಪ್ತವಾಗಿ ಹೇಳುವುದಾದರೆ, ಪ್ರಕೃತಿಯ ಬಾಹ್ಯ ಅಂಶಗಳಲ್ಲಿ ಆಗುವ ಅತ್ಯಂತ ಮೌನವಾದ ಆದರೆ ಶ್ರೇಷ್ಠವಾದ ರೂಪಾಂತರಗಳು ಈ ಮೊದಲ ಕವಿತೆಗಳ ಅನೇಕ ವಿಷಯಗಳನ್ನು ರೂಪಿಸುತ್ತವೆ.

ನಿರ್ಭಾವದ ವಸ್ತು ಮತ್ತು ಪ್ರಕೃತಿಯಲ್ಲಿ ಜೀವಿಸುತ್ತಿರುವ ಜೀವಿಗಳು -ಅವುಗಳ ಪ್ರತ್ಯೇಕತೆಯ ಅನುಭವ ತೀಕ್ಷ್ಣವಾದ ಬಾಹ್ಯರೇಖೆಗಳಲ್ಲಿ ಕಂಡುಬರುವುದಿಲ್ಲ; ಅವುಗಳನ್ನು ಸುತ್ತುವರೆದಿರುವ ವಾತಾವರಣ ಮತ್ತು ಅವುಗಳನ್ನು ಆವರಿಸಿರುವ ಪರಿಪ್ರೇಕ್ಷ್ಯದಲ್ಲಿ ಅವನ್ನಿಟ್ಟು ನೋಡಲಾಗುತ್ತದೆ ಮತ್ತು ಅರ್ಥೈಸಲಾಗುತ್ತದೆ. ಆವರಣಗಳು ದಟ್ಟವಾಗಿ ಮುಚ್ಚಿಹೋಗಿವೆ. ಬಾಹ್ಯರೇಖೆಗಳು ಕೇವಲ ಮಸುಕಾಗಿ ಗೋಚರಿಸುತ್ತವೆ. ಆ ವಾತಾವರಣವು ಉತ್ತರದ ಸಂಜೆಬೆಳಕಿನ ಅತೀಂದ್ರಿಯ ಬೂದು ಅಥವಾ ದಕ್ಷಿಣದ ಬೇಸಿಗೆಯ ರಾತ್ರಿಗಳ ವೆಲ್ವೆಟ್ಟಿನ ಗಾಢ ನೀಲಿ ಬಣ್ಣದ್ದಾಗಿರಬಹುದು.
ಅಡ್ವೆಂಟ್ ನಲ್ಲಿ, ವಾತಾವರಣದ ಅನುಭವವು ಅವನ ಅಂತರಾತ್ಮದ ಅನುಭವವಾಗುತ್ತದೆ. ಆದ್ದರಿಂದ, ಎಲ್ಲಾ ವಸ್ತುಗಳು ಅವು ವಾತಾವರಣದಲ್ಲಿ ಪಾಲ್ಗೊಳ್ಳುವವರೆಗೆ ಮಾತ್ರ ಅವನಿಗೆ ಮೌಲ್ಯಯುತವಾಗುತ್ತವೆ. ಏಕೆಂದರೆ ಅವನ್ನು ವಿಚಿತ್ರವಾದ ಸನ್ನಿವೇಶ ಮತ್ತು ದೂರದಲ್ಲಿ ಇಟ್ಟು ನೋಡಲಾಗುತ್ತದೆ. ರಿಲ್ಕೆಯ ಈ ಮೊದಲ ಹಂತವನ್ನು ಶಾಂತ ಸ್ವಭಾವದ ಹಂತ ಎಂದು ವ್ಯಾಖ್ಯಾನಿಸಬಹುದು.

ಸುತ್ತಮುತ್ತಲಿನ ವಾತಾವರಣವು ಅವುಗಳ ಮೇಲೆ ಪರಿಣಾಮ ಬೀರಿ ಬದಲಾಯಿಸುವ ಹೊರತು ವಸ್ತುಗಳು ಸ್ಥಿರವಾಗಿರುವ ಈ ವಿರಾಮ ಮತ್ತು ವಿಶ್ರಾಂತಿಯ ಕ್ಷೇತ್ರಕ್ಕೆ ಕವಿಯ ಬೆಳವಣಿಗೆಯ ಎರಡನೆಯ ಹಂತವು ಮತ್ತೊಂದು ಅಂಶವನ್ನು ಸೇರಿಸುತ್ತದೆ. ಇದು ನಂತರ ಶಕ್ತಿಶಾಲಿ ಆಯಾಮಗಳಾಗಿ, ಸರಳವಾದ ಅಭಿವ್ಯಕ್ತಿಯ ಮಿತಿಗಳನ್ನು ಹಿಂಸಾತ್ಮಕವಾಗಿ ಮೀರಿ ಮುರಿದು ಬೆಳೆಯುವುದು. ಈ ಮಹಾನ್ ಕೆಲಸವು ಆವೇಶ ಗಾನವಾದ ಡಿಥೈರಾಂಬಿಕ್ ಸ್ತೋತ್ರದಲ್ಲಿ ಮಾತ್ರ ಅದರ ತೃಪ್ತಿಯನ್ನು ಕಂಡುಕೊಳ್ಳಬಹುದು ಎಂಬ ಮಾತುಗಳಲ್ಲಿ ಪರೋಕ್ಷ ಉಲ್ಲೇಖವಿರುವುದು ನಮ್ಮ ಕಾಲದ ಪ್ಲಾಸ್ಟಿಕ್ ಕಲಾವಿದನಾದ ಆಗಸ್ಟೆ ರೋಡಿನ್ ಸೃಷ್ಟಿಗೆ.

ಈ ಎರಡನೆಯ ಅಂಶವು ಆ ಫ್ರೆಂಚ್ ಶಿಲ್ಪಿ ಬೇರೆ ಮಾಧ್ಯಮದಲ್ಲಿ ಪರಿಪೂರ್ಣತೆಗೆ ಒಯ್ದಿರುವುದಾಗಿದೆ. ಇದು ನಾಟಕೀಯ ಚಲನೆಯನ್ನು ಸೂಚಿಸುವ- ಗೆಸ್ಚರ್‌ ನ- ಅಂಶವಾಗಿದೆ. ರೋಡಿನ್ ಕಲೆಯ ಕುರಿತ ರಿಲ್ಕೆ ಅವರ ಮೊನೊಗ್ರಾಫ್ – ವಾಚಿಕೆಯ- ಬಗ್ಗೆ ಮಾತನಾಡಲು ಇದು ಸೂಕ್ತವಾದ ಸ್ಥಳವೆಂದು ತೋರುತ್ತದೆ. ಅದಕ್ಕಾಗಿ ಕಾಯುವುದು ಒಂದು ಬೇಡದ ನಿರೀಕ್ಷೆಯಾಗಿದೆಯಾದರೂ ರಿಲ್ಕೆ ಅವರ ಬೆಳವಣಿಗೆಯನ್ನು ದಾಖಲಿಸಲು ಅದು ಅಗತ್ಯವಾಗಿದೆ. ಅದರಲ್ಲೂ ರೋಡಿನ್ ಅವರ ಸಂಪರ್ಕಕ್ಕೆ ರಿಲ್ಕೆ ಬರುವ ಮೊದಲ ಹಲವು ಸಂಧಿಕಾಲಗಳ ಮೌಲ್ಯಮಾಪನ ಮಾಡುವ ಕೆಲಸವನ್ನು ಕೈಗೊಳ್ಳಲು ಆವರೆಗಿನ ರಿಲ್ಕೆಯ ಕೃತಿಗಳನ್ನು ಸಂಪೂರ್ಣವಾಗಿ ವಿಮರ್ಶಿಸಬೇಕಾಗಬಹುದು.

ಸೂಚನೆ – ಗೆಸ್ಚರ್-ಯ ಚಲನೆಯು ಅಡ್ವೆಂಟ್‌ ನಲ್ಲಿ ಸಂಭ್ರಮಾಚರಣೆ- ಸೆಲೆಬರೇಶನ್ ಗಳಲ್ಲಿ ಪ್ರಾರಂಭವಾಗಿರುತ್ತದೆ. ಮೊದಲ ಈ ಎರಡು ಸಂಪುಟಗಳ ಕವನಗಳಲ್ಲಿ ಆವರಿಸಿರುವ ಸ್ತಬ್ದತೆಗೆ ಭಂಗ ತರುವ ಕ್ರಿಯೆಯೊಂದು ಪ್ರಾರಂಭವಾಗುತ್ತದೆ. ಇಲ್ಲಿಯೂ ಸಹ ಮೊದಲಿಗೆ ಇದು ಕೇವಲ ಸೌಮ್ಯ ಮತ್ತು ನಾಚಿಕೆಯ ಸಂಗತಿಯಾಗಿದೆ. ಇದು ಶಾಂತವಾಗಿರುವ ಸಮುದ್ರದ ಮೇಲೆ ಬೀಸಿ ಅದರ ಶಾಂತಿಯನ್ನು ಕಲಕುವ ಗಾಳಿಯ ಸುಯಿಲಿನಂತೆ. ಸೌಮ್ಯ ಜೀವಿಗಳು ಈ ಮೊದಲ ಸೂಚನೆ ಕೊಡುತ್ತಾರೆಯಾದರೆ, ಮಕ್ಕಳು ಮತ್ತು ಯುವತಿಯರು-ಕ್ರೀಡೆ, ಗಾನ, ನೃತ್ಯ ಅಥವಾ ಪ್ರಾರ್ಥನೆಯಲ್ಲಿ.

ಸೆಲೆಬ್ರೇಷನ್ ಎಂಬ ಪುಸ್ತಕದಲ್ಲಿನ ಕನ್ನೆಯರು ಹಾಡುಗಳ ವೃತ್ತದಲ್ಲಿ ವಾತಾವರಣವು ಸಾಂದ್ರಗೊಳಿಸಲ್ಪಟ್ಟಿದೆ. ಅದು ಹಾತೊರೆಯುವಿಕೆ ಅಥವಾ ನಿರೀಕ್ಷೆಯ ಭಾವಸೂಚಕವಾಗಿದೆ. ಇದಕ್ಕೆ ಆ ಸಾಂದ್ರತೆಯು ಅನುಭವಕ್ಕೆ ಬರುವ ಮಾನಸಿಕ ಭೂದೃಶ್ಯದ ಹಿನ್ನೆಲೆಯಾಗಿ ಪರಿಣಮಿಸುತ್ತದೆ. ಅದು ವಿಶೇಷವಾಗಿ ಮೊಗ್ಗೊಡೆಯುವ ಅಸಹನೆ, ಮಿಡಿಯುವ ಪ್ರೀತಿಯ ಹಂಬಲ, ಕುತೂಹಲದ ಉದ್ವಿಗ್ನತೆಯೊಂದಿಗೆ ಮೂಡಿರುವ ಕನ್ನೆಯರ ಹಾಡುಗಳು. ದಿ ಪ್ರೇಯರ್ಸ್ ಆಫ್ ದಿ ಮೇಡೆನ್ಸ್ ಟು ಮೇರಿಯಲ್ಲಿನ ಕವಿತೆಗಳು ಕನ್ನೆಯರ ಪ್ರಾರ್ಥನೆಯ ಸೌಮ್ಯ ಮಾಧುರ್ಯವನ್ನು ಹೊಂದಿಲ್ಲ; ಅವು ಬಹುನಿರೀಕ್ಷಿತ ಬದುಕಿನ ಭಾವಪರವಶತೆಯಲ್ಲಿ ಕಂಪಿಸುತ್ತವೆ. ಇಲ್ಲಿ ಮಡೋನಾ ಸ್ವರ್ಗಕನ್ನಿಕೆಗಿಂತ ಹೆಚ್ಚು. ಅವರ ಹಂಬಲವು ಅವಳನ್ನು ಐಹಿಕ ಪ್ರೀತಿ ಮತ್ತು ಮಾತೃತ್ವದ ಸಂಕೇತವಾಗಿ ಪರಿವರ್ತಿಸುತ್ತದೆ. ಈ ನಿರೀಕ್ಷೆಯು ಅದರ ತೀವ್ರತೆಯ ಹೊರತಾಗಿಯೂ ಅಧೀನಗೊಳಿಸಲ್ಪಟ್ಟಿದೆ. ಅದು ದೂರದ ಕನಸಿನ ಚರಮಗೀತೆಯಂತೆ ಮಾತ್ರ ಕೇಳಲಾಗಿದೆ:

“ನಾನು ತುದಿಬೆರಳ ಮೇಲೆ ಬಾಲ್ಯದಿಂದ ಕ್ರಿಸ್ತೋದಯದ
ಉದ್ಘೋಷದ ತನಕ ಹೇಗೆ ತಾನೇ ಹೋಗುತ್ತೇನೆ
ನಿನ್ನ ಉದ್ಯಾನಕ್ಕೆ ಮಂದ ಸಂಜೆಬೆಳಕಿನಲ್ಲಿ?”

