ಇನ್ನು ಲಯ, ತಾಳದ ಬಗ್ಗೆ ಅವರು ನೀಡುತ್ತಿದ್ದ ಗಮನ ತುಂಬಾ ಮುಖ್ಯ. ಒಂದು ತಾಳ ಇದೆ ಅದನ್ನು ಎಲ್ರೂ ನುಡಿಸ್ತಾರೆ. ಆದರೆ ರವಿಶಂಕರ್ ತಾಳವನ್ನು ಇಟ್ಕೊಂಡು ಆಟ ಆಡ್ತಾ ಇದ್ರು. ಕರ್ನಾಟಕ ಸಂಗೀತದಲ್ಲಿ ಅವರಿಗೆ ಬಹಳಾ ಮೆಚ್ಚಿಗೆ ಆಗಿದ್ದು ಅದು. ಕರ್ನಾಟಕ ಶಾಸ್ತ್ರೀಯ ಸಂಗೀತದ ಕ್ರಮಬದ್ಧತೆ ಅವರಿಗೆ ತುಂಬಾ ಹಿಡಿಸಿತ್ತು.  ಮೃದಂಗದಲ್ಲಿ ತಾಳಕ್ಕೆ ಸಂಬಂಧಿಸಿದಂತೆ ಏನೇನು ಮಾಡ್ತಾರೆ ಅದನ್ನು ಅವರು ಬಹಳ ಗಮನಿಸ್ತಾ ಇದ್ರು.  ಕೂರಿಸಿಕೊಂಡು ಕೇಳೋವ್ರು, ಅವರ ಜೊತೆ ನುಡಿಸೋವ್ರು.  ಮೃದಂಗದ ಕೆಲವು ಅಂಶಗಳನ್ನು ತಮ್ಮ ಸಿತಾರ್ ಸಂಗೀತಕ್ಕೆ ಅಳವಡಿಸಿಕೊಂಡಿದ್ರು.  ಕರ್ನಾಟಕ ಸಂಗೀತದ ತನಿಯಾವರ್ತನದಲ್ಲಿ ಬರುವ ಕೊರಪ್ಪನ್ನು ಸ್ವಲ್ಪ ಬದಲಿಸಿಕೊಂಡು ನುಡಿಸುತ್ತಿದ್ದರು.  ಅದರಲ್ಲಿ ಬರುವ ಕೆಲವು ಬೋಲ್‌ಗಳನ್ನು ಅವರು ತೆಗೆದುಕೊಂಡಿದ್ರು. ಪಂಡಿತ್ ರವಿಶಂಕರರ ಕುರಿತ ರಾಗಮಾಲ ಪುಸ್ತಕದಲ್ಲಿ ಪ್ರಕಟವಾಗಿರುವ ಪಂಡಿತ್ ರಾಜೀವ್ ತಾರಾನಾಥರ ಮಾತುಗಳು

ಸಿತಾರ್‌ಗೆ ಸಂಬಂಧಿಸಿದಂತೆ ರವಿಶಂಕರರ ಕೊಡುಗೆ ಎರಡು ರೀತಿಯದು. ಮೊದಲನೆಯದಾಗಿ ವಾದ್ಯದ ರಚನೆಯಲ್ಲೇ ಮಾಡಿದ ಬದಲಾವಣೆ. ಈ ಬದಲಾವಣೆಯನ್ನು ಇವರ ಗುರುಗಳಾದ ಅಲ್ಲಾವುದ್ದೀನ್ ಖಾನ್ ಸಾಹೇಬ್ರು ಪ್ರಾರಂಭಿಸಿದ್ದರು. ಅವರಿಗೆ ಇದರಲ್ಲಿ ತುಂಬಾ ಆಸಕ್ತಿ.  ಒಂದು ನಿರ್ದಿಷ್ಟವಾದ ವಾದ್ಯ ತೆಗೆದುಕೊಂಡು ಸ್ವಲ್ಪ ಅದರಲ್ಲಿ ಮಾರ್ಪಾಡು ಮಾಡೋರು.  ಈಗ ನಾನು ನುಡಿಸೋ ಚಪ್ಪಟ್ಟೆಯಾದ  ಸರೋದ್ ಕೂಡ ಅವರೇ ಮಾಡಿದ್ದು.  ಸರೋದ್‌ಗೆ ಒಂದಿಷ್ಟು ಮಾರ್ಪಾಡನ್ನು ಮಾಡಿದ್ದರು. ಅದನ್ನು ರವಿಶಂಕರ್ ಸಿತಾರಿಗೆ ತಂದರು.  ಅದರಲ್ಲಿ ಏನು ಮಾಡಬಹುದು ಅಂತ ಹುಡುಕಾಟ ನಡೆಸಿದ್ರು. ಅದರಲ್ಲೇ ಅನ್ವೇಷಣೆ ಮಾಡಿದ್ರು.

