ಮಜೀದ್ ಕ್ಯಾಷಲ್‌ನ ಭಾರಕ್ಕಿಂತಲೂ ಭಾರವಾದ ಹೃದವನ್ನಿಟ್ಟುಕೊಂಡು ನಾನು ಬಾಳುತ್ತಿರುವುದನ್ನು ಅವರಿಗೆ ಹೇಳಲು ಆಗುತ್ತಿಲ್ಲ. ಮುಂದೆ ಹೇಳದಲೆ ಹೋಗಬಹುದು. ಅವರು ಅದನ್ನು ನಂಬುತ್ತಾರೋ ಇಲ್ಲವೋ. ನಾನು ಯಾರು ಎಂಬುದನ್ನು ಅಷ್ಟಾಗಿ ವಿಚಾರಿಸಲೂ ಹೋಗಲೇ ಇಲ್ಲ. ಅವರೊಂದಿಗೆ ನಾನು ಇರಲು ಅಷ್ಟು ಸಹಜವಾಗಿ ಒಪ್ಪಿಕೊಂಡುಬಿಟ್ಟರು. ನಾನು ಪ್ರಾಗ್‌ನಿಂದ ಬರುವ ಮುನ್ನ ಅವರೊಂದಿಗೆ ಬಾಂಬೆಯ ನಜ್ಮಾ ಎಂಬ ಚಾಕರಿಯವಳು ಮತ್ತು ಅವಳ ಸಂಸಾರ ಇತ್ತು. ನಾನು ಬಂದ ಕೆಲ ದಿನಗಳಲ್ಲೇ ಅವಳು ಹೊರಟು ಹೋದಳು. ಬೆಳಗ್ಗೆ ಸಂಜೆಗೆ ಚಾಕರಿಗೆಂದು ಬರುವ ಜನರ ಹೊರತಾಗಿ ಅವರಿಗೆ ಯಾರ ಸಾಂಗತ್ಯವೂ ಇರಲಿಲ್ಲ.
ಲಿಂಗರಾಜ ಸೊಟ್ಟಪ್ಪನವರ್‌ ಬರೆದ ಕತೆ “ಪಾತ್ರ” ನಿಮ್ಮ ಭಾನುವಾರದ ಓದಿಗೆ

ವಿಶಾಲವಾದ ಹಜಾರದಲ್ಲಿ ಶತಪಥದಲ್ಲಿ ತಿರುಗುತ್ತಲಿದ್ದ ಅವರು ಒಮ್ಮೆಲೆ ಗಕ್ಕನೆ ನಿಂತರು. ಅತ್ತ ನೋಡದಲೆ ಅವರು ನಿಂತಿದ್ದು ನನಗೆ ಅರ್ಥವಾಗುತ್ತದೆ. ಇದು ಇವತ್ತಿನ ಮಾತಲ್ಲ. ಇಷ್ಟು ದೊಡ್ಡ ಬಂಗಲೆಯಲ್ಲಿ ನಾನು ಮತ್ತು ಬೇಗಂ ಜೇಬುನ್ನಿಸಾ ಮೂವ್ವತ್ತು ವರ್ಷಗಳನ್ನು ಕಳೆದಿದ್ದೇವೆ. ಅವರ ಬಳಿಯಾಗಲಿ ನನ್ನಲ್ಲಾಗಲಿ ಕೂಡಿ ಹಾಕುವುದಕ್ಕೆ ಏನೂ ಉಳಿದಿಲ್ಲ. ಉಳಿದಿರುವುದು ನೆನಪುಗಳು ಮಾತ್ರ. ಆದರೆ ನನಗಿಲ್ಲದ ಬಹುದೊಡ್ಡ ನಿರೀಕ್ಷೆ ಅವರಿಗಿದೆ. ಅದು ಅವರ ಬದುಕಿನ ಬಹುದೊಡ್ಡ ಭಾರ. ಅದನ್ನು ಹೊತ್ತು ಅವರು ದೊಡ್ಡ ಹಜಾರದಲ್ಲಿ ಬೆನ್ನು ಕೆಳಗೆ ಎರಡೂ ಕೈಕಟ್ಟಿ ತಿರುಗುತ್ತಲೇ ಇರುತ್ತಾರೆ. ನಿಲ್ಲದ ಭೂಮಿಯಂತೆ. ಅವರು ಹಗುರಾಗಲೆಂದು ನಾನು ಎಷ್ಟು ಪ್ರಾರ್ಥಿಸುತ್ತೇನೆ. ಆ ಮುದಿ ಜೀವ ಹಾಗೆ ಚಲಿಸುವುದು ಶತಮಾನವೊಂದು ಚಲಿಸಿದಂತಾಗುತ್ತದೆ. ನನ್ನ ಭಾರ ಎಂಥದ್ದು?

ಅವರು ನಿಂತರು. ತುಸುವೆ ಮುಖ ಹೊರಳಿಸಿದರು. ನಾನು ಎಂದೂ ಆ ಕಣ್ಣಲ್ಲಿ ನೋಡುವ ಧೈರ್ಯ ಮಾಡಿಲ್ಲ. ಅದು ಬಹುಶಃ ಈ ಜೀವಮಾನದಲ್ಲಿ ಆಗದೆಯೂ ಇರಬಹುದು. ಹಾಗೊಂದು ವೇಳೆ ನಾನವರ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಅಲ್ಲಿ ನನ್ನ ತಪ್ಪುಗಳೆಲ್ಲಾ ಕನ್ನಡಿಯಂತೆ ತೋರುತ್ತವೆ. ಅವು ನನ್ನನ್ನು ಕುಕ್ಕುತ್ತವೆ. ಅವರ ಚಲನಗಳನ್ನು ನಾನು ನೋಡದೆಯೇ ಅರ್ಥೈಸಬಲ್ಲಷ್ಟು ಪಳಗಿದ್ದೇನೆ. ಅನತಿ ದೂರದಲ್ಲಿ ಯಾರೋ ನಡೆದು ಬರುವ ಸಪ್ಪಳಕ್ಕೆ ಆ ಕಿವಿಗಳು ನಿಮಿರಿ ನಿಲ್ಲುತ್ತವೆ. ಅದು ಗಂಡಸೋ ಹೆಂಗಸೋ ಎಂಬುದನ್ನು ಅವರು ಹೇಳಬಲ್ಲರು. ಎಷ್ಟೋ ದೂರದಲ್ಲಿ ಕೆನೆವ ಕುದುರೆಗಳ ಖುರಪುಟದ ಸದ್ದು ಆಲಿಸಿ ಎಷ್ಟು ದಳದ ಸೈನ್ಯ ಇರಬಹುದೆಂಬುದನ್ನು ಹೇಳಬಲ್ಲ ಕುಶಾಲಿ ಖಾನ್‌ದಾನಿ ಹೆಂಗಸು. ಈ ಹಿಂದೆ ಟಿಪ್ಪು ಸವಣೂರಿನ ಮೇಲೆ ದಂಡೆತ್ತಿ ಬಂದದ್ದನ್ನು ಬೆಳಗಿನ ಜಾವದ ಅರೆನಿದ್ದೆಯಲ್ಲಿ ಸ್ವಪ್ನ ಕಂಡಂತೆ ಕಂಡು ಊಹಿಸಿದ್ದನ್ನು ಜೇಬುನ್ನಿಸಾ ಇಂದಿಗೂ ಕಥೆ ಕಟ್ಟಿ ಹೇಳುತ್ತಾರೆ. ಹೈದರಾಲಿಯ ಮರಣದ ನಂತರ ತನ್ನ ಪಟ್ಟಾಭಿಷೇಕಕ್ಕೆ ಬರಲಿಲ್ಲ ಎಂಬ ನೆಪ ಇಟ್ಟುಕೊಂಡು ಸವಣೂರಿನ ಮೇಲೆ ದಂಡೆತ್ತಿ ಬಂದ ಟಿಪ್ಪು ಅವರ ದೃಷ್ಟಿಯಲ್ಲಿ ಸುಲ್ತಾನನೆ ಅಲ್ಲ. ಇಷ್ಟು ಸಂಕುಚಿತ ಮನಸ್ಸು ಉಳ್ಳವನು ಅಸಹನೆ ಇರುವವನು ಹೇಗೆ ಸುಲ್ತಾನ ಆಗಬಲ್ಲ ಎಂಬುದು ಜೇಬುನ್ನಿಸಾರ ಅಭಿಪ್ರಾಯ. ಟಿಪ್ಪುವಿನಿಂದ ನವಾಬ ಹಕೀಮ್ ಖಾನ್ ಓಡಿಹೋಗಬೇಕಾಗಿ ಬಂದಿದ್ದು ಅವರಿಗೆ ತುಂಬಾ ನೋವು ಉಂಟು ಮಾಡಿತ್ತು. ಆ ಸಂದರ್ಭದಲ್ಲಿ ಆಶ್ರಯ ನೀಡಿದ ಮರಾಠರನ್ನು ಅವರು ಇಂದಿಗೂ ಸ್ಮರಿಸುತ್ತಾರೆ.

ಸದಾ ತೆರೆದೆ ಇರುತ್ತಿದ್ದ ಮುಖ್ಯ ದ್ವಾರದ ಮೂಲಕ ಪ್ರೊ.ಮರ್ಚಂಟ್‌ರವರು ಒಳಬಂದರು. ಅವರು ಬರುತ್ತಿರುವ ಕಾಲು ಸಪ್ಪಳ ಗ್ರಹಿಸಿದ ಅವರು ನಿಂತಿದ್ದಾರೆ. ಆ ಸಪ್ಪಳ ಅವರಿಗೆ ತೀರ ಪರಿಚಿತವಾದದ್ದು. ಆ ಸಪ್ಪಳ ತಿಳಿಗೊಳದಲಿ ಕ್ಷೋಭೆ ಉಂಟು ಮಾಡುವಂಥದ್ದು. ಒಳ ಬರುವಾಗ ಸುಲ್ತಾನರಿಗೆ ವಂದಿಸುವ ರಿವಾಜಿನ ಥರ ಜೇಬುನ್ನಿಸಾರಿಗೆ ವಂದಿಸಿ ಮೆಟ್ಟಿಲು ಹತ್ತಿದರು. ಹಾಗೆ ಮಾಡದೆ ಮರ್ಚಂಟ್‌ರಿಗೆ ಉಳಿದ ಮೆಟ್ಟಿಲುಗಳನ್ನು ಹತ್ತಲು ಆಗುವುದೇ ಇಲ್ಲವೇನೋ ಎಂದು ನನಗನಿಸುತ್ತದೆ. ಆ ಮಟ್ಟಿಗೆ ಅವರು ಮಜೀದ್ ಕ್ಯಾಷಲ್‌ಗೆ ನಿಷ್ಠರು. ಅವರಿಗೆ ಅದು ಇಷ್ಟವೊ ಅಲ್ಲವೋ. ಅದೊಂದು ರಿವಾಜು. ಹಾಗೇ ನಡೆದುಕೊಳ್ಳಬೇಕು. ಅದೊಂದು ಪರಂಪರೆ ಹೇರಿರುವ ಹೊರೆ. ನಮ್ಮೆಲ್ಲ ವಿಚಾರಧಾರೆಯನ್ನು ಅಲಕ್ಷಿಸಿ ದೇಹ ಹೇಗೆ ತಲೆ ಬಾಗಿಸಿಬಿಡುತ್ತದೆ. ಮರ್ಚಂಟ್‌ರಿಗೆ ಈ ಕುರಿತು ಆಕ್ಷೇಪ ಇದೆ. ನವಾಬರ ಕೃಪೆಯಿಂದಲೆ ತಾವು ಓದಿದ್ದು ಪ್ರೊಫೆಸರ್ ಆಗಿರುವದು ಎಂಬುದನ್ನು ತಮ್ಮ ಹಿರಿಕರು ಹೆಮ್ಮೆಯಿಂದ ಹೇಳಿಕೊಳ್ಳುವದು ಅಪಮಾನಕರ ಎನಿಸುತ್ತದೆ. ಅವರು ನವಾಬರ ಅನೇಕ ಸಂಬಂಧಿಗಳನ್ನು ಮಿಂಯಾ ಎಂದು ಸಂಭೋಧಿಸುತ್ತಾರೆ. ಹಾಗೆ ಹೇಳುವ ಮೂಲಕ ಮರ್ಚಂಟ್ ವಿಚಿತ್ರ ಮಜಾ ಅನುಭವಿಸುತ್ತಾರೆ. ನೀವು ನವಾಬರಾಗಿರಬಹುದು ಆದರೆ ರಾಜರಲ್ಲ. ನೀವು ಕಾಬೂಲದಿಂದ ಬಂದ ಮೀಯಾನ್‌ಗಳು.. ನೀವು ಟ್ರೈಬಲ್ ಪೀಪಲ್ ಎಂಬುದನ್ನು ಅವರು ಹೇಳಲು ಮತ್ತು ಅವರಿಗೆ ಅವರ ಗತವನ್ನು ನೆನಪು ಮಾಡಿಕೊಡುವ ಮೂಲಕ ಅವರನ್ನು ಮಾನಸಿಕವಾಗಿ ಹಣಿಯುವದು.. ಇಲ್ಲಿ ಯಾರೂ ಶ್ರೇಷ್ಠರಲ್ಲ ಎಂದೂ ಮನಗಾಣಿಸುವದು ಅವರ ಉದ್ದೇಶ. ಆದರೆ ಮೀಂಯಾ ಎನ್ನುವದು ಕಾಲಾಂತರದಲ್ಲಿ ಒಂದು ಪ್ರತ್ಯಯ ಮಾತ್ರವಾಗಿ ಉಳಿದಿತ್ತು. ಆದರೆ ಮರ್ಚಂಟ್‌ರ ಈ ಯೋಚನೆ ನನಗೆ ಇಷ್ಟವಾಗುತ್ತಿರಲಿಲ್ಲ. ನಾನು ಇಷ್ಟ ಅನ್ನುವ ಕಾರಣ ಮಾತ್ರಕ್ಕಾಗಿ ನನ್ನ ಎಲ್ಲವನ್ನೂ ಇಷ್ಟಪಡಬೇಕಾದ್ದಿಲ್ಲ.. ಎಂದು ನೇರವಾಗಿ ಹೇಳಿಬಿಡುತಿದ್ದ ಮನುಷ್ಯ ಅವರು. ಮರ್ಚಂಟ್‌ರ ಪುರಾತನರು ನವಾಬರ ಆಳು ಆಗಿದ್ದರು ಎಂಬುದು ಅವರಿಗೆ ಅರಗಿಸಿಕೊಳ್ಳದ ಸಂಗತಿಯಾಗಿತ್ತು.

ಮರ್ಚಂಟ್‌ರ ಪುರಾತನರು ನವಾಬರ ಕಾಲಕ್ಕೆ ಝೂಮರ್‌ಗಳನ್ನು ಒರೆಸುವ ಕೆಲಸ ಮಾಡುತ್ತಿದ್ದರಂತೆ. ಪರ್ಷಿಯಾದಿಂದ ನವಾಬರು ತರಿಸಿದ ಝೂಮರ್‌ಗಳನ್ನು ಪ್ರತಿನಿತ್ಯ ಸ್ವಚ್ಛಗೊಳಿಸುವ ಕೆಲಸ ಅವರದು. ಅವು ಬೀಳದಂತೆ ಅಷ್ಟು ಎತ್ತರದಲ್ಲಿ ನಿಂತು ಸ್ವಚ್ಛಗೊಳಿಸುವ ಕಾರ್ಯವು ಯಾವ ಒಂಟಿ ತಂತಿಯ ಮೇಲಿನ ಸರ್ಕಸ್‌ಗಿಂತ ಕಡಿಮೆಯದ್ದಲ್ಲ. ಅವರ ಪುರಾತನರು ಅದರಲ್ಲಿ ನಿಷ್ಣಾತರು. ಈ ಮರ್ಚಂಟ್‌ರು ಸಹ ನವಾಬರ ಕೃಪೆಯಿಂದಲೇ ಪ್ರೊಫೆಸರ್ ಆದವರು.

ಅದೇನು ಮಹಾ, ಒರೆಸುವ ಕೆಲಸವನ್ನು ಯಾರಾದರೂ ಮಾಡಬಹುದು. ಅದರಲ್ಲೇನು ನೈಪುಣ್ಯ-ಎಂದು ಮರ್ಚಂಟ್‌ರನ್ನು ಕೇಳಿದ್ದೆ. ಅದಕ್ಕವರು ಜೋರಾಗಿ ನಕ್ಕಿದ್ದರು. ಅದು ಅವರಿಗೆ ಜೋಕ್ ಎನಿಸಿತ್ತು. ಹಾಗೆ ನಕ್ಕು ಅವರು ಹೇಳಿದ್ದೇನೆಂದರೆ ಅದೊಂದು ಸಂಜೆ ಮೆಹರ್‍ಬಾನ್‌ರು ಏಕಾಂತದಲ್ಲಿ ಸಂಜೆ ಸವಿಯುತ್ತಿದ್ದರು. ಹೀಗೊಮ್ಮೆ ನನ್ನಜ್ಜ ಝೂಮರ್ ಸ್ವಚ್ಚಗೊಳಿಸುವಾಗ ಝೂಮರ್ ಕೈಜಾರಿತ್ತು. ಬಡಪಾಯಿಗೆ ಆಕಾಶವೇ ಕಳಿಚಿ ಬಿದ್ದಂಥ ಅನುಭವ. ಮೂವತ್ತು ಅಡಿ ಎತ್ತರ. ಫಳ್ಳ್…! ಇಡೀ ಬಂಗಲೆ ಬೆಚ್ಚಿ ಬಿದ್ದಿತ್ತು. ನನ್ನಜ್ಜ ಹೇಗೋ ಪರಾರಿಯಾಗಿಬಿಟ್ಟಿದ್ದ-ಒಂದು ಇಂಟರ್‍ವಲ್ ತರ ಅಷ್ಟಕ್ಕೆ ನಿಲ್ಲಿಸಿದ ಮರ್ಚಂಟ್ ಕಾನೂನ್ ಕೆ ಹಾತ್ ಬಹುತ್ ಲಂಬೇ ಹೋತೆ ಹೈ.. ಎಂದು ಫಳ್ಳನೇ ನಕ್ಕರು. ಮತ್ತೊಮ್ಮೆ ಝೂಮರ್ ಬಿದ್ದಂತೆ. ತನ್ನಜ್ಜನ ಮುಂದಿನ ಸ್ಥಿತಿಯ ಬಗ್ಗೆ ಮರುಗುವುದನ್ನು ಬಿಟ್ಟು ಈ ಮನುಷ್ಯ ನಗುತ್ತಿರುವುದು ನನಗೆ ವಿಚಿತ್ರ ಎನಿಸಿತು.

