ಅಜ್ಜ ಬಲಿಪರು ಸ್ವಲ್ಪ ವಿಕ್ಷಿಪ್ತ ಸ್ವಭಾವದವರೂ ಹೌದು. ನಾಲ್ಕಾರು ದಿನಗಳ ಕಾಲು ಉಪವಾಸ ಇರಬಲ್ಲರು, ನಾಲ್ಕಾರು ದಿನದ ಭೋಜನವನ್ನು ಒಮ್ಮೆಗೇ ಮಾಡಬಲ್ಲರು. ಬಡತನ, ತಿರುಗಾಟದ ಬದುಕು ಅವರದ್ದಾಗಿತ್ತು. ಹಾಗಾಗಿ ಜೀವನ ಕ್ರಮದಲ್ಲಿಯೂ ಈ ರೀತಿಯ ವ್ಯತ್ಯಾಸಗಳಿದ್ದವು. ಅದರಿಂದ ಅವರ ಆರೋಗ್ಯವೂ ಏರುಪೇರಾದುದುಂಟು. ಆದರೆ ಅವರಿಗೆ ಮೊಮ್ಮಗನ ಕಂಠ ಶಕ್ತಿಯ ಮೇಲೆ ಅಗಾಧವಾದ ಭರವಸೆ ಇತ್ತು. ಆದರೆ ಅದನ್ನೆಂದೂ ಮೊಮ್ಮಗನೊಡನೆ ಹಂಚಿಕೊಂಡಿದ್ದಿಲ್ಲ. ತಮ್ಮ ನಡವಳಿಕೆಯಲ್ಲಿಯೇ ಅವರು ಪ್ರೀತಿ ವ್ಯಕ್ತಪಡಿಸುತ್ತಿದ್ದರಷ್ಟೇ.
‘ಬಲಿಪ ಮಾರ್ಗ’ ಸರಣಿಯಲ್ಲಿ ಕೃಷ್ಣ ಪ್ರಕಾಶ್ ಉಳಿತ್ತಾಯ ಬರಹ.

