”ಒಂದು ಸಲ ಅಸ್ವಸ್ಥರಾಗಿದ್ದ ಗಾಂಧೀಜಿಯವರು ಆರೋಗ್ಯವನ್ನು ಸುಧಾರಿಸಿಕೊಳ್ಳಲು ನಂದಿ ಬೆಟ್ಟದಲ್ಲಿ ತಂಗಿದ್ದಾಗ, ಸರ್ಕಾರ ಅವರನ್ನು ನೋಡಿಕೊಳ್ಳಲು ಕೈಲಾಸಂ ಅವರನ್ನು ನೇಮಿಸಿತ್ತು. ಆವಾಗ ಅವರ ಮನರಂಜನೆಗಾಗಿ, ಟಿ. ಚೌಡಯ್ಯನವರ ಪಿಟೀಲು ವಾದನ ಏರ್ಪಡಿಸಿದ್ರು. ಕೈಲಾಸಂ ಚೌಡಯ್ಯನವರನ್ನು ಗಾಂಧೀಜಿಗೆ ಗುರ್ತು ಮಾಡಿಸುತ್ತಾ, ‘ಬಾಪು ! ಯು ಆರ್ ಅ ಗ್ರೇಟ್ ನಾನ್ -ವೈಯೊಲೆನ್ಸಿಸ್ಟ್. ಮೀಟ್ ಅವರ್ ಗ್ರೇಟ್ ವೈಯೊಲಿನಿಸ್ಟ್ ಟಿ. ಚೌಡಯ್ಯ’ ಅಂದಾಗ ಬಾಪುವಿನ ಮುಖದಲ್ಲಿ ಮುಗುಳ್ನಗೆ ಕಾಣಿಸಿತು”
ಹಿರಿಯ ಬರಹಗಾರ ಮತ್ತು ಬ್ಲಾಗರ್ ಇ. ಆರ್. ರಾಮಚಂದ್ರನ್ ಬರೆಯುವ ಟಿ.ಪಿ.ಕೈಲಾಸಂ ನೆನಪುಗಳ ಎರಡನೆಯ ಕಂತು.

 

ಕೈಲಾಸಂ ಜಿಯಾಲಜಿಯಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿ, ಅದರಲ್ಲಿ ಎಷ್ಟು ನಿಪುಣತೆ ಪಡೆದಿದ್ದರು ಅಂದರೆ ವಿದೇಶದಲ್ಲಿ ಅಲ್ಲಿನ ವಿಶ್ವವಿದ್ಯಾನಿಲಯ ಅವರ ಸಾಧನೆಗೆ, ಪ್ರತಿಭೆಗೆ ಚಿನ್ನದ ಪದಕ ನೀಡಿತ್ತು. ಬಹಳ ದೇಶದಿಂದ ಬಂದ ಛಾತ್ರಗಳ ಜೊತೆಗೆ ಅಧ್ಯಯನ ಮಾಡಿ, ಅವರಲ್ಲಿ ಶ್ರೇಷ್ಟರಾಗಿ ಮುಂದೆ ಬಂದವರಿಗೆ ಮಾತ್ರ ಈ ತರಹದ ಪ್ರಶಸ್ತಿ ಗಳಿಸಲು ಸಾಧ್ಯ. ಅಂಥಹ ಕೈಲಾಸಂ ಭಾರತಕ್ಕೆ ಬಂದು ಮುತುವರ್ಜಿ ವಹಿಸಿ ಕೆಲಸ ಶುರು ಮಾಡಿದರು.

೧೯೧೫ ರಲ್ಲಿ ಅವರು ಕೋಲಾರದಲ್ಲಿ ಚಿನ್ನದ ಗಣಿಯಲ್ಲಿ ಕೆಲಸ ಮಾಡಲು ಶುರು ಮಾಡಿದರು. ಅವರು ಕೆಲಸವಾದ ಮೇಲೆ ಅಲ್ಲಿಯ ಕೆಲಸಗಾರರ ಜೊತೆಗೆ ಬೆರೆಯುತ್ತಿದ್ದರು. ಸ್ವಭಾವತಃ ಸ್ನೇಹ ಪ್ರಾಣಿಯಾದ ಕೈಲಾಸಂ ಕೆಲಸ ಮಾಡುತ್ತಿದ್ದ ಬಡ ಕೂಲಿಯಾಳುಗಳ ಜೊತೆಗೆ ಬೆರೆತು ಕೆಲಸವಾದ ಮೇಲೆ ವಿವಿಧ ವಿನೋದಾವಳಿಯಲ್ಲಿ ಪಾಲ್ಗೊಳ್ಳಲಾರಂಭಿಸಿದರು. ಇದು ಬಿಳಿ ದೊರೆಗಳಿಗೆ ಸರಿ ಕಾಣಿಸಲಿಲ್ಲ. ಕೈಲಾಸಂ ಅವರೆಲ್ಲರಿಗಿಂತಲೂ ಹೆಚ್ಚು ಓದಿ ಅವರು ಬುದ್ಧಿವಂತರೆಂದು ಅವರು ಓದಿದ ವಿಶ್ವ ವಿದ್ಯಾನಿಲಯವೇ ಸಾರಿತ್ತು. ಚಿನ್ನದ ಪದಕವನ್ನು ಕೊಟ್ಟು ಅವರ ಪ್ರತಿಭೆಯನ್ನು ಗುರ್ತಿಸಿತ್ತು. ಅದು ಮೊದಲೇ ಈರ್ಷೆ ಮತ್ತು ಹೊಟ್ಟೆಕಿಚ್ಚಿನ ವಿಷಯವಾಗಿತ್ತು ಅವರ ಜೊತೆ ಕೆಲಸ ಮಾಡುತ್ತಿದ್ದ ಆಂಗ್ಲ ಅಧಿಕಾರಿಗಳಿಗೆ. ಅದರ ಜೊತೆ ಎಲ್ಲರೊಂದಿಗೂ ಓಡಾಡಿ, ಬೆರೆತು, ಸ್ನೇಹಪೂರ್ಣ ವಾತಾವರಣದೊಂದಿಗೆ ಕೈಲಾಸಂ ಕೆಲಸ ಮಾಡುವುದು ಅವರಿಗೆ ಸುತರಾಂ ಇಷ್ಟವಾಗಲಿಲ್ಲ. ಅದಕ್ಕೆ ಸಮಯ ಸಿಕ್ಕಾಗೆಲ್ಲಾ ಅವರ ಕೆಲಸದ ಬಗ್ಗೆ ಏನಾದರೂ ಹುಳುಕು ಹುಡುಕಿ, ಅದರಲ್ಲಿ ಹೆಚ್ಚು ಕಡಿಮೆಯಾದರೆ ಮೇಲಧಿಕಾರಿಗಳಿಗೆ ದೂರು ಹೋಗುತ್ತಿತ್ತು. ಕಿರುಕುಳ ನಾನಾ ರೀತಿಯಲ್ಲಿ ಕೊಡಬಹುದು. ಅದರಲ್ಲೂ ಆ ದಿನಗಳಲ್ಲಿ ಒಬ್ಬ ಭಾರತೀಯನು ತಮಗಿಂತ ಹೆಚ್ಚು ಓದಿದವನು, ನಿಷ್ಟಾವಂತ ಬಿಳಿ ದೊರೆಗಳ ಸಂಗಡ ಸರಿಸಮನಾಗಿ ಕೆಲಸ ಮಾಡುತ್ತಿದ್ದದ್ದು ಅವರಿಗೆ ಒಂದು ನುಂಗಲಾರದ ತುತ್ತಾಗಿತ್ತು. ಅದಕ್ಕೇ ನಾನಾ ರೀತಿಯಲ್ಲಿ ಕಿರುಕುಳ ಕೊಡಲಾರಂಭಿಸಿದರು.

