Advertisement
ಶಾಲೆ ಕಳ್ಳ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ

ಶಾಲೆ ಕಳ್ಳ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ

ಎಷ್ಟೋ ಸಲ‌ ಗೇಟ್ ಹತ್ತಿರ ಹೋಗುವಾಗಲೇ ಶಾಲೆಯ ಪ್ರಾರ್ಥನೆ ಶುರುವಾಗುತ್ತಿತ್ತು. ಪ್ರಾರ್ಥನೆ ಹೇಳುವ ಮಕ್ಕಳ ಸಮೂಹ ಗಾಯನದಲ್ಲಿ, “ಮಂಗಳವನು ಕರೆಯುತಿರುವ ದೇವ ಶುಭವ ನೀಡಲಿ…” ಅಂತ ಕೇಳುವಾಗಲೇ ಅಳು ಉಕ್ಕಿ ಉಕ್ಕಿ ಬರುತ್ತಿತ್ತು. ತಡ ಆಯ್ತು, ಇನ್ನು ಟೀಚರ್ ಹೊಡಿತಾರೆ, ಅಮ್ಮ ಬಿಟ್ಟು ಹೋದ್ರು ಅನ್ನೋದು ಮಾತ್ರವಲ್ಲದೇ ಎದೆಯಲ್ಲಿ ಯಾವುದೋ ಏಕಾಂಗಿ ಭಾವ ಉಕ್ಕಿ ದುಃಖ ಉಮ್ಮಳಿಸಿ ಬರುತ್ತಿತ್ತು. ಅದು ಆ ಪ್ರಾರ್ಥನೆಯ ರಾಗದಿಂದ ಹಾಗಾಗುತ್ತಿತ್ತೋ ಅಥವಾ ಬೇರಾವುದರಿಂದಲೋ ಗೊತ್ತಾಗುತ್ತಿರಲಿಲ್ಲ. ನಿಂತಲ್ಲಿಯೇ ಜೋರಾಗಿ ಅತ್ತು ಬಿಡುತ್ತಿದ್ದೆ.
ಶಾಲೆಗೆ ಹೋಗುವುದನ್ನು ತಪ್ಪಿಸಲು ನೋಡುವ ಶಾಲೆ ಕಳ್ಳರ ಕುರಿತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ

“ಇವತ್ತು ಶಿಶುಮಂದಿರ ರಜೆ. ನಾನು ಹೋಗಲ್ಲ” ಅಂತ ಹೇಳ್ಕೊಂಡೇ ಏಳುವ ಮಗರಾಯ ಮತ್ತೆ ಶಾಲೆಗೆ ಹೋಗುವವರೆಗೂ ಆದೇ ರಾಗ. ತಿಂಡಿ ಬ್ರಷ್ ಹಾಲು ಟಾಯ್ಲೆಟ್ ಅಂತ ಯಾವ ವಿಷಯಕ್ಕೆ ಮಾತಾಡಿಸಿದ್ರೂ ಕೊನೆಗೆ ನಾನು ಇವತ್ತು ಹೋಗಲ್ಲ ಅನ್ನುವಲ್ಲಿಯೇ ಮಾತು ಕೊನೆಯಾಗ್ತದೆ. ಅದಕ್ಕೆ ಅವನು ಕೊಡುವ ಕಾರಣಗಳೂ ಗಟ್ಟಿಯಾಗಿವೆ. ಇವತ್ತು ಟೀಚರ್‌ಗೆ ರಜೆ… ಟೀಚರ್‌ಗೆ ಹುಷಾರಿಲ್ಲ… ಅವರು ಮಲಗಿದ್ದಾರೆ… ನನಗೆ ರಜೆ ಕೊಟ್ಟಿದ್ದಾರೆ… ಮತ್ತೆ ಎಲ್ಲರಿಗೆ ಶಾಲೆ ಇದೆ! ಅಷ್ಟಾಗಿಯೂ ಶಾಲೆಗೆ ಕಳಿಸುವ ಎಲ್ಲಾ ತಯಾರಿಗಳು ನಡೆಯುತ್ತಿರುವುದು ಅವನ ಅರಿವಿಗೆ ಬಂದಾಗ ಬೇರೆ ದಾರಿ ಕಾಣದೇ, “ಅಪ್ಪ ಬರ್ಬೇಕು… ನೀನು ಮತ್ತೆ ಕರ್ಕೊಂಡು ಹೋಗ್ಲಿಕ್ಕೆ ಬರಲ್ಲ… ಟೀಚರ್ ಹೊಡಿತಾರೆ… ನನ್ನನ್ನು ಕಳಿಸ್ಬೇಡ” ಅನ್ನುತ್ತಾ ಎರಡನೆಯ ಸುತ್ತಿನ ಪ್ರಯತ್ನ ಮಾಡ್ತಾನೆ. ಇಷ್ಟೆಲ್ಲಾ ಗೋಗರೆಯುವಿಕೆಯ ನಡುವೆ ನಮಗೇನೂ ಕೇಳ್ಲೇ ಇಲ್ಲ ಅನ್ನುವ ಹಾಗೆ ಅವನನ್ನು ಹೊರಡಿಸುವ ಕೆಲಸ ಬಹಳ ಕಷ್ಟಪಟ್ಟು ಮೆಲ್ಲಗೆ ಮಾಡ್ತಾ ಇರ್ತೇವೆ‌. ಅದು ಅವನಿಗೂ ಗೊತ್ತಾಗಿ ಇನ್ನು ಕಳಿಸೋದು ಖಂಡಿತ ಅಂತ ಗೊತ್ತಾದಾಗ… “ನಂಗೆ ಹುಷಾರಿಲ್ಲ ಅಮ್ಮ… ನೋಡು ಕೆಮ್ಮು ಬರ್ತಾ ಉಂಟು” ಅಂತ ಕೆಮ್ಮಿ, “ನಾಳೆ ಹೋಗ್ತೇನೆ. ಇವತ್ತು ಬೇಡಮ್ಮ…” ಅನ್ನುತ್ತಾ ಕೊನೆಯ ಸುತ್ತಿನ ಪ್ರಯತ್ನ ಮಾಡುವಾಗಲಂತೂ ಪಾಪ ಅನ್ನಿಸಿ ಬಿಡುತ್ತೆ ನನಗೆ.

