ಈ ದೇಶದ ಶ್ರಮಿಕವರ್ಗವಿದೆಯಲ್ಲ ಇವರ್ಯಾರೂ ಧರ್ಮ ಪಂಥ ಪಂಗಡಗಳ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡವರಲ್ಲ. ದೇವರನ್ನು ಮನೆಯ ಜಗುಲಿಗಳಿಗೇ ಕಟ್ಟಿ ಹಾಕಿ ರೊಟ್ಟಿ ಬುತ್ತಿ ಅಂಬಲಿಯನ್ನು ಸಾಬರು ಮಾಲಗಾರರು ಲಿಂಗಾಯತರೆನ್ನದೇ ಜೋಳದ ಹೊಲದಲ್ಲಿ ಕುಳಿತು ಬುತ್ತಿಯ ಬಿಚ್ಚಿ ಹಂಚಿ ತಿಂದು ಬದುಕುವವರು. ಹೀಗೆ ಮಾಡುವುದು ಇದೊಂದು ಅವರಿಗೆ ಆದರ್ಶವೆನ್ನುವ ಅಹಂ ಆಗಲೀ ನಾನು ಜಾತ್ಯಾತೀತವೆನ್ನುವ ತೋರಿಕೆಯಾಗಲೀ ದೇವರಾಣೆಯಾಗಿಯೂ ಇರುವುದಿಲ್ಲ. ಇದೊಂದು ತೀರ ಸಹಜ ಬಾಳ್ವೆ ಅವರದ್ದು. ಉತ್ತರ ಕರ್ನಾಟಕದಲ್ಲಿ ಉರುಸುಗಳೆಂಬ ಹಬ್ಬಗಳು ಹಿಂದೂ ಮುಸ್ಲಿಮರಿಬ್ಬರೂ ಸೇರಿ ಆಚರಿಸುವ ಸೌಹಾರ್ದತೆಯ ಹಬ್ಬ.
ಡಾ.ಲಕ್ಷ್ಮಣ ವಿ.ಎ. ಬರೆಯುವ ಅಂಕಣ

 

ಇಂತಹ ನಡಗುವ ಚಳಿಯಲ್ಲೂ ಈ ಹೂವು ಮಾರುವ ಅಮ್ಮ ಬೆಳಿಗ್ಗೆ ಅದೆಷ್ಟು ಗಂಟೆಗೆ ಬೀದಿ ಬದಿಯಲಿ ಬಂದು ಕುಳಿತುಕೊಳ್ಳುವಳೊ? ನೀಲಾದ್ರಿ ನಗರದ ಹನ್ನೆರಡನೇಯ ಕ್ರಾಸಿನ ಬದಿಯಲ್ಲಿ ಕುಳಿತು ಹೂವನ್ನಷ್ಟೇ ಅಲ್ಲದೇ ಗಣೇಶನ ಹಬ್ಬಕ್ಕೆ ಗರಿಕೆ, ವರಮಹಾಲಕ್ಷ್ಮಿಗೆ, ತಾವರೆ ಹೂ, ತುಳಸೀ ಪೂಜೆಗೆ ಬೆಟ್ಟದ ನೆಲ್ಲೀಕಾಯಿಯ ಟೊಂಗೆ, ದಸರೆಗೆ ಬನ್ನಿ, ಆಯುಧ ಪೂಜೆಗೆ ಮಾವಿನ ಸೊಪ್ಪು, ಯುಗಾದಿಗೆ ಬೇವು ಮಾರುತ್ತ ಹೀಗೆ ತಮ್ಮ ಹಬ್ಬಗಳನ್ನು ಹೀಗೆ ಇವರು ಬೀದಿಗಳಲ್ಲೇ ಆಚರಿಸುತ್ತಾರೆ… ಬಹಶಃ ಇವರಷ್ಟೇ ಒಂಟಿ ಇವಳ ಮನೆಯ ದೇವರೂ ಕೂಡ.

