ಈಗ ಹೇಳಲಿರುವುದಕ್ಕೆ ಒಂದು ಮುನ್ನುಡಿಯ ಅಗತ್ಯವೇ ಇಲ್ಲ. ನಿಮಗಿದು ತಟ್ಟನೆ ಗೊತ್ತಾಗಿಬಿಡುತ್ತದೆ ಅನ್ನುವ ದಟ್ಟ ನಂಬಿಕೆ ನನಗಿದೆ. ಏನೇ ಆಗಲಿ ನೇರವಾಗಿ ನಡೆದುದಕ್ಕೆ ಬರ್ತೀನಿ.

ನೀವು ಗಡಿಬಿಡಿಯಲ್ಲಿ ಹೋಗುತ್ತಿರುವಾಗ ಬೀದಿಯಲ್ಲಿ ನಿಮಗೊಂದು ಕಾಗದ ಬಿದ್ದಿರುವುದು ಕಣ್ಣಿಗೆ ಬೀಳುತ್ತದೆ. ಅದನ್ನು ಕಡೆಗಣಿಸಿ ಒಂದೆರಡು ಹೆಜ್ಜೆ ಮುಂದೆ ಹೋದೊಡನೆ ಆ ಇನ್ಲಾಂಡ್ ಲೆಟರ್‍ ಮೇಲೆ ಬರೆದಿದ್ದ ಹೆಸರು ನಿಮಗೆ ಪರಿಚಿತ ಎಂದು ಹೊಳೆಯುತ್ತದೆ. ಥಟ್ಟನೆ ನಿಲ್ಲುತ್ತೀರ. ನಿಮ್ಮ ಹಳೆಯ ಸಂಗಾತಿಯೊಬ್ಬರ ಹೆಸರು ಪತ್ರದ ಇಂದ ಎಡೆಯಲ್ಲಿ ಗೀಚಿದೆ. ಆದರೆ ಬರೇ ಹೆಸರಿದೆ, ವಿಳಾಸವಿಲ್ಲ. ಒಂದು ಕ್ಷಣ ಕೈಯಲ್ಲಿ ಪತ್ರ ಹಿಡಿದು ಏನು ಮಾಡುವುದೆಂದು ತೋಚದೆ ನಿಲ್ಲುತ್ತೀರ. ಆಗಷ್ಟೇ ಬೀಳಿಸಿಕೊಂಡು ಹೋಗಿರಬಹುದೆಂದು ಅತ್ತಿತ್ತ ನೋಡುತ್ತೀರ. ಯಾರೂ ಕಾಣುವುದಿಲ್ಲ. ಅಷ್ಟರಲ್ಲಿ ಪತ್ರದ ಮೇಲೆ ಚಪ್ಪಲಿ, ಶೂಸಿನ ಗುರುತು ನೋಡಿ ಎಷ್ಟೋ ಹೊತ್ತಿಂದ ಬಿದ್ದಿರಬೇಕು ಎಂದು ನಿಮ್ಮ ಅರಿವಿಗೆ ಬರುತ್ತದೆ. ಗೆ-ವಿಳಾಸ ನೋಡುತ್ತೀರ. ಹೆಸರು ಪರಿಚಯವಿಲ್ಲ. ಆದರೆ ವಿಳಾಸ ಮಾತ್ರ ಹತ್ತಿರದಲ್ಲೆಲ್ಲೂ ಇಲ್ಲವಲ್ಲ ಎಂದು ಆಶ್ಚರ್ಯವಾಗಿ ಏನು ಮಾಡುವುದೆಂದು ತೋಚುವುದಿಲ್ಲ. ನಿಮಗಿದ್ದ ಗಡಿಬಿಡಿ ಮತ್ತೆ ನೆನಪಾಗಿ ಪತ್ರವನ್ನು ಬ್ಯಾಗಲ್ಲಿ ತುರುಕಿಕೊಂಡು ಹೊರಟುಬಿಡುತ್ತೀರ.