ಇಷ್ಟೆಲ್ಲಾ ಟಾರ್ಚರ್ ಕೊಟ್ಟು ಅವನನ್ನು ಕಳಿಸ್ಬೇಕಾ? ಇವತ್ತೊಂದಿನ ಇರ್ಲಿ ಮನೆಯಲ್ಲಿಯೇ. ನಾಳೆ ಕಳಿಸುವ ಅಂತ ಮನಸ್ಸಿಗೆ ಅನ್ನಿಸಿ ಬಿಡುತ್ತದೆ. ಅದಕ್ಕೆ ಸಾಥ್ ಎಂಬಂತೆ ಅಪ್ಪ ಬೇರೆ, “ತುಂಬಾ ಅಳ್ತಾ ಇದ್ದಾನೆ, ಇವತ್ತೊಂದಿನ ಇರ್ಲಿ… ನಾಳೆ ಹೋಗ್ತಾನೆ ಬಿಡು” ಅಂತ ಹೇಳಿಬಿಟ್ರೆ ಮುಗೀತು. ಅವನ ಕಡೆ ಜನ ಇದ್ದಾರೆ ಅಂತ ಗೊತ್ತಾಗಿ ಆನೆ ಬಲ ಬಂದಂತಾಗಿ “ನಾನ್ ಹೋಗಲ್ಲ ಇವತ್ತು… ಹೋಗೋದೇ ಇಲ್ಲ…” ಅಂತ ತಂದಿಟ್ಟ ಅಂಗಿ ಚಡ್ಡಿಗಳನ್ನೆಲ್ಲಾ ಎಸೆದು ಕೋಣೆಯ ಕಡೆಗೆ ಓಡಿಯೇ ಬಿಡುತ್ತಾನೆ. ನಂಗೊತ್ತು… ಹೀಗೆಯೇ ಬಿಟ್ರೆ ಆ ನಾಳೆ ಎಂದಿಗೂ ಬರೋದೇ ಇಲ್ಲ ಅಂತ! ಯಾವತ್ತೂ ಅವನ ಬಾಯಿಂದ ಇವತ್ತು ಹೋಗ್ತೇನೆ ಅನ್ನೋ ಮಾತೇ ಕೇಳಿಲ್ಲ ನಾನು. ಇಷ್ಟೆಲ್ಲಾ ಆಗುವಾಗ ಅಮ್ಮನ ರಂಗ ಪ್ರವೇಶ ಆಗುತ್ತದೆ, “ಹೋಗ್ಲಿ ಹೋಗ್ಲಿ… ಎರಡು ಗಂಟೆ ಅಲ್ವಾ. ಅಲ್ಲೂ ಹೋಗಿ ಆಡೋದೇ. ಅದ್ಕೆ ಯಾಕೆ ಇಷ್ಟು ಗಲಾಟೆ? ನೀನೂ ಒಂದೇ ನಿನ್ನ ಅಪ್ಪನೂ ಒಂದೇ… ಎಲ್ಲಾ ಶಾಲೆ ಕಳ್ಳರೇ… ನಿನ್ನನ್ನು ಶಾಲೆಗೆ ಕಳಿಸಿದ ಕಷ್ಟ ನನಗೇ ಗೊತ್ತು…” ಅಂತ ಮಾತು ನನ್ನ ಕಡೆಗೆ ಹೊರಳುವಾಗ ಅಳುತ್ತಿರುವ ಮಗನನ್ನು ಕೂಡಲೇ ರೆಡಿ‌ ಮಾಡಿ ಹೊರಟೇ ಬಿಡ್ತೇನೆ ಶಾಲೆಯ ಕಡೆ. ಕಿವಿಯ ತುಂಬಾ ಮಗನ ಅಳುವಿನ ಶಂಖಾನಾದವಾದರೆ ಮನದ ತುಂಬೆಲ್ಲ ಬಾಲ್ಯದ ನೆನಪುಗಳ ಮೆರವಣಿಗೆ!

