ತೋಳ್ಪಾಡಿ ಭಾಗವತ ಕಥಾ 1
ವೇದ, ಉಪನಿಷತ್, ಮಹಾಕಾವ್ಯ,ಪರಿಸರ, ಸೌಂದರ್ಯ ಹಾಗೂ ಮಾನವ ಜೀವನದ ಕುರಿತು ಆಳವಾಗಿ, ಸ್ಪಷ್ಟವಾಗಿ ಮಾತನಾಡಬಲ್ಲ, ಬರೆಯಬಲ್ಲ ಲಕ್ಷ್ಮೀಶ ತೋಳ್ಪಾಡಿ ಕನ್ನಡದ ಈ ತಲೆಮಾರಿನ ಬಹಳ ಒಳ್ಳೆಯ ವಿದ್ವಾಂಸರಲ್ಲಿ ಒಬ್ಬರು. ತೋಳ್ಪಾಡಿಯವರು ಬರೆಯುವ ಭಾಗವತ ಕಥಾ ಸರಣಿ ಇನ್ನು ಮುಂದೆ ಪ್ರತೀ ಬುಧವಾರ ಕೆಂಡಸಂಪಿಗೆಯಲ್ಲಿ ಮೂಡಿಬರಲಿದೆ.ವರ್ತಮಾನದ ಕಥೆಗಳನ್ನೂ ಪುರಾಣಗಳ ಅಲೌಕಿಕ ಲೋಕವನ್ನೂ ಒಂದೇ ಕಡೆ ಹಿಡಿದಿಡುವ ಕೆಂಡಸಂಪಿಗೆಯ ಪ್ರಯತ್ನಗಳು ನಿಮಗೆಲ್ಲಾ ಇಷ್ಟವಾಗಬಹುದು ಎಂಬ ಆಶೆ ನಮ್ಮದು…
ಭಾಗವತಕ್ಕೆ ನೇರವಾಗಿ ಹೋಗುವ ಮುನ್ನ ಒಂದು ಪ್ರವೇಶಿಕೆ ಇದೆ. ಅದಕ್ಕೆ `ಭಾಗವತ ಮಾಹಾತ್ಮ್ಸ’ ಎಂದು ಹೆಸರು. ದೊಡ್ಡ ಗ್ರಂಥಗಳಿಗೆಲ್ಲ ಇಂಥದೊಂದು ಪ್ರವೇಶಿಕೆ ಇರುತ್ತೆ. ರಾಮಾಯಣ ಶುರುವಾಗುವ ಮುನ್ನ; ನಾರದ; ವಾಲ್ಮೀಕಿಯ ಆಶ್ರಮಕ್ಕೆ ಬಂದುದು, ನಿಜಕ್ಕೂ ಈ ಲೋಕದಲ್ಲಿ ಗುಣಾಢ್ಯನೊಬ್ಬನನ್ನು ಕಂಡಿರುವೆಯಾ ಎಂದು ವಾಲ್ಮೀಕಿ; ನಾರದನನ್ನು ಕೇಳಿದ್ದು, ನಾರದ, ರಾಮನ ಕತೆ ಹೇಳಿದ್ದು- ಆಮೇಲೆ ಕ್ರೌಂಚಹಕ್ಕಿಯ ದುರಂತ- ಇವೆಲ್ಲ ರಾಮಾಯಣಕ್ಕೆ ಪ್ರವೇಶಿಕೆಯೇ. ಮಹಾಭಾರತ, ತಾನು ನಿಜವಾಗಿ ತೆರೆದುಕೊಳ್ಳುವ ಮುನ್ನ ಪ್ರವೇಶಿಕೆಯಾಗಿ ಅಕ್ಕ-ತಂಗಿಯರ ಮಕ್ಕಳಾದ ಸರ್ಪ ಸಂತತಿ ಮತ್ತು ಗರುಡರ ನಡುವಣ ಸ್ಪರ್ಧೆಯನ್ನು ಕಥಿಸಿದೆ. ನಿಜಕ್ಕಾದರೆ ಮಹಾಭಾರತದ ಆದಿಪರ್ವವಿಡೀ ಒಂದು ಮಹಾಪ್ರವೇಶಿಕೆ ಎನ್ನಬಹುದು. ಈ ಪ್ರವೇಶಿಕೆಗಳು ನಮಗೆ ಇಂಥ ಮಹಾಗ್ರಂಥಗಳ ಒಳಗೆ ಪ್ರವೇಶಾನುಕೂಲ ಮಾಡಿಕೊಡುವುದು ಮಾತ್ರವಲ್ಲ, ತಾವೇ ಕಾವ್ಯದ ಒಳಗೆ ಪ್ರವೇಶಿಸಿ, ಕಾವ್ಯದುದ್ದಕ್ಕೆ ರೂಪಾಂತರಗೊಂಡು ಜೀವಿಸಿರುವುದುಂಟು.
ರಾಮಾಯಣದ ಉದ್ದಕ್ಕೆ ಕ್ರೌಂಚದ ಅಳಲು ಕೇಳುವುದಿಲ್ಲವೆ!
ಹಾಗೇ ಭಾಗವತಕ್ಕೂ ಒಂದು ಪ್ರವೇಶಿಕೆ ಇದೆ. ಸ್ವಲ್ಪ ಆಶ್ಚರ್ಯವೆಂದರೆ ಈ `ಭಾಗವತ ಮಾಹಾತ್ಮ್ಸ’ ಇರೋದು ಈಗ ಭಾಗವತದಲ್ಲಿಯಾದರೂ ಮೂಲದಲ್ಲಿ ಇದು ಪದ್ಮಪುರಾಣದ್ದು. ಭಾಗವತದ್ದಲ್ಲ. ಪದ್ಮಪುರಾಣದಲ್ಲಿ ಭಾಗವತದ ಪ್ರವೇಶಿಕೆ! ಪುರಾಣಗಳಲ್ಲೆಲ್ಲ- ಪುರಾಣಗಳು ಹದಿನೆಂಟಿವೆ- ಭಾಗವತ ಪುರಾಣ ಕೊನೆಯದು ಎಂದು ಸರ್ವಸಮ್ಮತವಾದ ಅಭಿಪ್ರಾಯ. ಹಾಗಾದರೆ ಪದ್ಮಪುರಾಣ, ಭಾಗವತದ ಮುನ್ಸೂಚನೆಯನ್ನು ತನ್ನೊಡಲಲ್ಲಿ ಇಟ್ಟುಕೊಂಡಿದೆ ಎಂದಾಯಿತು. ಸೃಜನಶೀಲತೆಯ ವಿಚಿತ್ರಗಳನ್ನು ಬಲ್ಲವರಿಗೆ ಇದೇನೂ ಚೋದ್ಯವಲ್ಲ. ಅಲ್ಲದೆ, ಭಾಗವತದ ರಚನೆಯಾದ ಮೇಲೆಯೇ ಈ `ಭಾಗವತ ಮಾಹಾತ್ಮ್ಸ’ ಪದ್ಮಪುರಾಣದಲ್ಲಿ ಸೇರಿರಬಹುದೆನ್ನುವುದು ಹೆಚ್ಚು ಸಂಭವನೀಯ. ಆದರೂ ಅದು ಪದ್ಮಪುರಾಣದಲ್ಲಿ ಸೇರಿತೇಕೆ? ಎನ್ನುವ ಪ್ರಶ್ನೆ ಉಳಿಯುತ್ತದೆ. ಭಾಗವತದ ಮಹಾತ್ಮೆಯನ್ನು ಇನ್ನೊಂದು ಪುರಾಣ ಹೇಳುವಂತಾಗಿರುವುದು ಒಂದು ಚಂದವೇ ಎನ್ನುವುದೂ ನಿಜ. ಮುಖ್ಯವಾದ ಮಾತೆಂದರೆ ಪ್ರಾಚೀನ ವಾಜ್ಮಯಗಳೊಳಗೆ ನಾವು ಭಾವಿಸದ, ಭಾವಿಸಲಾಗದ ರೀತಿಯಲ್ಲಿ ಒಂದು ಅಂತ:ಸಂಬಂಧ ಇದೆ ಎನ್ನುವುದು.
ಈ ಪ್ರವೇಶಿಕೆ ಮುಖ್ಯವಾಗಿರುವುದು ಎರಡು ಚಿತ್ರಗಳಿಗಾಗಿ. ಮೊದಲನೆಯದು ಶುಕನ ಚಿತ್ರ ಶುಕ, ವೇದವ್ಯಾಸರ ಓರ್ವನೇ ಮಗ. ದೊಡ್ಡ ಜ್ಞಾನಿ. ಜ್ಞಾನದ ಒಳನೋಟಗಳನ್ನು ಪಡೆದು ವಿರಕ್ತನಾದವ. ತೀವ್ರವಾದ ವಿರಾಗದ ಮನೋಧರ್ಮದಿಂದಾಗಿ ಮನೆ ಬಿಟ್ಟುಹೊರಟುಹೋದ. ಎಲ್ಲಿ ಅಲೆಯುತ್ತಿದ್ದನೋ!
ತಂದೆಯಾದ ವ್ಯಾಸರಿಗೆ ಎದೆ ಕಲಕಿಹೋಯಿತು. ಶುಕನ ವಿರಕ್ತಿಯ ಇನ್ನೊಂದು ಮುಖ ಎನ್ನಬಹುದಾದ ತೀವ್ರವಾದ ಪುತ್ರಸ್ನೇಹ ಅವರನ್ನು ಆವರಿಸಿಬಿಟ್ಟಿತು; ಕಾಡಿತು. ವ್ಯಾಸರು, ಶುಕನನ್ನು ಹುಡುಕಿಕೊಂಡು, ‘ಮಗನೇ’ ಎಂದು ಕೂಗಿ ಕರೆಯುತ್ತ, ಅವನಂತೇ, ಎಲ್ಲೆಲ್ಲೋ ಮರುಳನಂತೆ ಅಲೆದರು. ದ್ವೈಪಾಯನೋ ವಿರಹಕಾತರ: ಆಜುಹಾವ. ದ್ವೈಪಾಯನ ವ್ಯಾಸರು ಮಗನ ಅಗಲಿಕೆ ಸಹಿಸಲಾಗದೆ ಅವನನ್ನು ಕೂಗಿ ಕರೆಯುತ್ತಿದ್ದರು. ಆಗ ಒಂದು ಅದ್ಭುತ ನಡೆಯಿತು. ವ್ಯಾಸರು ಮಗನನ್ನು ಕರೆಯುತ್ತಿದ್ದಂತೆ, ಕಾಡಿನ ಮರ-ಗಿಡಗಳೆಲ್ಲ ಅವರ ಕರೆಗೆ ಓಗೊಟ್ಟುವಂತೆ. ತರರ್ವೋಭಿನೇದು: ತರುಲತೆಗಳೂ ಮಾರ್ನುಡಿದವು. ಶುಕನನ್ನು ತಾವು ವಹಿಸಿಕೊಂಡು ಅವನ ಪರವಾಗಿ ಪ್ರಕೃತಿಯೇ ಪ್ರತಿಸ್ಪಂದಿಸಿದುದನ್ನು ಕಂಡು ವ್ಯಾಸರಲ್ಲಿ ಒಳನೋಟ ಉಂಟಾಯಿತು.
ಶುಕನು ಎಲ್ಲ ಜೀವಗಳನ್ನು ಮರಗಿಡಗಳನ್ನು ಕೂಡ ತನ್ನಂತೆ ಬಗೆಯುತ್ತಾನೆ. ಅವನಿಗೆ ಎಲ್ಲವೂ ಒಂದು ಎನ್ನುವ ಜೀವಂತಿಕೆಯ ಅನುಭವವಾಗಿದೆ. ಈ ಮರಗಿಡಗಳು ಓಗೊಡುತ್ತಿರುವುದೇ ಅದಕ್ಕೆ ಸಾಕ್ಷಿ. ಹೀಗೆ ಬಯಲಾದವನು ತನ್ನದೆನ್ನುವ ಒಂದು ಆಲಯದಲ್ಲಿ ಇರೋದು ಸಾಧವಿಲ್ಲ. ಮತ್ತು ನಿಜಕ್ಕೂ ವಿರಕ್ತಿ ಎಂದರೆ ಎಲ್ಲ ಜೀವಗಳನ್ನೂ ತನ್ನಂತೆ ನೋಡುವುದೇ ಆಗಿದೆ. ಅಚ್ಚರಿ ಎಂದರೆ ತಾನು ಪುತ್ರ ಸ್ನೇಹದಿಂದ ಕಂಗೆಟ್ಟು ಹುಚ್ಚು ಹಿಡಿದಂತೆ ಮಗನನ್ನು ಕರೆಯುತ್ತ ಅಲೆಯದಿರುತ್ತಿದ್ದರೆ ಈ ಸತ್ಯ ತನಗೆ ತಿಳಿದುಬರುತ್ತಿರಲಿಲ್ಲ. ಮರಗಿಡಗಳ ಪಾಡಿಗಿಂತ ಕೀಳಾಗುತ್ತಿತ್ತು ತನ್ನ ಈ ಮನುಷ್ಯತ್ವದ ಪಾಡು! ನಿಜಕ್ಕೂ ಈ ಮರಗಿಡಗಳು ಮಾರುವೇಷದಲ್ಲಿರುವ ದೇವತೆಗಳೇ ಇರಬೇಕು. ನನ್ನ ಕರೆಗೆ ಓಗೊಟ್ಟು ಗುಟ್ಟು ಹೇಳಿದವು. ನಿಸರ್ಗವೇ ಓಗೊಡುವಂತೆ ಕರೆಯುವುದು ಸಾಧ್ಯ ಎಂದು ಈವರೆಗೆ ತಿಳಿದಿರಲಿಲ್ಲ. ಈ ಸತ್ಯ ತಿಳಿಯುವುದಕ್ಕಾಗಿ ಮಗನಿಗೆ ವಿರಕ್ತಿ ಉಂಟಾಯಿತೆ? ಎಲ್ಲ ಅನುಭವಗಳ ಆಳದಲ್ಲಿರುವ ಈ ಒಳಹೆಣಿಗೆಯಿದೇನು! ಮಗನೇ ಎಂದು ಆರ್ತವಾಗಿ ಕರೆದಾಗ, ಎಲ್ಲ ಓಗೊಟ್ಟುವಲ್ಲ- ಪಿತೃತ್ವ ಕೃತಾರ್ಥವಾಗಿಬಿಟ್ಟಿತು! ಯಾವುದನ್ನು ಬಿಟ್ಟುಕೊಟ್ಟು ಯಾವುದನ್ನು ಪಡೆದಂತಾಯಿತು
ಸಾಹಿತ್ಯವು, ಅಧ್ಯಾತ್ಮದ; ತತ್ವಜ್ಞಾನದ ಬಾಗಿಲನ್ನು ತಟ್ಟುವ ಪರಿ ಇದು.
ವ್ಯಾಸರ ಈ ಅನುಭವ ಮತ್ತೆ ಭಾಗವತದಲ್ಲಿ ಕೃಷ್ಣ-ಗೋಪಿಕೆಯರ ಸಂದರ್ಭದಲ್ಲಿ ಮರುಹುಟ್ಟು ಪಡೆಯಿತೆನ್ನಬಹುದು. ಆದುದರಿಂದಲೇ ಈ ಚಿತ್ರ- ಇದನ್ನು ಶುಕನ ಚಿತ್ರ ಎನ್ನುವುದಕ್ಕಿಂತಲೂ ವ್ಯಾಸರ ಚಿತ್ರ ಎನ್ನುವುದೇ ಸರಿ- ಇದು ಭಾಗವತಕ್ಕೆ ಪ್ರವೇಶಿಕೆ.
ಎಲ್ಲ ಜೀವಗಳೂ ಓಗೊಡುವಂತೆ ಕರೆಯಬಲ್ಲನೆನ್ನುವುದೇ ವ್ಯಾಸಸಾಧ್ಯತೆ.
ಇನ್ನೊಂದು ಚಿತ್ರ. ಅದಕ್ಕೊಂದು ಕಥೆ ಇದೆ. ಇದು ಶುಕ ಮಹರ್ಷಿಗಳು ಸೂತಪುರಾಣಿಕನಿಗೆ ಏಕಾಂತದಲ್ಲಿ ಹೇಳಿದ ಕತೆಯಂತೆ. ಕತೆ ಹೀಗೆ: ನಾರದನೊಮ್ಮೆ ಮರ್ತ್ಸಲೋಕದಲ್ಲಿ ಅಲೆದಾಡುತ್ತಿದ್ದನಂತೆ. ಇದು ಲೋಕಗಳಲ್ಲೆಲ್ಲ ಸರ್ವೋತ್ತಮ ಲೋಕವೆಂದು ನಾರದನಿಗೆ ಯಾರೋ ಹೇಳಿದ್ದರು. ಆದರೆ ಇಲ್ಲಿ ಬಂದು ನೋಡುತ್ತಾನೆ: ಶಾಂತಿಯ ಮಾತು ಬಿಡಿ. ಮನಸ್ಸಿಗೆ ಸಂತೋಷವೇ ಇಲ್ಲವಾಗಿದೆ. ಹೊಟ್ಟೆಯ ಪಾಡು, ಅದಕಾಗಿ ಏನು ಮಾಡಲೂ ಹೇಸದ ಮಂದಿ- ಇದನ್ನು ಬಿಟ್ಟರೆ ಇನ್ನೇನೂ ಉಳಿದಿಲ್ಲವಲ್ಲ ಇಲ್ಲಿ. ನಡೆಯೆಲ್ಲ ಕಪಟ. ನುಡಿಯೆಲ್ಲ ಪ್ರಚ್ಛನ್ನ. ಒಂದು ಮಾತಿನಲ್ಲಿ ಹೇಳುವುದಾದರೆ- ಇಲ್ಲಿ ಎಲ್ಲವೂ ಮಾರಾಟದ ಸಾಮಗ್ರಿಯಾಗಿಬಿಟ್ಟಿದೆ. ಅನ್ನ, ವಿದ್ಯೆ ಮತ್ತು ದೇಹ- ಎಲ್ಲವೂ. ಯಾವುದೆಲ್ಲ ಮಾರಲಾಗದೋ ಅದೆಲ್ಲವೂ. ಇದೇನಪ್ಪ ಕಲಿಯುಗ! ಎಂದುಕೊಂಡು ಚಿಂತಾಕ್ರಾಂತನಾಗಿ ಅಲೆಯುತ್ತ ಯಮುನಾನದಿಯ ಬಳಿಗೆ ನಾರದ ತಲುಪಿದನಂತೆ. ಅಲ್ಲಿ ಈ ದೃಶ್ಯ ಕಂಡುಬಂದಿತು.
ಒಬ್ಬಾಕೆ ತರುಣಿ ನಿರ್ವಿಣ್ಣಳಾಗಿ ಕುಳಿತಿದ್ದಾಳೆ! ಅವಳ ಪಕ್ಕದಲ್ಲಿ ಇಬ್ಬರು ಮುದುಕರು ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾರೆ. ಈ ತರುಣಿಯಾದರೋ ಏನೇನೋ ಉಪಚಾರ ಮಾಡುತ್ತ ಆ ಮುದುಕರಿಗೆ ಪ್ರಜ್ಞೆ ಮರುಕಳಿಸುತ್ತದೇನೋ ಎಂದು ಕಾತರದಿಂದ ನಿರೀಕ್ಷಿಸುತ್ತಿದ್ದಾಳೆ. ಪ್ರಜ್ಞೆ ಬರುತ್ತಿಲ್ಲ. ತರುಣಿ ಗೋಳಾಡುತ್ತಿದ್ದಾಳೆ; ಸುತ್ತ ಮಂದಿ ಹೆಂಗಸರು ನೆರೆದಿದ್ದಾರೆ.
ನಾರದ, ತರುಣಿಯ ಬಳಿ ಬಂದ. ಇದೆಲ್ಲ ಏನು ಕತೆ? ನೀನು ಯಾರು? ಎಂದು ಕೇಳಿದ. ಆಕೆ ಹೇಳಿದ್ದಿಷ್ಟು: ನಾನು ಭಕ್ತಿ. ಈ ಇಬ್ಬರು ನನ್ನ ಮಕ್ಕಳು- ಜ್ಞಾನ ಮತ್ತು ವೈರಾಗ್ಯ. ನಾವು ಚೆನ್ನಾಗಿಯೇ ಇದ್ದೆವು. ಆದರೆ ಕಲಿಕಾಲ ಪ್ರಭಾವ ಇರಬೇಕು; ನಾವು ಮೂವರೂ ಚೈತನ್ಯಕುಂದಿ ಗತಯೌವನರಾಗಿ ಮುಪ್ಪಾದೆವು. ಹಾಗೇ ಅಲೆಯುತ್ತ- ವೃಂದಾವನಕ್ಕೆ ಬಂದೆವು. ವೃಂದಾವನವಾದರೋ ಕೃಷ್ಣ ನಡೆದಾಡಿದ ನೆಲ. ಕೃಷ್ಣ ಭಕ್ತಿಯಿಂದ ಉನ್ಮತ್ತರಾದ ಗೋಪಿಕೆಯರ ಹೆಜ್ಜೆಗುರುತುಗಳನ್ನು ಹೊತ್ತ ನೆಲ. ಅಲ್ಲಿಗೆ ಬಂದಂದಿನಿಂದ ಮರಳಿ ನಾನು ತಾರುಣ್ಯವನ್ನು ಹೊಂದಿದೆ. ಆದರೆ ಈ ನನ್ನ ಮಕ್ಕಳಿಗಾದರೋ ಕಳೆದುಹೋದ ಯೌವನ ಮರಳಿ ಬರಲಿಲ್ಲ. ಅವರು ಇನ್ನೂ ವೃದ್ಧರೇ ಆಗಿದ್ದಾರೆ. ಹೀಗಾಗಿ ತಾಯಿ ತರುಣಿ; ಮಕ್ಕಳು ಮುದುಕರು ಎನ್ನುವ ವಿಪರೀತ ಸ್ಥಿತಿ ಉಂಟಾಗಿದೆ. ಇನ್ನೊಂದು ರೀತಿಯಲ್ಲಿ, ಇದು ಕಲಿಯುಗದ ಪ್ರಭಾವವೇ ಎಂಬಂತಿದೆ. ಈ ಸ್ಥಿತಿ ಕಳೆದೀತು ಹೇಗೆ ಎಂದು ಹಗಲಿರುಳೂ ಚಿಂತಿಸುತ್ತಿದ್ದೇನೆ- ನೀವು ದೊಡ್ಡವರು; ನಮಗೊಂದು ದಾರಿ ತೋರಿಸಿ ಎಂದಳು.
ಹೀಗೆ ಹೇಳುವ ಸಂದರ್ಭದಲ್ಲಿ ತನ್ನ ಇತಿವೃತ್ತವನ್ನಾಕೆ ತೋಡಿಕೊಂಡಳು. ಅದು ಹೀಗೆ:
ಉತ್ಪನ್ನಾ ದ್ರಾವಿಡೇ ಸಾಹಂ ವೃದ್ಧಿಂ ಕರ್ಣಾಟಕೇಗತಾ
ಕ್ವಚಿತ್ ಕ್ವಚಿನ್ಮಹಾರಾಷ್ಟ್ರೇ ಗುರ್ಜರೇ ಜೀರ್ಣತಾಂಗತಾ
ದ್ರಾವಿಡದೇಶ(ತಮಿಳುನಾಡು)ದಲ್ಲಿ ಹುಟ್ಟಿದೆ. ದ್ರಾವಿಡಕನ್ಯೆ ನಾನು; ಭಕ್ತಿ. ಆದರೆ ಬೆಳೆದುದೆಲ್ಲ ಕನ್ನಡದೇಶದಲ್ಲಿ. ಮಹಾರಾಷ್ಟ್ರದಲ್ಲೇನೋ ಅಲ್ಲಲ್ಲಿ ನಾನು ನಲಿದಾಡಿದ್ದುಂಟು. ಆದರೆ ಯಾವಾಗ ಗುಜರಾತಿಗೆ ಬಂದೆನೋ- ಮುಪ್ಪು ಆವರಿಸಿಬಿಟ್ಟಿತು, ಜೀರ್ಣಕೀರ್ಣಳಾಗಿಬಿಟ್ಟೆ
ಇದು ಭಾರತೀಯ ಮನಸ್ಸು ಇತಿಹಾಸವನ್ನು ಕಥೆ ಮಾಡುವ ಪರಿ.
ನಿಜಕ್ಕಾದರೆ ಭಕ್ತಿಯಿಂದ ಪರಿಪ್ಲುತವಾದ ಕೀರ್ತನೆಗಳು ನಮಗೆ ಮೊದಲು ಸಿಗುವುದು ತಮಿಳುನಾಡಿನ ಆಳ್ವಾರುಗಳು ಮತ್ತು ನಾಯನ್ಮಾರರುಗಳದು. ಶೈವ; ವೈಷ್ಣವ ಭಕ್ತಿ ಮಾರ್ಗದ ಮೂಲಸೆಲೆಗಳವು. ಆದುದರಿಂದಲೇ ಕ್ರಿ.ಶ. ಹತ್ತನೆಯ ಶತಮಾನದಲ್ಲಿ ತಮಿಳುನಾಡಿನಲ್ಲಿ ಕಾಣಿಸಿಕೊಂಡ ಆಚಾರ್ಯ ರಾಮಾನುಜರು, ಆಳ್ವಾರುಗಳ ಪರಂಪರೆಯನ್ನು ತಮ್ಮದೆಂದೇ ಭಾವಿಸಿದರು; ಗುರುತಿಸಿದರು. ಅವರು ಆಳ್ವಾರುಗಳ ದೇಸೀ ತಮಿಳು ಕೀರ್ತನೆಗಳನ್ನು ವೇದತುಲ್ಯವಾಗಿ ಭಾವಿಸಿದರು. ಅವುಗಳನ್ನು ದಿವ್ಯಪ್ರಬಂಧ ಎಂದು ಕರೆದರು. ವೇದ-ಶಾಸ್ತ್ರಗಳು ಮತ್ತು ಈ ದಿವ್ಯಪ್ರಬಂಧಗಳು- ಇವೆರಡೂ ಸೇರಿ ಉಭಯ-ವೇದಾಂತ ಎಂದು ಸ್ಥಾಪಿಸಿದರು. ಭಕ್ತಿಯು ತನ್ನ ತೀವ್ರತೆಯಿಂದಾಗಿಯೇ, ತನಗೆ ತಿಳಿಯದೆಯೇ, ಕ್ರಾಂತಿಯ ಬೀಜವೊಂದನ್ನು ಹೊತ್ತದ್ದು ಸಮಾಜದ ಅರಿವಿಗೆ ಬಂತು. ಕನ್ನಡನಾಡಿನಲ್ಲಿ- ಶೈವ; ವೈಷ್ಣವ ಭಕ್ತಿಯ ಎರಡು ಪರಂಪರೆಗಳೂ ಬೆಳೆದವು. ಮೇಲುಕೋಟೆಯ ಸುತ್ತ ಮುತ್ತ ಆಳ್ವಾರುಗಳ ತಮಿಳು ದಿವ್ಯಪ್ರಬಂಧಗಳು ಕೇಳತೊಡಗಿದವು. ಆಚಾರ್ಯ ಶಂಕರರು ಶೃಂಗೇರಿಗೆ ಬಂದಿದ್ದರೆನ್ನುವುದು, ಪೀಠವೊಂದನ್ನು ಸ್ಥಾಪಿಸಿದ್ದರೆನ್ನುವುದು ಈಗ ಇತಿಹಾಸ. ಶಂಕರರದು ಜ್ಞಾನಮಾರ್ಗವಾದರೂ ಅವರು ಭಕ್ತಿಯ ಮಹತ್ತ್ವವನ್ನು ಮನಗಂಡವರೇ. ಕರಾವಳಿಯ ತುಳುನಾಡಿನ ಆಚಾರ್ಯ ಮಧ್ವರು ಭಕ್ತಿಯಿಂದಲೇ ಜ್ಞಾನ ಎಂದು ಘೋಷಿಸಿದವರು. ಅಂಥ ಜ್ಞಾನದಿಂದ ಮತ್ತೆ ಭಕ್ತಿಯೇ ಬೆಳೆಯುತ್ತದೆ ಎಂದವರು. ಭಕ್ತ್ಸಾ ಜ್ಞಾನಂ ತತೋಭಕ್ತಿ: ಮಧ್ವರ ಈ ಕಾಣ್ಕೆಯೇ ಆಮೇಲೆ ಕನ್ನಡನಾಡಿನಲ್ಲಿ ಮೂಡಿಬಂದ ಹರಿದಾಸ ಆಂದೋಲನಕ್ಕೆ ಒಂದು ಸ್ಫೂರ್ತಿಯಾಯಿತು. ಹನ್ನೆರಡನೆಯ ಶತಮಾನದಲ್ಲಿ ಕನ್ನಡನಾಡು ಮತ್ತೊಂದು ಅಭೂತಪೂರ್ವವಾದ ಕ್ರಾಂತಿಯೊಂದಕ್ಕೆ ಸಾಕ್ಷಿಯಾಯಿತು. ಅದು ಬಸವಣ್ಣನವರ ನೇತೃತ್ವದಲ್ಲಿ ನಡೆದ ಜನಾಂದೋಲನ. ಬಸವಣ್ಣನವರ ನೇತೃತ್ವ ಎಂದರೆ ಭಕ್ತಿಯ ನೇತೃತ್ವ ಎನ್ನಬೇಕು. ಏಕೆಂದರೆ ಅವರು ಭಕ್ತಿಭಂಡಾರಿ. ಅಲ್ಲಮನಂಥ ಜ್ಞಾನಿಗಳು ಬಸವಣ್ಣನವರ ನೇತೃತ್ವವನ್ನು ಒಪ್ಪಿದ್ದರು. ತಾವೇ ನೇತಾರರಾಗಿರಲಿಲ್ಲ. ಕ್ರಾಂತಿಯ ಬೀಜ ಇರುವುದು ಭಕ್ತಿಯ ಬಸಿರಿನಲ್ಲಿ.
ಮಧ್ಯಕಾಲದಲ್ಲಿ ಇಸ್ಲಾಮಿನ ಸಂಪರ್ಕ ಬಂತು. ಕನ್ನಡನಾಡಿನ ವಿಜಾಪುರ, ಸೂಫಿ ಸಂತರ ಕೆಂದ್ರವಾಗಿತ್ತು. ಸೂಫಿಗಳು ಉಜ್ವಲ ಭಕ್ತರಾಗಿದ್ದರು.
ಯಾವ ನೆಲೆನಿಂದಲೇ ನೋಡಿ; ವೃದ್ಧಿಕರ್ಣಾಟಕೇಗತಾ ಕನ್ನಡನಾಡಿನಲ್ಲಿ ಬೆಳವಣಿಗೆ ಹೊಂದಿದೆ ಎಂಬ ಭಕ್ತಿ ತರುಣಿಯ ಮಾತು ಅನುಭವದ ಮಾತೆನ್ನಲೇಬೆಕು. ಮಹಾರಾಷ್ಟ್ರದಲ್ಲಿಯೂ ಸ್ವಲ್ಪ ಮಟ್ಟಿಗೆ ನಲಿದಳಂತೆ; ಬೆಳೆದಳಂತೆ.
ವಿಠ್ಠಲಭಕ್ತಿಯ ಸಂಪ್ರದಾಯ ಮಹಾರಾಷ್ಟ್ರದಲ್ಲಿ ಬೆಳೆಯಿತು. ವಿಠ್ಠಲ ಕನ್ನಡದವನು ಎನ್ನುವುದು ಮಹಾರಾಷ್ಟ್ರದ ವಿಠ್ಠಲಭಕ್ತರಿಗೆ ಚೆನ್ನಾಗಿ ಗೊತ್ತಿತ್ತು. ಭಕ್ತಿಯ ವೈಶಿಷ್ಟ್ಯವೆಂದರೆ ಯಾವ ಸಂಬಂಧವನ್ನೂ ಕೆಡಿಸದೆ, ಸಂಬಂಧವನ್ನು ಉಳಿಸಿ, ಬೆಳೆಸುತ್ತ, ವಿಸ್ತರಿಸುತ್ತ ಹೋಗುವುದು. ವಿಠ್ಠಲ ಕನ್ನಡದವನೆನ್ನುವುದು, ವೀರನಾರಾಯಣ ಗದುಗಿನವನೆನ್ನುವುದು ಈ ನೆಲೆಯಲ್ಲಿಯೇ. ದೇವರು ಸರ್ವವ್ಯಾಪಿ ಎಂದಾಗ- ಯಾವ ನೆಲೆಯಲ್ಲಾದರೂ ನನ್ನ ಜತೆ ಸಂಬಂಧಹೊಂದಿ ಎಂದು ದೇವರು ಪಿಸುನುಡಿದಂತೆ ಭಕ್ತಿಗೆ ಕೇಳಿಸುವುದು.
ಇನ್ನು ಗುಜರಾತಿನ ವಿಷಯ. ಗುರ್ಜರೇ ಜೀರ್ಣತಾಂ ಗತಾ. ಸದ್ಯದ ಪರಿಸ್ಥಿತಿಯಲ್ಲಿ ಏನು ಹೇಳಲಿಕ್ಕೂ, ಹೇಳದೆ ಇರುವುದಕ್ಕೂ- ಮುಜುಗರ ಉಂಟಾಗುತ್ತಿದೆ.
ಇಷ್ಟು ಹೇಳಬಹುದು: ಕೃಷ್ಣ, ಯಾದವರ ನಾಶವಾದ ಮೇಲೆ, ತಾನು ದೇಹವಳಿಯುವ ಮುನ್ನ ಒಂದು ಮಾತು ಹೇಳಿಕಳುಹಿಸಿದನಂತೆ. ದ್ವಾರಕೆ ಕಡಲಲ್ಲಿ ಮುಳುಗುತ್ತೆ- ಇನ್ನೇಳುದಿನಗಳಲ್ಲಿ- ಆದುದರಿಂದ ಎಲ್ಲರೂ ತಮ್ಮನ್ನು ತಾವು ರಕ್ಷಿಸಿಕೊಳ್ಳಿ ಅಂತ. ದ್ವಾರಕೆ, ಕೃಷ್ಣ-ಬಲರಾಮರೇ ಕಟ್ಟಿದ ನಗರ ಕಡಲತಡಿಯಲ್ಲಿದೆ. ಎಲ್ಲ ದಿಕ್ಕಿನಲ್ಲಿಯೂ ಬಾಗಿಲಿರುವುದರಿಂದ ಅದು ದ್ವಾರ-ಕಾ. (ಭಗವಂತನ ಬಳಿ ಸಾರುವುದಕ್ಕೆ).
ಅಂಥ ದ್ವಾರಕೆ ಮುಳುಗುತ್ತೆ ಎಂದ ಕೃಷ್ಣ. ದ್ವಾರಕೆ ಗುರ್ಜರ ದೇಶದಲ್ಲಿದೆ. ದ್ವಾರಕೆ ಮುಳುಗಿದ್ದು ವಾಸ್ತವ ಸಂಗತಿ ಎನ್ನುತ್ತಾರೆ ತಜ್ಞರು. ಅದು ವಾಸ್ತವ ಮಾತ್ರವಲ್ಲ; ಸಾಂಕೇತಿಕವೂ ಇರಬೇಕು!
ಇಷ್ಟು ಹೇಳಿ ಕೃಷ್ಣ ದೇಹ-ತ್ಯಾಗ ಮಾಡಿದ. ಕೃಷ್ಣ ನಿರ್ಯಾಣ ಹೊಂದಿದ ದಿನವೇ ಕಲಿಯುಗ ಮೊದಲಾದ ದಿನವಂತೆ. ಕಲಿಯುಗದ ಕತೆಯನ್ನ್ನು ನಾರದನ ಬಾಯಿಂದ, ಭಕ್ತಿಯ ಬಾಯಿಂದ ಕೇಳಿದ್ದೇವಲ್ಲ
ಭಕ್ತಿಗೆ ನಾರದ ಏನು ಹೇಳಲಿಕ್ಕಿದೆ- ಮುಂದೆ ನೋಡೋಣ.
ತೋಳ್ಪಾಡಿ ಭಾಗವತ ಕಥಾ 2: ಕಲಿಯುಗವೆಂಬುದು ಮಾತಿನ ಯುಗ
‘ಭಕ್ತಿ’ ತರುಣಿ ಕಳೆಗುಂದಿದ್ದಳು; ತನ್ನ ನೈಜ ಅಭಿವ್ಯಕ್ತಿಯನ್ನು ಕಾಣಲಾಗದೆ ದುಗುಡದಲ್ಲಿದ್ದಳು; ‘ವೃಂದಾವನ’ಕ್ಕೆ ಬಂದು ಅಲ್ಲಿನ ಹವೆ ಉಸಿರಾಡಿ ಅಲ್ಲಿ ನಡೆದಾಡಿ ಮರಳಿ ತೇಜೋವಂತಳಾದಳು ಎಂದು ‘ಪ್ರವೇಶಿಕೆ’ಯಲ್ಲಿ ಭಾಗವತದ ಮಾತು. ವೃಂದಾವನವಾದರೋ ಕೃಷ್ಣ ನಡೆದಾಡಿದ ನೆಲ. ಕೃಷ್ಣ ಮತ್ತು ಗೋಪಿಕೆಯರ ನಡುವೆ, ಸ್ವಾರ್ಥದ ಎಲ್ಲೆಯನ್ನು ಮೀರಿದ, ಆ ಕಾರಣದಿಂದ ಅಲೌಕಿಕವೆನ್ನಬಹುದಾದ ಹಂಬಲವೊಂದು ಉಕ್ಕಿದ ನೆಲ. ಈ ಅರ್ಥದಲ್ಲಿ ಭಕ್ತಿ ಎಂದರೆ ಮಣ್ಣಿನ ನಂಟು. ಮಣ್ಣಿನ ನರುಗಂಪು. ಮಣ್ಣಿನ ವಾಸನೆ -ಎನ್ನುತ್ತೇವಲ್ಲ ಒಂದು ರೂಪಕವಾಗಿ- ಅಂಥ ಮಣ್ಣಿನ ವಾಸನೆಯೇ ಭಕ್ತಿಯೋ ಏನೋ. ವೈಷ್ಣವರಲ್ಲಿ ಒಂದು ಪದ್ಧತಿ ಇದೆ.
ಮಣ್ಣಿನ ಉಂಡೆಯೊಂದನ್ನು ಅಂಗೈ ನೀರಲ್ಲಿ ತೇದು ಭಗವಂತನ ಹೆಸರುಗಳನ್ನು ಹೇಳುತ್ತ ದ್ವಾದಶ ನಾಮ ಧಾರಣೆ ಮಾಡಿಕೊಳ್ಳುವುದು. ಆ ಮಣ್ಣು ವೃಂದಾವನದ ಮಣ್ಣು ಎಂಬುದು ಅನುಸಂಧಾನ. ಆ ಮಣ್ಣಿನ ಉಂಡೆಗೆ ಹೆಸರಾದರೋ ಗೋಪೀ-ಚಂದನ ಎಂದು. ಕೃಷ್ಣ ಚಂದನ ಎಂದಲ್ಲ. ಗೋಪಿಕೆಯರು ಕೃಷ್ಣ ಪ್ರೇಮೋನ್ಮತ್ತರಾಗಿ ಕುಣಿದಾಡಿದ ಮಣ್ಣಿನಲ್ಲಿ ಕೃಷ್ಣನ ನೆನಪು ಹಸಿಯಾಗಿದೆ, ಅದನ್ನು ಮೈ-ತುಂಬ ಹಚ್ಚಿಕೊಳ್ಳೋಣ ಅಂತ. ನಡೆದಾಡಿದ ಮಣ್ಣು ಎನ್ನುವುದನ್ನೇ ಒಂದು ರೂಪಕವಾಗಿ ನೋಡಿದರೆ ‘ಭಕ್ತಿ’ ಎಂದರೆ ಸ್ಥಳೀಯತೆ ಮತ್ತು ವ್ಯಾಪಕವಾದ ಸಂಚಾರ ಕೂಡ. ಭಕ್ತಿಗೆ ಇವೆರಡು ನೆಲೆಗಳು.
ಕೃಷ್ಣನನ್ನು ಗೋಪಿಕೆಯರು ವೃಂದಾವನದಲ್ಲಿ ಅರಸಿದ್ದು ನಿಜ ಮತ್ತು ಕೃಷ್ಣ, ಗೋಪಿಕೆಯರ ಬಳಿಗೆ ಬಂದದ್ದು ನಿಜ. ಬಳಿಗೆ ಬಂದ ಮೇಲೆ ಅರಸುವಿಕೆ ಇಲ್ಲ. ವಿಹಾರ ಶುರುವಾಯಿತು. ಅರಸುವಿಕೆಯೇ ವಿಹಾರವಾಗಿ ಪರಿಣಮಿಸುವುದು. ಅರಸುವುದು ಸ್ಥಳೀಯವಾಗಿ ಮತ್ತು ವಿಹಾರವೆಂದರೆ ಅದು ವಿಶ್ವ-ವಿಹಾರವೇ. ಇದಕ್ಕನುಗುಣವಾಗಿ ವಿಷ್ಣು ಎಂದರೆ ‘ವ್ಯಾಪಕ’ ಎಂದೇ ಅರ್ಥ. ಕೃಷ್ಣನದೊಂದು ಪ್ರಸಿದ್ಧವಾದ ಮಾತು- ಅದು ಭಗವದ್ಗೀತೆಯದು- ಸರ್ವಸ್ಯ ಚಾಹಂಹೃದಿ ಸನ್ನಿವಿಷ್ಟ: -ನಾನು ಎಲ್ಲರ ಹೃದಯದಲ್ಲೂ ನೆಲೆಯಾಗಿದ್ದೇನೆ -ಎಂದು. ಎಲ್ಲರಲ್ಲೂ ಇದ್ದೇನೆ ಎಂದರೆ ಎಲ್ಲೆಡೆ ಇದ್ದೇನೆ ಎಂದ ಹಾಗೆ. ಸ್ವಲ್ಪ ಮುಂದುವರಿದರೆ- ಎಲ್ಲ ಜಾಗವೂ ನನ್ನ ಪಾಲಿಗೆ ವೃಂದಾವನ ಎಂದ ಹಾಗೆ. ನೀವು ಇದ್ದಲ್ಲೇ ನನ್ನನ್ನು ಹುಡುಕಬೇಕಲ್ಲದೆ ಮತ್ತೆಲ್ಲಿ ಹುಡುಕುತ್ತೀರಿ ಎಂದು ಕೇಳಿದ ಹಾಗೆ. ನಿಮ್ಮ ಹೃದಯವೇ ನನ್ನ ಕ್ಷೇತ್ರ ಎಂದ ಹಾಗೆ. ಈ ಅರ್ಥದಲ್ಲಿ ಹೃದಯ ಎಂದರೆ ಸ್ಥಳೀಯತೆ; ಸ್ಥಳೀಯತೆ ಎಂದರೆ ಹೃದಯ.
14-15-16 ನೆಯ ಶತಮಾನಗಳಲ್ಲಿ ಭಾರತದಾದ್ಯಂತ ಭಕ್ತಿಯ ಗಾಳಿ ಬೀಸಿತು; ಅಲೆ ಹರಡಿತು. ಇದು ಬರಿಯ ಆಕಸ್ಮಿಕವಲ್ಲ, ಕಾಕತಾಳೀಯವೂ ಅಲ್ಲ. ಅದೊಂದು ಎಲ್ಲೆಡೆ ವೃಂದಾವನದ ನೆನಪಿನ ಉದ್ದೀಪನ ಎನ್ನಬಹುದು. ಈ ಕಾಣ್ಕೆಯನ್ನು ಅನುಸರಿಸಿ ನೋಡುವುದಾದರೆ, ರಾಮ-ಸೀತೆಯರು, ಅಥವಾ ಕೃಷ್ಣ ಭಕ್ತರಾದ ಪಾಂಡವರು ನಡೆದಾಡದ ಗ್ರಾಮಗಳೇ ಇಲ್ಲ ಎನ್ನುವ ಮಟ್ಟಿಗೆ ಅವರ ನೆನಪುಗಳು ಈ ದೇಶದ ಹಳ್ಳಿಗಾಡುಗಳಲ್ಲೆಲ್ಲ ದಟ್ಟವಾಗಿವೆ. ಇವರ ಸಂಚಾರಕ್ಕೆ ಅನುಕೂಲವಾಗುವಂತೆ ರಾಮಾಯಣ; ಮಹಾಭಾರತಗಳಲ್ಲಿ ವನವಾಸದ ದೀರ್ಘ ಕಥನ ವರ್ಣಿತವಾಗಿದೆ. ಅಥವಾ ಹಾಗೆ ವರ್ಣಿತವಾದುದರಿಂದಲೇ ಇವರು ನಮ್ಮ ಹಳ್ಳಿಗೂ ಬಂದಿದ್ದರೆನ್ನುವ ಕಲ್ಪನೆ ಗರಿಕೆದರಿದೆ. ಅಥವಾ ಇದು ಪರಸ್ಪರ. ವನವಾಸದ ಕಲ್ಪನೆ ಈ ಪರಿ ಸಾರ್ಥಕವಾದುದರ ಹಿಂದೆ ಭಕ್ತಿಯ ಹೊಳಹಿನ ನಿಜ ಇದೆ.
ನಾವು ದೇವರನ್ನು ಹುಡುಕುವುದೋ ಅಥವಾ ದೇವರೇ ನಮ್ಮನ್ನು ಹುಡುಕುವುದೋ! ನಮ್ಮ ಬಳಿ ಬರುವುದಕ್ಕಾಗಿಯೇ ದೇವರು ವನವಾಸವನ್ನು ಅನುಭವಿಸುವುದೋ? ಅಥವಾ ನಮಗೆ ಗೊತ್ತಿಲ್ಲದೇ ನಾವು ದೇವರನ್ನು ಹಂಬಲಿಸುತ್ತಿದ್ದೇವೆಯೋ? ಒಟ್ಟಿನಲ್ಲಿ, ಅರಸುವಿಕೆ ಮತ್ತು ವಿಹಾರಗಳ ಹಿಂದೆ ಭಕ್ತಿಯ ಮಣ್ಣಿನ ಗಂಧ ಇದೆ. ಮಣ್ಣಿನ ಗಂಧ ಎಂದಾಗ ಹರಡುವುದೇ ಅದರ ಗುಣವಲ್ಲವೇ?
ಭಕ್ತಿಗೆ ಇದ್ದ ಈ ಅದೃಷ್ಟ ಜ್ಞಾನ-ವೈರಾಗ್ಯಗಳಿಗೆ ಇರಲಿಲ್ಲ. ಭಕ್ತಿ ತರುಣಿಯ ಮೊರೆ ಕೇಳಿ ನಾರದನೇನೋ ಪ್ರಜ್ಞೆ ತಪ್ಪಿದಂತಿದ್ದ ಜ್ಞಾನ-ವೈರಾಗ್ಯಗಳನ್ನು ಮರಳಿ ಉದ್ಬುದ್ಧಗೊಳಿಸಲು ಪ್ರಯತ್ನಿಸಿದನಂತೆ. ಅವುಗಳ ಕಿವಿಯಲ್ಲಿ ವೇದೋಪನಿಷತ್ತುಗಳ; ಗೀತೆಯ ವಾಕ್ಯಗಳನ್ನು ಉಸುರಿದನಂತೆ. ವೇದ ವೇದಾಂತ- ಘೋಷೈಶ್ಚ ಗೀತಾಪಾಠೈ: ಮುಹುರ್ಮುಹು: ಆದರೂ ಜ್ಞಾನ-ವೈರಾಗ್ಯಗಳಿಗೆ ಎಚ್ಚರವಾಗಲಿಲ್ಲವಂತೆ. ನಾರದನಿಗೇ ಆಶ್ಚರ್ಯವಾಗಿ, ಬೇರೆ ಉಪಾಯ ಕಾಣದೆ ಇದ್ದಾಗ, ಸನಕಾದಿ ಮುನಿಗಳ ಅನುಗ್ರಹದಿಂದ ಜ್ಞಾನ-ವೈರಾಗ್ಯಗಳ ಉದ್ದೀಪನಕ್ಕೆ ಭಾಗವತ ಶ್ರವಣವೇ ಉಪಾಯ ಎಂದು ತಿಳಿಯಿತಂತೆ. ಸಂಸ್ಕೃತಿ ತನ್ನನ್ನು ತಾನು ಪುನರುಜ್ಜೀವನ, ಪುನರ್ನವ ಮಾಡಿಕೊಳ್ಳುವ ಪರಿ ಇದು.
ಭಾಗವತ ಮಹಾತ್ಮೆ ಎಂಬ ಈ ಪ್ರವೇಶಿಕೆ- ಇನ್ನು ಮುಂದೆ ಹೇಳಲಿರುವ ಭಾಗವತವನ್ನು ಅನುಸರಿಸಿಯೇ- ಕೆಡುತ್ತ ಹೋಗುವುದು ಕಾಲದ ಸ್ವಭಾವ ಎಂದು ಹೇಳುತ್ತದೆ. ಹೀಗೆ ತಿಳಿದಾಗಲೇ ಕೆಡುತ್ತಿರುವ ಕಾಲವನ್ನು ಮರಳಿ ಕಕ್ಷೆಯಲ್ಲಿ ನಿಲ್ಲಿಸುವ ಉಪಾಯಗಳೂ ಸ್ಫುರಣಗೊಳ್ಳುವುದು- ಎನ್ನುತ್ತದೆ. ಇದೊಂದು ವಿಚಿತ್ರ ಸಂಯೋಗ! ಕೇಡಿನ ಅರಿವಿನ ಜತೆಗೆ ಅರಿವಿನ ಕೇಡು, ಅರಿವಿನ ಕೇಡಿನ ಜತೆಗೆ ಅರಿವು ಕೆಡದಂತೆ ಅದನ್ನು ಕಾಪಿಡುವ ಉಪಾಯ ಕೂಡ ಹೊಳೆಯವುದು! ನಿರಾಶೆಯ ಹಿಂಬದಿಗೇ ಆಶೆಯ ಚಿಗುರು ಕಾಣಿಸುವುದು. ಏನೂ ಮಾಡಲಾಗದು ಎಂದು ಕೈ ಚೆಲ್ಲಿದ ಹತಾಶೆಯ ಸ್ಥಿತಿಯೇ ಭಗವದ್ದಾಸ್ಯವೆಂಬ ಭಕ್ತಿಯಾಗಿ ಮಾರ್ಪಾಡುಗೊಳ್ಳುವ ಪವಾಡವೊಂದು ಜರಗುವುದು. ಜ್ಞಾನ-ವೈರಾಗ್ಯಗಳು ನಿರ್ಜೀವಾಗಿರುವುದೆಂದು ಅವುಗಳ ಪುನರುಜ್ಜೀವನದ ಪ್ರಯತ್ನದ ಹಿಂದೆ ಅದಾಗಲೇ ಉಜ್ಜೀವನಗೊಂಡ ಭಕ್ತಿಯು ಹಿನ್ನೆಲೆಯ ಭಿತ್ತಿಯಾಗಿ ಇತ್ತು. ಭಕ್ತಿಯೇ ನಿಸ್ತೇಜಗೊಂಡಿದ್ದಾಗ ಅದನ್ನು ಸಪ್ರಾಣಿಸುವುದಕ್ಕೆ ವೃಂದಾವನದ ಮಣ್ಣಿತ್ತು. ಮತ್ತು ಆ ಮಣ್ಣಿನಲ್ಲಿ ಗೋಪಿಕೆಯರ ಮತ್ತು ಕೃಷ್ಣನ ‘ಮಹಾರಾಸ’ದ ಉತ್ತೇಜಕ ಗಂಧ ಇತ್ತು- ಎನ್ನುತ್ತದೆ ಭಾಗವತ.
ಭಕ್ತಿಗೆ ತನ್ನ ಜೀವಂತಿಕೆಯಿಂದಾಗಿಯೇ ಹಿಂದಿನದನ್ನು ಬಿಡಬಲ್ಲ, ಕನಿಷ್ಠ ಅವುಗಳ ಶಕ್ತಿ ಸಾಲದು ಎಂದು ಹೇಳಬಲ್ಲ ಧೈರ್ಯವಿದೆ. ಆದುದರಿಂದಲೇ ವೇದ, ವೇದಾಂತ, ಗೀತೆಗಳ ವಾಕ್ಯಗಳಿಂದ ಜ್ಞಾನ-ವೈರಾಗ್ಯಗಳಿಗೆ ಎಚ್ಚರವಾಗಲಿಲ್ಲ ಎಂಬ ಹೇಳಿಕೆ. ಭಕ್ತಿಕಾವ್ಯವಾದ ಭಾಗವತ ಅವುಗಳನ್ನು ಎಚ್ಚರಗೊಳಿಸಿತು. ನಿಜಕ್ಕಾದರೆ ಭಾಗವತ, ವೇದೋಪನಿಷತ್ತು ಗೀತೆಗಳ ಸಾರ ಸಾಮಾಗ್ರಿ ಎಂಬ ಅರಿವು- ಈ ಎರಡು ಕಾಣ್ಕೆಗಳೂ ‘ಭಕ್ತಿ’ ತನ್ನ ಜೀವಂತಿಕೆಯಿಂದಲೇ ಕಂಡುಕೊಂಡ ಕಾಣ್ಕೆಗಳು. ಅದರ ಜೀವಂತಿಕೆಯೇ ಕಾರಣವಾಗಿ, ಕಲಿಯುಗವನ್ನು ಭಾಗವತ ಕಟು ವಿಮರ್ಶೆಗೆ ಒಳಪಡಿಸುತ್ತದೆ. ಭೂಮಿಯಲ್ಲಿರುವ ಪದಾರ್ಥಗಳ ‘ಸಾರ’ ಹೊರಟುಹೋದ ಯುಗವಿದು-ಕಲಿಯುಗ. ಸಾರವನ್ನುಂಟು ಮಾಡುವ ‘ಕರ್ಮ’ ಯಾವುದು ಎಂದೇ ತಿಳಿದಿಲ್ಲವಾಗಿ- ಎಲ್ಲ ಕುಕರ್ಮವಾಗಿ ಬಿಟ್ಟಿದೆ.
ಕುಕರ್ಮಾಚರಣಾತ್ ಸಾರ: ಸರ್ವತೋ ನಿರ್ಗತ: ಅದು ಹೇಗೆ ಸಾರ ಹೋಗಿಬಿಡೋದು ಸಾಧ್ಯ ಎಂದು ಕೇಳುತ್ತೀರೇನು? ಭಾಗವತವನ್ನೇ ತೆಗೆದುಕೊಳ್ಳಿ. ಈ ಭಾಗವತವನ್ನು ನೀವು ನಿಮ್ಮ ಹೊಟ್ಟೆ ಹೊರೆಯುವುದಕ್ಕಾಗಿ ಬಳಸಿದಿರೋ ಈ ಅನುಪಮ ಕಥೆಯ ಸಾರವೇ ಹೊರಟುಹೋಗುತ್ತೆ.
ತೀರ್ಥಕ್ಷೇತ್ರಗಳಿಲ್ಲವೇ ಎಂದು ಕೇಳುವಿರೇನು?
ತೀರ್ಥಕ್ಷೇತ್ರಗಳು ಘೋರಕರ್ಮ(?)ಗಳಲ್ಲಿ ಆಸಕ್ತರಾದ ನಾಸ್ತಿಕರ ನೆಲೆಯಾಗಿರುವುದರಿಂದ ಕ್ಷೇತ್ರಗಳ ಸಾರ ಹೊರಟು ಹೋಗಿದೆ. ತಪಸ್ವಿಗಳಿಲ್ಲವೇ? ಹೆಸರಿಗೇನೋ ಇದ್ದಾರೆ. ಆದರೆ ತಪಸ್ವಿಗಳೆಂಬವರದು ಬರಿಯ ಬೂಟಾಟಿಕೆ. ನಿಜಕ್ಕಾದರೆ ಅವರು ಕಾಮ ಕ್ರೋಧ ಮಹಾ ಲೋಭ ತೃಷ್ಣಾ ವ್ಯಾಕುಲ ಚೇತಸರು. ಇಲ್ಲಿ ಬಂದಿರುವ ಮಹಾಲೋಭ ಎಂಬ ನುಡಿ ಗಮನಿಸಿ. ವಿವರಣೆ ಅನಗತ್ಯ. ಇಂಥವರಿಂದ ತಪಸ್ಸಿನ ಸಾರ ಹೊರಟು ಹೋಗಿದೆ. ಇನ್ನು ಧ್ಯಾನಾಸಕ್ತರೆಂಬವರು. ಇವರಿಗೆ ತಮ್ಮ ಮನಸ್ಸಿನ ಮೇಲೆ ತಮಗೆ ಸ್ವಯಂ ಹತೋಟಿ ಇಲ್ಲ. ಶಾಸ್ತ್ರಗಳ ಅಧ್ಯಯನ; ಅದರಿಂದುಂಟಾಗತಕ್ಕ ಸೂಕ್ಷ್ಮ ವಿಚಾರವಂತಿಕೆ ಧ್ಯಾನಕ್ಕೆ ವಿರೋಧಿ ಎಂಬ ತಮಗಿಷ್ಟವಾದ ಅಭಿಪ್ರಾಯವನ್ನು ಅದು ಹೇಗೋ ತಾವೇ ರೂಪಿಸಿಕೊಂಡು ವೈಚಾರಿಕತೆಯ ಶತ್ರುಗಳಾಗಿದ್ದಾರೆ. ಇವರು ಪಾಷಂಡಿಗಳು. ಇಂಥವರಿಂದ ಧ್ಯಾನದ ಸಾರ ನಷ್ಟವಾಗಿದೆ. ಇನ್ನು ಎಲ್ಲ ಕಾಲದಲ್ಲೂ ಇರುವ ಪಂಡಿತರು? ಪಂಡಿತರೆನೆನಿಸಿಕೊಂಡವರ ಮೇಲೆ ಭಾಗವತಕ್ಕೆ ಮಹಾಕೋಪ. ಇದು ಪಂಡಿತರ ವರ್ಣನೆ. ಪಂಡಿತಾಸ್ತು ಕಲತ್ರೇಣ ರಮಂತೇ ಮಹಿಷಾ ಇವ, ಪುತ್ರಸ್ಯೋತ್ಪಾದನೇ ದಕ್ಷಾ: ಅದಕ್ಷಾ: ಮೋಕ್ಷ ಸಾಧನೇ-ಎಂದರೆ, ಪಂಡಿತರೆನಿಸಿಕೊಂಬೋ ಜನ ಹೆಂಡಿರೊಡನೆ ಕೋಣಗಳಂತೆ ಕ್ರೀಡಿಸುವರು, ತಮ್ಮಂಥದೇ ಮಕ್ಕಳನ್ನು ಪಡೆಯುವುದರಲ್ಲೇನೋ ದಕ್ಷರೆನ್ನಬೇಕು; ಬಿಡುಗಡೆಯ ಕಥೆ ಮಾತ್ರ ಕೇಳಬೇಡಿ.
ಈ ಸ್ಥಿತಿಯೇ ಯುಗಧರ್ಮವಾಗಿಬಿಟ್ಟಿದೆ. ಎಲ್ಲಿದೆ ನಿಜವಾದ ವೈಷ್ಣವತ್ವ?
ವ್ಯಾಸರು ಮಹಾಭಾರತದಲ್ಲಿ ಪೃಥಿವೀ ಗತಯೌವನಾಎಂಬೊಂದು ನುಡಿಯಲ್ಲಿ ಯುಗದ ನಿಸ್ಸಾರತೆಯನ್ನು ಬಣ್ಣಿಸಿದ್ದುಂಟು. ಭೂಮಿ ತನ್ನ ಸೃಷ್ಟಿಶೀಲತೆಯನ್ನು ಕಳೆದುಕೊಂಡಂಥ ಸ್ಥಿತಿ ಇದು. ಭಾಗವತದ ಈ ಕಟು ಟೀಕೆ ಧರ್ಮದ ಕ್ಷೇತ್ರವನ್ನೇ ಹೆಚ್ಚಾಗಿ ಕುರಿತಿದೆ ಎಂದು ಗಮನಿಸಬೇಕು. ಹೀಗೆ ಹೇಳುವ ಭಾಗವತ, ಬೇರಾವ ಯುಗದಲ್ಲೂ ಇಲ್ಲದ ಗುಣ ವಿಶೇಷವೊಂದು ಕಲಿಯುಗದಲ್ಲಿ ಇದೆ ಎನ್ನುತ್ತದೆ. ಅದೇನೆಂದರೆ ಈ ಯುಗದಲ್ಲಿ ಭಗವಂತ ಸ್ತುತಿಗೆ ಒಲಿದು ಬಿಡುತ್ತಾನೆನ್ನುವುದು. ಭಗವಂತ ಒಲಿದನೆಂದರೆ ಇನ್ನೇನು!
ಹೀಗೆಂದರೇನು?- ಎಂದರೆ; ಕಲಿಯುಗ ಮಾತಿನ ಯುಗ ಎನ್ನುವುದು. ಮತ್ತು ದೇವರು ನಿನ್ನ ಮಾತುಗಳನ್ನು ಆಲಿಸುವುದಕ್ಕೆ ಯೋಗ್ಯವಾಗುವಂತೆ ನೀನು ಮಾತುಗಳನ್ನಾಡಬಲ್ಲೆಯಾ- ಎನ್ನುವುದು. ನಮ್ಮನ್ನೇ ಕುರಿತ ‘ಸ್ತುತಿ’ ನಮಗೆಷ್ಟು ಪ್ರಿಯವಾಗಿದೆ ಎಂದು ನೋಡಿದರೆ ತಿಳಿಯುವುದಿಲ್ಲವೆ? -ಈ ಸ್ಥಿತಿಯನ್ನು ಬದಲಿಸಿದರೆ ಸಾಕು ಎನ್ನುವುದು.
“ಕಲೌ ಕೇಶವ ಕೀರ್ತನಾತ್. ತಪಸ್ಸು- ಯೋಗ- ಸಮಾಧಿಗಳಿಂದ ಪಡೆಯಲಾಗದ ಫಲವನ್ನು ಭಗವಂತನ ಕೀರ್ತನೆಯಿಂದ, ಸ್ವ-ಕೀರ್ತನೆಯಲ್ಲ ಭಗವಂತನ ಕೀರ್ತನೆ, ಸ್ವ-ನಾಮವಲ್ಲ ಭಗವಂತನ ನಾಮ, -ಅಂದರೆ ‘ಸ್ವ’ -ದ ಜಾಗೆಯಲ್ಲಿ ಭಗವಂತನನ್ನು ಇರಿಸುವ ಅನುಸಂಧಾನದಿಂದ ಪಡೆಯಬಹುದು ಎನ್ನುತ್ತದೆ ಭಾಗವತ. ಈ ಸರಳ ಸತ್ಯವನ್ನು ತಿಳಿಯುವುದಕ್ಕಾಗಿಯೇ ತಪಸ್ಸು- ಯೋಗ- ಸಮಾಧಿಗಳು ಕೆಡುವುದೋ ಏನೋ! ಅಂದರೆ, ಉತ್ಕಟವಾದ ಕೇಡಿನ ಒಳಗಿನಿಂದಲೇ ನಿಜವಾದ ಒಳ್ಳೆಯದೆಂಬುದು ಹುಟ್ಟಿ ಬರುತ್ತದೆ ಎಂಬ ಕಾಣ್ಕೆ ಇದು. ಮಾತು ತಾನು ಬಹಳ ಬೇಗ ನಿಸ್ಸಾರಗೊಳ್ಳುವ ಗುಣ ಉಳ್ಳದ್ದು. ಗುಣವೋ-ದೋಷವೋ. ವೇದೋಪನಿಷತ್ತುಗಳ ವಾಕ್ಯಗಳಿಂದ ಜ್ಞಾನ- ವೈರಾಗ್ಯಗಳನ್ನು ಎಚ್ಚರಗೊಳಿಸಲಾಗಲಿಲ್ಲ ಎಂದು ಈಗಲೇ ನೋಡಿದ್ದೇವೆ. ವಾಗರ್ಥಗಳ ನಿಜವಾದ ಪ್ರತಿಪತ್ತಿಯ ಮೇಲೆ ‘ಬಂಧನ’ ಮತ್ತು ‘ಬಿಡುಗಡೆ’ಗಳು ನಿಂತಿವೆ. ಮಾತು ಬಹಳ ಬೇಗ ಅರ್ಥ ಕಳಕೊಂಡು ನಿಸ್ಸಾರಗೊಳ್ಳುವುದರಿಂದಲೇ, ಹಾಗಾದರೆ ಮಾತಿನ ನಿಜವಾದ ಸಾರ ಯಾವುದು ಎಂಬ ಚಿಂತನೆ ಹುಟ್ಟಿಕೊಳ್ಳುವುದು.
ಮಾತು, ಅರ್ಥವನ್ನು ಕಳಕೊಳ್ಳುವುದೋ ಅಥವಾ ಅರ್ಥವೇ ಮಾತನ್ನು ಕಳಕೊಳ್ಳುವುದೋ, ಏಕೆ ಈ ಮಾತೆಂದರೆ, ಅರ್ಥ ವ್ಯತ್ಯಾಸ ಸಂಭವಿಸದೆ ‘ಮಾತು’ ಪುನರುಜ್ಜೀವನಗೊಳ್ಳದು. ಮತ್ತು ಮಾತನ್ನು ಮರಳಿ ಉಜ್ಜೀವಿಸುವುದು ಭಾಗವತದ ಉದ್ದೇಶ. ಭಾಗವತದಲ್ಲೇ ಮುಂದೆ ಒಂದು ಮಾತು ಬರುತ್ತೆ. ಶ್ರೋತ್ರಂ ಅಮುಷ್ಯ ಶಬ್ದ:. ಅಂದರೆ ಶಬ್ದಗಳೇ ಭಗವಂತನಿಗೆ ‘ಕಿವಿ’ ಅಂತ. ಜೀವಿಗಳಾದ ನಮಗೆ ಇಂದ್ರಿಯಗಳಿವೆ. ಶಬ್ದಗಳನ್ನು ಆಲಿಸಲು ನಮಗೆ ‘ಕಿವಿ’ ಬೇಕು. ಭಗವಂತನಿಗೆ ಇಂದ್ರಿಯಗಳಿಲ್ಲ. ಬೇಕಿಲ್ಲ. ಹಾಗಾದರೆ ಅವನಿಗೆ ಕೇಳುವ ಅನುಭವ ಹೇಗೆ? ಎಂದರೆ ಶಬ್ದಗಳೇ ಅವನ ಕಿವಿಗಳು ಅಂತ. ಅವನು ನಮ್ಮಿಂದ ಒಂದು ಹೆಜ್ಜೆ, ಒಂದು ಹೆಜ್ಜೆ ಮಾತ್ರ ಮುಂದೆ ಇದ್ದಾನೆ. ಈ ಅನುಭವದಿಂದಲೇ ಸಾಕು ನನಗೊಂದು ಹೆಜ್ಜೆ -ಠಟಿಜ ಣಜಠಿ ಜಟಿಠಣರ ಜಿಠಡಿ ಟಜ- ಎಂಬ ಮಾತು ಹುಟ್ಟಿದ್ದು. ಆ ಹೆಜ್ಜೆ ಹಿಂದೆ-ಮುಂದೆ -ಅಥವಾ ಎರಡೂ ಕಡೆ ಇರಬಹುದು. ಹಜ್ಜೆ ಮಾತ್ರ ಒಂದೇ. ನಮಗೆ ನಿಲುಕುವಂತೆ.