ನನ್ನ ಅಜ್ಜ ಎಲ್ಲಿ ಓಡಿ ಹೋಗುತ್ತಾನೆ. ಬಂಟರು ಅವನನ್ನು ಹಿಡಿದು ತಂದಿದ್ದರು. ಆತ ಭಯದಿಂದ ಕೈಕಟ್ಟಿ ನಡುಗುತ್ತ ನಿಂತಿದ್ದ. ನವಾಬರ ತಿಕ್ಕಲುತನ ಅವನಿಗೆ ಗೊತ್ತಿತ್ತು. ಅವರ ಕರುಣೆ ಮತ್ತು ಕ್ರೌರ್ಯ ಎರಡನ್ನು ನಿರ್ಧರಿಸಬಲ್ಲದ್ದು ಆ ಕ್ಷಣದ ಕ್ಷಣ. ತಿಳಿದರೆ ಹೀಗೆ, ತಿಳಿಯದಿದ್ದರೆ ಹಾಗೆ. ಆ ದೇವರು ಎಂಬುವವನು ಅರ್ಥವಾಗಬಹುದು. ಈ ನವಾಬರು ಅರ್ಥವಾಗುವುದು ಅಷ್ಟು ಸುಲಭವಲ್ಲ. ನಡುಗುತಿದ್ದ ನನ್ನಜ್ಜನನ್ನು ನೋಡಿ ನವಾಬರು ಫಳ್ಳನೇ ನಕ್ಕಿದ್ದರಂತೆ. ಅಜ್ಜನಿಗೆ ನೆಲವೇ ಹಿಡಿದು ನಡುಗಿಸಿದಂಥ ಅನುಭವ. ಹಾಗೆ ನಕ್ಕು ಮರುಕ್ಷಣವೇ ಬಿಟ್ಟು ಕಳಿಸಿ ಅವನನ್ನು ಅಂದಿದ್ದರಂತೆ. ಕ್ರೌರ್ಯ ಮತ್ತು ಆ ಮರುಕ್ಷಣ ಮರುಕ ಇದೆಯಲ್ಲಾ ಎಂಥ ವಿಚಿತ್ರವದು. ನಿಜಕ್ಕೂ ಖಾವಂದರು ಆ ದೇವನಿಗಿಂತ ದಯಾಮಯರು-ಮತ್ತೆ ಫಳ್ಳನೇ ನಕ್ಕ ಮರ್ಚಂಟ್.. ಕನ್ನಡಿಯ ಧೂಳು ಒರೆಸಬಹುದು. ಕಣ್ಣೊಳಗಿನ ಕಸರು? ನನ್ನತ್ತ ನೋಡಿದರು. ಕಸರು ಗುರುತಿಸುವ ನೋಟವದು. ಗಾಜಿನ ಗೋಲಿಗಳಂತಹ ಫಳ ಫಳ ಕಣ್ಣುಗಳು. ಮುಖದ ಮೇಲಿಂದ ಸಣ್ಣಗೆ ಸರಿಯುತ್ತಾ ನನ್ನ ದೇಹದ ತುಂಬಾ ಓಡಾಡಿದವು.

ಆ ಸಂಜೆ ಏಕಾಂತದಲ್ಲಿ ನವಾಬ ಸಾಹೇಬರಿಗೆ ಝೂಮರ್ ಬಿದ್ದು ಒಡೆದ ಸದ್ದು ಅಲೆ ಅಲೆಯಾಗಿ ಪರಮ ಆಹ್ಲಾದ ಉಂಟು ಮಾಡಿತ್ತಂತೆ. ಈ ಕಾರಣಕ್ಕೆ ನನ್ನಜ್ಜನಿಗೆ 50 ಎಕರೆ ಜಮೀನು ಬಕ್ಷೀಸು ಆಗಿ ದೊರಕಿತ್ತು. ಪವರ್ ಇರುವವರ ಹೃದಯದಲ್ಲಿ ಈ ಮರ್ಸೀ ಎಂಬುದು ಯಾವ ಎಡಹೊತ್ತಲ್ಲಿ ಹುಟ್ಟಿಕೊಳ್ಳುತ್ತೋ ಬಲ್ಲವರಾರು? ಹುಬ್ಬು ಏರಿಸಿ ನೋಡಿದ ಮರ್ಚಂಟ್ ಈ ಬಾರಿ ನಗಲಿಲ್ಲ. ಅಲ್ಲಿ ವಿಷಾದವಿತ್ತು. ಈ ಭೂಮಿಯ ಮೇಲಿನ ಜನರು ಎಷ್ಟು ವರ್ಷಕಾಲ ಇಂಥ ತಿಕ್ಕಲುತನವನ್ನು ಅನುಭವಿಸಬೇಕಾಯಿತಲ್ಲವೇ ಎಂದರು. ಅದು ಕೇಳಿಸಿತೋ ಹೇಗೋ ಜೇಬುನ್ನಿಸಾ ಮೆಲ್ಲಗೆ ಕೆಮ್ಮಿದರು. ಆ ಕೆಮ್ಮಿಗೆ ಒಂದು ಖದರ್ ಇದೆ. ಅದು ಘನತೆಯ ಕೆಮ್ಮು.. ಅವರಿಗೆ ಕೇಳಿತೋ ಇಲ್ಲವೋ ಆದರೆ ಅವರು ಕೆಮ್ಮುವ ಕಾರಣ ಬೇರೆಯೇ ಇತ್ತು. ಅದು ಮರ್ಚಂಟ್‌ರಿಗೆ ಅರ್ಥವಾಗುವಂಥದಲ್ಲ. ಒಬ್ಬ ಗಂಡಸು ತನ್ನ ಹುಡುಕಾಟದಲ್ಲಿ ಮೈಮರೆಯುತ್ತಾನೆ. ಅವನಿಗದು ನಶೆ. ಹೆಂಗಸು ಹಾಗಲ್ಲ. ಅವಳ ಹುಡುಕಾಟವೇ ಒಂದು ಎಚ್ಚರ..! ಎಚ್ಚರ ತಪ್ಪಿದರೆ ಗಂಡಸರು ದಕ್ಕುತ್ತಲೇ ಹೋಗುತ್ತಾರೆ. ಅವಳ ಹುಡುಕಾಟ ಅಲ್ಲಿಗೆ ಮುಗಿಯಿತು. ಯಾವ ಹೆಂಗಸು ಮುಗಿಯುವದನ್ನು ಇಷ್ಟಪಡುವುದಿಲ್ಲ. ಅವಳಿಗೆ ಎಲ್ಲ ಸಂಗತಿಗಳು ಜಾರಿಯಲ್ಲಿರಬೇಕು. ಈ ಬಂಗಲೆಯಲ್ಲಿ ಅಂತಹ ಇಬ್ಬರು ಹೆಂಗಸರು ಇರುವುದು ಮರ್ಚಂಟ್‌ರಿಗೆ ನಿಲುಕದ ವಿಷಯವಾಗಿತ್ತು.

ಮೊಟ್ಟ ಮೊದಲು ಒಬ್ಬ ಪಾರ್ಸಿ ಈ ಬಂಗುಲೆಯ ಮೆಟ್ಟಿಲು ಹತ್ತುವದು ಬೇಗಂರಿಗೆ ಇಷ್ಟವಲ್ಲದ ಸಂಗತಿಯಾಗಿತ್ತು. ಅವರಿಗೆ ಮರ್ಚಂಟ್‌ರ ಅಂತಹ ಪರಿಚಯ ಇರಲಿಲ್ಲವಾದರೂ ಅವರ ಮಾತು, ಧಿರಿಸು, ಶೈಲಿ ಅವರೊಬ್ಬ ಪಕ್ಕಾ ಪಾರ್ಸಿ ಎಂಬುದು ಅವರಿಗೆ ಅರ್ಥವಾಗಿತ್ತು. ಈ ಪಾರ್ಸಿಗಳು ಆಹಾರದಲ್ಲಿ ಶಿಸ್ತಿಲ್ಲದವರು, ಕುಡಿಯುತ್ತಾರೆ, ಪೋರ್ಕ್ ತಿನ್ನುತ್ತಾರೆ ಎಂಬುದು ಮುಖ್ಯ ಕಾರಣವಿರಬಹುದು ಎಂದು ನಾನು ಊಹಿಸಿದ್ದೆ. ಅಲ್ಲದೇ ಪಾರ್ಸಿಗಳು ನವಾಬರ ಆಳುಗಳು ಎಂಬ ಧೋರಣೆಯು ಕಾರಣವಾಗಿರಬಹುದು ಎಂದುಕೊಂಡಿದ್ದೆ. ಆದರೆ ನನ್ನ ಊಹೆ ತಪ್ಪಾಗಿತ್ತು. ಅವರ ಅಸಹನೆ, ಸಿಡಿಮಿಡಿ ನಿಧಾನಕ್ಕೆ ನನಗೆ ಅರ್ಥವಾಗತೊಡಗಿತ್ತು. ಅದನ್ನು ಮರ್ಚಂಟ್‌ರಿಗೆ ಹೇಳುವ ಅಗತ್ಯವಿರಲಿಲ್ಲ. ಅವರ ಲೋಲುಪತೆಯಲ್ಲಿ ಅವರು ತೇಲಲಿ. ನನ್ನಲ್ಲಿ ಹುಡುಕಿಕೊಳ್ಳುವ ಅವರ ನವಿರು ಬೆರೆಳುಗಳಿಗೆ ಹೊಸ ಅಡಚಣೆಯೊಂದನ್ನು ತಂದೊಡ್ಡುವುದು ನನಗೆ ಇಷ್ಟವಿರಲಿಲ್ಲ. ನಾನು ಮಾತ್ರ ಮರ್ಚಂಟ್ ಬಂದಾಗ ಎರಡು ಮನಸ್ಸಿನವಳಾಗುತ್ತಿದ್ದೆ. ಬೇಗಂ ಕಡೆಗೆ ಯಾವಾಗಲೂ ನನ್ನ ಚಿತ್ತ ಹರಿಯುತ್ತಿತ್ತು. ನವಾಬ ಮನೆತನದವರಿಗೆ ಜಾಸೂಸಿ ಹೇಳಿಕೊಡಬೇಕೆ? ಹೀಗೆ ಯೋಚಿಸುತ್ತಿದ್ದಾಗಲೇ ಮತ್ತೊಮ್ಮೆ ಬೇಗಂ ಕೆಮ್ಮಿದರು. ಮರ್ಚಂಟ್ ಬಂಗಲೆಯಿಂದ ಹೊರಡುವವರೆಗೆ ಈ ಕೆಮ್ಮು ಕೆಮ್ಮುತ್ತಲೇ ಇರುತ್ತದೆ. ಇಂಥ ಸೂಕ್ಷ್ಮಗಳು ಗಂಡಸಿಗೆ ನಿವಾರಿಸಲಾಗದ ಸಂಕಟಗಳಾಗಿಬಿಡುತ್ತವೆ. ಅಂತಹ ಸಂಕಟಕ್ಕೆ ಮರ್ಚಂಟ್ ಈಡಾಗಬಾರದಂತೆ ಅಷ್ಟೂ ವರ್ಷಗಳಿಂದ ಮುತುವರ್ಜಿ ವಹಿಸುತ್ತಿದ್ದೇನೆ.

ನನ್ನ ಭೇಟಿಯಾಗಿರುವ ಮಾತುಕತೆ ನಡೆಸಿದ ಅನೇಕರು ಸಾಹಿತ್ಯಿಕ, ಸಾಂಸ್ಕೃತಿಕ ಚರ್ಚೆಗಾಗಿ ಮಜೀದ್ ಕ್ಯಾಷಲ್‌ಗೆ ಬರುತ್ತಾರೆ. ಆದರೆ ಅನೇಕರಂತೆ ಮರ್ಚಂಟ್ ಅಲ್ಲಾ ಎಂಬುದು ಪಳಗಿದ ಯಾರಿಗಾದರೂ ಅರ್ಥವಾಗುವಂಥದ್ದು. ಹಾಗಂತ ಅದನ್ನು ಯಾವತ್ತು ಬೆರಳು ಮಾಡಿ ತೋರಿಸುವ ಕೆಲಸವನ್ನು ಬೇಗಂ ಮಾಡಲು ಹೋಗಿಲ್ಲ. ಅನ್ಯ ಸಂಬಂಧಕ್ಕೂ ಒಂದು ಘನತೆ ಇರುತ್ತದೆ ಎಂಬುದನ್ನು ಜೇಬುನ್ನಿಸಾ ಮಾತ್ರ ತಿಳಿಯಬಲ್ಲವರಾಗಿದ್ದರು.

*****

ಪ್ರಾಗ್

ಜೆಕ್ ರಿಪಬ್ಲಿಕ್‌ನ ಸುಂದರ ಕನಸು. ಅತ್ಯದ್ಭುತ ಎನ್ನುವ ಇಮಾರತಿಗಳು. ಚರ್ಚುಗಳು, ಕ್ಯಾಥೆಡ್ರೆಲ್‌ಗಳು, ಬ್ರಿಜ್‌ಗಳು, ಅಪಾರ ಬಿಯರು, ಅಗ್ಗದ ಸೆಕ್ಸು, ತಾಯಿ ಭಾಷೆಯಾಗಿ ಹೋಗಿರುವ ಎಲ್ಲರ ಬಾಯಲ್ಲಿನ ಇಂಗ್ಲೀಷು.. ಇದು ಪ್ರಾಗ್.

ನಾನು ಸಂಸ್ಕೃತಿ ಮತ್ತು ಪರಂಪರೆಯ ಅಧ್ಯಯನಕ್ಕಾಗಿ ಇಂಡಿಯಾದ ಕಮ್ಯುನಿಷ್ಟ್ ಪಕ್ಷದಿಂದ ಯುರೋಪಿನ ಜೆಕ್‌ಗೆ ಹೋದವಳು. ಇದು ಅನೇಕ ಲೇಖಕರಿಗೆ ಕೇವಲ ಪ್ರವಾಸವಾಗಿತ್ತು. ನನಗೆ ಹಾಗಲ್ಲ. ಪ್ರಪಂಚದ ಎರಡು ಮಹಾಯುದ್ಧಗಳ ಪರಿಣಾಮಗಳಿಗೆ ತನ್ನನ್ನು ಒಡ್ಡಿಕೊಂಡು ನಲುಗಿದ ಪುಟ್ಟ ರಾಷ್ಟ್ರ ಜೆಕ್. ಒಮ್ಮೆ ಕಮ್ಯುನಿಸಮ್ ಒಮ್ಮೆ ಸಮಾಜವಾದ ಹೀಗೆ ಇತರ ರಾಷ್ಟ್ರಗಳು ಬೇಕು ಬೇಡಾದ್ದನ್ನೆಲ್ಲಾ ಈ ರಾಷ್ಟ್ರದ ಮೇಲೆ ಹೇರಿ ಸವಾರಿ ಮಾಡಿದವರೆ. ರಷ್ಯಾದ ಡೇರೆಗಳು, ಬ್ಯಾರೆಲ್‌ಗಳು, ಟ್ಯಾಂಕರ್‌ಗಳು ಉಳಿಸಿ ಹೋದ ಗಾಯಗಳನ್ನು ಜೆಕ್ ಇನ್ನೂ ಸವರಿಕೊಳ್ಳುತ್ತಲೇ ಇದೆ. ಜೆಕ್ ಪ್ರಜೆಗಳು ರಷ್ಯಾವನ್ನು ಕ್ಷಮಿಸಲು ಎಷ್ಟು ಶತಮಾನಗಳು ಬೇಕಾಗಬಹುದೇನೋ.

ಪ್ರೊ. ಮುಸ್ತಫಿಜೂರ್ ಸೋಸಿಯಲಿಸ್ಟ್ ಮೂವಮೆಂಟ್‌ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು. ಅವರಿಗೆ ಈ ಇಜಂಗಳಲ್ಲಿ ನಂಬಿಕೆ ಇರಲಿಲ್ಲ. ಅವರ ತುಡಿತ ಜೀವಪರ ಮಾತ್ರವಾಗಿತ್ತು. ಜೆಕ್‍ನ್ನು ಒಂದು ಪ್ರೊಡೆಮೊಕ್ರೆಟಿವ್ ದೇಶವಾಗಿ ನೋಡಲು ಬಯಸುತ್ತಿದ್ದರು. ಮುಸ್ತಫಿಜೂರ್ ಸೋಸಿಯಲಿಸ್ಟ್ ಪಾರ್ಟಿಯಲ್ಲಿ ಗುರುತಿಸಿಕೊಂಡವರು. ಸ್ಟಾಲಿನ್, ಹಿಟ್ಲರ್ ಅವರನ್ನು ಅವರ ಇಜಂಗಳ ಹೊರತಾಗಿಯೂ ಅವರನ್ನು ನೋಡಬೇಕು ಎನ್ನುತ್ತಿದ್ದರು. ಅವರ ಫಾಲೋವರ್ ಮತ್ತು ವಿದ್ಯಾರ್ಥಿ ಫೆಡರೇಶನ್‌ಗಳು ಅವರ ಈ ನಿಲುವನ್ನು ದ್ವಂದ್ವ ಎಂದು ವ್ಯಾಖ್ಯಾನಿಸುತ್ತಿದ್ದರು. ಆದರೆ ವಾದ ಇಜಂಗಳಿಗೆ ಹೊರತಾಗಿಯೂ ಕೆಲವು ಇಷ್ಯೂಗಳನ್ನು ಹೇಗೆ ನೋಡಬೇಕು ಎಂಬುದನ್ನು ಮೂವ್‌ಮೆಂಟ್‌ಗಳಿಗೆ ಅವರು ಹೇಳಿಕೊಡಬೇಕಾಗಿತ್ತು. ಎಲ್ಲವಕ್ಕೂ ಎಲ್ಲ ಸಂದರ್ಭದಲ್ಲೂ ನಿಷ್ಠವಾಗಿ ಇರುವುದು ಕೂಡ ಒಂದು ದೋಷ ಎಂಬುದು ಅವರ ಅಚಲ ನಂಬುಗೆಯಾಗಿತ್ತು. ಒಂದು ನಿರ್ದಿಷ್ಟ ಫಿಲಾಸಫಿ ಇಲ್ಲದೇ ಕೇವಲ ಇಜಂನ ಆಧಾರದಲ್ಲಿ ಮೂವ್‌ಮೆಂಟ್‌ಅನ್ನು ನಡೆಸಲಾಗುವುದಿಲ್ಲ ಎಂಬುದನ್ನು ತನ್ನ ಸಂಗಾತಿಗಳಿಗೆ ಅವರು ಹೇಳಿಕೊಡುತ್ತಿದ್ದರು. ಬಹುಶಃ ಅವರು ಇಂಥದ್ದೇ ಫಿಲಾಸಫಿ ಕಾರಣಕ್ಕಾಗಿ ನನ್ನನ್ನು ಪ್ರೀತಿಸಿದರು ಎಂದೆನಿಸುತ್ತದೆ. ಕಮ್ಯುನಿಸ್ಟ್‌ ಆದ ನನ್ನನ್ನು ಕೇವಲ ಸೋಸಿಯಲಿಸ್ಟ್ ಆದ ಮಾತ್ರಕ್ಕೆ ಅವರು ಆ ಸಂದರ್ಭದಲ್ಲಿ ದ್ವೇಷಿಸಲು ಸಾಧ್ಯವಿತ್ತು.