ಅಜ್ಜ ಬಲಿಪ ನಾರಾಯಣ ಭಾಗವತರ ನಡವಳಿಕೆ ಮತ್ತು ವ್ಯಕ್ತಿತ್ತ್ವ ವಿಕ್ಷಿಪ್ತವಾಗಿತ್ತು. ಪ್ರಾಯಶಃ ಇದಕ್ಕೆ ಕಾರಣ ಅವರ ಜೀವನದ ಬಹ್ವಂಶ ಸಮಯವನ್ನು ಏಕಾಂಗಿಯಾಗಿಯೇ ತಿರುಗಾಟದಲ್ಲೇ ಕಳೆದಿರುವುದಾಗಿರಬೇಕು. ತಮ್ಮ ಮೊದಲ ಪತ್ನಿಯ ವಿಯೋಗ ಅವರನ್ನು ಬಹಳವಾಗಿ ಕಾಡಿರಬಹುದು. ಧೀರ್ಘದೇಹಿಯಾದ ಹಿರಿಯ ಬಲಿಪ ನಾರಾಯಣ ಭಾಗವತರು ಅತ್ಯಂತ ಸ್ಫುರದ್ರೂಪಿಯಾಗಿ ಗೌರವರ್ಣದವರಾಗಿದ್ದವರು. ಉಡುಪು ತೊಡುಪುಗಳ ವಿಚಾರದಲ್ಲಿ ಅಷ್ಟೊಂದು ಕಾಳಜಿಯನ್ನಿಟ್ಟವರಲ್ಲ. ಧೋತಿ ಮೇಲೊಂದು ನಿಲುವಂಗಿ ಮತ್ತು ಶಾಲು ಕೆಲವೊಮ್ಮೆ ಶಲ್ಯವೇ ಮುಂಡಾಸು ಆಗಿಬಿಡುತ್ತಿತ್ತು. ಗಮನವಿಟ್ಟು ಉಡುಪನ್ನು ತೊಟ್ಟರೆ ಮನ್ಮಥನಂಥ ರೂಪು. ಆಟ ಮುಗಿದೊಡನೆಯೇ ಮತ್ತಿನ ಆಟದ ಬಿಡಾರಕ್ಕೆ ನಡೆದೇ ಹೊರಡುತ್ತಿದ್ದರು. ದಿನವೂ ಹತ್ತಾರು ಮೈಲಿಗಳ ಪಯಣ. ಹೀಗಾಗಿ ಆಹಾರದಲ್ಲಿ ಶಿಸ್ತು ಇರಲಿಲ್ಲ. ಆದರೆ ಆಹಾರದ ಆಯ್ಕೆಯ ವಿಚಾರದಲ್ಲೂ ಅಸಾಧಾರಣ ಗುಣವನ್ನು ತೋರುತ್ತಿದ್ದರು. ಉಪವಾಸವಿದ್ದರೆ ದಿನಗಟ್ಟಲೆ ಉಪವಾಸ; ತಿಂದರೆ ಅತಿಯಾಗಿ ತಿನ್ನುವದು- ಇದವರ ಸ್ವಭಾವವೋ, ಪರಿಸ್ಥಿತಿಯಪ್ರಭಾವವೋ ಇರಬಹುದು. ನಡಿಗೆಯ ಸಮಯ ನಾಲ್ಕಾರು ಕಬ್ಬಿನ ಜಲ್ಲೆಗಳನ್ನು ಹಿಡಿದುಕೊಂಡು ಜಗಿಯುತ್ತಾ ಸಾಗುತ್ತಿದ್ದರು. ಪ್ರಯಾಣದ ಆಯಾಸವೂ ಗೊತ್ತಾಗದೆ ದೇಹಕ್ಕೂ ಬೇಕಾದ ಪೋಷಕಾಂಶ ಇದರಿಂದ ಲಭಿಸುತ್ತಿತ್ತು. ಹೀಗೆ ಕಬ್ಬಿನ ಜಲ್ಲೆಯನ್ನು ಜಗಿದುಕೊಂಡು ನಡೆದುಕೊಂಡು ಹೋಗುವ ಕ್ರಮವನ್ನು ಮೊಮ್ಮಗ ಕಿರಿಯ ಬಲಿಪರೂ ಅಳವಡಿಸಿಕೊಂಡಿದ್ದರು. ಇದರಿಂದ ಹಲ್ಲು ದೃಢವಾಗಿರುತ್ತಿತ್ತಲ್ಲದೆ ದೇಹಕ್ಕೆ ಬೇಕಾದ ಪೌಷ್ಟಿಕಾಂಶವೂ ದೊರಕುತ್ತಿತ್ತು; ನಡೆವ ದಾರಿಯ ದಣಿವೂ ಆಗುತ್ತಿರಲಿಲ್ಲ. ಅಜ್ಜ ಬಲಿಪರಿಗೆ ಹುರಿದ ಗೋಡಂಬಿ ಬೀಜ ಅತ್ಯಾಪ್ತ. ಅವನ್ನು ಸಿಕ್ಕರೆ ನಾಲ್ಕೈದು ಸೇರು ತರಿಸಿ ಅದನ್ನು ಕೂಡಲೇ ತಿಂದು ಮುಗಿಸುತ್ತಿದರು. ಗೋಡಂಬಿಯನ್ನು ಕರಗಿಸಿಕೊಳ್ಳಲು ಬೇಕಾದ ಒಳ್ಳೆಯ ಜೀರ್ಣ ಶಕ್ತಿಯನ್ನೂ ಪಡೆದಿದ್ದರು. ಕಬ್ಬು, ಗೇರುಬೀಜ ಮತ್ತು ಹೆಸರುಕಾಳಿನ ಪರಮಾನ್ನ (ಪಾಯಸ) ಇವರಿಗೆ ಅತಿ ಪ್ರಿಯವಾದ ತಿನಿಸುಗಳು. ಹೆಸರು ಕಾಳಿನ ಪರಮಾನ್ನವನ್ನು ನಲವತ್ತು ಐವತ್ತು ಸೌಟಿನವರೆಗೂ ತಿನ್ನುತ್ತಿದ್ದರೆಂಬುದನ್ನು ಅತ್ಯುತ್ಸಾಹದಿಂದ ಕಿರಿಯ ಬಲಿಪರು ನೆನಪಿಸಿಕೊಳ್ಳುತ್ತಾರೆ. ನೂರಕ್ಕೂ ಮಿಕ್ಕಿದ ಬಾಳೆಹಣ್ಣುಗಳ ಗೊನೆಯನ್ನು ಮೆಲ್ಲುತ್ತಾ ಒಂದು ಸಂಜೆಯನ್ನು ಕಳೆದುಬಿಡುತ್ತಿದ್ದರು. ಆದರೆ ತಿಂದದ್ದು ಆರೋಗ್ಯಕ್ಕೆ ಆಗದು ಎಂಬುದು ಅವರ ಅರಿವಿಗೆ ಬರುತ್ತಲೇ, ಅದಕ್ಕೆ ಬೇಕಾದ ಚಿಕಿತ್ಸೆಯೂ ಅವರಲ್ಲಿಯೇ ಇತ್ತು. ತಕ್ಷಣಕ್ಕೇ ಅವರು ತಿಂದ ತಿನಿಸನ್ನು ವಾಂತಿ ಮಾಡಿ ಬಿಡುತ್ತಿದ್ದರು. ಅತಿ ನಿದ್ದೆ, ಅತಿಯಾಗಿ ತಿನ್ನುವುದು ಮುಂತಾದ ಅಸಾಮಾನ್ಯ ಜೀವನ ಕ್ರಮ ಅವರದಾಗಿತ್ತು. ಇಂಥಾ ಅವ್ಯವಸ್ಥಿತವಾದ ಜೀವನಕ್ರಮವನ್ನು ಅವರು ಹಲವು ವರುಷಗಳವರೆಗೆ ಅನುಸರಿಸಿದರು.ಇವೆಲ್ಲಕ್ಕೆ ಕಾರಣ ಅಂದಿನ ಯಕ್ಷಗಾನದ ತಿರುಗಾಟದ ಅವ್ಯವಸ್ಥಿತ ಸಂದರ್ಭ-ಸನ್ನಿವೇಶಗಳೂ.

