ಸಾನಿಯಾ ಮಿರ್ಜಾ ದೊಡ್ಡ ತಾರೆಯಾಗಿ ಬೆಳೆದ ಕಾಲ. ಆಗೊಮ್ಮೆ ಗೆಳೆಯ ಅಗ್ರಹಾರ ಕೃಷ್ಣಮೂರ್ತಿ ‘ಲಂಕೇಶರು ಹೋಗಿದ್ರಿಂದ ನಿಜವಾಗಲೂ ಅನ್ಯಾಯ ಆಗಿದ್ದು ಸಾನಿಯಾ ಮಿರ್ಜಾಗೆ. ಮೇಷ್ಟರಿದ್ದಿದ್ರೆ ಹೆಂಗೆಂಗೆಲ್ಲ ಬರೆದಿರ್ತಿದ್ರು…’ ಎಂದು ಉದ್ಗರಿಸಿದ್ದರು!

ಹಾಗೆ ಲಂಕೇಶರು ಇಲ್ಲವಾದ ಈ ಹತ್ತು ವರ್ಷದಲ್ಲಿ ‘ಈಗ ಮೇಷ್ಟರು ಇರಬೇಕಿತ್ತು’ ಅಂತಲೋ, ಅಥವಾ ‘ಇದ್ದಿದ್ರೆ ಹೆಂಗಿರ್ತಿತ್ತು’ ಎಂತಲೋ, ಹಲವರಾದರೂ ಮೆಲುಕು ಹಾಕುತ್ತಲೇ ಬಂದಿದ್ದಾರೆ. ಅಂಥ ಸಂದರ್ಭಗಳನ್ನೆಲ್ಲ ಪಟ್ಟಿ ಮಾಡುತ್ತ ಕೂತರೆ ದಿನಗಟ್ಟಳೆ ಅದನ್ನೇ ಮಾಡುತ್ತಲೂ ಇರಬಹುದು. ಏನು ಪ್ರಯೋಜನ? ಆದರೆ ಎಸ್.ಎಲ್. ಭೈರಪ್ಪ ‘ಆವರಣ’ ಪುಸ್ತಕ ಬರೆದಾಗ ಮಾತ್ರ, ಲಂಕೇಶರು ಇದ್ದಿದ್ದರೆ ಇಡೀ ನಾಡಿನ ಪರವಾಗಿ ಭೈರಪ್ಪನವರ ಭೂತ ಬಿಡಿಸುತ್ತಿದ್ದರು ಅನ್ನುವುದರಲ್ಲಿ ಯಾರಿಗೂ ಸಂಶಯವಿಲ್ಲ. ಅಥವಾ ಮೇಷ್ಟರು ತಮ್ಮ ಪತ್ರಿಕೆಯೊಂದಿಗೆ ಇದ್ದಿದ್ದರೆ ಅಷ್ಟೇ ಸಾಕಿತ್ತು, ಭೈರಪ್ಪನವರಿಗೆ ಬಹುಶಃ ‘ಆವರಣ’ ಬರೆಯುವ ಧೈರ್ಯವೇ ಬರುತ್ತಿರಲಿಲ್ಲ. ಯಾಕೆಂದರೆ ಧರ್ಮಶ್ರೀ, ದಾಟು, ವಂಶವೃಕ್ಷಗಳಂಥ ಹಿಂದೂತ್ವದ ಬೀಜಗಳನ್ನುಳ್ಳ ಸಾಹಿತ್ಯಕೃತಿಗಳನ್ನು ಕೊಟ್ಟ ಭೈರಪ್ಪನವರೇ ಬಂಡಾಯ, ದಲಿತ ಸಾಹಿತ್ಯ ಚಳವಳಿಗಳ ಪ್ರಭಾವ ಮತ್ತು ಆಗಿನ ಎಚ್ಚರದ ಕಾಲಘಟ್ಟಕ್ಕೆ ತಲೆ ಬಾಗಿ ‘ಪರ್ವ’ ಬರೆಯಲಿಲ್ಲವೇ?…