ಶಬ್ದವೇ ಕಿವಿಯಾದವನು ಕೇಳುವುದು ಹೇಗೆ?
ಅವನಿಗೆ ಅರ್ಥವೆಲ್ಲ ಶಬ್ದವಾಗಿರುತ್ತದೆ! ನಮಗೆ ‘ಕಿವಿ’, ಕಿವಿಯಿಂದ ಕೇಳುವ ಶಬ್ದ ಮತ್ತು ಶಬ್ದದ ‘ಅರ್ಥ’ -ಹೀಗೆ ಅನುಭವ. ಒಂದು ಹೆಜ್ಜೆ ಮುಂದಿರುವವನಿಗೆ, ಶಬ್ದಗಳೇ ಕಿವಿಯಾಗಿರುವುದರಿಂದ ಅರ್ಥವೆಲ್ಲ ಶಬ್ದವಾಗಿರುತ್ತದೆ. ನಿಜಕ್ಕಾದರೆ ಅರ್ಥವೆಂದರೆ ಅದು ಶಬ್ದವೇ ಅಲ್ಲವೆ? ಕ್ಷಣ ಯೋಚಿಸಿ. ಅರ್ಥವೆಲ್ಲ ಶಬ್ದವೆನ್ನುವುದಾದರೆ ಅರ್ಥ ಎನ್ನುವುದಿಲ್ಲವೇ? ಇದ್ದರೆ ಆ ಅರ್ಥ ಯಾವುದು?
ಅರ್ಥವೆಲ್ಲ ಶಬ್ದವಾಗಿರುವ ಭಗವಂತನಿಗೆ ಆ ಶಬ್ದವನ್ನು ಉಚ್ಛರಿಸುವ ನಾವೇ ಅದರ ನಿಜವಾದ ಅರ್ಥ. ಅಂದರೆ ಶಬ್ದಗಳಿಗೆ ಅರ್ಥವನ್ನು ಹಚ್ಚಿ ವ್ಯವಹರಿಸುವ ಜೀವವೇ ಆ ಅರ್ಥದ ನಿಜವಾದ ಅರ್ಥ. ನಮ್ಮ ಮಾತಿನಲ್ಲಿ ಹೇಳುವುದಾದರೆ ಅರ್ಥದ ಅರ್ಥ. ಆದುದರಿಂದ ಭಗವಂತನ ಜತೆ ವಾಗರ್ಥ ವ್ಯವಹಾರ ಮಾಡುವುದು ಒಂದು ಅತ್ಯಂತ ರೋಮಾಂಚಕವಾದ ಸಂಗತಿ ಎನ್ನುತ್ತದೆ ಭಾಗವತ. ವಿಶೇಷವಾಗಿ ಇದು ಕಲಿಯುಗದಲ್ಲಿ ಸಾಧ್ಯ ಎನ್ನುತ್ತದೆ. ಅದಕ್ಕಾಗಿ ನೀನು ಒಂದೇ ಒಂದು ಹೆಜ್ಜೆ ಮುಂದಿಡಬೇಕು- ಅಷ್ಟೆ ಎನ್ನುತ್ತದೆ. ಎಂದರೆ ನೀನು ಶಬ್ದಗಳಿಗೆ ಹಚ್ಚಿದ ಅರ್ಥಗಳಿವೆಯಲ್ಲ- ಅದನ್ನು ಕಳಚಿಬಿಡು ಎನ್ನುತ್ತದೆ. ಅದೇ ಈ ಎಲ್ಲ ಬಂಧನಕ್ಕೆ ಕಾರಣ ಎನ್ನುತ್ತದೆ. ಬಂಧನಕ್ಕೆ ಕಾರಣವಾಗಿರುವುದೇ ಬಿಡುಗಡೆಗೂ ಕಾರಣವಾಗುವುದೇ ಕಲಿಯುಗದ ವೈಶಿಷ್ಟ್ಯ ಎನ್ನುತ್ತದೆ. ನೀನು ಹಚ್ಚಿದ ಅರ್ಥದ ಭಾರದಿಂದ ಕಳಚಿಗೊಂಡಾಗ ಶಬ್ದಗಳೆಲ್ಲ ಹೊಸ ಜೀವದಿಂದ ನಲಿಯುವುದು, ನಳನಳಿಸುವುದು ಅನುಭವವಾಗುತ್ತದೆ ಎನ್ನುತ್ತದೆ. ಆಗ, ‘ನಿನ್ನ ಮಾತಿನ ಅರ್ಥ ನೀನೇ’ ಎಂದು ಭಗವಂತನಿಗೆ ತಿಳಿದಿರುವಂತೆ, ಎಲ್ಲ ಶಬ್ದಗಳ ಅರ್ಥವೂ- ಭಗವಂತನೇ ಎನ್ನುವುದು ನಿನ್ನ ತಿಳುವಳಿಕೆಗೆ ಬರುತ್ತದೆ ಎನ್ನುತ್ತದೆ. ಅರ್ಥವೂ ಶಬ್ದವೇ ಆದುದರಿಂದ, ಭಗವಂತ ಶಬ್ದದ ಅರ್ಥವಾಗಿ ಅಲ್ಲ, ಶಬ್ದದ ಶಬ್ದವೇ ಆಗಿ ಪ್ರತಿಯೊಂದು ಶಬ್ದದಲ್ಲೂ ಇದ್ದಾನೆ, ಈ ಎರಕವೇ ಭಗವಂತನ ಸ್ವಭಾವ ಎನ್ನುತ್ತದೆ. ಆಗ ಮಾತು, ಸ್ತುತಿಯಾಗದೆ ಇರುವುದೆಂತು ಎಂದು ಕೇಳುತ್ತದೆ. ಮಾತೆಲ್ಲ ಸ್ತುತಿಯಾಗಿಯೇ ಇದೆ ಎನ್ನುತ್ತದೆ. ಭಕ್ತಿ ಎಂದರೆ ವಾಗರ್ಥ ಪ್ರತಿಪತ್ತಿಯಲ್ಲಿ ನಡೆಯುವ ಮೂಲಭೂತವಾದ ಕ್ರಾಂತಿ ಎನ್ನುತ್ತದೆ. ಇದು ಕಲಿಯುಗದ್ದೇ ವೈಶಿಷ್ಟ್ಯ ಎಂದು ಕೊಂಡಾಡುತ್ತದೆ.
ತೋಳ್ಪಾಡಿ ಭಾಗವತ ಕಥಾ 3: ದೇವರೆಂಬವನು ಬಲು ದೊಡ್ಡ ಕೇಳುಗ
ದೊಡ್ಡದೊಂದು ಕಾಡು. ಅದನ್ನು ಬರಿಯ ಕಾಡೆಂದರೆ ಸಾಲದು. ಅದರ ಹೆಸರು “ನೈಮಿಷ”. “ನೈಮಿಷಾರಣ್ಯ”. ಸ್ಥಳಕ್ಕೆ ತನ್ನದೇ ಹೆಸರೊಂದು ಬೀಳದೆ “ಸ್ಥಳ-ಪುರಾಣ” ಬೆಳೆಯುವುದಿಲ್ಲ. ಸ್ಥಳ-ನಾಮದಿಂದ ಸ್ಥಳ-ಪುರಾಣ. ನಾಮದ ಹಿಂದೆಯೇ ಒಂದು ಪುರಾಣ ಇರುತ್ತದೆ. ಪುರಾಣ ಎಂದರೇಯೇ ಹಿಂದೆ ಇರೋದು – ಹಿನ್ನೆಲೆ ಎಂದು ಅರ್ಥ. “ನೈಮಿ-ಷ” ಎಂದರೆ ಚಕ್ರದ “ನೇಮಿ” ಮುರಿದು ಬಿದ್ದ ಸ್ಥಳವಂತೆ. ಅದು ಮನೋಮಯ – ಅಂದರೆ ಮನಸ್ಸೆಂಬ ಚಕ್ರವಂತೆ. ನಮ್ಮ ಯೋಚನಾ ಚಕ್ರ – ಅದು ಭೂಮಿಯಂತೆ ಸದಾ ಸುತ್ತುತ್ತಲೇ ಇದೆ – ಅಂಥ ಚಕ್ರ ಈ ಸ್ಥಳದಲ್ಲಿ ಒಮ್ಮೆ ನಿಲುಗಡೆಗೆ ಬಂದಿತಂತೆ. ಅಂದರೆ ‘”ಚಿತ್ತವೃತ್ತಿ ನಿರೋಧ” ಈ ನೈಮಿಷದಲ್ಲಿ ಸಂಭವಿಸಬಹುದಂತೆ. ಆದುದರಿಂದ ಇದು ತಪಸ್ಸಿಗೆ ಯೋಗ್ಯವಾದ ತಾಣವಾಗಿದೆಯಂತೆ. ತಪಸ್ಸೆಂದರೆ “ಚಿತ್ತ-ವೃತ್ತಿನಿರೋಧ”ವೇ ಅಲ್ಲವೇ. ಹಾಗೆ, ಇಂಥ ವಿಷಯಗಳಲ್ಲಿ ಆಸಕ್ತರಾದವರ ಒಂದು ಗುಂಪು ನೈಮಿಷಾರಣ್ಯದಲ್ಲಿ ನೆಲಸಿತು. “ಶೌನಕ”ನೆಂಬವನು ಈ ಗುಂಪಿನ ಮುಂದಾಳಿರಬೇಕು. ಈ “ಶೌನಕ” ಪ್ರಸಿದ್ಧ ವೇದ ವಿದ್ವಾಂಸ. “ಋಗ್ವೇದ ಪ್ರಾತಿಶಾಖ್ಯ” ಶೌನಕನ ಹೆಸರಿನಲ್ಲಿದೆ. ಎಂಥ ಹೆಸರು! ಶಬ್ಧಗಳನ್ನು ಮೂಸುತ್ತಾ ಮೂಸುತ್ತಾ ಅರ್ಥವನ್ನು ಹುಡುಕುವವನೋ? ಇರಬಹುದು. ಇದಕ್ಕಿಂತ ಹೆಚ್ಚು ಶೌನಕನೊಬ್ಬ ಅದ್ಭುತ ಕೇಳುಗ! ಪರಮಶ್ರೋತ್ರಿಯ! ನಿಜಕ್ಕಾದರೆ ವೈದಿಕನಿಗೆ “ಶ್ರೋತ್ರಿಯ”‘ಎನ್ನುವುದೇ ಪರಿಷ್ಕಾರವಾದ, ಸಮೀಚೀನವಾದ ಪದ. “ಶ್ರೋತ್ರಿಯ” ಎಂದರೆ “ಕೇಳುಗ” ಎಂದೇ ಅರ್ಥ. “ವೈದಿಕ”ನೆಂದರೆ “ಜ್ಞಾನಿ” ಎನ್ನುವುದು ಆ ಪದದ ತಾಂತ್ರಿಕವಾದ ಅರ್ಥವಾದರೆ ಆ “ಜ್ಞಾನ” ಉಂಟಾದದ್ದು ದೊಡ್ಡಾದ ಕೇಳುವ ಗುಣ- “ಕೇಳ್ಮೆ” -ಇದ್ದುದರಿಂದ. ಆದುದರಿಂದಲೇ ವಿದ್ವಾಂಸನಿಗೆ “ಬಹುಶ್ರುತ” -ಬಹಳ ಕೇಳಿದವನು -ಎನ್ನುವುದು. ನಿಜಕ್ಕಾದರೆ, “ಬಹುಶ್ರುತ”ನಾಗಿರುವುದು ದೇವರಗುಣ ಎನ್ನುವುದೇ ವೈದಿಕ ತಿಳುವಳಿಕೆ. ದೇವರು ಎಲ್ಲೆಡೆ ಇದ್ದಾನೆ; ಸರ್ವವ್ಯಾಪಿ -ಇದು ದೇವರ ಮೊದಲ ಗುಣ. ಸರ್ವವ್ಯಾಪಿಯಾದವನು ಸರ್ವಜ್ಞನಾಗದೆ ಇರುವುದು ಅಸಾಧ್ಯ. ಎಲ್ಲೋ ಒಂದೆಡೆ ಕೂತು ಮಾಹಿತಿ ಕಲೆ ಹಾಕಿ ಅವನು ಸರ್ವಜ್ಞನಾದದ್ದಲ್ಲ. ಅವನಿಗೆ ಯಾವುದೂ ಬರಿಯ ಮಾಹಿತಿಯಲ್ಲ. ಎಲ್ಲವೂ “ಅನುಭವ”. ಆದುದರಿಂದ, ಶ್ರವಣಗುಣವೇ ದೇವರ ಲಕ್ಷಣವಾಗಿರುವುದರಿಂದ ದೇವರು “ಬಹು-ಶ್ರುತ”. ಅಥವಾ ಮೊದಲ ಕೇಳುಗ! ಸೃಷ್ಟಿಯ ಮೊದಲ ಕೇಳುಗ ಅವನೇ ಇರಬೇಕು! ತನ್ನ ಮಾತನ್ನು ತಾನೇ ಕೇಳದೆ ಅದನ್ನು ಇತರರು ಕೇಳುವಂತೆ ಮಾಡುವುದು ಹೇಗೆ? ತನ್ನ ಮಾತನ್ನು ತಾನೇ ಕೇಳುವುದೆನ್ನುವಾಗ, ತನ್ನನ್ನು ತಾನೇ ಸಂಯಮದಲ್ಲಿಟ್ಟುಕೊಳ್ಳುವುದು ಎಂಬ “ಧ್ವನಿ” ಕೂಡ ಇದೆ. “ವಾಚ್ಯ” ಮತ್ತು “ಧ್ವನಿ” -ಈ ಎರಡುಸ್ತರಗಳಲ್ಲಿಯು ಈ ಮಾತು ಸರಿ. “ವಾಚ್ಯ”‘ದಲ್ಲಿ “ಧ್ವನಿ” ಅಡಗಿದೆ ಎನ್ನುವುದೆಷ್ಟು ನಿಜವೋ “ಧ್ವನಿ”ಯು “ವಾಚ್ಯ”ವನ್ನು ಹೊತ್ತಿದೆ ಎನ್ನುವುದೂ ಅಷ್ಟೇ ನಿಜ! “ಧ್ವನಿ”ಯು “ವಾಚ್ಯ”ವನ್ನು ಹೊತ್ತದ್ದು ಒಂದು ದೊಡ್ಡ ಅಚ್ಚರಿ!
ಒಬ್ಬ ದೊಡ್ಡ “ಕೇಳುಗ”ನನ್ನು ಕಲ್ಪಿಸದೆ ಮಾತು ಸೃಷ್ಟಿಶೀಲವಾಗುವುದು ಸಾಧ್ಯವಿಲ್ಲ. ಅವನಾದರೋ, ನಿಮ್ಮ ಮಾತನ್ನು ಸೃಷ್ಟಿಶೀಲವಾಗಿಸುವುದಕ್ಕಾಗಿಯೇ ತಾನು ಕೇಳುಗನಾಗಿರುವವನೇನೋ ಎಂಬಂತಿರುವವನಾಗಿರಬೇಕು. ಈ ನಿಜವಾದ ಕೇಳುಗನನ್ನು ಮೆಚ್ಚಿಸುವುದು ಒಂದು ದೊಡ್ಡ ಭಾಗ್ಯ. ಇದು “ಸತ್ಯ” ಎಂದು ನೀವು ಪಟ್ಟುಹಿಡಿದರೆ ಅವನು ಮೆಚ್ಚಲಾರ. ಸತ್ಯವೇನೆಂದು ತಿಳಿಯುತ್ತಿಲ್ಲ. ಎಂದು ನಿಜವಾಗಿ ತೋಡಿಕೊಂಡರೆ ಮೆಚ್ಚಬಲ್ಲನೇನೋ. ಆದುದರಿಂದಲೇ ನಮ್ಮ ಸಂಕಟಗಳನ್ನು ತೋಡಿಕೊಂಡಾಗ ನಮಗೆ ಸಂತೋಷವಾಗುವುದೋ ಏನೋ. ಗುಡುಗಿನ ಸದ್ದನ್ನು ನೀವು ವರ್ಣಿಸಿದರೆ ಅವನು ಮೆಚ್ಚಬಲ್ಲ. ಮೂರುಬಾರಿ ಗುಡುಗಿದ ಸದ್ದು- ಮೂರುಬಾರಿ “ದ-ದ-ದ” ಎಂದಂತೆ ಕೇಳಿಸಿತು ಎಂದರೆ ಅವನು ರೋಮಾಂಚಿತನಾಗಬಲ್ಲ. ಹಾಗೆಂದರೆ “ದತ್ತ-ದಯಧ್ವಂ-ದಮ್ಯತ”, ಕೊಡು-ದಯೆ ಇಡು -ಇಂದ್ರಿಯದಮನಮಾಡು -ಎಂದರ್ಥವಾಗುತ್ತದೆ ಎಂದು ಹೇಳಿದಿರಾದರೆ ಅವನು ತಲೆದೂಗುತ್ತಾನೆ -ಎನ್ನುತ್ತದೆ ಉಪನಿಷತ್ತು. ದೇವರು ದೊಡ್ಡ ಕೇಳುಗನೆನ್ನುವ ಈ ಹೊಳಹಿನಿಂದಲೇ ಆಮೇಲೆ ಪ್ರಸಿದ್ಧವಾದ “ಕವಿ-ಸಹೃದಯ” ತತ್ತ್ವ ಅರಳಿಬಂತೆನ್ನಬಹುದು. ದೇವರು ಕೇಳುಗನೆನ್ನುವ ಕಾಣ್ಕೆಗೆ ಸಮಾಂತರವಾಗಿ “ಶೌನಕ”ನೆಂಬ ಕೇಳುಗನ ಚಿತ್ರಣ, ಆಮೇಲಿನ ಎಲ್ಲ ವಾಜ್ಮಯಗಳಲ್ಲಿ ಮೂಡಿಬಂತು. ಮಹಾಭಾರತದಲ್ಲೂ ಇದೇ ಚಿತ್ರ. ನೈಮಿಷಾರಣ್ಯದಲ್ಲಿ ದೀರ್ಘ ಸತ್ರದಲ್ಲಿ (ದೀರ್ಘ ಅವಧಿಯ ಯಜ್ಞ) ನೆರೆದಿದ್ದ ಶೌನಕಾದಿಗಳ ಚಿತ್ರ. ಬದುಕನ್ನೆ ಇವರು ದೀರ್ಘಸತ್ರ ಎಂದು ಕರೆಯೋದು. ಈ ಶೌನಕಾದಿಗಳಿಗೆ ಆಗತಾನೇ ಕಾಲಿಟ್ಟಿರುವ ಕಲಿಯುಗದ ಕುರಿತಾದ ಚಿಂತೆ ಕಾಡುತ್ತಿತ್ತು ಎನ್ನುವುದು “ಭಾಗವತ” ತೆರೆದುಕೊಳ್ಳುವ ರೀತಿ.
ಯುಗದ ಚಿಂತೆ, ಲೋಕದ ಚಿಂತೆ ಎನ್ನುವುದು ತಪಸ್ಸಿನ ಇನ್ನೊಂದು ಮುಖ. ಸ್ವಕೇಂದ್ರಿತ ಚಿತ್ತವೃತ್ತಿಗಳು ನಿಲುಗಡೆಯಾಗುವುದೇ ತಪಸ್ಸು, ಅದಕ್ಕೆ “ನೈಮಿಷ” ಯೋಗ್ಯವಾದ ತಾಣ ಎಂಬ ಮಾತು ಬಂದಿತ್ತು. ಚಿತ್ತವೃತ್ತಿಗಳು ನಿಲುಗಡೆಯಾದ ಮೇಲೆ ಹುಟ್ಟಿಕೊಳ್ಳುವ ಸಂವೇದನಾತರಂಗಗಳು ಲೋಕ ಕೇಂದ್ರಿತವಾಗಿ ಇರುತ್ತವೆ. ಯುಗಧರ್ಮಕೇಂದ್ರಿತವಾಗಿರುತ್ತವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ತಪಸ್ಸೆಂದರೆ ಲೋಕ ದು:ಖಾನುಭವ ಸಾಮರ್ಥ್ಯ. ಲೋಕದ ಅಳಲೇ ತನ್ನ ಅಳಲು. ತನ್ನ ಅಳಲೆನ್ನುವುದು ಬೇರೆ ಇಲ್ಲ. ಲೋಕ ದು:ಖಿತವಾಗಿದ್ದರೆ ತಾನು ಸುಖಿಯಾಗಿರುವುದು ಸಾಧ್ಯವೇ ಇಲ್ಲ. ವೇದೋಪನಿಷತ್ತುಗಳೇನೋ ಆನಂದ ಎನ್ನುತ್ತಿವೆ. ಆನಂದಾನುಭವ ಸಾಮರ್ಥ್ಯದ ಆಂತರಿಕ ವಿಕಾಸದ ಚಿತ್ರಣ ಕೊಡುತ್ತವೆ. ಅಕಾಮಹತ ಸ್ಥಿತಿಯ (not smitten with desires) ಪರಮಾನಂದವನ್ನು ಸೂಚಿಸುತ್ತವೆ. ಅದರ ಇನ್ನೊಂದು ಮುಖವೇ ಈ ಲೋಕ ದು:ಖಾನುಭವ ಸಾಮರ್ಥ್ಯವಾಗಿರುವಂತಿದೆ. ಉಪನಿಷತ್ತೇನೋ ಸರ್ವಸಂಗ ಪರಿತ್ಯಾಗ ಎನ್ನಬಹುದು. ಆದರೆ “ಸರ್ವಸಂಗ”ವಿಲ್ಲದೆ ಸರ್ವಸಂಗ ಪರಿತ್ಯಾಗ ಸಾಧ್ಯವಿಲ್ಲವಲ್ಲ. ಸರ್ವಸಂಗವೆಂದರೆ ಲೋಕಸಂಗ. ಲೋಕದ ದು:ಖವೆಲ್ಲ ಆಳವಾಗಿ ತಾಕಿದ ಮನ:ಸ್ಥಿತಿ. ಸ್ವಕೇಂದ್ರಿತತೆ ಕಳೆದುಕೊಂಡ ಮನಸ್ಸಿಗೆ ಇದು ನಿತ್ಯ ಅವಸ್ಥೆ. ಈ ಬೇಯುವಿಕೆಯೇ ತಪಸ್ಸು. ತಪಸ್ಸೆಂಬ ಪದದ ಅರ್ಥವೇ ಇದನ್ನು ಸೂಚಿಸುತ್ತೆ.
ಇದಕ್ಕನುಗುಣವಾಗಿ ಲೋಕದ ದು:ಖವನ್ನೆಲ್ಲ ಹಿಡಿದಿಡಬಲ್ಲ ವಾಜ್ಮಯಬೇಕಲ್ಲ. ವೇದೋಪನಿಷತ್ತುಗಳು ಇಂಥ ವಾಜ್ಮಯಗಳಾಗಲಾರವು. ಅದಕ್ಕೆ ಬೇರೆಯೇ ನೆಲೆಯ -ಲೌಕಿಕನೆಲೆಯ -ವಾಜ್ಮಯ ಬೇಕು. ಅಂಥ ವಾಜ್ಮಯಗಳಿಗೆ ಇತಿಹಾಸ, ಪುರಾಣ, ಕಾವ್ಯಗಳೆಂದು ಹೆಸರು. ಮಹಾಭಾರತವು ಇತಿಹಾಸ. ರಾಮಾಯಣವು ಕಾವ್ಯ. ಭಾಗವತವು ಪುರಾಣ. ಹಾಗೆಂದು ಈ ಮೂರುಗುಣಗಳೂ ಒಂದರೊಡನೊಂದು ತಳಕು ಹಾಕಿಕೊಂಡೇ ಇವೆ. ಮಹಾಭಾರತದಲ್ಲಿ ಕಾವ್ಯವಿಲ್ಲವೇನು? ಭಾಗವತದಲ್ಲಿ ಇತಿಹಾಸವಿಲ್ಲವೇನು?
ಇತಿಹಾಸ-ಪುರಾಣಗಳು, ವೇದೋಪನಿಷತ್ತುಗಳದ್ದೇ ಬೆಳವಣಿಗೆ ಎನ್ನುವುದು ಮಹಾಭಾರತದ ಮಾತು. “ಇತಿಹಾಸ ಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್ “. ಇತಿಹಾಸ ಪುರಾಣಗಳ ಮೂಲಕ ವೇದದಕಾಣ್ಕೆಯನ್ನು ಬೆಳೆಸಿರಿ ಎನ್ನುವುದು ಈ ಮಾತಿನ ಮೇಲ್ನೋಟದ ಅರ್ಥ. ಅಲ್ಲಿ ಬೀಜರೂಪವಾಗಿರುವುದು ಇಲ್ಲಿ ವಿಸ್ತಾರಗೊಳ್ಳಬೇಕಿದೆ, ಇತಿಹಾಸ-ಪುರಾಣಗಳ ಬಹುತ್ತ್ವವನ್ನೇ ವೇದ, ಉದ್ದೇಶಿಸಿರುವುದು ಎಂಬರ್ಥ ಕೂಡ ಸ್ಫುರಿಸುತ್ತದೆ. ಬರಿಯ ವೇದಗಳನ್ನು ಕೇಳಿದವ “ಅಲ್ಪಶ್ರುತ”ನಂತೆ. ಇತಿಹಾಸ-ಪುರಾಣಗಳನ್ನು ಕೇಳಿದವನು ಮಾತ್ರ “ಬಹುಶ್ರುತ”ನಂತೆ. “ಅಲ್ಪ-ಶ್ರುತ”ನಿಂದ ಅಂದರೆ ತನ್ನನ್ನು ಮಾತ್ರ ಕೇಳಿದವನಿಂದ, ವೇದಕ್ಕೆ -ಇವನು ತನ್ನನ್ನು ಸರಿಯಾಗಿ ತಿಳಿಯದೆ, ತಪ್ಪಾಗಿ ತಿಳಿಯುತ್ತಾನಲ್ಲ, ತನ್ನ ತಪ್ಪು ತಿಳುವಳಿಕೆಯನ್ನೇ ಸರಿ ಎನ್ನುತ್ತಾನಲ್ಲ -ಎಂದು ಬಹಳವಾಗಿ ಹೆದರಿಕೆಯಾಗುತ್ತದಂತೆ. “ಬಿಭೇತಿ ಅಲ್ಪಸ್ರುತಾದ್ ವೇದೋ ಮಾಮಯಂ ಪ್ರಹರಿಷ್ಯತಿ”
ಇತಿಹಾಸ ಪುರಾಣಗಳನ್ನು ಕೇಳಿದವನೇ ವೇದಗಳನ್ನು ಕಾಪಾಡುವುದಂತೆ!
ಇತಿಹಾಸ ಪುರಾಣಗಳನ್ನು ಲೌಕಿಕ ವಾಜ್ಮಯ ಎನ್ನುತ್ತೇವೆ. ಅದು ಲೋಕದ ದು:ಖವನ್ನು ಹಿಡಿದಿಟ್ಟ ವಾಜ್ಮಯ. ಈ ಅರ್ಥದಲ್ಲಿ ಬಹುಶ್ರುತನೆಂದರೆ ಬಹಳ ಅಳಲನ್ನು ಕೇಳಿದವ. ಆರ್ತಧ್ವನಿಗಳನ್ನು ಕೇಳಿದವ. ಅದರಲ್ಲಿ ಗಂಡನ್ನು ಕಳಕೊಂಡ ಹೆಣ್ಣು ಕ್ರೌಂಚದ ಅಳಲುಕೂಡ ಸೇರಿದೆ! ಮಹಾಭಾರತದ “ಸ್ತ್ರೀಪರ್ವ”ದಲ್ಲಿ (ಪರ್ವಕ್ಕೆ ಎಂಥ ಹೆಸರು!) ಯುದ್ಧದಲ್ಲಿ ಮನೆಯ ಗಂಡಸರನ್ನು, ಮಕ್ಕಳನ್ನು ಕಳೆದುಕೊಂಡ ಸ್ತ್ರೀಯರ ಅಳಲು ತುಂಬಿಬಿಟ್ಟಿದೆ. ಭಾಗವತದಲ್ಲಿ, ಯುಗದ ಚಿಂತೆ ಹಿಡಿದು ಶೌನಕಾದಿಗಳು ದುಗುಡಗೊಂಡಿದ್ದರೆಂಬುದೇ ಮೊದಲ ಮಾತು.
ಹೀಗೆ ನೀವು ವೇದವನ್ನು ಉಪಸತ್ತಿ ಮಾಡಿದರೆ ಅದು ಇತಿಹಾಸ-ಪುರಾಣದತ್ತ ಕೈತೋರಿಸುತ್ತದೆ. ನೀವು ಆನಂದದ ಮಾತೆತ್ತಿದರೆ ಅದು ಲೋಕದ ದು:ಖದ ಮಾತೆತ್ತುತ್ತದೆ. (ಬುದ್ಧನ ನೆನಪು) ನೀವು ಸಂಗ ಪರಿತ್ಯಾಗದ ಪರಿಕಲ್ಪನೆ ಮುಂದಿಟ್ಟರೆ ಅದು ಸರ್ವಲೋಕ ಸಂಗದ ತೆಕ್ಕೆಯಲ್ಲಿರುತ್ತದೆ. ನಾನು “ಕಂಡೆ” ಎಂದು ನೀವು ಹೇಳಿದಿರಾದರೆ ನಾನಿನ್ನೂ ಅಡಗಿಯೇ ಇದ್ದೇನೆ, ನನ್ನ ಕಂಡವರಿಲ್ಲ ಎನ್ನಬಹುದು!
ನಿಜವಾಗಿ ಹೇಳುತ್ತೇನೆ. “ಸತ್ಯ”ಕ್ಕೆ ಮತಾಂಧತೆಯ ಹೆದರಿಕೆ ಇದೆ. ಬೇರಾವುದರದೂ ಅಲ್ಲ. ಇರಲಿ. ಕತೆಗೆ ಮರಳೋಣ.
ಶೌನಕಾದಿ ಮಹರ್ಷಿಗಳ ನೆಲೆಯಾದ ನೈಮಿಷಾರಣ್ಯಕ್ಕೆ, ಅವರೆಲ್ಲ ಹೀಗೆ ಕಲಿಯುಗದ ಕುರಿತಾದ ಚಿಂತೆ ಹಿಡಿದು ಕೂತಿದ್ದಾಗ, ಅಲ್ಲಿಗೆ ಒಮ್ಮೆ “ಸೂತ-ಪುರಾಣಿಕ”ನೆಂಬ ಧೀಮಂತನೊಬ್ಬ ಬಂದನಂತೆ. ಯಾರು ಈ ಸೂತ ಪುರಾಣಿಕ? “ಪುರಾಣಿಕ”ನೆಂದರೆ ಪುರಾಣಬಲ್ಲವ. ಪುರಾಣ ಕೇಳಿದವ. ದೊಡ್ಡ ನೆನಪಿನ ಶಕ್ತಿ ಇದ್ದವ. ಆದುದರಿಂದ ಪುರಾಣವನ್ನು ಹೇಳಬಲ್ಲವ. ದೊಡ್ಡ ವಕ್ತಾರ. “ಸೂತ”ನೆನ್ನುವುದು ಜಾತಿ ಸೂಚಕ. ಈ ಸೂತರು ಬ್ರಾಹ್ಮಣರಲ್ಲ. ತ್ರೈವರ್ಣಿಕರೂ ಅಲ್ಲ. ಶೂದ್ರರೂ ಅಲ್ಲ. ಇವರದು ವಿಲೋಮಜಾತಿ. ಈ ಸೂತರಲ್ಲಿ ಎರಡು ಪಂಗಡ. ಕ್ಷತ್ರಿಯ ಪುರುಷ ಮತ್ತು ಬ್ರಾಹ್ಮಣ ಸ್ತ್ರೀ – ಇವರ ಸಂತತಿಯ ಸೂತರದೊಂದು ಪಂಗಡ. ಕ್ಷತ್ರಿಯರ ರಥಹೊಡೆಯುವ ಉದ್ಯೋಗ ಇವರದು. ಮಹಾಭಾರತದ ಕರ್ಣ ಇಂಥ ಸೂತರ ನಡುವೆ ಬೆಳೆದ. ಇನ್ನೊಂದು ಪಂಗಡದ ಸೂತರು-ವೈಶ್ಯಪುರುಷ ಮತ್ತು ಕ್ಷತ್ರಿಯ ಸ್ತ್ರೀ – ಇವರ ಸಂತತಿ. ಇವರ ಕೆಲಸ ಪುರಾಣ ಕೇಳುವುದು ಮತ್ತು ಹೇಳುವುದು. ಈ ಅರ್ಥದಲ್ಲಿ ಇವರು ವಿದ್ಯಾವಂತರು. ಅಪಾರವಾದ ಲೋಕಾನುಭವ ಇದ್ದವರು. ಮಹಾಭಾರತದ “ಸಂಜಯ”, “ಮಹಾಭಾರತ”-“ಭಾಗವತ”ಗಳನ್ನು ಶೌನಕಾದಿಗಳಿಗೆ ಹೇಳಿದ ಈ ನಮ್ಮ ಸೂತಪುರಾಣಿಕ- “ಉಗ್ರಶ್ರವ” ಎನ್ನುವುದು ಇವನ ಹೆಸರು -ಈ ಪಂಗಡದವರು. ಹೀಗೆ ಶೌನಕನೆಂಬ ಕೇಳುಗ; ಸೂತಪುರಾಣಿಕನೆಂಬ ವಕ್ತಾರ; ಇವರಿಬ್ಬರದು ಒಂದು ಜೊತೆ. ಶೌನಕನು ಶ್ರೋತ್ರಿಯ ಬ್ರಾಹ್ಮಣ. ಇದು ಕೇಳುವ ಜಾತಿ! ವಿಲೋಮಜಾತಿಯ ಸೂತ ಪುರಾಣಿಕ, ಇದು ಹೇಳುವ ಜಾತಿ!
ಇಂಥ ಸೂತಪುರಾಣಿಕ ನೈಮಿಷಕ್ಕೆ ಬಂದನಂತೆ. ಅವನನ್ನು ಸತ್ಕರಿಸಿ ಶೌನಕಾದಿಗಳು ಹೀಗೆ ಕೇಳಿದರಂತೆ: “ಕಲಿಯುಗ ಬಂದು ಬಿಟ್ಟಿತಲ್ಲ. ಕೃಷ್ಣನ ನಿರ್ಯಾಣವನ್ನೇ ಕಾಯುತ್ತಿದ್ದಂತೆ ಇತ್ತೇನೋ. ಮನುಷ್ಯರೆಂಬವರ ಆಯುರ್ಮಾನವೇ ಈ ಯುಗದಲ್ಲಿ ಕಿರಿದು. ಬದುಕಿನಲ್ಲಿ ಎಷ್ಟು ತಿಳಿಯುವುದಕ್ಕಿದೆ! ತಿಳಿಯುವುದಕ್ಕಾಗಿಯೇ ತಾನೇ ಈ ಬದುಕಿರುವುದು. ಬದುಕೇ ಕಿರಿದಾಗಿ ಹೋದರೆ ಜ್ಞಾನವೂ ಕಿರಿದೇ. ಜತೆಗೆ, ತಮ್ಮ ಬದುಕು ಕಿರಿದೆನ್ನುವುದೂ ಈ ಯುಗದ ಜನರಿಗೆ ತಿಳಿಯುತ್ತಿಲ್ಲ. ಸೂಕ್ಷ್ಮತೆಗೆ ಎರವಾದ ಮನಸ್ಸಿನ ಜನ. ಮಂದಭಾಗ್ಯರೆನ್ನಬೇಕು. ಇದರ ಮೇಲಿಂದ, ಎಷ್ಟು ಬಗೆಯ ಆತಂಕಗಳು; ಒತ್ತಡಗಳು; ಪೀಡೆಗಳು. ಒಟ್ಟಿನಲ್ಲಿ ಬದುಕೆಂದರೆ ನರಳಾಟ ಎಂಬಂತಾಗಿದೆ. ಹೀಗಿರಲಾಗಿ, ಸಾರಭೂತವಾದುದು ಯಾವುದು ಎಂದು ನಿಶ್ಚಯಿಸಿ -ಯಾವುದು ನಾವು ಕೇಳಲೇ ಬೇಕಾದುದು ಅದನ್ನು -ನಮಗೆ ಹೇಳುತ್ತೀಯೇನು”.
“ಯಾವುದರಿಂದ ಮನಸ್ಸು ನಿರ್ಮಲವಾಗುತ್ತೆ ಅದನ್ನು ಹೇಳು”. “ಯೇನಾತ್ಮಾ ಸಂಪ್ರಸೀದತಿ”.
“ಯಾವುದು ಸಾರಭರಿತವಾದುದು ಎಂದು ನಾವೇ ಯೋಚನೆ ಮಾಡಿದೆವು. ನಮಗಿಷ್ಟು ತಿಳಿಯುತ್ತೆ. ತಾನಿರುವವರೆಗೆ ಕಲಿಯುಗ ಕಾಲಿಡದಂತೆ, ಯಾದವರ ಕುಲದಲ್ಲಿ ಹುಟ್ಟಿದ ಭಗವಂತನಾದ ಕೃಷ್ಣ-ಕಲಿಯನ್ನು ತಡೆಹಿಡಿದಿದ್ದನಂತೆ. ನಿಜಕ್ಕಾದರೆ, ಕುರುಕ್ಷೇತ್ರ ಯುದ್ಧದ ಕೊನೆಯ ದಿನವೇ ಕಲಿಯುಗದ ಮೊದಲ ದಿನವಂತೆ. ಎಂಥ ದಾರುಣವಾದ ಆರಂಭ! ಸ್ತ್ರೀಯರ ರೋದನ ಧ್ವನಿಯಿಂದಲೇ ಈ ಯುಗ ಮೊದಲಾಗುವುದು ಕಲಿಯ ಇಷ್ಟವಾಗಿತ್ತು. ಆದರೆ ಕೃಷ್ಣನಿದ್ದನಲ್ಲ. ಆಮೇಲೆ ತಾನಿದ್ದ ಮೂವತ್ತಾರು ವರ್ಷ ಕಲಿಯನ್ನು ಪ್ರವೇಶಿಸದಂತೆ ತಡೆದಿದ್ದ. ಅಂದರೆ ಅವನು ಯುಗಧರ್ಮವನ್ನೇ ಬದಲಿಸಬಲ್ಲನೆಂದಾಯಿತು.”
“ಇದೊಂದು ಸೂಚನೆಯಲ್ಲವೆ ಸೂತಪುರಾಣಿಕ? ಕಲಿಯುಗದ ಬಾಳುವೆಗೆ ತಾನೇನು ಕೊಡಬಲ್ಲೆ ಎಂದು ಕೃಷ್ಣ ಸೂಚನೆ ಮಾಡಿದಂತಲ್ಲವೆ? ಅಂಥ ಕೃಷ್ಣನ ಕತೆ ಹೇಳುತ್ತೀಯೇನು. ಮಣ್ಣಿನಗುಣವೇ ಬದಲಾದೀತೇನೋ”.
ಸೂತಪುರಾಣಿಕನಿಗೆ ಶೌನಕನ ಈ ಮಾತು ಕೇಳಿ ವಿಚಿತ್ರವಾದ ಉದ್ದೀಪನವಾಗಿಬಿಟ್ಟಿತು, “ಕೃಷ್ಣ”ನೆಂದರೆ ಎಲ್ಲರಲ್ಲೂ ರಸಾನುಭವ ಸಾಮರ್ಥ್ಯವನ್ನು ಉದ್ದೀಪಿಸಿದ ಅವತಾರ, ಮತ್ತು ರಸಾನುಭವವೇ ಮಾತಿನ ಹಂಬಲವಲ್ಲವೆ?
ತೋಳ್ಪಾಡಿ ಭಾಗವತ ಕಥಾ-4 : ಕೃಷ್ಣ ಎನ್ನುವುದು ಈ ಕಾಲದ ಪುಣ್ಯ
ಕೃಷ್ಣನ ಕಥೆ ಹೇಳು; ಅದನ್ನು ಕೇಳುವುದಕ್ಕೆ ನಾನು ಒಳಗಿಂದ ಸಜ್ಜುಗೊಂಡಿದ್ದೇನೆ ಮತ್ತು ಕಥೆಯನ್ನು ದೀರ್ಘ ಆಲಾಪದಂತೆ ಹೇಳು ಅಂದರೆ ಹೊತ್ತಿನ ಕಾಳಜಿ ಮಾಡದೆ ಹೇಳು, ಕೃಷ್ಣನ ಕಥೆ ಕೇಳುವುದೇ ಹೊತ್ತಿನ ನಿಜವಾದ ಕಾಳಜಿ ಮಾಡಿದಂತೆ ಎಂದು ಶೌನಕಾದಿಗಳು ತನ್ನನ್ನು ಕೇಳಿಕೊಂಡಾಗ ಸೂತಪುರಾಣಿಕನಿಗೆ ತನ್ನ ಜಾತಿಯನ್ನೇ ಹೊಗಳಿದಂತೆ ಕೇಳಿಸಿತು. ತನ್ನ `ಸ್ವಧರ್ಮ’ವನ್ನು ಹೊಗಳಿದಂತೆ ಕೇಳಿಸಿತು. ಇದರಿಂದ ಆತ ತುಂಬ ಉಲ್ಲಾಸಗೊಂಡ. ಉಲ್ಲಸಿತನಾಗದೆ ಚೆನ್ನಾಗಿ ಕಥೆ ಹೇಳುವಂತಿಲ್ಲ. ಪುರಾಣಿಕನದು ಇತಿಹಾಸ ಕಥನ ಮಾಡುವ ಜಾತಿ; ಹುಟ್ಟು. ಈ ಅರ್ಥದಲ್ಲಿ ಅವನ ಸ್ವಧರ್ಮವಿದು. `ಸ್ವಧರ್ಮ’ವನ್ನು ಆಚರಿಸುವುದೇ ಬದುಕಿನ `ಜಯ’ಗಳಲ್ಲಿ ಒಂದು. `ಜಯ’ ಎನ್ನುವುದು ಇತಿಹಾಸಕ್ಕೆ ಕೂಡ ಹೆಸರು. `ಮಹಾಭಾರತ’ ಎನ್ನುವ ಇತಿಹಾಸಕ್ಕೆ `ಜಯ’ ಎನ್ನುವ ಹೆಸರು ಪ್ರಸಿದ್ಧವಾದುದು.
`ಜಯೋ ನಾಮ ಇತಿಹಾಸೋಯಂ’. ಆದರೆ ವಾಸ್ತವವಾಗಿ ಈ ಹೆಸರು ಮಹಾಭಾರತಕ್ಕೆ ಮಾತ್ರ ಅನ್ವಯವಾಗುವ ಹೆಸರಲ್ಲ. ಹಾಗೆಂದು ಅನೇಕರು ತಿಳಿದುಕೊಂಡಿದ್ದಾರೆ. ಸಮಗ್ರ ವ್ಯಾಸ ಸಾಹಿತ್ಯಕ್ಕೆ ಅಂದರೆ ಹದಿನೆಂಟು ಪುರಾಣಗಳಿಗೂ `ಜಯ’ ಎಂದೇ ಹೆಸರು. ಇಷ್ಟೇ ಅಲ್ಲ, `ರಾಮಾಯಣ’ಕ್ಕೂ `ಜಯ’ ಎನ್ನಲಾಗಿದೆ. `ಜಯ’ ಎಂದಾಗ `ಜಯತಿ ಅನೇನ ಸಂಸಾರಂ’ ಎಂದು ನಿರ್ವಚನ. ಸಂಸಾರದ ದು:ಖವನ್ನು, ಕಾಲದ ದು:ಖವನ್ನು ಗೆಲ್ಲಬಲ್ಲ ಸಾಹಿತ್ಯ ಎಂದು ಈ ನಿರ್ವಚನದ ಅರ್ಥ. ಭವಿಷ್ಯ ಹೇಳುವ ಬುಡುಬುಡಿಕೆಯವರು `ಜಯವಾಗುತೈತೆ-ಜಯವಾಗುತೈತೆ’ ಎಂದು ತಮ್ಮ ವಾಕ್ಸರಣಿ ಪ್ರಾರಂಭಿಸುತ್ತಾರಲ್ಲ- ಅಲ್ಲಿ ಬಂದಿರುವ `ಜಯ’ಕ್ಕೆ ಅರ್ಥವಿದು. ಅದರ ಮೂಲವಿದು. ಈ ಎಲ್ಲ ಸಾಹಿತ್ಯಕ್ಕೂ `ಜಯ’ ಎಂದು ಹೆಸರು ಎಂಬ ಉಲ್ಲೇಖವಿರುವುದು ಕೂಡ ಭವಿಷ್ಯ ಪುರಾಣದಲ್ಲಿಯೇ. ಈ ಅರ್ಥದಲ್ಲಿ ಭಾಗವತಕ್ಕೆ ಕೂಡ `ಜಯ’ ಎಂದು ಹೆಸರು. ಕಾಲಕ್ಕೆ ನಮ್ಮನ್ನು ಸೋಲಿಸುವ ಹವಣು. ವಾಙ್ಮಯಕ್ಕೆ ನಮ್ಮನ್ನು ಗೆಲ್ಲಿಸುವ ತವಕ! ಪುರಾಣೇತಿಹಾಸಗಳನ್ನು ಕಥನ ಮಾಡುತ್ತಿದ್ದುದರಿಂದ, ಸೂತಪುರಾಣಿಕನಿಗೆ, ವರ್ತಮಾನವನ್ನು ಬರಿಯ ವರ್ತಮಾನ ಎಂದು ಭಾವಿಸುವುದರಲ್ಲಿರುವ ದುರಂತ ಅರಿವಿಗೆ ಬಂದಿತ್ತು. ವರ್ತಮಾನದಲ್ಲಿ `ಇತಿಹಾಸ-ಪುರಾಣ’ ಅಡಗಿದೆ. ಹಾಗೆ ನೋಡಬೇಕು. ವರ್ತಮಾನವನ್ನು ಬರಿಯ ವರ್ತಮಾನವೆಂದು ಭಾವಿಸುವವನಿಗೆ ಬಿಡುಗಡೆಯ ಕಲ್ಪನೆಯೇ ಇಲ್ಲ. ಕಾಲ ಪ್ರವಾಹದ ಕಲ್ಪನೆಯೂ ಇಲ್ಲ. ಪ್ರವಾಹದ ಕಲ್ಪನೆ ಇದ್ದರೆ ದಡ ಸೇರುವ ಕಲ್ಪನೆಯೂ ಇರುತ್ತದೆ. ಇಂಥ ಕಲ್ಪನೆ ಇಲ್ಲದ ಮಂದಿಗೆ ಧರ್ತ, ಅರ್ಥ ಮತ್ತು ಕಾಮಗಳೆಂಬ ತ್ರಿವರ್ಗಗಳು ಮಾತ್ರ ಪುರುಷಾರ್ಥಗಳು. ನಾಲ್ಕನೆಯದಾದ `ಮೋಕ್ಷ’ವಿಲ್ಲದೆ ಇವು ಮೂರೇ ಆದರೆ ಈ ಮೂರರ ಪರಸ್ಪರ ಸಂಬಂಧ ಕೂಡ ವಿಕೃತವಾಗುತ್ತವೆ.
ಧರ್ಮವು ಅರ್ಥಕ್ಕಾಗಿ ಇರೋದು, ಅರ್ಥವು ಕಾಮಕ್ಕಾಗಿ ಇರೋದು ಮತ್ತು ಕಾಮವೇ `ಮೋಕ್ಷ’ ಎಂಬವರಿವರು. ಇಂಥವರ ನಡುವೆ ಸೂತಪುರಾಣಿಕನಿಗೆ ಕೆಲಸವೇ ಇರುವುದಿಲ್ಲ. ಇದಕ್ಕೆ ಬದಲಾಗಿ, ಅರ್ಥಸಂಪಾದನೆ ಮತ್ತು ಕಾಮವೆಂಬ ನೈಸರ್ಗಿಕ ಉದ್ವೇಗದ ಶಮನ- ಇವು ಧರ್ಮಾಚರಣೆಯನ್ನು ಶಾಂತಭಾವದಿಂದ ನಡೆಸುವುದಕ್ಕಾಗಿ ಮತ್ತು ಧರ್ಮಾಚರಣೆಯು `ಮೋಕ್ಷ’ವೆಂಬ ಈ ಎಲ್ಲದರಿಂದ ಪಡೆಯುವ ಬಿಡುಗಡೆಗಾಗಿ ಎಂಬ ತಿಳುವಳಿಕೆ ಬರಬೇಕಾದರೆ ವರ್ತಮಾನದಲ್ಲಿ `ಇತಿಹಾಸ-ಪುರಾಣ’ವನ್ನು ನೋಡಬೇಕು. `ಇತಿಹಾಸ-ಪುರಾಣ’ ಎಂದಾಗ ಸಮುದಾಯದ ಕಥೆ ಎಂದು ಮಾತ್ರವಲ್ಲ, ಮನುಷ್ಯನ ಕಥೆಯಲ್ಲಿ ಗೊತ್ತಿಲ್ಲದಂತೆ ಭಗವಂತನ ಕಥೆ ಕೂಡಾ ಹುದುಗಿದೆ ಎಂಬ ಅರ್ಥದಲ್ಲಿ ನೋಡಬೇಕು. ಹಾಗೆ ನೋಡಲಾಗದಿದ್ದರೆ ಎಲ್ಲವೂ ಕರ್ಮಕಾಂಡವೇ ಆಗಿಬಿಡುತ್ತದೆ. ಆಗ ಅರಿವಿಗೆ ಜಾಗವಿಲ್ಲ. ಅರಿವೆಂದರೆ ಆಳದ ತಾತ್ಪರ್ಯ. ತಾತ್ಪರ್ಯ ಸಿಗಬೇಕಾದರೆ ತತ್ಪರವಾಗಿ ನೋಡಬೇಕು. ತತ್ಪರವಾಗಿ ನೋಡಿದರೆ ನಾವು ನಡೆಯುತ್ತಿರುವ ದಾರಿಯಲ್ಲಿಯೇ ಇನ್ನಾರದೋ ಹೆಜ್ಜೆ-ಗುರುತುಗಳು ಕಾಣಿಸಿಕೊಳ್ಳಬಹುದು. ತನ್ನ ಹೆಜ್ಜೆ ಮೂಡದಂತೆ, ಇದ್ದೂ ಇಲ್ಲದಂತೆ ನನಗೆ ಒಂದಿನಿತೂ ಗೊತ್ತಾದಂತೆ ನಮ್ಮೊಡನೆ ಹೆಜ್ಜೆಹಾಕಿದ ಭಗವಂತನ ನಡೆಯ ಕುರುಹು ಕೂಡಾ ಸಿಗಬಹುದು. ಆಗ ವರ್ತಮಾನವೆಂದರೆ `ಇತಿಹಾಸ-ಪುರಾಣ’ ಕೂಡಾ ಎಂದು ಹೊಳೆಯಬಹುದು! ಈ ಅರ್ಥದಲ್ಲಿ `ಇತಿಹಾಸ-ಪುರಾಣ’ ಎನ್ನುವ ವಾಙ್ಮಯ ಅಧ್ಯಾತ್ಮನಿಷ್ಠವಾದದ್ದು ಎಂದ ಸೂತಪುರಾಣಿಕ.
ವೇದವನ್ನು ನೀವು ಬರಿಯ ಕರ್ಮಕಾಂಡವೆಂದು ನೋಡಿದಿರೋ-ಏನೋ ಸಿಗಬಹುದು; ವ್ಯರ್ಥವಾಗಲಿಲ್ಲ ಎಂದುಕೊಳ್ಳಬಹುದು ನೀವು. ಆದರೆ ವೇದದ ತಾತ್ಪರ್ಯ ಮಾತ್ರ ಸಿಗಲಿಲ್ಲ. ವೇದ, ಯಜ್ಞ-ಯಾಗಾದಿಗಳು, ಯೋಗ-ಯಾವುದೇ ಇರಲಿ-ತಾತ್ಪರ್ಯ ಸಿಗದೇ ಇದ್ದ ತಿಳುವಳಿಕೆಗಳೆಲ್ಲವೂ ಕರ್ಮಕಾಂಡವೇ. ಕರ್ಮಕಾಂಡವೆಂದರೆ ನಮ್ಮ ಆಸೆ-ಆಕಾಂಕ್ಷೆಗಳ ಪರಿಚಿತಪ್ರಪಂಚ. ನಮಗೆ ಗೊತ್ತಿದ್ದದ್ದೇ. `ಬೇರೆ’ಯಲ್ಲ. ನಮಗೆ ಗೊತ್ತಿರುವಂಥದ್ದು ಎಷ್ಟೇ ಆಪ್ಯಾಯಮಾನವಾದರೂ ಅದು ನಮ್ಮನ್ನು ಬದಲಾಯಿಸಲಾರದು. ಅಂದರೆ ಬಿಡುಗಡೆ ಮಾಡಲಾರದು. ಆದರೆ ವೇದಗಳ ತಾತ್ಪರ್ಯ ಒಂದು `ಬೇರೆ’ ಇದೆ. ತತ್ಪರವಾಗದೆ ಅದು ಸಿಗುವುದಿಲ್ಲ. ಆ ತಾತ್ಪರ್ಯವನ್ನು `ಇತರಃ’ ಅಂದರೆ ನಮಗೆ ಗೊತ್ತಿರುವ ಎಲ್ಲದಕ್ಕಿಂತ `ಬೇರೆ’ಯಾದ್ದು ಎಂದು ಉಪನಿಷತ್ತು ಕರೆದಿದೆ. ಆ ಎಲ್ಲದಕ್ಕಿಂತ ಬೇರೆಯಾದ್ದು ಸಿಕ್ಕಿದರೆ ನಾವು ಕೂಡಾ ಬೇರೆಯೇ ಆಗುವೆವು. ನಾವು ಈಗಿನ ನಾವಲ್ಲದೆ ಬೇರೆಯೇ ಆದರೆ ಈಗಿನ ನಮ್ಮನ್ನು ಹುಟ್ಟಿಸಿ, ಬೆಳೆಯಿಸಿ, ಜರಾಶೀರ್ಣಗೊಳಿಸಿ ಸಾಯಿಸುವ `ಕಾಲ’ ತಾನು ಸೋಲುಣ್ಣ ಬೇಕಾಗುತ್ತದೆ ಎಂದ ಸೂತ ಪುರಾಣಿಕ.
ತತ್ಪರನಾಗಬೇಕಾದರೆ, ಇದರಿಂದ ತನಗೇನು ಪ್ರಯೋಜನ ಎಂಬ ಸದಾ ಮನುಷ್ಯರನ್ನು ಆವರಿಸಿಕೊಂಡಿರುವ ಸ್ವ-ಲಾಭ ಚಿಂತನೆಯನ್ನು ಮೀರಿದ `ಸಂವೇದನೆ’ ಇರಬೇಕು. ಇಂಥ ಸಂವೇದನೆ ಭಕ್ತಿಯಾಗಿ ಪರಿಣತವಾಗುವುದು. ಇಂಥ ಭಕ್ತಿಗೆ `ಅಹೈತುಕ ಭಕ್ತಿ’ ಎನ್ನುತ್ತಾರೆ. ಅಹೈತುಕವೆಂದರೆ ಆಸೆಗಳನ್ನು ಈಡೇರಿಸಿಕೊಳ್ಳಬೇಕೆಂಬ ಹಿನ್ನೆಲೆಯನ್ನು ಬಿಟ್ಟುಕೊಟ್ಟದ್ದು, ಕೊಡು-ಕೊಳು ವ್ಯವಹಾರದ ಸ್ಪರ್ಶವೇ ಇಲ್ಲದ್ದು ಎಂದು ಅರ್ಥ. ಆದ್ದರಿಂದಲೇ ತತ್ಪರವಾಗುವ ಶಕ್ತಿಯುಳ್ಳ, ತತ್ಪರತೆಯಲ್ಲಿ ಚಕಿತಗೊಳ್ಳುತ್ತಲೇ ಕಂಡುಕೊಂಡ ಆಳದ ಸಮಾಧಾನ ಎಂದರ್ಥ. ಏಕಾಗ್ರತೆಗೆ ಏಕಾಗ್ರ್ತತೆಯೇ ಪರಮಫಲ; ಇನ್ನಾವುದೂ ಅಲ್ಲ, ಇನ್ನಾವುದೂ ಬೇಕಿಲ್ಲ ಎಂದು ಏಕಾಗ್ರತೆಯನ್ನು ಅನುಭವಿಸಿದಾಗಲೇ ಗೊತ್ತಾಗುತ್ತದಲ್ಲವೇ? `ಸ ವೈ ಪುಂಸಾಂ ಪರೋಧರ್ಮೋ ಯತೋ ಭಕ್ತಿರಧೋಕ್ಷಜೇೆ’- ಯಾವುದರಿಂದ ಭಗವಂತನಲ್ಲಿ ಇಂತಹ ಭಕ್ತಿ ಉಂಟಾಗುತ್ತೆ ಅದು ಮನುಷ್ಯರಿಗೆ ನಿಜವಾಗಿ ದೊಡ್ಡದು, ಅದೇ ನಿಜವಾದ ಧರ್ಮ ಎಂದ ಸೂತ ಪುರಾಣಿಕ.
ಕೃಷ್ಣನ ಕಥೆ ಎಂದಿರಲ್ಲ. ಅದು ಇತಿಹಾಸವೆಂದರೆ ಇತಿಹಾಸ. ವರ್ತಮಾನವೆಂದರೆ ವರ್ತಮಾನ. ಇನ್ನೂ ಬಿಸಿ ಆರಿಲ್ಲ. ಅಷ್ಟು ಈಚೆಗೆ ನಡೆದ ಕಥೆ. ವಾಸುದೇವನೆಂದರೆ ಸಾತ್ತ್ವ್ವತ ವಂಶದ ವಸುದೇವನ ಮಗನಾದ ಕೃಷ್ಣ ಎಂದು ಹೇಗೆ ಅರ್ಥವೋ ಹಾಗೆಯೇ ಎಲ್ಲೆಡೆ ತುಂಬಿ ತನ್ನ ಬೆಳಕಿನಿಂದಲೇ ಎಲ್ಲವನ್ನೂ ಜೀವಂತವೆಂಬಂತೆ ತೋರಿಸುವವನೂ ಎಂದರ್ಥ. ಈ ಅರ್ಥದಲ್ಲಿ ವಾಸುದೇವನೆಂದರೆ ದೇವರೆ. ಭಗವಂತನೇ. ಕೃಷ್ಣ ಈ ಎರಡು ಅರ್ಥಗಳಲ್ಲಿಯೂ ವಾಸುದೇವ. ಆದ್ದರಿಂದ ನಿಜವಾದ ವಾಸುದೇವ. ಎಲ್ಲೆಡೆ ಇದ್ದಾನೆ ಎಂದರೆ ಎಲ್ಲೆಡೆ ತತ್ಪರನಾಗಿದ್ದಾನೆ. ತತ್ಪರನಾಗಿರುವವನೇ ನಿಜವಾದ ತಾತ್ಪರ್ಯವಲ್ಲವೇ? ಹಾಗೆಯೇ ವೇದಗಳಲ್ಲಿಯೂ ಇದ್ದಾನೆ. ಆದುದರಿಂದ ವೇದಗಳ ನಿಜವಾದ ತಾತ್ಪರ್ಯವಾಗಿದ್ದಾನೆ ಈ ವಾಸುದೇವ. `ವಾಸುದೇವಪರಾ ವೇದಾಃ ವಾಸುದೇವಪರಾ ಮಖಾ ವಾಸುದೇವಪರಂ ಜ್ಞಾನಂ ವಾಸುದೇವಪರಂ ತಪಃ’. ಎಲ್ಲ ವೇದಗಳ ಅಂತರಾರ್ಥ, ಎಲ್ಲ ಯಜ್ಞಕರ್ಮಗಳ ಅಂತರಾರ್ಥ, ಎಲ್ಲಾ ಜ್ಞಾನ ತಪಸ್ಸುಗಳ ಧ್ಯೇಯ- ಎಲ್ಲೆಡೆ ಇರತಕ್ಕ ಈ ವಾಸುದೇವ. ಏನು ಅಚ್ಚರಿಯಾಯಿತೇ? ವೇದಗಳ ಕಾಲ ಯಾವುದು? ದ್ವಾಪರದ ಕೃಷ್ಣನ ಕಾಲ ಯಾವುದು ಎಂದು? ಆಹಾ!! ಕಾಲ ಚಕ್ರಾಕಾರವಾಗಿದೆ. ಕಾಲ ಚಕ್ರ!! ಅಂದರೆ ಕಾಲ ತಾನು ಮಣಿಯುತ್ತಲೇ ಚಲಿಸುತ್ತಿದೆ. ಅದು ನೇರ ತಲೆಯೆತ್ತಿ ಅಹಂಕಾರದಿಂದ ನಡೆಯುತ್ತಿಲ್ಲ. ಕಾಲದಂತಹ ಕಾಲ ಯಾರಿಗೆ ಮಣಿಯಬೇಕಾಗಿದೆ- ಎಂದು ಕೇಳುತ್ತೀರೇನು? ಕಾಲ ಮಣಿಯುವುದು ತತ್ಪರನಾದವನಿಗಲ್ಲವೇ? ಏಕೆಂದರೆ ತತ್ಪರನಾದವನು ಸ್ತಬ್ಧನಾಗಿರುತ್ತಾನೆ. ಸ್ತಬ್ಧತೆಯಲ್ಲಿ ಕಾಲ ಚಲಿಸುವುದಿಲ್ಲ. ನಿಶ್ಚಲವಾಗುತ್ತೆ. ತನ್ನನ್ನು ನಿಶ್ಚಲಗೊಳಿಸುವವನಿಗೆ ಕಾಲ ಮಣಿಯುತ್ತದೆ. ಅಂಥವನನ್ನು ಹುಡುಕುತ್ತಲೇ ಇದೆಯೇನೋ. ಅಂಥವನು ನಮ್ಮ ಕೃಷ್ಣ. ಆದುದರಿಂದ ಅವನನ್ನು ಈ ಕಾಲದ ಪುಣ್ಯ; ಈ ಯುಗದ ಪುಣ್ಯ ಎನ್ನುತ್ತೇವೆ. ಇಂಥದೊಂದನ್ನು ಹುಡುಕುವುದು; ಹುಡುಕಿ ಪಡೆಯುವುದು ತಾನೇ ಎಲ್ಲ ಜ್ಞಾನದ ಎಲ್ಲ ತಪಸ್ಸಿನ ಗುರಿ!! ಆದ್ದರಿಂದ ತಪಸ್ವಿಗಳಾದ ನಿಮಗಿದು ತಿಳಿಯುತ್ತದೆ. ಇಂಥ ಕೃಷ್ಣನ ಕಥೆ ನಾನು ಸಾಕ್ಷಾತ್ ಶುಕ ಮುನಿಗಳ ಮುಖದಿಂದ ಕೇಳಿದೆನಲ್ಲ, ಆ ಸುಖ-ರೋಮಾಂಚನಕ್ಕೆ ಹೋಲಿಕೆಯೇ ಇಲ್ಲ. ಅವರು ಭಾಗವತವನ್ನು ಹೇಳಿದ ಸನ್ನಿವೇಶವಾದರೂ ಎಂಥದೆನ್ನುತ್ತೀರಿ? ಶಾಪಗ್ರಸ್ತನಾಗಿ ಪ್ರಾಯೋಪವೇಶಕ್ಕೆ ಸಿದ್ಧನಾಗಿದ್ದ ಪರೀಕ್ಷಿದ್ರಾಜನಿಗೆ ಹೇಳಿದ್ದು. ಎಂಥ ಕೇಳುಗ!! ಹೇಳಿದವರೋ ನಿರ್ಗಂಥಿ ಮುನಿ!! ಅಂದರೆ ದೇಹದ ಎಲ್ಲ ಗ್ರಂಥಿಗಳ ಪ್ರಭಾವದಿಂದ ಮುಕ್ತರಾದವರು. ಅಂಥ ಶುಕ ಮುನಿಗಳಿಗೆ ಪ್ರಿಯವಾದ ಗ್ರಂಥ. ಕೇಳುತ್ತಿದ್ದ ಗುಂಪಿನಲ್ಲಿ ನಾನೂ ಒಬ್ಬನಾಗಿ ಕುಳಿತು ಕೇಳಿದೆ. ನನ್ನ ಕಿವಿ ತುಂಬಿದುದನ್ನು ನಿಮಗೂ ಯಥಾಮತಿ ಹೇಳುತ್ತೇನೆ ಎಂದ ಸೂತ ಪುರಾಣಿಕ.