ರವಿಶಂಕರ್ ಸುರ್‌ಬಹಾರನ್ನೂ ನುಡಿಸುತ್ತಿದ್ದರು.  ಅನ್ನಪೂರ್ಣಾಜೀ ಅವರನ್ನು ಮದುವೆಯಾದ ಮೇಲೆ ಅವರ ಜೊತೆ ಸುರ್‌ಬಹಾರ್ ಹಾಗೂ ಸಿತಾರ್ ಎರಡನ್ನೂ ನುಡಿಸ್ತಾ ಇದ್ರು.  ಸುರ್‌ಬಹಾರ್ ಅನ್ನೋದು ಆಕಾರದಲ್ಲಿ ದೊಡ್ಡದು, ಒಂದು ರಾಕ್ಷಸ ಸಿತಾರ್ ಇದ್ದ ಹಾಗೆ.  ಅದರಲ್ಲಿ ಹೆಚ್ಚಾಗಿ ಆಲಾಪನೆ ನುಡಿಸ್ತಾ ಇದ್ರು.  ಅದರಲ್ಲಿ ಮಂದ್ರ ಸಪ್ತಕದಲ್ಲಿ ತುಂಬಾ ಕೆಲಸಮಾಡಬಹುದು.  ಅದರಲ್ಲಿ ಖರಜ್ ಅಂದ್ರೆ ಮಂದ್ರದ ತಂತಿ, ಅದಕ್ಕೂ ಕೆಳಗಿನದು ಲರಜ್ ಅಂದ್ರೆ ಅತಿ ಮಂದ್ರದ ತಂತಿ.  ಅಂತಹ ತಂತಿಯನ್ನು ರವಿಶಂಕರ್ ಸಿತಾರಿಗೆ ಹಾಕುವ ಪರಿಪಾಠವನ್ನು ಶುರುಮಾಡಿಕೊಂಡರು.  ಆದ್ದರಿಂದ ಇವರ ಸಿತಾರ್‌ಗೆ ಸುರ್‌ಬಹಾರ್‌ನಲ್ಲಿರುವ ಸಾಧ್ಯತೆಗಳೆಲ್ಲವೂ ಬಂದಿತು.  ಈ ಬದಲಾವಣೆಯಿಂದ ಸಿತಾರಿನ ರೇಂಜ್ ತುಂಬಾ ಜಾಸ್ತಿಯಾಗಿ ಬಿಟ್ಟಿತು.  ಅದಕ್ಕೆ ಮೊದಲು ಸಿತಾರ್ ತಾರ ಗಾಂಧಾರದಿಂದ ಸ್ವಲ್ಪ ಎಳೆದರೆ ಪಂಚಮದ ತನಕ ಹೋಗುತ್ತಿತ್ತು.  ಇನ್ನೂ ಉತ್ತಮ ಸಂಗೀತಗಾರರಾದರೆ ಅದು ಮ್ಯಾಲಿನ ಷಡ್ಜದ ತನಕ ಹೋಗುತ್ತಿತ್ತು. ರವಿಶಂಕರ್ ಬರೋ ಮೊದಲು ಸಿತಾರನಲ್ಲಿ ಇದ್ದದ್ದು ಒಂದೇ ತಂತಿ.

ಸುರ್‌ಬಹಾರ್‌ನಲ್ಲಿ ಆಲಾಪನೆಯನ್ನು ತುಂಬಾ ವಿಶದವಾಗಿ ಮಾಡುತ್ತಾರೆ.  ಹಾಗೇ ಝೋಡ್ ಝಾಲಾ, ತಾಲ್ ಪರನ್ ಅಂತ ಎಷ್ಟೋ ಭಾಗಗಳನ್ನು ಮಾಡ್ತಾರೆ.  ಅದೇ ಸುರ್‌ಬಹಾರ್ ಕಛೇರಿ.  ಅದನ್ನು ತಬಲಾ ಜೊತೆ ನುಡಿಸೋದಿಲ್ಲ.  ಸುರ್‌ಬಹಾರ್‌ನ ಆ ತಂತಿಯನ್ನ ಸಿತಾರ್‌ಗೆ ಹಾಕಿದ್ರಿಂದ ತಬಲಾ ಜೊತೆಗೆ ಬಾರ್ಸೋ ಸಿತಾರ್‌ತನದ ಜೊತೆಗೆ ಸುರ್ ಬಹಾರ್‌ನ ಮಂದ್ರಸಪ್ತಕದಲ್ಲಿ ವಿಶದವಾಗಿ ಕೆಲಸ ಮಾಡೋ ಅವಕಾಶ ಸಿತಾರ್‌ಗೆ ಸಿಕ್ಕಿತು.  ಸುರ್‌ಬಹಾರ್ ಬಹಳ ತಾರಸಪ್ತಕಕ್ಕೆ ಹೋಗೋದಿಲ್ಲ.  ಸಿತಾರ್ ಹೋಗುತ್ತದೆ.  ಹೀಗಾಗಿ ತಂತಿ ವಾದ್ಯಗಳಲ್ಲಿ ಸಿತಾರಿನ ರೇಂಜ್ ತುಂಬಾ ಜಾಸ್ತಿಯಾಗಿಬಿಟ್ಟಿತು.  ಸುರಬಹಾರಿನಷ್ಟು ರೇಂಜ್ ಮಂದ್ರದಲ್ಲಿ ಸರೋದಿಗಿಲ್ಲ.  ಮೊದಲು ಸರೋದಿನ ರೇಂಜ್ ಎಷ್ಟಿತ್ತೊ ಸುಮಾರು ಸಿತಾರಿನ ರೇಂಜ್ ಕೂಡ ಅಷ್ಟೇ ಇತ್ತು. ರವಿಶಂಕರ್ ಮಾಡಿದ ಈ ಬದಲಾವಣೆಯಿಂದ ಅದು ಬಹಳ ಜಾಸ್ತಿಯಾಗಿಬಿಟ್ಟಿತು.