ಹಬ್ಬದ ದಿನಗಳಲ್ಲಿ ಇವರ ಮನೆಯ ದೀಪಗಳು ಎಣ್ಣೆ ಕಾಣುವುದು ಅನುಮಾನ. ಆದರೂ ಹೊರಗೆ ಅದ ಕಾಣಿಸದೇ ಅವಳ ಕವಳ ತುಂಬಿದ ಬಾಯಿಯಲ್ಲೊಂದು ಮುಗುಳು ನಗೆಯೊಂದಿಗೆ ಚೌಕಾಸೀ ಮಾಡುವವರೊಡನೆ ತನ್ನ ವ್ಯಾಪಾರೀ ಕುಶಾಲಿ ಮಾತುಗಳಲ್ಲೇ ಮರಳು ಮಾಡುವ ವಿದ್ಯೆ ಕರಗತವಾಗಿದೆ. ಹಬ್ಬದ ದಿನಗಳಲ್ಲಿ ಹೂವಿನ ರೇಟು ಕೇಳಿ ಬೆಚ್ಚದಿರುವವರುಂಟೆ? ಕಾಕಡಾ ನೂರ ಇಪ್ಪತ್ತಿಗೆ ಮಾರು…. ಚೆಂಡು ಹೂ ನೂರಾ ಐವತ್ತು…. ಬಿಡಿ ಹೂ ಕಾಲು ಕೇಜಿಗೆ ಐವತ್ತು… ಹೀಗೆ ಹೂಗಳ ರೇಟೂ ಹಬ್ಬಗಳು ಕಳೆದಂತೆ ಇಳಿಯುತ್ತಾ ಹೋಗುತ್ತವೆ.

ಪ್ರತಿ ದಿನ ನಾನು ಮಗನ ಶಾಲೆಯ ಬಸ್ಸು ಹಿಡಿಯಲು ಈ ಹೂ ಮಾರುವ ಅಮ್ಮನ ಪಕ್ಕದ ನಿಲ್ದಾಣದಲ್ಲೇ ನಿಲ್ಲುವುದು. ಅರೆ ತಮಿಳು ಅರೆ ಕನ್ನಡ ಮಾತನಾಡುವ ಈ ಅಮ್ಮ ತಮಿಳುನಾಡಿನ ಯಾವುದೋ ಹಳ್ಳಿಯ ಸೆಲ್ವಿಯೋ ಚೆಲ್ವಿಯೋ ಹೆಸರಿನವಳಾಗಿರಬಹುದು. ಕಪ್ಪು ಬಣ್ಣದ ಅವಳ ಅಗಲ ಹಣೆಯ ಮೇಲಿನ ದೊಡ್ಡ ಕುಂಕುಮ ಅವಳ ಗಂಡ ಬದುಕಿರುವುದಕ್ಕೆ ಸಾಕ್ಷಿಯಾಗಿದೆ. ಅವನೂ ಈ ಎದಿರು ಅಪಾರ್ಟ್ ಮೆಂಟಿನಲಿ ಸೆಕ್ಯುರಿಟಿಯಾಗಿಯೋ ಅಥವ ಪಕ್ಕದಲ್ಲಿ ಕಟ್ಟುತ್ತಿರುವ ಹೊಸ ಅಪಾರ್ಟ್ಮೆಂಟಿನಲಿ ಈ ಸಮಯಕೆ ಸಿಮೆಂಟ್ ಇಟ್ಟಿಗೆ ಹೊರುತ್ತಿರಬಹುದು.

ಅದೊಂದು ಚಳಿಗಾಲದ ಬೆಳಗು… ಯಾವುದೇ ಹಬ್ಬಗಳಿಲ್ಲದ ಮಾಮೂಲೀ ದಿನ. ಎಂದಿನಂತೆ ನಾನು ಮಗನ ಶಾಲೆಯ ಬಸ್ಸಿಗೆ ಕಾಯುತ್ತ ನಿಂತಿದ್ದೆ. ಈ ತಮಿಳು ಸೆಲ್ವಿ ಪಕ್ಕದ ಆಟೋ ಸ್ಟ್ಯಾಂಡಿನ ಮುನೀರನೊಂದಿಗೆ ಹುಸಿ ಕೋಪ ತೋರುತ್ತ, ಮುನೀರ ಒಂದು ಮೊಳ ಹೂವಿಗೆ ಇಪ್ಪತ್ತು ರೂಪಾಯಿ ಬಿಲ್ ಕುಲ್ ಕೊಡಲು ಆಗುವುದಿಲ್ಲವೆಂದು ಮುಖ ತಿರುವಿ ನಡೆದಿದ್ದ ……