ವಸುಧೇಂದ್ರರ ಅಮ್ಮ ಅಂದ್ರೆ ನಂಗಿಷ್ಟ ಪ್ರಬಂಧಗಳಲ್ಲಿ ಬರುವ “ಚಡ್ಡಿ ರಾಸ್ಕಲ್” ಥೇಟ್ ನನ್ನದೇ ಪ್ರತಿರೂಪ. ಅದನ್ನು ಮೊದಲ ಸಲ ಓದಿದಾಗ ಅರೇ..! ನನ್ನದೇ ಕತೆ ಬರೆದಿದ್ದಾರಲ್ಲ ಅಂತ ಅನ್ನಿಸಿತ್ತು ನನಗೆ. ನನ್ನ ಮನದಲ್ಲಿ ಮಸುಕು ಮಸುಕಾಗಿರುವ ಬಾಲ್ಯದ ನೆನಪಿನ ಚಿತ್ರಗಳನ್ನು ನನ್ನ ಮಗನ ಯಾವತ್ತಿನ ಶಾಲಾ ರಂಪಾಟ ಕಂಡು ಅಮ್ಮ ಮತ್ತೂ ಸರಿಯಾಗಿ ಜೋಡಿಸುತ್ತಾಳೆ. ಈ ನಡುವೆ ದಿನಕ್ಕೊಮ್ಮೆಯಾದರೂ ಅಮ್ಮ ನೆನಪಿಸುವ ಘಟನೆಗಳಿಂದಾಗಿ ಬಾಲ್ಯ ಕಣ್ಣ ಮುಂದೆ ಕುಣಿಯಲಾರಂಭಿಸುತ್ತದೆ. ಶಾಲೆ ತಪ್ಪಿಸಲು ಈಗ ನನ್ನ ಮಗ ಬಳಸುವ ಎಲ್ಲಾ ಅಸ್ತ್ರ ಖಾಲಿಯಾದ ನಂತರ ಕೊನೆಯದಾಗಿ ಬ್ರಹ್ಮಾಸ್ತ್ರವೆಂಬಂತೆ ಶಾಲೆಗೆ ಹೊರಡಲು ಇನ್ನೇನು ಟೈಂ ಆಯ್ತು ಅನ್ನುವಾಗಲೇ, “ಅಮ್ಮಾ, ನನಗೆ ಎರಡಕ್ಕೆ ಬರ್ತದೆ..” ಅಂತ ವಿಜಯದ ಚಿಹ್ನೆಯನ್ನು ತೋರಿಸಿ ಬಿಡುತ್ತಿದ್ದೆ!