ಸೇಂಟ್ ವಿಟಸ್ ಕ್ಯಾಥೆಡ್ರೆಲ್ ಮುಂದೆ ಪ್ರತಿಭಟನಾ ವಿದ್ಯಾರ್ಥಿಗಳ ದೊಡ್ಡ ಸಮೂಹ ನೆರೆದಿತ್ತು. ಅದರ ನೇತೃತ್ವ ವಹಿಸಿಕೊಂಡವರು ಪ್ರೊ. ಮುಸ್ತುಫಿಜೂರ್. ಚಾರ್ಲ್ಸ್‌ ಯುನಿವರ್ಸಿಟಿಗೆ ಅಧ್ಯಯನಕ್ಕಾಗಿ ಹೋಗಿದ್ದ ನವಾಬರ ಹುಡುಗ ಅಲ್ಲಿಯೇ ಪ್ರೊಫೆಸರ್ ಆದರು. ಪ್ರಾಗ್‌ನಲ್ಲಿನ ಗಲಭೆಗಳು, ಜನಸಾಮಾನ್ಯರ ತಲ್ಲಣಗಳು, ವಿದ್ಯಾರ್ಥಿಗಳ ತಾತ್ವಿಕ ಗೊಂದಲಗಳು, ಪಠ್ಯಕ್ರಮದಲ್ಲಿನ ರಷಿಯನ್ ಭಾಷೆಯ ಹೇರಿಕೆ, ಯುದ್ಧ ಕಾಲದ ಪ್ರಕ್ಷುಬ್ಧಗಳು ಹೀಗೆ ಮಾನವ ಜನಾಂಗದ ಮೇಲಿನ ನಿರಂತರ ಹಲ್ಲೆಗಳು ಅವರನ್ನು ವಿಚಲಿತಗೊಳಿಸಿದ್ದವು. ಅಪಾರ ವಿದ್ಯಾರ್ಥಿ ಸಮೂಹದ ಪ್ರೀತಿಗಿಂತ ಪ್ರಾಗ್‌ನ ಆ ಸಂದರ್ಭ ಅವರನ್ನು ಇಂಡಿಯಾಕ್ಕೆ ಮರಳಿ ಬಾರದಂತೆ ಕಟ್ಟಿ ಹಾಕಿತ್ತು. ಧಾರವಾಡದ ಮಜೀದ್ ಕ್ಯಾಷಲ್‌ನಲ್ಲಿ ಏಕಾಂಗಿಯಾಗಿ ಬದುಕುತ್ತಿರುವ ತನ್ನ ತಾಯಿಯನ್ನು ಪ್ರಾಗ್‌ನ ಪ್ರಕ್ಷುಬ್ಧತೆ ಮರೆಗೆ ಸರಿಸಿತ್ತು.

ಪ್ರೊಫೆಸರ್ ದೊಡ್ಡ ದನಿಯಲ್ಲಿ ಘೋಷಣೆ ಕೂಗುತ್ತಲಿದ್ದರು. ಅದೊಂಥರ ಜೈಕಾರ ಅನ್ನುವಂಥದ್ದು. ಓಲಂಪಿಕ್‌ನಲ್ಲಿ ಜೆಕ್ ರಷ್ಯಾವನ್ನು ಎರಡು ಪಂದ್ಯಗಳಲ್ಲಿ ಸೋಲಿಸಿತ್ತು. ಅದರ ಹುರುಪಿನಿಂದ ಪ್ರೊಫೆಸರ್ ಹೊಸ ವ್ಯಂಗಭರಿತ ಸ್ಲೋಗನ್‌ಗಳನ್ನು ಬರೆಸುತ್ತಿದ್ದರು. ರಷಿಯಾ ಸೋತಿದ್ದೇಕೆಂದರೆ ಪಂದ್ಯದಲ್ಲಿ ಟ್ಯಾಂಕರ್‌ಗಳನ್ನು ಬಳಸಲಾಗುವುದಿಲ್ಲ ಎಂದು ಸ್ಲೋಗನ್ ಬರೆಸಿ ಹಾಕಲಾಗಿತ್ತು. ಜೆಕ್ ಜನರು ಈ ವ್ಯಂಗ್ಯದಲ್ಲಿ ವಿಶಿಷ್ಟರು.

ಇಂಥ ಮೂವ್‌ಮೆಂಟ್‌ಗಳಲ್ಲಿ ನನ್ನಂಥ ಅಧ್ಯಯನಕಾರರಿಗೆ ಹೊಸತೇನೋ ಸಿಗುತ್ತಿತ್ತು. ಮತ್ತು ನನಗೆ ಈ ಜೆಕ್ ಜನರ ವ್ಯಂಗ್ಯಭರಿತ ಸ್ಲೋಗನ್‌ಗಳ ಬಗ್ಗೆ ಕುತೂಹಲವಿತ್ತು. ಅದಕ್ಕೆಂದೇ ನಾನು ಈ ಮೂವ್‌ಮೆಂಟ್‌ಗಳತ್ತ ಆಕರ್ಷಿತಳಾಗಿದ್ದೆ. ಹಾಗೆ ಪ್ರೊಫೆಸರ್ ಸಹ ನನ್ನನ್ನು ಆಕರ್ಷಿಸಿದರು. ಆ ಕ್ಯಾಥೆಡ್ರೆಲ್ ಇರುವವರೆಗೂ ನಾನು ಆ ಫ್ರೊಫೆಸರ್‍ರೊಂದಿಗೆ ಬೆಸೆದುಕೊಂಡಿರುತ್ತೇನೆ ಎಂಬ ಕಲ್ಪನೆಯೇ ಅದ್ಭುತವಾದದ್ದು. ಅವತ್ತು ಕ್ಯಾಥೆಡ್ರೆಲ್ ಮುಂದೆ ಅನತಿ ದೂರದಲ್ಲಿ ನಿಂತಿದ್ದೆ. ಪ್ರೊಫೆಸರ್ ಉತ್ಸಾಹದಿಂದ ಘೋಷಣೆ ಬರೆಸುತ್ತಿದ್ದರು. ನನ್ನದೇ ರಾಜ್ಯದ ನವಾಬರ ಈ ಹುಡುಗನಿಗೆ ತಲೆ ಮೇಲೆ ಯಾವ ಕಿರಿಟವೂ ಇಲ್ಲ. ಕತ್ತಿ ಗುರಾಣಿ ಎಲ್ಲವೂ ಸ್ಲೋಗನ್‌ಗಳೇ ಆಗಿದ್ದವು. ಅವರು ಎಲ್ಲರೊಂದಿಗೆ ಪಾಲ್ಗೊಳ್ಳುವ ರೀತಿಯೇ ಅನೂಹ್ಯವಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಅವರು ತಮ್ಮ ಎಡಗೈ ಹಸ್ತದಿಂದ ತಮ್ಮ ತೊಡೆ ತಟ್ಟುತ್ತ ಬಲಗೈ ಮೇಲೆತ್ತಿ ಘೋಷಣೆ ಕೂಗುತ್ತಿದ್ದರು. ಆ ಹಾವ ಭಾವ ಎಲ್ಲರನ್ನೂ ಮೂವ್‌ಮೆಂಟ್‌ಗೆ ಹುರಿದುಂಬಿಸುತ್ತಿತ್ತು. ನಾನು ಹುರುಪಗೊಳ್ಳತೊಡಗಿದೆ. ನಾನು ಜೈಕಾರ ಹಾಕಿದೆ ಕೂಡಾ. ಅನೇಕ ಬಾರಿ ಪ್ರವಾಸದ ಉದ್ದೇಶ ಮರೆತು ಅವರನ್ನು ಕಾಣಲು ಹೋಗಿಬಿಡುತ್ತಿದ್ದೆ. ನಾನು ಪ್ರೀತಿಯಲ್ಲಿ ಬಿದ್ದಿದ್ದೇನೆ ಎಂಬುದು ಸ್ಪಷ್ಟವಾಗಿತ್ತು. ಒಂದು ದಿನ ಖಂಡಿತ ಅವರನ್ನು ಪ್ರಾಗ್‌ನ ಥೀಯೆಟರ್‌ಗೋ, ಬ್ರಿಜ್‌ಗೋ ಕರೆದೊಯ್ಯುತ್ತೇನೆ. ಮತ್ತು ನನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತೇನೆ. ಪಕ್ಕಾ ಪ್ರಾಗ್‌ನ ಹುಡುಗಿಯರಂತೆ. ಪ್ರಾಗ್‌ನ ಪ್ರೇಮಿಗಳು ತಮ್ಮ ಮೊದಲ ಪ್ರೇಮವನ್ನು ಹೇಳಿಕೊಳ್ಳುವುದು ಈ ಥೀಯೆಟರ್ ಇಲ್ಲವೇ, ಬ್ರಿಜ್ ಮೇಲೆ. ತಾವು ಅಳಿದರೂ ತಮ್ಮ ಪ್ರೇಮ ಈ ಬ್ರಿಜ್‌ನಂತೆ ಶಾಶ್ವತವಾಗಿರಲಿ ಎಂದು ಬಯಸುತ್ತಾರೆ. ಬ್ರಿಜ್ ಅಳಿದರೂ ನದಿ ಇದ್ದೇ ಇರುತ್ತೆ. ಯುರೋಪಿನ ಈ ಪುಟ್ಟ ದೇಶದಲ್ಲಿ ಪ್ರೇಮವೆಂಬುದು ಹೀಗೆ ನದಿಯಾಗಿ ಶಾಶ್ವತವಾಗಲು ಹಂಬಲಿಸುತ್ತದೆ. ನಾನು ಹೀಗೆ ಪ್ರೊಫೆಸರ್‍ರನ್ನು ಆಹ್ವಾನಿಸುವ, ಭೇಟಿಯಾಗುವ ಪ್ರಮೇಯವೆ ಸೃಷ್ಟಿಯಾಗಲಿಲ್ಲ. ಆದರೆ ಅವರನ್ನು ನಾನು ಕಾಫಿ ಹಬ್‌ಗೆ, ಬಿಯರ್ ಪಬ್‌ಗೆ ಕರೆದೊಯ್ದೆ. ಅವರು ಎಂಥಹ ವಿಪರೀತ ಚಳಿಯಲ್ಲೂ ಬಿಯರ್ ಪ್ರಿಯರಾಗಿದ್ದರು. ಕಾಫಿ ಅವರಿಗೆ ವರ್ಜ್ಯ. ಅದಕ್ಕೆ ಅವರಲ್ಲಿ ಯಾವ ಕಾರಣಗಳೂ ಇರಲಿಲ್ಲ. ಸ್ವೀಕರಿಸುವುದಕ್ಕೂ ನಿರಾಕರಿಸುವುದಕ್ಕೂ ಕಾರಣಗಳು ಇರಬಾರದು. ಇದ್ದರೂ ಅವು ಕಾರಣಗಳೂ ಎನಿಸಬಾರದು ಎಂಬುದು ಅವರ ನಿಲುವಾಗಿತ್ತು. ವಿನಾಕಾರಣ ಎಂಬುದು ಒಂದು ಅತ್ಯುನ್ನತ ಸಂಬಂಧದ ಚಹರೆ ಎನ್ನುತ್ತಿದ್ದರವರು.

ಅವತ್ತು ಎಷ್ಟು ಬಿಯರ್ ಕುಡಿದೆವೋ. ಮಾಋಕ್ಸ್‌, ಕಮೂ, ನೀಷೆ, ಸಾತ್ರೆ, ಮಾರ್ಕೆಜ್, ಬಿಸ್ಮಾರ್ಕ್, ಚಗುವೇರಾ, ಕಾಫ್ಕಾ ಹೀಗೆ ಎಲ್ಲರೂ ನಮ್ಮ ಮಾತುಗಳಲ್ಲಿ ಬಂದು ಹೋದರು. ಮಾತು ಮಾತಲ್ಲಿ ಪ್ರೊಫೆಸರ್ ಈ ಡ್ರಿಂಕ್ಸ್ ಕಂಡುಹಿಡಿದವನಿಗೆ ದೊಡ್ಡ ಸಲಾಂ ಎಂದು ಎದ್ದು ಕೈಮುಗಿದರು. ಪಬ್‌ನಲ್ಲಿದ್ದವರಿಗೆ ಅದು ವಿಚಿತ್ರವಾಗಿ ಕಂಡಿತು. ಆದರೆ ಅದಕ್ಕೆ ಅಲ್ಲಿನವರ ಮುಗುಳ್ನಗೆ ಮಾತ್ರ ಪ್ರತಿಕ್ರಿಯೆಯಾಗಿತ್ತು. ಆ ನಗೆಯಲ್ಲಿ ಕುಹಕವಾಗಲೀ, ಅಪಹಾಸ್ಯವಾಗಲೀ ಇರಲಿಲ್ಲ. ಇದು ಪ್ರಾಗ್. ನಾನು ತೋಲಾಡುತ್ತಿದ್ದೆ. ಹೀಗಾಗಿ ಪ್ರೊಫೆಸರ್ ಹೇಗಾಗಿದ್ದರೋ ಎಂಬುದು ನನಗೆ ಸ್ಪಷ್ಟವಾಗಲಿಲ್ಲ. ಬಹುಶಃ ಅವರು ತೇಲಾಡುತ್ತಿದ್ದರು.

ನಾನು ಅವರ ಬ್ಯಾಲೆನ್ಸ್ ಬಗ್ಗೆ ಕೇಳಿದೆ. ಇಂಡಿಯಾದಿಂದ ಬಂದವನು ತೋಲಾಡಿದರೆ ಇಲ್ಲಿ ಗಟ್ಟಿಯಾಗಿ ನಿಲ್ಲಲು ಆಗುವುದಿಲ್ಲ ಎಂದು ನಕ್ಕರು. ಸರಿ ಹೊತ್ತಿನಲ್ಲಿ ನಗು. ನನಗೂ ನಗು ತರಿಸಿತು. ಆನಂತರ ಏನಾಯಿತೋ. ನನ್ನ ಕಣ್ಣು ಮಬ್ಬು ಮಬ್ಬು. ಇಷ್ಟೇ ಗೊತ್ತು. ನಾನು ಕಣ್ಣು ತೆರೆದೆ. ಒಂದು ಬೆಳಗಿನ ಜಾವ. ನಾನು ಪ್ರೊಫೆಸರ್ ಬೆಡ್‌ರೂಮ್‌ನಲ್ಲಿದ್ದೆ. ಪಕ್ಕದಲ್ಲೇ ಪ್ರೊಫೆಸರ್. ಮಳೆ ಸುರಿದು ಎಲ್ಲ ತೊಳೆದು ಹೋದ ಬೀದಿಯಂತೆ ಅಂಗಾತ ಮಲಗಿಕೊಂಡಿದ್ದರು. ನನಗೆ ಆ ಕ್ಷಣಕ್ಕೆ ಏನು ಯೋಚಿಸಬೇಕೋ ತಿಳಿಯಲಿಲ್ಲ. ನಡೆದುದ್ದರ ಕುರಿತು ಆಲೋಚಿಸುವುದು ವಿನಾಕಾರಣ ಎನಿಸಿತು. ಮತ್ತೆ ನಾನು ತೆರೆದುಕೊಂಡು ಅವರನ್ನು ಕವುಚಿಕೊಂಡೆ. ಅವರ ಕೈಬೆರಳು ನನ್ನ ನುಣುಪುಗಳ ಮೇಲೆ ಏರುತ್ತ ಜಾರತೊಡಗಿದವು.

*****

ಪ್ರಾಗ್‌ನ ಆ ಮುಂಜಾವು ಕಾಡಿದಷ್ಟು ಬೇರೆ ಯಾವ ಸಂಗತಿಗಳು ನನ್ನನ್ನು ಕಾಡಲಿಲ್ಲ. ಬಹುಶಃ ನನ್ನ ಬದುಕಿನಲ್ಲಿ ಅಂಥ ಮಹತ್ವವಾದವುಗಳು ಘಟಿಸಲಿಲ್ಲ. ಪ್ರೊಫೆಸರ್ ಅಷ್ಟೊಂದು ನನ್ನನ್ನು ಆವರಿಸಿಬಿಟ್ಟಿದ್ದರು. ನನ್ನ ಅಧ್ಯಯನ ಅವಧಿ ಮುಗಿದ ನಂತರವೂ ನಾನು ಅವರೊಟ್ಟಿಗೆ ಕೆಲವು ಕಾಲ ಕಳೆಯಬೇಕಾಯಿತು. ಒಮ್ಮೊಮ್ಮೆ ಅನಿಸುತ್ತದೆ. ನಾನು ಜೊತೆಯಾಗದೇ ಇದ್ದಿದ್ದರೆ ಪ್ರೊಫೆಸರ್ ಇಂಡಿಯಾಕ್ಕೆ ಮರಳುತ್ತಿದ್ದರೋ ಏನೋ. ವಯಸ್ಸಾದ ಜೇಬುನ್ನಿಸಾ ಅವರಿಗೆ ಕೊನೆಗಾಲದ ಸಾಂತ್ವನವಾದರೂ ಸಿಗುತ್ತಿತ್ತು. ಇದು ನನ್ನನ್ನು ಸದಾ ಹಿಂಸಿಸುತ್ತದೆ. ಅವರಿಗೆ ನನಗಿಂತಲೂ ಇಷ್ಟವಾದ ಸಂಗತಿ ಪ್ರಾಗ್ ಆಗಿತ್ತು. ಅದರ ತುಡಿತ ಆಗಿತ್ತು. ಅದನ್ನು ಪ್ರೀತಿಸಿದಷ್ಟು ಅವರು ಮತ್ಯಾರನ್ನೂ ಪ್ರೀತಿಸಲಿಕ್ಕಿಲ್ಲ. ಇದು ಅವರ ಸಾಂಗತ್ಯದಲ್ಲಿ ನಾನು ಕಂಡುಕೊಂಡ ಸತ್ಯ. ಇಲ್ಲದಿದ್ದರೆ ಅವರೇಕೆ ಅಷ್ಟೊತ್ತಿನಲ್ಲಿ ಎದ್ದು ನಾಳೆಯ ಓಡಾಟದ ಕುರಿತು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ನಾಳೆಯ ದಿನ ತನ್ನ ಪ್ರೇಮಿಯ ಮೊದಲನೇ ಭೇಟಿಗೆ ಹೋಗಲು ಹಿಂದಿನ ರಾತ್ರಿಯೇ ಈ ಪರಿ ಸಜ್ಜುಗೊಳ್ಳುವ ಪ್ರೇಮಿಯಂತೆ ಪ್ರೊಫೆಸರ್ ಸಿದ್ಧರಾಗುತ್ತಿದ್ದರು. ಹೋರಾಟ ಅವರ ಬದುಕಿನ ಪ್ರೇಮವಾಗಿತ್ತು. ಅದರ ಆಚೆ ಅವರಿಗೆ ಯಾವ ಪ್ರೇಮಗಳಿರಲಿಲ್ಲ. ಈ ಸಂಗತಿ ನನ್ನನ್ನು ಅವರು ಪ್ರೀತಿಸುತ್ತಿದ್ದಾರೋ ಇಲ್ಲವೋ ಎಂಬ ಅನುಮಾನವನ್ನು ಹುಟ್ಟುಹಾಕುತ್ತಿತ್ತು. ನಾನು ಗೊಂದಲಕ್ಕೆ ಬೀಳುತ್ತಿದ್ದೆ. ತಪಸ್ಸು ಭಂಗಕ್ಕೆಂದು ಬಂದ ಮೇನಕೆ ವಿಶ್ವಾಮಿತ್ರನನ್ನು ಕೂಡಿ ಹೊರಟು ಹೋದಂತೆ ಪ್ರೊಫೆಸರ್ ರಾತ್ರಿ ಕಳೆದು ಮರುಜಾವ ಹೋರಾಟಕ್ಕೆ ಹೋಗಿ ಬಿಡುತ್ತಿದ್ದರು. ಅವರಿಗೆ ನಾನು ಎಷ್ಟರವಳು. ನಾನು ಏನಾಗಬೇಕು? ಬಹುಶಃ ಇನ್ನು ಹತ್ತು ವರ್ಷವಾದರೂ ಪ್ರೊಫೆಸರ್ ಇಂತಹ ಅಪ್ರಬುದ್ಧ ಪ್ರಶ್ನೆಗಳನ್ನು ಕೇಳಿಕೊಳ್ಳಲಾರರು. ಈ ಕಾರಣಕ್ಕಾಗಿ ನಾನು ಸಹ ಅವರ ಪ್ರೇಮವನ್ನು ಪ್ರಶ್ನಿಸಿಕೊಳ್ಳಹೋಗಲಿಲ್ಲ. ಅವರು ಇರುವಂತೆಯೇ ಒಪ್ಪಿಕೊಂಡು ಬದುಕಲು ನಿರ್ಧರಿಸಿದೆ. ಅವರ ಇಂತಹ ನಡೆಗಳೇ ನನ್ನ ಮೆಚ್ಚುಗೆಗೆ ಕಾರಣವಾಗಿರುವುದು ನನ್ನೊಳಗಿನ ಅಚ್ಚರಿ! ನಾನು ಅವರನ್ನು ಯಾವತ್ತೂ ಹೆಸರಿಡಿದು ಕರೆಯಲಿಲ್ಲ. ಪ್ರೊಫೆಸರ್ ಅನ್ನುವುದು ನನಗೆ ಹಿತವೆನಿಸುತ್ತಿತ್ತು. ಅವರು ಪ್ರೊಫೆಸರ್ ಆದ ಕಾರಣಕ್ಕಾಗಿಯೇ ಅವರನ್ನು ಪ್ರಾಗ್ ಉಳಿಸಿಕೊಂಡಿತು. ಇಲ್ಲದಿದ್ದರೆ ನವಾಬರ ವಂಶಸ್ಥರಾದ ಅವರು ಪ್ರಾಗ್‌ಗೆ ಹೇಗೆ ತಾನೆ ಇಷ್ಟವಾಗುತ್ತಿದ್ದರು.