ಇ. ಆರ್. ರಾಮಚಂದ್ರನ್ ಸಂಗ್ರಹದಲ್ಲಿರುವ ಕೈಲಾಸಂ ಸ್ಕೂಲ್ ಮೆಡಲ್

ಈ ತರಹದ ವಿಷಯಗಳು ಆಗಿನ ಕಾಲದಲ್ಲಿ ಹೊಸಾದೇನೂ ಆಗಿರಲಿಲ್ಲ. ನಮ್ಮ ಕರ್ನಾಟಕದಲ್ಲಿ ಸರ್. ಎಮ್. ವಿಶ್ವೇಶ್ವರಯ್ಯನವರಂಥ ಇಂಜಿನಿಯರ್ ಹುಟ್ಟೇ ಇಲ್ಲ ಅಂಥ ಈಗಲೂ ಹೇಳಬಹುದು. ಅವರ ಪ್ರಾಮಾಣಿಕತನ, ಅವರು ಕೆಲಸದಲ್ಲಿ ತೋರಿಸಿದ ಮೇಧಾವಿತನ, ಪ್ರತಿಭೆ, ಶ್ರದ್ಧೆ ದೇಶ ವಿದೇಶದಲ್ಲಿ ಎಲ್ಲರಿಗೂ ಗೊತ್ತಿರುವ ವಿಷಯ. ಆಗಿನ ಕಾಲದಲ್ಲೇ ಬ್ರಿಟಿಷ್ ಇಂಜಿನಿಯರ್ಗಳೇ ಅವರನ್ನು ಹಾಡಿ ಹೊಗಳಿದ್ದಾರೆ. ಅಷ್ಟಾದರೂ ಬೊಂಬಾಯಿ ಸರ್ಕಾರ ಅವರಿಗೆ ಚೀಫ್ ಇಂಜಿನಿಯರ್ ಹುದ್ದೆ ಕೊಡಲು ನಿರಾಕರಿಸಿತು. ಆ ಹುದ್ದೆ ಬರೀ ಬ್ರಿಟಿಷರಿಗೆ ಮೀಸಲಾಗಿತ್ತು. ಆಗ ಒಬ್ಬ ಬ್ರಿಟಿಷ್ ಅಧಿಕಾರಿ ತನ್ನ ನಿಸ್ಸಹಾಯಕತೆಯನ್ನು ಅವರಿದುರಿಗೇ ತೋಡಿಕೊಂಡು, ನಿಮಗೆ ಚೀಫ್ ಇಂಜಿನಿಯರಿಗಿಂತ ಜಾಸ್ತಿ ಸಂಬಳ ಕೊಡ್ತೀನಿ, ನಿಮಗೆ ರಿಟೈರಾದಮೇಲೆ ೨ ವರ್ಷ ಎಕ್ಸ್ಟೆನ್ಷನ್ ಕೊಡ್ತೀನಿ ಎಂದು ಆಶ್ವಾಸನೆ ಕೊಟ್ಟಾಗ ಅದು ಯಾವುದಕ್ಕೂ ವೀಶ್ವೇಶ್ವರಯ್ಯನವರು ಒಪ್ಪಲಿಲ್ಲ. ಅವರು ದುಡ್ಡಿನ ಆಸೆಗೆ ಬೀಳಲಿಲ್ಲ. ಅವರಿಗೆ ಬೇಕಾದದ್ದು ಒಂದೇ – ತಾನು ಮಿಕ್ಕವರೆಲ್ಲವರಿಗಿಂತಲೂ ಕೆಲಸದಲ್ಲಿ ಮುಂದಿದ್ದರೆ ಅದಕ್ಕೆ ತಕ್ಕ ಹಾಗೆ ಪ್ರಶಸ್ತಿ ಯಾಕೆ ದೊರೆಯುತ್ತಿಲ್ಲ ಎಂದೇ? ಅದರಿಂದ ವಂಚಿತರಾದರೆ ಯಾವ ಕಾರಣವೇ ಆಗಿರಲಿ, ಆ ಕೆಲಸದಲ್ಲಿ ಮುಂದುವರಿಯುವುದು ಅವರಿಗೆ ಇಷ್ಟವಿರಲಿಲ್ಲ.

ಆಗಿನ ಕಾಲದಲ್ಲಿ ಬ್ರಿಟಿಷ್ ಅಧಿಕಾರಿಗಳಿಗೆ ಅವರದೇ ಆದ ಕ್ಲಬ್ ಇತ್ತು. ಅದರಲ್ಲಿ ಆ ಮೆಂಬರ್ಸ್ ಗಳು ಕೆಲಸವಾದಮೇಲೆ ಸಂಜೆ ಕಲೆತು ಆಟ ಮೋಜಿನಲ್ಲಿ ಸಮಯ ಕಳೆಯುತ್ತಿದ್ದರು. ಆದರೆ ವರ್ಣ ಭೇದವೋ ಯಾವ ಕಾರಣವೋ ಸರಿ, ಅದರಲ್ಲಿ ಭಾರತೀಯವರಿಗೆ ಪ್ರವೇಶವಿರಲಿಲ್ಲ. ವಿಶ್ವೇಶ್ವರಯ್ಯನವರು ಮಹಾರಾಜರ ಅಪ್ಪಣೆ ಪಡೆದು ಕಡಿಮೆ ಅಂದರೆ ನೂರು ಭಾರತೀಯ ಅಧಿಕಾರಿಗಳಿಗಾಗಿ ‘ಸೆಂಚುರಿ’ ಕ್ಲಬ್ ಅನ್ನು ಬೆಂಗಳೂರಿನಲ್ಲಿ ಶುರುಮಾಡಿದರು. ಈಗಲೂ ಸೆಂಚುರಿ ಕ್ಲಬ್ ಉತ್ತಮ ಕ್ಲಬ್ ಗಳಲ್ಲಿ ಒಂದಾಗಿದೆ. ಹಾಗೆಯೇ ದಸರಾದಲ್ಲಿ ಬ್ರಿಟಿಷ್ ಅಧಿಕಾರಿಗಳು ಮತ್ತು ಅವರ ಕುಟುಂಬದವರು ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದರು, ಭಾರತೀಯರಗೆ ನೆಲದಮೇಲೆ ಕೂಡಬೇಕಾಗಿತ್ತು. ಇದನ್ನೂ ವಿಶ್ವೇಶ್ವರಯ್ಯನವರು ತೆಗೆದು ಹಾಕಿಸಿದರು.

ಕೈಲಾಸಂ ಅವರಿಗೆ ಯಾವಾಗ ಕೆಲಸ ಮಾಡಲು ಅಸಹ್ಯವಾದ ವಾತಾವರಣ ನಿರ್ಮಾಣವಾಯಿತೋ, ಯಾವಾಗ ಅಲ್ಲಿ ಮುಂದುವರಿಯುವುದು ತಮ್ಮ ಆತ್ಮಾಭಿಮಾನಕ್ಕೆ ಧಕ್ಕೆಯಾಗುತ್ತದೆ ಅಂತ ಅನ್ನಿಸಿತೋ ಅವರು ತಕ್ಷಣವೇ ಕೆಲಸದಿಂದ ರಾಜೀನಾಮೆ ಕೊಟ್ಟರು. ರಿಸೈನ್ ಮಾಡುವಾಗಲೂ ‘ಸಿಗ್ನೇಚರ್’ ಜೋರಾಗಿ ಇರಬೇಕೆಂದು ಪೇಜಿನ ಪೂರ್ತಿ ಸೈನ್ ಮಾಡಿದರು!

