ತಾಷ್ಕೆಂಟ್ ವಿಮಾನ ನಿಲ್ದಾಣದಿಂದ ಹೊರಗೆ ಬಂದ ಕೂಡಲೇ ನನಗೆ ಆಶ್ಚರ್ಯ ಕಾದಿತ್ತು. ಎಲ್ಲೆಂದರಲ್ಲಿ ಭಾರತದ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿದ್ದವು. ಬೀದಿಗಳು ನಮ್ಮ ಧ್ವಜದಿಂದ ಕೂಡಿದ ಪರಪರಿಗಳಿಂದ ಅಲಂಕೃತವಾಗಿದ್ದವು. ಎಲ್ಲೆಂದರಲ್ಲಿ ನಮ್ಮ ರವಿಶಂಕರ್ ಸಿತಾರ್ ಮತ್ತು ಬಿಸ್ಮಿಲ್ಲಾ ಖಾನ್ ಶಹನಾಯಿ ನಾದಮಾಧುರ್ಯಕ್ಕೆ ಕಿವಿಗಳು ತೆರೆದುಕೊಳ್ಳತೊಡಗಿದವು. ನಮ್ಮ ಗೈಡ್ ನಮ್ಮನ್ನು ಪಂಚತಾರಾ “ಹೋಟೆಲ್ ತಾಷ್ಕೆಂಟ್”ಗೆ ಒಯ್ದರು. ಅಲ್ಲಿಯೆ ರಿಷಪ್ಷನಿಸ್ಟ್ “ಇಂಜಿಷ್ಕಿ ದ್ರುಜಿಯೆ” (ಇಂಡಿಯನ್ ಫ್ರೆಂಡ್ಸ್) ಎಂದು ಖುಷಿಯಿಂದ ಬರಮಾಡಿಕೊಂಡರು. ಭಾರತದ ಬಗ್ಗೆ ಸೋವಿಯತ್ ದೇಶದವರಿಗೆ ಇದ್ದ ಅಭಿಮಾನ, ಪ್ರೀತಿ, ಗೌರವ ಕಂಡು ಆಶ್ಚರ್ಯಚಕಿತನಾದೆ.
ರಂಜಾನ್‌ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ 43ನೇ ಕಂತು ಇಲ್ಲಿದೆ.

ನಾವು ಬಾಲಕರಾಗಿದ್ದಾಗ ಸ್ವಾತಂತ್ರ್ಯೋತ್ಸವ, ಗಾಂಧಿ ಜಯಂತಿ ಮತ್ತು ನೆಹರೂ ಜಯಂತಿ ಹೆಚ್ಚು ಆಕರ್ಷಕವಾಗಿದ್ದವು. ಗಣರಾಜ್ಯೋತ್ಸವದ ಬಗ್ಗೆ ಅಷ್ಟು ನೆನಪಾಗುತ್ತಿಲ್ಲ. ಮ್ಯಾಜಿಕ್ ಲೆಂಟರ್ (ಮ್ಯಾಜಿಕ್ ಲ್ಯಾಂಟರ್ನ್)ನಲ್ಲಿ ಗಣರಾಜ್ಯೋತ್ಸವದ ಪರೇಡ್ ನೋಡುವ ಅವಕಾಶ ಕೆಲವೊಮ್ಮೆ ಸಿಗುತ್ತಿತ್ತು. ಇಂಥ ಸಂದರ್ಭಗಳಲ್ಲಿ ಗಾಂಧೀಜಿಯವರ ಸತ್ಯಾಗ್ರಹ ಮತ್ತು ಸ್ವಾತಂತ್ರ್ಯ ಹೋರಾಟದ ಕೆಲ ಸನ್ನಿವೇಶಗಳ ವಿಡಿಯೊ ತುಣುಕುಗಳನ್ನು ನೋಡುವ ಅವಕಾಶವೂ ಲಭಿಸುತ್ತಿತ್ತು.

ನಾನು 5 ಅಥವಾ 6ನೇ ಇಯತ್ತೆಯಲ್ಲಿದ್ದಾಗಿನ ಸ್ವಾತಂತ್ರ್ಯೋತ್ಸವದ ನೆನಪು ಇನ್ನೂ ಹಸಿರಾಗಿದೆ. ನಮ್ಮ ಶಿಕ್ಷಕರು ಪ್ರಭಾತಫೇರಿಯ ಜೊತೆ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದುದರಿಂದ ನಾವು ಬೆಳಿಗ್ಗೆ ಬಹಳ ಬೇಗ ಶಾಲೆಗೆ ಹೋಗಬೇಕಾಗಿತ್ತು. ನಮ್ಮ ಸಮಾಜ ಸಂಪ್ರದಾಯದ ಹಬ್ಬಗಳನ್ನು ಆಚರಿಸುತ್ತಿದ್ದರೆ ನಾವು ಮಕ್ಕಳು ರಾಷ್ಟ್ರೀಯ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೆವು. ತೊಳೆದ ಖಾಕಿ ಹಾಫ್‌ ಪ್ಯಾಂಟ್, ಬಿಳಿಷರ್ಟ್, ಗಾಂಧಿಟೋಪಿಗಳನ್ನು ರಾತ್ರಿ ಚೆನ್ನಾಗಿ ಮಡಚಿ ತಲೆದಿಂಬಿನ ಕೆಳಗೆ ಇಟ್ಟು ಬೆಳಗಿನ ವೈಭವವನ್ನು ಕಲ್ಪಿಸುತ್ತ ಮಲಗುವುದು. ನಡು ನಡುವೆ ಎದ್ದು ತಲೆದಿಂಬು ಎತ್ತಿ ಬಟ್ಟೆಗಳಿಗೆ ಮಡಕೆ ಬಿದ್ದಿರಬಹುದೆ ಎಂಬುದನ್ನು ಚೆಕ್ ಮಾಡುವುದು. ಮತ್ತೆ ಅವುಗಳ ಮೇಲೆ ತಲೆದಿಂಬು ಇಟ್ಟು ಮಲಗುವುದು. ಆ ವಯಸ್ಸಿನಲ್ಲಿ ಇದಕ್ಕಾಗಿ ನಿದ್ದೆ ಕಳೆದುಕೊಂಡ ಹಾಗೆ ಬೇರೆ ಯಾವ ಕಾರಣಕ್ಕೂ ನಿದ್ದೆ ಕಳೆದುಕೊಳ್ಳುತ್ತಿರಲಿಲ್ಲ.