ಅವರ ಕರುಣೆ ಮತ್ತು ಕ್ರೌರ್ಯ ಎರಡನ್ನು ನಿರ್ಧರಿಸಬಲ್ಲದ್ದು ಆ ಕ್ಷಣದ ಕ್ಷಣ. ತಿಳಿದರೆ ಹೀಗೆ, ತಿಳಿಯದಿದ್ದರೆ ಹಾಗೆ. ಆ ದೇವರು ಎಂಬುವವನು ಅರ್ಥವಾಗಬಹುದು. ಈ ನವಾಬರು ಅರ್ಥವಾಗುವುದು ಅಷ್ಟು ಸುಲಭವಲ್ಲ. ನಡುಗುತಿದ್ದ ನನ್ನಜ್ಜನನ್ನು ನೋಡಿ ನವಾಬರು ಫಳ್ಳನೇ ನಕ್ಕಿದ್ದರಂತೆ. ಅಜ್ಜನಿಗೆ ನೆಲವೇ ಹಿಡಿದು ನಡುಗಿಸಿದಂಥ ಅನುಭವ.

ಜೇಬುನ್ನಿಸಾ ವಿಶಾಲ ಹಜಾರದಲ್ಲಿ ಅತ್ತಲಿಂದ ಇತ್ತಲಿಂದ ಭಾರ ಹೆಜ್ಜೆಗಳನ್ನಿಡುತ್ತಾ ತಿರುಗಾಡುತ್ತಿದ್ದರು. ಅವರು ಕುಳಿತು ವಿರಾಮ ತೆಗೆದುಕೊಂಡಿದ್ದನ್ನು ನೋಡಿದವರು ಕಡಿಮೆ. ಅದು ಈ ವಯಸ್ಸಿನಲ್ಲಿ ಈ ಪರಿ ಮನೋದಾರ್ಢ್ಯ ಸಾಧ್ಯವಾಗಿರುವುದರ ಕುರಿತು ನನಗಲ್ಲದೇ ಇತರರಿಗೂ ಆಶ್ಚರ್ಯದ ಸಂಗತಿಯಾಗಿತ್ತು. ದೊಡ್ಡ ಮನೆತನದ ಹೆಂಗಸರು ಯಾವಾಗಲೂ ಮಹಾತ್ವಾಕಾಂಕ್ಷಿಯಾಗಿರುತ್ತಾರೆ. ಅವರ ಭಾರ ಹೆಜ್ಜೆಗಳು ಕಾಲವನ್ನು ನೂಕುವಂತೆ ಒಮ್ಮೊಮ್ಮೆ ಕಾಲವನ್ನು ತಡೆಯುತ್ತಿರುವಂತೆ ತೋರುತ್ತಿತ್ತು. ಕಾಲವು ಯಾರಿಗೂ ಕಾಯುವುದಿಲ್ಲ ಎಂಬ ವಾಸ್ತವವನ್ನು ನಿಯಂತ್ರಿಸುವಂತೆ ರಾಜದಂಡ ಹಿಡಿದು ಪ್ರಭುತ್ವ ಅಸಹಜವಾಗಿ ವರ್ತಿಸಿದೆ. ಅದಕ್ಕೆ ಜೇಬುನ್ನಿಸಾರೂ ಹೊರತಲ್ಲ. ನನ್ನೊಂದಿಗೆ ಎಂದಿಗೂ ಅಷ್ಟಾಗಿ ಮಾತನಾಡಿರದ ಆ ಹೆಂಗಸನ್ನು ಅರ್ಥಮಾಡಿಕೊಳ್ಳುವುದು ಸುಲಭದ ತುತ್ತಾಗಿರಲಿಲ್ಲ. ನಾನು ಅವರೊಂದಿಗೆ ಕಾಲ ಕಳೆಯಬೇಕಾಗಿತ್ತು. ಜೊತೆಗೆ ಕೂತು ಮಾತುಕತೆಯಾಡಬೇಕಿತ್ತು ಎಂದು ಈಗಲೂ ಅನಿಸುತ್ತದೆ. ಆದರೆ ಅವರ ರಾಜ ಗಾಂಭೀರ್ಯ ನನ್ನನ್ನು ಅಳುಕಿಸುತ್ತದೆ. ಅವರು ನನ್ನನ್ನು ಯಾವತ್ತು ಅನುಮಾನದ ದೃಷ್ಟಿಯಿಂದ ನೋಡುತ್ತಾರೆ. ಮರ್ಚಂಟ್‌ರು ಬಂಗುಲೆಗೆ ಬಂದರೆಂದರೆ ಎಷ್ಟೊಂದು ಅಸಹನೆಯಿಂದ ಚಡಪಡಿಸುತ್ತಾರೆ. ಇದು ನನಗೆ ಅಯ್ಯೋ ಪಾಪ ಎನಿಸುತ್ತದೆ. ಮರ್ಚಂಟ್‌ರು ಮನೆಗೆ ಬರದಿರುವಂತೆ ನಾನು ತಡೆಯಬಲ್ಲೆನಾದರೂ ಮನೋಕಾಮನೆಗಳು ಅದನ್ನು ನಿರಾಕರಿಸುತ್ತವೆ. ಬದುಕು ನಮ್ಮ ನಿಯಂತ್ರಣಕ್ಕೆ ನಿಲುಕದ ಚಲನೆ ಎಂಬುದು ನನಗೆ ಅರ್ಥವಾಗಿ ಹೋಗಿದೆ. ಬದುಕಿನ ಮುಂದೆ ನಾನು ಆಫ್ಟರ್ ಆಲ್ ಒಬ್ಬ ನಿಷ್ಪಾಪಿ ಹೆಂಗಸು ಅಷ್ಟೇ. ಮರ್ಚಂಟ್ ಮನೆಗೆ ಬರುತ್ತಾರೆ. ಇಡೀ ಹಜಾರ ಚಡಪಡಿಸುತ್ತದೆ. ನಾನಿಲ್ಲಿ ಒಂದು ನೆಪ ಮಾತ್ರ. ಕಾಲ ಚಲಿಸುತ್ತದೆ. ಬದುಕು ನಿಯಂತ್ರಿಸಲು ಹೆಣಗುತ್ತದೆ. ಈ ಮಧ್ಯೆ ನಾನು ಮತ್ತು ಜೇಬುನ್ನಿಸಾ ಅಮಾಯಕರಂತೆ ನಿಂತಿದ್ದೇವೆ. ಜೇಬುನ್ನಿಸಾ ನನ್ನನ್ನು ಅರ್ಥಮಾಡಿಕೊಳ್ಳಲಿ ಎಂದು ನಾನು ಬಯಸುತ್ತೇನೆ. ಬಹುಶಃ ಅವರೂ ಹಾಗೆ ಯೋಚಿಸುತ್ತಿರಬಹುದು. ನನಗೆ ಅವರು ಅರ್ಥವಾಗುತ್ತಾರೆ. ಆದರೆ ನಾನು ಅವರಿಗೆ ಅರ್ಥವಾಗದೇ ಹೋಗಬಹುದಾದ ಸಾಧ್ಯತೆಗಳನ್ನು ಬದುಕು ಪದೇ ಪದೇ ತಂದೊಡ್ಡುತ್ತಲೇ ಇದೆ. ಇದು ಅವರಿಗೆ ಅರ್ಥವಾಗಲಾರದು. ಎಲ್ಲವನ್ನೂ ಮೀರಿ ನಿಲ್ಲಬಹುದಾದ, ಎಲ್ಲ ತೊರೆದು ಇರಬಹುದಾದ ಹೆಂಗಸಿಗೆ ನಾನು ಎಂಬ ಪಾಮರಳು ಖಂಡಿತವಾಗಿಯೂ ಅರ್ಥವಾಗಲಾರೆ.

ಮಜೀದ್ ಕ್ಯಾಷಲ್‌ನ ಭಾರಕ್ಕಿಂತಲೂ ಭಾರವಾದ ಹೃದವನ್ನಿಟ್ಟುಕೊಂಡು ನಾನು ಬಾಳುತ್ತಿರುವುದನ್ನು ಅವರಿಗೆ ಹೇಳಲು ಆಗುತ್ತಿಲ್ಲ. ಮುಂದೆ ಹೇಳದಲೆ ಹೋಗಬಹುದು. ಅವರು ಅದನ್ನು ನಂಬುತ್ತಾರೋ ಇಲ್ಲವೋ. ನಾನು ಯಾರು ಎಂಬುದನ್ನು ಅಷ್ಟಾಗಿ ವಿಚಾರಿಸಲೂ ಹೋಗಲೇ ಇಲ್ಲ. ಅವರೊಂದಿಗೆ ನಾನು ಇರಲು ಅಷ್ಟು ಸಹಜವಾಗಿ ಒಪ್ಪಿಕೊಂಡುಬಿಟ್ಟರು. ನಾನು ಪ್ರಾಗ್‌ನಿಂದ ಬರುವ ಮುನ್ನ ಅವರೊಂದಿಗೆ ಬಾಂಬೆಯ ನಜ್ಮಾ ಎಂಬ ಚಾಕರಿಯವಳು ಮತ್ತು ಅವಳ ಸಂಸಾರ ಇತ್ತು. ನಾನು ಬಂದ ಕೆಲ ದಿನಗಳಲ್ಲೇ ಅವಳು ಹೊರಟು ಹೋದಳು. ಬೆಳಗ್ಗೆ ಸಂಜೆಗೆ ಚಾಕರಿಗೆಂದು ಬರುವ ಜನರ ಹೊರತಾಗಿ ಅವರಿಗೆ ಯಾರ ಸಾಂಗತ್ಯವೂ ಇರಲಿಲ್ಲ. ಆ ಕೆಲಸದವರು ಕೆಲಸ ಮಾಡುವದಕ್ಕಿಂತ ಹೆಚ್ಚಾಗಿ ಜೇಬುನ್ನಿಸಾರ ಮಾತು ಅವರು ಹೇಳುವ ಕಥೆಗಳನ್ನು ಕೇಳಬೇಕಾಗುತ್ತಿತ್ತು. ಅವು ಅವರ ವ್ಯಥೆಗಳಾದರೂ ಕೆಲಸದ ಜನರು ಅವನ್ನು ಕಥೆಗಳಂತೆ ಕೇಳಿಸಿಕೊಳ್ಳುತ್ತಿದ್ದರು. ಅದೂ ಸಹ ಒಂದು ಚಾಕರಿಯಾಗಿತ್ತು.

ತನ್ನ ಬಾಲ್ಯದಲ್ಲಿ ಸವಣೂರು ಹೇಗಿತ್ತು? ಅದನ್ನು ಅವರು ಎಷ್ಟು ಕಂತುಗಳಲ್ಲಿ ಹೇಳುತ್ತಿದ್ದರು ಎಂಬುದನ್ನು ಚಾಕರಿಯವರು ಹಾಸ್ಯದ ದಾಟಿಯಲ್ಲಿ ಹೇಳಿ ನಗುತ್ತಾರೆ. ನಾನು ಉಷ್..! ಎಂದು ತುಟಿ ಮೇಲೆ ಬೆರಳಿಟ್ಟು ಮೆಲ್ಲಗೆ ಎಂದು ಸನ್ನೆ ಮಾಡುತ್ತೇನೆ. ಅದಕ್ಕೆ ಕೆಲಸದವರು ಅಯ್ಯೋ ಕಿವಿ ಎಂದೋ ಬಿದ್ದು ಹೋಗಿವೆ ಬಿಡಿ ಎಂದು ಗೇಲಿ ಮಾಡುತ್ತಾರೆ. ಆದರೆ ನನಗೆ ಹಾಗೆ ಎನಿಸುವುದಿಲ್ಲ. ಮಲಗಿದ್ದರೂ ಸಹ ತರಗಲೆಯ ಸಪ್ಪಳಕ್ಕೆ ಕಿವಿಕೊಟ್ಟ ಮುದಿಹುಲಿಯಂತೆ ಅವರು ನನಗೆ ತೋರುತ್ತಾರೆ. ಅವರು ತುಂಬಾ ಎಚ್ಚರದ ಹೆಂಗಸು. ಮುದಿತನ ಎಂಬುದು ಅವರ ಅಸಹಾಯಕ ಸ್ಥಿತಿ ಇರಬಹುದು. ಆದರೆ ಎಚ್ಚರಗೇಡಿ ಮನಸ್ಥಿತಿ ಖಂಡಿತಾ ಅಲ್ಲ.

ವಿಶಾಲ ರಸ್ತೆಗಳು, ದೊಡ್ಡ ಚರಂಡಿ ವ್ಯವಸ್ಥೆ, ದೊಡ್ಡ-ದೊಡ್ಡ ಇಮಾರತಿಗಳು, ಕೆರೆಗಳು, ಸ್ಕೂಲ್, ಮೈದಾನ, ಕೋರ್ಟ್, ಕಚೇರಿ, ಸಂತೆಮಾಳ, ಆಸ್ಪತ್ರೆಗಳು, ಮಟನ್ ಮಾರುಕಟ್ಟೆ, ದರ್ಗಾಗಳು ಇಂತಹ ಅದ್ಭುತ ನಿರ್ಮಾಣಗಳನ್ನು ನೋಡುತ್ತಾ ತನ್ನ ಬಾಲ್ಯ ಕಳೆಯಿತು ಎಂಬುದನ್ನು ತುಂಬಾ ರಸವತ್ತಾಗಿ ಜೇಬುನ್ನಿಸಾ ಆಳುಗಳಿಗೆ ಹೇಳುತ್ತಾರೆ. ಆಳುಗಳು ತುಂಬಾ ವ್ಯವದಾನದಿಂದ ಕೇಳುತ್ತಿರುವಂತೆ ನಟಿಸುತ್ತಾರೆ. ಅಂಥದಕ್ಕೆ ಈ ಬೇಗಂ ದಿಲ್‌ಖುಷ್ ಆಗಿ ಏನಾದರೂ ಇನಾಮು ನೀಡುತ್ತಾರೆಂದು ಅವರು ನಿರೀಕ್ಷಿಸುತ್ತಾರೆ.

ಇಲ್ಲಿನ ವಿಳ್ಯದ ಎಲೆ ಕರಾಚಿಗೆ ರಫ್ತಾಗುತ್ತಿತ್ತೆಂದು ಇಲ್ಲಿನ ಬೀಫ್‌ನ್ನು ಬಗ್ದಾದ್‌ನವರು ಮೆಚ್ಚುತ್ತಾರೆಂದು ಇಲ್ಲಿನ ಮೋತಿ ತಲಾಬ್ ಸುತ್ತ ನೂರಾರು ಹಳ್ಳಿಗಳಿಗೆ ನೀರುಣಿಸುತ್ತದೆಂದು ಔರಂಗಜೇಬನ ಮಗಳು ಹೈದರಾಲಿಯ ಮಗಳು ಸವಣೂರಿಗೆ ಸೊಸೆಯರಾಗಿ ಬಂದವರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ತನ್ನ ಕಾಲದ ಮೋತಿ ತಲಾಬ ಖಾಲಿ ಬಿದ್ದಿರುವುದನ್ನು ಕಂಡು ಅವರ ಕಣ್ಣುಗಳು ತುಂಬಿಕೊಳ್ಳುತ್ತವೆ. ಮನುಷ್ಯ ಕುರಿತ ಅನುಕಂಪ ಹೊಂದಿರದೇ ನಾಯಿ ಬೆಕ್ಕಿನಂತ ಪ್ರಾಣಿಗಳ ಕುರಿತ ಮರುಕ ಹೊಂದಿರುವ ಈ ಹೊತ್ತಿನ ರಾಜಕಾರಣಿಗಳ ಕುರಿತು ಅವರು ವಿಷಾದದ ಹೊರತಾಗಿ ಬೇರೆ ಏನನ್ನು ವ್ಯಕ್ತಪಡಿಸಲಾರರು.