ಇದೊಂದು ಬಹಳ ವಿಷಾದದ ಸಂಗತಿಯೆಂದೇ ಹೇಳಬೇಕು. ಸಣ್ಣ ಕ್ಲಾಸಿನಿಂದ ಕಾಲೇಜಿನವರೆಗೆ ಮೊದಲನೇ ಕ್ಲಾಸಿನಲ್ಲಿ ತೇರ್ಗಡೆಯಾಗಿ ಯಾವ ಸರ್ಕಾರ ಆವಾಗ ಆಳುತ್ತಿತ್ತೋ, ಅವರ ವಿಶ್ವವಿದ್ಯಾನಿಲಯದಲ್ಲೇ ಉನ್ನತ ವ್ಯಾಸಾಂಗ ಮಾಡಿ, ಡಿಗ್ರಿಯ ಜೊತೆಗೆ ಜಿಯಾಲಜಿಯಲ್ಲಿ ಅಗ್ರಗಣ್ಯತೆಯನ್ನು ಪಡೆದು ಸ್ವದೇಶಕ್ಕೆ ಮರಳಿ, ಕೊನೆಗೆ ಸ್ವದೇಶದಲ್ಲೇ ಸೇವೆ ಸಲ್ಲಿಸಲಾಗಲಿಲ್ಲ ಅಂದರೆ, ಅದಕ್ಕಿಂತ ದುಖಃದ ಮಾತು ಬೇರೊಂದಿಲ್ಲ. ಆಗಿನ ಕಾಲದಲ್ಲಿ ಮಹಾರಾಜರ ಆಡಳಿತದಲ್ಲಿ ಬ್ರಿಟಿಷ್ ಅಧಿಕಾರಿಗಳ ಮುಂದೆ ಬಹಳ ಜನ ತಲೆ ಬಾಗಿಸಬೇಕಾಗಿತ್ತು ಅನ್ನಿಸುತ್ತೆ. ಸ್ವಾತಂತ್ರ್ಯ ಬರುವುದಕ್ಕೆ ಮುಂಚೆ ಭಾರತದಲ್ಲಿ ಅನೇಕರು ಈ ರೀತಿಯ ಅವಮಾನವನ್ನು ಸಹಿಸಿರಬೇಕು..

ಕೈಲಾಸಂ ಅವರ ಜೀವನದಲ್ಲಿ ಕೆಲಸ ಬಿಟ್ಟಿದ್ದು ಅವರ ಜೀವನದಲ್ಲಿ ಒಂದು ದೊಡ್ಡ ದುರಂತವೆಂದೇ ಹೇಳಬಹುದು. ಈ ತ್ಸುನಾಮಿಯ ಪರಿಣಾಮ ಮನೆಯಲ್ಲೂ ಕಾಣಿಸಿಕೊಳ್ಳತೊಡಗಿತು. ತಂದೆ ಜಸ್ಟಿಸ್ ಪರಮಶಿವ ಐಯರ್ ಹಳೆಯ ಸಂಪ್ರದಾಯದವರು. ಕೈಲಾಸಂ ಮಹಾರಾಜರ ಆಡಳಿತದಲ್ಲಿದ್ದ ಕೆಲಸ ಬಿಟ್ಟು ಮನೆಗೆ ಬಂದಿದ್ದು ಅವರಿಗೆ ಸುತಾರಾಂ ಇಷ್ಟವಿರಲಿಲ್ಲ. ಕೈಲಾಸಂ ಅವರ ವಿಲಾಯಿತಿಯಲ್ಲಿ ಓದಿಗೆ ಮೈಸೂರಿನ ಮಹಾರಾಜರೂ ಸ್ವಲ್ಪ ಹಣವನ್ನು ಒದಗಿಸಿದ್ದರು ಅಂತ ಒಂದು ಸುದ್ದಿಯೂ ಇದ್ದಿತು. ಕೆಲಸ ಹೋದ ರೀತಿ ತಂದ ವೈಷಮ್ಯ ತಂದೆ ಮಗನಲ್ಲಿ ಜೀವನ ಉದ್ದಕ್ಕೂ ವಿಷದ ಹಾಗೆ ಬೆಳೆದು ಅವರಿಬ್ಬರ ಮಧ್ಯ ಒಂದು ಕಂದಕವೇ ಏರ್ಪಟ್ಟಿತು.

ಆಗಿನ ಕಾಲದಲ್ಲಿ ಬ್ರಿಟಿಷ್ ಅಧಿಕಾರಿಗಳಿಗೆ ಅವರದೇ ಆದ ಕ್ಲಬ್ ಇತ್ತು. ಅದರಲ್ಲಿ ಆ ಮೆಂಬರ್ಸ್ ಗಳು ಕೆಲಸವಾದಮೇಲೆ ಸಂಜೆ ಕಲೆತು ಆಟ ಮೋಜಿನಲ್ಲಿ ಸಮಯ ಕಳೆಯುತ್ತಿದ್ದರು. ಆದರೆ ವರ್ಣ ಭೇದವೋ ಯಾವ ಕಾರಣವೋ ಸರಿ, ಅದರಲ್ಲಿ ಭಾರತೀಯವರಿಗೆ ಪ್ರವೇಶವಿರಲಿಲ್ಲ. ವಿಶ್ವೇಶ್ವರಯ್ಯನವರು ಮಹಾರಾಜರ ಅಪ್ಪಣೆ ಪಡೆದು ಕಡಿಮೆ ಅಂದರೆ ನೂರು ಭಾರತೀಯ ಅಧಿಕಾರಿಗಳಿಗಾಗಿ ‘ಸೆಂಚುರಿ’ ಕ್ಲಬ್ ಅನ್ನು ಬೆಂಗಳೂರಿನಲ್ಲಿ ಶುರುಮಾಡಿದರು.

ಕೈಲಾಸಂ ಮನೆಯ ಹೆಸರು ‘ವೈಟ್ ಹೌಸ್ ’ ಬಹಳ ಸುಂದರವಾಗಿ ಸುಸಜ್ಜಿತವಾಗಿ ಅಮೇರಿಕ ರಾಷ್ಟ್ರಪತಿ ಇರುವ ನಿವಾಸದ ಮಾದರಿಯ ಹಾಗೆಯೇ ಕಟ್ಟಲ್ಪಟ್ಟಿತ್ತು. ಅದನ್ನು ಬಿಟ್ಟು ಕೈಲಾಸಂ ಕುದುರೆ ಲಾಯದ ಹಾಗಿದ್ದ ‘ಔಟ್ ಹೌಸಿಗೆ’ ಹೋದರು. ಮುಂದೆ ಅವರನ್ನು ನೋಡಲು ಬರುತ್ತಿದ್ದವರಿಗೆ, ‘ಅವರ್ ಹೌಸ್ ಈಸ್ ವೈಟ್ ಹೌಸ್, ಐ ಆಮ್ ಇನ್ ಇಟ್ಸ್ ಔಟ್ಹೌಸ್’ ಎಂದು ಹೇಳಿಕೊಳ್ಳುತ್ತಿದ್ದರು. ಇನ್ನೊಂದು ಸಲ, ‘ಐ ಆಮ್ ದಿ ಬ್ಲಾಕ್ ಸ್ಪಾಟ್ ಇನ್ ವೈಟ್ ಹೌಸ್’ ಅಂತಲೂ ಹೇಳಿಕೊಂಡಿದ್ದರು.

