ಬಾಸಿಂಗ

ಇನ್ನು ಮೈನೆರೆಯದ
ಮುದ್ದು ಹುಡುಗಿ,
ನಿನ್ನೆಯಷ್ಟೆ ಚಿಕ್ಕಪ್ಪನ
ಮದುವೆಯಲ್ಲಿ ಕಂಬದಾಟ
ಆಡಿದವಳು,

ಇಂದು ವಧುವಾಗಿ
ಮದುವೆ ಮಂಟಪದ
ಬಾಸಿಂಗವೇ ಅವಳಾಗಿದ್ದಾಳೆ.
ರಾತ್ರಿ ಹನ್ನೆರಡರ ಮೂಹುರ್ತ

ಮಲ್ಲಿಗೆ ಬ್ರಹ್ಮಕಮಲಗಳು
ಬಿರಿದುನಿಂತಿವೆ.
ಮಿಣುಕು ಹುಳಕೂ
ಮೈತುಂಬ ಬಂಗಾರ,
ಎಷ್ಟು ಹೊಳೆದರೂ ಸಾಲ.
ಅಪ್ಪ ಮಾಡಿದ್ದಲ್ಲವೇ?

ತೋರಣದ ಮಾವಿನೆಲೆ
ಸಸಿದು ಆಡುವ ಹುಡುಗಿ
ತಾಳಿ ಕಟ್ಟಿಸಿಕೊಳ್ಳುವಾಗ
ಎಚ್ಚರವೂ ಇರಲಿಲ್ಲ.
ಅವಳಪ್ಪ ಹೇಳುತ್ತಾನೆ.
ಇವತ್ತಿಗೆ ಅವಳು ಹುಟ್ಟಿ
ಹನ್ನೆರಡು ವರ್ಷ.
ಅಮ್ಮ ಬಿಕ್ಕುತ್ತಾಳೆ.

 

ಸುಮಾ ಕಂಚೀಪಾಲ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನವರು
ಎಸ್ . ಡಿ. ಎಂ ಉಜಿರೆ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ
ಕತೆ, ಕವನ ರಚನೆ ಇವರ ಹವ್ಯಾಸ