ಒಮ್ಮೆ ಬೆಳ್ತಂಗಡಿ ಸಮೀಪ ಆಟ. ಒಂದು ತಿಂಗಳ ಕಾಲ ಸತತವಾಗಿ ಒಂದೆಡೆಯಲ್ಲೇ ನಡೆಯುವ ಆಟವದು. ತಮ್ಮ ಅಜ್ಜ ಅಂದು ಸುಮಾರು ಹದಿನೆಂಟು ಸೇರು ಹುರಿದ ಗೇರುಬೀಜವನ್ನು ಒಬ್ಬರೇ ಭಕ್ಷಿಸಿದ್ದರೆಂದು ಬಲಿಪರು ಈಗಲೂ ವಿಸ್ಮಯಪಡುತ್ತಾರೆ. ಇದು ಸೋಜಿಗವೂ ಹೌದು. ಹಿರಿಯ ಬಲಿಪರ ವ್ಯಕ್ತಿತ್ವದ ವಿಕ್ಷಿಪ್ತತೆಯೂ ಹೌದು.

ಎಷ್ಟೋ ಸಂದರ್ಭಗಳಲ್ಲಿ ಅಜ್ಜ ಬಲಿಪರು ನಡೆದುಕೊಂಡೇ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಿಂದ ಪೆರ್ಲಕ್ಕೆ (ಕೇರಳ ರಾಜ್ಯದ ಊರು) ಅಂದರೆ ಸುಮಾರು 20 ಕಿಲೋಮೀಟರ್ ದೂರವನ್ನು ಎರಡು ಘಂಟೆಯಲ್ಲಿ ಹೋಗುತ್ತಿದ್ದರು. ಜತೆಗೆ ಹೆಜ್ಜೆ ಇಡುತ್ತಿದ್ದ ಮೊಮ್ಮಗ ಬಲಿಪರಿಗೇ ಅಜ್ಜ ಬೈಯ್ಯುತ್ತಿದ್ದುದು “ನೀನೇ ನನಗೆ ತಡಮಾಡುವುದು” ಎಂದು. ದಾರಿಯ ಮಧ್ಯ ಕಾಫಿ ಚಾ ಏನೂ ಸೇವಿಸುತ್ತಿರಲಿಲ್ಲ.

ಅಜ್ಜ ಬಲಿಪರು ಸ್ವತಃ ಚೆನ್ನಾಗಿ ಅಡುಗೆಯನ್ನೂ ಮಾಡುತ್ತಿದ್ದರು. ತಮ್ಮ ಮನೆಗೆ ಯಾರೇ ಬಂದರೂ ಬಗೆ ಬಗೆಯ ತಿಂಡಿ ತಿನಸುಗಳನ್ನು ತಯಾರಿಸಿ ಬಂದವರನ್ನು ಪ್ರೀತಿಯಿಂದ ಉಪಚರಿಸಿ ಕಳುಹಿಸುತ್ತಿದ್ದರು. “ಬಾಲ್ಯದಲ್ಲಿ ವೇದಾಭ್ಯಾಸವನ್ನೂ ಮಾಡಿದ್ದರು. ಒಂದೆರಡು ಬಾರಿ ಕೀಚಕ, ಬಲರಾಮ ಮುಂತಾದ ವೇಷಗಳನ್ನು ಮಾಡಿ ರಂಗಸ್ಥಳದಲ್ಲಿ ಹೆಜ್ಜೆ ಹಾಕಿದ್ದರು. ಮೃದಂಗವಾದಕನಾಗಿ ಚೆಂಡೆವಾದಕನಾಗಿ ಮೇಳಗಳಲ್ಲಿ ತಿರುಗಾಟವನ್ನೂ ಮಾಡಿದ್ದರು. ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವಾಗ ಎದುರಾಗುವ ಹೊಳೆಗಳಲ್ಲಿ ನೆರೆ ಬಂದಾಗಲೂ ನಿರ್ಭಯದಿಂದ ಈಜಾಡುತ್ತಿದ್ದರು. ಕಡಿದಾದ ಬೆಟ್ಟವನ್ನೇರುವುದು, ಮರ ಹತ್ತುವುದು, ಇಕ್ಕಟ್ಟಾದ ಕಾಲು ಸಂಕಗಳನ್ನು ದಾಟುವುದು, ಹಳ್ಳಿಯ ದಾರಿಗಳಲ್ಲಿ ಕತ್ತಲು ಹೊತ್ತಿನಲ್ಲಿ ನಡೆದಾಡುವುದು ಮುಂತಾದ ಕ್ಲಿಷ್ಟ ಕಾರ್ಯಗಳನ್ನು ಅವರು ಹಿರಿ ವಯಸ್ಸಿನಲ್ಲಿಯೂ ಅನಾಯಾಸವಾಗಿ ಮಾಡುತ್ತಿದ್ದರು.