“ಆವಾಗಿನಿಂದ ಕೇಳ್ತಾ ಇದ್ದೆ… ಬರಲ್ಲ ಬರಲ್ಲ ಅಂದಿಯಲ್ಲ… ಮತ್ತೆ ಈಗೆಂತ ನಿನ್ದು…” ಅಂತ ಅಮ್ಮ ಗದರಿಸಿದರೂ ವಿಜಯದ ಸಿಂಬಲ್ ಸಡಿಲಿಸುತ್ತಿರಲಿಲ್ಲ. ಉಪಾಯ ಕಾಣದೇ ರೇಗಿ ಹೆಗಲೇರಿಸಿದ್ದ ಶಾಲೆಯ ಚೀಲವನ್ನು ಅಲ್ಲೇ ಎಸೆದು ದರದರ ಅಂತ ನನ್ನನ್ನು ಹಿತ್ತಲ ಗದ್ದೆಯಲ್ಲಿದ್ದ ಎರಡು ಬೈಹುಲ್ಲಿನ ಮುಟ್ಟೆಯ ಹಿಂದೆ ಕೂರಿಸಿ ಬೇಗ ಮಾಡು ಅಂತ ಮತ್ತೆ ಅಂಗಳಕ್ಕೆ ಹೋಗಿ ಒಂದು ಚೆಂಬು ನೀರು ತಂದು ಕಾಯೋದೇ ಆಗ್ತಿತ್ತು ಅವರ ಕೆಲಸ. “ನಿನ್ನಿಂದಾಗಿ ನಿನ್ನ ಅಕ್ಕನಿಗೂ ಶಾಲೆಗೆ ತಡ ಇವತ್ತು… ಇನ್ನೂ ಆಗ್ಲಿಲ್ವಾ… ಬೇಗ ಬೇಗ” ಅಂತ ಅಮ್ಮ ಎಷ್ಟು ಅರ್ಜೆಂಟ್ ಮಾಡಿದ್ರೂ ಮುಗಿದು ಹೊರಡುವ ಲಕ್ಷಣವೇ ಕಾಣಿಸುತ್ತಿರಲಿಲ್ಲ. ಬಂದರಲ್ಲವೇ ಮುಗಿಯುವ ಮಾತು! ಮತ್ತೂ ಸ್ವಲ್ಪ ಹೊತ್ತಾದ ನಂತರ ಅಮ್ಮನಿಗೆ ಇದು ನಿಜವಾದದ್ದಲ್ಲ ಅಂತ ಗೊತ್ತಾಗಿ,”ಸುಮ್ನೆ ಹೇಳ್ತಿಯಾ… ಕತ್ತೆ, ಮಾಡಿದ್ದು ಏನೂ ಕಾಣ್ತಾ ಇಲ್ಲ ಅಲ್ಲಿ… ಏಳ್ತಿಯಾ ಇಲ್ವಾ…” ಅಂತ ಸಿಕ್ಕಿದ ಗಿಡ ಮುರಿಯುತ್ತಿದ್ದಂತೆಯೇ ಇನ್ನು ಸರಿ ಬೀಳ್ತದೆ ಅಂತ ಗೊತ್ತಾಗಿ, ಆಯ್ತಮ್ಮ… ಆಯ್ತು ಅನ್ನುತ್ತಾ ಚಡ್ಡಿ ಹಾಕಿ ಅಂಗಳಕ್ಕೆ ಓಡುತ್ತಿದ್ದೆ. ಮತ್ತೆ ಹೊಡೆಯಲು ಬರುವ ಅಮ್ಮನ ಕೈಹಿಡಿದು,” ಈಗ ಬಂದಿತ್ತಮ್ಮ… ಈಗ ಇಲ್ಲ, ಅಮ್ಮ ಹೊಡಿಬೇಡ…” ಅಂತ ಶಾಲೆಯ ಕಡೆಗೆ ನಡಿತಿದ್ದೆ ಅಕ್ಕನ ಜೊತೆಗೆ. ಅಷ್ಟು ಮಾಡಿ ನನ್ನನ್ನೂ ಅಕ್ಕನನ್ನೂ ಶಾಲೆಯ ಗೇಟ್‌ವರೆಗೂ ಬಿಟ್ಟು ಬರುವುದೆಂದರೆ ಬೆಳಗ್ಗಿನ ದೊಡ್ಡ ಕೆಲಸ ಆಗ್ತಿತ್ತು ಅಮ್ಮನಿಗೆ. ಗೇಟ್‌ನ ಹೊರಗೆ ನಿಂತು ಮಗ ಒಳಗೆ ಹೋಗ್ತಾನೋ ಇಲ್ವೋ ಅನ್ನೋದನ್ನ ನೋಡಿಯೇ ಅಮ್ಮ ವಾಪಾಸು ಮನೆ ಕಡೆಗೆ ಹೋಗ್ತಿದ್ರು.