ರಿಲ್ಕೆಯ ಕೆಲವು ಗದ್ಯ ಬರಹಗಳ ಬಗ್ಗೆ ಕೂಡ ಇಲ್ಲಿ ಪ್ರಸ್ತಾಪಿಸಬೇಕು. ಇವನ್ನು ರಿಲ್ಕೆ 1898 ರಲ್ಲಿ ಮತ್ತು ಅನಂತರದಲ್ಲಿ ಅನತಿಕಾಲದಲ್ಲೇ ಪ್ರಕಟಿಸಿದರು. ಅವು ಪ್ರೇಗ್ ನ ಎರಡು ಕಥೆಗಳು, ದಿ ಟಚ್ ಆಫ್ ಲೈಫ್ ಮತ್ತು ದಿ ಲಾಸ್ಟ್; ಸಣ್ಣ ಕಥೆಗಳ ಮೂರು ಸಂಪುಟಗಳು; ಎರಡು-ಅಂಕದ ನಾಟಕವೊಂದು. ಡೈಲಿ ಲೈಫ್, ಬೆಲ್ಜಿಯಂನ ಕಲಾವಿದ ಮೇಟರ್ಲಿಂಕನ ಬಲವಾದ ಪ್ರಭಾವದತ್ತ ಬೊಟ್ಟು ಮಾಡುತ್ತದೆ. ಅಂತಿಮವಾಗಿ ಸ್ಟೋರೀಸ್ ಆಫ್ ಗಾಡ್ ಕಥೆಗಳು ಸಹ. ವಿವರಗಳು ಸುಂದರವಾಗಿವೆ ಮತ್ತು ಆಸಕ್ತಿ ಸಮಸ್ಯಾತ್ಮಕವಾಗಿದೆ. ಇವುಗಳೊಂದಿಗೆ ಸಣ್ಣ ಕಥೆಗಳು ನಿರ್ವಹಣೆಯಲ್ಲಿ ಅಸ್ಪಷ್ಟತೆಯಿಂದಲೂ ನಾಟಕೀಯ ಸಮನ್ವಯದ ಕೊರತೆಯಿಂದಲೂ ಬಳಲುತ್ತವೆ.

ಕವಿಯಲ್ಲಿ ಮೂಲಭೂತವಾಗಿ ಭಾವಗೀತಾತ್ಮಕ ಗುಣವಿದೆ. ಆದರೆ ಅದೇ ಸಮಯದಲ್ಲಿ ಅವನು ಕಥಾತಂತ್ರದ ಸಾಧನಗಳನ್ನು ಕರಗತ ಮಾಡಿಕೊಂಡಿಲ್ಲ. ಹಾಗಾಗಿ ಮಹಾಕಾವ್ಯದ ಸ್ಪಷ್ಟ ಕೆತ್ತನೆಯನ್ನು ಅವನ ಪಾತ್ರಗಳಿಗೆ ನೀಡಿ ರೂಪಗೊಳಿಸಲು ಅವನಿಂದ ಸಾಧ್ಯವಾಗಿಲ್ಲ.

ರಿಲ್ಕೆ ಹಲವು ಬಾರಿ ರಷ್ಯಾದಲ್ಲಿ ತಂಗಿದ್ದವನು. ವಿಶೇಷವಾಗಿ ದೋಸ್ಟೊಯೆವ್ಸ್ಕಿಯ ಕಾದಂಬರಿಗಳ ಪರಿಚಯವಾದುದು ಅವನ ಸಾಹಿತ್ಯಕ ಬೆಳವಣಿಗೆಯಲ್ಲಿ ಪ್ರಬಲವಾದ ಅಂಶ. ಅವನ ಬರಹಗಳು ಗಾಢವಾಗಲು ಇದು ನೆರವಾಯಿತು. ಈ ಪ್ರಭಾವವಿಲ್ಲದೆ ರಿಲ್ಕೆಯ ಸೃಷ್ಟಿಗಳು ಅನಗತ್ಯವಾದ ಭವ್ಯ ಸೌಂದರ್ಯದಲ್ಲಿ ಕೊನೆಗೊಂಡಿರಬಹುದಿತ್ತು. ವಿಶಾಲವಾಗಿ ಹೇಳುವುದಾದರೆ, ರಷ್ಯಾದ ಕಲೆ ಮತ್ತು ಸಾಹಿತ್ಯವು ನೈತಿಕ ಪ್ರಚೋದನೆಯಿಂದ ಹುಟ್ಟಿಕೊಂಡಿದೆ ಮತ್ತು ಅದು ಅವುಗಳ ಉದ್ದೇಶದ ಶಕ್ತಿ ಮತ್ತು ರೈಸಾನ್ ಡಿ’ಎಟರ್ ಅಥವಾ ವಸ್ತುವಿನ ಇರುವಿಕೆಯ ಗುರಿ ಎಂದು ವಿವರಿಸಬಹುದು. ಇಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಕಲೆ ಮತ್ತು ಸಾಹಿತ್ಯಕ್ಕೆ ವಿರುದ್ಧವಾಗಿ ಸಾಮಾಜಿಕ-ರಾಜಕೀಯ ಸುಧಾರಣೆಯತ್ತ ಒಲವು ಸ್ಪಷ್ಟವಾಗಿವೆ. ಪಾಶ್ಚಿಮಾತ್ಯರ ಉದ್ದೇಶಗಳು ಮತ್ತು ಗುರಿಗಳು ಪ್ರಾಥಮಿಕವಾಗಿ ಸೌಂದರ್ಯದವು. ಅವು ಪ್ರಕೃತಿ ಮತ್ತು ಕಲೆಯಲ್ಲಿ ಚೇತನ ಮತ್ತು ವಸ್ತುವಿನ ನಡುವೆ ಇರುವ ದ್ವಂದ್ವತೆಯಲ್ಲಿ ಸಾಮರಸ್ಯವನ್ನು ಹುಡುಕುತ್ತವೆ.

ಮೆರೆಜ್ಕೋವ್ಸ್ಕಿ ಎಲ್ಲೋ ಒಂದೆಡೆ ದೋಸ್ಟೊಯೆವ್ಸ್ಕಿಯನ್ನು ವಿವರಿಸುವುದು, ಎಂದೂ ಯೌವನದ ಕುರುಹಿರದ ಮುಖದವನೆಂದು; ಅವನ ಮುಖದಲ್ಲಿ “ದುಃಖದ ನೆರಳುಗಳು ಮತ್ತು ಆಳ ಕೆನ್ನೆಗಳ ಸುಕ್ಕುಗಳು….” ಇರುವುದೆಂದು. ಆದರೆ ಈ ಮುಖಕ್ಕೆ ಅದರ ಅತ್ಯಂತ ಚಿತ್ರಹಿಂಸೆಯ ಅಭಿವ್ಯಕ್ತಿ ನೀಡುವುದು ಅದರ ಸ್ಥಾವರತೆಯಾಗಿದೆ. ಇದ್ದಕ್ಕಿದ್ದಂತೆ ಅಡ್ಡಿಪಡಿಸಲಾದ ಒಳತೋಟಿ, ಕಲ್ಲಿನರೀತಿ ಗಟ್ಟಿಯಾದ ಬದುಕು.”

ಈ ದೋಸ್ಟೊಯೆವ್ಸ್ಕಿ ಮತ್ತು ವಿಶೇಷವಾಗಿ ಅವನ ರೋಡಿಯನ್ ರಾಸ್ಕೋಲ್ನಿಕೋವ್(ಕ್ರೈಂ ಅಂಡ್ ಪನಿಶ್ಮೆಂಟ್) ಇವರ ಚಕ್ರವು ರಿಲ್ಕೆಯಲ್ಲಿ ಒಂದು ಆಳವಾದ ಕಲಾತ್ಮಕ ಅನುಭವವಾಯಿತು. ಬಡವರು, ಬಹಿಷ್ಕೃತರು, ಮನೆಯಿಲ್ಲದವರು ಅವನಿಗೊಂದು ಹೊಸ ಮಹತ್ವವನ್ನು ತಂದುಕೊಟ್ಟರು. ಈ ಮಹತ್ವವು ಜೀವನದ ಸದಾ ಬದಲಾಗುತ್ತಿರುವ ಪ್ರಬಲವಾದ ಪ್ರವಾಹದಲ್ಲಿ ಇರಿಸಲಾಗಿರುವ ಪ್ರತ್ಯೇಕಿತ ಆಕೃತಿಯ ಮಹತ್ವ. ಕೆಲವು ವರ್ಷಗಳ ನಂತರ ಪ್ಯಾರಿಸ್‌ ನಲ್ಲಿ ಬರೆದ ಪಾಂಟ್ ಡು ಕರೋಸೆಲ್ –ಪ್ಯಾರಿಸ್ ನಲ್ಲಿ ಸೀನ್ ನದಿಗೆ ಹಾಕಿರುವ ಸೇತುವೆ – ಎಂಬ ಕವಿತೆಯಲ್ಲಿ, ಮಹಾನಗರದ ಏರಿಳಿಯುವ ಜನಸಮೂಹದ ಮಧ್ಯೆ ಕುರುಡು ಭಿಕ್ಷುಕನೊಬ್ಬ ತನ್ನ ಪಾಡಿಗೆ ಇರುವುದನ್ನು ರಿಲ್ಕೆ ನೋಡಿದ್ದಾನೆ.

ರಷ್ಯಾ ಮತ್ತು ಅವನ ಮೇಲೆ ಅದರ ಪ್ರಭಾವದ ಬಗ್ಗೆ, ರಿಲ್ಕೆ ಬರೆಯುತ್ತಾನೆ,
“ರಷ್ಯಾ ನನಗೆ ವಾಸ್ತವವೆ ಆಯಿತು. ಅನುದಿನದ ವಾಸ್ತವ ಎಂಬುದು ಕೊನೆಯಿರದಷ್ಟು ನಿಧಾನವಾಗಿ ಬರುವ ಸಂಗತಿಯಾಗಿದೆ. ತಾಳ್ಮೆ ಇರುವವರಿಗೆ ಅಷ್ಟೇ ಅದು. ರಷ್ಯಾ ಪುರುಷರು ಒಂಟಿಯಾಗಿರುವ ದೇಶ. ಅಲ್ಲಿನ ಪ್ರತಿಯೊಬ್ಬರೂ ತನ್ನೊಳಗೆ ಒಂದು ಪ್ರಪಂಚವನ್ನು ಹೊಂದಿದ್ದಾರೆ. ಅಲ್ಲಿನ ಪ್ರತಿಯೊಬ್ಬರೂ ವಿನಮ್ರತೆಯುಳ್ಳವರು ಮತ್ತು ಅಪಮಾನದ ಭಯ ಇಲ್ಲದವರು. ಆ ನಿಜವಾದ ಧರ್ಮನಿಷ್ಠೆಯಿಂದಾಗಿಯೇ ಅವರು ಪವಿತ್ರರು. ಇಲ್ಲಿ ಜನರ ಮಾತುಗಳು ಅವರ ನಿಜ ಜೀವನವ ಮೇಲಿರುವ ದುರ್ಬಲವಾದ ಸೇತುವೆಗಳು ಮಾತ್ರ.”
ಏಕಾಂತ ಮತ್ತು ಸಾವಿನ ಮಹಾನ್ ಪ್ರತಿಮೆಗಳು ಕವಿಯ ಕೃತಿಯನ್ನು ಈ ಹಂತದಲ್ಲಿ ಪ್ರವೇಶಿಸುತ್ತವೆ.

