ಹಾಥಾರ್ನ್ ನ ವಿವರಗಳನ್ನು ಓದಿದ ನಂತರ ನಾನು ಕಣ್ಣೋಡಿಸಿದ ನಮೂದು ಸರ್ ವಾಲ್ಟರ್ ಸ್ಕಾಟ್ ಗೆ ಸಂಬಂಧಿಸಿದ್ದು. ಈ ಸುಪ್ರಸಿದ್ಧ ಐತಿಹಾಸಿಕ ಕಾದಂಬರಿಕಾರನ “ಐವಾನ್ ಹೊ” ಎಂ.ಎ. ಯ ಓದಿನ ಪಟ್ಟಿಯಲ್ಲಿ ಇದ್ದರೂ ನಾನದನ್ನು ಓದಿರಲಿಲ್ಲ. ನಾವು ವಿದ್ಯಾರ್ಥಿಗಳು ಪಾಠಪಟ್ಟಿಯಲ್ಲಿ ಇದ್ದುದೆಲ್ಲವನ್ನೂ ಓದುತ್ತಿರಲಿಲ್ಲ, ಅದಕ್ಕೆ ಸಮಯವೂ ಇರುತ್ತಿರಲಿಲ್ಲ. ಪ್ರಶ್ನೆ ಪತ್ರಿಕೆಯಲ್ಲಿ ಆಯ್ಕೆಗೆ ಅವಕಾಶವಿದ್ದುದರಿಂದ ನಾವು ಈ ರಿಸ್ಕನ್ನು ತೆಗೆದುಕೊಳ್ಳುತ್ತಿದ್ದೆವು. ಅವನ ಕೃತಿಗಳನ್ನು ಮುಂದೆ ಎಂದಾದರೂ ಓದುವೆನೆಂಬ ನನ್ನ ಸಂಕಲ್ಪ ಇದುವರೆಗೆ ಕೈಗೂಡಿಲ್ಲ. ಇದಕ್ಕಾಗಿ ನನಗೆ ಹುಳ್ಳೆನಿಸುತ್ತದೆ. ಆ ಅಳುಕಿನಂದಲೋ ಏನೋ ನನ್ನೀ ಆಕರ ಗ್ರಂಥದಲ್ಲಿ ಸ್ಕಾಟ್ ನ ವಿವರಗಳ ಮೇಲೆ ಮತ್ತೆ ಮತ್ತೆ ಕಣ್ಣು ಹಾಯಿಸುವುದಿದೆ.
ಕವಿ ಕೆ.ವಿ. ತಿರುಮಲೇಶ್ ಲೇಖನ

 

ನನ್ನ ಪುಸ್ತಕ ಸಂಗ್ರಹದಲ್ಲಿ Everyman’s Dictionary of Literary Biography: English and American ಎಂಬ ಪುಸ್ತಕವೊಂದಿದೆ. 1971ರ E.L.B.S. ಆವೃತ್ತಿ ಇದು. ಈ ಪುಸ್ತಕವನ್ನು ನಾನು ಯಾವಾಗ ಕೊಂಡುಕೊಂಡೆನೋ ನೆನಪಿಲ್ಲ, 71ರ ಬೆನ್ನಲ್ಲಿ ಇರಬೇಕು, ತೀರ ಈಚೆಗಂತೂ ಅಲ್ಲವೇ ಅಲ್ಲ. ನೋಡಿದರೇ ಗೊತ್ತಾಗುತ್ತದೆ, ನನ್ನಂತೆ ಪುಸ್ತಕವೂ ಹಳತಾಗಿದೆ! 1980ರ ಸುಮಾರಿಗೆ ಇಂಟರ್ನೆಟ್ ಸುರುವಾಯಿತು ತಾನೆ? ನಂತರದ ದಶಕಗಳಲ್ಲಿ ಅದು ಮಾಹಿತಿಗಳ ಆಗರವಾಯಿತು, ಸಾಗರವಾಯಿತು, ಹಾಗೂ ಅದರ ಈ ಸೀಮಾತೀತ ಶಕ್ತಿ ದಿನದಿಂದ ದಿನಕ್ಕೆ ವರ್ಧಿಸುತ್ತಲೇ ಇದೆ.

ಗೂಗಲ್ ಮಾಡಿದರೆ ಸಾಕು, ಎಲ್ಲವೂ ಸಿಗುತ್ತವೆ; ಎಲ್ಲವೂ ಎನ್ನುವುದು ಸ್ವಲ್ಪ ಉತ್ಪ್ರೇಕ್ಷೆಯಿದ್ದೀತು. ಆದರೆ ಮಿಕ್ಕವೂ ಸಿಗುತ್ತವೆ ಎನ್ನಿ. ಆದ್ದರಿಂದಲೇ ಮಾಹಿತಿ ನಮ್ಮ ಕೈಬೆರಳುಗಳ ತುದಿಯಲ್ಲಿದೆ ಎನ್ನುತ್ತೇವೆ. ಮತ್ತು ಇಂಟರ್ನೆಟ್ನಲ್ಲಿ ತೇಲಾಡುವುದು (‘ಸರ್ಫ್’ ಮಾಡುವುದು) ಪುಸ್ತಕದ ಪುಟ ತಿರುವುದಕ್ಕಿಂತ ಸುಲಭವೂ ಹೌದು. ಅಥವಾ ನಾವೀಗ ಕೀಬೋರ್ಡಿಗೆ ಹೆಚ್ಚು ಒಗ್ಗಿಹೋಗಿದ್ದೇವೆ. ಆದ್ದರಿಂದ ಪುಸ್ತಕರೂಪದ ಮಾಹಿತಿ ಕೋಶಗಳ ಉಪಯೋಗ ಕಡಿಮೆಯಾಗಿದೆ. ಬ್ರಿಟಾನಿಕಾ ವಿಶ್ವಕೋಶ ಕೂಡ ಹೊಸ ಮುದ್ರಣಾವೃತ್ತಿಯನ್ನು ಹೊರ ತರುತ್ತಿಲ್ಲ. ಇಂಥ ಸ್ಥಿತಿಯಲ್ಲಿ Everyman’s Dictionary of Literary Biographyಯನ್ನು ಇಟ್ಟುಕೊಂಡು ನಾನೇನು ಮಾಡುತ್ತಿದ್ದೇನೆ ಎಂದು ಕೇಳಬಹುದು. ಉತ್ತರ: ನಾವಿನ್ನೂ ಪುಸ್ತಕಜಗತ್ತಿಗೆ ವಿದಾಯ ಹೇಳಿಲ್ಲ. ಇದು ಒಂದು ಕಾರಣವಾದರೆ, ಇಂಥ ಪುಸ್ತಕಗಳನ್ನು ತಿರುವಿಹಾಕುವುದರಲ್ಲಿ ನಾನಿನ್ನೂ ಅನುಭವಿಸುವ ರೊಮಾನ್ಸ್ (ರಮ್ಯತಾ ಭಾವ) ಇನ್ನೊಂದು.