ಕೊನೆಗೆ ತಮಿಳು ಸೆಲ್ವಿಯೇ ಸೋತು “ಯೋ ಮುನೀರಾ, ಸರದಾರಾ… ಬಾ ಕಣ ಕಂಡಿದ್ದೀನಿ. ಹದಿನೈದು ರೂಪಾಯಿ ಕೊಟ್ಟು ತಕ್ಕೊ ಹೋಗು ಈ ಹೂವ ಬೋಣಿ ಮಾಡು ನಿನ್ನ ಕೈಲಿ ಒಳ್ಳೆ ಸಂಪಾದ್ನೆ ಆಯ್ತದೆ ಕಣ್ಲಾ”….. ಅಂತ ನನ್ನ ಕಿವಿಯಾರೆ ಕೇಳಿಸಿಕೊಳ್ಳವುಷ್ಟರಲ್ಲಿ ಮಗನ ಸ್ಕೂಲ್ ಬಸ್ಸು ರೊಯ್ಯನೇ ಬಂದು ರಸ್ತೆಯ ಆ ಬದಿಯ ಆಟೋ ಮುನೀರನ್ನ ಈ ಬದಿಯ ಸೆಲ್ವಿಯನ್ನ ಸರಿಯಾಗಿ ಮರೆ ಮಾಡಿತು. ಮಗ ಟಾ ಟಾ ಮಾಡುತ್ತಾ ಬಸ್ಸು ಹತ್ತಿಹೋದ.

ಮನೆಗೆ ವಾಪಸು ಬರುವಾಗ ನನ್ನ ನಿದ್ದೆಯ ಅರೆ ಮಂಪರಿನ ತಲೆಗೆ ಹುಳ ಬಿದ್ದದ್ದು ಇಷ್ಟು;

ಈ ಸೆಲ್ವಿಯ ಜಾತಿ ಬೇರೆ, ಆ ಆಟೋ ಮುನೀರನ ಜಾತಿ ಬೇರೆ; ಇಬ್ಬರೂ ಚಳಿ ಬಿಸಿಲು ಹದಗೆಟ್ಟ ರಸ್ತೆಗಳ ಧೂಳು ಕುಡಿಯುತ್ತ, ಬೆಂಗಳೂರಿನ ಪ್ರತಿಷ್ಠಿತ ಐ ಟಿ ಆಫೀಸುಗಳ ಸಂಪರ್ಕಿಸುವ ರಸ್ತೆಯಲ್ಲಿ ಬೀದಿ ಪಾಲಾದವರು.

ಮುನೀರ ಬೋಣಿ ಮಾಡಿದ ಆ ದಿನ ಮಾತ್ರ ತನ್ನ ಸಂಪಾದ್ನೆ ಚೆನ್ನಾಗಿ ಆಯ್ತದೆ ಎಂಬ ಸೆಲ್ವಿಯ ಮನಸು ಕೇವಲ ವ್ಯಾಪಾರಿ ಚಾಲಾಕಿತನದ ಮಾತಾಗಿರಲಾರದೆ, ಅದೊಂದು ಜಾತಿ ಮೀರಿದ ಪ್ರೀತಿ ವಿಶ್ವಾಸ ಅಂತ ನನಗೆ ಅನಿಸಿ ಮನೆಗೆ ಬಂದೆ. ಎಫ್ . ಬಿ. ತೆರೆದು ಕುಳಿತರೆ, ದೂರದ ಬುಲಂದ್ ಶಹರಿನಲ್ಲಿ ಕೋಮು ಸಂಘರ್ಷದಲ್ಲಿ ಗುಂಪೊಂದು ಅಧಿಕಾರಿಯೊಬ್ಬನನ್ನು ಗುಂಡಿಕ್ಕಿ ಕೊಂದಿತ್ತು. ಆ ಪೋಸ್ಟಿಗೆ ಸಾವಿರಾರು ಪರ ವಿರೋಧದ ಕಮೆಂಟುಗಳು,”ಸುವ್ವರ್ ಕಾ ಬಚ್ಚಾ ಥಾ ಮರ ಗಯಾ ಸಾಲಾ”….. safron terrorism ಅಂತ ಉದ್ಘಾರ ತೆಗೆದ ರೋಷದ ಇಮೋಜಿಗಳು….. ಬೈಗುಳಗಳಿಗೆ ಪ್ರತಿ ಬೈಗುಳಗಳು ….ಮತ್ತೆ ಬೈಗುಳಗಳು. ಪ್ರಭುತ್ವ ಬಯಸುವುದೇ ಇದನ್ನಲ್ಲವೇ….. ನಾವೆಲ್ಲಾ ಒಬ್ಬರಿಗೊಬ್ಬರು ಕಚ್ಚಾಡಿದಷ್ಟು ಅವರ ಆಳ್ವಿಕೆ,ಅವರ ರಾಜ್ಯಭಾರ ಸುಲಲಿತ….. ನಿಜಕ್ಕೂ ಫೇಸ್ ಬುಕ್ಕಿನಾಚೆ ಜಗತ್ತು ಸುಂದರವಾಗಿದೆ.