ಇಲ್ಲಿ ‘ಆವರಣ’ದ ಪ್ರಸ್ತಾಪ ಯಾಕೆಂದರೆ, ಆವರಣ- ನಮ್ಮ ಕಾಲದ ಪ್ರಮುಖ ಬಿಕ್ಕಟ್ಟುಗಳ ಸಂಕೇತ. ನಿರ್ಲಜ್ಜವಾಗಿ, ಬಿಡುಬೀಸಾಗಿ ದ್ವೇಷದ ರಾಜಕೀಯವನ್ನು ಬೋಧಿಸುವುದು, ಅದಕ್ಕೆ ಕಾದಂಬರಿ ಎಂಬ ಹೆಸರಿನ ಸಾಂಸ್ಕೃತಿಕ ಮುಸುಕು ಹೊದಿಸುವುದು, ಮತ್ತು ಅದನ್ನು ಜನ ಮುಗಿಬಿದ್ದು ಓದುವುದು- ಈಚಿನ ವರ್ಷಗಳಲ್ಲಿ ನಮ್ಮ ಸಮಾಜದೊಡಲಿನ ಕೊಚ್ಚೆ ಇಷ್ಟು ಭಯಾನಕ ರೂಪ ತಳೆದ ಉದಾಹರಣೆಯೇ ಇಲ್ಲ. ಆ ಸಂದರ್ಭದಲ್ಲಿ ಡಾ. ಅನಂತಮೂರ್ತಿಯವರು ಸಂಯಮದಿಂದಲೇ ಆ ಪುಸ್ತಕದ ವಿಶ್ಲೇಷಣೆ ಮಾಡಿದರೂ, ನಮ್ಮ ಮಾಧ್ಯಮಗಳು ಅವರ ವಿರುದ್ಧ ತಿಂಗಳುಗಟ್ಟಳೆ ಎಸ್ಸೆಮ್ಮೆಸ್ ಆಂದೋಲನವನ್ನೇ ಮಾಡಿದ್ದನ್ನು ನೋಡಿದರೆ…. ಲಂಕೇಶರು ಇರಬೇಕಿತ್ತು ಅನಿಸುವುದು ಸಹಜ. ಹಾಗಂದುಕೊಳ್ಳುವ ಮೂಲಕ ಒಬ್ಬನೇ ವ್ಯಕ್ತಿಗೆ ನಾವು ಅನಗತ್ಯ ಮಹತ್ವ ಕೊಟ್ಟಂತೆ ಭಾಸವಾದರೂ, ಲಂಕೇಶರು ಆ ಕಾಲದ ತವಕಗಳಿಗೆ ತಮ್ಮ ವಿಕ್ಷಿಪ್ತ ಧೈರ್ಯ ಹಾಗೂ ನೋಟಗಳ ಮೂಲಕ; ಮತ್ತು ತಮ್ಮ ಪತ್ರಿಕೆ ಮೂಲಕ ದನಿಯಾದದ್ದು ಸುಳ್ಳಲ್ಲ.