ಹಾಗಾಗಿ ನುಡಿಸಾಣಿಕೆಯೊಳಗೂ ಬದಲಾವಣೆ ಬಂತು.  ಒಂದು ಸಣ್ಣ ವಿಷಯ ಅಥವಾ ಒಂದು ಸಣ್ಣ ವಿಸ್ತಾರ ಇತ್ತೆಂದರೆ ಅದನ್ನ ಬೇಗ ಮುಗಿಸಿಬಿಡಬಹುದು.   ಇದು ಮಾತು, ಯೋಚನೆ ಅಥವಾ ನಡೆಯೋದು ಮೊದಲಾದ ವಿಷಯಗಳಿಗೂ ನಿಜ.  ಇಲ್ಲೇ ಸಮೀಪವೆಂದರೆ ಹೋಗಿ ಬಂದು ಬಿಡಬಹುದು. ಆದರೆ ಒಂದು ದೊಡ್ಡ ಹೈಕ್ ಮೇಲೆ ಹೋಗಬೇಕಾದ್ರೆ ಹಾಗೆ ಓಡಿಸಲಾಗುವುದಿಲ್ಲ.  ಯಾಕಂದರೆ ತುಂಬಾ ದೂರದ ನಕ್ಷೆ ಮಾಡಿಕೋ ಬೇಕಾಗುತ್ತೆ.  ಅದನ್ನೆಲ್ಲಾ ನೀವು ಕವರ್ ಮಾಡಬೇಕು. ಅಲ್ಲೆಲ್ಲಾ ನಿಮ್ಮ ನಡಿಗೆಯನ್ನು ಹರಡಬೇಕು.  ಹೀಗಾಗಿ ಅವರ ಸಿತಾರಿನ ಬಾಜ್‌ನಲ್ಲಿ ಅಂದ್ರೆ ನುಡಿಸಾಣಿಕೆಯಲ್ಲಿ ಸುರ್‌ಬಹಾರಿನ ಘನತೆ, ಅದರ ನಿಧಾನ, ಆಲಾಪದ ವಿಳಂಬಗತಿ, ರಾಗವನ್ನು ನಿಧಾನವಾಗಿ ಹರಡುವಿಕೆ ಇವೆಲ್ಲವೂ ಸೇರಿಕೊಂಡವು. ಆಗ ಅದು ದ್ರುಪದ್ ಶೈಲಿಗೆ ಹೋಗಿಬಿಡುತ್ತೆ.  ಈ ದ್ರುಪದ್ ಶೈಲಿ ಇದೆಯಲ್ಲಾ ಅದು ಓಡದೇ ಇರೋ ನಿಧಾನದ ಗತಿ.  ಅದರಲ್ಲಿ ಚಂಚಲತೆ ಇಲ್ಲ.  ಅದರಲ್ಲಿ ಒಂದು ಸ್ವರದಿಂದ ಇನ್ನೊಂದು ಸ್ವರಕ್ಕೆ ಹೋಗುವ ಪ್ರಕ್ರಿಯೆ ತೌರುಮನೆಯನ್ನು ಬಿಟ್ಟು ಒಂದು ಹೆಣ್ಣು ನಿಧಾನವಾಗಿ ಹೋಗುತ್ತಾಳಲ್ಲಾ ಹಾಗೆ ಇರುತ್ತೆ.  A reluctant forward movement.   ಹಿಂದೆ ನೋಡ್ಕೊಂಡು ನೋಡ್ಕೊಂಡು ಮುಂದಕ್ಕೆ ಹೋಗುತ್ತೆ.  ಒಂದು ಸ್ವರ ಮೇಲೆ ಹೋದ್ರೆ ಮತ್ತೆ ಕೆಳಕ್ಕೆ ಬರುತ್ತೆ.  ಇನ್ನೂ ಕೆಳಕ್ಕೆ ಬರುತ್ತೆ.   Always there is a return;  ಶಕುಂತಲೆ ಮಾಡಿದ ಹಾಗೆ, ಆ ಗಿಡ, ಆ ಹೂವು, ಅಲ್ಲಿನ ಎಲೆಗಳು, ಗೆಳತಿಯರು ಅವರನ್ನು ತಿರಗಾ ಮಾತಾಡ್ಸೋಕ್ಕೆ ಬರುತ್ತೆ.

ಇಂತಹ ದ್ರುಪದ್‌ನ ಆಲಾಪದ ಗತಿಯನ್ನು ಸಿತಾರಿಗೆ ತಂದವರು ರವಿಶಂಕರ್.  ಅನ್ನಪೂರ್ಣಾಜೀ ಅವರೂ ಅದನ್ನ ಮಾಡ್ತಾರೆ.  ಆದ್ರೆ ಅವರ ಮುಖ್ಯವಾದ್ಯ ಸುರ್‌ಬಹಾರ್.  ಒಂದೆರಡುಮೂರು ಸ್ವರದ ಗುಚ್ಛವನ್ನು ಎಷ್ಟು ಹರಡಬಹುದು, ಎಷ್ಟು ಸ್ಪುಷ್ಟವಾಗಿ ಹರಡಬಹುದು ಎನ್ನುವುದು ಗೊತ್ತಾಗ್ತದೆ.  ಯಾವುದೇ ಗಡಿಬಿಡಿ ಇಲ್ಲದೆ ನಿಧಾನವಾಗಿ ವಿಸ್ತರಿಸುತ್ತಾ ಹೋಗಬಹುದು.  ಹಾಗೆ ಮಾಡಬೇಕಂದ್ರೆ ಒಂದು ನಿಧಾನ ಬೇಕು. ನಿಮ್ಮ ಸ್ವಭಾವದಲ್ಲೇ ಆ ಒಂದು ನಿಧಾನ ಇರಬೇಕು.  ಅದು ಬಹಳ ಮುಖ್ಯವಾದ ಗುಣ. ಎಲ್ಲಿಯೂ ಚಂಚಲತೆ, ಗಡಿಬಿಡಿ ಇಲ್ಲದ ನಿಧಾನ. ಪ್ರಾಣಾಯಾಮದಂತೆ, ಅದಕ್ಕೊಂದು ಲಯ ಇದೆ.  ಇದರ ಸ್ಥಾಯೀಭಾವ ನಿಧಾನ.  ಅದರಲ್ಲಿ ಸೌಖ್ಯವನ್ನು ಅನುಭವಿಸುತ್ತಾ ಅದನ್ನು ಸಾಧಿಸಬೇಕು. ಅದು ಮುಖ್ಯ.  ಈ ದ್ರುಪದ್ ಶೈಲಿಯನ್ನು ರವಿಶಂಕರ್ ಸಿತಾರಲ್ಲಿ ತಂದುಬಿಟ್ರು.  ಸಾಧಾರಣವಾಗಿ ಈ ದ್ರುಪದ್ ಶೈಲಿ ಇವರ ಘರಾನಾದಲ್ಲೇ ಇದೆ. ಯಾಕಂದ್ರೆ ಖಾನ್ ಸಾಹೇಬರ ತಂದೆ ಈ ಶೈಲಿಯಲ್ಲೇ ಕಲಿತರು.  ಈ ದ್ರುಪದತನ ಅಲ್ಲಾವುದ್ದೀನ್ ಖಾನ್ ಸಾಹೇಬರ ಶೈಲಿಯನ್ನು ಆವರಿಸಿಕೊಂಡಿತ್ತು.  ಪಂಡಿತ್ ಮತ್ತು ಅನ್ನಪೂರ್ಣಾಜೀ ಅವರು ತುಂಬಾ ಕಟ್ಟುನಿಟ್ಟಾಗಿ ಇದನ್ನು ಮಾಡ್ತಾರೆ.  ಸಿತಾರ್‌ಗೆ ಮತ್ತು ಸಿತಾರ್‌ವಾದನಕ್ಕೆ ಇದು ರವಿಶಂಕರ್ ಅವರ ಬಹಳ ದೊಡ್ಡ ಕೊಡುಗೆ.