ದಿನವೆಲ್ಲಾ ಬಿಡುವಿಲ್ಲದೆ ಆ ಪತ್ರವನ್ನು ನೋಡಲು ಸಂಜೆಯವರೆಗೂ ನಿಮಗೆ ಸಾಧ್ಯವೇ ಆಗುವುದಿಲ್ಲ. ಕೆಲಸ ಮುಗಿಸಿ ನೇರ ಮನೆಗೆ ಬಸ್ಸು ಹತ್ತುವ ಬದಲು, ಬಸ್ಟಾಂಡಿನ ಪಕ್ಕದ ಹೋಟೆಲಿಗೆ ನುಗ್ಗುತ್ತೀರ. ಮೂಲೆಯಲ್ಲಿ ಒಂದು ಜಾಗ ನೋಡಿ ಕೂರುತ್ತೀರ. ಕಾಫಿ ಆರ್ಡರ್‍ ಮಾಡಿ ಬ್ಯಾಗಿಂದ ಪತ್ರ ತೆಗೆದು ನೋಡುತ್ತೀರ. ಪತ್ರ ಒಡೆದಿದೆ. ಒಂದು ಕ್ಷಣ ನಿಮಗೆ ಪತ್ರ ನೋಡುವುದು ಸರಿಯೇ ತಪ್ಪೇ ಎಂದು ತಾಕಲಾಟವಾಗುತ್ತದೆ. ಒಂದು ಕ್ಷಣವಷ್ಟೇ. ಹೇಗೋ ಅದನ್ನು ಬಗೆಹರಿಸಿಕೊಂಡು ಬಿಡುತ್ತೀರ. ಪತ್ರವನ್ನು ತೆರೆಯುತ್ತೀರ. ಅಷ್ಟರಲ್ಲಿ ಕಾಫಿ ಬರುತ್ತದೆ. ಕಾಫಿ ತಂದಿಟ್ಟವ ಒಂದು ಕ್ಷಣ ನಿಮ್ಮ ಕೈಯಲ್ಲಿರುವ ಪತ್ರದ ಮೇಲೆ ಕಣ್ಣು ಹಾಯಿಸಿದಂತೆ ಭಾಸವಾಗುತ್ತದೆ. ಕಸಿವಿಸಿಯಾದರೂ ತೋರಗೊಳ್ಳದೆ, ಓದಿ ಮುಗಿಸಿದವರಂತೆ ನಟಿಸಿ, ಅನುಮಾನ ಬರದ ಹಾಗೆ, ಸಹಜವಾಗಿ ಪತ್ರವನ್ನು ಮಡಚಿ ಮತ್ತೆ ಬ್ಯಾಗಿಗೆ ಸೇರಿಸಿಬಿಡುತ್ತೀರ.

ನಿಮಗೆ ಪತ್ರ ಓದಲು ಅಲ್ಲಿಯವರೆಗಿದ್ದ ಧೈರ್ಯ ಯಾಕೋ ಪಕ್ಕನೆ ಆವಿಯಾಗಿ ಹೋಗುತ್ತದೆ. ಅದರಲ್ಲಿ ನಿಮ್ಮ ಬಗ್ಗೆ ಏನೋ ಇರಬಹುದೆಂಬ ಚಿಂತೆ ಕಾಡುತ್ತದೆ. ಆ ಚಿಂತೆ ಎಷ್ಟು ಬುಡವಿಲ್ಲದ್ದು ಎಂದು ಹೊಳೆದು ನಿಮಗೇ ನಗು ಬರುತ್ತದೆ. ಓದಿಯೇ ಬಿಡಬೇಕು ಎಂದು ಮತ್ತೆ ಬ್ಯಾಗಿಗೆ ಕೈ ಹಾಕುವಾಗ ಕಾಫಿ ಕೊಟ್ಟವ ನಿಮ್ಮ ಬಿಲ್ ಹಿಡಿದು ಬರುತ್ತಿರುವುದು ಕಾಣುತ್ತದೆ. ಕೈ ಮತ್ತೆ ಹಿಂಜರಿಯುತ್ತದೆ. ನಿಮಗೆ ಮಾಡುತ್ತಿರುವುದು ತಪ್ಪು ಅನಿಸಿ ಬಿಟ್ಟಿದೆ. ಆ ತಪ್ಪನ್ನು ಇನ್ನೊಬ್ಬರ ಮುಂದೆ ಮಾಡಲು ನಿಮ್ಮಿಂದ ಸಾಧ್ಯವೇ ಇಲ್ಲ. ಹೋಟೆಲಿನವ ನಿಮಗೆ ಪರಿಚಯವೇ ಇಲ್ಲದಿರಬಹುದು. ಆದರೂ ನಿಮಗೆ ಅದೇನೋ ಮುಜುಗರ.