ಆದರೆ ಎಷ್ಟೋ ಸಲ‌ ಗೇಟ್ ಹತ್ತಿರ ಹೋಗುವಾಗಲೇ ಶಾಲೆಯ ಪ್ರಾರ್ಥನೆ ಶುರುವಾಗುತ್ತಿತ್ತು. ಪ್ರಾರ್ಥನೆ ಹೇಳುವ ಮಕ್ಕಳ ಸಮೂಹ ಗಾಯನದಲ್ಲಿ, “ಮಂಗಳವನು ಕರೆಯುತಿರುವ ದೇವ ಶುಭವ ನೀಡಲಿ…” ಅಂತ ಕೇಳುವಾಗಲೇ ಅಳು ಉಕ್ಕಿ ಉಕ್ಕಿ ಬರುತ್ತಿತ್ತು. ತಡ ಆಯ್ತು, ಇನ್ನು ಟೀಚರ್ ಹೊಡಿತಾರೆ, ಅಮ್ಮ ಬಿಟ್ಟು ಹೋದ್ರು ಅನ್ನೋದು ಮಾತ್ರವಲ್ಲದೇ ಎದೆಯಲ್ಲಿ ಯಾವುದೋ ಏಕಾಂಗಿ ಭಾವ ಉಕ್ಕಿ ದುಃಖ ಉಮ್ಮಳಿಸಿ ಬರುತ್ತಿತ್ತು. ಅದು ಆ ಪ್ರಾರ್ಥನೆಯ ರಾಗದಿಂದ ಹಾಗಾಗುತ್ತಿತ್ತೋ ಅಥವಾ ಬೇರಾವುದರಿಂದಲೋ ಗೊತ್ತಾಗುತ್ತಿರಲಿಲ್ಲ. ನಿಂತಲ್ಲಿಯೇ ಜೋರಾಗಿ ಅತ್ತು ಬಿಡುತ್ತಿದ್ದೆ. ಮತ್ತೆ ದುಃಖ ತಡೆಯಲಾಗದೇ ಬಿಟ್ಟು ಆಗಲೇ ಹೊರಟುಹೋದ ಅಮ್ಮನ ಕಡೆಗೆ ಓಡಿಬಿಡುತ್ತಿದ್ದೆ. ಆಗ ನನ್ನನ್ನು ಹಿಡಿದು ನಿಲ್ಲಿಸಿ ಕಣ್ಣೀರು ಒರೆಸಿ ತಬ್ಬಿಕೊಂಡು ಬೆನ್ನು ತಟ್ಟುತ್ತಾ ಸಂತೈಸುವ ಅಮ್ಮನಾಗುತ್ತಿದ್ದಳು ನನ್ನ ಪುಟ್ಟ ಅಕ್ಕ! ಮತ್ತೆ ಪ್ರಾರ್ಥನೆ ಮುಗಿಯುತ್ತಿದ್ದ ಹಾಗೆಯೇ ಅಳುವಿನ ತೀವ್ರತೆಯೂ ಕಡಿಮೆ ಆಗಿ ನನ್ನನ್ನು ನನ್ನ ತರಗತಿಗೆ ಬಿಟ್ಟು ತನ್ನ ತರಗತಿಯ ಕಡೆಗೆ ಹೋಗುತ್ತಿದ್ದಳು.

ಆದರೂ ಈ ಪ್ರಾರ್ಥನೆಯಿಂದ ಎದೆ ಏಕೆ ಭಾರವಾಗುತ್ತದೆ? ಯಾಕೆ ಈ ಪ್ರಾರ್ಥನೆ ತನ್ನೆಲ್ಲಾ ಶುಭಾಶಯಗಳನ್ನು ಹೊಂದಿದ್ದೂ, ಹೊರಗೆ ದಾರುಣವಾಗಿ ಕೇಳುತ್ತದೆ… ಅನ್ನುವ ಗೊಂದಲದ ಕುರಿತಾಗಿ ಜಯಂತ್ ಕಾಯ್ಕಿಣಿ ಹೇಳಿದ್ದನ್ನು ಒಮ್ಮೆ ಕೇಳಿದ್ದೆ. ಶಾಲೆಯ ಪ್ರಾರ್ಥನೆ ಕೇಳುವಾಗ ಇಂದಿಗೂ ಕೂಡಾ ಇದು ನನ್ನನ್ನು ಬಹುವಾಗಿ ಕಾಡುವ ಭಾವ. ಹಾಗಾಗಿ ಮಗನನ್ನು ಶಾಲೆಗೆ ಬಿಟ್ಟು ಬರುವಾಗ ಅಲ್ಲಿ ಕೇಳುವ ಪ್ರಾರ್ಥನೆಯನ್ನು ಕೇಳದೇ ಯಾವತ್ತೂ ಬರುವುದಿಲ್ಲ.