ಅಂತೂ ಬೆಳಿಗ್ಗೆ ಶಾಲೆಗೆ ಹೋಗಿ ರಾಷ್ಟ್ರೀಯ ಹಬ್ಬದ ಆನಂದವನ್ನು ಅನುಭವಿಸುತ್ತಿದ್ದೆವು. ಅಂಥ ಬಾಲ್ಯದ ಉತ್ಸಾಹ ನಮ್ಮನ್ನು ಚೇತೋಹಾರಿಯಾಗಿಸುತ್ತಿತ್ತು. ನಂತರ ಆದಿಲ್ ಶಾಹಿ ಕಾಲದ ದರ್ಬಾರ ಹಾಲ್ ಕಡೆ ಹೋಗುತ್ತಿದ್ದೆವು. ವಿವಿಧ ಹೈಸ್ಕೂಲುಗಳ ಬಾಲಕ ಬಾಲಕಿಯರನ್ನು ಬಣ್ಣಬಣ್ಣದ ಯೂನಿಫಾರ್ಮಲ್ಲಿ ನೋಡುವುದು ಖುಷಿ ಕೊಡುತ್ತಿತ್ತು. ಜೊತೆಗೆ ಎನ್.ಸಿ.ಸಿ. ಹೋಮ್ ಗಾರ್ಡ್ಸ್‌, ಪೊಲೀಸ್, ಸೇವಾದಳ, ಪೊಲೀಸ್ ಬ್ಯಾಂಡ್, ಅಧಿಕಾರಿಗಳು, ಖಾದಿ ಡ್ರೆಸ್ ನೇತಾರರು ಮುಂತಾದವರು ಕಂಗೊಳಿಸುತ್ತಿದ್ದರು. ಆ ಸ್ವಾತಂತ್ರ್ಯದ ದಿನ (ಬಹುಶಃ ಅದು 1962ನೇ ಸ್ವಾತಂತ್ರ್ಯೋತ್ಸವ ಇರಬಹುದು.) ನಾನು ಎಷ್ಟು ಖುಷಿಯಾಗಿದ್ದೆನೆಂದರೆ ಆ ದಿನ ನೆನಪಿಟ್ಟುಕೊಳ್ಳುವುದಕ್ಕಾಗಿ ಆಕಾಶದ ಕಡೆಗೆ ನೋಡಿದೆ. ಆ ಬೆಳಗಿನಲ್ಲಿ ನೀಲಾಕಾಶ ಹೆಚ್ಚು ಸುಂದರವಾಗಿ ಕಾಣುತ್ತಿತ್ತು. ಬಿಳಿಮೋಡಗಳ ಚಲನೆಯಿಂದಾಗಿ ನನ್ನ ಮನಸ್ಸು ಉಲ್ಲಸಿತಗೊಂಡಿತು. ನಾನು, ನನ್ನ ದೇಶ, ನನ್ನ ಆಕಾಶ. ಇದಕ್ಕಿಂತ ಹೆಚ್ಚಿಗೆ ಆ ಕ್ಷಣ ಮನದಲ್ಲಿ ಬೇರೆ ವಿಚಾರವೇ ಇರಲಿಲ್ಲ.

