ಅಮೃತದ ಖಾಲಿ ಬಟ್ಟಲು ಹಿಡಿದು

ಓ ದೇವರೆ
ಇವಳ ಮೊಲೆಗೊಂದಿಷ್ಟು ಭವ್ಯತೆಯ ತುಂಬು
ಕಣ್ಣ ಹಸಿವಿಗೆ ಒಡ್ಡಿಕೊಂಡಿವೆ ಅವು
ಕ್ರೂರ ದಾಹವ ಸಂತೈಸುತ್ತಿವೆ

ಯಾವ ನೆರಳು ತಾಕದ ಆ ಮೊಲೆಗಳ ಮೇಲಿನ ನಿನ್ನ ಕರುಣೆ
ಸಾಕು ಬಿಡು
ಕಂಚುಕ ಅದರ ಮೇಲಿನ ಹಾಸು
ಗಾಳಿ ಮಳೆ ಬಿರುಬಿಸಿಲಿಗೆ
ತೆರೆದಿದ್ದನು
ಎಂದಾದರೂ ಕಂಡಿದ್ದಿಯಾ

ಆ ಹಾಲು ಹಸುಳೆಯ ವಂಚಿಸಿದೆ
ಹೆಪ್ಪಿಟ್ಟರೂ ಮೊಸರಾಗುವದಿಲ್ಲವದು
ಇಲ್ನೋಡು
ಪಾಪಿ ಆತ್ಮಗಳಿಗೆ ಅಮೃತವ ಸುರಿಸುರಿದು ಸೋತು ಹೋಗಿವೆ
ಈ ಜೋತು ಬಿದ್ದ ಪಡಿಪಾಟಲಿಗೆ
ಒಂದಿಷ್ಟು ಕರುಣೆ ಸುರಿ ಮಾರಾಯ