ಆದರೆ ಶಾಲೆಗೆ ಹೊರಡುವ ಕೊನೆ ಅಸ್ತ್ರವಾದ ಈ “ಎರಡಕ್ಕೆ” ವಿಷಯವೂ ಒಮ್ಮೆ ತೋಳ ಬಂತು ತೋಳ ಕತೆಯಾದದ್ದನ್ನು ಮಾತ್ರ ಇಲ್ಲಿ ಹೇಳಲೇಬೇಕು. ಅಂದು ಕೂಡಾ ಎಂದಿನ ಹಾಗೆ ಮೊದಲೇ ಶಾಲೆಗೆ ತಡ ಆಗಿತ್ತು. ಯಥಾ ಪ್ರಕಾರ ಶಾಲೆಗೆ ಹೊರಡುವ ಕೊನೆಯ ಕ್ಷಣದಲ್ಲಿ ಅಮ್ಮಾ‌… ಎರಡಕ್ಕೆ ಬರ್ತದೆ… ಅಂತ ಗದ್ದೆಯ ಕಡೆಗೆ ಓಡುತ್ತಿದ್ದವನನ್ನು ಬಲವಂತವಾಗಿ ತಡೆದು ನಿಲ್ಲಿಸಿ, “ಸುಮ್ ಸುಮ್ನೆ ನಾಟಕ ಮಾಡ್ಬೇಡ ನೀನು… ಬರಲ್ಲ ಏನಿಲ್ಲ… ಸುಮ್ನೆ ಶಾಲೆ ತಪ್ಪಿಸ್ಲಿಕ್ಕೆ ಕೂತ್ಕೊಳ್ಳೋದು ನೀನು… ಎಲ್ಲಾ ಗೊತ್ತಾಗಿದೆ ನಂಗೆ. ಸುಮಾರು ಸಲ ಆಯ್ತು ಶಾಲೆ ತಪ್ಪಿಸಿ. ನಾ ಬಿಡಲ್ಲ ಇವತ್ತು. ನಡಿ ನಡಿ ಶಾಲೆಗೆ…” ಅಂತ ಅಮ್ಮ ಗಟ್ಟಿ ಹಿಡ್ಕೊಂಡು ಬಿಟ್ರು. “ಇಲ್ಲಮ್ಮ, ನಿಜವಾಗಿಯೂ ಬರ್ತಾ ಉಂಟು… ಬೇಗ ಮಾಡಿ ಬರ್ತೇನೆ. ಬಿಡಮ್ಮಾ…” ಅಂತ ಎಷ್ಟು ಗೋಗರೆದ್ರೂ ಅಮ್ಮ ಮಾತ್ರ ಈ ಸಲ ಬಿಡ್ಲೇ ಇಲ್ಲ. ಅವರು ನಿರ್ಧಾರ ಮಾಡಿದ ಹಾಗಿತ್ತು. ಮಗನ ಈ ಕಳ್ಳ ಅಭ್ಯಾಸ ಬಿಡಿಸ್ಬೇಕು ಅಂತ. “ಎಲ್ಲಾ ಗೊತ್ತುಂಟು ನಂಗೆ… ಸಾಕಾಗಿ ಹೋಯ್ತು ಕೇಳಿ ಕೇಳಿ…” ಅಂತ ಅಮ್ಮ ನನ್ನನ್ನು ಅಕ್ಷರಶಃ ಎಳೆದುಕೊಂಡೇ ನಡೆಸಿ ಶಾಲೆಯ ಗೇಟು ದಾಟಿಸಿಯೇ ಬಿಟ್ರು… ಜೊತೆಯಲ್ಲಿ ನಡೆಯುತ್ತಾ ಪಿಳಿ ಪಿಳಿ ಕಣ್ಣು ಬಿಟ್ಟು ಮರೆಯಲ್ಲಿ ನಗುತ್ತಿದ್ದ ಅಕ್ಕನನ್ನು ನೋಡಿ ಅಳುತ್ತಾ ತರಗತಿಗೆ ಹೋದೆ.