ಇಂಥ ಒಂದು ಅಪರಿಮಿತ ಆನಂದವನ್ನು ನಾನು 1983ರಲ್ಲಿ ಸೋವಿಯತ್ ದೇಶಕ್ಕೆ ಭೇಟಿ ನೀಡಿದಾಗ ಅನುಭವಿಸಿದೆ. (ಈಗ ಸೋವಿಯತ್ ದೇಶ ಇಲ್ಲ. 15 ರಿಪಬ್ಲಿಕ್‍ಗಳು ಸ್ವತಂತ್ರವಾಗಿ ಪ್ರತ್ಯೇಕ ದೇಶಗಳಾಗಿವೆ. 39 ವರ್ಷಗಳ ಹಿಂದಿನ ಅನುಭವವಿದು. ಈಗ 40ನೇ ವರ್ಷಕ್ಕೆ ಕಾಲಿಟ್ಟಿದೆ.) ಇಂಡೋ ಸೋವಿಯತ್ ಕಲ್ಚರಲ್ ಸೊಸೈಟಿ (ಇಸ್ಕಸ್) ಮೂಲಕ ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ 7 ಮಂದಿಯ ಗುಡ್‌ವಿಲ್ ಡೆಲಿಗೇಷನ್‌ನಲ್ಲಿ ನಾನೂ ಒಬ್ಬನಾಗಿದ್ದೆ. ಭಾರತ ಕಮ್ಯೂನಿಸ್ಟ್‌ ಪಕ್ಷ (ಸಿ.ಪಿ.ಐ) ದಿಂದಾಗಿ ನನಗೆ ಈ ಸದವಕಾಶ ಲಭಿಸಿತ್ತು. ಆಗಸ್ಟ್ 11 ರಂದು ಬೆಂಗಳೂರಿನಿಂದ ವಿಮಾನದಲ್ಲಿ ದೆಹಲಿಗೆ ಹೋದೆ. ನನ್ನ ಮೊದಲ ವಿಮಾನ ಪ್ರಯಾಣ ಅದಾಗಿತ್ತು. ಅದು ಹೈದರಾಬಾದ್ ಮೂಲಕ ದೆಹಲಿಗೆ ಹೋಗುವ ವಿಮಾನ. (ಆಗ ಬೆಂಗಳೂರು ದೆಹಲಿ ಮಧ್ಯೆ ನೇರ ವಿಮಾನ ಇದ್ದಿದ್ದಿಲ್ಲ ಎಂದು ಕಾಣುತ್ತದೆ.) ಆ ವಿಮಾನದಲ್ಲಿ ಒಂದು ಸೊಳ್ಳೆ ಹಾರಾಡುತ್ತಿತ್ತು. ಹೈದರಾಬಾದಿನ ಬೇಗಂಪೇಟ್ ಏರ್‌ಪೋರ್ಟ್‌ನಲ್ಲಿ ವಿಮಾನ ಇಳಿದಾಗ ಕೆಲವರು ಇಳಿದರು. ಕೆಲವರು ಹತ್ತಿದರು. ವಿಮಾನದಲ್ಲಿದ್ದ ಎಲ್ಲರೂ ನನಗೆ ಹೊಸಬರು. ಆಗಿನ ವಿಮಾನ ಏರುವವರ ಗತ್ತೇ ಬೇರೆಯಾಗಿತ್ತು. ಅಲ್ಲಿ ನಾನೊಬ್ಬ ಔಟ್ ಸೈಡರ್ ಹಾಗೆ ಅನಿಸುತ್ತಿತ್ತು. ಆ ವಿಮಾನದಲ್ಲಿ ಸೊಳ್ಳೆಯೊಂದು ಹಾರಾಡುತ್ತಿತ್ತು. ಅದನ್ನು ನೋಡಿ ಖುಷಿಯಾಯಿತು. ಬೆಂಗಳೂರಿನ ಓಲ್ಡ್ ಏರ್‍ಪೋರ್ಟ್ ಬಳಿಯೆ ದೊಮ್ಮಲೂರಿದೆ. ದೊಮ್ಮಲೂರು ಎಂದರೆ ದ್ವಾಮಿಗಳ (ಸೊಳ್ಳೆಗಳ) ಊರು. ಆ ಸೊಳ್ಳೆಯ ಹಾರಾಟ ನೋಡಿ ಬೆಂಗಳೂರಿನಿಂದ ಬಂದ ಪ್ರಯಾಣಿಕನೊಬ್ಬ ಗಗನಸಖಿಗೆ ಸೊಳ್ಳೆ ಕಡೆಗೆ ಕೈ ಮಾಡಿ ತೋರಿಸಿದ. ‘ಅದು ನಿಮ್ಮೂರಿನಿಂದ ಬಂದದ್ದು’ ಎಂದು ಹೇಳಿ ಆಕೆ ಮುಂದೆ ಸಾಗಿದಳು.