ಶೌನಕಾದಿಗಳಿಗೆ ವೇದಗಳ ತಾತ್ಪರ್ಯ ಸಿಕ್ಕಿದಷ್ಟು ಸಂತೋಷವಾಯಿತು. ಪ್ರಶ್ನೆಗಳೂ ಹುಟ್ಟಿಕೊಂಡವು. ನಾಡಿನ ದೊರೆಯಾದ ಪರೀಕ್ಷಿತ ರಾಜ, ಪ್ರಾಯೋಪವೇಶ (ಅಂದರೆ ದೇಹ ತ್ಯಾಗಕ್ಕೆ) ಸಿದ್ಧನಾದುದೇಕೆ? ನಿಂತಲ್ಲಿ ನಿಲ್ಲದ ಅವಧೂತ ಶುಕಮುನಿ ರಾಜನನ್ನು ಹುಡುಕಿಕೊಂಡು ಬಂದರೇ? ಇದೆಲ್ಲ ನಡೆದುದೆಲ್ಲಿ? ಎಲ್ಲದಕ್ಕಿಂತ, ಇಂಥ ಭಾಗವತವನ್ನು ರಚನೆ ಮಾಡಿದರಲ್ಲ ವೇದವ್ಯಾಸರು- ಅವರಿಗೆ ಈ ಕೃತಿ ರಚನೆಯ ಹಿಂದೆ ಇದ್ದಿರಬಹುದಾದ ಒತ್ತಡಗಳು-ಪ್ರೇರಣೆಗಳು ಯಾವುವು? ಶುಕ ಮತ್ತು ವ್ಯಾಸ ಸಂಬಂಧವಾಗಿ ಶೌನಕಾದಿಗಳು ಒಂದು ಕಥೆ ಕೇಳಿದ್ದರು. ಈಗ ಆ ಕಥೆ ಶೌನಕರಿಗೆ ನೆನಪಾಯಿತು. ಇದು ಈ ಮೊದಲು ಬಂದ, ಮರಗಳು ಓ-ಗೊಟ್ಟ ಕಥೆಯಲ್ಲ. ಈ ಕಥೆ ಹೀಗೆ:
ವಿರಕ್ತ ಶುಕಮುನಿ ಮನೆ ಬಿಟ್ಟು ಹೊರಟಿದ್ದಾನೆ. (ಮನೆ ಬಿಟ್ಟು ಹೊರಟವನ ಸುತ್ತ ಎಷ್ಟು ಕಥೆಗಳು!!), ಎಂಥ ವಿರಕ್ತನೆಂದರೆ- ತರುಣನಾಗಿದ್ದರೂ ಬರೆಯ ದಿಗಂಬರನಾಗಿ ನಡೆದುಬಿಟ್ಟಿದ್ದಾನೆ. ಬತ್ತಲಾಗದೆ ಬಯಲು ಸಿಕ್ಕದಿಲ್ಲಿ ಎಂದು ಕಂಡುಕೊಂಡಂತೆ. ವ್ಯಾಸ ಮಹರ್ಷಿಯಾದರೋ ಮಗನನ್ನು ಅಗಲಿರಲಾರದೆ ತರುಣ ಮಗನನ್ನು ದೂರದಿಂದಲೇ ಹಿಂಬಾಲಿಸುತ್ತಿದ್ದಾರೆ. ದಾರಿಯಲ್ಲಿ ಒಂದು ಕೊಳ. ಅಲ್ಲಿ ಕೆಲವು ಹೆಣ್ಣುಮಕ್ಕಳು ಬಟ್ಟೆ ಬಿಚ್ಚಿ ಮೀಯುತ್ತಿದ್ದಾರೆ. ಕೊಳದ ಪಕ್ಕದ ದಾರಿಯಲ್ಲಿ ನಗ್ನ ಶುಕ ನಡೆದುಹೋಗುತ್ತಿದ್ದಾನೆ. ಈ ಹೆಣ್ಣುಮಕ್ಕಳು ಅವನನ್ನು ನೋಡಿದ್ದಾರೆ. ತಮ್ಮ ಪಾಡಿಗೆ ತಾವು ಸಂಭ್ರಮದಿಂದ ಮೀಯುತ್ತಲೇ ಇದ್ದಾರೆ. ದೂರದಿಂದಲೇ ವ್ಯಾಸರು ಇದನ್ನು ಗುರುತಿಸಿದ್ದಾರೆ. ಮಗನು ನಡೆದ ದಾರಿಯಲ್ಲಿ ನಡೆಯುತ್ತಾ ವೃದ್ಧ ವ್ಯಾಸರು ಕೊಳದ ಬಳಿ ಬಂದಿದ್ದಾರೆ.
ವ್ಯಾಸರನ್ನು ನೋಡಿದ ಕೂಡಲೇ ದೇವತೆಗಳಂತಿರುವ ಈ ಹೆಣ್ಣುಮಕ್ಕಳು ನಾಚಿಕೊಂಡು, ಗಡಿಬಿಡಿಯಿಂದ ನೀರ ಮೇಲಕ್ಕೆ ಬಂದು ಬಟ್ಟೆ ಉಟ್ಟುಕೊಳ್ಳುತ್ತಿದ್ದಾರೆ. ವ್ಯಾಸರಿಗೆ ಅಚ್ಚರಿಯಾಯಿತು. ವಿವಂಚನೆಯಾಯಿತು. ಕಥೆಗಾರ ತನ್ನ ಹಿಡಿತಕ್ಕೆ ಬರಲೊಲ್ಲದ ಪಾತ್ರದೊಡನೆ ಸೋಲಲು ಸಿದ್ಧನಾಗಿ ಅದನ್ನು ಮಾತನಾಡಿಸುವವನಂತೆ ವ್ಯಾಸರು ಹೆಂಗಸರ ಈ ವಿಲಕ್ಷಣ ವರ್ತನೆಗೆ ಕಾರಣವನ್ನು ಕೇಳಿದ್ದಾರೆ. ಆ ಹೆಣ್ಣುಮಕ್ಕಳು ಹೀಗೆ ಹೇಳಿದರಂತೆ: ಹೌದು. ನಾವು ಶುಕನನ್ನು ನೋಡಿದೆವು. ಅದ್ವಯವಾದ ಪ್ರಜ್ಞೆಯನ್ನೇ ನೋಡಿದಂತಾಯಿತು. ಅದ್ವಯವಾದ ಪ್ರಜ್ಞೆಯಲ್ಲೇ ಮುಳುಗಿ ಮಿಂದಂತಾಯಿತು. ಶುಕ- ಮೈತುಂಬಾ ಮಹಾನುಭಾವದಲ್ಲಿ ಮುಳುಗಿದ್ದಾನೆ. ಅವನಿಗೆ ಗಂಡು-ಹೆಣ್ಣು ಎಂಬ ಭೇದವೇ ಉಳಿದಿಲ್ಲ. ತಿಳಿದಿಲ್ಲ. ಅವನು ಮೈಯಲ್ಲಿದ್ದರೂ ಮೈಯಲ್ಲಿಲ್ಲ. ಮೈಬಿಟ್ಟ `ನಡೆ’ ಅವನದು. ನಿಜ ಹೇಳುತ್ತೇವೆ ವ್ಯಾಸ ಮಹರ್ಷಿಗಳೇ- ಇಂಥವನೊಬ್ಬನನ್ನು ಕಂಡು ನಮ್ಮ ಹೆಣ್ತನ ಕೃತಾರ್ಥವಾಗಿ ಬಿಟ್ಟಿತು. ಅವನದು ಮೂಲ ಮುಗ್ಧತೆ!! ಅವನನ್ನೇ ನೋಡುತ್ತಿದ್ದೆವು. ಅವನು ಕಣ್ಮರೆಯಾದ ಮೇಲೆ ಅವನನ್ನು ಪಡೆದ ತಾಯನ್ನು ಕುರಿತು ಚಿಂತಿಸುತ್ತಿದ್ದೆವು. ಆಗ ನೀವು ಬಂದಿರಿ. ನಿಮ್ಮನ್ನೂ ನೋಡಿದೆವು. ನಿಜ ಹೇಳುತ್ತೇವೆ ಮಹರ್ಷಿಗಳೇ-ನೀವು ದೊಡ್ಡವರು; ದೊಡ್ಡ ಜ್ಞಾನಿಗಳು. ಆದರೆ ನಿಮ್ಮಲ್ಲಿ ಗಂಡು ಹೆಣ್ಣೆಂಬ ಭೇದ ಕೆಲಸ ಮಾಡುತ್ತಿದೆ. ನೀವು ನಮ್ಮನ್ನು ನಾಚಿಸಿಬಿಟ್ಟಿರಿ!! `ತವಾಸ್ತಿ ಸ್ತ್ರೀಪುಂಭಿದಾ- ನ ತು ಸುತಸ್ಯ’.
ಈ ಕಥೆಯನ್ನು ಶೌನಕಾದಿಗಳು ಕೇಳಿದ್ದರು. ಸೂತನೊಡನೆ ಈಗ ಇದನ್ನು ಮತ್ತೊಮ್ಮೆ ನೆನಪು ಮಾಡಿಕೊಂಡರು. ಸೂತ ಪುರಾಣಿಕನಾದರೋ, ಕಥೆಗಾರನಿಗೆ ನಿಜವಾದ ವಿರಕ್ತನು ನಿಕಷ. ಒರೆಗಲ್ಲು. ವ್ಯಾಸರ ಸಂದರ್ಭದಲ್ಲಾದರೋ ಆ ನಿಕಷ ಅವರ ಮನೆಯಲ್ಲೇ ಹುಟ್ಟಿತು ಎಂದನಂತೆ.
ತೋಳ್ಪಾಡಿ ಭಾಗವತ ಕಥಾ 5 : ವ್ಯಾಸರ ವಿಷಾದವೂ ಶುಕನ ವಿರಕ್ತಿಯೂ
ವ್ಯಾಸರಿಗೆ ಆಳದಲ್ಲಿ ನೋವೊಂದು ಕಾಡುತ್ತಿತ್ತು. ಅವರದೇ ಮಾತನ್ನು ಬಳಸಿ ಹೇಳುವುದಾದರೆ ಅದು “ವಿಷಾದಯೋಗ”. ತಾನು ಅಪಾರವಾದ ವಾಜ್ಮಯವನ್ನು ರಚಿಸಿದೆ. ಸೂತ್ರ; ಪುರಾಣ, ಇತಿಹಾಸ- ಹೀಗೆ. ಇದೊಂದು ಮಾತಿನ ಜಗತ್ತು. ಜಗತ್ತಿನಲ್ಲಿ ಕಾಣುವ ವೈವಿಧ್ಯದಂತೆ ಮಾತಿನಲ್ಲಿಯೂ ಅಪಾರವೈವಿಧ್ಯ. ಮಾತಿನ ಏನೆಲ್ಲ ಸಾಧ್ಯತೆಯನ್ನೇ ಜಗತ್ತಿಗೆ ತೋರಿಸಿದಂತೆ. ಈ ಮಾತಿನ ಜಗತ್ತಿನಲ್ಲಿ ತಾನೇ ಜಗದ್ಗುರು. ಎಲ್ಲದಕ್ಕಿಂತ ಹೆಚ್ಚಾಗಿ “ಮಹಾಭಾರತ”ದಂಥ ಕೃತಿ. ಅದು ಇತಿಹಾಸ. ಅಂದರೆ ಲೌಕಿಕ. ಅಧ್ಯಾತ್ಮವನ್ನು ಒಡಲಲ್ಲಿಟ್ಟುಕೊಂಡೂ ಲೌಕಿಕ. ಅಧ್ಯಾತ್ಮವನ್ನು ಕಂಗೆಡಿಸಬಲ್ಲ ಲೌಕಿಕ. ಸೂಕ್ಷ್ಮಜ್ಞನೊಬ್ಬ ಮೈಮರೆತು ತನ್ನದೇ ನಾಲ್ಕು ಮಾತುಗಳನ್ನು ಈ ರಚನೆಗೆ ಸೇರಿಸಿದರೆ ಅದು ವ್ಯಾಸರಿಗೆ ತನ್ನ ಕಾಣಿಕೆ ಎಂದು ಭಾವಿಸಬಹುದಾದ ರೀತಿಯ ಕೃತಿ. ಅಂದರೆ ಹಿಗ್ಗುತ್ತ ಹೋಗಬಲ್ಲ ಎಂಥ ಪ್ರಕ್ಷೇಪಗಳನ್ನೂ ಅರಗಿಸಿಕೊಂಡು ಬೆಳೆಯಬಲ್ಲ ಕೃತಿ. ಈ ಅರ್ಥದಲ್ಲಿ ಒಂದು ಜನಾಂಗದ ಕೃತಿ. ಮುಖ್ಯವಾಗಿ ಈ ಇತಿಹಾಸವನ್ನು ತಾನು ವೇದಾಧಿಕಾರ ಇಲ್ಲದವರಿಗೆಂದು, ಹಾಗೆ ಪರಿಗಣಿತರಾದವರಿಗಾಗೇ ರಚಿಸಿದೆ. ಸ್ತ್ರೀಯರಿಗಾಗಿ ರಚಿಸಿದೆ. ಶೂದ್ರರಿಗಾಗಿ ರಚಿಸಿದೆ. ಧರ್ಮವನ್ನು ತಿಳಿಯದೆ ಕಂಗೆಟ್ಟವರಿಗಾಗಿಯೇ ರಚಿಸಿದೆ. ವೇದದ ಅಂತರಂಗವೇನು ಎಂದು ಬಿತ್ತರಿಸುವುದಕ್ಕಾಗಿಯೇ ರಚಿಸಿದೆ. ವೇದವೆಂದರೆ “ಶ್ರುತಿ”. ಶ್ರವಣಸಾಮಗ್ರಿ. ಕೇಳಿದರೆ ಸಾಕು; ಉದ್ಧಾರವಾಗಬೇಕು. ಈ ಜಾಡು ಹಿಡಿದೇ, ಎಲ್ಲರೂ ಕೇಳುವಂಥ, ಕೇಳಿದರೆ ಧರ್ಮ ಸಂಕಟಕ್ಕೆ ಒಳಗಾಗಿಯೇ ಧರ್ಮ-ಸೂಕ್ಷ್ಮವನ್ನು ತಿಳಿಯಬಲ್ಲಂಥ ಕೃತಿಯನ್ನು ರಚಿಸಿದೆ. “ಭಾರತವ್ಯಪದೇಶೇನ ಹಿ ಆಮ್ನಾಯಾರ್ಥಶ್ಚದರ್ಶಿತ: ದೃಶ್ಯತೇ ಯತ್ರ ಧರ್ಮಾದಿ ಸ್ತ್ರೀಶೂದ್ರಾದಿಭಿರಪ್ಯುತ”!!. ಆ ಮಟ್ಟಿಗೆ ಕೃತಾರ್ಥತೆಯ ಭಾವವೂ ಇದೆ.
ಆದರೆ ಏಕೋ ಮನಸ್ಸಿನಾಳದಲ್ಲಿ ಒಂದು ಅಪ್ರಸನ್ನತೆ, ಒಂದು ನೆಮ್ಮದಿ ಇಲ್ಲದ ಸ್ಥಿತಿ, ಒಂದು ವಿಚಿತ್ರ ವಿಹ್ವಲತೆ ಕಾಡುತ್ತಿದೆ. ಏನು, ಲೋಕಕ್ಕೆ ಮಾತನ್ನು ಮೀಸಲಿಟ್ಟು ಅದಕ್ಕೆ ಬದಲಾಗಿ ಈ ವಿಹ್ವಲತೆಯನ್ನು ಪಡಕೊಂಡಂತಾಯಿತೆ? ಪರಮವಿರಕ್ತರಿಗಾಗಿ ಮಾತನ್ನು ಮೀಸಲು ಮಾಡದೆ ಹೋದೆನೇ? ಅಂದರೆ ವಿರಕ್ತನೂ ಕೇಳುವಂತೆ, ಕೇಳಿ ಒಲಿಯುವಂತೆ ಮಾಡುವುದೇ ಮಾತುಗಾರನಿಗೆ ದೊಡ್ಡ ಪರೀಕ್ಷೆಯೆ? ಅದೇ ಶ್ರೋತ್ರಿಯ ಸಂಸ್ಕೃತಿಯ ಮೂಲಾರ್ಥವೆ? ಮಾತು, ಲೋಕದ ಕಿವಿಗಳನ್ನು ನಂಬಬಾರದೆ? ನಾನು ನಂಬಿಬಿಟ್ಟೆನೆ?
ಭಾಗವತದಲ್ಲಿ ಅಲ್ಲದೆ ಅನ್ಯತ್ರಕೂಡ ವ್ಯಾಸರ ವಿಷಾದ ವ್ಯಕ್ತವಾದದ್ದುಂಟು. “ಕೈ ಎತ್ತಿ ಹೇಳುತ್ತಿದ್ದೇನೆ; ಓ ಇಲ್ಲಿ ಕೇಳಿ; ಬದುಕಿನಲ್ಲಿ ಅರ್ಥ-ಕಾಮಗಳು ಮುಖ್ಯವೇ ಹೌದು. ಆದರೆ ಆ ಅನುಭವಗಳನ್ನು ಧರ್ಮದ ನೆರಳು-ಬೆಳಕಿನಲ್ಲಿ ಸಾಧಿಸಬೇಕು. ಸಾಧಿಸಲಾಗುತ್ತದೆ ಎಂದು ಹೇಳುತ್ತಿದ್ದೇನೆ. ಯಾಕೆ ಯಾರೂ ಈ ಮಾತನ್ನು ಕೇಳಿಸಿಕೊಳ್ಳುತ್ತಿಲ್ಲ?” ಇದು ವ್ಯಾಸರ ಪ್ರಸಿದ್ಧವಾದ ಉದ್ಗಾರ. ಲೋಕಕ್ಕಾಗಿಯೇ ಹೇಳುತ್ತಿರುವ ಮಾತನ್ನು ಲೋಕ ಕೇಳುತ್ತಿಲ್ಲ ಎಂಬ ವಿಷಾದ. ಇದೇನೋ ಬಿಚ್ಚುಮಾತು. ಇದನ್ನೇ ಸೂಚ್ಯವಾಗಿ ಚಿತ್ರಿಸಿದ್ದುಂಟು. ಮಹಾಭಾರತದ ಯಕ್ಷಪ್ರಶ್ನೆಯನ್ನು ನೋಡಬಹುದು. “ಯಕ್ಷ” ಒಂದು ರಹಸ್ಯ. ಆತ ಯಾರಿಗೂ ಕಾಣಿಸುತ್ತಿಲ್ಲ. ಆದರೆ ಆತನ ಕೊಳದ ನೀರು ಕುಡಿಯ ಬಂದವರಿಗೆ ಯಕ್ಷ, ಪ್ರಶ್ನೆಗಳನ್ನು ಕೇಳುತ್ತಾನೆ. ದಾಹವನ್ನು ನಿವಾರಿಸಿಕೊಳ್ಳುವುದೇನೋ ಮುಖ್ಯವೇ. ಪ್ರಶ್ನೆಗಳನ್ನು ಕೇಳಿಸಿಕೊಳ್ಳುವುದೂ ಅಷ್ಟೇ ಮುಖ್ಯ. ತಾನು ಪ್ರಶ್ನೆಗಳಿಗೆ ಉತ್ತರಿಸಬಲ್ಲೆ ಎಂಬ ಆತ್ಮಸನ್ಮಾನದಿಂದಲಾದರೂ ಮನುಷ್ಯ ಪ್ರಶ್ನೆಯ ಕುರಿತು ಚಿಂತಿಸಲಿ ಎಂದು ಭಾವ. ಆದರೆ ಧರ್ಮರಾಯನನ್ನು ಬಿಟ್ಟು ಬೇರೆ ಯಾರೂ ಪ್ರಶ್ನೆಗಳನ್ನು ಕೇಳಿಸಿಕೊಳ್ಳುವುದಕ್ಕೂ ತಯಾರಿಲ್ಲ. ಆಶ್ಚರ್ಯವೆಂದರೆ ಮೂರ್ಛಿತರಾಗಿ ಬಿದ್ದ ತಮ್ಮಂದಿರನ್ನು ನೋಡಿಯೂ ಅಣ್ಣಂದಿರು ಪ್ರಶ್ನೆಕೇಳಿಸಿಕೊಳ್ಳದಿರುವುದು. (ಯಾವುದು ಆಶ್ಚರ್ಯ ಈ ಲೋಕದಲ್ಲಿ? ಎಂದು ಯಕ್ಷ ಕೇಳಿದ ಪ್ರಶ್ನೆಗೆ ಧರ್ಮರಾಯ ಕೊಟ್ಟ ಉತ್ತರ ತನ್ನ ಕಣ್ಣ ಮುಂದಿನ ಸನ್ನಿವೇಶವನ್ನೇ ವರ್ಣಿಸಿದಂತಿದೆ.) ಪಾಂಡವರ ಕತೆಯೇ ಹೀಗಾದರೆ ಇನ್ನು ಕೌರವರ ಕತೆ ಹೇಗಿರಬಹುದು! ಕೌರವರಂಥವರ ಮುಂದೆ ಇಂಥ ಸನ್ನಿವೇಶವೇ ಸೃಷ್ಟಿಯಾಗುವುದಿಲ್ಲ. ಇದು ತನ್ನ ಜಾಗದಲ್ಲಿ ಯಕ್ಷನನ್ನು ಕಲ್ಪಿಸಿ ವ್ಯಾಸರು ಸೂಚಿಸುತ್ತಿರೋದು. ಲೋಕ ಮಾತು ಕೇಳಿಸಿಕೊಳ್ಳುವುದಕ್ಕೆ ಸಿದ್ಧವಿಲ್ಲ ಎಂಬ ವಿಷಾದ!
ಭಾಗವತದಲ್ಲಿ ಈ ವಿಷಾದ ಇನ್ನಷ್ಟು ಆಳವಾಗಿದೆ. ಇನ್ನಷ್ಟು ಆತ್ಮಕೇಂದ್ರಿತವಾಗಿದೆ. ಶುಕ ತನಗೆ ಬದುಕಿನ ದೊಡ್ಡ ದರ್ಶನವನ್ನು ಮಾಡಿಸಿದ. ಶುಕನದು ವಿರಕ್ತಿ; ವಿರಾಗ. ತನ್ನದು ಅನುರಕ್ತಿ; ಅನುರಾಗ. ಶುಕನದು, ಸೃಷ್ಟಿಯಲ್ಲಿ ಗಂಡು-ಹೆಣ್ಣೆಂಬ ಭೇದವನ್ನು ಕಾಣದ ಮೂಲಮುಗ್ಧತೆ! ತನಗೇಕೆ ಈ ಮೂಲ ಮುಗ್ಧತೆಯ ಹೊಳಹು ಉಂಟಾಗಲಿಲ್ಲ- ಶುಕನನ್ನು ಕಂಡಾಗ? ಅಚ್ಚರಿ ಎಂದರೆ ಮೀಯುತ್ತಿದ್ದ ಹೆಣ್ಣು ಮಕ್ಕಳಿಗೆ, ಮೈ-ಕಾಣಿಸಿದ್ದಕ್ಕೆ ನಾಚಬಲ್ಲ ಹೆಣ್ಣು-ಮಕ್ಕಳಿಗೆ ಅದು ಹೇಗೆ ಶುಕನ ಒಳ ಬಗೆ ತಿಳಿದುಬಿಟ್ಟಿತು! ಇಲ್ಲೇನೋ ಇದೆ ರಹಸ್ಯ! ವಿರಾಗದಿಂದಲೇ ಮೂಡಿಬಂದಿರುವುದಲ್ಲವೆ ಅನುರಾಗ? ತಮ್ಮನ್ನು ಪೂರ್ಣ ಒಪ್ಪಿಸಿಕೊಳ್ಳಬಲ್ಲ, ನಿಜವಾಗಿ ಅನುರಕ್ತರಾಗಬಲ್ಲ ಹೆಣ್ಣುಮಕ್ಕಳಿಗೇ – ಆ ಕಾರಣದಿಂದಲೇ- ವಿರಕ್ತಿಯೂ ಇನ್ನೊಂದು “ಮೈ” ಆಗಿರಬೇಕು! “ಹೋ! ಎಂಥವರಿಂದ ವೇದವನ್ನು ದೂರಮಾಡಿದೆವು!’
ಮಾತೆಂಬುದು “ಹೆಣ್ಣು” ಎಂದು ವ್ಯಾಸರಿಗೆ ಹೊಳೆದುಬಿಟ್ಟಿತು!
ಅವಳು “ಸರಸ್ವತಿ”. ಅವಳು ವಿರಕ್ತನನ್ನು ತಿಳಿಯಬಲ್ಲಳು. ಅವಳು ವಿರಕ್ತನನ್ನು ಪ್ರತಿಫಲಿಸಬಲ್ಲಳು-ಪ್ರತಿಫಲಿಸುವ ತನ್ನ ರಸವಂತಿಕೆಯನ್ನು ಕಳೆದುಕೊಳ್ಳದೆ!
ವ್ಯಾಸರಿಗೆ ತಾನು ಪುತ್ರಸ್ನೇಹದಿಂದ ಶುಕನನ್ನು ಹಿಂಬಾಲಿಸಿದ ಅನುಭವವೂ ಧನ್ಯವಾದಂತೆನಿಸಿತು. “ಲೋಕವಿರಕ್ತಿ”ಯನ್ನು ಅಪಾರ ಲೋಕ ಜೀವನಾನುಭವವೊಂದು ಹಿಂಬಾಲಿಸುತ್ತಿದೆ. ವಿರಕ್ತನು ಮೌನಿ; ಅಸಂಗ; ಸೃಷ್ಟಿಮುಖಿಯಲ್ಲ. ನಿಜ. ಆದರೆ ಅವನಿಗೆ ಗೊತ್ತಿರಲಿ, ಮಾತು; ರಾಗ; ರಕ್ತಿ; ಸಂಗ; ಸೃಷ್ಟಿ ಅವನನ್ನು ಹಿಂಬಾಲಿಸುತ್ತಿದೆ ಅಂತ. ಜೀವನದ ನಡೆಯೇ ವಿಚಿತ್ರ. ಇಲ್ಲಿ ಹಿಂಬಾಲಿಸಲ್ಪಡದಂತೆ ನಡೆಯೋದು ಸಾಧ್ಯವೇ ಇಲ್ಲ. ವಿರಕ್ತನೊಮ್ಮೆ ಹಿಂದಿರುಗಿ ನೋಡಲಿ; ಆ “ಕಟಾಕ್ಷ”ವೇ ಅವನನ್ನು ಹಿಂಬಾಲಿಸುವ ಮಾತಿಗೆ ಸಂಜೀವನದಂತೆ ಇರುತ್ತದೆ. ಅದನ್ನೇ ಮಾತು ಅದ್ಭುತವಾಗಿ ವರ್ಣಿಸಬಲ್ಲುದು. ವರ್ಣಿಸಿ ತಾನು ಜೀವಂತವಾಗಬಲ್ಲುದು.
ವ್ಯಾಸರು ಹೀಗೆ ತನ್ನಲ್ಲಿಯೇ ತುಯ್ಯಲಾಡುತ್ತಿರುವಾಗ ಅಲ್ಲಿಗೆ ವೀಣಾಪಾಣಿಯಾದ ನಾರದರು ಬಂದರಂತೆ. ನಾರದರೆಂದರೆ ಸೂತಪುರಾಣಿಕನ ಅಲೌಕಿಕ ರೂಪ. ಸೂತಪುರಾಣಿಕನು ವಿಲೋಮ ಜಾತನಾಗಿದ್ದರೆ ನಾರದರು ಬ್ರಹ್ಮ-ಮಾನಸಪುತ್ರನಂತೆ. ಲೋಕ-ಪರಲೋಕಗಳ ಬದುಕಿನ ವಕ್ತಾರ ಈ ಮಾನಸಪುತ್ರ! ಕಲಿಯುಗದಲ್ಲಿ, ಮನುಷ್ಯಲೋಕದಲ್ಲಿ ಸಂಚರಿಸುತ್ತ ಅವರು “ಭಕ್ತಿತರುಣಿ”ಯನ್ನು ಸಂತೈಸಬಲ್ಲರು. ಹಾಗೆಯೇ, ಭಾಗವತ ರಚನೆಗೆ ಮನಸ್ಸನ್ನು ಹದಗೊಳಿಸುವಂತೆ ವೇದವ್ಯಾಸರನ್ನು ಸಂತೈಸಬಲ್ಲರು ಕೂಡ. ಅವರ ಸಂತೈಕೆಯೇ ದೊಡ್ಡಕ್ರಿಯಾಶಾಲಿ.
ಹೀಗೆ ವ್ಯಾಸಾಶ್ರಮದಲ್ಲಿ ವ್ಯಾಸ-ನಾರದರು ಭೇಟಿಯಾದರಂತೆ.ವ್ಯಾಸರು ತಮ್ಮ ಅಂತರಂಗದ ದುಗುಡವನ್ನು ನಾರದರಲ್ಲಿ ಹೇಳಿಕೊಂಡರು. ನಾರದರು ವ್ಯಾಸರ ಒಳಗಿನ ತಲ್ಲಣಗಳನ್ನು ಗ್ರಹಿಸಿದರು. ತಲ್ಲಣದ ಗ್ರಹಿಕೆಯೇ ಸೃಷ್ಟಿಶೀಲತೆಯ ಮುಂಗಾಣ್ಕೆಯಲ್ಲವೇ? ಎಲ್ಲವನ್ನೂ ಕೇಳಿ ನಾರದರು ಹೀಗೆ ಹೇಳಿದರಂತೆ.
“ಆಹಾ, ನಿಮಗೆ ಕವಿದಿರುವ ವಿಷಾದದ ಕಪ್ಪು ಮೋಡದ ನಡುವೆ ಪೀತಾಂಬರದಂಚಿನಂತೆ ಮಿಂಚಿನ ಗೆರೆಯೊಂದನ್ನು ನಾನು ಕಾಣಬಲ್ಲೆ, ಓ ದ್ವೈಪಾಯನ, ನೀವು ನಿಮ್ಮ ಅಸಾಮಾನ್ಯ ವಾಜ್ಮಯದಲ್ಲಿ “ಪ್ರವೃತ್ತಿ” ಮಾರ್ಗವನ್ನೇನೋ ಹೆಚ್ಚಳದಲ್ಲಿ ಬಣ್ಣಿಸಿದಿರಿ. ಈಗ ನಿವೃತ್ತಿಪಥವನ್ನು ಬಣ್ಣಿಸಬೇಕಿದೆ. ಲೋಕರಕ್ತಿಯನ್ನು ಬಣ್ಣಿಸಿದಿರಿ.ಈಗ ಲೋಕವಿರಕ್ತಿಯನ್ನು ಬಣ್ಣಿಸಬೇಕಿದೆ.ಹಾಗೆ ಬಣ್ಣಿಸಬೇಕಾದರೆ “ನಿವೃತ್ತಿ” ಮನೋಧರ್ಮ ನಿಮ್ಮನ್ನು ಆವರಿಸಬೇಕಲ್ಲವೆ? ಇದು ಅಂಥದೊಂದು ವಿಷಾದ ನಿಮ್ಮನ್ನು ಕವಿದಿರುವುದು.
ನನ್ನ ಮಾತನ್ನು ಲೋಕ ಕೇಳುತ್ತಿಲ್ಲವಲ್ಲ ಎಂದು ಈ ಹಿಂದೆ ಕೊರಗಿದಿರಿ. ಈ ಅರ್ಥದಲ್ಲಿ ಮಾತು ಸೋತಿದೆ ಎಂದಾಯಿತು. ಈಗಲಂತೂ ಮಾತು ತನ್ನ ಸೋಲನ್ನು ಇಡಿಯಾಗಿ ಅನುಭವಿಸಬೇಕಿದೆ. ಪೂರ್ತಿ ಸೋತಾಗಲೇ ಮಾತು ಗೆಲ್ಲುವುದಯ್ಯ!
ಮಾತು, “ಸತ್ಯ”ವನ್ನು ಪಡೆಯಲಾಗದೆ ತನ್ನ ಮನಸ್ಸಿನೊಂದಿಗೆ ಹಿಮ್ಮರಳಿತು ಎಂಬ ಮಾತನ್ನು ನೀವು ಕೇಳಿಯೇ ಇದ್ದೀರಿ. “ವಾಚೋನಿವರ್ತಂತೇ ಅಪ್ರಾಪ್ಯ”. ತಾನು ಸತ್ಯವನ್ನು ಹಿಡಿಯಲಾರೆ ಎಂದುಕೊಳ್ಳುತ್ತ ಮಾತು ಹಿಂತಿರುಗಿತು. ಅದಕ್ಕೆ ಅಷ್ಟು ತಿಳಿಯಿತು. ಅದು ದೊಡ್ಡ ತಿಳುವಳಿಕೆ. ಹಿಂತಿರುಗಿದ ಮಾತು! ಆಗ ಗೊತ್ತಾಯಿತು ಮಾತಿಗೆ ಹಿಂದಿರುಗಿ ನೋಡೋದು ಸಾಧ್ಯ ಅಂತ. ಹಿಂತಿರುಗೋದು ಒಂದು ಅನನ್ಯವಾದ “ಜಾಗೃತಿ” ಅಂತ. ಮಾತಿಗೆ ಆಗ ಅನೂಹ್ಯವಾದ ನರ್ತನದ ಗತಿಗಳೆಲ್ಲ ಬಂತು. “ಸೋತೆ”ನೆನ್ನುವುದು; “ನಾನಿನ್ನ ಹಿಡಿಯಲಾರೆ”ನೆನ್ನುವುದು ಭಗವಂತನ, ಸತ್ಯದ ಸ್ತುತಿಯಾಗುತ್ತೆ ಅಂತ ಆಗ ಗೊತ್ತಾಯಿತು. “ನಾನು ಹಿಡಿಯಬಲ್ಲೆ ನಿನ್ನನ್ನು” ಎಂದಾಗ ಅದು ಸತ್ಯದ ಸ್ತುತಿಯಾಗುವುದರ ಬದಲು ತನ್ನದೇ ಸ್ತುತಿಯಾಗುತ್ತೆ ಎಂದೂ ಗೊತ್ತಾಯಿತು. ತನ್ನ ಸೋತ ಸ್ಥಿತಿಯನ್ನೆ ಸ್ತುತಿಯನ್ನಾಗಿಸುವ ಚಮತ್ಕಾರವನ್ನು ಭಗವಂತ ಅಥವಾ “ಸತ್ಯ” ಸಾಧಿಸಿದ್ದು ತನ್ನನ್ನು ಹಿಂದೆ ನೋಡುವಂತೆ ಮಾಡಿ ಎಂದೂ ಗೊತ್ತಾಯಿತು.
ಹಿಂದೆ ನೋಡುವುದೂ ವಿರಕ್ತನನ್ನು ಹಿಂಬಾಲಿಸುವುದೂ ಎರಡೂ ಒಂದೇ. ಈ ವಿಚಿತ್ರವನ್ನು ಚಿಂತಿಸಿ ಎನ್ನುತ್ತ ವೀಣೆ ಮಿಡಿಯುತ್ತ ನಾರದರು ತೆರಳಿದರಂತೆ. ಹಾಗೆ ರಚನೆಗೊಂಡಿತು ಭಾಗವತ; ವ್ಯಾಸರಿಂದ. ಕೃಷ್ಣನ ಚಿತ್ರದಲ್ಲಿ ವ್ಯಾಸ ಮತ್ತು ಶುಕ-ಮಿಲನಗೊಂಡಂತಿದೆ. ಶುಕನಲ್ಲಿ ಗಂಡು-ಹೆಣ್ಣೆಂಬ ಭೇದ ಅಳಿದಿದೆ ಎಂದು ಗುರುತಿಸಿದ ಹೆಣ್ಣು- ಮಕ್ಕಳು – ಭಾಗವತದಲ್ಲಿ ಗೋಪಕನ್ಯೆಯರಾದಂತಿದೆ. ಕೃಷ್ಣ-ಗೋಪೀ ವಿಲಾಸ, ಶುಕನಿಗೆ, ತನ್ನೊಳಗಿನ ಆನಂದದ ಲಹರಿಯಂತಿದೆ. ಶುಕನ ವಿರಕ್ತಿಯನ್ನು ವ್ಯಾಸರು ಹಿಂಬಾಲಿಸಿದ್ದೇ- “ಶ್ರವಣಸುಧಾ ವಿನೂತಕಥನ ಕಾರಣ”ವಾದಂತಿದೆ.
ತೋಳ್ಫಾಡಿ ಭಾಗವಥ ಕಥಾ 6: ಈ ಬದುಕಿಗೆ ಉದ್ವೇಗದ ಮೇಲೆ ಎಂಥ ಮೋಹ!
ವ್ಯಾಸರು ತಮಗೆ ತಾವೇ ಹೇಳಿಕೊಂಡಂತೆ ಇದ್ದ “ಭಾಗವತ”ವನ್ನು ಶುಕನಿಗೆ ಹೇಳಿದರು. ತಮಗೆ ತಾವೇ ನಿಜವಾಗಿ ಹೇಳಿಕೊಳ್ಳಬಲ್ಲ ಆಳದ ಮಾತುಗಳನ್ನೇ ಮಗನಿಗೆ ಹೇಳಬೇಕು. ಆಗ ಅದು ನಿಜವಾದ “ಪಿತೃವಾಕ್ಯ”. ಅಂದರೆ ಮುಂದಿನ ಜನಾಂಗಕ್ಕೆ ಒಪ್ಪಿಸುವ ಮಾತುಗಳಾಗುವವು. ವ್ಯಾಸರ ವ್ಯಕ್ತಿತ್ವದಲ್ಲೇ ಹಿಂದು-ಮುಂದಿನದನ್ನು, ಪ್ರಾಚೀನ-ನೂತನಗಳನ್ನು, ಎರಡು ತಲೆಮಾರುಗಳನ್ನು ಬೆಸೆಯುವ ತುಡಿತವಿದೆ. ಇದು ವ್ಯಾಸರಂಥ ಮಹಾವಕ್ತಾರನೊಬ್ಬನಿಗೆ ಸಹಜವಾದುದೇ. ವ್ಯಾಸರು “ವೇದ-ವ್ಯಾಸ”ರೆಂದು ಪ್ರಸಿದ್ಧರಾದುದು ವೇದ ಸಂಹಿತೆಯ ಸಂಕಲನವನ್ನು ಮಾಡಿದುದರಿಂದ. “ಋಗ್ವೇದ”ವನ್ನು ನೋಡಿ. ಅದರ ಮೊದಲ ಮಂತ್ರ “ಅಗ್ನಿ”ಯನ್ನು ಕುರಿತದ್ದು. ಈ ಮೊದಲ ಮಂತ್ರದಲ್ಲೇ ಒಂದು ನುಡಿ ಹೀಗಿದೆ. “ಅಗ್ನಿ: ಪೂರ್ವೇಭಿ: ಋಷಿಭಿ: ಈಡ್ಯ: ನೂತನೈ: ಉತ” – ಪೂರ್ವದ ಋಷಿಗಳಿಂದ ಸ್ತುತ್ಯನಾದ “ಅಗ್ನಿ” ನೂತನರಿಂದಲೂ ಸ್ತುತ್ಯನಾಗಿದ್ದಾನೆ ಎಂದು ಇದರರ್ಥ. ಇದೊಂದು ಸಂಭಾವನೆ ಕೂಡ. ಅಂದರೆ ಅಗ್ನಿಯು ನೂತನ (ಆಧುನಿಕ)ರಿಂದಲೂ ಸ್ತುತ್ಯನಾಗಬೇಕೆಂಬ ಆಶಯವನ್ನು ಸೂಚಿಸುವಂಥದು. ಅತ್ಯಂತ ಪ್ರಾಚೀನ ವಾಜ್ಮಯವಾದ ಋಗ್ವೇದದ ಮೊದಲ ನುಡಿಯಲ್ಲೇ “ಪೂರ್ವಿಕ” ಮತ್ತು “ನೂತನ” ಎಂಬೆರಡು ಪದಗಳು ಒಟ್ಟಿಗೇ ಬಂದಿವೆ. ಇವರಿಬ್ಬರಿಂದಲೂ ಸ್ತುತ್ಯನಾಗುವುದೇ ದೇವತೆಯ ನಿಜವಾದ ಅರ್ಹತೆ ಮತ್ತು ಇದನ್ನು ಸಾಧಿಸುವುದರಲ್ಲಿಯೇ ಮನುಷ್ಯರ ನಿಜವಾದ ಅರ್ಹತೆ ಕೂಡ ಅಡಗಿದೆ ಎಂಬ ಸೂಚನೆ ಇಲ್ಲಿದೆ. ಒಮ್ಮೆ ಜ್ವಲಿಸಿದ ಅಗ್ನಿಯನ್ನು ಆರದಂತೆ ಕಾಪಾಡಿಕೊಳ್ಳಬೇಕು ಎನ್ನುವ ಎಚ್ಚರವೇ ಪೂರ್ವಿಕರನ್ನೂ ನೂತನರನ್ನೂ ಬೆಸೆಯುವ ಎಚ್ಚರವಾಗಿ ಮಾರ್ಪಟ್ಟಿದ್ದರೆ ಅಚ್ಚರಿಯಿಲ್ಲ. ಈ ಪೂರ್ವಿಕ ಮತ್ತು ನೂತನ ಎಂದು ಗುರುತಿಸಿದ ಕ್ಷಣದಲ್ಲೇ ವೇದದ ಮೊದಲ ಆವಿಷ್ಕಾರವಾಯಿತೋ ಹೇಗೆ? ಏನಿದ್ದರೂ ಈ ಮಂತ್ರವನ್ನು ಋಗ್ವೇದದ ಮೊದಲ ಮಂತ್ರವಾಗಿ ಸಂಕಲನ ಮಾಡಿದ್ದರಲ್ಲಿ ವ್ಯಾಸರ ಮನಸ್ಸು-ಇಂಗಿತ-ಕಾಣಿಸುತ್ತದೆ.
ಏನಿದ್ದರೂ ವಾಜ್ಮಯವೆನ್ನುವುದೇ ಬೆಸೆಯುವಂಥಾದ್ದು. “ವಾಕ್” ಎಂದರೆ ಮೂಲತ: ಒಂದು “ಕರೆ”ಯಲ್ಲವೆ? ತನಗೆ ಸ್ಪಂದಿಸುವಂತೆ, ಓಗೊಡುವಂತೆ ಓಗೊಡುವುದಕ್ಕಾಗಿ ತನ್ನನ್ನೇ ಒಪ್ಪಿಸಿಕೊಂಡ ಕರೆಯಲ್ಲವೆ? ಒಪ್ಪಿಸಬೇಕಾದರೆ ತನಗೆ ತಾನೇ ಹೇಳಿಕೊಳ್ಳಬಲ್ಲಷ್ಟು ಆತ್ಮೀಯವೂ, ಅನುಭವದ ಕಾವಿನಿಂದ ಕೂಡಿದ್ದೂ ಆಗಿರಬೇಕಲ್ಲ. ಶಬರಿಯ ಹಣ್ಣಿನ ಕತೆಯಂತೆ. ತಾನು ಮೊದಲು ರುಚಿ ನೋಡಿ – ‘ಕೋ, ಇದು ಚೆನ್ನಾಗಿದೆ’ ಎಂದು ಒಪ್ಪಿಸಿದಂತೆ.
ವ್ಯಾಸರು ಭಾಗವತವನ್ನು ಶುಕನಿಗಲ್ಲದೆ ಬೇರಾರಿಗೂ ಹೇಳಿದಂತಿಲ್ಲ. ಶುಕನಾದರೋ ಅಹೈತುಕವಾದ ಒಂದು ಪ್ರಜ್ಞಾಸ್ಥಿತಿಯಲ್ಲಿರುವವನು. ಅಹೈತುಕವೆಂದರೆ ವ್ಯಾವಹಾರಿಕತೆಯನ್ನು, ಕೇವಲ ಲೌಕಿಕತೆಯನ್ನು ಮೀರಿದ ಭಾವಸ್ಥಿತಿ. ಮಡಕೆಯನ್ನು ನೋಡಿ ಇದು “ಮಣ್ಣು” ಎಂದು ತಿಳಿದ ತತ್ತ್ವಜ್ಞಾನಿ, ಮತ್ತೆ ಮಡಕೆ-ಮಣ್ಣುಗಳ ನಡುವೆ ಕೇವಲ ವ್ಯಾವಹಾರಿಕತೆಯನ್ನು ಸದಾ ಯೋಚಿಸಿಕೊಂಡಿರಲಾರನಷ್ಟೆ. ಆಗ ಅಂತ:ಕರಣವನ್ನು ತುಂಬಿರುವುದು ಒಂದು ಭಾವಸ್ಥಿತಿ. ಇಂಥ ಭಾವಸ್ಥಿತಿಯೇ “ಪ್ರೀತಿ” ಎಂಬ “ರಸ” ಒಸರುವುದಕ್ಕೆ ತಕ್ಕುದಾದ ಸ್ಥಿತಿ. ವ್ಯಾವಹಾರಿಕತೆಯನ್ನು ದಾಟಿದ ಕ್ಷಣದಲ್ಲೇ “ಪ್ರೀತಿ” ಎಂಬ ನೆಲದಲ್ಲಿ ಅಡಿ ಇಟ್ಟಂತೆ. ಶುಕನಿಗೆ ಇದು ಅರಿವಿಗೆ ಬಂದದ್ದು, ತನಗೆ ಹೇಳುವುದಕ್ಕಾಗಿಯೇ “ಭಾಗವತ”ವನ್ನು ರಚಿಸಿದರೇನೋ ಎಂಬಷ್ಟು ಪ್ರೀತಿಯಿಂದ ತಂದೆ ವ್ಯಾಸರು ಹೇಳಿದ ಭಾಗವತವನ್ನು ಕೇಳಿದಾಗ. “ಇವರು ತನ್ನ ಸ್ಥಿತಿಯನ್ನೇ ಬಣ್ಣಿಸುತ್ತಿದ್ದಾರೆ, ಹಾಗೆ ಬಣ್ಣಿಸುವ ಮೂಲಕ ಇದುವರೆಗೆ ತನ್ನ ಅರಿವಿಗೆ ಬಾರದಂತಿದ್ದ ಪ್ರೀತಿಯ ಒರತೆಯೊಂದು ಹರಿಯುವಂತಾಗಿದೆ. ಆ ಒರತೆ ಮಹಾಪೂರವಾಗುತ್ತಿದೆ-” . ತನ್ನಲ್ಲೇ ತಾನಿದ್ದ ಮುನಿ, ತನಗೆ ತಿಳಿಯದೆಯೇ ಭಗವಂತನಲ್ಲಿ ಅವ್ಯಾಜವಾದ ಪ್ರೀತಿಯನ್ನು ಸೂಸುತ್ತಿದ್ದ ಎಂಬ ರಹಸ್ಯವೊಂದು ಶುಕನಿಗೆ ತಿಳಿದುಬಿಟ್ಟಿತು. “ಆತ್ಮಾರಾಮಾಶ್ಚ ಮುನಯ:———- ಕುರ್ವಂತಿ ಅಹೈತುಕೀಂ ಭಕ್ತಿಂ”. ಬರಿಯ ಅರಿವು, ಬರಿಯ ಪ್ರೀತಿ – ಎರಡೂ ಅವ್ಯಾಜ- ಆದುದರಿಂದ ಎರಡೂ ಒಂದೇ ಎಂದು ಶುಕಮುನಿಗೆ ಹೊಳೆಯಿತು. ಶುಕನ ಜ್ಞಾನವೆಲ್ಲ ತನ್ನ ರಸಾಲ ಮುಖವನ್ನು ತೋರಿಸುತ್ತ ಭಕ್ತಿಯಾಗಿ ಪರಿಣಮಿಸಿತು. ಮಾತಿಗೆ ಮೀರಿದ್ದನ್ನು ಮಾತು ನಿಜವಾಗಿ ಹಂಬಲಿಸಿದಾಗ – ಮಾತಿಗೆ ಮೀರಿದ ಆ ಪರವಸ್ತು – ತಾನು ಮಾತಿಗೆ ಚಿರಕೃತಜ್ಞವಾಗಿರುವಂತೆ ಕಾಣಿಸುತ್ತದೆಯಂತೆ! ಶುಕಮುನಿಗೆ ಹಾಗಾಗಿಬಿಟ್ಟಿತು. ವಿರಕ್ತ ಮುನಿಯ ಕಣ್ಣು ತಾನಾಗಿ ಹನಿಗೂಡಿತು! ಅದಕ್ಕೆ ಕಾರಣವಾದ ಮಾತು ಧನ್ಯವಾಯಿತು ಎಂದರೆ ತಪ್ಪಿಲ್ಲವಲ್ಲ. ಆ ಗಳಿಗೆಯಲ್ಲಿ ಶುಕಮುನಿ – ವ್ಯಾಸರ ಜೌರಸಪುತ್ರನಾಗಿದ್ದವನು – ವ್ಯಾಸರ ಮಾನಸಪುತ್ರನಾದ. ವ್ಯಾಸರ ಹುಡುಕಾಟ ಸಾರ್ಥಕವಾಯಿತು. ಅವರು ಶುಕನನ್ನು ಮತ್ತೊಮ್ಮೆ ಪಡೆದರು. ವೇದದಲ್ಲಿ “ಪ್ರಾಚೀನ-ನೂತನ” ಎನ್ನುವಾಗ ಈ ಮಾನಸಪುತ್ರತ್ವವನ್ನೂ ಸೂಚಿಸಿದ್ದಾರೇನು!
ವ್ಯಾಸರು ಭಾಗವತವನ್ನು ಶುಕನಿಗೆ ಏಳು ದಿವಸ – ಒಂದು ಸಪ್ತಾಹ- ಹೇಳಿರಬೇಕು. ಬದುಕೇ ಒಂದು ಸಪ್ತಾಹ ಚಕ್ರ. ಎಂಟನೆಯ ದಿನಕ್ಕೆ ಬೇರೆ ಹೆಸರೇ ಇಲ್ಲವಲ್ಲ! ಈ ಕಿರಿದಾದ ಆಯುಷ್ಯದಲ್ಲಿ ಏಳುದಿನಗಳ ತೀವ್ರ ಮನನ ಸಾಕು – ಬದುಕಿನ ನಿಜವಾದ ಕಾಣ್ಕೆಗೆ. ಆ ಏಳು ದಿನಗಳ ಕಾಲ, ಅದುವರೆಗೆ ಗಾಳಿಯಂತೆ ಸದಾಗತಿಯಾಗಿ ಅಲೆಯುತ್ತಿದ್ದ ಶುಕನೆಂಬ ಅವಧೂತ – ಅಲ್ಲಾಡದೆ ಒಂದೆಡೆ ಕುಳಿತಿದ್ದ;’ಭಾಗವತ’ ಕೇಳುತ್ತ. ಅಪ್ಪ-ಮಗ ಇಬ್ಬರೂ. ಹನ್ನೆರಡು ಸ್ಕಂಧಗಳಲ್ಲಿ ಹರಡಿರುವ ಭಾಗವತದ ವಿಸ್ತಾರಕಥನ ಮುಗಿದ ಮೇಲೆ ಮತ್ತೆ ಶುಕಮುನಿ ಹೊರಟುಬಿಟ್ಟ. ಈಗ ಶುಕಮುನಿಯ ಅಲೆದಾಟಕ್ಕೆ ಬೇರೆಯೇ ಒಂದು ಬಣ್ಣ, ಬೇರೆಯೇ ಒಂದು ರಸ ಬಂದು ಬಿಟ್ಟಿತ್ತು. ಅವನಲ್ಲಿ ಪ್ರೀತಿಯ ಪೂರ್ಣಕುಂಭ ತುಳುತುಳುಕುತ್ತ ಇತ್ತು. ಅವನಲ್ಲಿ, ಮನುಷ್ಯರನ್ನು ಸರ್ವಮಿತ್ರರನ್ನಾಗಿಸುವ ಈ ಅಲೌಕಿಕರಸವನ್ನು ಯಾವ ಪಾತ್ರದಲ್ಲಿ ಸುರಿಯಲಿ ಎಂಬ ಉದ್ವೇಗಭರಿತ ಹುಡುಕಾಟವಿತ್ತು. ಎದೆ ಬರಿದಾದರೂ ಒಂದು ಉದ್ವೇಗ. ಎದೆ ತುಂಬಿದಾಗಲೂ ಒಂದು ಉದ್ವೇಗ. ಈ ಬದುಕಿಗೆ ಉದ್ವೇಗದ ಮೇಲೆ ಎಂಥ ಮೋಹ!
ಶುಕಮುನಿ ತನಗೆ ಓಗೊಡುವವರನ್ನು ಹುಡುಕುತ್ತ ಹೊರಟಂತೆ ಇತ್ತು. ಶುಕನ ಈ ಪರಿವರ್ತನೆ ಅದು ಹೇಗೆ ಜನಕ್ಕೆ ತಿಳಿದುಹೋದುತ್ತದೋ! ಶುಕನನ್ನು ಬಹಳ ಮಂದಿ ಹಿಂಬಾಲಿಸತೊಡಗಿದರಂತೆ. ಋಷಿಗಳು; ಸಾಧಕರು; ಜಿಜ್ಞಾಸುಗಳು; ಕುತೂಹಲಿಗಳು; ಸ್ತ್ರೀಯರೂ ಕೂಡ. ಮೌನಿಯ ನಾಲಗೆಯಲ್ಲಿ ಸ್ಫಟಿಕದ ಶಲಾಕೆಯಂಥ ಪಾರದರ್ಶಕ ಮಾತು ಮೂಡುತ್ತಿತ್ತು. “ಭಕ್ತಿ” ಎಂದರೆ ಒಂದು ಜನಾಂದೋಲನವಯ್ಯ. ಶುಕನ ಅಲೆದಾಟ ಅವನನ್ನು ಪರಿವಾರದ ಜತೆ ಗಂಗಾತೀರದತ್ತ ಒಯ್ದಿತು.
ಅದೇ ಗಂಗಾತೀರದಲ್ಲಿ ನಾಡಿನದೊರೆಯಾದ ಪರೀಕ್ಷಿದ್ರಾಜ ಪ್ರಾಯೋಪವೇಶಕ್ಕೆ ಎಂದರೆ ಸಾವಿಗೆ ತನ್ನನ್ನು ಸಿದ್ಧ ಮಾಡಿಕೊಳ್ಳುತ್ತಿದ್ದ. ದೊರೆಗೆ ಕುಪಿತ ಋಷಿಯೊಬ್ಬ ಶಾಪಕೊಟ್ಟು ಬಿಟ್ಟಿದ್ದ. ಇನ್ನು ಏಳು ದಿನ ನೀನು ಬದುಕಿರುತ್ತಿ ಅಷ್ಟೆ. ಏಳನೆಯ ದಿನದ ಸೂರ್ಯ ಕಂತುವಾಗ ನಿನ್ನ ಬದುಕು ಮುಗಿಯಬೇಕು. “ಸಪ್ತಾಹಂ ಜೀವಿತಾವಧಿ:” ಈ ಶಾಪ ಸಿಕ್ಕಿದ್ದೇ ಒಂದು ಕತೆ. ಅದನ್ನು ಮತ್ತೆ ನೋಡೋಣ. ಹೀಗೆ ಸಾವು ವಾರಾಂತ್ಯದಲ್ಲಿ ಕಾದಿದೆ ಎಂದು ತಿಳಿದು ಬರುವುದು ಶಾಪವೇ ಏಕಾಗಬೇಕು? ವರವೇಕಾಗವಾರದು? ಶಾಪವನ್ನು ದೊರೆಯಂತೂ ಸ್ವೀಕಾರಮಾಡಿದ್ದ – ತಲೆಬಾಗಿ. ಸಾವು ಗಂಗೆಯ ದಡದಲ್ಲಿ ಬಂದರಾದೀತೆಂದು ಅಲ್ಲಿ ಬಿಡಾರಹೂಡಿದ್ದ. ತನ್ನ ನಿರಂತರ ಹರಿವಿನಲ್ಲಿ ಅದೆಷ್ಟು ಸಾವುಗಳನ್ನು ಕಂಡಿದ್ದಳೋ ಜೀವನದಿ ಗಂಗೆ! ದೊರೆಯಾದ್ದರಿಂದ ಅವನ ಜತೆ ತುಂಬ ಜನ. ಎಲ್ಲರಲ್ಲೂ ಹೇಳಲಾಗದ ಒಂದು ಉದ್ವೇಗ. ದೊರೆ ಏನು ಮಾಡಿದರೂ ಅದೊಂದು ದೊಡ್ಡ ಆಚರಣೆಯಲ್ಲವೆ?
ಹೀಗೆ ಗಂಗೆಯ ದಡದಲ್ಲಿ ಶುಕಮುನಿ ಮತ್ತು ಪರೀಕ್ಷಿದ್ರಾಜ ಮೊದಲಬಾರಿಗೆ ಸಂಧಿಸಿದರು. ಮೊದಲ ಬಾರಿಗೆ ಒಬ್ಬರನ್ನೊಬ್ಬರು ನೋಡಿದರು. ಶುಕನಾದರೋ ಮಹಾಕವಿಯಾದ ವ್ಯಾಸರ ಜ್ಞಾನದ ಉತ್ತರಾಧಿಕಾರಿ. ಪರೀಕ್ಷಿದ್ರಾಜ ವ್ಯಾಸರ ಮಹಾಕೃತಿಯಾದ ಮಹಾಭಾರತದ ನಾಯಕರಾದ ಪಾಂಡವರ ವಂಶದ ಕುಡಿ. ಈಗಲಂತೂ ಶಾಪಗ್ರಸ್ತ; ಇತಿಹಾಸವೇ ಶಾಪಗ್ರಸ್ತವಾದಂತೆ. ಮಹಾಭಾರತವನ್ನು ರಚನೆಮಾಡಿಯೂ ವ್ಯಾಸರ ದುಗುಡ ಇಲ್ಲವಾಗಿರಲಿಲ್ಲ. ಹೆಚ್ಚೇ ಆಗಿತ್ತು. ಅದು ಆ ಇತಿಹಾಸದ ಪ್ರಭಾವವೇ ಇರಬಹುದು. ಈಗ ಆ ಇತಿಹಾಸವನ್ನೇ, ಇನ್ನೊಂದು ದೃಷ್ಟಿಯಿಂದ ನೋಡುವಂತೆ, ಶುಕಮುನಿ ದೊರೆಯನ್ನು ನೋಡುತ್ತಿದ್ದ. ಇತಿಹಾಸಕ್ಕೆ ಒಳಪಟ್ಟೂ ಒಳಪಡದಂತೆ ಇದ್ದ ಈ ಕುಡಿ ಮೀಸೆಯ ಜ್ಞಾನಿಯನ್ನು ಬದುಕಿನಕೊನೆಯ ಅಂಕಕ್ಕೆ ಸಿದ್ಧನಾದ ದೊರೆ ಕೂಡ ನೋಡುತ್ತಿದ್ದ. ಮೇಲ್ನೋಟಕ್ಕೆ ಎಂಥ ವೈದೃಶ್ಯ! ಆದರೆ ಆಳದಲ್ಲಿ ಎರಡು ಉದ್ವೇಗಗಳಿಗೂ ಪರಸ್ಪರ ಗುರುತುಹತ್ತಿತು. ಅದು ಪ್ರೇಮ ಮೂಡಿದ ಗಳಿಗೆ!
ಈ ಹಂತದಲ್ಲಿ ಭಾಗವತಕ್ಕೆ ಶುಕನನ್ನು ಬಾಯ್ತುಂಬ ಬಣ್ಣಿಸದೆ ನೆಮ್ಮದಿ ಇಲ್ಲವಾಗಿದೆ. ಪೂರ್ತಿ ಬಯಲಾದ ದಿಗಂಬರ ಮುನಿಯನ್ನು ಕಂಡಾಗ, ಏನೋ ಅತ್ಯಮೂಲ್ಯವಾದುದನ್ನು ಈತ ಅಡಗಿಸಿಟ್ಟುಕೊಂಡಿರುವಂತೆ ಭಾಗವತಕ್ಕೆ ಅನಿಸುತ್ತಿದೆ. ಶುಕನ ಬಣ್ಣನೆಗೆ ಮೀಸಲಾದ ನಾಲ್ಕು ಧನ್ಯ ಹಾಡುಗಳಿವೆ. ಈ ವರ್ಣನೆ ಕೃಷ್ಣನ ವರ್ಣನೆಯನ್ನು ಹೋಲಿಯೇ ಹೋಲುತ್ತದೆ. ಹೇಗಿದ್ದ ಶುಕಮುನಿ! ಹದಿನಾರು ವರ್ಷದ ತಾರುಣ್ಯ. ಪಾದದಿಂದ ಹಿಡಿದು ಕೆನ್ನೆಯತನಕ ಎಲ್ಲ ಅಂಗಗಳೂ ಅಷ್ಟು ಸುಕುಮಾರ. ಅಷ್ಟು ಮುದ್ದು ಮುದ್ದು! “ಸುಕುಮಾರ ಪಾದಕರೋರು ಬಾಹ್ವಂಸ ಕಪೋಲಗಾತ್ರಮ್”! ಸೌಕುಮಾರ್ಯವೇ ಬೆಳೆಯುತ್ತ ಹೋದಂತೆ! ಬಾಗಿದ ಹುಬ್ಬುಗಳ ಚೌಕಟ್ಟಿನ ಕೆಳಗೆ ಚಿತ್ರ ಬರೆದಂತೆ ಮುಖ. ಆ ಮುಖವನ್ನು ಆಗಾಗ್ಗೆ ಮುತ್ತುವ ವಿಕೀರ್ಣ ಕೇಶರಾಶಿ. ಮೋಡಗಳು ಚಂದಿರನ ಜತೆ ಚಿನ್ನಾಟವಾಡಿದಂತೆ. ಆ ಕಣ್ಣುಗಳೋ! ಲೋಕವನ್ನು ಮೀರಿ ಆಚೆಗೆ ನೋಟ ನೆಟ್ಟಿರಬೇಕಾದರೆ ಎಷ್ಟು ವಿಶಾಲವಾಗಿರಬೇಡ! ಆ ಕೊರಲೋ. ಅದು ಶಂಖದಸುಳಿ. ತುಟಿಗಳಲ್ಲಿ ಸ್ವಲ್ಪವೇ ಬಿರಿದಿರುವ ಆ ನಸುನಗು. ಸ್ತ್ರೀಯರಿಗೆ ಆ ನಗುವನ್ನು ಎಷ್ಟು ನೋಡಿದರೂ ಸಾಲದು ಎನ್ನುವುದಕ್ಕೆ ಭಾಗವತ ಮರೆಯುವುದಿಲ್ಲ. “ಸ್ತ್ರೀಣಾಂ ಮನೋಜ್ಞಂ ರುಚಿರಸ್ಮಿತೇನ”. ಏನು, ವ್ಯಾಸರಿಂದ ಭಾಗವತವನ್ನು ಕೇಳಿ ಶುಕಮುನಿ, ಕೃಷ್ಣನೇ ಅಗಿಬಿಟ್ಟನೋ ಹೇಗೆ! ಹೋ! ತಲೆಯಲ್ಲಿ ನವಿಲುಗರಿ, ಕೊಳಲು ಮತ್ತು ಪೀತಾಂಬರ – ಈ ಮೂರು ಗುರುತುಗಳಿಲ್ಲ. ಇಂದೇಕೆ ಈ ಮೂರನ್ನು ಬಿಟ್ಟು ಬಂದ ಎಂದು ಹೆಂಗಸರು ತಮ್ಮಲ್ಲೇ ಪಿಸುಮಾತನಾಡಿಕೊಂಡರೆಂದು ಭಾಗವತ ಹೇಳುವುದಿಲ್ಲ – ಅಷ್ಟೇ. ಹೀಗೆ, ಕೃಷ್ಣನನ್ನು ನೆನಪಿಸುವಂತೆ ಶುಕನನ್ನು ಬಣ್ಣಿಸುವುದು ಒಂದು ಅರ್ಥಪೂರ್ಣಸಂದರ್ಭ. ಅದನ್ನು ಒಂದು ಹೆಜ್ಜೆ ಮುಂದುಹೋಗಿ ನೋಡೋಣ.
ಇಂಥ ಶುಕನನ್ನು ಕಂಡು ಪರೀಕ್ಷಿದ್ರಾಜನಿಗೆ ಆಶ್ಚರ್ಯ; ಸಂತೋಷ ಮತ್ತು ದುಗುಡ, ಹೆಚ್ಚಳದಲ್ಲಿ ಉಂಟಾದವು. ಏಕಕಾಲದಲ್ಲಿ ಉಂಟಾದವು. ಇವರಿಬ್ಬರೂ ಹೀಗೆ ಪರಸ್ಪರ ನೋಡುವುದನ್ನು ಇನ್ನೆರಡು ಕಣ್ಣುಗಳೂ ಪರವಶವಾಗಿ ನಿಟ್ಟಿಸುತ್ತಿದ್ದವು. ಅದು ನಮ್ಮ ಸೂತಪುರಾಣಿಕನದು. ಅವನು ದೊರೆಯ ಪರಿವಾರದಲ್ಲಿ ಸೇರಿಕೊಂಡಿದ್ದ. ಸಾವು ಖಚಿತವಾದವನಿಗೆ ಮಾತಿನಲ್ಲಿ ರುಚಿ ಉಂಟಾಗೋದು ಹೇಗೆ ಎಂಬ ದುಗುಡದಲ್ಲಿದ್ದ ಸೂತಪುರಾಣಿಕ. ಶುಕನನ್ನು ಕಂಡು ಹೀಗೆಂದು ಹೇಳಲಾಗದ ಕಾರಣಕ್ಕೆ ಅವನ ಮನಸ್ಸಿಗೆ ಒಂದು ಗೆಲವಿನ ಭಾವ ಉಂಟಾಗಿರಬೇಕು.
ದೊರೆ ಶುಕನನ್ನು ಸತ್ಕರಿಸಿದ. ಇವರಿಬ್ಬರ ಸುತ್ತ ಏನೋ ನಿರೀಕ್ಷೆಯುಂಟಾದಂತೆ ಜನ ಸಭೆಗೂಡಿತು. ಇಬ್ಬರಿಗೂ ಲೋಕಾಂತವೇ ಏಕಾಂತ. ಈಗ ತನ್ನ ಅಂತ:ಕರಣದಲ್ಲಿ ಕಾಡುತ್ತಿದ್ದ ಪ್ರಶ್ನೆಯೊಂದನ್ನು ದೊರೆ ಶುಕಮುನಿಯ ಮುಂದಿಟ್ಟ. ಅವನನ್ನು ಕಾಡುತ್ತಿದ್ದ ಪ್ರಶ್ನೆ ಇದು. “ಪುರುಷಸ್ಯೇಹ ಯತ್ಕಾಯಕಂ ಮ್ರಿಯಮಾಣಸ್ಯ ಸರ್ವಥಾ” – ಸಾವು ಎಂಬುದು ಕಟ್ಟಿಟ್ಟ ಬುತ್ತಿಯಾಗಿರುವ ಈ ಬಾಳಿನಲ್ಲಿ ಮನುಷ್ಯಜೀವಿ ನಿಜಕ್ಕೂ ಮಾಡಬೇಕಾಗಿರುವುದೇನು? ಪ್ರಶ್ನೆ ಬರಿಯ ಬೌದ್ಧಿಕ ಕುತೂಹಲದ ಪ್ರಶ್ನೆ ಅಲ್ಲ. ಪ್ರಶ್ನಿಸುತ್ತಿರುವ ದೊರೆಗೆ ಸಾವಿನ ಬುತ್ತಿ ನಿಜಕ್ಕೂ ಬಿಚ್ಚಿಕೊಂಡಿದೆ. ಹದಿನಾರು ವರ್ಷದ ಮುನಿ ಇದಕ್ಕೆ ಉತ್ತರಿಸಬೇಕು. ಶುಕನಿಗೆ ಅನ್ನಿಸಿತು. ತಾನು ಹೇಳಲೇಬೇಕೆಂದಿರುವುದನ್ನು ಬಿಚ್ಚಿಡುವಂತೆ, ಅದರೊಡಲಿನಿಂದಲೇ ಈ ಪ್ರಶ್ನೆ ಹುಟ್ಟಿಕೊಂಡಿದೆ. ಮರುಕ್ಷಣ ಅನ್ನಿಸಿತು. ಬದುಕಿಗೆ ಈ ಪ್ರಶ್ನೆಯೊಂದು- ಬ್ರಹ್ಮಾಸ್ತ್ರವಿದ್ದಂತೆ! ಶುಕಮುನಿಯ ನಸುನಗು ಇನ್ನಷ್ಟು ಅರಳಿಕೊಂಡಿತು. ತಂದೆ ವ್ಯಾಸರು ಹೇಳಿದ ಪರೀಕ್ಷಿತನ ಜನನದ ಕಥೆ ಮುನಿಯ ಮನದಲ್ಲಿ ಮಿಂಚಿತು. ತನ್ನೊಡಲಲ್ಲಿರುವ ಮಗುವನ್ನು ತಾಯಿಗೆ ನೋಡಲು ಸಾಧ್ಯವಾಗುವುದಾದರೆ ಆಕೆ ಹೇಗೆ ನೋಡಬಹುದು – ಹಾಗೆ – ಅಂಥ ಪ್ರೇಮಸೂಸುವ ನೋಟದಿಂದ ಶುಕ, ದೊರೆಯನ್ನೊಮ್ಮೆ ನೋಡಿದ. ಪರೀಕ್ಷಿತನ ಹಿನ್ನೆಲೆಯಲ್ಲಿತ್ತು ಬ್ರಹ್ಮಾಸ್ತ್ರದ ಕಥೆ!