ತೆಂಕುತಿಟ್ಟು ಯಕ್ಷಗಾನದ ಮೇರು ಕಲಾವಿದರಾದ ಶ್ರೀ ಧರ್ಮಸ್ಥಳ ಮೇಳವನ್ನು ಹಲವಾರು ವರುಷಗಳ ಕಾಲ ನಡೆಸಿದ ದಿ. ಕುರಿಯ ವಿಠಲ ಶಾಸ್ತ್ರಿಗಳು ಕೂಡ ಹಿರಿಯ ಬಲಿಪರ ಕುರಿತು ‘ಕಲಾತಪಸ್ವಿ’ ಸಂಸ್ಮರಣ ಗ್ರಂಥದಲ್ಲಿ ಹೀಗೆ ಬರೆದಿದ್ದಾರೆ: “ಕಾಲ್ನಡಿಗೆಯಲ್ಲಿ ಸಾಗುವುದರಲ್ಲಿ ಆಗ ತರುಣರಾದ ನಮಗಿಂತ ಎಷ್ಟೋ ಪಾಲು ಬಲಿಷ್ಠರಾಗಿದ್ದರು ಬಲಿಪರು. ಆಟ ಮುಗಿಸಿ, ರಂಗಸ್ಥಳದಿಂದ ಜಾಗಟೆಯನ್ನೊಪ್ಪಿಸಿ ಹೊರಟು- ಒಂದಿಷ್ಟು ಕಬ್ಬು ಸಿಕ್ಕಿದರೆ ಅದನ್ನು ಜಗಿಯುತ್ತಾ ನಡೆಯ ತೊಡಗಿದರೆ, ಎಲ್ಲೂ ನಿಲ್ಲದೆ 25 ಮೈಲುಗಳಷ್ಟು ನಡೆದುದನ್ನೂ ನಾನು ನೋಡಿದ್ದೇನೆ. ಹಾಗೆ ನಡೆದರೂ ಅವರು ಆಯಾಸದ ನಿದ್ರೆಗೆ ಶರಣಾಗುತ್ತಿರಲಿಲ್ಲ. ಗೇರುಮರದಡಿಯಲ್ಲಿ ಕಂಬಳಿಯೊಂದನ್ನು ಹಾಸಿ, ಬಲಿಪ ಮಾವ “ಬಲಿಪನಂತೆ” (ಹುಲಿಯ ಪ್ರಬೇಧವೊಂದಕ್ಕೆ ಕರಾವಳಿಯಲ್ಲಿ ‘ಬಲಿಪ’ ಎಂದು ಹೇಳುತ್ತಿದ್ದರು) ಬಿದ್ದುಕೊಳ್ಳುತ್ತಿದ್ದರು. ಒಮ್ಮೊಮ್ಮೊ ಅವರು ಮೂರ್ನಾಲ್ಕು ದಿನಗಳವರೆಗೆ ಊಟವೇ ಮಾಡದೆ ಇದ್ದುದಿದೆ. ಹಾಗೆಯೇ ಊಟ ಮಾಡಬೇಕೆಂದು ತೋರಿದರೆ, ನನ್ನಂಥ ನಾಲ್ಕು ಮಂದಿಗಾಗುವಷ್ಟು ಅನ್ನವನ್ನು ರಾಸಿಕೊಂಡು ಸಂಪೂರ್ಣ ಉಂಡು ಮುಗಿಸಿದುದೂ ಇದೆ. ಎಲೆಯಡಿಕೆ ಮೆಲ್ಲುವಾಗ ಒಂದು ಮುದ್ದೆ ಸುಣ್ಣವನ್ನು ಎಲೆಯಲ್ಲಿಟ್ಟು ಬೆಣ್ಣೆಯನ್ನು ಮೆದ್ದಂತೆ ಸುಲಭವಾಗಿ ನುಂಗಿದುದೂ ಇದೆ; ತೊಗರಿಬೇಳೆ ತೊವ್ವೆಗೆ ಒಂದು ಹಿಡಿ ತುಂಬಾ ಉಪ್ಪು ಹಾಕಿ ಕಲಸಿ ಉಂಡುದೂ ಇದೆ. ನಿದ್ರೆ ಕೆಡುವುದರಲ್ಲೂ ಮುಂದು, ಮಲಗಿ ನಿದ್ರಿಸಿದರೆ, 2-3 ದಿನ ಯಾವುದಕ್ಕೂ ಏಳದೆ ಮುಸುಕು ಹಾಕಿ ಮಲಗಿರುವುದರಲ್ಲೂ ಹಾಗೆಯೇ.”