ಏನು ರೊಮಾನ್ಸ್ ಎಂದು ಕೇಳಿದರೆ ಅದನ್ನು ಅನುಭವಿಸಿಯೇ ತಿಳಿಯಬೇಕು. ನನ್ನದೇ ಅನುಭವದ ಮೇಲೆ ಹೇಳುವುದಾದರೆ ಸ್ವಲ್ಪ ಹಿಂದಕ್ಕೆ ಹೋಗಬೇಕಾಗುತ್ತದೆ. Everyman’s Dictionary of Literary Biography: ಎಂಬ ಈ ಸಂಪುಟವನ್ನು ತೆಗೆದುಕೊಂಡರೆ, ಎಷ್ಟೋ ವರ್ಷಗಳ ಮೊದಲು ಕಸಿನ್ ಎಂಬವನಿಂದ ಸಣ್ಣ ರೂಪದಲ್ಲಿ ಪ್ರಾರಂಭವಾದ ಈ ಮಾಹಿತಿಕೋಶ ಬ್ರೌನಿಂಗ್ ಎಂಬವನಿಂದ ಪರಿಷ್ಕೃತವಾಗುತ್ತ ಬಂದು ಸದ್ಯದ ರೂಪ ಮತ್ತು ಗಾತ್ರಗಳನ್ನು ಪಡೆದಿದೆ. ನನ್ನ ಬಳಿಯಿರುವ 71ರ ಆವೃತ್ತಿಯ 812 ಸಣ್ಣಕ್ಷರಗಳ ಪುಟಗಳಲ್ಲಿ ಸುಮಾರು 2300ಕ್ಕೂ ಹೆಚ್ಚು ನಮೂದು (ಎಂಟ್ರಿ)ಗಳು ಅಡಕವಾಗಿವೆ. ಇದೊಂದು ಕೋಶವಾದ್ದರಿಂದ ಇಲ್ಲಿ ಬಳಕೆಯಾಗಿರುವುದು ಅಕಾರಾದಿ ವಿಧಾನ. ಕಾಲಾನುಕ್ರಮವಲ್ಲ. ಆದ್ದರಿಂದ ಇಲ್ಲಿ ಮಿಲ್ಟನ್ ಶೇಕ್ಸ್ ಪಿಯರಿಗಿಂತ ಮೊದಲು ಬರುತ್ತಾನೆ, ಹಾಗೂ ಆಡೆನ್ ಎಲಿಯಟ್ ಗಿಂತ ಮುನ್ನ. ಈಚೆಗೆ ಹುಟ್ಟಿದ ಲೇಖಕನೊಬ್ಬನ ಹೆಸರು ಎಲಿಜಬೆತನ್ ಕವಿಯೊಬ್ಬನ ಹೆಸರಿನ ಮೊದಲು ಬಂದರೆ ಆಶ್ಚರ್ಯವಿಲ್ಲ. ಕಾಲಾನುಕ್ರಮವನ್ನುನಿಘಂಟಿಗೆ ಒಳಪಡಿಸುವುದು ಕಷ್ಟ. ಆದರೆ ಪ್ರತಿಯೊಂದು ನಮೂದೂ ಆಯಾ ಲೇಖಕ ಅಥವಾ ಲೇಖಕಿಯ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಆಂತರಿಕ ಕ್ರಮದಲ್ಲಿ ಒಳಗೊಂಡಿರುತ್ತದೆ. ಇಂಟರ್ನೆಟ್ ನಂತೆ, ಆದರೆ ಮಿತವಾಗಿ, ಇಲ್ಲಿಯೂ ಅಡಕವಾದ ಇತರ ಪ್ರಸ್ತುತ ನಮೂದುಗಳತ್ತ ಕೈತೋರಿಸುವ ಸೂಚನೆಗಳನ್ನು (q.v.)ನೀಡಲಾಗಿದೆ. ಒಟ್ಟಿನಲ್ಲಿ ಇದೊಂದು ಪ್ರಸಿದ್ಧ-ಅಪ್ರಸಿದ್ಧ, ಉನ್ನತ-ನಿಮ್ನ, ಅಭಿಜಾತ-ಜನಪ್ರಿಯ ಭೇದಗಳಿಲ್ಲದೆ ಥಟ್ಟಂತ ನೋಡಬಹುದಾದ ಪ್ರಾಥಮಿಕ ಹಂತದ ಸಂಕ್ಷಿಪ್ತ ರೆಫರೆನ್ಸ್ ಪುಸ್ತಕ.

ಇಂಥ ಪುಸ್ತಕಗಳನ್ನು ಇಡಿಯಾಗಿ ಯಾರೂ ಓದುವುದಿಲ್ಲ; ಅಗತ್ಯ ಬಿದ್ದಾಗ ಮಾತ್ರವೇ ಓದುತ್ತಾರೆ. ಉದಾಹರಣೆಗೆ, ವರ್ಡ್ಸ್ ವರ್ತ್ ನ (ಮತ್ತು ಕಾಲರಿಜ್ ನ) ಪ್ರಸಿದ್ಧ “ಲಿರಿಕಲ್ ಬ್ಯಾಲಡ್ಸ್” ಬಗ್ಗೆ ಕೇಳಿರುತ್ತೇವೆ, ಅದು ಪ್ರಕಟವಾದ ಇಸವಿ ಕುರಿತೂ ಕೇಳಿರುತ್ತೇವೆ, ಅದರೆ ಇಸವಿ ನೆನಪಿರುವುದಿಲ್ಲ. ಇಂಥ ಕಡೆ ಈ ಸಾಹಿತಿ ಮಾಹಿತಿ ಕೋಶ ಸಹಾಯಕ್ಕೆ ಬರುತ್ತದೆ: ವರ್ಡ್ಸ್ ವರ್ತ್ ಕುರಿತಾದ ನಮೂದನ್ನು ನೋಡಿದರೆ ಅಲ್ಲಿ “ಲಿರಿಕಲ್ ಬ್ಯಾಲಡ್ಸ್” ಮತ್ತು ಅದು ಪ್ರಕಟವಾದ ಇಸವಿಯ ಉಲ್ಲೇಖಗಳು ಸಿಗುತ್ತವೆ.