ಮಹಾಭಾರತಯುದ್ಧದ ಕೊನೆಯಕ್ಷಣಗಳ ಕಥೆಯಿಂದ ಭಾಗವತ ತೊಡಗುತ್ತೆ. ಅದು ದ್ರೋಣಪುತ್ರನಾದ ಅಶ್ವತ್ಥಾಮನ ದ್ವೇಷದಾರುಣವಾದ ಕೊಲೆಗೆಲಸದ ಕಥೆ. ದುರ್ಯೋಧನ ತೊಡೆಮುರಿದು ಬಿದ್ದ ಮೇಲೆ ಅವನಪಾಂಡವದ್ವೇಷವನ್ನೆಲ್ಲ ತಾನು ಬಳುವಳಿ ಪಡೆದವನಂತೆ ಈ ಅಶ್ವತ್ಥಾಮ ಹುಚ್ಚನಂತೆ ಕೆರಳಿನಿಂತಿದ್ದ. ನಿಜಕ್ಕೂ ಧರ್ಮರಾಯ ದ್ರೋಣರನ್ನು ನಿವಾರಿಸುವುದಕ್ಕಾಗಿ “ಅಶ್ವತ್ಥಾಮೋ ಹತ:” ಎಂದಿದ್ದನಲ್ಲ- ಆಗ ಅಶ್ವತ್ಥಾಮ ಸತ್ತಿದ್ದರೇ ಒಳ್ಳೆಯದಿತ್ತು. ಹಾಗೆ ದುರ್ಯೋಧನನಿಗೂ ಅನ್ನಿಸಿರಬಹುದು! ಕ್ಷತ್ರಿಯೋಪಜೀವಿಯಾಗಿದ್ದ ಈ ಬ್ರಾಹ್ಮಣ, ಇರುಳು ಶಿಬಿರದಲ್ಲಿ ಮಲಗಿದ್ದ ದ್ರೌಪದಿಯ ಮಕ್ಕಳ ತಲೆ ತರಿದು ತಂದ. ತೊಡೆಕಳೆದುಕೊಂಡು ಸಾಯುತ್ತಿರುವ ದುರ್ಯೋಧನನ ಇಲ್ಲದ ಮಡಿಲಲ್ಲಿ ಆ ತಲೆಗಳನ್ನು ಹಾಕುವುದಕ್ಕೆ. ಇಷ್ಟು ಸಾಲದೆಂಬಂತೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಲು. ಯುದ್ಧದಕೊನೆಯಲ್ಲಿ ನಾಯಕ ಅಸುನೀಗಿದ ಮೇಲೆ ಇವನದು ಬ್ರಹ್ಮಾಸ್ತ್ರ ಪ್ರಯೋಗ! ಕೃಷ್ಣಾರ್ಜುನರು ಇದನ್ನೆಲ್ಲ ನಿವಾರಿಸಿದರು. ಆದರೂ ಅಶ್ವತ್ಥಾಮನಿಗೆ ಉಪಸಂಹಾರವಿಲ್ಲ! ಕೊನೆಯದಾಗಿ. ಅಭಿಮನ್ಯುವಿನ ಮಡದಿ ತುಂಬಿದ ಬಸುರಿ ಉತ್ತರೆಯನ್ನು ಲಕ್ಷಿಸಿ ಬ್ರಹ್ಮಾಸ್ತ್ರವನ್ನು – ಅದು ಬ್ರಹ್ಮಾಶಿರೋಸ್ತ್ರವಂತೆ – ಪ್ರಯೋಗಮಾಡಿದ. ಉತ್ತರೆಯ ಒಡಲಲ್ಲಿ ಪರೀಕ್ಷಿತ ಬೆಳೆಯುತ್ತಿದ್ದ. ಪ್ರಯೋಗ ಮಾಡಿದ್ದಾದರೂ ಎಂಥ ಹೊತ್ತಲ್ಲಿ? ಯುದ್ಧದಲ್ಲಿ ಮೃತರಾದವರಿಗೆ – ಅವರಲ್ಲಿ ಅಭಿಮನ್ಯುವೂ ಒಬ್ಬ – ಗಂಗೆಯಲ್ಲಿ ಕಂಬನಿಯ ತರ್ಪಣ ಕೊಡುವ ಹೊತ್ತು! ಆಗ ಉತ್ತರೆ ಗೋಳಿಡುತ್ತ, ಅಸ್ತ್ರದ ಆಘಾತಕ್ಕೆ ಬೆದರಿ, ಓಡಲಾರದೆ ಓಡುತ್ತ, ಕೃಷ್ಣನ ಬಳಿ ಬಂದು – ಬೇರೆ ಯಾರ ಬಳಿಯೂ ಅಲ್ಲ – ಮೊರೆ ಇಟ್ಟಳು. ಲೋಕದ ಎಲ್ಲ ತಾಯಂದಿರ ಮೊರೆ ಅದು. “ತನಗೆ ಏನು ಬೇಕಾದರೂ ಆಗಲಿ. ಆದರೆ ಮಗು ಬದುಕಲಿ”.
ಕೃಷ್ಣನಂಥ ಕೃಷ್ಣನಿಗೆ ತನ್ನ ಬಾಲ್ಯವೊಮ್ಮೆ ಮನದಲ್ಲಿ ಸುಳಿದಿರಬೇಕು. ತಾನು ಹುಟ್ಟ ಬೇಕಾದರೇ ಎಷ್ಟು ಮಕ್ಕಳನ್ನು ಕಂಸ ಕೊಂದಿದ್ದ. ಎಷ್ಟು ಮಕ್ಕಳು ಸತ್ತು ತಾನು ಹುಟ್ಟಿದೆ. ಆ ಎಲ್ಲ ಮಕ್ಕಳ ತಾಯಂದಿರ ದು:ಖ ಉತ್ತರೆಯ ದು:ಖದಲ್ಲಿದ್ದಂತೆ ಕೃಷ್ಣನಿಗೆ ಅನಿಸಿತು. “ಹೌದು. ಈ ಮಗುವನ್ನು ಪೊರೆಯುವುದು ತನ್ನ ಕರ್ತವ್ಯ”.
ಈ ಅಶ್ವತ್ಥಾಮನಾದರೂ ಎಂಥವ? ಇನ್ನೂ ಹುಟ್ಟದ ಮಗುವಿಗೆ ಈತ ಬಾಣ ಎಸೆಯಬಲ್ಲನಂತೆ! ‘ಇದು ಏಕಾಗ್ರತೆಯ ಕೇಡು! ಅರಿವಿನ ಕೇಡಿನಂತೆ ಈ ಏಕಾಗ್ರತೆಯ ಕೇಡುಕೂಡ. ಇವನನ್ನು ಪಡೆದ ತಾಯಿ-ತಂದೆಗೆ ಇದು ಇವನ ಕೊಡುಗೆ. ಅಯ್ಯೋ; ಈ ಅಶ್ವಾತ್ಥಾಮನಿಗೆ ಹಾಲು ಕುಡಿಸಲೆಂದು ಹಸ್ತಿನಾವತಿಯ ಕ್ಷತ್ರಿಯರಲ್ಲಿ ವೃತ್ತಿ ಮಾಡಿದ ದ್ರೋಣನ ವಿಧಿಯೇ.
ಕೃಷ್ಣ ಈ ಗ ತನ್ನ ಸುದರ್ಶನವನ್ನೆತ್ತಿಕೊಂಡ. ಮಗುವನ್ನು ತಾಯನ್ನೂ ಇಬ್ಬರನ್ನೂ ಕಾಪಾಡಿದ. ಇಬ್ಬರೂ ಹೋಗಲಿ ಎಂದು ಪ್ರಯೋಗ ಮಾಡಿಬಿಟ್ಟ ಬ್ರಹ್ಮಾಸ್ತ್ರ ಅದು. ಇಬ್ಬರನ್ನೂ ಕಾಪಾಡಿದ ಕೃಷ್ಣ – ದೊಡ್ಡ ಹತ್ಯಾಕಾಂಡವೊಂದರ ಕೊನೆಯಲ್ಲಿ! ಹಾಗೆ ಕಾಪಾಡುವ ಸಂದರ್ಭದಲ್ಲಿ, ಉತ್ತರೆಯ ಗರ್ಭದಲ್ಲಿರುವಂತೆಯೇ, ಮಗು ಪರೀಕ್ಷಿತನಿಗೆ ಅಂಗುಷ್ಠ ಪ್ರಮಾಣದ ಪುರುಷನಾಗಿ ಕೃಷ್ಣ ಕಾಣಿಸಿಕೊಂಡಿದ್ದ. ಅದು ಇನ್ನೂ ಹುಟ್ಟದ ಮಗುವಿಗೆ ಹತ್ತಿದ ಗುರುತು! ಅದು ಜನ್ಮಾಂತರಗಳಲ್ಲೂ ಮರೆಯದು. ಅಂಗುಷ್ಠ ಎಂದರೆ ಹೆಬ್ಬೆರಳು. ಒಂದು ಹೆಬ್ಬೆರಳಿನ ಪ್ರಮಾಣದ ಪುರುಷ ವಿಗ್ರಹ! ಮಕ್ಕಳು – ಹುಟ್ಟಿದ ಮೇಲೆ – ಹೆಬ್ಬೆರಳು ಚೀಪುವುದು ಇದಕ್ಕೇ ಏನು!
ಆಗ ಪರೀಕ್ಷಿತನಿಗೆ ಕೃಷ್ಣ ಹಾಗೆ ಕಣ್ಣ ಮುಂದೆ ನಿಂತಿದ್ದ.
ಈಗ ಮತ್ತೊಮ್ಮೆ ಬಂದಿದೆ ಜೀವನ್ಮರಣ ಪ್ರಶ್ನೆ. ಪ್ರಶ್ನೆ ಎಂಬ ಬ್ರಹ್ಮಾಸ್ತ್ರ ಕಾಡುತ್ತಲೇ ಇದೆ. “ಸಾವೆಂಬುದು ಕಟ್ಟಿಟ್ಟ ಬುತ್ತಿಯಾಗಿರುವ ಈ ಬಾಳಿನಲ್ಲಿ ಮನುಷ್ಯಜೀವಿ ನಿಜಕ್ಕೂ ಮಾಡಬೇಕಾದುದೇನು?” ಆಗ ಕೃಷ್ಣ; ಈಗ ಶುಕಮುನಿ, ಪರೀಕ್ಷಿತನ ಕಣ್ಣ ಮುಂದೆ ನಿಂತಿದ್ದಾನೆ. ಇನ್ನೂ ಹುಟ್ಟದ ಮಗುವಿನ ಮುಗ್ಧತೆಯೇ ಮುಂದೆ ನಿಂತಂತಿದೆ. ಒಡಲಲ್ಲಿರುವ ಮಗುವಿಗೆ, ಅಲ್ಲೇ ಕಾಣಿಸಿಕೊಳ್ಳಬೇಕಾದರೆ, ಅದೇಅಜಾತಮುಗ್ಧತೆ ಇರಬೇಕಲ್ಲವೆ!
ಪರೀಕ್ಷಿದ್ರಾಜ ಏನು ತನ್ನನ್ನೇ ನೋಡುತ್ತಿದ್ದಾನೋ, ತನ್ನ ಇಷ್ಟದೈವ ಕೃಷ್ಣನನ್ನು ನೋಡುತ್ತಿದ್ದಾನೋ, ಶುಕಮುನಿಯನ್ನು ನೋಡುತ್ತಿದ್ದಾನೋ! ಭಾಗವತಕ್ಕೆ, ಶುಕಮುನಿಯನ್ನು ಕೃಷ್ಣನಂತೆ ಬಣ್ಣಿಸದಿರುವುದು ಅಸಾಧ್ಯ.
ತೋಳ್ಪಾಡಿ ಭಾಗವತ ಕಥಾ 7 : ಭಯವ ನಟಿಸುವ ಬಾಲಕ, ಭಯ ನಿವಾರಕ ಭಗವಂತ
ಕಥೆ, ನೇರವಾಗಿ ಮುಂದಕ್ಕೆ ಚಲಿಸುವ, ವೇಗವಾಗಿ ಗುರಿಮುಟ್ಟಿ ಯಶಸಾಧಿಸಿದೆನೆಂದುಕೊಳ್ಳುವ ನಾಗರಿಕ ವಾಹನವಲ್ಲ. ಕಥೆಗೆ ಗಾಲಿಗಳಿವೆ. ಅವು ನೆನಪಿನ ಗಾಲಿಗಳು. ಅವು ಸಾಗುವ ಹಾದಿಕೂಡ ನೆನಪಿನ ಹಾದಿ; ಅರಿವು-ಮರೆವಿನ ಹಾದಿ. ನಡುನಡುವೆ ಕಳೆದುಹೋದದ್ದರ ಗುರುತಾಗುವ ಹಾದಿ. ಹಾಗೆ ಗುರುತಾದಾಗಲೆಲ್ಲ ಕಥೆ ಸದ್ಯಕ್ಕೆ ಗುರಿಮುಟ್ಟಿದಂತೆಯೇ. ಹಾದಿಯೇ ಗುರಿ. ನಡಿಗೆಯೇ ಗುರಿ. ವ್ಯಾಸ-ಶುಕರ ನಡುವಣ, ಹಾಗೆಯೇ ವ್ಯಾಸ-ನಾರದರ, ಶೌನಕ-ಸೂತಪುರಾಣಿಕರ, ಶುಕ-ಪರೀಕ್ಷಿತರ ನಡುವಣ ಸಂಬಂಧಗಳೆಲ್ಲ, ರೂಪಾಂತರಗೊಂಡರೂ ಪರಸ್ಪರ ಗುರುತು ಉಳಿಸಿಕೊಂಡ ಸಂಬಂಧಗಳೇ ಆಗಿ ಈ ನೆನಪಿನ ಹಾದಿಯಲ್ಲಿ ನೆಟ್ಟಿವೆ. ಕಥೆಯಲ್ಲಿ ಪ್ರಶ್ನೆ-ಉತ್ತರ ಎಂಬ ವಿನ್ಯಾಸವಿದ್ದರೂ, “ಪ್ರಶ್ನೆ” ಹೇಗೆ ಹುಟ್ಟಿಕೊಂಡಿತು, ಪ್ರಶ್ನೆಯ ಹಿಂದೆ ಇರುವ “ಕಥೆ” ಏನು? ಅದರ ಜಾಡೇನು, ಆ ಜಾಡಿನಗುಂಟ ನಡೆದು ನೋಡೋಣವೇ ಎಂಬೀ ಪರಿಯ ನಡಿಗೆಯಾದುದರಿಂದ ಕಥೆ ಹಿಂದಕ್ಕೆ-ಮುಂದಕ್ಕೆ ಓಲಾಡುತ್ತ ಸಾಗುತ್ತದೆ. ಬದುಕಿನ ತಿಳುವಳಿಕೆ ಎನ್ನುವುದು ಹೀಗೆ ಓಲಾಡುತ್ತಾ ಹರಿಯುತ್ತಿರುವಂತೆಯೇ ಹುಟ್ಟಿಕೊಳ್ಳುವಂಥದು- ಎನಿಸುತ್ತದೆ.
ಅಶ್ವತ್ಥಾಮನ ಪ್ರಸಂಗವನ್ನೇ ನೋಡಿ:
ದ್ರೌಪದಿಯ ಐದುಮಂದಿ ಮಕ್ಕಳನ್ನು ಅಶ್ವತ್ಥಾಮ ತರಿದುಕೊಂದಿದ್ದ. ಭೀಮಾರ್ಜುನರು ಈ ನೀಚನನ್ನು ಹಿಡಿದು ತಂದು ದ್ರೌಪದಿಯ ಮುಂದೆ ಕೆಡವಿದ್ದರು. ಇಂಥವನು ಬದುಕಿ ಇರಬಾರದೆಂದು ಬೊಬ್ಬಿರಿಯುತ್ತಿದ್ದರು. ಆಗ ದ್ರೌಪದಿಯಂಥ ದ್ರೌಪದಿ ಹೇಳಿದಳು: “ಮಕ್ಕಳನ್ನು ಕಳೆದುಕೊಂಡ ತಾಯಂದಿರ ದು:ಖ ಎಂಥದೆನ್ನುವುದು ಈಗ ತಿಳಿಯುತ್ತಿದೆ. ಇವನೆಂಥ ನೀಚನೇ ಆದರೂ ಇವನ ತಾಯಿಗೆ ಮಗನನ್ನು ಕಳೆದುಕೊಂಡ ದು:ಖವನ್ನು ಉಂಟುಮಾಡುವುದು ಬೇಡ. “ಮಾರೋದೀದಸ್ಯ ಜನನೀ”.
ಮಹಾಭಾರತದ ಅಗ್ನಿಕನ್ಯೆ ಈಗ ಯುದ್ಧದ ಕೊನೆಯಲ್ಲಿ ಆರ್ದ್ರಳಾಗಿದ್ದಳು! ದು:ಖ ನಿಜವಾದದ್ದಾಗಿದ್ದರೆ ಅದನ್ನು ತೋಡಿಕೊಂಡ ಮಾತ್ರಕ್ಕೆ ನಿರಾಳವಾಗುವುದು ಸಾಧ್ಯವಿಲ್ಲ ಎಂದು ತಿಳಿದಿದ್ದಳು.
ದ್ರೌಪದಿ ಆರ್ದ್ರಳಾದಳಾ ಎಂದರೆ ಭೀಮಸೇನನಿಗೆ ಕಣ್ಣು ಹನಿಯಿತು.
ಅವನು ದ್ರೌಪದಿಯ ಕೇಶಪಾಶವನ್ನು ಇನ್ನೊಮ್ಮೆ ನೇವರಿಸಿರಬೇಕು!
ಆದರೆ ಅಶ್ವತ್ಥಾಮ? ದ್ರೌಪದಿಯಿಂದ ಇಂಥ ಮಾತು ಕೇಳುವ ಭಾಗ್ಯ ಅವನದಾಗಿತ್ತು.
ದ್ರೌಪದಿಯ ಮಾತು ಕೇಳಿಯೇ ಭೀಮಾರ್ಜುನರು ಅವನನ್ನು ಕೊಲ್ಲದೆ ಬಿಟ್ಟುಬಿಟ್ಟಿದ್ದರು. ಆದುದರಿಂದಲೇ, ತಡಮಾಡದೆ, ಅಶ್ವತ್ಥಾಮ ತಾಯಿಯಾಗಲಿರುವ ಉತ್ತರೆಯ ಒಡಲಿಗೆ ಬ್ರಹ್ಮಾಸ್ತ್ರದ ಪ್ರಯೋಗ ಮಾಡಿದ್ದು!
ದುರ್ಯೋಧನ ಅಸುನೀಗಿದ್ದ. ಆದರೆ ಯುದ್ಧ ಮಾತ್ರ ಮುಂದುವರಿದಿತ್ತು. ಅದು ನಿಲುಗಡೆಯಾಗಿರಲಿಲ್ಲ. ಆಗುವುದೂ ಇಲ್ಲ. ಅಶ್ವತ್ಥಾಮ “ಚಿರಂಜೀವಿ” ಎಂದು ಪ್ರತೀತಿ! ಅಲ್ಲದೆ ಅಶ್ವತ್ಥಾಮನಿಗೆ “ಪ್ರಯೋಗ” ಮಾತ್ರ ಗೊತ್ತು; ಬ್ರಹ್ಮಾಸ್ತ್ರದ “ಉಪ-ಸಂಹಾರ” ತಿಳಿದಿರಲಿಲ್ಲ ಎಂದು ಮಹಾಭಾರತ ಮತ್ತು ಭಾಗವತಗಳ ಉಕ್ತಿ. ಗುಟ್ಟೇನೆಂದರೆ, “ಉಪ-ಸಂಹಾರ” (ಹಿಂತೆಗೆದುಕೊಳ್ಳುವುದು) ತಿಳಿದಿದ್ದರೆ “ಪ್ರಯೋಗ” ಮಾಡುವ ಕುತೂಹಲ ಕೂಡ ಉಂಟಾಗುವುದಿಲ್ಲ. ಇತರರು ಮಾಡಿದ ಪ್ರಯೋಗವನ್ನು ಉಪ-ಸಂಹಾರ ಮಾಡುವ ಅಗತ್ಯ ಉಂಟಾಗಬಹುದು. ನಿಜಕ್ಕಾದರೆ ಉಪ-ಸಂಹಾರದ ರಹಸ್ಯ ಗೊತ್ತಿದ್ದವನೆಂದರೆ ಕೃಷ್ಣ ಮಾತ್ರ.‘ಉಪಸಂಹಾರ’ವೆಂದರೆ ಸೃಷ್ಟಿಶೀಲತೆಯ ಇನ್ನೊಂದು ಮುಖ! ಉದ್ವೇಗವೇ ಉಪ-ಶಾಂತವಾಗಿ ಪರಿಣತಿಗೊಳ್ಳುವ ಮುಖ. ರಕ್ತಿ-ವಿರಕ್ತಿಗಳ ಸಂಬಂಧದಂತೆ ಕೃಷ್ಣ ಉತ್ತರೆಯ ಮಗು ಪರೀಕ್ಷಿತನನ್ನು ಪೊರೆದದ್ದೆಂದರೆ ಎಲ್ಲಿ ಉದ್ವೇಗಗಳ ಉಪಸಂಹಾರ ಮಂತ್ರವನ್ನು ನುಡಿದಂತೆ ಇತ್ತು. ತಾಯ ಒಡಲು ಸುರಕ್ಷಿತವಲ್ಲ ಎಂದು ಅಲ್ಲಿರುವ ಮಗು ತಿಳಿಯುವಂತಾದರೆ ಗತಿ ಏನು? ಆಗ “ಲೋಕಕ್ಷೇಮ” ಎನ್ನುವ ಮಾತಿಗೆ ಏನರ್ಥ ಉಳಿಯುತ್ತದೆ? ತಾಯ ಒಡಲು ಭಯವಿಲ್ಲದ ಜಾಗ ಎಂದಷ್ಟೇ ಕೃಷ್ಣ ತೋರಿಸಿದ. ಅವನು ದೇವಕಿ ಮತ್ತು ಯಶೋದಾ ಹೀಗೆ ಇಬ್ಬರು ತಾಯಿಂದಿರ ಕೂಸು ಅಲ್ಲವೆ!
ಇದು ಭಾಗವತದ ಆರಂಭ. ಎಂಥ ಆರಂಭ!
ಹೀಗೆ ಪಾಂಡವವಂಶದ ಒಂದೇ ಒಂದು ಕುಡಿ ಬದುಕಿ ಉಳಿಯಿತು. ಇದೆಲ್ಲವನ್ನೂ ದಿಗ್ ಭ್ರಾಂತಳಾಗಿ ನೋಡುತ್ತಿದ್ದಳು ಕುಂತಿ. ಪಾಂಡವರ ತಾಯಿ. ಮೊಮ್ಮಕ್ಕಳನ್ನು ಕಳೆದುಕೊಂಡ ವೃದ್ಧ ರಾಜಮಾತೆ. ವಾವೆಯಲ್ಲಿ ಕೃಷ್ಣನಿಗೆ ಸೋದರತ್ತೆ. ಇದ್ದಕಿದ್ದಂತೆ, ಇದೆಲ್ಲವನ್ನೂ ನೋಡುತ್ತಿದ್ದಂತೆ, ಕುಂತಿಗೆ ಬದುಕಿನ ಸತ್ಯದರ್ಶನದ ಮಿಂಚೊಂದು ಕೊರೈಸಿದಂತೆ ಅನುಭವವಾಯಿತು.
ತಾಯ ಒಡಲಲ್ಲಿ ಮಗುವನ್ನು ಪೊರೆಯುವವನು ಬೇರೊಬ್ಬನಿದ್ದಾನೆ! ಅವನು ಮಗುವಿನ ಜತೆಗೇ ಇದ್ದಾನೆ. ಎಂಥ ಜತೆಗಾರ! ಹೊಕ್ಕುಳ ಬಳ್ಳಿಯೂ ತುಂಡಾಗುತ್ತದೆ. ತುಂಡಾಗಲೇಬೇಕು. ಆದರೆ ಈ ಜತೆಗಾರಿಕೆ ಮಾತ್ರ ತುಂಡಾಗುವುದಿಲ್ಲ. ತುಂಡಾಗದ ಹೊಕ್ಕುಳಬಳ್ಳಿಯ ನಂಟು ಹೊತ್ತ ದೈವವಿದು! ಮಗು ಹುಟ್ಟಿದ ಮೇಲೂ ಅವನೇ ಅಗೋಚರ-ನಿರಂತರ ಜತೆಗಾರ. ಅಂದಮೇಲೆ ಮಗುವನ್ನು ಮಾತ್ರ ಅಲ್ಲ; ತಾಯಿಯನ್ನೂ ಪೊರೆಯುವವನು ಅವನೇ. ತಾಯಿಯೂ ಮಗುವಾಗಿಯೇ ಇದ್ದವಳಲ್ಲವೆ? ಪೊರೆಯುವುದೆಲ್ಲವೂ ತಾಯಿಯೇ ಅಲ್ಲವೆ? ಹಾಗಾದರೆ, ಅವನು ತಾಯ ಒಡಲಲ್ಲಿ ಇದ್ದಂತೆ ಇದ್ದರೂ ನಿಜಕ್ಕೂ ಅವನ ಒಡಲಲ್ಲಿ ನಾವೆಲ್ಲರೂ ಇದ್ದೇವೆ. ಅವನು ನಮ್ಮೊಡಲಲ್ಲಿ ಇದ್ದಂತೆ ತೋರಿಸಿಕೊಳ್ಳುತ್ತಾನಷ್ಟೆ. ಅಂದರೆ ನಮ್ಮಲ್ಲಿ ತಾಯ್ತನದ ಭಾವ ಉಂಟಾಗುವುದಕ್ಕಾಗಿ ಹಾಗೆ ಇದ್ದಾನೇನು? ಏನಿದು ವಿಚಿತ್ರ! ಏನಿದು ಈ ಕೃಷ್ಣನ ರಹಸ್ಯ!
ಕುಂತಿ, ಪಾಂಡವರ ತಾಯಿಯಾಗುವುದಕ್ಕೆ ದೂರ್ವಾಸರು ಕೊಟ್ಟ ಮಂತ್ರಗಳ ಸಹಾಯವಿತ್ತು. ಈಗ ತಮ್ಮ ವಂಶದ ಈ ಕುಡಿಯನ್ನು ಉಳಿಯುವಂತೆ ಮಾಡಿದ ಕೃಷ್ಣ ಮಂತ್ರಗಳೆಲ್ಲದರ ಅಧಿದೇವತೆಯಂತೆ ಕುಂತಿಗೆ ಭಾಸವಾಗಿರಬೇಕು.
ಈ ಎಲ್ಲ ಭಾವಗಳ – ಹೊಳಹುಗಳ ಹೊಯಿಲಿನಲ್ಲಿ ಸಿಕ್ಕಿ ಕುಂತಿಯ ಮುಖದಿಂದ ಕೃಷ್ಣನನ್ನು ಕುರಿತ ಅಪೂರ್ವ ಸ್ತುತಿಯೊಂದು ಹೊಮ್ಮಿ ಬಂತು ಎನ್ನುತ್ತದೆ ಭಾಗವತ. ಇಪ್ಪತ್ತಾರು ಹಾಡುಗಳಲ್ಲಿ ಹರಿದು ಬಂದಿರುವ ಈ ಭಾವಗೀತಾತ್ಮಕವಾದ ಸ್ತುತಿಯಲ್ಲಿ, ಕೃಷ್ಣನೆಂಬ ತತ್ತ್ವವು ಪ್ರಕೃತಿಯ ಆಚೆಗೂ ಚಾಚಿರತಕ್ಕ ಸತ್ಯ ಎಂಬ ಅರಿವಿನಿಂದ ಕೂಡಿದ ತತ್ತ್ವಜ್ಞಾನವಿದೆ – “ಈಶ್ವರಂ ಪ್ರಕೃತೇ: ಪರಂ”.
ಅದು ಒಳಹೊರಗೆಲ್ಲ ವ್ಯಾಪಿಸಿದ್ದರೂ ನಮಗೆ ಕಾಣದೇ ಇದೆಯಲ್ಲ, ಏನಿದು ನಮ್ಮ ಪಾಡು ಎಂಬ ವಿಚಿತ್ರ ವಿಷಾದವಿದೆ – “ಅಲಕ್ಷ್ಯಂ ಸರ್ವಭೂತಾನಾಂ ಅಂತರ್ಬಹಿರವಸ್ಥಿತಮ್”. ಎಲ್ಲೆಡೆ ಇದೆ ಎಂದ ಮೇಲೆ ಅದಕ್ಕೆ ಪ್ರಿಯರಾದವರೂ ಅಪ್ರಿಯರಾದವರೂ ಯಾರೂ ಇರಲಿಕ್ಕಿಲ್ಲ- ಹಾಗಿದೆ ಎಂದು ಭಾವಿಸುವುದು ನಮ್ಮ ಮನಸ್ಸಿನ ಪಾಡಷ್ಟೇ- ಎಂಬ ಸೂಕ್ಷ್ಮ ಅವಲೋಕನವಿದೆ- “ನಯಸ್ಯ ಕಶ್ಚಿತ್ ದಯಿರ್ತೋಸ್ತಿ ಕರ್ಹಿಚಿತ್ ದ್ವೇಷ್ಯಶ್ಚ”. ನಮ್ಮ ಮನಸ್ಸೇ ನಮ್ಮ ಸೆರೆಮನೆಯೋ ಎಂಬ ಆತಂಕವಿದೆ.
ಆ “ನಿಜ”ಕ್ಕೆ ಪರ್ಯಾಯವಾದುದು ಯಾವುದೂ ಇಲ್ಲ ಈ ಲೋಕದಲ್ಲಿ. ಆದರೆ ನಾವು ಜಾತಿ; ಸಂಪತ್ತು; ವಿದ್ಯೆ; ಅಧಿಕಾರಕೇಂದ್ರಗಳನ್ನು ಸೃಷ್ಟಿಸಿ “ನಿಜ”ದ ನಾಮೋಚ್ಚಾರ ಮಾಡುವ ಯೋಗ್ಯತೆಗೂ ಎರವಾಗಿದ್ದೇವೆನ್ನುವ ಕೊರಗು ಇದೆ- “ಜನ್ಮ ಐಶ್ವರ್ಯ ಶ್ರುತ ಶ್ರೀಭಿ: ಏಧಮಾನಮದ: ಪುಮಾನ್ ನೈವ ಅರ್ಹತಿ ಅಭಿಧಾತುಂ”.
“ನಿಜ”ಕ್ಕೆ ಪರ್ಯಾಯಗಳನ್ನು ಸೃಷ್ಟಿಸುವುದೇ ಈ ಲೋಕದ ಸ್ವಭಾವವೋ ಎಂಬ ಸಂದೇಹವಿದೆ.
ಹೇಳಿಕೊಳ್ಳುವುದಕ್ಕೆ ತನ್ನದೆನ್ನುವುದು ಏನೂ, ಯಾವುದೂ ಇಲ್ಲದವರಿಗೆ, ತಮ್ಮ “ನಾಮ”ವೇ ತಮಗೆ ಕೀಳಿರಿಮೆಯನ್ನುಂಟುಮಾಡುವ ಸ್ಥಿತಿಯಲ್ಲಿರುವವರಿಗೆ, “ಸತ್ಯ”ವೇ, ಅದರ “ನಾಮ”ವೇ ನಿಜವಾದ ಸಂಪತ್ತಾಗಿ ಒದಗಿ ಬರುತ್ತದೆನ್ನುವ, “ಸತ್ಯ”ದ ಸೌಲಭ್ಯದ ಬಗೆಗೆ ಸರಳ ಸದಾಶಯವಿದೆ – “ಅಕಿಂಚನಗೋಚರಂ”. ಇಂಥ “ಸತ್ಯ”, ಮಾನುಷರೂಪದಲ್ಲಿ, ಕೃಷ್ಣನಾಗಿ ನಮ್ಮ ನಡುವೆ ನಡೆದಾಡುತ್ತಿದೆಯಲ್ಲ ಎಂಬ ಅಚ್ಚರಿ ಇದೆ. ಕುಂತಿಯಲ್ಲಿ ಯಶೋದೆ ಹೇಳಿದ ಕೃಷ್ಣನ ಶೈಶವದ ತುಂಟಾಟದ ನೆನಪುಗಳಿವೆ. “ನಿನ್ನ ತುಂಟತನ ಅತಿಯಾಯ್ತು, ನಿನ್ನನ್ನು ಹಗ್ಗದಲ್ಲಿ ಕಟ್ಟಿ ಹಾಕಿ ಬಿಡುವೆ” ಎಂದು ಯಶೋದೆ ಗದರಿದಾಗ ಆ ಗದರಿಕೆಗೆ ಹೆದರಿ, ಕಣ್ಣಿಗೆ ತೀಡಿದ ಕಾಡಿಗೆ ಕರಗುವಂತೆ ಅಳುಗರೆಯುತ್ತ ಭಯವನ್ನು ನಟಿಸಿದ ಎಳೆಯ- ಹುಡುಗ- ಎಲ್ಲರ ಭಯವನ್ನು ನಿವಾರಿಸುವ ಭಗವಂತನೇ ಆಗಿದ್ದನೆಂದರೆ- ಇದೇನು! ಎಂಬ ವಿಸ್ಮಯಾತಿಶಯವಿದೆ.
ನಮ್ಮ ಮನಸ್ಸಿನ ಕಟ್ಟುಗಳನ್ನು ಹರಿದು ಬಿಡುಗಡೆಗೊಳಿಸಬಲ್ಲವನು ತಾನು ಹೆದರಿಕೊಂಡ ಆ ಮುಗ್ಧಚಿತ್ರ ತನ್ನಲ್ಲಿ ಇನ್ನಿಲ್ಲದ ಮೋಹದ ಅಲೆಗಳನ್ನು ಎಬ್ಬಿಸುತ್ತದೆ ಎನ್ನುವ ಭಾವೋದ್ವೇಗ ಇದೆ.
ಈ ಎಲ್ಲದರ ನಡುವೆ ಈ ಮಾತು:
“ವಿಪದ: ಸಂತು ನ: ಶಶ್ವತ್ ತತ್ರ ತತ್ರ ಜಗದ್ಗುರೋ
ಭವತೋ ದರ್ಶನಂ ಯತ್ ಸ್ಯಾತ್ ಅಪುನರ್ಭವದರ್ಶನಂ”- ಎಂಬ, ಹೊಳೆ-ಹೊಳೆಯುವ ಮಾತು.
ಬದುಕಿನಲ್ಲಿ ಕಷ್ಟಗಳು ದು:ಖಗಳು (ವಿಪದ:) ಮತ್ತೆ ಮತ್ತೆ ಒದಗಿ ಬರಲಿ. ಅಲ್ಲೊಂದು ದೊಡ್ಡ ಪಾಠವಿದೆ. ಈ ಪಾಠ ಕಲಿಸುವ ನೀನು ನಿಜಕ್ಕೂ ಜಗದ್ಗುರು!
ಏನು ಪಾಠವೆಂದರೆ- ಕಷ್ಟ ಬಂದಾಗ ನಿನ್ನ ನೆನಪಾಗುತ್ತೆ. (ಕಷ್ಟ ಬಂದಾಗ ಯಾರ ನೆನಪಾಗುತ್ತೆ ಅವನು ತಾನೇ ನಿಜವಾದ ಸಖ!) ಆ ನೆನಪಿನಗುಂಟ ನೀನು ನಡೆದುಬರುತ್ತಿ. ನಿನ್ನ ದರ್ಶನವಾಯಿತೆಂದರೆ ಜನ್ಮವೆ ಉಪಸಂಹಾರಗೊಂಡ ಹಾಗೆ. ಮತ್ತೆ ಹುಟ್ಟಿಲ್ಲ. ಯಾಕೆ ಹುಟ್ಟಬಾರದೆಂದರೆ- ಇನ್ನೇನಿಲ್ಲ- ಹುಟ್ಟು ನಿನ್ನ ಮರೆವನ್ನು ಉಂಟುಮಾಡುತ್ತೆ. ನಿನ್ನೊಡಲಲ್ಲಿ ಇದ್ದೆವೆ; ನೀನು ಪೊರೆಯುವವನು. ಈ ಸತ್ಯವನ್ನು ಮರೆಯುವುದೇ ನಿಜವಾದ ವಿಪತ್ತು, ನಿಜವಾದ ವಿಪತ್ತು ಏಕೆಂದರೆ ಈ ಮರೆವು ಪ್ರಜ್ಞೆಯ ಕೇಂದ್ರದಲ್ಲಿಯೇ ನಡೆಯುವ ವಿಪರ್ಯಾಸ. ಮರೆತು ಬಿಡುವುದೆಂದರೆ ಒಡಲಿನಿಂದ ಹೊರಗೆ ಬಂದಂತೆ.ಒಡಲಿನಿಂದ ಹೊರಗೆ ಬರುವುದು ತಾನೇ “ಹುಟ್ಟು” ಎಂದರೆ? ಅದು ಹೊಕ್ಕುಳ ಬಳ್ಳಿ ತುಂಡರಿಸಿ ತಾನು “ಬೇರೆ”ಯಾದಂತೆ ಅಲ್ಲವೆ? “ಬೇರೆ”ಯಾಗುವುದೆಂದರೆ ನಿಜಕ್ಕೂ ಅನಾಥವಾದಂತೆ ಸ್ವ-ತಂತ್ರನಾದಂತೆ ಅಲ್ಲ. “ಬೇರೆ”ಯಾದರೆ “ಸ್ವತಂತ್ರ”ನಾದಂತೆ ಎಂಬ ಭಾವನೆಯೊಂದು ದೊಡ್ಡ ಭ್ರಮೆ. ಉತ್ತರೆಯ ಒಡಲಿನ ಕುಡಿಯನ್ನು ಪೊರೆದು ಈ ನಿಜವನ್ನು ಕಾಣಿಸಿದೆ. ನಿನ್ನೊಡಲಿನಿಂದ ಹೊರಬಂದೆವೆನ್ನುವ ಹುಸಿಯನ್ನು ಕಾಣಿಸುವ ಈ “ಹುಟ್ಟು” ಇನ್ನು ಬೇಕಿಲ್ಲ——–.
ಕುಂತಿಯ ಈ ಹೃದ್ಗತದ ಹಿಂದೆ ಎಂಥ ದಾರುಣವಾದ ಸಾಂಸಾರಿಕ ಅನುಭವ ಇದೆ ಎಂದು ಬೇರೆ ಹೇಳಬೇಕಿಲ್ಲ.
ಅಚ್ಚರಿ ಎಂದರೆ ಇದು ಕೃಷ್ಣನದೇ ಮಾತುಗಳ ಇನ್ನೊಂದು ಮುಖ, ರೂಪಾಂತರವಾಗಿರುವ ಸಾಧ್ಯತೆ. ಗೀತೆಯಲ್ಲಿ ಕೃಷ್ಣ ಹೇಳಿದ್ದ. “ಧರ್ಮದಗ್ಲಾನಿಯಾದಾಗ ಅಧರ್ಮ ತಲೆ ಎತ್ತಿ ಮೆರೆಯುತ್ತಿರುವಾಗಲೆಲ್ಲ ನಾನು ಬರುತ್ತೇನೆ”. ಧರ್ಮದ ಗ್ಲಾನಿ ಎಂದರೆ ಸರಳವಾಗಿ ಏನು? ಸಜ್ಜನರಿಗೆ ಬದುಕು ಕಷ್ಟವಾಗೋದು. ಆದುದರಿಂದಲೇ ಪರಿತ್ರಣಾಯ ಸಾಧೂನಾಂ- ಸಜ್ಜನರ ರಕ್ಷಣೆಯೇ ಧರ್ಮ- ಎಂಬ ಮಾತು ಬಂದಿತ್ತು.
ಈಗ ಕುಂತಿ ಹೇಳುತ್ತಿದ್ದಾಳೆ: ಕಷ್ಟಗಳು ಮತ್ತೆ ಮತ್ತೆ ಒದಗಲಿ! ಪಾಂಡವರು- ಕುಂತಿ-ಸಜ್ಜನರಲ್ಲವೆ. ಸಜ್ಜನರೆಂದರೆ ಹೀಗೆ. ಭಗವಂತನ ಮಾತಿಗೆ ಒಂದು ರೂಪಾಂತರವನ್ನು ಇವರು ಒದಗಿಸುವರು. ಕೃಷ್ಣನ ಮಾತುಗಳಲ್ಲಿಲ್ಲದ ಧ್ವನಿಶಕ್ತಿ ಕುಂತಿಯ ಮಾತುಗಳಲ್ಲಿದೆ. “ರಕ್ಷಣೆ” ಎಂದರೇನೆಂಬುದರ ಹೊಳಹು ಇಲ್ಲಿದೆ. ಅಥವಾ ಭಗವಂತನಿಗೂ ಬದುಕಿನ ಕಷ್ಟಗಳನ್ನು ನೀಗಲಿಕ್ಕಾಗದ ಸ್ಥಿತಿಯನ್ನು ಹೊಟ್ಟೆಯಲ್ಲಿ ಹಾಕಿಕೊಂಡು ಕುಂತಿ ಹೇಳಿದ ಮಾತಿದು! ಮತ್ತೆ ಮತ್ತೆ ಬರುತ್ತೇನೆ ಎಂದಿದ್ದನಲ್ಲ ಕೃಷ್ಣ. ಅಷ್ಟು ಸಾಕು. ಆ ಮಾತು ಸಾಲದೆ? ಎಂದಳು ಕುಂತಿ. ಕುಂತಿಯ ಮಾತು ದೇವರನ್ನೇ ಧಾರಣ ಮಾದಿದ ಮಾತು. ಮಾತಿನ ಧಾರಣಶಕ್ತಿ ಅದ್ಭುತ. ಗೀತೆಯಲ್ಲಿ ತಾನು ಹೇಳಿದ ಮಾತನ್ನೆ ಧಾರಣ ಮಾಡಬಲ್ಲ ಮಾತೊಂದನ್ನು ತನ್ನ ಸೋದರತ್ತೆ ಕುಂತಿಯಲ್ಲಿ ಸೃಷ್ಟಿಸಿ- ಅತ್ತೆಯ ವಾತ್ಸಲ್ಯದ ಅಳಿಯನಂತೆ- ಕೃಷ್ಣ ತನ್ನ ಬಾಲಲೀಲೆ ತೋರಿಸಿದ! ಕುಂತಿಯ ತಾಯ್ತನ ದೊಡ್ಡದು!
ಗೀತೆ- ವೇದದ ಮಾತು. ಕುಂತಿಯ ಮಾತು ಇತಿಹಾಸ-ಪುರಾಣದ ಮಾತು. ವೇದಗಳ “ಧ್ವನಿ” ಏನಿದೆ ಅದನ್ನು ಇತಿಹಾಸ-ಪುರಾಣಗಳಲ್ಲಿ ಬೆಳೆಸಿರಿ ಎಂಬ ಮಾತು ಹಿಂದೆ ಬಂದಿತ್ತು. ಅದೀಗ ಸಾರ್ಥಕವಾಯಿತು! ಇತಿಹಾಸ-ಪುರಾಣಗಳ ಮುಖದಲ್ಲಿ “ಸೃಷ್ಟಿ” ಎಂಥ ಮಾತನ್ನು ದೇವರು ಕೇಳುವಂತೆ ಮಾಡುತ್ತಿದೆ! ಕೃಷ್ಣನ ಮಾತೇ ಹೀಗೆ ಕುಂತಿಯ ಮಾತಾಗಿ ಪರಿಣತವಾಗುವ ಪವಾಡವನ್ನು ಸೂಚಿಸುವ ಕಥೆ ಹೀಗೆ ಹಿಂದಕ್ಕೆ-ಮುಂದಕ್ಕೆ ಓಲಾಡುತ್ತಲೇ ಇದೆ.
ತೋಳ್ಪಾಡಿ ಭಾಗವತ ಕಥಾ 8 : ಕಲಿಯುಗದ ಭುವಿಗೆ ಭಗವಂತನ ವಿರಹ!
ದೊರೆ ಪರೀಕ್ಷಿತನಿಗೆ ಈ ಜನ್ಮವೇ ಪುನರ್ಜನ್ಮದಂತೆ ಇತ್ತು. ತಾನು ಸತ್ತು ಹುಟ್ಟಿದೆನೋ ಎನ್ನುವಂತೆ ಇತ್ತು. ತನ್ನ ಬಗ್ಗೆಯೇ ತಾಯಿ ಉತ್ತರೆ, ಅಜ್ಜಿ ಸುಭದ್ರೆ, ಮುತ್ತಜ್ಜಿ ಕುಂತಿ ಹೇಳುತ್ತಿದ್ದ ಕತೆಗಳನ್ನು ಕೇಳಿಯೇ ಬೆಳೆದವ. ಮುತ್ತಜ್ಜಿ ಕುಂತಿ ಭಗವತ್ ಅವತಾರ ಎನ್ನಿಸಿಕೊಂಡ ಕೃಷ್ಣನಲ್ಲಿ ಮಾಡಿದ ಪ್ರಾರ್ಥನೆ- ಕಷ್ಟಗಳು ಬರುತ್ತಿರಲಿ; ಓ ದೇವರೇ, ಆಗ ನಿನ್ನನ್ನು ನೋಡಲಾಗುತ್ತದೆ ಎಂಬ ಪ್ರಾರ್ಥನೆ- ತನ್ನ ಬದುಕಿನ ಬಗ್ಗೆಯೇ ಬರೆದ ಭಾಷ್ಯದಂತಿತ್ತು. ಕಷ್ಟಗಳೆಲ್ಲ ಕಳೆದು ಸುಖ ಉಣ್ಣಬೇಕೆಂದೇ ಮಾಡಿದ ಮಹಾಯುದ್ಧ! ಆದರೆ ಯುದ್ಧದ ತೀರ ಕೊನೆಯಲ್ಲಿ ಇಂಥ ಪ್ರಾರ್ಥನೆ ಕೇಳುತ್ತಿತ್ತು. ಕೊನೆಯಿಂದ ಆರಂಭವನ್ನು ನೋಡುವುದೂ ಸಾಧ್ಯ; ಅಂಥ ನೋಟವೂ ಒಂದಿದೆ. ಹುಟ್ಟಿನ ಕಣ್ಣಿನಿಂದ ಬದುಕನ್ನು ನೋಡಲಾಗುವಂತೆ ಸಾವಿನ ಕಣ್ಣಿನಿಂದ ಕೂಡ ನೋಡಲಾಗುತ್ತದೆ. ಆ ನೋಟಕ್ಕೆ ಸಿಗುವ ಅರಿವಿನ ಜಾತಿಯೇ ಬೇರೆ. ಏನು! ಅಜ್ಜಿ; ಮುತ್ತಜ್ಜಿಯರು ಹೇಳುವ ಕತೆಗಳಲ್ಲಿ ಇಂಥದೊಂದು ಅರಿವು ಗೊತ್ತಿಲ್ಲದಂತೆ ಸೇರಿಕೊಂಡಿರುತ್ತದೆಯೆ? ವಿಸ್ಮಯವಾಯಿತು ಪರೀಕ್ಷಿತನಿಗೆ.
ಕಷ್ಟ ಬೇಡ ಎನ್ನುತ್ತೆ ಲೋಕ. ಕಷ್ಟವೇ ಇರಲಿ ಎನ್ನುತ್ತಾಳೆ ಕುಂತಿ. ಆಗ ದೇವರು ತನ್ನ ಮಾತು ನಡೆಸುವುದು ಸಾಧ್ಯವಾಗುತ್ತದೆಯಂತೆ. ಕಷ್ಟಸಂಕಟಗಳು ಮತ್ತು ದೇವರು- ಸನಿಯ ಇವೆ. ಇದೇ ವಿಚಿತ್ರ. ದೇವರು ಬರೋದೇ ಮುಖ್ಯ. ಬಾರದಿದ್ದರೆ ಅದೇ ನಿಜವಾದ ಕಷ್ಟ ಎನ್ನುವಂತಿದೆ ತನ್ನ ಮುತ್ತಜ್ಜಿ! “ದೇವರು” ಎಂದರೆ “ಕೃಷ್ಣ”- ಎಂದುಕೊಂಡ ದೊರೆ. ಏಕೆಂದರೆ ಕೃಷ್ಣ ಅರಿವು ಮೂಡಿಸುವವನು- ಕಷ್ಟ ಸಂಕಟಗಳ ನಡುವೆ ಮನುಷ್ಯ ಕಳೆದುಹೋಗದಂತೆ. ಕುಂತಿ, ಕೃಷ್ಣನನ್ನು ಮನಸಾ ಸ್ತುತಿಸುದುದರ ರಹಸ್ಯ ಇದ್ದಕಿದ್ದಂತೆ ದೊರೆಗೆ ಹೊಳೆಯಿತು! ತನ್ನ ಮುತ್ತಜ್ಜಿಗೆ ದೇವತೆಗಳನ್ನು ಒಲಿಸಿಕೊಂಡು ಮಕ್ಕಳನ್ನು ಪಡೆಯುವ ಸಾಮರ್ಥ್ಯವಿತ್ತಂತೆ. ಹಾಗೆ; ಕನ್ಯೆಯಾಗಿರುವಾಗಲೇ ಸೂರ್ಯದೇವನಿಂದ ಕರ್ಣನನ್ನು ಪಡೆದರಂತೆ. ಆ ಎಳೆವಯಸ್ಸಿನಲ್ಲಿ, ಅಪ್ರಬುದ್ಧತೆಯಲ್ಲಿ ಇಷ್ಟೆಲ್ಲ ನಡೆದುದಕ್ಕೆ ಹೆದರಿಕೊಂಡಿದ್ದಾಗ, ಸೂರ್ಯದೇವ, ನಿನ್ನ ಕನ್ನೆತನ ಹಾಗೇ; ಭಂಗವಾಗದೆ ಉಳಿದಿರುತ್ತೆ; ಹೆದರದಿರು ಎಂದು ಕೆನ್ನೆ ತಟ್ಟಿದನಂತೆ. ಯುದ್ಧದಲ್ಲಿ ಅಸುನೀಗಿದವರಿಗೆಲ್ಲ ಗಂಗೆಯ ನೀರಿನಲ್ಲಿ ತರ್ಪಣಕೊಡುವ ಹೊತ್ತಿನಲ್ಲಿ ಈ ಕತೆಯನ್ನು ಮುತ್ತಜ್ಜಿ ಹೇಳುತ್ತ ಕರ್ಣನಿಗಾಗಿ ಕಣ್ಣೀರ್ಗರೆದರಂತೆ. ಕನ್ನೆತನ ಭಂಗವಾಗದೆ ಉಳಿಯುವುದು ಒಂದು ಅದ್ಭುತವಲ್ಲವೆ ಎಂದು ಯಾರೋ ಕೇಳಿದ್ದಕ್ಕೆ ಅದರಿಂದಲೇ ಹೀಗಾದದ್ದು; ಕರ್ಣನನ್ನು ಪಡೆದೂ ತನ್ನಲ್ಲಿ ತಾಯ್ತನ ಉಂಟಾಗಲಿಲ್ಲ, ಕನ್ನೆತನವೇ ಉಳಿದಿತ್ತು, ಆದುದರಿಂದಲೇ ಮಗುವನ್ನು- ಬಂಗಾರದ ತುಂಡಿನಂಥ ಮಗುವನ್ನು ಕೈ ಚೆಲ್ಲಿದೆ ಎಂದು ಮತ್ತೊಮ್ಮೆ ಕಂಬನಿ ತುಂಬಿದರಂತೆ.
ಈ ಕತೆಯನ್ನು ನೆನೆಯುತ್ತ ದೊರೆ ಯೋಚಿಸಿದ. ಹೌದು; ಈ ದೇವತೆಗಳದೆಲ್ಲ ಒಂದು ದೊಡ್ಡ ಕರ್ಮಕಾಂಡ. ಬರಿಯ ಕರ್ಮಕಾಂಡ. ಇವರ ಸಹವಾಸದಲ್ಲಿ ಅರಿವೆನ್ನುವುದು ಮೂಡುವುದಿಲ್ಲ, ಅರಿವು ಮೂಡಿಸುವ ದೇವರು “ಕೃಷ್ಣ”, ಒಮ್ಮೆ ಅರಿವು ಮೂಡಿದರೆ ಮತ್ತೆ ಕರ್ಮಕಾಂಡವೇ ಬದುಕೆಂದುಕೊಂಡ ಬದುಕು ನಿಲುಗಡೆಯಾದಂತೆ, ಮತ್ತೆ ಜನನವಿಲ್ಲ. ಹೌದು; ಕುಂತಿ ಹೇಳಿದ್ದು ಸರಿ- ಭವತೋ ದರ್ಶನಂ ಯತ್ ಸ್ಯಾತ್ ಅಪುನರ್ಭವ ದರ್ಶನಂ- ನಿನ್ನನ್ನು ಕಂಡರೆ ಮತ್ತೊಮ್ಮೆ ಸಂಸಾರವನ್ನು ಕಾಣಬೇಕಿಲ್ಲ.
ದೊರೆ ಮತ್ತೆ ಚಿಂತಿಸಿದ. ಕಷ್ಟಗಳೇ ಇರಲಿ ಎಂದಳು. ಅಂದರೆ ಬದುಕನ್ನು ಮನಸಾ ಒಪ್ಪಿದಂತೆ. ಏನೂ ಗೊಣಗದೆ. ಹೇಗಿದೆಯೋ ಹಾಗೆ. ಆಗ ದೇವರು ಬರುತ್ತಾನಂತೆ. ಹಾಗಾದರೆ ಬದುಕನ್ನು ಒಪ್ಪುವುದೂ ದೇವರನ್ನು ಒಪ್ಪುವುದೂ ಎರಡೂ ಒಂದೇ ಆಯಿತು. ಹೌದು. “ಒಪ್ಪಿಗೆ” ಎಂಬ ಮನೋಧರ್ಮ ಹಾಗೆಯೇ ಇರಬೇಕು. ಎಂದರೆ, ಬದುಕು ದೇವರು ನಮ್ಮ ಸನಿಯಕ್ಕೆ ಬರುವ ದಾರಿ ಎಂದಾಯಿತು! ಈ ಎಲ್ಲದರ ನಡುವೆ ನಾಡನ್ನು ಆಳುವ ಕ್ಷತ್ರಿಯನ, ದೊರೆಯ ಸ್ಥಾನ ಎಲ್ಲಿ? ಏನು? ಒಬ್ಬಾಕೆ ಹೆಂಗಸು ಬದುಕಿನಲ್ಲಿ ಕಷ್ಟಗಳೇ ಇರಲಿ ಎಂದಾಗ ಆ ಮಾತು ದೊರೆಯನ್ನು, ಅವನ ಆಳ್ವಿಕೆಯನ್ನು ಗಣನೆಗೇ ತೆಗೆದುಕೊಳ್ಳದೆ ಇದ್ದಂತಲ್ಲವೆ? ಒಂದರ್ಥದಲ್ಲಿ ದೇವರನ್ನೂ. ದೇವರು ಬೇಕಾದದ್ದು ಬದುಕಿನ ಪುನರಾವರ್ತನೆಯನ್ನು ತಪ್ಪಿಸುವುದಕ್ಕೆ. ಈಗಿನ ಬದುಕಿನ ಕಷ್ಟಗಳನ್ನು ನಿವಾರಿಸಲಿಲ್ಲ. ಕುಂತೀದೇವಿ ಹೇಳಿದ್ದೇನೋ ಉನ್ನತಮಟ್ಟದ ಒಂದು ಭಾವವೇನೋ ನಿಜ. ಅವಳು ತಾನೂ ಬಹುಕಷ್ಟಪಟ್ಟಿರುವುದೂ ನಿಜ. ಆದರೆ ಅವಳಿಂದಾಗಿ ಕಷ್ಟಪಡಬೇಕಾಗಿ ಬಂದವರ ದೃಷ್ಟಿಕೋನದಿಂದ- ಕರ್ಣನ ದೃಷ್ಟಿಕೋನದಿಂದ ನೋಡಿದರೆ- ಕಷ್ಟಗಳೇ ಇರಲಿ ಎಂಬ ಕುಂತಿಯ ಮಾತು ಸ್ವಲ್ಪ ಒರಟಾಗಿ ಕೇಳಿಸಲಾರದೆ?
ಆದುದರಿಂದ ಒಳ್ಳೆಯ ಆಳ್ವಿಕೆಯೊಂದು ಅಗತ್ಯ. ದೊರೆ ಅಗತ್ಯ. ವ್ಯವಸ್ಥೆ ಅಗತ್ಯ. “ನರಾಣಾಂ ಚನರಾಧಿಪಮ್”- ಎಂದು ಕೃಷ್ಣ ಹೇಳಿದ್ದನಲ್ಲ- ಮನುಷ್ಯರಲ್ಲೆಲ್ಲ ತಾನು ರಾಜನಾಗಿದ್ದೇನೆ; ರಾಜನಲ್ಲಿದ್ದೇನೆ ಎಂದು. ಆ ಮಾತು ಸುಮ್ಮನೆ ಇರಲಿಕ್ಕಿಲ್ಲ——-
ಪರೀಕ್ಷಿದ್ರಾಜ ಆಳುವ ಕ್ಷತ್ರಿಯನಾದ್ದರಿಂದ ಹೀಗೆ ಯೋಚಿಸುತ್ತಿದ್ದ. ಆಗ ದೈವಜ್ಜರು ಬಂದು ಹೇಳಿದರು: “ಕಲಿಯುಗ ಪ್ರಾರಂಭವಾಗಿ ಬಿಟ್ಟಿದೆ. ಈಗಲೀಗ ಕಲಿಯನ್ನು ನಿಗ್ರಹಿಸಿ, ನಿಯಂತ್ರಿಸುವುದೇ ರಾಜನಾದವನ ಕರ್ತವ್ಯ.” ನಿಜಕ್ಕಾದರೆ ಮಹಾಭಾರತ ಯುದ್ಧದ ಕೊನೆಯ ದಿನವೇ ಕಲಿಯುಗ ಕಾಲಿಟ್ಟಿತ್ತು. ಆದರೆ ಕಲಿ ಬೇರೂರದಂತೆ ಕೃಷ್ಣ ತಡೆದಿದ್ದ. ಕೃಷ್ಣ ಭಕ್ತರಾದ ಪಾಂಡವರು ತಡೆದಿದ್ದರು. ಆದರೆ ಕೃಷ್ಣ, ನೂರಆರು ವರ್ಷಗಳ ತನ್ನ ಇಹದ ಬದುಕನ್ನು ಉಪಸಂಹರಿಸಿಕೊಂಡ ಮೇಲೆ, ಪಾಂಡವರು ಪರೀಕ್ಷಿತನಿಗೆ ಪಟ್ಟಕಟ್ಟಿ ತಾವು ಸ್ವರ್ಗಕ್ಕೆ ನಡೆದ ಮೇಲೆ- ಆ ಕಥೆ ಮತ್ತೆ ಬರುತ್ತೆ- ಕಲಿ, ರಂಗಪ್ರವೇಶ ಮಾಡಿದ್ದ. ಅಷ್ಟು ಕಾಲವಾದರೂ ತನ್ನನ್ನು ದಮನ ಮಾಡಿದ ಸಿಟ್ಟು, ಅವಮಾನ ಅವನೊಳಗೆ ಕೆಲಸ ಮಾಡುತ್ತಿದ್ದವು. ಸಿಟ್ಟು ಅಲ್ಲೇ ಸ್ಫೋಟಗೊಂಡರೆ ಒಳ್ಳೆಯದು. ಅದು ಕಳೆದುಹೋದಂತೆ. ಆದರೆ ಸಿಟ್ಟಿಗೆ ನಮ್ಮ ಬದುಕನ್ನು ಎರೆದು ಅದನ್ನು ಹಗೆಯಾಗಿಸಿ ಆ ಹಗೆಯನ್ನು ಸಾಧಿಸಲು ತಂತ್ರಗಳನ್ನು ಹೆಣೆಯುವುದೆಂದರೆ- ಹಗೆಯನ್ನು ಚಿರಂಜೀವಿಯಾಗಿಸಿದಂತೆ. ಅಶ್ವತ್ಥಾಮನಂತೆ. ಹ; ಅಶ್ವತ್ಥಾಮನಲ್ಲಿ ಕಲಿಯೇ ಆವಿಷ್ಟನಾಗಿದ್ದಿರಬೇಕು!
ದೊರೆ ಪರೀಕ್ಷಿತ್; ಕಲಿಯನ್ನು ನಿಗ್ರಹಿಸಬೇಕೆಂದು; ಸಂಚಾರಕ್ಕೆ ಹೊರಟನಂತೆ. ಒಂದೆಡೆ, ಕೊರಗುತ್ತಿರುವ ಒಂದು ಹಸು, ಅದರ ಪಕ್ಕದಲ್ಲಿ ಕುಂಟುತ್ತಿರುವ ಒಂದು ಎತ್ತು ಇದ್ದವು. ಅವುಗಳನ್ನು, ರಾಜಭಟನಂತೆ ಕಾಣಿಸುತ್ತಿರುವ ಮನುಷ್ಯನೊಬ್ಬ ಅದೇಕೋ ಹಿಂಸಿಸುತ್ತಿದ್ದ. ದೊರೆಗೆ ಅನುಕಂಪ, ಕೋಪ ಮತ್ತು ಕುತೂಹಲ ಒಟ್ಟಿಗೇ ಉಂಟಾದವು.
ಹಸು, ‘ಭೂದೇವಿ’ಯಂತೆ. ಆ ವೃಷಭವಾದರೋ ‘ಧರ್ಮ’ವಂತೆ. ಮತ್ತು ಹಿಂಸಿಸುತ್ತಿರುವ ಮನುಷ್ಯನೇ ಪ್ರಚ್ಛನ್ನ “ಕಲಿಪುರುಷ”ನಂತೆ.
ಭೂಮಿಗೇನು ಕೊರಗೆನ್ನುವಿರೋ?- ಭಗವಂತ ಕೃಷ್ಣ ಈ ಭೂಮಿಗೆ ಬಂದು ತಾನು ಮಾಡಬೇಕಾದುದನ್ನು ಮಾಡಿ ಹೋದ ಮೇಲೆ- ಭೂಮಿಗೆ ಭಗವಂತನ ವಿರಹ ಕಾಡುತ್ತದೆಯಂತೆ. ಏನು ಈ ಭೂಮಿಯ ಸ್ವಭಾವ! ದುರಂಹಕಾರಕ್ಕೆ- ಆಳುವವರ ದುರಹಂಕಾರಕ್ಕೆ- ನಲುಗುವುದು; ಈ ದುರಾಚಾರ ತಡೆಯಲಾರೆನೆಂದು ಭಗವಂತನನ್ನು ಹಂಬಲಿಸುವುದು, ಹಂಬಲದ ಮೂಲಕ ಆವಾಹಿಸುವುದು, ಈ ಕರೆಗೆ ಓಗೊಟ್ಟು ಭಗವಂತ ಬಂದ ಮೇಲೆ ಅವನ ಸನ್ನಿಧಿಯಲ್ಲಿ ಕೆನ್ನೆತ್ತರಿನ ಜಳಕ ಮಾಡುವುದು, ಅವನು ಮರಳಿದ ಮೇಲೆ ತೆರಳಿದ ಮೇಲೆ ಮತ್ತೆ ಅವನನ್ನು ಹಂಬಲಿಸುವುದು! ಭಗವಂತ ನಿರ್ಲಿಪ್ತನಿರಬೇಕು! ಭೂಮಿ ನಿರ್ಲಿಪ್ತಳಾಗಿರಲಾರಳು- ಭಾವೋದ್ವೇಗದ ಕಡಲೇ ಈ ಭೂಮಿಗೆ ಸುತ್ತುವರಿದಿರುವಾಗ! ಅವನ ಕುರಿತಾದ ಹಂಬಲದ ಮೂಲಕವೇ ಇವಳು ಜೀವಂತಳಾಗುತ್ತ ಹೋಗುವುದು! ಕುಂತೀದೇವಿ “ಕಷ್ಟಗಳೇ ಇರಲಿ” ಎಂದಾಗ ಭೂಮಿಯ ಸ್ವಭಾವವೇ ಅವಳಲ್ಲಿ ಬಂದಿರಬೇಕು!
“ಧರ್ಮ” ಏಕೆ ಕುಂಟುತ್ತಿದೆ? ಧರ್ಮಕ್ಕೆ ನಾಲ್ಕು ಪಾದಗಳಂತೆ. “ತಪಸ್ಸು” – “ಶುಚಿತ್ವ” – “ದಯೆ” ಮತ್ತು “ಸತ್ಯ”. ಮೊದಲಿನ ಮೂರು ಪಾದಗಳ ನಡೆಯೇ ಕಲಿಯುಗದಲ್ಲಿ ಮುರಿದುಹೋಗುತ್ತದಂತೆ. ಕೊನೆಯದಾದ “ಸತ್ಯ”ವೊಂದು- ಅದು ಅಡಗಿರುವುದರಿಂದ- ಹೇಗೋ ಉಳಿದಿದೆಯಂತೆ. ಮತ್ತೆ “ನಡೆ ಕುಂಟದೆ?”