ಬಜ್ಪೆ ಎಂಬಲ್ಲಿ ನಡೆದ ಯಕ್ಷಗಾನದ ಒಂದು ನೆನಪು ಹೀಗಿದೆ ಎಂದು ಕುರಿಯ ವಿಠಲಶಾಸ್ತ್ರಿಗಳು ನೆನಪಿಸಿಕೊಳ್ಳುತ್ತಾರೆ: ‘ ಬಜ್ಪೆಯಲ್ಲಿ ಒಂದು ತಿಂಗಳ ಕಾಲ ಎಡೆಬಿಡದೆ ಆಟ ನಡೆದಿತ್ತು. ಸಂಚಾರಕ್ಕೆ ಬಸ್ ಸೌಕರ್ಯ ಇನ್ನೂ ಒದಗಿರಲಿಲ್ಲ. ಭಾಗವತರ ಅವಧೂತ ಮಾರ್ಗದ ದಿನಚರಿ ಆಗ ಹೀಗಿತ್ತು. ಬೆಳೆಗ್ಗೆ ಆಟ ಮುಗಿಸಿ, ರಂಗಸ್ಥಳದ ಬಳಿಯಿಂದ ನಡೆಯತೊಡಗಿದರೆ, ಎಂಟೂವರೆಯ ಹೊತ್ತಿಗೆ ಮರವೂರನ ಮೂಲಕ ಮಂಗಳೂರಿಗೆ ಬರುತ್ತಿದ್ದರು. ಅಲ್ಲಿ ಮಾರ್ಕೆಟಿನಲ್ಲಿ ಸೇರುಗಟ್ಟಲೆ ಗೇರು ಬೀಜ ಖರೀದಿ ಮಾಡಿ, ಎಲ್ಲಾದರೊಂದು ಕಡೆ ಕುಳಿತು ಅದನ್ನು ತಿಂದು, ಒಂದು ಬೀಡಿ ಸೇದಿ, ಏನಾದರೂ ಬರಹದ ಕೆಲಸಕ್ಕೆ ಕುಳಿತುಕೊಳ್ಳುತ್ತಿದ್ದರು. ಎಡೆಬಿಡದೇ ಸಂಜೆಯವರೆಗೂ ಬರೆಯುತ್ತಿದ್ದರು. ಏಳು ಗಂಟೆಗೆ ಪುನಃ ನಡಿಗೆ ಶುರು ಮಾಡಿ, ಬಜ್ಪೆಗೆ ಬಂದು ಬೆಳಗಿನ ತನಕವೂ ಭಾಗವತಿಕೆ ಮಾಡುತ್ತಿದ್ದರು. ಒಂದು ತಿಂಗಳ ಕಾರ್ಯಕ್ರಮ ಹೀಗೆ ಅವಿರತವಾಗಿ ಸಾಗಿತು. ಆಗ ಅನರಿಗೆ ಯಾವ ತೊಂದರೆಯೂ ಕಾಣಿಸಿಕೊಳ್ಳಲಿಲ್ಲ. ಆದರೆ ಅನಂತರ ರಕ್ತವಾಂತಿ ಆರಂಭವಾಗಿ, ಪುನಃ ಚೇತರಿಸಿಕೊಳ್ಳ ಬೇಕಾದರೆ ಮಳೆಗಾಲದ ಮೂರ್ನಾಲ್ಕು ತಿಂಗಳು ಚಿಕಿತ್ಸೆ ವಿಶ್ರಾಂತಿ ಬೇಕಾಯಿತು.’

ನಡಿಗೆಯ ಸಮಯ ನಾಲ್ಕಾರು ಕಬ್ಬಿನ ಜಲ್ಲೆಗಳನ್ನು ಹಿಡಿದುಕೊಂಡು ಜಗಿಯುತ್ತಾ ಸಾಗುತ್ತಿದ್ದರು. ಪ್ರಯಾಣದ ಆಯಾಸವೂ ಗೊತ್ತಾಗದೆ ದೇಹಕ್ಕೂ ಬೇಕಾದ ಪೋಷಕಾಂಶ ಇದರಿಂದ ಲಭಿಸುತ್ತಿತ್ತು. ಹೀಗೆ ಕಬ್ಬಿನ ಜಲ್ಲೆಯನ್ನು ಜಗಿದುಕೊಂಡು ನಡೆದುಕೊಂಡು ಹೋಗುವ ಕ್ರಮವನ್ನು ಮೊಮ್ಮಗ ಕಿರಿಯ ಬಲಿಪರೂ ಅಳವಡಿಸಿಕೊಂಡಿದ್ದರು.

