ನಾನು ಆಗಾಗ ರೋಮನ್ ಇತಿಹಾಸ ಓದುತ್ತಿದ್ದೆ. ಸಿಕ್ಕಿದ ಮಾಹಿತಿಗಳನ್ನೇ ಬಳಸಿಕೊಂಡು ಮೊದಲು “ಟೈಬೀರಿಯಸ್”, ನಂತರ “ಕಲಿಗುಲ” ಬರೆದೆ. ಇವುಗಳ ಬಗ್ಗೆ ಜನ ಏನೆನ್ನುತ್ತಾರೋ ಎನ್ನುವ ಕುತೂಲ ಇತ್ತು. ಎರಡೂ ಪೂರ್ಣಪ್ರಮಾಣದ ನಾಟಕಗಳು. ನನ್ನ ಜೀವನ ಸಂಧ್ಯೆಯಲ್ಲಿ ಮಾಡಿದ ಕೆಲಸಗಳು. ಇನ್ನೂ ಬರೆಯಬೇಕೆಂದಿದ್ದೆ. ನನ್ನ ಭಾಷಾ ಬಾಂಧವರಿಂದ ಒಂದು ಒಳ್ಳೆಯ ಮಾತು ಬರುತ್ತಿದ್ದರೆ ಬಹುಶಃ ಹಾಗೆ ಮಾಡುತ್ತಿದ್ದೆನೋ ಏನೋ. ಆದರೆ ಜನರ ಅನಾದರ ನನ್ನ ಉತ್ಸಾಹವನ್ನು ಕೊಂದು ಹಾಕಿತು. ನಾಟಕದ ಕೋಟೆ ನನಗೆ ಅಭೇದ್ಯ ಎನಿಸಿತು. ಆದದ್ದೆಲ್ಲಾ ಒಳಿತೇ ಆಯಿತು ಎಂದು ಭಜನೆ ಮಾಡಲೇ? ನಿಜ, ಇದರ ಬೆನ್ನಿನಲ್ಲೇ ನಾನು “ಅವ್ಯಯ ಕಾವ್ಯ”ವನ್ನು ಬರೆದೆ.
ಕೆ.ವಿ. ತಿರುಮಲೇಶ್ ಬರೆದ ಲೇಖನ

 

ಸಾಹಿತ್ಯವಲಯ ಕೆಲವರಿಗೆ ನಿಷಿದ್ಧವೇ? ಅಂತಹ ಭಾವನೆ ಕೆಲವೊಮ್ಮೆ ಬಂದುಬಿಡುತ್ತದೆ. ನನಗದು ಚಿಕ್ಕಂದಿನಿಂದಲೂ ಬಂದಿತ್ತು. ಇಷ್ಟು ವರ್ಷಗಳ ನಂತರವೂ ಅದು ಬಿಟ್ಟಿಲ್ಲ. ಇದಕ್ಕೆ ನನ್ನನ್ನೇ ಹಳಿಯುವವರಿದ್ದಾರೆ. ಇರಲಿ. ಎಲ್ಲಿ ಹುಟ್ಟಿದ್ದೇವೆ, ಯಾರಿಗೆ ಹುಟ್ಟಿದ್ದೇವೆ, ನಮ್ಮ ಜೆನಿಟಿಕ್ ಮತ್ತು ಸಾಮಾಜಿಕ ಮೇಕಪ್ ಏನು, ರಾಜಕೀಯ ನಿಷ್ಠೆ ಯಾವುದು ಎನ್ನುವುದರ ಮೇಲೆ ಹಲವೊಂದು ಸಂಗತಿಗಳು ನಿಂತಿವೆ.