ಹೊಸ ಶತಮಾನದ ಮೊದಲ ದಶಕದಲ್ಲಿ ರಿಲ್ಕೆ, ಕೆಲವು ವಿನಾಯಿತಿಗಳ ಹೊರತುಪಡಿಸಿ, ತನ್ನ ಕಲೆಯ ಉತ್ತುಂಗಕ್ಕೇರಿದ. ಈ ಸಂಪುಟದಲ್ಲಿ ಪ್ರತಿನಿಧಿಸಲಾಗಿರುವ ಕವಿತೆಗಳನ್ನು 1900 ಮತ್ತು 1908 ರ ನಡುವೆ ಪ್ರಕಟವಾದ ಕವಿತೆಗಳಿಂದ ಆಯ್ಕೆಮಾಡಲಾಗಿದೆ. ರಿಲ್ಕೆಯ ಕಲೆಯ ಆರೋಹಣ 1900ರ ನಂತರ ಬಹಳ ವೇಗವಾಗಿತ್ತು ಮಾತ್ರವಲ್ಲ ಅಷ್ಟೇ ಅವಸರದ್ದಾಗಿತ್ತು. ಕೆಲವು ವರ್ಷಗಳ ಹಿಂದೆಯೆ ನಾವು ಅಡ್ವೆಂಟ್‌ನಲ್ಲಿ ಓದಿದ್ದೇವೆ:

“ಅದು ಹಾತೊರೆಯುವಿಕೆ: ವಸ್ತುಗಳ ಹರಿವಿನಲ್ಲಿ ವಾಸಿಸಲು.
ಪ್ರಸ್ತುತದಲ್ಲಿ ಅನಿಕೇತನನಾಗಿರುವುದು.
ಇವು ಆಶಯಗಳು: ಮೆಲುಮಾತುಕತೆ
ಶಾಶ್ವತತೆಯೊಂದಿಗೆ ಗತಿಗೆಟ್ಟ ಸಮಯಗಳಲ್ಲಿ.”

ದಾಸ್ ಬಾಚ್ ಡೆರ್ ಬಿಲ್ಡರ್ Das Bach der Bilder ನೊಂದಿಗೆ ಕನಸು ಕೊನೆಗೊಂಡಿತು. ನಮ್ಮ ಮುಂದೆ ಆ ಕವಿದ ಮಂಜಿನ ತೆರೆಯನ್ನು ಮೇಲಕ್ಕೆತ್ತಿ ಹಿಡಿಯಲಾಯಿತು. ಸ್ಪಷ್ಟವಾದ ವರ್ಣರಂಜಿತ ಬಾಹ್ಯರೇಖೆಗಳಲ್ಲಿ ನಮ್ಮ ಕಣ್ಣ ಮುಂದೆ ಉತ್ಕರ್ಷದ ಚಿತ್ರಗಳು ಪ್ರಕಟವಾಗಿವೆ. ಕವಿ ಕೊನೆಯ ತೀರ್ಪಿನ ದಿನದ ವಿಸ್ಮಯಕಾರಿ ವಿವರಣೆಯನ್ನು ದಿ ಕಿಂಗ್ಸ್ ಇನ್ ಲೆಜೆಂಡ್ಸ್ ಪುರಾಣದ ಆಳದಿಂದ ಎತ್ತಿಕೊಳ್ಳುತ್ತಾನೋ ಅಥವಾ ದಿ ಕ್ರಾನಿಕಲ್ ಆಫ್ ಎ ಮಾಂಕ್ ನಿಂದಲೋ ಅಥವಾ ಪಾಮ್ ಭಾನುವಾರದಂದು ಪ್ಯಾರಿಸ್ ನಲ್ಲಿ ನಾವು ದಿ ಮೇಡೆನ್ಸ್ ಅಟ್ ಕನ್ಫರ್ಮೇಷನ್ ಅನ್ನು ನೋಡುತ್ತೇವೆಯೋ, ಕವಿ ಪ್ರಸ್ತುತಪಡಿಸಿದ ವಿಶಿಷ್ಟ ಚಿತ್ರಗಳು ಸ್ಪಷ್ಟತೆ ಮತ್ತು ಅತ್ಯುತ್ಕೃಷ್ಟತೆಯೊಂದಿಗೆ ಎದ್ದು ಕಾಣುತ್ತವೆ.

ರಿಲ್ಕೆ ಈ ಪುಸ್ತಕವನ್ನು ಗೆರ್ಹಾರ್ಟ್ ಹಾಪ್ಟ್‌ಮನ್‌ ಗೆ “ತನ್ನ ಮೈಕೆಲ್ ಕ್ರಾಮರ್‌ ಗೆ ಪ್ರೀತಿ ಮತ್ತು ಕೃತಜ್ಞತೆಯಿಂದ” ಅರ್ಪಿಸಿದ್ದಾನೆ ಎಂಬುದು ಒಂದು ಗಮನಾರ್ಹ ಸಂಗತಿ. ರಿಲ್ಕೆ ತನ್ನ ಕವಿತೆಗಳಲ್ಲಿ ಇರಿಸಿದಂತೆಯೇ ಹಾಪ್ಟ್‌ಮ್ಯಾನ್ ನಮ್ಮ ಮುಂದೆ ಮಹಾಕಾವ್ಯದ ಪಾತ್ರಗಳನ್ನು ಇರಿಸಿದ್ದಾನೆ. ಅವರ ಕಲೆ ಎಷ್ಟು ಸಾಂದ್ರೀಕೃತವಾಗಿತ್ತೆಂದರೆ, ಅವರ ಒಂದು ಪಾತ್ರದ ಚಿಂತನೆಯ ಸರಳ ಅಭಿವ್ಯಕ್ತಿಯೇ ಕೇಳುಗರಲ್ಲಿ ಅಥವಾ ಓದುಗರಲ್ಲಿ ನಡುಕವನ್ನು ಉಂಟುಮಾಡುತ್ತದೆ. ಏಕೆಂದರೆ ಈ ಆಲೋಚನೆಇಡೀ ಸಾಮಾಜಿಕ ವರ್ಗದ ದುಃಖದ ಕಂಪನವನ್ನು ಅನುರಣಿಸುತ್ತದೆ ಮತ್ತು ಅದರಲ್ಲಿ ಅನೇಕ ತಲೆಮಾರುಗಳ ದುಃಖವನ್ನು ಪ್ರತಿಧ್ವನಿಸುತ್ತದೆ.

ಅವರ ಬೆನ್ನ ಹಿಂದಿನ ತೆರೆಯ ಎದುರು ಕಟ್ಟಿದ ಬದುಕಿನ ಚಿತ್ರವು ತುಂಬಾ ವೈವಿಧ್ಯಮಯವಾಗಿದೆ. ಅವರ ಜೀವನದ ಮೇಲಿನ ಪ್ರಭಾವಗಳು ಹಲವು. ಅವರ ಕೃತಿಯ ಅಧ್ಯಯನವು ಎಷ್ಟೇ ಅಲ್ಪ ಪ್ರಮಾಣವಾಗಿದ್ದರೂ, ಈ ಕವಿಯ ಮೂಲಧಾತುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಕಾರಣ ಅವುಗಳ ಮೂಲಕವೇ ಈ ಕವಿ ದೊಡ್ಡ ಮಾಸ್ಟರ್ ಆಗಿ ಪ್ರಬುದ್ಧತೆಯನ್ನು ಪಡೆದಿದ್ದು.

ದಿ ಬುಕ್ ಆಫ್ ಪಿಕ್ಚರ್ಸ್‌ ನಲ್ಲಿ ರಿಲ್ಕೆಯ ಕಲೆ ತನ್ನ ಪರಾಕಾಷ್ಠೆಯನ್ನು ತಲುಪುತ್ತದೆ. ದೃಶ್ಯೀಕರಣವು ನಿರಾಕಾರವೂ ವಸ್ತುನಿಷ್ಠವೂ ಆದ ಮಟ್ಟಕ್ಕೆ ಏರುತ್ತದೆ. ಇದು ಈ ಕವಿತೆಗಳ ಲಯಕ್ಕೆ ಕಲಕಲಾಗದ ಶಾಂತತೆಯನ್ನು, ಚಿತ್ರಗಳಿಗೆ ಒಂದು ನೇರನಿಲುವನ್ನು ನೀಡುತ್ತದೆ. ದಿ ಮೆನ್ ಆಫ್ ದಿ ಹೌಸ್ ಆಫ್ ಕೊಲೊನ್ನಾ, ದಿ ಝಾರ್ಸ್, ಚಾರ್ಲ್ಸ್ XII ರೈಡಿಂಗ್ ಥ್ರೂ ಉಕ್ರೇನ್ ಗಳಲ್ಲಿನ ಪ್ರತಿಯೊಂದನ್ನು ತನ್ನ ವೈಯಕ್ತಿಕ ಐತಿಹಾಸಿಕ ಸೂಚನೆಗಳೊಂದಿಗೆ ಪ್ರಕಾಶಮಾನವಾಗಿ ಚಿತ್ರಿಸಲಾಗಿದೆ. ಅದು ಅವನು ತಮ್ಮ ಕಾಲಕ್ಕೆ ನೀಡಿದ ಪ್ರಬಲ ವರ್ಣಮಯತೆ ಮತ್ತು ಜಂಗಮಶೀಲತೆ.

ಪೌರಾಣಿಕ ಕವಿತೆ ‘ಕಿಂಗ್ಸ್ ಇನ್ ಲೆಜೆಂಡ್ಸ್’ ನಲ್ಲಿ ರಿಲ್ಕೆಯ ಕಲೆಯಲ್ಲಿನ ಈ ಸುಸಂಬದ್ಧ ಅಂಶವು ಬಹುಶಃ ಅದರ ಸರ್ವೋಚ್ಚ ಅಭಿವ್ಯಕ್ತಿಯನ್ನು ಕಂಡುಕೊಂಡಿದೆ:

“ಹಳೆಯ ವೀರಗಾಥೆಗಳಲ್ಲಿ ಸಂಜೆ ಬೆಳಕಲ್ಲಿ ರಾಜರು
ಕಾಣುತ್ತಾರೆ, ಏರುತ್ತಿರುವ ಪರ್ವತಗಳಂತೆ.
ಅವರು ತಮ್ಮ ಬೆಳಗುವಿಕೆಯಿಂದ
ಎಲ್ಲರನ್ನು ಕುರುಡಾಗಿಸುತ್ತಾರೆ
ಅವರ ಸೊಂಟವು ಪ್ರಕಾಶಮಾನವಾದ
ಕವಚಗಳಿಂದ ಸುತ್ತುವರೆದಿರುತ್ತವೆ
ಅವರ ನಿಲುವಂಗಿಯ ಅಂಚುಗಳನ್ನು
ಅಪರೂಪವಾಗಿ ಭೂಮಿಯು ನೀಡುವ
ಅಮೂಲ್ಯವಾದ ಹರಳುಗಳನ್ನು
ಹಚ್ಚಿದ ಪಟ್ಟಿಗಳಿಂದ ಅಲಂಕರಿಸಲಾಗಿದೆ
ರತ್ನಖಚಿತ ಆಭರಣಗಳು ಮುಚ್ಚಿದಂಥ ಕೈಗಳಿಂದ
ಅವರು ತಮ್ಮ ತೆಳ್ಳಗಿನ, ಹೊಳೆಯುವ
ಹಿರಿದ ಕತ್ತಿಗಳನ್ನು ಎತ್ತಿಹಿಡಿದಿದ್ದಾರೆ.”

