ರಾಜೇಶ್ವರಿ ತೇಜಸ್ವಿ ಜೀವನೋತ್ಸಾಹದ, ಲವಲವಿಕೆಯ ಮಹಿಳೆ.  ಒಬ್ಬರೇ ಇದ್ದಾಗಲೂ ಅಡಿಗೆ ಮಾಡಲು ಅವರಿಗೆ ಎಂದಿನ ಉತ್ಸಾಹವೇ ಇರುತ್ತಿತ್ತು. ಸಾಮಾನ್ಯ ವಾಗಿ ಅವರ ಮೆನು ವಿನಲ್ಲಿ ಮೂರು ತರಕಾರಿ ಐಟಂಗಳು. ಪಲ್ಯ ಚಟ್ನಿ , ಸಾರು ಅಥವಾ ಸಾಂಬಾರು. ಕೆಸುವಿನ ಸೊಪ್ಪನ್ನು ಗಂಟು ಕಟ್ಟಿ ಮಾಡುವ ಸಾಂಬಾರು, ಹೀರೆ ಸಿಪ್ಪೆಯ ಚಟ್ನಿ, ಪತ್ರೊಡೆ, ಪಕೋಡಗಳು ಹೀಗೆ. ಮಲೆನಾಡಿನ ವಿಶೇಷಗಳು. ಎಂಬತ್ನಾಲ್ಕರ ಪ್ರಾಯದಲ್ಲಿ ಸದೃಢವಾದ ಹಲ್ಲುಗಳನ್ನು ಹೊಂದಿದ್ದ ಅವರು ಎಂದೂ ಯಾರ ಬಗ್ಗೆಯೂ ಕಟಕಿಯಾಡಿದ್ದಿಲ್ಲ. ತುಂಬು ಬದುಕನ್ನು ಸವಿದು ಅವರೀಗ ಹೊರಟು ಹೋಗಿದ್ದಾರೆ. ನಿರುತ್ತರ ಖಾಲಿಯಾಗಿದೆ.
ರಾಜೇಶ್ವರಿ ತೇಜಸ್ವಿ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡು ಡಾ. ಎಲ್. ಸಿ. ಸುಮಿತ್ರ ಬರೆದ ಬರಹ ಇಲ್ಲಿದೆ. 

 

ಕೆಲವು ದಿನದ ಹಿಂದೆ ರಾಜೇಶ್ವರಿಯವರ ಜೀವನೋತ್ಸಾಹ ಕುರಿತು ಕಿರುಲೇಖನವೊಂದನ್ನು ಬರೆದಿದ್ದೆ. ಆದರೆ ಇಷ್ಟು ಬೇಗ ಅವರು ಆಗಲಿ ಹೋಗುತ್ತಾರೆ ಎಂದು ಭಾವಿಸಿರಲಿಲ್ಲ. ಸ್ವಲ್ಪ ದಿನದ ಹಿಂದೆ ಮಾತನಾಡಿದಾಗ ಹಿಮೋಗ್ಲೋಬಿನ್ ಕಡಿಮೆ ಆಗಿದೆ, ಸ್ವಲ್ಪ ಆಯಾಸ ಅನಿಸುತ್ತದೆ ಅಂದಿದ್ದರು. ನಾಡಿದ್ದು ಡಿಸೆಂಬರ್ ಹನ್ನೊಂದಕ್ಕೆ 84 ತುಂಬಿ 85 ಕ್ಕೆ ಅಡಿಯಿಡುತ್ತೇನೆ, ಆಯಾಸ ಸಹಜ ಅಂತ ಅವರೇ ಹೇಳಿದರು. ಈಗ  ನೋಡಿದರೆ, ಈ ಸುದ್ದಿ ಬಂದಿದೆ. ಮೊನ್ನಿನ ಮಾತುಗಳೇ ನೆನಪಾಗುತ್ತಿವೆ.

ಕಳೆದ ಜುಲೈ ೨೩ ಎಂದೂ ಬಾರದ ಒಂದೇ ದಿನ ದಾಖಲೆ ಮಳೆ ಬಂತು ಮರುದಿನವೂ ಮುಂದುವರೆಯಿತು.. ತೋಟದ ಮನೆಯಲ್ಲಿ ಒಬ್ಬರೇ ಇರುವ ಅವರಿಗೆ ಯೋಗಕ್ಷೇಮ ವಿಚಾರಿಸಲು ಕಾಲ್ ಮಾಡಿದೆ. “ಹಲೋ ಏನ್ರೀ ನಿಮ್ಮ ಕಡೆ ಭಾರಿ ಮಳೆ ನಾ?” ಅವರೆ ಮೊದಲು ವಿಚಾರಿಸಿದರು.