ಜುಟ್ಟು ಹಿಡಿದೆತ್ತಲು ಆಯಕಟ್ಟಿನಲ್ಲಿ ಜನರಿರಬೇಕು, ಹಾಗಿರುವಂತೆ ನೋಡಿಕೊಳ್ಳುವುದು ಅವರವರ ಜವಾಬ್ದಾರಿ. ನಾನು ಸುಮ್ಮನೆ ಹಳಹಳಿಸುತ್ತಿದ್ದೇನೆಯೇ, ಅಥವಾ ಇದರಲ್ಲಿ ಏನಾದರೂ ತಥ್ಯವಿದೆಯೇ? ಈಚೆಗೆ ನನ್ನ ಎರಡು ನಾಟಕಗಳು ಪ್ರಕಟವಾದುವು. “ಟೈಬೀರಿಯಸ್” ಮತ್ತು “ಕಲಿಗುಲ.” ಇವುಗಳ ಪ್ರತಿಗಳನ್ನು ಪ್ರಕಾಶಕರು ಕೆಲವು ಪ್ರಮುಖ ಸಾಹಿತಿಗಳಿಗೆ ಮತ್ತು ಪತ್ರಿಕೆಗಳಿಗೆ ಕಳಿಸಿದರು. ಒಂದಿಬ್ಬರನ್ನು ಹೊರತು ಪಡಿಸಿ ಇನ್ನು ಯಾರೂ ನನಗೊಂದು ಫೋನ್ ಕರೆ ಕೂಡ ಮಾಡಲಿಲ್ಲ. ಒಬ್ಬರಂದರು, ನಿಮ್ಮ ಅನುವಾದಗಳು ಬಂದಿವೆ, ಅವಕಾಶವಾದಾಗ ನೋಡುತ್ತೇನೆ, ಎಂದು. ಅನುವಾದಗಳು? ನನಗೆ ಅನುವಾದಗಳ ಕುರಿತು ಏನೂ ತಿರಸ್ಕಾರವಿಲ್ಲ. ಸ್ವತಃ ನಾನೇ ಕನ್ನಡಕ್ಕೆ ಹಲವು ಅನುವಾದಗಳನ್ನು ಮಾಡಿದ್ದೇನೆ. ಅಲ್ಬರ್ಟ್ ಕಮೂವಿನ “ಕಲಿಗುಲ” ಎಂಬ ಪ್ರಸಿದ್ಧ ಫ್ರೆಂಚ್ ನಾಟಕವೊಂದಿದೆ. ಆದ್ದರಿಂದ ನನ್ನ ಸಾಹಿತಿ ಮಿತ್ರರು ಅದೇ ಹೆಸರಿನ ನನ್ನ ನಾಟಕವನ್ನು ಅನುವಾದ ಎಂದು ಭ್ರಮಿಸಿರಬಹುದು. ಪುಸ್ತಕ ಬಿಡಿಸಿ ನೋಡುತ್ತಿದ್ದರೆ ಅವರಿಗೆ ನಿಜ ಗೊತ್ತಾಗುತ್ತಿತ್ತು. ಅವರು ತಮ್ಮದೇ ಕೆಲಸದಲ್ಲಿ ಯಾವಾಗಲೂ ನಿರತರಾಗಿರುವ ಲೇಖಕರು. ಇತರರ ವೇಳೆಯ ಮೇಲೆ ನಮಗೆ ಯಾವ ಹಕ್ಕೂ ಇಲ್ಲವಲ್ಲ.

ಒಂದು ಪತ್ರಿಕೆಯನ್ನು ಬಿಟ್ಟರೆ ಇನ್ನೆಲ್ಲೂ ಈ ನಾಟಕಗಳ ಪ್ರಸ್ತಾಪ ಕೂಡ ಬರಲಿಲ್ಲ. ಕಳೆದ ಕೆಲವು ವರ್ಷಗಳಿಂದ ನಾನು ಶೇಕ್ಸ್ಪಿಯರ್ ನ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸುತ್ತ ಬಂದಿದ್ದೇನೆ. ಒಟ್ಟು ಹದಿನಾಲ್ಕು ನಾಟಕಗಳನ್ನು ಅನುವಾದಿಸಿದ್ದೇನೆ. ಇವೆಲ್ಲ ಬೆಳಕಿಗೆ ಬರದೆ ಕಂಪ್ಯೂಟರಿನಲ್ಲಿ ಕೂತಿವೆ. ಒಂದು ಸಾಫ್ಟ್ ಪ್ರತಿಯನ್ನು ಪುರಾವಸ್ತು ಸಂಗ್ರಹಾಲಯದಲ್ಲಿ ಇರಲಿ ಎಂಬಂತೆ ಅಭಿನವದವರಿಗೂ ಕಳಿಸಿದ್ದೇನೆ. ಹಲವು ಪ್ರಕಾಶಕರಿಂದ ಅವಮಾನಿಸಿಕೊಂಡು ಇನ್ನು ನನ್ನ ಸಾಹಿತ್ಯ ಜೀವನ ಮುಗಿಯಿತು ಎಂದಾಗ ನನ್ನ ಸಹಾಯಕ್ಕೆ ಬಂದವರು ಅವರು. ಎಂದಾದರೂ ಪ್ರಕಟವಾದರೆ ಸರಿ, ಇಲ್ಲದಿದ್ದರೂ ಸರಿ; ಸ್ವತಃ ಶೇಕ್ಸ್ಪಿಯರೇ ತನ್ನ ನಾಟಕಗಳ ಮುದ್ರಣ ಕಾಣಲಿಲ್ಲ! ಬರೆದು ಆಡಿಸಿ ಬಿಸಾಕಿ ಹೊರಟು ಹೋದ. ಬರಹಗಾರನಿಗೆ ಇಂತಹ ನಿರ್ಲಿಪ್ತತೆ ಬೇಕು, ಆದರೆ ಸಂಸ್ಕೃತಿಗೆ? ಆ ಮಟ್ಟಿಗೆ ಬ್ರಿಟಿಷ್ ಪುಸ್ತಕ ಪ್ರೀತಿಯನ್ನು ಮೆಚ್ಚಲೇಬೇಕು. ಶೇಕ್ಸ್ಪಿಯರನ ನಾಟಕಗಳ ಸಮಗ್ರ ಸಂಪುಟವನ್ನು ಅವನ ಮರಣಾನಂತರ ಅವನ ಅಭಿಮಾನಿಗಳು ಸೇರಿ ಸಂಪಾದಿಸಿ ಪ್ರಕಟಿಸಿದರು.

ಈ ನನ್ನ ಅನುವಾದ ಹಸ್ತಪ್ರತಿಗಳನ್ನು ಯಾರಿಗಾದರೂ ತೋರಿಸಿ ತಿದ್ದಿಸಿದರೆ ಚೆನ್ನಾಗಿರುತ್ತಿತ್ತು ಎನಿಸಿದ್ದಿದೆ; ಆದರೆ ಯಾರಿಗೂ ತೊಂದರೆ ಕೊಡಲು ನಾನು ಬಯಸುವವನಲ್ಲ. ಅಲ್ಲದೆ ಅಷ್ಟು ಬಿಡುವು ಮಾಡಿಕೊಂಡು ಇಂತಹ ಕೆಲಸ ಕೈಗೊಳ್ಳಬಲ್ಲ ಮಿತ್ರಲಾಭವೂ ನನಗಿಲ್ಲ. ಬಹಳ ದೂರ ಇದ್ದೇನೆ. ಈ ಅನುವಾದದ ವಿಚಾರ ಪ್ರಸ್ತಾಪಿಸಲು ಕಾರಣವೆಂದರೆ, ಶೇಕ್ಸ್ಪಿಯರ್ ನಾಟಕಗಳ ಸಂಪರ್ಕದಲ್ಲಿರುತ್ತ ಸ್ವತಃ ನನ್ನಿಂದ ನಾಟಕಗಳು ಸಾಧ್ಯವೇ ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡಿತು ಎನ್ನುವುದಕ್ಕೆ. ನಾನು ಆಗಾಗ ರೋಮನ್ ಇತಿಹಾಸ ಓದುತ್ತಿದ್ದೆ. ಸಿಕ್ಕಿದ ಮಾಹಿತಿಗಳನ್ನೇ ಬಳಸಿಕೊಂಡು ಮೊದಲು “ಟೈಬೀರಿಯಸ್”, ನಂತರ “ಕಲಿಗುಲ” ಬರೆದೆ. ಇವುಗಳ ಬಗ್ಗೆ ಜನ ಏನೆನ್ನುತ್ತಾರೋ ಎನ್ನುವ ಕುತೂಲ ಇತ್ತು. ಎರಡೂ ಪೂರ್ಣಪ್ರಮಾಣದ ನಾಟಕಗಳು. ನನ್ನ ಜೀವನ ಸಂಧ್ಯೆಯಲ್ಲಿ ಮಾಡಿದ ಕೆಲಸಗಳು. ಇನ್ನೂ ಬರೆಯಬೇಕೆಂದಿದ್ದೆ. ನನ್ನ ಭಾಷಾ ಬಾಂಧವರಿಂದ ಒಂದು ಒಳ್ಳೆಯ ಮಾತು ಬರುತ್ತಿದ್ದರೆ ಬಹುಶಃ ಹಾಗೆ ಮಾಡುತ್ತಿದ್ದೆನೋ ಏನೋ. ಆದರೆ ಜನರ ಅನಾದರ ನನ್ನ ಉತ್ಸಾಹವನ್ನು ಕೊಂದು ಹಾಕಿತು. ನಾಟಕದ ಕೋಟೆ ನನಗೆ ಅಭೇದ್ಯ ಎನಿಸಿತು. ಆದದ್ದೆಲ್ಲಾ ಒಳಿತೇ ಆಯಿತು ಎಂದು ಭಜನೆ ಮಾಡಲೇ? ನಿಜ, ಇದರ ಬೆನ್ನಿನಲ್ಲೇ ನಾನು “ಅವ್ಯಯ ಕಾವ್ಯ”ವನ್ನು ಬರೆದೆ. ಆದರೆ ನಾಟಕ ಓದದವರು ಆದಿ ಪ್ರಾಯೋಗಿಕ ಕಾವ್ಯವನ್ನು ಓದುತ್ತಾರೆಯೇ? “ಅವ್ಯಯ ಕಾವ್ಯ” ಮುಗ್ಗರಿಸಿ ಬಿತ್ತು. (ಇದರ ಹಿಂದಿನ “ಅಕ್ಷಯ ಕಾವ್ಯ”ಕ್ಕೆ ಪ್ರಶಸ್ತಿ ಬಂದಿತ್ತು ನಿಜ. ಅದೊಂದು ಆಶ್ಚರ್ಯ!)

ಅದೇನೋ ಶೇಕ್ಸ್ಪಿಯರ್ ಹುಚ್ಚು ನನಗೆ ಅಂಟಿಕೊಂಡಿತ್ತು ಎಂದು ಕಾಣುತ್ತದೆ. “ಕಿಂಗ್ ಲಿಯರ್”, ”ಹ್ಯಾಮ್ಲೆಟ್” ಮುಂತಾದವನ್ನು ಎತ್ತಿಕೊಂಡೆ. ಎಲ್ಲಾ ಮುಗಿಸುತ್ತೀರಾ ಎಂದು ನನ್ನನ್ನು ಕೇಳಿದವರಿದ್ದಾರೆ. ಶೇಕ್ಸ್ಪಿಯರನ ಒಟ್ಟು ಮೂವತ್ತೇಳು ನಾಟಕಗಳಿವೆ. ಬಹುಶಃ ನಾನು ಮೊದಲೇ ಸುರುಮಾಡಿದ್ದರೆ ಎಲ್ಲವನ್ನೂ ಪ್ರಯತ್ನಿಸುತ್ತಿದ್ದೆನೋ ಏನೋ.