ದಿ ಬುಕ್ ಆಫ್ ಪಿಕ್ಚರ್ಸ್ ನಲ್ಲಿರುವ ಕವಿತೆಗಳಲ್ಲಿ – ಇನಿಶಿಯೇಷನ್‌ ನಲ್ಲಿರುವಂತೆ-ಒಂದು ಮನಸ್ಥಿತಿಯನ್ನು, ಅದರ ಸಾರ ಮತ್ತು ಏಕಾಗ್ರತೆಗೆ ಕೇಂದ್ರೀಕರಿಸುವ ಮತ್ತು ಅದನ್ನುಸಂಪೂರ್ಣವಾಗಿ ಭಾವಗೀತಾತ್ಮಕ ಕವಿತೆಗಳಿಗೆ ಅನ್ವಯಿಸುವ ಇಚ್ಛೆಯನ್ನು ತೋರಲಾಗುತ್ತದೆ. ಅದು ಈ ಸಂಪುಟದಲ್ಲಿನ “ದಿ ಗ್ರೇಟ್ ಡಾರ್ಕ್ ಟ್ರೀ” ನಂತಹ ಕವಿತೆಗಳಲ್ಲಿ ಎದ್ದು ಕಾಣುವಂತಿದೆ.

ರಾತ್ರಿಯ ದೂರದ ಮೌನಕ್ಕೆ ತಲುಪುವ ಅದರ ಆಕಾಂಕ್ಷೆಯ ಸರಳರೇಖೆಯ ಸಾಲು ಲೌಕಿಕ ಅಳತೆಯನ್ನು ಸೋಲಿಸುತ್ತದೆ. ಶರತ್ಕಾಲ ಎಂಬ ಶೀರ್ಷಿಕೆಯ ಕವಿತೆಯಲ್ಲಿರುವಂತೆ ಸಕಲ ಪ್ರಕೃತಿಯಲ್ಲಿ ಶಾಂತತೆಯ ಮೂಲದ ವಿಷಣ್ಣತೆಯು ಕವಿಯುವ ಮನಸ್ಥಿತಿಯಲ್ಲೂ ಇದೇ ಎದ್ದುಕಾಣುತ್ತದೆ.

ದಿ ಬುಕ್ ಆಫ್ ಅವರ್ಸ್‌ ನಲ್ಲಿ, ರಿಲ್ಕೆ ಪ್ರಪಂಚದಿಂದ ಹಿಂದೆ ಸರಿಯುವುದು ಬೇಸರದಿಂದಲ್ಲ, ಅನೇಕ ರೀತಿಯ ಸಂಘರ್ಷಮಯ ದೃಷ್ಟಿಕೋನಗಳ ಭಾರದ ಅಡಿಯಲ್ಲಿ. ಜಗತ್ತಿಗೆ ಒಂದು ದೊಡ್ಡ ಆಸ್ತಿಯನ್ನು ತರುವ ಪ್ರವಾದಿಯು ತನ್ನ ಒಳಗಿನಿಂದಲೇ ದೇವನ ಚಕ್ರಾಧಿಪತ್ಯವು ತನ್ನವರೆಗೆ ಬರುವ ತನಕ ಏಕಾಂಗಿಯಾಗಿರಲು ಮರುಭೂಮಿಗೆ ಹೋಗಲೇಬೇಕು. ಹಾಗೆಯೇ ಕವಿಯು ಆಳವಾದ ತಿಳುವಳಿಕೆಯನ್ನು ಪಡೆಯಲು, ದೇವರೊಂದಿಗೆ ಮುಖಾಮುಖಿಯಾಗಿ ಇರಲು ಜಗತ್ತನ್ನು ತೊರೆಯಲೇಬೇಕು. ದಾಸ್ ಸ್ಟಂಡನ್ ಬುಚ್ – The book of hours– ಕವಿತೆಯ ಮನಸ್ಥಿತಿಯು ದೇವರೊಂದಿಗೆ ಮುಖಾಮುಖಿಯಾಗುವ ಮನಸ್ಥಿತಿ; ಇದು ಈ ಕವಿತೆಗಳನ್ನು ಪ್ರಾರ್ಥನೆ, ಸಂಶಯ ಮತ್ತು ಹತಾಶೆಯ ಆಳವಾದ ಪ್ರಾರ್ಥನೆ, ಪರಾಕಾಷ್ಠೆಯ ಭಕ್ತಿ ಮತ್ತು ಹೊಂದಾಣಿಕೆ ಮತ್ತು ಗೆಲುವಿನ ಉನ್ನತ ಪ್ರಾರ್ಥನೆಗಳೊಂದಿಗೆ ಮುಖಾಮುಖಿಯಾಗಿಸುತ್ತವೆ.

ಕವಿಯ ಜೀವನದಲ್ಲಿ ವಿವಿಧ ಅವಧಿಗಳಲ್ಲಿ ಬರೆದ ಮೂರು ಕಾವ್ಯ ಭಾಗಗಳನ್ನು ‘ದಿ ಬುಕ್ ಆಫ್ ಅವರ್ಸ್’ ಒಳಗೊಂಡಿದೆ: ದಿ ಬುಕ್ ಆಫ್ ಎ ಮಾಂಕ್ಸ್ಲೈಫ್ (1899); ದಿ ಬುಕ್ ಆಫ್ ಪಿಲ್ಗ್ರಿಮೇಜ್ (1901), ಮತ್ತು ದಿ ಬುಕ್ ಆಫ್ ಪಾವರ್ಟಿ ಮತ್ತು ಡೆತ್(1903). ಈ ಇಡೀ ಸಂಗ್ರಹವನ್ನು ನಂತರದ ಹಲವಾರು ವರ್ಷಗಳ ಕಾಲ ಪ್ರಕಟಿಸಲಾಗಿರಲಿಲ್ಲ.

ದೇವರನ್ನು ತಿಳಿದುಕೊಳ್ಳಲು, ಅವನ ಹತ್ತಿರ ಇರಲು ಅತೀಂದ್ರಿಯ ಉತ್ಸಾಹದಿಂದ ದಿ ಬುಕ್ ಆಫ್ ಅವರ್ಸ್ ಉರಿಯುತ್ತದೆ. ದಿ ಬುಕ್ ಆಫ್ ಎ ಮಾಂಕ್ಸ್ಲೈಫ್ ಕೃತಿಯಲ್ಲಿನ ಯುವ ಸಹೋದರ ನಾಮರಹಿತನ ಬಳಿಗೈಯುವ ಅದಮ್ಯ ಆಸೆಯಲ್ಲಿ ವರ್ಣಿಸುವ ದೇವರ ದೃಷ್ಟಾಂತಗಳು, ರೂಪಕ ಸಂಕೇತಗಳು ಮತ್ತು ದಂತಕಥೆಗಳ ಸಂಬಂಧದಲ್ಲಿ ಹದಿನೇಳನೇ ಶತಮಾನದ ಏಂಜಲೀಸ್ ಸಿಲಿಸಿಯಸ್‌ ನನ್ನು ನೆನಪಿಸುತ್ತಾನೆ. ಆದರೆ ಹೆಚ್ಚು ಫಲವಂತ ಭಾಷೆಯಿಂದ ಅದನ್ನು ಸಮೃದ್ಧಿಗೊಳಿಸಿಕೊಂಡಿದ್ದಾನೆ. ಅವನಲ್ಲಿ ಹೆಚ್ಚು ಉತ್ಸಾಹಭರಿತ ದಾರ್ಶನಿಕ ಶಕ್ತಿಯಿದೆ.

ಈ ಕೆಳಗಿನ ಸಾಲುಗಳಿಂದ ಪ್ರಾರಂಭವಾಗುವ ಕವಿತೆಯಲ್ಲಿ ಸನ್ಯಾಸಿಯ ಜೀವನದ ಮುಖ್ಯಧ್ಯೇಯವು ವಿಶಿಷ್ಟವಾಗಿ ವ್ಯಕ್ತವಾಗಿದೆ…

“ನನ್ನ ಜೀವನವು ವ್ಯಾಪಕವಾಗಿ ಬೆಳೆಯುವ ವೃತ್ತಗಳಲ್ಲಿದೆ
ಅಂತ್ಯವಿಲ್ಲದೆ ಬಿಚ್ಚಿಕೊಳ್ಳುತ್ತಲಿದೆ”

ಪುನರುಜ್ಜೀವನದ ಗುರುಗಳ ಪ್ರಕಾಶಮಾನವಾದ ಜ್ಞಾನವರ್ಣಗಳು ತರುಣ ಸನ್ಯಾಸಿಯ ಜ್ಞಾನಕೋಶದ ಮೂಲಕ ಭವ್ಯತೆಯಲ್ಲಿ ಮಿಂಚುತ್ತವೆ. ವೆನೀಶಿಯನ್ ಮಾರ್ಗದ ಟಿಟಿಯನ್ನಲ್ಲಿ, ಮೈಕೆಲ್ಯಾಂಜೆಲೊನಲ್ಲಿ, ರಾಫೆಲ್ ನಲ್ಲಿ ತನ್ನನ್ನು ಚೈತನ್ಯಶೀಲನನ್ನಾಗಿ ಮಾಡುವ ಅದೇ ಸಂಭ್ರಮ-ಉತ್ಸಾಹವನ್ನು ಅವನು ಅನುಭವಿಸುತ್ತಾನೆ. ಅವರೂ ಅದೇ ದೇವರ ಆರಾಧಕರು. ‘ದಿ ಬುಕ್ ಆಫ್ ಪಿಲ್ಗ್ರಿಮೇಜ್’ ನಲ್ಲಿ ದೊಡ್ಡ ಕ್ಯಾಥೆಡ್ರಲ್ ನಲ್ಲಿ ಪಿಸುಗುಟ್ಟಿದ ಪ್ರಾರ್ಥನೆಯ ಸ್ಥಿರತೆಯುಳ್ಳ ಕವನಗಳಿವೆ. ಅಲ್ಲದೆ ತಮ್ಮ ಉಲ್ಲಾಸದಲ್ಲಿ ಪ್ರಬಲ ಸ್ತುತಿಗೀತೆಗಳ ಸಂಗೀತವನ್ನು ಹೊತ್ತಿರುವ ಇತರ ಕವಿತೆಗಳೂ ಇವೆ.

ಈ ಎರಡನೇ ಪುಸ್ತಕದಲ್ಲಿನ ದರ್ಶನಗಳು ಆನಂದಾತ್ಮಕವಾಗಿ ಕಡಿಮೆಯಲ್ಲ. ಆದರೂ, ಕಡಿಮೆ ವರ್ಣರಂಜಿತವಾಗಿ ಅಂದರೆ ಸಾಧಾರಣವಾಗಿ ವರ್ಣಿತವಾಗಿವೆ;

ಅವನು ಸ್ವಯಂಹಿಂಜರಿದು ಅಂತರ್ಮುಖನಾಗಿದ್ದಾನೆ. ದಿ ಪೊಯಮ್ ಆಫ್ ಗಾಡ್ ನಲ್ಲಿರುವಂತೆ ಅಪಾರ ಶಾಂತಿ ಮತ್ತು ದೈವನಂಬಿಕೆಯನ್ನು ತಂದಿದ್ದಾನೆ, ಮೌನಲೋಕದ ಪ್ರಶಾಂತಿ ಮತ್ತು ನಿಷ್ಕಾಮ ಅವನ ಸಾರ್ವತ್ರಿಕ ಅಭಿವ್ಯಕ್ತಿಯಾಗಿದೆ.