“ಹೌದು ನಾನು ಹುಟ್ಟಿದ ಮೇಲೆ ಇಂತಹ ಮಳೆ ಕಂಡಿರಲಿಲ್ಲ. ನೀವು ಹೇಗಿದೀರಿ” ನಾನು ಕೇಳಿದೆ. “ನನಗೇನು ಆರಾಮಾಗಿ ಇದೀನಿ ಮಗಳು ಬಂದಿದ್ದಾಳೆ”. ‘ಒಹೋ ಮೊಮ್ಮಕ್ಕಳ ಜತೆ ಮಜಾ,’ ಅಂದೆ ನಾನು.

ಈಗ ಮಳೆ ಕಾರಣ ಹೊರಗೆ ಅಂಗಳದಲ್ಲಿ ಗಿಡದ ಕೆಲಸ ಮಾಡುವಂತಿಲ್ಲ, ಮತ್ತೆ ಏನು ಚಟುವಟಿಕೆ ನಡೆಯುತ್ತಿದೆ ಅಂತ ಕೇಳಿದೆ. “ಒಬ್ಬರು ಪ್ರಕಾಶಕರು ನನ್ನ ಬಿಡಿ ಲೇಖನಗಳನ್ನು ಪ್ರಕಟಿಸುತ್ತೇವೆ ಅಂತ ಹೇಳಿದ್ದಾರೆ. ಅದರ ಪ್ರೂಫ್ ನೋಡುತ್ತಿದ್ದೇನೆ” ಅಂದರು.. “ಒಹೋ ಮೂರನೆಯ ಪುಸ್ತಕ” ಅಂದೆ ನಾನು.

ಹೂಗಿಡಗಳು ಹೇಗಿವೆ. ಎಲ್ಲ ಫಸ್ಟ್ ಕ್ಲಾಸ್ ಆಗಿವೆ ಮೊನ್ನೆ ಕಿತ್ತಳೆ ಬಣ್ಣದ ದೆಂದ್ರೋಬಿಯಂ ಆರ್ಕಿಡ್ ಅರಳಿತ್ತು. ನಿಮ್ಮ ನೆನಪಾಯ್ತು. ಈಗ ಹತ್ತು ಪಾಟ್ ಗಳಲ್ಲಿ ಡೋವ್. ಆರ್ಕಿಡ್ ಮೊಗ್ಗು ಬಿಟ್ಟಿದೆ.. ಮಾತಿನಲ್ಲಿ ಉತ್ಸಾಹ. ನಾನು ಅಡಿಗೆ ಆಯ್ತಾ? ಕೇಳಿದೆ, ಇಲ್ಲ ಇನ್ನೂ ಆಗ್ತಾ ಇದೆ. ಮಕ್ಕಳು ಮನೆಯಲ್ಲಿ ಇದಾರಲ್ಲ, ಚಿಕನ್ ಫ್ರೈ. ಮತ್ತು ಸಾರು, ಬೀನ್ಸ್ ಮತ್ತು ಕಾಳಿನಪಲ್ಯ. ಅಂದರು.

ನಾನು ‘ಒಹೋ ಒಳ್ಳೇ ಗಮ್ಮತ್ತು’ ಅಂದೆ.