ಸಂಜೆ ಹೂವಾಡಗಿತ್ತಿಯ ಹೂವು ಖಾಲೀಯಾದರೂ ಅವಳ ಬೆರುಳಗಳಿಗಂಟಿದ ಹೂ ಘಮ ಅವಳ ಮನೆಯ ದೇವರ ತನಕ ಹಿಂಬಾಲಿಸುತ್ತದೆ. ನಮ್ಮ ನಮ್ಮ ಎದೆಯಂಗಳದ ಹೂದೋಟಗಳು ಯಾವ ಮಾಯಕದ ಮಳೆಗೆ ಅರಳಲು ಕಾದು ನಿಂತಿವೆಯೊ?

ಕೊನೆಗೆ ತಮಿಳು ಸೆಲ್ವಿಯೇ ಸೋತು “ಯೋ ಮುನೀರಾ, ಸರದಾರಾ… ಬಾ ಕಣ ಕಂಡಿದ್ದೀನಿ. ಹದಿನೈದು ರೂಪಾಯಿ ಕೊಟ್ಟು ತಕ್ಕೊ ಹೋಗು ಈ ಹೂವ ಬೋಣಿ ಮಾಡು ನಿನ್ನ ಕೈಲಿ ಒಳ್ಳೆ ಸಂಪಾದ್ನೆ ಆಯ್ತದೆ ಕಣ್ಲಾ”….. ಅಂತ ನನ್ನ ಕಿವಿಯಾರೆ ಕೇಳಿಸಿಕೊಳ್ಳವುಷ್ಟರಲ್ಲಿ ಮಗನ ಸ್ಕೂಲ್ ಬಸ್ಸು ರೊಯ್ಯನೇ ಬಂದು ರಸ್ತೆಯ ಆ ಬದಿಯ ಆಟೋ ಮುನೀರನ್ನ ಈ ಬದಿಯ ಸೆಲ್ವಿಯನ್ನ ಸರಿಯಾಗಿ ಮರೆ ಮಾಡಿತು.