ವರ್ಡ್ಸ್ ವರ್ತ್ ಮತ್ತು ಕಾಲರಿಜ್ ಒಟ್ಟಿಗೇ ಯೋಜಿಸಿದ ಕವನ ಸಂಕಲನ ಇದು. (ಪ್ರಥಮಾವೃತ್ತಿ 1798; ದ್ವಿತೀಯಾವೃತ್ತಿ, ಕಾವ್ಯತತ್ವಗಳ ಕುರಿತಾದ ವರ್ಡ್ಸ್ ವರ್ತ್ ನ ಕ್ರಾಂತಿಕಾರೀ ಪ್ರಸ್ತಾವನೆಯೊಂದಿಗೆ, 1800.) ಇದರ ಜೊತೆ ನಾವು ಹೆಚ್ಚಾಗಿ ಕವಿಗೆ ಸಂಬಂಧಿಸಿದ ಇತರ ಸಂಗತಿಗಳ ಮೇಲೂ ಕಣ್ಣು ಹಾಯಿಸದೆ ಇರುವುದಿಲ್ಲ; ಇದು ನಮಗೊಂದು ಅವಲೋಕನವೋ ಪುನರವಲೋಕನವೋ ಆಗುತ್ತದೆ. ಓದುಗನ ಪುಣ್ಯ! ಈ ಮಾಹಿತಿಗಳನ್ನೆಲ್ಲ ತಪ್ಪಿಲ್ಲದಂತೆ ಕರಾರುವಾಕ್ಕಾಗಿ, ಆವೃತ್ತಿಯಿಂದ ಆವೃತ್ತಿಗೆ ತಿದ್ದುತ್ತ, ಪರಿಷ್ಕರಿಸುತ್ತ, ಅತ್ಯಂತ ಶ್ರದ್ಧೆಯಿಂದ ನಮಗೆ ಒದಗಿಸುವ ಸಂಪಾದಕರ ಸಾಹಿತ್ಯಪ್ರೀತಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ಇದರ ಮುಂದೆ ಪುಸ್ತಕಕ್ಕೆ ನಾವು ತೆತ್ತ ಬೆಲೆ ಏನೂ ಅಲ್ಲ.

(ವರ್ಡ್ಸ್ ವರ್ತ್)

ಯಾವುದೇ ಆಕರ ಗ್ರಂಥಗಳನ್ನೂ ಸುಮ್ಮನೆ ‘ಓದುವ ಸುಖಕ್ಕಾಗಿ’ ಓದುವವರು ಅಪರೂಪವೇ ಸರಿ. ಆದರೂ ನಾನು ದಿನವಿಡೀ ಸಾಹಿತ್ಯದ ಗುಂಗಿನಲ್ಲಿ ಮುಳುಗಿರುತ್ತ ಕೆಲವು ಸಲ ಹಾಗೆ ಮಾಡುವುದಿದೆ. ಒಮ್ಮೆ ನಾನು ಈ “ಲಿಟರರಿ ಬಯಾಗ್ರಫಿ”ಯ ಪುಟಗಳ ಮೇಲೆ ಕೈಯಾಡಿಸುತ್ತಿದ್ದೆ ಎಂದಿಟ್ಟುಕೊಳ್ಳಿ. ನನ್ನ ದೃಷ್ಟಿ ಯಾದೃಚ್ಛವಾಗಿ ‘Prynne, William’ (1600-1669) ಎಂಬ ನಮೂದಿನ ಮೇಲೆ ಹರಿಯುತ್ತದೆ. ಪ್ರಿನ್ನ್ ಶಬ್ದ ನನ್ನ ತಲೆಯಲ್ಲೆಲ್ಲೋ ಒಂದು ಸಣ್ಣನೆ ಗಂಟೆ ಬಾರಿಸುತ್ತದೆ. ಪ್ರಿನ್ನ್ ಕುರಿತಾದ ನಿರೂಪಣೆಯನ್ನು ಓದತೊಡಗುತ್ತೇನೆ. ಈತ ಹದಿನೇಳನೇ ಶತಮಾನದ ಒಬ್ಬ ವಿವಾದಾತ್ಮಕ ಇಂಗ್ಲಿಷ್ ಕರಪತ್ರಗಾರ (Pamphleteer) ಎಂದು ಗೊತ್ತಾಗುತ್ತದೆ. ಒಬ್ಬ ನೀತಿನಿಷ್ಠುರ ಮನುಷ್ಯ (ಪ್ಯೂರಿಟನ್). ಅವನ ದೃಷ್ಟಿಯಲ್ಲಿ ಮತ್ತು ಆಗಿನ ಕಾಲದ ಎಲ್ಲಾ ಪ್ಯೂರಿಟನರ ದೃಷ್ಟಿಯಲ್ಲಿ ಆಂಗ್ಲಿಕನ್ ಚರ್ಚು ತನ್ನ ನೈತಿಕ ಮೌಲ್ಯಗಳನ್ನು ಕಳೆದು ಪತಿತವಾಗಿಬಿಟ್ಟಿದೆ. ಇಂಥ ಚರ್ಚಿನ ವಿರುದ್ಧ, ಅದನ್ನು ಸಲಹುವ ರಾಜಾಡಳಿತದ ವಿರುದ್ಧ, ವಿಲಿಯಂ ಪ್ರಿನ್ನ್ ಅತ್ಯಂತ ಕಟುವಾಗಿ ಬರೆಯಲು ಸುರುಮಾಡುತ್ತಾನೆ, ಒಂದು ಸಮರೋಪಾದಿಯಾಗಿ. ಆದ್ದರಿಂದ ಸಹಜವಾಗಿ ಅವನು ಆಳುವ ವರ್ಗವನ್ನು ಎದುರು ಹಾಕಿಕೊಳ್ಳುತ್ತಾನೆ.

