Advertisement
ಸುಂದರ ಕಾಡಿನ ರೋ‌ಚಕ ಕಥೆಗಳು-೭: ರೂಪಾ ರವೀಂದ್ರ ಜೋಶಿ ಸರಣಿ

ಸುಂದರ ಕಾಡಿನ ರೋ‌ಚಕ ಕಥೆಗಳು-೭: ರೂಪಾ ರವೀಂದ್ರ ಜೋಶಿ ಸರಣಿ

ಆ ಎಮ್ಮೆಗಳೇನಾದರೂ ಅದನ್ನು ಓಡಿಸಿರದಿದ್ದರೆ ಆಯಿಯ ಗತಿ ಏನಾಗುತ್ತಿತ್ತೋ ಏನೋ. ನೆನೆಸಿಕೊಂಡರೆ, ಈಗಲೂ ಮೈ ಅದುರುತ್ತದೆ. ಆಯಿ ಯಾವಾಗಲೂ ಎಮ್ಮೆ, ದನಗಳನ್ನು ಅಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಳು. “ಆಯಿಗೆ ನಮಗಿಂತಲೂ ಎಮ್ಮೆಯ ಮೇಲೆ ಹೆಚ್ಚು ಪ್ರೀತಿ” ಎಂದು ನಾವು ಯಾವಾಗಲೂ ತಮಾಷೆ ಮಾಡಿದರೆ, ಆಯಿ “ಹೌದು, ಅವು ಮೂಕ ಪ್ರಾಣಿಗಳು. ನಿಮ್ಮಂತೆ ಬಾಯಿ ಬಿಟ್ಟು ಬೇಕಾದ್ದನ್ನು ಕೇಳಲಿಕ್ಕೆ ಆಗೋದಿಲ್ಲ. ನಾವೇ ತಿಳಿದು ಕೊಟ್ಟರೆ ತಿಂತಾವೆ ಪಾಪ” ಎನ್ನುತ್ತಿದ್ದಳು. ಹೀಗೆ  ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಯಿಂದ ಎಮ್ಮೆಗಳನ್ನು ಸಾಕಿದ್ದಕ್ಕೂ  ಸಾರ್ಥಕವಾಯ್ತು ಎನ್ನುವಂತೇ ಅವತ್ತು ಅವು ಆಯಿಯ ಪ್ರಾಣ ಕಾಪಾಡಿದ್ದವು.
ರೂಪಾ
ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹದಿನಾರನೆಯ ಕಂತು

ಹಿಂದಿನ ವಾರ ಕಾಡುಹಂದಿಗಳ ಕುರಿತು ನಿಮಗೆ ಹೇಳುತ್ತಿದ್ದೆ ಅಲ್ಲವೇ… ಅದಕ್ಕೆ ಸಂಬಂಧಿಸಿದ ಒಂದು ಘಟನೆ ಹೇಳಿ, ಈ ಹಂದೀ ಪುರಾಣ ಮುಗಿಸೋಣ. ಈ ಕಾಡು ಹಂದಿಗಳದು ತೀರಾ ದಪ್ಪ ಚರ್ಮವಂತೆ. ಅದಕ್ಕೇ ಇದರ ಶಿಕಾರಿ ಮಾಡುವವರೂ ಬಲು ಚಾಣಾಕ್ಷರೇ ಇರಬೇಕು. ಈಡುಗಾರರ ಈಡು, ಇದರ ಹಣೆಗೋ, ಎದೆಗೋ ತಾಕಿದರೆ ಮಾತ್ರ ಅದರ ಸಾವು. ಇಲ್ಲವಾದರೆ, ಅದು ಸಾಯದೇ ಗಾಯಗೊಂಡು ತಪ್ಪಿಸಿಕೊಂಡು ಬಿಡುತ್ತದೆ. ಈ ರೀತಿ ಗಾಯಗೊಂಡ ಕಾಡು ಪ್ರಾಣಿಗಳು ತೀರಾ ಅಪಾಯಕಾರಿ. ಅವು ಮನುಷ್ಯರ ಮೇಲೆ ನೇರವಾಗಿ ದಾಳಿಮಾಡುವ ಸಾಧ್ಯತೆ ಹೆಚ್ಚು. ಈಗ ನಾನು ಹೇಳ ಹೊರಟದ್ದು ಇದಕ್ಕೆ  ಸಂಬಂಧಿಸಿದ ಘಟನೆಯೇ.