ಚಿಕ್ಕ ಹಳ್ಳಿ ನಮ್ಮೂರಿನ ನಮ್ಮ ಬೀದಿಯ ಕೊನೆಯಲ್ಲೇ ಮಸೀದಿಯಿತ್ತು. ಎಂಬತ್ತರ ದಶಕದಲ್ಲಾಗಲೇ ಮಸೀದಿಯ ಸಮಯ ಸಮಯಕ್ಕೆ ನಮಾಜು ನಮ್ಮ ಬೀದಿಯನ್ನು ಅಷ್ಟೇ ಏಕೆ ಇಡೀ ಒಂದು ಊರಿನ ನಿಜ ಗಡಿಯಾರಗಳು ಮನುಷ್ಯನ ದೈನಂದಿನ ಬದುಕಿನ ಜೈವಿಕ ಗಡಿಯಾರಗಳಾಗೇ ಬದಲಾಗುವುದರಲ್ಲಿ ಆಶ್ಚರ್ಯವಿರಲಿಲ್ಲ. ಜನ ಕೋಳಿ ಕೂಗೋ ಹೊತ್ತು ಅನ್ನುವ ಬದಲಾಗಿ ಅಲ್ಲಾ ಕೂಗೋ ಹೊತ್ತಿಗೆ ಇವರ ಬೆಳಕಾಗುತ್ತಿತ್ತು. ಮಧ್ಯಾನ್ಹ ಒಂದೂವರೆ ಸಮಯದ ನಮಾಜಿನ ಸಮಯಕೆ ಊಟ. ಸಂಜೆ ಐದರ ಹೊತ್ತಿನ ನಮಾಜಿಗೆ ಎಮ್ಮೆ ಆಕಳು ಆಡುಗಳ ಹಾಲು ಕರೆಯುವ ಸಮಯ… ಹೀಗೆ ಗಡಿಯಾರವಿಲ್ಲದ ಊರಿನಲ್ಲಿ ಈ ನಮಾಜಿನ ಕೂಗುಗಳೇ ನಿಜ ಗಡಿಯಾರಗಳು.

ಈ ದೇಶದ ಶ್ರಮಿಕವರ್ಗವಿದೆಯಲ್ಲ ಇವರ್ಯಾರೂ ಧರ್ಮ ಪಂಥ ಪಂಗಡಗಳ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡವರಲ್ಲ. ದೇವರನ್ನು ಮನೆಯ ಜಗುಲಿಗಳಿಗೇ ಕಟ್ಟಿ ಹಾಕಿ ರೊಟ್ಟಿ ಬುತ್ತಿ ಅಂಬಲಿಯನ್ನು ಸಾಬರು ಮಾಲಗಾರರು ಲಿಂಗಾಯತರೆನ್ನದೇ ಜೋಳದ ಹೊಲದಲ್ಲಿ ಕುಳಿತು ಬುತ್ತಿಯ ಬಿಚ್ಚಿ ಹಂಚಿ ತಿಂದು ಬದುಕುವವರು. ಹೀಗೆ ಮಾಡುವುದು ಇದೊಂದು ಅವರಿಗೆ ಆದರ್ಶವೆನ್ನುವ ಅಹಂ ಆಗಲೀ ನಾನು ಜಾತ್ಯಾತೀತವೆನ್ನುವ ತೋರಿಕೆಯಾಗಲೀ ದೇವರಾಣೆಯಾಗಿಯೂ ಇರುವುದಿಲ್ಲ. ಇದೊಂದು ತೀರ ಸಹಜ ಬಾಳ್ವೆ ಅವರದ್ದು. ಉತ್ತರ ಕರ್ನಾಟಕದಲ್ಲಿ ಉರುಸುಗಳೆಂಬ ಹಬ್ಬಗಳು ಹಿಂದೂ ಮುಸ್ಲಿಮರಿಬ್ಬರೂ ಸೇರಿ ಆಚರಿಸುವ ಸೌಹಾರ್ದತೆಯ ಹಬ್ಬ: ಈಗ ಕಾಲ ಬದಲಾಗಿದೆ