‘ಲಂಕೇಶ್ ಪತ್ರಿಕೆ’ಯಲ್ಲೇ ಎಂಟು ವರ್ಷ ಕೆಲಸ ಮಾಡಿದರೂ, ಲಂಕೇಶರ ಪೂರ್ವಗ್ರಹಗಳನ್ನು, ಅವರ ಬ್ರಾಂಡಿನ ಪತ್ರಿಕೋದ್ಯಮದಿಂದಾದ ಅನ್ಯಾಯಗಳನ್ನು ಎತ್ತಾಡುತ್ತ ಓಡಾಡಿದವರಲ್ಲಿ ನಾನೂ ಒಬ್ಬ. ಆದರೆ ಆಗಲೂ, ಆ ಪತ್ರಿಕೆ ಒಟ್ಟಾರೆ ಜಡವಾಗಿಹೋಗಿದ್ದ ಪತ್ರಿಕೋದ್ಯಮ ಕ್ಷೇತ್ರಕ್ಕೆ ಮತ್ತು ನಾಡಿನ ಸಾಂಸ್ಕೃತಿಕ ಜೀವನದಲ್ಲಿ ತಂದ ಸೆಳೆಮಿಂಚಿನಂತಹ ಚೈತನ್ಯಕ್ಕೆ ನಾವು ಕುರುಡಾಗಿರಲಿಲ್ಲ. ಅವರ ಚಿಲುಮೆಯಂಥ ಬರವಣಿಗೆ ಮೂಲಕ ವಾರ ವಾರ ಹೊರಬರುತ್ತಿದ್ದ ಲಂಕೇಶರ ಅದ್ಭುತ ಒಳನೋಟಗಳ ಹಿಂದೆ ಜನಸಾಮಾನ್ಯನ ವಿವೇಕವಿತ್ತು. ಸಾಧಾರಣ ಮನುಷ್ಯನ ಆಸೆ, ಹತಾಶೆ, ಕನಸುಗಳ ನಕ್ಷೆಯಿತ್ತು. ಅದಕ್ಕೇ ಪತ್ರಿಕೆಗೆ ಅಂಥ ಜನಪ್ರಿಯತೆ ಸಾಧ್ಯವಾಯಿತು. ಮತ್ತು ಅವರಲ್ಲಿ ರಾಜಕೀಯ ಮಹತ್ವಾಕಾಂಕ್ಷೆ ಚಿಗುರಲೂ ಆ ಯಶಸ್ಸೇ ಕಾರಣವಾಯಿತು. ಲಂಕೇಶರು ತಮ್ಮ ಪತ್ರಿಕೆಯ ಜನಪ್ರಿಯತೆಯೊಂದೇ ತಮ್ಮನ್ನು ಅಧಿಕಾರಕ್ಕೆ ತರಬಲ್ಲುದೆಂದು ಭ್ರಮಿಸಿ ಪ್ರಗತಿರಂಗ ಕಟ್ಟಿದರು. ಆದರೆ ನನ್ನಂಥ ಎಳೆಯರು, ರೈತ ಸಂಘ, ದಲಿತ ಸಂಘಟನೆ ಮತ್ತು ಪ್ರಗತಿರಂಗ ಮೂರೂ ಸೇರಿದರು ಹೊಸ ಶಕ್ತಿಯೇ ಉದಯವಾಗುವುದೆಂದು ನಂಬಿ ಹಂಬಲಿಸುತ್ತಿದ್ದೆವು. ಹಾಗೆ ಒಗ್ಗೂಡುವ ಪ್ರಯತ್ನಗಳು ನಡೆದ ಪ್ರಮಾಣದಲ್ಲೇ ಅವನ್ನು ಮುರಿಯುವ ಮನೆಮುರುಕತನವೂ ಅದೇ ಪ್ರಮಾಣದಲ್ಲಿ ನಡೆದದ್ದು ನಮ್ಮ ದುರದೃಷ್ಟ. ಆದರೂ ಸ್ವತಃ ಲಂಕೇಶರು ಮತ್ತು ನಂಜುಂಡಸ್ವಾಮಿಯವರ ಸ್ವಪ್ರತಿಷ್ಠೆಗಳೂ ಆ ಒಕ್ಕೂಟವನ್ನು ಆಗಗೊಡಲಿಲ್ಲ ಎಂಬುದೂ ಅಷ್ಟೇ ನಿಜ. ಆ ಮಟ್ಟಿಗೆ ಈ ಮುಖಂಡರು ಇತಿಹಾಸಕ್ಕೆ ದ್ರೋಹ ಬಗೆದರು ಎಂದೇ ನನ್ನಂತವರಿಗೆ ಈಗಲೂ ಅನಿಸುವುದು.

ಆ ಹಿನ್ನಡೆಯ ಪರಿಣಾಮಗಳನ್ನು ಈಗ ನಿತ್ಯ ನೋಡುತ್ತಿದ್ದೇವೆ, ಅನುಭವಿಸುತ್ತಿದ್ದೇವೆ. ಒಂದು ಸಲ ಎಚ್.ಎಸ್. ರಾಘವೇಂದ್ರರಾವ್ ಅವರೊಟ್ಟಿಗೆ ಮಾತಾಡುವಾಗ ಅವರು- ಆ ಮೂವರು ಸೇರಿದ್ದರೂ ಮೂಲಭೂತ ಬದಲಾವಣೆಯಾಗುತ್ತಿರಲಿಲ್ಲ ಎಂದರು. ಇರಬಹುದು. ಆದರೆ ಆ ಮೂರು ಶಕ್ತಿಗಳು ತಮ್ಮ ಗೆಲುವಿನ ಮೂಲಕ ಅಥವಾ ಸೋಲಿನ ಮೂಲಕ ತರಲು ಸಾಧ್ಯವಿದ್ದ ಕಂಪನಗಳನ್ನು ಕಡೆಗಣಿಸಲು ನನ್ನಿಂದಂತೂ ಆಗುವುದಿಲ್ಲ…