ಒಬ್ಬರೇ ಇದ್ದಾಗಲೂ ಅಡಿಗೆ ಮಾಡಲು ಎಂದಿನ ಉತ್ಸಾಹವೇ ಇರುತ್ತದೆ. ಸಾಮಾನ್ಯವಾಗಿ ಅವರ ಮೆನುವಿನಲ್ಲಿ ಮೂರು ತರಕಾರಿ ಐಟಂಗಳಿರುತ್ತವೆ. ಒಂದು ಪಲ್ಯ ಚಟ್ನಿ, ಸಾರು ಅಥವಾ ಸಾಂಬಾರು. ಕೆಸುವಿನ ಸೊಪ್ಪನ್ನು ಗಂಟು ಕಟ್ಟಿ ಮಾಡುವ ಸಾಂಬಾರು, ಹೀರೆ ಸಿಪ್ಪೆಯ ಚಟ್ನಿ, ಕೆಸುವಿನ ದಂಟಿನ ಅಥವಾ ಸೊಪ್ಪಿನ ಪಲ್ಯಗಳು. ಪತ್ರೊಡೆ, ಪಕೋಡಗಳು ಹೀಗೆ. ಮಲೆನಾಡಿನ ವಿಶೇಷಗಳು. ಎಂಬತ್ನಾಲ್ಕರ ಈ ಪ್ರಾಯದಲ್ಲಿಯು ತಮ್ಮ ಅಡಿಗೆ ತಾವೇ ಮಾಡಿಕೊಳ್ಳಲು ಅವರಿಗೆ ಇಷ್ಟ ಮತ್ತು ಉತ್ಸಾಹ. ಮಳೆಗಾಲದಲ್ಲಿಯೂ ಮನೆಯ ಹಿಂಭಾಗದ ಜಗಲಿಯಲ್ಲಿ ಕುಳಿತು ಬಚ್ಚಲೊಲೆಯ ಬೆಂಕಿ ಉರಿಸಿ ನೀರು ಕಾಯಿಸುತ್ತಾರೆ. ತೋಟದಲ್ಲಿ ಅಷ್ಟೊಂದು ಕಟ್ಟಿಗೆ ಇರುತ್ತಲ್ಲ ಒಲೆ ಉರಿಸಿದರೆ ಹಂಡೆಯ ನೀರು ಇಡೀ ದಿನ ಬಿಸಿ ಇರುತ್ತಲ್ಲ ಅನ್ನುತ್ತಾರೆ. ಬಹುಶಃ ಒಲೆ ಉರಿಸಿ ನೀರು ಕಾಯಿಸುವ ಕೆಲಸ ಅವರಿಗೆ ಹಳೆಯ ಬೆಚ್ಚನೆ ನೆನಪು ತರುತ್ತಿರಬಹುದು. ಹಿಂಭಾಗದ ತೆರೆದ ಸಿಟೌಟ್ ನ ಒಂದು ಬದಿಗೆ ಬಚ್ಚಲ ಒಲೆ ಇದೆ. ಹೊರಗಡೆ ಕಾಣುವ ಹೂ, ಹಕ್ಕಿ ಹೊಳೆಯುವ ಕೆರೆ ನೀರನ್ನು ನೋಡುತ್ತಾ ಒಲೆ ಉರಿಸಿ ಚಳಿ ಕಾಯಿಸುತ್ತ ಹಳೆಯ ದಿನಗಳನ್ನು ಮೆಲಕು ಹಾಕಬಹುದು.

ಅವರ ಊರಿನ ಸಮೀಪ ಯಾವುದಾದರೂ ಕಾರ್ಯಕ್ರಮಕ್ಕೆ ಹೋದಾಗ ಅವರಿಗೆ ಬಿಡುವಿದ್ದರೆ ಹೋಗಿ ಮಾತಾಡಿಕೊಂಡು ಬರಬಹುದು ಅಂತ ಫೋನ್ ಮಾಡಿದ್ರೆ, ‘ ಬನ್ನಿ ಮಾರಾಯರೇ’ ಅಂತ ಹೇಳಿ, ನಾವು ಹೋಗುವುದರೊಳಗೆ ತಿಂಡಿ ಮಾಡಿ ಇಡುವುದು ಅವರ ರೀತಿ.

ಆಲೂ ಪಲ್ಯವನ್ನು ಬ್ರೆಡ್ ಸ್ಲೈಸ್ ಒಳಗೆ ಇಟ್ಟು ಎಣ್ಣೆಯಲ್ಲಿ ಕರಿದು ಮಾಡುವ ಬ್ರೆಡ್ ಬೋಂಡಾ ತುಂಬಾ ರುಚಿ ಅವರ ಕೈನಲ್ಲಿ. ಹಾಗೆ ಸರಳವಾಗಿ ಇಡೀ ಬೀನ್ಸ್ ಮಧ್ಯೆ ಸೀಳಿ ಮಾಡುವ ಫ್ರೆಂಚ್ ಫ್ರೈ ಕೂಡ. ಎಷ್ಟು ಬೇಕೋ ಅಷ್ಟೇ ಸಮಯ ಹುರಿದು, ಕರಿದು ಬೇಯಿಸಿ ಪದಾರ್ಥಗಳ ರುಚಿ ಹೆಚ್ಚಿಸುವುದೇ ಅಡಿಗೆ. ಅದು ಅವರಿಗೆ ಸಿದ್ಧಿಸಿದೆ. ತೋಟದ ಕೆಲಸ ನಿರ್ವಹಣೆ, ಬರವಣಿಗೆ, ಎಲ್ಲದರಲ್ಲೂ ಅವರದೇ ವೈಶಿಷ್ಟ್ಯ ಇದೆ.