ಪ್ರಭುತ್ವ ಪ್ರಾಯೋಜಿಸುವ ಕೋಮುವಾದದ ಕಿಡಿಗಳು ಊರ ಬೀದಿ ಸಂದಿ ಗೊಂದಿಗಳನ್ನೂ ತನ್ನ ಬೆಂಕಿಯ ಕೆನ್ನಾಲಿಗೆ ಚಾಚಿದೆ. ಯುವಕರ ಅಂಗೈನಲ್ಲಿರುವ ಮೊಬೈಲುಗಳು ಸಾಕು, ಒಂದು ಊರಿನ ಸೌಹಾರ್ದ ಹಾಳುಗೆಡುವಲು. ಎಲ್ಲರ ಕಣ್ಣುಗಳಲ್ಲೂ ಒಂದು ಅನುಮಾನದ ಹೊಗೆ. ಜಾಗತೀಕರಣ ತಂದಿಟ್ಟ ಹೊಸ ಆತಂಕಗಳು ಹಣದ ಯಥೇಚ್ಛ ಹರಿವು, ಟೀ ಹೋಟೇಲಿನೊಳಗೆ ಕಾಲಿಟ್ಟು ಚಹಾ ಕುಡಿಯುತ್ತಿದ್ದ ಹಿರಿಯ ತಲೆಮಾರಿನ ಅಪ್ಪನ ಮಕ್ಕಳೀಗ ಮೋಟಾರು ಸೈಕಲ್ಲಿನ ಮೇಲೆ ಊರಿನ ಮೂರು ಕಿಲೋ ಮೀಟರ್ ದೂರದ ಧಾಬಾದಲ್ಲಿ ನಿರಾತಂಕವಾಗಿ ಪಾರ್ಟಿ ಮಾಡಿಕೊಂಡು ಬರುವುದೇ ಊರಿನ ಡೆವಲೆಪ್ಮೆಂಟ್ ಎನ್ನುವ ಹಾಗಾಗಿದೆ. ಆಗಾಗ ಪಕ್ಷದ ಹೆಸರಿನಲ್ಲಿ ಜಗಳಗಳಾಗುತ್ತವೆ, ಧರ್ಮದ ಹೆಸರಿನಲ್ಲಿ ಎಳೆ ಹುಡುಗರ ಕೊಲೆಯಾಗಿದೆ. ಬೀದಿ ಬೀದಿಗಳ ನಡುವೆ ಬೇಲಿಯೆದ್ದಿವೆ, ಜಿದ್ದಿನ ಕಣ್ಣುಗಳು ಸೇಡಿಗಾಗಿ ಹದ್ದಿನ ಪಹರೆ ಇಟ್ಟಿವೆ. ಹೂ ಬೆಳೆಯುತ್ತಿದ್ದ ಬೇಲಿಗಳ ಮೈ ಸವರಿದರೆ ಮುಳ್ಳು ನಾಟುತ್ತದೆ. ಇಷ್ಟು ದಿನ ಸಮಯಪಾಲಿಸುತ್ತಿದ್ದ ನಮಾಜಿನ ಗಡಿಯಾರ ಇವರಿಗೆ ಕರ್ಕಶವಾಗಿ ಕೇಳುತ್ತಿದೆ. ಇದೆಲ್ಲ ವ್ಯಾಟ್ಸಾಪ್ ಯೂನಿವರ್ಸಿಟಿಯ ಅಡ್ಡ ಪರಿಣಾಮ!

ಕಳೆದ ಕೆಲ ದಿನಗಳ ಹಿಂದೆ ಫುಡ್ ಡೆಲಿವರಿ ಹುಡುಗ ಕೇವಲ ಮುಸ್ಲಿಮ್ ಎನ್ನುವ ಕಾರಣಕ್ಕೆ ಆತ ಕೊಡುವ ಆಹಾರದ ಆರ್ಡರನ್ನು ರದ್ದುಪಡಿಸಲಾಯಿತು. once again ಇಲ್ಲಿ ಈ ತರಹದ ತಾರತಮ್ಯ ಎಸಗಿದವರು ಸುಶಿಕ್ಷಿತರೆನಿಸಿಕೊಂಡವರು. ಹೀಗೆ ಮಾಡಿದವರ ಮನೆಯವರೇನಾದರೂ ತುರ್ತು ಅನಾರೋಗ್ಯಕ್ಕೀಡಾದರೆ ಅಂತಹವರಿಗೆ ರಕ್ತ ಕೊಡುವ ಸಂದರ್ಭ ಎದುರಾದಾಗ ಇಂತಹವರದೆ ರಕ್ತ ಬೇಕೆಂಬ ಆಯ್ಕೆ ಮಾಡುತ್ತಾರೆಯೇ? ಹೋಗಲಿ ಅಪರಿಚಿತ ಊರಿನ ಅಪರಿಚಿತ ಹೋಟೇಲ್ ಮಾಣಿ ಸಪ್ಲೈಯರ ಜಾತಿ ಯಾವುದು?