ಲಂಕೇಶರ ಪ್ರತಿಭೆಯ ಬಗ್ಗೆ ಏನು ಹೇಳಹೊರಟರೂ ಸವಕಲು ಮಾತೇ ಆಗಬಹುದು. ಅದು ಬೇಡ. ಆದರೆ ಅವರ ಒಂದು ಗುಣವನ್ನು ಇಲ್ಲಿ ಪ್ರಸ್ತಾಪಿಸಬೇಕು. ತಾವು ಒಮ್ಮೆ ಯೋಚಿಸಿದ್ದು ಅಥವಾ ಬರೆದಿದ್ದಕ್ಕೇ ಶಾಶ್ವತವಾಗಿ ಅಂಟಿಕೊಂಡು ಪಟ್ಟು ಹಿಡಿಯುವುದು ಎಂದೂ ಲಂಕೇಶರ ಜಾಯಮಾನವಾಗಿರಲಿಲ್ಲ. ಇದನ್ನೇ ಅವರ ಅಸ್ಥಿರತೆಯನ್ನಾಗಿ (inconsistency)ಕಾಣುವವರಿದ್ದಾರೆ. ಆದರೆ ನನ್ನ ಪ್ರಕಾರ ಲಂಕೇಶರ ಸೃಜನಶೀಲ ಮನಸ್ಸಿನ ಬಹುದೊಡ್ಡ ಶಕ್ತಿಯೇ- ಈ ಅಸ್ಥಿರತೆ. ಅಂದರೆ ಕಾಲಕಾಲಕ್ಕೆ ತನ್ನ ನೋಟದ ತಪ್ಪುಗಳನ್ನು ತಾನೇ ಕಂಡುಕೊಂಡು ತಿದ್ದಿಕೊಳ್ಳುವ ಪ್ರಾಂಜಲತೆ. ವರ್ಷಗಳ ಕಾಲ ಭ್ರಷ್ಟಾಚಾರದ ವಿರುದ್ಧ ಬರೆಬರೆದು ಮುಗಿದ ಮೇಲೆ ಒಮ್ಮೆ ಮೇಷ್ಟ್ರು- ನಾವು ಇಷ್ಟು ಕಾಲ ಭ್ರಷ್ಟಾಚಾರದ ಬಗ್ಗೆ ಅಷ್ಟೊಂದು ಬರೆದೇ, ಭ್ರಷ್ಟಾಚಾರ ಜಾಸ್ತಿಯಾಗಲು ಕಾರಣವಾದೆವಾ? ಎಂದು ಉದ್ಗರಿಸಿದರು. ಅವರ ಮಾತಿನ ತಥ್ಯ ನನಗೆ ಆಗ ಅರ್ಥವಾಗಿರಲಿಲ್ಲ. ಈಗ ಹೊಳೆಯುತ್ತಿದೆ. ಭ್ರಷ್ಟಾಚಾರದ ಬಗ್ಗೆ ಅಷ್ಟೊಂದು ಬರೆದ ಪರಿಣಾಮವೇನಾಯಿತು, ನಿತ್ಯ ಅದನ್ನೇ ಓದುವ ಜನಸಾಮಾನ್ಯರ ಮನಸ್ಸಿನಲ್ಲಿ ಭ್ರಷ್ಟಾಚಾರ ಸ್ವೀಕಾರಾರ್ಹವಾಗಿಹೋಯಿತು. ಅಂದರೆ ಅದಕ್ಕೆ ಅಂಟಿದ್ದ ಕಳಂಕ ತೊಡೆದುಹೋಯಿತು. ಅಲ್ಲ, ಅವರೆಲ್ಲ ಲಂಚ ಹೊಡೆಯುವುದಾದರೆ, ನಾನು ತುಸು ಕಳ್ಳನಾದರೆ ತಪ್ಪೇನು ಎಂಬ ಉಡಾಫೆ ಮೈಗೂಡಿತು. ಈ ಪ್ರವೃತ್ತಿಯನ್ನು ಮತ್ತು ಅಂಥ ಸಮರ್ಥನೆಗಳನ್ನು ನಾನೇ ನೋಡಿದ್ದೇನೆ, ಕೇಳಿದ್ದೇನೆ. ಅಂದರೆ ಸಮಾಜದ ನೈತಿಕ ಹೊದ್ದಿಕೆಯಲ್ಲಿ ಈಗ ಅಸಂಖ್ಯಾತ ತೂತುಗಳಾಗಿಬಿಟ್ಟಿವೆ….