ಧರ್ಮಕ್ಕೆ ಕುಂಟು ನಡೆ! ಮಣ್ಣಿಗೆ ಕೊರಗು! ಇದು ಕಲಿಪುರುಷನ ಕೈವಾಡ! ದೊರೆಗೆ ಬೆರಗಾಯಿತು. ಈ ಮೂಕಪ್ರಾಣಿಗಳನ್ನು ಹಿಂಸಿಸುತ್ತಿದ್ದ ಮನುಷ್ಯನಿದ್ದನಲ್ಲ- ಅವನೇ ಕಲಿಪುರುಷ ಎಂದು ಹೊಳೆಯಿತು. ದೊರೆ ಕಲಿನಿಗ್ರಹಕ್ಕಾಗಿ, ಕೋಪದಿಂದ ಕತ್ತಿ ಎತ್ತಿದ. ಕಲಿಗೆ ಇದೇ ಬೇಕಿತ್ತೇನೋ. ಆತ ತನ್ನ ರಾಜವೇಷ ಕಳಚಿದ. ದೊರೆಯ ಪಾದಗಳಲ್ಲಿ ತನ್ನ ತಲೆ ಇಟ್ಟ. ಶರಣಾಗತನಾದ. ನಾನು ನಿನ್ನ ಪ್ರಜೆ, ನೀನು ನನ್ನ ದೊರೆ ಎಂದು ಕೊಂಡಾಡಿದ. ಪ್ರಜೆಯನ್ನು ರಕ್ಷಿಸಬೇಕಲ್ಲ ಎಂದು ಬೇಡಿದ. ರಾಜ್ಯ ವ್ಯವಸ್ಥೆ ಎಂದರೆ ಎಲ್ಲ ವ್ಯವಸ್ಥೆಗಳ ಮೂಲ. ವ್ಯವಸ್ಥೆ ಎಂದರೆ ಎಲ್ಲರಿಗೆ- ಅವರವರಿಗೆ ಉಚಿತವಾದ- ಸ್ಥಾನ ಕಲ್ಪನೆ- ಆದುದರಿಂದ “ಕಲಿ”ಯಾದ ತನಗೂ ಉಚಿತವಾದ ಸ್ಥಾನ ಕಲ್ಪನೆ ಮಾಡುವುದು ದೊರೆಯ ಕರ್ತವ್ಯವಲ್ಲವೆ ಎಂದು ಚಿಂತನೆಗೆ ಹಚ್ಚಿದ.
ದೊರೆಗೆ ಹೌದೆನ್ನಿಸಿತು. ಯಾವುದು ಕಲಿಯ ಸ್ಥಾನ? ಈ ನಾಲ್ಕು ಕಲಿಯ ನಿವಾಸಗಳಂತೆ. ಜೂಜು; ಮದ್ಯ, ಧರ್ಮವಿರುದ್ಧವಾದ ಕಾಮ ಮತ್ತು ಹಿಂಸೆಯ ಪ್ರವೃತ್ತಿ. “ದ್ಯೂತಂ ಪಾನಂ ಸ್ತ್ರಿಯ: ಸೂನಾ”. ಕಲಿ ಒಪ್ಪಿದ. ಅವನಿಗೆ ಗೆಲುವಾಗಿತ್ತು. ಮತ್ತೊಮ್ಮೆ ದೊರೆಯನ್ನು ನೋಡಿದ. ದೊರೆ, ವ್ಯವಸ್ಥೆಯ ಹುಮ್ಮಸ್ಸಿನಲ್ಲಿದ್ದ. ಕಲಿ ಹೇಳಿದನಂತೆ. “ಇವು ನಾಲ್ಕು ನನ್ನ ಸಹಜ ನಿವಾಸಗಳು. ಒಪ್ಪಿದೆ. ನಿನ್ನಿಂದ ಇನ್ನೊಂದು ಹೆಚ್ಚಿನದು ಬೇಕಿದೆ. ನಿನ್ನಂಥವನಲ್ಲಿ ಕೇಳಿದ ಕೇಳಿಕೆ ವ್ಯರ್ಥವಾಗಬಾರದು. ಆ ಇನ್ನೊಂದು ಯಾವುದೆಂದರೆ -“ಚಿನ್ನ”. “ಬಂಗಾರ”. ಬಂಗಾರ ನನ್ನ ನಿವಾಸವಾಗುವುದಕ್ಕೆ ಒಪ್ಪಿಬಿಡು. ಇನ್ನೇನೂ ಬೇಕಿಲ್ಲ. ನಾನು ತೃಪ್ತ. ನೀನು ಧರ್ಮಪ್ರಭು.”
ಪರೀಕ್ಷಿದ್ರಾಜ ಈ ಬೇಡಿಕೆಗೆ ಒಪ್ಪಿ, ತಾನು ಸರಿಯಾದ ವ್ಯವಸ್ಥೆ ಮಾಡುವ ಮೂಲಕ ಕಲಿಯನ್ನು ನಿಗ್ರಹಿಸಿದೆ ಎಂದುಕೊಂಡನಂತೆ. ಹಾಗನ್ನುತ್ತದೆ ಭಾಗವತ! ಪರೀಕ್ಷಿದ್ರಾಜ ತಿಳಿಯದೆ ಇದ್ದ ಸಂಗತಿಯೊಂದಿತ್ತು. ಎಲ್ಲ ಕಾಲದಲ್ಲೂ “ಕಲಿ” ಇತ್ತು. ದ್ಯೂತ-ಧರ್ಮರಾಯನ ಇನ್ನೊಂದು ಸ್ವಭಾವವೇ ಆಗಿತ್ತು. ಪಾನ-ಯಾದವರಲ್ಲಿತ್ತು. ಕೌರವ, ಜಯದ್ರಥಾದಿಗಳಲ್ಲಿ ಬಲಾತ್ಕಾರದ ಕಾಮಪ್ರವೃತ್ತಿ ಇತ್ತು. ಹಿಂಸೆ ಎಲ್ಲೆಲ್ಲೂ ಇತ್ತು. ಎಲ್ಲ ಕಾಲದಲ್ಲೂ ಕಲಿ ಇತ್ತು. ಆದರೆ “ಆವ್ಯವಸ್ಥಿತ”ವಾಗಿತ್ತು. ಅವ್ಯವಸ್ಥಿತವಾಗಿದ್ದಾಗಲೇ ಅದು ತುಸು ದುರ್ಬಲವೂ ಆಗಿರೋದು. ಅವ್ಯವಸ್ಥಿತವಾಗಿದ್ದಾಗಲೇ ಅದು ಇತರ ಯುಗಧರ್ಮಗಳನ್ನೂ ಅಷ್ಟಿಷ್ಟಾದರೂ ಅರ್ಥಮಾಡಿಕೊಳ್ಳುವುದು ಸಾಧ್ಯವಿತ್ತು. ಧರ್ಮರಾಯ ಬರಿಯ ಜೂಜು ಕೋರನೆಂದರೆ ಸರಿಯೆ? ಎಲ್ಲ ಜೂಜಾಳಿಗಳೂ ಧರ್ಮರಾಯರಲ್ಲದಿದ್ದರೂ, ಅವರಲ್ಲಿ ಇನ್ನಿತರ ಕೆಲವು ಗುಣಗಳು ಇರುತ್ತವಲ್ಲ. ಆದರೆ ಯಾವಾಗ ಈ ಸ್ಥಾನಗಳನ್ನು ವ್ಯವಸ್ಥಿತಗೊಳಿಸಿ ಇವು “ಕಲಿಸ್ಥಾನ”ಗಳೆಂದು ನಿರ್ದೇಶಿಸಿ ವ್ಯವಸ್ಥೆ ಮಾಡಲಾಯಿತು- ಆಗ, ಕಲಿ ಹೆಚ್ಚು ಪ್ರಬಲನಾದ. ತಾನೇ ತಾನಾದ. ಐದನೆಯ ಒಂದು ಸ್ಥಾನ ಕೇಳಿ ಪಡಕೊಳ್ಳುವಷ್ಟು ಪ್ರಬಲನಾದ. ಕಲಿಗೆ ಬೇಕಿದ್ದದ್ದು ಸ್ತ್ರೀಯರನ್ನು ಆಕರ್ಷಿಸುವ ಒಂದು ವಸ್ತು! ಕೃಷ್ಣನ ಕಾಲದಲ್ಲಿ ಕಲಿ ಅಡಗಿ ನೋಡಿದ್ದ. ಕೃಷ್ಣ ಎಂದರೇ ಆಕರ್ಷಣೆ ಎಂದು. ಕೃಷ್ಣನಿಂದ ಆಕರ್ಷಿತರಾಗಿ ಗೋಪಿಕೆಯರು ಭೂಮಿಯನ್ನು ಸ್ವರ್ಗಮಾಡಿದ್ದರು. ತಾವು ನಡೆದಾಡುವ ದೇವತೆಗಳಾದರು. ಕೃಷ್ಣನ ಆಕರ್ಷಣೆಯನ್ನು ತಪ್ಪಿಸುವ ದಾರಿ ಕಲಿಗೆ ಬೇಕಿತ್ತು. ಅವನ ಕಣ್ಣು ಚಿನ್ನದಲ್ಲಿ ನೆಟ್ಟಿತು!
ಚಿನ್ನದ ಜಿಂಕೆಯ ಕತೆ ಕಲಿಗೆ ಗೊತ್ತು. ಅದು ಅವನ ದೇವತೆ. ಆದರೆ ಒಂದು ವ್ಯತ್ಯಾಸವಿತ್ತು. ಕಾಡಿನಲ್ಲಿ ಅಲೆದಾಡುವಾಗ ತಾನಾಗಿ ಕಣ್ಣಿಗೆ ಬಿದ್ದ ಚಿನ್ನದ ಜಿಂಕೆಯನ್ನು ಹಂಬಲಿಸೋದು ಬೇರೆ. ಚಿನ್ನದ ಜಿಂಕೆಯನ್ನೇ ಹುಡುಕುತ್ತ ಅಂಡಲೆಯುವುದು ಬೇರೆ. ಈ ಅಲೆದಾಟ ಕಲಿಗೆ ಬೇಕಿತ್ತು. ವ್ಯವಸ್ಥೆಯ ಹೆಸರಿನಲ್ಲಿ ಅದವನಿಗೆ ಸಿಕ್ಕಿಬಿಟ್ಟಿತು.
ಸುವರ್ಣಯುಗ ಎನ್ನುತ್ತೇವೆ. ಭಾಗವತ ಅದನ್ನು ಒಪ್ಪುವುದಿಲ್ಲ. ಅದನ್ನು ಕಲಿಯುಗ ಎಂದರೆ ಹೆಚ್ಚು ಸರಿ ಎನ್ನುತ್ತದೆ. ಹೌದೆನ್ನಿಸುತ್ತದೆ.
ತೋಳ್ಪಾಡಿ ಭಾಗವತ ಕಥಾ 9:ಇಲ್ಲಿ ನೀರ ಬಯಸಿದವರೂ ಕೆಟ್ಟರು ನೆಲವ ಬಯಸಿದವರೂ ಕೆಟ್ಟರು!
“ನೀನಿದ್ದೆ. ನಿನ್ನ ತಾಯ ಒಡಲಲ್ಲಿ ನೀನಿದ್ದೆ. ತಾಯ ಉಸಿರಿನೊಂದಿಗೆ ನಿನ್ನುಸಿರು ಆಡುತ್ತಿತ್ತು. ತಾಯ ಎದೆ ಬಡಿತದೊಂದಿಗೆ ನಿನ್ನ ಎದೆ ಮಿಡಿಯುತ್ತಿತ್ತು. ತಾಯ ಆಹಾರವೇ ನಿನ್ನ ಅನ್ನರಸವಾಗಿತ್ತು. ತಾಯ ಹೊಕ್ಕುಳ ಬಳ್ಳಿಯೇ ನಿನ್ನ ನಾಭಿಕಮಲ! ಎಂಥ ರಕ್ಷಣೆ, ಎಂಥ ಬೆಚ್ಚಗೆ, ಎಂಥ ಬೆಳವಣಿಗೆಯ ಜಾಗ ತಾಯ ಒಡಲು! ಅಲ್ಲಿಗೆ ಆಗಂತುಕರಾಗಿ ಬರಬಹುದಾದವರು ಇಬ್ಬರೇ. ಒಂದು “ಸಾವು”. ಇನ್ನೊಂದು “ದೇವರು”. ನೀನು ಮರೆತಿರಬಹುದು. ಒಳ್ಳೆಯದು. ನಿನ್ನ ಮಟ್ಟಿಗೆ ಇಬ್ಬರೂ- “ಸಾವು” ಮತ್ತು “ದೇವರು”- ನಿನ್ನನ್ನು ಮುಟ್ಟಿ ನೋಡುವುದಕ್ಕೆ ನೀನಿದ್ದಲ್ಲಿಗೆ ಬಂದಿದ್ದರು. ಅಶ್ವತ್ಥಾಮನೆಸೆದ ಬ್ರಹ್ಮಾಸ್ತ್ರದ ರೂಪದಲ್ಲಿ “ಸಾವು” ಬಂದಿತ್ತು. ಮತ್ತು ನಿನ್ನನ್ನು ನೋಡುವುದಕ್ಕೆ ನಿನಗಿಂತ ಸಣ್ಣವನಾಗಿ, ವಾಮನನಾಗಿ, ಹೆಬ್ಬೆರಳಿನ ಪ್ರಮಾಣದ ಅಣುರೂಪದಲ್ಲಿ ನೀಲಿಬೆಳಕಿನ “ದೇವರು” ಬಂದಿದ್ದ. ಅವನು ಶ್ಯಾಮ-ಕೃಷ್ಣ! ನಿನ್ನ ತಾಯ ಒಡಲು ಧನ್ಯವಾಗಿ ಹೋಯಿತು ಮಗು. ಹಾಗೆಂದರೇನೆಂದು ಗೊತ್ತೇನು ನಿನಗೆ? ತಾಯ ಒಡಲಿಗೆ “ದೇವರು” ಬಂದರೆ ಮತ್ತೆ ಆಕೆ ಹೆತ್ತು-ತಾಯಿಯಾಗುವುದಿಲ್ಲ. ಆಗಬೇಕಿಲ್ಲ. ಆಕೆ ಆ ಕ್ಷಣದಿಂದ ಎಲ್ಲರ ತಾಯಿಯಾಗಿರುತ್ತಾಳೆ! ಹೆತ್ತ ತಾಯಾಗುವುದೂ ದೊಡ್ಡದೇ-ಲೋಕದಲ್ಲಿ. ಲೋಕಕ್ಕೆ ದೊಡ್ಡದೇ. ಆದರೆ ಇದು ಅದಕ್ಕಿಂತ- ಎಲ್ಲದಕ್ಕಿಂತ ದೊಡ್ಡದು! ತಾಯ್ತನದಲ್ಲಿ ಇಂಥ ಪ್ರಯೋಗ ಮಾಡುವುದಕ್ಕಾಗಿ “ದೇವರು” ಹೆಣ್ಣಿನ ಒಡಲಿಗೆ ಹೋಗುತ್ತಾನೆ. ಅದಕ್ಕೆಂದೇ ಅವನು ತಾನು ಮಗುವಾಗಿ ಬರುತ್ತಾನೆ. ನಿಜಕ್ಕಾದರೆ ನಮ್ಮ ಕೃಷ್ಣನ ಬಾಲಲೀಲೆಗಳಲ್ಲಿ ಇದೂ ಒಂದು- ನಿನ್ನ ತಾಯಿ ಉತ್ತರೆಯ ಒಡಲಲ್ಲಿ ನಿನಗೆ ಕಾಣಿಸಿಕೊಂಡದ್ದು- ಆಹಾ! ಔತ್ತರೇಯ ಕೃಷ್ಣ, ನೀನು ಯಾರನ್ನೂ ಮರುಳುಮಾಡುವೆ. ನನಗೆ ನಿನ್ನನ್ನು ಕೊಂಡಾಡುವ ಆಸೆಯಾಗುತ್ತಿದೆ- ಎಂದು ತಮ್ಮಲ್ಲಿ ತಾವೇ ಮಾತಾಡಿಕೊಂಡರೆಂಬಂತೆ, ದೊರೆ ಪರೀಕ್ಷಿತನಿಗೆ ಶುಕಮುನಿ ತನ್ನ ಇನ್ನೂ ಒಡೆಯದ ಕೊರಳಿನ ಮಾರ್ದವದಿಂದ ಹೇಳಿದರು. (ಔತ್ತರೇಯ = ಉತ್ತರೆಯ ಮಗ; ಪರೀಕ್ಷಿತ. ಉತ್ತರೆಯ ಒಡಲಲ್ಲಿ ಕಾಣಿಸಿಕೊಂಡದ್ದರಿಂದ ಕೃಷ್ಣನೂ “ಔತ್ತರೇಯ”)
“ದೊರೆಯೇ, ‘ಸಾವು’ ಮತ್ತು ‘ದೇವರು’ ಒಟ್ಟಿಗೇ ಇದ್ದಾರೆ. ಅದೊಂದು “ಜೊತೆ” ಎಂದುಕೋ. ಸಾವು, ನಾವು ಕಾಣುವಂತೆ ಬದುಕಿನ ಮುಗಿತಾಯ. ತೆರೆ ಬಿದ್ದಂತೆ. ಆದರೆ ಅದು ಹಾಗಿರುವುದರಿಂದಲೇ ಬದುಕಿನಲ್ಲಿ ಒಂದು ಉತ್ಕಟತೆ, ಒಂದು ತಿರುವು ಮತ್ತು ಒಂದು ಮೌಲ್ಯವಂತಿಕೆ ಬಂದಿರುವುದು. ಮನೆಯ ಮಗನಿಗೆ ಲೆಕ್ಕ ಬರುತ್ತಿತ್ತು. ಅವನು ಮನೆಯ ದನಕರುಗಳ ಲೆಕ್ಕ ದಿನಾ ಎಣಿಸುತ್ತಿದ್ದನಂತೆ. ಹಾಲು ಕರೆಯುವ ತಾಯಿ- ಅವಳಿಗೆ ಲೆಕ್ಕ ತಿಳಿಯದು- ಹೇಳಿದಳಂತೆ: “ಹಾಗೆ ಲೆಕ್ಕ ಮಾಡಬೇಡ ಮಗು; ಹಟ್ಟಿ ಬೆಳೆಯುವುದಿಲ್ಲ”. ಈ ಭಾವ ತಪ್ಪೆನ್ನದಿರು. ಎಲ್ಲ ಲೆಕ್ಕಕ್ಕೆ ಮುಗಿತಾಯವಿದೆ ಎಂದಾಗಲೇ ಲೆಕ್ಕ- ನೆನಪಾಗಿ ಬಿಡುವುದು. ಆರ್ದ್ರವಾಗುವುದು. ಲೆಕ್ಕ-ಒಣಲೆಕ್ಕ. ನೆನಪು ಆರ್ದ್ರ. ಆರ್ದ್ರವಾದಷ್ಟು ಉತ್ಕಟ. ಉತ್ಕಟವಾದಂತೆ ರಸಮಯ. ಇದು ಬದುಕಿನೊಳಗಿರುವ ಇನ್ನೊಂದು ಬದುಕು. ಇದು “ಸಾವಿ”ನ ಕೊಡುಗೆ! ಇಂಥ ಸಾವಿನ ಜತೆಗೇ ಇದ್ದಾನೆ “ದೇವರು” ಎಂದೆ. ದೇವರು ಅಡಗಿದ್ದಾನೆ ಎನ್ನುತ್ತಾರೆ ಬಲ್ಲವರು. “ತತ್ತ್ವಂ ನಿಹಿತಂ ಗುಹಾಯಾಂ”. ಎಲ್ಲಿ ಆಡಗಿದ್ದಾನೆ? ಇಲ್ಲೇ; ಈ ಬದುಕಿನಲ್ಲೇ. ಏಕೆ ಅಡಗಿದ್ದಾನೆ? ನಾವು ಪ್ರಕಟವಾಗಿದ್ದೇವಲ್ಲ ಇಲ್ಲಿ- ಅವನು ನಮಗೆ ಅಡ್ಡಿಯಾಗದೆ ಇರಲಿ ಎಂದು ಅಡಗಿರಬೇಕು! “ದೇವರು” ಎಂದರೆ- ಅವನು, ಅವಳು ಅಥವಾ ಅದು- ಯಾರಿಗೂ ಅಡ್ಡಿಯಲ್ಲ ಮಗು. ಅದು ದಾರಿ. ಅದು ಹಾದಿ. ದಾರಿ ಅಡ್ಡಿಯ? ನಾವು ಹಾದಿ ತುಳಿಯಬೇಕೆನ್ನುವುದೇ ಅದರ ಒಂದೇ ಒಂದು ಬಯಕೆಯಾಗಿ ಇದ್ದೀತು! ನಮಗೆ ಅದರ ದಾರಿ ನಡೆಯಲಾಗುವುದಿಲ್ಲವೆಂದೇ ಅದು ಅಡಗಿದಂತಿದೆ. ಅಲ್ಲದೆ ಅದು “ಅಡಗಿದೆ” ಎಂದರೆ ನಾವು “ಹುಡುಕಾಡಬೇಕು” ಎಂದು. ಹುಡುಕಾಡದೆ ನಾವು ಬೆಳೆಯುವುದಿಲ್ಲ. ಹುಡುಕಾಡಬೇಕಾದರೆ, ಕಣ್ಣೆದುರು ಏನು ಹಬ್ಬಿಕೊಂಡಿದೆ ಈ ಪಂಚೇಂದ್ರಿಯ ಪ್ರಪಂಚ, ಇದನ್ನು ಒಪ್ಪುವುದಲ್ಲ; ಒಪ್ಪದೆ ಇರುವುದೂ ಅಲ್ಲ, ಇದನ್ನು ಸಂದೇಹಿಸಬೇಕು, ಇದನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು. ಸಂದೇಹಿಸುವುದಕ್ಕೆ ಯೋಗ್ಯವಾಗಿರುವಂತೆಯೇ ಇದೆಯಲ್ಲ ಲೋಕದ ಬದುಕು. ಇಲ್ಲಿ ಸತ್ಯ ಎಲ್ಲಿದೆ? ನಿಜ ಎಲ್ಲಿದೆ? ಇಲ್ಲಿ ಕಾಣುತ್ತಿರುವುದು ತೋರಿಕೆ; ವೇಷ; ವೇಷಾಂತರ; ಪ್ರದರ್ಶನ. ಇಲ್ಲಿರೋದು “ಮಾಯೆ”. ಅಂದರೆ ಹುಸಿ- ನಿಜ ಎರಡೂ ಬೆರೆತ, ಒಂದು- ಇನ್ನೊಂದಾಗಿ ತೋರುವ ಮಹಾಮನೆ ಇದು. ನಿನ್ನ ದೊಡ್ಡಜ್ಜ ಧರ್ಮರಾಯನಿಗೆ ಮಯನೆಂಬ ಮಹಾಶಿಲ್ಪಿಯೊಬ್ಬ ಸಭಾಗೃಹವೊಂದನ್ನು ರಚಿಸಿಕೊಟ್ಟಿದ್ದನಂತೆ. ಅದು ಕೃಷ್ಣನ ಸೂಚನೆ! ಆ ಮಯಸಭೆಯಲ್ಲೇ ನಡೆದಿದ್ದಂತೆ ರಾಜಸೂಯ. ಅದಿರಲಿ. ಆ ಸಭಾಗೃಹದಲ್ಲಿ ನೀರು ಯಾವುದು- ನೆಲ ಯಾವುದು ತಿಳಿಯುತ್ತಿರಲಿಲ್ಲವಂತೆ. ದೊರೆಯೇ, ಈ ಲೋಕವೊಂದು ಮಯಸಭೆ! ಇಲ್ಲಿ ಹುಡುಕಾಡಬೇಕು. ಇಲ್ಲಿ “ನೆಲ” ಬೇಕೆಂದವರೂ ಕೆಟ್ಟರು. ತಮ್ಮ ದಾಹ ತಣಿಸಲು “ನೀರು” ಬೇಕೆಂದವರೂ ಕೆಟ್ಟರು. ಇಲ್ಲಿ ಮೈ-ಮರೆಯದೆ ಎಚ್ಚರದಿಂದ ಹುಡುಕಾಡಬೇಕು. ಈ ಹುಡುಕಾಟ, ಲೋಕದ ಅರ್ಥದಲ್ಲಿ ಬದುಕಿನ ಹಿಂದೆ ಬಿದ್ದ ದಾರಿಯಲ್ಲ. ಈ ಅರ್ಥದಲ್ಲಿ ಹುಡುಕಾಟ ಸಾವಿನ ಹಾದಿ. ಲೋಕವನ್ನು ಕಳಕೊಳ್ಳುವುದಕ್ಕೆ ಹಿಂಜರಿಯದ ಹಾದಿ. ಸತ್ಯದ ಅಥವಾ ದೇವರ ಹಾದಿ ಇನ್ನೊಂದು ಅರ್ಥದಲ್ಲಿ ಸಾವಿನ ಹಾದಿ ಕೂಡ. ಅವೆರಡು- ಸಾವು ಮತ್ತು ದೇವರು- ಜತೆಗಿವೆ ಎಂದರೆ ಈ ಅರ್ಥದಲ್ಲಿ. ತಾಯ ಒಡಲಿನಲ್ಲಿಯೇ ಈ ಜತೆಗಾರಿಕೆಯ ಅನುಭವ ಪಡೆದ ನಿನಗೆ ಇದನ್ನು ಬಿಡಿಸಿ ಹೇಳಬೇಕಿಲ್ಲ” ಎಂದರು ಶುಕಮುನಿ, ಅದೇ ಇನ್ನೂ ಒಡೆಯದ ಕೊರಳಿನ ಮಾರ್ದವದಲ್ಲಿ.
“ದೇವರು” ಅಥವಾ “ಸತ್ಯ” ಅಡಗಿದೆ ಎನ್ನುತ್ತಾರಲ್ಲ- ಆ ಸತ್ಯದ ಅನುಭವ ಹೇಗಿದ್ದೀತು ಎಂದು ಕುತೂಹಲವಿದೆಯೇನು? “ಸತ್ಯ”ಕ್ಕೆ ಎಂದೆಂದೂ ಹುಡುಕಲ್ಪಡುವ ಅನುಭವ. ಅದು ತನಗೆ ತಾನೇ ಪರೋಕ್ಷ! ತನ್ನಲ್ಲಿಯೇ ತಾನು ಅಡಗಿದೆ. ಎಷ್ಟು ಅಡಗಿದೆ ಎಂದರೆ ಈ ಅನುಭವಕ್ಕೂ ಕೂಡ ಅದು ನಿನ್ನನ್ನು ಅವಲಂಬಿಸಿದೆ. ಅಂದರೆ ನೀನು ಹುಡುಕಾಡದೆ, ಅದಕ್ಕೆ ಹುಡುಕಾಡಲ್ಪಡುವ ಅನುಭವ ಕೂಡ ಇಲ್ಲವೆನ್ನಬೇಕು. ಆದರೆ ಎಲ್ಲ ಕಾಲದಲ್ಲೂ ಸತ್ಯವನ್ನು ಹುಡುಕುವವರು ಇದ್ದೇ ಇರುತ್ತಾರೆ. ಅದು ಸತ್ಯದ ಮಹಿಮೆಯೋ; ಈ ಲೋಕದ ಮಹಿಮೆಯೋ! ಎನ್ನುತ್ತಾ ಶುಕಮುನಿ ಸಣ್ಣಗೆ ತುಟಿಬಿರಿದು ನಕ್ಕರು. ಚೆಲುವಾದ ಹಲ್ಲಸಾಲು ಕಂಡವು. ಆ ನಗು ಅರ್ಥಪೂರ್ಣವಾಗಿತ್ತು. ಹೀಗೆಂದು ಹೇಳಲಾಗದ ಕಾರಣಕ್ಕೆ ದೊರೆಗೆ ಈ ಮಾತಿನಿಂದ ತನ್ನೊಳಗೆ ಸಂತೋಷದ ಅಲೆಯೊಂದು ಹಬ್ಬಿತು. ಅವನು ಶುಕಮುನಿಯನ್ನು ಕೇಳಿದ್ದ: “ಪುರುಷಸ್ಯೇಹಯತ್ಕಾರ್ಯಂ ಮ್ರಿಯಮಾಣಸ್ಯ ಸರ್ವಥಾ”. ಸಾವೆಂಬುದು ಕಟ್ಟಿಟ್ಟ ಬುತ್ತಿಯಾಗಿರುವ ಈ ಬಾಳಿನಲ್ಲಿ ಮನುಷ್ಯಜೀವಿ ನಿಜಕ್ಕೂ ಮಾಡಬೇಕಾದುದೇನು? ತನ್ನ ಈ ಪ್ರಶ್ನೆಯೇ ಬದುಕಿನ ನಿಜವನ್ನು ಕುರಿತ ಹುಡುಕಾಟವನ್ನು ಅಡಗಿಸಿಟ್ಟುಕೊಂಡ ಪ್ರಶ್ನೆಯಾಗಿದೆ. ಸಾವೆಂಬ ನಿಜದಿಂದಾಗಿಯೇ ಬದುಕನ್ನು ಕುರಿತು ಈ ಪ್ರಶ್ನೆ ಹುಟ್ಟಿದೆ. ಅಲ್ಲದೆ ಸಾವೆಂಬ ನಿಜದ “ನಿಜ” ಏನು ಎಂದು ಕೂಡ ಈ ಪ್ರಶ್ನೆಯ ಅರ್ಥವಾಗಬಹುದು. ತನಗೆ ಹೊಳೆದಿರಲಿಲ್ಲ. ಹುಡುಕಾಟ ಪ್ರಾರಂಭವಾದರೆ ನಾನಾಮುಖಗಳಲ್ಲಿ ಅದು ಬೆಳೆಯುತ್ತ ಹೋಗುತ್ತದೆ ಎಂದು ಅರಿವಾಗಹತ್ತಿತು. ವಿಸ್ಮಯವಾಯಿತು. ಇದು ಸತ್ಯದ ಮಹಿಮೆಯೋ, ಲೋಕದಮಹಿಮೆಯೋ ಎಂದು ಮುನಿ ಕೇಳಿದ್ದರಲ್ಲಿ ಗೂಢವಾದ ಅರ್ಥವೊಂದಿದೆ ಎಂದು ಭಾಸವಾಯಿತು. ಸತ್ಯ ತಾನು ಅಡಗಿದ್ದುದರಿಂದಲೇ ಅದನ್ನು ಹುಡುಕಾಡುವ ಪ್ರೇರಣೆ ನಮ್ಮಲ್ಲಿ ಉಂಟಾಗುವುದೆನ್ನಿಸಿತು. ಹಾಗಾದರೆ ಅದೇ ನಮ್ಮನ್ನು ಹುಡುಕಾಡುವುದಕ್ಕೆ ಹಚ್ಚುವುದು ಎಂದರೂ ತಪ್ಪಿಲ್ಲವಲ್ಲ. ಅರೆ ಇದೇನು! ತನ್ನ ಅನುಭವಕ್ಕೆ ನಮ್ಮನ್ನು ಅವಲಂಬಿಸಿದಂತೆ ಇರುವುದು- ಹಾಗೆ ಇರುವುದು ಅದು ತನಗಾಗಿಯಲ್ಲ- ಅದು ನಮಗಾಗಿ. ಅಂದರೆ ಇದುವರೆಗೆ ನಮಗಾಗದ ನಮ್ಮದೇ ಅನುಭವವನ್ನು ನಮಗೆ ಉಂಟುಮಾಡುವುದಕ್ಕಾಗಿ. ನಾವು ಅವನನ್ನು ಹುಡುಕಾಡಿದಾಗ ಕೊನೆಯಲ್ಲಿ ನಮಗೆ ನಾವೇ ಸಿಗುವುದು- ಮರಳಿ ಸಿಗುವುದು! ಇದು ಏನು ಅಚ್ಚರಿ! ಇದನ್ನೇ ಶುಕಮುನಿ ಸತ್ಯದ ಮಹಿಮೆ ಎಂದಿರಬೇಕು; ಹಾಗನ್ನುವಾಗಲೂ ಲೋಕದ ಮಹಿಮೆ ಎಂಬ ಮಾತೂ ಸೇರಿಸದೆ ಬಿಡಲಿಲ್ಲ.
ಇದನ್ನೆಣಿಸುವಾಗ ದೊರೆಗೆ ಸಣ್ಣಗೆ ನಗು ಬಂತು. ಮರುಕ್ಷಣ ಹೊಳೆಯಿತು. ಶುಕನ ನಗು ತನ್ನಲ್ಲಿ ಮತ್ತೆ ನಗುತ್ತಿದೆ! ದೊರೆ ಈಗ ಶುಕಮುನಿಗೆ ಕೈಮುಗಿದ. ಗುರುವೆ; ಆಶ್ಚರ್ಯದ ಮೇಲೆ ಆಶ್ಚರ್ಯವಾಗುತ್ತಿದೆ ಎಂದೇನೋ ಹೇಳಲು ಹೊರಟ. ಶುಕಮುನಿ ದೊರೆಯ ವಾಕ್ಯ ಪೂರ್ತಿ ಮಾಡುವುದಕ್ಕೆ ಬಿಡಲಿಲ್ಲ. ಹೇಳಿದ: ನಿನ್ನ “ಆಶ್ಚರ್ಯ”ವೇ ದೇವರ “ಆನಂದ”ವಯ್ಯ. ಅಂದರೆ ಮನುಷ್ಯ ಜೀವಿಯ ಆಶ್ಚರ್ಯ ಪಡುವ ಸಾಮರ್ಥ್ಯವೇ ಅವನಲ್ಲಿ ಅಡಗಿರುವ “ದೇವರ” ಆನಂದಾನುಭವ ಸಾಮರ್ಥ್ಯವಯ್ಯ. ಆಡಗಿರೋದು ಅಂದರೆ ಹೀಗೆ. ಒಂದರಲ್ಲಿ ಇನ್ನೊಂದಾಗಿರುವುದು. ಅಡಗಿರೋದೇ ಅವನಿಗೆ ಆನಂದ. ಆದುದರಿಂದಲೇ ಇಲ್ಲಿ ಹೆಜ್ಜೆ ಹೆಜ್ಜೆಗೆ ಆಶ್ಚರ್ಯವಯ್ಯ. ಆದರೆ ಮನುಷ್ಯರನ್ನು ನೋಡು. ಎಲ್ಲ ಬಲ್ಲವರಂತೆ ನಡೆದಾಡುತ್ತಿದ್ದಾರಲ್ಲ. ಬದುಕಿನಲ್ಲಿ ಮೂಲಭೂತವಾಗಿರುವ ಅಚ್ಚರಿಗೆ ಎರವಾಗುತ್ತಿದ್ದ್ದಾರಲ್ಲ. ಇದಕ್ಕೇನೆನ್ನಬೇಕು? ಅದಿರಲಿ; ಇನ್ನೊಂದು ಆಶ್ಚರ್ಯವನ್ನು ನೋಡುವಿಯೇನು? ಭಗವಂತನ ಆಟ ನಿನ್ನಲ್ಲಿ ಪುನರಭಿನೀತವಾಗುತ್ತಿದೆ, ದೊರೆಯೇ. ಕೃಷ್ಣ ನಿನ್ನನ್ನು ಬಿಡಲೊಲ್ಲ. ಅವನು ಹಾಗೆಯೇ. ಅವನಿಗೆ ಹಿಡಿಯೋದು ಮಾತ್ರ ಗೊತ್ತು. ಬಿಡೋದು ಗೊತ್ತಿಲ್ಲ. ಅವನು ಹಿಡಿದಿರೋದು ನಮಗೆ ಗೊತ್ತಾದರೆ ಸಾಕು. ನೀನು ತಾಯ ಒಡಲಲ್ಲಿರುವಾಗ ಸಾವಿನ ಜತೆ ಬಂದು ನಿನ್ನನ್ನು ಭೆಟ್ಟಿಯಾದನಲ್ಲ. ಅದೇ ನಾಟಕ ಈಗ ಮತ್ತೆ ಅಭಿನೀತವಾಗುತ್ತಿದೆ. ಈಗಲೂ “ಸಾವು” ಹತ್ತಿರಿದೆ. ಸುಳಿಯುತ್ತಿದೆ. ದೇವರೂ ಸುಳಿಯುತ್ತಿರಬಹುದು. ಅದಿರಲಿ, ದೇವರ ಆಟ, ಪುನರಭಿನೀತವಾಗುತ್ತಿದೆ ಎಂದೆನಲ್ಲ ನಿನಗೇನರ್ಥವಾಯಿತು ದೊರೆಯೆ?
ದೊರೆಗೆ ಈಗ ಜಾಡುಸಿಕ್ಕಿತ್ತು. ಎಳೆ ಸಿಕ್ಕಿತ್ತು. ಹೇಳಿದ: ಮರಳಿ ನಡೆಯುತ್ತಿದೆ ಆಟ ಎಂದರೆ, ನಾನವನನ್ನು ನೆನೆಯಬೇಕು ಎಂಬ ಭಾವ ನನ್ನಲ್ಲಿ ಹುಟ್ಟಿ ಬಿಟ್ಟಿದೆ ಗುರುವೆ. ಅವನ ಆಟಕ್ಕೆ ಅದೇ ಅರ್ಥ. ನಮ್ಮ “ನೆನಪು”. ಅವನು “ಪುನರಭಿನಯ”. ಇವು ಒಂದು ಇನ್ನೊಂದಾಗಬಲ್ಲ ಅಂತರಂಗದ ಜೀವಂತ ಭಾವದ್ರವ್ಯ. ಇವು ಒಂದು ಇನ್ನೊಂದಾಗುವುದೇ ಒಂದು ಆಟ. ಆಹಾ! ನಾನು ನಿಮ್ಮಲ್ಲಿ ಕೇಳಿದ ಪ್ರಶ್ನೆಗೂ “ಪುರುಷಸ್ಯೇಹಯತ್ಕಾರ್ಯಂ ಮ್ರಿಯಮಾಣಸ್ಯ ಸರ್ವಥಾ”, ಸಾಯಲೇಬೇಕಾದ ಮನುಷ್ಯ ನಿಜಕ್ಕೂ ಏನು ಮಾಡಬೇಕೆಂಬ ಪ್ರಶ್ನೆಗೂ- ಇಲ್ಲೇ ಉತ್ತರವಿದೆಯೇನು! ಸಾವಿನ ಜತೆಗಾರನಾಗಿ, ಸಾವನ್ನು ಬದುಕಾಗಿಸಬಲ್ಲ ಭಗವಂತನನ್ನು, ಕೃಷ್ಣನನ್ನು ನೆನೆಯಬೇಕೆನ್ನುವುದೇ ಈ ಪ್ರಶ್ನೆಗೆ ಉತ್ತರವೇನು! ಹೋ! -ಪ್ರಶ್ನೆಗೆ ಉತ್ತರವನ್ನೂ ನನ್ನಿಂದಲೇ ಹೇಳಿಸಿದಂತಿದೆ! ಇದು ಏನು ನಿಮ್ಮ ಆಟ!
ಶುಕಮುನಿ ಮತ್ತೊಮ್ಮೆ ಮೆಲುನಗೆ ನಕ್ಕರು. “ಪುನರಭಿನೀತವಾಗುತ್ತಿದೆ ಎಂದೆನಲ್ಲ. ನಿನ್ನ ಆ ಮುತ್ತಜ್ಜ, ಕುರುಪಿತಾಮಹ ಭೀಷ್ಮನ ಬಾಳಿನಲ್ಲೂ ಹೀಗೇ ನಡೆಯಿತು” ದೊರೆ ತನ್ನ ಪಿತಾಮಹರ ಕತೆ ಏನು ಎಂದು ಕೇಳಿದ. ಶುಕಮುನಿ ಹೇಳಿದರು. ಕತೆ, ತನ್ನಲ್ಲಿಯೇ ಅದುರುತ್ತ, ಮತ್ತೆ ಹಿಂದಕ್ಕೆ ಓಲಾಡಿತು.
ತೋಳ್ಪಾಡಿ ಭಾಗವತ ಕಥಾ 10: ಬದುಕೆಂಬ ಮರ ಸಾವೆಂಬ ಹಣ್ಣು
ನೆನೆಯುವುದು ದೊಡ್ಡ ಧರ್ಮ ಎಂದ ಶುಕಮುನಿ. ಹಾಗೆ ಮುನಿ ಹೇಳಲೇಬೇಕಿತ್ತು. ಏಕೆಂದರೆ ಶುಕನಿಗೆ, ವ್ಯಾಸರು ತನ್ನನ್ನು ನೆನೆದದ್ದರ ಅನುಭವ ಇತ್ತು. ವ್ಯಾಸಮುನಿ ಮಗನ ಅಗಲಿಕೆಯಿಂದ ಕಂಗೆಟ್ಟು ಅವನನ್ನು ನೆನೆಯುತ್ತ ಕೂಗಿಕರೆಯುತ್ತ ಕಾಡಿನಲ್ಲಿ ಅಲೆಯುತ್ತಿದ್ದರಲ್ಲ ಆಗ ಆ ತಂದೆಯ ಕರೆಗೆ ಕಾಡೆಲ್ಲ ಓಗೊಟ್ಟುವಲ್ಲ! ನೆನೆಯಲ್ಪಡುವುದು ಗೊತ್ತಾದರೆ- ಅಂತಃಕರಣ ಅಷ್ಟು ಸೂಕ್ಷ್ಮವಾದರೆ- ಓಗೊಡದೆ ಇರುವುದು ಸಾಧ್ಯವಿಲ್ಲ ಎಂದೂ ಶುಕನಿಗೆ ಅನುಭವ ಇತ್ತು. ಕರೆಯುವುದು ಮತ್ತು ಆ ಕರೆಗೆ ಓಗೊಡುವುದು, ನೆನೆಯುವುದು ಮತ್ತು ನಾವು ನೆನೆದ ಆ ಪರವಸ್ತು, ನೀನು ನೆನೆಯಬೇಕಾದ ಅಗತ್ಯವೇ ಇಲ್ಲದಷ್ಟು ನಿನ್ನ ಹತ್ತಿರ ನಾನು ಇದ್ದೇನೆ ಎಂದು ಪಿಸುನುಡಿಯುವುದು- ಇದು ನಿಜವಾದ ಮಿಲನ! ಶುಕನೆಂಬ ಬಾಲಬ್ರಹ್ಮಚಾರಿಗೆ ನಿಜವಾದ ಮಿಲನದ ಈ ಅನುಭವ ಇತ್ತು. ಇದು ಜೀವ- ದೇವರ ಮಿಲನವೆಂದರೆ ಮಾತು ದೊಡ್ಡದಾಯಿತು. ಅಲ್ಲವೆಂದಲ್ಲ. ಆದರೆ ಇದು ಬದುಕು-ಸಾವುಗಳ ಮಿಲನ! ಎಷ್ಟು ವಿಚಿತ್ರ ಈ ಬದುಕು. ಮನುಷ್ಯ ಜೀವಿ ಮಿಲನಕ್ಕೆ ಹಂಬಲಿಸುತ್ತದೆ; ಸಾವಿಗೆ ಅಂಜುತ್ತದೆ! ಮಿಲನವೆಂದರೆ ತನ್ನ ತನಕರಗುವುದು; ಕರಗಿ ಇನ್ನೊಂದರಲ್ಲಿ ಬೆರೆಯುವುದು. ಆ ಇನ್ನೊಂದು ಹೇಗಿದೆ? ಅದೂ ತನ್ನ ತನವನ್ನು ಕಳೆದುಕೊಂಡು ಕರಗುವುದಕ್ಕೆ ಈ ಮುನ್ನವೇ ಸಿದ್ಧವಾಗಿದೆ; ಸಿದ್ಧವಾದಂತಿದೆ ಅಥವಾ ಅದು ಕರಗಿಕೊಂಡೇ ಇದೆ. ತನ್ನ ತನವನ್ನು ಪಡೆದು ಪೆಡಸಾಗಿ ಘನಿಸಿಯೇ ಇಲ್ಲವೇನೋ- ಹಾಗಿದೆ. ಇದು ಎರಡು ನೀರುಗಳು ಬೆರೆತಂತೆ ಉಪನಿಷತ್ತು ಹೇಳಿತ್ತು: ಯಥಾ ಉದಕಂ ಶುದ್ಧೇ ಶುದ್ಧಂ ಆಸಿಕ್ತಂ ತಾದೃಗೇವ ಭವತಿ, ಏವಂ ಆತ್ಮಾ ಭವತಿ ಗೌತಮ ರಾಡಿ ಕಳೆದು ಸ್ವಚ್ಛವಾದ ಎರಡು ನೀರುಗಳು- ಅವುಗಳಲ್ಲಿ ಒಂದು ನೀರು ಮೊದಲೇ ಸ್ವಚ್ಛವಾಗಿಯೇ ಇತ್ತು- ಹೇಗೆ ತಮ್ಮ ಗುರುತು ಅಳಿಯುವಂತೆ ಪರಸ್ಪರ ಬೆರೆಯಬಲ್ಲವು ಹಾಗೆ, ಎರಡು ಮನಸ್ಸುಗಳು; ಎರಡು ಜೀವಗಳೂ ಪರಸ್ಪರ ಬೆರೆಯಬಲ್ಲವು- ಎಂದು. ಎರಡು ನೀರು ಬೆರೆತರೆ ಅದು ಸಂಗಮ. ಸಂಗಮದ ನೀರು ತೀರ್ಥ. ಅಲ್ಲಿ ಒಂದು ಕ್ಷೇತ್ರ. ನೀರುಗಳು ಬೆರೆತಲ್ಲಿ ಅದು ಪ್ರಯಾಗ. ನೀರುಗಳ ಸಂಗಮವನ್ನು ಕ್ಷೇತ್ರವೆಂದ ದೇಶವಿದು. ಅದಿರಲಿ. ಇನ್ನೊಂದರಲ್ಲಿ ಬೆರೆಯುವುದೆಂದರೆ, ಅದುವರೆಗಿನ ಗುರುತು ಅಳಿಯುವುದೆಂದರೆ ಅದು ಸಾವೇ ಅಲ್ಲವೆ? ಈ ಅರ್ಥದಲ್ಲಿ ಮನಸ್ಸುಗಳ ಮಿಲನವೆಂದರೆ, ನಿಜವಾಗಿ ಮಿಲನವು ಸಂಭವಿಸಿದರೆ, ಅದು ಸಾವಿನ, ನಾವು ಬಹಳ ಅಂಜುವ ಸಾವಿನ ಇನ್ನೊಂದು ರೂಪವೇ ಅಲ್ಲವೇ? ಸಾವು, ಸಾವಾಗಿಯೂ ಇದೆ. ಅಂದರೆ ನಾವು ಬಹಳ ಪ್ರೀತಿಸುವ, ದೇಹ-ಮನಸ್ಸುಗಳ ಈ ಸಂಯುಕ್ತ ನಿಕಾಯವನ್ನು ಬಿಟ್ಟು ನಡೆಯಲೇಬೇಕಾದ ಹೊತ್ತಾಗಿಯೂ ಇದೆ. ಹುಟ್ಟಿನಿಂದಲೇ ಸಾವಿಗೆ ಕ್ಷಣಗಣನೆ ಶುರುವಾದಂತಿದೆ. ಆದರೆ ಅಷ್ಟೇ ಅಲ್ಲ. ಈ ಕಾಯದಲ್ಲಿಯೇ, ಕಾಯದಲ್ಲಿ ಬೆರೆತ ಮನಸ್ಸು ಅದರಿಂದ ಕ್ಷಣ ಮಾತ್ರವಾದರೂ ಬಿಡಿಸಿಕೊಂಡು ಇನ್ನೊಂದು ಮನಸ್ಸಿನಲ್ಲಿ ಬೆರೆತಾಗ, ಆ ಮಿಲನದಲ್ಲಿ, ತನ್ನತನ ಕರಗುತ್ತಿರುವ ಹೊತ್ತಿನಲ್ಲಿಯೇ, ತನ್ನ ರುಚಿಯನ್ನು ಪ್ರಕಟಿಸುವ ಒಳ ಬದುಕಾಗಿ ಕೂಡ, ಸಾವು- ಇದೆ. ಒಂದು ಬದಿಯಿಂದ ನೋಡಿದರೆ, ಈ ಬದುಕಿನಿಂದ ನಮ್ಮನ್ನು ಕಿತ್ತೆಸೆಯುವ, ಬೇರ್ಪಡಿಸುವ, ಅಂಜಿಸುವ ಸಾವು. ಮತ್ತೊಂದು ಬದಿಯಿಂದ, ಇನ್ನೊಂದರ ನೆನಪಾಗಿ, ಉತ್ಕಟವಾದ ಹಂಬಲವಾಗಿ, ಆಳದ ಕರೆಯಾಗಿ, ಆ ಕರೆಗೆ ಓಗೊಡುವ ಧ್ವನಿಯಾಗಿ ಹೀಗೆ ಮಿಲನದ ಸಜ್ಜಿಕೆಯಾಗಿಯೂ ಇದೆ. ಮೇಲ್ನೋಟಕ್ಕೆ ಬದುಕು, ಸಾವಿನ ಕಡೆಗೆ ಸರಿಯುತ್ತಿದೆ. ಒಳನೋಟಕ್ಕೆ, ಸಾವು, ಬದುಕಿನ ಕಡೆಗೆ, ಎತ್ತಿಕೋ ಎಂದು ಕೈಚಾಚಿಕೊಂಡು ಬರುತ್ತಿದೆ. ತನ್ನ ಇನ್ನೊಂದು ರೂಪದಲ್ಲಿ. ಬರಿಯ ಒಂದು ಮುಖದಲ್ಲಿ ಮಾತ್ರ ಬದುಕನ್ನು ನೋಡದಿರು. ಬದುಕುತ್ತ, ಬದುಕುತ್ತ, ಬದುಕನ್ನು ತಿಳಿಯುತ್ತ ಹೋಗುವುದು ಒಂದು ರೀತಿ. ಬದುಕನ್ನು ಆಳದಲ್ಲಿ ಬಗೆಯುತ್ತ ಬದುಕಿನ ಒಳ ಪ್ರವಾಹದ ಗತಿಯನ್ನು ಅನುಭವಿಸೋದು ಇನ್ನೊಂದು ರೀತಿ. ಕಡಲಿನಿಂದ ಹೊರಟ ನೀರು ಮತ್ತೆ ಕಡಲಿನತ್ತ ಹರಿಯುತ್ತಿದೆ ಎಂಬ ರೀತಿಯ ಅರಿವು- ಈ ಇನ್ನೊಂದು ರೀತಿ. ಹೊಳೆಯೊಂದು ಕಡಲನ್ನು ನೆನೆದರೆ ಅದು ಸಹಜವಲ್ಲವೆ? ನೆನೆಯದಿರುವುದೇ ಅಸಹಜವಲ್ಲವೆ? ನೆನೆಯುವುದು ದೊಡ್ಡ ಧರ್ಮ ಎಂದರು ಶುಕಮುನಿ.
ಮನಸ್ಸುಗಳ ಮಿಲನದಲ್ಲಿ ಸಾವಿನ ರುಚಿ ಇದೆ. ಹೌದು, ಸಾವಿಗೂ ರುಚಿ ಇದೆ ಮತ್ತು ಅದು ಬದುಕಿನ ನಿಜವಾದ ರುಚಿ. ಬದುಕೆಂಬುದು ಒಂದು ಮರ. ಸಾವೆಂಬುದು ಅದರ ಹಣ್ಣು. ನೆನಪೆಂಬುದು ಬೇರಿನಿಂದ ಹಣ್ಣಿನ ತನಕ ಹರಿಯುತ್ತಿರುವ ಜೀವರಸಸಾರ. ಸಾವಿನ ರುಚಿ ಅನುಭವಿಸದೆ ಇದ್ದರೆ -ಸಾವೆಂಬುದು ನಿತ್ಯ ಭೀತಿ. ಸಾವೆಂದರೆ ಬದುಕಿನಿಂದ ಬೇರೆ ಎಂದು ತಪ್ಪಾಗಿ ತಿಳಿದ ಅರಿವಿಗೆ, ಅದನ್ನನುಭವಿಸಲು ಒಲ್ಲದ ಮನಸ್ಸಿಗೆ ಸಾವೆಂಬುದು ತಲೆಯ ಮೇಲೆ ತೂಗುತ್ತಿರುವ ಕತ್ತಿ. ಈ ಭೀತಿಯನ್ನು ಕಳೆದುಕೊಳ್ಳದೆ ಬದುಕಿನ ರುಚಿ, ಅನುಭವಿಸೋದೇ ಅಸಾಧ್ಯ ಮತ್ತು ಈ ಭೀತಿಯಿಂದಾಗಿಯೇ ಬದುಕಿನಲ್ಲಿ ಏನು ಮಾಡಿದರೂ ಅದು ಮಾಡಬೇಕಾದುದನ್ನು ಮಾಡದೆ ಇನ್ನೇನೋ ಮಾಡಿದಂತೆ, ಒಂದು ಕೊರತೆ, ಒಂದು ನೆಮ್ಮದಿಗೇಡಿನ ಸ್ಥಿತಿ. ಆದುದರಿಂದ ಇಲ್ಲಿ ಏನು ಮಾಡಬೇಕೆಂದು ತಿಳಿಯೋದು ಬಲ್ಲವರಿಗೂ ಸುಲಭವಲ್ಲ ಎಂದಿದ್ದ ಭಗವಂತ ಕೃಷ್ಣ. ಕಿಂ ಕರ್ಮ ಕಿಂ ಅಕರ್ಮ ಇತಿ ಕವಯೋಸಿ ಅತ್ರ ಮೋಹಿತಾಃ -ಎಂದಿದ್ದ. ನಿಜಕ್ಕೂ ಬಲ್ಲವರು, ಸಾವಿನ ರುಚಿ ಎಂಬ ಮಾತಿನ ಹಿನ್ನೆಲೆಯಲ್ಲಿ ಮತ್ತೊಂದು ಮಾತು ಹೇಳಿದ್ದರು: ಮರಣಂ ಪ್ರಕೃತಿ; ಶರೀರಿಣಾಂ ವಿಕೃತಿ; ಜೀವನಂ ಉಚ್ಯತೇ ಬುಥೈಃ. ದೇಹವನ್ನು ಪಡೆದು ಇಲ್ಲಿಗೆ ಬಂದ ಜೀವಿಗೆ- ಮರಣವೇ ಪ್ರಕೃತಿ. ಆ ಪ್ರಕೃತಿಯನ್ನು ಮನ್ನಿಸಲಾಗದ, ತಪ್ಪಾಗಿ ತಿಳಿದ ಬದುಕೇ ನಿಜವಾಗಿ ವಿಕೃತಿ ಎಂದು. ಮನುಷ್ಯ ಜೀವಿಗೆ ಒಂದೆಡೆ ಮಿಲನದ ಹಂಬಲ. ಇನ್ನೊಂದೆಡೆ ಸಾವಿನ ಭೀತಿ. ಇದು ವಿಚಿತ್ರ ವಿಪರ್ಯಾಸ. ಬದುಕಿನೊಳಗಿನ ಬದುಕನ್ನು ತಿಳಿಯದ ವಿಪರ್ಯಾಸ. ಒಮ್ಮೆ ಬದುಕಿನ ಒಳಹೊಕ್ಕು ಅಲ್ಲಿರುವ ಸಾವಿನ ರುಚಿಯನ್ನು ತಿಳಿದನೋ ಮತ್ತೆ ಅಂಥವನ ಬದುಕೇ ಬೇರೆ ಬಗೆಯಾಗುತ್ತೆ- ಎಂದರು ಶುಕಮುನಿ.
ಪರೀಕ್ಷಿದ್ರಾಜ ಮುಂದಿಟ್ಟ ಜಿಜ್ಞಾಸೆಯನ್ನು- ಸಾವೆಂಬ ನಿಜವನ್ನು ಮನುಷ್ಯ ಹೇಗೆ ಗ್ರಹಿಸಬೇಕೆಂಬ ಜಿಜ್ಞಾಸೆಯನ್ನು, ಅದು ತಮ್ಮದೇ ಜಿಜ್ಞಾಸೆ ಎಂಬಂತೆ, ತಮ್ಮ ಸಾವನ್ನು ತಾನೇ ಸವಿಯುತ್ತಿರುವರೋ ಎಂಬಂತೆ ಶುಕಮುನಿ ನುಡಿಯುತ್ತಿದ್ದರು. ದೊರೆ ಕೇಳಿದ: ಗುರುವೆ, ಬದುಕೇ ಬೇರೆ ಬಗೆಯಾಗುತ್ತೆ ಎಂದಿರಿ. ಬೇರೆ ಬಗೆ ಎಂದರೆ ಹೇಗೆ?
ತಾವು ಉಂಡ ಸವಿ ಎಲ್ಲರೂ ಉಣ್ಣುವಂತಾಗಲಿ ಎಂದು ಅಂಥವರಿಗೆ ತೀವ್ರವಾಗಿ ಅನ್ನಿಸುತ್ತೆ. ಹಾಗೆ ಉಣ್ಣುವಂತೆ ಮಾಡುವುದೇ ತನ್ನ ಕರ್ತವ್ಯ ಎಂದೂ ಅನ್ನಿಸುತ್ತೆ. ನಿನ್ನ ಗುರು ಶಮೀಕ ಇಂಥವನು. ಮನುಷ್ಯನಿಗೆ ಏನು ಕರ್ತವ್ಯ ಎಂದು ನೀನು ಕೇಳಿದೆಯಲ್ಲ. ನೀನು ಕೇಳುವ ಮುನ್ನವೇ ಶಮೀಕನಲ್ಲಿ ಆ ಕರ್ತವ್ಯ ಜಾಗೃತವಾಗಿತ್ತು. ಅದು ಅಂಥ ರುಚಿ.
ದೊರೆ ಚಕಿತನಾದ. ಶಮೀಕನ ಪ್ರಸ್ತಾವ! ಶುಕಮುನಿ ವಿವರಿಸಿದರು: ದೊರೆಯೇ, ನೀನು ನೀರು ಕೇಳಿದೆ. ಶಮೀಕಮುನಿ ತನ್ನ ಧ್ಯಾನದಲ್ಲಿ ಮುಳುಗಿದ್ದ. ಅವನಿಗೆ ತಿಳಿಯಲಿಲ್ಲ. ನೀನು ಸಿಟ್ಟಾದೆ. ಸತ್ತ ಹಾವನ್ನು ಅವನ ಕೊರಳಿಗೆ ಸುತ್ತಿದೆ. ಮುನಿ ನಿನ್ನ ಅಪಚಾರವನ್ನು ಲೆಕ್ಕಿಸಲಿಲ್ಲ. ನೀನು ನೀರು ಕೇಳಿದ್ದನ್ನು ಮಾತ್ರ ಮರೆಯಲಿಲ್ಲ. ಎರಡು ನೀರು ಬೆರೆಯುತ್ತಿದೆ ಎಂದು ಅವನಿಗೆ ಅನುಭವದಲ್ಲಿ ತಿಳಿದಿತ್ತು. ತಾನು ಉಂಡದ್ದನ್ನು ನೀನೂ ಉಣ್ಣಬೇಕೆಂದು, ನಿನಗೆ ಉಣ್ಣಿಸಬೇಕೆಂದು ಉತ್ಕಟವಾಗಿ ಬಯಸುತ್ತಿದ್ದಾನೆ. ಅವನ ಮಗನ ಶಾಪವೇನೋ ತಕ್ಷಕನಿಗೆ ಪ್ರಚೋದನೆಯಾಗಬಹುದು. ಅದಿರಲಿ. ಅದು ಪ್ರಕೃತಿಯ ಮತ್ತೊಂದು ಮುಖ. ಈಗ ನಿನ್ನಲ್ಲಿ ಈ ಸಾವಿನ ಜಿಜ್ಞಾಸೆ ತಲೆ ಎತ್ತಿತಲ್ಲ- ಅದು ಶಮೀಕ ಮುನಿಯ ಕೊಡುಗೆ! ಅವನ ಮನಸ್ಸು ನಿನ್ನನ್ನು ನೆನೆಯುತ್ತಿದೆ. ಅವನಿಗೆ ಗೊತ್ತು- ತನ್ನ ಕರ್ತವ್ಯವೇನೆಂದು!
ದೊರೆಗೆ ಮತ್ತೆ ಆಶ್ಚರ್ಯವಾಯಿತು. ಈ ಶುಕಮುನಿ ಉತ್ತಿರಿಸುವ ರೀತಿಯೇ ಬೇರೆ. ತಾನು ಕೇಳಿದ್ದು : ಸಾವೆಂಬ ನಿಜವನ್ನು ಎದುರಿಟ್ಟುಕೊಂಡು ಮನುಷ್ಯ ಮಾಡಬೇಕಾದುದೇನು? ಶುಕಮುನಿ ಹೇಳುತ್ತಿರುವುದು : ಶಮೀಕ ಆ ಕರ್ತವ್ಯವನ್ನು ಮಾಡುತ್ತಿದ್ದಾನೆ. ಅವನೇನು ಪಡೆದಿದ್ದ ; ಏನು ಉಂಡಿದ್ದ ಅದನ್ನು ತನಗೆ ನೀಡಲು ಹಾತೊರೆಯುತ್ತಿದ್ದಾನೆ; ಅದಕ್ಕಾಗಿ ತನ್ನನ್ನು ನೆನೆಯುತ್ತಿದ್ದಾನೆ- ಎಂದು. ಓ, ನೆನಪೆಂಬ ಅದ್ಭುತದಲ್ಲಿ ಇಡಿಯ ಬದುಕು ನಡೆಯುತ್ತಿದೆ. ತಾನು ಪಡೆಯಬೇಕೆಂದಿರುವುದನ್ನು ಮೊದಲೇ ಪಡೆದಿರುವವನು ಒಬ್ಬನಿದ್ದಾನೆ. ಕರ್ತವ್ಯವೇನು ಎಂದು ಕೇಳಿದರೆ, ಆ ಕರ್ತವ್ಯವನ್ನು ನಡೆಸುತ್ತಿರುವವನು ಮೊದಲೇ ಒಬ್ಬನಿದ್ದಾನೆ. ಅದು ಹಾಗಿರುವುದರಿಂದಲೇ ತನಗೆ ಈ ಪ್ರಶ್ನೆ ಹುಟ್ಟಿಕೊಂಡಿದೆ ಎಂದರೂ ತಪ್ಪಿಲ್ಲ. ಹಾಗಾದರೆ ಉತ್ತರವೇ ಪ್ರಶ್ನೆಯನ್ನು ಹುಟ್ಟಿಸಿತು. ಅದು ಅಡಗಿರುವ ಉತ್ತರ ತನ್ನನ್ನು ತಾನು ಪ್ರಕಟಿಸಿಕೊಳ್ಳುವ ರೀತಿ. ಉತ್ತರಕ್ಕೆ, ತಾನು ಪ್ರಶ್ನೆಯಾಗುವಲ್ಲಿ ಯಾವ ಅಳುಕೂ ಇಲ್ಲ. ಏಕೆಂದರೆ ಅದಕ್ಕೆ ಕಾಲ-ದೇಶಗಳಲ್ಲಿ ಸ್ಥಗಿತಗೊಂಡ ಸ್ವ-ಚಿತ್ರ ಒಂದಿಲ್ಲ. ಆದುದರಿಂದಲೇ ಅದು ಯಾವ ಕಾಲದಲ್ಲೂ, ಯಾವ ದೇಶದಲ್ಲೂ ಯಾವ ಚಿತ್ರವೂ ಆಗಬಲ್ಲುದು ಮತ್ತು ಸ್ಥಗಿತಗೊಳ್ಳದೆ ಇದ್ದುದರಿಂದಲೇ ಅದರ ಜತೆಗೆ ಮಿಲನದ ಸಾಧ್ಯತೆ ಸದಾ ತೆರೆದಿದೆ. ಕಡಲು, ಹೊಳೆಯನ್ನು ಸದಾ ಸ್ವಾಗತಿಸಿಕೊಂಡೇ ಇದೆ. ತಾನು ಮರೆತಿದ್ದೆ. ಮರೆತಂತೆ ಇದ್ದೆ. ಆದರೆ ಅದು ಮರೆತಿಲ್ಲ. ಅದಕ್ಕೆ ಮರವೆ ಇಲ್ಲ. ಅದು ಸದಾ ನೆನಪಾಗಿ ಇದೆ. ಈ ನೆನಪಿನ ಒಡಲಲ್ಲಿ ಮರವೆ ಎಂಬುದು ಹೇಗೆ ಹುಟ್ಟಿತೋ! ಇದು ಒಂದು ಆಟವೋ ಏನೋ. ಆಟ ಎಂದಾಗ ಆನಂದ. ಮರೆತದ್ದು ನೆನಪಾಗುವುದೇ ನಿಜವಾದ ಆನಂದ! ನೆನಪಿಗೆ- ಸ್ಮರಣೆ ಎನ್ನುತ್ತೇವಲ್ಲ. ಸ್ಮರಣೆ ಆನಂದದಾಯಕ ಎನ್ನುವುದನ್ನು ಸೂಚಿಸಲೆಂಬಂತೆ ಸ್ಮರಣೆಯಲ್ಲಿ ಸ್ಮರನೂ ಇದ್ದಾನೆ! ಸ್ಮರ ಎಂಬ ಪದ ಹೊಳೆದಾಗ ದೊರೆಗೆ ಸಹಜವಾಗಿ ಕೃಷ್ಣನ ನೆನಪಾಯಿತು. ಕೃಷ್ಣ, ಗೋಪಿಕೆಯರಿಗೆ ಸ್ಮರನಂತೆ ಇದ್ದು, ಕೃಷ್ಣನ ನೆನಪಾಗುವಾಗ ಅವನು ಸಾವಿನ ಜತೆಗಾರ ಎಂದು ಶುಕಮುನಿ ಹೇಳಿದ್ದು ನೆನಪಾಯಿತು. ಸಾವಿನ ರುಚಿ ಎಂಬ ಅದ್ಭುತ ನುಡಿಗಟ್ಟೂ ನೆನಪಾಯಿತು. ಜೇಡ, ತನ್ನೊಡಲ ನೂಲಿನಿಂದ ಬಲೆಕಟ್ಟುವಂತೆ, ತನ್ನೊಳಗಿನ ಕೃಷ್ಣ ಹೀಗೆ ನೆನಪಿನ ಹೆಣಿಗೆಯ ಆಂತರಿಕ ಪ್ರಪಂಚವನ್ನು ಕಟ್ಟುತ್ತಿದ್ದಾನೇನು ಎಂದು ಕುತೂಹಲವಾಯಿತು. ಸಾವಿರ ರುಚಿ ಎಂದಾಗ ತನ್ನ ಮುತ್ತಜ್ಜ ಭೀಷ್ಮರ ನೆನಪೂ ಆಯಿತು. ಅವರ ಕತೆ ಹೇಳುತ್ತೇನೆ ಎಂದಿದ್ದ ಶುಕಮುನಿ. ಅದೇನು ಎಂದು ದೊರೆ ಈಗ ಕೇಳಿದ: ನೆನಪು ಶರಶಯ್ಯೆಯ ಸುತ್ತ ಸುಳಿಯತೊಡಗಿತು.