ಕೆಲಸದ ಮುಂಚೆ ಅವರ ಸಾಹಿತ್ಯ ಸೇವೆ ಸಮಯ ಸಿಕ್ಕಾಗ ಮಾಡಿತ್ತಿದ್ದವರು ಈಗ ಸೀದಾ ಅದಕ್ಕೇ ಧುಮುಕಿದರು. ಒಂದು ಸಲ ಕೈಲಾಸಂ ಅವರನ್ನು ನೋಡಲು ಬಂದ ಡಿವಿಜಿ, ಕೈಲಾಸಂ ಇದ್ದ ಜಾಗವನ್ನು ನೋಡಿ ಬೇಸರಿಸಿಕೊಂಡು, ದುಃಖಿಸಿದಾಗ “ನನ್ನ ‘ನೂಕ’ನ್ನ ಕನ್ಡೆಮ್ ಮಾಡಿಬಿಟ್ರಲ್ಲಾ ಡಿವಿಜಿ.. ನಮ್ಮ ಪಕ್ಕದಲ್ಲಿರುವ ಡ್ವೆಲ್ಲರ್ಸ್ ಎಮ್ ಏ ಸ್ ಗೊತ್ತಾ..? ಬಂದು ಮೀಟ್ ಮಾಡಿ.” ಡಿವಿಜಿ ಹೋಗಿ ನೋಡಿದಾಗ ಅಲ್ಲಿ ಎರೆಡು ಎಮ್ಮೆಗಳು ನಿಂತಿದ್ದವಂತೆ.

ಆವಾಗಿನಿಂದ ಕೈಲಾಸಂ ನಾಟಕಗಳು, ಪದ್ಯ ಮತ್ತು ಇಂಗ್ಲಿಷ್ ನಾಟಕಗಳನ್ನು ಬರೆಯಲು ಪ್ರಾರಂಭಿಸಿದರು. ‘ಬರೆಯಲು’ ಎಂದು ಹೇಳಿದ್ದು ತಪ್ಪಾಯಿತಲ್ಲಾ! ಅವರ ಕನ್ನಡ ಪಾಂಡಿತ್ಯ ಸ್ವಲ್ಪ ಅಷ್ಟಕಷ್ಟೆ. ಆದರೆ ಕನ್ನಡ ಅರಳು ಹುರಿದ ಹಾಗೆ ಮಾತನಾಡುತ್ತಿದ್ದರು. ಬರೀ ಪೌರಾಣಿಕ ನಾಟಕಗಳಿದ್ದ ಕಾಲದಲ್ಲಿ ಸಾಮಾಜಿಕ ನಾಟಕಗಳು ಒಂದಾದ ಮೇಲೆ ಒಂದು ಅವರ ತಲೆಯಲ್ಲಿ ಸೃಷ್ಟಿಯಾಯಿತು. ಅವರ ಸ್ನೇಹಿತರು ಆ ನಾಟಕಗಳನ್ನು ಬರೆಯಲು ಮುಂದಾದರು. ಬಿ.ಎಸ್. ರಾಮರಾವ್, (ಬಿಟ್ರೆ ಸಿಕ. ರಾಮರಾವ್ ಎಂದು ಪ್ರೀತಿಯಿಂದ ಕರೆಯುವರು), ಬಿ.ಎಸ್. ವೆಂಕಟ್ರಾಮ್, ಕಂದಾಡೆ ಕೃಷ್ಣ ಐಯಂಗಾರ್, ಜಿ.ಪಿ. ರಾಜರತ್ನಂ, ಇ.ಆರ್. ಸೇತೂರಾಮ್, ಕೊರವಂಜಿಯ ರಾ.ಶಿ. (ಡಾ. ಶಿವರಾಂ), ತಿ.ತಾ. ಶರ್ಮ, ಕೆ.ವಿ ಐಯರ್ ಮುಂತಾದವರ ಪರಿಶ್ರಮದಿಂದ ಅನೇಕ ನಾಟಕಗಳು ರಚನೆಯಾದವು. ಅವರ ಹೆಂಡತಿ ಕಮಲಮ್ಮ ಅವರ ‘ಬಹಿಷ್ಕಾರ’ ನಾಟಕವನ್ನು ಬರೆದರು.

ಗದ್ಯ, ಪದ್ಯವನ್ನು ಬರೆಯುವುದೇ ಕಷ್ಟ. ಅದರಲ್ಲೂ ಮಾತೃಭಾಷೆಯಲ್ಲದ ಬೇರೆ ಭಾಷೆಯಲ್ಲಿ ನಾಟಕಗಳನ್ನು ಬರೆಸಿದರು ಎಂದರೆ ಗಮನಾರ್ಹ. ನಾಟಕದಲ್ಲಿ ಆಗುಹೋಗುವ ಘಟನೆಗಳು, ಜಾಗ, ಹೊತ್ತು ಗೊತ್ತು ಎಲ್ಲವನ್ನೂ ಜ್ಞಾಪಕದಲ್ಲಿಟ್ಟುಕೊಂಡು, ಎಲ್ಲರ ವಾಕ್ಯಗಳ ಮಧ್ಯೆ ಇಂಗ್ಲಿಷ್, ತೆಲುಗು, ಉರ್ದು ಸೇರಿಸಿ ನಾಟಕಗಳನ್ನು ಹೆಣೆದಿದ್ದು ಒಂದು ಅದ್ಭುತವೇ ಸರಿ! ಟೊಳ್ಳುಗಟ್ಟಿ, ಬಂಡ್ವಾಳ್ವಿಲ್ಲದ ಬಡಾಯಿ, ಹೋರೂಲು, ಪಾತು ತೌರ್ಮನೆ, ಪೋಲೀ ಕಿಟ್ಟಿ, ಅಮ್ಮಾವ್ರ ಗಂಡ, ನಮ್ ಕಂಪ್ನಿ, ನಮ್ ಬ್ರಾಹ್ಮಣಿಕೆ, ಗಂಡಸ್ಕತ್ರಿ, ಅನುಕೂಲಕೊಬ್ಬಣ್ಣ, ಹುತ್ತದಲ್ಲಿ ಹುತ್ತ ಮುಂತಾದ ನಾಟಕಗಳು ರಂಗ ಭೂಮಿಗೆ ಬರಲಾರಂಭಿಸಿದವು. ಕಾಶೀಗೆ ಹೋದ ಬಮ್ ಭಾವ ಪದ್ಯ, ಪರ್ಪಸ್, ದ ಕರ್ಸ ಇಂಗ್ಲಿಷ್ ನಾಟಕಗಳನ್ನು ಬರೆದರು.

ಈ ನಾಟಕಗಳು ಸಾಮಾಜಿಕ ಜೀವನಕ್ಕೆ ಕನ್ನಡಿಯಾದವು. ಇವರ ನಾಟಕಗಳಲ್ಲೇ ವಿತಂತು, ವಿಧವೆಯ ಪಾತ್ರದವರು ಮೊದಲಬಾರಿಗೆ ರಂಗಭೂಮಿಯ ಮೆಟ್ಟಲು ಹತ್ತಿದ್ದು; ಅಲ್ಲಿಯವರಿಗೆ ಅವರನ್ನು ಯಾರೂ ಅಡಿಗೆ ಮನೆಯಿಂದ ದಾಟಿಸಿ ಹೊರಗೆ ತಂದಿರಲಿಲ್ಲ! ಯಾವ ನಾಟಕವೇ ಆಗಿರಲಿ ಅದರಲ್ಲಿ ಅವರ ಹಾಸ್ಯದ ತುಣುಕು, ವಿನೋದದ ಪಟಾಕಿಯನ್ನು ಹಾರಿಸುತ್ತಿದ್ದರು.