ವಾದ್ಯದ ಸಾಧ್ಯತೆಗಳು ಹೆಚ್ಚಾದ ಹಾಗೆ ರಾಗವನ್ನು ಹೆಚ್ಚು ವಿಸ್ತಾರವಾಗಿ ಅದರಲ್ಲಿ ಮೂಡಿಸಬಹುದು. ಸಣ್ಣ ಚೊಂಬಿನಲ್ಲಿ ನೀರು ತೊಗೋತಾ ಇದ್ದವರಿಗೆ ಕೊಡ ಸಿಕ್ಕ ಹಾಗೆ ಆಗಿಬಿಟ್ಟಿತು. ಈಗ ಹೆಚ್ಚು ನೀರು ತುಂಬಿಸಿಕೊಳ್ಳಬಹುದು. ಸಿತಾರ್ ಮ್ಯಾಲೆ ರಾಗ ಮೂಡ್ತಾ ಇದ್ದ ಕ್ರಮವೇ ಬದಲಾಗಿಬಿಡ್ತು.  ಅಲ್ಲಾವುದ್ದೀನ್ ಖಾನ್ ಸಾಹೇಬರ ಕೊಡುಗೆ ಏನಂದ್ರೆ ಅವರಿಗಿಂತ ಹಿಂದೆ ಕೆಲವು ಉಸ್ತಾದರು ಕೇವಲ ದ್ರುತಗತ್‌ಗಳನ್ನು ಮಾತ್ರ ನುಡಿಸ್ತಿದ್ರು. ವಿಲಂಬಿತ ಗತ್‌ಗಳನ್ನು ನುಡಿಸ್ತಾ ಇರಲಿಲ್ಲ.  ಆಲಾಪ್ ಮಾಡ್ತಾ ಇರಲಿಲ್ಲ.  ಇನ್ನು ಕೆಲವರು ಬರೀ ಆಲಾಪ ಮಾಡ್ತಾ ಇದ್ರು.  ಮತ್ತೆ ಕೆಲವ್ರು ಬರೀ ಜೋಡ್ ನುಡಿಸ್ತಾ ಇದ್ರು.  ಖಾನ್‌ಸಾಹೇಬರು, ಅದನ್ನೆಲ್ಲಾ ಸೇರಿಸಿ ಹದಿನೈದು ಖಂಡ ಇರೋ ಒಂದು ದೊಡ್ಡ ಆಲಾಪ ಮಾಡಿದ್ರು. ವಾದ್ಯ ಯಾವುದೇ ಆಗಲಿ ಅದನ್ನು ಒಂದು ಶಾಸ್ತ್ರೀಯ ಪದ್ಧತಿಯಲ್ಲಿ ಬಾರಿಸಬೇಕು.  ಹೀಗೆ ನುಡಿಸೋಕ್ಕೆ ಹೋದ್ರೆ ಒಂದು ರಾಗಕ್ಕೆ ಎರಡೂವರೆ ಗಂಟೆ ಬೇಕು.  ಈಗ ಯಾರೂ ಮಾಡಲ್ಲ.  ಆದರೆ ಕಲಿಸುವಾಗ ಕಲಿಸ್ತಾರೆ.  ರವಿಶಂಕರ್ ಎಲ್ಲಾ ಅಂಗಗಳನ್ನೂ ಸಾಂಗವಾಗಿ ನುಡಿಸ್ತಿದ್ರು.  ಇವರ ಕಲ್ಪನಾ ಕುದುರೆಯಿದೆಯಲ್ಲಾ ಅದು ಯಾವಾಗ್ಲೂ ಹಾರ್ತಾನೇ ಇರೋದು.  ಇವರದ್ದೇ ಆಲಾಪಕ್ಕೆ ಬರ್ತಾಬರ್ತಾ ಒಂದು ಆರ್ಕಿಟೆಕ್ಚರಲ್ ಸ್ಟ್ರಕ್ಚರ್ ಕೊಟ್ಟರು. ನಮ್ಮ ಸಂಗೀತ ಸೀಕ್ವೆನ್‌ಷಿಯಲ್, ಸ ಬಿಟ್ರೆ ರಿ ಹೀಗೆ.  ಇವರೇನು ಮಾಡೋವ್ರು ಅಂದ್ರೆ, ಇಲ್ಲೊಂದು ಸಣ್ಣ ಸ್ವರಗುಚ್ಛ ಇಡೋರು. ಸುಮ್ಮನಾಗಿಬಿಡೋರು.  ಇನ್ನೊಂದನ್ನು ಮತ್ತೆ ಇನ್ನೆಲ್ಲೋ ಇಡೋರು. ಉಳಿಕಿಯದೆಲ್ಲಾ ಬಂದಾಗ ಅವುಗಳ ನಡುವಿನ ಸಂಬಂಧ ಗೋಚರವಾಗುತ್ತಿತ್ತು. ಕಟ್ಟಡದ ಸೊಗಸು ಕಾಣುತ್ತಿತ್ತು. ಎಂಥ ಸೊಗಸಾದ ಕಟ್ಟಾಣಿಕೆ -ಆರ್ಕಿಟೆಕ್ಟಾನಿಕ್ಸ್ ಅನ್ನಿಸುತ್ತಿತ್ತು.

