ಕತ್ತಲೆಂದರೆ….

ನೀ ಇರುವ ಹೊತ್ತನೇ ನಾ ಕತ್ತಲೆನ್ನುವೆ
ಅಲ್ಲಗಳೆಯದಿರು ಇದ ನೀ
ನೀನೆಂದರೆ ಅಜ್ಞಾನ,ಅವಿವೇಕ,ಅಹಂಕಾರ ಏನಾದರೂ ಕೆಟ್ಟದ್ದೂ ಆಗಬಹುದು.

ಹಿಡಿ ಬೆಳಕಿಗೂ ಹೆದರುವ ನೀ ನಿಜಕ್ಕೂ ಪುಕ್ಕಲ
ಒಮ್ಮೊಮ್ಮೆ ನೀ ಇರಬೇಕೆಂದು ಸುಮ್ಮನಾಗುತ್ತೇನೆ..
ನೀನಿರುವಾಗ ನಾನಿರುವೆನೆ ಎಂದೂ
ಚಿಂತಿಸುತ್ತೇನೆ…

ಕತ್ತಲೆಗೂ ನಿನಗೂ ಅವಿನಾಭಾವ ಸಂಬಂಧ
ಒಂದು ಮರೆಮಾಚಿದರೆ ಇನ್ನೊಂದು ಮೈ ಮರೆಯುತ್ತದೆ
ಸಿಹಿ ಸುಖಿಸುತ್ತ ಕಹಿಯನ್ನು ಹಡೆಯುತ್ತದೆ ಮತ್ತೆ ವೈಸ್ ವರ್ಸಾ

ಪಾವ್ಲೋನ ನಾಯಿಯಂತೆ ಜೊಲ್ಲು ಸುರಿಸುವಾಗ ಕಾಣೆ
ಎಲ್ಲಿಂದಲೋ ಅಭಿಪ್ರೇರಣೆ
ಕತ್ತಲು ಕೇವಲ ಕವಿಯುತ್ತದೆ ಎಂದು ತಿಳಿದವರಿಗೆ
ಸರಿಯುತ್ತದೆ ಸಹ ಎಂದು ತಿಳಿಯುವುದೇ ಜ್ಞಾನೋದಯ

ಅದಾಗಲೇಬೇಕು ನಮ್ಮ ಬಾಳಲಿ
ಕವಿಯುವುದು ಸರಿಯುವುದು
ಆದಾಗದಿದ್ದರೆ ಒಂದು ದೀಪ ಬೆಳಗಿಸುವ ಪರಿಯಾದರೂ ತಿಳಿದಿರಬೇಕು.
ಇಲ್ಲವೆಂದರೆ ಎಲ್ಲ ಹಗಲುಗಳಿಗೂ ಸಹ ಕತ್ತಲು ಕವಿಯುತ್ತದೆ..
ಮತ್ತು
ಸರಿಯುವುದೇ‌ ಇಲ್ಲ..

ಸಚಿನ್‌ಕುಮಾರ ಬ. ಹಿರೇಮಠ ಬಾಗಲಕೋಟೆ ಜಿಲ್ಲೆಯ ರನ್ನ ಮುಧೋಳದವರು.
ಸದ್ಯ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಳಕೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕವಿತೆ, ಕತೆ ಹಾಗೂ ಬಿಡಿಬರಹಗಳ ಲೇಖನಗಳ ಬರೆಹದ ಜೊತೆಗೆ ಓದು ಇವರ ಆಸಕ್ತಿ ಕ್ಷೇತ್ರ.