ಅವನ ಕೆಂಗಣ್ಣಿಗೆ ಮೊದಲು ಬಿದ್ದುದು ಸಮಕಾಲೀನ ಇಂಗ್ಲೆಂಡಿನ ಜನಪ್ರಿಯ ಮನರಂಜನೆಯಾಗಿದ್ದ ನಾಟಕಗಳು, ಪ್ರಹಸನಗಳು, ಅವುಗಳಲ್ಲಿ ಆಡುವ ನಟರು, ನೋಡಿ ಆನಂದಿಸುವ ಪ್ರೇಕ್ಷಕ ವರ್ಗ ಇತ್ಯಾದಿ. ಇಲ್ಲ, ಈತನ ಬಗ್ಗೆ ನನಗೆ ಇದುವರೆಗೆ ಏನೇನೂ ಗೊತ್ತಿರಲಿಲ್ಲ. ವಿಲಿಯಂ ಪ್ರಿನ್ನ್ ಹೆಸರೇ ನನಗೆ ಹೊಸದಾಗಿತ್ತು. ಇಂಥವನೊಬ್ಬ ಇಲ್ಲೇನು ಮಾಡುತ್ತಿದ್ದಾನೆ ಎಂದುಕೊಂಡೆ. ಯಾಕೆಂದರೆ ಅವನು ಬರೆಯುತ್ತಿದ್ದುದು ಕತೆ ಕವಿತೆ, ನಾಟಕ, ಕಾದಂಬರಿಗಳಾಗಿರಲಿಲ್ಲ. ಪ್ರಧಾನ ಇಂಗ್ಲಿಷ್ ಸಾಹಿತ್ಯ ಚರಿತ್ರೆಯಲ್ಲಿ ಬಹುಶಃ ಇವನ ಪ್ರಸ್ತಾಪ ಇರುವುದಿಲ್ಲ. ಆದರೂ ಇವನೊಬ್ಬ ಪ್ರಭಾವಶಾಲೀ ಬರಹಗಾರನಾಗಿದ್ದ. ಇಲ್ಲದಿದ್ದರೆ ಪ್ರಭುತ್ವ ಅವನ ಬರಹಗಳನ್ನು ಕಡೆಗಣಿಸಬಹುದಿತ್ತು. ಬದಲಿಗೆ ಅವನನ್ನು ಕಾರಾಗೃಹಕ್ಕೆ ತಳ್ಳಲಾಯಿತು, ಅವನಿಗೆ ಇನ್ನಿಲ್ಲದ ಚಿತ್ರಹಿಂಸೆಗಳನ್ನು ನೀಡಲಾಯಿತು. ಅವನ ಕಿವಿಯ ಹಾಳೆಗಳನ್ನು ಕತ್ತರಿಸಲಾಯಿತು. ಕಾರಾಗೃಹದಿಂದಲೂ ಅವನು ತನ್ನ ಕರಪತ್ರ ಆಕ್ರಮಣವನ್ನು ಮುಂದುವರಿಸಿದಾಗ ಅವನ ಕಿವಿಗಳನ್ನು ತಳದಿಂದಲೇ ಕಿತ್ತು ತೆಗೆದರು, ಅವನ ಎರಡೂ ಕೆನ್ನೆಗಳ ಮೇಲೆ ‘S.L.’ (Seditious Libeller) ‘ವಿದ್ರೋಹಿ’ ಎಂಬ ಮುದ್ರೆ ಹಾಕಲಾಯಿತು. ಆದರೆ ಮುಂದೆ ಬ್ರಿಟಿಷ್ ರಾಜಕೀಯ ಬದಲಾಗಿ ಅವನಿಗೆ ಉನ್ನತ ಸ್ಥಾನಮಾನಗಳು ಸಿಗುತ್ತವೆ. ಸರಕಾರದಿಂದ ನಿಯುಕ್ತನಾಗಿ ಆಡಳಿತ ಕಡತಗಳನ್ನು ಕ್ರೋಢೀಕರಿಸುವಲ್ಲಿ ಅವನು ದೊಡ್ಡ ಕೊಡುಗೆ ನೀಡುತ್ತಾನೆ. ಇವೆಲ್ಲವೂ ಒಬ್ಬ ಇಂಗ್ಲಿಷ್ ಸಾಹಿತ್ಯದ ಓದುಗನಾಗಿ ನನ್ನ ಅರಿವಿಗೆ ಬಂದದ್ದು ಸಾಹಿತಿ ಮಾಹಿತಿ ಪುಸ್ತಕದ ನನ್ನ ಯಾದೃಚ್ಛ ಓದಿನಿಂದಾಗಿಯೇ. ಅಂದು ನಾನದನ್ನು ಓದುವ ಆ ಅದೇ ಸಮಯದಲ್ಲಿ ಈ ಲೋಕದ ಇಷ್ಟೊಂದು ಮಂದಿಯಲ್ಲಿ ಇನ್ನೊಂದು ಮನುಷ್ಯ ಜೀವ ಎಲ್ಲಾದರೂ ಅದನ್ನು ಓದುತ್ತಿತ್ತೇ ಎನ್ನುವುದರಲ್ಲಿ ನನಗೆ ಅನುಮಾನವಿದೆ. ಆದರೇನಾಯಿತು, ಒಂದು ಜೀವ ಓದುತ್ತಿತ್ತಲ್ಲ, ಅಲ್ಲಿಗೆ ಮಾಹಿತಿ ಪುಸ್ತಕದ ಉದ್ದೇಶ ಸಾರ್ಥಕವಾಯಿತು ಎನ್ನಬೇಕು.

ಪ್ರಿನ್ನ್ (Prynne, William)

ಆದರೆ ಪ್ರಿನ್ನ್ ಎಂಬ ಶಬ್ದ ಕಂಡಾಗ ನನ್ನ ತಲೆಯಲ್ಲಿ ಬಾರಿಸಿದ ಗಂಟೆ ಯಾವುದು? ಹಿಂದೆಲ್ಲೋ ಅದನ್ನು ನೋಡಿದ್ದೇನೆ ಎಂದಲ್ಲವೇ? ಹೌದು, 1850ರಲ್ಲಿ ಪ್ರಕಟವಾದ ಅಮೇರಿಕನ್ ಕತೆ ಕಾದಂಬರಿಕಾರ ನಥೇನಿಯಲ್ ಹಾಥಾರ್ನ್ನ The Scarlet Letter ಎಂಬ ಕಾದಂಬರಿಯಲ್ಲಿ! ಇದರ ಕಥಾನಾಯಕಿಯ ಹೆಸರು ಹೆಸ್ಟರ್ ಪ್ರಿನ್ನ್ (Hester Prynne). ಇವಳೇನೂ ನೀತಿನಿಷ್ಠುರಳಲ್ಲ, ಬದಲು ನೀತಿನಿಷ್ಠುರತೆಯ (ಪ್ಯೂರಿಟಾನಿಸಂನ) ಕರಾಳ ವರ್ತನೆಗೆ ಬಲಿಯಾದವಳು. ವ್ಯಭಿಚಾರಿಣಿ ಎಂದು ಉನ್ನತ ನಾಗರಿಕ ವರ್ಗದವರಿಂದ ಬಹಿಷ್ಕರಿಸಲ್ಪಟ್ಟವಳು. ಯಾರು ಯಾರದೋ ಚಾಕರಿ ಮಾಡಿಕೊಂಡು ಊರ ಹೊರಗೇ ಇವಳ ವಾಸ. ತನ್ನ ಬಟ್ಟೆಯ ಮೇಲೆ, ರಕ್ತವರ್ಣದಲ್ಲಿ ‘A’ ಅಕ್ಷರವನ್ನು ಅವಳು ಹೊಲಿದುಕೊಳ್ಳಬೇಕಾಗುತ್ತದೆ. ಅದು ‘Adulteress’ (‘ವ್ಯಭಿಚಾರಿಣಿ’) ಎಂದು ಸಾರುವುದಕ್ಕೆ! ಆದರೆ ‘ಎ’ ಎನ್ನುವುದು ‘ಏಂಜೆಲ್’ಗೆ ಕೂಡ ಸಂಕೇತವಾಗಬಹುದು ಎನ್ನುವುದನ್ನು ಹೆಸ್ಟರ್ ತನ್ನ ಮಾನವೀಯ ವರ್ತನೆಗಳಿಂದ ತೋರಿಸಿಕೊಡುತ್ತಾಳೆ.