ಶೇಕ್ಸ್ಪಿಯರ್ ಅನುವಾದಕ್ಕೆ ನನ್ನನ್ನು ತೊಡಗಿಸಿದವರು ಹೆಗ್ಗೋಡಿನ ಅಕ್ಷರ; ಆದ್ದರಿಂದ ಅದರ ಪಾಪ ಪುಣ್ಯವೆಲ್ಲ ಅವರಿಗೆ ಸಲ್ಲಬೇಕು. ಕೆಲವು ವರ್ಷಗಳ ಹಿಂದೆ (2002ರಲ್ಲಿ) ನಾನು ಯೆಮೆನ್ ದೇಶಕ್ಕೆ ಇಂಗ್ಲಿಷ್ ಪ್ರಾಧ್ಯಾಪಕನಾಗಿ ಹೋದೆ. ಅಲ್ಲಿ ಕೈತುಂಬ ಕೆಲಸಗಳಿದ್ದುವು. ಮನಸ್ಸಿನಲ್ಲಿ ಊರ ಹಂಬಲ. ಖಿನ್ನನಾಗಿದ್ದೆ. ಈ ಸಂದರ್ಭದಲ್ಲಿ ಒಂದು ದಿನ ನನಗೊಂದು ಈ-ಮೇಲ್ ಬಂತು. (ಈ-ಮೇಲ್ ನೋಡಲು ನಾನು ಅರ್ಧ ಮೈಲಿ ನಡೆದು ಸೈಬರ್ ಕೆಫೆಗೆ ಹೋಗಬೇಕಿತ್ತು.) ಕೆ. ವಿ. ಅಕ್ಷರ ಬರೆದಿದ್ದರು. ಈ ವರ್ಷ ನೀನಾಸಂ ರೆಪರ್ಟರಿಯಲ್ಲಿ ಶೇಕ್ಸ್ಪಿಯರನ “ರೋಮಿಯೋ ಏಂಡ್ ಜೂಲಿಯೆಟ್” ಸೇರಿಸಿಕೊಳ್ಳಬೇಕು ಎಂದಿದ್ದೇವೆ. ನೀವದನ್ನು ಅನುವಾದಿಸಿಕೊಡಬೇಕು ಎಂದು. ಏನು ಮಾಡಲಿ ನಾನು? ಅಕ್ಷರ ಅವರಿಗೆ ನಾನು ಯೆಮೆನ್ ನಲ್ಲಿರುವ ವಿಷಯ ಗೊತ್ತಿರಲಿಲ್ಲ. ಯಾವ ಪರಿಸ್ಥಿತಿಯಲ್ಲಿದ್ದೆ ಎನ್ನುವುದೂ ಗೊತ್ತಿರಲಿಲ್ಲ. ಅಂತೂ ನಾನೀ ಸವಾಲನ್ನು ಸ್ವೀಕರಿಸಿಕೊಂಡೆ – ಸಾಹಿತ್ಯ ಲೋಕಕ್ಕೆ ಬರುವುದು ನನಗೆ ಅಗತ್ಯವಾಗಿತ್ತು. ಅಕ್ಷರ ನನಗೆ ಒಂದು ತಿಂಗಳ ಗಡು ಕೊಟ್ಟಿದ್ದರು. ನಾನವರಿಗೆ ವಿದೇಶದಲ್ಲಿರುವುದನ್ನು ಹೇಳಲಿಲ್ಲ. ಅವರಿಗೆ ಅಚ್ಚರಿ ಮೂಡಿಸುವುದು ನನ್ನ ತುಂಟ ಉದ್ದೇಶವಾಗಿತ್ತು. ಆಗ ಯೆಮೆನ್ ನಲ್ಲಿ ನನ್ನ ಬಳಿ ಕಂಪ್ಯೂಟರ್ ಇರಲಿಲ್ಲ. ಊರಲ್ಲಿ ಕಂಪ್ಯೂಟರ್ ಅಭ್ಯಾಸವಾಗಿ ಹೋಗಿತ್ತು. ಮತ್ತೆ ಕೈಬರಹಕ್ಕೆ ಬರುವುದು ಸುಲಭವಾಗಿರಲಿಲ್ಲ. ಮುಂಜಾನೆ ಮೂರು ಗಂಟೆಗೆ ಎದ್ದು ಅನುವಾದ ಮಾಡುತ್ತಿದ್ದೆ. (ಎಂಟು ಗಂಟೆಗೆ ನಾನು ಕ್ಲಾಸಿನಲ್ಲಿರಬೇಕಿತ್ತು.)