ಇಂಡಿಯಾ ಸ್ವಂತಂತ್ರಗೊಂಡ ನಂತರ ಮಜೀದ್ ಖಾನ್‌ರವರು ಎಲ್ಲಾ ತ್ಯಾಗ ಮಾಡಬೇಕಾಯಿತು. ಬಾಂಬೆ ಪ್ರೆಸಿಡೆನ್ಸಿಯಿಂದ ಯಾರಿಗೂ ಇಲ್ಲದ ಮನ್ನಣೆ ಪಡೆದುಕೊಂಡಿದ್ದ ನವಾಬ್ ಇಂದು ಬೀದಿಗೆ ಬಂದಿದ್ದರು. ಅಪರೂಪದ ಆಹಾರ ಹಾಗೂ ಆರ್ಕಿಟೆಕ್ ಬಗ್ಗೆ ಮಜೀದ್ ಖಾನ್‌ರಿಗಿದ್ದ ಅಭಿರುಚಿ ಅಸಾಮಾನ್ಯವಾದದ್ದು. ಅವರಿಗೆ ಅಪರೂಪದ ಗೆಳೆಯರಿದ್ದರು. ಅವರಲ್ಲಿ ಅನೇಕರು ಬ್ರಿಟೀಷರು. ಕುಸಿನ್‌ನ ಸ್ವಾದಿಷ್ಟ ಕೆಬಾಬ್ ಅದರಲ್ಲೂ ಶ್ಯಾಮಿ ಕೆಬಾಬ್, ಗೆಲೊಟಿ ಕೆಬಾಬ್ ಸವಿಯಲೆಂದು ಬ್ರಿಟಿಷ್‌ರು ಬರುತ್ತಿದ್ದರು. ಕೂಡಿ ಉಣ್ಣುವುದು ಅವರಿಗೆ ಅತೀ ಪ್ರಿಯವಾಗಿತ್ತು. ಅಧಿಕಾರದಿಂದ ನಿರ್ಗಮಿಸಿದ ನಂತರ ಅವರೆಲ್ಲರೂ ದೂರವಾದರು. ಸುತ್ತಣ ಮಿತ್ರರೂ ಅಷ್ಟೇ. ಮಜೀದ್‌ಖಾನ್‌ರ ಹೃದಯ ಒಡೆದು ಹೋಗಿತ್ತು. ಅಧಿಕಾರ ಎಂಬುದು ಎಷ್ಟು ಅಸ್ಥಿರವಾದ ಸಂದರ್ಭಗಳನ್ನು ಸೃಷ್ಟಿಸುತ್ತದೆ. ಸಂಬಂಧಗಳು ಎಷ್ಟೊಂದು ಯಾಂತ್ರಿಕ ಎಂದು ಒಬ್ಬ ನವಾಬ ನೆಲದ ಮೇಲೆ ಮಂಡೆಯೂರಿ ಗೋಗರೆದಿದ್ದರು. ಇದಕ್ಕಿಂತ ಅಧಃಪತನ ಮತ್ತೊಂದಿರಲಾರದು. ಅವರ ಕುರಿತು ಆ ಎಳೆ ವಯಸ್ಸಿನ ಹುಡುಗಿಯನ್ನು ಜೋಡಿಸಿ ಹೆಣೆದ ಕಥೆಗಳು ಅವರನ್ನು ಮತ್ತಷ್ಟು ಜರ್ಜರಿತಗೊಳಿಸಿದ್ದವು. ಮೈನರೆತ ಹರಿಣಗಳು ಮೊದಲ ದಿನವೆ ಹಾಸಿಗೆ ಏರಬೇಕು? ನವಾಬ್ ಹಾಗಿದ್ದರೆ? ಅದು ನಿಜವೆನ್ನುವುದಾದರೆ ಅದಕ್ಕಿಂತ ಘೋರ ಯಾವುದೂ ಇರಲಾರದು. ಅದು ಜನರ ಆರೋಪ ಎನ್ನುವದಾದರೆ ಸಮುದಾಯ ಪ್ರಭುತ್ವದ ವಿರುದ್ಧ ತನ್ನ ಕುಠೀಲತೆಯನ್ನು ಮೆರೆದಂತಾಗುತ್ತದೆ. ಬೇಗಂ ರಜಿಯಾ ವಿರುದ್ಧವೂ ದೆಹಲಿಯ ಜನರು ಹೀಗೆ ನಡೆದುಕೊಂಡರು. ಕತ್ತಿ ವರಸೆ ಕುದುರೆ ಸವಾರಿ ಕಲಿಸಲು ಬಂದಿದ್ದ ಅಬಿಸೇನಿಯಾದ ರಾಜಕುವರ ಯಾಕೂತ್ ನೊಂದಿಗೆ ಪ್ರೇಮ ಪಲ್ಲವಿಸುವದೆಂದು ಯಾರು ಭವಿಷ್ಯ ಕಂಡಿದ್ದರು. ಪ್ರೇಮವೆಂಬುದು ಹಾಗೆ ಅದಾಗಿ ಆಗಿ ಬಿಡುತ್ತದೆ. ಆಯಿತು ಅಷ್ಟೇ. ಮುಂದೆ ಆಗಬಾರದ್ದೂ ಆಗಿಹೋಯಿತು. ಚರಿತ್ರೆಯ ಎಲ್ಲ ಪುಟಗಳಿಗೂ ನೆತ್ತರು ಮೆತ್ತಿಕೊಂಡಿದೆ. ಮತ್ತೆ ಪ್ರೇಮಿಗಳಿಗಾಗಿ ನಿತ್ಯ ಅರಳುವ ಗುಲಾಬಿಗಳಿಗೂ ಅಂತದ್ದೆ ಬಣ್ಣ.

ಜನರ ಅಸಹನೆಯ ಕಣ್ಣುಗಳಿಗೆ ಯಾವಾಗಲೂ ಚಾಳೀಸು ತೊಡಿಸಲಾಗಿರುತ್ತದೆ. ನವಾಬರಿಗೆ ಆ ಎಳೆಗರು ಏತಕ್ಕಾಗಿ ಬೇಕಿತ್ತು? ಈ ಆರೋಪದ ಸತ್ಯಾಸತ್ಯತೆ ಹೇಗೆ ನೋಡಿದರೂ ನೋವು ಮಾತ್ರ ಉಳಿಯುತ್ತದೆ. ಸಂತ ಶರೀಪ ಇತ್ತ ಶಾಪದ ಕುರಿತು ಸುತ್ತ ಸಾವಿರ ಹಳ್ಳಿಗಳು ಎಲೆ ಅಡಿಕೆ ಹಾಕಿಕೊಂಡು ಸವಿದು ಉಗುಳಿದವು. ಸವಣೂರಿನ ನೆಲದ ಮೇಲೆ ಉಗುಳಿದ ಕೆಂಪು ಕಲೆಗಳು ರಕ್ತದ ಕಲೆಗಳಿಗಿಂತ ಭಿನ್ನವಲ್ಲ. ತನ್ನ ಪ್ರೀತಿಯ ಸವಣೂರು ತನ್ನನ್ನು ಹೇಗೆ ನಡೆಸಿಕೊಂಡಿತು ಎಂಬ ಖೇದ ಅವರನ್ನು ಮಗುವಿನಂತೆ ಅಳುವಂತೆ ಮಾಡಿತು. ಆ ನಂತರ ಮಜೀದ್ ಧಾರವಾಡದ ಕ್ಯಾಷಲ್‌ಗೆ ಬಂದು ಸೇರಿದರು. ಸೇವಂತಿ ಬೆಳೆವ ತನ್ನ ನೆಲ ಮುಳ್ಳು ಬೆಳೆದು ನಿಂತಿದ್ದು ಹೇಗೆ? ರಾಜ್ಯವಾಳುವ ಅರಸನ ಅರಿವಿಗೆ ಬಾರದಂತೆ ಕೆಲ ಸಂಗತಿಗಳು ಹೊತ್ತಲ್ಲದ ಹೊತ್ತಲ್ಲಿ ಮೊಳಕೆಯೊಡೆದು ನಿಂತುಬಿಟ್ಟಿದ್ದವು. ಈ ಯಾವವೂ ನವಾಬರಿಗೆ ಅರ್ಥವೆ ಆಗಲಿಲ್ಲ. ಇನ್ನು ಯಾವತ್ತೂ ಸವಣೂರಿಗೆ ಹೆಜ್ಜೆ ಇಡುವುದಿಲ್ಲ ಎಂದು ಶಪಥ ಮಾಡಿದರು. ಅದರಂತೆ ನಡೆದುಕೊಂಡರು. ಆದರೆ ಅವರ ಕಳೆಬರಹ ಮಾತ್ರ ಸವಣೂರು ಮಣ್ಣಿನಲ್ಲಿ ಮಣ್ಣಾಯಿತು. ಜೇಬುನ್ನಿಸಾ ದೀರ್ಘ ಉಸಿರೆಳೆದು ಬಿಟ್ಟರು. ಅವರು ಮೊಟ್ಟಮೊದಲು ನನ್ನ ಇದಿರು ಕೂಡಿಸಿಕೊಂಡ ಹೇಳಿದ ಕಥನವಿದು. ಇಂತಹ ಕಥೆಗಳನ್ನು ಅವರು ನಿತ್ಯವೂ ಚಾಕರಿಯವರಿಗೆ ಹೇಳುತ್ತಾರೆ. ಅವರು ಎಷ್ಟು ಕೇಳುತ್ತಾರೋ ಬಿಡುತ್ತಾರೋ. ಅವರು ಹೇಳುವ ಕಥೆಗಳೇ ಅವರನ್ನು ದಾಟಿಸುತ್ತವೆ. ಅವರೊಳಗಿನ ಕಥೆ ಮುಗಿಯುವವರೆಗೂ ಅವರು ಮುಗಿಯುವುದಿಲ್ಲ. ಅವರು ಕೇಳಬೇಕಾದ ಮತ್ತು ನಾನು ಹೇಳಬೇಕಾದ ಒಂದು ಕಥೆ ಮಾತ್ರ ಬಾಕಿ ಇದೆ. ಅದು ಅವರ ಮಗ ಪ್ರೊಫೆಸರ್ ಮುಸ್ತಪಿಜೂರ್ ಕಥೆ.

ಎಲ್ಲವನ್ನೂ ಒಮ್ಮೆ ಹೇಳಿಬಿಡಬೇಕೆನಿಸುತ್ತದೆ. ಎಂದಾದರೂ ಒಮ್ಮೆ ಈ ಭಾರವನ್ನು ಇಳಿಸಿಬಿಡಬೇಕು. ಆದರೆ ಅಷ್ಟು ಬೇಗ ಏಕೆ ಸಾಧ್ಯವಾಗುವುದಿಲ್ಲ. ಈ ಭಾರಕ್ಕೂ ಈ ಹೊರುವಿಕೆಗೂ ಇರುವ ಋಣವಾದರೂ ಎಂಥದ್ದು? ತನ್ನೆಲ್ಲ ಕಥೆಗಳನ್ನು ಒಂದೊಂದೆ ಖಾಲಿ ಮಾಡುತ್ತಿರುವ ಜೇಬುನ್ನಿಸಾರಿಗೆ ಮತ್ತೊಂದು ಕಥೆಯನ್ನು ಹೊರಿಸುವುದು ನನ್ನಿಂದ ಆಗುತ್ತಿಲ್ಲ. ಅವರ ಎಲ್ಲ ಕಥೆಗಳಿಗಿಂತ ಇದೂ ಇನ್ನೂ ಭಾರ.

*****

ಪ್ರಾಗ್‌ನಿಂದ ಮಜೀದ್ ಕ್ಯಾಷಲ್‌ಗೆ ಬಂದ ನನ್ನ ಬಳಿ ಇದ್ದದ್ದು ಪ್ರೊಫೆಸರ್‍ರೊಂದಿಗಿನ ನಾಲ್ಕು ಆಪ್ತ ಫೋಟೊಗಳು ಮತ್ತು ಅವರ ಕಥೆ ಮಾತ್ರ. ನನ್ನ ಪರಿಚಯ ಜೇಬುನ್ನಿಸಾರಿಗೆ ಅಷ್ಟೆ. ನಾನು ಯಾತರವಳು, ಎಲ್ಲಿಯವಳು ಯಾವುದನ್ನೂ ಕೇಳಲಿಲ್ಲ. ಇಲ್ಲಿಗೇಕೆ ಬಂದೆ ಎಂಬುದು ಮಾತ್ರ ಅವರಿಗೆ ಸ್ಪಷ್ಟವಾಗಿತ್ತು. ನಾನು ಅವರ ಮಗನ ಗೆಳತಿಯೋ, ಸಂಗಾತಿಯೋ, ಸಖಿಯೋ ಮತ್ತಿನ್ಯಾವುದಾದರೋ? ಈ ಯಾವೂ ಅವರಿಗೆ ಬೇಕಿರಲಿಲ್ಲ. ಒಂದು ಫೋಟೊ ಏನೆಲ್ಲಾ ಹೇಳಬಹುದೋ ಅದನ್ನು ಅವರು ಅರ್ಥ ಮಾಡಿಕೊಂಡಿದ್ದರು. ಪಿಜೂರ್ ಯಾವಾಗ ಬರ್ತಾನಂತೆ? ಎಂದು ಕೇಳಿದ್ದರು. ಅವರ ಪ್ರಶ್ನೆಗೆ ಸಾಕಷ್ಟು ಸುಧಾರಿಸಿಕೊಳ್ಳಬೇಕಾಯಿತು. ನಾನು ತುಸು ತಡೆದು ಉತ್ತರಿಸಿದೆ. ನಂತರ ಅವರು ಹಲವಾರು ದಿನಗಳವರೆಗೆ ಆ ಪ್ರಶ್ನೆ ಕೇಳಲಿಲ್ಲ. ಅವರ ಮಗನ ಕುರಿತು ಮತ್ತೆ ಏಕೆ ಕೇಳುತ್ತಿಲ್ಲ ಎಂಬುದು ನನ್ನನ್ನು ಪ್ರತಿನಿತ್ಯ ಕಾಡುತ್ತಿದೆ.

*****

ಕೆಲವು ದಿನಗಳ ನಂತರ ನಾನು ನನ್ನ ಕೋಣೆಯಿಂದ ಪ್ರೊಫೆಸರ್ ಮನೆಗೆ ಶಿಫ್ಟ್ ಆಗಿದ್ದೆ. ನಾನು ಸೋಸಿಯಲಿಸ್ಟ್ ಆಗಿರುವುದರಿಂದ ನಿನಗೂ ಅಪಾಯ, ನೀನು ಇಲ್ಲಿರುವುದು ಅಷ್ಟು ಕ್ಷೇಮವಲ್ಲ ಅಂದಿದ್ದರು. ಅವರದು ದೊಡ್ಡ ಮನೆ. ಔಟ್‌ಹೌಸ್‌ನಲ್ಲಿ ಕೆಲಸದವರಿದ್ದಾರೆ. ಆ ಮನೆಗೆ ಎರಡನೆಯವರ ದಿಕ್ಕಿಲ್ಲ. ನಾನು ಅಲ್ಲಿರುವುದು ಬಿಡುವುದು ಕಷ್ಟದ ಇಷ್ಟದ ಪ್ರಶ್ನೆ ಮಾತ್ರ ಆಗಿರಲಿಲ್ಲ. ಯುರೋಪಿನ ಸಣ್ಣ ರಾಷ್ಟ್ರಗಳನ್ನು ಕಾಡುತ್ತಿರುವ ಇಜಂನ ಪ್ರಶ್ನೆಯಾಗಿತ್ತು. ನನಗೆ ಅವರ ಸಾಂಗತ್ಯ ಬೇಕಿತ್ತು. ಉಳಿದಿದ್ದು ನನಗೆ ಸಮಸ್ಯೆಯಾಗಿ ಕಾಣಲಿಲ್ಲ. ಬಹುಶಃ ಅವರು ಹೇಳುವುದು ನನಗೆ ಸಮಸ್ಯೆಯಾಗಿ ತೋರಲಿಲ್ಲ.

ಇದೆಲ್ಲ ಬಿಟ್ಟು ಬಿಡಿ, ಪ್ರಾಗ್‌ನಲ್ಲಿ ಅನೇಕ ಹೋರಾಟಗಾರರಿದ್ದಾರೆ.. ಎಂದೆ ಅಳುಕಿನಿಂದಲೇ. ಅವರು ಸಿಡುಕಬಹುದೆಂದು ನನ್ನನ್ನು ಎಷ್ಟು ಕ್ಷುಲ್ಲಕದವಳೆಂದು ಹೀಯಾಳಿಸಬಹುದೆಂದು ನಾನು ನಿರೀಕ್ಷೆ ಮಾಡಿದ್ದೆ. ಆದರೆ ಹಾಗಾಗಲಿಲ್ಲ. ಜಗತ್ತಿನ ಯಾವ ಮೂಲೆಯಲ್ಲಿ ಶೋಷಣೆಯಾಗುತ್ತದೋ ಅಲ್ಲಿ ನಿನ್ನ ಧ್ವನಿಯೆತ್ತು, ನೀನು ನನ್ನ ಸಂಗಾತಿ.. ಎಂದು ಚೆಗುವೆರಾ ಹೇಳಿದ ಮಾತನ್ನು ಪುನರುಚ್ಚರಿಸಿ ಅರ್ಥಗರ್ಭಿತವಾಗಿ ಪ್ರೊಫೆಸರ್ ನೋಡಿದರು. ಅವರೇನೆಂದು ಅರ್ಥವಾಗಿ ಹೋಗಿತ್ತು. ಬಹುಶಃ ನಾನೆಂದೂ ಇಂಥ ಪ್ರಶ್ನೆಯನ್ನು ಮಾಡಲಾರೆ ಎಂದು ನಿರ್ಧರಿಸಿದೆ. ಯಾರ ಕಷ್ಟವೇ ಆಗಿರಲಿ. ಅದು ಮನುಷ್ಯನೊಬ್ಬನ ಕಷ್ಟ ಎಂಬುದನ್ನು ಅವರ ಸಾಂಗತ್ಯ ಅರ್ಥಮಾಡಿಸಿದೆ. ಅವರಿಗೆ ಪ್ರಾಗ್ ಕೊಟ್ಟಿದ್ದು ಏನು? ಎಂದು ನಾನು ಎಷ್ಟೋ ಬಾರಿ ಯೋಚಿಸಿದ್ದೇನೆ. ಹೀಗೆ ಯೋಚಿಸುತ್ತಾ ನಮ್ಮಿಬ್ಬರ ರಮ್ಯ ಸಂಜೆಗಳನ್ನು ನಡು ಮಧ್ಯಾಹ್ನವಾಗಿಸಿಕೊಂಡಿದ್ದೇನೆ. ನಾವು ಏನು ಬಯಸಿ ಬಂದೆವೋ ಅದು ಸಿಕ್ಕಾಗಲೂ ಮನುಷ್ಯ ಮತ್ತೊಂದು ಹುಡುಕಾಟದಲ್ಲಿ ತೊಡಗಿಬಿಡುತ್ತಾನೆ. ನನ್ನ ಕುರಿತು ನನಗೆ ಹೀಗೆ ಅನಿಸಲು ಶುರುವಾಗಿತ್ತು. ಹೀಗಾದಾಗ ಗ್ರೌಂಡ್‌ಫ್ಲೋರ್‌ಗೆ ಹೋಗಿ ಕೂತು ಬಿಡುತ್ತಿದ್ದೆ. ಅದೊಂದು ಥರ ಧ್ಯಾನ. ಮತ್ತೊಂದು ವಿಧದ ಭಂಗ. ಈ ಎರಡನ್ನೂ ಒಟ್ಟೊಟ್ಟಿಗೆ ಅನುಭವಿಸಬಹುದಾಗಿತ್ತು.