ಹೈದರಾಬಾದ್ ಕೂಡ ಒಂದು ದೃಷ್ಟಿಯಲ್ಲಿ ಸೊಳ್ಳೆಗಳ ಊರೇ. ಅಲ್ಲಿನ ಹುಸೇನ್ ಸಾಗರ ಸೊಳ್ಳೆಗಳನ್ನು ಉತ್ಪಾದಿಸುವ ಕಾರ್ಖಾನೆ ಇದ್ದಂತೆ. ಬೇಗಂಪೇಟ್ ವಿಮಾನ ನಿಲ್ದಾಣದ ಪಕ್ಕದಲ್ಲೇ ರೋನಾಲ್ಡ್ ರಾಸ್ ರಿಸರ್ಚ್ ಸೆಂಟರ್ ಇದೆ. ಅಲ್ಲಿಯೆ ಒಡಕು ಮೈಕ್ರೋಸ್ಕೋಪ್ ಸಹಾಯದೊಂದಿಗೆ ರೋನಾಲ್ಡ್ ರಾಸ್ ಮಲೇರಿಯಾಕ್ಕೆ ಹೆಣ್ಣು ಅನಾಫಿಲಿಸ್ ಸೊಳ್ಳೆ ಕಾರಣ ಎಂಬುದನ್ನು ಕಂಡು ಹಿಡಿದದ್ದು. ಈ ಸಂಶೋಧನೆಗಾಗಿ ರೋನಾಲ್ಡ್ ರಾಸ್  1902ರಲ್ಲಿ ನೊಬೆಲ್ ಪ್ರಶಸ್ತಿಗೆ ಪಾತ್ರರಾದರು. ಅವರು ಬ್ರಿಟಿಷ್ ಸೈನ್ಯದ ವೈದ್ಯರಾಗಿದ್ದರು. ಭಾರತೀಯರು ಮಲೇರಿಯಾ ರೋಗದಿಂದ ಬಳಲುತ್ತಿದ್ದ ದಿನಗಳವು. ಅನೇಕರು ಈ ರೋಗಕ್ಕೆ ತುತ್ತಾಗುತ್ತಿದ್ದರು. ಇದನ್ನು ನೋಡಿದ ರೊನಾಲ್ಡ್ ರಾಸ್ ಮಮ್ಮಲ ಮರುಗಿದರು. ಆಗ ಅವರು ಹೈದರಾಬಾದ ಮಿಲಿಟರಿ ಕ್ಯಾಂಪ್‌ನಲ್ಲಿದ್ದರು. ಮಲೇರಿಯಾ ರೋಗಕ್ಕೆ ಕಾರಣ ಕಂಡು ಹಿಡಿಯುವ ಕಡೆ ಮನಸ್ಸನ್ನು ಏಕಾಗ್ರಗೊಳಿಸಿದರು. ಆದರೆ ಬ್ರಿಟಿಷ್ ಸರ್ಕಾರ ಅವರ ಸಂಶೋಧನೆ ಬಗ್ಗೆ ನಿರುತ್ಸಾಹ ತೋರಿತು. ಇದು ಉಷ್ಣವಲಯದ ದೇಶವಾದ ಭಾರತದ ಸಮಸ್ಯೆ. ನಮಗೇಕೆ ಈ ಬಗ್ಗೆ ಕಾಳಜಿ. ನಮ್ಮದು ತಂಪು ದೇಶ. ನಮ್ಮಲ್ಲಿ ಸೊಳ್ಳೆಗಳೇ ಇಲ್ಲ. ಇದರಿಂದ ನಮಗೇನು ಲಾಭ ಎಂದು ಬ್ರಿಟಿಷ್ ಮಿಲಿಟರಿಯ ಉನ್ನತ ಅಧಿಕಾರಿಗಳು ಉದಾಸೀನ ತಾಳಿದರು. ಆದರೂ ರೊನಾಲ್ಡ್ ರಾಸ್ ಎದೆಗುಂದದೆ ಸಂಶೋಧನೆ ಮುಂದುವರಿಸಿದರು. ಅವರಲ್ಲಿದ್ದ ಒಡೆದ ಗಾಜಿನ ಮೈಕ್ರೋಸ್ಕೋಪ್ ಬದಲಿಗೆ ಒಳ್ಳೆಯ ಮೈಕ್ರೋಸ್ಕೋಪ್ ಕೊಡಲು ಕೂಡ ಮೇಲಧಿಕಾರಿಗಳು ಸಿದ್ಧವಾಗಲಿಲ್ಲ. ಸೃಜನಶೀಲ ಸಾಹಿತಿಯೂ ಆಗಿದ್ದ ರೊನಾಲ್ಡ್ ರಾಸ್ ಅವರ ಜೀವಕಾರುಣ್ಯಕ್ಕೆ ಇಂಥ ಅಡತಡೆಗಳು ಅಡ್ಡಿಯಾಗುವಲ್ಲಿ ಸೋತವು. ಕೊನೆಗೆ ಹೆಣ್ಣು ಅನಾಫಿಲಿಸ್ ಸೊಳ್ಳೆಯಿಂದ ಮಲೇರಿಯಾ ಬರುವುದೆಂಬ ಹೈಪೊಥೀಸಿಸ್‌ಗೆ ಬದ್ಧರಾದರು. ಅದನ್ನು ಪರೀಕ್ಷಿಸುವುದಕ್ಕಾಗಿ ಒಬ್ಬ ವ್ಯಕ್ತಿಯ ಅವಶ್ಯಕತೆ ಇತ್ತು. ಆದರೆ ರಿಸ್ಕ್ ತೆಗೆದುಕೊಳ್ಳಲು ಯಾರೂ ಮುಂದೆ ಬರಲಿಲ್ಲ. ಕೊನೆಗೆ ಹುಸೇನ್ ಎಂಬ ಬಡ ವ್ಯಕ್ತಿ ಮುಂದೆ ಬಂದ. ಜನರಿಗೆ ಒಳ್ಳೆಯದಾಗುವುದಾದರೆ ನನಗೆ ತೊಂದರೆಯಾದರೂ ಅಡ್ಡಿ ಇಲ್ಲ ಎಂಬ ಭಾವವನ್ನು ಅತ ಹೊಂದಿದ್ದ. ರೋನಾಲ್ಡ್ ರಾಸ್ ಅವರು ರಾತ್ರಿ ಆತನನ್ನು ಸೊಳ್ಳೆಪರದೆಯ ಮಂಚದ ಮೇಲೆ ಮಲಗಿಸಿದರು. ಒಳಗಡೆ ಹೆಣ್ಣು ಅನಾಫಿಲಿಸ್ ಸೊಳ್ಳೆಗಳನ್ನು ಬಿಟ್ಟಿದ್ದರಿಂದ ಬೆಳಗಾಗುವುದರೊಳಗಾಗಿ ಹುಸೇನ್ ಮಲೇರಿಯಾದಿಂದ ಬಳಲುತ್ತಿದ್ದ. ರೋನಾಲ್ಡ್ ರಾಸ್ ಅವರ ಸಂಶೋಧನೆ ನಿರ್ಣಾಯಕ ಘಟ್ಟ ತಲುಪಿತ್ತು. ಅವರು ಕೂಡಲೆ ಹುಸೇನ್‌ಗೆ ವೈದ್ಯಕೀಯ ಸೌಲಭ್ಯ ನೀಡಿ ಮಲೇರಿಯಾ ರೋಗದಿಂದ ಪಾರು ಮಾಡಿದರು. ಈ ಸಂಶೋಧನೆಯಿಂದಾಗಿ ವಿಶ್ವವಿಖ್ಯಾತರಾದರು.