ಮಳೆಗಾಲದಲ್ಲಿಯೂ ಮನೆಯ ಹಿಂಭಾಗದ ಜಗಲಿಯಲ್ಲಿ ಕುಳಿತು ಬಚ್ಚಲೊಲೆಯ ಬೆಂಕಿ ಉರಿಸಿ ನೀರು ಕಾಯಿಸುತ್ತಾರೆ.. ತೋಟದಲ್ಲಿ ಅಷ್ಟೊಂದು ಕಟ್ಟಿಗೆ ಇರುತ್ತಲ್ಲ ಒಲೆ ಉರಿಸಿದರೆ ಹಂಡೆಯ ನೀರು ಇಡೀ ದಿನ ಬಿಸಿ ಇರುತ್ತಲ್ಲ ಅನ್ನುತ್ತಾರೆ.. ಬಹುಶಃ ಒಲೆ ಉರಿಸಿ ನೀರು ಕಾಯಿಸುವ ಕೆಲಸ ಅವರಿಗೆ ಹಳೆಯ ಬೆಚ್ಚನೆ ನೆನಪು ತರುತ್ತಿರಬಹುದು.

ತುಂಬಾ ಆತ್ಮವಿಶ್ವಾಸದ ನಡೆ ನೇರ ನಿಷ್ಠುರ ನುಡಿಯ ಅವರು ಎಂದೂ ಬೇರೆಯವರ ಕುರಿತು ಟೀಕೆ ಟಿಪ್ಪಣಿ ಮಾಡುವುದಿಲ್ಲ. ಯಾರಾದರೂ ಮನಸಿಗೆ ನೋವಾಗುವಂತೆ ನಡೆದುಕೊಂಡಿದ್ದು ಹೇಳಿದರೆ “ಬಿಟ್ಟಹಾಕ್ರಿ ಬುದ್ಧಿ ಇಲ್ಲದವರ ಮಾತಿಗೆ ಬೆಲೆ ಕೊಡಬಾರದು. ನಮ್ಮ ಜೀವನ ನಮ್ಮದು” ಅನ್ನುವರು. ಪ್ರತೀ ವಿಷಯದ ಕುರಿತು ಅವರಿಗೆ ಖಚಿತ ಅಭಿಪ್ರಾಯವಿದೆ. ಸಮಕಾಲೀನ ಸಾಮಾಜಿಕ ರಾಜಕೀಯ ಆಗುಹೋಗಗಳಿಗೆ ಪ್ರತಿಕ್ರಿಯಿಸುವವರು. ಪುಸ್ತಕ ಬಿಡುಗಡೆ, ಸಾಹಿತ್ಯ ಕಾರ್ಯಕ್ರಮಗಳಿಗೆ ಅಹ್ವಾನಿಸಿದರೆ ಹೋಗುತ್ತಿದ್ದರು. ಆರು ದಶಕಗಳ ಹಿಂದೆ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದಿರುವುದು ಇವತ್ತಿಗೂ ತತ್ವಶಾಸ್ತ್ರದ ಓದಿನಲ್ಲಿ ಆಸಕ್ತಿ ಇದೆ. ಗಂಭೀರ ಸಾಹಿತ್ಯದ ಓದು ಇಷ್ಟ.

ಸಂಗೀತದಲ್ಲಿ ಆಸಕ್ತಿ ಇದ್ದುದರಿಂದ ಸಂಗೀತ ಕೇಳುವುದು, ಚಂದನ ವಾಹಿನಿಯಲ್ಲಿ ಕೆಲವು ಕಾರ್ಯಕ್ರಮ ನೋಡುವುದು, ಇಷ್ಟವಾದ ಇಂಗ್ಲಿಷ್ ಮತ್ತು ಕನ್ನಡ ಪುಸ್ತಕ ಓದುವುದು, ಮನೆ ಕೆಲಸ, ಹೂಗಿಡಗಳ ಕೆಲಸ, ಕೋವಿಡ್‌ ಸಮಯದಲ್ಲಿಯೂ ಬರುವ ವಿಸಿಟರ್ಸ್ ದೂರದಿಂದಲೇ ಮಾತಾಡಿಸಿ ಕಳಿಸುವುದು. ಹೀಗೆ ಈ ಕೆಲಸಗಳ ಮಧ್ಯೆ  ‘ಯಾರನ್ನು ಮಾತಾಡಿಸಲು ಸಮಯವೇ ಇಲ್ಲ ಕಂಡ್ರಿ,  ತೋಟದ ಕೆಲಸ, ಆಳುಗಳಿಗೆ ಬಟವಾಡೆ ಲೆಕ್ಕ ಬರೆಯುವುದು.. ಪುರುಸೊತ್ತೇ ಇಲ್ಲ ಯಾರಾದರೂ ಬಂದರೆ ಕೆಲಸ ಹಾಳು ‘ ಎಂದು ಹೇಳುವುದಿತ್ತು.  ಎಂಬತ್ತನಾಲ್ಕನೇ ವಯಸ್ಸಿನಲ್ಲಿಯು ತಮ್ಮನ್ನು ಬ್ಯುಸಿ ಆಗಿ ದೈನಿಕಗಳಲ್ಲಿ ತೊಡಗಿಸಿಕೊಂಡ ಅವರ ಕುರಿತು ನನಗೆ ಮೆಚ್ಚುಗೆ.