“ಹಗಲು ನೀನು ದಂತಕಥೆ, ಮತ್ತು ಮೆಲುದನಿಯ ಹಾಗೆ
ಮನುಷ್ಯರೆಲ್ಲರ ಮೇಲೂ ತೇಲುತ್ತಲಿರುವ ಸ್ವಪ್ನ
ಗಂಭೀರ ಮತ್ತು ಕಾವುಕೂತ ಹೇಂಟೆಯ ನಿಶ್ಚಲತೆ.
ಗಂಟೆ ಹೊಡೆದ ನಂತರ ಮತ್ತೆ ಮುಚ್ಚುವಿಕೆ ನಿಜ
ಮಂಪರು ಭಾವದ ಹೊತ್ತು ಬಾಗಿ ಸಂಜೆಯ ಆಕಾಶದ
ಅಡಿ ಮಲಗಲು ಮುಳುಗುತ್ತದೆ
ಪ್ರತಿ ಛಾವಣಿಯಿಂದ ಹೊರಬರುವ ಹೊಗೆಯೊಂದು ಶಿಖರಗೋಪುರ
ಹಾಗೆ ನನ್ನ ದೇವರೆ, ನನ್ನ ಸುತ್ತ ನಿನ್ನ ನೆಲೆವೀಡು ಎದ್ದುಬರಲಿ.”

ರಿಲ್ಕೆಯ ಕೃತಿಗಳಲ್ಲಿ ‘ದಿ ಬುಕ್ ಆಫ್ ಅವರ್ಸ್’ ಪುಸ್ತಕದ ಕೊನೆಯ ಭಾಗ, ದಿಬುಕ್ ಆಫ್ ಪಾವರ್ಟಿ ಅಂಡ್ ಡೆತ್, ಅಂತಿಮವಾಗಿ, ಎರಡು ಮಹಾನ್ ಸಂಕೇತಿಕ ವಿಚಾರಗಳ ವೈವಿಧ್ಯತೆಗಳ ಒಂದು ಮೇಳವಾಗಿದೆ. ಶ್ರೀಮಂತ ತರುಣನ ಉಪಮಾನದಲ್ಲಿನ ಕ್ರಿಸ್ತನು ಎಲ್ಲ ಸಂಪತ್ತನ್ನು ತ್ಯಜಿಸುವಂತೆ ಆಗ್ರಹಿಸುತ್ತಾನೆ. ಹಾಗೆಯೇ ಈ ಕೃತಿಯಲ್ಲಿ, ನಮ್ಮ ಎಲ್ಲ ಹಂಬಲಗಳ ಈಡೇರುವಿಕೆಗಾಗಿ, ಕವಿಯು ದೇವನರಾಜ್ಯದ ಆಗಮನವನ್ನು ನಿರೀಕ್ಷಿಸುತ್ತಾನೆ. ನಾವು ಸ್ವತಃ ದೇವನಂತೆಯೇ ಮತ್ತೆ ಸರಳರಾಗಿ ಪುಟ್ಟ ಮಕ್ಕಳಂತೆ ಮತ್ತು ದರಿದ್ರರಂತೆ ಮಾರ್ಪಟ್ಟಾಗಲೆ ಈ ದೇವರ ರಾಜ್ಯಕ್ಕೆ ಸೇರಲು ಅರ್ಹರಾಗುವುದು. ಈ ಹಿನ್ನಲೆಯಲ್ಲಿ ಗಮನಿಸಿದರೆ ರಿಲ್ಕೆಯ ಬೆಳವಣಿಗೆಯ ಹಂತದಲ್ಲಿ, ಅವನ ಪರಿತ್ಯಾಗದ ತತ್ವವು ಸ್ವಯಂ ಅವನ ತಾತ್ತ್ವಿಕತೆಯಲ್ಲಿನ ಒಂದು ನಿರ್ದಿಷ್ಟ ಋಣಾತ್ಮಕ ಅಂಶವನ್ನು ಒಳಗೊಳ್ಳುತ್ತದೆ.

ಕವಿಯು ನಂತರ ಕನಿಷ್ಟಪಕ್ಷಕಲೆಯ ಆವರಣದಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿರುವ ಅಥವಾ ರಚಿಸಲಾಗಿರುವ ಮನುಷ್ಯನ ಸಂಗ್ರಹವನ್ನು ಕುರಿತು ಧನಾತ್ಮಕ ಸಮ್ಮತಿಯೊಂದರ ಕಡೆಗೆ ಸಾಗುತ್ತಾನೆ. ಈ ಅವಧೂತತ್ವದ ಹಾದಿಯಲ್ಲಿನ ನಮ್ಮ ಈ ಕ್ರಮಣ ವಿಧಾನದಲ್ಲಿ ನಾವು ವಾಸ್ತವವನ್ನು ಅತ್ಯಂತ ಆಳವಾಗಿ ಸ್ಪರ್ಶಿಸುತ್ತೇವೆ.

ಈ ಕಾರಣದಿಂದಲೆ ಎಲ್ಲ ಕಲೆ ಮತ್ತು ಎಲ್ಲ ತತ್ವಗಳೂ ತಮ್ಮ ಅಂತಿಮ ರೂಪಗಳಲ್ಲಿ ಜೀವನ ಮೌಲ್ಯಗಳ ಸಾಂದ್ರೀಕರಣವಾಗಿ ಉಳಿಯುತ್ತವೆ. ಅವು ಶುದ್ಧ ಪ್ರಜ್ಞೆಗೆ ಶಾಶ್ವತವಾಗಿ ವಿವರಿಸಲಾಗದ ಕಾರಣಗಳಾಗಿ ಉಳಿದರೆ ಆ ಮಾತಿನ ಸರಳ ಆದರೆ ಗಹನವಾದ ಅರ್ಥದಲ್ಲಿ ಅವು ಧಾರ್ಮಿಕವಾಗುತ್ತವೆ.

ಜೀವನದಲ್ಲಿನ ಸಂಶಯ ಮತ್ತು ಕಲಹಗಳ ನಿತ್ಯ ಸಂಗತಿಗಳು ಧಾರ್ಮಿಕ ನಂಬಿಕೆಗೆ ಹೊಂದಾಣಿಕೆ ಆಗುವ ಮುನ್ನ, ಇಚ್ಛಾಶಕ್ತಿ ಮತ್ತು ಅಭಿಮಾನಗಳು ವಿನಯವಾಗಿ ಬದಲಾಗುತ್ತವೆ. ಕಾವ್ಯದ ಮಾಧ್ಯಮದಲ್ಲಿ ವ್ಯಕ್ತವಾದ ಈ ಸತ್ಯದ ಸಾಕ್ಷಾತ್ಕಾರವೇ ರಿಲ್ಕೆ ಅವರ ದಿ ಬುಕ್ ಆಫ್ ಅವರ್ಸ್ ಪುಸ್ತಕದ ವಿಶೇಷತೆ. ದಾಸ್ ಸ್ಟಾರ್ಡನ್-ಬುಚ್ ಕೃತಿ ನಮ್ಮ ಕಾಲದ ಪರಮೋಚ್ಚ ಸಾಹಿತ್ಯಕ ಸಾಧನೆಗಳಲ್ಲೊಂದು ಎಂದು ಖ್ಯಾತ ಸ್ಕ್ಯಾಂಡಿನೇವಿಯನ್ ಲೇಖಕನೊಬ್ಬ ಘೋಷಿಸುತ್ತಾನೆ. ಅಲ್ಲದೆ ಅದನ್ನು ಸರ್ವೋಚ್ಚ ಪ್ರಾರ್ಥನಾ ಗ್ರಂಥ ಎಂದೂ ನುಡಿಯುತ್ತಾನೆ.

ತರುವಾಯದ ತನ್ನ ಕಾವ್ಯ ಕೃತಿಯಲ್ಲಿ ರಿಲ್ಕೆ ಈ ಪುಸ್ತಕದ ಯಾವತ್ತೂ ಉಳಿವ ಉನ್ನತ ಗುಣಮಟ್ಟವನ್ನು ತಲುಪಲಿಲ್ಲ. ಅದರ ಮನಸ್ಥಿತಿ ಮತ್ತು ಕಲ್ಪನೆಯನ್ನು ಅವನು ಅತ್ಯಂತ ಮನೋಹರವಾದ ಭಾವಗೀತಾತ್ಮಕ ಸೌಂದರ್ಯದ ಗದ್ಯ ಕೃತಿಯೊಳಕ್ಕೆ ಸೇರಿಸಿದ್ದಾನೆ. ಅದು ದಿ ಸ್ಕೆಚ್ ಆಫ್ ಮಲ್ಟೀ ಲಾರಿಡ್ಸ್ ಬ್ರಿಗೆಜ್.


ನ್ಯೂ ಪೊಯೆಮ್ಸ್ ನಲ್ಲಿ (1907) ಮತ್ತು ನ್ಯೂಪೊಯೆಮ್ಸ್ ನ ಎರಡನೆಯ ಭಾಗದಲ್ಲಿ (1908) ಹಳೆಯ ಒಡಂಬಡಿಕೆಯಿಂದ ಮತ್ತೆಮತ್ತೆ ಅಳವಡಿಸಿಕೊಂಡ ಚಾರಿತ್ರಿಕ ಮೂರ್ತಿಯು ಜೀವನದ ಪ್ರಮಾಣಗಳನ್ನು ಮೀರಿ ಬೆಳೆದಿದೆ. ಇದು ವಿಧಿಬರಹದಿಂದ ಕೂಡಿ ಭಾರವಾಗಿದೆ ಹಾಗೂ ಅನಿವಾರ್ಯವೆಂಬಂತೆ ಒಂದು ಅಮೂರ್ತ ಚಿಂತನೆ ಅಥವಾ ಶ್ರೇಷ್ಠ ಮಾನವ ಭವಿಷ್ಯವನ್ನು ವ್ಯಕ್ತಪಡಿಸುವ ಸಾಧನವಾಗುತ್ತದೆ.

ಅಬಿಷಾಗ್- ಬೈಬಲ್ ನ ಒಂದು ಸ್ತ್ರೀ ಪಾತ್ರ. ಅದು ಮುಳುಗುತ್ತಿರುವ ಮತ್ತು ಮಸಕಾಗುತ್ತಿರುವ ಬದುಕಿನ ನಡುವಣ ಕಾಂಟ್ರಾಸ್ಟ್ – ಭಿನ್ನತೆ- ಅನ್ನು ಪ್ರಸ್ತುತಪಡಿಸುತ್ತದೆ. ‘ಡೇವಿಡ್ ಸಿಂಗಿಂಗ್ ಬಫೋರ್ಸೌಲ್’ ಜಾಗೃತಿಯ ಆಶಯದ ಅಸಹನೆಯನ್ನು ತೋರಿಸುತ್ತದೆ. ಜೋಶುವಾ, ತನ್ನ ಕೆಲಸವನ್ನು ಮಾಡಲು ದೇವರನ್ನು ಕೂಡ ಒತ್ತಾಯಿಸುವ ವ್ಯಕ್ತಿ. ‘ಎರಾನ್ನಾ ಟು ಸಪ್ಫೋ’, ‘ಲಾಮೆಂಟ್ ಫಾರ್ ಆಂಟಿನಸ್’, ‘ಅರ್ಲಿ ಅಪೊಲೋ’ ಮತ್ತು ‘ಆರ್ಕ್ಯಾಯಿಕ್ಟೋರ್ಸೋ ಆಫ್ ಅಪೊಲೊ’ ಎಂಬ ಕಾವ್ಯಗಳಲ್ಲಿ ಪುರಾತನ ಹೆಲೆನಿಕ್ ಪ್ರಪಂಚ ಕಣ್ಣುಕುಕ್ಕುವಷ್ಟು ಜಾಜ್ವಲ್ಯಮಾನ ವೈಭವದೊಂದಿಗೆ ಹುಟ್ಟಿಬರುತ್ತದೆ.