ಮಹಾಭಾರತದ ಯುದ್ಧದ ಮೊದಲ ಸೇನಾಧಿಪತಿ, ಕೌರವ – ಪಾಂಡವರಿಬ್ಬರಿಗೂ ಪೂಜ್ಯರಾದ ಪಿತಾಮಹಾ ಭೀಷ್ಮರು ಶರಶಯ್ಯೆಯಲ್ಲಿ ಒರಗಿದ್ದರು. ಕುರುಕ್ಷೇತ್ರವನ್ನು ಬಿಟ್ಟು ಹೋಗಿರಲಿಲ್ಲ. ಅಲ್ಲೇ ಒಂದೆಡೆ ತಮ್ಮ ಪ್ರೀತಿಯ ಮೊಮ್ಮಗ ರಚಿಸಿಕೊಟ್ಟ ಶರಶಯ್ಯೆಯಲ್ಲಿ ಒರಗಿದ್ದರು. ಭಗವಂತನಿಗೆ ಕಾಲವೆಂಬ ಕಾಳಸರ್ಪವೇ ಹಾಸಿಗೆಯಾದರೆ, ಕ್ಷತ್ರಿಯನಿಗೆ ಮೊನಚು ಬಾಣಗಳೇ ಹಾಸಿಗೆ. ಭಗವಂತ ಮತ್ತು ಭಕ್ತ ಪರಸ್ಪರ ಹೀಗೆ ನಿರೀಕ್ಷಿಸಿಕೊಂಡಿರುವರೇನೋ. ಭೀಷ್ಮರು ಉತ್ತರಾಯಣವನ್ನು ನಿರೀಕ್ಷಿಸುತ್ತಿದ್ದರಂತೆ. ಕೃಷ್ಣ, ಉತ್ತರೆಯ ಮಗುವನ್ನು ಪರೆದು, ಈ ಅರ್ಥದಲ್ಲಿ ಇತಿಹಾಸಕ್ಕೆ ಉತ್ತರಾಯಣದ ಗತಿಯನ್ನು ಕಲ್ಪಿಸಿದ್ದ. ಭೀಷ್ಮರಿಗೆ ಮೈಯ್ಯೆಲ್ಲ ಹುಣ್ಣು. ಈ ಕುರುವೃದ್ಧ, ಮಹೋನ್ನತ ಕ್ಷತ್ರಿಯನ ಮೈಯ್ಯೆನ್ನೆ ಓದಬೇಕು- ಬಲ್ಲವರು ಎನ್ನುತ್ತಾನೆ. ನಮ್ಮ ದೊಡ್ಡ ಕವಿ ಪಂಪ. ಮೈಯ್ಯೊಳ್ ಅತ್ತಮಿತ್ತಂ ತೆರೆದಿರ್ದ ಪುಣ್ಗಳ್ ಎಸೆವಕ್ಕರದಂತಿರೆ ವೀರ ಸಿದ್ಧಾಂತದ ಶಾಸನಂ ಬರೆದ ಪೊತ್ತಗೆಯಂತೆ ಅಮರಾಪಗಾತ್ಮಜಂ. ಮೈಯ್ಯ ಹುಣ್ಣುಗಳನ್ನು ಅಕ್ಷರಗಳೆಂದು ಕಂಡವರಿದ್ದಾರೆಯೇ- ಕವಿಗಳಲ್ಲದೆ? ಹಕ್ಕಿಯ ಅಳಲನ್ನು, ನೋವನ್ನು ಕಾವ್ಯವೆಂದು ಕಂಡದ್ದರ ಇನ್ನೊಂದು ರೂಪವಿದು. ಕ್ಷತ್ರಿಯನಿಗೆ ಮೈ -ಬೇರೆ, ಮನಸ್ಸು -ಬೇರೆ ಅಲ್ಲ. ಕ್ಷತ್ರಿಯನ ಮೈಯ್ಯನ್ನೇ ಓದಬೇಕು ದೇವರು.
ಇಂಥ ಭೀಷ್ಮ, ತಮ್ಮ ಕೊನೆಯ ಗಳಿಗೆಯಲ್ಲಿ ಭಗವಂತ ಕೃಷ್ಣನನ್ನು ನೆನೆದನಂತೆ ಆ ನೆನಹನ್ನು ಬೆರಗಾಗಿ ಬಣ್ಣಿಸದೆ ಭಾಗವತ ಮುಂದಕ್ಕೆ ನಡೆಯದು. ಹೇಗೆ ನೆನೆದನಂತೆ ಭೀಷ್ಮ – ಕೃಷ್ಣನನ್ನು? ಭೀಷ್ಮ ಎಂಥ ಕ್ಷತ್ರಿಯೋತ್ತಂಸನೆಂದರೆ, ಶರಶಯ್ಯೆಯಲ್ಲಿ ಮಲಗಿದ್ದರೂ, ಬದುಕಿನ ಆ ಕೊನೆಯ ಜಾವದಲ್ಲಿ, ಯುದ್ಧ ಅವನೊಳಗೆ ಪುನರಭಿನೀತವಾಗುತ್ತಿದೆ. ಅಥವಾ ಶರಶಯ್ಯೆಯನ್ನು ಅದಕ್ಕೆಂದೇ ಆಯ್ಕೆ ಮಾಡಿದನೇನೋ. ಕೃಷ್ಣನನ್ನು ಸ್ತುತಿ ಮಾಡಬೇಕಾದರೆ ಭೀಷ್ಮನಿಗೆ ಅದು ಯುದ್ಧರಂಗವೇ ಆಗಬೇಕು. ಏಕೆಂದರೆ ಅವನು ಕ್ಷತ್ರಿಯ. ಯುದ್ಧರಂಗದಲ್ಲಿ ದೇಹವನ್ನು ಈಡಾಡುವುದು ಅವನ ಸ್ವ-ಧರ್ಮ. ಅವನದನ್ನು ಬಿಡಲೊಲ್ಲ. ದೇವರಿಗಾಗಿಯೂ ಬಿಡಲೊಲ್ಲ ಮತ್ತು ದೇವರು ಯಾರ ಸ್ವ-ಧರ್ಮವನ್ನು ಕೆಡಿಸುವವನಲ್ಲ. ಸ್ವ-ಧರ್ಮಪಾಲನೆಯನ್ನು ಮೆಚ್ಚುವವನು. ಆದುದರಿಂದ ದೇವರೇ ಬರಬೇಕು ಸ್ವ-ಧರ್ಮ ಪಾಲಕನ ಬಳಿಗೆ. ಭೀಷ್ಮನಂಥಾ ಭೀಷ್ಮನ ಬಳಿಗೆ ಹೇಗೆ ಬಂದ ಕೃಷ್ಣ? ಅದನ್ನು ತನ್ನ ಜೀವಿತದ ಅಭಿಲಾಷೆಯೇ ನೆರವೇರಿತೆಂಬಂತೆ ಭೀಷ್ಮ ಹೇಳುತ್ತಿದ್ದಾನೆ.
ಇಗೋ ಬಂದ, ನನ್ನ ದೇವರು. ನಾನು ಬರಮಾಡಿಕೊಂಡೆ. ಹೊಂಗೆಯ ಎಲೆಗಳ ಬಣ್ಣದ ಮೈಯ ಹೊಗರು. ಎಳೆ ಸೂರ್ಯನ ಕಿರಣಗಳಂತೆ ಪೀತಾಂಬರ. ಹಣೆಯಲ್ಲಿ ಗುಂಗುರು ಮುಂಗುರಳು ಎಳೆಗಾಳಿಗೆ ಕುಣಿಯುತ್ತಿವೆ. ಇಂಥ ದಿವ್ಯ ಮಂಗಳ ಮೂರ್ತಿ; ಯುದ್ಧರಂಗದ ನಡುವೆ ಕಾಣಿಸುತ್ತಿದೆ; ಅರ್ಜುನನ ತೇರಿನಲ್ಲಿ ಸಾರಥಿಯಾಗಿ. ನನ್ನ ಕಣ್ಣು ಇವನಲ್ಲಿ ಕೀಲಿಸಿ ಹೋಗಿದೆ. ಅದರಿಂದ ಹರಿತವಾದ ಬಾಣಗಳನ್ನು ಎಸೆಯುವುದು ಇವರ ಮೈ ಮೇಲೆ- ಸುಲಭವಾಗಿದೆ. ಅದೋ ನೋಡಿ, ಧೂಳು ಮುಸುಕಿದ ಮುಖ. ಬೆವರಿಗೆ ಅಂಟಿಕೊಂಡ ಮುಂಗುರುಳು. ಎಲ್ಲಕ್ಕಿಂತ, ನನ್ನ ಬಾಣತಾಗಿ, ಮೈ ಒಡೆದು, ನೆತ್ತರು ಸೋರಿ, ಹಸಿಗಾಯ ಕಾಣಿಸುತ್ತ, ನನ್ನತ್ತ ಕೋಪದಿಂದ ನಿಟ್ಟಿಸುತ್ತಿರುವ ಮೂರ್ತಿ- ಓ, ಎಂಥ ರುದ್ರ ಮನೋಹರ ಈ ಕೃಷ್ಣ. ನಿನಗೆ ನಾ ಬೆದರುವೆನೇನು? ಮತ್ತಷ್ಟು ಬಾಣಗಳನ್ನೆಸೆದರೆ -ಕೋಪಾವೇಶದಿಂದ ನನ್ನನ್ನು ಸಾಯಿಸಲೆಂಬಂತೆ ಚಕ್ರವನ್ನೇ ಹಿಡಿದು ಮುಂದೊತ್ತಿ ಬರುತ್ತಿದ್ದಾನೆ! ಓ ಭಗವಂತ; ನನಗೆ ಇದು ಬೇಕಿತ್ತು. ಈ ಚಿತ್ರ ಕ್ಷತ್ರಿಯೋಚಿತವಾದ ಚಿತ್ರ. ನಿನ್ನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ. ಹಾಗೆ ಯುದ್ಧ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದೆ. ಚಕ್ರ ಹಿಡಿಯುವುದಿಲ್ಲ ಎಂದಿದ್ದೆ ನೀನು. ನೀನು ಈ ಚಕ್ರ ಹಿಡಿದಿರುವೆ, ನಿನ್ನನ್ನೇ ಮರೆತಿರುವೆ. ನನ್ನನ್ನು ಮರೆತಿಲ್ಲ; ನೀನು. ನಿನ್ನಂಥವನಲ್ಲವೆ ನಮ್ಮಂಥವರಿಗೆ ನಿಜವಾದ ಗತಿ!
ನೀನು ಯಾಕೆ ಪಾರ್ಥಸಾರಥಿಯಾದೆ ಎಂದೀಗ ತಿಳಿಯಿತು; ಪ್ರಭು, ಯುದ್ಧದ ಉನ್ಮಾದದಲ್ಲಿ ಮರಣಕ್ಕೆ ಸಿದ್ಧರಾಗಿ ಕುರುಕ್ಷೇತ್ರಕ್ಕೆ ಬಂದಿಳಿದ ಅಕ್ಷೋಹಿಣಿ ಲಕ್ಕದ ಈ ಸೇನೆ, ತಮ್ಮ ಮರಣದ ಹೊತ್ತಿನಲ್ಲಿ, ತೇರಿನ ಮುಂಭಾಗದಲ್ಲಿ ಕುಳಿತ ನಿನ್ನನ್ನು ನೋಡುತ್ತ, ಸಾವಿನ ಹೊತ್ತಿನ ಏಕಾಗೃತೆಯಲ್ಲಿ ನಿನ್ನನ್ನೆ ನೆನೆಯುತ್ತ- ಸಾವನ್ನು ಸ್ವೀಕರಿಸಲಿ- ಎಂದು. ಬದುಕಿನಲ್ಲೂ, ಸಾವಿನಲ್ಲೂ ನೀನು ಜೊತೆಗಾರ. ನಿನ್ನೊಬ್ಬನೇ ಜೊತೆಗಾರ. ನಿನ್ನನ್ನು ಜೊತೆಗಾರನೆಂದರಿತರೆ ಅದು ಕೊನೆಗೊಳ್ಳುವುದು ಸಾರೂಪ್ಯ ಮುಕ್ತಿಯಲ್ಲಿ!
ಭೀಷ್ಮ ಹೇಳುತ್ತಿದ್ದಾನೆ : ಕೃಷ್ಣ ಸಾರಥಿಯಾದುದರಿಂದ, ಸಾವಿನ ಅಂಗಣವಾಗಿರುವ ಯುದ್ಧರಂಗ, ಆಧ್ಯಾತ್ಮಿಕ ಸಾಧನ ಭೂಮಿ ಆಗಿ ಹೋಯಿತು. ಸಾವನ್ನು ಸ್ವೀಕರಿಸುವ ರೀತಿಯೂ ಒಂದು ಸಾಧನೆಯಾಯಿತು. ಅತ್ಯಂತ ಪ್ರೀತಿ ಪಾತ್ರರೆಂದರೆ ಯಾರು? ಯಾರ ಮುಂದೆ ನಾವು ಸಾಯಲಿಚ್ಛಿಸುವೆವೋ- ಅವರು. ಪ್ರೀತಿಗೆ ಬದುಕನ್ನು ಮುಡಿಪಾಗಿಡುವ ಬಗೆ ಇದು. ಭೀಷ್ಮನಿಗೆ ಈಗ ಕೃಷ್ಣನ ಮುಂದೆ ಸಾಯಬೇಕಾಗಿದೆ. ಅವನು ಇಚ್ಛಾಮರಣಿ ಎನ್ನುವುದು ಈ ಅರ್ಥದಲ್ಲಿ ಸಾರ್ಥಕವಾಯಿತು. ಕಣ್ಣೆದುರು ಇರುವವನು ಕೃಷ್ಣನಾದುದರಿಂದ, ಭೀಷ್ಮನಿಗೆ ಈ ಹಂತದಲ್ಲಿ ಗೋಪಿಕೆಯರ ಸಂಬಂಧವನ್ನು ಭೀಷ್ಮ ನೆನೆದ; ಸಾವಿನ ಹಿನ್ನೆಲೆಯಲ್ಲಿ. ಕೃಷ್ಣನನ್ನು ನೋಡುತ್ತ ಯಾರ ದೇಹಪಾತವಾಯಿತು, ಅವರಿಗೆ ಸಾರೂಪ್ಯ ಮುಕ್ತಿಯಾಯಿತು. ಅಂದರೆ ತಮ್ಮ ನಾಮ-ರೂಪಗಳ ಬಂಧನ ಕಳಚಿ, ಎರಡು ನೀರುಗಳು ಸೇರಿದವು. ಕೃಷ್ಣನೊಡನೆ ಮಿಲನವಾಯಿತು. ದೇಹಪಾತವಾಗದಿದ್ದರೆ? ದೇಹಪಾತವಾಗುವುದು ಬೇಡ ಎಂದು ಕೃಷ್ಣ ಬಯಸಿದರೆ? ಬದುಕಿ ಉಳಿದರೆ? ಆಗ, ಪ್ರೇಮದ ಉನ್ಮಾದ ಉಂಟಾಗುವುದು. ಆಗ, ನಡೆಯೆಲ್ಲ ರಾಸ ನೃತ್ಯವಾಗುವುದು. ಮಣ್ಣು, ವೃಂದಾವನವಾಗುವುದು. ಉಸಿರು, ಕೊಳಲಿನ ನಾದವಾಗುವುದು! -ಗೋಪಿಕೆಯರಿಗೆ ಹೀಗಾಯಿತು ಎಂದು ಭೀಷ್ಮ ಬೆರಗಿನಿಂದ ಕಂಬನಿ ತುಂಬಿ ಗೋಪಿಕೆಯರನ್ನು ನೆನೆದ. ಇದು ಸಾವಿರ ರುಚಿ ಎಂದುಕೊಂಡ, ಈ ರುಚಿಗಾರ ಕೃಷ್ಣ ಎಂದು ಚಕಿತನಾದ. ಚಕಿತಗೊಳ್ಳುತ್ತಿರುವಂತೆಯೇ ಪಿತಾಮಹಾನ ಉಸಿರು ಕೊನೆಯ ಬಾರಿಗೆ ನಿಡಿದಾಗಿ ಹೊರ ಹೊಮ್ಮಿತಂತೆ!
ತೋಳ್ಪಾಡಿ ಭಾಗವತ ಕಥಾ 11:ಕುರುಡನ ಲೋಕದಮೋಹ ಕಣ್ಣಿದ್ದವರಿಗಿಂತ ಮಿಗಿಲು
ಪಿತಾಮಹ ಭೀಷ್ಮರ ಕೊನೆಯ ಕ್ಷಣಗಳ ಬಣ್ಣನೆಯನ್ನು ಶುಕಮುಖದಿಂದ ಕೇಳಿ ದೊರೆ ಪರೀಕ್ಷಿತನಿಗೆ ವಿಸ್ಮಯವಾಯಿತು. ಕೃಷ್ಣನೆಂದರೆ, ದೇವರೆಂದರೆ, -ಇಷ್ಟು ನಮನೀಯವೆ? ಅವನ ಮೈಮೇಲೆ ಬಾಣಗಳನ್ನೆಸೆಯುವುದೂ ಅವನ ಉಪಾಸನೆಯಾಗುವುದೆ? ಅಂದ ಮೇಲೆ, ಕೃಷ್ಣನ ಕೋಪವೂ ಅನುಗ್ರಹವಾಗುವುದೆ? ನಿಗ್ರಹ-ಅನುಗ್ರಹ ಎರಡೂ, ಅನುಗ್ರಹದ ಎರಡು ಮುಖಗಳೆ? ಮೇಲೆ ಎರಡಾಗಿ; ದ್ವಂದ್ವವಾಗಿ ಕಾಣಿಸುವುದರ ಒಳಗೆ ಅನುಭವಿಸುವ ಬದುಕು ಒಂದೇ -ಅಖಂಡವಾಗಿದೆಯೇ? ಆದುದರಿಂದಲೇ, ದೇವರ ಸಮ್ಮುಖದಲ್ಲಿ, ಮನಸ್ಸು ಏಕಾಗ್ರವಾಗಿ ತನ್ನ ಕಾರ್ಯಕ್ಷಮತೆಯ ಉಚ್ಚಾಂಕವನ್ನು ಜೀವಿಗೆ ಮುಟ್ಟಲಾಗುವುದೆ? ಬದುಕು ಹೀಗೆ ಶಿಖರವನ್ನು ತಲಪುವುದೇ ದೇವರ ಇಷ್ಟವೆ? ಈ ಶಿಖರಾನುಭವದಲ್ಲಿ ಬದುಕು ಮತ್ತು ಸಾವು -ಗುರುತು ಅಳಿಯುವಂತೆ ಬೆರೆಯುತ್ತವೆಯೆ? ಅಂತ್ಯಕಾಲವನ್ನು ಅನುಭವಿಸುವುದೆಂದರೆ ಇದೇ ಏನು? ಅಂತ್ಯಕಾಲದ ಏಕಾಗ್ರತೆಯಲ್ಲಿ ದೇವರನ್ನು ನೆನೆ ಎಂದರೆ ಇದೇ ಅರ್ಥವೇನು? ಶತ್ರು-ಮಿತ್ರ, ಇಷ್ಟ-ಅನಿಷ್ಟ, ಸುಖ-ದು:ಖ: ಇತ್ಯಾದಿ ನಾವು ಕಟ್ಟಿಕೊಂಡ ಭೇದಗಳನ್ನು ಕಳಚಿಕೊಳ್ಳದೆ, ಏಕಾಗ್ರತೆಯನ್ನು ಸಾಧಿಸಲಾಗದು. ಏಕಾಗ್ರತೆ ಸಾಧಿಸದೆ ಶಿಖರವನ್ನು ತಲಪಲಾಗದು ಎಂದರೆ -ಅದನ್ನು ಸಾಧಿಸುವುದು ಸುಲಭವಲ್ಲದಿದ್ದರೂ ಆ ಮಾತು ತಿಳಿಯುತ್ತದೆ. ಆಶ್ಚರ್ಯವೆಂದರೆ, ‘ದೇವರು’ ಹಾಗೆಯೇ ಇದ್ದಾನೆಯೆ? ಯಾವ ಭೇದವೂ ಅವನನ್ನು ಮುಟ್ಟಿದ ಅವಸ್ಥೆಯಲ್ಲಿಯೇ ಅವನು ಇರುವುದರಿಂದಲೇ- ಭೇದಗಳನ್ನು ಕಳೆದುಕೊಳ್ಳಬೇಕೆನ್ನುವ ‘ಹೊಳಹು’ ಮನುಷ್ಯ ಪ್ರಜ್ಞೆಗೆ ಉಂಟಾದದ್ದೇ? ಅವನೇ ಇದನ್ನು ಹೊಳೆಯಿಸಿದ್ದೇ? ಆಗ ಹೊಳೆದೆನ್ನುವುದು ಅವನ ನೆನಪನ್ನು ಅವನೇ ಉಂಟು ಮಾಡಿದಂತೆ- ನೆನಪಿನ ಇನ್ನೊಂದು ಮುಖವೇ ಆಯಿತು. ನೆನಪಿನ ಆಗಸದಲ್ಲಿ ಹೊಳಹಿನ ಮಿಂಚು! ಆಗ ಅದು ಅನುಗ್ರಹವೇ ಆಯಿತು. ಬದುಕು ಅನುಗ್ರಹ ಮಾಡಿಕೊಂಡೇ ಇದೆ. ಅದೇ ಬದುಕಿನ ಗುಣ! ದೇವರನ್ನು ನೆನೆ ಎಂದರೆ ಆ ಅನುಗ್ರಹವನ್ನು ನೆನೆ ಎಂದಂತೆ. ಹೊರಗಿನ ಲೌಕಿಕ ಸಂಬಂಧಗಳು ಎಷ್ಟೇ ವಿಲಕ್ಷಣವಾಗಿರಲಿ, ಒಳಗಿನ ಈ ಅನುಸಂಧಾನವೇ ಈ ನೆನಪೇ ಮಹತ್ವದ್ದು, ಒಳಗಿನ ನಿಜವೇ ನಿಜ! ಏಕೆಂದರೆ, ‘ದೇವರು’ ಬದುಕಿನ ನಿಜವಾದ ಒರತೆ. ‘ಜೀವನಂ ಸರ್ವ ಭೂತೇಷು’ ಎಂದಿದ್ದನಂತೆ ಕೃಷ್ಣ. ಎಲ್ಲ ಜೀವಿಗಳಲ್ಲಿಯೂ ತಾನು ಬದುಕಾಗಿ ಇದ್ದೇನೆ- ಎಂದು. ಓ ಸಾವು ಅನಿವಾರ್ಯವಾದ ಜೀವಿ ಬದುಕಿನ ಈ ಶುದ್ಧ ಒರತೆಯನ್ನು ನೆನೆಯಬೇಕು; ಅದರಲ್ಲಿ ಮುಳುಗಬೇಕು ಎನ್ನುತ್ತಿದ್ದಾನೆ ಶುಕಮುನಿ ಎಂದುಕೊಂಡ ದೊರೆ.
ಆದರೆ, ನೆನೆಯುವುದು ಸುಲಭವಲ್ಲ. ಏನೋ ತಡೆ ಇದೆ. ನೆನಪಿಗೆ ತಡೆ ಎಂದರೆ ಮರವೆಯೇ. ದೇವರೆಂದರೆ ನೆನಪಿನ ಜೀವ! ಮನುಷ್ಯನೆಂದರೆ ಮರೆವಿನ ಜಡ! ತಾನು ಮನುಷ್ಯನೆನ್ನುವುದನ್ನೂ ಮರೆಯಬಲ್ಲವನು ಮನುಷ್ಯನೊಬ್ಬನೇ. ಹಾಗೇಕೆ ಮರೆಯುತ್ತಾನೆ ಎನ್ನುವುದನ್ನೂ ಒಂದು ಪ್ರಶ್ನೆಯಾಗಿಸಿ, ಅದು ದೇವರ ಸಮಸ್ಯೆ ಎಂಬಂತೆ ದೇವರಿಗೇ ಪ್ರಶ್ನೆ ಎಸೆಯುವವನೂ ಮನುಷ್ಯನೇ. ಹಾಗಾದರೂ ತನ್ನನ್ನು ನೆನೆದನಲ್ಲ ಎಂದು ದೇವರು ನಿಟ್ಟುಸಿರು ಬಿಡುತ್ತಾನೇನೋ! ತನ್ನನ್ನೇ ತಾನು ಮನುಷ್ಯ ಮರೆತುದಕ್ಕೆ ಇತಿಹಾಸದುದ್ದ ಎಷ್ಟು ದೃಷ್ಟಾಂತಗಳು! ಮರೆಯುವುದೆಂದರೆ ಕುರುಡಾದಂತಲ್ಲವೆ? ಕುರುಡು ದೊರೆ ಧೃತರಾಷ್ಟ ನ ಕತೆ ಪರೀಕ್ಷಿತನಿಗೆ ನೆನಪಾಯಿತು. ಯುದ್ಧ ಮುಗಿದಿತ್ತು. ಧರ್ಮರಾಯ ಅರಸನಾಗಿದ್ದ. ಇದು ಗೆಲವೋ-ಸೋಲೋ ಎಂದು ತಿಳಿಯದ ಅವಸ್ಥೆಯಲ್ಲಿದ್ದ. ಕರ್ಣ, ಅಣ್ಣನೆನ್ನುವುದನ್ನು ತಿಳಿದಾಗ ಧರ್ಮರಾಯನ ದು:ಖ ಆಳವಾಗಿತ್ತು. ಅವನಿಗಿದ್ದ ಒಂದು ಸಮಾಧಾನ- ದೊಡ್ಡಪ್ಪ ಧೃತರಾಷ್ಟ್ರ. ದೊಡ್ಡಮ್ಮ ಗಾಂಧಾರಿ ತನ್ನ ಕಣ್ಣಿಗೆ ಬಟ್ಟೆ ಬಿಗಿದುಕೊಂಡು, ಗಂಡ ಕಾಣದ ಲೋಕ ತಾನೂ ಕಾಣುವುದು ಬೇಡ ಎಂದುಕೊಂಡು ಬದುಕಿದಳು. ತುಪ್ಪದ ಕೊಡದಲ್ಲಿ ಬೆಳೆದ ನೂರು ಮಂದಿ ಮಕ್ಕಳು, ಮಕ್ಕಳನ್ನೂ ಈ ತಾಯಿ-ತಂದೆ ನೋಡಿರಲಿಲ್ಲ. ಪ್ರೀತಿಯೇ ಕುರುಡಾಗಿತ್ತು! ಯುದ್ದದಲ್ಲಿ ಮಕ್ಕಳೆಲ್ಲ ಅಸುನೀಗಿದ್ದರು. ಈ ವೃದ್ಧ ದಂಪತಿಗಳ ದಾರುಣ ದು:ಖ, ಧರ್ಮರಾಯನಿಗೆ ಇನ್ನಿಲ್ಲದಂತೆ ಚುಚ್ಚುತ್ತಿತ್ತು. ಇವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಅವನ ಮನಸ್ಸು. ಅದಕ್ಕೆ ಭೀಮಸೇನನನ್ನು ನಿಯಮಿಸಿದ್ದ. ಈ ರಾಜಾಜ್ಞೆಯನ್ನು ಭೀಮ ಪಾಲಿಸುತ್ತಿದ್ದನೇನೋ ನಿಜ. ನಿಯಮಿತವಾಗಿ ಆಹಾರವನ್ನು ನೀಡುತ್ತಿದ್ದ. ಆದರೆ, ಆ ಹೊತ್ತಿನಲ್ಲಿ ಭೀಕರವಾದ ಕಟಕಿಯಾಡುತ್ತಿದ್ದ. ದುರ್ಯೋಧನ, ದುಶ್ಯಾಸನರನ್ನು ಮತ್ತೆ ಮತ್ತೆ ಹಳಿಯುತ್ತಿದ್ದ. ದುಶ್ಯಾಸನನ ಹೊಟ್ಟೆ ಬಗೆದದ್ದನ್ನು, ದುರ್ಯೋಧನನ ತೊಡೆ ಮುರಿದದ್ದನ್ನು, ಅಂಥ ತನ್ನ ತೋಳಿನ ಬಲವನ್ನು ಮತ್ತೆ ಮತ್ತೆ ಹೇಳಿಕೊಳ್ಳುತ್ತಿದ್ದ. ಅದೇ ಕೈಗಳಿಂದ ಈಗ ಅನ್ನ ನೀಡುತ್ತಿದ್ದೇನೆ; ಹೊಟ್ಟೆ ತುಂಬ ಉಣ್ಣುವಿರಂತೆ ಎನ್ನುತ್ತಿದ್ದ. ಕೇಳುತ್ತ ಧೃತರಾಷ್ಟ್ರನಿಗೆ ಮನಸ್ಸು ಭಾರವಾಗುತ್ತಿತ್ತು. ಈ ಕಟಕಿಯಾಡುವುದು ನಿಂತರೆ ಸಾಕು! ತನ್ನ ದು:ಖವನ್ನು ಯಾರ ಬಳಿ ಹೇಳಿಕೊಳ್ಳುವಂತೆಯೂ ಇಲ್ಲ; ವಿದುರನಲ್ಲಿ ಹೇಳಿಕೊಳ್ಳಬಹುದಾಗಿತ್ತು. ಆದರೆ ವಿದುರ ಯುದ್ಧಕ್ಕೆ ಹೇಸಿ, ತೀರ್ಥಯಾತ್ರೆಗೆ ನಡೆದಿದ್ದ. ಕುರುಡನಿಗೆ ಏಕಾಂತ ಅಸಹನೀಯವಾಗಿತ್ತು. ಕಟಕಿ ನಡೆದೇ ಇತ್ತು. ವರ್ಷಗಳೇ ಉರುಳಿದ ಮೇಲೆ ವಿದುರ ಒಂದು ದಿನ ಹಸ್ತಿನಿಗೆ ಮರಳಿದ ಎಲ್ಲರಿಗೂ ಸಂತೋಷವಾಯಿತು. ಧೃತರಾಷ್ಟ್ರನಿಗಂತೂ ಒಮ್ಮೆ ನಿರಾಳವಾದಂತೆನಿಸಿತು. ಎಂದಿನಂತೆ ವಿದುರ ಧೃತರಾಷ್ಟ್ರನ ಜೊತೆಗಾರನಾದ. ಮೊದಲ ಬಾರಿಗೆ ವಿದುರ ಭೀಮನ ಗಟ್ಟಿ ದನಿಯ ಕಟಕಿಯನ್ನು ಕೇಳಿದ. ಅವನಿಗೆ ಅರ್ಥವಾಗಿಹೋಯಿತು.
ತೀರ್ಥಯಾತ್ರೆಯಲ್ಲಿ ವಿದುರ ಪಡೆದ ಅನುಭವ ಅನನ್ಯವಾಗಿತ್ತು. ತಾನಿನ್ನು ಸುಮ್ಮನಿರುವಂತಿಲ್ಲ. ವಿದುರ, ಧೃತರಾಷ್ಟ್ರನಿಗೆ ಹೇಳಿದ:
ಅಹೋ ಮಹೀಯಸೀ ಜಂತೋ: ಜೀವಿತಾಶಾಯಯಾ ಭವಾನ್
ಭೀಮಾಪವರ್ಜಿತಂ ಪಿಂಡಂ ಆದತ್ತೇ ಪಶುಪಾಲವತ್
ಇದು ಏನು ನಿನ್ನಪಾಡು. ಇಂಥ ಹೀನಸ್ಥಿತಿಯಲ್ಲೂ ನಿನಗೆ ಬದುಕುವ ಆಸೆ. ಬಹುಹಿಂದೆ ನಾವಿನ್ನೂ ಯೌವನದಲ್ಲಿರುವಾಗ, ವೇದವ್ಯಾಸರು ಹಸ್ತನಾವತಿಗೆ ಬಂದು ನಮ್ಮ ತಾಯಿ ಸತ್ಯವತಿಯನ್ನು ಸೊಸೆಯರು ಅಂಬಿಕೆ-ಅಂಬಾಲಿಕೆಯರನ್ನು ಅರಮನೆಯಿಂದ ತಮ್ಮ ಆಶ್ರಮಕ್ಕೆ ಕರೆದೊಯ್ದದ್ದು ನೆನಪಿದೆಯೆ? ಆಗ ವ್ಯಾಸರು ಹೇಳಿದ ಮಾತೇನು!
ಶ್ವ: ಶ್ವ: ಪಾಪಿಷ್ಠ ದಿವಸಾ: ಪೃಥಿವೀ ಗತಯೌವನಾ
ಸುಖದ ಕಾಲ ಕಳೆದು ಹೋಯಿತು. ದಾರುಣವಾದ ಹೊತ್ತು ನಡೆಯುತ್ತಿದೆ. ನಾಳೆಯ ದಿವಸವೆಂದರೆ ಇನ್ನಷ್ಟು ಪಾಪ ಭೂಯಿಷ್ಠ, ಮಾಲಿನ್ಯ, ಭೂಮಿಗೇ ಯೌವನ ಕಳೆದಂತಿದೆ. ಇಂಥ ಕಾಲಕ್ಕೆ ಸಾಕ್ಷಿಯಾಗಿ ನೀವು ಇಲ್ಲಿರುವುದು ಬೇಡ. ನನ್ನೊಂದಿಗೆ ಆಶ್ರಮ ಜೀವನಕ್ಕೆ ನಡೆಯಿರಿ.
ಇದು ಒಂದು ರೀತಿಯಲ್ಲಿ ಈ ಲೋಕಕ್ಕೆ ಕುರುಡಾಗಿ ಎಂದಂತೆ. ಇನ್ನೊಂದು ಲೋಕವಿದೆ; ನೀವು ಕಾಣದ ಲೋಕ, ಅಂತರಂಗದ ಲೋಕ; ಅಲ್ಲಿ ಕಣ್ತೆರೆಯಿರಿ ಎಂದಂತೆ. ಇದು ಮುಪ್ಪು, ಅದು ಯೌವನ ಎಂದಂತೆ. ಓ ಧೃತರಾಷ್ಟ್ರ ನೀನಂತೂ ಈ ಲೋಕಕ್ಕೆ ಕುರುಡಾಗಿಯೇ ಹುಟ್ಟಿದೆ. ಇದು ನೀನು ಕಾಣದ ಲೋಕ. ಆದರೆ, ವಿಚಿತ್ರ! ಕುರುಡನಿಗೆ ಲೋಕದ ಮೋಹ ಕಣ್ಣಿದ್ದವರಿಗಿಂತ ಹೆಚ್ಚು!
ವ್ಯಾಸರು ಆ ಮಾತು ತಮ್ಮ ತಾಯಿಗೆ ಹೇಳಬೇಕಾದರೆ, ಪಾಂಡು-ಮಾದ್ರಿಯರ ದುರಂತ ಮರಣ ಅವರನ್ನು ಅಷ್ಟು ಕಲಕಿ ಬಿಟ್ಟಿತ್ತು. ಲೋಕ ಜೀವನಕ್ಕೆ ಸ್ಪಂದಿಸ ಬಲ್ಲ ಇಂಥ ಸೂಕ್ಷ್ಮತೆಯಿಂದಾಗಿಯೇ ಮನುಷ್ಯ ಬದಲಾಗೋದು ರಾಗವೇ ವಿರಾಗವಾಗೋದು. ಈಗೇನಾಗಿದೆ! ವ್ಯಾಸರು ಸೂಚಿಸಿದಂತೆಯೇ! ನಮಗೆ ತರ್ಪಣ ಕೊಡಬೇಕಾದ ಮಕ್ಕಳನ್ನೆಲ್ಲ ಕಳೆದುಕೊಂಡು ಅವರ ನೆತ್ತರು ಸೋರಿದ ನೆಲದಲ್ಲಿ ನಡೆಯುತ್ತಿದ್ದೇವೆ. ಸಾವು ಸನಿಹದಲ್ಲಿದೆ. ಇನ್ನೂ ವಿರಕ್ತಿ ಬಂದಿಲ್ಲ. ಬದುಕುವ ಆಸೆ ಎಂಬುದೇ ಬಾಳನ್ನು ಎಂಥ ಭಂಡವಾಳವನ್ನಾಗಿಸಿ ಬಿಡುತ್ತದೆ ನೋಡು! ನಿನ್ನ ಮಕ್ಕಳ ರಕ್ತದ ಕಲೆ ಇನ್ನೂ ಹಸಿಯಾಗಿರುವ ಭೀಮನ ಕೈಯ ಮುದ್ದೆ ಅನ್ನವೂ ನಿನಗೆ ರುಚಿಸುತ್ತದೆ! ಅವನು ಕಟಕಿಯಾಡುವುದು ಬಿಟ್ಟರೆ ಸಾಕು! ಇದು ನಾಯಿ ಪಾಡು. ಅಹೋ ಜೀವಿತಾಶಾ! ಅಯ್ಯೋ ಬದುಕುವ ಆಸೆಯೇ!
ಆಸೆ ಸಹಜ ಎನ್ನುತ್ತೇವೆ. ಸಹಜತೆಯಲ್ಲೇ ಒಂದು ಅಸಹಜತೆ ಇದೆ. ಆಸೆ ಎಂದರೆ ತಾನು; ತನ್ನದು. ಈ ವೃತ್ತವನ್ನದು ದಾಟಲಾರದು. ಎಲ್ಲವನ್ನೂ ಈ ವೃತ್ತದೊಳಗೆ ತರುವ ಪ್ರಯತ್ನ ಮಾಡುತ್ತೆ. ಇನ್ನೊಂದು ಮಾತು ಬಳಸುವುದಾದರೆ, ಆಸೆ ಎಂದರೆ ಕಿತ್ತುಕೊಂಡು ತಿನ್ನೋದು. ಮಕ್ಕಳ ಕೈಯಿಂದಲೂ ಕಿತ್ತುಕೊಂಡು ತಿನ್ನೋದು. ಅಂದರೆ ಮಕ್ಕಳನ್ನೂ ತಿನ್ನೋದು. ಆ ಮಕ್ಕಳನ್ನು ‘ಕುಂತಿಯ ಮಕ್ಕಳು’ ಎಂದರಾಯಿತು! ಇದು ಕುರುಡು ಲೋಕ!
‘ನಿಯೋಗ’ದ ಕಾಲದಲ್ಲಿ ವ್ಯಾಸ ಮುನಿಯ ಮೈಗೆ ಹೇಸಿ ಕ್ಷತ್ರಿಯರಮಣಿ ಅಂಬಿಕೆ ಕಣ್ಣು ಮುಚ್ಚಿಕೊಂಡಳು. ಕುರುಡು ಮಗು ಹುಟ್ಟಿತು. ಅವನು ಧೃತರಾಷ್ಟ್ರ. ಆ ಕುರುಡು ಇಷ್ಟು ಕಾಲ ಮುಂದುವರಿಯಿತು. ಈಗ ಮತ್ತೆ ವಿದುರನ ಮಾತಿನ ನಿಯೋಗದಿಂದ ಧೃತರಾಷ್ಟ್ರನ ಪ್ರಜ್ಞೆಯಲ್ಲಿ ಕಳೆದು ಹೋದಂತಿದ್ದ ಸಂವೇದನೆ ಮತ್ತೆ ಅರಳಿತು. ಆಸೆ, ತನ್ನನ್ನು ತಾನು ಕಳೆದುಕೊಂಡರೆ ಮತ್ತೆ ಅಲ್ಲಿ ಕಣ್ತೆರೆಯುವುದು ವೈರಾಗ್ಯವೇ. ಒಂದು ರಾತ್ರಿ ಧೃತರಾಷ್ಟ್ರ, ಗಾಂಧಾರಿ ಮತ್ತು ವಿದುರ ಕೂಡ ಅರಮನೆಯನ್ನು ತೊರೆದು, ಹಿಮಾಲಯಕ್ಕೆ ನಡೆದು, ಆಶ್ರಮವಾಸಿಗಳಾಗಿ, ನಿಜವಾದ ಲೋಕ ವಿರಕ್ತಿಯ ಭಾವದಲ್ಲಿ ಆ ಭಾವದ ಒಡಲಿನಿಂದ ಹುಟ್ಟಿಕೊಂಡ ಭಗವಂತನ ನೆನಪಿನಲ್ಲಿ ದೇಹವನ್ನು ತೊರೆದರಂತೆ.
ಮನುಷ್ಯ ತನ್ನ ಒಳ ಬದುಕನ್ನು ಮರೆತಂತೆ ಇರುವುದೇಕೆ. ಕುರುಡನಂತೆ, ಎಂದರೆ, `ಜೀವಿತಾಶಾ’ ‘ಬದುಕುವ ಆಸೆ’ ಎಂಬ ಮಾತಿನಲ್ಲಿ ಒಂದು ಬೆಳಕಿರಬೇಕು. ಮತ್ತು ಧೃತರಾಷ್ಟ್ರನಿಗೆ ‘ವಿರಕ್ತಿ’ ಉಂಟಾದರೆ, ಭೀಮನ ಕಟಕಿಗೆ ಬೇರೆಯೇ ಅರ್ಥ- ವಿರಕ್ತಿಯುಂಟಾಗುವುದಕ್ಕಾಗಿಯೇ ಹೀಗೆ ಕಟಕಿಯಾಡುತ್ತಿದ್ದ ಎಂಬ ಅರ್ಥ ಬರುತ್ತದೆ. ವಿದುರನಿಗೆ ಇದು ಹೊಳೆದಿತ್ತು. ನಮ್ಮ ‘ಸ್ಥಿತಿ’ ಬದಲಾವಣೆಗೊಳ್ಳದೆ ಹೊಸ ಅರ್ಥಗಳು ಹೊಳೆಯಲಾರವೇನೋ…
ತೋಳ್ಪಾಡಿ ಭಾಗವತ ಕಥಾ 12: ಕೃಷ್ಣನಿಲ್ಲದ ಶರಶಯ್ಯೆ ಈ ಭವ
ಭಾಗವತಕ್ಕೆ ಕೃಷ್ಣನ ಕತೆ ಮೊದಲಿಂದ ಕೊನೆ ತನಕ ಹೇಳುವ ಆಸೆ. ಕೇಳಿಸುವ ಆಸೆ. ಹೇಳುತ್ತ ತಾನೇ ಸವಿಯುವ ಆಸೆ. ವಿಚಿತ್ರವೆಂದರೆ, ಈ ಆಸೆ ಹುಟ್ಟಿದ್ದು ಪಯಣದ ಕೊನೆಯ ಬಿಂದುವಿನಲ್ಲಿ ಒಮ್ಮೆ ಹೊರಳಿ ನಡೆದು ಬಂದ ದಾರಿಯನ್ನು ನೋಡಿದ್ದರಿಂದ. ನಿಜಕ್ಕೂ ಹಿಂತಿರುಗಿ ನೋಡಲಾಗುವ ಕಾಲವನ್ನು ‘ಅಂತ್ಯಕಾಲ’ ಎನ್ನಬೇಕು. ಅಂತ್ಯಕಾಲದಲ್ಲಿ ನನ್ನನ್ನು ನೆನೆ ಎಂದು ಹೇಳಿದ್ದ ಕೃಷ್ಣ. ಅಂದರೆ, ಅಷ್ಟು ಕಾಲವೂ- ಅಂತ್ಯ ಕಾಲದ ತನಕವೂ- ನಾನು ನಿನ್ನ ಜತೆಗಿದ್ದೇನೆಂಬುದನ್ನು ನೆನೆ ಎಂದರ್ಥವಲ್ಲವೆ? ಹೌದು. ಆದರೆ, ಜತೆಗಿದ್ದ ಆ ಕಾಲದಲ್ಲಿ ಅವನ ನೆನಪೇ ಆಗಿರಲಿಲ್ಲ. ತಮ್ಮ ಮನಸ್ಸಿನಲ್ಲಿ ತಾವೇ ತುಂಬಿಕೊಂಡಿದ್ದರೆ, ಅವನ ನೆನಪಾಗುವುದು ಹೇಗೆ? ಆದುದರಿಂದಲೇ ಅದನ್ನು ‘ಭವ’ ಎನ್ನುವುದು. ಈಗ. ಹಿಂತಿರುಗಿ ನೋಡುವ ಈ ಪ್ರಕ್ರಿಯೆಯಲ್ಲಿಯೇ ಎಲ್ಲವೂ ನೆನಪಾಗುತ್ತಿದೆ. ಆದುದರಿಂದಲೇ ಇದು ಅನು-ಭವ. ಭವದ ಉಪ್ಪು ಕಡಲಿನಿಂದಲೇ ಹುಟ್ಟಿಕೊಂಡ ಅನು-ಭವ ಎಂಬ ‘ಅಮೃತ’! ಕೃಷ್ಣನ ನೆನಪಾಗದೆ ಇದ್ದ ಕಾಲದಲ್ಲಿ ಭವದ ಆಸೆಗಳಿದ್ದವು. ಆ ಆಸೆಗಳು ಈಡೇರಬೇಕು. ಇಲ್ಲದಿದ್ದರೆ, ನಿರಾಸೆ. ಈಡೇರಿದರೆ ಮತ್ತೊಂದು ಆಸೆ ಹುಟ್ಟಿಕೊಳ್ಳುತ್ತಿತ್ತು. ಈಗ ಕೃಷ್ಣನನ್ನು ನೆನೆಯುವುದೇ ಆಸೆ ಈಡೇರಿದಂತೆ. ಅಥವಾ ಅದಕ್ಕಿಂತಲೂ ಹೆಚ್ಚು. ನೆನಪಿಗೆ ಕೊನೆ ಎಂಬುದಿಲ್ಲ. ಬದುಕಿನುದ್ದಕ್ಕೆ ಇದೆ ನೆನಪು. ನೆನಪಿನುದ್ದಕ್ಕೆ ಇದೆ ಬದುಕು.ನೆನಪಿಗೆ ಅಂತ್ಯಕಾಲವಿಲ್ಲ. ಆದುದರಿಂದಲೇ ಹೇಳಿರಬೇಕು- ದೇಹದ ಅಂತ್ಯಕಾಲದಲ್ಲಿ ಅನಂತನನ್ನು ನೆನೆ- ನೆನೆದರೆ ಬದುಕು; ದೇಹದ ಸಾವಿನಾಚೆಗೂ, ದೇಹದ ಹುಟ್ಟಿಗೆ ಮುನ್ನವೂ ಹರಡಿರುವುದು ಅನುಭವಕ್ಕೆ ಬರಬಹುದ- ಎಂದು. ಭವದಲ್ಲಿ ಅನು-ಭವವೇ ಜೀವಾಳ. ಅದೇ ನಿಜವಾದ್ದು.
ಅಂತ್ಯದಿಂದ ಆರಂಭ ಹೇಗೋ, ಆರಂಭದಲ್ಲಿ ಅಂತ್ಯ ಕೂಡ ಹಾಗೇ. ಹಾಗೆಂದೇ ಭಾಗವತ, ಕೃಷ್ಣನ ಕೊನೆಗಾಲದ ಚಿತ್ರಣವನ್ನು ಮೊದಲು ಕೊಡುತ್ತದೆ. ಯಾದವ ಸಮೂಹ ಪಾನಮತ್ತವಾಗಿ ಪರಸ್ಪರ ಹೊಡೆದಾಡಿಕೊಂಡು ನಾಶವಾಯಿತಲ್ಲ- ಬಂಧುಗಳು ತಮ್ಮಲ್ಲೇ ಹೊಡೆದಾಡಿಕೊಳ್ಳುವುದಕ್ಕೆ ಯಾದವೀ-ಕಲಹ ಎಂಬ ಮಾತೊಂದು ಉಳಿಯಿತು. ಭಗವಂತ ಕೃಷ್ಣ ಇದನ್ನೆಲ್ಲ ನೋಡುತ್ತಿದ್ದ. ಅವನೊಳಗೆ ಗಾಢ ದು:ಖವಿತ್ತೆ? ನಿರಾಸೆ ಇತ್ತೆ? ಅಧರ್ಮದ ನಾಶವಾಗುತ್ತಿದೆ ಎಂಬ ಭಾವವಿತ್ತೆ? ಒಂದು ಯುಗಾಂತದ ಅನುಭವಕ್ಕೆ ಸಾಕ್ಷಿಯಾಗಲೇ ಬೇಕಾದ ದಾರುಣ ನಿರ್ಲಿಪ್ತತೆ ಇತ್ತೆ? ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಬಂದ ವಿಷಾದ ಯೋಗ ಈಗ ಕೃಷ್ಣನಲ್ಲಿಯೂ ಹಾದು ಹೋಗಿ, ತಾನು ಆಗ ಅರ್ಜುನನಿಗೆ ಹೇಳಿದ್ದ ಸಾಂತ್ವನವನ್ನು ತಾನೇ ಮತ್ತೊಮ್ಮೆ ನೆನೆದನೋ! ಸ್ಥಿತಪ್ರಜ್ಞನೇ ಆಗಿದ್ದನೋ! ಕೃಷ್ಣ, ತನ್ನ ಅಂತ್ಯವನ್ನು ತಾನು ಸಂಕಲ್ಪಿಸಿ, ಅರ್ಜುನನನ್ನು ನೆನೆದದ್ದಂತೂ ಹೌದು. ದ್ವಾರಕೆಯಲ್ಲಿರುವ ಯಾದವ ಸ್ತ್ರೀಯರು, ಮುದುಕರು, ಮಕ್ಕಳನ್ನು ಕಾಪಾಡುವ ಹೊಣೆಯನ್ನು ಅವನು ಅರ್ಜುನನಿಗೆ ವಹಿಸಿದ. ಅದು ತನ್ನ ಕೊನೆಯ ಬಯಕೆ ಎಂದು ಅರ್ಜುನನಿಗೆ ಸುದ್ದಿ ತಲಪಿಸಿದ. ತಾನು ದ್ವಾರಕೆಯಿಂದ ಹೊರನಡೆದ. ಲೋಕದ ಲೆಕ್ಕವನ್ನೆಲ್ಲ ತೀರಿಸಿ ನಡೆದಂತೆ. ಮತ್ತೆ ಹಿಂತಿರುಗಲಿಲ್ಲ. ಒಮ್ಮೆ ಬಲರಾಮನೆಲ್ಲಿದ್ದಾನೆ ಎಂದು ನೋಡಿದ. ಅವನೂ ಹೊರಟು ಹೋದುದನ್ನು ತಿಳಿದು, ಕೃಷ್ಣ, ಮರದಡಿಯಲ್ಲಿ ಮಲಗಿ ತನ್ನ ಕಾಲ ಬೆರಳನ್ನು ಸುಮ್ಮನೇ ಕುಣಿಸುತ್ತಿದ್ದ. ಅಷ್ಟು ನಿರಾಳ. ದೂರದಲ್ಲಿ ಬೇಟೆ ಹೊಂಚುತ್ತಿದ್ದ ಬೇಡನೊಬ್ಬ, ಇದು ಜಿಂಕೆ ಎಂದುಕೊಂಡು, ಕೃಷ್ಣನ ಕಾಲಿಗೇ ಬಾಣ ಎಸೆದ. ಕಣೆ ನೆಟ್ಟಿತು. ಆ ಗುರಿಯನ್ನು ಮೆಚ್ಚಿಕೊಳ್ಳುತ್ತ ಕೃಷ್ಣ ದೇಹವನ್ನು ತ್ಯಜಿಸಿದನಂತೆ. ಸ್ಥಿತಪ್ರಜ್ಞನೇ ಸರಿ!
ಎಲ್ಲವನ್ನೂ ತಿಳಿದು ಅರ್ಜುನನಿಗೆ ಎದೆ ಒಡೆಯಿತು. ಅವನು ಕಂಗೆಟ್ಟ. ಯಾದವರ ದುರಂತ! ಕೃಷ್ಣ ಹುಟ್ಟಿ ಬಂದ ಕುಲ! ಪರಸ್ಪರ ಹೊಡೆದಾಡಿ ತಮ್ಮನ್ನು ನೀಗಿಕೊಂಡರು. ದೊಡ್ಡ ಮೀನು ಸಣ್ಣ ಮೀನನ್ನು, ಬಲಿಷ್ಠರು ದುರ್ಬಲರನ್ನು, ಇಬ್ಬರೂ ಬಲಿಷ್ಠರಾದರೆ ಪರಸ್ಪರ ಹೊಡೆದಾಡಿ ಇಬ್ಬರೂ ನಾಶವಾಗುವ ಲೋಕವಿದು. ಮನುಷ್ಯರ ಹೃದಯದಲ್ಲಿ ಈ ಸಂಹಾರದ ಬೀಜವನ್ನು ಯಾರು ಬಿತ್ತಿದರೋ! ಹಾಗೆಂದು ಪ್ರೀತಿಯ ಬೀಜವೂ ಇದೆ. ಅದಕ್ಕೆ ನೀರೆರೆಯುವವರಿಲ್ಲ. ಅರ್ಜುನನಿಗೆ ತಾನು ಕಂಗೆಟ್ಟಾಗ ಸಂತೈಸುವ ಕೃಷ್ಣನಿಲ್ಲದೆ ಬದುಕು ಶೂನ್ಯವಾಯಿತು.
ಕೃಷ್ಣನನ್ನು ಯಾದವ ಶಿರೋಮಣಿ ಎಂದು ಕರೆದರು. ಅವನು ಹುಟ್ಟಿ ಯದುಕುಲ ಧನ್ಯವಾಯಿತು ಎಂದರು. ಈಗ ಹೀಗಾಗಿದೆ. ಕಣ್ಣ ಮುಂದೆ. ಕೃಷ್ಣ ನಿಜಕ್ಕೂ ಬೇಸರಗೊಂಡನೋ. ಅಥವಾ ಇದೇ ಕೃಷ್ಣನ ಇಚ್ಛೆಯೋ! ನಮ್ಮ ಕಣ್ಣ ಮುಂದೆ ನಡೆದುದೆಲ್ಲ, ನಾವದನ್ನು ಮನಸಾ ಒಪ್ಪದಿದ್ದರೂ, ಇನ್ನೊಂದು ರೀತಿಯಲ್ಲಿ ಒಪ್ಪಿದಂತೆಯೇ ಅಲ್ಲವೆ? ಅದು ನಡೆದು ಬಿಟ್ಟಿದೆಯಲ್ಲ! ಕೃಷ್ಣನಾದರೋ ಭಗವಂತ. ಅವನು ‘ಒಪ್ಪದಿದ್ದರೂ ಒಪ್ಪಿದಂತೆ’ ಎಂಬ ಮಾತೇ ಇಲ್ಲವಲ್ಲ. ಹಾಗಾದರೆ ಇದೆಲ್ಲ ಅವನ ಇಚ್ಚೆಯೇ? ಅರ್ಜುನನಿಗೆ ಕಳವಳವಾಯಿತು. ಬಿಟ್ಟು ಹೋಗುವ ಹೊತ್ತಿನಲ್ಲಿ ತನ್ನನ್ನು ನೆನೆದಿದ್ದನೆಂಬುದನ್ನು ತಿಳಿದು ಆರ್ತಭಾವ ಉಂಟಾಯಿತು. ಪಾಂಡವರಲ್ಲಿ ಕೃಷ್ಣನನ್ನು ಕಾಣಬೇಕಾದರೆ ಅದು ಅರ್ಜುನನಲ್ಲಿ ಪಾಂಡವಾನಾಂ ಧನಂಜಯ:- ಎಂದದ್ದು ನೆನಪಾಯಿತು. ಅಂಥ ಕೃಷ್ಣನಿಲ್ಲದೆ ತನ್ನ ಬದುಕು ಬರಿದಾಗಿ ಹೋಯಿತು ಎಂಬ ಭಾವ ಆಳವಾಯಿತು.
ತನಗೆ, ಕೃಷ್ಣ ಗೊತ್ತುಪಡಿಸಿದ ಕರ್ತವ್ಯದತ್ತ ಅರ್ಜುನನ ಮನಸ್ಸು ಹರಿಯಿತು. ದ್ವಾರಕೆಗೆ ಹೋದ. ಗೋಳಿಡುತ್ತಿದ್ದ ಹೆಂಗಸರನ್ನು ಅದು ಹೇಗೋ ಸಂತೈಸಿದ. ಅವರನ್ನು ಹಸ್ತಿನಾವತಿಗೆ ತಾನೇ ಕರೆದೊಯ್ಯುತ್ತಿದ್ದ. ಏನಾಯಿತೆಂದರೆ, ಈ ಪಯಣದ ನಡುವೆ ಕಳ್ಳಕಾಕರ ಗುಂಪೊಂದು ಅರ್ಜುನನ ಈ ತಂಡದ ಮೇಲೆ ಮುಗಿಬಿದ್ದಿತು. ಅರ್ಜುನ ತನ್ನ ಗಾಂಡೀವವನ್ನೆತ್ತಿ ಹೋರಾಡಿದನೇನೋ ನಿಜ. ಆದರೆ, ಅವನಿಗೆ ಬಿಲ್ಲುಗಾರಿಕೆಯೇ ಮರೆತಂತಿತ್ತು. ಅಸ್ತ್ರಗಳು ಯಾವುವೂ ನೆನಪಿಗೇ ಬಾರವು. ಅವನ ಬತ್ತಳಿಕೆಯಲ್ಲಿ ಬಾಣಗಳೇ ಇರಲಿಲ್ಲವೇನೋ ಎಂಬಂತೆ ಬಿಲ್ಲಿನಿಂದಲೇ ಹೊಡೆದಾಡಿದನಂತೆ. ಗೆಲವು ಕಳ್ಳರದ್ದಾಯಿತು. ಸಿಕ್ಕ ಸಿಕ್ಕ ಹೆಂಗಸರನ್ನೆಳೆದುಕೊಂಡು ಕಳ್ಳರು ಹೊರಟು ಹೋದರು. ಅಳಿದುಳಿದವರೊಂದಿಗೆ ಅರ್ಜುನ ಅದು ಹೇಗೋ ಹಸ್ತಿನಾವತಿಯನ್ನು ಸೇರಿಕೊಂಡ. ಆ ಕ್ಷಣದಿಂದ ಅರ್ಜುನ ಅರ್ಜುನನಾಗಿರಲಿಲ್ಲ. ಅವನ ಪರಾಭವ ಪೂರ್ಣವಾಗಿತ್ತು. ಅದೇ ಕಾರಣವಾಗಿ ಅವನಲ್ಲಿ ಒಳನೋಟ ಉಂಟಾಯಿತು.
ತನ್ನನ್ನು ತಾನು ನಾಯಕನೆಂದುಕೊಂಡಿದ್ದೆ. ಪ್ರಾಯ: ಎಲ್ಲರೂ ಹಾಗೇ ಅಂದುಕೊಳ್ಳೋದು. ತಾವೇ ನಾಯಕ- ನಾಯಕಿಯರೆಂದು. ಅಂದರೆ, ಉಳಿದವರೆಲ್ಲ ಹಿಂಬಾಲಕರೆಂದು. ಅಷ್ಟೇಕೆ? ಮನಸ್ಸಿನಲ್ಲಿ ಕೃಷ್ಣನನ್ನು ಎಷ್ಟು ಆರಾಧಿಸಿದರೂ, ಮೇಲ್ನೋಟಕ್ಕೆ ಕೃಷ್ಣನೇ ತನ್ನ ಹಿಂಬಾಲಕನಂತೆ ಇದ್ದ. ಅದೇ ಅವನ ಮಹಿಮೆಯೋ. ಈಗ ಅರಿವಾಗುತ್ತಿದೆ. ಅವನಿಲ್ಲದೆ ತಾನು ಏನೂ ಅಲ್ಲ. ಅದೇ ಗಾಂಡೀವ, ಅದೇ ಅಕ್ಷಯ ಬಾಣಗಳು, ಅದೇ ರಥ, ಕಟ್ಟಿದ ಅದೇ ಕುದುರೆಗಳು- ಜೊತೆಗೆ ಮಹಾರಥಿಯಾದ ಅದೇ ಅರ್ಜುನ! ಏನಿದ್ದೇನು? ನಗೆಗೀಡಾಗಿ ಹೋದೆ. ಹೆಂಗಸರ ಮುಂದೆ! ಕೃಷ್ಣ ಹೊರಟು ಹೋದ. ನನಗೆ ಗೊತ್ತಿಲ್ಲದೆ ನನ್ನ ಸತ್ವವೆಲ್ಲ ಅವನನನ್ನು ಹಿಂಬಾಲಿಸಿ ಹೋಗಿ ಬಿಟ್ಟಿದೆ. ಅಂದರೆ, ಬದುಕಿನ ಒಳಸತ್ವಗಳ ನಾಯಕ ಅವನೇ. ಈಗ ಉಳಿದಿರುವ ತಾನು ಕೇವಲ ನಿಸ್ಸಹಾಯ ನಿಸ್ಸತ್ವ.
ಈ ನಿಸ್ಸಹಾಯಕತೆಯೇ ನಿಜವಾದ ‘ಅರಿವು’. ಅರಿವು ಕೊರಗಲ್ಲ. ಹತಾಶೆಯಲ್ಲ. ಹೀಗಾಗಬಾರದಿತ್ತು; ಆದರೆ, ಆಗಿ ಬಿಟ್ಟಿದೆ ಏನು ಮಾಡೋಣ ಎಂಬ ಸ್ಥಿತಿಯಲ್ಲ. ಕೊರಗಿದರೆ ನಮ್ಮ ಸ್ಥಿತಿಯ ಬಗ್ಗೆ ನಮ್ಮದೇ ಅಭಿಪ್ರಾಯ-ಭಿನ್ನಾಭಿಪ್ರಾಯ ಹೊಂದಿದ್ದೇವೆ ಎಂದಾಯಿತು. ಅದಲ್ಲ. ನಮ್ಮ ನಿಸ್ಸಹಾಯಕತೆಯನ್ನು ಸರ್ವಾತ್ಮನಾ ಒಪ್ಪುವುದು! ಆಗ ನಾಯಕತ್ವ ಬಿದ್ದು ಹೋಗುತ್ತೆ. ಇನ್ನೊಬ್ಬರ ನಿಸ್ಸಹಾಯಕತೆಯನ್ನು ಒಪ್ಪುವುದೇ ನಾಯಕತ್ವದ ಸ್ವಭಾವ! ಅಚ್ಚರಿ ಎಂದರೆ, ಮನಸಾ ನಾವು ನಿಸ್ಸಹಾಯಕರಾದಾಗ ನಿಜವಾದ ನಾಯಕನಿಗೆ- ಕೃಷ್ಣನಿಗೆ- ತಾನು ಪ್ರಕಟವಾಗಲು ಅನುವಾಗುತ್ತೆ! ಹಾ! ಅವನು ‘ಜತೆಗಾರ’ ನೆನ್ನುವುದರ ನಿಜವಾದ ಅರ್ಥ ಇದೇ ಆಗಿರಬೇಕು.
ಅರ್ಜುನ ನಿಸ್ಸಹಾಯಕನಾದಾಗ ಕೃಷ್ಣನ ನೆನಪು ಅವನಲ್ಲಿ ನುಗ್ಗಿ ಬರುತ್ತಿದೆ. ಹೇಗಿದ್ದ ಕೃಷ್ಣ! ಎಂದಾದರೂ ತಾನು ನಾಯಕನೆಂದು ತೋರಿಸಿದನೆ? ತಾನೆ ಮೆರೆದೆ. ಅವನು ಮರೆಯಲ್ಲಿ ನಿಂತ, ಪರೀಕ್ಷಿತನನ್ನು ಕಾಪಾಡುವ ಕಾಲಕ್ಕೆ- ಅರ್ಜುನನೊಡನೆ ನಾನೂ ಎಂದೂ ವಿರೋಧವನ್ನು ಮಾಡಿಲ್ಲದಿರುವುದು ನಿಜವಾದರೆ ಈ ಮಗು ಬದುಕಲಿ -ಎಂದು ಘೋಷಿಸಿದ ಕೃಷ್ಣ. ಈಗಲೂ, ತಾನು ದೇಹತ್ಯಾಗ ಮಾಡಿದ ಮೇಲೆಯೇ ಈ ನಿಜವನ್ನು ತನಗೆ ತೋರಿಸುತ್ತಿದ್ದಾನೆ! ತಾನು ಇರುವಾಗ ತೋರಿಸಲಿಲ್ಲ. ಕೃಷ್ಣನಂತೆ ಬದುಕುವುದು ಸಾಧ್ಯವೇ? ಗೀತೆಯ ಸಂದರ್ಭದಲ್ಲಿ ಒಂದು ಮಾತು ಹೇಳಿದ್ದ: ನಿಮಿತ್ತ ಮಾತ್ರಂ ಭವ ಸವ್ಯ ಸಾಚಿನ್ ಹೇ ಸವ್ಯಸಾಚಿ ನೀನು ನನಗೆ ಕೇವಲ ‘ನಿಮಿತ್ತ’ನಾಗು- ಅಂದರೆ ಅವನಿಗೊಂದು ‘ನಿಮಿತ್ತ’ ಬೇಕು. ಆದರೆ, ಆಗ ಈ ಮಾತಿನ ನಿಜವಾದ ಅರ್ಥ, ಅನುಭವ ಆಗಿರಲಿಲ್ಲ. ಈಗ ತಿಳಿಯುತ್ತಿದೆ. ಆಗ, ಅವನ ‘ನಿಮಿತ್ತ’ವಾಗುವುದರಲ್ಲೂ ಒಂದು ರೀತಿಯ ನಾಯಕತ್ವದ ಭಾವವಿತ್ತು. ಇದ್ದಿರಬೇಕು. ಈಗಿನ ನಿಸ್ಸಹಾಯಕತೆಯಲ್ಲಿ ತಿಳಿಯುತ್ತಿದೆ, ನಿಮಿತ್ತನಾಗುವುದೆಂದರೇನೆಂದು. ಹೌದು ಅನಾಥನಾಗದೆ ನಾಥ ಸಿಕ್ಕುವನೆ?