(ರೊನಾಲ್ಡ್ ರಾಸ್)

ತೊಳೆದ ಖಾಕಿ ಹಾಫ್‌ ಪ್ಯಾಂಟ್, ಬಿಳಿಷರ್ಟ್, ಗಾಂಧಿಟೋಪಿಗಳನ್ನು ರಾತ್ರಿ ಚೆನ್ನಾಗಿ ಮಡಚಿ ತಲೆದಿಂಬಿನ ಕೆಳಗೆ ಇಟ್ಟು ಬೆಳಗಿನ ವೈಭವವನ್ನು ಕಲ್ಪಿಸುತ್ತ ಮಲಗುವುದು. ನಡು ನಡುವೆ ಎದ್ದು ತಲೆದಿಂಬು ಎತ್ತಿ ಬಟ್ಟೆಗಳಿಗೆ ಮಡಕೆ ಬಿದ್ದಿರಬಹುದೆ ಎಂಬುದನ್ನು ಚೆಕ್ ಮಾಡುವುದು. ಮತ್ತೆ ಅವುಗಳ ಮೇಲೆ ತಲೆದಿಂಬು ಇಟ್ಟು ಮಲಗುವುದು. ಆ ವಯಸ್ಸಿನಲ್ಲಿ ಇದಕ್ಕಾಗಿ ನಿದ್ದೆ ಕಳೆದುಕೊಂಡ ಹಾಗೆ ಬೇರೆ ಯಾವ ಕಾರಣಕ್ಕೂ ನಿದ್ದೆ ಕಳೆದುಕೊಳ್ಳುತ್ತಿರಲಿಲ್ಲ

ರೊನಾಲ್ಡ್ ರಾಸ್ ಅವರಿಗೆ ಬೆಂಗಳೂರು ಕಂಟೋನ್ಮೆಂಟ್‌ಗೆ ವರ್ಗವಾಯಿತು. ಬೆಂಗಳೂರಲ್ಲಿಯೂ ಹೆಚ್ಚಿನ ಸಂಶೋಧನೆ ಮುಂದುವರಿಸಿದರು. ಬೆಂಗಳೂರು ನಗರ ಸಭೆಗೆ ಸೊಳ್ಳೆಕಾಟದ ಬಗ್ಗೆ ಅಂದೇ ಎಚ್ಚರಿಸಿದರು. 20ನೇ ಶತಮಾನದ ಪೂರ್ವಾರ್ಧದಲ್ಲಿ ಕೂಡ ಬೆಂಗಳೂರು ಒಳ ಹೊರಗೆ 80 ಕೆರೆಗಳು ಉಳಿದುಕೊಂಡಿದ್ದವು. ಅವು ಸೊಳ್ಳೆಗಳ ತಾಣವಾಗಿದ್ದವು. ಕಪ್ಪೆಗಳು ಸೊಳ್ಳೆಗಳನ್ನು ನಿಯಂತ್ರಿಸುವ ನೈಸರ್ಗಿಕ ಯಂತ್ರಗಳಂತೆ ಕೆಲಸ ಮಾಡುತ್ತಿದ್ದವು. ಕಪ್ಪೆಯ ಕಾಲುಗಳಿಗೆ ವಿದೇಶದಲ್ಲಿ ಬೇಡಿಕೆ ಹೆಚ್ಚಿದ್ದರಿಂದ ಅವುಗಳ ಕಾಲುಗಳನ್ನು ಕತ್ತರಿಸಿ ಮಾಡಿ ಸಂರಕ್ಷಿಸಿ ವಿದೇಶಗಳಿಗೆ ಕಳಿಸುವ ದಂಧೆ ಶುರುವಾಯಿತು. ವಿದೇಶಿಯರು ಅವುಗಳನ್ನು ಮಸಾಲಾ ಫ್ರೈ ಮಾಡಿ ತಿನ್ನುತ್ತಾರೆ ಎಂಬ ಮಾತು ನಾನು ಬೆಂಗಳೂರಿನಲ್ಲಿದ್ದಾಗ ಪ್ರಚಲಿತವಿತ್ತು. ಕಪ್ಪೆಗಳ ಸಂತತಿ ನಾಶವಾಗಿದ್ದರಿಂದ ಬೆಂಗಳೂರಲ್ಲಿ ಸೊಳ್ಳೆಗಳ ಸಂತತಿ ಹೆಚ್ಚಾಗಿರಬಹುದು ಎಂಬ ಸಂಶಯ ನನಗೂ ಮೂಡಿತ್ತು. ವಿಮಾನದಲ್ಲಿ ಸೊಳ್ಳೆಯೊಂದನ್ನು ನೋಡಿದ್ದಕ್ಕೆ ಇಷ್ಟೆಲ್ಲ ಹೇಳಬೇಕಾಯಿತು.