ಇನ್ನು ಲಯ, ತಾಳದ ಬಗ್ಗೆ ಅವರು ನೀಡುತ್ತಿದ್ದ ಗಮನ ತುಂಬಾ ಮುಖ್ಯ. ಒಂದು ತಾಳ ಇದೆ ಅದನ್ನು ಎಲ್ರೂ ನುಡಿಸ್ತಾರೆ. ಆದರೆ ರವಿಶಂಕರ್ ತಾಳವನ್ನು ಇಟ್ಕೊಂಡು ಆಟ ಆಡ್ತಾ ಇದ್ರು. ಕರ್ನಾಟಕ ಸಂಗೀತದಲ್ಲಿ ಅವರಿಗೆ ಬಹಳಾ ಮೆಚ್ಚಿಗೆ ಆಗಿದ್ದು ಅದು. ಕರ್ನಾಟಕ ಶಾಸ್ತ್ರೀಯ ಸಂಗೀತದ ಕ್ರಮಬದ್ಧತೆ ಅವರಿಗೆ ತುಂಬಾ ಹಿಡಿಸಿತ್ತು.  ಮೃದಂಗದಲ್ಲಿ ತಾಳಕ್ಕೆ ಸಂಬಂಧಿಸಿದಂತೆ ಏನೇನು ಮಾಡ್ತಾರೆ ಅದನ್ನು ಅವರು ಬಹಳ ಗಮನಿಸ್ತಾ ಇದ್ರು.  ಕೂರಿಸಿಕೊಂಡು ಕೇಳೋವ್ರು, ಅವರ ಜೊತೆ ನುಡಿಸೋವ್ರು.  ಮೃದಂಗದ ಕೆಲವು ಅಂಶಗಳನ್ನು ತಮ್ಮ ಸಿತಾರ್ ಸಂಗೀತಕ್ಕೆ ಅಳವಡಿಸಿಕೊಂಡಿದ್ರು.  ಕರ್ನಾಟಕ ಸಂಗೀತದ ತನಿಯಾವರ್ತನದಲ್ಲಿ ಬರುವ ಕೊರಪ್ಪನ್ನು ಸ್ವಲ್ಪ ಬದಲಿಸಿಕೊಂಡು ನುಡಿಸುತ್ತಿದ್ದರು.  ಅದರಲ್ಲಿ ಬರುವ ಕೆಲವು ಬೋಲ್‌ಗಳನ್ನು ಅವರು ತೆಗೆದುಕೊಂಡಿದ್ರು. ಕರ್ನಾಟಕ ಸಂಗೀತದಲ್ಲಿ ತಾಳ ಬಲು ಗಟ್ಟಿ. ಅದನ್ನವರು ತುಂಬಾ ಮೆಚ್ಚೋರು. ಇದೇ ನಿಜವಾದ ಭಾರತೀಯ ಅಭಿಜಾತ ಸಂಗೀತ ಅಂತ ಅವರು ಹೇಳುತ್ತಿದ್ದರು. ಹಿಂದುಸ್ತಾನಿ ಸಂಗೀತ ಇದೆ, ಆದರೆ ಅದರಲ್ಲಿ ಕಲಕೆ ಇದೆ ಅಂತ ಅವ್ರು ಹೇಳೋರು. ಒಂದೊಂದು ಸಲ ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತಗಳನ್ನು ಹೋಲಿಸ್ತಾ ಇದ್ರು. ಈ ಸಂಗೀತದ ಪ್ರಭಾವದಿಂದ ಅವರ ಸಂಗೀತದಲ್ಲಿ ಒಂದು ಖಚಿತತೆ ಬಂತು. ನಿರ್ದಿಷ್ಟವಾದ ಹೆಜ್ಜೆಗಳನ್ನಿಡೋರು. ಓಡ್ತಾ ಇರಲಿಲ್ಲ. ಈ ಕಟ್ಟುನಿಟ್ಟೂ ಒಂತರ ಒಳ್ಳೇದು. ಕರ್ನಾಟಕ ಸಂಗೀತದ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳಲ್ಲಿರುವ ಮಂದಗತಿ, ಗತಿಗಾಂಭೀರ್ಯ ದ್ರುಪದ್ ಸಂಗೀತದಲ್ಲಿದೆ. ಅದನ್ನು ಇವರಲ್ಲಿ ಕಾಣಬಹುದು. ಒಟ್ಟಿನಲ್ಲಿ ಆ ನಿಲುವು ಇವರಲ್ಲೂ ಇತ್ತು. ವೀಣಾ ಧನಂ ಇವರ ಮೇಲೆ ತುಂಬಾ ಪ್ರಭಾವ ಬೀರಿದ್ರು. ಪಟ್ಟಮ್ಮಾಳ್ ಒಂದು ಕೃತಿಯನ್ನು ಸುಮ್ಮನೆ ಹಾಗೆ ಹಾಡಿ ಬಿಟ್ಟುಬಿಡ್ತಿದ್ರು. ಅದು ತೂಕವಾಗಿ ಇರ್ತಿತ್ತು. ಅವರ ಹಾಡಿನ ಘನತೆ ಅಂದ್ರೆ ತೂಕ. ಅದಕ್ಕಿನ್ನೇನು ಆಭರಣ ತೊಡಿಸಬೇಕಾಗಿರಲಿಲ್ಲ. ದ್ರುಪದ್‌ನಲ್ಲಿ ಆ ಗುಣ ಬಹಳಾ ಇದೆ. ಹಿಂದುಸ್ತಾನಿ ಸಂಗೀತದಲ್ಲಿ ಎರಡು ಅತಿ: ತುಂಬಾ ನಿಧಾನ ಇಲ್ಲವೇ ತುಂಬಾ ವೇಗ. ಕರ್ನಾಟಕ ಸಂಗೀತ ಇದೆರಡರ ನಡುವೆ ಇತ್ತು. ಒಂದು ಮಿತಿಯೊಳಗಿತ್ತು. ಆ ಮಿತಿಯೊಳಗೆ ಎಲ್ಲವೂ ತುಂಬಾ ಕಟ್ಟುನಿಟ್ಟು. ರವಿಶಂಕರರಲ್ಲಿ ಈ ಗುಣ ಇತ್ತು. ಇವರಿಗೆ ಒಂದು ತಂತಿ ಎಳೆಯೋದ್ರಿಂದ ಹಿಡಿದು ಎಲ್ಲಾದ್ರಲ್ಲೂ ಮಿತಿ, ಕೆಲವರು ಒಂದು ತಂತಿ ಎಳೆದು ಒಂದು ಸಪ್ತಕವನ್ನೇ ನುಡಿಸಿಬಿಡ್ತಾ ಇದ್ರು. ಮಿಂಚಿನಂತೆ ವೇಗವಾಗಿ ನುಡಿಸಿಬಿಡ್ತಾ ಇದ್ರು. ಅದನ್ನು ಸಪಾಟ್ ಅಂತಾರೆ.  ವಿಲಾಯತ್ ಖಾನ್ ಸಾಹೇಬರು ಇದನ್ನು ಮಾಡ್ತಾ ಇದ್ರು. ಝಾಲಾವನ್ನು ಕೂಡ ತುಂಬಾ ವೇಗದಲ್ಲಿ ನುಡಿಸ್ತಾರೆ.