ಅಂತೂ ಶುದ್ಧ ಪ್ರತಿ ತೆಗೆದು ಅವಧಿಗೆ ಸರಿಯಾಗಿ ತಲಪುವಂತೆ ಅಕ್ಷರ ಅವರಿಗೆ ಅಂಚೆಯಲ್ಲಿ ಕಳಸಿಕೊಟ್ಟೆ. ಆಗಲೇ ನಾನವರಿಗೆ ಎಲ್ಲವನ್ನೂ ವಿವರವಾಗಿ ಹೇಳಿದುದು. ನನ್ನ ಅನುವಾದದಲ್ಲಿ ಬೇಕಾದ ತಿದ್ದುಪಡಿಗಳನ್ನು ಮಾಡಿಕೊಳ್ಳಲು ಅವರು ಸ್ವತಂತ್ರರು ಎಂದೂ ಸೇರಿಸಿದೆ. ಅನುವಾದ ತಲಪಿದ್ದಕ್ಕೆ ಬಹುಶಃ ಅವರು ನನಗೆ ತಿಳಿಸಿರಬೇಕು. ಆದರೆ ಆಮೇಲೇನಾಯಿತು ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಬಹುಶಃ ಅಕ್ಷರರಿಗೆ ನಾಟಕದ ರಂಗರೂಪ ಬೇಕಿತ್ತೇನೋ; ನನಗೆ ಶೇಕ್ಸ್ಪಿಯರನ ಪಠ್ಯಕ್ಕೆ ನಿಷ್ಠನಾಗಿರುವುದು ಬೇಕಿತ್ತು. ಆಮೇಲೆ ಅವರು ಆ ಕುರಿತು ಮೌನ ವಹಿಸಿದ ಕಾರಣ ಅನುವಾದ ಅವರಿಗೆ ಹಿಡಿಸಲಿಲ್ಲ ಎಂದೇ ನಾನು ಗ್ರಹಿಸಬೇಕಾಗುತ್ತದೆ. ಅಲ್ಲಿಗೆ ನಾನು ಶೇಕ್ಸ್ಪಿಯರ್ ನ ಅನುವಾದ ಕಾರ್ಯವನ್ನು ನಿಲ್ಲಿಸಬಹುದಿತ್ತು. ಆದರೆ ಅದೇನೋ ಶೇಕ್ಸ್ಪಿಯರ್ ಹುಚ್ಚು ನನಗೆ ಅಂಟಿಕೊಂಡಿತ್ತು ಎಂದು ಕಾಣುತ್ತದೆ. “ಕಿಂಗ್ ಲಿಯರ್”, ”ಹ್ಯಾಮ್ಲೆಟ್” ಮುಂತಾದವನ್ನು ಎತ್ತಿಕೊಂಡೆ. ಎಲ್ಲಾ ಮುಗಿಸುತ್ತೀರಾ ಎಂದು ನನ್ನನ್ನು ಕೇಳಿದವರಿದ್ದಾರೆ. ಶೇಕ್ಸ್ಪಿಯರನ ಒಟ್ಟು ಮೂವತ್ತೇಳು ನಾಟಕಗಳಿವೆ. ಬಹುಶಃ ನಾನು ಮೊದಲೇ ಸುರುಮಾಡಿದ್ದರೆ ಎಲ್ಲವನ್ನೂ ಪ್ರಯತ್ನಿಸುತ್ತಿದ್ದೆನೋ ಏನೋ. ವೃದ್ಧನಾದ ನನ್ನನ್ನು ಹಾಗೆ ಕೇಳುವುದು ಸಮಂಜಸವಲ್ಲ ಎಂದು ಅವರಿಗೆ ತೋರಲಿಲ್ಲ, ಅಥವಾ ಶೇಕ್ಸ್ಪಿಯರ್ ಅನುವಾದದ ಬವಣೆ ಅವರಿಗೆ ಗೊತ್ತಿಲ್ಲ.

ಹೀಗೆಯೇ ಒಮ್ಮೆ ಹೈದರಾಬಾದಿನಲ್ಲಿ ಬಸ್ಸಿನಲ್ಲಿ ಒಬ್ಬರು ಬಹಳ ಉಡಾಫೆಯಿಂದ ಕೇಳಿದ್ದರು, ಎಲ್ಲದರ ಬಗ್ಗೆಯೂ ಬರೆಯುತ್ತೀರಾ ಎಂದು. “ಅವ್ಯಯ ಕಾವ್ಯ” ದೀರ್ಘವಾಯಿತು, “ಅರಬ್ಬಿ” ಹೆಚ್ಚಾಯಿತು, “ಆಳ ನಿರಾಳ” ಏನಿದು ಹಾಗೆಂದರೆ? ಇಂತಹ ಮಾತುಗಳು ಮತ್ತು ಮೌನಗಳು ನನಗೆ ಅಭ್ಯಾಸವಾಗಿಬಿಟ್ಟಿವೆ. ನಾನು ಎಲಿಯೆಟ್, ವಾಲೆಸ್ ಸ್ಟೀವನ್ಸ್, ಎಝ್ರಾ ಪೌಂಡ್, ಬ್ರಾಡ್ಸ್ಕಿ, ಲೋರ್ಕ, ಕವಾಫಿ, ಡಿಕಿನ್ಸನ್ ಮುಂತಾದವರ ಕೆಲವು ಬಿಡಿ ಕವಿತೆಗಳನ್ನೂ ಅನುವಾದಿಸಿದ್ದೇನೆ. ಇವುಗಳನ್ನು ಒಂದು ಪುಸ್ತಕವಾಗಿ ತರುವಿರಾ ಎಂದು ಯಾರನ್ನೂ ಕೇಳುವ ಮುಖ ನನಗಿಲ್ಲ.