ಅಜ್ಜ ಬಲಿಪರಿಗೆ ಹಲವು ಭಾಷಾ ಜ್ಞಾನ ಇತ್ತು. ಕನ್ನಡ, ಕೊಂಕಣಿ, ಬ್ಯಾರಿ, ತುಳು, ಹವ್ಯಕ, ಕರ್ಹಾಡ, ಹಿಂದಿ, ಮಲಯಾಳ ಹೀಗೆ ಹಲವು ಭಾಷೆಗಳು ಬರುತ್ತಿದ್ದವು.

ಇಂಥ ವಿಕ್ಷಿಪ್ತತೆಗೆ ಕಾರಣ ಅವರ ಮಡದಿಯ ಸಾವು. ಹಿಂದಿನ ಕಾಲದಲ್ಲಿ ಎಳವೆಯಲ್ಲಿಯೇ ಮದುವೆ ಮಾಡಿಬಿಡುತ್ತಿದ್ದರು. ಆದರೆ ಹಿರಿಯ ಬಲಿಪರ ಮೇಲೆ ಸಾವಿನ ದುಃಖ ಬಹಳ ಪರಿಣಾಮ ಬೀರಿತು.

ವಿದ್ಯೆಯ ಹಸಿವು ಅವರನ್ನು ಹಲವರ ಬಳಿಗೆ ಕರೆದೊಯ್ದಿತ್ತು. ಓದು, ಬರವಣಿಗೆಯ ನಡುವೆ ನಯ ನಾಜೂಕು ಒಪ್ಪ ಓರಣವೆಂಬುದು ಕ್ಷುಲ್ಲಕವೆನಿಸಿರಬಹುದು. ಯಕ್ಷಗಾನ ಕಲೆಗೆ, ಪ್ರಸಂಗ ರಚನೆಗೆ, ಪ್ರಸಂಗದಲ್ಲಿನ ಪಾತ್ರಗಳ ಸ್ವಭಾವ ಚಿತ್ರಣಕ್ಕೆ ಕವಿಗೆ ಅಗತ್ಯವಾಗಿ ಬೇಕಾದ ಲೋಕಜ್ಞಾನ ಅನುಭವ ಸಂಪನ್ನತೆ ಬಲಿಪರಿಗೆ ತಮ್ಮ ಜೀವನಾನುಭವದಿಂದ ದೊರಕಿದೆ. ಹಿರಿಯ ಬಲಿಪರ ಪ್ರಸಂಗಗಳನ್ನು ಅವಲೋಕನ ಮಾಡಿದಾಗ ಪಾತ್ರಗಳ ಶೀಲ ಸ್ವಭಾವಗಳನ್ನು ನೋಡಿದಾಗ ಹಿರಿಯ ಬಲಿಪರ ಲೋಕಜ್ಞಾನ, ಮನುಷ್ಯ ಭಾವ-ಶೀಲಗಳ ಕುರಿತು ಅವರಿಗಿದ್ದ ಗ್ರಹಿಕೆ, ನಿಲುವುಗಳು ಎಷ್ಟು ಸುಂದರವಾಗಿದ್ದವು ಎಂಬುದು ಗೊತ್ತಾಗುತ್ತದೆ.

ಕಿರಿಯ ಬಲಿಪರು ಅಜ್ಜನ ಈ ಗ್ರಹಿಕೆಯನ್ನು ಪ್ರಸಂಗವೊಂದರಲ್ಲಿ ಗುರುತಿಸುತ್ತಾರೆ. ಉದಾಹರಣೆಗೆ, ಅಹಲ್ಯಾ ಶಾಪ ಪ್ರಸಂಗದ ಇಂದ್ರನ ಪಾತ್ರ ಚಿತ್ರಣ.