ಈ ಘಟನೆ ನಡೆದು ಸುಮಾರು ಮೂರು ದಶಕಗಳಿಗಿಂತಲೂ ಹೆಚ್ಚು ಸಮಯವೇ  ಸಂದು ಹೋಗಿದೆ. ಅದು  ಸುಮಾರು ನವೆಂಬರ್, ಡಿಸೆಂಬರ್ ತಿಂಗಳು ಅಂತ ನೆನಪು. ನಾನು ತವರಿಗೆ ಹೋಗಿದ್ದಾಗ ನಡೆದದ್ದು. ನಮ್ಮ ಕೊಟ್ಟಿಗೆಯಲ್ಲಿ ಎರಡು ಎಮ್ಮೆಗಳಿದ್ದವು. ದನಗಳೆಲ್ಲಾ ಕಾಡಿಗೆ ಹೋಗಿ ಮೆಂದು ಬಂದರೆ, ಎಮ್ಮೆಗಳು ಮಾತ್ರ ಮನೆಯ ಸಮೀಪದ ಗದ್ದೆಯಲ್ಲಿ ಅರ್ಧ ದಿನ ಮೇಯಿಸಿ ತಂದು, ಮತ್ತೆ ಕಟ್ಟಿ ಹಾಕಿಯೆ ಹೊಟ್ಟೆ ಹೊರೆಯುವ ಪದ್ಧತಿ. ಇತ್ತು.

ಆ ದಿನ ಮಧ್ಯಾಹ್ನ ಸುಮಾರು ೧೧ ಗಂಟೆಯಾಗಿರಬಹುದು. ಆಯಿ ಎಂದಿನಂತೇ ಅಲ್ಲೇ ಗದ್ದೆಯಂಚಿನ ಹಳ್ಳದಲ್ಲಿ ಎಮ್ಮೆಗಳ ಮೈ ತೊಳೆದು ಕೊಟ್ಟಿಗೆಗೆ ತಂದು ಕಟ್ಟಲೆಂದು, ಅವು ಮೇಯುತ್ತಿದ್ದ ಗದ್ದೆಗೆ ಹೋದಳು. ಅವು ಹೊಳೆಯಂಚಿಗೆ ಮೇಯುತ್ತಿದ್ದವು.  ಅಲ್ಲೇ ಸಮೀಪದಲ್ಲಿ ಗಾಯಗೊಂಡ ಗಂಡು ಹಂದಿಯೊಂದು ಗೊರ ಗೊರ ಅನ್ನುತ್ತ ಮಲಗಿದ್ದು ಆಯಿಯ ಗಮನಕ್ಕೆ ಬರಲೇ ಇಲ್ಲ. ಗಾಯದಿಂದ ಹುಚ್ಚು ಹಿಡಿದಂತೆ ಅರಚುತ್ತ ಅತ್ತಿತ್ತ ಉರುಳಾಡುತ್ತಿದ್ದ ಹಂದಿ ಒಮ್ಮೆಲೆ ಮೇಲೆದ್ದು, ಆಯಿಯನ್ನು ಅಟ್ಟಿಸಿಕೊಂಡು ಬಂತು. ಗಾಭರಿಯಿಂದ ಓಡಿ ಬರುತ್ತಿದ್ದ ಆಯಿ, ಗದ್ದೆಯ ಏರಿ ಏರಲಾಗದೇ ಬಿದ್ದು ಬಿಟ್ಟಳು. ತಕ್ಷಣ ಮೇಲೆರಗಿದ ಹಂದಿ, ತನ್ನ ಕೋರೆಯಿಂದ ಆಯಿಯ ಮೊಣಕಾಲಿಗೆ ಇರಿದದ್ದೇ ಆಯಿಯ ಬೊಬ್ಬೆ ಮುಗಿಲು ಮುಟ್ಟಿತ್ತು. ನಾನು ಗಾಬರಿಯಿಂದ ಕೂಗುತ್ತ, ಮನೆಯಿಂದ ಓಡಿ ಬರುತ್ತಿದ್ದೆ. ಅಷ್ಟರಲ್ಲಿ ಅವಳ ಬೊಬ್ಬೆ ಕೇಳಿದ ಎಮ್ಮೆಗಳು ಬುಸುಗುಡುತ್ತ ಬಂದವು. ಒಂದು ಎಮ್ಮೆ ಹಂದಿಯನ್ನು ತನ್ನ ಕೋಡಿನಿಂದ ತಿವಿದು ಅಷ್ಟುದ್ದ ಓಡಿಸಿಕೊಂಡು ಹೋದರೆ, ಇನ್ನೊಂದು ಆಯಿಗೆ ಅಡ್ಡ ಗೋಡೆಯಂತೆ ರಕ್ಷಣೆಗೆ ನಿಂತು ಬುಸುಗುಡುತ್ತಿತ್ತು. ಆ ಎಮ್ಮೆಗಳೇನಾದರೂ ಅದನ್ನು ಓಡಿಸಿರದಿದ್ದರೆ ಆಯಿಯ ಗತಿ ಏನಾಗುತ್ತಿತ್ತೋ ಏನೋ. ನೆನೆಸಿಕೊಂಡರೆ, ಈಗಲೂ ಮೈ ಅದುರುತ್ತದೆ. ಆಯಿ ಯಾವಾಗಲೂ ಎಮ್ಮೆ, ದನಗಳನ್ನು ಅಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಳು. “ಆಯಿಗೆ ನಮಗಿಂತಲೂ ಎಮ್ಮೆಯ ಮೇಲೆ ಹೆಚ್ಚು ಪ್ರೀತಿ” ಎಂದು ನಾವು ಯಾವಾಗಲೂ ತಮಾಷೆ ಮಾಡಿದರೆ, ಆಯಿ “ಹೌದು, ಅವು ಮೂಕ ಪ್ರಾಣಿಗಳು. ನಿಮ್ಮಂತೆ ಬಾಯಿ ಬಿಟ್ಟು ಬೇಕಾದ್ದನ್ನು ಕೇಳಲಿಕ್ಕೆ ಆಗೋದಿಲ್ಲ. ನಾವೇ ತಿಳಿದು ಕೊಟ್ಟರೆ ತಿಂತಾವೆ ಪಾಪ” ಎನ್ನುತ್ತಿದ್ದಳು. ಹೀಗೆ  ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಯಿಂದ ಎಮ್ಮೆಗಳನ್ನು ಸಾಕಿದ್ದಕ್ಕೂ  ಸಾರ್ಥಕವಾಯ್ತು ಎನ್ನುವಂತೇ ಅವತ್ತು ಅವು ಆಯಿಯ ಪ್ರಾಣ ಕಾಪಾಡಿದ್ದವು.