ನಿಜ…. ಬಹುತ್ವ ಭಾರತದಲ್ಲಿ ಜಾತೀಯತೆ ಇನ್ನೂ ಇದೆ, ಕೆಲ ಹಳ್ಳಿಗಳಲ್ಲಿ ಇದು ತುಸು ಢಾಳವಾಗಿಯೇ ರಾಚುತ್ತದೆ, ಒಪ್ಪಿಕೊಳ್ಳೋಣ. ಜಾಗತೀಕರಣ ನಗರೀಕರಣ ಇದಕ್ಕೊಂದು ಪರಿಹಾರವಾಗಿ ಕಾಣಬಹುದೆಂಬ ಆಶಯವೂ ಜೀವಂತವಾಗಿದೆ ಎನ್ನೋಣ. ಆದರೆ ಡಿಜಿಟಲ್ ಜಾತೀಯತೆಗೆ ಏನೆನ್ನುವುದು?

ಭಾರತದ ನಿಜವಾದ ವಿರೋಧಿ ಭಯೋತ್ಪಾದನೆಯನ್ನು ಎಲ್ಲ ಧರ್ಮದವರೂ ಸಂಘಟಿತರಾಗಿ ಎದುರಿಸಬೇಕಿದೆ. ಬಡತನ, ಅನಕ್ಷರತೆ, ನಿರುದ್ಯೋಗಳ ವಿರುದ್ಧ ಹೋರಾಟ ಮಾಡಬೇಕಿದೆ.

1995 ರಲ್ಲಿ “ಬಾಂಬೆ” ಅಂತ ಒಂದು ಚಲನಚಿತ್ರ ಬರುತ್ತದೆ. ಈ ಸಿನೇಮಾದಲ್ಲಿ ಆಗಿನ ಇಡೀ ಮುಂಬಯಿ ಕೋಮು ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುತ್ತದೆ. ಸಾವಿರಾರು ಹಿಂದೂ ಮುಸ್ಲಿಮರು ಇಲ್ಲಿ ಪ್ರಾಣ ಕಳೆದುಕೊಂಡು ಅಕ್ಷರಶಃ ಬೀದಿಪಾಲಾಗಿರುತ್ತಾರೆ. ಬೀದಿಯಲ್ಲಿ ಹೊರಟಿರಬೇಕಾದರೆ ನೀವು ಯಾವ ತಪ್ಪು ಮಾಡುವುದೂ ಬೇಡ, ಕೇವಲ ನಿಮ್ಮ ಹೆಸರು ರಾಮ ಎಂದಿದ್ದರೆ ರಹೀಮನು ನಿಮ್ಮನ್ನು ಕೊಲೆ ಮಾಡುತ್ತಾನೆ. ಅಥವ ರಹೀಮ ಎಂದಿದ್ದರೆ ಎದುರಿನ ರಾಮ ನಿಮ್ಮನ್ನು ಕೊಲೆ ಮಾಡಬಹುದು. ಇಂತಹ ಉದ್ವಿಗ್ನತೆಯ ರಾತ್ರಿಯಲ್ಲೇ ಒಬ್ಬ ನಡುವಯಸಿನ ಮನುಷ್ಯನೊಬ್ಬ ತಳ್ಳು ಗಾಡಿಯ ಮೇಲೆ ಹೆಣಭಾರದ ಲಗ್ಗೇಜು ಹೊತ್ತು ಬಹಳ ಕಷ್ಟಪಟ್ಟು ಬಲು ಆಯಾಸದಿಂದ ಆ ತಳ್ಳುಗಾಡಿಯ ಮೇಲಿನ ಲಗೇಜನ್ನು ಇಕ್ಕಟ್ಟಾದ ಬೀದಿಯಲ್ಲಿ ನಿರ್ಭಯವಾಗಿ ಸಾಗಿಸುತ್ತಿದ್ದಾಗ ಮುಖಕ್ಕೆ ಗೌನು ಹಾಕಿಕೊಂಡು ಕೈಯಲ್ಲಿ ಚೂರಿ ಹಿಡಿದವನೊಬ್ಬ ಈ ಕೂಲಿಯ ಎದುರಾಗಿ, ಅತೀ ಜೋರಾಗಿ ‘ನಿನ್ನ ಹೆಸರೇನು?’ ಎಂದು ಕೇಳುತ್ತಾನೆ. ಆಗ ಆ ಕೂಲಿ ಅತೀ ನಿರ್ಲಿಪ್ತನಾಗಿ ಅಷ್ಟೇ ನಿತ್ರಾಣನಾಗಿ “ಸ್ವಾಮಿ ನೀವು ಹಿಂದೂ ಆಗಿದ್ದರೆ ನಾನು ಮುಸ್ಲಿಂ ಎಂದು ತಿಳಿದು ನನ್ನ ಕೊಲೆ ಮಾಡು, ಅಥವ ನೀನು ಮುಸ್ಲಿಂ ಆಗಿದ್ದರೆ ನನ್ನ ಹಿಂದೂ ಎಂದು ತಿಳಿದು ಕೊಲೆ ಮಾಡು” ಎಂದು ಅಂಗಲಾಚಿ ನಿಂತಾಗ ಆ ಕೊಲೆಗಾರನೂ ಒಂದು ಕ್ಷಣ ಅವನು ಮಾಡುತ್ತಿರುವ ಪಾಪಪ್ರಜ್ಞೆ ಅವನನ್ನು ಕಂಗಾಲು ಮಾಡುತ್ತದೆ. ಈ ದೃಶ್ಯ ಕೇವಲ ಒಂದು ನಿಮಿಷದ್ದು, ಆದರೆ ಇದರ ಪರಿಣಾಮ ಮಾತ್ರ ಕಳೆದ ಇಪ್ಪತ್ತೈದು ವರ್ಷಗಳಿಂದ ನನ್ನನ್ನು ಕೆಣಕುತ್ತಲೇ ಆಗಾಗ ತುಂಬ ಡಿಸ್ಟರ್ಬ್ ಮಾಡುತ್ತಿರುತ್ತದೆ.

