ಇರುವೆ ಎಲೆ ಮತ್ತು ನದಿ

ಅದು ಹಾಗೇನೆ ಒಂದು ಬೀಳಲೆಬೇಕು
ಹಾಗೇನೆ ಇನ್ನೊಂದು ಏಳಲೇ ಬೇಕು
ಇರುವೆ ಎಂದವರು ಇರದಂತಾಗಿ
ಇಲ್ಲ ಎಂದವರು ಇದ್ದವರಂತಾಗಿ
ಗಾಳಿ ಹೊಡೆತ ಮಣ್ಣ ಕುಸಿತಕೆ ಹಾ….
ರಿ

ನದಿಗೆ ಬಿದ್ದ ಜೀವ ಈ ಇರುವೆ
ತತ್ತರಿಸಿಹೋದ ಹಗುರ ಜೀವ
ಇರಲೋ ಇರದಂತಾಗಲೋ
ಇರವಿನ ಸಮರಕಾಗಿ ಎದ್ದು ಬಿದ್ದು
ತೇಲಿ ಮುಳುಗಿ ಮೂಗು ಗಂಟಲತುಂಬ
ನೀರು ತುಂಬಿ ಉಸಿರು ದಿಕ್ಕಾಪಾಲು

ಈ ಎಲೆಯೂ ಹಾಗೇನೆ
ಇರುವೆಗಾಗಿ ಇರುವೆ ಎಂದು
ಬಿದ್ದಹಾಗೆ ನದಿಗೆ.
ಪತರಗುಟ್ಟುವ ಇರುವೆ ಜೀವಕೆ
ನಾನಿರುವೆ ನಾನಿರುವೆ ಎಂದು ಬಿದ್ದ ಭಾವ
ಎಲೆ ಇರುವೆ ಎಲೆ ಇರುವೆ ನಾನಿರುವೆ.

ಕುಕ್ಕರಗಾಲಲಿ ಕೂತ ಒದ್ದೆ ಜೀವ
ಎಲೆ ದೋಣಿಯಾದ ಪಯಣದಲಿ
ಹಿಡಿಯಷ್ಟು ಋಣ
ಎಲೆ ನದಿಗೆ ಉದುರಿದ್ದೆ ಇರುವೆಯ ಇರುವಿಗೆ
ಇರುವೆಯ ಹೊತ್ತೊಯ್ಯುವ ಹೆಗಲಾಗಿ
ಪಲ್ಲಕ್ಕಿ ಆದ ಒಣ ಜೀವ

ನೋಡಿ
ಹೇಗೆ ಹೊತ್ತೊಯ್ಯತಿದೆ ಒಣ ಎಲೆ
ನೆನೆದ ಜೀವಕೆ ಮತ್ತೆ ಹಸಿರಾದ ಭಾವ
ಕಣ್ಣ ಪಿಳಿಕಿಸುತ್ತ ಕೂತ ಇರುವೆ ರೆಪ್ಪೆಗಳ ಮೇಲೆ
ಬದುಕಿನ ಪಯಣ
ಒಣ ಎಲೆ ಬಿದ್ದು ಮತ್ತೆ ಎದ್ದಂತಾಗಿ
ಇರುವೆ ನದಿಯೊಳಗೆ ಬೀಳುವುದಕೂ
ಒಣ ಎಲೆ ಕಳಚಿ ನದಿಗೆ ಬೀಳುವುದಕೂ
ಬೇಕು ಯೋಗ
ಅದು ಹಾಗೇನೆ ಒಂದರ ಬೀಳು
ಮತ್ತೊಂದರ ಏಳು

 