ಅಲ್ಲೆಲ್ಲಾ ರ್ಯಾಕ್ ತುಂಬಿಕೊಂಡಿರುವ ಚೆಲ್ಲಾಪಿಲ್ಲಿಯಾಗಿ ಟೇಬಲ್ ಮೇಲೆ ಬಿದ್ದಿರುವ ಕಮ್ಯುನಿಸಂ, ಸೋಷಿಯಲಿಸಂ ಪುಸ್ತಕಗಳು. ಪ್ರೊಫೆಸರ್ ಓದುತ್ತಾ ಒಮ್ಮೊಮ್ಮೆ ಅಲ್ಲಿಯೇ ನಿದ್ದೆಗೆ ಹೋಗಿಬಿಡುತ್ತಿದ್ದರು. ಅವರ ಕನಸಿಗಾದರೂ ಜೇಬುನ್ನಿಸಾ ಬರುವುದಿಲ್ಲವೇ? ಅಥವಾ ಅವರ ಯೋಚನೆಗಳಲ್ಲಿ ತಾಯಿ ಇಲ್ಲವೇ.. ಐ ಥಿಂಕ್ ದೇರ್‌ಫೋರ್ ಐ ಯ್ಯಾಮ್ ಎನ್ನುವ ಅಪಾರ ನಂಬಿಕೆ ಹೊಂದಿರುವ ಪ್ರೊಫೆಸರ್. ತಾಯಿ ಕುರಿತು ಯೋಚಿಸದೆ ಇರುತ್ತಾರೆಯೆ? ಆದರೂ ಎಂಥಹ ಕರ್ಮಟ ಜೀವ ಇದು ಎನಿಸಿತು.

*****

ಸದಾ ಉತ್ಸಾಹದಿಂದ ಇರುತ್ತಿದ್ದ ಪ್ರೊಫೆಸರ್ ಆ ಒಂದು ದಿನ ಬಳಲಿದಂತೆ ಕಂಡರು. ಆದರೆ ಅದು ದೈಹಿಕ ಬಳಲಿಕೆ ಆಗಿರಲಿಲ್ಲ. ನನಗೆ ಅದು ಸ್ಪಷ್ಟವಾಯಿತು. ಬಂದು ಇದಿರು ನಿಂತರು. ಕಣ್ಣಲ್ಲಿ ಯಾವ ಕಾಂಕ್ಷೆ ಇರಲಿಲ್ಲ. ತುಪ್ಪಳದ ಬೆಕ್ಕನ್ನು ಬಾಚುವಂತೆ ಬಾಚಿ ನನ್ನನ್ನು ಅಪ್ಪಿಕೊಂಡರು. ಅದು ಅರ್ಥಕ್ಕೆ ನಿಲುಕದ ಅಪ್ಪುಗೆಯಾಗಿತ್ತು. ತನ್ನೆದೆಯ ಎಲ್ಲ ಮಾತುಗಳನ್ನು ನನ್ನೆದೆಗೆ ದಾಟಿಸುವಂತೆ ಅನಾಮತ್ತಾಗಿ ಅಪ್ಪಿಕೊಂಡರು. ಆ ಪುಟ್ಟ ಎದೆಯಲ್ಲಿ ಹೆಪ್ಪುಗಟ್ಟಿರುವ ಏನೆಲ್ಲವೂ ನನಗೆ ತಾಕತೊಡಗಿದ್ದವು. ಮನುಷ್ಯ ಹತಾಶನಾದಾಗ ಪ್ರೀತಿ ಮಮತೆಗಳನ್ನು ಎರಡೂ ಕೈಯಿಂದ ಬಾಚಿ ಬಾಚಿ ಕುಡಿಯುತ್ತಾನೆ. ನಾನು ಅವರ ತಲೆಯನ್ನು ನೇವರಿಸುತ್ತಲಿದ್ದೆ. ಏನೊಂದನ್ನು ಕೇಳ ಹೋಗಲಿಲ್ಲ. ಅದು ಅನುಚಿತವಾಗಿತ್ತು. ಎಷ್ಟೊತ್ತಾದರೂ ಹೀಗೆ ಮುಗಿಯದ ಕಡಲು ನಿಲುಕದ ಮುಗಿಲು ನೋಡುತ್ತಾ ಅಂಗಾತ ವಿರಮಿಸಬಹುದಾಗಿತ್ತು. ಅವರ ಪಾಲಿಗೆ ಅಂತಹ ಕಡಲು ನಾನು. ಹೀಗೆ ಅವರಿಗೆ ಪಾತ್ರವಾಗುವುದು ನನಗೆ ಮಾತ್ರ ಸಾಧ್ಯವಿತ್ತು. ನಾನು ಸುಖಿ. ಪರಮ ಸುಖಿ.
ಒಂದೇ ಸಮನೆ ಫೋನ್ ರಿಂಗಣಿಸತೊಡಗಿತು. ಆ ಶಬ್ದ ನಮ್ಮ ಅಪ್ಪುಗೆಯನ್ನು ಸಡಿಲಿಸಿತು. ಉದ್ವೇಗದಿಂದ ಹೋಗಿ ಪ್ರೊಫೆಸರ್ ಫೋನ್ ಎತ್ತಿಕೊಂಡರು. ಆ ಕಡೆಯಿಂದ ಬಾತ್ಮಿದಾರರು ಒಂದೊಂದೆ ಮಾಹಿತಿಯನ್ನು ಹೇಳತೊಡಗಿದರು. ಪ್ರೊಫೆಸರ್ ಕೈಕೈ ಹಿಸುಕಿಕೊಳ್ಳುತ್ತಾ ಅತ್ತಿತ್ತ ತಿರುಗಾಡತೊಡಗಿದರು. ಒಮ್ಮೆಲೆ ಸೋಫಾ ಮೇಲೆ ಕುಸಿದು ಕುಳಿತರು. ಒಂದು ಬಾರಿ ಅವರ ದೇಹ ಸಣ್ಣದಾಗಿ ಕಂಪಿಸಿತು. ನಾನು ನಡುಗಿ ಹೋದೆ. ಓಡಿ ಹೋದವಳೇ ಅವರ ಮೊಣಕಾಲು ಮೇಲೆ ಕೈಯೂರಿ ಕುಳಿತು ಮುಖ ಹಿಡಿದು ನೋಡಿದೆ. ಕಣ್ಣುಗಳಲ್ಲಿ ಭಯ. ಮೊದಲ ಬಾರಿ ಅವರು ಇಷ್ಟು ಭಯಭೀತರಾಗಿದ್ದರು. ಏನು ಎನ್ನುವಂತೆ ಮುಖ ನೋಡಿದೆ. ಅವರು ಉತ್ತರಿಸ ಹೋಗಲಿಲ್ಲ. ತುಟಿ ಕಚ್ಚಿ ಮುಷ್ಠಿ ಬಿಗಿ ಮಾಡಿ ಏನೊಂದನ್ನು ನಿಯಂತ್ರಿಸಲಾಗದ ಹೋರಾಟಗಾರರ ಹತಾಶ ಪ್ರಶ್ನೆಯಾಗಿ ಪ್ರೊಫೆಸರ್ ನನ್ನೆದರು ಕೂತಿದ್ದರು. ಮತ್ತೆ ಫೋನು ರಿಂಗಾಯಿತು. ಅದು ಪದೇ ಪದೇ ಆತಂಕದ ಸುದ್ದಿಗಳನ್ನು ಹೊತ್ತು ತರುತ್ತಲೇ ಇತ್ತು.

ಪ್ರೆಸಿಡೆಂಟರ್ ಸಭೆ ಇನ್ನೂ ಮುಗಿದಿಲ್ಲ. ರಾತ್ರಿ ಹನ್ನೆರಡು, ಇನ್ನೂ ಸಭೆ ನಡೆಯುತ್ತಿದೆ..! ಈ ಭಾರಿ ಮತ್ತೆ ನಡುಗಿದರು. ನನಗೆ ಒಮ್ಮೆಲೆ ಭಯ ಆವರಿಸಿತು. ಅವರ ಮೊಣಕಾಲುಗಳನ್ನು ಬಿಗಿಯಾಗಿ ಹಿಡಿದು ಚೀರಿದೆ. ನನ್ನನ್ನು ಸಮಾಧಾನಿಸುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ನಾನು ಚೀರತೊಡಗಿದೆ. ಮತ್ತೆ ಫೋನು ರಿಂಗಾಗತೊಡಗಿತು. ಅದೇ ಸುದ್ದಿ. ಪ್ರೆಸಿಡೆಂಟ್ ಇನ್ನೂ ಸಭೆ ನಡೆಸುತ್ತಿದ್ದಾರೆ.. ಪ್ರೊಫೆಸರ್ ಒಮ್ಮಿಂದೊಮ್ಮಿಲೆ ಅವಡುಗಚ್ಚಿ ಎದ್ದು ನಿಂತರು. ಎಷ್ಟೇ ದೃಢವಾಗಿ ನಿಲ್ಲಲು ಪ್ರಯತ್ನಿಸಿದರಾದರೂ ಅವರು ಕುಸಿದು ಬೀಳತೊಡಗಿದರು. ನಾನು ನನ್ನ ಬಲವನ್ನೆಲ್ಲಾ ಹಾಕಿ ಗಟ್ಟಿಯಾಗಿ ಅಪ್ಪಿಕೊಂಡೆ. ಪ್ರೊಫೆಸರ್ ವಿಲಕ್ಷಣವಾಗಿ ನಕ್ಕರು. ಅದು ನನ್ನನ್ನು ಮತ್ತಷ್ಟು ಭಯಭೀತಳನ್ನಾಗಿಸಿತು.

ಮನುಷ್ಯನಷ್ಟು ಅವಿವೇಕಿ ಪ್ರಾಣಿ ಮತ್ತೊಂದಿಲ್ಲ. ತನ್ನ ಬೆವರು ವಾಸನೆಯೇ ತನ್ನದೆಲ್ಲಾ ಎಂದು ವಾದಿಸುತ್ತಾನೆ. ಮತ್ತು ನಂಬಿಸುತ್ತಾನೆ. ಒಂದು ಮಣ್ಣ ವಾಸನೆಗೆ ಹಲವು ಬಣ್ಣ ಕಟ್ಟುತ್ತವೆ. ಈ ಹಪಹಪಿ ಮನುಷ್ಯನೊಳಗಿನ ಬ್ರಹ್ಮರಾಕ್ಷಸ. ಅವನು ಯಾವತ್ತೂ ಸಾಯುವುದಿಲ್ಲ-ಹೀಗೆ ತೊದಲುತ್ತಾ ಬಡಬಡಿಸತೊಡಗಿದ ಪ್ರೊಫೆಸರ್‌ರ ಕಣ್ಣು-ಕಿವಿ ಫೋನಿನತ್ತಲೇ ನೆಟ್ಟಿದ್ದವು. ಈ ಸಂದರ್ಭಗಳಲ್ಲೂ ಆ ಕಡೆಯ ಸುದ್ದಿ ಏನಿರಬಹುದೆಂಬ ಆತಂಕ ಅವರಿಗಿತ್ತು. ಕಾನ್ಸಂಟ್ರೇಷನ್ ಕ್ಯಾಂಪ್‌ನಲ್ಲಿರುವ ಮಿಲಿಯಗಟ್ಟಲೇ ಖೈದಿಗಳು, ಹತ್ತೆಗೈದವರು.. ಈ ಗೋಳು ಎಂದು ಮುಗಿಯುತ್ತದೋ? ಈ ಸಂದರ್ಭದಲ್ಲಿ ಪ್ರೊಫೆಸರ್‌ರ ಆತಂಕ ಕಡಿಮೆಯಾಗಿಸಲು ಒಂದು ಯೋಚನೆ ಹೊಳೆಯಿತು. ಅವರೊಂದಿಗೆ ಬೆರೆಯಬೇಕಿನಿಸಿತು. ಆ ದಿಗಿಲನ್ನು ತಣಿಸಲು ನನಗೆ ಬೇರೆ ಉಪಾಯಗಳಿರಲಿಲ್ಲ. ಆ ಸಂದರ್ಭದಲ್ಲಿ ಹೀಗೆ ಎನಿಸುವುದು ವಿಚಿತ್ರವೇನಲ್ಲ. ಆದರೆ ನಾವಿಬ್ಬರು ಮೂವ್‌ಮೆಂಟ್‌ಗಳಲ್ಲಿ ಮುಳುಗಿ ಹೋಗಿ ಅದೆಲ್ಲವದನ್ನು ಮರೆತು ಅದೆಷ್ಟೋ ಕಾಲವಾಗಿತ್ತು. ಕೂಟವೆಂಬುದು ನಮಗೆ ಅಪರೂಪವಾಗಿತ್ತು. ಆದರೆ ಪ್ರೊಫೆಸರ್‍ರನ್ನು ಅದಕ್ಕೆ ಆಹ್ವಾನಿಸುವುದಕ್ಕೆ ಧೈರ್ಯ ಸಾಲಲಿಲ್ಲ. ನಾನು ಅವರ ಪ್ರೇಮಿ ಮಾತ್ರವಲ್ಲದೆ ಮತ್ತೇನೊ ಆಗಿಹೋಗಿರುವದು ನನಗೆ ಅರ್ಥವಾಗತೊಡಗಿತು. ನಾನು ಕಮ್ಯುನಿಷ್ಟಳಾಗಿಯೂ ನನಗೆ ಗೊತ್ತಿಲ್ಲದಂತೆ ಮೂವ್‌ಮೆಂಟ್‌ಗಳ ಭಾಗವಾಗಿ ಹೋಗಿದ್ದೆ.
ಪ್ರೆಸಿಡೆಂಟರ್ ಸಭೆ ಮುಗಿದ ನಂತರ ರಷ್ಯನ್ ಟ್ಯಾಂಕರ್‌ಗಳು, ಏರ್‌ಕ್ರಾಫ್ಟ್‌ಗಳು ಪ್ರಾಗ್‌ನ್ನು ಸುತ್ತುವರೆಯಬಹುದಾಗಿತ್ತು. ನಿದ್ದೆ ಬರುತ್ತಿಲ್ಲ. ಕಣ್ಣು ಕೆಂಪಾಗಿ ಬಾತುಕೊಂಡಿವೆ. ರೇಡಿಯೋ ಆತಂಕದ ಸುದ್ದಿಗಳನ್ನು ಬಿತ್ತರಿಸತೊಡಗಿತ್ತು. ಪ್ರೆಸಿಡೆಂಟ್‌ರ ಸಭೆ ಮುಗಿದಿತ್ತು. ಅವರು ನಿರ್ಣಯ ತೆಗೆದುಕೊಂಡಿದ್ದರು. ರಷ್ಯಾದ ಏರ್‌ಕ್ರಾಫ್ಟ್‌ಗಳು ಪ್ರಾಗ್‌ನ ನೆತ್ತಿಯ ಮೇಲೆ ಹಾರಾಡತೊಡಗಿದವು. ಯುದ್ಧ ಟ್ಯಾಂಕರ್‌ಗಳು ಸುತ್ತುವರೆಯತೊಡಗಿದವು. ಯಾವ ಕ್ಷಣದಲ್ಲಾದರೂ ಶೆಲ್ ದಾಳಿ ಆಗಬಹುದಾಗಿತ್ತು. ಅಣ್ವಸ್ತ್ರ ಹೊಂದಿರುವ ರಷ್ಯಾ ಯಾವ ಸಂದರ್ಭದಲ್ಲಿ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಯಾರು ಬಲ್ಲರು? ಅದಕ್ಕೆ ಯುದ್ಧದ ಉಮೇದೇರಿ ಊಹಿಸಿಕೊಳ್ಳಲು ಆಗದ ಆತಂಕ ಇಡಿಯಾಗಿ ಆಳತೊಡಗಿತ್ತು. ಪ್ರೊಫೆಸರ್ ಹಾಗೆಯೇ ಕುಳಿತಲ್ಲಿಯೇ ಕುಳಿತಿದ್ದರು. ನನಗೆ ರೆಪ್ಪೆ ಹೇಗೆ ಮುಚ್ಚಿದವೊ ತಿಳಿಯಲಿಲ್ಲ.

ಬೆಳಗಿನ ಐದರ ಜಾವ. ಗಡಗಡ ಸದ್ದು. ಇಲ್ಲೋ ಎಲ್ಲೋ ಯುದ್ಧ ಟ್ಯಾಂಕರ್‌ಗಳು ಸುತ್ತುವರೆಯುತ್ತಿವೆ. ಪ್ರೆಸಿಡೆಂಟ್‌ರ ಆದೇಶಕ್ಕಾಗಿ ಕಾಯುತ್ತಿವೆ. ಏನು ಆದೇಶ ಹೊರಡುವದೋ. ಕೆಲ ಸಮಯದ ನಂತರ ಬೂಟಿನ ಸದ್ದು ಕೇಳಿಬರತೊಡಗಿತು. ಡೆಮೊಕ್ರೆಟಿಕ್ ರಿಫಾರ್ಮ್ ಪ್ರೊಟೆಸ್ಟ್‌ನಲ್ಲಿ ಪಾಲ್ಗೊಂಡವರ ನೆಲೆ ಪತ್ತೆ ಹಚ್ಚತೊಡಗಿದ್ದರು.