ಆಗ ವಿದೇಶಕ್ಕೆ ಹೋಗಬೇಕಾದರೆ ಅನೇಕ ಪ್ರಶ್ನೆಗಳು ಏಳುತ್ತಿದ್ದವು. ಬಹಳ ಚಳಿ. ಫುಲ್ ಸೂಟ್ ಬೇಕೇ ಬೇಕು. ಒಳಗೆ ಥರ್ಮಲ್ ಬನಿಯನ್ ಮತ್ತು ಪೈಜಾಮಾ ಇರಬೇಕು. ಅದು ಬೇಕು, ಇದು ಬೇಕು. ಹೀಗೆ ಎಲ್ಲ ವ್ಯವಸ್ಥೆ ಮಾಡಿಕೊಂಡು ಹೊರಟೆ. ದೆಹಲಿಯ ಪಾಲಂ ಏರ್ ಪೋರ್ಟ್‍ನಲ್ಲಿ ವಿಮಾನ ಇಳಿದು, ಹೊರಗೆ ಬಂದ ಕೂಡಲೆ ಕತ್ತಿನಲ್ಲಿ ಬಿಸಿ ತಾಗಿ ಕೋಟ್ ಬಿಚ್ಚಬೇಕಾಯಿತು.

ಇಸ್ಕಸ್ ಮುಖ್ಯಸ್ಥೆ ಲಿಟ್ಟೊ ಘೋಷ್ ವಾಸದ ವ್ಯವಸ್ಥೆ ಮಾಡಿದ್ದರು. ಮರುದಿನ ಪಾರ್ಟಿಯ ಸಂಗಾತಿಗಳಿಗೆ ಭೇಟಿಯಾದೆ. ಆಗ ಅಮರಜೀತ್ ಕೌರ್ ಎ.ಐ.ಎಸ್.ಎಫ್. ವಿದ್ಯಾರ್ಥಿ ಸಂಘಟನೆಯ ನಾಯಕಿಯಾಗಿದ್ದರು. ಬಹಳ ಪ್ರಭಾವಶಾಲಿ ನಾಯಕಿ. ಅವಳಿಗೆ ನನ್ನ ಆಕರ್ಷಕ ವಿಜಿಟಿಂಗ್ ಕಾರ್ಡ್ ಕೊಟ್ಟೆ. ಅದರಲ್ಲಿ ಕೆಂಪು ಎದ್ದು ಕಾಣುತ್ತಿತ್ತು. ಅದರಲ್ಲಿ ನನ್ನ ಹೆಸರ ಮುಂದೆ ಎಂ.ಎ., ಎಂ.ಎ.ಎಂ.ಎಂ. ಪದವಿಯನ್ನು ಅನಿವಾರ್ಯವಾಗಿ ಹಾಕಿಕೊಂಡಿದ್ದೆ. ಯಾವ ಸಂಗಾತಿಯೂ ಹೀಗೆ ಪದವಿ ಪ್ರದರ್ಶನ ಇಷ್ಟಪಡುವುದಿಲ್ಲ. ವಿದೇಶಕ್ಕೆ ಹೋಗುತ್ತಿರುವುದರಿಂದ ಪದವಿ ಹಾಕಿಕೊಳ್ಳುವ ಸಲಹೆ ಮೇರೆಗೆ ಹಾಕಿಕೊಂಡೆ ಎಂದು ಅಮರಜೀತ್‍ಗೆ ಹೇಳಿದೆ. ಅದಕ್ಕೇನಂತೆ ಡೋಂಟ್ ವರಿ. ನನಗೂ ಒಂದು ಇಂಥ ವಿಜಿಟಿಂಗ್ ಕಾರ್ಡ್ ಮಾಡಿಸಿಕೊಳ್ಳಬೇಕೆನಿಸಿತು ಎಂದು ಆಕೆ ಹೇಳಿದರು. ಸಮಾಧಾನವಾಯಿತು. ಅವರು ಭೌತಶಾಸ್ತ್ರದಲ್ಲಿ ಎಂ.ಎಸ್ಸಿ. ಪದವೀಧರೆ ಎಂದು ಯಾರೋ ಹೇಳಿದ ನೆನಪು. ಅವರು ಕಮ್ಯುನಿಸ್ಟ್‌ ಮೌಲ್ಯಗಳ ಮತ್ತು ಆತ್ಮಸ್ಥೈರ್ಯದ ಸಾಕಾರ ರೂಪ. ಇಂದು ಸಿ.ಪಿ.ಐ. ರಾಷ್ಟ್ರ ನಾಯಕಿ.