ಇದೊಂದು ಕೋಶವಾದ್ದರಿಂದ ಇಲ್ಲಿ ಬಳಕೆಯಾಗಿರುವುದು ಅಕಾರಾದಿ ವಿಧಾನ. ಕಾಲಾನುಕ್ರಮವಲ್ಲ. ಆದ್ದರಿಂದ ಇಲ್ಲಿ ಮಿಲ್ಟನ್ ಶೇಕ್ಸ್ ಪಿಯರಿಗಿಂತ ಮೊದಲು ಬರುತ್ತಾನೆ, ಹಾಗೂ ಆಡೆನ್ ಎಲಿಯಟ್ ಗಿಂತ ಮುನ್ನ. ಈಚೆಗೆ ಹುಟ್ಟಿದ ಲೇಖಕನೊಬ್ಬನ ಹೆಸರು ಎಲಿಜಬೆತನ್ ಕವಿಯೊಬ್ಬನ ಹೆಸರಿನ ಮೊದಲು ಬಂದರೆ ಆಶ್ಚರ್ಯವಿಲ್ಲ. ಕಾಲಾನುಕ್ರಮವನ್ನುನಿಘಂಟಿಗೆ ಒಳಪಡಿಸುವುದು ಕಷ್ಟ. 

ಈಗ ಈ ವಿಲಿಯಂ ಪ್ರಿನ್ನ್ ಮತ್ತು ಹೆಸ್ಟರ್ ಪ್ರಿನ್ನ್ ಳ ನಡುವಣ ಸಾಮ್ಯತೆ (ಅಥವಾ ವೈರುಧ್ಯ) ಕೇವಲ ಕಾಕತಾಳೀಯವೇ ಅಥವಾ ಹಾಥಾರ್ನ್ ಬೇಕೆಂದೇ ಅದನ್ನು ಅಳವಡಿಸಿಕೊಂಡನೇ ಎಂಬ ಪ್ರಶ್ನೆ ಏಳುತ್ತದೆ. ಆದರೆ ಅದಕ್ಕೆ ನನ್ನಲ್ಲಿ ಉತ್ತರವಿಲ್ಲ. ಕಾಕತಾಳೀಯವಾಗಿದ್ದರೂ ಅದರ ಸೋಜಿಗವೇನೂ ಕಮ್ಮಿಯಲ್ಲ.(ಚಾಸರನ “ಕ್ಯಾಂಟರ್ಬರಿ ಟೇಲ್ಸ್”ನ ಸನ್ಯಾಸಿನಿಯರ ಮುಖ್ಯಸ್ಥೆ ಮದಾಂ ಎಗ್ಲಾಂಟೈನ್ನ ತೋಳ್ಬಂದಿಯಲ್ಲೂ “ಎ” ಅಕ್ಷರ ಕೆತ್ತಿರುತ್ತದೆ; ಆದರೆ ಅದರ ಮುಂದೆ ಓವಿಡ್ನ Amor vincit omnia ‘ಪ್ರೀತಿ ಎಲ್ಲವನ್ನೂ ಗೆಲ್ಲುತ್ತದೆ’ ಎಂಬ ಮಾತಿನ ಸಾಲು ಕೆತ್ತಿರುವುದರಿಂದ ಇಲ್ಲಿ ‘ಎ’ ಎಂದರೆ ‘ಅಮೊರ್’ ಅರ್ಥಾತ್ ‘ಪ್ರೀತಿ’ ಎಂದೇ ತಿಳಿದುಕೊಳ್ಳಬೇಕಾಗುತ್ತದೆ. ಚಾಸರ್ ಈ ಮುಖ್ಯಸ್ಥೆಯನ್ನ ಲಘು ಹಾಸ್ಯದಲ್ಲಿ ಚಿತ್ರಿಸಿರುವುದರಿಂದ, ಈ ಪ್ರೀತಿ ದೈಹಿಕವೋ ದೈವಿಕವೋ ಎಂಬ ಇಬ್ಬಂದಿತನ ಹಾಗೇ ಉಳಿದುಬಿಡುತ್ತದೆ!)

(ಹೆಸ್ಟರ್ ಪ್ರಿನ್ನ್ (Hester Prynne)