ಸಣ್ಣ ಪುಟ್ಟ ಆರೋಗ್ಯದ ತೊಂದರೆಗಳಿಗೆ ತಾವೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದು ಬರುತ್ತಿದ್ದರು. ಯಾರ ಸಹಾಯವನ್ನು ನಿರೀಕ್ಷಿಸದ ಅವರ ಸ್ವಾವಲಂಬಿ ಮನೋಭಾವ ನನಗೆ ಇಷ್ಟ. ಯಾವತ್ತೂ ಯಾರನ್ನೂ ನಿಂದಿಸದೆ, ಆಕ್ಷೇಪಿಸದೆ ತಮ್ಮಷ್ಟಕ್ಕೆ ತಾವು ಲವಲವಿಕೆಯ ಬದುಕು ರೂಪಿಸಿಕೊಂಡಿರುವವರು. ಇವರ ಜೊತೆಗೆ ಮಾತಾಡಿದಾಗ ಮನಸ್ಸಿಗೆ ನೆಮ್ಮದಿ ಸಿಗುವುದು ಎಂದು ಅನೇಕ ಬಾರಿ ಅನಿಸಿದ್ದಿದೆ.

ರಾಜೇಶ್ವರಿಯವರನ್ನು ಮೊದಲು ನೋಡಿದ್ದು ನಾನು ಮೈಸೂರಿನಲ್ಲಿ ಎಂ. ಎ ಓದುತ್ತಿದ್ದಾಗ. ತೇಜಸ್ವಿಯವರ ಸೋದರ ಸಂಬಂಧಿ ಅನಲ ಆಗ ಕುವೆಂಪು ಮನೆಯಿಂದ ಗಂಗೋತ್ರಿಗೆ ಬರುತ್ತಿದ್ದಳು. ನನ್ನ ಸಹಪಾಠಿ, ಅವಳ ತಂದೆ ಕರ್ನಾಟಕ ಸರ್ಕಾರದ ಕಾನೂನು ಕಾರ್ಯದರ್ಶಿಯಾಗಿದ್ದರು. ಅವರು ತೀರ್ಥಹಳ್ಳಿಯ, ನಂಬಲದವರು. ಅನಲ ನನ್ನ ಗೆಳತಿಯಾದುದರಿಂದ ಆಗಾಗ್ಗೆ ಅವರ ಮನೆಗೆ ಹೋಗುತ್ತಿದ್ದೆ. ಒಮ್ಮೆ ನಾವಿಬ್ಬರೂ ಸಿಟಿಗೆ ಹೊರಟಾಗ ಅವಳ ದೊಡ್ಡಮ್ಮ ಹೇಮಾವತಿಯವರು ‘ಕೆ ಆರ್ ಸರ್ಕಲ್ ನಲ್ಲಿ ಶಂಕರ್ ಟೈಲರ್ಸ್‌ ಹತ್ತಿರ, ರಾಜೇಶ್ವರಿ ಬ್ಲೌಸ್ ಹೊಲಿಯಲು ಕೊಟ್ಟಿದ್ದಾಳೆ. ತನ್ನಿ ‘ ಎಂದು ಒಂದು ವೈರ್ ಬುಟ್ಟಿ ತಂದುಕೊಟ್ಟರು. ಅನಲ ಅದನ್ನು ನೋಡಿ ನಗತೊಡಗಿದಳು. ಪಾಪ ಅವರು, ತಬ್ಬಿಬ್ಬಾಗಿ ‘ಯಾಕೆ ನಗುತ್ತಿದ್ದೀಯ’ ಅಂದರು. ಅಲ್ಲಿಯೇ ಇದ್ದ ತಾರಿಣಿ ಬ್ಯಾಗ್ ಅವರ ಸ್ಟೈಲ್ ಗೆ ಕಡಿಮೆ ಅಂತ ಅಂದರು.  ನಾನು ಹಾಸ್ಟೆಲ್ ಹುಡುಗಿಯರು ಶಂಕರ್ ಟೈಲರ್ ಹತ್ತಿರ ತಮ್ಮ ಡ್ರೆಸ್ ಹೊಲಿಸುವುದನ್ನು ನೋಡಿದ್ದೆ. ಬಹಳ ಚೆನ್ನಾಗಿ ಹೊಲಿಯುತ್ತಾರೆ ಎಂದು ನಾನೂ ಹೊಲೆಸಿದೆ. ಮೂಡಿಗೆರೆಯಲ್ಲಿದ್ದ ರಾಜೇಶ್ವರಿ ಮೈಸೂರಿನಲ್ಲಿ ಬ್ಲೌಸ್ ಹೋಲಿಸುವುದು ಕೇಳಿ ಬಹಳ ಸ್ಟೈಲ್ ಅಂದುಕೊಂಡೆ.