ಆದ್ರೆ ಈ ಬಾರಿ ಅಮ್ಮನ ಲೆಕ್ಕಾಚಾರ ತಪ್ಪಿ ನಿಜವಾಗಿಯೂ ಆವತ್ತು ಎಡವಟ್ಟು ಆಗಿಯೇ ಹೋಗಿತ್ತು. ಭಯಂಕರ ಒತ್ತಡ ಆಗಲೇ ಸೃಷ್ಟಿಯಾಗಿ ಹೋಗಿತ್ತು. ತರಗತಿಯ ಬೆಂಚಿಗೆ ಎಷ್ಟು ಒತ್ತಿ ಒತ್ತಿ ಕೂತ್ಕೊಂಡ್ರೂ, ಕ್ಲಾಸು ಶುರುವಾಗಿ ಇನ್ನೂ ಅರ್ಧ ಗಂಟೆ ಕೂಡಾ ಕಳೆದಿರಲಿಲ್ಲ ಅನ್ನುವ ಹೊತ್ತಿಗೇ ಇನ್ನೇನು ಸಾಧ್ಯವೇ ಇಲ್ಲ ಅನ್ನುವ ಹೊತ್ತಿಗೇ ತಡೆದು ನಿಲ್ಲಿಸುವ ಎಲ್ಲಾ ಶಕ್ತಿಯನ್ನು ವಿಫಲಗೊಳಿಸಿ ಚಡ್ಡಿಯಲ್ಲಿಯೇ ಮುಗಿದು ಹೋಗಿ ದೇಹ ಮಾತ್ರ ನಿರಾಳವಾಯಿತು! ಆದರೆ ಮನದಲ್ಲಿ ಯಾರಿಗೂ ಮುಖ ತೋರಿಸಲಾಗದ ತೀವ್ರ ಅವಮಾನವಾದಂತಾಗಿ ಕುಳಿತಲ್ಲೇ ನೀರಲ್ಲಿ ಬಿದ್ದ ಗುಬ್ಬಿಯಂತಾದೆ. ಹತ್ತಿರ ಕುಳಿತ ಹುಡುಗರಿಗೂ ಗೊತ್ತಾಗಿ ಅವರು ಮೂಗು ಹಿಡ್ಕೊಂಡು ಆಚೀಚೆ ಓಡುವ ಗದ್ದಲಕ್ಕೆ ಟೀಚರ್ ಹತ್ತಿರ ಬಂದು, ಅವರಿಗೂ ವಿಷಯ ಗೊತ್ತಾಗಿ ಏನು ಮಾಡುವುದೆಂಬ ಗೊಂದಲದಲ್ಲಿ ಒಂದೇ ಸಮನೆ ಬಯ್ಯಲಾರಂಭಿಸಿದ್ರು. ಮೊದಲೇ ಅವಮಾನದಿಂದ ಕುಗ್ಗಿಹೋಗಿದ್ದೆ, ಜೊತೆಗೆ ಚಂಡಿಯಾದ ಚಡ್ಡಿ, ವಾಸನೆ… ಎದುರಿಗೆ ಬಯ್ಯುವ ಟೀಚರ್ ಮುಂದೇನು ಅನ್ನುವ ದೊಡ್ಡ ಆಘಾತದಲ್ಲಿ ಅಳು ಬಿಟ್ರೆ ಬೇರೇನೂ ತೋಚುತ್ತಿರಲಿಲ್ಲ. ಸಿಟ್ಟಲ್ಲೇ ಹೊರಗೆ ಹೋದ ಟೀಚರ್ ಮತ್ತೆ ಬರುವಾಗ ಅವರ ಹಿಂದೆ ನನ್ನ ಪುಟ್ಟ ಅಕ್ಕ ಇದ್ಳು! ಅಪರಿಚಿತರ ನಡುವೆ ಎಷ್ಟೋ ದಿನಗಳ ಬಳಿಕ ಆತ್ಮೀಯರನ್ನು ಕಂಡಂತಾಗಿ ಅಳು ಮತ್ತೂ ಹೆಚ್ಚಾಯಿತು. ಹತ್ತಿರ ಬಂದ ಅಕ್ಕ ನನ್ನನ್ನು ಸಂತೈಸಿ ಅಳುತ್ತಿದ್ದ ನನ್ನ ಕಣ್ಣೊರೆಸಿ ಎಲ್ಲವನ್ನೂ ಕ್ಲೀನ್ ಮಾಡಿ ನನ್ನ ಶಾಲೆಯ ಚೀಲದಲ್ಲಿದ್ದ ಮತ್ತೊಂದು ಚಡ್ಡಿಯನ್ನು ಹಾಕಿ, “ಅಳ್ಬೇಡ ನೀನು… ಜಾಣ ಅಲ್ವಾ. ಏನೂ ಆಗಲ್ಲ… ಸಂಜೆ ಹೋಗುವಾಗ ಚಾಕ್ಲೆಟ್ ಕೊಡ್ತೇನೆ” ಅಂತ ಹೇಳಿ ಅವಳ ತರಗತಿಗೆ ಹೋದ್ಳು ನನ್ನ ಅಮ್ಮನಂತಹ ಅಕ್ಕ! ಬಹಳ ಕಷ್ಟದಿಂದ ಅಂದಿನ ಶಾಲೆ ಮುಗಿಸಿ ಮನೆಗೆ ಬಂದು ಟೀಚರ್ ಬಯ್ದದ್ದನ್ನೂ ಸೇರಿಸಿ ಅಮ್ಮನಿಗೆ ಬಯ್ದಿದ್ದೆ.