ಕುರುಕ್ಷೇತ್ರದ ಯುದ್ಧ ಮುಗಿದ ಮೇಲೆ, ಧೃತರಾಷ್ಟ್ರ-ಗಾಂಧಾರಿಯರ ಭೇಟಿಗೆಂದು ಪಾಂಡವರು ಹೋಗಿದ್ದರು. ಕೃಷ್ಣ, ದ್ರೌಪದಿ ಕೂಡಾ ಇದ್ದರು. ಧೃತರಾಷ್ಟನಿಗೆ, ತನ್ನ ಮಕ್ಕಳನ್ನು ಕೊಂದ ಭೀಮನ ಮೇಲೆ ಭೀಕರವಾದ ಕ್ರೋಧವಿತ್ತು. ಭೀಮನನನ್ನು ತಬ್ಬಿಕೊಳ್ಳುವ ನೆವದಲ್ಲಿ ಅವನ ಎಲುವುಗಳನ್ನು ಪುಡಿ ಪುಡಿ ಮಾಡಬೇಕೆಂದುಕೊಂಡಿದ್ದ. ಅದು ಕುರುಡನ ತಬ್ಬುಗೆ! ಇದನ್ನರಿತಿದ್ದ ಕೃಷ್ಣ, ಭೀಮನ ಲೋಹದ ಪ್ರತಿಮೆಯನ್ನು ಮಾಡಿಸಿ ತಂದಿದ್ದ. ಧೃತರಾಷ್ಟ್ರನ ಮುಂದೆ ಆ ಪ್ರತಿಮೆಯನ್ನು ಇರಿಸಿದ. ಪ್ರತಿಮೆಯನ್ನು ಭೀಮನೆಂದುಕೊಂಡು ತಬ್ಬಿಕೊಂಡ ಧೃತರಾಷ್ಟ್ರ ಅದನ್ನು ಪುಡಿಪುಡಿ ಮಾಡಿದನಂತೆ. ಪ್ರತಿಮೆ ನುಚ್ಚು ನುರಿಯಾಯಿತು. ಭೀಮ ಬದುಕಿಕೊಂಡ. ಆದರೆ, ನಿಜವಾದ ‘ಪ್ರತಿಮಾಭಂಗ’ವಾದುದು ಅರ್ಜುನನದು! ಅದೂ ಕೃಷ್ಣ ಹೋದ ಮೇಲೆ. ಅರ್ಜುನನ ವ್ಯಕ್ತಿತ್ವವೇ ಪುಡಿಪುಡಿಯಾಗಿ ಹೋಯಿತು. ಕೃಷ್ಣನ ಅಗೋಚರ ಆಲಿಂಗನದಲ್ಲಿ! ಅರ್ಜುನ ಕೃಷ್ಣನ ಪ್ರಿಯ ಸಖನಲ್ಲವೆ? ವ್ಯಕ್ತಿತ್ವದ ನಿಜವಾದ ಪಲ್ಲಟ ಸಂಭವಿಸದಿದ್ದರೆ, ಆ ಗೆಳೆತನಕ್ಕೇನು ಬೆಲೆ? ಕೃಷ್ಣನಿರ್ಯಾಣದ ಹೊತ್ತಿನಲ್ಲಿ ಈ ಪಲ್ಲಟ ಸಂಭವಿಸಿತು!
ದೈವೇಚ್ಛೆ ಎಂದರೆ ಏನೆನ್ನುವುದು ಅರ್ಜುನನಿಗೆ ಮನವರಿಕೆಯಾಗುತ್ತಿತ್ತು. ತನ್ನ ನಿಜವಾದ ಪ್ರತಿಮಾ ಭಂಜನವನ್ನು ‘ನರ’ ಅನುಭವಿಸಬೇಕು. ತನ್ನ ಇಚ್ಚೆಯಿಂದಲೇ ನರ ಇದನ್ನು ಅನುಭವಿಸಲಾರ. ನಾರಾಯಣನ ಇಚ್ಛೆಯಿಂದ ಮಾತ್ರ ಅನುಭವಿಸಬಲ್ಲ. ಇದು ದೈವೇಚ್ಛೆ! ಇದನ್ನು ಅನುಭವಿಸಬಲ್ಲ ಸ್ಥೈರ್ಯವಿದೆಯೇನು ಎಂದು ಕೇಳುವಂತಿದೆ ಭಾಗವತ.
ಕೃಷ್ಣ ಹೋದ ಮೇಲೆ ಅರ್ಜುನ ಇದ್ದೂ ಇಲ್ಲದಂತಾದ. ಇದೂ ಒಂದು ಭಿನ್ನರೀತಿಯ ಶರಶಯ್ಯೆಯೇ. ಕೃಷ್ಣನನ್ನು ನೋಡುತ್ತ, ದೇಹಪಾತವಾಗದೆ ಇದ್ದರೆ, ಆ ದೇಹದಲ್ಲಿ ಆ ಅಂತ:ಕರಣದಲ್ಲಿ ಪ್ರೇಮದ ಉನ್ಮಾದ ಉಂಟಾಗುತ್ತದೆಯಂತೆ. ಗೋಪಿಕೆಯರಿಗೆ ಆದಹಾಗೆ. ಕೃಷ್ಣ ತನ್ನ ದೇಹತ್ಯಾಗ ಮಾಡಿದ ಮೇಲೂ ಈತನ- ಅರ್ಜುನನಂಥವನ. ದೇಹಪಾತವಾಗದೆ ಇದ್ದರೆ. ಇಂಥ ಸ್ಥಿತಿ, ಇದ್ದು-ಇಲ್ಲದ ಸ್ಥಿತಿ ಉಂಟಾಗುತ್ತೆ. ಗೋಪಿಕೆಯರಿಗೆ ತಮ್ಮ ‘ಪ್ರತಿಮೆ’ಯ ಕಲ್ಪನೆಯೇ ಇರಲಿಲ್ಲ. ಅರ್ಜುನನಿಗೆ ಇತ್ತು. ಈಗ ಆ ಕಲ್ಪಿತ ವ್ಯಕ್ತಿತ್ವ ನಿರಾಕೃತವಾಗಿ ಕೃಷ್ಣನ ಮಹಿಮೆ ಅವನಿಗೆ ನಿಚ್ಚಳವಾಯಿತು. ಕೃಷ್ಣ ಅಸುರಾಂತಕನೆಂದು ಕೀರ್ತಿಗೊಂಡವನು. ತನ್ನ ವ್ಯಕ್ತಿತ್ವಕ್ಕೂ ಅವನು ಅಂತಕನಾಗದೆ ಬಿಡಲಿಲ್ಲ. ಧರ್ಮವನ್ನು ಉದ್ಧರಿಸುವುದಕ್ಕಾಗಿ ಬರುತ್ತೇನೆ ಎಂದು ಕೃಷ್ಣ ವಚನವಿತ್ತವನು. ಹಾಗೆಂದರೇನೆಂದು ಈಗ ತಿಳಿಯುತ್ತಿದೆ! ಇದು ನಿಜವಾದ ಅಂತ್ಯಕಾಲ! ವ್ಯಕ್ತಿತ್ವದ ಅಂತ್ಯ. ಯುಗದ ಅಂತ್ಯ, ಯಾದವರ ಅಂತ್ಯ, ಕೃಷ್ಣನ ಅಂತ್ಯ- ಇವೆಲ್ಲ ಬೇರೆಯೇ ಒಂದು ಬೆಳಕಿನಲ್ಲಿ ಕಾಣುವುದಕ್ಕೆ ಶುರುವಾಯಿತು. ಎಲ್ಲವೂ ದೈವದ ಇಚ್ಛೆ! ಹೌದು; ಆ ಪದ ಉಚ್ಚರಿಸುವ ಯೋಗ್ಯತೆ ಬರಬೇಕಾದರೆ, ನಮ್ಮ ಇಚ್ಛೆ ಇಲ್ಲದೆ ಆಗಬೇಕಲ್ಲ! ಅದೂ ದೈವದ ಇಚ್ಛೆಯೇ. ಈ ಎಲ್ಲವನ್ನೂ ಬಿಟ್ಟುಕೊಟ್ಟ ಸ್ಥಿತಿಯಲ್ಲಿ, ಮನುಷ್ಯ ನಿಜವಾಗಿ ಕೈಚೆಲ್ಲಿದಂತೆ. ಕೈ ಚೆಲ್ಲಿದಾಗಲೇ ಕೈ ಬೊಗಸೆಯಾಗುವುದು. ಅಂಜಲಿಯಾಗುವುದು!
ಅರ್ಜುನನ ಈ ಸ್ಥಿತಿಯನ್ನು ನೋಡಿ; ಅವನ ಮಾತನ್ನು ಕೇಳಿ; ಪಾಂಡವರು, ಇಲ್ಲಿನ ಎಲ್ಲವನ್ನೂ ಬಿಟ್ಟು ಕೊಟ್ಟು ಸ್ವರ್ಗಕ್ಕೆ ನಡೆಯುವ ಸಂಕಲ್ಪ ಮಾಡಿದರಂತೆ. ಹಾಗೆ ಪಾಂಡವರ, ಬೇರೆ ಎಲ್ಲಿಯೂ ಕೇಳಿರದ- ಸ್ವರ್ಗಾರೋಹಣ ಪರ್ವ ಪ್ರಾರಂಭವಾಯಿತು. ಕನಿಷ್ಠ ಪಾಂಡವರ ಮಟ್ಟಿಗಾದರೂ ಸ್ವರ್ಗಾರೋಹಣವು ಸಾಮೂಹಿಕ. ಇದೇನೋ ರೋಮಾಂಚಕವಾದ ಸಂಗತಿಯೇ. ಆದರೆ, ಭಾಗವತದ ಉದ್ದೇಶ, ಕೃಷ್ಣನ ಕತೆಯ ಮೂಲಕ ಭೂಮಿಯಲ್ಲಿಯೇ ಸ್ವರ್ಗ ಇದೆ ಎಂದು ತೋರಿಸುವುದು!
ಕೃಷ್ಣನ ನಿರ್ಯಾಣದ ಅನಂತರ ತನ್ನ ಪಿತಾಮಹ ಅರ್ಜುನನ ಅವಸ್ಥೆಯ ಬಗ್ಗೆ ಕೇಳಿದ ಪರೀಕ್ಷಿದ್ರಾಜ ಚಕಿತನಾದನಂತೆ. ಇದನ್ನು ಕಂಡು ಶುಕಮುನಿ, ಈ ಸೃಷ್ಟಿ ಪ್ರಕ್ರಿಯೆಯಲ್ಲಿ ಭಗವಂತನ ಪಾತ್ರ ಮತ್ತು ನಿಲುವು ಏನು ಎಂದು ತಿಳಿದೆವಾದರೆ ಅರ್ಜುನನ ಅವಸ್ಥೆಯನ್ನು ಸರಿಯಾಗಿ ನೋಡಿದಂತಾಗುತ್ತದೆ. ಎಂದರಂತೆ. ಹಾಗೆ ನೆನಪು, ಅಂತ್ಯಕಾಲದ ಕೆಲವು ಚಿತ್ರಗಳ ಮೂಲಕವೇ ನೆನಪು ಸೃಷ್ಟಿಯ ಆದಿಮ ಸ್ಥಿತಿಯತ್ತ ನೋಡತೊಡಗಿತು.
ತೋಳ್ಪಾಡಿ ಭಾಗವತ ಕಥಾ 13: ರಾಕ್ಷಸರಿಗೆ ಈ ಮಣ್ಣ ಗಣಿಯ ಮೇಲೆ ಕಣ್ಣು
ಶುಕಮುನಿಯ ಬಳಿ ಅವನ ಮಾತುಗಳನ್ನಾಲಿಸಲು ಪರೀಕ್ಷಿದ್ರಾಜ ಕೂತಿದ್ದನಲ್ಲ; ಸಮುದ್ರದ ದಂಡೆಯಲ್ಲಿ ಒಬ್ಬನೇ ಕುಳಿತಂತೆ ಅವನಿಗೆ ಅನುಭವವಾಗುತ್ತಿತ್ತು. ಶುಕ ಹೇಳುತ್ತಿದ್ದ: ಬದುಕಿಗೆ ಎರಡು ಗತಿಗಳು. ಒಂದು ಮುಂದಕ್ಕೆ ಚಲಿಸೋದು. ಹುಟ್ಟಿನಿಂದ ಸಾವಿನ ಕಡೆಗೆ ನಡೆಯುತ್ತಿರುವ ಬದುಕು. ಇದು ಕಾಲದ ಪ್ರಭಾವ. ಇನ್ನೊಂದು ಒಳಗಿನ ಬದುಕು. ಈ ಬದುಕು ನೆನಪಿನ ಮೇಲೆ ನಡೆಯುತ್ತಿದೆ. ಯಾವುದೋ ನೆನಪು; ಯಾವುದೋ ಸಂಸ್ಕಾರ; ಎಂದೋ ಹೇಗೋ ಸಂಭವಿಸಿದ ಒಂದು ಪೂರ್ವಗ್ರಹಿಕೆ- ಇವು ನಮ್ಮೊಳಗಿವೆ ಮತ್ತು ಕ್ರಿಯಾ ಪರವಾಗಿವೆ. ಅಂದರೆ, ಈ ಬೀಜದ ಸುತ್ತಲೇ ಬದುಕು ಬೆಳೆಯುವಂತೆ ನೋಡಿಕೊಳ್ಳುತ್ತಿವೆ. ಇದು ಹೌದಾದರೆ, ಬದುಕು ಹಿಂದಕ್ಕೂ ಚಲಿಸುತ್ತಿದೆ ಎನ್ನಬೇಕು. ನಾವು ಎಲ್ಲಿ ಯಾವ ಜಾಗದಲ್ಲಿ ನಿಂತು ಹೇಗೆ ಗ್ರಹಿಸುವೆವು ಎನ್ನುವುದರ ಮೇಲೆ ಬದುಕು ಮುಂದಕ್ಕೆ ಚಲಿಸುತ್ತಿದೆಯೋ, ಹಿಂದಕ್ಕೋ, ಎಂಬ ತೀರ್ಮಾನವಿರುತ್ತದೆ. ನೀನು ಎಲ್ಲೋ ಹೊಳೆಯ ದಂಡೆಯ ಮೇಲೆ ನಿಂತು ನೋಡುತ್ತಿದ್ದರೆ ನೀರು- ಬದುಕು- ಮುಂದಕ್ಕೆ ಹರಿಯುತ್ತಿದೆ ಎನ್ನುತ್ತೀಯ. ನೀನು ಕಡಲಲ್ಲಿ ಇದ್ದು ನೋಡುತ್ತಿರುವೆಯಾದರೆ, ಕಡಲಿನಿಂದ ಹೊರಟ ನೀರು- ನಾನಾ ಅವಸ್ಥಾಂತರಗಳನ್ನು ತಾಳಿ- ಮಳೆಯಾಗಿ, ಈಗ ಹೊಳೆಯಾಗಿ ಮರಳಿ ಕಡಲಿನೆಡೆಗೆ ಬರುತ್ತಿರುವ ಸಂಭ್ರಮವನ್ನು ನೋಡುತ್ತೀಯ. ಅಂದರೆ, ನೀರು ಹಿಂದಕ್ಕೆ ಹರಿಯುತ್ತಿದೆ ಎಂದಂತೆ. ಈ ಮಾತನ್ನು ಕೇಳಿದ ಮೇಲಂತೂ ದೊರೆಗೆ ತನ್ನ ಮುಂದೆ ಒಂದು ಸಮುದ್ರವೇ ಇದೆ, ತಾನದರ ದಂಡೆಯಲ್ಲಿ ಕುಳಿತಿದ್ದೇನೆ ಎಂಬ ಭಾವ ಬಲಿಯಿತು.
ಶುಕಮುನಿಗೆ ‘ಸೃಷ್ಟಿ’ಯ ವಿಚಾರ ಮಾಡುವುದಕ್ಕೆ ಈ ಭಾವ ತುಂಬ ಅನುಕೂಲ. ಅಂತ್ಯಕಾಲದ ಅರಿವು ಇರುವವನು ಭಗವಂತನನ್ನು ನೆನೆಯಬೇಕೆನ್ನುವಿರಾದರೆ, ಆ ನೆನಪು- ಅದು ಹಿಂದಕ್ಕೆ ಹೊರಳುವ ಸ್ವಭಾವದ್ದಾದುದರಿಂದ- ಇದೆಲ್ಲ ಹೇಗೆ ಪ್ರಾರಂಭವಾಯಿತೆನ್ನುವುದರ ಕಡೆಗೆ, ‘ಆದಿ’ಯ ಕಡೆಗೆ ಸಹಜವಾಗಿ ಸಾಗುತ್ತದೆ. ಇದೀಗ ವಿಶೇಷ! ಅಂತ್ಯಕಾಲದಲ್ಲಿ ಆದಿಯ ನೆನಪು! ಸಾವಿನ ಹೊತ್ತಿನಲ್ಲಿ ಸೃಷ್ಟಿಯ ನೆನಪು! ಶುಕಮುನಿ ಹೇಳಿದ: ಅದು- ಒಂದು ಕಾರಣತತ್ವ ಅಥವಾ ಒಬ್ಬ ಕಾರಣ ಪುರುಷ- ಅವನು ತನ್ನಲ್ಲಿಯೇ ತಾನಿದ್ದ. ತನ್ನಲ್ಲಿಯೇ ತಾನಿರೋದು ಒಂದು ಆಳ ಏಕಾಗ್ರತೆಯ ಅವಸ್ಥೆ. ಎಲ್ಲವೂ ಒಂದಾಗಿರುವ ಅವಸ್ಥೆ ಅಥವಾ ಆ ‘ಎಲ್ಲವೂ’ ಬೇರೆಯಾಗಿ ಇಲ್ಲದಿರುವ ಅವಸ್ಥೆ. ತನ್ನ ಅರಿವೂ ತನಗಿರಲಿಲ್ಲವೋ? ಹಾಗೆ ಹೇಳುವಂತಿಲ್ಲ. ಆದರೆ, ತನ್ನ ಅರಿವು ತನಗಿಲ್ಲದಂತೆ ಇತ್ತು. ಎನ್ನುತ್ತದೆ ಭಾಗವತ. ಮೇನೇ ಅಸಂತಮಿವ ಆತ್ಮಾನಂ ತಾನು ಇಲ್ಲವೋ ಎಂಬಂತೆ ಇದ್ದನಂತೆ. ಇಂಥ ಏಕಾಗ್ರತೆಯ ಅವಸ್ಥೆಯಲ್ಲಿ ಅವನಲ್ಲಿ ‘ಇಚ್ಛೆ’ಯೊಂದು ಒಡಮೂಡಿತಂತೆ. ಏನು ಇಚ್ಛೆ? ಬಹು ಸ್ಯಾಂ ಪ್ರಜಾಯೇಯ -ತಾನು ಬಹುವಾಗಬೇಕು ಎಂಬ ಇಚ್ಛೆ. ತನ್ನದೇ ಬಹುರೂಪದ ಕನಸು; ಕಾಣ್ಕೆ! ಏಕಾಗ್ರವಾದ ಸ್ಥಿತಿಯಲ್ಲಿ ಈ ಇಚ್ಛೆ ಉಂಟಾದುದರಿಂದ ಇಚ್ಛೆಯು ಸಂಕಲ್ಪವೇ ಆಯಿತು. ದೈವದ ಇಚ್ಛೆ ಎಂದರೆ ದೈವದ ಸಂಕಲ್ಪವೇ. ಮತ್ತು ತನ್ನಲ್ಲೇ ತಾನಿರುವ ಏಕಾಗ್ರತೆಯಲ್ಲಿ- ಯಾವುದೋ ಇನ್ನೊಂದು ವಸ್ತು ವಿಷಯದಲ್ಲಿ ಚಿತ್ತವು ಏಕಾಗ್ರವಾದುದಲ್ಲವಾಗಿ- ತಾನು ಬಹುವಾಗಬೇಕೆಂಬುದಲ್ಲದೆ ಬೇರೆ ಇಚ್ಛೆ ಬರೋದು ಸಾಧ್ಯವೇ ಇಲ್ಲ. ಏಕೆಂದರೆ ಬಹುತ್ವವು ಏಕಾಗ್ರತೆಯ ಸಾಧ್ಯತೆಯಾಗಿದೆ. ಬಹುತ್ವವೆಂದರೆ, ಚಂಚಲವಾದಂತಲ್ಲ.
ಈ ‘ಸಂಕಲ್ಪ’ದಿಂದ ಏನಾಯಿತೆಂದರೆ, ಕಾಲ- ಕರ್ಮ- ಗುಣ- ಸ್ವಭಾವಗಳೆಂಬ ನಾಲ್ಕು ಅಂಗಗಳು ತತ್ ಕ್ಷಣ ಗೋಚರವಾಗಿ ತಮ್ಮ ಬಹುತ್ವವನ್ನು ಪ್ರಕಟಿಸಿದವು. ‘ಕಾಲ’ವು ಅದುವರೆಗೆ ಅಖಂಡವಾಗಿತ್ತು. ಏಕಾಗ್ರತೆಯ ಕಾವಿನಲ್ಲಿ ಬೆರೆತಿತ್ತು. ತನ್ನ ವಿಶಿಷ್ಟ ಅಸ್ತಿತ್ವದ ಅರಿವೇ ಕಾಲಕ್ಕೆ ಇರಲಿಲ್ಲ. ಯಾವಾಗ ಬಹುವಾಗಬೇಕೆಂಬ ಸಂಕಲ್ಪ ಒಡಮೂಡಿತು- ಹೋ, ಇದು ಸಂಕಲ್ಪದ ಕಾಲ ಎಂಬ ವಿಶಿಷ್ಟ ಕಲ್ಪನೆ ಅದಕ್ಕುಂಟಾಯಿತು. ಅದಕ್ಕನುಗುಣವಾಗಿ ಅದು ಭೂತ, ವರ್ತಮಾನ, ಭವಿಷ್ಯಗಳಾಗಿ- ಪರಸ್ಪರ ಬೆರೆತಿದ್ದರೂ- ಮೂರಾಗಿ, ಮೊದಲ ಬಾರಿಗೆ ತನ್ನ ಅಸ್ಮಿತೆಯನ್ನೂ ಆ ಮೂಲಕ ತನ್ನ ಬಹುರೂಪವನ್ನೂ ತಾನೇ ಕಂಡುಕೊಂಡಿತು. ಈ ಕಾಲವೇ ಮನ್ವಂತರವಾಗಿ, ಯುಗವಾಗಿ, ಯುಗಧರ್ಮವಾಗಿ, ಕಲ್ಪ- ಬ್ರಹ್ಮ ಕಲ್ಪಗಳಾಗಿ ಅನಂತ ವಿಸ್ತಾರಕ್ಕೆ ಹರಡಿತು. ಹಾಗೆಯೇ ಸಂವತ್ಸರವಾಗಿ, ಪಕ್ಷ-ಮಾಸಗಳಾಗಿ, ದಿನಮಾನವಾಗಿ, ಹೊತ್ತಾಗಿ, ಜಾವವಾಗಿ, ಕ್ಷಣ ಕ್ಷಣವಾಗಿ ಅಸಾಧಾರಣವಾದ ಹೃಸ್ವ ರೂಪದಲ್ಲೂ ತನ್ನನ್ನು ಅರಿಯಿತು. ಕಾಲವು ಪ್ರಕಟವಾದದ್ದೇ ಬಹುತ್ವದ ಮೊದಲ ಲಕ್ಷಣ. ಅಂಥ ಕಾಲವು ತನ್ನಲ್ಲೇ ವಿಸ್ತಾರ- ಸಂಕೋಚಗಳನ್ನು ಕಂಡು ಕೊಂಡದ್ದು ಕಾಲದ ಆಂತರಿಕ ಬಹು- ರೂಪತೆ. ಬಹುರೂಪ ಎಂದಮೇಲೆ ಅದಕ್ಕೆ ಎಲ್ಲೆ ಇಲ್ಲ. ಎಲ್ಲೆ ಎಲ್ಲಿ!
ತನ್ನಲ್ಲೇ ತಾನಿದ್ದ ಏಕಾಗ್ರತೆಯು ‘ಸಂಕಲ್ಪ’ ಕಾರಣವಾಗಿ ಸ್ಫೋಟಗೊಂಡಿತಲ್ಲ- ಸ್ಫೋಟವೆನ್ನುವುದು ಒಂದು ‘ಕರ್ಮ’. ಕರ್ಮವು ತಾನು ಬಹು- ರೂಪಿಯಾಗುವುದಕ್ಕಾಗಿ ಇಕ್ಕಡೆಗಳಲ್ಲಿ ತನ್ನೆರಡೂ ಕೈಗಳನ್ನು ಚಾಚಿತು. ಒಂದು- ಕರ್ತೃವಿನ ಕಡೆಗೆ. ಇನ್ನೊಂದು ‘ಫಲ’ದ ಕಡೆಗೆ. ಆದುದರಿಂದಲೇ ಕರ್ಮವೆಂದಾಗ ಕರ್ತೃ ಯಾರು ಎಂಬ ಪ್ರಶ್ನೆ, ಫಲವೇನು ಎಂಬ ಪ್ರಶ್ನೆ- ಜೊತೆಯಲ್ಲೇ ಹುಟ್ಟಿಕೊಂಡವು. ಕರ್ತನೆಂದರೆ, ಕರ್ಮದ ಹೊಣೆ ಹೊರುವವನು. ಅದಕ್ಕಾಗಿ ಅಭಿಮಾನ ಪಡುವವನು. ಇದು ನಾನು ಮಾಡಿದ್ದು. ಈ ಫಲಕ್ಕೆ ‘ನಾನು’ ಅಧಿಕಾರಿ. ಈ ‘ನಾನು’ ಉಂಟಲ್ಲ- ಇದೇ ಅಹಂಕಾರ. ಇದರಲ್ಲಿ ಮತ್ತೆ ಎರಡು ರೂಪ. ಸಮಷ್ಟಿ- ಸಾಮುದಾಯಿಕ ಅಹಂಕಾರ; ವಿಶ್ವಾತ್ಮಕವಾದುದು. ಇದಕ್ಕೆ ಮಹತ್ ತತ್ವ ಎಂದು ಸಾರ್ಥಕವಾಗಿ ಕರೆಯಲಾಗಿದೆ. ಇನ್ನೊಂದು ಸೀಮಿತ ‘ವ್ಯಕ್ತಿ’ಗೆ ಸಂಬಂಧಿಸಿದ್ದು. ‘ಫಲ’ವೆಂದಾಗ ಫಲದಲ್ಲಿ ಮತ್ತೆ ಕರ್ಮದ ನೂರು ಬೀಜಗಳು. ಫಲವು ಉಂಟಾಗುವುದು ಭವಿಷ್ಯದಲ್ಲಿಯಾದರೂ ಅದಕ್ಕೆ ಅದೃಷ್ಟ ಬೇಕು. ಅದೃಷ್ಟವು ಕಾಲವೇ ಆದರೂ, ಭವಿಷ್ಯತ್ಕಾಲಕ್ಕಿಂತ ಗುಣಾತ್ಮಕವಾಗಿ ಬೇರೆಯಾಗಿರತಕ್ಕ ಸಂಗತಿ. ಮತ್ತು ಕಾಣದೆ ಇರುವಂಥದು ಎಂಬರ್ಥದ ‘ಅದೃಷ್ಟ’ವು ಕಾಣುವುದಕ್ಕಿಂತ ಪ್ರಬಲವಾದದ್ದು. ಹೀಗೆ ಭವಿಷ್ಯತ್ಕಾಲವೇ ‘ಅದೃಷ್ಟ’ ಎಂಬ ಪರಿಕಲ್ಪನೆಯಾಗಿ ಇನ್ನೊಂದು ಆಯಾಮವನ್ನು ಪ್ರವೇಶಿಸಿತು.
ಸ್ಫೋಟವಾಯಿತಲ್ಲ- ಅದು ರಜೋಗುಣದ ಸ್ವ-ಭಾವ. ರಜಸ್ಸು ಎಂದೆಂದೂ ಸುಮ್ಮಗಿರಲಾರದು. ಏನಾದರೂ ಮಾಡಲೇಬೇಕು. ಅದು ಕರ್ಮಪರ! ಸತ್ವವು ಸುಮ್ಮಗಿರಬಲ್ಲುದು. ಅದು ಉಪಶಾಂತ. ಮತ್ತು ಮಾಡಬೇಕಾದಲ್ಲಿ ಮಾಡದೆ, ಮಾಡುವಲ್ಲಿ ತಪ್ಪಾಗಿ ಮಾಡುವ ತಾಮಸವೂ ಸೇರಿ ಗುಣಗಳು ಮೂರಾದವು. ಪ್ರಕೃತಿಯು ಮೂರ್ತವಾಗಿ ರೂಪುಗೊಂಡ ಮೇಲೆ- ಅನಂತರ- ಮನುಷ್ಯ ಜೀವಿಗಳ ಸೃಷ್ಟಿಯಾಯಿತಲ್ಲ, ಈ ಮನುಷ್ಯರನ್ನು ಸಾಮಾನ್ಯವಾಗಿ, ರಜೋಗುಣ ಹೆಚ್ಚಳದವರು, ಆದುದರಿಂದ ಏನಾದರೂ ಮಾಡಲೇ ಬೇಕೆನ್ನುವವರು, ತಮ್ಮ ಕರ್ಮದ ಮೇಲೆ ಅಭಿಮಾನ ಪಡುವವರಾದುದರಿಂದ ನಿರಾಳರಾಗಲಾರದೆ, ದು:ಖವನ್ನೇ ಸುಖವೆಂದು ಬಗೆಯುವ ತಿಳಿಗೇಡಿಗಳು ಕೂಡ ರಜೋಧಿಕಾ: ಕರ್ಮಪರಾ:, ದು:ಖೇಷು ಸುಖಮಾನಿನ: ಎನ್ನುತ್ತದೆ ಭಾಗವತ.
‘ಸ್ವಭಾವ’ವನ್ನು ಅದರ ‘ಧರ್ಮ’ ಎನ್ನಬಹುದು. ‘ಯುಗಧರ್ಮ’, ‘ಮನೋಧರ್ಮ’- ಇವೆಲ್ಲ ಸ್ವಭಾವವನ್ನೇ ಹೇಳುತ್ತವೆ. ಹೀಗಂದಾಗ, ಸ್ವಭಾವವು ಒಂದು ಮಿತಿಯಾಗಿ ಬಹುತ್ವಕ್ಕೆ ಒಂದು ರೀತಿಯಲ್ಲಿ ಅಡ್ಡಿಯಾಯಿತಲ್ಲವೇ ಎಂದರೆ- ಹಾಗಲ್ಲ. ಬಹು ರೂಪತೆಯೇ ‘ಇಚ್ಛೆ’ಯ ಸ್ವಭಾವ ಎನ್ನುವಲ್ಲಿ ಸ್ವಭಾವವು ಮಿತಿಯಲ್ಲವಲ್ಲ!
ಹೀಗೆ ಭಗವದಿಚ್ಛೆಯಿಂದ ಕಾಲ- ಕರ್ಮ- ಗುಣ- ಸ್ವಭಾವಗಳು ಪ್ರಕಟವಾಗಿ, ಅವುಗಳ ಪರಸ್ಪರ ಸಂಬಂಧದಿಂದ ಅನಂತ ಮುಖವಾಗಿ ಈ ಸೃಷ್ಟಿ ಹೊರ ಹೊಮ್ಮುವಂತಾಯಿತು ಎಂದರು ಶುಕಮುನಿ. ಪರೀಕ್ಷಿದ್ರಾಜ ಸೃಷ್ಟಿ ಕ್ರಮದ ಈ ಅದ್ಭುತ ಕಥನವನ್ನು ಕೇಳುತ್ತಿದ್ದ. ಕೃಷ್ಣನ ನಿರ್ಯಾಣದ ಅನಂತರ, ತನ್ನ ಪಿತಾಮಹನಾದ ಅರ್ಜುನ ತನ್ನ ವ್ಯಕ್ತಿತ್ವದ ಸಕಲ ಸತ್ವವನ್ನು ಕಳೆದುಕೊಂಡುದಕ್ಕೂ, ಸೃಷ್ಟಿಯ ಚರಿತ್ರೆಯಲ್ಲಿ ನಡೆದ ಒಂದು ಘಟನೆಗೂ ಸಂಬಂಧವಿದೆ ಎಂದು ಶುಕಮುನಿ ಹೇಳಿದ್ದರಲ್ಲಿಲ್ಲ. ಅದನ್ನು ನೆನಪಿಸಿದ. ಶುಕಮುನಿ ಹೇಳಿದರು: ಮರೆತಿಲ್ಲ; ಅದು ಮರೆಯಲಾದೀತೆ? ಕೇಳು. ಭಗವಂತನ ಇಚ್ಛೆಯಂತೆ ಸೃಷ್ಟಿಯು ಪ್ರಕಟವಾಗಲು ತೊಡಗಿತಲ್ಲ- ಸೃಷ್ಟಿ ಎಂದರೆ ಮುಖ್ಯವಾಗಿ, ಜೀವಿಗಳಿಗೆ ಭೋಗಸಾಧನವಾದ ಶರೀರ, ಕಾಯ ರೂಪುಗೊಳ್ಳಬೇಕು. ಹಾಗೆ ರೂಪುಗೊಳ್ಳಬೇಕಾದರೆ, ಪಂಚಭೂತಗಳು; ಇಂದ್ರಿಯಗಳು, ಮೂರು ಗುಣಗಳು ಇವೆಲ್ಲ ಒಂದು ಹದದಲ್ಲಿ ಬೆರೆಯಬೇಕು! ದೇಶ ಕಾಲಗಳು ಅನುಕೂಲಿಸಬೇಕು! ಏನಾಯಿತೆಂದರೆ, ಇವುಗಳೆಲ್ಲ ವಿಶಿಷ್ಟವಾಗಿ ಸೃಷ್ಟಿಯಾದರೂ ಕೂಡ, ಇವು ಪರಸ್ಪರ ಸೇರಲಾರದೆ ಹೋದವು. ಪ್ರತ್ಯೇಕವಾಗಿಯೇ ಉಳಿದವು. ಎಲ್ಲ ಇದೆ. ಆದರೆ ಸೃಷ್ಟಿಶೀಲತೆ ಉಂಟಾಗುತ್ತಿಲ್ಲ. ಪ್ರಚೋದನೆಯೇ ಇಲ್ಲ. ಎಲ್ಲ ಇದೆ. ಎಲ್ಲ ಇದೆ. ಇಲ್ಲ- ಸಾವಯುವ ಶಿಲ್ಪದ ಸಮಗ್ರೀಕರಣ ಬಲ.
ಇದು ಹೇಗೆಂದರೆ, ಹಕ್ಕಿ ಮೊಟ್ಟೆಯನ್ನೇನೋ ಇಟ್ಟಿದೆ. ಆದರೆ, ಮೊಟ್ಟೆಯೊಡೆದು ಮರಿ ಹೊರ ಬರುತ್ತಿಲ್ಲ. ಹೊರಬರಬೇಕಾದರೆ, ಅದಕ್ಕೆ ಕಾವು ಕೊಡಬೇಕು- ಅಂದಂತೆ. ಸೃಷ್ಟಿ ಕ್ರಮದಲ್ಲೇ ಒಂದು ವಿಚಿತ್ರವೆನಿಸುವ ಬಹುರೂಪತೆ ಇದು. ಇಲ್ಲಿ ಎಲ್ಲ ಎರಡು ಸಲ. ಒಮ್ಮೆ; ಇನ್ನೊಮ್ಮೆ. ಇನ್ನೊಮ್ಮೆ ಎನ್ನುವುದೇ ಪ್ರಕೃತಿಯ ನುಡಿಗಟ್ಟು! ಇಚ್ಛಿಸಿ, ಇಚ್ಛಿಸಿದ್ದಕ್ಕೆ ಅನುಗುಣವಾಗಿ, ತಾನೇ ಮತ್ತೆ ರೂಪವನ್ನು ತಾಳಿ, ಆ ರೂಪದ ಮೂಲಕ ಸೃಷ್ಟಿಯನ್ನು ಮತ್ತೆ ಪ್ರಚೋದಿಸಿದರೆ ಮಾತ್ರ- ಸೃಷ್ಟಿಯ ಉಪಕ್ರಮ ಮುಂದುವರಿಯುವುದು ಸಾಧ್ಯವೆಂಬಂತೆ. ಇಲ್ಲದಿದ್ದರೆ, ಎಲ್ಲ ಇದ್ದೂ ಏನೂ ಇಲ್ಲ. ಬರಿಯ ರಿಕ್ತತೆ. ನಿನ್ನ ಪಿತಾಮಹ ಅರ್ಜುನ, ಕೃಷ್ಣ ನಿರ್ಗಮಿಸಿದ ಮೇಲೆ, ಈ ಸ್ಥಿತಿಯನ್ನು ಎಲ್ಲ ಇದ್ದೂ ತಾನೇನೂ ಅಲ್ಲ ಎನ್ನುವ ಸ್ಥಿತಿಯನ್ನು, ನಿಸ್ಸಹಾಯಕತೆಯನ್ನು ಅನುಭವಿಸಬೇಕಾಯಿತು. ಅರ್ಜುನನೆಂದೇನು? ಜೀವಿಗಳೆಲ್ಲರೂ ಈ ಸ್ಥಿತಿಯನ್ನು ಅನುಭವಿಸಬೇಕು. ಈ ಜಡ ಸ್ಥಿತಿಯನ್ನು ಪೂರಾ ಅನುಭವಿಸದೆ, ಭಗವಂತನ ಪ್ರಚೋದನೆಯನ್ನು ಅನುಭವಿಸಲಾರೆವು! ಎಂಥ ವಿಚಿತ್ರ ಸಂಬಂಧವಿದು! ಜಡಸ್ಥಿತಿಯೇ, ಸ್ವತಂತ್ರ ಸ್ಥಿತಿಯನ್ನು ಪಡೆಯಲು ದಾರಿಯಾಗುವ ವಿಚಿತ್ರ ಬಹು ರೂಪತೆ ಇದು! ಕೃಷ್ಣ ನಿರ್ಗಮನದ ಅನಂತರ ಅರ್ಜುನ ಇದನ್ನು ಕಂಡುಕೊಂಡ ಎಂದರು ಶುಕಮುನಿ.
ಈ ಸೃಷ್ಟಿ ಎನ್ನುವುದು ಕಾವು ಕೊಡಬೇಕಾದ ಅಗತ್ಯವಿರುವ ಮೊಟ್ಟೆ ಎನ್ನುವುದನ್ನು ಸೂಚಿಸುವುದಕ್ಕಾಗಿಯೇ ವಿಶ್ವವನ್ನು ಬ್ರಹ್ಮಾಂಡ ಎನ್ನುತ್ತೇವೆ. ದೇಹವನ್ನು ಪಿಂಡಾಂಡ ಎನ್ನುತ್ತೇವೆ. ಅಂಡ ಎಂದರೆ ಮೊಟ್ಟೆ. ತಾಯಿ ಹಕ್ಕಿ ಹೊರಗಿನಿಂದ ಮೊಟ್ಟೆಗೆ ಕಾವು ಕೊಡುತ್ತೆ. ಭಗವಂತನ ನಡೆ ವಿಚಿತ್ರ. ಅವನು ಸೃಷ್ಟಿಯ ಒಡಲೊಳಗೆ ತಾನೇ ಹೊಕ್ಕು ಅಂಡವನ್ನು ಒಳಗಿಂದಲೇ ಒಡೆದು ಪ್ರಕಟವಾದನಂತೆ. ಆ ಅಭಿವ್ಯಕ್ತಿಯೇ ಅದ್ಭುತ. ಸಾವಿರ ಮುಖ, ಸಾವಿರ ಕಣ್ಣು, ಸಾವಿರ ತೋಳು, ಸಾವಿರ ಪಾದ! ಸಾವಿರ ಎಂದರೆ ಸಾವಿರದ ಅನಂತ. ಹೀಗೆ ಪ್ರಕಟವಾದವನಿಗೆ ವಿರಾಟ್ ಪುರುಷ ಎಂದು ಸಾರ್ಥಕವಾದ ಹೆಸರು.
ಭಗವಂತನ ಬಹು ರೂಪದ ಇಚ್ಛೆ ಮೈತಳೆದ ಪರಿ ಇದು. ನಿಜಕ್ಕಾದರೆ, ಈ ವಿರಾಡ್ರೂಪವನ್ನು ಭಗವಂತನ ಮೊದಲ ಅವತಾರ ಎನ್ನಬಹುದು. ಅಷ್ಟೇ ಅಲ್ಲ; ಈ ಅರ್ಥದಲ್ಲಿ ಭಗವಂತನ ಅವತಾರಗಳೂ ಅನಂತ ಎನ್ನಬಹುದು. ಬಹುರೂಪತೆಯ ಒಂದು ಸಂಕಲ್ಪ ಎಂಥ ಸೃಷ್ಟಿ ರಂಗವನ್ನು, ಎಂಥ ಸೃಷ್ಟಿ ನಾಟಕವನ್ನು ರಚಿಸಿ ಬಿಟ್ಟಿತು ನೋಡು ಎಂದರು ಶುಕಮುನಿ.
ದೊರೆಗೆ ಅಚ್ಚರಿಯಾಯಿತು. ಹೌದು; ಬಹುರೂಪತೆ ಎಂದರೆ ಒಂದು ರೀತಿಯಲ್ಲಿ ತನಗೆ ತಾನೇ ಅನ್ಯನಾದಂತೆ. ತನ್ನಿಂದ ತಾನೇ ಭಿನ್ನೈಸಿದಂತೆ. ಎಂಥ ಅಪರಿಚಿತನನ್ನೂ ಅದು ತಾನೇ ಎಂದು ತಿಳಿದಂತೆ. ತನಗೆ ತಾನೇ ಕಡು ವಿರೋಧಿಯಾದಂತೆ. ಮತ್ತು ಎಂಥ ವಿರೋಧವನ್ನೂ ತನ್ನಲ್ಲಿ ತಾನು ಸಮನ್ವಯ ಮಾಡಿದಂತೆ. ಇದು ಎಂಥ ಪ್ರಚಂಡ ಏಕಾಗ್ರತೆ! ಎದು ಎಂಥ ಪ್ರಚಂಡವಾದ ಪ್ರಜ್ಞೆಯ ವಿಸ್ತಾರ! ಹೀಗಲ್ಲದೆ ಈ ಲೋಕವನ್ನು ನಿಭಾಯಿಸುವುದು ಅಸಾಧ್ಯವೇ ಸರಿ. ಆದರೂ ಭಗವಂತನ ಅವತಾರ ರೂಪಗಳು ಹೇಗೆ ಇದನ್ನೆಲ್ಲ ನಿರ್ವಹಿಸುತ್ತವೆ ಎಂದು ತಿಳಿಯಬೇಕೆಂಬ ಹಂಬಲ ದೊರೆಗೆ ಉಂಟಾಯಿತು. ಶುಕಮುನಿ ನಸುನಕ್ಕು ನೀನು ವರಾಹಾವತಾರದ ಕಥೆ ಕೇಳು ಎಂದರು.
ದೊರೆಯೇ, ಸೃಷ್ಟಿಯ ಉಪಕ್ರಮಗಳೆಲ್ಲ ತೊಡಗಿ ಮನುಷ್ಯ ಸೃಷ್ಟಿಯವರೆಗೆ ಸೃಷ್ಟಿ ಪ್ರವಾಹ ಹರಿದುಬಂತು. ಮನುಕುಲದ ಆದಿ ದಂಪತಿಗಳು ಸೃಷ್ಟಿಯಾದರು. ಅವರೇ ಸ್ವಾಯಂಭುವ ಮನು ಮತ್ತು ಶತರೂಪಾದೇವಿಯರು. ಇವರೇ ಮನುಕುಲದ ಆದಿರಾಜ- ರಾಣಿಯರು ಕೂಡಾ. ಸೃಷ್ಟಿಕರ್ತನಾದ ನಾಲ್ಮೊಗದ ಬ್ರಹ್ಮದೇವ ಈ ದಂಪತಿಗಳಿಗೆ, ಅನುರೂಪರಾದ ಸಂತತಿಯನ್ನು ಪಡೆಯುವುದು; ಪ್ರಜಾಪಾಲನೆಯನ್ನು ಮಾಡುವುದು ಕರ್ತವ್ಯವೆಂದು ಆದೇಶಿಸಿದ್ದ. ಅದೇನೋ ಸರಿ. ಆದರೆ, ದುರಂತವೆಂದರೆ, ಯಾವ ಭೂಮಿಯನ್ನು ಈ ದಂಪತಿಗಳು ಪಾಲಿಸಬೇಕೋ ಅದು ಪ್ರಳಯಜಲದಲ್ಲಿ ಮುಳುಗಿತ್ತು. ಇತ್ತ ಹಿರಣ್ಯಾಕ್ಷನೆಂಬ ಮಹಾದೈತ್ಯನೊಬ್ಬ, ಭೂಮಿ ಮುಳುಗಿದ್ದಂತೆಯೇ ಅದನ್ನು ತನ್ನ ವಶದಲ್ಲಿರಿಸಲು ಯತ್ನಿಸುತ್ತಿದ್ದ. ಅಧೀನದಲ್ಲಿರಿಸಿಕೊಳ್ಳುವುದು ಬೇರೆ, ‘ಪಾಲನೆ’ ಬೇರೆ. ಇದೇ ದೈತ್ಯರಿಗೂ ಇತರರಿಗೂ ಇರುವ ವ್ಯತ್ಯಾಸ. ಈ ರೂಕ್ಷ ದೈತ್ಯನಿಗೆ ಎಲ್ಲರೂ ಹೆದರುತ್ತಿದ್ದರು. ಇತ್ತ ಸ್ವಾಯಂಭುವ ಮನು ಮತ್ತು ಬ್ರಹ್ಮದೇವ- ಭೂಮಿಯನ್ನುದ್ಧರಿಸುವ ಅಂದರೆ, ಮೇಲಕ್ಕೆತ್ತುವ ದಾರಿ ಕಾಣದೆ ನೊಂದು ಭಗವಂತನನ್ನು ಧ್ಯಾನಿಸಿದರಂತೆ. ಆಗ ಒಂದು ಚಮತ್ಕಾರ ನಡೆಯಿತು. ಪುಟ್ಟದೊಂದು ಹಂದಿ ಮರಿ ಕಾಣಿಸಿಕೊಂಡಿತು. ಅದು ಬ್ರಹ್ಮದೇವರ ಶ್ವಾಸಮಾರ್ಗದಿಂದಲೇ ಹೊರಬಂದಂತಿತ್ತು. ನೋಡು ನೋಡುತ್ತಿದ್ದಂತೆಯೇ ಅದು ಬೃಹದಾಕಾರವಾಗಿ ಬೆಳೆಯುತ್ತ ಹೋಯಿತು. ಭೀಕರವಾದ ಕೋರೆ ದಾಡೆಗಳ ಕಾಡು ಹಂದಿ! ಏನು ವಿರಾಡ್ರೂಪವೋ ಹೇಗೆ!
ಬ್ರಹ್ಮದೇವನಿಗೆ ಅನ್ನಿಸುತ್ತಿತ್ತು. ಇದು ತಮ್ಮನ್ನು ಕಾಪಾಡುವುದಕ್ಕೆಂದೇ ಬಂದ ಭಗವದವತಾರ. ಇಲ್ಲದಿದ್ದರೆ, ಪುಟ್ಟ ಮರಿಯಾಗಿ ತಮ್ಮ ಮುಂದೆ ಕಾಣಿಸಿಕೊಳ್ಳುತ್ತಿರಲಿಲ್ಲ. ಈಗೇನೋ ಪರಮ ಭೀಕರವಾಗಿದೆ. ಈಗ ತಾವು ಪ್ರಾರ್ಥನೆ ಸಲ್ಲಿಸಬೇಕು; ಅರಿಕೆ ಮಾಡುತ್ತ ಬೇಡಿಕೊಳ್ಳಬೇಕು. ತಮ್ಮ ಕಣ್ಣೆದುರು ಇದು ಬೆಳೆದು ನಿಂತುದಕ್ಕೆ ಅದೇ ಅರ್ಥ.
ಪ್ರಾರ್ಥಿಸುತ್ತಿದ್ದಂತೆ ಈ ಮಹಾವರಾಹ, ನೀರಿನಲ್ಲಿ ಮುಳುಗಿತಂತೆ. ಅಲ್ಲಿ ಪಾತಾಳ ತಲಪಿದ್ದ, ಸಮಸ್ತ ಜೀವಿಗಳಿಗೆ ಆಶ್ರಯ ಸ್ಥಾನವಾಗಿದ್ದ ಭೂಮಿಯನ್ನು ನೋಡಿತಂತೆ. ನೋಡಿದ್ದೇನು? ಗಂಧವತಿಯಾದ ಭೂಮಿಯನ್ನು ಮೂಸುತ್ತ, ತನ್ನ ಕೋರೆ ದಾಡೆಗಳ ಮೇಲೆ ಭೂಗೋಲವನ್ನು ಒರಗಿಸಿಕೊಂಡು, ಮೇಲಕ್ಕೆ ಬರುತ್ತಿತ್ತು. ಈಗ ಹಿರಣ್ಯಾಕ್ಷನಿಗೆ ಕ್ರೋಧ ಉಕ್ಕೇರಿ; ಆ ಧೈತ್ಯ, ಈ ಮಹಾ ವರಾಹದ ಮೇಲೆ ಆಕ್ರಮಣ ಮಾಡಿದನಂತೆ. ಮೊದಲೇ ಕಾಡು ಹಂದಿ. ಈಗ ಗಾಯಮಾಡಿ ಕೆಣಕಿದರೆ, ಅದು ಮಹೋಗ್ರ. ತನ್ನ ಕರಾಲ ದಂಷ್ಟ್ರಗಳಿಂದ ಅದು ಹಿರಣ್ಯಾಕ್ಷನನ್ನು ಸೀಳಿ ಒಗೆಯಿತು. ಭೂಮಿಯನ್ನು ತಾನು ಮೇಲೆತ್ತಿತು. ಮೇಲೆತ್ತಿ ಸ್ವಾಯಂಭುವ ಮನುವಿನ ಪಾಲನೆಗೆ ಬಿಟ್ಟು ಕೊಟ್ಟಿತು. ಅಲ್ಲೇ ಬಿದ್ದಿತ್ತು ಹಿರಣ್ಯಾಕ್ಷನ ಕಳೇಬರ. ಅದನ್ನು ನೋಡಿ ಬ್ರಹ್ಮದೇವ, ಭಗವಂತನ ಕೋರೆದಾಡೆಗಳ ತಿವಿತಕ್ಕೆ ಸಿಕ್ಕಿ ಸಾಯುವುದೂ ಒಂದು ಭಾಗ್ಯ. ದಾಡೆಯಿಂದ ಉದ್ಧಾರವಾದವರು ಇಬ್ಬರು; ಭೂಮಿ ದೇವಿ ಮತ್ತು ಹಿರಣ್ಯಾಕ್ಷ ದೈತ್ಯ ಎಂದನಂತೆ.
ರಾಕ್ಷಸರೆಂದರೆ ವಾಸನಾ ಪ್ರಧಾನವಾದ ಜೀವನ. ಅಂತ:ಕರಣ ಪ್ರಧಾನವಾದ, ಭಾವ ಪ್ರಧಾನವಾದ ಜೀವನವಲ್ಲ. ತಮ್ಮ ವಾಸನೆಯನ್ನು ತೀರಿಸಿಕೊಳ್ಳುವುದಕ್ಕೆ ಎಂಥ ರೂಕ್ಷ ವಿಧಾನವೂ ಇವರಿಗೆ ಸರಿಯೇ. ಕಾಡುಪ್ರಾಣಿಗಳ ಹಾಗೆ. ಗಂಧ ಅಂದರೆ ವಾಸನೆ- ಮಣ್ಣಿನ ಗುಣ! ಗಂಧವತೀ ಪೃಥಿವೀ ಆದುದರಿಂದಲೇ ಈ ರಾಕ್ಷಸರಿಗೆ ಮಣ್ಣಿನ ಮೇಲೆ, ಚಿನ್ನದ ಮೇಲೆ, ಖನಿಜಗಳ ಮೇಲೆ ಕಣ್ಣು. ಈ ಅರ್ಥದಲ್ಲಿ ಹಿರಣ್ಯಾಕ್ಷರೇ. ಇಂಥ ವಾಸನಾ ಪ್ರಧಾನರ ಉದ್ಧಾರ ಹೇಗೆ? ಮೂಲ ವಾಸನಾ ಮೂರ್ತಿಯ ತಿವಿತಕ್ಕೆ ಮಾತ್ರ ಇಂಥವರು ಈಡಾಗುವರು. ಇದನ್ನು ಸೂಚಿಸಲೆಂಬಂತೆ ಬ್ರಹ್ಮದೇವನ ಶ್ವಾಸಮಾರ್ಗ- ಗಂಧಮಾರ್ಗದಿಂದಲೇ ಹಂದಿಮರಿ ಕಾಣಿಸಿಕೊಂಡಿತು ಎಂಬ ವರ್ಣನೆ.
ಹಿರಣ್ಯಾಕ್ಷ ಎಷ್ಟು ಹಂದಿಯ ಹಾಗೆ ಇದ್ದರೂ ಅವನು ಮೂಲ ಕಾಡು ಹಂದಿಯಲ್ಲವಲ್ಲ. ಈ ವಾಸನಾ ಪ್ರಧಾನ ದೈತ್ಯ ಮೂಲ ವಾಸನೆಯಲ್ಲಿ ಬಲಿಯಾಗಿ ಹೋಗುವನು. ಬಲಿಯಾದರೆ, ಉದ್ಧಾರವೇ. ಉದ್ಧಾರವೆಂದರೆ ಮೂಲದ ಸಂಪರ್ಕವೇ. ಅಂಥ ಸಂಪರ್ಕ ಎಲ್ಲರಿಗೂ ಸಿಗಬೇಕೆಂದೇ, ಭಗವಂತ, ಒಳ ಹೊಕ್ಕು ಅಂಡವನ್ನೊಡೆದು, ಸಾವಿರ ತಲೆ ಕಾಲುಗಳ ವಿರಾಡವತಾರವಾಗಿ ಹೊಮ್ಮಿದ. ಮನುಷ್ಯರೆಷ್ಟು ಬಹು ರೂಪವೋ, ಅವರಲ್ಲಿರುವ ಭಗವಂತನೂ ಅಷ್ಟು ಬಹು ರೂಪ. ಅದು ಅವನ ಇಚ್ಛೆ! ಈ ಇಚ್ಛೆಯಿಂದಲೇ ಇಂಥ ಸೃಷ್ಟಿ! -ಎಂದರು ಶುಕಮುನಿ.
ಭಾಗವತ 14:ಭುವಿಯ ತಳದಲ್ಲಿರುವುದು ಹರಿವನೀರೂ, ಕುದಿವ ಲಾವಾರಸವೂ
ಭಾಗವತವು ಸೃಷ್ಟಿಯ ಕಥನದಲ್ಲಿ ತೊಡಗಿದೆ. ಸೃಷ್ಟಿಯಲ್ಲಿ ಭಗವಂತನು ಅಡಗಿರುವುದರಿಂದ, ಅಡಗಿರುವುದನ್ನು ಹೊಳೆಯಿಸುವಂತೆ ಅದು ತನ್ನ ಕಥನವನ್ನು ನಿರ್ವಹಿಸಬೇಕು ಆಗಲೇ ಭಾಗವತದ ಸಾರ್ಥಕತೆ. ಅಡಗಿರೋದನ್ನು ಅವ್ಯಕ್ತವಾಗಿರೋದನ್ನು ತಾನು ಅಡಗಿಯೇ ಹುಡುಕಬೇಕಲ್ಲವೆ? ಆಳದಲ್ಲಿ ಇರುವ ಸತ್ಯವನ್ನು ನಾವು ಆಳಕ್ಕೆ ಮುಳುಗದೆ ಕಂಡುಕೊಳ್ಳಲಾಗುವುದೆ? ಅಂದರೆ, ಸೃಷ್ಟಿಯಲ್ಲಿ ಪ್ರಕಟಗೊಂಡಿರುವ ಮನುಷ್ಯ ತಾನು ಪ್ರಕಟಗೊಂಡಿದ್ದೇನೆ ಎಂಬ ಅಹಂಕಾರದ ಭಾವವನ್ನು ಬಿಟ್ಟುಕೊಡದೆ ಮನಸ್ಸಿಗೆ ಹುಡುಕಾಟದ ಪ್ರವೃತ್ತಿಯೇ ಉಂಟಾಗಲು ಸಾಧ್ಯವಿಲ್ಲ. ಬಿಟ್ಟುಕೊಡುವುದು ಸುಲಭ ಸಾಧ್ಯವೂ ಅಲ್ಲ. ಅಂದರೆ, ತನ್ನನ್ನೇ ತಾನು ಹುಡುಕದೆ ದೇವರನ್ನು ಹುಡುಕುವುದು, ತನ್ನನ್ನು ಬಿಟ್ಟು ಬೇರೆಯಾಗಿ ದೇವರನ್ನು ಹುಡುಕುವುದು ಅಸಾಧ್ಯ. ವಿಚಿತ್ರವೆಂದರೆ, ಅಡಗಿದ್ದುದನ್ನು ಹುಡುಕುವಾಗ, ಅಡಗಿದ್ದುದೆಲ್ಲ ಮೆಲ್ಲಗೆ ಗೋಚರವಾಗುವವು. ದೇವರು ಅಥವಾ ‘ಸತ್ಯ’ವು ಮಾತ್ರ ಅಡಗಿರೋದಲ್ಲ. ದೇವರೆಂಬ ಸತ್ಯವು, ಪ್ರಕೃತಿಯ- ಇನ್ನೂ ಪೂರ್ತಿಯಾಗಿ ಪ್ರಕಟವಾಗದ ಪ್ರಕೃತಿಯ- ಜತೆಗೇ ತಾನು ಅಡಗಿದೆ! ಭೂಮಿಯ ಆಳದಲ್ಲಿ ನೀರಿದೆ. ಅಂತರ್ಜಲ. ಜೀವ ಜಲ. ನಿಜ. ನೀರು ಮಾತ್ರವಲ್ಲ, ಪ್ರಚಂಡವಾಗಿ ಉರಿಯುವ ಬೆಂಕಿಯೂ ಭೂಮಿಯಾಳದಲ್ಲಿದೆ. ಹಾಗಲ್ಲದೆ ಜ್ವಾಲಾಮುಖಿ ಚಿಮ್ಮುವುದೆಲ್ಲಿಂದ? ಕುದಿಯುವ ಲಾವಾರಸ ಹರಿಯುವುದೆಲ್ಲಿಂದ? ಎಲ್ಲಿತ್ತದು? ಆದುದರಿಂದ, ನೀರು ಮಾತ್ರ ಬೇಕು; ಜ್ವಾಲಾಮುಖಿ ಬೇಡ ಎನ್ನುವಂತಿಲ್ಲ. ಕನಿಷ್ಠ- ಹುಡುಕುವವನು ಹಾಗೆ ಹೇಳುವಂತಿಲ್ಲ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ದೇವರನ್ನು ಹುಡುಕುತ್ತಿದ್ದೇನೆ ಎನ್ನುವುದೇ ಅಹಂಕಾರವಾಗಬಹುದಾದ್ದರಿಂದ, ಆ ಹುಡುಕಾಟದಲ್ಲಿ ತನ್ನ ಅಹಂಕಾರವನ್ನೇ ತಾನು ಹುಡುಕುತ್ತಿದ್ದಾನೆ- ಹಾಗೆಂದು ಗೊತ್ತಿಲ್ಲದೆ! ಹುಡುಕಾಟದಲ್ಲಿ ತನ್ನೊಳಗೆ ಇರುವುದೆಲ್ಲ ಪ್ರಕಟವಾಗಬೇಕು, ಸತ್ತ್ವಗುಣ ಮಾತ್ರವಲ್ಲ, ರಜಸ್ಸೂ, ತಮಸ್ಸೂ ಎಲ್ಲವೂ. ಪ್ರಕಟವಾಗುತ್ತವೆ ಕೂಡ. ಮುದುಡಿ ಮಲಗಿರುವ ಹಾವಿನ ಬಾಲವನ್ನು ಮೆಟ್ಟಿದರೆ ಸಾಕು, ಹೇಗೆ ಸರಕ್ಕನೆ ಚಲಿಸಿ ಹೆಡೆ ಎತ್ತಿ ಬುಸುಗುಡುತ್ತದೆ! ಇದು ಅಹಂಕಾರದ ಗುಣ. ಮೆಟ್ಟದಿದ್ದರೆ ಅದರ ಪಾಡಿಗೆ ಅದಿರುತ್ತದೆ ಎಂದುಕೊಳ್ಳಬಹುದು. ಆದುದರಿಂದಲೇ ಇದು ಮೇಲ್ನೋಟಕ್ಕೆ ವಿಪರ್ಯಾಸ. ಆಳದಲ್ಲಿ ಇದು ಸೃಷ್ಟಿಯ ಗುಣ. ದೇವರು ಸೃಷ್ಟಿಯಲ್ಲಿ ಅಡಗಿದ್ದಾನೆ ಎಂದರೆ, ಅವನು ಪ್ರಕಟವಾಗಬೇಕಾದರೆ, ಅವನೊಂದಿಗೆ ಅಡಗಿರುವ ಸೃಷ್ಟಿ ಸಮಸ್ತವೂ ಪ್ರಕಟವಾಗಬೇಕು. ಅಹಂಕಾರವೆಂಬ ಹಾವು ಎಚ್ಚತ್ತು ಬುಸುಗುಡದೆ, ನಮ್ಮ ಅಹಂಕಾರದಲ್ಲಿಯೇ ಅಡಗಿರುವ ದೇವರ ಅಥವಾ ‘ಸತ್ಯ’ದ ಅಸ್ಮಿತೆ, ಪ್ರಕಟವಾಗಲಾರದು! ಮನುಷ್ಯ ಜೀವಿಯೇ ‘ಸೃಷ್ಟಿ’ಯಾದುದರಿಂದ, ಮನುಷ್ಯನ ಎಲ್ಲ ಮುಖಗಳೂ, ಗೊತ್ತಿರುವ, ಗೊತ್ತಿಲ್ಲದಿರುವ ಅನೂಹ್ಯ ಭೀಕರ ಮುಖಗಳೂ, -ಹುಡುಕುತ್ತ ಹೋದಂತೆ ಅನಾವರಣಗೊಳ್ಳುತ್ತ ಹೋಗುತ್ತವೆ. ‘ಭಾಗವತ’ ಇದನ್ನೊಪ್ಪುತ್ತದೆ! ಸೃಷ್ಟಿಯ ಕಥನದಲ್ಲಿ ಮನುಷ್ಯನ ಅಹಂಕಾರ ಸುರುಳಿಬಿಚ್ಚುತ್ತ ಹೆಡೆ ಎತ್ತುವುದನ್ನು ಅದು ಬಣ್ಣಿಸಿಯೇ ಬಣ್ಣಿಸುತ್ತದೆ.
ಚತುರ್ಮುಖ ಬ್ರಹ್ಮನ ಪುತ್ರ ದಕ್ಷ ಪ್ರಜಾಪತಿ. ಮನು- ಶತರೂಪಾ ದಂಪತಿಗಳ ಮಗಳು ‘ಪ್ರಸೂತಿ’ಯನ್ನು ದಕ್ಷನಿಗೆ ಮದುವೆ ಮಾಡಿಕೊಟ್ಟಿದ್ದರು. ದಕ್ಷ- ಪ್ರಸೂತಿಯರಿಗೆ ಹದಿನಾರು ಮಂದಿ ಹೆಣ್ಣು ಮಕ್ಕಳು. ಅವರಲ್ಲಿ ‘ಸತಿ’ಯು, ಮಹಾದೇವನಾದ ಶಿವನಿಗೆ ಸತಿಯೇ ಆಗಿ ಅರ್ಧಾಂಗಿಯಾಗಿದ್ದಳು. ಹೀಗೆ ದಕ್ಷ ಪ್ರಜಾಪತಿಗೆ ಶಿವನು ಅಳಿಯ. ಏನಾಯಿತೆಂದರೆ, ಹಿಂದೆ ದೇವತೆಗಳೆಲ್ಲ ಸೇರಿ ದೊಡ್ಡದೊಂದು ಯಜ್ಞವನ್ನು ನಡೆಸುತ್ತಿದ್ದರು. ದೇವತೆಗಳ ಕೋರಿಕೆಯಂತೆ ಬ್ರಹ್ಮ ದೇವ ಮತ್ತು ಶಿವ, ಈ ಯಜ್ಞ ಸಮಾರಂಭಕ್ಕೆ ಬಂದು ಜತೆಗೂಡಿದ್ದರು. ಈ ಹೊತ್ತಿನಲ್ಲಿಯೇ ದಕ್ಷ ಪ್ರಜಾಪತಿಯ ಆಗಮನವಾಯಿತು. ದೊಡ್ಡ ಮನುಷ್ಯ! ಎಲ್ಲರೂ ಎದ್ದು ನಿಂತು ಸ್ವಾಗತಿಸಿದರು. ತಂದೆಯಾದ ಬ್ರಹ್ಮದೇವ ಮತ್ತು ಕೈಲಾಸಪತಿಯಾದ ಶಿವ- ಇವರಿಬ್ಬರೂ ಎದ್ದು ನಿಲ್ಲದೇ ಇದ್ದರು. ಅಷ್ಟಕ್ಕೆ ದಕ್ಷನ ಕಣ್ಣು ಕೆಂಪಗಾದವು. ಬ್ರಹ್ಮದೇವನಾದರೋ ಹಿರಿಯ. ಅವನ ನಿಲುವು ಸರಿ. ಈ ಶಿವನಿಗೇನು? ಅಳಿಯನಾಗಿ ತನ್ನವನಾಗಿ ತನಗೆ ಗೌರವ ತೋರಿಸಲೇ ಬೇಕಾದವನೀತ. ಈತನಿಗೆ ಕೈಲಾಸದ ಕೋಡಿನಂತೆ ತಣ್ಣನೆಯ ಕೊರೆಯುವ ಅಹಂಕಾರ! ಇದು ಸಹಿಸಲಸಾಧ್ಯ ಎಂದುಕೊಂಡ ದಕ್ಷ ಪ್ರಜಾಪತಿ. ದಕ್ಷನ ಸುಪ್ತ ಅಹಂಕಾರ ‘ಎದ್ದು ನಿಂತಿತ್ತು’. ಆ ಯಜ್ಞ ಸಭೆಯಲ್ಲಿಯೇ ದಕ್ಷ, ಶಿವನನ್ನು ವಾಚಾಮಗೋಚರವಾಗಿ ನಿಂದಿಸಿದನಂತೆ. ಸಿಟ್ಟುಗೊಂಡು ನಿಂದಿಸುವಾಗ ಮಾತಿಗೆ ವಿಚಿತ್ರವಾದ ಸೃಷ್ಟಿಶೀಲತೆ ಬಂದುಬಿಡುತ್ತದೆ! ಈಗ ದಕ್ಷನಿಗೆ ಶಿವನ ಮೂರುಕಣ್ಣು, ಕುರೂಪದಂತೆ ಕಂಡಿತು. ಶಿವನ ವೈರಾಗ್ಯ ಮರುಳಿನಂತೆ ತೋರಿತು. ಭಸ್ಮಲೇಪನ ಅಶುಚಿಯಾಯಿತು. ಭೂತಗಣಗಳು ಶಿವನನ್ನು ಸುತ್ತುವರಿದಿವೆ; ಎನ್ನುವುದು ಮತ್ತೇರಿದ ಮದಾಂಧರ ಗುಂಪುಗಾರಿಕೆಯಂತೆ ಭಾಸವಾಯಿತು. ದಕ್ಷನ ಮುಖದಿಂದ ಶಿವನನ್ನು ಕುರಿತ ನಿಂದೆಯ ಪ್ರವಾಹವೇ ಹರಿಯಿತು.