ಹಾಥಾರ್ನ್ ನ ವಿವರಗಳನ್ನು ಓದಿದ ನಂತರ ನಾನು ಕಣ್ಣೋಡಿಸಿದ ನಮೂದು ಸರ್ ವಾಲ್ಟರ್ ಸ್ಕಾಟ್ ಗೆ ಸಂಬಂಧಿಸಿದ್ದು. ಇದಕ್ಕಾದರೆ ಒಂದು ಕಾರಣವಿದೆ. ಈ ಸುಪ್ರಸಿದ್ಧ ಐತಿಹಾಸಿಕ ಕಾದಂಬರಿಕಾರನ “ಐವಾನ್ ಹೊ” ಎಂ.ಎ. ಯ ಓದಿನ ಪಟ್ಟಿಯಲ್ಲಿ ಇದ್ದರೂ ನಾನದನ್ನು ಓದಿರಲಿಲ್ಲ. ನಾವು ವಿದ್ಯಾರ್ಥಿಗಳು ಪಾಠಪಟ್ಟಿಯಲ್ಲಿ ಇದ್ದುದೆಲ್ಲವನ್ನೂ ಓದುತ್ತಿರಲಿಲ್ಲ, ಅದಕ್ಕೆ ಸಮಯವೂ ಇರುತ್ತಿರಲಿಲ್ಲ. ಪ್ರಶ್ನೆ ಪತ್ರಿಕೆಯಲ್ಲಿ ಆಯ್ಕೆಗೆ ಅವಕಾಶವಿದ್ದುದರಿಂದ ನಾವು ಈ ರಿಸ್ಕನ್ನು ತೆಗೆದುಕೊಳ್ಳುತ್ತಿದ್ದೆವು. ಅವನ ಕೃತಿಗಳನ್ನು ಮುಂದೆ ಎಂದಾದರೂ ಓದುವೆನೆಂಬ ನನ್ನ ಸಂಕಲ್ಪ ಇದುವರೆಗೆ ಕೈಗೂಡಿಲ್ಲ. ಇದಕ್ಕಾಗಿ ನನಗೆ ಹುಳ್ಳೆನಿಸುತ್ತದೆ. ಆ ಅಳುಕಿನಂದಲೋ ಏನೋ ನನ್ನೀ ಆಕರ ಗ್ರಂಥದಲ್ಲಿ ಸ್ಕಾಟ್ ನ ವಿವರಗಳ ಮೇಲೆ ಮತ್ತೆ ಮತ್ತೆ ಕಣ್ಣು ಹಾಯಿಸುವುದಿದೆ. ಅದೇ ರೀತಿ ಈಗಲೂ ಆಯಿತು. ಹಾಥಾರ್ನ್ ನಿಂದ ನಾನು ಹೋದುದು ಸ್ಕಾಟಿನ ಕಡೆಗೆ. ಇಬ್ಬರೂ ಕಾದಂಬರಿಕಾರರು ಎನ್ನುವುದನ್ನು ಬಿಟ್ಟರೆ ಬೇರೇನೂ ಹೋಲಿಕೆಯಿಲ್ಲ. ಇಲ್ಲವೇ ಎಂದರೆ ಇದೆ ಕೂಡ: ಇಬ್ಬರಿಗೂ ಕಾಲಿನಲ್ಲಿ ಊನವಿತ್ತು! ಈ ಊನದ ಕಾರಣ ಹಾಥಾರ್ನ್ ಅಂತರ್ಮುಖಿಯಾಗಿ ಪುಸ್ತಕ ಪ್ರಪಂಚವನ್ನು ಪ್ರವೇಶಿಸಿದ ಎನ್ನುತ್ತದೆ ನನ್ನಲ್ಲಿರುವ ಆಕರಗ್ರಂಥ; ಸ್ಕಾಟಿನ ಕುರಿತು ಅದು ಮಾಡಿದ ಪರಿಣಾಮದ ಉಲ್ಲೇಖವಿಲ್ಲ.

ತನ್ನದೇ ಜೀವಿತ ಕಾಲದಲ್ಲಿ (18-19ನೇ ಶತಮಾನ) ಮೊದಲು ಕವಿಯೆಂದು, ನಂತರ ಕಾದಂಬರಿಕಾರನೆಂದು ಅಭೂತಪೂರ್ವ ಪ್ರಸಿದ್ಧಿಯನ್ನು ಪಡೆದವನು ಸರ್ ವಾಲ್ಟರ್ ಸ್ಕಾಟ್. ಅತ್ಯಂತ ಬಿರುಸಾಗಿ ಬರೆಯುತ್ತಿದ್ದ. ಅದೆಷ್ಟೋ ಪದ್ಯ ಗದ್ಯ ಕೃತಿಗಳನ್ನು ರಚಿಸಿದ -ಹೆಚ್ಚಿನವೂ ಐತಿಹಾಸಿಕ. ಇಂಗ್ಲಿಷ್ ಸಾಹಿತ್ಯದಲ್ಲಿ ಅವನಿಗೆ ಎಣೆಶೇಕ್ಸ್ಪಿಯರ್ ಮಾತ್ರ ಎಂಬ ಖ್ಯಾತಿ ಅವನಿಗಿತ್ತು. ಆದರೆ ಈಗ ಅವನ ಸಾಹಿತ್ಯ ಅಷ್ಟೇನೂ ಚಲಾವಣೆಯಲ್ಲಿಲ್ಲ ಎನ್ನುವುದು ಕೂಡ ನಿಜವೇ. ಸ್ಕಾಟ್ ನ ಬಗ್ಗೆ ಹೇಳುವಾಗ ಒಂದು ವಿಷಯ ಮರೆಯುವಂತಿಲ್ಲ. ಕಾವ್ಯಕ್ಷೇತ್ರದಲ್ಲಿ ಅವನ ಸಾಧನೆಯನ್ನು ಗುರುತಿಸಿದ ಬ್ರಿಟಿಷ್ ಸರಕಾರ ಅವನನ್ನು ‘ರಾಷ್ಟ್ರಕವಿ’ಯನ್ನಾಗಿ ಮಾಡಬಯಸಿತು; ಆದರೆ ಹಿರಿಯ ಕವಿ ರಾಬರ್ಟ್ ಸದೆಯ ಪರವಾಗಿ ಅವನು ಅದನ್ನು ನಿರಾಕರಿಸಿದ. ಇಂಥ ಅಮತ್ಸರತ್ವದ ಉದಾಹರಣೆ ಸಾಹಿತ್ಯದಲ್ಲಿ ಬಹಳ ಅಪರೂಪವೆಂದೇ ಹೇಳಬೇಕು.