ದಬದಬ ಸದ್ದಾಗತೊಡಗಿತು. ಇಲ್ಲೆ ಸುತ್ತಲೂ ಸೈನಿಕರ ಹಿಂಡು, ಬೂಟಿನ ಸದ್ದು, ಭೂಮಿಯೇ ನಡುಗಿದಂತೆ. ದಪದಪ ಮಾರ್ಚಿಂಗ್, ಎದೆಯೊಳಗೆ ಕಾಲು ಇಟ್ಟು ನಡೆದಂತೆ. ಪುಟ್ಟ ಎದೆಯಲ್ಲಿ ಎಂತಹ ನಡುಕ ಉಂಟಾಯಿತು. ಮತ್ತೆ ದಬದಬ ಶಬ್ದ. ನಾನು ನೆಲಮಾಳಿಗೆಯಲ್ಲಿದ್ದೆ. ಅದು ಬೇರೆ ಎಲ್ಲೋ ಕೇಳಿಬರುತ್ತಿರುವ ಸದ್ದಾಗಿರದೇ ನಮ್ಮ ಮನೆಯ ಕದ ತಟ್ಟುತ್ತಿರುವ ಶಬ್ದ ಎಂದು ತಿಳಿದು ದಿಗಿಲುಬಿದ್ದೆ. ದಡ ದಡ ಮೆಟ್ಟಿಲೇರಿ ಮೇಲೆ ಬಂದೆ. ಪ್ರೊಫೆಸರ್ ದೃಢವಾಗಿ ಕುರ್ಚಿ ಬಿಗಿಹಿಡಿದು ಕೂತಿದ್ದಾರೆ. ಪರಿಸ್ಥಿತಿ ಏನೆಂದು ತಿಳಿಯುವಷ್ಟರಲ್ಲಿ ಕದ ಮುರಿದು ಬಿತ್ತು. ನಾನು ಚೀರಿದೆ. ಪ್ರೊಫೆಸರ್ರನ್ನು ಓಡಿ ಹೋಗಿ ತೆಕ್ಕೆ ಬಡಿದೆ. ಅವರ ಚೆಂಡನ್ನು ಎರಡು ತೋಳುಗಳಲ್ಲಿ ಗಟ್ಟಿಯಾಗಿ ಹಿಡಿದೆ. ಸೋಲ್ಜರ್ಸ್ ಅವರನ್ನು ದರದರನೇ ಎಳೆದು ಎತ್ತಿಕೊಂಡು ಹೋದರು. ನಾನು ಕೂಗಿದೆ. ಪ್ರೊಫೆಸರ್ ಒಂದು ಬಾರಿಯಾದರೂ ತಿರುಗಿ ನೋಡುತ್ತಾರೆಂದು ಚೀರಿಕೊಂಡೆ. ಅವರನ್ನು ಕಾನ್ಸಂಟ್ರೇಷನ್ ಕ್ಯಾಂಪದದಗೆ ಕರೆದೊಯ್ಯುತ್ತಾರೆಂಬ ಸತ್ಯ ನನ್ನನ್ನು ನಡುಗಿಸಿತು. ನಾನು ಚೀರುತ್ತಲೇ ಇದ್ದೆ. ನಡೆಯುತ್ತಿರುವುದು ನಡೆಯುತ್ತಲೇ ಇತ್ತು. ಮತ್ತೆ ಚೀರಿದೆ. ಪ್ರೊಫೆಸರ್.. ಅವರು ತಿರುಗಿ ನೋಡುತ್ತಿಲ್ಲ. ಹಾಗೆ ನೋಡಿ ನನ್ನನ್ನು ಅಧೀರಗೊಳಿಸುವದು ಅವರಿಗೆ ಇಷ್ಟವಿರಲಿಕ್ಕಿಲ್ಲ. ಅಥವಾ ಹತಾಶೆ ಮತ್ತು ಆಕ್ರೋಶಗೊಂಡಿರುವ ವ್ಯಕ್ತಿಗಳು ಹೀಗೆ ನಡೆದುಕೊಳ್ಳುತ್ತಾರೆಯೆ? ನಾನು ಹಿಂದಿಂದೆ ಓಡಿದೆ ಪ್ರೊಫೆಸರ್ ಎಂದು ಮತ್ತೆ ಚೀರಿದೆ. ಅದರ ಹೊರತಾಗಿ ನನಗೆ ಮತ್ತೇನು ಮಾಡಲೂ ಸಾಧ್ಯವಿರಲಿಲ್ಲ. ನನ್ನ ಪ್ರೊಫೆಸರ್‌ ಇನ್ನು ಕಾನ್ಸಂಟ್ರೇಷನ್ ಕ್ಯಾಂಪ್‌ನಲ್ಲಿ ಇರಬೇಕು. ಅದು ನರಕ. ನೆನೆಸಿಕೊಳ್ಳುತ್ತಿದ್ದಂತೆ ಕರಳು ಕಿತ್ತು ಬಂತು. ಎಲ್ಲ ಶಕ್ತಿ ಒಗ್ಗೂಡಿಸಿ ಚೀರಿದೆ. ನನ್ನ ಆ ಚೀರಿಕೆಗೆ ಆ ಸೊಲ್ಜರ್ ನಿಂತು ಬಿಟ್ಟರು. ಪ್ರೊಫೆಸರ್‌ ನಿಧಾನ ಕತ್ತು ಹೊರಳಿಸಿ ನೋಡಿದರು. ಕೊನೆಯದಾಗಿ ನೋಡುವಂತೆ. ಆ ಕಣ್ಣಲ್ಲಿ ನೀರು ತೇಲಿದಂತೆ.. ಪ್ರೊಫೆಸರ್‌ ನ್ನು ಹೊತ್ತ ವ್ಯಾನ್ ಹೊರಟಿತು. ನಾನು ಸಂಕಟದಿಂದ ಒದ್ದಾಡತೊಡಗಿದೆ. ಕಾಲು ನಿತ್ರಾಣಗೊಂಡು ಕುಸಿದೆ.

ನನ್ನನ್ನು ಸಹ ಯಾವತ್ತಾದರೂ ಬಂಧಿಸಿ ಕರೆದೊಯ್ಯಬಹುದಾಗಿತ್ತು. ಆದರೆ ಪ್ರೊಫೆಸರ್‌ಗಾಗಿ ಕಾಯುತ್ತಿರುವ ಆ ತಾಯಿಗೆ ಸುದ್ದಿ ಮುಟ್ಟಿಸುವರ್ಯಾರು? ಮಗ ಬರುತ್ತಾನೆಂಬ ನಿರೀಕ್ಷೆ ಇಟ್ಟುಕೊಂಡು ಅವರು ಸತ್ತು ಹೋಗಬಾರದು. ಅವರು ನಿರಾಳವಾಗಿ ಸತ್ತು ಹೋಗಬೇಕು. ಒಂದು ನಿರೀಕ್ಷೆ ಅಷ್ಟು ದೀರ್ಘವಾಗಬಾರದು. ಒಂದು ಜೀವ ಎಷ್ಟು ಬೇಯಬೇಕು, ಬೆಂದು ಆನಂತರವೂ ಬೇಯವುದು ಹೇಯವಲ್ಲದೇ ಮತ್ತೇನು? ಪ್ರೊಫೆಸರ್ ಅವರ ತಾಯಿ ಬಗ್ಗೆ ಹೇಳಿಕೊಂಡಿದ್ದು ತೀರಾ ಅಪರೂಪ. ಬಹುಶಃ ಅವರಿಗೆ ಹೇಳಿಕೊಳ್ಳುವ ಸಂದರ್ಭವೆ ಒದಗಿ ಬರಲಿಲ್ಲ. ತನ್ನನ್ನು ಮೆಚ್ಚಿಕೊಂಡಿರುವ ವಿದ್ಯಾರ್ಥಿ ಸಮೂಹದ ಡೆಮೊಕ್ರೆಟಿಕ್ ರಿಫಾರ್ಮ್‌ ಮೂವ್‌ಮೆಂಟ್‌ಗೆ ಒಂದು ತಾರ್ಕಿಕ ಅಂತ್ಯ ಹಾಡಬೇಕು ಎಂಬ ಅವರ ಮಹಾತ್ವಾಕಾಂಕ್ಷೆ ನನಗೆ ಯಾವತ್ತು ಬೆರಗು. ಮಹಾನ್ ವ್ಯಕ್ತಿಗಳು ಹೀಗೆ ಇರುತ್ತಾರೆ.

ನಂತರದ ದಿನಗಳಲ್ಲಿ ಪ್ರಾಗ್ ಬದಲಾಯಿತು. ದುಬ್ಛೇಕ ಆಡಳಿತಕ್ಕೆ ಬಂದಿದ್ದರು. ಅವರದೊಂದು ಥರ ಸಾಫ್ಟ್ ಕಮ್ಯುನಿಸಂ. ತನ್ನ ಸರ್ಕಾರವನ್ನು ಅವನು ಕಮ್ಯುನಿಸಂ ವಿತ್ ಹ್ಯುಮನ್ ಪೇಸ್ ಎಂದು ಕರೆದುಕೊಂಡ. ಯುದ್ಧ ಕೈದಿಗಳನ್ನು ಬಿಡುಗಡೆಗೊಳಿಸಿದ. ಇತ್ತ ಕಾನ್ಸಂಟ್ರೇಷನ್ ಕ್ಯಾಂಪ್‌ನಲ್ಲಿರುವವರಿಗೂ ಮುಕ್ತಿ ದೊರಕತೊಡಗಿತು. ಆದರೆ ಪ್ರೊಫೆಸರ್ ಏನಾದರು. 1968 ರ ದಾಳಿಯಲ್ಲಿ 137ಕ್ಕೂ ಹೆಚ್ಚು ಜನ ಸತ್ತಿದ್ದರು. ಅದು ಒಂದು ಸರ್ಕಾರ ನೀಡುವ ಲೆಕ್ಕ ಅಷ್ಟೇ.

ಪ್ರೊಫೆಸರ್ ಇರುವಿನ ಬಗ್ಗೆ ಸರ್ಕಾರದ ಮಟ್ಟದಲ್ಲಿ ವಿಚಾರಣೆಗೆ ಒತ್ತಡಗಳು ಹೆಚ್ಚಾಗತೊಡಗಿದವು. ಸ್ಟೂಡೆಂಟ್ ಫೆಡರೇಶನ್ ಕೆಲಸ ಮಾಡತೊಡಗಿತು. ಸರ್ಕಾರ ನೀಡಿದ ಅಂಕಿ ಸಂಖ್ಯೆಗಳು ವಾಸ್ತವದಲ್ಲಿ ಏರುಪೇರಾಗಿದ್ದವು. ಎಲ್ಲ ಮಾಹಿತಿಯನ್ನು ಬಹಿರಂಗಪಡಿಸುವುದು ದುಬ್ಛೇಕನ ಸರ್ಕಾರಕ್ಕೆ ಕಂಟಕ ತರುವಂತದ್ದಾಗಿತ್ತು. ಅದು ರಷ್ಯಾದ ಕಮ್ಯುನಿಸ್ಟ್‌ ಪಾರ್ಟಿ ಬೆಂಬಲಿತ ಸರ್ಕಾರವಾಗಿತ್ತು. ಆದರೂ ದುಬ್ಛೇಕ ಇರುವವರೆಗೂ ಪ್ರೊಫೆಸರ್ ಮಾಹಿತಿ ಬಗ್ಗೆ ವಿಶ್ವಾಸ ಇಡಬಹುದಾಗಿತ್ತು. ಆದರೆ ಎರಡು ವರ್ಷಗಳಲ್ಲಿ ದುಬ್ಛೇಕ ಸ್ಥಾನ ಕಳೆದುಕೊಳ್ಳಬೇಕಾಯಿತು. ಆ ಸ್ಥಾನಕ್ಕೆ ಗುಸ್ತಾವೊ ಹ್ಯೂಸೆಕ್ ಬಂದು ಕೂತಿದ್ದ. ಆ ನಂತರ ಪ್ರೊಫೆಸರ್ ಮಾಹಿತಿಯ ಕುರಿತು ಒತ್ತಡಗಳು ಕಡಿಮೆಯಾಗತೊಡಗಿದವು. ವಿದ್ಯಾರ್ಥಿ ಫೆಡರೇಶನ್‌ಗಳು ಸಪ್ಪಗಾಗತೊಡಗಿದವು. ಪ್ರೊಫೆಸರ್ ಕಾನ್ಸಂಟ್ರೇಶನ್ ಕ್ಯಾಂಪ್‌ನಿಂದ ಪರಾರಿಯಾಗಿರಬಹುದೆಂಬ ವದಂತಿಗಳನ್ನು ವಿದ್ಯಾರ್ಥಿ ಸಂಘಟನೆಗಳು ತೇಲಿ ಬಿಟ್ಟು ತಾವು ಹಗುರಾಗುವಷ್ಟು ಹತಾಶರಾಗಿದ್ದರು. ಮಜೀದ್‌ಖಾನ್ ನವಾಬರನ್ನು ಸವಣೂರು ಹೇಗೆ ನಡೆಸಿಕೊಂಡಿತ್ತೋ ಪ್ರಾಗ್ ಸಹ ಪ್ರೊಫೆಸರ್ ನವಾಬರನ್ನು ಹಾಗೆಯೇ ನಡೆಸಿಕೊಂಡಿತ್ತು.

ಕ್ಯಾಂಪ್‌ನಿಂದ ಇಬ್ಬರು ಖೈದಿಗಳು ತಪ್ಪಿಸಿಕೊಂಡು ಪೋಲೆಂಡ್ ತಲುಪಿರುವ ಬಗ್ಗೆ ಜೆಕ್ ಸರ್ಕಾರದ ಮುಂದೆ ವರದಿಯೊಂದು ಬಂದಿತು. ಅಲ್ಲದೇ ಮತ್ತೆ ಇಬ್ಬರು ಇಲ್ಲವೇ ಒಬ್ಬರು ಅವರೊಂದಿಗೆ ಹೋಗಿರಬಹುದಾದ ಸಾಧ್ಯತೆಗಳನ್ನು ಸರ್ಕಾರ ಚರ್ಚಿಸತೊಡಗಿತ್ತು. ಇದು ಪ್ರೊಫೆಸರ್‌ರ ಕುರಿತು ಒಂದು ಆಶಾಭಾವನೆಯನ್ನು ಇಟ್ಟುಕೊಳ್ಳುವಂತದ್ದಾಗಿತ್ತು. ಪ್ರೊಫೆಸರ್ ತಪ್ಪಿಸಿಕೊಳ್ಳಬಲ್ಲಂತಹ ಸಾಹಸಿಗರೇ? ಅವರೊಳಗಿನ ಹೋರಾಟಗಾರ, ಅವರೊಳಗಿನ ನವಾಬ ಪೋಲೆಂಡ್‌ವರೆಗೆ ನಡೆಸಿಕೊಂಡು ಹೋದನೇ? ಈ ಚರ್ಚೆಗಳನ್ನು ನಾನು ಯಾರೊಂದಿಗೆ ಮಾಡುವದಿತ್ತು. ನನ್ನ ಗೊಂದಲಗಳನ್ನು ಯಾರೊಂದಿಗೆ ಹಂಚಿಕೊಳ್ಳಬೇಕು. ಅನುದಿನದ ಸಂಕಟವಾಗಿ ಪ್ರೊಫೆಸರ್‌ ನನ್ನೊಳಗೆ ಕನಲುತ್ತಲೆ ಇದ್ದರು. ಆದರೆ ಪ್ರೊಫೆಸರ್‌ ಬದುಕಿರಬಹುದಾದ ಸಾಧ್ಯತೆಗಳನ್ನು ನಾನು ಬಲವಾಗಿ ನಂಬಿದ್ದೆ. ಆ ನಂಬುಗೆಯಲ್ಲೆ ನಾನು ಉಸಿರಾಡಲು ಬಯಸಿದೆ.

ಇತ್ತೀಚೆಗೆ ನಾನು ಏಕಾಂಗಿಯಾಗಿ ಹೋಗಿದ್ದೆ. ಲೇಬರ್ ಯೂನಿಯನ್‌ನವರು, ಸ್ಟೂಡೆಂಟ್ ಫೆಡರೇಶನ್‌ನವರು ಮನೆಯತ್ತ ಬರುವುದನ್ನು ಕಡಿಮೆಗೊಳಿಸಿದ್ದರು. ನನಗೆ ಪ್ರೊಫೆಸರ್‌ರ ಅನುಪಸ್ಥಿತಿಯಲ್ಲಿ ಜೇಬುನ್ನಿಸಾ ಬಹುವಾಗಿ ಕಾಡತೊಡಗಿದ್ದರು. ನಾನು ಇಂಡಿಯಾಕ್ಕೆ ಮರಳಬೇಕಾಯಿತು.

*****

ಅವತ್ತು ಜೇಬುನ್ನಿಸಾ ಊಟವನ್ನು ನಿರಾಕರಿಸಿದ್ದರು. ಅವರಿಗೆ ನನ್ನೊಂದಿಗೆ ಮಾತಿಗಿಳಿಯಬೇಕಿತ್ತು. ನಾನು ಆತಂಕಕ್ಕೊಳಗಾದೆ. ಅವರು ಏನು ಕೇಳುತ್ತಾರೋ ಅದಕ್ಕೆ ಏನು ಉತ್ತರಿಸವುದೋ ಎಂಬ ಆತಂಕವದು. ಈವರೆಗೆ ಏನೊಂದೂ ಹೇಳದಿರುವ ನಾನು ನಿಜಕ್ಕೂ ಅಪರಾಧಿ. ಅವರ ದೃಷ್ಟಿಯಲ್ಲಿ ಏನಾಗುತ್ತೇನೆ. ನಾನು ಹೋಗಿ ಅವರ ಮೊಳಕಾಲುಗಳ ಮೇಲೆ ಎರಡೂ ಕೈಯೂರಿ ಕುಳಿತೆ. ಅರೆತೆರೆದ ಕಣ್ಣುಗಳನ್ನು ಪೂರ್ಣ ಬಿಟ್ಟ ಅವರು ಕರುಣಾಮಯಿಯಂತೆ ಕಂಡರು. ಮೊಟ್ಟ ಮೊದಲ ಬಾರಿ ತಲೆ ನೇವರಿಸಿದರು. ನಾನು ಊಟದ ತಟ್ಟೆ ಮುಂದೆ ಹಿಡಿದೆ. ಅವರು ತಲೆ ಅಲ್ಲಾಡಿಸಿದರು.

ಘೋಷ್ಭಾ ತಿನ್ನದೇ ಎಷ್ಟು ವರ್ಷಗಳಾದವು.. ಇದು ಅವರ ಬಾಯಿಂದ ಹೊರಬಿದ್ದ ಮಾತು. ಇಲ್ಲಿನವರಿಗೆ ಮಾಡಲು ಬರುವುದಿಲ್ಲ. ನಿನಗೆ ಘೋಷ್ಭಾ ಬರುತ್ತೆಯೇ- ಕೇಳಿದರು. ಏನು ಹೇಳುವುದು? ನಾನು ಬೀಫ್ ತಿನ್ನುವುದಿಲ್ಲ ಅಂತಾ ಹೇಳಲೆ? ಅಂತಾ ಜಾತಿಯವಳು ಅಲ್ಲಾ ಅಂತಾ ಹೇಳಲೇ? ತಿನ್ನುವುದು ತಿನ್ನದಿರುವುದು ಜಾತಿಗಳನ್ನು ನಿರ್ಧರಿಸುತ್ತದೆಯೇ?

ನನ್ನ ಮೌನ ಕಂಡ ಜೇಬುನ್ನಿಸಾ-ಈ ಮುದಿ ವಯಸ್ಸಿನ ಬಯಕೆಗಳು ಯಾವ ಬಸರಿಯ ಬಯಕೆಗಿಂತ ಕಡಿಮೆಯವು ಅಲ್ಲಾ ಎಂದು ನಸುನಕ್ಕರು. ಆ ನಗೆ ಕಂಡು ಎಷ್ಟು ಕಾಲವಾಗಿತ್ತು. ಎಂತಹ ಜೀವನ ಪ್ರೀತಿ ಅದು. ನವಾಬರ ಹಾಗೂ ಮಗನ ಯಾತನೆಯನ್ನು ಸದಾ ಎದೆಯಲ್ಲಿಟ್ಟುಕೊಂಡು ಜೀವಿಸುತ್ತಿದ್ದ ಜೇಬುನ್ನಿಸಾ ಎಲ್ಲರಿಗೂ ಸಿಡಿಮಿಡಿಯವರಾಗಿಯೇ ಕಾಣುತ್ತಿದ್ದರು. ಚಾಕರಿಯವರ ಹಾಸ್ಯಕ್ಕೂ ತುತ್ತಾಗಿದ್ದರು. ಬದುಕಿನ ತಾತ್ಕಾಲಿಕತೆ ಎಂಥೆಂಥವರನ್ನು ಹೇಗೆ ಧರೆಗಿಳಿಸಿಬಿಡುತ್ತದೆ.