ಹಲವಾರು ಕವಿತೆಗಳಲ್ಲಿ ಮಧ್ಯಕಾಲೀನ ಯುಗದ ಮನೋಭಾವನೆಯನ್ನು ಅದರ ಎಲ್ಲಾ ಧಾರ್ಮಿಕ ಸಮರ್ಪಣಾಭಾವ ಮತ್ತು ಮೂಢನಂಬಿಕೆಯ ಹಾಗೂ ಅಂಧ ಧರ್ಮಶ್ರದ್ಧೆಯ ಜೊತೆಯಲ್ಲಿ ಪ್ರತೀಕಗೊಳಿಸಲಾಗಿದೆ. ಅವುಗಳಲ್ಲಿ ಮುಖ್ಯವಾದವು ದಿ ಕ್ಯಾಥೆಡ್ರಲ್, ಗಾಡ್ ಇನ್ ದ ಮಿಡಲ್ ಏಜಸ್, ಬಲಿದಾನದ ಪ್ರತೀಕನಾದ ಸೇಂಟ್ ಸೆಬಾಸ್ಟಿಯನ್, ಮತ್ತು ಪ್ರಜ್ವಲಿಸುವ ಹುಲಿಯ ಕಣ್ಣಿನ ಸಮ್ಮೋಹನ ಶಕ್ತಿಗೆ ಹೋಲಿಸಲಾಗಿರುವ ‘ದಿ ರೋಸ್ ವಿಂಡೋ’.

ಆಧುನಿಕ ಪ್ಯಾರಿಸ್ ಅನೇಕ ವೇಳೆ ಹೊಸ ಕವಿತೆಗಳ ಹಿನ್ನೆಲೆಯಾಗಿದೆ. ಮಸಣದಲ್ಲಿನ ಭ್ರಮನಿರಸನಗೊಂಡ ಬದುಕಿನ ಮೇಣದ ಮುಖವಾಡಗಳ ಮೇಲೆ ಬೆಳಕು ಮತ್ತು ನೆರಳಿನ ಅಸೂಕ್ಷ್ಮ ಅಭಿನಯವು ಅಷ್ಟೇ ತೀವ್ರವಾದ ವಾಸ್ತವಿಕ ದೃಷ್ಟಿಯಿಂದ ಫ್ಲೆಮಿಂಗೊಗಳು ಮತ್ತು ಗಿಳಿಗಳು ತಮ್ಮ ವಿವಿಧ ಬಣ್ಣಗಳ ಮೃದುವಾದ ಪುಕ್ಕಗಳನ್ನು ಜಾರ್ಡಿನ್ ಡೆಸ್ ಪ್ಲಾಂಟೆಸ್ ನ ಅವೆನ್ಯೂದಲ್ಲಿ ಸೂರ್ಯನ ಬೆಳಕಿನ ಬಿಸುಪಿನಲ್ಲಿ ಹರಡುತ್ತವೆ ಎಂಬುದನ್ನು ಹಿಡಿದಿಡಲಾಗಿದೆ.

ಈ ಎರಡು ಸಂಪುಟಗಳಲ್ಲಿರುವ ಬಹುತೇಕ ಕವಿತೆಗಳು ಸಂಕ್ಷಿಪ್ತವಾಗಿ, ಕರಾರುವಾಕ್ಕಾಗಿ ರಚಿಸಲಾಗಿವೆ. ಕಾವ್ಯಚಿತ್ರಗಳನ್ನು ಸಂವೇದನಾತ್ಮಕ ಗ್ರಹಣ ತಂತ್ರದ – impressionistic technique– ಸೂಕ್ಷ್ಮವೂ ಸಂವೇದನಾಶೀಲವೂ ಆದ ತೀವ್ರತೆಯೊಂದಿಗೆ ರಚಿಸಲಾಗಿದೆ. ದಿ ಬುಕ್ ಆಫ್ ಪಿಕ್ಚರ್ಸ್ ನ ಉದ್ದನೆಯ ಸಾಲುಗಳಿಗಿರುವ ಘನವಾದ ಪ್ರಶಾಂತತೆಯು ಛಿದ್ರವಾಗಿ ಹೋಗಿವೆ. ಬಣ್ಣಗಳನ್ನು ಹೆಚ್ಚು ಚೈತನ್ಯೀಕರಿಸಿ, ಹೆಚ್ಚು ಬೆಳಗಿಸಿ, ಚಿತ್ರಗಳನ್ನು ಅಧೀರತೆಯ ರೇಖೆಗಳಲ್ಲಿ ಚಿತ್ರಿಸಲಾಗಿದೆ. ಅವನ್ನು ಗ್ರಹಿಸಿದ ರೀತಿಯನ್ನು ತಿಳಿಸಲು ಹೀಗೆ ಮಾಡಿರಬಹುದು ಎನಿಸುವಂತೆ ಇದೆ. ಈ ಕಾರಣಕ್ಕಾಗಿ ಈ ದಿ ನ್ಯೂ ಪೊಯೆಮ್ಸ್ ಲ್ಲಿನ ಅನೇಕ ಹೊಸ ಕವಿತೆಗಳು ಒಂದು ನಿರ್ದಿಷ್ಟ ಚಾತುರ್ಯದ ಅಂಶದಿಂದ ಪೂರ್ಣಮುಕ್ತವಾಗಿಲ್ಲ.

ಅಷ್ಟೇ ಅಲ್ಲ, ರಿಲ್ಕೆ ಹಲವೆಡೆ ತನ್ನ ಕ್ಷಿಪ್ರ ವೇಗದ ನೆರೇಟಿವ್ ಅನ್ನು ಪದ್ಯದಲ್ಲಿ ಸಾಧಿಸುತ್ತಾನೆ. ಉದಾಹರಣೆಗೆ ನಮ್ಮ ಆಂತರಿಕ ದೃಷ್ಟಿಯ ದಿಗಂತದಲ್ಲಿ ಪ್ರಕಾಶಮಾನವಾಗಿ ಮೇಲೇರುವ ಸ್ಪ್ಯಾನಿಷ್ ನರ್ತಕಿಯು – ದಿ ಸ್ಪಾನಿಷ್ ಡಾನ್ಸರ್-ತನ್ನ ಚಲನೆಗಳ ಕ್ಷಣದಲ್ಲಿ, ಪುಳಕಗೊಂಡು, ಬೆಳಗಿ, ನೋಡುಗರ ಕಣ್ಣು ಪ್ರಜ್ವಲಿಸಿ, ಅವರನ್ನು ಕುರುಡರನ್ನಾಗಿಸಿದಂತೆ ತೋರಿದರೆ, ಡೆಗಾಸ್ ಮತ್ತು ಜುಲೋಗ ತಮ್ಮ ಕಲೆಯನ್ನು ಒಂದು ಭಿತ್ತಿಯ ಮೇಲೆ ಸಂಯೋಜಿಸಿ, ಈ ನರ್ತಕಿಗೆ ಹೇರಳವಾದ ಸ್ಥಿತಿಸ್ಥಾಪಕತ್ವ ಮತ್ತು ಬಣ್ಣದ ಅದ್ಭುತ ಕಲ್ಪನಾಶಕ್ತಿಯ ಅನುಗ್ರಹ ನೀಡುವಂತೆ ತೋರುತ್ತದೆ.

ಹೊಸ ಕವಿತೆಗಳಲ್ಲಿನ ಅನೇಕ ವಸ್ತು-ವಿಚಾರಗಳು, ರಿಲ್ಕೆ ಈ ಸಂಕಲನಗಳನ್ನು ಬರೆಯುವುದಕ್ಕೆ ಮುಂಚೆ ಇಟಲಿ, ಜರ್ಮನಿ, ಫ್ರಾನ್ಸ್, ಮತ್ತು ಸ್ಕ್ಯಾಂಡಿನೇವಿಯಗಳಲ್ಲಿ ಸವಿಸ್ತಾರವಾಗಿ ಸಂಚರಿಸಿದವನು ಎಂಬ ಮಾತಿಗೆ ಸಾಕ್ಷಿಯಾಗಿವೆ. ರಿಲ್ಕೆ ಒಂದು ಕಾಲಕ್ಕೆ ಉಳಿದಿದ್ದ ವರ್ಪ್ಸ್ವೀಡ್ ಎಂಬ ಕಲಾವಿದರ ವಸತಿಯಲ್ಲಿನ ಐವರು ವರ್ಣಚಿತ್ರಕಾರರ ಬಗೆಗಿನ ಅವನದೇ ಪುಸ್ತಕ ಸಂಪೂರ್ಣವಾಗಿ ಅಲ್ಲಿನ ವಾತಾವರಣದ ಅವಲೋಕನಕ್ಕೆ, ಆಕಾಶದ ಚಲನೆ ಮತ್ತು ಉತ್ತರ ಭೂದೃಶ್ಯದ ದೂರದ ಹುಲ್ಲುಬಯಲಿನ ಮೇಲೆ ನೆರಳು ಬೆಳಕು, ಬಣ್ಣಗಳು ಆಡುವ ಆಟದ ಬಗ್ಗೆ ಮೀಸಲಾಗಿದೆ. ಇದು ಭೂದೃಶ್ಯ ವರ್ಣಚಿತ್ರಕಾರರ ಎಲ್ಲಾ ಕೆಲಸಗಳ ಕುರಿತ ವ್ಯಾಖ್ಯಾನವಾಗಿದೆ. ಇದು ಭೂಮಿಗೆ ಬರೆದ ಒಂದು ಎಳೆಯ ಕವಿತೆ. ತನ್ನ ಏಕಾಂತ ಮತ್ತು ದುಮ್ಮಾನಗಳ ಕಾವ್ಯ ಸೌಂದರ್ಯ ತನ್ನ ಕೃತಿಯೊಳಕ್ಕೆ ಪ್ರವೇಶಿಸಿದ ಬಗ್ಗೆ ಒಂದು ಪ್ರವೇಶಿಕೆ.

ತನ್ನ ಜೀವನದ ಅತ್ಯಂತ ಫಲಪ್ರದವಾದ ವರ್ಷಗಳಲ್ಲಿ ತಾನು ಸಂಚರಿಸಿದ ದೇಶಗಳಲ್ಲಿ ಭೇಟಿಯಾದ, ನಂತರ ತನ್ನ ಕೃತಿಗಳ ಮೇಲೆ ಪರಿಣಾಮವನ್ನು ಬೀರಿದ ವ್ಯಕ್ತಿ-ವ್ಯಕ್ತಿತ್ವಗಳು ಮತ್ತು ಎದುರಾದ ಕಲಾ ಸಂಪತ್ತಿಗಿಂತ ರಿಲ್ಕೆಗೆ ಹೆಚ್ಚು ಮಹತ್ವಪೂರ್ಣವಾದುದು ಆಗಸ್ಟೆ ರೋಡಿನ್ ನ ಮಹೋನ್ನತ ವ್ಯಕ್ತಿತ್ವವಾಗಿದೆ. ದಿ ನ್ಯೂ ಪೊಯೆಮ್ಸ್ ಕೃತಿ ಈ ಅಂಕಿತವನ್ನು ಹೊತ್ತಿದೆ: “ಅ ಮೊನ್ ಗ್ರ್ಯಾಂಡ್ ಆಮಿ, ಆಗಸ್ಟೆ ರೋಡಿನ್, ” ಇದು ಫ್ರೆಂಚ್ ಶಿಲ್ಪಿ ಕವಿಯ ಮೇಲೆ ಬೀರಿದ್ದ ಎರಡು ಪ್ರಭಾವಗಳನ್ನು ಸೂಚಿಸುತ್ತದೆ, ಒಬ್ಬ ಗೆಳೆಯನಂತೆ, ಮತ್ತೊಬ್ಬ ಕಲಾವಿದನಂತೆ.