ಸಾಹಿತ್ಯವೆಂದರೆ ನಮಗೆ ಅನಗತ್ಯ ಎಂಬ ವರ್ಗದ ಹಿನ್ನೆಲೆಯಿಂದ ಬಂದವನು ನಾನು. ಪಠ್ಯ ಪುಸ್ತಕಗಳ ಹೊರತಾದ ಪುಸ್ತಕಗಳನ್ನು ಓದಬಾರದು, ಅವು ಮಕ್ಕಳನ್ನು ಪುಂಡರನ್ನಾಗಿ ಮಾಡುತ್ತವೆ ಎಂಬ ಭಾವನೆಯಿತ್ತು ನಮ್ಮ ಹಿರಿಯರಲ್ಲಿ. ನಾನು ಹಠಹಿಡಿದು ಹೆಚ್ಚಿನ ವಿದ್ಯಾಭ್ಯಾಸ ಗಳಿಸಿದುದು. ಕದ್ದು ಮುಚ್ಚಿ ಕತೆ ಕವಿತೆ ಬರೆದುದು. ಈಗಲೂ ನನಗೆ ನನ್ನ ಬರಹಗಳ ಕುರಿತು ಲಜ್ಜೆಯಿದೆ. ಪ್ರದರ್ಶನ ಎಂದರೆ ನನಗೆ ಗಾಬರಿ. ನನ್ನನ್ನು ನೀವು ಎಲ್ಲೂ ಕಾಣಲಾರಿರಿ.

ನಮ್ಮ ಶಾಲೆಗೆ ಕಾರಂತ, ಬೇಂದ್ರೆ ಮುಂತಾದವರು ಬಂದು ಹೋಗುತ್ತಿದ್ದರು. ಆದರೆ ಅವರೆಂದೂ ನಮ್ಮನ್ನು ಮಾತಾಡಿಸಿದ್ದಿಲ್ಲ. ಅವರು ನಮಗೆ ನಿಲುಕದವರಾಗಿಯೆ ಉಳಿದರು. ಈಗಲೂ ಹಾಗೇ ಇದ್ದಾರೆ. ನಾನಿನ್ನೂ ಶಾಲಾಬಾಲಕನಾಗಿದ್ದಾಗ, ಒಂದು ರವಿವಾರ ಅಪರಾಹ್ನ ನಮ್ಮ ಪಕ್ಕದ ಪೇಟೆಯ ಹೈಸ್ಕೂಲಿನಲ್ಲಿ ಬಿ. ಎಚ್. ಶ್ರೀಧರರ ಭಾಷಣವಿದೆಯೆಂದು ಗೊತ್ತಾಗಿ ಬಿಸಿಲಲ್ಲಿ ಐದು ಮೈಲಿ ನಡೆದುಕೊಂಡು ಅಲ್ಲಿಗೆ ಹೋದೆ. ಅವರೇನು ಬರೆದಿದ್ದಾರೆಂದು ನನಗೆ ಗೊತ್ತಿರಲಿಲ್ಲ. ಆದರೆ ಸಾಹಿತಿಯೊಬ್ಬರನ್ನು ನೋಡುವ ಉತ್ಸಾಹ ನನ್ನದು. ನಾನಲ್ಲಿ ತಲುಪಿದಾಗ ಅವರ ಭಾಷಣ ಮುಗಿಯುವುದರಲ್ಲಿತ್ತು. ನನಗೀಗ ಮನಸ್ಸಿಗೆ ಬರುವುದು ಜಾಯ್ಸನ ಕತೆ ‘ಅರಬಿ.’ ಅದರಲ್ಲಿ ಬಾಲಕನೊಬ್ಬ ಏನಾದರೂ ಉಡುಗೊರೆ ಕೊಳ್ಳಬೇಕೆಂದು ಸಂತೆ ತಲಪಿದಾಗ ಅದು ಮುಚ್ಚತೊಡಗಿರುತ್ತದೆ!