ಯಾಕೋ ತುಂಬ ಸೀರಿಯಸ್ಸಾಯಿತು. ಒಂದು ಲಘು ಪ್ರಸಂಗದೊಂದಿಗೆ ಮುಗಿಸಬಹುದು.

ಅಮೆರಿಕಾದಲ್ಲಿ ಗಂಡನ ಶಿಶ್ನವನ್ನೇ ಕತ್ತರಿಸಿ ಬಿಸಾಡಿದ ಲೊರೆನಾ ಮತ್ತು ಬಾಬಿಟ್ ದಂಪತಿಗಳ ಕಥೆ ಬಹಳಷ್ಟು ಜನಕ್ಕೆ ನೆನಪಿರಬಹುದು. ಮನೆಗೆ ರಾತ್ರಿ ತಡವಾಗಿ ಬಂದ ಗಂಡ ಬಾಬಿಟ್, ಹೆಂಡತಿ ಲೊರೆನಾ ಮೇಲೆ ಬಲಾತ್ಕಾರವಾಗಿ ಎರಗಿಹೋದಾಗ ರೋಸಿಹೋದ ಲೊರೆನಾ, ಚಾಕು ಹಿಡಿದು ಗಂಡನ ಶಿಶ್ನವನ್ನು ತುಂಡರಿಸಿಬಿಟ್ಟಳು. ತಕ್ಷಣ ಆಸ್ಪತ್ರೆಗೆ ಹೋದ ಗಂಡ ಮತ್ತೆ ತನ್ನ ಅಂಗವನ್ನು ಜೋಡಿಸಿಕೊಂಡು ಬಚಾವಾದ. ಸ್ವಲ್ಪ ಕಾಲದಲ್ಲೇ ಅವನ ಅನುಭವವನ್ನು ಆಧರಿಸಿ ಅವನ ಅಭಿನಯದಲ್ಲೇ ಅಲ್ಲೊಂದು ಸಿನಿಮವನ್ನೂ ತೆಗೆದರೆಂದು ಓದಿದ್ದೆ. ಗಂಡ ಹೆಂಡತಿಯರಿಬ್ಬರ ಫೋಟೋ ಕೂಡ ಪತ್ರಿಕೆಗಳಲ್ಲಿ ಬಂದಿತ್ತು. ಇಬ್ಬರೂ ಸಿನಿಮಾ ಹೀರೋ ಹೀರೋಯಿನ್ ಆಗಲು ಲಾಯಕ್ಕಾದಷ್ಟು ಸುಂದರಾಂಗರು. ಇರಲಿ. ಈ ಪ್ರಕರಣ ಕೋರ್ಟಿಗೆ ಹೋಗಿ ವಿಚಾರಣೆ ನಡೆದು ತೀರ್ಪಿನ ದಿನ ಬಂತು.

ಆ ದಿನ ಉದ್ವೇಗದಿಂದೆಂಬಂತೆ ಆಫೀಸಿನಲ್ಲಿ ಶತಪಥ ಹಾಕುತ್ತಿದ್ದ ಲಂಕೇಶರು- ‘ಲೌಡಿಗೆ ಸರಿಯಾಗಿ ಶಿಕ್ಷೆ ಕೊಡಬೇಕು. ಇಲ್ದಿದ್ರೆ ಎಲ್ರೂ ಅದನ್ನೇ ಕಲಿತುಕೋತಾರೆ’ ಎಂದು ಭುಸುಗುಟ್ಟುತ್ತ ತಮ್ಮ ಚೇಂಬರಿನೊಳಗೆ ಹೋದರು. ಅವರು ತಮಾಷೆಯಾಗಿ ಹೇಳುತ್ತಿರಬೇಕು ಅಂದುಕೊಂಡು ಅವರನ್ನೇ ನೋಡಿದೆ.

ಇಲ್ಲ, ಅವರು ಗಂಭೀರವಾಗೇ ಹೇಳುತ್ತಿದ್ದರು! ನನಗೆ ಅದೇ ತಮಾಷೆಯಾಗಿ ಕಂಡಿತು…

(ಚಿತ್ರಗಳು: ಬಸವರಾಜು)