ಶಿವನೋ ನಿಶ್ಚಲನಾಗಿದ್ದ. ವಾಸ್ತವವೇನೆಂದರೆ, ಶಿವ, ಮನಸ್ಸೆಂಬ ಮನಸ್ಸಿನ ಅಭಿಮಾನೀ ದೇವತೆ. ಮನೋನಾಯಕ. ಮನಸ್ಸು ಸಂಕಲ್ಪಾತ್ಮಕವಾಗಿ ಅಹಂಕಾರದ ಸ್ಥಾನ. ಶಿವನು ಅಹಂಕಾರದ ಅಧಿದೈವ. ಅಂದರೆ, ಅಹಂಕಾರ ಸ್ತರವನ್ನು ದಾಟಬೇಕಾದರೆ, ಅಹಂಕಾರವನ್ನು ಕಳಕೊಳ್ಳಬೇಕಾದರೆ, ಶಿವನ ಅನುಗ್ರಹವಾಗಬೇಕು. ಶಿವನು ಅರ್ಧಮೈಯೇ ಹೆಣ್ಣಾದವನು! ಶಿವನೊಬ್ಬನೇ ಅರ್ಧನಾರೀಶ್ವರ! ತನ್ನ ಮೈ-ಮನಗಳ ಅರ್ಧದಲ್ಲಿ ಸತಿಯೇ ಇರಲಾಗಿ ತಾನು ಪೂರ್ಣನಾದವನು ಶಿವನೊಬ್ಬನೇ! ಇದು, ಗಂಡು- ತನ್ನ ಅಹಂಕಾರವನ್ನು ಕಳೆದುಕೊಂಡುದರ ಗುರುತು. ಯಾವ ಹೆಣ್ಣಿಗಿದೆ ಈ ಭಾಗ್ಯ! ಯಾವ ತಂದೆಯ ಮಗಳಿಗಿದೆ ಈ ಭಾಗ್ಯ!
ಆದರೆ, ದಕ್ಷ ತನ್ನ ಸೂಕ್ಷ್ಮತೆಯನ್ನು ಯಾವಾಗಲೋ ಕಳಕೊಂಡಿದ್ದ. ಎಲ್ಲೆಲ್ಲೂ ತನಗೆ ಗೌರವ ಸೂಚನೆಯನ್ನು ಹುಡುಕುವವನಾಗಿ ಅವನ ಕಣ್ಣು ನೆತ್ತಿಯ ಮೇಲಿತ್ತು. ಅಹಂಕಾರದ ಎಲ್ಲ ಸುಳಿವುಗಳ ಗುರುತು ಅಹಂಕಾರ ಕಳೆದುಕೊಂಡ ಶಿವನಿಗಲ್ಲವೆ? ಶಿವನು, ದಕ್ಷನ ಈ ಅಹಂಕಾರವನ್ನು ಕಂಡು, ಇದು ಇನ್ನಷ್ಟು ಬೆಳೆಯ ಬೇಕಾದಷ್ಟು- ಬೆಳೆಯಲಿ, ಬೆಳೆದ ಮೇಲೆ ಬಣ್ಣ ಬದಲಾಗಬಹುದು ಎಂದುಕೊಂಡು ಸುಮ್ಮಗಿದ್ದ. ಸುಮ್ಮನೆ ಇರುವುದು ತಪಸ್ವಿಗೆ ಸಹಜ.
ಶಿವ ಏನೂ ನಡೆದಿಲ್ಲ ಎಂಬಂತೆ ಸುಮ್ಮಾನ ಕೆಡಿಸಿಕೊಳ್ಳದೆ ಸುಮ್ಮನೆ ಇದ್ದನಲ್ಲ- ದಕ್ಷ ಹುಚ್ಚನಂತಾದ. ನಿನಗೆ ಯಜ್ಞಭಾಗವೇ ಸಿಗದಿರಲಿ ಎಂದು ಶಿವನಿಗೆ ಶಪಿಸಿದ. ಕಡು ಕೋಪದಿಂದ ಸಭಾತ್ಯಾಗ ಮಾಡಿ ಹೊರಟು ಹೋದ. ಶಿವನೇನೋ ಸುಮ್ಮಗಿದ್ದ. ಅದಕ್ಕೆ ಬೇರೆ ಅರ್ಥಗಳೂ ಇರಬಹುದು. ಆದರೆ, ಶಿವನ ವಾಹನವಾದ ನಂದಿಗೆ ತನ್ನೊಡೆಯನಿಗಾದ ಅಪಚಾರವನ್ನು ತಡೆದುಕೊಳ್ಳುವುದಕ್ಕಾಗಲಿಲ್ಲವಂತೆ. ನಂದಿ, ದಕ್ಷನನ್ನು, ದಕ್ಷನನ್ನು ನಿಯಂತ್ರಿಸದೆ ಅವನ ಮಾತುಗಳನ್ನನುಮೋದಿಸಿದ ಬ್ರಾಹ್ಮಣರನ್ನು ಎಲ್ಲರನ್ನೂ ಸೇರಿಸಿಯೇ ಹೀಗೆ ಶಪಿಸಿದನಂತೆ.
ದಕ್ಷನೆಂಬ ಈ ಗಾಂಪ, ದೇಹವನ್ನೇ ತಾನೆಂದುಕೊಂಡ ಈ ದೇಹಾಭಿಮಾನಿ, ವೇದ ವಾಕ್ಯಗಳ ನಿಜವಾದ ಅರ್ಥವೇ ಆಗದೆ ಕರ್ಮಕಾಂಡದಲ್ಲಿಯೇ ಬಿದ್ದಿರುವ ಈ ಪಶು, ಈ ಕರ್ಮಲಂಪಟ- ಪಶುವೇ ಆಗಿ ಹೋಗಲಿ. ಅದು ಎಲ್ಲರಿಗೂ ತಿಳಿಯಲಿ. ಅದಕ್ಕಾಗಿ ಈತನಿಗೆ ಹೋತದ ಮುಖವೇ ಉಂಟಾಗಲಿ. ವಿದ್ಯೆ, ಅವಿದ್ಯೆಗಳ ಅಂತರವೇ ತಿಳಿಯದ ಈತ ಮತ್ತು ಈತನ ಜತೆಗಿರುವ ಮಂದಿ ಸಂಸಾರ ಚಕ್ರದಲ್ಲಿಯೇ ತಿರುಗುತ್ತಿರಲಿ. ವೇದ, ಮೋಹಕವಾದ ಮಾತಾಡುತ್ತೆ. ಅಂದರೆ, ಫಲಾಸಕ್ತಿಯ ಮಾತಾಡುತ್ತೆ. ಅದನ್ನೇ ಇದು ವೇದದ ನಿಜವಾದ ಮಾತೆಂದು ತಿಳಿದ, ಅಂದರೆ, ತಮ್ಮ ಲಾಲಸೆಗಳನ್ನೇ ವೇದದಲ್ಲಿ ಹೇಳಿದ್ದು ಎಂದು ತಿಳಿದ ಈ ಮಂದಿ, ಜ್ಞಾನದ ಕಡೆಗೆ ತಿರುಗದೆ, ಹಾಗೆಯೇ ವೇದೋಪಜೀವಿಗಳಾಗಿ, ಉದರಂಭರಣ ಮಾಡುತ್ತ ತಮ್ಮ ಆಸೆಗಳಿಗೆ ತಾವೇ ಗುಲಾಮರಾಗಿ ಬದುಕಲಿ ಎಂದು ಉಗ್ಗಡಿಸಿದನಂತೆ.
ವಾಸ್ತವದಲ್ಲಿ ಇರುವುದು ಬಹ್ವಂಶ ಹೀಗೆಯೇ. ಅದನ್ನೇ ‘ಶಾಪ’ ಎಂದು ವರ್ಣಿಸಿದ್ದು. ಇದು ‘ಧರ್ಮ’ದ ಪಾಡು. ಇತಿಹಾಸ- ಪುರಾಣಗಳಲ್ಲಿ ವೇದದ ಅರ್ಥವನ್ನು ಬೆಳೆಸಿರಿ ಎಂದ ಮಾತು ಇಂಥ ಸಂದರ್ಭಗಳಲ್ಲಿ ಇನ್ನಷ್ಟು ಅರ್ಥಪೂರ್ಣವಾಗಿ ಕೇಳಿಸುತ್ತದೆ.
ನಂದೀಶ್ವರನ ಈ ಮಾತುಗಳು ವೇದ ಮಾರ್ಗವನ್ನು ಹಳಿದಂತೆ ಕೇಳಿಸಿ, ಯಜ್ಞಕ್ಕಾಗಿ ಬಂದಿದ್ದ ಭೃಗು ಮಹರ್ಷಿ ಉಗ್ರನಾದನಂತೆ. ಆತ ಮತ್ತೆ ಬೆಂಕಿಯುಗುಳಿದ. ಇವರೆಲ್ಲ ಕಾಪಾಲಿಕರು. ಪಾಷಂಡಿಗಳು. ಶಿವವೃತವೆಂದು ಹೇಳಿಕೊಂಡು ಮದ್ಯಪಾನ ಮಾಡುತ್ತ ಜಟೆ, ಭಸ್ಮ-ಮೂಳೆಗಳನ್ನು ಧರಿಸಿಕೊಂಡು ಸನಾತನ ಧರ್ಮದ ಮರ್ಯಾದೆ ತಿಳಿಯದೆ ಅದನ್ನು ಹಳಿಯುವ ಬುದ್ಧಿಗೇಡಿಗಳು. ನೀವು ಪಾಷಂಡಿಗಳಾಗಿ ಹೋದಿರಿ ಎಂದನಂತೆ. ಪಾಷಂಡಿಗಳೆಂದರೆ ಧರ್ಮಬಾಹಿರರು- ಧರ್ಮ ವಿರೋಧಿಗಳು.
ಒಂದು ಸಾಮಾಜಿಕ ಕ್ಞೋಭೆಯನ್ನು ಭಾಗವತ ಹೀಗೆ ಬಣ್ಣಿಸುತ್ತದೆ.
ಒಟ್ಟಿನಲ್ಲಿ ಮಾತು ನಲುಗಿತು. ಪರಸ್ಪರ ಶಾಪವಾಯಿತು. ಅವಲೋಕನವಾಗಲಿಲ್ಲ. ಮಾತು ಸಮರ್ಥನೆಯಾಗಿ ಬಿಟ್ಟಿತು. ಅಹಂಕಾರದ ಪ್ರತಿರೂಪವಾಯಿತು. ಶಿವೇತರವಾಯಿತು. ಸೂಕ್ಷ್ಮತೆಗೆ ಎರವಾಗಿ ನಲುಗಿತು. ದಕ್ಷನಿಗಾದರೋ ಕೋಪ ಕುದಿಯುತ್ತಿತ್ತು. ಆತ ಇನ್ನೊಂದು ಮಹಾಯಜ್ಞವನ್ನು ಪ್ರಾರಂಭಿಸಿದ. ಈ ಯಜ್ಞಕ್ಕೆ ಶಿವನಿಗೆ ಆಹ್ವಾನವಿರಲಿಲ್ಲ. ಇದನ್ನೇ ಒಂದು ಸಾಧನೆ ಎಂದುಕೊಂಡ. ಕರ್ಮಕಾಂಡದಲ್ಲಿ ಒಂದು ಪ್ರಯೋಗ ಎಂದುಕೊಂಡ. ಇದರಿಂದ ನಂದಿಯ ಶಾಪವನ್ನು ನಿಜಮಾಡಿದಂತಾಗುತ್ತದೆ ಎಂದುಕೂಡ ಚಿಂತಿಸಲಿಲ್ಲ. ದೊಡ್ಡ ಮನುಷ್ಯನಾದುದರಿಂದ, ಇಂಥ ದು:ಸಾಹಸ ಬೇಡ ಎಂದು ಯಾರೂ ಅವನಿಗೆ ಹಿತ ಹೇಳಲಿಲ್ಲ. ‘ಬೃಹಸ್ಪತಿಸವ’ ಎಂಬ ಈ ಯಜ್ಞ ಪ್ರಾರಂಭವಾಯಿತು. ಇದು ದಕ್ಷ ಪುತ್ರಿಯಾದ ಸತಿಗೆ ತಿಳಿಯಿತು. ತನ್ನ ಅಕ್ಕ ತಂಗಿಯರಿಗೆಲ್ಲ ಆಹ್ವಾನವಿದೆ. ತನಗಿಲ್ಲ, ಸತಿಗೆ ನೋವಾಯಿತು. ತವರಿನ ಸೆಳೆತ ತೀವ್ರವಾಗ ತೊಡಗಿತು. ಕರೆದಿಲ್ಲವಾದರೂ, ತವರಿಗೆ ಹೋಗಲು ‘ಕರೆ’ ಬೇಕೇ- ಎಂದುಕೊಂಡಳು. ಶಿವನಲ್ಲಿ ಕೇಳಿದಳು. ಶಿವ, ಬೇಡ ಎಂದ. ತನ್ನನ್ನು ಕರೆಯದೆ, ನಿನ್ನನ್ನು ಪ್ರತ್ಯೇಕವಾಗಿ ಕರೆದಿದ್ದರೂ, ನೀನು ಹೋಗುತ್ತಿರುವುದು ನ್ಯಾಯ ಸಮ್ಮತ ಆಗುತ್ತಿರಲಿಲ್ಲ. ಹೀಗಿರಲಾಗಿ ನಮ್ಮಿಬ್ಬರನ್ನೂ ಕರೆಯದೆ ಇದ್ದಾಗ- ಏನಿದು ವ್ಯಾಮೋಹ ಎಂದು ತಡೆದನಂತೆ. ಆದರೆ ಸತಿ, ಕೇಳಲಿಲ್ಲ. ಅದೆಂಥದೋ ಉದ್ವೇಗ! ತವರಿಗೆ ಹೊರಟಳು. ಶಿವನ ಗಣಗಳು ಒಡೆಯನಿಲ್ಲದಿದ್ದರೂ, ಒಡತಿಯನ್ನು ಸಂಭ್ರಮಾತಂಕಗಳಿಂದ ಹಿಂಬಾಲಿಸಿದರಂತೆ.
ತವರು ಮನೆ ಎಂಬುದು ಕರ್ಮಕಾಂಡದ ಯಜ್ಞವೇದಿಕೆಯಾಗಿಬಿಟ್ಟಿತ್ತು! ಮನೆಯ ಮಗಳನ್ನು ತಂದೆಯಾದ, ಯಜ್ಞದ ಯಜಮಾನ ಮಾತನಾಡಿಸಲಿಲ್ಲ. ತಿರಸ್ಕಾರದಿಂದ ನೋಡಿದ. ದಕ್ಷನಿಗೆ ಹೆದರಿ ಉಳಿದ ಬಂಧುಗಳೂ ಅವನನ್ನು ಅನುಸರಿಸಿದರು. ಶಿವನ ಮಡದಿಗೆ ಅಪಮಾನವಾಗಿ ಹೋಯಿತು.
ತಾಯಿ ಮತ್ತು ಒಡ ಹುಟ್ಟುಗಳು ಮಾತ್ರ ದಕ್ಷನನ್ನು ಲೆಕ್ಕಿಸದೆ ಮಗಳನ್ನು ಪ್ರೀತಿಯಿಂದ ತಬ್ಬಿಕೊಂಡರೆಂದು ಹೇಳುವುದಕ್ಕೆ ಭಾಗವತ ಮರೆಯುವುದಿಲ್ಲ.
ಆದರೆ ಮಗಳಿಗೆ ಮನಸ್ಸು ಮುರಿದು ಬಿಟ್ಟಿತ್ತು. ಲೋಕಕ್ಕೆಲ್ಲ ಮಹಾದೇವನಾದ ಶಿವನಿಗೆ ದಕ್ಷನ ಯಜ್ಞದಲ್ಲಿ ಹವಿರ್ಭಾಗವಿರಲಿಲ್ಲ. ಎಂಥ ಅಪಚಾರ! ಎಂಥ ವ್ಯುತ್ಕ್ರಮ! ದೊಡ್ಡ ಜ್ಞಾನಿಗಳೆಂದುಕೊಂಡವರು ಯಾರೂ ಇದನ್ನು ಪ್ರಶ್ನಿಸದೆ ಬಿಟ್ಟರಲ್ಲ. ತನ್ನ ಗೃಹಸ್ಥನ ಅಪಮಾನವನ್ನು ನೋಡುವುದಕ್ಕಾಗಿ ತಾನು ತವರಿಗೆ ಬಂದಂತಾಯಿತೆ? ಮುಕ್ಕಣ್ಣನ ಮಡದಿಗೆ ಮೈ ಉರಿದು ಹೋಯಿತು. ಆಕೆ ಕ್ಷಣದಲ್ಲಿ ನಿರ್ಧಾರಕ್ಕೆ ಬಂದಳು. ಕೋಪಾವೇಶದ ನಡುಕದಲ್ಲಿ ತಂದೆ ದಕ್ಷನಿಗೆ ಹೀಗೆ ಹೇಳಿದಳು.
ನನ್ನ ಪತಿಯಾದ ಮಹೇಶ್ವರ ರಾಗ ದ್ವೇಷಗಳಿಲ್ಲದ ಪುಣ್ಯ ಪುರುಷ. ನಿನಗವನು ದ್ವೇಷಿ! ‘ಶಿವ’ ಎಂಬ ಎರಡಕ್ಷರ ಉಚ್ಚರಿಸಿದರೆ ಸಾಕು- ಪಾಪ ಹೋಗುತ್ತೆ. ಇಂಥವನು ನಿನಗೆ ಪಾಪಿ! ಬ್ರಹ್ಮಾನಂದ ಸಾರ ಮಕರಂದವನ್ನು ಬಯಸುವವರಿಗೆ ಅವನು ಆರಾಧ್ಯ- ಇಂಥವನು ನಿನಗೆ ದ್ರೋಹಿ! ಅವನ ಪಾದದಿಂದ ಬಿದ್ದ ಹೂವನ್ನು ದೇವತೆಗಳು ಮುಡಿಯುತ್ತಾರೆ- ಇಂಥ ‘ಶಿವ’ ನಿನಗೆ ಅಮಂಗಲ! ನಿನ್ನಿಂದ ಬಂದ ಈ ದೇಹ ನನಗೆ ಅಸಹ್ಯವಾಗಿ ಬಿಟ್ಟಿದೆ
ಕೊನೆಯ ಮಾತಾಗಿ ಇಷ್ಟು ಹೇಳಿ, ಯೋಗಿಗಳ ಒಡೆಯನಾದ ಮಹಾದೇವನ ಆ ಮಡದಿ, ಯಜ್ಞಾಗ್ನಿಯೇ ಹುಸಿ ಎನ್ನುವಂತೆ ತನ್ನ ಅಂತರಿಕ ಯೋಗಾಗ್ನಿಯನ್ನು ಜಾಗೃತಗೊಳಿಸಿ- ಮುಕ್ಕಣ್ಣನನ್ನು ನೆನೆಯುತ್ತ ದಗ್ಧಳಾಗಿ ಬಿಟ್ಟಳಂತೆ.
ಉಲ್ಲೋಲ ಕಲ್ಲೋಲವಾಗಿ ಹೋಯಿತು. ಶಿವನ ಗಣಗಳು ಉಗ್ರರಾದರು. ದಕ್ಷನ ಮೇಲೇರಿ ಬಂದರು. ಆದರೆ, ಭೃಗುಮುನಿ ಅಲ್ಲಿದ್ದ. ತನ್ನ ಮಂತ್ರ ಬಲದಿಂದ ಋಭುಗಳೆಂಬ ದೇವತೆಗಳ ಪ್ರತಿಸೃಷ್ಟಿಯನ್ನು ಮಾಡಿ ಅವರ ಮೂಲಕ ಆ ಕ್ಷಣಕ್ಕೆ ದಕ್ಷನನ್ನು ಕಾಪಾಡಿದನಂತೆ.
ತನ್ನ ಮೈಯ ಅರ್ಧದಂತಿದ್ದ ಸತಿ ಸುಟ್ಟುರಿದು ಹೋದುದು ಶಿವನಿಗೆ ತಿಳಿಯಿತು. ಶಿವನು ಲಯರುದ್ರನಾದ. ‘ವೀರಭದ್ರ’ನನ್ನು ಸೃಜಿಸಿದ. ವೀರ ಭದ್ರನೆಂದರೆ ರೌದ್ರರಸದ ಏಕಪಿಂಡ! ಇರುಳಿನ ಮೂರನೆಯ ಜಾಮದಲ್ಲಿ ರಂಗಸ್ಥಳಕ್ಕೆ ಬಿಜಯಮಾಡುವ ಕಿಡಿಗೆದರುವ ಬಣ್ಣದ ವೇಷ! ವೀರಭದ್ರ, ದಕ್ಷನ ಯಜ್ಞಶಾಲೆಯನ್ನು ಮುತ್ತಿದ. ಭೃಗುವನ್ನು ಬಡಿದ. ಬಿಡುಗಣ್ಣರೆಂಬ ಕೀರ್ತಿಯ ದೇವತೆಗಳ ಕಣ್ಣುಕಿತ್ತ. ದಕ್ಷಪ್ರಜಾಪತಿಯನ್ನು ಹಿಡಿದು, ಯಜ್ಞ ಪಶುವಿನ ಕತ್ತನ್ನು ಹಿಸುಕಿ ಕೊಲ್ಲುವಂತೆ, ಆತನನ್ನು ಕೊಂದು, ದಕ್ಷನ ತಲೆಯನ್ನು ಕತ್ತರಿಸಿ ದಕ್ಷಿಣಾಗ್ನಿಯಲ್ಲಿ ಹೋಮ ಮಾಡಿಬಿಟ್ಟ. ಅಹಂಕಾರದ ಪೂರ್ಣಾಹುತಿಯಾಗಿ ಹೋಯಿತು!
ಯಜ್ಞಶಾಲೆಗೆ ಬೆಂಕಿ ಬಿತ್ತು. ಬೆಂಕಿ ಆರುತ್ತಿದ್ದಂತೆ ಕರ್ಮಕಾಂಡಕ್ಕೆ ಕತ್ತಲೆ ಆವರಿಸಿತು.
ಮರಳಿ ದೇವತೆಗಳೆಲ್ಲ, ಬ್ರಹ್ಮದೇವರನ್ನು ಮುಂದಿಟ್ಟುಕೊಂಡು, ಕೈಲಾಸದತ್ತ ತೆರಳಿದರಂತೆ. ಅಲ್ಲಿ ಶಿವನನ್ನು ಕಂಡು ಅಚ್ಚರಿಗೊಂಡರಂತೆ.
ಸಂಜೆಯ ಕೆಮ್ಮೋಡದಂತೆ ಬೆಳಗುತ್ತಿದ್ದ ಶಿವ. ದಿವ್ಯ ದೇಹ. ತಪಸ್ವಿಗಳ ತಪಸ್ವಿ. ಭಸ್ಮ; ಯೋಗದಂಡ, ಮೃಗಚರ್ಮ- ತಪಸ್ವಿಗಳಿಗೆ ಇಷ್ಟವಾದ ಈ ಕುರುಹುಗಳಿದ್ದವು. ತಲೆಯಲ್ಲಿ ಚಂದ್ರ ಹೊಳೆಯುತ್ತಿದ್ದ, ಶಿವನ ತಲೆಯ ಚಂದ್ರನಿಗೆ ವೃದ್ಧಿ- ಕ್ಷಯಗಳಿಲ್ಲವಂತೆ. ಆ ಅರ್ಥದಲ್ಲಿ ಸದಾ ಹುಣ್ಣಿಮೆ! ಜ್ಞಾನಮುದ್ರೆಯಲ್ಲಿ ಆಸೀನನಾಗಿದ್ದನಂತೆ ಶಿವನೆಂಬ ದಕ್ಷಿಣಾಮೂರ್ತಿ!
ದೇವತೆಗಳು ಶಿವನ ಕಾಲಿಗೆ ಬಿದ್ದರು. ಬ್ರಹ್ಮದೇವ ಅಂತ:ಕರಣದ ಮಾತುಗಳನ್ನಾಡಿದ. ಶಿವ ಅನುಗ್ರಹ ಮುಖದಲ್ಲಿದ್ದ. ದೇವತೆಗಳಿಗೆ ಮತ್ತೆ ಕಣ್ಣು ಬಂದವು. ಪೊರೆಕಳಚುವುದೆಷ್ಟು ಹೊತ್ತು! ದಕ್ಷನ ಪ್ರಶ್ನೆ ಬಂತು. ನಂದಿಯ ಕಡೆ ನೋಡುತ್ತ ನಸುನಗೆಗೂಡಿ ಶಿವ ಹೇಳಿದನಂತೆ. ದಕ್ಷನ ಮುಂಡಕ್ಕೆ ಯಜ್ಞ ಪಶುವಾದ ಆಡಿನ ತಲೆಯನ್ನು ಸಂಧಾನ ಮಾಡಿಬಿಡಿ. ಹೋತದ ಮುಖ! ಪಶುವಾಗಿ ಯಜ್ಞದಲ್ಲಿ ಬಲಿಯಾಗಬೇಕಾದದ್ದು, ಬಲಿಯಾಗಿ ಪೂರ್ಣಾಹುತಿಗೊಳ್ಳಬೇಕಾದ್ದು ಯಜಮಾನನ ಅಹಂಕಾರ ಎಂದು ಎಲ್ಲರಿಗೆ ಕಾಣುವಂತಾಗಲಿ. ಕರ್ಮ ಕಾಂಡದ ಹೊಗೆ ಮುಸುಕಿನಲ್ಲಿರುವ ಜ್ಞಾನದ ಬೆಳಕು ತಿಳಿಯಾಗಿ ಬೆಳಗಲಿ.
ಅಹಂಕಾರವು ತನ್ನನ್ನೇ ಉರಿಸಿಕೊಂಡು ಆ ಬೆಳಕಿನಲ್ಲಿ ‘ಸತ್ಯ’ವನ್ನು ಅರಸಬೇಕಲ್ಲದೆ ಬೇರೆ ಯಾವ ಬೆಳಕಿನಲ್ಲಿ ‘ಸತ್ಯ’ವನ್ನು ಅರಸಿದರೂ, ಅಹಂಕಾರವು ಅಹಂಕಾರವನ್ನೇ ಭೆಟ್ಟಿಯಾಗುವುದು ಎಂದು ತಿಳಿದಿರಲಿ.
ತೋಳ್ಪಾಡಿ ಭಾಗವತ 15:ಅಜಾಮಿಳನ ಮಗ ನಾರಾಯಣ
‘ಅರಿವು-ಮರೆವುಗಳ ಕಣ್ಣಾಮುಚ್ಚಾಲೆಯಾಗಿರುವಂತಿದೆ’ ಈ ಬದುಕು. ಮೊದಲು ‘ಅರಿವು’. ಅದಕ್ಕೆ ತಾನು ಅರಿವೆಂದೇ ತಿಳಿದಿರಲಿಲ್ಲವೇನೋ. ಅದು ನಿಜಕ್ಕೂ ಮುಗ್ಧವಾಗಿತ್ತೇನೋ. ಆದುದರಿಂದಲೇ ‘ಅರಿವು’ ತನ್ನನ್ನು ತಾನು ಮರೆತು- ಮೈಮರೆವಿನಲ್ಲಿ ಹುದುಗಿತು. ಬೆಳಕೆ ಬೆಳಕಾಗಿದ್ದು ಕತ್ತಲೆಯು ತುಂಬಿತು ಹೇಗೆ -ಎಂದು ಕವಿ ಕೇಳಿದಂತೆ. ನಾವಿದನ್ನು ಪಟ್ಟು ಹಿಡಿದು ಪ್ರಶ್ನಿಸುವುದು ಬೇಡ. ಕತ್ತಲೆ ತುಂಬಿದ್ದು ಹೌದು. ಅರಿವು ತನ್ನನ್ನು ಮರೆತುದು ಹೌದು. ಕತ್ತಲೆ ತಾನು ಕತ್ತಲೆ ಎಂದೇ ಮರೆತಿತ್ತಲ್ಲ. ಅಂಥ ಮೈ ಮರೆವು ಒಂದು ಉದ್ವೇಗವಾಗಿ, ಉದ್ವಿಗ್ನತೆ ಸಂಸಾರದಲ್ಲಿ ಬೇಕೆನಿಸುವುದೂ ಹೌದು. ಮರೆವು ಉಂಟಾದಂತೆ ಅರಿವೂ ಉಂಟಾಗಲಾರದೆ? ಮರೆತದ್ದು ನೆನಪಾಗಲಾರದೆ? ಕತ್ತಲೆ ಕಳೆದು ಬೆಳಕಾಗಲಾರದೆ? ನೆನಪಾಗುವುದೂ ಒಂದು ರೋಮಾಂಚನವಲ್ಲವೆ? ಇದುವರೆಗೆ ಇದ್ದುದು ಮರೆವು- ಕತ್ತಲೆ, ಎಂದು ಬೆಳಕಾಗುವಾಗಲೇ ತಿಳಿಯುವುದಾದರೆ, ತಾನು ಅರಿವು, ತಾನು ಬೆಳಕು ಎನ್ನುವುದೂ ಕತ್ತಲೆ ಕಳೆದ ಮೇಲಿನ ಬೆಳಕಿಗೇ ತಿಳಿಯುವುದಾಗಿರಬೇಕು! ಆಗ ಅರಿವಿನ ಅರಿವು! ಇದು ಅರಿವಿನ ಸಾಧ್ಯತೆ! ಅರಿವು ಇರುವ ಮನುಷ್ಯನ ಸಾಧ್ಯತೆ! ಈ ಅರಿವಿನ ಅರಿವನ್ನು ಉಪನಿಷತ್ತು ‘ಸತ್ಯಸ್ಯ ಸತ್ಯಂ’ -ಸತ್ಯದ ಸತ್ಯ ಎಂದು ಅದ್ಭುತವಾಗಿ ಕರೆದಿತ್ತು; ಯಾವ ಅರಿವನ್ನೂ ನಿರಾಕರಣ ಮಾಡದೆ.
ಅರಿವು-ಮರೆವು-ಅರಿವುಗಳ ಈ ಕಣ್ಣಾಮುಚ್ಚಾಲೆಯಲ್ಲಿ ‘ಅಭಿಜ್ಞಾನ’ವೊಂದು ಅಗತ್ಯವಾಗಿದೆ. ಅಭಿಜ್ಞಾನವೆಂದರೆ, ಮರೆತುದನ್ನು ನೆನಪಿಸುವ ಗುರುತು; ಕುರುಹು; ಒಂದು ಸಂಕೇತ. ಇದ್ದಕ್ಕಿದ್ದಂತೆ ದಾರಿ ಬದಲಿಸುವ ಸೂಚನೆಯನ್ನು ಕೊಡಬಲ್ಲ ಒಂದು ಸನ್ನೆ. ತಿರುವು. ನಿಜಕ್ಕಾದರೆ, ಈ ಲೋಕವೇ ಒಂದು ಅಭಿಜ್ಞಾನ. ನಾವೀ ಲೋಕಕ್ಕೆ ಬಂದೆವು. ಲೋಕವನ್ನು ಅವಲೋಕನ ಮಾಡಿದೆವು. ಅಂದರೆ ನೋಡಿದೆವು. ‘ಲೋಕ’ವೆಂದರೆ ನೋಡಲ್ಪಡುವಂಥದು ಎಂದೇ ಅರ್ಥ. ಲೋಕವನ್ನು ನೋಡಿದ್ದಕ್ಕೆ, ನೋಡಿದ ತಪ್ಪಿಗೆ ಯಾವುದನ್ನು ನೋಡಿದೆವೋ ಅದರಂತೆ ಆದೆವು. ನಮ್ಮೊಳಗಿನ ವಾಸನಾ ಪ್ರಪಂಚವನ್ನು ನಾವು ಕಂಡ ಲೋಕ; ನಾವು ಕಂಡ ದೃಶ್ಯವು ಪ್ರಚೋದಿಸಿತು. ಅಲ್ಲಿಗೆ ನಮ್ಮ ಮನಸ್ಸು ಚಲಿಸುವ ದಾರಿ, ಧಾಟಿ, ನಕಾಶೆಯೊಂದು ಸಿದ್ಧವಾಯಿತು. ಉಳಿದುದೆಲ್ಲ ಸಂಸಾರದ ಇತಿಹಾಸ! ಇಲ್ಲಿ ಲೋಕ, ಅಭಿಜ್ಞಾನವಾಗಿ ಕೆಲಸ ಮಾಡಿತೆನ್ನಬೇಕು. ಅದು ತನ್ನನ್ನು ಕಂಡ ನಮ್ಮನ್ನು ತನ್ನಂತೆ ಮಾಡಿತೆನ್ನಬೇಕು. ನಮ್ಮೊಳಗೆ ತನ್ನ ತದ್ರೂಪವನ್ನು ಸಾದೃಶ್ಯವನ್ನು, ಪ್ರತಿಬಿಂಬವನ್ನು, ಸಂತತಿಯನ್ನು ಸೃಷ್ಟಿಸಿತೆನ್ನಬೇಕು! ಇದು ಇಂದ್ರಿಯ ಲೋಕ!
ಇನ್ನೊಂದು ರೀತಿಯ ಅಭಿಜ್ಞಾನವಿದೆ. ಕವಿ ವಾಲ್ಮೀಕಿಗೆ ಕ್ರೌಂಚಪಕ್ಷಿಯ ದುರಂತವನ್ನು ಕಂಡಾಗ ಉಂಟಾದ ಸಂವೇದನೆಯಂಥದು. ಈ ಲೋಕದಲ್ಲಿ ನಿಜಕ್ಕೂ ಗುಣಾಢ್ಯನೊಬ್ಬನಿದ್ದಾನೆಯೆ ಎಂಬ ವಾಲ್ಮೀಕಿಯ ಪ್ರಶ್ನೆಗೆ ನಾರದ ರಾಮನ ಕಥೆಯನ್ನು ಹೇಳಿದ್ದ. ಆ ಕಥೆ ವಾಲ್ಮೀಕಿಯ ಮನದಲ್ಲಿ ಸುಳಿಯುತ್ತಿತ್ತು. ಆಗ ಅವನ ಕಣ್ಣ ಮುಂದೆ ನಡೆಯಿತು ಕ್ರೌಂಚ ಹಕ್ಕಿಯ ದುರಂತ ನಾಟಕ. ಸರಸದಲ್ಲಿದ್ದವು ಎರಡು ಹಕ್ಕಿಗಳು. ಬೇಟೆಗಾರನೊಬ್ಬ ಮರೆಯಿಂದ ಬಾಣ ಹೊಡೆದ. ಬಿದ್ದುರುಳಿದ್ದು ಗಂಡು ಹಕ್ಕಿ. ರಸಭಂಗವಾಯಿತು. ಹೆಣ್ಣು ಕ್ರೌಂಚ ಹೊರಳಿ ಹೊರಳಿ ಅತ್ತಿತು. ಇದನ್ನೆಲ್ಲ ನೋಡುತ್ತಿದ್ದ ವಾಲ್ಮೀಕಿಯಲ್ಲಿ ಕರುಣಭಾವ ಉಕ್ಕಿತು. ರಸಭಂಗದ ಪರಿಣಾಮವಾಗಿ ಹೊಸ ರಸವೊಂದು ಚಿಮ್ಮಿತು. ಇಲ್ಲಿಯೂ ಕ್ರೌಂಚ ದುರಂತ ಅಭಿಜ್ಞಾನವಾಗಿ ಕೆಲಸ ಮಾಡಿತು. ಆದರೆ, ಇಲ್ಲಿ ವಾಲ್ಮೀಕಿಯ ಅಂತ:ಕರಣ ಲೋಕದ ತದ್ರೂಪವನ್ನು ಪಡೆಯುವುದಿಲ್ಲ. ಲೋಕ ಹೀಗಿರಬಾರದು; ಈ ಕ್ರೌರ್ಯ ಸಲ್ಲದು ಎಂಬ ಭಾವವಿಲ್ಲಿದೆ. ಕ್ರೂರ ಲೋಕವನ್ನು ಕರುಣದಿಂದ ತಿದ್ದುವ ಪರಿ ಇದೆ. ಇದು ಕಲೆಯ ಲೋಕ. ಕಾವ್ಯದ ಲೋಕ. ಮನಸ್ಸಿನ ಪರಿಣಾಮದ ಲೋಕ. ಇಲ್ಲಿ ಎಚ್ಚರವಿದೆ. ಮರೆವು ಎಚ್ಚರವಾಗಿ, ಅಭಿಜ್ಞಾನವು ಇಲ್ಲಿ ಸೂಕ್ಷ್ಮವಾಗಿದೆ. ಇಲ್ಲಿ ಅಂತ:ಕರಣಕ್ಕೆ ತನ್ನದೇ ಕಾಣ್ಕೆ ಇದೆ.
ಇನ್ನೂ ಒಂದು ರೀತಿಯ ಅಭಿಜ್ಞಾನವಿದೆ ಎನ್ನುತ್ತದೆ ಭಾಗವತ. ಇದು ಅರಿವಿನ ಅರಿವನ್ನು, ಸತ್ಯದ ಸತ್ಯವನ್ನು ನೆನಪಿಸುವ ಅಭಿಜ್ಞಾನ. ಶಬ್ದದ ವಾಚ್ಯವಾದ ಬಳಕೆಯ ಅರ್ಥವನ್ನಲ್ಲ, ಶಬ್ದದ ‘ಧ್ವನಿ ಶಕ್ತಿ’ಯನ್ನು ಉದ್ದೀಪಿಸುವ ಅಭಿಜ್ಞಾನ. ‘ಹಂಸ’ ಎಂದಾಗ ‘ಸೋ ಹಂ’ (ಅವನೇ ನಾನು) ಎಂಬುದು ತಿರುವು ಮುರುವಾಗಿ ಕುಳಿತಂತಿದೆ ಎಂದು ಉದ್ದೀಪನವಾಗುವ ಧ್ವನಿಶಕ್ತಿ ಇದು. ‘ಕೃಷ್ಣ’ ಎಂದಾಗ ಆಕರ್ಷಣೆಯಂಟಾಗಿ, ಕೃಷ್ಣ ಎಂಬ ಪದಕ್ಕೆ ಕಪ್ಪು ಎಂದಲ್ಲ ಆಕರ್ಷಣೆ ಎನ್ನುವುದೇ ನಿಜವಾದ ಅರ್ಥ- ನಮಗೇನು ಅನುಭವವಾಗುವುದೋ ಅದೇ ಆ ಪದದ ಅರ್ಥ- ಎಂಬ ಉದ್ದೀಪನವಾಗುವ ಧ್ವನಿ ಶಕ್ತಿ ಇದು. ಗುಡುಗು ಮೂರು ಬಾರಿ ಗುಡುಗಿದಾಗ ‘ದ-ದ-ದ’ ಎಂದಂತೆ ಕೇಳಿಸಿತಂತೆ ಉಪನಿಷತ್ತಿನ ಋಷಿಗಳಿಗೆ. ಹಾಗೆಂದರೆ, ದತ್ತ; ದಯಧ್ವಂ; ದಮ್ಯತ- ದಾನಮಾಡು; ದಯೆ ಇಡು; ಇಂದ್ರಿಯ ದಮನ ಮಾಡು ಎಂಬ ಅರ್ಥವಂತೆ. ಇಂಥ ಸ್ಫುರಣವಾಗುವುದಕ್ಕೆ, ಈ ಅರ್ಥ ನೆನಪಾಗುವುದಕ್ಕೆ ಕಾರಣವಾಗುವ ಅಭಿಜ್ಞಾನ, ಧ್ವನಿ ಶಕ್ತಿ ಒಂದಿದೆಯಂತೆ. ಅಂಥದೊಂದು ಕಥೆ ಇದು. ಅಜಾಮಿಳೋಪಾಖ್ಯಾನ:
ಅವನೊಬ್ಬ ಬ್ರಾಹ್ಮಣ. ಸರಳ; ಮಿತಭಾಷಿ, ಭೂತದಯಾಪರ, ಮಂತ್ರಜ್ಞ; ಸಾತ್ತ್ವಿಕ; ವಿದ್ವಾಂಸನಿದ್ದ. ಗುರು, ಅಗ್ನಿ, ಅತಿಥಿ, ಹಿರಿಯರ ಸೇವೆ ಮಾಡುತ್ತಿದ್ದ. ಅವನ ಸುತ್ತಲಿನ ಸನ್ನಿವೇಶಕ್ಕೆ ತಕ್ಕಂತೆ, ತದ್ರೂಪವಾಗಿ ಇದ್ದ. ವಿರುದ್ಧವನ್ನು ಎಣಿಸುವವನೇ ಅಲ್ಲ. ಇದೇ ತಾನೇ ಸರಳತೆ; ಸಾತ್ತ್ವಿಕತೆ! ಅವನ ಹೆಸರು ಅಜಾಮಿಳ. ಮನೆಯ ಪಕ್ಕದಲ್ಲಿ ಕಾಡು. ಸಮಿಧೆಗಾಗಿ, ಹೂ-ಹಣ್ಣುಗಳಿಗಾಗಿ, ಕಟ್ಟಿಗೆಗಾಗಿ ಕಾಡಿನಲ್ಲಿ ತಿರುಗಾಟವಿದ್ದೇ ಇದೆ ಅಜಾಮಿಳನಿಗೆ. ಇಂಥ ಒಂದು ದಿನ ತಿರುಗಾಟದಲ್ಲಿ, ಅದುವರೆಗೆ ತಾನು ನೋಡದ ನೋಟವೊಂದನ್ನು ನೋಡಬಾರದ್ದನ್ನು (?) ನೋಡಿದ. ಸುಂದರಿಯಾದ ಒಬ್ಬಳು ಹೆಣ್ಣು, ಆಕೆಯ ಮೈಗೆ ಒರಗಿರುವ ಓರ್ವ ಗಂಡು, ಪಕ್ಕದಲ್ಲಿ ಮದ್ಯದ ಮಡಕೆ! ಇಬ್ಬರಿಗೂ ನಶೆ ಏರಿದೆ. ಅರಿವೆಯೂ ಇಲ್ಲ; ಪರಿವೆಯೂ ಇಲ್ಲ; ಲೋಕಕ್ಕೆಲ್ಲ ತಾವಿಬ್ಬರೇ ಎಂಬಂತೆ, ಅಥವಾ ಲೋಕವೇ ಸುಳ್ಳೆಂಬಂತೆ- ಮೈಯ ಮೋಜಿನ ಮೇಜವಾನಿಯಲ್ಲಿ ಕಾಡಕುದುರೆ ಕೆನೆಯುತ್ತಿದ್ದಂತೆ ಕಾಮ ಕಾಡ್ಗಿಚ್ಚಿನಂತೆ ಉರಿಯುತ್ತಿದ್ದ. ನಿಜಕ್ಕೂ ಕಾಡೆಂಬುದೇ ಒಂದು ರೂಪಕ! ಕಾಡೆಂಬುದೇ ಅನೂಹ್ಯ ಆಕರ್ಷಣೆ! ಕಟ್ಟಿದ್ದನ್ನೆಲ್ಲ ಕೆಡಹೆನ್ನುವುದೇ ಕಾಡಿನ ಕರೆ! ಆ ಕರೆ ಕೇಳದಂತೆ ಬದುಕುವುದೇ ಅಸಾಧ್ಯ. ನಿಜಕ್ಕೂ ಕಾಡು ದೂರದಲ್ಲಿಲ್ಲ. ಪಕ್ಕದಲ್ಲೇ ಇದೆ. ಸುಮ್ಮನೆ ಮೈ ಮುರಿದರೆ ಅಲ್ಲಿ ಕಾಡು ಸಿಕ್ಕೀತು. ಕಾಡಿನ ಕಡೆಗೆ ನಡೆಯುವುದೇ ಹೆಜ್ಜೆಗೆ ಸಹಜ ಗತಿ!
ಈ ಅಜಾಮಿಳನೆಂಬ ಯವಕ, ದೇಹ; ಮನಸ್ಸು; ಬುದ್ಧಿಗಳಿಗೆ ಶಾಸ್ತ್ರೀಯವಾದ ತರಬೇತಿಯನ್ನು ಕೊಡುತ್ತಿದ್ದವ- ಇವನಿಗೆ ಮೊತ್ತ ಮೊದಲ ಬಾರಿಗೆ ಕಾಡಿನ ಪರಿಚಯವಾಯಿತು! ಮದಜಲ ಸುರಿಯುತ್ತಿದ್ದಂತೆ ಮದ್ದಾನೆ, ಹೆಮ್ಮರಗಳನ್ನು ಮುರಿಯುವುದೇಕೆಂದು ಗೊತ್ತಾಯಿತು. ಅಂದಿನಿಂದ ಅಜಾಮಿಳನಿಗೆ ಮನೆಯ ದಾರಿ ಮರೆತು ಹೋಯಿತು. ಅದುವರೆಗಿನ ಬದುಕೇ ತೀರ ಜೊಳ್ಳು ಎನಿಸಿ ಬಿಟ್ಟಿತು. ಆ ಕಾಡ ಹುಡುಗಿಯ ಜತೆ ಬಾಳದಿದ್ದರೆ ಬದುಕು ಬದುಕೇ ಅಲ್ಲ ಎನ್ನಿಸಿಬಿಟ್ಟಿತು. ಯಜ್ಞಕ್ಕೆ ಬೇರೆಯೇ ಅರ್ಥ ಬಂದೊದಗಿತು. ಪ್ರಕೃತಿಯನ್ನು ಪಳಗಿಸುವ ಪ್ರಯತ್ನವಷ್ಟೂ ವ್ಯರ್ಥ ಪ್ರಯಾಸ ಎಂಬ ಹೊಸ ಕಾಣ್ಕೆ ಉಂಟಾಯಿತು. ಅವನು ತಾನು ಕಂಡ ಕಾಡಿನ ಹುಡುಗಿಯ ಸಂಗದಲ್ಲಿ, ಪಳಗಿಸುವುದೇ ದೈನಿಕವಾಗಿರುವ ಲೋಕವನ್ನು ಮರೆತ. ಲೋಕವೂ ಅವನನ್ನು ಮರೆಯಿತು.
ಕಾಡಿನ ಸಂಸಾರ ಬೆಳೆಯಿತು. ಮಕ್ಕಳಾದವು. ಎಲ್ಲ ಮಕ್ಕಳ ಮೇಲೂ ಪ್ರೀತಿ ಇದ್ದರೂ ಅಜಾಮಿಳನಿಗೆ ಕೊನೆಯ ಮಗನ ಮೇಲೆ ಇನ್ನಿಲ್ಲದ ಅಕ್ಕರೆ ಸೂಸುತ್ತಿತ್ತು. ಆ ಕೊನೆಯ ಮಗನ ಹೆಸರು ‘ನಾರಾಯಣ’. ಬಾಯ್ತುಂಬ ಹೆಸರು ಹೇಳಿ ಅವನನ್ನು ಕರೆದರೆ, ಅಜಾಮಿಳನಿಗೆ ಏನೋ ಹೇಳಲಾಗದ ಸಂತೋಷವಾಗುತ್ತಿತ್ತು. ಓಡೋಡುತ್ತಿವೆಯೋ ಎಂಬಂತೆ ದಿನ-ರಾತ್ರಿಗಳು ಉರುಳಿದವು. ಕಾಡಿನಲ್ಲಿ ಚಳಿಗಾಲದಲ್ಲಿ ಎಲೆ ಉದುರಿಸುವ ಮರಗಳು ಮರಳಿ ವಸಂತದಲ್ಲಿ ಹೊಸ ನನೆಯ ಸಂಭ್ರಮ ಅನುಭವಿಸುತ್ತಿರುವುದು ಅಜಾಮಿಳನಿಗೆ ಕಾಣಿಸುತ್ತಿತ್ತಾದರೂ, ಮನುಷ್ಯ ಜೀವಕ್ಕೆ ಮಾತ್ರ ಆ ಭಾಗ್ಯವಿಲ್ಲ ಎನ್ನುವಂತೆ ಕಡು ಮುಪ್ಪು ಅವನನ್ನು ಆವರಿಸಿತು. ಸಾವಿನ ನೆರಳು ಕವಿಯುತ್ತಿತ್ತು. ಅದರ ನೀಳ ತೋಳು ಕೊರಳನ್ನು ಔಕುವಂತೆ ಅವನಿಗೆ ಭಾಸವಾಗುತ್ತಿತ್ತು. ಸಾವಿನ ಕುರಿತೇ ಚಿಂತೆ ಶುರುವಾಯಿತು. ಒಂದಿರುಳು ಅಜಾಮಿಳನಿಗೆ ಘೋರ ರೂಪದ ಯಮದೂತರೇ ಕಣ್ಣೆದುರು ನಿಂತಂತಾಯಿತು. ಅವರ ಕೈಯಲ್ಲಿ ಯಮಪಾಶ! ಹೌದು ಮತ್ತೆ. ಯಾವ ಜೀವಿ ತಾನೇ ಸಾಯಲು ಸಿದ್ಧವಿದೆ? ಪಾಶ ಹಾಕಿ ದರದರ ಎಳಕೊಂಡು ಹೋಗಬೇಕಷ್ಟೆ. ಅವರ ಕಣ್ಣು ನಿರ್ದಯವಾಗಿ ದುರುಗುಟ್ಟುತ್ತಿದ್ದವು. ಘೋರ ದೃಶ್ಯ. ಅಜಾಮಿಳನಿಗೆ ನಿಜಕ್ಕೂ ಭಯವಾಯಿತು. ತನ್ನ ಮಗನನ್ನೇ ಇರಬೇಕು; ‘ನಾರಾಯಣ’ ಎಂದು ಕೂಗಿ ಕರೆದ! ಮರುಕ್ಷಣ ಬಾಹ್ಯ ಪ್ರಜ್ಞೆ ತಪ್ಪಿತು.
ಯಮದೂತರು ಎಂದಿನಂತೆ ಜೀವವನ್ನು ಹೊರ ಸೆಳೆದು ಕೊಂಡೊಯ್ಯುವ ಕೆಲಸಕ್ಕೆ ಉಪಕ್ರಮಿಸಬೇಕು- ಅಷ್ಟರಲ್ಲಿ ಅಲ್ಲಿಗೆ ಪ್ರಸನ್ನ ರೂಪದ ವಿಷ್ಣು ದೂತರು ಹೊದ್ದ ಪೀತಾಂಬರದ ನೆರಿಯಂತೆ ಶಾಂತವಾದ ನಗು ತುಳುಕಿಸುತ್ತ ಬಂದರಂತೆ. ಆಗ ಅವರೊಳಗೆ ಹೀಗೊಂದು ಸಂವಾದ ಶುರುವಿಟ್ಟಿತು.
ಯಮದೂತರು: ನೀವೇಕೆ ಇಲ್ಲಿ? ಇದು ಪಾಪಿಯೊಬ್ಬನ ಸಾವಿನ ಸೂತಕದ ಜಾಗ. ಇಂಥಲ್ಲಿ ನಿಮ್ಮನ್ನು ನಿರೀಕ್ಷಿಸಿರಲಿಲ್ಲ.
ವಿಷ್ಣು ದೂತರು: ಪಾಪ! ನೀವು ಯಮದೂತರು. ಅನಿರೀಕ್ಷಿತವಾದುದು ಎಂದೂ ನಿಮ್ಮ ಅನುಭವಕ್ಕೆ ಬಂದಿಲ್ಲ. ಹುಟ್ಟಿದ ಮೇಲೆ ಎಲ್ಲ ಜೀವಿಗಳಿಗೂ ಸಾವು ನಿರೀಕ್ಷಿತವೇ ಅಲ್ಲವೆ? ನಮಗೆ ಹಾಗಲ್ಲ. ನಾವು ಅನಿರೀಕ್ಷಿತದ ಕಡೆಗೆ ಸದಾ ಒಂದು ಮನಸ್ಸನ್ನಿಟ್ಟ ಮಂದಿ. ಅಜಾಮಿಳನೆಂಬ ಈ ಜೀವ ನಮ್ಮವನು! ನಿಮಗೆ ಸೇರಬೇಕಾದವನಲ್ಲ.
ಯಮದೂತರು: ಈತ ಪಾಪಿ. ತನ್ನ ಪೂರ್ವ ಸಂಸ್ಕಾರವನ್ನು ಮರೆತು ಕಾಮುಕನಾಗಿ ಇಷ್ಟು ಕಾಲ ಬದುಕಿದ. ಇವನು ನಿಮ್ಮವನಾಗುವುದೆಂತು!
ವಿಷ್ಣುದೂತರು: ನಿಮಗೆ ಪಾಪದ ಕಡೆಗೇ ಕಣ್ಣು! ನಮಗೋ ಪುಣ್ಯದ ಕಡೆಗೆ. ಆತನು ನುಡಿದ ‘ನಾರಾಯಣ’ ನಾಮ ನಿಮಗೆ ಕೇಳಿಸಲಿಲ್ಲವೇನು? ನಾರಾಯಣನೆಂದರೆ ಯಮನೇನು? ಹೋಗಿ, ಯಮನನ್ನೇ ಕೇಳಿ.
ಯಮದೂತರು: ಈತ ‘ನಾರಾಯಣ’ ಎಂದದ್ದು ಹೌದು. ಅದು ಈ ಪಾಪಿಯ ಮಗನ ಹೆಸರು. ಸಾಯುವ ಭಯದಲ್ಲಿ ಮಗನನ್ನು ಕರೆದ ಅಷ್ಟೆ!
ವಿಷ್ಣುದೂತರು: ಹೋ ಹೋ ನಿಲ್ಲಿಸಿ ನಿಮ್ಮ ತಲೆ ಹರಟೆ. ‘ನಾರಾಯಣ’ ಎಂದರೆ, ಈತನ ಮಗನ ಹೆಸರೇನು? ‘ನಾರಾಯಣ’ ಎಂದರೆ ಲೋಕದ ಅಧಿ ದೈವದ ಹೆಸರು. ಕಾಣುವ, ಕಾಣದ, ಜೀವನದ ಸಾರಭೂತವಾದ ವಸ್ತು ಎಂದು ಆ ನಾಮದ ಅರ್ಥ. ಈ ಅಜಾಮಿಳ ಆ ‘ನಾರಾಯಣ’ ನಾಮವನ್ನು ಉಚ್ಚರಿಸಿದನೋ ಇಲ್ಲವೋ- ತತ್ ಕ್ಷಣ- ಈತನ ಬಾಲ್ಯದ ಸಂಸ್ಕಾರಗಳೆಲ್ಲ ಉದ್ ಬುದ್ಧವಾಗಿ, ಈತ ಒಂದು ಹಸುಳೆಯೇ ಆಗಿ, ನಿಸ್ಸಹಾಯಕನಾಗಿ, ಭಗವಂತನನ್ನು ನೆನೆದ. ತಾನೇ ಮಗುವಿನಂತಾಗಿ ತಂದೆಯಂಥ ದೇವರನ್ನು ಕರೆದ. ನಿಮ್ಮನ್ನು ಕಂಡವನಿಗೆ ತಾನು ಮಕ್ಕಳ ತಂದೆ ಎಂಬ ಅಹಂಕಾರವಾದರೂ ಉಳಿಯುತ್ತದೆಯೇ! ಅದೇ ನೀವು ಮಾಡುವ ಉಪಕಾರ! ಅದೇ ನಿಮಗೆ ಗೊತ್ತಿಲ್ಲ. ತಾನು ಮಗುವಿನಂತಾಗದೆ, ತಂದೆಯನ್ನು ಕರೆಯಲಾಗದು. ಈತ ತನ್ನ ಮಗನ ನೆನಪಿನಲ್ಲಿ ತಾನು ಮಗನಂತೇ ಆಗುತ್ತಿದ್ದನಯ್ಯ. ಯಾವಾಗ ದೇವರ ನಾಮ ಉಚ್ಚರಿಸಿದನೋ ಆಗ ಇದು ಜಗದ ತಂದೆಯ ಹೆಸರು ಎಂದು ಅರಿವಿಗೆ ಬಂದು, ದೇವರ ಸಂಸಾರಕ್ಕೆ ಸೇರಿ ಬಿಟ್ಟನಯ್ಯ. ಇದು ಸಂಸಾರದ ಮಹತ್ತ್ವ. ಸಂಸಾರದಲ್ಲಿ ಅಡಗಿರುವ ದೇವರ ನಾಮದ ಮಹತ್ತ್ವ. ನೀವು, ಯಮದೂತರು. ಬರೀ ವಾಚ್ಯಾರ್ಥ ನೋಡುತ್ತೀರಿ. ಬರಿಯ ಮೇಲ್ನೋಟದ ಅರಿವು ನಿಮ್ಮದು. ಆದರೆ, ಅರಿವಿನ ಅರಿವು ಒಂದಿದೆ. ಸತ್ಯದ ಸತ್ಯ ಎಂದ ಹಾಗೆ. ಇದನ್ನೇ ಸ್ವಲ್ಪ ಮುಂದುವರಿಸಿ, ‘ಸಾವಿನ ಸಾವೂ’ ಒಂದಿದೆ ಎಂದರೆ ತಬ್ಬಿಬ್ಬಾಗಬೇಡಿ. ನಿಮ್ಮೊಡೆಯನಾದ ಯಮನಲ್ಲಿ ಹೋಗಿ ಕೇಳಿ. ನೀನೇ ಎಲ್ಲದಕ್ಕೂ ಕೊನೆಯೋ? ಅಥವಾ ನಿನಗೂ ಕೊನೆ ಎಂಬುದುಂಟೋ? ಇದ್ದರೆ, ಆ ಕೊನೆಯುಂಟು ಮಾಡುವವನು ಯಾರು ಎಂದು ಕೇಳಿ. ಯಮನಿಗೆ ಯಮನಾರೆಂದರೆ ಅವನೊಬ್ಬನೇ ‘ನಾರಾಯಣ’. ‘ನಾರಾಯಣ’ನನ್ನು ಕೂಗಿಕರೆದರೆ ನಾವು ತಪ್ಪದೆ ಬರುತ್ತೇವೆ. ಇನ್ನೊಮ್ಮೆ ಹೇಳುತ್ತೇವೆ. ಈ ‘ಜೀವ’ ನಮ್ಮವನು.
ಯಮದೂತರು: ಹಾಗಾದರೆ, ಈ ಅಜಾಮಿಳ ಪಾಪ ಮಾಡಿಲ್ಲವೆ? ಅದಕ್ಕೇನು ಉತ್ತರ?
ವಿಷ್ಣುದೂತರು: ಪಾಪ? ಎಲ್ಲಿದೆ ಅದು ಈಗ? ಕಾಡ್ಗಿಚ್ಚಿಗೆ ಕಾಡನ್ನು ಸುಟ್ಟು ಬೂದಿ ಮಾಡುವುದಕ್ಕೆ ಎಷ್ಟು ಹೊತ್ತು ಬೇಕೆನ್ನುತ್ತೀರಿ? ಮೂರು ತಿಂಗಳ ಬೇಸಗೆಯ ಉರಿ ಒಂದು ಮಳೆಗೆ ತಂಪಾಗುವುದಿಲ್ಲವೆ? ನಿಮಗೆ ಇಷ್ಟು ಕಾಲ ನರಕದ ಶಿಕ್ಷೆ, ಇಷ್ಟು ಕಾಲ ಸ್ವರ್ಗದ ಪುರಸ್ಕಾರ ಎಂದು ಕಾಲ ಗಣನೆ ಮಾಡಿ ಮಾತ್ರ ಗೊತ್ತು. ಇದೇ ದೊಡ್ಡ ಆಶ್ಚರ್ಯ! ಶಿಕ್ಷೆ ಕೊಡುವುದಕ್ಕೆ ನಿಯುಕ್ತರಾದವರಿಗೆ ಪಶ್ಚಾತ್ತಾಪದ ಮಹತ್ತ್ವವೇ ತಿಳಿಯದೆ ಹೋಗುವುದು!
ಅಜಾಮಿಳ, ಯಾವಾಗ ‘ನಾರಾಯಣ’ ನಾಮ ಉಚ್ಚರಿಸಿದ ಆ ನಾಮದ ಮಾಂಗಲ್ಯದಿಂದಾಗಿಯೇ ಅವನಾಳದಲ್ಲಿ ಪಶ್ಚಾತ್ತಾಪದ ಅಗ್ನಿ ಹೋತ್ರ ಉರಿಯಲಾರಂಭಿಸಿತು. ಅಗ್ನಿ ಶುದ್ಧಿ! ತಾನು ನಾಮೋಚ್ಚಾರ ಮಾಡಿದ ಕೂಡಲೇ ತನ್ನ ಬಳಿಗೆ ಬಂದ ಭಗವಂತ! ಅಂದರೆ ತಾನು ಹೇಗಿದ್ದರೂ, ಅವನನ್ನು ಮರೆತೇ ಬಾಳಿದ್ದರೂ, ಅವನು ತನ್ನನ್ನು ಮರೆತಿರಲಿಲ್ಲ! ಆದುದರಿಂದಲೇ ಯಾರನ್ನೇ ಕರೆದರೂ, ಅವನನ್ನೇ ಕರೆದಂತೆ, ಎಂದು ಅವನಿಗೆ ತಿಳಿದಿತ್ತು. ತನಗೆ ಬೇಕಾದಂತೆ ತಾನು ಬದುಕಿದರೂ, ಅವನು ತಾನು ಕರೆದಾಗ ಓಗೊಡದೇ ಇರಲಿಲ್ಲ. ಓಗೊಡುವುದೇ ಅವನ ಸ್ವಭಾವ. ಅವನ ಚರಿತ್ರೆ. ಆದುದರಿಂದ ಈಗ ತಾನು ಹೇಳಬೇಕಾದುದೇನು? ನಿನಗೆ ಬೇಕಾದಂತೆ ನಾನು ಬದುಕುವ ಹಾಗೆ ಕರುಣಿಸು- ಎಂದಲ್ಲದೆ!
ಅಜಾಮಿಳನ ಹಿಂದಣ ಉದ್ರೇಕವೆಲ್ಲ ಈಗ ಪಶ್ಚಾತ್ತಾಪವಾಗಿ ಹರಿಯುತ್ತಿದೆ. ಹೀಗೆ ಪಶ್ಚಾತ್ತಾಪವಾಗದಿದ್ದರೆ, ದೇವರನ್ನು ಧಾರಣ ಮಾಡುವುದು ಸಾಧ್ಯವಿರಲಿಲ್ಲ. ಅಥವಾ ಪಶ್ಚಾತ್ತಾಪಕ್ಕೆ ದೇವರನ್ನು ಧಾರಣ ಮಾಡುವ ಸಾಮರ್ಥ್ಯ ಎನ್ನುವುದಕ್ಕಿಂತ ತನ್ನನ್ನು ಧಾರಣ ಮಾಡಿಕೊಳ್ಳುವಂತೆ ದೇವರು ಜೀವಿಯಲ್ಲಿ ಪಶ್ಚಾತ್ತಾಪ ಭಾವಕ್ಕೆ ಎಡೆಕೊಡುತ್ತಿದ್ದಾನೆ ಎಂದರೆ ಹೆಚ್ಚು ಸರಿ.
ಪಶ್ಚಾತ್ತಾಪವೆನ್ನುವುದು ಜನ್ಮ ನಿವೃತ್ತಿಗೆ ಕಾರಣವಾಗಬಲ್ಲುದು. ಪಶ್ಚಾತ್ತಾಪ ಪಡುವುದು ಅಂತ:ಕರಣದ ಅಸಾಧಾರಣ ಸಾಮರ್ಥ್ಯ. ಪೆಡಸು ಮನಸ್ಸಿಗೆ ಇದು ಸಾಧ್ಯವೇ ಇಲ್ಲ. ರಸಾಲ ಮನಸ್ಸಿಗೆ ಮಾತ್ರ ಸಾಧ್ಯ. ಪಶ್ಚಾತ್ತಾಪದ ಕುಲುಮೆಯಲ್ಲಿ ಬೇಯುತ್ತ ಅಜಾಮಿಳ ತಾನು ಹಿಂದೆ ಬದುಕಿದ್ದ ಇಂದ್ರಿಯೋದ್ರೇಕದ ಬದುಕನ್ನು ಇನ್ನೊಮ್ಮೆ ಇನ್ನೊಂದು ರೀತಿಯಲ್ಲಿ ಬದುಕುತ್ತಿದ್ದಾನೆ. ಈಗ ಬದುಕು ಪೂರ್ತಿಯಾಯಿತು. ಬದುಕಿನ ಪೂರ್ವಾರ್ಧ ಮತ್ತು ಉತ್ತರಾರ್ಧಗಳು ಸೇರಿದವು.
‘ನಾಮ’ದಲ್ಲಿ ಕರಗಿದ್ದಾನೆ; ಕರಗುತ್ತಾನೆ ‘ಜೀವ;. ನಮ್ಮನ್ನು ಕರಗಿಸುವಂಥದು ಒಂದಿದೆ ಎಂದು ತಿಳಿಯುವುದೇ ಆಗ. ದೇವರ ನಾಮವೆಂದರೆ, ಜೀವ ಕರಗುವ ಹೊತ್ತು! ಇನ್ನೊಮ್ಮೆ ಹೇಳುತ್ತೇವೆ; ಈ ಜೀವ ನಮ್ಮದು ಎಂದರಂತೆ ವಿಷ್ಣು ದೂತರು.
ತನ್ನೊಳಗೇ ನಡೆಯುತ್ತಿದ್ದ ಈ ಅಸಾಧಾರಣವಾದ ಸಂವಾದವನ್ನು ಸುಪ್ತವಾಗಿಯೇ ಕೇಳುತ್ತಿದ್ದನಂತೆ ಅಜಾಮಿಳ. ‘ಈ ಜೀವ ನಮ್ಮದು’ -ಎಂಬ ಮಾತು ಕೇಳುತ್ತಿದ್ದಂತೆ ಅವನಲ್ಲಿ ಕಂಬನಿಯುಕ್ಕಿತಂತೆ. ಆ ಒಂದು ಮಾತು ಕೇಳುವುದೇ ಬದುಕಿನ ಸಾರ್ಥಕತೆಯೇನು!
[ಸರಣಿಯಲ್ಲಿ ಬಳಸಿಕೊಂಡಿರುವ ಕಲಾಕೃತಿಗಳು ಕಲಾವಿದೆ ಅನು ಪಾವಂಜೆ ಅವರದು.]
ವೇದ,ಉಪನಿಷತ್,ಮಹಾಕಾವ್ಯ,ಪರಿಸರ,ಸೌಂದರ್ಯ ಹಾಗೂ ಮಾನವ ಜೀವನದ ಕುರಿತು ಆಳವಾಗಿ, ಸ್ಪಷ್ಟವಾಗಿ ಮಾತನಾಡಬಲ್ಲ, ಬರೆಯಬಲ್ಲ ಲಕ್ಷ್ಮೀಶ ತೋಳ್ಪಾಡಿ ಕನ್ನಡದ ಈ ತಲೆಮಾರಿನ ಬಹಳ ಒಳ್ಳೆಯ ವಿದ್ವಾಂಸರಲ್ಲಿ ಒಬ್ಬರು.