ಮುಂದೆ 1843ರಲ್ಲಿ, ಸದೆಯ ಮರಣಾನಂತರ, ರಾಷ್ಟ್ರಕವಿ ಪದವಿ ವರ್ಡ್ಸ್ ವರ್ತ್ ಗೆ ಬರುತ್ತದೆ. ಕ್ರಾಂತಿಕಾರಿ ಕವಿ ನಾಲ್ಕು ಪುಡಿಗಾಸಿಗೆ ತನ್ನನ್ನು ತಾನು ಮಾರಿಕೊಂಡ ಎಂದು ರಾಬರ್ಟ್ ಬ್ರೌನಿಂಗ್ 1845ರಲ್ಲಿ The Lost Leader ಎಂಬ ಒಂದು ಕವಿತೆಯನ್ನೇ ಬರೆದುಬಿಟ್ಟ. ವರ್ಡ್ಸ್ ವರ್ತ್ ನ ನಂತರ, 1850ರಲ್ಲಿ ಆ ಪದವಿ ಲಾರ್ಡ್ ಟೆನ್ನಿಸನ್ ಗೆ ಒದಗಿಬಂತು. ನಾಯಕ ಕವಿ ವರ್ಡ್ಸ್ ವರ್ತ್ ಸರಕಾರಿ ಸೌಲಭ್ಯಗಳನ್ನು ಪಡೆಯುತ್ತಿರುವುದನ್ನು ಟೀಕಿಸಿ ಶೆಲ್ಲಿ ಕೂಡ ಬಹಳ ಮೊದಲೇ, 1816ರಲ್ಲಿ To Wordsworth ಎಂಬ ಕವಿತೆಯೊಂದನ್ನು ಬರೆದಿದ್ದ. ಇಂಥ ವಿವರಗಳು ಆಕರಗ್ರಂಥಗಳಲ್ಲಿ ಸಿಗಲಾರವು; ಅವು ಸಿಗುವುದು ವಿಸ್ತೃತವಾದ ಜೀವನ ಚರಿತ್ರೆಗಳಲ್ಲಿ, ಸಾಹಿತ್ಯ ಚರಿತ್ರೆಗಳಲ್ಲಿ ಮತ್ತು ವಿಮರ್ಶಾ ಲೇಖನಗಳಲ್ಲಿ. ಒಂದೇ ಕಡೆ ಎಲ್ಲವೂ ಸಿಗಬೇಕೆಂದರೆ ಹೇಗೆ? ಅಥವಾ ಓದಿದ್ದೆಲ್ಲವೂ ನೆನಪಿನಲ್ಲಿರುವುದು ಕೂಡ ಸಾಧ್ಯವಿಲ್ಲ. ಆದ್ದರಿಂದಲೆ ಪುಸ್ತಕಗಳ ಬಗ್ಗೆ ಪುಸ್ತಕಗಳಿರುವುದು.

Dictionary of Literary Biography ಯಂಥ ಪುಸ್ತಕಗಳು ಸಾಹಿತಿಕೇಂದ್ರಿತ ನಿಜ. ಕೃತಿಕೇಂದ್ರಿತ ಮಾಹಿತಿ ಪುಸ್ತಕಗಳು ಕಡಿಮೆ, ಇಲ್ಲವೇ ಇಲ್ಲ ಎನ್ನಲೂಬಹುದು. ನಮ್ಮ ವಿಮರ್ಶೆ ‘ಲೇಖಕ ಸತ್ತ’, ‘ಕತೆಯನ್ನು ನಂಬಿ, ಕತೆಗಾರನನ್ನಲ್ಲ’ ಎಂದು ಮುಂತಾಗಿ ಹೇಳುತ್ತದೆ. ಇದು ಓದುಗನನ್ನು ಕೇಂದ್ರಸ್ಥಾನದಲ್ಲಿ ನಿಲ್ಲಿಸುತ್ತದೆ. ಒಂದರ್ಥದಲ್ಲಿ ಇದು ಸರಿಯೇ. ಆದರೂ ಸಾಹಿತಿಯಿಲ್ಲದೆ ಸಾಹಿತ್ಯವಿಲ್ಲ, ಲೇಖಕನಿಲ್ಲದೆ ಕೃತಿಯಿಲ್ಲ. ಎರಡರ ಸಂಬಂಧ ಅವಿನಾಭಾವ. ನನ್ನಂಥ ಓದುಗರಿಗಂತೂ ಕೃತಿಯಲ್ಲಿರುವಷ್ಟೇ ಆಸಕ್ತಿ ಅದನ್ನು ಬರೆದವನ ಕುರಿತೂ ಇದೆ. ಅನಾಮಿಕ ಅಥವಾ ಜಾನಪದ ಸಾಹಿತ್ಯಕ್ಕೆ ಅರ್ಥವಿಲ್ಲವೆಂದಲ್ಲ. ಅಂಥ ಕಡೆ ನಾವು ಅದರ ಕೃತಿಕಾರನನ್ನೋ ಸಮಾಜವನ್ನೋ ಕಲ್ಪಿಸಿಕೊಳ್ಳುತ್ತೇವೆ.

ಇದಕ್ಕೆ ‘Author function’ ಎನ್ನುತ್ತೇವೆ. ಶೇಕ್ಸ್ಪಿಯರ್ ಬಗ್ಗೆ ಕೂಡಾ ನಮಗೆ ಗೊತ್ತಿರುವ ವಿವರಗಳು ಬಹಳ ಕಡಿಮೆ; ಆದರೆ ಅದರಿಂದ ಅವನ ನಾಟಕಗಳನ್ನು ಮತ್ತು ಇತರ ಕೃತಿಗಳನ್ನು ಆಸ್ವಾದಿಸುವುದಕ್ಕೆ ನಮಗೆ ಆಗುತ್ತಿಲ್ಲವೇ ಎನ್ನುವುದು ಅಸಂಬದ್ಧ ಪ್ರಶ್ನೆಯಾಗುತ್ತದೆ. ಗೊತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂಬ ನಮ್ಮ ಭಾವನೆ ಮುಖ್ಯವಾಗಿರುತ್ತದೆ.

ಇನ್ನು ಆಧುನಿಕ ಸಾಹಿತಿಗಳ ವಿಷಯಕ್ಕೆ ಬಂದರೆ ಅವರಲ್ಲಿ ಆತ್ಮಚರಿತ್ರೆ ಬರೆದುಕೊಂಡವರು ಕೆಲವೇ ಮಂದಿ. ಅಥವಾ ಬರೆದರೂ ಅದು ಪರಿಪೂರ್ಣವಾಗಿರುವುದಿಲ್ಲ. ಇನ್ನು ಇತರರ ಜೀವನ ಚರಿತ್ರೆ ಬರೆಯುವ ಆಸಕ್ತಿಯೂ ನಮ್ಮಲ್ಲಿ ಕಡಿಮೆ. ನಾನು ಉಲ್ಲೇಖಿಸಿರುವ ಮಾಹಿತಿಕೋಶ ಸಾಹಿತಿಗೂ ಆತನ/ ಆಕೆಯ ಕೃತಿಗಳಿಗೂ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತದೆ. ನನಗಂತೂ ಲೇಖಕನ ಬರಹ ಓದುವಾಗ ಆತನ ಬದುಕು, ಹಿನ್ನೆಲೆ ಸ್ವಲ್ಪವಾದರೂ ತಿಳಿದಿರದೆ ಇದ್ದರೆ ಓದು ಅಪೂರ್ಣ ಎನಿಸುತ್ತದೆ.