ಮೊಣಕಾಲು ಗಂಟಿನ ಸಮೀಪ ಒಂದಿಂಚಿನಷ್ಟು ಉದ್ದ ಸೀಳಿದ್ದರಿಂದ ರಕ್ತದ ಹೊಳೆ ಹರಿದಿತ್ತು. ಅಪ್ಪಯ್ಯ ನಾನು ಸೇರಿ ಅಂತೂ ಆಯಿಯನ್ನು ನಿಧಾನಕ್ಕೆ ಮನೆಗೆ ಕರೆತಂದೆವು. ನಮ್ಮನೆಯಿಂದ ಪೇಟೆಗೆ ಹದಿನೈದು ಕಿಲೋ ಮೀಟರ್. ಅದು ಯಾರನ್ನೊ ಕಳಿಸಿ, ಒಂದು ವಾಹನ ವ್ಯವಸ್ಥೆ ಮಾಡಿಕೊಂಡು ಆಯಿಯನ್ನು ಶಿರಸಿಗೆ ಕರೆದೊಯ್ಯುವಾಗ ೪ ಗಂಟೆ.  ಮೈ ಪೂರಾ ಕೆಸರು ಮಣ್ಣು ಮೆತ್ತಿದ, ಕಾಲ ಗಾಯದಿಂದ ರಕ್ತ ಸೋರುತ್ತಿದ್ದ ಅಂಥ ದಯನೀಯ ಸ್ಥಿತಿಯಲ್ಲೇ ಆಯಿಯನ್ನು ಡಾಕ್ಟರ್ ಕಡೆ ಕರೆದೊಯ್ದರೆ, ದಯೆ ಕರುಣೆ ಇಲ್ಲದ ಆ ಪಾಪಿ ಡಾಕ್ಟರ್, ಅವಳು ಅಯ್ಯಯ್ಯೋ ಎಂದು ಕೂಗುತ್ತಿದ್ದರೂ, ಒಂದು ಅನಸ್ತೇಶಿಯಾ ಕೂಡಾ ಕೊಡದೇ, “ಅಯ್ಯೋ ಸಲ್ಪ ತಡ್ಕಳಮ್ಮಾ” ಎಂದು ಗದರುತ್ತ, ಬಟ್ಟೆ ಹೊಲಿದಂತೆ ಪರ ಪರ ಹೊಲಿದು ಹಾಕಿದ್ದ. ಹಳ್ಳಿಯವರು ಎಂದರೆ ಅಷ್ಟು ಅಸಡ್ಡೆ ಅವರಿಗೆ. ಪಾಪ ಆ ಜೀವ ಹೇಗೆ ತಡೆದುಕೊಂಡಿತೋ ದೇವರಿಗೇ ಗೊತ್ತು. ಮುಂದೆ ಮೂರು ನಾಲ್ಕು ತಿಂಗಳುಗಳೇ ಬೇಕಾದವು ಆ ಗಾಯ ಮಾಯಲು. ಗಾಯ ಮಾದರೂ, ಅಲ್ಲಿಂದ ನಂತರ, ಎಂದೆಂದೂ ಆ ಕಾಲು ಮಡಿಚಿ ಕೂಡಲು ಆಯಿಗೆ ಸಾಧ್ಯವೇ ಆಗದಂತಾಯಿತು. ಗಂಡಸರೂ ಬೆರಗಾಗುವಷ್ಟು ಕೆಲಸ ಮಾಡುತ್ತಿದ್ದ ಗಟ್ಟಿಗಿತ್ತಿ ಆಯಿಗೆ ಈ ಪೆಟ್ಟು ಬಹಳ ಹೊಡೆತ ಕೊಟ್ಟಿತು. ಜೀವನದಲ್ಲಿ ಮರೆಯದಂಥ ನೋವನ್ನು ಕೊಟ್ಟಿತ್ತು.