ಆಮೇಲೆ ಅವರನ್ನು ನೋಡಿದ್ದು ಹದಿನೈದು ವರ್ಷಗಳ ನಂತರ ಕುಪ್ಪಳಿಯಲ್ಲಿ. ‘ಕುವೆಂಪು ತೊಂಬತ್ತು’ ಕಾರ್ಯಕ್ರಮದಲ್ಲಿ. ಆಮೇಲೆ ಅವರು ಕುಪ್ಪಳಿಯ ಸಾಹಿತ್ಯ ಅಧ್ಯಯನ ಶಿಬಿರಗಳಿಗೆ ಬೇರೆ ಕಾರ್ಯಕ್ರಮಗಳಿಗೆ ತೇಜಸ್ವಿ ಜತೆಗೆ ಬರುತ್ತಿದ್ದರು. ತೀರ್ಥಹಳ್ಳಿಯಲ್ಲಿ ನಡೆದ ಮಹಿಳಾ ವೇದಿಕೆ ಕಾರ್ಯಕ್ರಮಕ್ಕೆ ತೇಜಸ್ವಿ ಜತೆ ಬಂದರು.. ನಮ್ಮ ಕಾಲೇಜ್ ಕಾರ್ಯಕ್ರಮಕ್ಕೂ ಬಂದರು. ನಮ್ಮ ಮನೆಗೂ ಎರಡು ಸಲ ಬಂದರು. ಹಾಗೆ ಚಿಕ್ಕ ಮಗಳೂರಿನ ಸಾಹಿತ್ಯದ ಕಾರ್ಯ ಕ್ರಮಗಳಿಗೆ ಹೋದಾಗ ನಾವೂ ಅವರ ಮನೆಗೆ ಹೋದೆವು. ತೇಜಸ್ವಿ ಇದ್ದಾಗ ಎರಡು ಸಲ ಹೋಗಿದ್ದೆವು. ಒಮ್ಮೆ ನನ್ನ ಕಸಿನ್ ಒಬ್ಬಳ ಮದುವೆ ಆದಾಗ ಅವರ ಮನೆಯಿಂದ ಹೋಗಿದ್ದೆವು.  ತೇಜಸ್ವಿ ತಮ್ಮನ್ನು ಕಾಫೀ ಪ್ಲಾಂಟರ ಅಂತ ಗುರುತಿಸಿಕೊಳ್ಳುತ್ತಿರಲಿಲ್ಲ ಎಂದು  ಆಗಲೇ ನನಗೆ ತಿಳಿದಿದ್ದು.

ಮತ್ತೊಮ್ಮೆ ಕುವೆಂಪು ಶತಮಾನೋತ್ಸವಕ್ಕೆ ಭಾಷಣ ಮಾಡಲು ಚಿಕ್ಕ ಮಗಳೂರಿಗೆ ಹೋದಾಗ ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಾದ ಮೋಹಿನಿ ಸಿದ್ದೆಗೌಡರು ಸಂಜೆಯ ಕಾರ್ಯಕ್ರಮ ಮುಗಿದ ಬಳಿಕ ರಾತ್ರಿ ಉಳಿಯಲು ಅವರ ಮುದ್ರೆ ಮನೆ ತೋಟಕ್ಕೆ ಮೂಡಿಗೆರೆಗೆ ಕರೆದುಕೊಂಡು ಹೋದರು. ಮಾತಿನ ಮಧ್ಯೆ, ‘ಅಲ್ಲಿದ್ದ ಭಾಸೆ ಗೌಡ ಅನ್ನುವ ಪ್ಲಾಂಟರ್ ಆನೆ ಸಾಕಿದ್ದರು. ಕೃಷ್ಣೆ ಗೌಡರ ಆನೆ ಕಥೆಗೆ ಅದೇ  ಸ್ಫೂರ್ತಿ’  ಅಂದರು. ತೇಜಸ್ವಿ ಮನೆ ಇಲ್ಲೇ ಹತ್ತಿರ ಎಂದು ಬೆಳಿಗ್ಗೆ ತಿಂಡಿಯ ನಂತರ ತೇಜಸ್ವಿಯವರ ಮನೆಗೆ ಹೋದೆವು.  ಮೋಹಿನಿ ಹೀಗೆ ಬರುತ್ತಿದ್ದೇವೆ ಎಂದು ಫೋನ್ ಮಾಡಿದ್ದರಿಂದ ರಾಜೇಶ್ವರಿ ತೇಜಸ್ವಿ ಮೂಲಕ ಮೂಡಿಗೆರೆಯಿಂದ ಕೇಕ್ ಮತ್ತು ಸ್ವೀಟ್ಸ್ ತರಿಸಿದ್ದರು. ಅವರು ಮೂವರು ಬಹುಕಾಲದ ಪರಿಚಿತರು. ಆತ್ಮೀಯವಾಗಿ ಮಾತನಾಡುತ್ತಾ ಕುಳಿತರು. ಮೋಹಿನಿಯವರು ಬಿ ಜೇಪಿ ಪಕ್ಷದ ರಾಜಕಾರಣಿ.. ತೇಜಸ್ವಿ ಅವರ ರಾಜಕಾರಣ ಒಪ್ಪದಿದ್ದರೂ ಸ್ನೇಹಕೆ ಅದೇನೂ ಅಡ್ಡಿಯಾಗಿರಲಿಲ್ಲ. ಇವತ್ತು ಎಡ, ಬಲ ಎಂದು ಕಿತ್ತಾಡುವುದನ್ನು ನೋಡಿದರೆ ಅದೆಲ್ಲ ನೆನಪಾಗುತ್ತದೆ.

(ಡಾ. ಎಲ್.ಸಿ. ಸುಮಿತ್ರ ಜೊತೆ ರಾಜೇಶ್ವರಿ ಮತ್ತು ತೇಜಸ್ವಿ)

ಮತ್ತೆ ಹೋದಾಗ ತೇಜಸ್ವಿ ಇಲ್ಲದ ನಿರುತ್ತರ ಮೌನ ತಾಳಿತ್ತು. ಆದರೆ ರಾಜೇಶ್ವರಿಯವರ ಜೀವಂತಿಕೆ ಅವರಿಗೆ ಸುಮ್ಮನಿರಲು ಬಿಡಲಿಲ್ಲ. ಕೆಂಡಸಂಪಿಗೆ ವೆಬ್ ಸೈಟ್ ನಲ್ಲಿ ತೇಜಸ್ವಿ ನೆನಪುಗಳನ್ನು ಬರೆದರು. ಹಸ್ತಪ್ರತಿಯಲ್ಲಿ ಓದಲು ಅವಕಾಶ ಕೊಟ್ಟರು. ಆಮೇಲೆ ನಿಮ್ಮ ಬಾಲ್ಯದ ಕುರಿತು ನೀವು ಏನೂ ಬರೆದಿಲ್ಲ ಅಂದಾಗ “ನಮ್ಮ ಮನೆಗೂ ಬಂದರು ಗಾಂಧೀಜಿ” ಬರೆದರು. ಮುನ್ನುಡಿ ಬರೆದುಕೊಡಿ ಅಂದರು. ಹಿರಿಯರು ಯಾರಾದರೂ ಬರೆಯಲಿ ಅಂದೆ ನಾನು. ‘ಇಲ್ಲ ನೀವೇ ಬರೆಯಿರಿ’ ಅಂತ ಬರೆಸಿಕೊಂಡರು.. ಎರಡೂ ಪುಸ್ತಕಗಳು ಮರುಮುದ್ರಣ ಆದವು. ಬಹುಮಾನ ಬಂದವು. ಈಗ ಮೂರನೇ ಪುಸ್ತಕ ಹೊರ ಬರುತ್ತಿದೆ.

ಒಮ್ಮೆ ಕೊಲ್ಲಾಪುರದಿಂದ ಗೆಳತಿ ನಾಗರತ್ನ ಬಂದಾಗ ಚಿಕ್ಕಮಗಳೂರಿಗೆ ಹೋಗುವ ದಾರಿಯಲ್ಲಿ ಅವರ ಮನೆಗೆ ಹೋಗಿದ್ದೆವು. ಕಲ್ಕತ್ತದಿಂದ ಬಂದ ಅನಲ ಚಿಕ್ಕಮಗಳೂರಿನ ಶಾರದಾ ಮಠದಲ್ಲಿದ್ದಾಗ ನೋಡಲು ಹೋಗಿದ್ದೆ. ರಾಜೇಶ್ವರಿ ಅಕ್ಕನ ಮನೆ ಎಷ್ಟು ದೂರ ಅಂದಾಗ ಅರ್ಧ ಗಂಟೆ ಅಂದೆ. ಹಾಗಾದರೆ ಅವರನ್ನು ನೋಡಬಹುದಿತ್ತು ಅಂದಾಗ ಕರೆದುಕೊಂಡು ಹೋದೆ. ಒಬ್ಬರು ಸನ್ಯಾಸಿ, ಇನ್ನೊಬ್ಬರು ತೀವ್ರ ಜೀವನಾಸಕ್ತಿ ಉಳ್ಳವರು. ಇಬ್ಬರ ಮಾತುಗಳನ್ನು ಕೇಳಿಸಿಕೊಳ್ಳುವುದು ಆಸಕ್ತಿದಾಯಕವಾಗಿತ್ತು.