ಇಲ್ಲಿ ಬೇಡ ಮನೆಗೆ ಹೋಗಿಯೇ ನೋಡೋಣ ಎಂಬ ನಿರ್ಧಾರಕ್ಕೆ ಬಂದು ಬಸ್ಸು ಹತ್ತುತ್ತೀರ. ಮನೆ ಸೇರಿದೊಡನೆ ನಿಮ್ಮ ಒಡನಾಡಿ “ಯಾಕೆ ಇಷ್ಟು ಲೇಟು ಈವತ್ತು? ಯಾರೋ ನಿನ್ನನ್ನ ಕೇಳಿಕೊಂಡು ಬಂದಿದ್ದರು. ಯಾವುದೋ ಕಾಗದ ನಿನ್ನ ಹತ್ತಿರ ಇದೆಯಂತೆ. ಇಸಕೊಂಡು ಹೋಗಬೇಕು ಅಂದರು. ನಾಳೆ ಬೆಳಿಗ್ಗೆ ಬರ್ತೀನಿ ಅಂದರು.”  ನಿಮಗೆ ಸಿಡಿಲು ಹೊಡೆದಂತಾಗಿದ್ದನ್ನು ಗಮನಿಸಿ “ಯಾರದು? ಏನು ಪತ್ರ?” ಎಂದು ನಿಮ್ಮ ಒಡನಾಡಿ ಕೆದಕಿ ಕೇಳುವುದು ನಿಮಗೆ ಇಷ್ಟವಾಗುವುದಿಲ್ಲ. ರಪ್ಪನೆ ಎಲ್ಲಿಲ್ಲದ ಸಿಟ್ಟಿನಿಂದ “ನನಗೇನು ಗೊತ್ತು? ನನ್ನ ಹತ್ತಿರ ಯಾವ ಪತ್ರಾನೂ ಇಲ್ಲ…” ಎಂದು ಸ್ವಲ್ಪ ಅತಿಯಾಗಿಯೇ ಕೂಗುತ್ತೀರ. ಆಮೇಲೆ ಕೊಂಚ ಮೆದುವಾಗಿ ಮತ್ತೆ ಸ್ತಿಮಿತಕ್ಕೆ ಬಂದವರಂತೆ “ಬಂದವರು ಹೇಗಿದ್ದರು? ಹೆಸರು ಹೇಳಿದರ?” ಎಂದು ನೀವು ಕೇಳತೊಡಗುತ್ತೀರ. ನಿಮ್ಮ ಒಡನಾಡಿ “ಹಳೇ ಸ್ಕೂಲು ಮೇಷ್ಟರ ಥರ ಇದ್ದರು. ಹೆಸರು ಹೇಳಲಿಲ್ಲ…” ಎಂದುದು ಕೊಂಚ ಹೊತ್ತಿನ ಮುಂಚಷ್ಟೆ ನಿಮ್ಮ ಸಿಡಿಮಿಡಿಯಿಂದ ಬೇಸತ್ತು ಆಡಿದ ಮಾತಾಗಿ ನಿಮಗೆ ತೋರುತ್ತದೆ. ಸರಾಗವಾಗಿದ್ದ ಬದುಕು ಒಂದು ದಿನದಲ್ಲಿ ಇಷ್ಟೆಲ್ಲಾ ಗೋಜಲಾಗಬಹುದು ಅಂತ ನೀವು ಅಂದುಕೊಂಡೇ ಇರಲಿಲ್ಲ ಅಲ್ಲವೆ?

ನಿಮಗೆ ಆ ಪತ್ರ ಸಿಕ್ಕಿದ್ದು ಬಂದವರಿಗೆ ಹೇಗೆ ಗೊತ್ತಾಯಿತು ಎಂದು ಬಹಳೇ ಯೋಚಿಸುತ್ತೀರ. ನಿಮ್ಮನ್ನು ಯಾರಾದರೂ ಹಿಂಬಾಲಿಸುತ್ತಿದ್ದಿರಬಹುದಾ ಅಥವಾ ನಿಮ್ಮನ್ನು ಪರೀಕ್ಷೆಗೆ ಒಳಪಡಿಸಿರಬಹುದಾ ಅಂತ ಏನೇನೋ ಯೋಚನೆಗಳು ನಿಮಗೆ. ಆ ಯೋಚನೆಯಲ್ಲೇ ಇಡೀ ಇರುಳು ನಿದ್ದೆಯಿಲ್ಲದೆ ಕಳೆಯುತ್ತೀರ. ಪತ್ರದ ಮೇಲೆ ಹೆಸರಿರುವ ನಿಮ್ಮ ಸಹಪಾಠಿಯ ನೆನಪು ಮರುಕಳಿಸುತ್ತದೆ. ನೀವೆಲ್ಲಾ ಟೀಚರಿಗೆ ಹೆದರಿ ಯಾವುದನ್ನು ಮಾಡುತ್ತಿರಲಿಲ್ಲವೋ ಅದೆಲ್ಲವೂ ನಿಮ್ಮ ಸಹಪಾಠಿಗೆ ಮಾಡಬೇಕು. ಬೈಸಿಕೊಂಡು. ಪೆಟ್ಟು ತಿಂದು. ತಂದೆ ತಾಯಂದಿರು ಬಂದು ಹೆಡ್‌ಮಾಸ್ಟರ್‍ ರೂಮಿನಲ್ಲಿ ತಲೆ ತಗ್ಗಿಸಿ ನಿಂತರೂ, ಮರುಕ್ಷಣ ಏನೂ ಆಗದಂತೆ ನಿಮ್ಮೆಲ್ಲರ ಜತೆ ಆಟಕ್ಕೆ ಸೇರಿಕೊಂಡು ಚೀರಾಡುವುದು ನಿಮ್ಮ ಸಹಪಾಠಿಯ ಜಾಯಮಾನ. ನಿಮಗೆ ಅಂದಿನಿಂದ ಇಂದಿಗೂ ಅರ್ಥವಾಗದೇ ಇರುವುದು, ನಿಮ್ಮ ಸಹಪಾಠಿ ಹಾಗಿರುವುದಕ್ಕೆ ಹೇಗೆ ಸಾಧ್ಯ ಎಂದು. ಏನೆಲ್ಲಾ ಅವಮಾನವಾಗಿ ಮರುಕ್ಷಣ ಮರೆಯುವುದು ಯಾರಿಗಾದರೂ ಹೇಗೆ ಸಾಧ್ಯ ಎಂದು. ಎಷ್ಟೋ ಸಲ ತಪ್ಪಿಲ್ಲದೆಯೂ ಶಿಕ್ಷೆಗೆ, ಅವಮಾನಕ್ಕೆ ಒಳಗಾಗಿ ನಿಮಗೆಲ್ಲಾ ಕನಿಕರ ಹುಟ್ಟಿದರೂ, ಆ ಸಹಪಾಠಿ ಮಾತ್ರ ಅದು ಯಾರಿಗೋ ಆಗಿದ್ದು ಎನ್ನುವಂತೆ ನಿಮ್ಮೆಲ್ಲರ ಬಳಿ ನಗುತ್ತಲೇ ಇರುವುದು ಒಂದು ದೊಡ್ಡ ವಿಸ್ಮಯವಾಗಿ ಕಾಣುತ್ತಿತ್ತು. ನಿಮಗಷ್ಟೇ ಅಲ್ಲ, ನಿಮ್ಮ ಕ್ಲಾಸಿನವರಿಗೆಲ್ಲಾ ಹಾಗೇ ಅನಿಸಿದೆ. ನಿಮಗಂತೂ ಈಗಲೂ ಹಾಗೇ ಅನಿಸುತ್ತದೆ. ಅವೆಲ್ಲಾ ಬಗೆಹರಿಯದೇ ಇರುವಾಗ ಈಗ ರಸ್ತೆಯಲ್ಲಿ ಸಿಕ್ಕ ಪತ್ರದ ಮೇಲೆ ಅದೇ ಸಹಪಾಠಿಯ ಹೆಸರು. ಅದನ್ನು ಕೇಳಿಕೊಂಡು ವಯಸ್ಸಾದ ಮೇಷ್ಟರಂತವರು ಬಂದು ಹೋಗಿರುವುದು. ಯಾವುದಕ್ಕೂ ತಲೆಬುಡವಿಲ್ಲ ಎಂದು ನಿಮಗೆ ಅನಿಸುತ್ತದೆ.

ಬೆಳಿಗ್ಗೆ ಎದ್ದು “ಅವರು ಮತ್ತೆ ಬಂದರೆ ನಿಮ್ಮ ಪತ್ರ ಸಿಗುತ್ತದೆ ಎಂದಷ್ಟೆ ಹೇಳು” ಎಂದು ನಿಮ್ಮ ಒಡನಾಡಿಗೆ ಹೇಳಿ ಹೆಚ್ಚು ವಿವರಿಸದೆ ಹೊರಟು ಬಿಡುತ್ತೀರ. ಪತ್ರವನ್ನು ಮತ್ತೊಂದು ಕವರಿನೊಳಗೆ ಹಾಕಿ, ಅದರ ಮೇಲೆ ಪತ್ರದ ಮೇಲಿರುವ ಹಾಗೆ ವಿಳಾಸ ಬರೆದು ಪೋಸ್ಟ್ ಮಾಡಿಬಿಡುತ್ತೀರ. ನಿಮಗೆ ಭಯವಾಗುವಷ್ಟು ನಿರಾಳ ಆವರಿಸುತ್ತದೆ. ಆ ನಿರಾಳದ ಆಳದಲ್ಲಿ ಆ ಪತ್ರ ಓದಬೇಕಿತ್ತು ಎಂಬ ಒಂದು ಸಣ್ಣ ಚಡಪಡಿಕೆ ನಿಮ್ಮ ಅರಿವಿಗೆ ಬರುತ್ತದೆ.