1983ನೇ ಆಗಸ್ಟ್ 12ರಂದು ಸಾಯಂಕಾಲ ಗುಡ್‌ವಿಲ್ ಡೆಲಿಗೇಷನ್‌ನ 7 ಮಂದಿ ಸದಸ್ಯರಿಗೆ ಒಂದು ಕಡೆ ಸೇರಿಸಿ ಸೋವಿಯತ್ ದೇಶಕ್ಕೆ ಸಂಬಂಧಿಸಿದ ವಿಡಿಯೋ ತೋರಿಸಿದರು. ಅಲ್ಲಿಯ ಪ್ರವಾಸಿ ತಾಣಗಳು, ಕ್ರಾಂತಿಯ ಹಿನ್ನೆಲೆ, ಶಿಷ್ಟಾಚಾರ, ನಾವು ಯಾವರೀತಿ ಇರಬೇಕು ಎಂದು ಮುಂತಾದವುಗಳ ಕುರಿತು ವಿಡಿಯೋ ಮತ್ತು ಭಾಷಣಗಳಾದವು. ಕರ್ನಾಟಕದಿಂದ ನಾನು ಮತ್ತು ಡಾ. ಪಿ. ಎಸ್. ಶಂಕರ್ ಇದ್ದೆವು. ಮಹಾರಾಷ್ಟ್ರದಿಂದ ರಾವ್ ಎಂಬುವವರಿದ್ದರು. ಬಿಹಾರದಿಂದ ಇಬ್ಬರು, ರಾಜಸ್ಥಾನದ ಬಿಕಾನೇರ್ ರಾಜಕುಮಾರ, ಮಧ್ಯಪ್ರದೇಶದ ಆದಿವಾಸಿ ಶಾಸಕ ಮುಂತಾದವರು ಇದ್ದರು. (ಬಿಕಾನೇರ್ ರಾಜಕುಮಾರ ಹೆಸರು ಮರೆತಿದ್ದೇನೆ. ಅವರು ತಮ್ಮ ಪತ್ನಿಯ ಜೊತೆ ಬಂದಿದ್ದರು. ಆತ ಇಂಡಿಯನ್ ಏರ್‍ಫೋರ್ಸ್‍ನಲ್ಲಿ ಪೈಲಟ್ ಆಗಿ ಸೇವೆಸಲ್ಲಿಸಿದ್ದರು. “ನೀವೇಕೆ ಬಿಡಲು ಬಂದಿರಿ, ಅವರೇನು ಮಗುವೆ? ಎಂದು ಆ ರಾಜಕುಮಾರಿಗೆ ತಮಾಷೆ ಮಾಡಿದೆ. ಆಕೆ ನಗುತ್ತ ‘ಹೌದು’ ಎಂದರು. ಇವರು ಪೈಲಟ್ ಆಗಿ ಸೆಲೆಕ್ಷನ್ ಆದಾಗ ನನಗೂ ಟ್ರೇನಿಂಗ್ ಕೊಟ್ಟರು. ಇವರು ಬಹಳ ಜವಾಬ್ದಾರಿಯಾದ ಮತ್ತು ಗಂಡಾಂತರಕಾರಿಯಾದ ಕರ್ತವ್ಯದಲ್ಲಿ ತಲ್ಲೀನರಾಗಿರುತ್ತಾರೆ. ಇವರ ಮೂಡ್ ಕೆಡಿಸಬಾರದು. ಇವರನ್ನು ಹೇಗೆ ಸಂಭಾಳಿಸಬೇಕು ಎಂದು ಮುಂತಾಗಿ ತಮಗೆ ಟ್ರೇನಿಂಗ್ ಕೊಟ್ಟ ಬಗ್ಗೆ ನಗುತ್ತ ಹೇಳಿದರು. ಹೀಗಾಗಿ ಇವರಿಗೆ ಎಲ್ಲದಕ್ಕೂ ನಾನು ಇರಲೇಬೇಕು ಎಂದರು.)

ಆ ಏಳು ಮಂದಿಯಲ್ಲಿ ನಾನೇ ಚಿಕ್ಕವನಾಗಿದ್ದರಿಂದ ಎಲ್ಲರೂ ನನ್ನ ಬಗ್ಗೆ ಕಾಳಜಿ ಮತ್ತು ಖುಷಿ ವ್ಯಕ್ತಪಡಿಸುತ್ತಿದ್ದರು. ಒಂದೇ ದಿನದಲ್ಲಿ ನನ್ನ ಸಿ.ಪಿ.ಐ. ಪಕ್ಷದ ಹಿರಿಯ ಸಂಗಾತಿಗಳಿಗೆ ನಾನು ಅಚ್ಚುಮೆಚ್ಚಿನವನಾದೆ. ಅವರಲ್ಲಿ ಬಹಳಷ್ಟು ಜನರು ಮರುದಿನ ಪಾಲಂ ಏರ್‌ಪೋರ್ಟ್‌ಗೆ ಬೀಳ್ಕೊಡಲು ಬಂದಿದ್ದರು. ಆ ದಿನವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಕಾಮ್ರೇಡ್‌ಗಳ ಜೊತೆಗಿರುವ ಸುಖವೇ ಸುಖ.

ಆಗಸ್ಟ್ 13ರಂದು ದೆಹಲಿಯ ಪಾಲಂ ಏರ್ ಪೋರ್ಟ್ ಬಿಟ್ಟ ಏರ್ ಇಂಡಿಯಾ ವಿಮಾನ ಎರಡು ಗಂಟೆ ಕಳೆಯುವುದರೊಳಗಾಗಿ ಉಜ್ಬೆಕಿಸ್ತಾನ್ ರಾಜಧಾನಿ ತಾಷ್ಕೆಂಟ್ ತಲುಪಿತು. ಅಲ್ಲಿ ಕೆಲ ಅಫಘಾನಿಸ್ತಾನ್ ಯುವಕರನ್ನು ನೋಡಿದೆ. ಅವರ ಜೊತೆ ಮಾತನಾಡುವ ಸಮಯ ಸಿಕ್ಕಿತು. ಭಾಷೆಯ ಸಮಸ್ಯೆ ಎದುರಾಯಿತು. ಆದರೂ ಹಾಗೂ ಹೀಗೂ ಮಾತನಾಡಿದೆವು. ಆಗ ಅಫಘಾನಿಸ್ತಾನದಲ್ಲಿ ಕೇವಲ ಶೇಕಡಾ 2 ರಷ್ಟು ಹೆಣ್ಣುಮಕ್ಕಳು ಸಾಕ್ಷರರಾಗಿದ್ದರು. ಯುವಕರಿಗೆ ಐ.ಟಿ.ಐ. ನಂಥ ತರಬೇತಿಗಾಗಿ ತಾಷ್ಕೆಂಟ್‌ನಲ್ಲಿ ತರಬೇತಿ ಸಂಸ್ಥೆಗಳನ್ನು ತೆರೆಯಲಾಗಿತ್ತು. ಉಜಬೆಕಿಸ್ತಾನ್ ಮತ್ತು ಅಫಘಾನಿಸ್ತಾನ್ ಬಾರ್ಡರ್ ಹತ್ತಿಕೊಂಡಿದ್ದರಿಂದ ತಾಷ್ಕೆಂಟ್‌ನಲ್ಲಿ ಅಫಘಾನ್ ಯುವಕರಿಗೆ ಶಿಕ್ಷಣ ವ್ಯವಸ್ಥೆ ಮಾಡಲಾಗಿತ್ತು. ನಜೀಬುಲ್ಲಾ ಸರ್ಕಾರ ಮುಲ್ಲಾಗಳನ್ನು ಮತ್ತು ಜಮೀನುದಾರರನ್ನು ಹತೋಟಿಗೆ ತಂದು ಬಹುಸಂಖ್ಯಾತ ಬಡವರ ಪರವಾಗಿ ಹೇಗೆ ಕಾರ್ಯ ಮಾಡುತ್ತಿದೆ ಎಂಬುದನ್ನು ಅವರು ಕಷ್ಟಪಟ್ಟು ವಿವರಿಸುತ್ತಿದ್ದರು.