ಒಂದು ಸಲ ;
ನಾಟಕ ಬರೆಸುತ್ತಾ..

ಕೈಲಾಸಂ : ಕಸ್ಬಾ ಹೋಬ್ಳಿ…
ಆನಂದ (ಬರೆದು ಕೊಳ್ಳುತ್ತಾ) : ಕಸಬಾ ಹೋಬಳಿ..
ಕೈಲಾಸಂ : ಹಾಗಲ್ಲ ರಾಜಾ… ‘ಸ’ ಗೆ’ಬಾ’ ಒತ್ತು, ‘ಬಿ’ಗೆ ’ಳ’ ಒತ್ತು ಬರಿ.
ಆನಂದ : ಹಾಗೆ ಬರೆದ್ರೆ ಜನ ನಗಲ್ವೆ ಸಾರ್ ?
ಕೈಲಾಸಂ : ಜನ ನಗ್ಲೀಂತಾನೇ ಹೀಗ್ ಬರೆಸ್ತಿರೋದು. ತೆಪ್ನೆ ಹೇಳಿದ್ಹಾಗೆ ಬರೀ ರಾಜಾ..

ಪೋಲೀ ಕಿಟ್ಟೀಲಿ ,
(ಇವನು ಪೋಲೀನೇಂತ ಅನ್ಸುತ್ತೆ ಅವನ ಮಾತು ಕೇಳಿದ್ರೆ; ಒಳ್ಳೇ ಯೋಗಿ ಅಂತಾರಲ್ಲ ಹಾಗಿದ್ದ ! )

‘ಬನ್ನಿ ಸಾರ್! ಏಳಿ, ಬೆಂಕೀಗೆ ಬೆದರ್ಕೊಂಡು ಹೊರಗ್ಬಂದಿದ್ಹಾಯ್ತು… ಈಗ್ಹೊರಗ್ ಛಳಿ.. ಒಳಗ್ಬನ್ನಿ! ಪ್ರಪಂಚಾನೆ ಹಾಗೇ ಅಲ್ವೇ… ನಿನ್ನೆ ಮಳೆ, ಇವತ್ತು ಬೆಂಕಿ.. ನಾಳೆ ಬಿಸಿಲು !!”

ಜಿಯಾಲಜಿಸ್ಟ್ ಆಗಿದ್ದ ಕೈಲಾಸಂ ಹೀಗೆ ಬರೆದರು ;

ಅಲ್ಪಜ್ಞನ ಪದ :

ಕಲ್ಲಲ್ಲಿ ಸಿಗುವುದೇ ಕಲ್ಲಿದ್ದಲೆಂದೆನಿಸಿ
ಕಲ್ಲನ್ನು ಕೊರೆಯಲು- ಎಲ್ಲೆಲ್ಲಿ ಕೊರೆದರೂ
ಕಲ್ಲಲ್ಲದೊಂದಿಲ್ಲ – ಬಲ್ಲೆ
ಕಲ್ಲೇ ಇದ್ದಿಲೆಂದನಲ್ಪಜ್ಞ!

ಟೊಳ್ಳುಗಟ್ಟಿಯಲ್ಲಿ ಬಾಗೀರಥಮ್ಮ ಹೇಳಿದ್ದು ಹೀಗೆ :

‘ನಮ್ಮ ಮನೆಗಳಲ್ಲಿ- ಈ ಭೂಮೀಲಿ ಜೀವಿಸೋಕೆ ದೇವರಿಗೆ ಕೊಡೋ ಬಾಡಿಗೆ ಅಂದ್ರೆ ಸುತ್ತ ಮುತ್ತಲೂ ಇರೋ ಜನರಿಗೆ ಉಪಕಾರವಾಗಿರೋದೇ’ ಎಂಬ ಉದ್ದೇಶಾನ ಮುಂದಿಟ್ಕೊಂಡು, ನಮ್ಮ ಮಕ್ಳ್ನ ಸಾಕಿ, ಗುಣಗಳನ್ನ ಬಿತ್ತಿ, ಬೇಳಸಿ, ಸ್ಕೂಲಿಗೆ ಕಳಿಸಿ, ಸ್ಕೂಲಿನಲ್ಲಿ ನಾವು ಈಗ ಅನುಸರಿಸುತ್ತಿರುವ ಕೊಂಡಿ ಇಲ್ಲ್ದ ಪಾತಾಳಗರಡಿ ಕ್ರಮಾನ ಬಿಟ್ಟು ನಮ್ ಮಕ್ಳ ಸ್ವಭಾವದಲ್ಲಿರೋ ಗುಣಗಳ್ನ ಹೊರಗೆ ಸೆಳೆಯುವ ವಿದ್ಯಾಸ ಕ್ರಮವೊಂದನ್ನೇರ್ಪಡಿಸಿಕೊಂಡು, ಅದನ್ನು ಅನುಸರಿಸಿದರೇನೆ ನಮ್ಮ ದೇಶದ ಏಳಿಗೆ.

ಕೈಲಾಸಂ ಮನೆಯ ಹೆಸರು ‘ವೈಟ್ ಹೌಸ್ ’ ಬಹಳ ಸುಂದರವಾಗಿ ಸುಸಜ್ಜಿತವಾಗಿ ಅಮೇರಿಕ ರಾಷ್ಟ್ರಪತಿ ಇರುವ ನಿವಾಸದ ಮಾದರಿಯ ಹಾಗೆಯೇ ಕಟ್ಟಲ್ಪಟ್ಟಿತ್ತು. ಅದನ್ನು ಬಿಟ್ಟು ಕೈಲಾಸಂ ಕುದುರೆ ಲಾಯದ ಹಾಗಿದ್ದ ‘ಔಟ್ ಹೌಸಿಗೆ’ ಹೋದರು. ಮುಂದೆ ಅವರನ್ನು ನೋಡಲು ಬರುತ್ತಿದ್ದವರಿಗೆ, ‘ಅವರ್ ಹೌಸ್ ಈಸ್ ವೈಟ್ ಹೌಸ್, ಐ ಆಮ್ ಇನ್ ಇಟ್ಸ್ ಔಟ್ಹೌಸ್’ ಎಂದು ಹೇಳಿಕೊಳ್ಳುತ್ತಿದ್ದರು. ಇನ್ನೊಂದು ಸಲ, ‘ಐ ಆಮ್ ದಿ ಬ್ಲಾಕ್ ಸ್ಪಾಟ್ ಇನ್ ವೈಟ್ ಹೌಸ್’ ಅಂತಲೂ ಹೇಳಿಕೊಂಡಿದ್ದರು.

ಕೈಲಾಸಂ ನಮ್ಮ ತಂದೆಯ ಸೋದರತ್ತೆಯ ಮಗನೆಂದು ಹೇಳಿದ್ದೆ. ಅವರು ಇಂಗ್ಲೆಂಡಿನಿಂದ ಬಹಳ ಸಾಮಾನುಗಳನ್ನು ತಂದಿದ್ದರು. ಅದರಲ್ಲಿ ಸನ್ ಬೀಮ್ ಸೈಕಲ್ಲೂ ಒಂದು. ಅದು ನಮ್ಮ ಮನೆಯಲ್ಲಿ ಇಟ್ಟಿದ್ದರು. ಅದರಲ್ಲೇ ನಾನು ಮತ್ತು ನನ್ನ ಅಣ್ಣಂದಿರು ಅಕ್ಕಂದಿರೆಲ್ಲರೂ ಸೈಕಲ್ ಬಿಡಲು ಕಲಿತಿದ್ದು.

