ಜವಾನ್

ನಿಶ್ಶಬ್ದವನ್ನು ಸೀಳುತ್ತಾ
ಆಗಾಗ ಒಂದು ಗುಂಡು
ಸದ್ದಿನ ಚಪ್ಪಾಳೆಯೊಂದಿಗೆ ಮಾತನಾಡಿಸುತ್ತಿರುತ್ತದೆ
ಸರಿಹದ್ದಿನ ರೇಖೆಯಾಚಿನ ಸದ್ದಿನಲ್ಲಿ
ಏನೋ ಅನುಮಾನವು ಇಣುಕಿ ನೋಡುತ್ತಿರುತ್ತದೆ
ಅತ್ತ ಕಡೆ ಮನುಷ್ಯ ಮನುಷ್ಯನ ಹಾಗೆ ಇದ್ದರೂ
ಶತ್ರುತ್ವದ ವಾಸನೆ ಗಪ್ಪುನ ರಾಚುತ್ತೆ
ಹಗಲಿನ ಬೆಳಕಿನಲ್ಲಿ ಪ್ರಕೃತಿ ಹಗೆ ಹಿಡಿದಹಾಗೆ
ಮೃತ್ಯು ಸಂದೇಶಗಳ ಗಾಳಿಯ ಬೀಸುತ್ತಿರುತ್ತದೆ
ಬೆಳಕಿನ ಬೇಲದ ಹಣ್ಣನ್ನು ನುಂಗಿದ ಕತ್ತಲು
ಕಣ್ಣ ಮುಂದಲಿನ ಪ್ರಪಂಚವನ್ನು ಕ್ಷಣಮಾತ್ರದಲ್ಲಿ ಅಡಗಿಸಿ
ಭಯವನ್ನು ಕಾಣಿಕೆಯಾಗಿ ನೀಡುತ್ತೇನೆಂದು ಹೆದರಿಸುತ್ತಿರುತ್ತದೆ

ಆಗಾಗ ಅಲ್ಲಿ ಹಾರಾಡುವ
ಶಾಂತಿ ಕಪೋತಗಳ ರೆಕ್ಕೆಗಳ ಪಟ ಪಟ ಸದ್ದಿನ ನಡುವೆ
ಒಂಟಿತನಕ್ಕೆ ಮಂಗಳ ಹಾಡುತ್ತಾ
ಜೋಬಿನಲ್ಲಿರುವ ಮಡಿಕೆಬಿದ್ದ ಟಪಾಲಿನ ಅಕ್ಷರಗಳು
ನೆನಪಿನ ಗೀತೆಗಳನ್ನು ರಮ್ಯವಾಗಿ ಹಾಡುತ್ತಿರುತ್ತವೆ
ಯಾವಾಗಲೋ ಸಿಕ್ಕಿದ ವಿಶ್ರಾಂತಿ
ಗೆಳೆಯರ ಕೊರಳಿನ ಜೊತೆಯಾಗಿ ಸಮೂಹಗಾನವ ಮಾಡುತ್ತಾ
ಬೆಂಕಿಯ ಮುಂದೆ ನಗುವಿನ ಆನಂದ ನಾಟ್ಯವು ಮಾಡುತ್ತಿರುತ್ತದೆ
ರೇಷನ್ ಆಗಿ ಸಿಗುವ ಆಹಾರ ರುಚಿಯನ್ನು ಶುಚಿಯನ್ನು ಕಳೆದುಕೊಂಡಿದ್ದರು
ಸತ್ವವನ್ನು ನೀಡುವ ಸತ್ತ ಇದೆಯೆಂದು ಸವಾಲು ಹಾಕುತ್ತಿರುತ್ತದೆ

ಆದರೂ
ಆನಂದವಾಗೇ ಇರುತ್ತೆ ಆ ಮನಸು
ಪಟ್ಟುಹಿಡಿದು ನಿರ್ಧರಿಸಿದ ಕೆಲವು ಕಟ್ಟುಪಾಡುಗಳಿಗೆ ಬಗ್ಗಿ ಇರುತ್ತೇನೆಂದು
ಹುಟ್ಟುಪಡೆದ ಮಣ್ಣಿಗಾಗಿ ಜನ್ಮವ ನೀಡಲೂ ಸಿದ್ಧವೆಂದು ತೊಡೆ ತಟ್ಟುತ್ತದೆ
ಬಾಳನ್ನೇ ಅಡ ಇಟ್ಟ ಮೊಂಡುತನ ತನದೆನ್ನುತ್ತದೆ
ಬಂದೂಕಿನ ಗುಂಡಿಗೆ ಗುಂಡಿನಿಂದಲೋ ಗುಂಡಿಗೆಯಿಂದಲೋ
ಬದುಲು ನೀಡೋ ಎದೆಗಾರಿಕೆ ತನದೆನ್ನುತ್ತದೆ
ತಾನಿರುವವರೆಗೂ ತನ್ನ ತನುವಿರುವವರೆಗೂ
ಹಗಲಾದರು ಇರುಳಾದರೂ
ಹಗೆಯ ನೆರಳನ್ನೂ ಸರಿಹದ್ದು ದಾಟಲು ಬಿಡದ
ಜಬರ್ದಸ್ತ್ ಜಗತ್ ಜೆಟ್ಟಿ ಜವಾನ್ ನಾನು ನಾನೆನ್ನುತ್ತದೆ

 

ರೋಹಿಣಿಸತ್ಯ ಗೃಹಿಣಿ,
ತೆಲುಗಿನಲ್ಲಿ ಬರೆಯಲು ಆರಂಭಿಸಿದ್ದ ರೋಹಿಣಿಸತ್ಯ, ನಂತರ ಕನ್ನಡ ಭಾಷೆ ಕಲಿತು ಕನ್ನಡದಲ್ಲಿಯೂ ಕವನ, ಲೇಖನ, ಕಥೆಗಳನ್ನು ಬರೆಯಲಾರಂಭಿಸಿದವರು.
ಮೂರು ನಾಲ್ಕು ವರುಷಗಳಿಂದ ಎರಡು ಭಾಷೆಗಳಲ್ಲಿ ಬರವಣಿಗೆ ಮತ್ತು ಅನುವಾದ ಮಾಡುತ್ತಿದ್ದಾರೆ.