ಮೌನ – ಮಾತು

ಮೌನದ ಕುದಿಯೊಳಗೆ ಮಾತು
ಪುಟಕ್ಕಿಟ್ಟ ಚಿನ್ನವಾಗಬೇಕಿತ್ತು….
ಅದೇಕೋ ಅರೆ ಬೆಂದು ಬಿಸಿಯಾಗುತ್ತಾ
ನಿಗಿ ನಿಗಿ ಕೆಂಡವಾಗಿ ಕರಕಲಾಗುತ್ತಿದೆ….
ಜಿವ್ಹೆಯೊಳಗೆ ಜೀವವಿದೆ, ಕಡಿವ ಕತ್ತಿ ಇದೆ
ಬದುಕ ಕಟ್ಟುವ, ಕೆಡುವುವ ಚಮತ್ಕಾರ ಚೀತ್ಕಾರವಿದೆ….

ಅಸ್ಪಷ್ಟ ಭಾವಗಳು ಲಾವಾರಸದಂತೆ ಉಕ್ಕಿ
ಕುದಿ ಮೌನ ಈರ್ಷ್ಯೆಯಲಿ ಕಣ್ಣೊಳಗೆ ನುಂಗುತ್ತಿದೆ…
ಮುಲಾಜಿಲ್ಲದ ಮಾತು ಭಯ ಉದ್ವೇಗ ಮೀರಿ
ಬದುಕನ್ನು ಮುದ್ದಿಸುವುದ ಮರೆತು
ತಗುಲಿಕೊಂಡಿದೆ ಕ್ರೂರ ಕೋಪದ ಹರಿತ
ಕತ್ತಿಯ ತುದಿಗೆ ….

ನುಡಿದವರ ಮಾತುಗಳನ್ನೆಲ್ಲ ಒಮ್ಮೆಲೆ ಆತು ಅಕ್ಕರಕ್ಕರವನೊತ್ತಿ ಹಿಡಿದು, ಜಾಡಿಸುತಿದೆ
ಚುಚ್ಚಿ ನೋಯಿಸುವುದ ಕಲಿತು
ಪ್ರೌಢಿಮೆಯ ಕಳೆದುಕೊಂಡು ನರಳಿದೆ….
ಎಲ್ಲದರಲೂ ತಪ್ಪು ಹುಡುಕುತಾ ಮನದ
ತುಂಬ ಕಲ್ಲು ಮುಳ್ಳುಗಳ ರಾಶಿ ಗುಡ್ಡೆ ಹಾಕಿ
ತಣ್ಣಗಾದ ಮೇಲೆ ತನ್ನ ತಾನು ಶಪಿಸಿಕೊಂಡಿದೆ..

ಮಾತು ಬಾರದವನ ಮೂಕ ರೋಧನೆ
ಮಾತು ಬಲ್ಲವ ಅರಿವನೇ??
ಮನ ಬಂದಂತೆ ಮಾತು ಮಥಿಸಿ, ದ್ವೇಷವುದಿಸಿ
ವಿಷದ ಗಿಡಗಳನೆಟ್ಟು, ಫಲ ಪಡೆಯುತಾ…
ಮಾತು ಆಡಿದಷ್ಟು ಕಳೆದುಕೊಂಡದ್ದೇ ಹೆಚ್ಚು
ಮೌನವಿದ್ದಷ್ಟು ರಸಚ್ಯುತಿಗೆ ಅವಕಾಶವಿಲ್ಲ….
ಮಾತ ಮರೆತು ಒಂದಷ್ಟು ಹೊತ್ತು ಮೌನ ರುಚಿಸೋಣ!!!!!

ವಸು ವತ್ಸಲೆ ಮೂಲತಃ ಹಾಸನ ಜಿಲ್ಲೆಯವಳು.
ಬೆಂಗಳೂರಿನಲ್ಲಿ ನೆಲಸಿರುವ ಇವರು ವೃತ್ತಿಯಲ್ಲಿ ಶಿಕ್ಷಕಿ.
ಇವರ “ಭಾವಸುಧಾ”, ಮತ್ತೆರೆಡು ಕವನ ಸಂಕಲನ, ಕಥಾ ಸಂಕಲನ, ೬ ಭಾವಗೀತೆಗಳ ಸಂಕಲನ, ೫ ಸಂಪಾದಿತ ಕೃತಿಗಳು ಪ್ರಕಟಗೊಂಡಿವೆ