(ಮಾಡ್ ಗಾನ್) Maud Gonne)

ನಾವು ‘ಪಠ್ಯ’ವನ್ನು ಮಾತ್ರ ತಿಳಿದುಕೊಂಡರೆ ಸಾಕಾಗುವುದಿಲ್ಲ, ಅದು ಯಾರಿಂದ, ಯಾಕೆ, ಯಾವ ಹಿನ್ನೆಲೆಯಿಂದ ಬಂತು ಎಂದು ತಿಳಿದುಕೊಳ್ಳಬೇಕಾಗುತ್ತದೆ. ಕೆಲವು ಸಲ ಅಂಥ ವಿವರಗಳು ತೀರ ಖಾಸಗಿಯಾಗಿರಬಹುದು. ಆದರೂ ಅವು ಪಠ್ಯದ ಮೇಲೆ ಬೆಳಕು ಚೆಲ್ಲುವುದಾದರೆ, ಪಠ್ಯದ ಸೃಷ್ಟಿಗೆ ಒಂದಲ್ಲ ಒಂದುರೀತಿ ಕಾರಣವಾಗಿದ್ದರೆ ಅವನ್ನು ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ. ಕೃತಿ ಸ್ವಾಯತ್ತತೆಯ ಬಗ್ಗೆ ನಾವು ಎಷ್ಟು ವಾದಿಸಿದರೂ ಕೃತಿ ಎಂದೂ ಸ್ವಯಂಭೂ ಆಗಿರುವುದಿಲ್ಲ, ಲೇಖಕನ ಜೀವನದೊಂದಿಗೆ ಹಾಸುಹೊಕ್ಕಾಗಿಯೆ ಇರುತ್ತದೆ. ಮಾಡ್ ಗಾನ್ ಎಂಬ ಐರಿಶ್ ಕ್ರಾಂತಿಕಾರಿಣಿ ಇಲ್ಲದಿರುತ್ತಿದ್ದರೆ ಡಬ್ಲ್ಯು. ಬಿ. ಯೇಟ್ಸ್ ನ ಕವಿತೆಗಳು ಹೀಗಿರುತ್ತಿದ್ದುವೇ? ಯೇಟ್ಸ್ ಯಾವುದರ ಬಗ್ಗೆ ಬರೆದಾಗಲೂ ಅದರಲ್ಲಿ ಮಾಡ್ ಗಾನ್ ಇದ್ದೇ ಇರುತ್ತಾಳೆ. “Poetry is not a turning loose of emotion, but an escape from emotion; it is not the expression of personality, but an escape from personality” ಎಂದ ಟಿ. ಎಸ್. ಎಲಿಯಟ್ ನ ಸಾಹಿತ್ಯ ಕೂಡ ಇದಕ್ಕೆ ಹೊರತಾಗಿಲ್ಲ. ವೇಸ್ಟ್ ಲ್ಯಾಂಡ್ ಕಾವ್ಯದಲ್ಲಿ ಕವಿಯ ಸ್ವಂತ ಜೀವನಕ್ಕೆ ಸಂಬಂಧಿಸಿದ ಹಲವಾರು ವಿಷಯಗಳಿವೆ. ಉದಾಹರಣೆಗೆ, ಫಯರ್ ಸರ್ಮನ್ ಎಂಬ ಭಾಗದಲ್ಲಿ ಬರುವ ಮಾತು: “By the waters of Leman I sat down and wept…” ಇದರಲ್ಲಿ ಬೈಬಲಿನ ಒಂದು ಪ್ರಾರ್ಥನಾ ಪದ್ಯಕ್ಕೆ (Psalm 137) ಉಲ್ಲೇಖವಿದೆ ಮಾತ್ರವಲ್ಲ, ಎಲಿಯಟ್ ಮಾನಸಿಕ ಚಿಕಿತ್ಸೆಗಾಗಿ 1921ರಲ್ಲಿ (ವೇಸ್ಟ್ ಲ್ಯಾಂಡ್ ಪ್ರಕಟವಾಗುವ ಹಿಂದಣ ವರ್ಷ) ಸ್ವಿಟ್ಝರ್ಲೆಂಡಿನ ಲೇಕ್ ಲೆಮಾನ್ (ಒಂದು ಸರೋವರ) ಪ್ರದೇಶದಲ್ಲಿ ಒಂದು ತಿಂಗಳು ಕಳೆದ ಹಿನ್ನೆಲೆಯೂ ಇದೆ.

ವೇಸ್ಟ್ ಲ್ಯಾಂಡಿನೊಳಗೆ ಎಲಿಯಟ್ ನ ಮಾನಸಿಕ ಅಸ್ವಸ್ಥ ಮೊದಲ ಪತ್ನಿ ವಿವಿಯನ್ ಸಹಾ ಇದ್ದಾಳೆ, ಒಳಗೆ ಮತ್ತು ಹೊರಗೆ, ಎಂದರೆ ಅದರ ಕಾರಣವಾಗಿಯೂ ವಸ್ತುವಾಗಿಯೂ! ಸ್ವಂತ ಅನುಭವಾಂಶಗಳು ಲವಲೇಶವಾದರೂ ಇಲ್ಲದೆ ಯಾವ ಸಾಹಿತ್ಯವೂ ಇಲ್ಲ. ಇಲ್ಲಿ ಏನಾಗುತ್ತದೆ ಎಂದರೆ ಕವಿಯ ಸ್ವಾಂತವೇ ಲೋಕಾಂತವಾಗುತ್ತದೆ; ಆದ್ದರಿಂದಲೇ ಕವಿಗಳು, ಕತೆ ಕಾದಂಬರಿಕಾರರು ನಮಗೆ ಪ್ರಿಯವಾಗುವುದು. ಅವರನ್ನು ಅವರ ಜೀವನ ವಿವರಗಳೊಂದಿಗಿರಿಸಿ ಒಂದರಿಂದ ಒಂದಕ್ಕೆ ಪತಂಗದಂತೆ ಹಾರಾಡುವುದೂ ಒಂದು ರೊಮ್ಯಾನ್ಸ್. ಆ ಮೂಲಕ ನಾವೊಂದು ಮಹಾಜಾಲದಲ್ಲಿ ಅಲೆಯುತ್ತ ಇರುತ್ತೇವೆ. ಎಲ್ಲಿ ತನಕ ನಾವು ಓದುತ್ತ, ಯೋಚಿಸುತ್ತ ಇರುತ್ತೇವೆಯೋ ಅಲ್ಲಿ ತನಕ ಇದು ಹೀಗೇ ಸಾಗುತ್ತ ಇರುತ್ತದೆ. ಸಾಗುವಷ್ಟೂ ಸಾಗಲಿ!