ಆ ನಡುರಸ್ತೆಯಲ್ಲಿ ಮಧ್ಯರಾತ್ರಿಯಲ್ಲಿ ಕೂಲಿಗಾಗಿ ಲಗೇಜು ಗಾಡಿ ಎಳೆಯುತ್ತಿದ್ದವನ ಊರು ಯಾವುದು? ಮುಂಬೈ ಬಂದ್ ನಿಂದಾಗಿ ಅವನು ಮನೆಗೆ ಹೋಗಿರಲಿಲ್ಲವೇ? ಅಥವ ಬಂದ್ ನಿಂದಾಗಿ ಆತನಿಗೆ ಕೆಲಸ ಸಿಗದೆ ಮನೆಯಲ್ಲಿ ಇವನ ಕಾಯುತ್ತಿರುವ ಹಸಿದ ಕಣ್ಣಿನ ಮಕ್ಕಳಿಗೆ ಏನು ಉತ್ತರ ಕೊಡುವುದು? ಇವನ ಹೆಂಡತಿ ಇವನು ಸತ್ತೇ ಹೋಗಿರಬಹುದೆಂದು ತಿಳಿದು ಅವಳೂ ಊಟ ಬಿಟ್ಟು ಕುಳಿತಿರಬಹುದು? ಅದಿರಲಿ ಈ ಸುಸ್ತಾದ ಕೂಲಿಯ ದೇಹದ ಹಣೆಯ ಬೆವರಿನವನು ಊಟ ಮಾಡಿ ಎಷ್ಟು ದಿನವಾಗಿರಬಹುದು?

ಇದೆಲ್ಲ ಸಂಕಟ ಒಂದೇ ಬಾರಿ ತೀರಲಿ ಎಂದು ನಡುರಸ್ತೆಗೆ ಇಳಿದು ಆ ಧರ್ಮಾಂಧನ ಕೈಗಳಲ್ಲಿ ಕೊಲೆಯಾಗಿ ಅವನ ಹಸಿವು ಕೊನೆಗಾಣಿಸುವ ಹುಚ್ಚು ಆಸೆಯೇ? ಹಾಗಾದರೆ ಅವನ ಹಸಿವು ಎಂತಹದ್ದು ಎಷ್ಟೊಂದು ಮುಖಗಳು ಅದಕ್ಕೆ?

ಮಂದಿರ ಮಸೀದಿಗಿಂತ ಆ ಹಸಿದ ಮುಖ ನಮ್ಮನ್ನು ಕಂಗೆಡಿಸಬೇಕಲ್ಲವೆ?