ಅಮೇರಿಕಾದಲಿದ್ದ ನನ್ನ ಅಣ್ಣ ಸೂರಿಯ ಮಗ ರಾಜು ಅಲ್ಲಿ ಒಬ್ಬಳು ಐರಿಷ್ ಹುಡುಗಿ ಮೊಯ್ರಾಳನ್ನು ಮದುವೆ ಆದಾಗ, ನಾವೆಲ್ಲಾ ಅದು ‘ಐಯರ್- ಐರಿಷ್’ ಮದುವೆ ಅಂತ ಗಲಾಟೆ ಮಾಡಿದ್ದೆವು. ಬಹಳ ವರ್ಷದ ಹಿಂದೆ ಯಾರೋ ಕೈಲಾಸಂರನ್ನು ನಿಮಗೆ ಮತ್ತು ಬರ್ನಾರ್ಡ ಷಾ ವಿಗೆ ಏನು ವ್ಯತ್ಯಾಸ ಎಂದು ಕೇಳಿದ್ದಕ್ಕೆ ಅವರು, ಬರ್ನಾರ್ಡ ಷಾ ಈಸ್ ಐರಿಷ್, ಐ ಆಮ್ ಐಯರಿಷ್ ಎಂದು ಹೇಳಿದ್ದರು.

ಅವರಲ್ಲಿ ಇದ್ದ ಬಹಳ ಒಳ್ಳೆ ಗುಣವೆಂದರೆ ತಮ್ಮನ್ನು ತಾವೇ ಹಾಸ್ಯ ಮಾಡಿಕೊಳ್ಳುತ್ತದ್ದರು.

ಡಿಸೆಂಬರ್ ೨೬, ೧೯೪೫ರಲ್ಲಿ ಮದ್ರಾಸಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದ ಕೈಲಾಸಂ ಬಾವುಟ ಹಾರಿಸುವಾಗ, ದ್ವಜಸ್ಥಂಭವೇ ಮುರಿದುಕೊಂಡಿ ಕೆಳಗೆ ಬಿತ್ತು. ದ್ವಜಾರೋಹಣವಾದಮೇಲೆ ಕೈಲಾಸಂ ಹೇಳಿದ್ರು ಹೀಗೆ : ‘ಬಡ್ಕೊಂಡೆ, ನನ್ ಕೈಲಿ ಮಾಡಿಸ್ಬೇಡ್ರೋಂತ ಕೇಳ್ಲಿಲ್ಲ… ನನ್ನ ಕೈ ಬಿದ್ರೆ ಏನಿದ್ರೂ ಅದು ಲಾಸೇ!’

ಒಂದು ಸಲ ಯಾರೋ ಕೈಲಾಸಂನ ಕಾಳಿದಾಸ, ಭಾಸ, ವ್ಯಾಸ ಅವರಿಗೆ ಹೋಲಿಸಿದಾಗ, ಅಲ್ಲೇ ಇದ್ದ ಕೈಲಾಸಂ ಹೀಗಂದ್ರು :

‘ಎಳೇ ನಾಗರ –
ಎಷ್ಟೆತ್ರ ಎಗರಿದ್ರೂ ನೂವೆ
ಹಳೇ ವಾಸುಕಿ ಹತ್ರ –
ಬಿಚ್ಬಾರ್ದೂ ಬಾಲಾನ !!’

ಮನೆಯವರ ಸಂಪರ್ಕ ಕಳೆದು ಹೋಗಿ ಮನನೊಂದಿದ್ದ ಅವರ ಮನಸ್ಸು ಒಮ್ಮೆ ಹೀಗೆ ಬರೆಸಿತು :

‘ಹೋಂ! ಹೋಂ! ಸ್ವೀಟ್ ಹೋಂ!
ದೆರೀಸ್ ನೊ ಪ್ಲೇಸ್ ಲೈಕ್ ಹೋಂ
ಫಾರ್ ಕೈಲಾಸಂ’

‘ಹುತ್ತದಲ್ಲಿ ಹುತ್ತ’ ನಾಟಕವನ್ನು ಬರೆದು, ನಾಟಕವನ್ನಾಡಿಸಿ ಅದರಲ್ಲಿ ಬಂದ ಮೊತ್ತ ದುಡ್ಡನ್ನು ವಿಕ್ಟೋರಿಯ ಹಾಸ್ಪೆಟಲ್ ಮೆಟರ್ನಿಟಿ ವಾರ್ಡು ಕಟ್ಟಲು ಕೊಟ್ಟರು. ಬಹಳ ಕಷ್ಟದಲ್ಲಿದ್ದರೂ ಅವರು ಬಹಳ ಸ್ವಾಭಿಮಾನಿ. ಅವರ ಮಿತ್ರರು ಒಂದು ವಾರ ಅವರ ನಾಟಕಗಳನ್ನು ಆಡಿಸಿ, ವಿವಿಧ ವಿನೋದಾವಳಿ ಮಾಡಿ ಅದರಿಂದ ಬಂದ ಹಣವನ್ನು ಕೊಡಲು ಬಂದಾಗ ಅವರು ಕೇಳಿದ್ದು ಒಂದೇ ಒಂದು ವಸ್ತು. ಕಿಟ್ಟಲ್ ಕನ್ನಡ- ಇಂಗ್ಲಿಷ್ ಡಿಕ್ಷನರಿ ಅಷ್ಟೆ!

ಒಂದು ಸಲ ಅಸ್ವಸ್ಥರಾಗಿದ್ದ ಗಾಂಧೀಜಿಯವರು ಆರೋಗ್ಯವನ್ನು ಸುಧಾರಿಸಿಕೊಳ್ಳಲು ನಂದಿ ಬೆಟ್ಟದಲ್ಲಿ ತಂಗಿದ್ದಾಗ, ಸರ್ಕಾರ ಅವರನ್ನು ನೋಡಿಕೊಳ್ಳಲು ಕೈಲಾಸಂ ಅವರನ್ನು ನೇಮಿಸಿತ್ತು. ಆವಾಗ ಅವರ ಮನರಂಜನೆಗಾಗಿ, ಟಿ. ಚೌಡಯ್ಯನವರ ಪಿಟೀಲು ವಾದನ ಏರ್ಪಡಿಸಿದ್ರು. ಕೈಲಾಸಂ ಚೌಡಯ್ಯನವರನ್ನು ಗಾಂಧೀಜಿಗೆ ಗುರ್ತು ಮಾಡಿಸುತ್ತಾ, ‘ಬಾಪು ! ಯು ಆರ್ ಅ ಗ್ರೇಟ್ ನಾನ್ -ವೈಯೊಲೆನ್ಸಿಸ್ಟ್. ಮೀಟ್ ಅವರ್ ಗ್ರೇಟ್ ವೈಯೊಲಿನಿಸ್ಟ್ ಟಿ. ಚೌಡಯ್ಯ’ ಅಂದಾಗ ಬಾಪುವಿನ ಮುಖದಲ್ಲಿ ಮುಗುಳ್ನಗೆ ಕಾಣಿಸಿತು.

(ಡಿವಿಜಿ)

ಮದ್ಯ ಅವರಿಗೆ ಪ್ರಿಯವಾದದ್ದು. ಅವರಿಗೆ ಸಿಗರೇಟಿನ ಜೊತೆ ಪ್ರಚೋದಿಸಿದು ಹೌದು. ಅದೆ ಅವರಿಗೆ ಮುಳುವಾಯಿತೇ? ಅವರೇ ‘ಲಿಕ’ರಾಯಣದಲ್ಲಿ ಹೇಳಿದ್ದು ಹೀಗಿತ್ತು.