ತಾಳದ ಜೊತೆಗೆ ಕುಸ್ತಿ. ಅದು ಈ ಘರಾನೆ ಒಳಗೇನೇ ಇದೆ. ನೀವು ಸರೋದು, ಸಿತಾರು ನುಡಿಸೋ ಬೇರೆಯವರನ್ನು ನೋಡಿ. ಅಲ್ಲಿ ಇದೇ ಬೇರೆ, ತಬಲಾನೇ ಬೇರೆ. ಇವರು ಗತ್‌ಗೆ ಬರೋವರೆಗೆ ತಬಲಾದವರು ಸುಮ್ಮನೇ ಠೇಕಾ ಕೊಡ್ತಿದ್ರು. ಅಲ್ಲಿ ಎಲ್ಲವೂ ಸ್ಪಷ್ಟ. ನಾನು ನುಡಿಸುವಾಗ ನೀನು ಸುಮ್ಮನಿರು ಅಂತ. ತಬಲಾದವರ ಸ್ಟೇಟಸ್ ಹಿಂದೂಸ್ತಾನಿ ಸಂಗೀತದಲ್ಲಿ ಹಾಗಿತ್ತು. ತಬಲಾದವರನ್ನು ದೂರ ಕೂರಿಸ್ತಿದ್ರು. ತಬಲಾದವರಿಗೆ ಮೊದಲು ಸ್ಥಾನಮಾನ ತಂದುಕೊಟ್ಟಿದ್ದು ಅಲ್ಲಾವುದ್ದೀನ್ ಖಾನ್ ಸಾಹೇಬ್ರು. ಅವರು ತಬಲಾ ಜೊತೆ ಕುಸ್ತಿ ಮಾಡೋರು. ಆ ಕ್ರಮವನ್ನು ನಮ್ಮ ಗುರುಗಳು ಮತ್ತು ರವಿಶಂಕರ್ ತುಂಬಾ ಪಾಲಿಶ್ ಮಾಡಿದರು. ನಮ್ಮ ಗುರುಗಳು ಅಷ್ಟು ಮಾಡ್ತಿರಲಿಲ್ಲ. ಆದರೆ ರವಿಶಂಕರ್ ಅದರಲ್ಲಿ ಹಿಗ್ಗಿ ಬಿಡೋರು. ಅದು ದಕ್ಷಿಣದ ಪ್ರಭಾವ. ತಾನ್‌ಸೇನಿ ಸಂಗೀತದಲ್ಲೂ ತಬಲಾ ಜೊತೆ ಲಡಾಯಿ ಮಾಡೋದು ಇದೆ. ಆದರೆ ರವಿಶಂಕರ್ ಅದನ್ನು ಹೊಸ ಹೊಸ ರೀತಿಯಲ್ಲಿ ಮಾಡ್ತಿದ್ರು. ಹೀಗೆ ಸಿತಾರಿನ ಸ್ಟ್ರಕ್ಚರನ್ನು ಸುರಬಹಾರ್ ಹತ್ತಿರಕ್ಕೆ ತಂದ್ರು.  ಹೀಗಾದ್ರಿಂದ ಅದರ ಸಂಗೀತದ ಸಾಧ್ಯತೆಗಳು ಸಿತಾರಿಗೆ ಬಂತು. ಚೊಂಬು ನೀರಿದ್ದದ್ದು ಕೊಡ ನೀರಾಯ್ತು.

ಇವರು ಬಹಳ ಮುಖ್ಯವಾದ ಒಂದು ಬೆಲೆಬಾಳುವ ಕೊಡುಗೆ ನೀಡಿದ್ರು. ಕೊಡುಗೆ ಅಂದ್ರೆ ಹಾಗಿರಬೇಕು.  ಕೊಡುಗೆ ಅಂದ್ರೆ ಅದು ಸ್ಟ್ರಕ್ಚರಲ್, ಮ್ಯೂಸಿಕಲ್ ಮತ್ತು ರೆಗ್ಯುಲರ್ ಎಲ್ಲವೂ ಆಗಿರಬೇಕು. ವಾದ್ಯವನ್ನು ಮಾರ್ಪಡಿಸಿದ ಮೇಲೆ  ಅದರ ಜವಾಬ್ದಾರಿ ತೆಗೆದುಕೊಂಡು ಅದರ ಸಾಧ್ಯತೆಯನ್ನು ಹುಡುಕಬೇಕು. ಅದರಲ್ಲಿ ಬೇರೆ ಸೌಂಡ್ ಬಂದ್ರೆ ಅದನ್ನೇನು ಮಾಡ್ಬೋದು ಅನ್ನೋದು ತುಂಬಾ ಇಂಪಾರ್ಟೆಂಟ್.  ಅದನ್ನೆಲ್ಲಾ ಒಟ್ಟಿಗೆ  ಮಾಡ್ತಾ ಬಂದ್ಬಿಟ್ರು. ಕಡೇ ತನಕ ಮಾಡಿದ್ರು.