ನಾನೆಂಬ ನನ್ನೊಳಗಿನ ಜೀವ ಬಂಧುವಿಗೆ

ನಿನ್ನೊಡನೆ ಮಾತಾಡಿ ಎನಿತು ಕಾಲವಾಗಿತ್ತು ಬಂಧು
ಬಂದು ಹೋಗುವ ಬಂಧಗಳಲಿ ದೂರಮಾಡಿದ್ದೆ
ನಿನ್ನ ನೀನೆಂಬ ಉಸಿರ ಶಾಶ್ವತ ಬಂಧುರವನು
ಕಲ್ಲು ಕಟ್ಟಿ ಆಳದಲಿ ಕುಕ್ಕಿ ಬಂದಿದ್ದೆ
ಬಾ ಮುಖಾ ಮುಖಿ ಕೂತು ಬಿಡು
ಪಟ್ಟಾಂಗ ಚಕ್ಕಮಕ್ಕಳ ಹಾಗೆ ಮಾತಾಡೋಣ
ಹೃದಯಗಳನು ಪರಸ್ಪರ ಕಿತ್ತಿಟ್ಟು ನೆಲದಮೇಲೆ
ಆಕಾಶದ ನಕ್ಷತ್ರಗಳನು ಬಿತ್ತೋಣ
ಧರಿಸೋಣ ಬದಲಾಯಿಸಿಕೊಂಡು
ನಿನ್ನ ಹೃದಯದ ಕಿರೀಟ ನಾನು
ನನ್ನ ಬುದ್ಧಿಯ ಕವಚ ನೀನು
ನಿಂತರೂ ಭಯವಿಲ್ಲ ಎದುರು
ಅಕ್ಷ ಅಕ್ಷೋಹಿಣಿ ಸೈನ್ಯದ ತೆರೆ
ನೀನಿರು ಬಂಧು ನಾನೆಂಬ ನನ್ನ ಬಂಧು
ಬಂದರುಗಳಲಿ ಹೇಗೆ ನಿಲ್ಲುತ್ತದೊ ನೋಡುವೆ
ದಣಿದ ಹಡಗು.

ನಿನ್ನೊಡನೆ ಮಾತಾಡಿ ಎನಿತು ಕಾಲವಾಗಿತ್ತೋ ಬಂಧು
“ಕಂಡ ರೂಪಕಿಂತ ಕಾಣದೊಡವೆ” ಗೀಳೆ ಬಾಳಾಗಿತ್ತು
ಸುಮ್ಮನೆ ಹರಾಜಿಗಿಟ್ಟಿದ್ದೆ ಆತ್ಮವನು
ಬಿಕರಿಗೆ ಇಟ್ಟು ಕೂತಿದ್ದೆ ಒಳಕೋಣೆಯನು
ನನ್ನೊಳಗಿನ ಬಂಧು ಬಂದು ನಿಲ್ಲಯ್ಯ ನೀನು
“ವಿವಶವಾಗದಿರಲಿ ಜೀವನ ಪರವಶವಾಗದಿರಲಿ”
ನಾನುಗಾವುದ ಗಾವುದದಾಚೆ ನಡೆದು ಬಂದಿದ್ದೇನೆ
ನನ್ನನು ನಾನು ಅಲ್ಲಲ್ಲಿ ಕತ್ತರಿಸಿಟ್ಟು
ಚೆಲ್ಲಾಪಿಲ್ಲಿಯಾದ ತುಣುಕುಗಳನೆಲ್ಲ ಸೇರಿಸು
ನನಗೆ ನಾನು ದೊರೆತರೆ ದೊರೆ
ಅರೆ ಅರೆ ನೋಡು ಅರೆತೆರೆದ ನನ್ನ ಕಣ್ಣುಗಳಲಿ
ಸೂರ್ಯ ಚಿಮ್ಮುತ್ತಿದ್ದಾನೆ ಚಂದ್ರ ಮುಗುಳ್ನಗು
ಮೆದುಳಿನ ತುಂಬೆಲ್ಲ ನಕ್ಷತ್ರ ಹರಿ ಬಿಟ್ಟು ಕೊಂಡಿದ್ದೇನೆ
ಕತ್ತಲಿಗೂ ಈಗ ನೂರು ಬೆಳಕಿನರ್ಥ

ನಿನ್ನೊಡನೆ ಮಾತಾಡದೆ ಎನಿತು ಕಾಲವಾಗಿತ್ತೂ ಬಂಧು
ಕೊಳೆತು ಹೋಗುವ ಹೃದಯದೊಳಗೆ
ಕಾಮನ ಬಿಲ್ಲ ಬಿತ್ತೋಣ ಬಾ.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)