ರೋಡಿನ್ ಅವರ ದೇಹದ ಒರಟಾದ ವೈಶಿಷ್ಟ್ಯಗಳು, ಎತ್ತರದ, ಸೂಕ್ಷ್ಮವಾದ ಕೆತ್ತನೆಯ ಹಣೆ. ಈ ರೂಪ ವಿಶಾಲವಾದ, ಹೊಳೆಯುವ ಬಿಳಿ ಅಮೃತ ಶಿಲೆಯ ಎದೆಮಟ್ಟದ ಕೆತ್ತನೆಗಳು, ಇತರಪ್ರತಿಮೆಗಳ ನಡುವೆ ನಡೆವಾಗ ಹಳೆಯ ಪುರಾಣಕಥೆಯ ದೈತ್ಯನೊಬ್ಬ ತನ್ನ ಕ್ಷೇತ್ರದ ಬಂಡೆಗಳು ಮತ್ತು ಪರ್ವತಗಳ ನಡುವೆ ಹೇಗೆ ಚಲಿಸುತ್ತಾನೆಯೋ ಹಾಗೆ, ನಿಧಾನವಾಗಿ ಚಲಿಸುತ್ತಾ ಇರುವುದನ್ನು ಜನ ನೆನಪಿಸಿಕೊಳ್ಳುತ್ತಾರೆ. ಹಾಗೆ ರೋಡಿನ್ ಶಾಂತ, ತಾಳುವವರು, ಜೀವನವನ್ನು ಕರಗತ ಮಾಡಿಕೊಂಡ ವ್ಯಕ್ತಿ, ಬಲಶಾಲಿ ಮತ್ತು ಕಾಲದ ಬಿರುಗಾಳಿಗಳಿಂದ ಮಾಗಿದ ಸ್ವಭಾವದವರು.
ಅದೇ ರೈನರ್ ಮರಿಯಾ ರಿಲ್ಕೆಯನ್ನು ಯಾವನೊಬ್ಬ ನೆನಸಿಕೊಳ್ಳುವುದು ತರುಣ, ಕೆಂಗೂದಲವ, ತೆಳುವಾದ ಕುಲೀನ ವ್ಯಕ್ತಿಯ ಚಹರೆ, ಕೊಂಚವೇ ಮುಂದಕ್ಕೆ ಬಾಗಿದ, ಏಕಾಂಗಿ ನಡೆವ, ಮನಸ್ಸಿನೊಳಬಂದ ವಿಚಾರದ ಬಗ್ಗೆ ತಾಪಸಿಯಂತೆ ಚಿಂತಿಸುವ ನಿಲುವು, ಸೂಕ್ಷ್ಮವಾದ ತುಂಬಿದ ಬಾಯಿ, “ಹುಬ್ಬಿನ ದೃಢ ರಚನೆಯು ಧ್ಯಾನದ ನೆರಳಿನಲ್ಲಿ ಸಂತೋಷದಿಂದ ಮುಳುಗಿರುವಂತೆ “ಮುಖಭಾವವ ತುಂಬಿದ ಕನಸುಗಳು, ದೂರದ ಸಂಗೀತವನ್ನು ಕೇಳುವ ಭಾವಾಭಿವ್ಯಕ್ತಿಯೊಂದಿಗೆ ಇರುವುದು” ಎಂದು.

ದಿ ಬುಕ್ ಆಫ್ ಅವರ್ಸ್ ಅನ್ನೂ ಹೊರತುಪಡಿಸದಂತೆ ಅವನ ಯಾವುದೇ ಕೃತಿಯಿಂದ ಅವನ ಜೀವನ ಮತ್ತು ಕಲೆಯ ತಾತ್ವಿಕತೆಯನ್ನು ಎಷ್ಟು ನಿಖರವಾಗಿ ನಿಶ್ಚಯಗೊಳಿಸಬಹುದು ಎಂದರೆ ಅದನ್ನು ಆಗಸ್ಟೇ ರೋಡಿನ್ ನ ಕುರಿತ ಅವನ ತುಲನಾತ್ಮಕವಾಗಿ ಸಣ್ಣದಾದ ವಾಚಿಕೆಯ ಮೂಲಕ ನಾವು ಅಳೆಯಬಹುದು.

“ಪ್ರಕೃತಿಯಲ್ಲಿ ಎಲ್ಲಾ ಎಡೆ ಕಾಣುವ ದಾಸ್ಯದ ಶಕ್ತಿ” ಯ ಪ್ರಬಲ ವ್ಯಕ್ತೀಕರಣವನ್ನು ನಮ್ಮ ಯುಗದಲ್ಲಿ ರೊಡಿನ್‌ ನಲ್ಲಿ ರಿಲ್ಕೆ ನೋಡುತ್ತಾನೆ. ಈ ಕಾರಣಕ್ಕಾಗಿ ರೋಡಿನ್ ಕುರಿತ ಪುಸ್ತಕವು ಶಿಲ್ಪಕೃತಿಯ ಸೌಂದರ್ಯದ ಮೌಲ್ಯಮಾಪನಕ್ಕಿಂತ ಹೆಚ್ಚಿನದಾಗಿದೆ. ಕಲೆಯ ಕ್ಷೇತ್ರದಲ್ಲಿನ ಪ್ರತಿಯೊಂದು ಸೃಜನಶೀಲ ಕಾರ್ಯದಲ್ಲೂ ಸ್ವತಃ ಕಾರ್ಯನಿರ್ವಹಿಸುವ ಬಲವಾದ ನೈತಿಕ ತತ್ವವನ್ನು ರಿಲ್ಕೆ ಪುಸ್ತಕದುದ್ದಕ್ಕೂ ಗುರುತಿಸುತ್ತಾನೆ. ಎಲ್ಲ ಆಳವಾದ, ಮಹತ್ವದ ಕಲೆಯ ಕುರಿತ ಈ ತಿಳುವಳಿಕೆ ರೋಡಿನ್ ಕುರಿತ ಪುಸ್ತಕಕ್ಕೆ ಅದರ ಚಿಂತನೆಯ ಸರಿಸುಮಾರು ಉತ್ತಮವೆನಿಸುವ ಧಾರ್ಮಿಕ ಕೋನವನ್ನು, ಅಭಿವ್ಯಕ್ತಿಯ ಲಯಬದ್ಧ ಸ್ತೋತ್ರದಂತಹ ಸ್ವರೂಪವನ್ನು ನೀಡುತ್ತದೆ.

‘ರೋಡಿನ್’ ಕೃತಿಯನ್ನುಅವನು ಪ್ರಾರಂಭಿಸುವುದು ಹೀಗೆ: “ಖ್ಯಾತಿ ಅವನಿಗೆ ಬರುವ ಮೊದಲು ರೋಡಿನ್ ಒಂಟಿಯಾಗಿದ್ದ. ಆ ನಂತರ ಅವನು ಇನ್ನೂ ಹೆಚ್ಚು ಒಂಟಿಯಾಗಿಬಿಟ್ಟ. ಖ್ಯಾತಿಯು ಅಂತಿಮವಾಗಿ ಹೊಸ ಹೆಸರಿನ ಬಗ್ಗೆ ಲೋಕಸಾಂದ್ರೀಕರಿಸುವ ಎಲ್ಲಾ ತಪ್ಪುಗ್ರಹಿಕೆಗಳ ಸಾರಾಂಶವಾಗಿದೆ.” ಅವನು ಈ ಮನುಷ್ಯನ ಶ್ರೇಷ್ಠತೆಯ ಸಾರಾಂಶವನ್ನು ಕೊಡುವುದು ಹೀಗೆ: “ಈ ಮಹಾನ್ ಕಲಾವಿದನನ್ನು ಇಷ್ಟು ಶ್ರೇಷ್ಠನನ್ನಾಗಿ ಮಾಡಿರುವುದು ಏನೆಂಬುದು ಎಂದಾದರೊಮ್ಮೆ ಅರಿವಾಗುತ್ತದೆ. ತನ್ನ ಎಲ್ಲಾ ಶಕ್ತಿಗಳೊಂದಿಗೆಯೂ ಅವನು ಒಬ್ಬ ವಿನಮ್ರ ಕೆಲಸಗಾರನಾಗಿದ್ದ ಮತ್ತು ಅವನ ಏಕೈಕ ಆಸೆ ತನ್ನೆಲ್ಲ ಶಕ್ತಿಯೊಂದಿಗೆ ಆ ವಿನಮ್ರ ಸಾಧನದ ಒಳಗೆ ಸೇರಿಕೊಳ್ಳಬೇಕೆಂಬುದು. ಜೊತೆಗೆ ತಾನು ತನ್ನ ಸಾಧನದ ದುಸ್ತರ ಪ್ರಾಮುಖ್ಯತೆಯ ಜೊತೆಗೆ ಏಕೀಭವಿಸುವುದು. ಅದರಲ್ಲಿ ಜೀವನದ ಪರಿತ್ಯಜಿಸುವ ಉದ್ದೇಶವನ್ನು ನಿಹಿತಗೊಳಿಸಲಾಗಿದೆ. ಆದರೆ ಈ ತ್ಯಜಿಸುವಿಕೆಯಲ್ಲಿಯೇ ಅವನ ವಿಜಯವು ಅಡಗಿದೆ – ಏಕೆಂದರೆ ಜೀವನವು ಅವನ ಕೆಲಸದ ಒಳಗೆ ಪ್ರವೇಶಿಸಿದೆ.

ಮನುಷ್ಯನಲ್ಲಿರುವ ಸೃಜನಶೀಲ ಪ್ರಚೋದನೆಯ ದಿವ್ಯ ತತ್ವದ ಅಭಿವ್ಯಕ್ತಿಯಾಗಿ ರೋಡಿನ್ ರಿಲ್ಕೆಗೆ ಕಂಡ. ಹೀಗೆ ರಿಲ್ಕೆ ಅವರ ಆಗಸ್ಟೆ ರೋಡಿನ್ ಕುರಿತ ವಾಚಿಕೆ, ಜೀವನ ಮತ್ತು ಕಲೆಯ ಬಗೆಗಿನ ಕವಿಯ ಒಡಂಬಡಿಕೆಯಾಗಿ ಉಳಿಯುತ್ತದೆ.
ರಿಲ್ಕೆ ತೀವ್ರವಾಗಿ ಬದುಕಿದವನು. ಅವನು ತಮ್ಮ ಕಲಾತ್ಮಕ ಮತ್ತು ಆಧ್ಯಾತ್ಮಿಕ ಪ್ರಜ್ಞೆಯೊಳಗೆ ನಮ್ಮ ಕಾಲದ ಅನೇಕ ಪರಮೋಚ್ಚ ಮೌಲ್ಯಗಳನ್ನು ಹೀರಿಕೊಂಡಿದ್ದವನು. ಅವನ ಕಲೆಯು ಸ್ಲಾವ್ ನ ಮಾಂತ್ರಿಕ ಆಳ, ಜರ್ಮನ್ ನ ಸಂಗೀತ ಬಲ ಮತ್ತು ಲ್ಯಾಟಿನ್ ನ ದೃಶ್ಯ ಸ್ಪಷ್ಟತೆಯನ್ನು ಹಿಡಿದಿಟ್ಟುಕೊಂಡಿದೆ. ಕಲಾವಿದನಾಗಿ, ಜೀವನವನ್ನು ಪವಿತ್ರವೆಂದು ಭಾವಿಸಿದ್ದವರು, ಪುರೋಹಿತನಾಗಿ ತನ್ನ ದೇವಪೀಠಕ್ಕೆ ಅನೇಕ ಕಾಣಿಕೆಗಳನ್ನು ತಂದುಕೊಟ್ಟ.

