1. ಮಹಾನಗರಗಳಲ್ಲಿ
ಬಿಡುವಿಲ್ಲದೆ ಸದಾ ಚಲಿಸುತ್ತಿವೆ ರಸ್ತೆಗಳು ಮೈಯೆಲ್ಲಾ ಕಾಲಾಗಿ
ಹಗಲು ಇರುಳು ಉರಿಯುತ್ತಿವೆ ದೀಪಗಳು ಮೈಯೆಲ್ಲಾ ಕಣ್ಣಾಗಿ
ನಿದ್ದೆ ಇಲ್ಲದೆ ಸದಾ ನರಳುತ್ತಿವೆ ಮಹಲುಗಳು ಜೀವಂತ ಶವವಾಗಿ
ನೆರೆ ಬಂದಂತೆ ಉಕ್ಕಿ ಹರಿಯುತ್ತಿವೆ ಚರಂಡಿಗಳು ಜೀವ ಭಯವಾಗಿ
ಮಿತಿ ಮೀರಿ ಬೆಳೆದು ನಿಂತಿವೆ ಸ್ಲಮ್‌ಗಳು ಮಾಯದ ಗಾಯವಾಗಿ
ಬೊಜ್ಜಿನಂತೆ ಅಳತೆ ಮೀರಿ ಬೆಳೆದಿವೆ ಗಲ್ಲಿಗಳು ಕಾಂಕ್ರೀಟಿನ ಕಾಡಾಗಿ
ಕೆಂಪು ದೀಪಗಳಡಿ ಬದುಕುತ್ತಿವೆ ಜೀವಗಳು ಕನಸುಗಳ ಕೊಲೆಯಾಗಿ
ಭಯ, ಭೀತಿ ಬಿಡದೇ ಕಾಡುತ್ತಿವೆ ಒತ್ತಡಗಳು ಭೀಕರ ರೋಗಗಳಾಗಿ
ಹಸಿರೇ ಇಲ್ಲದೇ ಉಸಿರಾಡುತ್ತಿವೆ ಊರು, ಶಹರ ಮೈಯೆಲ್ಲಾ ವಿಷವಾಗಿ
ಅಶುದ್ಧ ಗಾಳಿ, ಅಸ್ವಸ್ಥ ಬೆಳಕನ್ನುಂಡು ನರಳುತ್ತಿವೆ ನಗರಗಳು ನರಕವಾಗಿ
ಪ್ರೀತಿ, ನೀತಿ, ಸ್ನೇಹ ಇರದೇ ಹಳಸಿವೆ ಸಂಬಂಧಗಳು ಕಾಲ ಕಸವಾಗಿ
ಯಾಂತ್ರಿಕ ನಗರ ಜೀವನ, ಉರುಳುತ್ತಿವೆ ದಿನಗಳು ಮೈಯೆಲ್ಲಾ ಸಾವಾಗಿ
2. ನಶೆ ಏರದೆ ಬರಿದೆ ಹೋದದ್ದಿಲ್ಲ
ಯಾರೂ ಮಧು ಶಾಲೆಗೆ ಬಂದು ನಶೆ ಏರದೆ ಬರಿದೆ ಹೋದದ್ದಿಲ್ಲ
ಇಲ್ಲಿ ಬಂದವರ‍್ಯಾರು ತಮ್ಮ ನೋವುಗಳ ಭಾರ ಇಳಿಸದೆ ಹೋದದ್ದಿಲ್ಲ
ಹಗಲು ಯಾರೂ ಸುಳಿಯುವುದಿಲ್ಲ ಇರುಳು ಜಾತ್ರೆ ಕಳೆ ಈ ಬೀದಿಗೆ
ಇಲ್ಲಿ ಬಂದವರ‍್ಯಾರು ಸಭ್ಯ ಮುಖವಾಡಗಳನು ಕಳಚದೆ ಹೋದದ್ದಿಲ್ಲ
ಪಾಪ-ಪುಣ್ಯಗಳ ಲೆಕ್ಕ ಹಾಕುತ್ತ ಕಾಲ ಕಳೆವರು ಮಧು ಶಾಲೆಯಲ್ಲಿ
ಇಲ್ಲಿ ಅವರವರ ಚಿಂತೆಯಲಿ ಅವರವರು ಮುಳುಗದೆ ಹೋದದ್ದಿಲ್ಲ