ಪಾಶ್ಚಿಮಾತ್ಯ ಸಂಗೀತಕ್ಕೆ ಸ್ಪಂದನ

ಆಮೇಲೆ ವೆಸ್ಟ್ ಗೆ ಬಂದಾಗ ಆ ಸಂಗೀತದ ಇಂಪ್ಯಾಕ್ಟ್ ಅವರ ಮೇಲೆ ಆಯ್ತು. ಅದರೆ ಇವರಿಗೂ ಉಳಿದವರಿಗೂ ಇದ್ದ ವ್ಯತ್ಯಾಸ ಅಂದ್ರೆ, ಇವರು ಸಣ್ಣವರಿದ್ದಾಗಿನಿಂದ ದೊಡ್ಡ ದೊಡ್ಡ ಪಾಶ್ಚಾತ್ಯ ಸಂಗೀತಗಾರರನ್ನು ಕೇಳಿದ್ರು. ಯಾವುದೇ ಸಂಗೀತದ ಅಭಿಜಾತ ಕಲಾವಿದರು ಬೇರೆ ಸಂಸ್ಕೃತಿಯ ಕಲೆಯನ್ನು ಸ್ವೀಕಾರ ಮಾಡೋದಿಲ್ಲ.  ಅದಕ್ಕೆ ಸ್ಪಂದಿಸೋದಿಕ್ಕೆ ಅವರು ತಯಾರಾಗಿರೋದಿಲ್ಲ. ಒಂದು ತರಹದ ಮಡಿ ಇರುತ್ತದೆ. ಅದಕ್ಕೇ ರವಿಶಂಕರ್ ಅವರ ಸಂಗೀತವನ್ನು ಸ್ವೀಕರಿಸಿದವರು ಜಾರ್ಜ್ ಹ್ಯಾರಿಸನ್, ಬೀಟಲ್ಸ್, ವುಡ್‌ಸ್ಟಾಕ್ ಮುಂತಾದವರು. ಇದು ತುಂಬಾ ಮುಖ್ಯವಾದ ಘಟನೆ: ಇದು ಎಲ್ಲಾಯ್ತು, ಯಾಕಾಯ್ತು ಅಂತ ತಿಳ್ಕೊಬೇಕು. ಇದರಲ್ಲಿ ಎರಡಿದೆ.  ನಾವು ಅಭಿಜಾತ ಸಂಗೀತವನ್ನು ಎಷ್ಟೋ ನಿಷೇಧಗಳನ್ನು ಕಟ್ಟುಪಾಡುಗಳ ನಡುವೆ ಕಲಿಯಬೇಕಾಗುತ್ತದೆ. ರವಿಶಂಕರ್ ನಮ್ಮ ಸಂಗೀತದ ಎಲ್ಲಾ ಕಟ್ಟುಪಾಡುಗಳಿಗೆ, ಶಿಸ್ತಿಗೆ ಒಳಪಟ್ಟರು. ತಮಗೆ ತುಂಬಾ ಚೆನ್ನಾಗಿ ಗೊತ್ತಿದ್ದ, ಸುಖಪಡುತ್ತಿದ್ದ ಎಲ್ಲವನ್ನು ಬಿಟ್ಟುಬಂದರು. ಅದರಲ್ಲಿ ನೀನು ಟಾಪಾಗಿದ್ದೀಯೆ. ಮನಸ್ಸು ಅಲ್ಲಿ ಹೋಗು ಅಂತ ಕೇಳ್ತಾ ಇರ್ತದೆ. ಇಲ್ಲ ನಾನು ಇದೇ ಮಾಡ್ತೇನೆ ಅನ್ನೋದು ತುಂಬಾ ಕಷ್ಟ.

ನನ್ನ ಬಗ್ಗೆಯೇ ಒಂದು ಮಾತು ಹೇಳೋದಾದ್ರೆ, ನಾನು ಆವಾಗ ಇಂಗ್ಲೀಷ್ ಓದಿದೆ. ಒಳ್ಳೆ ಕೆಲಸದಲ್ಲಿ ಇದ್ದೆ. ಖಾನ್ ಸಾಹೇಬರಲ್ಲಿ ಹೋದ ಮೇಲೆ ಅಲ್ಲಿಯ ಕಥೆಯೇ ಬೇರೆ. ನಾನು ನನ್ನ ಮೇಲೆ ಒಂದು ಶಿಸ್ತನ್ನು ಹಾಕ್ಕೊಂಡೆ. ಅವರ ಹತ್ರ ಇರೋ ತನಕ ನಾನು ಓದಲಿಲ್ಲ. ಒಂದು ಷೇಕ್ಸ್ ಸ್ಪಿಯರ್ ಪುಸ್ತಕ ತೆಗೆದುಕೊಂಡು ಹೋಗಿದ್ದೆ. ಅದನ್ನೂ ಓದಲಿಲ್ಲ. ಯಾರ ಮನೇಲಿ ಊಟ ಹಾಕಿ ಇಟ್ಟುಕೊಂಡಿದ್ರೋ ಅವರ ಮನೇಲಿ ಇಟ್ಟುಬಿಟ್ಟೆ. ನನ್ನ ಗುರು ಓದೋದಿಲ್ಲ, ಎಂಥಾ ದೊಡ್ಡ ಮನುಷ್ಯ. ನಾಳೆ ಇದು ಓದಿ ಅವ್ರಿಗೆ ಇದು ಬರೋದಿಲ್ಲ ಅಂತ ಎಲ್ಲೋ ತಲೇಲಿದ್ರೆ ಅದು ಬೆನ್ನುಹುರಿಯಲ್ಲಿ ಬರಬಹುದು. ಶಿಷ್ಯನಾಗಿ ಹೋಗತಕ್ಕವನಿಗೆ ಇಂತಹ ಸನ್ನಿವೇಶವೂ ಇರುತ್ತೆ. ಆ ವಿಷಯದಲ್ಲಿ ರವಿಶಂಕರ್ ನನಗೆ ಹತ್ತಿರದಲ್ಲಿದ್ದಾರೆ.  ಶಿಷ್ಯ ಎಲ್ಲಿಂದಲೋ ಬಂದವನು. ಶಿಷ್ಯ ಎಲ್ಲೋ ಹುಟ್ಟಿರ್ತಾನೆ, ಗುರು ಇನ್ನೆಲ್ಲೋ ಹುಟ್ಟಿರ್ತಾನೆ. ಯಾವುದೋ ಒಂದು ಕ್ಷಣದಲ್ಲಿ, ಒಂದು ಸಾಯಂಕಾಲ ಸಂಧಿಸಿರ್ತಾರೆ.  ಈ ಶಿಷ್ಯನಿಗೆ ಆ ಗುರುವಿನ ಅನುಭವ ಆಗಿರ್ತದೆ. ಅವನು ತನ್ನದೆಲ್ಲವನ್ನೂ ಬಿಟ್ಟು ಅಲ್ಲಿಗೆ ಹೋಗಿರ್ತಾನೆ. ಆದರೆ ಅವನ ಹಿಂದೆ ಈಗಾಗಲೇ ಏನೇನೋ ಸಂಸ್ಕಾರ ಇರುತ್ತೆ ಅವನ್ನೆಲ್ಲಾ ಬಿಟ್ಟು ಹೋಗಬೇಕು. ಆದರೆ ಗುರುವಿಗೆ ಮಗನಾಗಿ ಹುಟ್ಟಿದವನು ಅವನ ಜೊತೆಯಲ್ಲೇ ಬೆಳೆಯಬೇಕು. ಏನನ್ನೂ ಬಿಟ್ಟು ಹೋಗಬೇಕಾಗಿಲ್ಲ. ಹಾಗಾಗಿ ಮಗನ ವರ್ಟಿಕ್ಯಾಲಿಟಿ ಮತ್ತು ಶಿಷ್ಯನ ಹಾರಿಜಾಂಟ್ಯಾಲಿಟಿ ಎರಡೂ ಇವೆ.  ಆದರೆ ಕೆಲವೆಲ್ಲಾ ನ್ಯೂನ್ಯತೆಗಳೂ ಇರುತ್ತವೆ, ಅಲ್ಲಿ ಶಿಷ್ಯ ಆಯ್ಕೆ ಮಾಡ್ಕೋಬೇಕು. ಆಯ್ಕೆ ಮಾಡ್ಕೊಳ್ಳುವಾಗಲೇ ಇನ್ನೊಂದನ್ನು ಕಳ್ಕೊತೀನಿ ಅಂತಲೇ ಮನಸ್ಸಲ್ಲಿ ಮಾಡ್ಕೊಬೇಕು. ಅಲಿ ಅಕ್ಬರ್‌ಗೆ ಆಯ್ಕೆ ಇಲ್ಲವೇ ಇಲ್ಲ. ಬೇಕೋ ಬೇಡವೋ ಕಲೀಲೇಬೇಕು.