‘ಲಿಕ’ರಾಯಣ

ಬಾರ್ ಗ್ಹೋಗಿ ಕೂತಾಗ ಕುಡ್ಯೋಕ್ಮುಂಚೆ ಮನುಷ್ಯ ಸ್ವಲ್ಪ -ಮೊರೋಸು
ನಂತ್ರ ಸ್ವಲ್ಪ ಕುಡೀತಿದ್ಹಾಗೆ ಕೊಡ್ತಾನವ್ನು ದೇವದಾಸ್ – ಪೋಸು
ಮತ್ತಷ್ಟು ಕುಡದ್ಮೇಲೆ, ಮತ್ತೇರಿ ಕೂತಲ್ಲೇ ಕಾಣ್ತಾನೆ- ಪ್ಯಾರಡೈಸು
ಆಮೇಲೆ ಕುಡದ್ರೆ ಅವನ ಮಂಡೆ ಆಗುತ್ತೆ ಯದ್ವಾ ತದ್ವಾ -ಲೂಸು
ಇಷ್ಟಾದ್ಮೇಲೂ ಕುಡ್ಯೋದ್ನ ಮುಂದ್ವರ್ಸೋನು ಖಂಡಿತ -ಕ್ಲೋಸು
ಇದ್ರಿಂದ ಅವನ್ನ ನಂಬಿರೋರ್ಗೆ -ಲಾಸೋಲಾಸು

ಕೈಲಾಸಂ ಆನ್-ದಿ-ಸ್ಪಾಟ್ ಉತ್ತರ ಕೊಡುವುದರಲ್ಲಿ ನಿಸ್ಸೀಮರೆಂದು ಅನ್ನಿಸಿಕೊಂಡಿದ್ದರು ಮತ್ತು ಪ್ರೇಕ್ಷಕರಿಗೂ ಅದು ಅತ್ಯಂತ ಪ್ರಿಯವಾಗಿತ್ತು. ‘ಥಟ್ಟನೆ ಹೇಳಿ’ ಎಂದು ಟಿವಿಯಲ್ಲಿ ನಾವು ನೋಡುವ ಕ್ವಿಝ್ ಕಾರ್ಯಕ್ರಮ. ಆದ್ರೆ ಕೈಲಾಸಂ ಸ್ಟೇಜಿನ ಮೇಲೇ ಹೇಗೆ ಜವಾಬು ನೀಡುತ್ತಿದ್ದರು ನೋಡೋಣ. ಇದು ಮೈಸೂರಿನ ಮಹಾರಾಜ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಕೈಲಾಸಂ ನೀಡಿದ ‘ಕ್ಯು ಅಂಡ್ ಎ’ ಸೆಷನ್ ನ ಉತ್ತರಗಳು :

ಒಬ್ಬ : ರಾಮಾಯಣದಲ್ಲಿ ಹನುಮಂತ ಅಷ್ಟು ದೂರ ಹಾರಿದನಲ್ಲಾ… ಅವನು ಏನು ಕುಡೀತಿದ್ದ ಸಾರ್ ?
ಕೈಲಾಸಂ : ಅವನು ಕುಡೀತಿದ್ದದ್ದು ಹಾರ್ಲಿಕ್ಸ್… ಅದಕ್ಕೇ ಅವನಿಗೆ ಹಾಗೆ ಹಾರ್ಲಿಕ್ಕೆ ಆಗಿದ್ದು..
ಇನ್ನೊಬ್ಬ : ರಾಮ ಏನ್ಕುಡೀತಿದ್ದ ಸಾರ್?
ಕೈಲಾಸಂ : ರಾಮ, ಲಕ್ಷ್ಮಣ, ಅರ್ಜುನ, ಏಕಲವ್ಯ ಎಲ್ಲಾ ಕುಡಿತ್ತಿದ್ದದ್ದು… ಆರೊ ರೂಟ್ ಗಂಜಿ. ಅದಕ್ಕೆ ಅವರು ಬಿಟ್ಟ ಬಾಣ ಗುರಿ ತಲುಪ್ತಿತ್ತು.
ಮತ್ತೊಬ್ಬ: ಕರ್ಣ ಏನು ಕುಡಿತಿದ್ದ?
ಕ್ಯಲಾಸಂ : ಕರ್ಣ, ಕುಂತಿ, ಕುಚೇಲ ಕುಡೀತಾ ಇದ್ದದ್ದು ಕೊಕೊ. ಅದಕ್ಕೆ ಅವರನ್ನು ಯಾರು ಏನು ಕೇಳಿದರೂ ಕೊ ಕೊ ಅಂತ ಕೊಟ್ಟುಬಿಡೋವ್ರು..

ಕೊನೆಯವ : ಭೀಮನ ಟೆಲಿಗ್ರಾಫ್ ಅಡ್ರೆಸ್ ಏನು ಸಾರ್ ?
ಕೈಲಾಸಂ : ಬರ್ಕೋ ಮಗು ‘ಹುಷಾರ್’
ಕೊನೆಯವ : ಭೀಮನ ಟೆಲಿಫೋನ್ ನಂಬರ್ ?
ಕೈಲಾಸಂ : ಬರ್ಕೋ ರಾಜಾ – ೮೮೨೪೮೨.
ಕೊನೆಯವ : ಸ್ವಲ್ಪ ಬಿಡಿಸಿ ಹೇಳ್ತೀರಾ..?
ಕೈಲಾಸಂ : ಆ ನಂಬರ್ ಗಳ್ನ ಸ್ಟೈಲಾಗಿ ಹೇಳಿದ್ರೆ – ಡಬಲೆ ಏಟು ಫರ್ ಏಟು!! ಇದೇ ಭೀಮನ ಪಾಲಿಸಿ (ಎಸ್ ಎಮ್ ಎಸ್ ಭಾಷೆಯಲ್ಲಿ ಹೀಗೆ ಅಲ್ವೆ ನಾವು ಈಗ ಬರಿಯೋದು! )

ಅವರದೇ ಮನೆಯಿಲ್ಲದ ಕಾರಣದಿಂದ ಕೈಲಾಸಂ ಅವರನ್ನು ಸ್ನೇಹಿತರು ಒತ್ತಾಯ ಮಾಡಿ ಅವರನ್ನು ಅವರ ಮನೆಯಲ್ಲಿ ಇರಿಸಿಕೊಳ್ಳುತ್ತಿದ್ದರು. ಹಾಗೆ ಕೊರವಂಜಿಯ ಡಾ. ಶಿವರಾಂ (ರಾಶಿ) ದಂಪತಿಗಳ ಮನೆಯಲ್ಲಿ ಕೈಲಾಸಂ ಆಗಾಗ್ಗೆ ಅತಿಥಿಯಾಗಿ ಹೋಗಿ ಅಲ್ಲಿರುತ್ತಿದ್ದರು. ಒಮ್ಮೆ ಅವರು ಕೈಲಾಸಂನ ಊಟಕ್ಕೆ ಎಬ್ಬಿಸಿದಾಗ, ಅವರು ದಂಪತಿಗಳನ್ನು ಮೊದಲು ಊಟ ಮಾಡುವುದಕ್ಕೆ ಕೇಳಿಕೊಂಡರು. ಅವರು ಆಕ್ಷೇಪಿಸಿದಾಗ, ಕೈಲಾಸಂ, ‘ಇವತ್ತು ನನ್ನ ತಾಯಿಯ ಪುಣ್ಯ ತಿಥಿ. ಇಂದು ಮನೆಗಳಲ್ಲಿ ಬ್ರಾಹ್ಮಣ ದಂಪತಿಗಳನ್ನು ಕರೆದು ಊಟ ಹಾಕುತ್ತಾರೆ. ನನಗೆ ನಿಮಗಿಂತ ಶ್ರೇಷ್ಟ ದಂಪತಿಗಳೆಲ್ಲಿ ಸಿಗುತ್ತಾರೆ?’ ಎಂದರು ಆ ದಂಪತಿಯ ಕಣ್ಣೀರಿನ ಮಧ್ಯ.