H.T.
NEW YORK CITY,
AUTUMN, I918.

ಈ ಜಗತ್ತಿನಲ್ಲಿ ನಾನು ತುಂಬಾಏಕಾಕಿ, ಆದರೆ ಒಬ್ಬಂಟಿಯಾಗಿಲ್ಲ

ಈ ಜಗತ್ತಿನಲ್ಲಿ ತುಂಬಾ ಒಂಟಿಯಾಗಿದ್ದೇನೆ ನಾನು,
ಆದರೆ ಈ ಕ್ಷಣವನ್ನು ನಿಜವಾಗಿಯೂ ಪವಿತ್ರಗೊಳಿಸಲು
ಬೇಕಾದಷ್ಟು ಒಬ್ಬಂಟಿಯಾಗಿಲ್ಲ.
ನಾನು ಈ ಜಗತ್ತಿನಲ್ಲಿ ತುಂಬಾ ಚಿಕ್ಕವನು,
ಆದರೆ ನಿಮಗೆ ಕೇವಲ ಕಾವಳದ ಮಸಕು
ಮತ್ತು ಚಾಲಾಕಿ ವಸ್ತು ಎನಿಸುವನಿತು ಚಿಕ್ಕವನಲ್ಲ

ಮುಕ್ತವಾಗಿರುವ ಇಚ್ಛೆಯನ್ನು ಹೊಂದಿದ್ದೇನೆ
ಕ್ರಿಯೆಗೆ ಕಾರಣವಾಗುವ ಮಾರ್ಗದಲ್ಲಿ
ಪ್ರಶ್ನೆಗಳನ್ನು ಕೇಳಬೇಕಾಗುವ ಸಮಯದಲ್ಲಿ
ಅದು ನನ್ನೊಂದಿಗೆ ಇರಲೆಂದು ಬಯಸುತ್ತೇನೆ,
ಎಲ್ಲೋ ಏನಾದರೂ ಒಂದು ಥಟ್ಟನೆದ್ದುಬರಬಹುದು
ಆಗ ಅವನ್ನು ತಿಳಿದಿರುವವರ ಜೊತೆಯಲ್ಲಿ ಇರಲು
ಇಲ್ಲದಿದ್ದರೆ ಏಕಾಂಗಿಯಾಗಿ.

ಎಂದಿಗೂ ಕುರುಡನಾಗಿರದಿರಲು
ಮುದಿವಯಸಿನವನಾಗಿರದಿರಲು ನನ್ನ ಬಯಕೆ
ಕಾರಣ: ನಿಮ್ಮ ಚಿತ್ರವನ್ನು ಅದರ ಪೂರ್ಣತೆಯಷ್ಟು
ಪ್ರತಿಬಿಂಬಿಸಲು ನಿಮ್ಮ ಘನವಾದ ಕುಡಿಗಾಡುವ
ಪ್ರತಿಫಲನವನ್ನು ಎತ್ತಿಹಿಡಿಯಲು ಬಯಸುತ್ತೇನೆ

ನಾನು ಬಿಚ್ಚಿಕೊಳ್ಳಲು ಬಯಸುತ್ತೇನೆ.
ಎಲ್ಲಿಯೂ ವಕ್ರವಾಗಿರಲು, ಬಾಗಿರಲು ಬಯಸಲಾರೆ
ಹಾಗಾದರಲ್ಲಿ ಅಪ್ರಾಮಾಣಿಕನಾಗುವೆ, ಸುಳ್ಳುಗಾರ.

ನನ್ನ ಆತ್ಮಸಾಕ್ಷಿಯು ನಿಮ್ಮ ಮುಂದೆ ನಿಜದ
ನೆಲೆಯಲ್ಲಿಯೇ ಇರಬೇಕೆಂದು ಬಯಸುತ್ತೇನೆ;
ದೀರ್ಘಕಾಲದವರೆಗೆ, ಅತಿಸನಿಹದಿಂದ
ಗಮನಿಸಿದ ಚಿತ್ರದಂತೆ
ನನ್ನನ್ನು ವಿವರಿಸಲು ಬಯಸುತ್ತೇನೆ
ನಾನು ಕಲಿತ ಮತ್ತು ಸ್ವೀಕರಿಸಿದ ಹೊಸ ಪದದಂತೆ,
ನಿತ್ಯ ಬಳಸುವ ಜಗ್ ನಂತೆ,
ನನ್ನ ತಾಯಿಯ ಮುಖದಂತೆ,
ಯಮಸದೃಶ ಚಂಡಮಾರುತದ ಮೂಲಕ
ನನ್ನನ್ನು ಕೊಂಡೊಯ್ದ ಹಡಗಿನಂತೆ.

ಏಪ್ರಿಲ್ ನಲ್ಲಿ

ಮತ್ತೆ ಕಾಡುಗಳು ಘಮಘಮಿಸುತ್ತಿವೆ, ಲಾರ್ಕ್
ತನ್ನ ಬಲಶಾಲಿ ರೆಕ್ಕೆಯಗಲಿಸಿ ಹಾರುವುದು
ಮರಗಳ ಮೇಲೆ ಮುಸುಕು ಹಾಕಿದಂತಿರುವ
ಬೂದು ಆಗಸ ತೆರೆಯೆಳೆದಂತೆ ಗಾಢ
ಬೆತ್ತಲೆ ಕೊಂಬೆಗಳು ಖಾಲಿ ದಿನವನ್ನು
ಬಹಿರಂಗ ಪಡಿಸುತ್ತಲಿರುವ ಎಡೆ.

ದೀರ್ಘ ಮಳೆಯ ಮಧ್ಯಾಹ್ನದ ನಂತರ ಒಂದು ಗಂಟೆ
ತನ್ನ ಚಿನ್ನದ ಬೆಳಕಿನ ಕಿರಣಗಳ ದಂಡಗಳೊಂದಿಗೆ ಬರುತ್ತದೆ
ಚೆಲ್ಲುತ್ತ ಕಿಟಕಿಗಳ ಮೇಲೆ ಹೊಳೆವ ವರ್ಷಧಾರೆಯ ಹಾಗೆ
ಮಳೆ ಹನಿಗಳು ಹತಾಶ, ಭೀತ ಪಕ್ಷಿಯ ರೆಕ್ಕೆಗಳಂತೆ
ಕಿಟಕಿಯ ಫಲಕಗಳಿಗೆ ಬಡಿಯುತ್ತವೆ

ನಂತರ ಎಲ್ಲವೂ ಸ್ತಬ್ದ. ಮಲಗಲು ಜೋಗುಳ ಹಾಡುವ ಕಲ್ಲುಗಳು
ನಿಧಾನವಾಗಿ ನಿಲ್ಲುವ ಮಳೆಯ ಮೆತ್ತನೆ ಸದ್ದುಗಳ ಬಗಲಿಗೆ
ಕೊಂಬೆಗಳಲ್ಲಿ ತೂಗು ತೊಟ್ಟಿಲು ಕಟ್ಟಿ ಮಲಗಿಸಿದಂತೆ ಆಳವಾಗಿ
ಮರೆಯಾಗಿದೆ ಮೌನ, ಬೆಳಗುವ ಪ್ರತಿ ಮೊಗ್ಗಿನಲ್ಲಿಯು
ಇರುವ ನಿದ್ರೆಯ ಮೌನ.

ಸ್ಪ್ಯಾನಿಷ್ ನರ್ತಕಿ

ಕೈಯಲ್ಲಿ ಇರುವಂತೆ ಕೊರೆದ ರಂಜಕದ ಕಡ್ಡಿ
ಮೊದಲು ಬಿಳಿ, ಬಳಿಕ ತಾನು ಜ್ವಾಲೆಯಲ್ಲಿ ಸಿಡಿಯುವ
ಮೊದಲು ಪ್ರತಿ ದಿಕ್ಕಿಗೂ ಉರಿವ ನಾಲಿಗೆ ಚಾಚುತ್ತದೆ;
ಹತ್ತಿರವೇ ನಿಂತ ವೀಕ್ಷಕರ ವೃತ್ತದಲ್ಲಿ ಬ್ರಹ್ಮಾಂಡ ಶಾಖ,
ಕೋರೈಸುವ ಪ್ರಕಾಶ ಮತ್ತವಳ ಕಟ್ಟುತ್ಸಾಹ
ಅವಳ ಜ್ವಲಿಸುವ ವೃತ್ತಾಕಾರ ನೃತ್ಯವು
ಹೊರಚಾಚಿ ಬಳಸುತ್ತು ಪ್ರಾರಂಭಿಸುತ್ತದೆ.
ಒಮ್ಮೆಗೇ ಅದು ಸಂಪೂರ್ಣವಾಗಿ ಜ್ವಾಲೆಯಾಗಿದೆ.

ಒಂದೇಒಂದು ನೋಟದಿಂದ ಅವಳು
ತನ್ನ ಕೂದಲಿಗೆ ಕಿಚ್ಚು ಹಚ್ಚುತ್ತಾಳೆ
ಧೈರ್ಯವುರಿವ ಕಲೆ, ತಿತ್ತಿರಿ ತಿರುಗುತ್ತಾಳೆ,
ಭಾವ ತೀವ್ರತೆಯಲ್ಲಿ ಸುತ್ತುತ್ತದೆ
ಉರಿಯುತ್ತಿರುವ ಅವಳಿಡೀ ದಿರಿಸು,
ಅವುಗಳಿಂದ ಹೆದರಿ ಗೊಂದಲಗೊಂಡ ಹಾವುಗಳಂತೆ
ಅವಳ ನಗ್ನ ತೋಳುಗಳು ಚಾಚುತ್ತವೆ,
ಜೀವಂತವಾಗಿ, ಸಪ್ಪಳದಲ್ಲಿ
ಬಳಿಕ ಬೆಂಕಿ ಅವಳ ಸುತ್ತಿ ಬಿಗಿಯಾಗಿ ಉರಿದಂತೆ
ಅವಳು ಜ್ವಾಲೆಯೆಲ್ಲವನ್ನೂ ಹಿಡಿದು ಹೊರಗೆಸೆಯುತ್ತಾಳೆ
ತುಚ್ಛವಾಗೆಣಿಸಿ, ಗತ್ತಿನ ನಡೆಯೊಂದಿಗೆ.
ನೋಡುತ್ತಾಳೆ ಅದನ್ನೇ
ಅದು ಬಿದ್ದಿದೆ ನೆಲದ ಮೇಲೆ, ಬಿದ್ದಲ್ಲೇ ಉರಿಯುತ್ತ
ಸೋಲೊಪ್ಪದೆ. ಆದರೆ ಗೆಲುವು, ಆತ್ಮಸ್ಥೈರ್ಯ
ಸ್ನೇಹಿನಗೆಯಲ್ಲಿ ಅವಳು ಮುಖವನ್ನು ಮೇಲೆ ಎತ್ತುತ್ತಾಳೆ
ಎತ್ತಿ ಉಗ್ರ ಪಾದಗಳಿಂದ ತುಳಿದು ಆ ಬೆಂಕಿಯನ್ನು ನಂದಿಸುತ್ತಾಳೆ.

ರೈನರ್ ಮಾರಿಯಾ ರಿಲ್ಕೆ (1875-1926)