ಮುಂದಿನ ಭಾಗದಲ್ಲಿ ಕಾಡಿನ ಇನ್ನೊಂದು ಮುಖವನ್ನು ಪರಿಚಯಿಸುವ ಪ್ರಯತ್ನ ಮಾಡುವೆ.

About The Author

ರೂಪಾ ರವೀಂದ್ರ ಜೋಶಿ

ರೂಪಾ ರವೀಂದ್ರ ಜೋಶಿ ಮೂಲತಃ ಶಿರಸಿ ತಾಲ್ಲೂಕಿನ ದಾನಂದಿ ಗ್ರಾಮದವರು. ಸಧ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವೃತ್ತಿಪರ ಲೆಕ್ಕಪತ್ರ ಬರಹಗಾರರಾಗಿ ಕೆಲಸ ಮಾಡುತ್ತಿರುವ ಇವರಿಗೆ ವಿವಿಧ ಪ್ರಕಾರದ ಸಾಹಿತ್ಯ ಬರವಣಿಗೆ ಹಾಗೂ ಅಧ್ಯಯನದಲ್ಲಿ ಮತ್ತೂ ರಂಗಭೂಮಿಯಲ್ಲೂ ಆಸಕ್ತಿ. ಸಾಗುತ ದೂರಾ ದೂರಾ (ಕಥಾ ಸಂಕಲನ), ಅಜ್ಞಾತೆ (ಸಾಮಾಜಿಕ ಕಾದಂಬರಿ) ೨೦೧೭ (ಲೇಖಿಕಾ ಪ್ರಶಸ್ತಿ ದೊರೆತಿದೆ), ಕಾನುಮನೆ (ಪತ್ತೆದಾರಿ ಕಾದಂಬರಿ) ೨೦೧೯ (ಕ ಸಾ ಪ ದತ್ತಿ ಪ್ರಶಸ್ತಿ ದೊರೆತಿದೆ, ಶೃಂಖಲಾ (ಸಾಮಾಜಿಕ ಕಾದಂಬರಿ) ೨೦೨೦ ( ರತ್ನಮ್ಮ ಹೆಗ್ಗಡೆ ಪ್ರಶಸ್ತಿ ದೊರೆತಿದೆ), ವಾಟ್ಸಪ್ ಕಥೆಗಳು (ಕಿರುಕಥಾ ಸಂಕಲನ), ಹತ್ತರ ಕೂಡ ಹನ್ನೊಂದು  (ಪ್ರಬಂಧಗಳ ಸಂಕಲನ), ಚಿಗುರು ಬುತ್ತಿ (ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