ದೇವರು ನೋವಿನ ಜೊತೆ ಮಧು-ರಸವನ್ನೂ ದಯಪಾಲಿಸಿದ್ದಾನೆ
ಇಲ್ಲಿ ಬಂದರ‍್ಯಾರು ಸುಖ-ದುಃಖವನ್ನು ಹಂಚಿಕೊಳ್ಳದೆ ಹೋದದ್ದಿಲ್ಲ
ದೇವಲೋಕಕ್ಕೆ ಇರುವುದೊಂದೇ ದಾರಿ ಕೆಲವರಿಗೆ ಮಧು ಶಾಲೆಯಿಂದ
ದೇವನೊಬ್ಬ ನಾಮ ಹಲವು ಎಂದು ಆ ಅವರು ಭಜಿಸದೆ ಹೋದದ್ದಿಲ್ಲ
ಯಾರೂ ಯಾವ ದಾರಿಯೂ ಸ್ವರ್ಗ ಲೋಕಕ್ಕೆ ಒಯ್ಯುವುದಿಲ್ಲ ‘ಹಾಲ’
ಮಧುಪಾನ ಪ್ರಿಯರ‍್ಯಾರು ಸ್ವರ್ಗ ನರಕದ ಗೆರೆ ಅಳಿಸದೆ ಹೋದದ್ದಿಲ್ಲ
ವೈ. ಬಿ. ಹಾಲಬಾವಿ ಇವರು ಮೂಲತಃ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ಲ ಗ್ರಾಮದವರು. ಪ್ರಸ್ತುತ ಬೆಂಗಳೂರಿನ ನಿವಾಸಿ. ವೃತ್ತಿಯಲ್ಲಿ ಮಾನವ ಸಂಪನ್ಮೂಲ ಹಿರಿಯ ಅಧಿಕಾರಿಯಾಗಿ ನಿವೃತ್ತರಾಗಿರುವ ಇವರಿಗೆ ಓದು, ಬರಹ ಕಾವ್ಯ ಅಚ್ಚುಮೆಚ್ಚು. ಅನುವಾದ ಇವರ ಆಸಕ್ತಿ ಕ್ಷೇತ್ರ.
ಸಂಚಯ ಪತ್ರಿಕೆಯ ‘ಬೇಂದ್ರೆ ಸ್ಮೃತಿ’ ಪುಸ್ತಕ ಬಹುಮಾನ, ಎರಡು ಬಾರಿ ಸಂಕ್ರಮಣ ಪತ್ರಿಕೆಯ ‘ಸಂಕ್ರಮಣ’ ಕಾವ್ಯ ಪ್ರಶಸ್ತಿ, ಕಲಬುರ್ಗಿಯ ‘ಚಂದ್ರಶೇಖರ ಅಜಾದ್’ ಕಾವ್ಯ ಪ್ರಶಸ್ತಿಗಳು ಸಂದಿವೆ.
ಖಲೀಲ್ ಗಿಬ್ರಾನ್, ಜಲಾಲುದ್ದೀನ್ ರೂಮಿ, ಲ್ಯಾಂಗ್ಸ್‌ಟನ್ ಹ್ಯೂಸ್, ನ್ಯಾನಾವೋ ಸಕಾಕಿಯ ಭಾವಾನುವಾದಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ, ಕವಿತೆ, ಗಜಲ್, ರುಬಾಯಿ, ಖಿತಾಗಳನ್ನೊಳಗೊಂಡ ಹಾಗೂ ಇಂಗ್ಲೀಷ ಕವಿತೆಗಳ ಭಾವಾನುವಾದ ಪುಸ್ತಕಗಳು ಪ್ರಕಟಣೆಗೆ ಸಿದ್ಧಗೊಂಡಿದೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