ಅಜ್ಜನ ಜತೆಗೆ ಪದಹೇಳುತ್ತ

ಅಂದು ಕುಂಡಾವು ಮೇಳದ ಕೋಡಕಲ್ಲು ಹಾಸ್ಯಗಾರರು ಆಯೋಜಿಸಿದ ಟಿಕೆಟಿನ ಆಟ. ಕುಂಡಾವು ಮೇಳದಲ್ಲಿ ಕಿರಿಯ ಬಲಿಪರು ಪ್ರಧಾನ ಭಾಗವತರಾಗಿದ್ದಾಗ ಈ ಆಟ ನಡೆದ ನೆನಪು. ಅಜ್ಜ ಹಿರಿಯ ಬಲಿಪ ಭಾಗವತರು ಮತ್ತು ನೆಡ್ಲೆ ನರಸಿಂಹ ಭಟ್ಟರು ಅಲ್ಲಿಗೆ ಬಂದಿದ್ದರು. ಅಜ್ಜನನ್ನು ಬಿಡಾರಕ್ಕೆ ಕರಕೊಂಡು ಹೋಗಿ ಅವರಿಗೆ ಬೇಕಾದ ವ್ಯವಸ್ಥೆ ಮಾಡಿದ್ದಾಯಿತು. “ಕೃಷ್ಣಜನ್ಮ, ತಾಮ್ರಧ್ವಜ ಕಾಳಗ ಮತ್ತು ವೀರವರ್ಮಕಾಳಗ” ಪ್ರಸಂಗ ನಿರ್ಣಯವಾಗಿತ್ತು. ಅಂದು ಕೋಳ್ಯೂರು ರಾಮಚಂದ್ರರಾಯರದ್ದು ಮಾಯಾಪೂತನಿ ವೇಷ. ‘ನಾನು ರಂಗಸ್ಥಳಕ್ಕೆ ಹೋಗುವ ಹೊತ್ತಾಯಿತು. ತಾವು ಎಷ್ಟು ಹೊತ್ತಿಗೆ ರಂಗಸ್ಥಳಕ್ಕೆ ಬರುವಿರಿ’ ಎಂದು ಮೊಮ್ಮಗ ಕಿರಿಯ ಬಲಿಪರು ಅಜ್ಜ ಬಲಿಪರಲ್ಲಿ ಕೇಳಿದರಂತೆ. ‘ಯಾರಾದರೂ ಕರೆದುಕೊಂಡು ಬಂದಾರು ಬರುವೆ’ ಅಂದರಂತೆ. ಪ್ರಸಂಗ ಶುರು ಆಯಿತು. ಮೊಮ್ಮಗ ಬಲಿಪರು ಪದ ಹೇಳಿದರು. ಮಯಾಪೂತನಿಯ ಪ್ರವೇಶದ ಸಂದರ್ಭ ಬಂತು. ರಂಗಸ್ಥಳದ ಹಿಂದೆಯೇ ಅಷ್ಟುಹೊತ್ತಿಗೆ ಅಜ್ಜ ಕುರ್ಚಿಯಲ್ಲಿ ಕೂತಿದ್ದು, ಮಯಾಪೂತನಿಯ ಪ್ರವೇಶದ ಪದ ಹೇಳಲು ರಂಗವನ್ನೇರಿದರು. ‘ಇನ್ನು ಅಜ್ಜನೇ ಪದ ಹೇಳಿಯಾರು’ ಎಂದು ಕಿರಿಯ ಬಲಿಪರು ದೂರದ ಕುರ್ಚಿಯಲ್ಲಿ ಕುಳಿತು ಆಟ ನೋಡುತ್ತಿದ್ದರು.

ಶಕಟಧೇನುಕ ವಧೆಯಾಗುವವರೆಗೆ ಅಜ್ಜ ಪದ್ಯ ಹೇಳಿದ್ದರಂತೆ. ಆಗ ಅಜ್ಜ ಅಲ್ಲಿದ್ದವರಿಗೆ “ಎಲ್ಲಿ ಹೋದ ಅವ” ಎಂದು ಮೊಮ್ಮಗನನ್ನು ಹುಡುಕಲು ಶುರು ಮಾಡಿದರು.

ಅರಿವರಲ್ಲಿ ಕೇಳುತ್ತ ಅಜ್ಜ ಬಲಿಪರಿಗೆ ಸಿಟ್ಟು ನೆತ್ತಿಗೇರಿತ್ತು. “ಅವ ನಾನು ಯಾವಾಗ ಸಾಯ್ತೇನೋ ಅಂತ ಕಾಯುತ್ತಿರಬೇಕು” ಎಂದು ಸಿಡುಕಿದರು. ಈ ವಿಷಯ ಗೊತ್ತಾಗಿ ಕಿರಿಯ ಬಲಿಪರು ವೇದಿಕೆಗೆ ಬಂದಾಗ, “ ಎಲ್ಲಿಗೆ ಹೋದದ್ದು ನೀನು? ನಾನು ಪದ ಹೇಳಿಯೇ ಸಾಯಬೇಕು ಅಂತ ಯೋಚನೆ ಮಾಡಿದ್ದಿಯಾ” ಎಂದು ಅರಚಿದರು. ಅಜ್ಜನಿಗೆ ಯಾಕೆ ಸಿಟ್ಟು ಬಂದಿದೆ ಎಂದು ತಬ್ಬಿಬ್ಬಾದ ಕಿರಿಯ ಬಲಿಪರು ಒಂದು ಕ್ಷಣ ಏನೂ ತೋಚದೇ ನಿಂತರು. ಅಷ್ಟರಲ್ಲಿ, ಅಜ್ಜ ಬಲಿಪರು ಜಾಗಟೆ ಮತ್ತು ಕೋಲನ್ನು ಮೊಮ್ಮಗನ ಕೈಗೆ ಕೊಟ್ಟರು. ಆದರೆ ಪಡಿಯಿಂದ ಅಂದರೆ ಪದ ಹೇಳುವ ವೇದಿಕೆಯಿಂದ ಇಳಿಯಲಿಲ್ಲ.