(ಫೋಟೋ:ರಶೀದ್)

ರವಿಶಂಕರ್ ಬಾಬಾ ಅವರ ಶಿಷ್ಯನಾಗಿದ್ದರೂ ಬೇರೆ ಸಂಸ್ಕಾರಗಳ ಪ್ರಭಾವವೂ ಇತ್ತು. ಪಾಶ್ಚಾತ್ಯ ಸಂಗೀತಕ್ಕೆಲ್ಲ ಇವರು ಸ್ಪಂದಿಸುತ್ತಿದ್ದರು. ಆ ಸಂಗೀತದ ತಿಳುವಳಿಕೆ ಇವರಿಗೆ ಇದ್ದದ್ದರಿಂದ ಅದು ಬಂದು ಇವ್ರನ್ನ ಮುಟ್ಟಿದಾಗ ಅದರ ಕೇಳ್ಮೆ ಅರ್ಥದಿಂದ ಕೂಡಿರುತ್ತಿತ್ತು. ನಾನು ಆ ಸಂಗೀತವನ್ನು ಕೇಳುವುದಕ್ಕೂ, ರವಿಶಂಕರ್ ಆ ಸಂಗೀತವನ್ನು ಕೇಳೋದಕ್ಕೂ ಇದ್ದ ಮುಖ್ಯ ವ್ಯತ್ಯಾಸವೇ ಇದು. ಆ ಸಂಗೀತ ಅವರಿಗೆ ಅರ್ಥವಾಗುತ್ತಿತ್ತು. ಅವರು ಜುಬಿನ್ ಮೆಹ್ತಾ, ರಾಂಪಾಲ್ ಮುಂತಾದವರ ಜೊತೆಗೆ ನುಡಿಸಿ ಒಂದು ಸಿಂಫೊನಿ ಸೃಷ್ಟಿಸ್ತಾ ಇದ್ರು. ಆ ಸಿಂಫೋನಿಯೊಳಗೆ ಇವರು ಸಕ್ರಿಯವಾಗಿ ಪಾಲ್ಗೊಳ್ತಾ ಇದ್ರು. ಇವರು ಮುಖ್ಯ ಕಲಾಕಾರರಾಗಿ ಇವರ ಭಾಗವನ್ನು ತುಂಬಾ ಸ್ಪಷ್ಟವಾಗಿ ತುಂಬಾ ನಿರ್ದಿಷ್ಟವಾಗಿ, ಕರಾರುವಾಕ್ಕಾಗಿ ನುಡಿಸ್ತಾ ಇದ್ರು. ನಮ್ಮ ಬೇರೆ ಯಾವ ಸಂಗೀತಗಾರರೂ ಅದನ್ನು ಮಾಡಲಿಲ್ಲ.  ಇದೇ ನಿಜವಾದ ವ್ಯತ್ಯಾಸ.  ಇವರ ಪಾಶ್ಚಾತ್ಯ ಸಂಗೀತದ ಅಭಿವ್ಯಕ್ತಿಯನ್ನು ಆ ಸಂಗೀತದ ಪ್ರಭಾವ ಎನ್ನುವ ಹಾಗಿಲ್ಲ. ಅದು ಪಾಶ್ಚಾತ್ಯ ಸಂಗೀತಕ್ಕೆ ಇವರ ಸ್ಪಂದನ. ಅವರಿಗೆ ಈ ರೀತಿಯ ಸ್ಪಂದನ ಸಾಧ್ಯವಾಯಿತು. ಯಾಕೇಂದ್ರೆ ಇದನ್ನು ಅವರು ಮೊದಲೇ  ಪ್ಯಾರಿಸ್ಸಿನಲ್ಲಿ ಅದೂ ಚಿಕ್ಕ ವಯಸ್ಸಿನಲ್ಲಿ ಕೇಳಿದ್ದರು. ಅವರು ಅದರಲ್ಲಿ ಉಸ್ತಾದ್ ಅಲ್ಲದಿರಬಹುದು. ಆದರೆ ಅವರಿಗೆ ತಿಳುವಳಿಕೆ ಇತ್ತು.  ಸ್ಥೂಲವಾಗಿ ಹೇಳಬೇಕಂದ್ರೆ. ಪಾಶ್ಚಾತ್ಯ ಸಂಗೀತಕ್ಕೆ ಇವರದ್ದು ತಿಳುವಳಿಕೆಯುಳ್ಳ ಸ್ಪಂದನ.

(ರಾಜೀವ್ ತಾರಾನಾಥರ ಮಾತುಗಳನ್ನು ಅಕ್ಷರಕ್ಕಿಳಿಸಿದವರು ಟಿ.ಎಸ್.ವೇಣುಗೋಪಾಲ್ ಮತ್ತು ಶೈಲಜಾ)