ಕೆಂಪು ರಂಗೋಲಿ..

ನೀನು ಮುಟ್ಟು ಅಂದಿದ್ದೆ
ನಾನು ಮುಟ್ಟಿರಲಿಲ್ಲ
ಇಬ್ಬರೂ ಸುಮ್ಮನೆ ಕೂತಿದ್ದು
ಹೋಗಿದ್ದವು

ಎಂದೊ ಒಮ್ಮೆ ನೀ ಕೇಳಿದ್ದೆ
ಅಂದು ನೀ ಏಕೆ ಮುಟ್ಟಲಿಲ್ಲ?
‘ನೀ ಮುಟ್ಟು ಅನ್ನದೆ,
ನಾನು ಮುಟ್ಟಬೇಕು ಅನಿಸದೆ
ಸ್ಪರ್ಶಕೆ ಸಿಗಬೇಕು ನೀನು’ ಅಂದಿದ್ದೆ
ಅವಳು ಮೆಲು ಗಾಳಿಯಂತೆ
ಕುಲು ಕುಲು ನಕ್ಕಿದ್ದಳು

‘ಹೇ ಹುಡುಗ ಅದು ಕೆಂಪು ರಂಗೋಲಿ
… ನಮ್ಮ ಮುಟ್ಟು ಕಣೊ..’ ಅಂದಿದ್ದಳು
ಹೇಳಿದ್ದೆ ನಾನು ‘ನಾನಂದು ನಿನ್ನ ಖಂಡಿತ
ಮುಟ್ಟುತ್ತಿದ್ದೆ ನಿನ್ನನ್ನು, ನಿನ್ನ ಒಳಗನ್ನು’
ಹೆಣ್ಣನ್ನು ತಲುಪಲು ಹಾಯು ದೋಣಿಯ
ಹುಟ್ಟುಬೇಡ
ಮುಟ್ಟು ಸಾಕು
ಅವಳು ತಬ್ಬಿಕೊಂಡಳು
ನಾನು ಹಣೆಗೆ ಮುತ್ತಿಟ್ಟೆ..
ನಮ್ಮದು ಮುಟ್ಟಿನ ಬಂಧ

*

ನಾನು ಅಂಗಳಕ್ಕೆ ನೀರು ಚೆಲ್ಲುತ್ತಿದ್ದೆ
ಅವಳು ರಂಗೋಲಿ
ಬರೆಯುತ್ತಿದ್ದಳು
ನಾನು ಹೂವು ಕೊಯ್ಯುತ್ತಿದ್ದೆ
ಅವಳು ದಾರ ಹಿಡಿದು ನಿಲ್ಲುತ್ತಿದ್ದಳು
ಅವಳು ಉಸಿರು ಬಿಡುತ್ತಿದ್ದಳು
ನಾನು ಆ ಉಸಿರು ಕುಡಿದು ಬದುಕುತ್ತಿದ್ದೆ
ಅವಳು ಸವಿನಿದ್ದೆ ಉಣ್ಣುತ್ತಿದ್ದಳು
ಅವಳ ಪಾಲಿನ ಕನಸು ಕಾಣುತ್ತಿದ್ದೆ
ಅವಳು ಕೆಂಪು ರಂಗೋಲಿ ಚೆಲ್ಲುತ್ತಿದ್ದಳು
ನಾನು ಮುಟ್ಟಾಗುತ್ತಿದ್ದೆ

*

ಅವತ್ತು ನಾ ತಡವಾಗಿ ಬಂದದ್ದು
ನೀನು ಕೇಳಬೇಕಿತ್ತು ಅಂದೆ
ಮರೆತೆ ಅಂದಳು
ಪ್ರೀತಿಯನ್ನೇ ಮರೆಯುವುದಾ ಅಂದೆ
ಅವಳ ಕಣ್ಣು ಕಡಲಾಯಿತು
ನನಗೆ ಪ್ರೀತಿಸಲು ಬರುವುದಿಲ್ಲವಾ ಕೇಳಿದಳು
ನನ್ನದು ಅತಿಯಾಯ್ತು ಬಿಡು ಅಂದೆ
ಮಾತು ಮಥಿಸಿ, ನಮ್ಮ ನಡುವೆ ಬಿಸಿ..

ಎದೆಯೊಳಗೆ ಬರೆದಿಟ್ಟುಕೊಂಡ
ತಾರೀಖು ಮೀರಿ ಎರಡು ದಿನ
ಕಾದಿದ್ದೇನೆ
ಅವಳು ‘ಮುಟ್ಟು’ ಅನ್ನಲಿ ಅಂತ..
ನಾನು ಮುಟ್ಟುವುದಿಲ್ಲ..
ನಾನೂ ಮುಟ್ಟಾಗುತ್ತೀನಿ
ಬಿಡುವುದಿಲ್ಲ ನಾನು ಎಂದೂ
ಆ ಮುಟ್ಟನ್ನು ಅನಾಥವಾಗಲು
ಮತ್ತು
ಪ್ರೀತಿಯನ್ನು!