ಆಗಲಿ.. ಮಾಡಿಕೊಡುತ್ತೇನೆ. ಆದರೆ ಕಲಿಯಲು ಕೆಲ ದಿನಗಳು ಬೇಕಾಗಬಹುದೆಂದು ಹೇಳಿ ಅವರ ತಲೆ ನೇವರಿಸಿದೆ. ನನಗೆ ಹಾಗೆ ಮಾಡಬೇಕೆನಿಸಿತು. ಬೇಗಂ ಸಾಹೀಬಾ ಸೂರ್ಯ ಕಿರಣ ತಾಕಿದ ಮೊಗ್ಗು ಅರಳಿ ಹೂವಾಗುವಂತೆ ಕೈ ಮೈಚೆಲ್ಲಿ ಆರಾಮ ಖುರ್ಚಿಯಲ್ಲಿ ಅಂಗಾತವಾದರು.

ಅವರಿಗೆ ಸರ್ಕಾರವು ಗೋಹತ್ಯೆ ನಿಷೇಧ ಕಾಯಿದೆ ಮಾಡಿರುವುದನ್ನು ಹೇಳಲು ಮನಸ್ಸು ಬರಲಿಲ್ಲ. ಗೋಮಾಂಸ ಸಿಗುವುದಿಲ್ಲ ನಿಜ. ಆದರೆ ಅದನ್ನು ತರಿಸಿಕೊಳ್ಳುವುದು ನಮ್ಮಂಥವರಿಗೆ ಕಷ್ಟದ್ದೇನಲ್ಲ. ಅದು ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂಬುದು ನಿಜವಾದರು ಯಾವುದನ್ನೂ ಉಲ್ಲಂಘಿಸದೇ ಏನನ್ನೂ ಅಪೇಕ್ಷಿಸಲು ಸೃಷ್ಟಿಸಲು ಸಾಧ್ಯವಾಗುವುದಿಲ್ಲ. ಪ್ರೊಫೆಸರ್ ಯಾವುದೋ ಸಂದರ್ಭದಲ್ಲಿ ಹೇಳಿದ ಮಾತುಗಳು ನೆನಪಿಗೆ ಬರತೊಡಗಿದವು. ರಾಜಪ್ರಭುತ್ವದ ಉಲ್ಲಂಘನೆ ಕಮ್ಯುನಿಸಂ, ಕಮ್ಯುನಿಸಂನ ಉಲ್ಲಂಘನೆಯೆ ಸೋಷಿಯಲಿಸಂ. ಸೋಷಿಯಲಿಸಂನ ಉಲ್ಲಂಘನೆಯಾದರೆ ಅದು ಡೆಮೊಕ್ರಸಿ, ಹೀಗೆ ನೀನು ನಿನ್ನನ್ನು ಉಲ್ಲಂಘಿಸದೇ ನನ್ನವಳಾಗಲು ಸಾಧ್ಯವಿಲ್ಲ.. ಎಂಥಹ ವಿಚಾರಗಳನ್ನು ಪ್ರೊಫೆಸರ್ ಹೇಳಿದ್ದರು. ಮಗ ಹೇಳಿದ ಮಾತುಗಳು ಅವನು ಎಲ್ಲೋ ಇದ್ದ ಕಾಲಕ್ಕೂ ತಾಯಿಗೆ ಸಲ್ಲುವ ಘಳಿಗೆಗೆ ತಾನು ಸಾಕ್ಷಿಯಾಗುತ್ತಿರುವುದು ಬದುಕು ನೀಡುವ ಅಚ್ಚರಿ ಎನಿಸಿತು.

ಒಂದು ಜೀವದ ಬಹುಕಾಲದ ಆಸೆಯನ್ನು ನಿರಾಸೆಗೊಳಿಸುವುದು, ಒಂದು ಮಮಕಾರಕ್ಕೆ ಎರವಾಗುವದು ಕಾಯಿದೆಗೆ ಸಾಧ್ಯವಿರಲಿಲ್ಲ. ಹಾಗೊಂದು ವೇಳೆ ಆಗಿದ್ದಾದರೆ ಅದು ಕಾಯ್ದೆ ಎಸುಗುವ ಹೇಯ ಅಷ್ಟೇ. ನನಗೆ ಘೋಷ್ಭಾ ಕಲಿಯಬೇಕಿತ್ತು. ಅದಕ್ಕೆ ಮತ್ತೆ ಮರ್ಚಂಟ್‌ರ ನೆರವು ಬೇಕಿತ್ತು. ನಾನು ಅವರೊಂದಿಗೆ ಬಾಂಬೆಯ ಟ್ರೇನ್ ಹತ್ತಿದೆ. ಬಹುಶಃ ಜೇಬುನ್ನಿಸಾ ಮತ್ತಷ್ಟು ಚಡಪಡಿಸಬಹುದು ಅಂದುಕೊಂಡಿದ್ದೆ. ಆದರೆ ಅವರು ನಮ್ಮನ್ನು ಬೀಳ್ಕೊಟ್ಟಾಗ ನಮ್ಮಿಬ್ಬರಿಗೂ ಆಶ್ಚರ್ಯ ಎನಿಸಿತು. ಘೋಷ್ಭಾ ನವಾಬರಿಗೆ ಅತ್ಯಂತ ಪ್ರಿಯವಾದ ಖಾದ್ಯವಾಗಿತ್ತು. ಅದರಲ್ಲೂ ನವಾಬ್ ಮಜೀದ್‍ಖಾನ್, ಜೇಬುನ್ನಿಸಾ ಅವರಿಗೆ ಅತೀ ಪ್ರಿಯವಾದ ಖಾದ್ಯ ಪರ್ಷಿಯಾದಿಂದ ಬಂದಿದ್ದ ಬಾವರ್ಚಿಗಳು ಕ್ಯೂಸಿನೊದಲ್ಲಿ ಅಪರೂಪದ ಖಾದ್ಯಗಳನ್ನು ತಯಾರಿಸಿಕೊಡುತ್ತಿದ್ದರು. ಆ ಬಗ್ಗೆ ಪ್ರೊಫೆಸರ್ ಎಂದಿಗೂ ನನ್ನೊಂದಿಗೆ ಹೇಳಿಕೊಂಡಿರಲಿಲ್ಲ. ಜೆಕ್‌ನಲ್ಲಿ ಘೋಷ್ಭಾ ಸಿಗುವುದೂ ಇಲ್ಲ. ಘೋಷ್ಭಾದೊಂದಿಗೆ ನವಾಬ್ ಮಜೀದ್‍ಖಾನ್, ಫಿಜೂರ್, ಜೇಬುನ್ನಿಸಾರಿಗೆ ಜೊತೆಯಾಗುತ್ತಾರೆ.

ಅವರಿಗೆ ಕೂಡಿ ಉಂಡ ಸುಖದ ಘಳಿಗೆಗಳು ಮರುಕಳಿಸುತ್ತವೆ. ಮಗ ಮರಳಿ ಬಂದ ಸುಖವನ್ನು ಘೋಷ್ಭಾ ಒಬ್ಬ ತಾಯಿಗೆ ನೀಡುವುದಾದರೆ ನಾನು ಘೋಷ್ಭಾ ಕಲಿತು ಅವರಿಗೆ ಉಣಬಡಿಸುವಲ್ಲಿ ಇರುವ ಬದುಕಿನ ಸಾರ್ಥಕತೆ ಮತ್ತೊಂದು ಇರಲಾರದು ಎನಿಸಿತು. ಆದರೆ ಜೀವಮಾನದಲ್ಲಿ ಎಂದಿಗೂ ಬೀಫ್ ಸೇವಿಸದ ನಾನು ಅವರಿಗಾಗಿ ಏನಾದರೂ ಮಾಡಲು ಸಿದ್ಧಳಿದ್ದೆ.

ಮಗ ಒಂದು ದಿನ ಬರುತ್ತಾನೆ. ಜೊತೆಯಾಗಿ ನಾವು ಘೋಷ್ಭಾ ತಿನ್ನಬಹುದು. ನವಾಬರನ್ನು ಸ್ಮರಿಸಿಕೊಳ್ಳಬಹುದು ಎಂದು ಜೇಬುನ್ನಿಸಾ ಕನಸು ಕಾಣುತ್ತಾರೆ. ಮಗ ಎಲ್ಲೋ ಯಾವುದೋ ಸ್ಟೇಟ್‌ನಲ್ಲಿ ನನಗಾಗಿ ಬದುಕುತ್ತಿದ್ದಾನೆ, ಬದುಕಿದ್ದಾನೆ, ತನ್ನ ದೇಶದಲ್ಲಿ ಇಂದಿಗೂ ಘೋಷ್ಭಾ ತನಗಾಗಿ ತನ್ನಂಥವರಿಗಾಗಿ ತಯಾರಿಸಲಾಗುತ್ತಿದೆ ಎಂಬ ಅತೀತದಲ್ಲಿ ಜೇಬುನ್ನಿಸಾ ಬದುಕುತ್ತಿದ್ದಾರೆ. ಯಾವುದೇ ವ್ಯಕ್ತಿಯನ್ನು ಅವನ ಅತೀತದಿಂದ ಆಚೆ ತರುವುದು ಪಾಪ ಎನಿಸಿತು. ಅವನು ವಾಸ್ತವಕ್ಕಿಂತ ತನ್ನ ಅತೀತದಲ್ಲಿ ಹೆಚ್ಚು ಸುಖಿಯಾಗಿರುತ್ತಾನೆ. ಪ್ರೊಫೆಸರ್ ಕಥೆಯು ಎಂದಿಗೂ ಯಾರಿಗೂ ಹೇಳದ ಕಥೆಯಾಗಿಯೇ ಉಳಿಯಲಿ. ನಾನು ಜೇಬುನ್ನಿಸಾಳ ದೃಷ್ಟಿಯಲ್ಲಿ ಅಪರಾಧಿಯಾದರೂ ಚಿಂತೆಯಿಲ್ಲ ಎಂದು ನಿರ್ಧರಿಸಿದೆ.

*****

ಅದು ಒಂದು ಮಳೆಗಾಲದ ಮುಂಜಾವು.ಜೇಬುನ್ನಿಸಾ ಹಜಾರದಲ್ಲಿ ಖುರ್ಚಿಯಲ್ಲಿ ಅಂಗಾತ ಮಲಗಿದ್ದಾರೆ. ಸೂರ್ಯನ ಕಿರಣಗಳು ಹಾಸುಗಲ್ಲಿನ ಮೇಲೆ ಬಿದ್ದು ಪ್ರತಿಫಲಿಸಿ ಅವರ ಮುಖವನ್ನು ಬೆಳಗುತ್ತಿದ್ದವು.

ನಾನು ಬಟ್ಟಲು ಹಿಡಿದು ಅವರ ಮುಂದೆ ಬಂದು ಕುಳಿತೆ.ಅವರ ಎರಡೂ ಮುಂಗಾಲುಗಳ ಮೇಲೆ ನನ್ನೆರಡು ಕೈಯಿಟ್ಟು ಮುಖ ಎತ್ತಿ ನೋಡಿದೆ.ಪ್ರೊಫೆಸರ್‍ನ್ನು ಆ ಕೊನೆಯ ದಿನ ಹೀಗೆ ನೋಡಿದ್ದೆ.ತುಸು ಹೊತ್ತು ಹಾಗೆಯೇ ಕುಳಿತೆ.ಜೇಬುನ್ನಿಸಾ ಏಕೋ ಶಾಂತವಾಗಿದ್ದಾರೆನಿಸಿತು. ನನಗೆ ಅವರನ್ನು ನಿದ್ದೆಯಿಂದ ಎಚ್ಚರಿಸುವ ಮನಸ್ಸಾಗಲಿಲ್ಲ.ಅವರ ಹಸ್ತ ತೆಗೆದುಕೊಂಡು ಕೈಯಲ್ಲಿಟ್ಟುಕೊಂಡೆ.ತಂಪಾದ ಚರ್ಮ.ಯಾಕೋ ಯಾವುದೆ ಚಲನವಿಲ್ಲ ಎನಿಸಿತು.ಇಳಿ ವಯಸ್ಸು ಹಾಗೆ ಕುಳಿತರೂ ದೇಹಕ್ಕೆ ದಣಿವು ಎನಿಸುತ್ತದೆ. ಸ್ವಲ್ಪ ಹೊತ್ತು ಹಾಗೆ ನೋಡುತ್ತ ಕುಳಿತೆ.ಆ ಗುಳಿ ಬಿದ್ದ ಕಣ್ಣುಗಳು.ನರೆತ ಕೂದಲು ವಿಶಾಲ ಹಣೆ ನೀಳ ಮೂಗು.. ರಾಜಮನೆತನದ ಹೆಂಗಸು ತನ್ನ ಇಳಿವಯಸ್ಸಿನಲ್ಲೂ ಅಂತದ್ದೆ ಖದರು ಉಳಿಸಿಕೊಂಡಿರುತ್ತಾಳೆ.

ತುಸು ಸಮಯದ ನಂತರ ಘೋಷ್ಭಾದ ಪರಿಮಳಕ್ಕೋ ಏನೋ ಅವರಿಗೆ ಎಚ್ಚರವಾಯಿತು.ನಾನು ಅವರ ಮೊಳಕಾಲು ಮಂಡೆಯ ಮೇಲೆ ಹಾಗೆ ಮಗುವಿನಂತೆ ಮಲಗಿರುವುದನ್ನು ಕಂಡ ಅವರ ಕಣ್ಣುಗಳು ಅರಳಿದವು.ತನ್ನೆಲ್ಲ ಮುಖದ ಗೆರೆಗಳನ್ನು ನಿವಾರಿಸಿಕೊಳ್ಳುವಂತೆ ಜೇಬುನ್ನಿಸಾ ಮುಖ ಅರಳಿಸಿದರು. ಅವರಿಗಾದ ಅಪರಿಮಿತ ಆನಂದವನ್ನು ನಾನು ಗುರುತಿಸಿದೆ.ನಾನು ಅವರ ಪ್ರೀತಿಗೆ ಪಾತ್ರವಾಗತೊಡಗಿದ್ದೆ.ಘೋಷ್ಭಾದ ಬಟ್ಟಲನ್ನು ಅವರ ಮುಂದೆ ಹಿಡಿದೆ.ಅವರು ಹಬೆಯಾಡುತ್ತಾ ಪರಿಮಳ ಸೂಸುತ್ತಿದ್ದ ಆ ದೇವ ಭಕ್ಷ್ಯವನ್ನು ತನ್ನೆರಡೂ ಕೈಗಳಿಂದ ಹಿಡಿದುಕೊಂಡು ನನ್ನನ್ನು ಕಣ್ತುಂಬಿಕೊಳ್ಳತೊಡಗಿದರು.ಬಟ್ಟಲು ಹಿಡಿದುಕೊಂಡೆ ಎರಡೂ ಹಸ್ತಗಳನ್ನು ಅಗಲಿಸಿ ಅಲ್ಲಾಹುವನ್ನು ನೆನೆದರು.ಹಾಗೆಯೇ ಬಟ್ಟಲಲ್ಲಿ ಕೈಯಿಟ್ಟು ಮೊದಲ ತುತ್ತು ಹಿಡಿದರು.

ನಮ್ಮ ಬಂಗುಲೆಯಲ್ಲಿ ಘೋಷ್ಭಾದ ಮೊದಲ ತುತ್ತು ಯಾವತ್ತಿಗೂ ಫಿಜೂರ್‍ನಿಗೆ..ಎನ್ನುತ್ತಾ ಮೇಲೆ ನೋಡಿದರು.ಅಲ್ಲಿ ದಯಾಮಯನಾದ ಅಲ್ಲಾಹು, ನವಾಬರು ಮತ್ತು ಫಿಜೂರ್‍ರೊಂದಿಗೆ ವಿಹರಿಸತೊಡಗಿದಂತೆ ಕಾಣತೊಡಗಿದರು. ಸ್ವಲ್ಪ ಹೊತ್ತಿನವರೆಗೆ ಆ ದೂರದಲ್ಲಿ ಚಿತ್ತ ನೆಟ್ಟ ತೆರೆದ ಕಣ್ಣುಗಳು ಹಾಗೆ ಇದ್ದವು.ತೆರೆದ ಬಾಯಿ ತೆರೆದಂತೆ,ತುತ್ತು ಹಿಡಿದ ಕೈ ಹಾಗೆ ಚಾಚಿಕೊಂಡು ಇತ್ತು. ನಾನು ಆ ದಿವ್ಯ ಅನುಭೂತಿಗೆ ಸಾಕ್ಷಿಯಾಗಿ ನೋಡುತ್ತಲೆ ಕುಳಿತೆ.ಸ್ವಲ್ಪ ಸಮಯ ಕಳೆಯಿತು.ನನಗೆ ಅವರು ಘೋಷ್ಭಾ ತಿನ್ನುತ್ತ ಖುಷಿಪಡುವದನ್ನು ಕಾಣುವ ಹಂಬಲ.ನಾನು ಆ ಕ್ಷಣಗಳಿಗೆ ಕಾತುರದಿಂದ ನೋಡುತಿದ್ದೆ.

ಸ್ವಲ್ಪ ಸಮಯದ ನಂತರ ನನ್ನತ್ತ ಕಣ್ಣು ಹೊರಳಿಸಿ ನೋಡಿ -ನಮ್ಮ ಬಂಗುಲೆಯಲ್ಲಿ ಘೋಷ್ಭಾದ ಮೊದಲ ತುತ್ತು ಯಾವತ್ತಿಗೂ ಫಿಜೂರ್‍ನಿಗೆ.. ಮತ್ತೆ ಅದೇ ಮಾತನ್ನು ಅವರು ಪುನರುಚ್ಛರಿಸಿದರು.ಅವರೆದೆಯಲ್ಲಿ ಮಗನ ನೆನಪು ಕರಗತೊಡಗಿತ್ತು.ಅದು ಕಣ್ಣಲ್ಲಿ ತುಳುಕತೊಡಗಿತು.ಹಿಡಿದ ತುತ್ತನ್ನು ಯಾವಾಗ ಬಾಯಿಗಿಟ್ಟುಕೊಳ್ಳುತ್ತಾರೋ ಎಂದು ನಾನು ತವಕಿಸುತ್ತಿದ್ದೆ.

ಮೊದಲ ತುತ್ತು ಯಾವಾಗಲೂ ಫಿಜೂರ್‍ನಿಗೆ.. ಮತ್ತೆ ಅದೆ ಮಾತು ಹೇಳುತ್ತ ಆ ಜೀವ ಹಿಡಿದ ತುತ್ತನ್ನು ನಿಧಾನವಾಗಿ ನನ್ನ ಬಾಯಿಗೆ ಹಿಡಿದರು.