ತಾಷ್ಕೆಂಟ್ ವಿಮಾನ ನಿಲ್ದಾಣದಿಂದ ಹೊರಗೆ ಬಂದ ಕೂಡಲೇ ನನಗೆ ಆಶ್ಚರ್ಯ ಕಾದಿತ್ತು. ಎಲ್ಲೆಂದರಲ್ಲಿ ಭಾರತದ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿದ್ದವು. ಬೀದಿಗಳು ನಮ್ಮ ಧ್ವಜದಿಂದ ಕೂಡಿದ ಪರಪರಿಗಳಿಂದ ಅಲಂಕೃತವಾಗಿದ್ದವು. ಎಲ್ಲೆಂದರಲ್ಲಿ ನಮ್ಮ ರವಿಶಂಕರ್ ಸಿತಾರ್ ಮತ್ತು ಬಿಸ್ಮಿಲ್ಲಾ ಖಾನ್ ಶಹನಾಯಿ ನಾದಮಾಧುರ್ಯಕ್ಕೆ ಕಿವಿಗಳು ತೆರೆದುಕೊಳ್ಳತೊಡಗಿದವು.

ನಮ್ಮ ಗೈಡ್ ನಮ್ಮನ್ನು ಪಂಚತಾರಾ “ಹೋಟೆಲ್ ತಾಷ್ಕೆಂಟ್”ಗೆ ಒಯ್ದರು. ಅಲ್ಲಿಯೆ ರಿಷಪ್ಷನಿಸ್ಟ್ “ಇಂಜಿಷ್ಕಿ ದ್ರುಜಿಯೆ” (ಇಂಡಿಯನ್ ಫ್ರೆಂಡ್ಸ್) ಎಂದು ಖುಷಿಯಿಂದ ಬರಮಾಡಿಕೊಂಡರು. ಭಾರತದ ಬಗ್ಗೆ ಸೋವಿಯತ್ ದೇಶದವರಿಗೆ ಇದ್ದ ಅಭಿಮಾನ, ಪ್ರೀತಿ, ಗೌರವ ಕಂಡು ಆಶ್ಚರ್ಯಚಕಿತನಾದೆ.

ಇಲ್ಲಿಯವರೆಗೆ 15 ದೇಶಗಳನ್ನು ಸುತ್ತಿದರೂ ಅಂಥ ಆತ್ಮೀಯ ಮತ್ತು ಭಾವನಾತ್ಮಕ ಆತಿಥ್ಯವನ್ನು ಎಲ್ಲಿಯೂ ಅನುಭವಿಸಲಿಲ್ಲ. ಸೋವಿಯತ್ ದೇಶದವರಿಗೆ ಭಾರತೀಯರೆಂದರೆ ಎಲ್ಲಿಲ್ಲದ ಅಚ್ಚುಮೆಚ್ಚು. ಅವರಿಗೆ ಭಾರತ ಎಂದರೆ ಗಾಂಧಿ, ನೆಹರೂ, ಇಂದಿರಾ ಗಾಂಧಿ, ರಾಜ ಕಪೂರ್, ನರ್ಗಿಸ್, ರವಿಶಂಕರ್, ಬಿಸ್ಮಿಲ್ಲಾ ಖಾನ್. ತಾಷ್ಕೆಂಟ್ ರೇಡಿಯೋದಲ್ಲಿ ಪ್ರತಿದಿನ ಒಂದಿಷ್ಟು ಸಮಯ ಹಿಂದೀ ಹಾಡುಗಳಿಗೇ ಮೀಸಲಾಗಿತ್ತು. ಅಲ್ಲಿ ಹಿಂದಿ ಮಾಧ್ಯಮದ ಹೈಸ್ಕೂಲ್, ಗಂಗಾ ಬಜಾರ್, ಶಾಸ್ತ್ರೀ ಮಾರ್ಗ, ಶಾಸ್ತ್ರಿ ಮೂರ್ತಿ ಹೀಗೆ ಅನೇಕ ಸಂಗತಿಗಳು ನನ್ನನ್ನು ಮಂತ್ರಮುಗ್ಧ ಮಾಡಿದವು.

(ಮುಂದುವರಿಯುವುದು)