ಅವರ ಜೀವನಾಸಕ್ತಿ ನೋಡಿದವರು

ಯಾರೂ ಅವರಿಗೆ 84 ವರ್ಷ ಎಂದು ಹೇಳುವಂತಿರಲಿಲ್ಲ. ಒಂದು ಹಲ್ಲು ಸಹ ಬಿದ್ದಿರಲಿಲ್ಲ. ನಮ್ಮ ತಾಯಿ ನಮ್ಮನ್ನೆಲ್ಲಾ ಗಟ್ಟಿಯಾಗಿ ರೂಪಿಸಿ ಭೂಮಿಗೆ ತಂದಿದ್ದಾರೆ ಅನ್ನುತ್ತಿದ್ದರು. ವಯಸ್ಸಿನಲ್ಲಿ ರಾಜೇಶ್ವರಿ ತೇಜಸ್ವಿಯವರಿಗಿಂತ ಒಂದು ವರ್ಷ ಹಿರಿಯರು. ಮೈಸೂರಿನಲ್ಲಿ ಓದುವಾಗ ತೇಜಸ್ವಿಯವರ ಪರಿಚಯ, ಪ್ರೀತಿ ಆಗಿ ಮದುವೆ ಆಗುವುದಾಗಿ ನಿರ್ಧರಿಸಿದಾಗ ತೇಜಸ್ವಿ ಇನ್ನೂ ಯಾವುದೇ ಉದ್ಯೋಗದಲ್ಲಿ ನೆಲೆ ನಿಂತಿರಲಿಲ್ಲ. ರಾಜೇಶ್ವರಿಯವರ ಅಣ್ಣ ಮೂಡಿಗೆರೆ ಸಮೀಪ ಭೂತನ ಕಾಡಿನಲ್ಲಿ ಕಾಫಿ ತೋಟ ಮಾಡುತ್ತಿದ್ದರು. ರಾಜೇಶ್ವರಿಯವರು ತಾಯಿ ಮತ್ತು ಅಣ್ಣನ ಜತೆ ಭೂತನ ಕಾಡಿನ ಮನೆಯಲ್ಲಿದ್ದರು. ತೇಜಸ್ವಿ ಸಮೀಪದ ಜನ್ನಾಪುರದ ಬಳಿ ಜಮೀನು ಕೊಂಡು ಮನೆ ಕಟ್ಟಿ ರಾಜೇಶ್ವರಿಯವರನ್ನು ಮದುವೆ ಆಗುವಷ್ಟರಲ್ಲಿ ದೀರ್ಘ ಐದು ವರ್ಷಗಳು ಕಳೆದಿದ್ದವು. ‘ಅದೊಂದು ತಪಸ್ಸಿನ ತರಹ ಇತ್ತು’ ಎಂದು ರಾಜೇಶ್ವರಿ  ಹೇಳಿದ್ದರು.

ತೇಜಸ್ವಿಯವರ ಜತೆಗಿನ ದಾಂಪತ್ಯ ಕುರಿತು ‘ನನ್ನ ತೇಜಸ್ವಿ’ ಎಂಬ ಪುಸ್ತಕ ಬರೆದಿದ್ದಾರೆ. ತಮ್ಮ ಬಾಲ್ಯವನ್ನು ಕುರಿತು, “ನಮ್ಮ ಮನೆಗೂ ಗಾಂಧೀಜಿ ಬಂದರು”. ಎಂಬ ಪುಸ್ತಕ ಬರೆದಿದ್ದಾರೆ. ಮಕ್ಕಳು ಮೊಮ್ಮಕ್ಕಳ ಜತೆಗಿನ 84 ವರ್ಷಗಳ ತುಂಬು ಜೀವನದ ಬಳಿಕ ರಾಜೇಶ್ವರಿ ಬದುಕಿಗೆ ವಿದಾಯ ಹೇಳಿದ್ದಾರೆ.