ಗೋಳಿಡುವ ಆಕೃತಿಗಳು

ಮೂಲಧಾತುಗಳಪಟ್ಟಿಯನ್ನೋದುವಷ್ಟು ಸುಲಭದಲ್ಲಿ
ಸನೈಡಿನ ಪೊಟ್ಟಣವನ್ನು ತಡೆಹಿಡಿಯಲಾಗುವುದಿಲ್ಲ!

ಆಕೃತಿಗಳು ಕೂಗಿದ್ದೇ ಹೌದಾದಲ್ಲಿ
ಕೂಗಿನಮೂಲ -ಕೇಳಿಸಿಕೊಂಡವನ
ಕೇಳಿಸಿಕೊಳ್ಳುವಿಕೆಯ ಕಿವುಡಿನಲ್ಲಿದೆ.

ಐರಾವತದ ಗುಂಗಿನಲ್ಲೇ ಬದುಕುವವನಿಗೆ
ಆನೆ ತುಳಿಯುವ ಹಾದಿಗಳ ಪರಿವೆಯೆಲ್ಲಿದೆ?
ಹುಲ್ಲಿನ ಹುಟ್ಟಡಗಿಸುವ
ಅಪಾರವಾದ ಭಾರ ಈ ರಾಜ್ಯಭಾರ.
ಹುಲ್ಲುಮೇಯುವ ಹಸುವಿನ
ಹಸಿವಿಗೆ ಸ್ಪಂದಿಸದವನ
ಸ್ಪರ್ಷಕ್ಕೇ ಕುಷ್ಠರೋಗ!

ಕೂಡಿಟ್ಟ ನಾಣ್ಯಗಳು
ಒಂದಕ್ಕೊಂದು ಅಂಟಿಕೊಂಡು ಸರಪಳಿಗಳಾಗಿವೆ
ಕೂಳಿಲ್ಲದೇ ಸತ್ತವನ
ಕಳೇಬರವನ್ನು ಪರಾಮರ್ಶಿಸುವವನ
ವಿಮರ್ಶಿಸುವ ಭಾಗಕ್ಕೆ ಪಾರ್ಶ್ವವಾಯು.

ಮೂಲಧಾತುಗಳು ಕೋಟಿ ಬಗೆಯ ಸಂಯುಕ್ತಗಳಾಗಿ,
ಕೋಷ್ಟಕ ಸಿಡಿದು ಚೂರಾಗುತ್ತದೆ;
ದಿನವೂ ಕೊಲ್ಲುವ ಕೇಡಾಗಿ ಬದಲಾಗುತ್ತದೆ.

ಸನೈಡಿನ ಪೊಟ್ಟಣಗಳಿಗೆ ಬೇಡಿಕೆ
ಬರುವ ಕಾಲ ದೂರವಿಲ್ಲ.

ಹರಿದಾಗ ಬದುಕಿಸುವ ಪ್ರಾಣವಾಯುವೇ
ನಿಂತಾಗ ಕೊಲ್ಲುತ್ತದೆ,
ಸನೈಡಿನ ಪೊಟ್ಟಣವೇ ಗೆಲ್ಲುತ್ತದೆ!

ಅಧೀನ

ಬೇಕೆಂಬ ಬಯಕೆಯೊಳಗೆ
ಪದರು ಪದರಾ ಗಿಅವಿತುಕೊಂಡಿರುವ
ಪಡೆಯುವಿಕೆಯ ಪ್ರಕ್ರಿಯೆಯೆಲ್ಲ
ಸಾಮ್ರಾಟನದೇ ಆಟ.

ಉಳುಮೆ ಮಾಡುವ ದೇವರಿಗೂ
ಊಹಿಸಲು ಶಕ್ಯವಿಲ್ಲ
ಉರುಳುವ ರುಂಡಗಳ ಬಿತ್ತನೆಗೆ
ತನ್ನ ಹೊಲ ಹದಗೊಂಡಿರುವುದು.

ಪಳಿಯುಳಿಕೆಗಳು ಬಿಚ್ಚಿಕೊಳ್ಳುತ್ತವೆ
ತೆರೆದು ಮುಚ್ಚಿಕೊಂಡ ಪುಟಗಳ ಸುತ್ತ.

ಉರಿವ ಊರಿಗೆ ದೊರೆಯದ ಉಪದೇಶ
ಭೂಮಿ ರುದ್ರಭೂಮಿಯಾದ ವಿನಾಶ
ಮುರಿದು ಕಟ್ಟುವುದು
ಸಾಮ್ರಾಜ್ಯವನ್ನೇ ಹೊರತು
ಆತ್ಮವನ್ನಲ್ಲ.

ಸಾಮ್ರಾಜ್ಯ ಶಾಹಿಯ ವರ್ತನೆಗೆ ಬಲಿಯಾದವರು
ಪಲಾಯನ ಮಾಡುವುದಾದರೂ ಎಲ್ಲಿಗೆ
ಆಳುವ ನೆಲಕ್ಕಿಲ್ಲ ಅಂಚು.

ಸಾಮ್ರಾಟನ ಜಡ್ಡುಗಟ್ಟಿದ ಹಸ್ತ
ಹುರಿಗಟ್ಟಿದ ಮೈ
ಶೌರ್ಯವನ್ನು ಸಾರುವುದಿಲ್ಲ
ಕ್ರೌರ್ಯವನ್ನು ಸಾರುತ್ತದೆ.
ಶ್ರೀಕಲಾ ಹೆಗಡೆ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು

ಶ್ರೀಕಲಾ ಹೆಗಡೆ ಕಂಬ್ಳಿಸರ ಹುಟ್ಟಿದ್ದು, ಬೆಳೆದದ್ದು ಸಿರಸಿಯ ಪುಟ್ಟ ಹಳ್ಳಿಯೊಂದರಲ್ಲಿ.
ಓದಿದ್ದು ವಾಣಿಜ್ಯಶಾಸ್ತ್ರ.
ಐದು ವರ್ಷಗಳು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿ
ಈಗ ಊರಲ್ಲಿ ಗೃಹಿಣಿ ಮತ್ತು ಬ್ಲಾಗರ್.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)