ಅಂದಿನಿಂದ ಮತ್ತೆ ಶಾಲೆಗೆ ಎಷ್ಟು ತಡವಾದರೂ ಅದೊಂದು ಕೆಲಸಕ್ಕೆ ಮಾತ್ರ ಯಾವತ್ತೂ ಅಮ್ಮ ಅರ್ಜೆಂಟ್ ಮಾಡುತ್ತಿರಲಿಲ್ಲ! ಶಾಲೆಗೆ ಹೋಗಲ್ಲ ಅಂತ ಹಠ ಮಾಡುವ ಯಾವುದೇ ಮಕ್ಕಳನ್ನು ಕಂಡರೂ ಅವರ ಹೆತ್ತವರಿಗೆ ಈ ವಿಷಯವನ್ನು ಉಪ್ಪು ಖಾರ ಸೇರಿಸಿ ಹೇಳುವುದನ್ನು ಮಾತ್ರ ಅಮ್ಮ ಇಂದಿಗೂ ಮರೆತಿಲ್ಲ.

About The Author

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು

1 Comment

  1. ಧರ್ಮಾನಂದ ಶಿರ್ವ

    ಬಾಲ್ಯದ ನೆನಪುಗಳನ್ನು ಹೊತ್ತು ತರುವ ಎಲ್ಲ ಸಂಗತಿಗಳೂ ಬಾಳಿನ ಅಂಚಿನಲ್ಲಿ ಸುಖವನ್ನು ಕೊಡುತ್ತವೆ. ನಿಮ್ಮ ಶಾಲೆ ಕಳ್ಳ ಬರಹವೂ ಇದಕ್ಕೆ ಹೊರತಲ್ಲ. ಚೆನ್ನಾಗಿದೆ. ಅಭಿನಂದನೆಗಳು.

    ಇದನ್ನು ಓದುವಾಗ ನನ್ನ ಮಗ ತೆಲಂಗಾಣದ ಮೆಹಬೂಬನಗರದಲ್ಲಿರುವ ಪ್ರಾಥಮಿಕ ಶಾಲೆಯ UKG ಗೆ ಒಂದೆರಡು ದಿನ ಕಳೆದ ನಂತರ ಅಳುತ್ತಾ ಹೋದಾಗಿನ ಸಂದರ್ಭವೊಂದು ನೆನಪಾಯಿತು. ಅವನ ಕೊರಳಲ್ಲಿ ಜೋತುಬಿದ್ದ ಶಾಲೆಯ ಚೀಲ, ಹಾಕಿದ ಸಮವಸ್ತ್ರ ಎಲ್ಲವನ್ನೂ ಗಮನಿಸಿದ ಅವನು ಒಂದೇ ಸಮನೆ ಜೋರಾಗಿ ಅಳತೊಡಗಿದ.
    ‘ಅಮ್ಮಾ.. ನಾನಿವತ್ತು ಶಾಲೆಗೆ ಹೋಗೊಲ್ಲ. ನನಗೆ ನೀನೇ ಮನೆಯಲ್ಲಿ ಕಲಿಸಮ್ಮಾ..’ ಅಂತ ಅಮ್ಮನ ಕಾಲುಗಳನ್ನೇ ಅಪ್ಪಿಹಿಡಿದು ಅಳತೊಡಗಿದ್ದ. ನನಗೆ ಕನಿಕರ ಬಂದು ಇವತ್ತೊಂದು ದಿನ ಇರಲಿ ಬಿಡು ಅಂದೆ. ಅದನ್ನು ಲೆಕ್ಕಿಸದೆ ಮಗನನ್ನು ಸಮಾಧಾನಿಸುತ್ತಾ ನನ್ನವಳು ಅವನನ್ನು ಕರೆದೊಯ್ದಳು.
    ಮತ್ತೆ ನೋಡಿದರೆ ಶಾಲೆಯೊಳಗೆ ದೊಡ್ಡ ಹುಡುಗರು ಇವನನ್ನು ಮರೆಯಲ್ಲಿ ನಿಂತು ಹೆದರಿಸುತ್ತಿದ್ದರಂತೆ. ಅದಕ್ಕವನು ಹೆದರಿ ಶಾಲೆಗೆ ಹೋಗುವುದಿಲ್ಲ ಅಂದಿದ್ದ. ಅಲ್ಲಿಯ ಶಿಕ್ಷಕರಿಗೆ ಈ ವಿಷಯ ತಿಳಿಸಿದ ನಂತರ ಮಗನ ಶಾಲೆಗೆ ಹೋಗುವ ರಗಳೆ ಇರಲಿಲ್ಲ.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