ಮೊಮ್ಮಗ ಬಲಿಪರು ನಿಂತುಕೊಂಡೇ ಮುಂದಿನ ಪದಗಳನ್ನು ಹೇಳತೊಡಗಿದರು. ಆ ಸಂದರ್ಭ ಶಕಟ ಧೇನುಕರ ವಧೆ. ಆ ಸಂದರ್ಭಕ್ಕೆ ಹೊಂದುವಂತಹ ಸಿದ್ಧ ಪದ್ಯಗಳು ಪ್ರಸಂಗದಲ್ಲಿ ಇರಲಿಲ್ಲ. ಭಾಗವತನಾದವ ಪದ್ಯಗಳನ್ನು ರಂಗಸ್ಥಳದಲ್ಲೇ ಹೆಣೆದು ಹೇಳಬೇಕಿತ್ತು. ಪ್ರಾಯಶಃ ಅಜ್ಜ ಬಲಿಪರು, ಮೊಮ್ಮಗನ ಕವಿತಾಶಕ್ತಿಯನ್ನು ಪರೀಕ್ಷಿಸಲು ಹೀಗೆ ಮಾಡಿದ್ದಿರಬಹುದು. ಅಂದು ಅಜ್ಜ ರಂಗಸ್ಥಳದಲ್ಲೇ ಕುಳಿತು ಮೊಮ್ಮಗ ಪದ ಕಟ್ಟಿ ಹಾಡುವುದನ್ನು ಪದ್ಯವನ್ನು ಆಲಿಸಿದರು, ನೋಡಿದರು.

ಅಜ್ಜನ ಪರೀಕ್ಷೆಗಳೆಲ್ಲ ಹೀಗಿದ್ದವು. ಮೊಮ್ಮಗನ ಪದ್ಯಕ್ಕೆ ಆಕ್ಷೇಪ ಮಾಡುತ್ತಿರಲಿಲ್ಲ. ಆದರೆ ಪದ್ಯದ ಕ್ರಮ ಹೀಗಾಗಬೇಕು ಎಂದು ಹೇಳುತ್ತಿದ್ದರು. ಅಜ್ಜ ಬೆಳಗಿನವರೆಗೂ ಆಟ ನೋಡುತ್ತಿದ್ದರು. ಹೀಗೆಯೇ ಮೊಮ್ಮಗ ಆಟವಾಡಿಸುವ ಕ್ರಮವನ್ನು ಆಗಾಗ ಬಂದು ನೋಡಿ ಆನಂದಿಸುತ್ತಿದ್ದರು. ಅಂದು ಯಕ್ಷಗಾನ ಕ್ಷೇತ್ರದ ವಿಖ್ಯಾತ ಯಕ್ಷಗಾನ ಮೇಳದ ಯಜಮಾನರಾದ ದಿವಂಗತ ಕಲ್ಲಾಡಿ ಕೊರಗ ಶೆಟ್ಟರ ಮೇಳದಲ್ಲಿ “ಮಂಗಳಾಪುರ ಮಹಾತ್ಮ್ಯ” ಪ್ರಸಂಗವನ್ನು ಹಿರಿಯ ಬಲಿಪ ಭಾಗವತರು ಇಡೀ ರಾತ್ರಿ ನೋಡಿದ್ದರು. ಪದ್ಯಗಳನ್ನು ಕೇಳಿ ಸಂತೋಷವಾದರೆ, ಮೊಮ್ಮಗ ಬಲಿಪರ ಎದುರು ಎಂದೂ ಹೊಗಳಿದ್ದಿಲ್ಲ. ಬೇರೆಯವರಲ್ಲೂ ಹೊಗಳಿದ್ದಿಲ್ಲ. ಆದರೆ ತಮ್ಮ ಪ್ರೀತಿಯ ಧಾರೆಯನ್ನು ಅಮೂರ್ತವಾಗಿ ಅವರ ನಡವಳಿಕೆಯಿಂದ ಧಾರೆ ಎರೆದಿದ್ದಾರೆ ಎಂಬುದನ್ನು ಕಿರಿಯ ಬಲಿಪರು ನೆನಪಿಸಿಕೊಳ್ಳುತ್ತಾರೆ.