ಸಂಜೆ ಮನೆಗೆ ಬಂದಾಗ “ಪತ್ರ ಕೇಳಿಕೊಂಡು ಬಂದಿದ್ದರು. ನೀನು ಕಳಿಸುತ್ತೀಯ, ಸಿಗತ್ತೆ ಹೋಗಿ ಎಂದು ಹೇಳಿದೆ. ಅವರಿಗೆ ತುಂಬಾ ನೆಮ್ಮದಿಯಾಯಿತು.” ಎಂದು ಹಲವು ನಿಮಿಷಗಳೇ ಒಡನಾಡಿ ನಿಮ್ಮನ್ನು ದಿಟ್ಟಿಸುವುದು ನಿಮಗೆ ಅಸಹಜ ಅನಿಸುವುದಿಲ್ಲ. ಕೊನೆಗೆ ನೀವು ಇನ್ನೇನು ಪ್ರಶ್ನೆ ಕೇಳದೇ ಇರಬಹುದು ಎಂದು ಮುಂದುವರಿಸುತ್ತಾ ನಿಮ್ಮ ಒಡನಾಡಿ “ಅವರ ಮಗನ ಕಾಗದ ಅಂತೆ ಅದು. ತನ್ನನ್ನು ಕೊಂದುಕೊಳ್ಳುವ ಮುಂಚೆ ಬರೆದ ಕಡೆಯ ಕಾಗದವಂತೆ. ಏನೂ ತಪ್ಪು ಮಾಡದೆ ಜೈಲಾಗಬಹುದು ಎಂದು ಹೆದರಿಕೊಂಡಿದ್ದನಂತೆ. ಅವಮಾನವಾಗುತ್ತದೆ ಎಂದು ನೇಣು ಹಾಕಿಕೊಂಡನಂತೆ” ಎನ್ನುವುದು ಕೇಳಿ ನಿಮ್ಮ ಇಡೀ ಜೀವ ಗಾಜಿನಂತೆ ಒಡೆದು ಹೋದಂತೆ ಅನಿಸುತ್ತದೆ. ನಿಮ್ಮ ಮುಖದ ಮೇಲೆ ಮೂಡಬಹುದಾದ ಭಾವಕ್ಕಾಗಿ ನಿಮ್ಮ ಒಡನಾಡಿ ಕಾಯುವುದು ನಿಮಗೆ ಕಸಿವಿಸಿಯಾಗುತ್ತದೆ. ನಿಮ್ಮಲ್ಲಿ ಕೊಂಚವೇ ಉಳಿದಿದೆ ಎಂದು ನೀವು ಆಶಿಸುವ ಸಮತೋಲ ಸೋರಿಹೋಗದಂತೆ ಏನೇನೋ ಮಾಡುತ್ತಾ ಮುಖ ತೊಳೆಯಲು ನಡೆದುಬಿಡುತ್ತೀರ. ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಇನ್ನೂ ನಾನು ಮುರಿದಿಲ್ಲ ಎಂದು ಮತ್ತೆ ಮತ್ತೆ ಹೇಳಿಕೊಳ್ಳುತ್ತೀರ. ಎಷ್ಟೇ ತಪ್ಪೆನಿಸಿದರೂ ಒಮ್ಮೆ ಪತ್ರ ತೆಗೆದು ಓದಬೇಕಾಗಿತ್ತು ಎಂದೂ ಒಳಗೊಳಗೇ ಹಲವು ದಿನ ಕರುಬುತ್ತೀರ.

ಮುಂದೆ ನೀವೇನು ಮಾಡಬಹುದು ಎಂಬುದನ್ನು ನಿಮ್ಮ ಊಹೆಗೇ ಬಿಡುತ್ತೇನೆ. ಏಕೆಂದರೆ ನೀವು ಅಪ್ಪಟ ಮತ್ತು ವಿವೇಕಿ ಅನ್ನುವ ನಂಬಿಕೆ ನನ್ನದು.