ಒಂದು ಕಡೆ ಜನ ಅವರ ನಾಟಕಗಳನ್ನು ಮೆಚ್ಚಿ ಅವರ ಖ್ಯಾತಿ ಹೆಚ್ಚಿದಂತೆ ಇನ್ನೊಂದು ಕಡೆ ದುಡ್ಡಿನ ಆಭಾವದಿಂದ, ಒಂಟಿಯಾದ ನೀರಸ ಬಾಳಿನಿಂದ ಅವರ ಜೀವನ ಏರುಪೇರಾಯಿತು. ಅವರು ಎಷ್ಟು ಸ್ವಾಭಿಮಾನಿಗಳಾಗಿದ್ರು ಆಂದರೆ ಎಂತಹ ಕಷ್ಟ ಬಂದಾಗಲೂ ಅವರು ತಂದೆಯಿಂದ ಕಿಲುಬು ಕಾಸೂ ಕೇಳಿರಲಿಲ್ಲ. ಆಗರ್ಭ ಶ್ರೀಮಂತಿಕೆ ಅವರದಾಗಿತ್ತು. ಆದರೆ ಅದನ್ನು ಕೇಳಿ ಪಡೆಯುವುದಕ್ಕೆ ಅವರು ಎಂದೂ ಸಿದ್ಧವಾಗಿರಲಿಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ನೋಡಿಕೊಂಡು ಕಷ್ಟ ಕಾರ್ಪಣ್ಯಗಳನ್ನು ಎದುರಿಸಲು ಯಾವಾಗಲೂ ತಯಾರಾಗಿದ್ದರು. ನಮ್ಮ ತಂದೆ ರಾಮನಾಥ್ ಸೆರಿಕಲ್ಚರ್ ಡಿಪಾರ್ಟಮೆಂಟಿನಲ್ಲಿ ಕೆಲಸಮಾಡುತ್ತಿದ್ದರು. ಹಾಗಾಗಿ ಅವರಿಗೆ ಪದೇ ಪದೇ ಕೆಲಸದಲ್ಲಿ ವರ್ಗವಾಗುವುದು ಸಾಮಾನ್ಯವಾಗಿತ್ತು. ಆದರೂ ಅಣ್ಣ ತಮ್ಮ ಒಬ್ಬರಿಗೊಬ್ಬರಿಗೆ ಸಂಪರ್ಕವಿಟ್ಟುಕೊಂಡಿದ್ದರು.

ಕೈಲಾಸಂ ೧೯೪೫ರಲ್ಲಿ ಮುಂಬಯಿಗೆ ಹೋಗಿ ಅಲ್ಲಿ ಮೈಸೂರ್ ಅಸೋಸಿಯೇಷನ್ ನಲ್ಲಿ ನಾಟಕ, ವಿವಿಧ ವಿನೋದಾವಳಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅವರು ಅಲ್ಲಿಂದ ವಾಪಸ್ಸು ಬರುವಷ್ಟರಲ್ಲಿ ಅವರ ಆರೋಗ್ಯ ಹದಗೆಟ್ಟಿತ್ತು. ಬೆಂಗಳೂರಿಗೆ ಬಂದು ಅವರ ಭಾವ ವಿ.ಟಿ. ಶ್ರೀನಿವಾಸನ್ ಮನೆಯಲ್ಲಿದ್ದರು. ಅಲ್ಲಿಂದ ‘ರಾಶಿ’ ಯವರ ಮನೆಗೆ ಹೋಗಬೇಕಾಗಿತ್ತು. ಆದರೆ ಅದಕ್ಕೆ ಮುಂಚೆಯೇ ಕೈಲಾಸಂ ಕಾಲವಾದರು. ಅವರು ಜೂನ್ ೨೩ರ ಭಾನುವಾರ, ೧೯೪೬ರಲ್ಲಿ ಕಾಲವಾದರು. ಅಸಂಖ್ಯಾತ ಸ್ನೇಹಿತರು, ನಾಟಕಕ್ಕೆ ಹಿಂಡು ಹಿಂಡಾಗಿ ಬಂದ ಅಭಿಮಾನಿಗಳು ಅವರ ಅಂತಿಮ ದರ್ಶನ ಪಡೆದರು. ಮಹಾರಜ ಜಯಚಾಮರಾಜ ಒಡೆಯರ್ ಅವರೂ ಬಂದು ಅವರ ಅಂತಿಮ ದರ್ಶನ ಪಡೆದರು. ಅವರ ಅಂತ್ಯ ಕ್ರಿಯೆ ಕೆಂಪಾಂಭುದಿ ಕೆರೆಯ ಹತ್ತಿರವಿರುವ ರುದ್ರಭೂಮಿಯಲ್ಲಿ ಅಸಂಖ್ಯಾತ ಜನರ ನಡುವೆ ನಡೆಯಿತು.

ಹೀಗೆ, ಆಗರ್ಭ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ, ವಿದ್ಯಾಭ್ಯಾಸದಲ್ಲಿ ಉನ್ನತ ಶಿಖರವನ್ನೇರಿ, ವಿಧಿಯ ಆಟದಿಂದ ಮನೆಯನ್ನು, ಮನೆಯವರನ್ನೂ ತ್ಯಜಿಸಿ, ಬರೆಯಲು ಬಾರದ ಭಾಷೆ, ಕನ್ನಡದಲ್ಲಿ ಸಾಮಾಜಿಕ ಜೀವನವನ್ನು ನಾಟಕ ಮೂಲವಾಗಿ ರಂಗಭೂಮಿಗೆ ತಂದು ಹಾಸ್ಯ ಚಟಾಕಿಯಿಂದ, ನಗೆಯ ಬುಗ್ಗೆಯನ್ನು ಹಬ್ಬಿಸಿ, ‘ಕರ್ನಾಟಕ ಹಾಸ್ಯ ಪಿತಾಮಹ’ನೆಂದು ಕರೆಸಿಕೊಂಡು ಹೋದರು. ಅವರನ್ನು ‘ಕರ್ನಾಟಕಕ್ಕೊಬ್ಬನೇ ಕೈಲಾಸಂ’ ಎಂದೂ ಕರೆಯುತ್ತಿದ್ದರು.

ಅವರು ಇಂಗ್ಲೆಂಡಿನಲ್ಲಿ ಹಾಡಿದ ಈ ಪದ್ಯ, ನಾಟಕಕ್ಕೆ ಬಂದ, ಮುಂದೆ ಬರುವ ಪ್ರೇಕ್ಷಕರ ಮನಸ್ಸಿನಲ್ಲಿ ಯಾವಾಗಲೂ ನಾಟಿರುತ್ತೆ.

ನಮ್ ತಿಪ್ಪಾರಳ್ಳಿ ಬಲು ದೂರ
ನಡಿಯಾಕ್ ಬಲುದೂರ
ತಿಪ್ಪಾರಳ್ಳಿ ಬಲು ದೂರ
ನನ್ನೆಂಡ್ರಿರೋತಾಕೆ ಬಲು ದೂರ….

ಮುಗಿಯಿತು.